ಮಕ್ಕಳ ನಾಟಕಗಳು

ಕಾರಂತರ ಮಕ್ಕಳ ನಾಟಕಗಳಲ್ಲಿ ಪವಾಡಸ್ಪರ್ಶವಿದೆ. ಮಕ್ಕಳ ನಾಟಕಗಳ ನಿರ್ದೇಶಕರಾಗಿ ಅವರ ಸಾಧನೆ ಅದ್ವಿತೀಯ. ‘ಪಂಜರಶಾಲೆ’, ‘ಇಸ್ಫಿಟ್‌ರಾಜ್ಯ’, ‘ಬದ್ದೂರಾಮಚರಿತ’, ‘ನನ್ನ ಗೋಪಾಲ’, ‘ಮನೇಲೂ ಚುನಾವಣೆ’, ‘ಅಳಿಲು ರಾಮಾಯಣ’, ‘ಕೃತಘ್ನ’, ‘ರಿಕ್ಕಿ – ಟೆಕ್ಕಿ’, ‘ನೀಲಿ ಕುದುರೆ’, ‘ಅಬ್ದುಲ್ಲಾಗೋಪಾಲ’, ‘ಛೋಟಿ ಸೈಯ್ಯದ್ ಬಡೇ ಸೈಯ್ಯದ್’, ‘ಕಿಂದರಿಜೋಗಿ’, ‘ಮರಹೋತು ಮರ ಬಂತು ಡುಂಡುಂ’ – ಇವು ಕಾರಂತರು ನಿರ್ದೇಶಿಸಿದ ಮಕ್ಕಳ ನಾಟಕಗಳು.

‘ಮಮ್ಮಳ ನಾಟಕ ಸ್ವಯಂಸ್ಫೂರ್ತವಾಗಿರಲು ಸಾಧ್ಯ. ಎಳೆಯರ ನುಡಿ, ನಡೆಗಳಲ್ಲಿ ಸಹಜವಾದ ಕಲಾವಂತಿಕೆಯಿದೆ. ಅವನ್ನು ಪ್ರಚೋದಿಸುವುದೇ ನಾಟಕ ನಿರ್ದೇಶಕನ ಕೆಲಸ. ಅದು ಸುಲಭ… ನಾಟಕದಲ್ಲಿ ಗ್ರಂಥ ಪಾಠದ ಮಹತ್ವವೇನು? ನಿಜ ನೋಡಿದರೆ ಬಹಳ ಸ್ವಲ್ಪವೇ. ಗ್ರಂಥಪಾಠ ಸನ್ನಿವೇಶಕ್ಕೆ ತಕ್ಕಂತೆ ಬದಲಾಗಬೇಕಾದೀತು. ಒಂದು ಮಕ್ಕಳ ಕೂಟಕ್ಕೆ ಹೊಂದಿಸಿದ ಪಾಠ ಇನ್ನೊಂದಕ್ಕೆ, ಇನ್ನೊಂದು ಸಂದರ್ಭದಲ್ಲಿ ಅನುವಾಗದೆ ಹೋಗಬಹುದು. ಮಕ್ಕಳ ನಾಟಕ ಸಂಕೀರ್ಣವಾಗಿರಬೇಕು. ಹಾಡು, ಕುಣಿತ, ಮಾತು, ಅಭಿನಯ, ಎಲ್ಲ ಕೂಡಿದ್ದರೆ ಚೆನ್ನು. ಮಕ್ಕಳ ಚೇತನವನ್ನರಳಿಸುವ ಎಲ್ಲ ಪರಿಕರಗಳೂ ಬೇಕು’ ಎನ್ನುತ್ತಾರೆ ಕಾರಂತರು. ಹೆಗ್ಗೋಡಿನಲ್ಲಿ ಕಾರಂತರು ನಿರ್ದೇಶಿಸಿದ ‘ಪಂಜರಶಾಲೆ’ ನಾಟಕವನ್ನು ಕೆ.ವಿ.ಸುಬ್ಬಣ್ಣ, ‘ಅದೊಂದು ಹಾಡು, ಕುಣಿತ, ಚಟುವಟಿಕೆಗಳ ದೊಡ್ಡ ಹಬ್ಬವಾಗಿತ್ತು.’ ಎಂದು ವರ್ಣಿಸಿದ್ದಾರೆ. ‘ಪಂಜರಶಾಲೆ’ಯನ್ನು ನೋಡಿದ ಹೆಗ್ಗೋಡಿನ ಪ್ರೇಕ್ಷಕರೊಬ್ಬರ ಪ್ರತಿಕ್ರಿಯೆ ಹೀಗಿತ್ತು – ‘ಜಾತ್ರೆ ಕಂಡಂಗಿತ್ತು!’

ಕಾರಂತರ ರಂಗಸಂಗೀತ

ಬಿ.ವಿ.ಕಾರಂತರ ದೃಷ್ಟಿಯಲ್ಲಿ ರಂಗಸಂಗೀತವೆಂದರೆ ಕೇವಲ ಸಂಗೀತವಲ್ಲ. ಅದೊಂದು ಧ್ವನಿವಿನ್ಯಾಸ. ನಾಟ್ಯಶಾಸ್ತ್ರ ‘ವಾಚಿಕಾ’ ಕೇವಲ ಸಂಭಾಷಣೆ ಅಲ್ಲ. ನಾಲಗೆಯ ಸಹಾಯದಿಂದ ಹೊರಡುವ ಎಲ್ಲ ಧ್ವನಿಸಾಧ್ಯತೆಗಳು, ಎಂದು ಅವರು ಪುನರ್‌ವ್ಯಾಖ್ಯಾನಿಸುತ್ತಾರೆ. ಯಾರಿಗೂ ನುಡಿಸಲು ಸಾಧ್ಯವಾಗುವ ಹೊಸ ವಾದ್ಯಗಳನ್ನು ಅವರು ‘ರಂಗಾಯಣ’ದಲ್ಲಿ ಸೃಷ್ಟಿಸಿದ್ದಾರೆ. ಶಾಸ್ತ್ರೀಯ ಸಂಗೀತದ ಸಿದ್ಧಶೈಲಿಯನ್ನು ಕಾರಂತರು ರಂಗಸಂಗೀತದಲ್ಲಿ ಬಳಸುವುದಿಲ್ಲ. ಸಂಗೀತ ವಿಮರ್ಶಕ ಈಶ್ವರಯ್ಯ ವಿವರಿಸಿರುವಂತೆ, ‘ಸಂಗೀತದ ಚೌಕಟ್ಟಿನಲ್ಲಿ ಬರುವ ಮಾಧುರ್ಯದ ಪರಿಕಲ್ಪನೆ ನಾಟಕದಲ್ಲಿ ಪ್ರಸ್ತುತವಲ್ಲ. ಅನ್ನುವುದು ಕಾರಂತರ ಅಭಿಮತ. ರಂಗದಲ್ಲಿ ಹುಟ್ಟಿಕೊಳ್ಳುವ ಎಲ್ಲ ಬಗೆಯ ಧ್ವನಿಯೂ ರಂಗಸಂಗೀತದಲ್ಲಿ ಪ್ರಸ್ತುತ – ಅಪಶ್ರುತಿ ಕೂಡ. ಸಂವಾದಿಗಳಲ್ಲದ ಬಹುಸ್ವರಗಳು ನಾಟಕದಲ್ಲಿ ಸನ್ನಿವೇಶ ಇರ್ಮಾಣಕ್ಕೆ ನೆರವಾಗುತ್ತವೆ. ರಂಗಸಂಗೀತದಲ್ಲಿ ರಾಗದ, ತಾಳದ ಚೌಕಟ್ಟು ಇರಬೇಕಾಗಿಲ್ಲ. ಅಲ್ಲಿರುವುದು ಧ್ವನಿರೂಪುಗಳು ಮತ್ತು ಲಯ ವೈವಿಧ್ಯಗಳು. ರಂಗಸಂಗೀತ ಮಾತಿಗೆ ಹತ್ತಿರವಿರಬೇಕು. ಅಂದರೆ ಅವು ವಾಚಿಕವೇ ಆಗಬೇಕು. ಈ ಚಿಂತನೆಯ ತಳಹದಿಯಲ್ಲಿ ಕಾರಂತರು ಹಲವು ಪ್ರಯೋಗಗಳನ್ನು ಮಾಡಿರುತ್ತಾರೆ.’ ದಾಸರ ಕೃತಿಗಳನ್ನು ವಿನಿಕೆಯ ದೃಷ್ಟಿಯಿಂದ ಅಭ್ಯಾಸ ಮಾಡುವವರಿಗೆ ಬಿ.ವಿ.ಕಾರಂತರು ‘ಸತ್ತವರ ನೆರಳಿ’ಗಾಗಿ ನಿರ್ದೇಶಿಸಿದ ಪುರಂದರದಾಸರ ಹಾಡುಗಳಲ್ಲಿ ಹೊಸ ಊರುಗೋಲುಗಳೂ, ಸಂಕೇತಗಳೂ, ಕೈಹಿಡಿಗಳೂ, ಸ್ವಾತಂತ್ರ್ಯವೂ ಸಿಗುತ್ತವೆ ಎಂದು ಬಿ.ಜಿ.ಎಲ್.ಸ್ವಾಮಿ ಸೂಚಿಸಿದ್ದಾರೆ.

ಕಾರಂತರು ಸಂಗೀತ ಸಂಕೇತಗಳ ಮೂಲಕವೇ ನಾಟಕದ ಅರ್ಥವಂತಿಕೆಯನ್ನು ಗ್ರಹಿಸುತ್ತಾರೆ ಎಂಬ ಸುಬ್ಬಣ್ಣನವರ ಒಳನೋಟಕ್ಕೆ ಪೂರಕವಾಗಿ ಸಂಗೀತ ನಿರ್ದೇಶಕ ಗುರುರಾಜ ಮಾರ್ಪಳ್ಳಿಯವರು ಅಭಿಪ್ರಾಯವನ್ನು ಗಮನಿಸಬೇಕು ‘ಆದ್ದರಿಂದ ಗದ್ಯದಲ್ಲಿ ಪದ್ಯದಲ್ಲಿ, ಭಾಷೆಯ ಬಳಕೆಯ ಎಲ್ಲ ಸಾಧ್ಯತೆಗಳಲ್ಲೂ ಕಾರಂತರು ಲೀಲಾಜಾಲವಾಗಿ ವ್ಯವಹರಿಸುತ್ತಾರೆ. ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮದಲ್ಲಿ ತನ್ನದೇ ಆದ  ಗತಿ – ಶೈಲಿಯಲ್ಲಿ ಕೆಲಸ ಮಾಡಬಲ್ಲರು. ನಾಟಕ, ಕಾವ್ಯ, ಚಳುವಳಿ, ಸಿನಿಮಾ ಯಾವುದೇ ಇರಲಿ ಕಾರಂತರು ಮಾತನಾಡುವುದು ಅದರಲ್ಲಿರು ಸಂಗೀತದ ಮೂಲಕ – ಅಂದರೆ ಧ್ವನಿ. ನಾದ, ಲಯ ವಿನ್ಯಾಸಗಳನ್ನು ತೆರೆದು ತೋರಿಸುತ್ತ ಅವಿರ್ಭಸುತ್ತ’. (೧ – ೧೫) ಗುರುರಾಜ ಮಾರ್ಪಳ್ಳಿಯವರು ಕೇಳಿರುವ ಪ್ರರ್ಶನೆಗಳನ್ನಿಟ್ಟುಕೊಂಡು ಕಾರಂತರ ರಂಗಸಂಗೀತವನ್ನು ಕುರಿತ ಚರ್ಚೆಯನ್ನು ಮುಂದುವರಿಸಬಹುದು – ‘ಕಾರಂತರು ಸಂಗೀತದಲ್ಲಿ ಇಷ್ಟೆಲ್ಲ ಸಾಧ್ಯತೆಗಳ ಹುರುಕಾಟ ಮಾಡಿದರೂ, ಕಾರಂತರಲ್ಲಿ ಎಲ್ಲೊ ಪಾಶ್ಚಾತ್ಯ ಸಂಗೀತದ ಲಿರಿಕ್ಸ್‌ನ ಕಸಿ ಭಾರತೀಯ ಸಂಗೀತ ಪದ್ಧತಿಗೆ ಮಾಡಿದಂತೆ ಅನಿಸುತ್ತದೆ’ (‘ಗೋಕುಲ ನಿರ್ಗಮನ’ದ ‘ಬರುತಿಹನೆ ನೋಡೆ’ ಎನ್ನುವ ಹಾಡಿನ ಸಂಯೋಜನೆ) ಆದ್ದರಿಂದ ಕಾರಂತರು ಕೇವಲ ಭಾಷೆ, ಬದುಕುಗಳನ್ನು ಮೀರಿ ಹೆಚ್ಚು ಸಾರ್ವತ್ರಿಕವಾದ ಮಾನವೀಯ ಸ್ಪಂದನಗಳಿಗಾಗಿ ಸ್ವರ ಸಂಯೋಜಿಸಿದ್ದಾರೆಯೇ? ಭಾರತೀಯ ಸಂಗೀತದ ಮೂಲ ಆಶಯಗಳಿಗೆ ಮಿತಿಯಿದೆ ಎಂದು ಸೂಚಿಸುತ್ತಿದ್ದಾರೆಯೇ? ಪಾಶ್ಚಾತ್ಯ ಸಂಗೀತದ ಸಂವಹನದಲ್ಲಿ ಭಾರತೀಯ ರಂಗಸಂಗೀತ ಕಾಲದೇಶಗಳ ಗಡಿಮೀರಿ ತನ್ನದೇ ಸ್ವತಂತ್ರ ನೆಲೆಯಲ್ಲಿ ನಿಲ್ಲಲು ಈ ಕಸಿ ಅನಿವಾರ್ಯವೆಂದುಕೊಂಡಿದ್ದಾರೆಯೇ’

ಸಿನಿಮಾ ನಿರ್ದೇಶಕ

ಬಿ.ವಿ.ಕಾರಂತರು ನಿರ್ದೇಶಿಸಿದ ‘ಜೋಮನದುಡಿ’ ಸಿನಿಮಾ ರಾಷ್ಟ್ರಪ್ರಶಸ್ತಿ ಪಡೆದ ಸಂದರ್ಭದಲ್ಲಿ ಪ್ರಶಸ್ತಿತೀರ್ಪುಗಾರರಲ್ಲೊಬ್ಬರಾಗಿದ್ದ ಖ್ವಾಜಾ ಅಹಮದ್ ಅಬ್ಬಾಸ್ ಅವರು ಬಿ.ವಿ.ಕಾರಂತರಿಗೆ ಬರೆದ ಪತ್ರದ ಒಂದು ಸಾಲ ಹೀಗಿತ್ತು – ‘ಭಾರತದಲ್ಲಿ ಮತ್ತೊಬ್ಬ ಸತ್ಯಜಿತ್ ರಾಯ್‌ಹುಟ್ಟಿದ್ದಾರೆ ಎಂದು ಎಲ್ಲರೂ ಅಭಿಪ್ರಾಯಪಟ್ಟರು. ಇಂಥ ಪ್ರಶಂಸೆಗಳು ಬಂದರೂ ಕಾರಂತರು ಸಿನಿಮಾ ಮಾಧ್ಯಮಕ್ಕೆ ಮರುಳಾಗಲಿಲ್ಲ ಎಂಬುದನ್ನು ಗಮನಿಸಬೇಕು. ‘ಸಿನಿಮಾದಲ್ಲಿ ಮನುಷ್ಯ ಇರುವುದಕ್ಕಿಂತ ದೊಡ್ಡದಾಗಿ ಕಾಣಿಸುತ್ತಾನೆ. ಟಿ.ವಿಯಲ್ಲಿ ಇರುವುದಕ್ಕಿಂತ ಚಿಕ್ಕದಾಗಿ ಕಾಣಿಸುತ್ತಾನೆ. ನಾಟಕದಲ್ಲಿ ಮಾತ್ರ ಮನುಷ್ಯ ಇರುವುದಕ್ಕಿಂತ ದೊಡ್ಡದಾಗಿ ಕಾಣಿಸುತ್ತಾನೆ. ಟಿ.ವಿಯಲ್ಲಿ ಇರುವುದಕ್ಕಿಂತ ಚಿಕ್ಕದಾಗಿ ಕಾಣಿಸುತ್ತಾನೆ. ನಾಟಕದಲ್ಲಿ ಮಾತ್ರ ಮನುಷ್ಯ ಹೇಗಿದ್ನೋ ಹಾಗೆ ಜೀವಂತವಾಗಿ ಕಾಣಿಸುತ್ತಾನೆ.’ ಎಂಬ ಅವರ ಅಭಿಪ್ರಾಯ ಇದಕ್ಕೆ ಕಾರಣವಾಗಿರಬಹುದು.

‘ವಂಶವೃಕ್ಷ’ ಮತ್ತು ‘ತಬ್ಬಲಿಯು ನೀನಾದೆ ಮಗನೆ’ ಸಿನಿಮಾಗಳನ್ನು ಕಾರಂತರು ಗಿರೀಶ್ ಕಾರ್ನಾಡ್‌ರ ಜತೆಯಲ್ಲಿ ನಿರ್ದೇಶಿಸಿದರು. ‘ಬೋರ್‌ಬೋರ್ ಚಿಪ್ ಚಿಪ್ ಜಾ’ ಕಾರಂತರು ಮಕ್ಕಳಿಗಾಗಿ ನಿರ್ದೇಶಿಸಿದ ಸಿನಿಮಾ. ‘ಶಿವರಾಮ ಕಾರಂತ’ ಮತ್ತು ‘ದಕ್ಷಿಣ ಕನ್ನಡದ ಭೂತಾರಾಧನೆ’ ಎಂಬ ಎರಡು ಸಾಕ್ಷ್ಯಚಿತ್ರಗಳನ್ನು ಅವರು ನಿರ್ದೇಶಿಸಿದ್ದಾರೆ.

ಕಾರಂತರು ತನ್ನ ಸಿನಿಮಾಗಳಿಗೆ ಮಾತ್ರವಲ್ಲದೆ ಬೇರೆಯವರ ಹಲವು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಮೃಣಾಲ್‌ಸೇನ್‌ರ ‘ಪರಶುರಾಮ್’ ‘ಖಾರಿಜ್’ ‘ಏಕದಿನ್‌ ಪ್ರತಿದಿನ್’, ಎಂ.ಎಸ್.ಸತ್ಯು ಅವರ ‘ಕನ್ನೇಶ್ವರ ರಾಮ’, ಜಿ.ವಿ.ಅಯ್ಯರ್ ಅವರ ‘ಹಂಸಗೀತೆ’, ‘ಕುದುರೆ ಮೊಟ್ಟೆ’, ‘ಶಂಕರಚಾರ್ಯ’, ‘ಭಗವದ್ಗೀತೆ’, ಗಿರೀಶ್ ಕಾರ್ನಾಡರ ‘ಕಾಡು’ ‘ಆಮನಿ’, ವಿ.ಆರ್.ಕೆ.ಪ್ರಸಾದ್‌ರ ‘ಋಷ್ಯಶೃಂಗ’, ಬರಗೂರು ರಾಮಚಂದ್ರಪ್ಪನವರ ‘ಬೆಂಕಿ’, ಗಿರೀಶ ಕಾಸರವಳ್ಳಿಯವರ ‘ಘಟಶ್ರಾದ್ಧ’ ‘ಮೂರು ದಾರಿಗಳು’ ‘ಆಕ್ರಮಣ’, ಟಿ.ಎಸ್.ರಂಗಾ ಅವರ ‘ಗೀಜಗನಗೂಡು’, ‘ಗಿದ್ದ್’, ಪ್ರೇಮಾಕಾರಂತರ ‘ಫಣಿಯಮ್ಮ’ ‘ನಕ್ಕಳಾ ರಾಜಕುಮಾರಿ’ ಮತ್ತು ನೀಚನಗರ’ ಇವು ಕಾರಂತರು ಸಂಗೀತ ನಿರ್ದೇಶನ ನೀಡಿರುವ ಸಿನಿಮಾಗಳು.

‘ಚೋಮನದುಡಿ’ಯಲ್ಲಿ ಕಾರಂತರು ಮಿಡಿತೆಗಳ, ಚಿಮ್ಮುಂಡೆಗಳ ಕರ್ಕಶ ಶಬ್ದವನ್ನು, ಬಿದಿರಿನ ಹಿಂಡಿನ ತಿಕ್ಕಾಟದ ಶಬ್ದ, ಡೋಲಿನ ಧ್ವನಿಯನ್ನು ಬಳಸಿಸಿದರು. ‘ಋಷ್ಯಶೃಂಗ’ದಲ್ಲಿ ಸೂರ್ಯನ ಉರಿಬಿಸಿಲಿನಲ್ಲಿ ಹೆಣಗಳು ಬಿದ್ದಿದ್ದ ದೃಶ್ಯಕ್ಕೆ ತಾನುಪುರವನ್ನು ಅಪಶ್ರುತಿಯಲ್ಲಿ ನುಡಿಸಿದಾಗ ಹೊಮ್ಮುವ ಧ್ವನಿಯನ್ನು ಬಳಸಿದರು. ಋತ್ವಿಕ್‌ಘಟಕ್ ಮತ್ತು ಸತ್ಯಜಿತ್‌ರೇ ಅವರ ಪ್ರೇರಣೆಯಿಂದ ಕಾರಂತರು ಸಿನಿಮಾ ಸಂಗೀತದಲ್ಲಿ ಸೃಜನಶೀಲ ಪ್ರಯೋಗಗಳನ್ನು ಮಾಡಿದ್ದಾರೆ. ‘ಘಟಶ್ರಾದ್ಧ’ ‘ಋಷ್ಯಶೃಂಗ’ಗಳ ಸಂಗೀತ ನಿದೇರ್ಶನಕ್ಕಾಗಿ ರಾಷ್ಟ್ರಪ್ರಶಸ್ತಿಗಳನ್ನು, ‘ಹಂಸಗೀತೆ’ (೧೯೭೭) ಸಂಗೀತ ನಿರ್ದೇಶನಕ್ಕಾಗಿ ರಾಜ್ಯ ಪ್ರಶಸ್ತಿಯನ್ನು ಅವರು ಪಡೆದರು.

ನಟ, ಭಾಷಾಂತರಕಾರ

ನಾಟಕ, ಸಿನಿಮಾಗಳ ನಟನಾಗಿ ಬಿ.ವಿ. ಕಾರಂತರು ಹೆಸರು ಗಳಿಸಲಿಲ್ಲ. ಎಂ.ಎಸ್.ಸತ್ಯು ಅವರ ‘ಜೀವದ ಬೊಂಬೆ’ ನಾಟಕದಲ್ಲಿ ಪಾತ್ರವಹಿಸಿದಾಗ ಅವರು ಸ್ಕ್ರಿಪ್ಟ್‌ಕೈಯಲ್ಲಿ ಹಿಡಿದೇ ಅಭಿನಯಿಸಿದ್ದರಂತೆ! ‘ವಂಶವೃಕ್ಷ’ ಸಿನಿಮಾದಲ್ಲಿ ಅವರು ಪ್ರೊಫೆಸರ್‌ನ ಪಾತ್ರ ವಹಿಸಿದ್ದರು.

ಕಾರಂತರು ತನ್ನ ಯೌವನದಲ್ಲಿ ‘ಗಡ್ಡದಾರಿ’ ಎಂಬ ಕಾವ್ಯನಾಮದಲ್ಲಿ ‘ಸಾಹಿತ್ಯದಲ್ಲಿ ಸ್ಪೀಕಿಂಗ್‌ಕಂಪೆನಿ’ ಎಂಬ ನಾಟಕವನ್ನು ಬರೆದು ಪ್ರಕಟಿಸಿದ್ದರು. ಭಾಸನ ‘ಸ್ವಪ್ನವಾಸವದತ್ತ’, ಶೂದ್ರಕನ ‘ಮೃಚ್ಛಕಟಿಕ’, ಗಿರೀಶ್ ಕಾರ್ನಾಡರ ‘ತುಘಲಕ್‌’ ‘ಹಯವದನ’ ‘ಹಿಟ್ಟಿನ ಮಂಜ’, ಶ್ರೀರಂಗರ ‘ಕೇಳು ಜನಮೇಜಯ’ ‘ಕತ್ತಲೆ – ಬೆಳಕು’, ‘ರಂಗಭಾರತ’ ನಾಟಕಗಳನ್ನು ಕಾರಂತರು ಹಿಂದೀಗೆ ಭಾಷಾಂತರಿಸಿದ್ದಾರೆ. ‘ಪಂಜರಶಾಲೆ’ (ಮೂಲ – ರವೀಂದ್ರನಾಥ ಠಾಕೂರರ ಸಣ್ಣಕಥೆ) ‘ಹೆಡ್ಡಾಯಣ’ (ಮೂಲ – ಕನ್ನಡ ಜನಪದ ಕತೆ) ಮತ್ತು ‘ಅಳಿಲು ರಾಮಾಯಣ – ಇವು ಕಾರಂತರು ಮಕ್ಕಳಿಗಾಗಿ ಕನ್ನಡದಲ್ಲಿ ಬರೆದಿರುವ ನಾಟಕಗಳು.

ವೆಂಕಟರಮಣನ ಸಂಕಟಗಳು

ಹೊರನೋಟಕ್ಕೆ ಅವಸರ, ಗಡಿಬಿಡಿ, ಚಟುವಟಿಕೆ, ಗೊಂದಲ, ಕೂತಲ್ಲಿ ಕೂರಲಾರದ ನಿಂತಲ್ಲಿ ನಿಲ್ಲಲಾರದ ವ್ಯಕ್ತಿತ್ವ. ಅಂತರಂಗದಲ್ಲಿ ಅವರು, ಮೃದು, ಕೋಮಲ; ತನ್ನಿಂದ ಯಾರಿಗೂ ನೋವಾಗದಂತೆ ಎಚ್ಚರ. ಪ್ರಕೃತಿ, ಪ್ರಾಣಿಗಳನ್ನು ಕುರಿತು ತುಂಬಾ ಪ್ರೀತಿ. ವ್ಯವಹಾರ ಜ್ಞಾನ ಇಲ್ಲ. ‘ಬೆಳ್ಳಗಿದ್ದುದ್ದೆಲ್ಲಾ ಹಾಲು’ ಎಂದು ನಂಬುವವರು. ಸೃಜನಶೀಲ ವ್ಯಕ್ತಿಯಾಗಿ ಆಹೋರಾತ್ರಿ ದುಡಿಯುವ ತಾಕತ್ತು, ವೈವಿಧ್ಯಪೂರ್ಣ ಪುಸ್ತಕಾಸಕ್ತಿ – ಪ್ರೇಮಾಕಾರಂತರು ತನ್ನ ಗಂಡ ಬಿ.ವೆಂಕಟರಮಣ ಕಾರಂತರ ವ್ಯಕ್ತಿತ್ವವನ್ನು ಚಿತ್ರಿಸುವುದುಹೀಗೆ. ‘ನನಗೆ ಕಾರಂತರು ಕೊಟ್ಟಿರುವಷ್ಟು ಸ್ವಾತಂತ್ರ್ಯ ಯಾವನೇ ಗಂಡ ತನ್ನ ಹೆಂಡತಿಗೆ ಕೊಡಬಲ್ಲ ಎಂದು ಅನ್ನಿಸೊಲ್ಲ’ ಎನ್ನುತ್ತಾರವರು. ಜಿ.ವಿ.ಅಯ್ಯರ್ ತನ್ನ ಶಿಷ್ಯ ಕಾರಂತರ ವ್ಯಕ್ತಿತ್ವವನ್ನು ಕುರಿತು, ‘ಮೇಲುನೋಟಕ್ಕೆ ಕಾರಂತ ಭಾವುಕನಾಗೇ ಕಾಣಿಸುತ್ತೇನೆ. ಅವನನ್ನು ವಿಶ್ಲೇಷಿಸಹೊರಟರೆ ಅನೇಕ ಪದರಗಳು ಬಿಚ್ಚಿಕೊಳ್ಳುತ್ತವೆ. ಸರಳ ಸ್ವಭಾವದ ಅವನ ಅಂತರಂಗದಲ್ಲಿರುವುದೆಲ್ಲಾ ಛಲಗಾರನ ಕಪಿಮುಷ್ಠಿಗಳೇ, ಸಾಧನೆ, ತಪಸ್ಸು, ನಡುನಡುವೆ ಸಣ್ಣ ಪುಟ್ಟ ದುಶ್ಚಟಗಳು.. ತನ್ನ ಬಲಹೀನತೆಯನ್ನು ತುಳಿದೇಳುವ ಆತ್ಮವಿಶ್ವಾಸ. ಇವುಗಳೇ ಕಾರಂತರ ಬಣ್ಣಗಳು – ಬದಲಾವಣೆಗಳು, ರಂಗುರಂಗಿನ ಮಜಲುಗಳು.’

‘ಹಣವನ್ನೇನಾದರೂ ಇಟ್ಟುಕೊಂಡಿದ್ದೀರಾ? ಅಥವಾ ಯಥಾಪ್ರಕಾರ ಕಲಾವಿದರ ಕಣ್ಣೀರ ಕಥೆಯನ್ನು ಸಿದ್ಧಪಡಿಸುತ್ತಿದ್ದೀರಾ?’ ಎಂದು ೧೯೮೨ರಲ್ಲಿ ಲಂಕೇಶರು ಕೇಳಿದ ಪ್ರಶ್ನೆಗೆ ಕಾರಂತರು ಉತ್ತರ ಹೀಗಿತ್ತು. – ’ಪೈಸೆ ಹಣವಿಲ್ಲ. ಆದರೆ ನನ್ನ ಹತ್ತಿರ ಪುಸ್ತಕಗಳು, ಸಂಗೀತದ ರಿಕಾರ್ಡ್‌‌ಗಳು, ತಾಳ, ಜಾಗಟೆ, ಡೋಲುಗಳು, ಅನೇಕ ವಾದ್ಯಗಳು. ನಾಟಕ ಸಾಮಾಗ್ರಿಗಳು ಇವೆ.’ ೮ (ಟಿಪ್ಪಣಿ ನಂ)

‘ನಾಟ್ಯಶಾಸ್ತ್ರ’ವನ್ನು ಬರೆದ ಭರತನ ಬದುಕಿನ ಕತೆ ನಮಗೆ ತಿಳಿದಿಲ್ಲ. ಭರತ ಭಾರತದ ಉದ್ದಗಲದಲ್ಲಿ ಅಲೆಮಾರಿಯಾಗಿ ಸಂಚರಿಸಿ ನೂರಾರು ತರದ ರಂಗಕಲೆಗಳನ್ನು ನೋಡಿರಬಹುದು. ಸೂತ್ರಧಾರನಾಗಿ ನೂರಾರು ನಾಟಕಗಳನ್ನುನಿರ್ದೇಶಿಸಿರಬಹುದು. ದೇವತೆಗಳು, ನಾಟಕ ಪ್ರದರ್ಶಿಸುವಾಗ ರಾಕ್ಷಸರು ಗಲಭೆ ಮಾಡಿದ್ದು ಅವನ ಬದುಕಿನ ಘಟನೆಯೇ ಆಗಿರಬಹುದು. ಬಿ.ವಿ. ಕಾರಂತರ ವ್ಯಕ್ತಿತ್ವವನ್ನು, ಕೊಡುಗೆಗಳನ್ನು ಅವಲೋಕಿಸುವಾಗ ಭರತನ ನೆನಪಾಗುತ್ತದೆ.

ವೈಚಾರಿಕ ನಿಲುವುಗಳು

ಕಾಶಿಯಲ್ಲಿ ವಿದ್ಯಾರ್ಥಿಯಾಗಿದ್ದಾಗ ಕಾರಂತರು ಕೆಲವು ದಿನ ಆರ್.ಎಸ್.ಎಸ್. ಶಾಲೆಗೆ ಹೋಗಿದ್ದರು. ಅನಂತರ ಆಸಕ್ತಿ ಕಳೆದುಕೊಂಡರು. ೧೯೮೫ ನೀಡಿದ ಸಂದರ್ಶನವೊಂದರಲ್ಲಿ ಕಾರಂತರು. ‘ಕಾಂಗ್ರೆಸ್‌ ಪಾರ್ಟಿಯಲ್ಲಿ ನನ್ನನ್ನು ಯಾರೂ ಅಷ್ಟಾಗಿ ಆಕರ್ಷಿಸಿಲ್ಲ. ಅಟಲ್ ಬಿಹಾರಿ ವಾಜಪೇಯಿಯವರ ಮಾತುಗಾರಿಕೆಯಿಂದ, ಜ್ಯೋತಿಬಸು ಅವರ ಕಂಟ್ರೋಲ್‌ ಮಾಡುವ ಸಾಮರ್ಥ್ಯದಿಂದ ಆಕರ್ಷಿತನಾಗಿದ್ದೇನೆ. ಮೊದಲು ನಂಬೂದಿರಿಪಾಡ್ ಅವರನ್ನು ತುಂಬು ಮೆಚ್ಚಿಕೊಂಡಿದ್ದೆ’ ಎಂದಿದ್ದಾರೆ.

೧೯೯೧ರಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಬಿ.ವಿ. ಕಾರಂತರು ಸಂಸ್ಕೃತಿಯ ರಾಜಕೀಕರಣದ ಕುರಿತು ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ‘ಆಡ್ವಾಣಿ, ವಾಜಪೇಯಿ ಬಗ್ಗೆ ಗೌರವ ಇದೆ ನನ್ಗೆ. ಇವ್ರು ಇಬ್ರೂ ಒಳ್ಳೆ ವ್ಯಕ್ತಿಗಳು. ದೆಹಲಿಯಲ್ಲಿ ಎಲ್ಲ ನಾಟಕ ನೋಡ್ಲಿಕ್ಕೆ ಬರ್ತಿದ್ರು ಆಡ್ವಾಣಿಯವರಂತೂ ಮಕ್ಕಳ ನಾಟಕ ನೋಡ್ಲಿಕ್ಕೆ ಬರ್ತಿದ್ರು ಅಷ್ಟು ಒಳ್ಳಿ ವ್ಯಕ್ತಿ. ರಥಯಾತ್ರೆ ಮಾಡಿದಾಗ ಯಾಕೆ ಮಾಡಿದ್ರು ಅಂತ ಆಶ್ಚರ್ಯ ಆಯ್ತು ನನ್ಗೆ. ಆ ಕೆಟ್ಟ ಬಣ್ಣ. ರಥದಲ್ಲಿ ಕಲರ್ ಸೆನ್ಸೇ ಇರ್ಲಿಲ್ಲ. ಆಡ್ವಾಣಿ ರಥಯಾತ್ರೆ ಸ್ಟೇಜ್‌ನಲ್ಲಿ ಮಾಡಿದ ಕಟ್‌ಔಟ್ ಥರ ಇತ್ತು. ಅದೊಂದು ವಿಕೃತಿ… ರಾಮ ಎಲ್ಲೆಲ್ಲ ಹೋಗಿದ್ನೋ, ಅದು ಪವಿತ್ರ ನಮ್ಗೆ. ರಾಮ ಹುಟ್ಟಿದ ಸ್ಥಳ ಅಲ್ಲ. ರಾಮಮಾರ್ಗ ಮುಖ್ಯ. ಯಾತ್ರಾಸ್ಥಳವಲ್ಲ. ತೀಥಯಾತ್ರೆ ಮುಖ್ಯ ನಮ್ಗೆ. ರಥಯಾತ್ರೆ ಅಂತ ಅದನ್ನು ತುಂಬ ಕೆಳಮಟ್ಟದಲ್ಲಿ ತೋರಿಸಿಬಿಟ್ರು ಇತಿಹಾಸ ಮೊದಲ ಬಾರಿಗೆ ರಿಪೀಟ್ ಆದಾಗ ಟ್ರಾಜಿಡಿ (ದುರಂತ ನಾಟಕ) ಆಗತ್ತೆ. ಎರಡನೇ ಬಾರಿ ರಿಪೀಟ್ ಆದಾಗ ಕಾಮೆಡಿ ಆಗತ್ತೆ ನೋಡಿ, ರಥಯಾತ್ರೆ ಒಂದು ಕಾಮೇಡೀನೇ…. ಭಾರತೀಯ ಜನತೆ ಅಷ್ಟು ಮೂಲಭೂತವಾದಿಗಳಾಗಿಲ್ಲ. ಕ್ರಿಶ್ಚಿಯನ್ನರಿಗೆ ಒಂದೇ ಬೈಬಲ್. ಮುಸ್ಲೀಮರಿಗೆ ಒಂದೇ ಕುರಾನ್. ನಮ್ಗೆ ಹಾಗಲ್ಲ. ಎಷ್ಟೊಂದು ರಾಮಾಯಣಗಳು, ಎಷ್ಟೊಂದು ಪುರಾಣಗಳು! ನಮ್ಮ ಕೃಷ್ಣ ಎಷ್ಟು ಲೆವೆಲ್‌ಗಳ ದೇವರು! ತುಂಟ ಕೃಷ್ಣ, ಪ್ರಿಯಕರ ಕೃಷ್ಣ, ದಾರ್ಶನಿಕ ಕೃಷ್ಣ. ಈ ನಮನೀಯತೆ ಬೇರೆ ಯಾವ ಧರ್ಮದಲ್ಲಿದೆ? ಈ ಫ್ಲೆಕ್ಲಿಬಿಲಿಟಿ (ನಮನೀಯತೆ) ಈ ಫ್ರೀ ಕಲ್ಪನೆ ಇಲ್ದಿದ್ರೆ ನಮ್ಮ ದೇಶದಲ್ಲಿ ಇಷ್ಟು ರಾಮಾಯಣಗಳೇ ಆಗ್ತಾ ಇರ್ಲಿಲ್ಲ… ನಮ್ಮ ಸಂಸ್ಕೃತಿ ದೇವ್ರಿಗಿಂತ ಹೆಚ್ಚು ಸೃಜನಶೀಲ ಅನ್ನಿಸುತ್ತೆ. ಸೋಮನಾಥಪುರದಲ್ಲಿ ಪೂಜೆಯಿಲ್ಲ. ಆದರೆ ಸಂಸ್ಕೃತಿಯ ದೃಷ್ಟಿಯಿಂದ ಎಲ್ಲ ಮತಧರ್ಮಗಳಿಗೆ ಸೇರಿದವ್ರು ಅಲ್ಲಿಗೆ ಹೋಗ್ತಾರೆ. ಸಂಸ್ಕೃತಿಯನ್ನು ರಾಜಕೀಕರಣ ಮಾಡುದವ್ರು ‘ಭಾರತ್ ಭವನ’ದಲ್ಲಿ ತಾರತಮ್ಯ ಶುರುಮಾಡ್ತಾರೆ. ಇದು ಸರಿಯಲ್ಲ. ಕಲೆಯಲ್ಲಿ ತಾರತಮ್ಯ ಕೂಡದು ಅದ್ರಿಂದ್ಲೇ ನಾನು ಸ್ಪರ್ಧೆಗೆ ವಿರೋಧಿ. ನಾಟಕ ಸ್ಪರ್ಧೆಯಲ್ಲಿ ಭಾಗವಹಿಸ್ಬೇಡಿ ಅನ್ನೋದು ಈ ಕಾರಣಕ್ಕಾಗಿಯೇ ನೀವು ಭೀಮಸೇನ ಜೋಶಿ ಮತ್ತು ಕುಮಾರ ಗಂಧರ್ವವನ್ನು ಏನು ಕಂಪೇರ್ ಮಾಡ್ತೀರ?’ ೯ (ಟಿಪ್ಪಣಿ ನಂ)

ಕಾರಂತರ ವೈಚಾರಿಕತೆಯನ್ನು ಅವರ ರಂಗಕೃತಿಗಳಲ್ಲೇ ಹುಡುಕಬೇಕು. ಜಗತ್ತಿನ ವಿವಿಧ ಭಾಷೆಗಳ ಶ್ರೇಷ್ಠ ನಾಟಕಕಾರರ ನಾಟಕಗಳನ್ನು ಅವರು ನಿರ್ದೇಶನಕ್ಕೆ ಆಯ್ಕೆ ಮಾಡಿದ್ದಾರೆ. ರಂಗಕೃತಿಗಳ ಆಯ್ಕೆಯಲ್ಲಿ ಅವರು ಕೃತಿಯ ವೈಚಾರಿಕ – ಕಲಾತ್ಮಕ ಗುಣಮಟ್ಟದ ಬಗ್ಗೆ ಎಚ್ಚರ ವಹಿಸಿದ್ದಾರೆ. ರಾಜಕೀಯ ಪಕ್ಷವೊಂದರ ಸಿದ್ಧಾಂತಕ್ಕೆ ಬದ್ಧನಾಗಿದ್ದ ಬ್ರೆಕ್ಟ್‌ನ ನಾಟಕಗಳನ್ನು ಅವರು ನಿರ್ದೇಶಿಸಿಲ್ಲ. ‘ಸಂಕ್ರಾಂತಿ’ ‘ಸತ್ತವರ ನೆರಳು’ ನಾಟಕಗಳನ್ನು ಆಯ್ಕೆ ಮಾಡುವ ಕಾರಂತರು ಹಿನ್ನೋಟದ ವ್ಯಕ್ತಿಯಲ್ಲಿ ರಂಗಭೂಮಿಯಲ್ಲಿರುವ ಪ್ರಜಾಸತ್ತಾತ್ಮಕ ಅಂಶಗಳನ್ನು ಅವರು ಗೌರವಿಸುತ್ತಾರೆ. ರಂಗಸಂಗೀತವನ್ನು ಕುರಿತ ಕಾಣ್ಕೆಯಲ್ಲಿ ಸಂಗೀತವಾಗಲಿ, ನಾಟಕವಾಗಲಿ ಸ್ಥಾವರವಾಗಬಾರದೆಂಬ ನಿಲುವಿದೆ. ಅವರಿಗೆ ವಾಸ್ತವವಾದದ ಮಿತಿಗಳ ಅರಿವಿದೆ. ರಂಗಭೂಮಿಯ ‘ಲಾಜಿಕ್‌’ಕ್ಕಿಂತಲೂ ‘ಮ್ಯಾಜಿಕ್’ ಅವರನ್ನು ವಿಶೇಷವಾಗಿ ಆಕರ್ಷಿಸಿದೆ. ಹಿಂದೀಯ ಪ್ರಾದೇಶಿಕ ಉಪಭಾಷೆಯಾದ ಬುಂದೇಲಿಯಲ್ಲಿ ಕಾಳಿದಾಸನ ನಾಟಕ ಮಾಡಿಸುವ, ಹೆಗ್ಗೋಡಿನಲ್ಲಿ ಮಕ್ಕಳ ನಾಟಕ ನಿರ್ದೇಶಿಸುವ ಕಾರಂತರಿಗೆ ಪ್ರಾದೇಶಿಕ ಅನನ್ಯತೆ ಮತ್ತು ಸಾಂಸ್ಕೃತಿಕ ವಿಕೇಂದ್ರೀಕರಣಗಳ ನಂಬಿಕೆ ಇದೆ. ಕಾರಂತರು ಸಿದ್ಧಾಂತಗಳ ಚೌಕಟ್ಟಿನಲ್ಲಿ ಸಮಾಜವನ್ನು ನೋಡುವವರಲ್ಲ. ಸಂಗೀತ – ನಾಟಕ ಮಾಧ್ಯಮಗಳಲ್ಲಿನ ತನ್ನ ಕ್ಷೇತ್ರ ಕಾರ್ಯ ಅನುಭವದ ಮೂಲಕ ನಾಡಿನ ಸಾಂಸ್ಕೃತಿಕ ಸಾತತ್ಯವನ್ನು ಗ್ರಹಿಸುತ್ತಾರೆ; ತನ್ನ ಸೃಜನಶೀಲ ಕನಸುಗಳನ್ನು ಸಾಕಾರಗೊಳಿಸುತ್ತಾರೆ. ಸಾಂಸ್ಕೃತಿಕ ಕ್ಷೇತ್ರದ ನಿರ್ವಸಾಹತೀಕರಣದ ಚಳುವಳಿಗೆ ತನ್ನ ರಂಗಕೃತಿ ಮತ್ತು ರಂಗಸಂಗೀತದ ಮೂಲಕ ಅವರು ಮೌಲಿಕ ಕೊಡುಗೆ ನೀಡಿದ್ದಾರೆ.

‘ಮಹಾಭಾರತ’ದ ನಿರ್ದೇಶಕ ಪೀಟರ್ ಬ್ರೂಕ್‌ನ ಭಾರತ ಯಾತ್ರೆಯನ್ನು ಕಾರಂತರು ತಕರಾರುಗಳಿಲ್ಲದೆ ಸ್ವಾಗತಿಸಿದರು. ಪೀಟರ್ ಬ್ರೂಕ್‌ನ ಪ್ರಯೋಗದಲ್ಲಿ ನವವಸಾಹತು ಶಾಹಿಯ ಕುತಂತ್ರವನ್ನು ಕಂಡ ಕೆ.ವಿ.ಸುಬ್ಬಣ್ಣ ಅದನ್ನು ತೀವ್ರವಾಗಿ ಪ್ರತಿಭಟಿಸಿದರು – ‘ನನ್ನ ವಯಸ್ಸಿನವನಿಗೂ ತಾಯಿಯೆನಿಸುವ, ಜೆಕೆ ಸಾನ್ನಿಧ್ಯದಲ್ಲೇ ಸುಳಿದಾಡಿದ ಮತ್ತು ಮುಖ್ಯವಾಗಿ ಮತ್ತು ಈ ಬೃಹತ್ ದೇಶದ ಪ್ರಧಾನಿಗೆ ಸಾಂಸ್ಕೃತಿಕ ಸಲಹೆಗಾರಳಾಗಿದ್ದ ಪ್ರಫುಲ್ ಜಯಕರರಂಥ ಪ್ರಸನ್ನ ಮಹಿಳೆ ಹಾಗೂ ನನ್ನ ಮಟ್ಟಿಗೆ ಬ್ರೂಕ್‌ಗಿಂತ ಮಿಗಿಲಾದ ಪ್ರತಿಭೆಯುಳ್ಳ ಪ್ರಿಯ ಬಿ.ವಿ.ಕಾರಂತರು ಮುಂತಾದವರು ಬ್ರೂಕರನ್ನು ಹಿಂಬಾಲಿಸಿ ತಿರುಗಿದ್ದು ಕಂಡು ನನ್ನ ತಲೆ ತಗ್ಗಿ ಹೋಗಿದೆ’ ೧೦(ಟಿಪ್ಪಣಿ ನಂ)

ಕಾರಂತಾಯಣದ ಫಲಶ್ರುತಿ ಏನು? – ಕಾರಂತರು ಭಾರತದ, ಕರ್ನಾಟಕದ ರಂಗಭೂಮಿಗೆ ನೀಡಿರುವ ಕೊಡುಗೆಯನ್ನು ಈ ಗ್ರಂಥದಲ್ಲಿ ವಿವಿಧ ವಿಮರ್ಶಕರು ಹೀಗೆ ಗುರುತಿಸಿದ್ದಾರೆ.

೧. ರಂಗಕೃತಿಗಳ ಗುಣಮಟ್ಟ, ಸಂಖ್ಯಾಬಾಹುಳ್ಯ ಮತ್ತು ಭಾಷಾವೈವಿದ್ಯಗಳ ದೃಷ್ಟಿಯಿಂದ ಕಾರಂತರು ಈ ಶತಮಾನದ, ಭಾರತ ಪ್ರಧಾನ ನಿರ್ದೇಶಕರಲ್ಲೊಬ್ಬರು.

೨. ‘ಹಯವದನ’ ಪದ್ಮನಿ ಕಪಿಲನ ದೇಹ ಮತ್ತು ದೇವದತ್ತನ ತಲೆಯನ್ನು ಜೋಡಿಸಿದಂತೆ ಕಾರಂತರು ಕಂಪೆನಿ ರಂಗಭೂಮಿಯಿ ವೈಭವ ಮತ್ತು ಹವ್ಯಾಸಿ ರಂಗಭೂಮಿಯ ಚಿಂತನೆಯನ್ನು ಒಗ್ಗೂಡಿಸಿದರು. ಪ್ರಸನ್ನ ಹೇಳುವಂತೆ, ‘ಮ್ಯಾಜಿಕ್‌ನ ಕೊಂಡಿ ಕಳಚಿದ ಪರಂಪರೆಗೆ ಮತ್ತೆ ಮ್ಯಾಜಿಕ್‌ನ ಕೊಂಡಿಯನ್ನು ಜೋಡಿಸಿದರು.’

೩. ರಾಷ್ಟ್ರೀಯ ನಾಟಕ ಶಾಲೆಯ ವಿಕೇಂದ್ರೀಕರಣವನ್ನು ಆರಂಭಿಸಿದ ಕಾರಂತರು, ಭಾರತೀಯ ರಂಗಭೂಮಿಯ ಬಹವಚನೀಯತೆಯನ್ನು ಗುರುತಿಸಿದರು.

೪. ನಾಟ್ಯ ಶಾಸ್ತ್ರದ ಪರಂಪರೆಯ ಸಾತತ್ಯಕ್ಕೆ ಚಾಲನೆ ನೀಡಿ, ಭಾರತೀಯ ರಂಗಭೂಮಿಯನ್ನು ವಸಾಹತು ರಂಗಭೂಮಿ ಪ್ರಭಾವದಿಂದ ಬಿಡಿಸಲು ಅವರು ಸದ್ದಿಲ್ಲದೆ ಪ್ರಯತ್ನಿಸಿದರು.

೫. ಕರ್ನಾಟಕದಲ್ಲಿ ನಿರ್ದೇಶಕನಿಗೆ ಸ್ಥಾನಮಾನ ತಂದುಕೊಟ್ಟ ಕಾರಂತರು ತನ್ನ ಭಾಷಾಂತರ ಮತ್ತು ರಂಗಕೃತಿಗಳ ಮೂಲಕ ಕನ್ನಡ ರಂಗಭೂಮಿಗೆ ಅಖಿಲ ಭಾರತ ಮನ್ನಣೆ ದೊರಕಿಸಿದರು.

೬. ಮಕ್ಕಳ ನಾಟಕ ಕ್ಷೇತ್ರದಲ್ಲಿ ಪವಾಡಗಳನ್ನು ಮಾಡಲು ಸಾಧ್ಯ ಎಂಬುದನ್ನು ಕಾರಂತರು ಸಾಧಿಸಿ ತೋರಿಸಿದರು.

೭. ರಂಗಸಂಗೀತವನ್ನು ಶಾಸ್ತ್ರೀಯ ಸಂಗೀತಕ್ಕಿಂತ ಭಿನ್ನವಾದ ಧ್ವನಿವಿನ್ಯಾಸವಾಗಿ ಬೆಳೆಸುವುದರಲ್ಲಿ ಕಾರಂತರು ಯಶಸ್ವಿಯಾಗಿದ್ದಾರೆ.

೮. ಭಾರತದ ವಿವಿಧ ಜನಪದ ಸಂಪ್ರದಾಯಗಳಲ್ಲಿರುವ ರಂಗಭೂಮಿಯ ಸಾಧ್ಯತೆಗಳನ್ನು ಕಾರಂತರು ನಾಟಕಗಳಲ್ಲಿ ಅಳವಡಿಸಿಕೊಂಡರು.

೯. ಎನ್.ಎಸ್.ಡಿ. ಭೋಪಾಲ ‘ರಂಗಮಂಡಲ’, ಮೈಸೂರಿನ ‘ರಂಗಾಯಣ’ ಮತ್ತು ಹತ್ತಾರು ನಾಟಕ ಕಮ್ಮಟಗಳ ಮೂಲಕ ರಂಗಭೂಮಿ ಶಿಕ್ಷಣಕ್ಕೆ ಕಾರಂತರು ಅಸಾಧಾರಣ ಕೊಡುಗೆ ನೀಡಿದ್ದಾರೆ.

೧೦. ‘ಹಿಂದೀ ನಾಟಕಕಾರ ಜಯಂಶಂಕರ ಪ್ರಸಾದರ ನಾಟಕಗಳಿಗೆ ರಂಗಭಾಷೆಯನ್ನು ತಂದುಕೊಟ್ಟ ಶ್ರೇಯಸ್ಸು ಕಾರಂತರದು’

ಕೆ.ವಿ.ಸುಬ್ಬಣ್ಣ ವಿವರಿಸಿರುವಂತೆ, ‘ವ್ಯಕ್ತಿ ಪ್ರಜ್ಟೆಗಿಂತ ಹೆಚ್ಚಾಗಿ ಸಮುದಾಯ ಪ್ರಜ್ಞೆ ಸಂಗೀತ ಮಾಧ್ಯಮದವರಲ್ಲಿರುವ ಥರದ ಅಮೂರ್ತ ಅರ್ಥ ಸ್ವಚ್ಛಂದ ಅರ್ಥವಂತಿಕೆ ಬೌದ್ಧಿಕಕ್ಕಿಂತ ಹೆಚ್ಚಾಗಿ ಅಂತರ್ಯದಿಂದ ಉದ್ಭವಿಸುವ ಸೃಜನಶೀಲತೆ ಇವು ಸುಮಾರಾಗಿ ಕಾರಂತರ ರಂಗಕಾಯಕದ ನೆಲೆಗಟ್ಟು.

ಕಂಪೆನಿಗಳು, ವಿಕಾಸಗೊಳಿಸಿದ ರೀತಿಯಲ್ಲಿ ‘ವಾಸ್ತವೇತರ’ ಅಂಶಗಳನ್ನು ಒಳಗೊಂಡೂ, ‘ನಾಟ್ಯಧರ್ಮಿ’ಯಾಗದೆ, ‘ಲೋಕಧರ್ಮಿ’ಯಾಗಿ ಉಳಿಯುವ ಅಭಿನಯ ಶೈಲಿ; ಪಾತ್ರ ನಿರೂಪಣಕ್ಕಿಂತ ಸಮಯದಾಯ ನಿರೂಪಣದ ಕಡೆ ಹೆಚ್ಚು ಆಸಕ್ತಿ; ರಂಜಕಸಂಕಲನ; ಸಾಮಾಜಿಕ ಸಾಮಿಪ್ಯಕ್ಕಾಗಿ ರಂಗಸ್ಥಲದಿಂದ ಹೊರಗೆ ಉಚಾಯಿಸಿಕೊಳ್ಳುವ ಪರಿ — ಇವು ಸ್ಥೂಲವಾಗಿ ಅವರ ರಂಗಕೃತಿಗಳ ರೂಪ.

ಕಂಪೆನಿ ನಾಟಕಗಳು ಆಧುನಿಕ ಭಾರತೀಯ ರಂಗಭೂಮಿಯನ್ನು ತಂದು ನಿಲ್ಲಿಸಿದ ನೆಲೆಯಿಂದ ಹೊರಟು, ಅದನ್ನು ಕಲಾಸಂವಹನದ ಗಂಭೀರ ಮಾರ್ಗದಲ್ಲಿ ಮುಂದುವರಿಸಿಕೊಂಡು ಹೋದದ್ದು ಮತ್ತು ಆ ಮೂಲಕ ಭಾರತೀಯ ರಂಗಭೂಮಿಯ ಇತಿಹಾಸವನ್ನು ಮುಂದಕ್ಕೆ ನಡೆಸಿದ್ದು; ಪ್ರಾಂತೀಯ ರಂಗಭೂಮಿಗಳ ಸಮುಚ್ಛಯವಾದ ರಂಗಸಂಕುಲವೇ ಭಾರತೀಯ ರಂಗಭೂಮಿ ಅನ್ನುವ ಸಮರ್ಪಕ ಕಲ್ಪನೆಯನ್ನು ದೃಢಗೊಳಿಸಿದ್ದು ಇವು ಕಾರಂತರ ವಿಶಿಷ್ಟ ಸಾಧನೆಗಳೆನ್ನಬಹುದು. ಬಿ.ವಿ. ಕಾರಂತರುಸೆಪ್ಟೆಂಬರ್ ೧,೨೦೦೨ರಂದು ನಿಧನರಾದರು.

೧೦

ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಪ್ರೊ.ಕು.ಶಿ. ಹರಿದಾಸಭಟ್ಟರು ಬಿ.ವಿ.ಕಾರಂತರ ನಿರ್ದೇಶನದಲ್ಲಿ ನಾಟಕ ಕಮ್ಮಟವೊಂದನ್ನು ೧೯೭೩ರಲ್ಲಿ ಏರ್ಪಡಿಸಿದ್ದರು. ಈ ಕಮ್ಮಟದಲ್ಲಿ ನಾನು ಕಾರಂತರ ಶಿಷ್ಯನಾಗಿದ್ದೆ. ಈ ಕಮ್ಮಟ ಉಡುಪಿಯಲ್ಲಿ ನಾವು ಕೆಲವರು ಗೆಳೆಯರು ಒಟ್ಟು ಸೇರಿ ‘ರಥಬೀದಿ ಗೆಳೆಯರು’ (ಸ್ಥಾಪಕ ಕಾರ್ಯದರ್ಶಿ – ಕೆ.ಎಸ್.ಕೆದ್ಲಾಯ) ಎಂಬ ನಾಟಕ ಸಂಘಟನೆಯನ್ನು ಸ್ಥಾಪಿಸಲು ಪ್ರೇರಣೆ ನೀಡಿತು. ಬಿ.ವಿ.ಕಾರಂತರನ್ನು ಕುರಿತು ಈ ಗ್ರಂಥ ಗುರುಋಣ ತೀರಿಸುವ ನನ್ನ ಒಂದು ಕಿರು ಪ್ರಯತ್ನ. 

ಟಿಪ್ಪಣಿಗಳು: –

೧. ಬಿ.ವಿ.ಕಾರಂತರ ತಮ್ಮಂದಿರು – ೧. ಶ್ರೀ ಶ್ಯಾಮ, ೨. ಶ್ರೀ ಬಾಲಕೃಷ್ಣ ಕಾರಂತ… ಮುಂಬೈಯಲ್ಲಿ ಇಂಜಿನಿಯರ್ ಆಗಿದ್ದಾರೆ. ೩. ಶ್ರೀಕೃಷ್ಣ ಕಾರಂತ — ಉಡುಪಿ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ ಉದ್ಯೋಗದಲ್ಲಿದ್ದು, ನಿವೃತ್ತರಾಗಿದ್ದಾರೆ. ತಂಗಿಯರು – ಶ್ರೀಮತಿ ಮಹಾಲಕ್ಷ್ಮೀ ಸೇತುರಾಮ ತಂಜಾವೂರಿನಲ್ಲಿದ್ದಾರೆ. ೨. ಶ್ರೀಮತಿ ಸರೋಜಿನಿ ಗೋಪಾಲಕೃಷ್ಣಯ್ಯ – ಕಾಸರಗೋಡು ತಾಲೂಕಿನ ಕುರ್ಚೆಪಳ್ಳದಲ್ಲಿದ್ದಾರೆ.

೨. ಲಂಕೇಶ್ ಬರೆದಿರುವಂತೆ, ‘ಎಲ್ಲ ದ.ಕ.ಗಳಂತೆ ಇವರಿಗೂ ಇಂಗ್ಲಿಷೆಂದರೆ ಪಂಚಪ್ರಾಣ; ಆದರೆ ಇಂಗ್ಲಿಷ್ ಬರುವುದಿಲ್ಲ. ಇವರು ತಾವು ಮದುವೆಯಾಗಲಿದ್ದ ಹುಡುಗಿಯಿಂದ ಬಂದ ಕಾಗದಲ್ಲಿ ‘I an inclined towards you’ ಎಂಬ ಇಂಗ್ಲಿಷ್ ವಾಕ್ಯ ಕಂಡಾಗ ‘inclined’ ಎಂಬ ಮಾತು ಅರ್ಥವಾಗದೆ ಅದೊಂದು ಬೈಗುಳವಿರಬೇಕೆಂದು ಹೆದರಿಕೊಂಡು, ತನ್ನ ಸ್ನೇಹಿತರಿಂದ ಅದರರ್ಥ ತಿಳಿದುಕೊಂಡು ಸಮಾಧಾನದ ನಿಟ್ಟಿಸಿರುಗರೆದರಂತೆ. ಇದನ್ನು ಕಾರಂತ ದಂಪತಿಗಳಿಬ್ಬರೂ ಹೇಳಿಕೊಂಡು ನಗುತ್ತಾರೆ. (ಪಿ.ಲಂಕೇಶ್ — ‘ಕಂಡದ್ದು ಕಂಡ ಹಾಗೆ’ — – ಬಿ.ವಿ.ಕಾರಂತ ಮತ್ತು ನಾನು’)

೩. ಶ್ರೀರಂಗರು ತನ್ನ ಆತ್ಮಕಥೆಯಲ್ಲಿ, ‘ಅದರಂತೆ ನಾನು ರೇಡಿಯೋದಲ್ಲಿದ್ದಾಗ ನನ್ನ ಗೆಳೆಯರೊಬ್ಬರು ‘ಒಬ್ಬ ಒಳ್ಳೆಯ ಹುಡುಗ ಡ್ರಾಮಾ ಸ್ಕೂಲಿಗೆ ಹೋಗ್ಬೇಕಂತಾನ. ಕೇಂದ್ರ ಸ್ಕಾಲರ್‌ಶಿಪ್‌ಗೆ ಅರ್ಜಿ ಹಾಕ್ಯಾಣ. ನಿಮ್ಮ ಸಹಾಯ ಬೇಕು’ ಅಂದರು.  ಆ ವರ್ಷ ನಾನು ಆಯ್ಕೆ ಸಮಿತಿಯ ಸದಸ್ಯನಿರಲಿಲ್ಲ ‘ನಿಮ್ಮ ಪರಮಮಿತ್ರರಾದ ಮಾಮಾವರೇಕರ ಸದಸ್ಯ ಇದ್ದಾರ ಈ ಸಲ. ಅವರಿಗೊಂದು ಚೀಟಿ ಕೊಡ್ರಿ’ ಅಂದರು. ‘ಅದಿರಲಿ, ನಿಮ್ಮ ಒಳ್ಳೆಯ ಹುಡುಗ ಯಾರು? ಅಂದೆ. ‘ಹುಡುಗ’ನ ಪರಿಚಯ ಮಾಡಿಕೊಟ್ಟರು. ನಾನು ಚೀಟಿ ಕೊಟ್ಟೆ ಆ ಹುಡುಗನಿಗೆ ಪ್ರವೇಶ ದೊರೆಯಿತು. ಈಗ ಅವನು ‘ಹುಡುಗ’ನಾಗಿ ಉಳಿದಿಲ್ಲ ತನ್ನ ಯೋಗ್ಯತೆಯಿಂದ ವಿಶಿಷ್ಟ ಹೆಸರನ್ನು ಗಳಿಸಿಕೊಂಡಿದ್ದಾರೆ. ಇಂದು ಯಾರಿಗೆ ಅವನ ಹೆಸರು ಗೊತ್ತಿಲ್ಲ? ಆದರೂ ಹೇಳುವೆ. ಈ ಹುಡುಗನ ಹೆಸರು ಬಿ.ವಿ.ಕಾರಂತ.’ (ಶ್ರೀರಂಗ – ‘ಸಾಹಿತಿಯ ಆತ್ಮಜಿಜ್ಞಾಸೆ’) ಅಕ್ಷರ ಪ್ರಕಾಶನ ಸಾಗರ . ೧೯೯೪)

೪. ‘ರಂಗಾಯಣ’ದ ಇತರ ಶಿಕ್ಷಕರು – ಎಸ್.ರಘುನಂದನ (ಪ್ರಶಿಕ್ಷಕ – ಅಭಿನಯ), ಜಯತೀರ್ಥ ಜೋಶಿ (ಉಪನಿರ್ದೇಶಕರು ಕಲೆ), ಅಂಜುಸಿಂಗ್ (ಪ್ರಶಿಕ್ಷಕ – ಸಮರಕಲೆ), ಸಂತೋಷಕುಮಾರ್, ಶ್ರೀನಿವಾಸ್ ಭಟ್ಟ (ಶಿಕ್ಷಕ – ಸಂಗೀತ) ನ.ಬಸವಲಿಂಗಯ್ಯ.

೫. ಆರ್. ಸ್ವಾಮಿ ಆನಂದ — ಲಂಕೇಶ್ ಪತ್ರಿಕೆ, ಆಗಸ್ಟ್ ೨೪,೧೯೯೪.

೬. ಕೆ.ವಿ.ಸುಬ್ಬಣ್ಣನವರ ಲೇಖನದ ಸಾರಾಂಶ ಹೀಗಿದೆ – ’೧. ಇವತ್ತು ನಾಟಕ ಎನ್ನುವುದಕ್ಕೆ ಎರಡು ಅರ್ಥಗಳಿವೆ – ಸಾಹಿತ್ಯಕೃತಿ ಮತ್ತು ರಂಗ ನಿರ್ಮಿತಿ. ಒಂದು ಮಾಧ್ಯಮ ಭಾಷೆ. ಇನ್ನೊಂದರದ್ದು ಅಭಿನಯ; ಒಂದು ದೇಶಸ್ಥ, ಇನ್ನೊಂದು ಕಾಲಸ್ಥ – ಹೀಗಾಗಿ ಇವು ಬೇರೆ ಬೇರೆ. ಇವುಗಳ ವಿಮರ್ಶೆ ಬೇರೆ ಬೇರೆಯಾಗಿಯೇ ನಡೆಯಬೇಕು. ರಂಗನಿರ್ಮಿತಿಯಲ್ಲಿ ಒಂದೊಂದು ಪ್ರಯೋಗವೂ ಒಂದೊಂದು ಸ್ವತಂತ್ರ ಕೃತಿ; ವಿಮರ್ಶೆ ಕೂಡ ಒಂದೊಂದು ಪ್ರಯೋಗವನ್ನೇ ಲಕ್ಷಿಸಬೇಕಾಗುತ್ತದೆ. ೨. ಸಾಹಿತ್ಯ ನಾಟಕ ರಂಗಯೋಗ್ಯವಾಗಿರಬೇಕು ಅಥವಾ ರಂಗನಿರ್ಮಿತ ಸಾಹಿತ್ಯ ಕೃತಿಯನ್ನು ಅವಲಂಬಿಸಿರಬೇಕು ಎಂಬ ನಿಯತವೇನೂ ಇಲ್ಲ. ಈ ಪರಸ್ಪರರ ಒದಗುವಂಥ ಯೋಗ್ಯತೆ ಆಯಾ ಕೃತಿಗಳ ಕಲಾತ್ಮಕತೆಗೆ ಸಂಬಂಧಿಸಿದ್ದಿಲ್ಲವಾದ್ದರಿಂದ ವಿಮರ್ಶೆಯಲ್ಲಿ ಅದು ಅಪ್ರಸ್ತುತ. ೩. ಒಂದು ಸಾಹಿತ್ಯ ಕೃತಿಯನ್ನು ರಂಗನಿರ್ಮಿತಿಗೆ ಆಧಾರವಾಗಿ ಎತ್ತಿಕೊಂಡರೆ ಅದನ್ನು ಒಂದು ಪರಿಕರದ್ರವ್ಯವಾಗಿ ಕೊಳ್ಳುವುದಷ್ಟೇ. ಹಾಗೆ ಬಳಸಿಕೊಂಡಾಗ ಅದು ಮೂಲದ ಕಲಾಕೃತಿಯಾಗಿ, ಅದೇ ಘಟಕವಾಗಿ ಉಳಿದಿರುವುದಿಲ್ಲ. ಮೂಲ ಘಟಕ ಛಿದ್ರಗೊಂಡು ಬೇರೆ ಮಾಧ್ಯಮದಲ್ಲಿ ಪುನಸ್ಸಂಘಟಿತವಾಗಿ ಬೇರೆ ಕಲಾಕೃತಿಯೇ ಆಗುತ್ತದೆ. ಸಾಹಿತ್ಯಕೃತಿ ಕೂಡ ರಂಗತಂತ್ರಗಳನ್ನು ಬಳಸಿಕೊಂಡರೂ ಅದು ತಂತ್ರಮಾತ್ರವಾಗಿರುತ್ತದಲ್ಲದೆ, ತನ್ನ ಸಾರ್ಥಯಕ್ಕೆ ಆ ಮಾಧ್ಯಮವನ್ನು ಹಾರೈಸುವಂಥ ಅಪೂರ್ಣ ಕೃತಿಯಾಗಿರುವುದಿಲ್ಲ’ (ಕೆ.ವಿ.ಸುಬ್ಬಣ್ಣನವರ ಆಯ್ದ ಲೇಖನಗಳು, (ಸಂ) — ಟಿ.ಪಿ. ಅಶೋಕ, ೧೯೯೨, ಪುಟ – ೮೮)

೭. ವಾಕ್‌ಲೀ ಹೇಳುತ್ತಾನೆ — ‘ಪ್ರೇಕ್ಷಕರಿಗೆ ಸರಿಯಾದ ಕಾರಣಗಳಿಗಾಗಿಯೇ ಖುಷಿ ಕೊಡುವ ಒಳ್ಳೆ ನಾಟಕಗಳು ಎಷ್ಟೋ ಸಲ ವಿಮರ್ಶಕನಿಗೆ ತೊಂದರೆ ಕೊಡುತ್ತವೆ. ಅವುಗಳ ಬಗೆಗೆ ಬರೆಯುವೂ ಕಷ್ಟ. ತನ್ನ ಪ್ರಭೇದಕ್ಕೆ ಯಾವ ಹೊಸದನ್ನೂ ಸೇರಿಸಿದ ಒಂದು ನಾಟಕ ತನ್ನಷ್ಟಕ್ಕೆ ತಾನಿ ಕುತೂಹಲಿಕಾರಿಯಾಗಿರಬಹುದು; ಆದರೆ ವಿಮರ್ಶಕರನ್ನು ಗೊಂದಲಗೆಡಿಸುತ್ತದೆ… ಇನ್ನೂ ಸ್ವಲ್ಪ ಮುಂದುವರಿದು ತಾಂತ್ರಿಕ ವಿವರಗಳಲ್ಲಿ ಪ್ರವೇಶಿಸುವುದಾದರೆ ಮೆಲೊಡ್ರಾಮ, ಪ್ರಹಸನಗಳಂಥ ಕೆಲವು ನಾಟಕ ಪ್ರಕಾರಗಳು ರಂಗದ ಮೇಲಿನಕ್ಕಿಂತ ಅಚ್ಚಿನಲ್ಲಿ, (ವಿಮರ್ಶೆಯಲ್ಲಿ) ಹೆಚ್ಚು ಕೆಟ್ಟದಾಗಿ ಕಾಣಿಸುತ್ತವೆ. ಮೆಲೊಡ್ರಾಮವನ್ನು, ವರ್ಣಿಸುವಾಗ ವಿಮರ್ಶಕ ಸಾಮಾನ್ಯವಾಗಿ ವ್ಯಂಗ್ಯದ ಆಮಿಷಕ್ಕೆ ಒಳಗಾಗುವುದೇ ಹೆಚ್ಚು. ಪ್ರಹಸನದ ಕಥಾವಸ್ತುವನ್ನು ನಿರೂಪಿಸುವುದಂತೂ ಕಷ್ಟದ ಕೆಲಸ. ಇದೇ ಕಾರಣಕ್ಕಾಗಿಯೇ ‘ವೈಚಾರಿಕ ನಾಟಕ’ ಅಚ್ಚಿನಲ್ಲಿ ಹೆಚ್ಚು ಪ್ರಶಂಸೆ ಪಡೆದುಕೊಳ್ಳುವ ಸಂಭವ ಹೆಚ್ಚು. ವಿಚಾರಗಳ ಅಭಿವ್ಯಕ್ತಿಗೆ ಮುದ್ರಣ ಹೆಚ್ಚು ಒಳ್ಳೆಯ ಮಾಧ್ಯಮವಾಗಿರುವದೇ ಇದಕ್ಕೆ ಕಾರಣ. ಒಟ್ಟಿನಲ್ಲಿ ವಿಮರ್ಶೆ ಸಾಹಿತ್ಯದ ಒಂದು ಪ್ರಕಾರವಾಗಿರುವುದರಿಂದ ನಾಟಕದಲ್ಲಿಯ ಸಾಹಿತ್ಯಿಕ ಅಂಶಗಳಿಗೆ ನ್ಯಾಯ ಸಲ್ಲಿಸಬಹುದು. ಆದರೆ ನಾಟಕದಲ್ಲಿಯೇ ಅನೇಕ ಸಾಹಿತ್ಯೇತರ ಅಂಶಗಳ ವಿಷಯದಲ್ಲಿ. ಶುದ್ಧ ತಾಂತ್ರಿಕ ತೊಂದರೆಯಿಂದಾಗಿ, ವಿಮರ್ಶೆ ತಪ್ಪು ಮಾಡುವುದೇ ಹೆಚ್ಚು. ಇದು ಒಂದು ಕಲೆಯ ಪರಿಣಾಮಗಳಿಗೆ ವರ್ಗಾಯಿಸುವುದರಲ್ಲಿಯೇ ತೊಂದರೆ’ ಭಾಷಾಂತರ — – ಗಿರಡ್ಡಿ ಗೋವಿಂದರಾಜ. (WALKLEY. A.B. Victorian Dramatic Critisism, 1971.) ನೋಡಿ — ಗಿರಡ್ಡಿ ಗೋವಿಂದರಾಜ — ‘ನಾಟಕ, ಸಾಹಿತ್ಯ ಮತ್ತು ರಂಗಭೂಮಿ’ ೧೯೮೯, ಹೆಗ್ಗೋಡು)

೮. ಪಿ.ಲಂಕೇಶ್‌‘ಟೀಕೆ – ಟಿಪ್ಪಣಿ,’ ಬೆಂಗಳೂರು, ೧೯೯೧ — ಮಧ್ಯಪ್ರದೇಶದಲ್ಲಿ ಬಿ.ವಿ.ಕಾರಂತ — ಪುಟ — ೫೦

೯. ಬಿ.ವಿ.ಕಾರಂತ – ’ಭಾರತಭವನವನ್ನು ಕಲಾವಿದರಿಗೇ ಬಿಡಬೇಕು’, ‘ತರಂಗ’ ವಾರಪತ್ರಿಕೆ, ಮಣಿಪಾಲ, ಸಂ – ಸಂತೋಷ ಕುಮಾರ ಗುಲ್ವಾಡಿ, ಜನವರಿ ೨೦,೧೯೯೧.

೧೦. (ಸಂ) ಟಿ.ಪಿ.ಅಶೋಕ — ಕೆ.ವಿ.ಸುಬ್ಬಣ್ಣನವರ ಆಯ್ದ ಬರಹಗಳು, ಹಂಪಿ, ೧೯೯೨.  — ಬ್ರೂಕ್ ಮಹಾಶಯನ ಆಧುನಿಕ ಅಶ್ವಮೇಧ, ಪುಟ — ೪೯.

* * *