ಶಿವಮೊಗ್ಗ ಜಿಲ್ಲೆಯ ಮಲೆನಾಡಿನಲ್ಲಿ ಹುಟ್ಟಿ ಹಿಂದುಸ್ಥಾನಿ ಹಾಗೂ ಕರ್ನಾಟಕೀ ಹಾಡುಗಾರಿಕೆಯ ಜೊತೆಗೆ ಪಿಟೀಲು, ತಬಲಾ, ಹಾರ್ಮೋನಿಯಂ ಹಾಗೂ ಜಲತರಂಗ ವಾದ್ಯಗಳಲ್ಲಿ ಪರಿಣತಿ ಪಡೆದು ಗ್ರಾಮೀಣ ಭಾಗದಲ್ಲಿ ಶಾಸ್ತ್ರೀಯ ಸಂಗೀತವನ್ನು ಜನಪ್ರಿಯಗೊಳಿಸುವಲ್ಲಿ ಶ್ರಮಿಸುತ್ತಿರುವ ಶ್ರೀ ಬಿ. ನಾರಾಯಣಪ್ಪನವರು ಕರ್ನಾಟಕ ಕಂಡ ಅಪರೂಪದ ಕಲಾವಿದರು.

ಅವರು ಜನಿಸಿದ್ದು ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ತಂದೆ ದಿ.ಬಿ. ನಾಗಪ್ಪನವರು ಸಂಗೀತ ಉಪಾಧ್ಯಾಯರಾಗಿ ಸೇವೆ ಮಾಡಿದವರು. ತಾಯಿ ದಿ. ಗಂಗಾಬಾಯಿಯವರು ಸಂಗೀತದ ಪರಮ ಭಕ್ತೆ. ಇಂತಹ ವಾತಾವರಣದಲ್ಲಿ ಜನಿಸಿದ ನಾರಾಯಣಪ್ಪನವರಿಗೆ ಹೈಸ್ಕೂಲು ದಿನಗಳಲ್ಲಿಯೇ ಸಂಗೀತದಲ್ಲಿ ಆಸಕ್ತಿ ಮೂಡಿತು. ಗಾನ ‘ವಿಶಾರದ ದಿ. ಹೆಚ್‌.ಜಿ. ಗುರು ಶಾಂತ ಗವಾಯಿಗಳಲ್ಲಿ ನಾರಾಯಣಪ್ಪನವರು ೧೨ ವರ್ಷಗಳ ಕಾಲ ಗುರುಕುಲ ಪದ್ಧತಿಯಲ್ಲಿ ಸಂಗೀತದ ಸುದೀರ್ಘ ಅಧ್ಯಯನ ಮಾಡಿದರು. ಹಾಡುಗಾರಿಕೆಯ ಜೊತೆಗೆ ಪಿಟೀಲು, ತಬಲಾ, ಹಾರ್ಮೋನಿಯಂ ಮತ್ತು ಜಲತರಂಗ ವಾದ್ಯಗಳಲ್ಲಿ ವಿಶೇಷ ಪರಿಣತಿ ಪಡೆದ ಅವರು ಇತ್ತೀಚಿನ ದಿನಗಳಲ್ಲಿ ಸಂಗೀತ ಲೋಕದಿಂದ ಕಣ್ಮರೆಯಾಗುತ್ತಿರುವ ‘ವಿಚಿತ್ರ ವೀಣಾ’ ವಾದ್ಯದಲ್ಲಿ ವಿಶೇಷ ಆಸಕ್ತಿ ತಳೆದು ಚಿತ್ರದಲ್ಲಿದ್ದ ಆ ವಾದ್ಯದಂತೆ ಮಿರಜಿನಲ್ಲಿ ಆ ವಾದ್ಯವನ್ನು ತಯಾರಿಸಿಕೊಂಡು ಬಂದು ಅದರಲ್ಲಿ ವಿಶೇಷ ಮಗ್ನರಾಗಿ ಅಧ್ಯಯನ ಗೈಯುತ್ತಿದ್ದಾರೆ. ಇಂತಹ ಇಳಿವಯಸ್ಸಿನಲ್ಲಿಯೂ ಅವರ ಸಂಗೀತ ಅಧ್ಯಯನದ ಆಸಕ್ತಿ ಯುವ ಜನಾಂಗಕ್ಕೊಂದು ಮಾದರಿ.

ಬೆಂಗಳೂರು, ಭದ್ರಾವತಿ ಆಕಾಶವಾಣಿ ಕಲಾವಿದರಾಗಿರುವ ಅವರು ಮೈಸೂರು ದಸರಾ, ಕುಂದಗೋಳ ಸವಾಯ ಗಂಧರ್ವ ಮೊದಲ್ಗೊಂಡು ಕರ್ನಾಟಕದ ಪ್ರತಿಷ್ಠಿತ ಸಂಗೀತೋತ್ಸವಗಳಲ್ಲಿ, ಮಹಾರಾಷ್ಟ್ರದ ಪಂಢರಪೂರದಲ್ಲಿ ಶ್ರೀ ಬಂಡೋ ಪಂತ ಸೋಲಾಪೂರಕರ ಅವರೊಂದಿಗೆ ವಯೋಲಿನ್‌ ಜುಗಲಬಂದಿ ನುಡಿಸಿದ್ದಾರೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ (೧೯೯೨-೯೫), ಸೊರಬ ಪುರಸಭೆಯ ಅಧ್ಯಕ್ಷರಾಗಿ (೧೯೬೪-೬೬ ಮತ್ತು ೧೯೭೪-೧೯೭೬), ಸೊರಬ ತಾಲೂಕಾ ಸಂಗೀತ ಸೇವಾ ಸಮಿತಿಯ ಕಾರ್ಯದರ್ಶಿಯಾಗಿ, ಸಮಿತಿ ನಡೆಸುತ್ತಿರುವ ‘ನಾದ ಸುರಭಿ ಸಂಗೀತ ವಿದ್ಯಾಲಯ’ದ ಸಂಚಾಲಕರಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಬಿ. ನಾರಾಯಣಪ್ಪನವರಿಗೆ ‘ಸಂಗೀತ ಸುಧಾಕರ’ (ಪಂ. ಜಯದೇವ ಗವಾಯಿಗಳಿಂದ), ‘ಗಾನ ಕೋಗಿಲೆ’ (ಪಂ. ಪುಟ್ಟರಾಜ ಗವಾಯಿಗಳಿಂದ), ‘ಗಾನಕಲಾಧರ’ (ಮುರಳೀಧರ ಸಂಗೀತ ವಿದ್ಯಾಲಯ, ತೀರ್ಥಹಳ್ಳಿ), ‘ಗಾನ ವಿಶಾರದ’ (ರಾಮ ಸೇವಾ ಸಮಿತಿ, ಶಿವಮೊಗ್ಗ), ‘ಸಂಗೀತ ಕಲಾರವಿಂದ’ (ಸಂಗೀತ ಕುಟಿಲ, ಬೆಂಗಳೂರು), ‘ಗಾನ ಗಂಗಾತನಯ’ (ಶ್ರೀಮತಿ ಪ್ರ. ಚನ್ನವೀರ ಸ್ವಾಮಿಗಳು, ಹೊಸರಿತ್ತಿ), ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ (೧೯೯೧), ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ (೧೯೯೭-೯೮) ದೊರೆತಿವೆ.