ನಾಗಸ್ವರ ವಿದ್ವಾಂಸರ ಮನೆತನದಲ್ಲಿ ೧೯೩೩ರಲ್ಲಿ ಜನಿಸಿದ ರಾಮದಾಸಪ್ಪನವರು ಈ ಮಂಗಳ ವಾದ್ಯದ ಶಿಕ್ಷಣವನ್ನು ತಂದೆ ಚಿಕ್ಕಮುನಿಸ್ವಾಮಪ್ಪನವರಿಂದ ಪಡೆದರು. ಸ್ವಂತ ಸಾಧನೆ ಅನುಭವಗಳ ಮೂಲಕ ನುರಿತ ನಾಗಸ್ವರ ವಾದಕರಾದರು.

ನಮ್ಮ ದೇಶದ ಎಲ್ಲೆಡೆಯಲ್ಲಿಯೂ ಸಭೆಗಳಲ್ಲಿ, ಉತ್ಸವ ಸಮಾರಂಭಗಳಲ್ಲಿ ನುಡಿಸಿ ತಮ್ಮ ವಾದನದಿಂದ ಜನರ ಮನ ಗೆದ್ದಿರುವುದರೊಡನೆ ಯೂರೋಪಿನ ಹಲವಾರು ದೇಶಗಳಲ್ಲಿಯೂ ತಮ್ಮ ನಾಗಸ್ವರ ವಾದನದ ಕಛೇರಿಗಳನ್ನು ನಡೆಸಿರುವುದು ಗಮನೀಯ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಆಶ್ರಯದಲ್ಲಿಯೂ, ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭಗಳಲ್ಲಿಯೂ ಇವರ ಏನಿಕೆ ನಡೆದಿದೆ.

ಪ್ರಯೋಗಾತ್ಮಕವಾಗಿ ಪಿಟೀಲು, ಮೃದಂಗ, ಘಟ ವಾದ್ಯಗಳೊಡನೆಯೂ ಇವರು ನಾಗಸ್ವರ ನುಡಿಸಿದ್ದಾರೆ. ಆಕಾಶವಾಣಿಯ ಕಲಾವಿದರಾಗಿ ಆಗಿಂದಾಗ್ಗೆ ಶ್ರೋತೃಗಳಿಗೆ ತಮ್ಮ ವಾದನದ ಸವಿಯನ್ನು ನೀಡುತ್ತಿದ್ದಾರೆ.

ಶೃಂಗೇರಿ ಜಗದ್ಗುರುಗಳಿಂದ ‘ನಾದ ಕಲಾನಿಧಿ’ ಬಿರುದು ಪಡೆದಿರುವ ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಚೌಡಯ್ಯ ಸ್ಮಾರಕ ಪ್ರಶಸ್ತಿಗಳೂ ಸೇರಿದಂತೆ ಹಲವಾರು ಗೌರವಗಳು ದೊರಕಿವೆ. ‘ಕರ್ನಾಟಕ ಕಲಾ ತಿಲಕ’ ಪ್ರಶಸ್ತಿಗೂ ಪಾತ್ರರಾದ ಇವರು ಹಲವಾರು ಶಿಷ್ಯರಿಗೆ ತರಬೇತಿ ನೀಡುತ್ತ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿದ್ದಾರೆ.