ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ನ್ಯಾಮತಿಯಲ್ಲಿ ಶ್ರೀ ಬಿ.ಎಸ್‌. ರಾಮಯ್ಯನವರ ಸುಪುತ್ರರಾಗಿ, ಬಿ. ದೇವೇಂದ್ರಪ್ಪನವರ ಸಹೋದರರಾಗಿ ೧೯೦೯ರಲ್ಲಿ ಜನಿಸಿದವರು ಪರಶುರಾಮನ್‌. ಸಂಗೀತ ಸಮೃದ್ಧಿಯ ಮಡಿಲಿನಲ್ಲಿ ಬೆಳೆದ ಇವರ ಸಂಗೀತ ಗುರುಗಳು ಸ್ವಯಂ ತಂದೆ ಹಾಗೂ ಅಣ್ಣ ದೇವೇಂದ್ರಪ್ಪನವರು. ಕಠಿಣ ಶಿಕ್ಷಣ ಕ್ರಮದಿಂದ, ನಿರಂತರ ಸಾಧನೆಯಿಂದ ಮುನ್ನಡೆ ಹಾಕಿದ ಪರಶುರಾಮನ್‌ ಅವರಿಗೆ ಬಿಡಾರಂ ಕೃಷ್ಣಪ್ಪನವರ ಮಾರ್ಗದರ್ಶನವೂ ದೊರಕಿತು.

ನಾಲ್ವಡಿ ಕೃಷ್ಣರಾಜ ಒಡೆಯರ್, ಜಯಚಾಮರಾಜೇಂದ್ರ ಒಡೆಯರ್ ಅವರ ಸನ್ನಿಧಾನದಲ್ಲಿ ಗಾಯನ ಮಾಡಿದ ಹೆಗ್ಗಳಿಕೆ ಇವರದು. ಗ್ರಾಮೋಫೋನ್‌ ಮೂಲಕವೂ ಇವರ ಗಾಯನ ದಾಖಲಾಯಿತು. ನಾಲ್ಕು ದಶಕಗಳಿಗೂ ಮೀರಿ ಗುರುವಾಗಿ ಶಿಷ್ಯರಿಗೆ ತರಬೇತಿ ನೀಡಿರುವ ಅನುಭವಿ ಎನಿಸಿದವರು.

ಕರ್ನಾಟಕ ಗಾನಕಲಾ ಪರಿಷತ್ತು, ಮೈಸೂರಿನ ಜೆ.ಎಸ್‌.ಎಸ್‌. ಸಂಗೀತಸಭಾ, ತುಮಕೂರಿನ ಟೌನ್‌ಕ್ಲಬ್‌ – ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮುಂತಾದ ಸಂಸ್ಥೆಗಳ ಸನ್ಮಾನ ಹೊಂದಿದರು. ತುಮಕೂರಿನ ಗಾಯನ ಸಭಾದಿಂಧ ‘ಗಾಯಕ ರತ್ನ’, ಶ್ರೀ ರಾಘವೇಂದ್ರ ಗಾಯನ ಸಭೆಯ ಸಮ್ಮೇಳನಾಧ್ಯಕ್ಷರಾಗಿ ‘ಗಾಯಕಿ ಶಿಖಾಮಣಿ’, ಮೈಸೂರಿನ ಶ್ರೀ ಮಾರುತಿ ಸೇವಾ ಸಂಗೀತ ಸಮಾಜದಿಂದ ‘ಗಾನ ಕಲಾತಿಲಕ’ ಹಾಗೂ ರಾಜ್ಯ ಸಂಗೀತ ನೃತ್ಯ ಅಕಾಡೆಮಿಯಿಂದ ‘ಕರ್ನಾಟಕ ಕಲಾಶ್ರೀ’ ಶ್ರೀಯುತರಿಗೆ ಲಭ್ಯವಾದ ಸನ್ಮಾನಗಳು.

ವಯೋವೃದ್ಧರೂ, ಜ್ಞಾನವೃದ್ಧರೂ ಆಗಿದ್ದ ಶ್ರೀಯುತರ ನಿಧನದಿಂದ ಶುದ್ಧ ಮೈಸೂರು ಸಂಪ್ರದಾಯದ ಸಂಗೀತ ಸೌಧದ ಸ್ತಂಭವೊಂದು ನಷ್ಟವಾಯಿತು.