ದಿನಾಂಕ ೧-೧-೧೯೩೬ರಂದು ಮಂಗಳೂರಿನ ಉರ್ವ ಗ್ರಾಮದಲ್ಲಿ ಜನಿಸಿದವರು ಶ್ರೀ .ಬಿ. ಪ್ರೇಮನಾಥ್. ಚಿಕ್ಕಂದಿನಿಂದಲೇ ನಾಟ್ಯ ಕಲೆಯಲ್ಲಿ ಆಸಕ್ತಿ ಹೊಂದಿದ್ದು ಉರ್ವ ಗ್ರಾಮದಲ್ಲಿ ನಡೆಯುತ್ತಿದ್ದ ಯಕ್ಷಗಾನ ನೃತ್ಯಗತಿಗಳ ಬಗ್ಗೆ ಹೆಚ್ಚು ಆಕರ್ಷಿತರಾಗಿ ತಾವು ಶಾಸ್ತ್ರೀಯ ನೃತ್ಯ ಕಲಿಯುವ ಆಸೆ ಹೊಂದಿದವರು.

ಮಂಗಳೂರಿನ ಪ್ರಸಿದ್ಧ ನೃತ್ಯಪಟು ಮಾಸ್ಟರ್ ವಿಠಲ್ ಅವರಲ್ಲಿ ಆರಂಭಿಕ ಶಿಕ್ಷಣ ಪಡೆದು ಮುಂದೆ ಕೇರಳದ ತ್ರಿಪುಣಿತುರೈನ ಶೇಡೋ ಗೋಪಿನಾಥ ಅವರಲ್ಲಿ ಕಥಕ್ಕಳಿ, ಅಭಿನಯ ಶಿರೋಮಣಿ ಸೇಲಂನ ರಾಜರತ್ನಂ ಪಿಳ್ಳೈ ಅವರಲ್ಲಿ ಭರತನಾಟ್ಯ ಅಭ್ಯಸಿಸಿ ನೃತ್ಯ ಕಲೆಯಲ್ಲಿ ನಿಷ್ಣಾತರಾದರು. ಜೊತೆ ಜೊತೆಯಲ್ಲೇ ಲೌಕಿಕ ವಿದ್ಯಾಭ್ಯಾಸದಲ್ಲೂ ಸಾಕಷ್ಟು ಮುನ್ನಡೆ ಸಾಧಿಸಿ, ಬಿ.ಎ., ಬಿ.ಎಡ್. ಪದವಿಗಳಿಸಿ, ಚಿತ್ರಕಲೆಯಲ್ಲೂ ಪರಿಣತರಾಗಿ, ಭರತ ನಾಟ್ಯದಲ್ಲಿ ವಿದ್ವಾನ್ ಪದವಿಯನ್ನು ಪಡೆದು ಮಂಗಳೂರಿನ ಸೈಂಟ್ ಆಲೋಶಿಯಸ್ ಪ್ರೌಢ ಶಾಲೆಯಲ್ಲಿ ಅಧ್ಯಾಪಕರಾಗಿ, ಪಣಂಬೂರಿನ ಕೇಂದ್ರಿಯ ವಿದ್ಯಾಲಯದಲ್ಲಿ ಡ್ರಾಯಿಂಗ್ ಟೀಚರ್ ಆಗಿ ಸೇವೆಯಲ್ಲಿದ್ದ ಕಾಲದಲ್ಲಿ ಅಲ್ಲಿನ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ, ಸಕ್ರಿಯವಾಗಿ ದುಡಿದು ತಮ್ಮ ಕಲಾ ಪ್ರತಿಭೆಯಿಂದ ನೃತ್ಯ ಶಿಕ್ಷಕರಾಗಿಯೂ ನೇಮಕಗೊಂಡ ಅನೇಕ ಶಿಷ್ಯರನ್ನು ತಯಾರು ಮಾಡಿದ್ದಾರೆ.

ಮುಂದೆ ಮಂಗಳೂರಿನ ಉಮಾ ಸ್ಟೋರ್ರ್ಸ್ನ ಸಂಕಿರ್ಣದಲ್ಲಿ ಲಲಿತ ಕಲಾಸದನ ಸಂಸ್ಥೆ ಸ್ಥಾಪಿಸಿ ಇಲ್ಲಿಯತನಕ ಅನೇಕ ವಿದ್ಯಾರ್ಥಿಗಳನ್ನು ತಯಾರು ಮಾಡಿದ್ದಾರೆ. ಹಲವಾರು ಶಿಷ್ಯರ ರಂಗಪ್ರವೇಶವೂ ನಡೆದಿದೆ. ಜೊತೆ ಜೊತೆಗೆ ಭರತನಾಟ್ಯ, ಕರ್ನಾಟಕ ಸಂಗೀತ, ಮೃದಂಗ ಮತ್ತು ತಬಲಾದಲ್ಲಿ ಸಹ ಶಿಕ್ಷಣ ನೀಡುತ್ತಿದ್ದಾರೆ.

ಭಕ್ತ ಮಾರ್ಕಂಡೇಯ, ಭೂಕೈಲಾಸ, ಕಾಮ ದಹನ, ಮೋಹಿನಿ ಭಸ್ಮಾಸುರ, ಸ್ಯಮಂತಕೋಪಾಖ್ಯಾನ ಮುಂತಾದ ಅನೇಕ ರೂಪಕಗಳನ್ನು ನೃತ್ಯಕ್ಕೆ ಅಳವಡಿಸಿರುವುದೇ ಅಲ್ಲದೆ ಬೈಬಲ್ ಪವಿತ್ರ ಗ್ರಂಥದಲ್ಲಿ ಬರುವ ಅನೇಕ ಪ್ರಸಂಗಗಳನ್ನು ಸಹ ಸಂಯೋಜಿಸಿದ್ದಾರೆ. ಮುಲ್ಕಿಯ ಶಾಂಭವಿ ಜೇಸೀ, ಮುಲ್ಕಿ ಭಿಲ್ಲವ ಸಂಘ, ಬೆಂಗಳೂರಿನ ದುರ್ಗಾ ನೃತ್ಯ ಸಂಸ್ಥೆ ವತಿಯಿಂದ ’ನಾಟ್ಯ ಕಲಾನಿಧಿ’ ಶೃಂಗೇರಿ ಮಹಾ ಸಂಸ್ಥಾನದಿಂದ ಸನ್ಮಾನ ಬಿರುದು ಪತ್ರ, ನೃತ್ಯ ಕಲಾ ಪರಿಷತ್ತಿನಿಂದ ’ನೃತ್ಯ ವಿದ್ಯಾನಿಧಿ’ ಪೇಜಾವರ ಶ್ರೀಗಳಿಂದ ’ನೃತ್ಯ ಕಲಾ ಪ್ರಭಾಕರ’ ಮುಂತಾಗಿ ಗೌರವ ಉರಸ್ಕಾರಗಳು ಇವರಿಗೆ ಸಂದಿವೆ.

ಉಡುಪಿ, ಕಾಸರಗೋಡು ಮುಂತಾದೆಡೆ ಕರಾವಳಿ ನೃತ್ಯಕಲಾ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿರುವ ಶ್ರೀ ಪ್ರೇಮನಾಥ್ ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೨೦೦೩-೦೪ನೇ ಸಾಲಿನ ಕರ್ನಾಟಕ ಕಲಾಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.