ಐದು ವರ್ಷಗಳ ಕೋಮಲ ವಯಸ್ಸಿನಲ್ಲಿ ಪುಣೆಯ ಖ್ಯಾತ ಕಥಕ್ ಗುರು ರೋಹಿಣಿ ಭಾಟೆಯವರಿಂದ ಕಲಿತ ಕಥಕ್‌ನೊಂದಿಗೆ ಶಾಸ್ತ್ರೀಯ ನೃತ್ಯ ಕಲಿಕೆಯನ್ನು ಆರಂಭಿಸಿದರು ಭಾನುಮತಿ. ಅವರು ಆರಂಭಿಸಿದ್ದು ಕಲಿಯುವಿಕೆಯಲ್ಲ; ಒಂದು ಪರಂಪರೆ. ಇವರನ್ನು ಶಾಸ್ತ್ರೀಯ ನೃತ್ಯದಲ್ಲಿ ಈ ಎಳೆಯ ವಯಸ್ಸಿನಿಂದಲೇ ಪ್ರೋತ್ಸಾಹಿ, ಅದನ್ನು ಮುಂದುವರಿಸಲು ಬೆಂಬಲವಾಗಿ ನಿಂತವರು ಇವರ ತಾಯಿ ಇಸೈಮಣಿ ಎಲ್.ಆರ್. ಲಕ್ಷ್ಮೀ ಸ್ವತಃ ಕರ್ನಾಟಕ ಶಾಸ್ತ್ರೀಯ ಸಂಗೀತಗಾರರು. ಪ್ರಾಥಮಿಕ ಶಿಕ್ಷಣದ ಅನೇಕ ಹಂತಗಳನ್ನು ಕೆಲವು ಗುರುಗಳ ಬಳಿ ಮುಗಿಸಿದ ನಂತರ ಭರತನಾಟ್ಯದ ಉನ್ನತ ಶಿಕ್ಷಣವನ್ನು ಮದ್ರಾಸಿನ ಪದ್ಮಶ್ರೀ ಕೆ.ಎನ್. ದಂಡಾಯುಧಪಾಣಿ ಪಿಳ್ಳೈಯವರಿಂದ ಪಡೆದರು. ಭರತನಾಟ್ಯದಲ್ಲಿ ಅತ್ಯಂತ ಹೆಸರುವಾಸಿಯಾದ ಶ್ರೀಮತಿ ಕಮಲಾ ಲಕ್ಷ್ಮಣನ್ ಅವರ ಶಿಷ್ಯೆಯಾಗುವ ಅದೃಷ್ಟವು ಭಾನುಮತಿಯವರಿಗೆ ಬಂದಿತು. ತಮ್ಮ ತಮ್ಮ ಕಲೆಯಲ್ಲಿ ಅತ್ಯಂತ ಖ್ಯಾತಿವೆತ್ತ ಪದ್ಮಭೂಷಣ ಡಾ. ವೆಂಕಟಲಕ್ಷ್ಮಮ್ಮ ಮತ್ತು ಪದ್ಮಭೂಷಣ ಕಲಾನಿಧಿ ನಾರಾಯಣನ್ ಅವರುಗಳಿಂದ ನೇರವಾಗಿ ಅವರವರ ನಾಟ್ಯ ವೈಶಿಷ್ಟ್ಯಗಳನ್ನು ಅರಿತದ್ದೂ ಅಲ್ಲದೇ ಅವರ ಶೈಲಿಗಳಿಂದ ಪ್ರಭಾವಿತರಾದರು. ಕಳೆದ ಇಪ್ಪತ್ತೈದು ವರ್ಷಗಳಿಂದ ಕರ್ನಾಟಕದಲ್ಲಿ ನೆಲೆಸಿರುವ ಭಾನುಮತಿಯವರು ನಮ್ಮ ಕನ್ನಡ ನಾಡನ್ನು ರಾಷ್ಟ್ರೀಯ ಮಟ್ಟದಲ್ಲಿ ನರ್ತಕಿಯಾಗಿ ಪ್ರತಿನಿಧಿಸಿದ್ದಾರೆ. ಘುಂಘ್ರು ಪೆಸ್ಟಿವಲ್, ಉಸ್ತಾದ ಅಲ್ಲಾವುದ್ದೀನ್ ಖಾನ್ ಮಹೋತ್ಸವ, ನಾಟ್ಯಾಂಜಲಿ, ಹರಿದಾಸ್ ನೃತ್ಯೋತ್ಸವ ಪಾರಂಗತ ಉತ್ಸವ ಇವುಗಳಲ್ಲೂ ಪಾಲ್ಗೊಂಡಿದ್ದಾರೆ.

ಭಾನುಮತಿ ಅವರ ಭರತಾಂಜಲಿ ಸಮೂಹ ನೃತ್ಯ ಪ್ರಯೋಗ ತನ್ನ ಕಲಾತ್ಮಕ ಪ್ರತ್ಯೇಕತೆ ಮತ್ತು ಕಲ್ಪನಾತ್ಮಕ ನೃತ್ಯ ವೈಖರಿಯಿಂದ ಶಾಸ್ತ್ರೀಯ ನೃತ್ಯದ ಯಾವ ವಿಭಾಗವನ್ನೂ ಬದಲಾಯಿಸಿದೆ ನಾಟ್ಯಶಾಸ್ತ್ರದ ತಿರುಳನ್ನು ಉಳಿಸಿಕೊಂಡು ಭಾರತ ಮತ್ತು ವಿದೇಶಗಳಲ್ಲಿ ನೂರಾರು ಪ್ರದರ್ಶನಗಳನ್ನು ಕಂಡಿದೆ. ಭಾರತ ಸರ್ಕಾರ ಸಮೂಹ ನೃತ್ಯ ಸಂಯೋಜನೆಗೆ ಭಾನುಮತಿ ಅವರಿಗೆ ಫೆಲೋಶಿಪ್ ನೀಡಿದೆ. ಆಧ್ಯಾತ್ಮಿಕತೆ, ಭಕ್ತಿ, ಆರಾಧನಾ, ಭಾವ ಇವರ ನೃತ್ಯದ ವೈಶಿಷ್ಯ ಇವರಿಗೆ ೧೯೯೯-೨೦೦೦ನೇ ಸಾಲಿನ ರಾಜ್ಯ ಸಂಗೀತ-ನೃತ್ಯ ಅಕಾಡೆಮಿಯ ಪ್ರಶಸ್ತಿ ಸಂದಿದೆ.