ಬಿ.ವಿ.ಕಾರಂತ
ಹಿಂದಿಯಿಂದ ಭಾಷಾಂತರ: ಡಾ|| ಮಾಧವಿ ಭಂಡಾರಿ

ಮಾನ್ಯರೇ,

ಬೆಲ್‌ಗ್ರೇಡಿನಿಂದ ಬರೆದ ಪತ್ರದಲ್ಲಿ ಬುಖಾರೆಸ್ಟ್ ತಲುಪಿದ ಬಳಿಕ ನನ್ನ ಅನುಭವಗಳ ಕುರಿತು ವಿಸ್ತಾರವಾಗಿ ಬರೆಯುತ್ತೇನೆ ಎಂದಿದ್ದೆ. ಅವರೀಗ ಬುಖಾರೆಸ್ಟ್‌ನ್ನೂ ಹಿಂದಕ್ಕೆ ಬಿಟ್ಟು ಸೋಫಿಯಾ ತಲುಪಿದ್ದೇನೆ. ಬಹುಶಃ ಇದುವೇ ನನ್ನ ತಿರುಗಾಟದ ಕೊನೆಯ ತಂಗುದಾಣವಿರಬಹುದು. ಇನ್ನು ಹತ್ತು – ಹನ್ನೆರಡು ದಿನಗಳಲ್ಲಿ ಇಲ್ಲಿಯ ನನ್ನ ಕಾರ್ಯಕ್ರಮ ಮುಗಿಯಬಹುದು. ಆದರೆ ನಾನು ಈಗಲೇ ‘ಹೋಮ್‌ಸಿಕ್’ ಅನುಭವಿಸುತ್ತಿದ್ದೇನೆ. (ನಾನಿನದಕ್ಕೆ ಅಪವಾದ ಯಾಕಾಗಬೇಕು) ಇಂತಹ ಪರಿಸ್ಥಿತಿಯಲ್ಲಿ ನನ್ನ ಮನಸ್ಸನಿ ಸಮಾಧಾನಕ್ಕಾಗಿ ನಾನು ತುಸು ಹಿಂದಿರುಗಿ ನೋಡುವುದು ಒಳಿತು. ಐದು ಸೌಮ್ಯವಾದಿ ದೇಶಗಳ ನಾಟಕರಂಗಕ್ಕೆ ಸಂಬಂಧಿಸಿದ  ಈ ಎರಡು – ಎರಡೂವರೆ ತಿಂಗಳ ಪ್ರವಾಸದಲ್ಲಿ ನಾನು ಏನೆಲ್ಲಾ ನೋಡಿದೆ, ಹೇಗೆಲ್ಲಾ ಯೋಚಿಸಿದೆ, ಏನನ್ನೆಲ್ಲಾ  ಅರ್ಥೈಸಿಕೊಂಡೆ ಎಂಬುದನ್ನು ಲೆಕ್ಕ ಹಾಕಬಹುದು. ಒಂದು ವೇಳೆ ಆ ಸಂದರ್ಭದಲ್ಲಿ ನಾನು ಮೆಂದದ್ದು ಬರೇ ಹುಲ್ಲು ಎಂದಾದರೆ, ಈಗ ಅದನ್ನೇ ಮೆಲುಕು ಹಾಕುತ್ತಿದ್ದೇನೆಯೆಂದರೂ ಸರಿ.

ಮಾಸ್ಕೊ ವಿಮಾನ ನಿಲ್ದಾಣದಲ್ಲಿ ಮೂರು ಗಂಟೆಗಳ ಕಾಲ ಅನುಭವಿಸಿದ ಮೈಕೊರೆವ ಚಳಿಯ ಕುರಿತು ಇಲ್ಲಿ ನಾನೇನನ್ನೂ ಹೇಳಬಯಸುವುದಿಲ್ಲ. ಅದಕ್ಕೂ ನಾಟಕರಂಗಕ್ಕೂ ಎಲ್ಲಿಯ ಸಂಬಂಧ?  ನಾನು ಕೇವಲ ಐದು ಪ್ರವಾಸ ತಾಣಗಳಾದ ಬರ್ಲಿನ್, ಬುಡಾಪೆಸ್ಟ್, ಬೆಲ್‌ಗ್ರೇಡ್, ಬುಖಾರೆಸ್ಟ್ ಮತ್ತು ಸೋಫಿಯಾಗಳಲ್ಲಿಯ ಥಿಯೇಟರಿನ ಚಟುವಟಿಕೆಗಳ ವಿವರಣೆಯನ್ನಷ್ಟೇ ಕೊಡುತ್ತೇನೆ.

ನಾನು ಪೂರ್ವ ಜರ್ಮನಿಯ ಬರ್ಲಿನ್ ತಲುಪಿದಾಗ ನನ್ನ ದುಭಾಷಿ ಅಲ್ಲಿಯ ಪ್ರಸಿದ್ಧ ಒಪೇರಾಹೌಸ್ ಕಾಮಿಕ್ ಥಿಯೇಟರಿಗೆ ನನ್ನನ್ನು ಕರೆದೊಯ್ದನು. ನನ್ನ ಕೈಗಡಿಯಾರದಲ್ಲಾಗ ರಾತ್ರಿಯ ಹನ್ನೆರಡು ಗಂಟೆ. ಅದು ಭಾರತದ ಸಮಯವನ್ನು ತೋರಿಸುತ್ತಿತ್ತು. ಥಿಯೇಟರಿನ ಹೊರವಲಯದಲ್ಲಿದ್ದ ದೊಡ್ಡ ಗಡಿಯಾರದಲ್ಲಿ ಸಂಜೆಯ ಏಳುಗಂಟೆಯಾಗಿತ್ತು. ಬರ್ಲಿನ್‌ನ ಥಿಯೇಟರುಗಳು ಆಗಲೇ ನನ್ನ ಮೇಲೆ ತಮ್ಮ ಮಾಂತ್ರಿಕ ಪ್ರಭಾವವನ್ನು ಬೀರತೊಡಗಿದ್ದವು. ಹೊರಗಿನಿಂದ ನೋಡಿದರೆ ಅತ್ಯಾಧುನಿಕತೆಯನ್ನು ಹೊತ್ತುಕೊಂಡಿದ್ದರೂ, ಒಳಗಿನಿಂದ ಮಧ್ಯಯುಗದ ವೈಭವದ ಪಡಿಯಚ್ಚಿನಂತಿದ್ದವು. ಸುಂದರ, ಕಲಾತ್ಮಕ ಹಾಗೂ ವಿಶಾಲವಾಗಿರುವ ಥಿಯೇಟರಿನ ಹೊರವಲಯ, ಡ್ರೆಸ್‌ಮತ್ತು ಗೌನುಗಳ ವ್ಯವಸ್ಥಿತವಾದ ಸಾಲುಗಳು, ಅಚ್ಚುಕಟ್ಟಾದ ಬಫೆ ಕ್ಯಾಂಟೀನು, ಸುತ್ತೆಲ್ಲಾ ಹೃಷ್ಟ – ಪುಷ್ಟರೂ, ಆರೋಗ್ಯವಂತರೂ ಹಾಗೂ ಬೆಳ್ಳಗಿರುವ ಸ್ತ್ರೀ – ಪುರುಷರು, ಇನ್ನೇನು, ‘ಗ್ರಾಂಡ್’, ‘ಸ್ಲೆಂಡಿಡ್’, ‘ವಂಡರ್‌ಫುಲ್’ ನಂತಹ ಶಬ್ದಗಳಿಂದ ನನ್ನ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಿದ್ದೆ. ಅದಾಗ್ಯೂ ನಂತರ ನಾನು ‘ವಂಡರ್‌ಫುಲ್’ನಿಂದ ‘ಗುಡ್’ನಿಂದ ‘ನಾಟ್ ಬ್ಯಾಡ್’ಗೂ ಇಳಿದು ಬಂದಿದ್ದೆ.

ಇಷ್ಟೆಲ್ಲ ವಿವರಣೆ ಕೊಡುವುದರ ಹಿನ್ನೆಲೆಯೇನೆಂದರೆ, ನಾನು ಏನನ್ನು ಹೇಳುತ್ತೇನೋ ಅಥವಾ ಬರೆಯುತ್ತೇನೋ, ಅದು ಕೇವಲ ನನ್ನ ಮನಸ್ಸಿನಲ್ಲಿ ಮೂಡಿದ ಪ್ರಭಾವ ಅಥವಾ ಚಿತ್ರಗಳ ವಿವರಣೆಯಷ್ಟೆ; ಅಧ್ಯಯನ ಅಥವಾ ಅನುಸಂಧಾನದ ಪರಿಣಾಮಗಳಲ್ಲ. ಪ್ರತಿಯೊಂದು ರಾಜಧಾನಿಯಲ್ಲೂ ವಿದೇಶಿ ಅತಿಥಿಗಳಿಗಾಗಿ ಪ್ರಚಾರ ವಿಭಾಗವೊಂದಿರುತ್ತದೆ. ನಾವು ಅಲ್ಲಿಗೆ ತಲುಪಿದಾಕ್ಷಣ ಆ ವಿಭಾಗವು ಕೆಲವು ಕೈಪಿಡಿಗಳನ್ನು ನಮ್ಮ ಕೈಯಲ್ಲಿಟ್ಟು ಬಿಡುತ್ತದೆ. ಅದರಲ್ಲಿರುವ ದೊಡ್ಡ ದೊಡ್ಡ ಘೋಷಣೆಗಳು ಸಹಜವಾಗಿಯೇ ನಮ್ಮ ಗಮನವನ್ನು ಸೆಳೆಯುತ್ತವೆ. ಉದಾ; “ನಮ್ಮಲ್ಲಿ ಥಿಯೇಟರ್‌ಗಳು ದೇಶದ ಜೀವಂತ ಕೇಂದ್ರಗಳು” ಅಥವಾ “ನಮ್ಮಲ್ಲಿರುವ ಥಿಯೇಟರ್‌ನಲ್ಲಿ ದೇಶದ ಜೀವನ ನಾಗರಿಕ ವಾಸವಾಗಿದ್ದಾನೆ” ಅಥವಾ ಥಿಯೇಟರ್‌ನಿಂದಲೇ ನಮ್ಮ ರಾಷ್ಟ್ರಕ್ಕೆ ಅಭಿವ್ಯಕ್ತಿ ಸಿಗುತ್ತದೆ. ಅಂತಹ ಸಂದರ್ಭದಲ್ಲಿ ನನಗೂ ಸಂಘಪರಿವಾರದ ಭಾವುಕತೆಯಲ್ಲಿ ಮುಳುಗಿ… ಅಯ್ಯೋ! ಭಾರತ ಮಾತೆಯೇ! ನಾವೆಂತಹ ದುಸ್ಥಿತಿಯಲ್ಲಿದ್ದೇವೆ’ — ಎಂದು ಹೇಳಬೇಕೆನಿಸುತ್ತದೆ.

ನನ್ನ ಮನಸ್ಸಿನಲ್ಲಿ ಬೇರೆ ರೀತಿಯ ಪ್ರತಿಕ್ರಿಯೆಯೂ ಮೂಡಿತ್ತು. ನಾನು ಒಂದು ಪುಸ್ತಕದಲ್ಲಿ ಓದಿದ್ದೆ — “ಜರ್ಮನಿಯ ಪ್ರತಿಯೊಬ್ಬ ನಾಗರಿಕನ ನಾಗರಿಕತೆ ಥಿಯೇಟರಿನಿಂದ ಆರಂಭವಾಗುತ್ತದೆ.” ಎರಡನೆಯ ಪುಸ್ತಕದಲ್ಲಿ ಓದಿದ್ದೆ — “ಹಂಗೇರಿಯ ಪ್ರತಿಯೊಬ್ಬ ವ್ಯಕ್ತಿಯೂ ನಟನಾಗಿರುತ್ತಾನೆ.” ಮೂರನೆಯ ಪುಸ್ತಕದಲ್ಲಿ ನೋಡಿದ್ದೆ — – “ಯುಗೋಸ್ಲಾವಿಯಾದಲ್ಲಿ ನಟರನ್ನೂ, ನಾಗರಿಕರನ್ನೂ ಪ್ರತ್ಯೇಕಿಸಿ ಗುರುತಿಸಬೇಕೆಂದು ಆ ದೇಶ ನಿಮಗೆ ಸವಾಲು ಹಾಕುತ್ತದೆ.” ನಾಲ್ಕನೆಯದರಲ್ಲಿ “ರುಮೇನಿಯಾದ ಪ್ರತಿಯೊಬ್ಬ ನಾಗರಿಕನ ನರ – ನಾಡಿಗಳಲ್ಲಿ ಥಿಯೇಟರ್‌ ಸೇರಿಕೊಂಡಿದೆ.” ಐದನೆಯದರಲ್ಲಿ “ತನ್ನ ಜೀವಿತ ಕಾಲದಲ್ಲಿ ಒಮ್ಮೆಯೂ ರಂಗದ ಮೇಲೆ ಒಂದು ಬಾರಿಯೂ ಹೋಗದೆ ಇರುವಂತಹ ವ್ಯಕ್ತಿ ನಿಮಗೆ ಬಲ್ಗೇರಿಯಾದಲ್ಲಿ ಸಿಗುವುದು ಸಾಧ್ಯವೇ ಇಲ್ಲ.” ಅವುಗಳಿಗೆ ಸರಿಸಾಟಿಯಾಗಿ “ಹಿಂದಿ – ಯುರೋಪಿ ಭಾಯಿ ಭಾಯಿ! ನಾವಂತೂ ಹುಟ್ಟು ವೇಷಧಾರಿಗಳು. ನಮ್ಮ ಭಗವಂತನೂದಶಾವತಾರಿ!” ಎಂಬಿತ್ಯಾದಿ ಮಾತುಗಳನ್ನು ಹೇಳಲು ನನ್ನ ಮನಸ್ಸು ತವಕಿಸುತ್ತಿತ್ತು. ಹೇಗೂ ಇದು ಪ್ರಚಾರವಷ್ಟೆ, ಏನು ಹೇಳಿದರೂ, ಎಷ್ಟು ಹೇಳಿದರೂ ಕಡಿಮೆಯೆ!

ಆದರೆ ಆ ಪುಸ್ತಕಗಳಲ್ಲಿಯೇ ಇನ್ನೊಂದು ರೀತಿಯಲ್ಲಿ ವಸ್ತು ಸ್ಥಿತಿಯ ನೈಜರೂಪದ ಅರಿವಾಗುತ್ತದೆ. ಹನ್ನೆರಡು ಲಕ್ಷ ಜನಸಂಖ್ಯೆ ಇರುವ ಬರ್ಲಿನ್‌ನಲ್ಲಿ ಹದಿನೈದು ಸ್ಥಾಯಿ ಥಿಯೇಟರುಗಳಿವೆ. ಸಂಪೂರ್ಣ ಜರ್ಮನಿಯಲ್ಲಿ ತೊಂಬತ್ತೈದು, ಹತ್ತು ಲಕ್ಷ ಜನಸಂಖ್ಯೆಯ ಬುಡಾಪೆಸ್ಟ್‌ನಲ್ಲಿ ಹದಿನೆಂಟು, ಎರಡು ಕೋಟಿ ಜನಸಂಖ್ಯೆಯ ದೇಶವಾದ ಯುಗೋಸ್ಲಾವಿಯಾದಲ್ಲಿ ಅರವತ್ತು, ಎಪ್ಪುತ್ತ, ಒಂದೂವರೆ ಕೋಟಿಯಿರುವ ರಮೇನಿಯಾದಲ್ಲಿ ಐವತ್ತು, ಮುಕ್ಕಾಲು ಕೋಟಿಯಿರುವ ಬಲ್ಗೇರಿಯಾದಲ್ಲಿ ಮೂವತ್ತು, ಮೂವತ್ತೈದು ಥಿಯೇಟರುಗಳಿವೆ. ಅಂತಹುದರಲ್ಲಿ ಹದಿನಾಲ್ಕು ಹದಿನೈದು ಕೋಟಿ ಜನಸಂಖ್ಯೆಯಿರುವ ಹಿಂದಿ ಪ್ರದೇಶ ಮತ್ತು ಮೂವತ್ತೈದು ಲಕ್ಷ ಜನಸಂಖ್ಯೆಯಿರುವ ರಾಜಧಾನಿ ದಿಲ್ಲಿಯ ನೆನಪಾಗುತ್ತದೆ. ಈ ದೇಶಗಳ ಥಿಯೇಟರುಗಳಿಗೆ ಅರವತ್ತು – ಎಪ್ಪತ್ತು ಶೇಕಡಾ ಸರಕಾರಿ ಸಹಾಯಧನ ಸಿಗುವುದೆ ಎಂದು ತಿಳಿದಾಗ, ನಮ್ಮ ಸರಕಾರವನ್ನು ನಿಷ್ಕ್ರಿಯ, ರಂಗ – ವಿರೋಧಿ ಎಂದೆಲ್ಲಾ ಹೇಳಿ ನನ್ನ ಮನಸ್ಸನ್ನು ಹಗುರ ಮಾಡಿಕೊಳ್ಳಬೇಕೆನಿಸುತ್ತದೆ. ಇಂತಹ ಲಘುವಾದ ಹೇಳಿಕೆಗಾಗಿ ನಿಮ್ಮಲ್ಲಿ ನಾನು ಅವಶ್ಯವಾಗಿ ಕ್ಷಮೆಯಾಚಿಸುತ್ತೇನೆ. ಆದರೇನು ಮಾಡಲಿ? ಹತ್ತು – ಹನ್ನೆರಡು ದಿನಗಳಿಗಾಗಿ ‘ರಂಗ – ತಜ್ಞ’ನಾಗಿದ್ದೇನೆ. ಅಲ್ಲದೆ ಇಲ್ಲಿಯವರಿಗಾಗಿ ಭಾರತೀಯ ರಂಗ – ಭೂಮಿಯ ಏಕೈಕ ಪ್ರತಿನಿಧಿಯೂ ಆಗಿದ್ದೇನೆ. ಹಾಗಾಗಿ ನೇತಾರರ ನುಡಿಮುತ್ತು ಸಹಜವಾಗಿ ಬಾಯಲ್ಲಿ ಬಂದು ಬಿಡುತ್ತದೆ. ದೇಶಕ್ಕೆ ಹಿಂದಿರುಗಿದ ಬಳಿಕ ನನ್ನ ಯೋಗ್ಯತೆಯನ್ನು ಅರ್ಥೈಸಿಕೊಂಡು ಇಂತಹ ಬೇಕಾಬಿಟ್ಟಿ ಹೇಳಿಕೆಗಳ ಮೇಲೆ ಖಂಡಿತವಾಗಿಯೂ ಕಡಿವಾಣ ಹಾಕುತ್ತೇನೆ.

ಈ ಐದು ದೇಶಗಳಲ್ಲಿ ವಿಶೇಷವಾಗಿ ನಾನು ಮೊದಲು ನಾಟಕ ನೋಡುತ್ತಿದ್ದೆ, ನಾಟಕ ವಿದ್ಯಾಲಯಕ್ಕೆ ಹೋಗುತ್ತಿದ್ದೆ. ಅನಂತರ ಅಪೇರಾ, ಬ್ಯಾಲೆ ಬೊಂಬೆಯಾಟದ ಪ್ರದರ್ಶನ, ಮಕ್ಕಳ ನಾಟಕಗಳನ್ನು ನೋಡಲು ಹೋಗುತ್ತಿದ್ದೆ. ರಂಗಭೂಮಿಗೆ ಸಂಬಂಧಿಸಿದ ಯಾವ ಸಂಗ್ರಹಾಲಯವನ್ನೂ ನಾನು ಬಿಟ್ಟಿಲ್ಲ. ಇದಾದ ನಂತರವೂ ಸಮಯವಿದ್ದರೆ ವಸ್ತು – ಸಂಗ್ರಹಲಯ ಮತ್ತು ಪಕ್ಷಿಧಾಮಗಳಿಗೆ ಹೋಗುತ್ತಿದ್ದೆ.

ಲಾಯಿಪ್‌ಜಿಗ್‌ (LEIP ZIG)ನಲ್ಲಿ ಒಂದು, ಹಾಗೂ ಬರ್ಲಿನ್‌ನಲ್ಲಿ ನಾಲ್ಕು ಅಪೇರಾಗಳನ್ನು ನೋಡಿದೆ. ಎರಡು ಸಂಗೀತ ನಾಟಕ, ಎರಡು ಬೊಂಬೆಯಾಟ, ಎರಡು ಮಕ್ಕಳ ನಾಟಕಗಳನ್ನೂ ಅಲ್ಲಿ ನೋಡಿದೆ. ಬ್ರೆಕ್ಟ್‌ನಿಂದಾಗಿ ನಮಗೆ ಬರ್ಲಿನ್ ಪುಣ್ಯಕ್ಷೇತ್ರವಿದ್ದಂತೆ. ಹಾಗಾಗಿ ಬರ್ಲಿನ್ ಎನ್ನಾಂಬಲ್ ಬಿಡುವ ಹಾಗೆ ಇರಲಿಲ್ಲ. ಬರ್ಲಿನ್‌ನ ಅಪೇರಗಾಳು ಉತ್ಕೃಷ್ಟ ಮಟ್ಟದವುಗಳಂತೆ ಕಂಡವು. ರಾಚುವ ಬಣ್ಣಗಳು, ರಂಗ ಸಜ್ಜಿಕೆ, ರಂಗದ ಮೇಲೆ ಬಳಸುವ ಬಹಳಷ್ಟು ಉಪಕರಣಗಳಿಂದಾಗಿ ಮೊದಮೊದಲು ನಮಗೆ ಅವು ಅಷ್ಟೊಂದು ಇಷ್ಟವಾಗಿರಲಿಲ್ಲ. ಬರ್ಲಿನ್ ಎನ್ಸಾಂಬಲ್‌ನಲ್ಲೂ ‘ಸ್ಟೇಜ್‌ಮೆಕೆನಿಸಮ್’ನ್ನು ಬಹಳವಾಗಿ ಉಪಯೋಗಿಸುತ್ತಾರಾದರೂ, ಪ್ರಯೋಗದಲ್ಲಿ ತುಂಬಾ ಕಲ್ಪನಾಶೀಲತೆಯಿದೆ. ಹಾಗಾಗಿ ದೃಶ್ಯ ಪರಿವರ್ತನೆಯಲ್ಲಿಯೂ ಹೊಸತನವೇನೂ ಕಾಣಸಿಗಲಿಲ್ಲ. ಬದಲಾಗಿ ಅವರಲ್ಲಿರುವ ಪ್ರಯೋಗಶೀಲತೆಯ ಅಭಾವ ಹೆಚ್ಚು ಎದ್ದು ಕಾಣುತ್ತಿತ್ತು. ಬ್ರೆಕ್ಟನ ಪ್ರಯೋಗವೇ ಅವರಲ್ಲಿ ಆಧುನಿಕ ಪ್ರಯೋಗವಿರಬಹುದು. ವಿದೇಶಿ ನಾಟಕಕಾರರಲ್ಲಿ ಶೇಕ್ಸಪಿಯರ್‌ನ ನಂತರ ಬರ್ನಾಡ್ ಷಾ ಮತ್ತು ಒಕೇಸಿಯ ನಾಟಕಗಳು ಮಾತ್ರ ಅಲ್ಲಿ ಪ್ರದರ್ಶಿಸಲ್ಪಟ್ಟಿದೆ. ಹೊಸ – ಹೊಸ ಪ್ರಯೋಗಗಳೆಲ್ಲಾ ಅವರ ದೃಷ್ಟಿಯಲ್ಲಿ ಬಂಡವಾಳಶಾಹಿ ದೇಶಗಳ ಬಡಾಯಿ ಮಾತ್ರ.

“ಕಳೆದು ಒಂದೆರಡು ವರ್ಷಗಳ ಹಿಂದೆ ಜೆಕೋಸ್ಲೊವಾಕಿಯಾದ ಒಂದು ಪ್ರಯೋಗಶೀಲ ತಂಡವು ಆಯನಸ್ಕೋನ ‘ರೆನೆಸೊರಸ್’ನ್ನು ಪ್ರಸ್ತುತ ಪಡಿಸಿತ್ತು ಆದರೆ ಪ್ರೇಕ್ಷಕರು ಅರ್ಧದಲ್ಲಿಯೇ ಎದ್ದು ಹೋದರು.” — ಎಂದು ಅಲ್ಲಿಯ ನಾಟ್ಯವಿದ್ಯಾಲಯದ ಪ್ರೊಫೆಸರ್ ಹೇಳಿದರು. ಒಂದು ಹಂತದಲ್ಲಂತೂ ತಾವಿನ್ನೂ ಓಬಿರಾಯನ ಕಾಲದಲ್ಲಿದ್ದೇವೆ ಎಂಬುದನ್ನು ಅವರು ಒಪ್ಪಿಕೊಂಡರು. ಈ ಚರ್ಚೆಯಿಂದ ನಾನು ತಿಳಿದದ್ದೇನೆಂದರೆ, ಯಾವತ್ತೂ ಜನರನ್ನು ಹೇಳಬಯಸುವುದಿಲ್ಲ. ಯಾಕೆಂದರೆ ಬ್ರೆಕ್ಟ್ ನಮ್ಮ ದೇಶಕ್ಕೆ ಈಗಾಗಲೇ ತಲುಪಿದ್ದಾನೆ. ಹೇಗೇ ಇದ್ದರೂ ವಿದೇಶಿಯರಿಗೆ ಬರ್ಲಿನ್ ಎನ್ಸಾಂಬಲ್ ಏಕೈಕ ಆಕರ್ಷಣೆಯ ಕೇಂದ್ರ, ಬ್ರೆಕ್ಟನ ಪ್ರಯೋಗಕ್ಕೆ ಸಂಬಂಧಿಸಿದಂತೆ ನನ್ನ ವಿಚಾರವೊಂದು ಹೀಗಿತ್ತು — (ನನಗೆ ತಿಳಿದಂತೆ ನನ್ನ ಹೆಚ್ಚಿನ ಮಿತ್ರರದು ಕೂಡಾ.) ಬ್ರೆಕ್ಟ್‌ನ ಪದ್ಧತಿ ಸ್ತಾನಿಸ್ಲಾವ್‌ಸ್ಕಿಗಿಂತ  ಭಿನ್ನವಾಗಿರುವುದಲ್ಲದೆ, ಒಂದು ಇನ್ನೊಂದಕ್ಕೆ ಸಂಬಂಧವೇ ಇಲ್ಲದ್ದು. ಆದರೆ ಅಲ್ಲಿಯ ಪ್ರೊಫೆಸರ್‌ರು ನನ್ನ ಈ ಮಾತನ್ನು ಅಲ್ಲಗಳೆದರು. “ಬ್ರೆಕ್ಟನ ಪದ್ದತಿ ಸ್ತಾನಿಸ್ಲಾವ್‌ಸ್ಕಿಯ ಪದ್ಧತಿಯ ವಿಸ್ತ್ರತರೂಪ. ಎರಡೂ ಪದ್ಧತಿಯಲ್ಲಿ ಅಂತರವಿದೆ ಎಂದಾದರೆ, ಅದು ಸಮಯದ್ದೇ ಹೊರತು ಸಿದ್ಧಾಂತದ್ದಲ್ಲ.” ಎಂಬುದು ಅವರ ವಾದ.

ಇಷ್ಟಾಗಿಯೂ ಅವರ ಪ್ರಸ್ತುತಪಡಿಸುವಿಕೆ ಉಚ್ಛ ಮಟ್ಟದ್ದಾಗಿದ್ದು, ರಂಗಕಲೆಯ ಬಗ್ಗೆ ಜನರ ಅಭಿಪ್ರಾಯವೂ ತುಂಬಾ ಒಳ್ಳೆಯದಾಗಿದೆ, ಎಂಬ ಮಾತಂತೂ ಒಪ್ಪಿಕೊಳ್ಳಬೇಕಾದದ್ದು. ಪ್ರತಿದಿನ ಥಿಯೇಟರಿನ ವಾತಾವರಣ ಉತ್ಸವಂದಂತನಿಸುತ್ತದೆ. ನಿಸ್ಸಂದೇಹವಾಗಿ ಅವರಿಗೆ ತಮ್ಮ ಥಿಯೇಟರಿನ ವಾತಾವರಣ ಉತ್ಸವದಂತನಿಸುತ್ತದೆ. ನಿಸ್ಸಂದೇಹವಾಗಿ ಅವರಿಗೆ ತಮ್ಮ ಥಿಯೇಟರಿನ ಬಗ್ಗೆ ಪ್ರೇಮವಿದೆ. ಸುಳ್ಳು ಏಕೆ ಹೇಳಲಿ? ನನಗೆ ಇಲ್ಲಿಯ ವಸ್ತು ಸಂಗ್ರಹಾಲಯ ಮತ್ತು ಪಕ್ಷಿಧಾಮವೂ ತುಂಬಾ ಹಿಡಿಸಿತ್ತು. ವಿಶೇಷವಾಗಿ ವಸ್ತುಸಂಗ್ರಹಾಲಯ. ಅಲ್ಲಿಗೆ ಹೋಗುವುದು, ಬೆಬಿಲೋನಿನ ರಸ್ತೆ, ಎಥೆನ್ಸ್‌ನ ದೇವಾಲಯ ಮುಂತಾದವುಗಳನ್ನು ನೋಡುವುದೇ ಒಂದು ಅದ್ಭುತವಾದ ಅನುಭವವಾಗಿತ್ತು.

ಬುಡಾಪೆಸ್ಟ್ ಹಂಗೇರಿಯ ರಾಜಧಾನಿ. ಆದರೆ ಬುಡಾಪೆಸ್ಟನ್ನು ಬಿಟ್ಟರೆ ಹಂಗೇರಿಗೆ ತನ್ನದೇ ಆದ ಯಾವ ಅಸ್ಥಿತ್ವವೂ ಇಲ್ಲ. ಸಂಪೂರ್ಣ ಹಂಗೇರಿಯೇ ಬುಡಾಪೆಸ್ಟ್‌ನಲ್ಲಿ ನೆಲೆಸಿದೆಯೋ ಎಂಬಂತೆ ಈ ಪಟ್ಟಣದ ಸ್ವರೂಪ ಅಷ್ಟೊಂದು ಆಕರ್ಷಕವಾಗಿದೆ. ಡೆನ್ಯೂಬ್ ನದಿಯ ದಡದಲ್ಲಿ ಬುಡಾ ಮತ್ತು ಪೆಸ್ಟ್ ಎಂಬ ಎರಡು ಪಟ್ಟಣಗಳು. ಏಳು ಸೇತುವೆಗಳಿಂದ ಜೋಡಿಸಲ್ಪಟ್ಟ ಸುಂದರವಾದ ನಗರ ಬುಡಾಪೆಸ್ಟ್.

ರಂಗಭೂಮಿಯ ಕುರಿತಾಗಿ ಹೇಳುವುದಾದರೂ ಅಪೇರಾ, ಬ್ಯಾಲೆಗಳ ವಿಷಯದಲ್ಲಿ ಬುಡಾಪೆಸ್ಟ್‌ನಲ್ಲಿ ನನಗೆ ಯಾವ ಭಿನ್ನತೆಯೂ ಕಾಣಲಿಲ್ಲ. ಆದರೆ ನಾಟಕಗಳ ಆಯ್ಕೆ ಮತ್ತು ಪ್ರದರ್ಶನಗಳಲ್ಲಿ ಭಿನ್ನತೆ ಅವಶ್ಯವಾಗಿ ಕಂಡು ಬಂತು. ದೇಶ ಬೇರೆ, ಭಾಷೆ ಬೇರೆ, ನಾಣ್ಯ ಬೇರೆ, ಸರಕಾರ ಬೇರೆಯಾಗಿರುವಾಗ ಕೆಲಸ ವಿಷಯಗಳ ಬಗೆಗಿನ ಧೋರಣೆಗಳಲ್ಲೂ ಭಿನ್ನತೆ ಸಹಜವಾದದ್ದೇ. ಅದರಲ್ಲೂ ನಾಟಕಗಳ ಆಯ್ಕೆಯಲ್ಲಿ ನಾನು ಹೆಚ್ಚಿನ ಸ್ವಾತಂತ್ರ್ಯ ಮಾತ್ರವಲ್ಲ, ವೈವಿಧ್ಯತೆಯನ್ನೂ ಕಂಡೆ. ಅಲ್ಲಿ ಹೆಚ್ಚಾಗಿ ಸುಖಾಂತ್ಯ ನಾಟಕಗಳೇ ಜನಪ್ರಿಯವಾಗಿವೆ. ‘ಚೇಂಬರ್’ ಥಿಯೇಟರಿನಲ್ಲಿ ಪ್ರಯೋಗಶೀಲ ನಾಟಕಗಳ ಪ್ರದರ್ಶನ ವಿಶೇಷವಾಗಿ ನಡೆಯುತ್ತವೆ. ಜಗತ್ತಿನ ಎಲ್ಲಾ ಉತ್ತಮ ನಾಟಕಗಳ ಪ್ರದರ್ಶನ ವಿಶೇಷವಾಗಿ ನಡೆಯುತ್ತವೆ. ಜಗತ್ತಿನ ಎಲ್ಲಾ ಉತ್ತಮ ನಾಟಕಗಳ ಪ್ರದರ್ಶನಗಳೂ ಇಲ್ಲಿ ಸಿಗುತ್ತವೆ. ಸುಖಾಂತ್ಯ ನಾಟಕಗಳಲ್ಲಿ ‘ಬ್ಯ್ಲಾಕ್‌ಕಾಮೆಡಿ’, ‘ಆಡ್ ಕಪಲ್’ ವರ್ಷವಿಡೀ ಪ್ರದರ್ಶನಗೊಳ್ಳುತ್ತವೆ. ‘ಹೂ ಈಸ್ ಆಫ್ರೈಡ್ ಆಫ್’ ‘ವರ್ಜೀನಿಯಾ ವೋಲ್ಫ್’ ‘ಅವರ್ ಟೌನ್’ ನಂತಹ ಗಂಭೀರ ನಾಟಕಗಳು ಕೂಡಾ ಹಾಗೆಯೇ ನಡೆಯುತ್ತವೆ. ಒಂದೆರಡು ಮೌಲ್ವಿಕ ನಾಟಕಗಳನ್ನು ನೋಡುವ ಅವಕಾಶ ಸಿಕ್ಕಿತು.

ನಮ್ಮಲ್ಲಿರುವ ತಮಾಶಾ ಅಥವಾ ಭವಾಯಿಯನ್ನು ಸಂಪೂರ್ಣವಾಗಿ ಹೋಲುವಂತಿರುವ ಒಪೆರೇಟಾವೊಂದನ್ನು ನಾನಲ್ಲಿ ನೋಡಿದೆ. ಅದರಲ್ಲಿ ತಕ್ಕ ಮಟ್ಟಿನ ನರ್ತನ ಮತ್ತು ಹಾಡುಗಳಿರುತ್ತವೆ. ಕತೆಯೂ ಅಪ್ಸರೆ, ಜಾದೂಗರ, ವ್ಯಾಪಾರಿ, ರಾಜಕುಮಾರ, ರಾಜಕುಮಾರಿಯ ಸುತ್ತಮುತ್ತ ತಿರುಗುತ್ತದೆ. ಹೆಚ್ಚಾಗಿ ಜಾದೂಗಾರ ಚೀನದವನು, ವ್ಯಾಪಾರಿ ಅರಬಸ್ತಾನದವನು, ಪುರೋಹಿತ ಭಾರತದವನಾಗಿರುತ್ತಾನೆಂಬುದನ್ನು ನಾನಲ್ಲಿ ತಿಳಿದುಕೊಂಡೆ. ಆದರೆ ರಾಜಕುಮಾರ ಮತ್ತು ರಾಜಕುಮಾರಿ ಮಾತ್ರ ಯುರೋಪಿಯನ್ನನಾಗಿರಲೇಬೇಕು. ಒಪೆರೇಟಾದ ಈ ಪ್ರಕಾರವು ದ್ವಿತೀಯ ಮಹಾಯುದ್ಧದ ಸಂದರ್ಭದಲ್ಲಿ ಜನಪ್ರಿಯ ಮನೋರಂಜನೆಯ ರೂಪದಲ್ಲಿ ಪ್ರಚಲಿತವಾಯಿತು. ಈಗದು ಸೀಮಿತ ಪ್ರೇಕ್ಷಕರೆದುರು ಪ್ರದರ್ಶನಗೊಳ್ಳುತ್ತಿದೆಯೆಂದು ಹೇಳುತ್ತಾರೆ. ಗೀತ ನಾಟಕ ವಿಭಾಗವನ್ನೂ ನೋಡಿದೆ. ‘ಕಮ್ಯುನಿಟಿ ಥಿಯೇಟರಿ’ನ ಹತ್ತು ವಿಂಗ್‌ಗಳು ಒಟ್ಟೊಟ್ಟಿಗೆ ಕೆಲಸ ಮಾಡುತ್ತವೆ. ಇದರಲ್ಲಿ ಒಂದು ಒಪೆರೇಟಾದ್ದು ಆದರೆ ಆಶ್ಚರ್ಯದ ಸಂಗತಿಯೆಂದರೆ, ಕಮ್ಯುನಿಟಿ ಥಿಯೇಟರಿನ ಅತ್ಯಂತ ಒಳ್ಳೆಯ ನಾಟಕಗಳಾದ ‘ಹ್ಯಾಮ್ಲೆಟ್‌’, ‘ಮ್ಯಾಕ್‌ಬೆತ್’, ‘ಚೆರಿಆರ್ಚಡ್‌’, ‘ಮೇಜರ್’ ಇತ್ಯಾದಿಗಳನ್ನವರು ಬುಡಾಪೆಸ್ಟ್‌ನಿಂದ ಹೊರಗೆ ಸುತ್ತಮುತ್ತಲಿನ ನಗರಗಳಲ್ಲಿ ಪಟ್ಟಣಗಳಲ್ಲಿ ಆಡುತ್ತಾರೆ.

ಮಕ್ಕಳನ್ನೂ ಮುದುಕರನ್ನೂ ಸಮಾನವಾಗಿ ರಂಜಿಸುವ ಬುಡಾಪೆಸ್ಟ್‌ನ ಗೊಂಬೆಯಾಟವನ್ನು ನಾನೆಂದೂ ಮರೆಯಲಾರೆ. ಇವರ ಗೊಂಬೆಯಾಟ ಕಲ್ಪನಾ ಶೀಲವುಳ್ಳದ್ದೂ, ಕಲಾಪೂರ್ಣವುಳ್ಳದ್ದೂ ಹಾಗೂ ಉತ್ತಮ ಮಟ್ಟದ್ದೂ ಆಗಿರುತ್ತದೆ. ‘ಟಾಯಗರ್ – ಪೀಟರ್’, ‘ವುಡನ್ ಪ್ರಿನ್ಸ್’ನಂತಹ ಆಟಗಳ ಪ್ರದರ್ಶನಗಳು ದೇಶ – ವಿದೇಶಗಲಲ್ಲಿ ಪ್ರಸಿದ್ಧಿ ಪಡೆದಿವೆ. ಆದರೆ ನನಗೆ ಅಲ್ಲಿಯ ಮಕ್ಕಳ ನಾಟಕ ಇಷ್ಟವಾಗಿಲ್ಲ ಒಂದನೆಯದಾಗಿ ಅದನ್ನು ಮಕ್ಕಳಿಗಾಗಿ ದೊಡ್ಡವರು ಆಡುತ್ತಾರೆ. ಎರಡನೆಯದಾಗಿ ಮನೋರಂಜನೆಯ ಕೀಳುಮಟ್ಟ ನನ್ನ ಮನಸ್ಸಿಗೆ ಕಿರಿಕಿರಿಯನ್ನುಂಟು ಮಾಡಿತು.

ಹಂಗೇರಿಯ ಇಬ್ಬರು ನಾಟಕಕಾರರೊಂದಿಗೆ ವೈಯಕ್ತಿಕ ಪರಿಚಯವಾಯಿತು. ಒಬ್ಬರು ಮಿ. ಹುಬಾಯಿ. ಅವರ ‘ನೀರೋ ಈಸ್ ಪ್ಲೇಯಿಂಗ್’ ಎಂಬ ಹೆಸರಿನ ಆಧುನಿಕ ಗಂಭೀರ ಅಸಂಗತ ನಾಟಕ ಮೆಡಾಚ್ ಚೇಂಬರ್ ಥಿಯೇಟರಿನಲ್ಲಿ ನಡೆಯುತ್ತಿತ್ತು. ಮಿ.ಹುಬಾಯಿ ಎರಡು ವರ್ಷಗಳ ಹಿಂದೆ ದಿಲ್ಲಿಯಲ್ಲಿ ನಡೆದ ಪೂರ್ವ – ಪಶ್ಚಿಮ ಥಿಯೇಟರ್ ಸೆಮಿನಾರ್‌ನಲ್ಲೂ ಭಾಗವಹಿಸಿದ್ದರು. ಭಾರತದ ಬಗ್ಗೆ ಅವರದು ಪ್ರಶಂಸೆಯೇ ಪ್ರಶಂಸೆ. ಅವರು ಭಾರತದ ಟೋಟಲ್ ಥಿಯೇಟರಿನಿಂದ ತುಂಬಾ ಪ್ರಭಾವಿತರಾಗಿದ್ದರು. ಇನ್ನೊಬ್ಬ ಯುವ ನಾಟಕಕಾರ ಪೀಟರ್ ಮ್ಯೂಲರ್. ಈಗವರು ಮೆಡಾಚ್ ಥಿಯೇಟರಿನಲ್ಲಿ ‘ಡ್ರಮಾಟರ್ಗ್‌’ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಮನಸಾ ತಮ್ಮನ್ನು ಉಪನಿಷತ್ ಕಾಲದ ಭಾರತೀಯ ನಾಗರಿಕರೆಂದು ಭಾವಿಸುತ್ತಾರೆ. ವೇದ ಮತ್ತು ಉಪನಿಷತ್ತನ್ನೂ ಓದಿಕೊಂಡಿದ್ದಾರೆ. (ಈ ವಿಷಯದಲ್ಲಿ ಅವರ ತಿಳಿವಿಕೆಯನ್ನು ಕಂಡು ನಾಚಿ ನಾವೇ ತಲೆತಗ್ಗಿಸುವಂತಾದೆ) ‘ಎವರೆಸ್ಟ ಪರ್ವತದ ವಿಜಯ’ ಎಂಬ ನಾಟಕವನ್ನವರು ಬರೆಯುತ್ತಿದ್ದಾರೆ. ಅದರಲ್ಲಿ ಹಿಲೇರಿ ಮತ್ತು ತೇನ್‌ಸಿಂಗ್‌ರ ಪಾತ್ರಗಳ ಮಾಧ್ಯಮದಿಂದ ಪಶ್ಚಿಮ – ಪೂರ್ವ ದೇಶಗಳ ಭಿನ್ನ ದಾರ್ಶನಿಕ ಸಿದ್ಧಾಂತಗಳ ವಿಶ್ಲೇಷಣೆಯನ್ನವರು ಮಾಡಲಿದ್ದಾರೆ.

ಯುಗೋಸ್ಲಾವಿಯಾ ಈ ಐದು ದೇಶಗಳಲ್ಲಿ ಬಹುದೊಡ್ಡ ದೇಶ. ಆರು ರಾಜ್ಯಗಳ ಸಂಘೀಯ ಗಣರಾಜ್ಯ ಭಾಷೆಗೆ ಸಂಬಂಧಿಸಿದ ಸಮಸ್ಯೆ ಅಲ್ಲಿಯೂ ಇದೆ. ಮೇಲಾಗಿ ತುರ್ಕರು, ಹಂಗೇರಿಯನ್ನರಂತಹ ಅಲ್ಪಸಂಖ್ಯಾತರೂ ಇದ್ದಾರೆ. ಆಡಳಿತವು ವಿಕೇಂದ್ರೀಕೃತವಾಗಿದ್ದು, ರಾಜ್ಯಗಳಿಗೆ ಸಾಕಷ್ಟು ಅಧಿಕಾರಿಗಳಿವೆ. ಇದರಿಂದಾಗಿ ಪ್ರತಿಯೊಂದು ರಾಜ್ಯಕ್ಕೂ ತನ್ನದೇ ಆದ ಸಾಂಸ್ಕೃತಿಕ ನೀತಿಯಿದೆ. ಕೇಂದ್ರದ ಸಾಂಸ್ಕೃತಿಕ ಪರಿಷತ್ತು ನನಗಾಗಿ ಅಲ್ಲಿಯ ಆರು ರಾಜ್ಯಗಳ ತಿರುಗಾಟದ ವ್ಯವಸ್ಥೆ ಮಾಡಿತ್ತು. ಹಾಗಾಗಿ ಯುಗೋಸ್ಲಾವಿಯಾದ ಒಂದು ತುದಿಯಿಂದ ಇನ್ನೊಂದು ತುದಿಯವರೆಗೆ ತಿರುಗಾಟ ಮಾಡುವ ಸದವಕಾಶ ಸಿಕ್ಕಿತು. ಇದಕ್ಕೆ ಸರಿಯಾಗಿ ಜಾರ್ಜಿಯಾವಿಚ್ ಎಂಬ ಲವಲವಿಕೆಯ, ಸಜೀವತೆಯೇ ಮೂರ್ತಿವೆತ್ತ ಯುವಕ ದುಭಾಷಿಯಾಗಿ ಸಿಕ್ಕಿದ್ದ. ಹಾಗೆ ನೋಡಿದ್ದರೆ, ಯುಗೋಸ್ಲಾವಿಯಾ ಸೌಮ್ಯವಾದಿ ದೇಶದಂತೆ ಕಾಣುವುದಿಲ್ಲ. ಅಲ್ಲಿರುವುದು ಸೌಮ್ಯಭಾವದ ಒಂದು ಚೌಕಟ್ಟು ಮಾತ್ರ. ಅಲ್ಲಿದ್ದಾಗ ಜನರಲ್ಲಿರುವ ಅತಿಯಾದ ಸ್ವಚ್ಛಂದ ಪ್ರವೃತ್ತಿ ಆಗಾಗ ನನ್ನ ಗಮನಕ್ಕೆ ಬಂತು. ಮೇಲಾಗಿ ಕಳೆದೆರಡು ವರ್ಷಗಳಲ್ಲಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡಬೇಕೆಂಬ ಉದ್ದೇಶದಿಂದ ವೀಸಾ ಪದ್ಧತಿಯನ್ನು ತೆಗೆದು ಹಾಕಿದ್ದಾರೆ. ಇದರಿಂದಾಗಿ ಸೌಮ್ಯವಾದ – ವಿರೋಧಿ ಪ್ರಭಾವವೂ ತಕ್ಕ ಮಟ್ಟಿಗೆ ಒಳ ಪ್ರವೇಶ ಮಾಡಿದೆ. ಈ ಪ್ರಭಾವವನ್ನು ಅಲ್ಲಿಯ  ರಂಗ ಚಟುವಟಿಕೆಗಳಲ್ಲೂ ನೋಡಬಹುದಾಗಿದೆ. “ಜನರು ಬರಲಿ, ಬಾರದಿರಲಿ ನನಗೆ ಸರಿಕಾಣುವಂತೆ ನಾನು ನಾಟಕವನ್ನು ಪ್ರದರ್ಶಿಸುತ್ತೇನೆ.” ಎನ್ನುವ ಮಾತುಗಳನ್ನು ಸೌಮ್ಯವಾದಿ ದೇಶದ ಒಬ್ಬ ನಿರ್ದೇಶಕನ ಬಾಯಿಂದ ಕೇಳುವುದಕ್ಕೆ ವಿಚಿತ್ರವೆನಿಸುತ್ತದೆ.ಬೇರೆ ದೇಶಗಳಲ್ಲಿದ್ದುದಕ್ಕಿಂತಲೂ ಹೆಚ್ಚು ದಿನ ನಾನು ಯುಗೋಸ್ಲಾವಿಯಾದಲ್ಲಿದ್ದೆ. ಅಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ನೋಡಿದೆ. ಬಿಡುವಿಲ್ಲದೆ ದಿನಗಳು ಕಳೆಯುತ್ತಿದ್ದವು. ಪ್ರತಿಯೊಂದು ರಾಜ್ಯಕ್ಕೂ ತಮ್ಮದೇ ಆದ ರಾಷ್ಟ್ರೀಯ ಥಿಯೇಟರ್‌ ಇದ್ದು, ತಮ್ಮದೇ ಆದ ನಾಟಕ ವಿದ್ಯಾಲಯ ಮತ್ತು ನಾಟಕ ಮಹಾವಿದ್ಯಾಲಯಗಳಿವೆ. ಇದರ ಪರಿಣಾಮವಾಗಿ ಅಲ್ಲಿ ನನಗೆ ಕೆಲವು ಒಳ್ಳೆಯ ನಾಟಕಗಳ ಜೊತೆಗೆ. ಕೆಲವು ಎಟ್ಟ ನಾಟಕಗಳನ್ನೂ ನೋಡಬೇಕಾಯಿತು. ಆರಂಭದಲ್ಲಿ ನೋಡಿದ ನಾಟಕಗಳಿಂದ ನಾನು ಹೆಚ್ಚು ಪ್ರಭಾವಿತನಾಗಲಿಲ್ಲ. ಅಪೇರಾಗಳಂತೂ ತುಂಬಾ ನಿರಾಶಾದಾಯಕವಾಗಿದ್ದವು. ಮೊದಲೇ ನಾನು ಬರ್ಲಿನ್‌ನಲ್ಲಿ ಉತ್ತಮ ಮಟ್ಟದ ಅಪೇರಗಳನ್ನು ನೋಡಿದ್ದರಿಂದ, ಇಲ್ಲಿಯವುಗಳು ನಿರಾಶಾದಾಯಕವಾಗುವುದಕ್ಕೆ ಇದೂ ಕಾರಣವಿರಬಹುದು. ನೋಡಿದ ಎರಡು ನಾಟಕಗಳು ಮಾಮೂಲಿಯದೆನಿಸಿದವು.

ಸರ್ಬಿಯಾದ ರಾಜಧಾನಿ ಸರಾಯೆವೋದಲ್ಲಿ ಕ್ಯೂಬಾದ ಒಂದು ನಾಟಕ ‘ನೈಟ್ ಆಫ್ ಮರ್ಡ್‌‌ರ್’ನ್ನು ನೋಡಿ ನಾನು ಆಶ್ಚರ್ಯಚಕಿತನಾದೆ. ಥಿಯೇಟರು ಕೇವಲ ಹೆಸರಿಗೆ ಮಾತ್ರವಾಗಿತ್ತು. ಒಂದು ದೊಡ್ಡ ಕೋಣೆ. ಅದನ್ನು ‘ಮಾಲಿ ಆರ್ಥಾತ್ ಚಿಕ್ಕ ಥಿಯೇಟರ್‌ ಎನ್ನುತ್ತಾರೆ. ವೇದಿಕೆಯಿರಲಿಲ್ಲ. ಹತ್ತಿಪ್ಪತ್ತು ಸ್ಪಾಟ್‌ಲೈಟ್‌ಗಳಿದ್ದವು. ನಾಲ್ಕು ಕಡೆಗಳಲ್ಲಿ ಪ್ರೇಕ್ಷಕರಿಗಾಗಿ ಕುಳಿತುಕೊಳ್ಳುವ ವ್ಯವಸ್ಥೆಯಿತ್ತು. ಅಬ್ಬಬ್ಬಾ ಎಂದರೆ ಅದರಲ್ಲಿ ೧೫೦ ಜನರು ಕುಳಿತುಕೊಳ್ಳಬಹುದು. ನಾಟಕದಲ್ಲಿ ಅಭಿನಯವೇ ಪ್ರಧಾನವಾಗಿತ್ತು. ಅದನ್ನವರು ಎಷ್ಟು ಸಲೀಸಾಗಿ, ವಿಶ್ವಾಸನೀಯವಾಗಿ ಮಾಡಿದರೆಂದರೆ, ಭಾಷೆ ಬೇರೆಯೆಂಬುದು ನನ್ನ ಗಮನಕ್ಕೆ ಬರಲೇ ಇಲ್ಲ. ಕೇವಲ ಮೂವರು ನಟರಿದ್ದರು. ಅವರ ಅಭಿನಯ ನೋಡಿದ ಬಳಿಕ ಯುಗೋಸ್ಲಾವಿಯಾದ ಥಿಯೇಟರಿನ ಬಗೆಗೆ ನನ್ನ ಮನಸ್ಸಿನಲ್ಲಿ ಮೊದಲಿದ್ದ ತಪ್ಪು ಅಭಿಪ್ರಾಯವನ್ನು ಸರಿಪಡಿಸಿಕೊಳ್ಳಬೇಕಾಯಿತು. ನಾಟಕ ಮುಗಿದ ಬಳಿಕ ನಿರ್ದೇಶಕರನ್ನು ಭೇಟಿಯಾದೆ. ಕೇವಲ ೨೪ – ೨೫ ವರ್ಷದವರಿರಬೇಕು. ಜೊತೆಗೆ ನಟರನ್ನೂ ಮಾತನಾಡಿಸಿದೆ. ಅವರೆಲ್ಲ ಅಲ್ಲಿಯ ರಾಷ್ಟ್ರೀಯ ಥಿಯೇಟರಿನಲ್ಲಿ ಸಂಬಳ ಪಡೆಯುವ ಕಲಾವಿದರೆಂಬುದು ತಿಳಿದುಬಂತು. ಅವರಿಗೆ ಅಲ್ಲಿಯ ಕೆಲಸದಿಂದ ತೃಪ್ತಿ ಸಿಕ್ಕಿರಲಿಲ್ಲ. ಹಾಗಾಗಿ ಸಮಯ ಉಳಿಸಿಕೊಂಡು ರಾಜಕೀಯ ಸಹಾಯ ಸವಲತ್ತುಗಳನ್ನು ಪಡೆಯದೇ, ಕೇವಲ ಕೆಲವೇ ಪ್ರೇಕ್ಷಕರ ಪ್ರೋತ್ಸಾಹದಿಂದ ಇಂತಹ ಪ್ರಗತಿಶೀಲ ನಾಟಕವನ್ನಾಡಿ ಸಂತೃಪ್ತಿ ಪಟ್ಟುಕೊಳ್ಳುತ್ತಾರೆ.

ಇದೇ ರೀತಿಯ ಅನುಭವ ಬೆಲ್‌ಗ್ರೇಡ್‌ನಲ್ಲಿಯೂ ಆಯಿತು. ಥಿಯೇಟರಿನ ಹೆಸರು ಇತಾಲಿಯಾ ೨೧೨. ಕಾರಣ ಇಲ್ಲಿ ೨೧೨ ಪ್ರೇಕ್ಷಕರಿಗಷ್ಟೆ ಸ್ಥಳವಿದೆ. ಇಲ್ಲಿ ನಾನು ಬ್ರಿಟನ್ ನಿರ್ದೇಶಕರೊಬ್ಬರು ನಿರ್ದೇಶಿಸಿದ ಪಿಂಟರ್‌ರ ‘ಹೋಮ್ ಕಮಿಂಗ್’, ಜೊತೆಗೆ ಅರ್ಥರ್ ಮಿಲರ್‌ರವರ ‘ಪ್ರೈಜ್’ ಕೂಡ ನೋಡಿದೆ. ಇಲ್ಲಿ ನನಗೆ ನಾಟಕವಷ್ಟೇ ಅಲ್ಲ, ರಂಗಮಂದಿರದ ರಚನಾ ವ್ಯವಸ್ಥೆ, ಹೊರಗಡೆ ಕಾರ್ಯಕ್ರಮದ ಜಾಹೀರಾತು ನಿರ್ವಹಣೆ, ಸ್ವಾಗತ ಕೋಣೆ, ಮಧ್ಯಂತರ ಬಿಡುವಿನಲ್ಲಿ ೨೧೨ ಕಪ್ಪು ತುಕಾಫಿಯನ್ನು ಪುಕ್ಕಟೆಯಾಗಿ ಹಂಚಿದ್ದರು.

ಒಂದು ರೆಸ್ಟೋರೆಂಟ್‌ನಲ್ಲಿ ನಾನು ‘ಹೆಪನಿಂಗ್’ ಶೈಲಿಯ ಕಾರ್ಯಕ್ರಮವನ್ನು ನೋಡಿದೆ. ಇದರಲ್ಲಿ ಆಗಂತುಕರು ರೆಸ್ಟೊರೆಂಟಿನ ಕಾಯ್ದಿಟ್ಟ ಮೇಜುಗಳ ಸುತ್ತ ಕುಳಿತು ಹರಟೆ ಹೊಡೆಯುತ್ತಿರುತ್ತಾರೆ. ಒಮ್ಮೆಲೆ ಯಾವುದೋ ಮೇಜಿನ ಹರಟೆ ಪ್ರಲಾಪಕ್ಕೆ ತಿರುಗುತ್ತೆ. ಸನ್ನಿವೇಶ ಮೇಜಿನ ಮೇಲೆ ಕೇಂದ್ರೀಕೃತವಾಗುತ್ತದೆ. ಅಲ್ಲದು ಮುಗಿಯುತ್ತಿದಂತೆ ಮತ್ತೊಂದು ಮೇಜಿನಿಂದ ನಾಟಕೀಯ ಕ್ಷಣಗಳು ಎದ್ದು ಕಾಣುತ್ತವೆ. ಕೂಡಲೇ ಸ್ಟಾಟ್‌ಲೈಟ್ ಅಲ್ಲಿಗೆ ತಿರುಗುತ್ತದೆ. ಒಟ್ಟು ಕಾರ್ಯಕ್ರಮದ ಇಂಪ್ರೂವೈಜೇಶನ್‌ನ ಪರಿಣಾಮವಾಗಿ ಅಲ್ಲಿರುವ ಸಾಮಾನ್ಯ ನಾಗರಿಕರಾರು, ನಟರಾರು ಎಂಬುದು ನನಗೆ ತಿಳಿಯಲೇ ಇಲ್ಲ. ವಿಶೇಷತೆಯೆಂದರೆ, ಇಂತಹ ಪ್ರದರ್ಶನಗಳಲ್ಲಿ ತಿಳಿಹಾಸ್ಯದ ಲೇಪಗಳೇ ಹೆಚ್ಚಾಗಿ ಇರುತ್ತವೆ.

ಇತ್ತೀಚಿನ ದಿನಗಳಲ್ಲಿ ವಾತ್ಸಾಯನನ ‘ಕಾಮಸೂತ್ರ’ವು ಯುಗೋಸ್ಲಾವಿಯದಲ್ಲಿ ಬಹಳಷ್ಟು ತಲ್ಲಣವನ್ನುಂಟು ಮಾಡಿದೆ. ಒಂದೂವರೆ ವರ್ಷದ ಹಿಂದಷ್ಟೇ ಇದು ಅಲ್ಲಿಯ ಭಾಷೆಗೆ ಅನುವಾದವಾಗಿದೆಯಂತೆ. ಬೌದ್ಧಿಕ ವರ್ಗದಲ್ಲಿ ಕಾಮಸೂತ್ರದ ಧ್ವನಿ ಎದ್ದಿರುವದನ್ನು ಕಂಡು, ನಾನದರ ಚರ್ಚಾಗೋಷ್ಠಿಗಳಲ್ಲಿ ಭಾಗವಹಿಸುವುದಕ್ಕಾಗಿ ಉತ್ಸುಕನಾದೆ. ದುಭಾಷಿಯು ಬಹು ಆಸಕ್ತಿ ವಹಿಸಿ ಆ ಪುಸ್ತಕದ ಬಗ್ಗೆ ನನ್ನಲ್ಲಿ ಪ್ರಶ್ನೆ ಕೇಳುತ್ತಿದ್ದ. ಸಾಮಾನ್ಯವಾಗಿ ನಾನು ಭೇಟಿಕೊಟ್ಟ ನಾಟಕ ತರಬೇತಿ ಕೇಂದ್ರಗಳಲ್ಲೆಲ್ಲಾ ಅಭಿನಯ ಕಲಿಸುವ ಶಿಕ್ಷಕರು ನನ್ನನ್ನು ಕಾಮಸೂತ್ರದ ವಿದ್ವಾಂಸನೆಂಬಂತೆ ಅದರ ಬಗ್ಗೆ ಮಾತಿಗಾರಂಭಿಸುತ್ತಿದ್ದರು. (ಹಾಗಂತ ಇದು ನನಗೆ ಸ್ವೀಕೃತವಾದದ್ದೆ. ಮತ್ತೆ – ಮತ್ತೆ ಗಾಂಧಿ, ನೆಹರೂನ ದೇಶದ ನಾಗರಿಕ ನಾಗರಿಕನಾಗಿದ್ದೆ!) ಬೆಲ್‌ಗ್ರೇಡಿನ ನಾಟಕ ವಿದ್ಯಾಲಯದ ವಿದ್ಯಾರ್ಥಿಯೊಬ್ಬ ತನ್ನ ಅಭಿನಯದ ಅಭ್ಯಾಸಕ್ಕಾಗಿ ‘ಕಾಮಸೂತ್ರ’ದ ಕೆಲವು ಪ್ರಸಂಗಗಳನ್ನು ಆಯ್ಕೆ ಮಾಡಿಕೊಂಡಿದ್ದು, ನನಗೆ ಎಲ್ಲಕ್ಕಿಂತ ಆಚ್ಚರಿಯನ್ನುಂಟುಮಾಡಿದ ವಿಷಯ. ಇಷ್ಟೇ ಅಲ್ಲ, ಆ ವಿದ್ಯಾರ್ಥಿಯು ನಮ್ಮೆದುರು ಆಪ್ರಸಂಗಗಳ ಬಗ್ಗೆ ಒಂದೆರಡು ವ್ಯಾಖ್ಯೆಗಳನ್ನೂ ಪ್ರಸ್ತುತಪಡಿಸಿದ. ಅವನು ಕಲ್ಪನೆಯನ್ನೇ ಬಹುವಾಗಿ ಉಪಯೋಗಿಸಿಕೊಂಡಿದ್ದ ‘ಕಾಮಸೂತ್ರ’ವನ್ನು ಬ್ಯಾಲೆಯ ಶೈಲಿಯಲ್ಲಿ ರೂಪಾಂತರಿಸುವುದರ ಕುರಿತು ಕೆಲವು ನಿದೇರ್ಶಕರು ಯೋಚಿಸುತ್ತಿರುವುದನ್ನು ಅಲ್ಲಿಯ ಅಧ್ಯಾಪಕರೊಬ್ಬರು ಹೇಳಿದರು. ಅದಕ್ಕೆ ಉತ್ತರವಾಗಿ ನಾನು ತಮಾಷೆ ಮಾಡಿದೆ – ‘ಕಾಮಸೂತ್ರ’ವೂ ಬ್ಯಾಲೆ ಶೈಲಿಗಿಂತಲೂ ನೈಟ್ ಕ್ಲಬ್‌ನಲ್ಲಿ ಹೆಚ್ಚು ಪ್ರಭಾವಶಾಲಿಯಾಗಬಲ್ಲದು. ಬೇಸರದ ಸಂಗತಿಯೆಂದರೆ, ನಾನು ಲಘುವಾಗಿ ಮಾಡಿದ ಈ ಹೇಳಿಕೆಯನ್ನೂ ಆ ಅಧ್ಯಾಪಕರು ಗಂಭೀರವಾಗಿ ತೆಗೆದುಕೊಂಡರು. ಇಲ್ಲಿಯೂ ಮಕ್ಕಳ ನಾಟಕ ನನಗೆ ಸ್ವಲ್ಪ ಕೂಡಾ ಹಿಡಿಸಲಿಲ್ಲ. ಆದರೆ ಗೊಂಬೆಯಾಟ ಖುಷಿಕೊಟ್ಟಿತು. ಅದರಲ್ಲಿಯ ಹಲವು ತಂತ್ರ ವಿಧಾನಗಳನ್ನು ನೋಡುವ ಸದವಕಾಶವೂ ಒದಗಿಬಂತು.

ರುಮೇನಿಯಾದ ರಾಜಧಾನಿ ಬುಖಾರೆಸ್ಟ್‌ಗೆ ಹೋದ ದಿನವೇ, ಅದೇ ರಾತ್ರಿ ಅನುಯಿಯ ‘ಬೆಕಟ್‌’ ನೋಡುವಂತಹ ಸೌಭಾಗ್ಯ ನನ್ನದಾಯಿತು. ಇಲ್ಲಿಯವರೆಗೆ ಹೋದ ದೇಶಗಳಲ್ಲಿ ರಂಗಸಜ್ಜಿಕೆಯಲ್ಲಿರುವ ಅನಾಸಕ್ತಿಯನ್ನು ಕಂಡು ನನಗೆ ಸ್ವಲ್ಪ ನಿರಾಶೆಯಾಗಿತ್ತು. ಇಲ್ಲಿಗೆ ಬಂದ ಬಳಿಕ ಅದು ದೂರವಾಯಿತು. ಕಾರಣ, ರುಮೇನಿಯಾದ ಹಲವು ಚಿತ್ರಕಾರರು ಆಧುನಿಕ ಕಲಾವಿದರಲ್ಲಿ ಶ್ರೇಷ್ಠರೆಂದು ಪರಿಗಣಿಸಲ್ಪಡುತ್ತಾರೆ. ಹಲವರಿಗೆ ಪ್ಯಾರಿಸ್‌ನೊಂದಿಗೆ ನೇರ ಸಂಪರ್ಕವಿದೆ. ಹಾಗಾಗಿ ರಂಜಸಜ್ಜಿಕೆ, ನಿರ್ದೇಶನ ಮತ್ತು ಅಭಿನಯ ಮೂರರಲ್ಲೂ ಅವರು ಉನ್ನತಾವಸ್ಥೆಯನ್ನು ಕಾಯ್ದುಕೊಂಡಿದ್ದಾರೆ. ತಮ್ಮದೇ ಆದ ರಂಗಮಂಟಪದ ಸುದೀರ್ಘ ಪರಂಪರೆಯಿರುವುದು ಇದಕ್ಕೆ ಇನ್ನೊಂದು ಕಾರಣ. ಹಾಗೆ ನೋಡಿದರೆ, ರುಮೇನಿಯನ್ನರು ಬಹಳ ಮೃದು ಸ್ವಭಾವದವರಂತೆ ಕಾಣುತ್ತಾರೆ. ನಾನು ರುಮೇನಿಯಾದಲ್ಲಿ ಹೆಚ್ಚು ನಾಟಕಗಳನ್ನು ನೋಡಲಿಲ್ಲ. ಆದರೆ ನೋಡಿದಷ್ಟು ನೋಡಲು ಸಿಕ್ಕಿದ್ದಕ್ಕೆ,  ನಾನು ತುಂಬಾ ಭಾಗ್ಯಶಾಲಿಯಾಗಿರಬೇಕೆಂದು ತಿಳಿಯುತ್ತೇನೆ. ‘ಮ್ಯಾಕ್‌ಬೆತ್’, ‘ಚೆರಿಆರ್ಚ್‌‌ರ್ಡ್‌’, ‘ಮೇಜರ್’. ಆಯಿನೆಸ್ಕೊರವರ ‘ದ ಕಿಲ್ಲರ್’ (ಅಯಿನೆಸ್ಕೊ ರುಮೇನಿಯಾದ ಪ್ರಸಿದ್ಧ ನಾಟಕಕಾರರು. ಅವರು ಕೇವಲ ರುಮೇನಿಯನ್ನರಾಗಿರುವದೇ ಅದಕ್ಕೆ ಮುಖ್ಯ ಕಾರಣವಿರಬಹುದು) ಒಂದು ಪೊಲೀಸ್ ನಾಟಕವನ್ನು ನೋಡಿದೆ. ಅದು ದುಃಖಾಂತ್ಯದ್ದಾಗಿದ್ದು, ಬಹಳ ನಿರಾಶಾವಾದಿ ವಸ್ತುವನ್ನೊಳಗೊಂಡಿತ್ತು. ಅದರಲ್ಲಿ ಹಳೆಯ ತಲೆಮಾರು ಹೊಸ ತಲೆಮಾರಿನ ಮೇಲೆ ವಿದ್ರೋಹ ಮಾಡುತ್ತದೆ.

ಅಲ್ಲಿಯ ನಾಟಕ ವಿದ್ಯಾಲಯಕ್ಕೊಮ್ಮೆ ಹೋಗಿದ್ದಾಗ ಅಭಿನಯದ ತರಗತಿ ನಡೆಯುತ್ತಿತ್ತು. ಅಭಿನಯ ಕಲಿಸುವ ಅಧ್ಯಾಪಕಿಯೊಬ್ಬರು ಒಂದು ಘನವಾದ ವಿಷಯವನ್ನು ಕೊಡುವಂತೆ ನನ್ನಲ್ಲಿ ಕೇಳಿಕೊಂಡಿದ್ದರು ಅದನ್ನೇ ವಿದ್ಯಾರ್ಥಿಗಳಿಂದ ಇಂಪ್ರುವೈಸ್ ಮಾಡುವ ಉದ್ದೇಶವನ್ನವರು ಹೊಂದಿದ್ದರು. ನನಗೆ ಗಡಿಬಿಡಿಯಲ್ಲಿ ಏನೂ ಹೊಳೆಯಲಿಲ್ಲ. ಅದಕ್ಕೆ ಭಾರತದ ಆನೆ ಎಂದು ಹೇಳಿಬಿಟ್ಟೆ. ವಿಷಯದ ರೂಪದಲ್ಲಿ ಅದು ಸ್ವೀಕೃತವಾಯಿತು. ಆದರೆ ಅವರು ಆ ವಿಷಯವನ್ನು ವ್ಯಾಖ್ಯಾನಿಸಿದ ರೀತಿ ನನ್ನ ಕಲ್ಪನೆಗೂ ಮೀರಿದ್ದಾಗಿತ್ತು. ವಿದ್ಯಾರ್ಥಿಗಳಲ್ಲಿ ಹೃಷ್ಟ – ಪುಷ್ಟರಾಗಿದ್ದವರು ಕೂಲಿಗಳಾಗಿ ತಮ್ಮ ತಲೆಯ ಮೇಲೆ ಗಂಟು ಮೂಟೆಗಳನ್ನು ಹೊತ್ತುಕೊಂಡು ತಮ್ಮಷ್ಟಕ್ಕೆ ಕೆಲಸ ಮಾಡುತ್ತಿದ್ದರು. ಚಾಟಿಯನ್ನು ಹಿಡಿದುಕೊಂಡಿದ್ದವನೊಬ್ಬನು ಅವರನ್ನು ಹಿಂಬಾಲಿಸುತ್ತಿದ್ದ. ಅವನು ವಿನಾಕಾರಣ ಆ ಚಾಟಿಯನ್ನು ಗಾಳಿಯಲ್ಲಿ ಬಾರಿಸುತ್ತಿದ್ದ. ಜೊತೆಗೆ ಕೂಲಿಯವರನ್ನು ಬೈಯುತ್ತಲೂ ಇದ್ದ. ಕೊನೆಗೆ ಅಲ್ಲಿದ್ದ ಕೂಲಿಗಳೆಲ್ಲಾ ಪ್ರತಿಭಟನೆಯ ರೂಪದಲ್ಲಿ ತಮ್ಮ ಗಂಟು ಮೂಟೆಗಳನ್ನೆಲ್ಲಾ ಬಿಸಾಡಿ ಆ ಚಾಟಿ ಹಿಡಿದವನನ್ನು ಸುತ್ತುವರಿದರು. ಅಲ್ಲಿಗೆ ಅವರ ಪ್ರಾತ್ಯಕ್ಷಿಕೆ ಮುಗಿಯಿತು. ಅದಕ್ಕವರು ಕೊಟ್ಟ ವ್ಯಾಖ್ಯಾನ — ಭಾರತೀಯ ಆನೆಯಂತೆ ಬಲಶಾಲಿಯಾಗಿದ್ದರೂ, ಬಹಳಷ್ಟು  ತಾಳ್ಮೆಯಿಂದ ಕೆಲಸ ಮಾಡುತ್ತಾನೆ. ಆದರೊಂದು ದಿನ ಅವನೂ ಆನೆಯಂತೆ ಕ್ರುದ್ದನಾಗಿ ಉಳ್ಳವರ ಹುಟ್ಟಡಗಿಸಿ ತನ್ನನ್ನೂ ಗುಲಾಮಗಿರಿಯಿಂದ ಮುಕ್ತಗೊಳಿಸಿಕೊಳ್ಳುತ್ತಾನೆ. ಇದಕ್ಕೆ ಪ್ರತಕ್ರಿಯೆಯೆಂಬಂತೆ ನನ್ನಮನಸ್ಸಿನಲ್ಲಿ ಎಂತೆಂತಹ ಕನಸುಗಳು – ಕಲ್ಪನೆಗಳು ಎದ್ದಿರಬಹುದುದೆಮದು ನೀವೂ ಸ್ವತಃ ಊಹಿಸಿಕೊಳ್ಳಬಹುದು.

ರುಮೇನಿಯಾದಲ್ಲಿ ಇನ್ನೆರಡು ವಸ್ತುಗಳು ನನಗೆ ಇಷ್ಟವಾದವು. ಒಂದು, ಅಲ್ಲಿಯ ಮುಕ್ತಾಕಾಶ ಸಂಗ್ರಹಾಲಯ. ಅದರಲ್ಲಿ ನೂರು ವರ್ಷ ಹಳೆಯದಾದ ರುಮೇನಿಯಾದ ಹಳ್ಳಿಯೊಂದು ಯಥಾವತ್ತಾಗಿ ಇದ್ದು, ಅತ್ಯಂತ ಆಕರ್ಷಕವಾಗಿದೆ. ಎರಡನೆಯದು, ಸರ್ಕಸ್ ಹಾಲ್, ಅದು ಕೂಡಾ ವಿಶಾಲವಾದ ಕ್ಷೇತ್ರದಲ್ಲಿ ಹಬ್ಬಿಕೊಂಡಿದೆ. ಗಟ್ಟಿಮುಟ್ಟಾಗಿ ಕಾಂಕ್ರೀಟ್‌ನಿಂದ ನಿರ್ಮಿತವಾದ ಸರ್ಕಸ್ ಹಾಲ್ ಇರುವದು ಇಡೀ ಯುರೋಪಿನಲ್ಲಿ ಇದೊಂದೇ ಎಂದು ನನಗೆ ಹೇಳಿದರು.

ಬಲ್ಗೇರಿಯಾದ ಬಗ್ಗೆ ನನಗೆ ಹಲವಾರು ತಪ್ಪು ಕಲ್ಪನೆಗಳಿದ್ದವು. ಈ ಊರು ಹಿಂದುಳಿದದ್ದೆಂದು ನಾನು ತಿಳಿದುಕೊಂಡಿದ್ದೆ. ಅಲ್ಲದೇ ಕೃಷಿ ಪ್ರಧಾನವಾದುದರಿಂದ ಥಿಯೇಟರ್ ಇತ್ಯಾದಿಗಳ ವಿಷಯದಲ್ಲಿ ತುಂಬಾ ಹಳೆಯ ಮಾದರಿಯದಿರಬಹುದೆಂದು ಭಾವಿಸಿದ್ದೆ. ಆದರೆ ಮೊದಲ ದಿನವೇ ನನ್ನ ಈ ನಂಬಿಕೆ ಹುಸಿಯಾಯಿತು. ಸೋಫಿಯಾದಲ್ಲಿ ನನಗೆ ಇರುವುದಕ್ಕೆ ವ್ಯವಸ್ಥೆ ಮಾಡಿದ್ದ ಹೋಟೆಲಿನ ಎದುರಿನ ರಸ್ತೆಯ ಮೇಲೆ ೭ – ೮ ಥಿಯೇಟರುಗಳು ಮಿನುಗುವ ಚಿಹ್ನೆಯ ಜೊತೆಗೆ ‘ಲೋವರ್‌ಡೆಪ್ಥ್’ ‘ಜ್ಯೂಲಿಯಸ್ – ಕ್ಲಿಯೋಪಾತ್ರ’ ‘ಮಾಯ್ ಫೇರ್ ಲೇಡಿ’ಯ ಪ್ರದರ್ಶನ ನಾಮಫಲಕಗಳನ್ನು ನೋಡಿ ನಾನು ಆಶ್ಚರ್ಯ ಚಕಿತನಾಗುಳಿದುಬಿಟ್ಟೆ. ಅದೇ ರಾತ್ರಿ ನಾನಲ್ಲಿಯ ರಾಜಕೀಯ ಅಪೇರಾ ಹೌಸಿನಲ್ಲಿ ಯುರೋಪಿನ ಶಾಸ್ತ್ರೀಯ ಬ್ಯಾಲೆ ‘ಸ್ಟೋನ್ ಪ್ಲವರ್’ನ ಅವಿಸ್ಮರಣೀಯ ಪ್ರಯೋಗವನ್ನು ನೋಡಿದ ಬಳಿಕ ನನ್ನ ಮನಸ್ಸಿನಲ್ಲಿದ್ದ ಪೂರ್ವನಿರ್ಧಾರಿತ ವಿಚಾರಗಳೆಲ್ಲಾ ಸಂಪೂರ್ಣ ನಷ್ಟವಾದವು. ಅದಾದ ನಂತರ ಇಲ್ಲಿಗೆ ಬಂದ ಮೂರನೆಯ ದಿನ ಇಲ್ಲಿಂದ ಮುನ್ನೂರು ಕಿಲೋಮೀಟರ್ ದೂರದ ಪ್ಲಾಡಿವ್ ಪಟ್ಟಣಕ್ಕೆ ಹೋದೆ. ಅಲ್ಲಿ ನಾನು ಆಧುನಿಕ ಸಂಗೀತ ನಾಟಕ ‘ವೆಸ್ಟ್ ಸೈಡ್ ಸ್ಟೋರಿ’ ನೋಡಿದೆ. ಅದರಿಂದಾಗಿ ಬಲ್ಗೇರಿಯಾದ ರಂಗಭೂಮಿ ಚಳುವಳಿಯ ಬಗೆಗಿನ ನನ್ನ ಆಸಕ್ತಿ ತೀವ್ರವಾಯಿತು.

ಈ ಆಸಕ್ತಿಯ ಹಿಂದೆ ಇನ್ನೂ ಒಂದು ಕಾರಣವಿತ್ತು. ಪ್ಲಾಡವ್‌ನ ಈ ತಂಡ ಕೇವಲ ಮೂರು ವರ್ಷಗಳ ಹಿಂದೆಯಷ್ಟೇ ಆರಂಭವಾಗಿದ್ದು. ಸೋಫಿಯಾ ನಾಟಕ ವಿದ್ಯಾಲಯದ ೧೭ – ೧೮ ಪದವೀಧರರು ಸೋಫಿಯದಲ್ಲಿ ಅವಕಾಶ ಸಿಗದೆ ಪ್ಲಾಡವ್‌ನಲ್ಲಿ ಈ ತಂಡವನ್ನು ಕಟ್ಟಿಕೊಂಡಿದ್ದರು. ಈಗ ಈ ತಂಡದ ಕಾರ್ಯಕ್ರಮವನ್ನು ನೋಡಲು ಜನರು ಸೋಫಿಯಾದಿಂದ ಪ್ಲಾಡವ್‌ಗೆ ಹೋಗುತ್ತಾರೆ. (ನಾವು ನಾಟ್ಯ ವಿದ್ಯಾಲಯದ ಪದವೀಧರರಾಗಿದ್ದರು ದಿಲ್ಲಿಯನ್ನು ಬಿಟ್ಟು ಇನ್ನೆಲ್ಲೂ ಹೋಗಲು ಇಷ್ಟ ಪಡುವದಿಲ್ಲ. ಈಗ ಸೋಫಿಯಾದ ಈ ವಿದ್ಯಾರ್ಥಿಗಳ ಸಾಹಸವನ್ನು ನೋಡಿದ ಬಳಿಕ ಮನಸ್ಸಿನಲ್ಲಿಯೇ ನಾನವರನ್ನು ನನ್ನ ಪಾಲಿಗೆ ‘ಹೀರೋ’ಗಳೆಂದು ತಿಳಿಯಲಾರಂಭಿಸಿದೆ)

ಇಲ್ಲಿಯ ನಾಟಕ ವಿದ್ಯಾಲಯದ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಒಂದು ಜನಪದ ನಾಟಕವನ್ನು ನೋಡಿದೆ. ಅದರ ಹೆಸರು ‘ದೈತ್ಯರಿಬ್ಬರ ಮುಖಾಮುಖಿ’. ಆ ಇಬ್ಬರು ದೈತ್ಯರೆಂದರೆ, ಹಳ್ಳಿಯ ಪ್ರೇಯಸಿ ಮತ್ತು ಪ್ರಿಯಕರ. ಹಳ್ಳಿಯ ಜನ ಜೀವನಕ್ಕೆ ಸರಿಹೊಂದುವ ಹಲವು ಜೋಡಿಗಳ ಬೇರೆ ಬೇರೆ ಮಾದರಿಗಳನ್ನು ಅದರಲ್ಲವರು ಎತ್ತಿ ತೋರಿಸಿದ್ದಾರೆ. ಅದನ್ನು ಪ್ರಸ್ತುತಪಡಿಸಿದ ರೀತಿ, ಶೈಲಿಗಳೆಲ್ಲವೂ ನಮ್ಮ ನಾಟಕಗಳಂತೆ ಇದ್ದವು. ಅದನ್ನು ನೋಡಿ ನನಗೆ ನಮ್ಮ ರಾಷ್ಟ್ರೀಯ ನಾಟಕ ವಿದ್ಯಾಲಯದ ‘ಜಸ್ಮಾ ಒಡನ್’ ನೆನಪಿಗೆ ಬಂತು.

ಒಟ್ಟಿನಲ್ಲಿ ಈ ಐದು ದೇಶಗಳ ತಿರುಗಾಟದಿಂದ ನನ್ನ ಅನುಭವದಲ್ಲಿ ತುಂಬಾ ವೃದ್ದಿಯಾಯಿತು ಎನ್ನುವುದರಲ್ಲಿ ಎರಡು ಮಾತಿಲ್ಲ. ಅದರ ಜೊತೆಗೆ ಈ ದೇಶಗಳ ರಂಗ – ಚಳವಳಿಯಲ್ಲಿ ಯಾವುದೇ ಮಹತ್ತರವಾದ ಬದಲಾವಣೆಯನ್ನು ತರಲು ಸಾಧ್ಯವಿಲ್ಲವೆಂಬ ಮಾತನ್ನು ಹೇಳಿ ಬಯಸುತ್ತೇನೆ. ಇಲ್ಲಿಯ ರಂಗಭೂಮಿ ಇಷ್ಟೊಂದು ವ್ಯಾಪಕವಾಗಿ ಸಕ್ರಿಯವಾಗಿದ್ದರೂ ಬ್ರೆಕ್ಟ್‌ನನ್ನು ಬಿಟ್ಟು ಅಂತಾರಾಷ್ಟ್ರೀಯ ಮಟ್ಟದ ಇನ್ನಾವುದೇ ನಾಟಕಾರರನ್ನು ಈ ದೇಶ ಕೊಟ್ಟಿಲ್ಲ. ರಂಗ ಸಜ್ಜಿಕೆಯಲ್ಲಿಯೂ ಅದ್ಬುತವಾದ ಕಸುಬುಗಾರಿಕೆ ಕಾಣಿಸಿಗಲಿಲ್ಲ. ಅಸಂಗತ ನಾಟಕಗಳು ಅಲ್ಲಿ ಪ್ರಚಲಿತವಾಗಿಲ್ಲ. ನಾಟಕಗಳ ಪ್ರಸ್ತುತೀಕರಣ ಶೈಲಿಯು ಹೆಚ್ಚಾಗಿ ‘ರಂಗದ್ವಾರ’ಗಳು ಒಳಗಡೆಯೇ ನೋಡುವುದಕ್ಕೆ ಸಿಕ್ಕಿತು. ಮೌಲಿಕ ನಾಟಕಗಳು ಈ ದೇಶಗಳಲ್ಲಿ ಇಲ್ಲವೆಂಬುದು ಕಂಡು ಬಂತು.

ಆದರೂ ಕೂಡಾ ಕೆಲವು ವಿಷಯಗಳಲ್ಲಿ ನಾನು ಬಹಳ ಖುಷಿಪಟ್ಟಿದ್ದೇನೆ. ಉದಾ – ಯಾವುದಾದರೂ ನಾಟಕದ ಮೊಟ್ಟಮೊದಲ ಟಿಕೇಟು ಬಹಳ ಕಷ್ಟದಲ್ಲಿ ಸಿಗುತ್ತದೆ ಇದಲ್ಲದೆ, ಪ್ರಥಮ ಪ್ರದರ್ಶನದ ಟಿಕೇಟು ಪಡೆಯುವುದನ್ನು ಅತ್ಯಂತ ಗೌರವದ ವಿಷಯವೆಂದು ಪರಿಗಣಿಸುತ್ತಾರೆ. ಹೆಚ್ಚಾಗಿ ೮೦% ರಂಗ ಕಲಾವಿದರು ನಾಟಕ ಶಾಲೆಯಲ್ಲಿ ತರಬೇತಿ ಹೊಂದಿದವರಾಗಿರುತ್ತಾರೆ. ಎಲ್ಲಾ ರಂಗ ತಂಡದವರೂ ಸಾಧನ – ಸಲಕರಣೆಗಳ ವಿಷಯದಲ್ಲಿ ಸ್ವಾವಲಂಬಿಗಳಾಗಿದ್ದಾರೆ. ಕಲಾವಿದರಲ್ಲಿ ನಿರುದ್ಯೋಗಿಗಳು ಬಹಳ ಕಡಿಮೆ. ರಂಗಭೂಮಿಯ ತರಬೇತಿಯು ವಿಶ್ವವಿದ್ಯಾಲಯಗಳ ಪಠ್ಯಕ್ರಮದಲ್ಲಿ ಪ್ರಮುಖ ವಿಷಯಗಳಲ್ಲಿ ಒಂದಾಗಿದೆ.

ಪತ್ರ ತುಂಬಾ ಸುದೀರ್ಘವಾಯಿತೆಂಬುದು ನನ್ನ ಗಮನಕ್ಕೆ ಬಂದಿದೆ. ಆದರೂ ಕೆಲವು ವಿಚಾರಗಳನ್ನು ವಿಸ್ತಾರವಾಗಿ ಬರೆಯುವದು ಅನಿವಾರ್ಯವಾಯಿತು. ದೇಶಕ್ಕೆ ಹಿಂದಿರುಗಿದ ಬಳಿಕ ನನ್ನ ಮಾನಸಿಕ ಉತ್ತೇಜನ ಒಮ್ಮೇಲೆ ಕುಂಠಿತವಾಗದಿರಲೆಂದು ಎಷ್ಟಾಗುತ್ತದೆಯೋ ಅಷ್ಟನ್ನು ಈಗಲೇ ಬರೆದು ಬಿಡುದು ಒಳ್ಳೆಯದೆನಿಸಿತು.

(ಹಿಂದಿಯ ‘ನಟರಂಗ’ ಮಾಸಪತ್ರಿಕೆಯ ಸಂಪಾದಕರಿಗೆ ಬರೆದ ಪತ್ರದ ಕನ್ನಡ ಭಾಷಾಂತರ. ಕಾರಂತರು ೧೯೬೮ರಲ್ಲಿ ಈ ಪ್ರವಾಸ ಮಾಡಿದರು)

* * *