ಮನೆತನ : ತಾಯಿ ಶ್ರೀಮತಿ ನಾಗರತ್ನಮ್ಮ ಸಂಗೀತ ವಿದುಷಿ. ತಂದೆ ಶ್ರೀ ರಾಮಸ್ವಾಮಿ ವಕೀಲರು. ತಂದೆ ತಾಯಿಯರಿಬ್ಬರಿಂದಲೂ ರಾಜಮ್ಮನವರಿಗೆ ಪ್ರೋತ್ಸಾಹ ದೊರೆಯಿತು. ನಂತರ ಜಿ. ಪದ್ಮನಾಭಯ್ಯನವರನ್ನು ಮದುವೆಯಾದ ಮೇಲೆ ಪತಿಯಿಂದಲ್ಲೂ ನಿರಂತರ ಪ್ರೋತ್ಸಾಹ ಸಿಕ್ಕಿತು.

ಶಿಕ್ಷಣ : ಆರಂಭದಲ್ಲಿ ಶ್ರಿ ಬಿ. ಎಂ. ನಾರಾಯಣ ದಾಸ್ ಅವರಲ್ಲಿ ಶಿಷ್ಯ ವೃತ್ತಿ ಮಾಡಿದ ರಾಜಮ್ಮನವರಿಗೆ ಮುಂದೆ ಕಥಾಕೀರ್ತನ ಕ್ಷೇತ್ರದ ಧೀಮಂತರಾದ ಶ್ರೀ ಆರ್. ಗುರುರಾಜುಲು ನಾಯ್ಡು ಅವರಲ್ಲಿ ಶಿಕ್ಷಣ ಪಡೆಯುವ ಸೌಭಾಗ್ಯ ದೊರೆಯಿತು.

ಕ್ಷೇತ್ರ ಸಾಧನೆ : ಕಥಾಕೀರ್ತನದಲ್ಲಿ ಶ್ರೀಮತಿ ಬಿ. ಪಿ. ರಾಜಮ್ಮನವರದು ಮುಂಚೂಣಿಯ ಹೆಸರು. ಅದರಲ್ಲೂ ಮಹಿಳೆಯರು ಅಷ್ಟಾಗಿ ಈ ಕ್ಷೇತ್ರಕ್ಕೆ ಬರಲು ಹಿಂಜರಿಯುತ್ತಿದ್ದ ಸಮಯದಲ್ಲಿ ರಾಜಮ್ಮನವರು ಬಹಳ ಧೈರ್ಯದಿಂದ ಈ ಮಾಧ್ಯಮಕ್ಕೆ ಬಂದವರು. ೧೯೬೫ ರಲ್ಲಿ ಕಾರ್ಯಕ್ರಮಗಳನ್ನು ನೀಡಲು ಆರಂಭಿಸಿದ ರಾಜಮ್ಮನವರು ಸುಮಾರು ನಲವತ್ತೈದು ವರ್ಷಗಳಿಂದ ನಿರಂತರ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ಬಂದಿದ್ದಾರೆ.

ಪ್ರಶಸ್ತಿ – ಪುರಸ್ಕಾರಗಳು : ಶ್ರೀಮತಿ ಬಿ. ಪಿ. ರಾಜಮ್ಮನವರ ಕಥಾಕೀರ್ತನ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಬೆಂಗಳೂರು ಗಾಯನ ಸಮಾಜ, ಗಾನಕಲಾ ಪರಿಷತ್, ಅರಸೀಕೆರೆಯ ಪ್ರಸನ್ನ ಗಣಪತಿ ಸೇವಾ ಸಮಿತಿ, ಉದಯಭಾನು ಕಲಾಸಂಘ, ಕನ್ನಡ ಸಾಹಿತ್ಯ ಪರಿಷತ್ತು ಮುಂತಾದ ಸಂಸ್ಥೆಗಳು ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿವೆ. ಈ ಗೌರವದ ಪಟ್ಟಿಗೆ ತನ್ನ ೨೦೦೭-೦೮ರ ಸಾಲಿನ ವಾರ್ಷಿಕ ಪ್ರಶಸ್ತಿ ನೀಡಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸನ್ಮಾನಿಸಿದೆ.