ಬಿ.ವಿ.ಕಾರಂತ

ರಂಗಸಂಗೀತ ಒಂದು ಸಿದ್ಧಪ್ರಯೋಗವಲ್ಲ, ಶಾಸ್ತ್ರೀಯವೂ ಅಲ್ಲ. ಅದು ಒಂದು ರೀತಿಯ ಅನ್ವಯಿಕ ಸಂಗೀತ. ಶಾಸ್ತ್ರೀಯ ಸಂಗೀತಕ್ಕೆ ಸ್ವಂತ ಪರಂಪರೆ ಇದೆ. ರಂಗಸಂಗೀತಕ್ಕೆ ಒಂದು ಪರಂಪರೆ ಬೇಕಾಗಿಲ್ಲ. ಸಂಗೀತ ಎಂದ ಕೂಡಲೇ ಶಾಸ್ತ್ರೀಯ ಸಂಗೀತದ ಜ್ಞಾನ ಬೇಕೇ ಬೇಕು ಎನ್ನುವ ಕಲ್ಪನೆಯಿದೆ. ರಂಗಸಂಗೀತಕ್ಕೆ ಇರಬೇಕಾದ್ದು ಧ್ವನಿ ವಿನ್ಯಾಸದ ಬಗ್ಗೆ ಸಂವೇದನಾಶೀಲತೆ.

ರಂಗಭೂಮಿಯಲ್ಲಿ ವಾದ್ಯಗಾರ ಹಿನ್ನೆಲೆಯಲ್ಲಿ ಇರುವ ಬದಲು ಮುಂದೆ ಇರುತ್ತಾನೆ. ನಟನಿಗೂ, ವಾದ್ಯಗಾರನಿಗೂ ಒಂದು ಸಂಬಂಧ ಇರುತ್ತದೆ. ಆದರೆ ಶಾಸ್ತ್ರೀಯ ಸಂಗೀತದಲ್ಲಿ ಹಾಡುಗಾರನೊಬ್ಬನೇ ಮುಖ್ಯವಾಗಿಬಿಡುತ್ತಾನೆ. ಇದನ್ನು ಭರತಮುನಿ ತನ್ನ ನಾಟ್ಯಶಾಸ್ತ್ರದಲ್ಲಿ ಬಲು ಹಿಂದೆಯೇ ಹೇಳಿದ್ದಾನೆ.

ನಮ್ಮ ತಿಳುವಳಿಕೆ ಪ್ರಕಾರ ಶುದ್ಧ ಸಂಗೀತದಲ್ಲಿ ಎರಡು ಬಗೆ — ವಾದ್ಯವೃಂದ ಮತ್ತು ಹಾಡುಗಾರಿಕೆ. ಪಾಶ್ಚಾತ್ಯ ಸಂಗೀತದಲ್ಲಿ ವಾದ್ಯಕ್ಕೆ ಬಹಳ ಮಹತ್ವವಿದ್ದರೆ, ನಮ್ಮಲ್ಲಿ ಅದು ಪಕ್ಕದಲ್ಲಿ ಇದೆ ಅಷ್ಟೆ, ಹಾಡೋರೇ ಮುಖ್ಯ ಆಗ್ತಾರೆ ನಾಟಕದಲ್ಲಿ ಹಾಗಾಗುವುದಿಲ್ಲ. ಸಂಗತ್ (ಅಂದರೆ ಜೊತೆಯಲ್ಲಿರುವಂತದ್ದು) ಕೂಡಾ ಬಹಳ ಮುಖ್ಯವಾದದ್ದರಿಂದಲೇ ಹಿನ್ನೆಲೆಗಾಯನ ಬಹಳ ಮಹತ್ವಪೂರ್ಣ ಆಯ್ತು.

ಶುದ್ಧ ರಂಗಸಂಗೀತದಲ್ಲಿ ಸ್ವರರಚನೆ, ಸಂಯೋಜನೆಗಳ ಬದಲಿಗೆ ಇರುವುದು ಧ್ವನಿವಿನ್ಯಾಸ ಅಥವಾ ಸ್ವರವಿನ್ಯಾಸ. ಅದು ವಿನ್ಯಾಸವೇ ಹೊರತು, ಏಳು ಸ್ವರಗಳಲ್ಲ, ಹನ್ನೆರಡು ಸ್ವರಗಳೂ ಅಲ್ಲ. ಮಾತನಾಡುತ್ತಿರಬೇಕಾದರೆ ‘ಏನಂದೇ’ ಅಂದಾಗ ಅಷ್ಟು ಸ್ವರಗಳಾದರೂ ಇರಬಹುದು. ಜನಪದಗಳಲ್ಲಿ ಭಜನೆಗಳಿಗಾಗಿ ಕೆಲವು ಪ್ರಸಿದ್ಧ ಸಿನಿಮಾ ಹಾಡುಗಳನ್ನು ಬಳಿಸಕೊಳ್ಳೋದನ್ನು ನೋಡ್ತೇವೆ. ಆ ಹಾಡುಗಳನ್ನು ಕೇಳಿದಾಗ ಸಂಯೋಜಿಸಿದ ಹೊಸ ಶಬ್ದಗಳು ಜ್ಞಾಪಕಕ್ಕೆ ಬರುವುದಿಲ್ಲ. ‘ನಿನಗೆ ವಂದಿಸುವೆ ನಾನೀ’ ಅಂದರೂ ಕೂಡಾ ‘ಮುನಡೋಲೇ ತನ್ ತಪಿಡೋಲೇ’ ಅಂತಲೇ ಕಿವಿಗೆ ಕೇಳಿಸುತ್ತೇ!

ರಂಗಸಂಗೀತ ಸಂಯೋಜಿಸುವಾಗ ಎಚ್ಚರ ಇರಬೇಕು. ಒಂದು ಧ್ವನಿಯ ವಿನ್ಯಾಸವಾದ್ದರಿಂದ ಸಂಭಾಷಣೆ ಕೂಡಾ ಸಂಗೀತದ ಒಂದು ಭಾಗವಾಗಿಬಿಡುತ್ತದೆ.

ಮೊದಲು ಕಂಪೆನಿ ನಾಟಕಗಳಲ್ಲಿ ಬಳಸುತ್ತಿದ್ದ ಮಟ್ಟಗಳಲ್ಲಿ ಕೆಲವು ವೈಶಿಷ್ಟ್ಯಗಳು ಇರುತ್ತಿದ್ದವು. ಶಾಸ್ತ್ರೀಯ ಸಂಗೀತದಲ್ಲಿ ಒಂದು ‘ಪಡ್ಜ’, ಒಂದು ಶ್ರುತಿ ಇರುತ್ತೆ. ನಾಟಕದಲ್ಲಿ ಅಲ್ಲಿಂದ ಶುರು ಮಾಡಿದರೆ ಜನ್ಮಕ್ಕೆ ಕೇಳೋದಿಲ್ಲ ಅಂತ ಒಂದೇ ಬಾರಿಗೆ ಸಾ… ಇಂದ ಪ್ರಾರಂಭಿಸುತ್ತಿದ್ದರು. ಇದು ಅಗತ್ಯಕ್ಕೆ ತಕ್ಕಂತೆ ತಂದುಕೊಂಡ ಉಪಾಯ. ಶಾಸ್ತ್ರೀಯ ಸಂಗೀತದಲ್ಲಿ ಪಲ್ಲವಿ/ಅನುಪಲ್ಲವಿ, ಅಥವಾ ಸ್ಥಾಯಿ ಅಂತರ ಇದ್ದು, ಮೊದಲು ಸ್ಥಾಯಿ, ನಂತರ ಅಂತರ ಹಾಡುತ್ತಾರೆ. ನಾಟಕದಲ್ಲಿ ಇದು ತಿರುವು ಮುರುವಾಗಿ ಬಳಸಲ್ಪಡುತ್ತೆ. ಮೊದಲು ‘ಅಂತರ’ ಹಾಡೋದ್ರಿಂದ ಒಂದು ತರಹದ ಕುತೂಹಲ ಕೆರಳಿಸಬಹುದು. ರಂಗಸಂಗೀತದಲ್ಲಿ ಶ್ರುತಿಗಳ ಬಗ್ಗೆ ದೊಡ್ಡ ಗೊಂದಲವೇ ಇದೆ. ಒಂದು ತಂಡದಲ್ಲಿ ೪ ಜನ ಇದ್ದರೆ ಒಬ್ಬೊಬ್ಬರದ್ದೂ ಒಂದೊಂದು ಶ್ರುತಿ. ಒಬ್ಬರು ಮೇಲು ಸ್ಥಾಯಿಯಲ್ಲಿ ಹಾಡಿದರೆ ಇನ್ನೊಬ್ಬನದ್ದು ಮಂದ್ರಸ್ಥಾಯಿ. ಹಿಂದೆ ಮೈಕ್ ಬಳಸದೇ ಇದ್ದದ್ದರಿಂದ ಎತ್ತರದ ಸ್ಥಾಯಿಯಲ್ಲಿ ಹಾಡುವುದು ಅಗತ್ಯವಾಗಿತ್ತು. ಅಲ್ಲಿ ರಾಗ – ತಾಳ ತಪ್ಪಿಸುವುದು ಕೂಡಾ, ಬೇಕಂತಲೇ ಮಾಡಿದ್ದಾಗಿರಬಹುದು. ಸಂಗೀತ ಲಯರಹಿತ, ಸ್ವರರಹಿತ ಇರಬಹುದು, ಉತ್ತರಾದಿ, ದಕ್ಷಿಣಾದಿ ಅಥವಾ ಜನಪದ ಯಾವುದೇ ಆಗಿರಬಹುದು, ಅದು ನಾಟಕಕ್ಕೆ ಅನ್ವಯಿಸಬೇಕು ಅದೇ ಮುಖ್ಯ.

ಶಾಸ್ತ್ರೀಯ ಸಂಗೀತ ಭಕ್ತಿ ಕರುಣೆ, ಶೃಂಗಾರಕ್ಕೆ ಒತ್ತು ಕೊಟ್ಟು, ಉಳಿದ ರಸಗಳನ್ನು ಮರೆತಿದೆ, ವೀರ/ರೌದ್ರ ರಸ ಇಲ್ಲವೇ ಇಲ್ಲ ಅನ್ನುವಷ್ಟು ವಿರಳ. ಕಂಪನಿ  ನಾಟಕ, ಬಯಲಾಟ, ಯಕ್ಷಗಾನ — ಇವುಗಳಲ್ಲಿ ಎಲ್ಲ ರಸಗಳೂ ಇಗವೆ. ಶಾಸ್ತ್ರೀಯ ಸಂಗೀತದಲ್ಲಿ ಸಾಧ್ಯವಿಲ್ಲದ ಹಾಸ್ಯರಸ ಇದೆ. ಭೀಮಸೇನ ಜೋಶಿಯವರಿಗೆ ಹಾಸ್ಯರಸದಲ್ಲಿ ಹಾಡಿ ಎಂದರೆ ಅವರು ಹಾಡಿದರೆ ಅದು ಹಾಸ್ಯಾಸ್ಪದವಾಗುತ್ತದೆ!

ತನ್ನ ಅಗತ್ಯಕ್ಕೆ ತಕ್ಕಂತೆ ರಂಗಭೂಮಿ ಅನೇಕ ಪ್ರಯೋಗಗಳನ್ನು ಮಾಡಿಕೊಂಡಿದೆ. ಭರತಮುನಿ ನಾಟ್ಯಶಾಸ್ತ್ರದಲ್ಲಿ ಹೇಳಿದ್ದಾನಲ್ಲ. ‘ಇಲ್ಲಿ ಎಲ್ಲವೂ ಬೇಕು, ಯಾವುದೂ ನಿಷಿದ್ಧವಲ್ಲ’, ಹಾಗೆ ಎಲ್ಲವೂ ಇದೆ. ಯಾವ ರೀತಿ ಅನ್ವಯಿಸುತ್ತೀರಿ, ಉಪಯೋಗಿಸಿ ಕೊಳ್ಳುತ್ತೀರಿ, ಯಾವ ರೀತಿ ಬಳಸಿದರೆ ಪ್ರೇಕ್ಷಕರಿಗೆ ಅದು ಒಪ್ಪಿತವಾಗುತ್ತೆ. ಅವನ ನಂಬಿಕೆಗೆ ಅದು ಅರ್ಹವೇ ಎಂಬುದಷ್ಟೇ ಮುಖ್ಯ. ಕಂಪನಿ ನಾಟಕಗಳಲ್ಲಿ ನಟ ತನ್ನ ಪ್ರತಿಭೆಗನುಗುಣವಾಗಿ ಹಾಡುತ್ತಿದ್ದನೇ ಹೊರತು ಅದಕ್ಕೊಂದು ಸಷ್ಟ ಯೋಜನೆ ಇರಲಿಲ್ಲ. ನಮ್ಮ ಸಿನಿಮಾಗಳ ಹಾಡುಗಳಲ್ಲೂ ಹಾಗೇ, ಅದಕ್ಕೊಂದು ನಿರ್ದಿಷ್ಟ ತಾತ್ವಿಕತೆ, ಸಿಧ್ಧಾಂತ, ತರ್ಕವಿಲ್ಲ. ಅದು ಕೇಳಿಕ್ಕೆ ಚೆನ್ನಾಗಿದ್ರೆ ಸಾಕು, ಯಾರೂ ಅದನ್ನು ಪ್ರಶ್ನಿಸುವುದಿಲ್ಲ. ಆದರೆ ಅದೇ ಹಾಡು ರಂಗಭೂಮಿಯಲ್ಲಿ ಪ್ರಶ್ನೆಗಳಿಗೆ ಆಹಾರವಾಗುತ್ತೆ. ರಂಗಭೂಮಿಯ ಹಾಡುಗಳಲ್ಲಿ ಶಬ್ದ, ಸಾಹಿತ್ಯಕ್ಕೆ ಅಷ್ಟು ಮಹತ್ವವಿರಲಿಲ್ಲ, ಅಲಿ ಮಾತೇ ಸಂಗೀತವಾಗಿ ಅಳವಡಿಸಲ್ಪಡುತ್ತಿತ್ತು. ‘ರಂಜಿಸುವ ಮನೆ, ರಂಜಿಪಳೀ ತರುಣಿ’ ಸ್ತೋತ್ರದ ಹಾಗೆ, ಇಲ್ಲವೇ ಉದ್ದಕ್ಕೆ ಒಂದು ಪಟ್ಟಿಯಂತೆ ಇರುತ್ತಿತ್ತೇ ಹೊರತು, ಕವಿತ್ವ ಇರುತ್ತಿರಲಿಲ್ಲ. ಹವ್ಯಾಸಿ ತಂಡಗಳಿಂದಾಗಿ, ಕಾವ್ಯಕ್ಕೆ ಹೆಚ್ಚಿನ ಮಹತ್ವ ಸಿಕ್ಕಿತು. ಭಾವಪ್ರಧಾನ ಮಟ್ಟುಗಳಲ್ಲಲಿ ರಂಗಸಂಗೀತದ ಕೆಲವು ಹೊಳವುಗಳನ್ನು ನೋಡಬಹುದು. ಅದರಲ್ಲಿ ಪಲ್ಲವಿ/ಅನುಪಲ್ಲವಿಗಳಿಲ್ಲ, ಪುನರಾವರ್ತನೆಯಾಗಿದ್ದರೂ ಅದರ ಲಯವೇ ಬೇರೆ, ಒಂದೇ ಲಯದಲ್ಲಿ ಹಾಡಬೇಕು ಎನ್ನುವ ನಿಯಮ ನಾಟಕಕ್ಕಿಲ್ಲ, ಭಾವಕ್ಕೆ ಹೇಗೆ ಹೊಂದಿಕೊಳ್ಳುತ್ತದೋ ಹಾಗೆ ಸಂಗೀತ ಬಂತು. ಆದ್ದರಿಂದ ತಾಳ ಮುಖ್ಯವಾಯ್ತು.

ನಮ್ಮ ರಂಗಭೂಮಿಗೇ ಒಂದು ಸಂಗೀತ ಸೃಜಿಸಬೇಕಾದರೆ, ಅದಕ್ಕೆ ಪ್ರೇರಣೆ ಸಿಗಬೇಕಾದ್ದು ರಂಗಭೂಮಿಯಲ್ಲಿ. ಯಾವುದೇ ಜಾನಪದ ರಂಗಭೂಮಿಯಾಗಲಿ ಅದರ ವಾದ್ಯಗಳನ್ನೆಲ್ಲ ಅದೇ ಸೃಷ್ಟಿಸಿಕೊಂಡಿದೆ. ಚಂಡೆ, ಮದ್ದಳೆ, ಜಾಗಟೆ, ತಾಳ – ಇವೆಲ್ಲ ಹುಟ್ಟಿದ್ದು ಜಾನಪದದಲ್ಲೇ. ಜಾತ್ರಾದಲ್ಲೂ ತನ್ನದೇ ಆದ ವ್ಯಾದಗಳು ಬಳಕೆಯಾಗುತ್ತವೆ. ಅಕದ್ಕೂ ಶಾಸ್ತ್ರೀಯ ಸಂಗೀತಕ್ಕೂ ಯಾವುದೇ ಸಂಬಂಧವಿಲ್ಲ. ಇದನ್ನು ನಾವು ಅರ್ಥ ಮಾಡಿಕೊಂಡಿದ್ದರೆ ಇಷ್ಟು ಹೊತ್ತಿಗೆ ಬೇರೆಯಾದ ರೀತಿಯಲ್ಲಿ ಸಂಗೀತ ಸೃಷ್ಟಿ ಸಾಧ್ಯವಾಗುತ್ತಿತ್ತೇನೋ?

ಪಾಶ್ಚಾತ್ಯರು ತಮಗೆ ಸಿಕ್ಕಿದ ಎಲ್ಲ ವಾದ್ಯಗಳನ್ನು ಬಳಸಿಕೊಂಡರು. ‘ತಾಳಗತಿ’ಗಾಗಿ ಅವರು ಪಿಯಾನೋ, ಅರ್ಗನ್, ತಬಲ ಬಳಿಸಿದರೆ ನಾವು ಬಹಳ ಮಟ್ಟಿಗೆ ತಬಲ, ಮದ್ದಳೆ ಅಥವಾ ಫಕ್ವಾಜ್ ಬಳಸಿದೆವು. ಸ್ವರಕ್ಕೆ ಬೇಕಾದ ವಾದ್ಯಗಳು ನಮ್ಮಲ್ಲಿ ಕಡಿಮೆ. ಇದ್ದರೂ ಅದು ವೀಣೆ. ಅದನ್ನು ರಂಗಭೂಮಿಯಲ್ಲಿ ಕೇಳಿಸುವುದು ಕಷ್ಟ. ಅಲ್ಲದೇ ಏಕವಾದ್ಯ ಪ್ರದರ್ಶನಕ್ಕೆ Solo performance ಹೆಚ್ಚು ಪ್ರಮುಖ್ಯತೆ ನೀಡಿದ್ದರಿಂದ ಶಾಸ್ತ್ರೀಯ ಸಂಗೀತವು ರಂಗಕ್ಕೆ ಹೊಂದಿಕೊಳ್ಳಲಿಲ್ಲ.

ನಾಟಕದ ಸಂಗೀತ, ಭಾಷೆಗೆ ತುಂಬಾ ಹತ್ತಿರವಾದದ್ದು. ಅಲ್ಲಿ ಭಾಷೆ ಬಿಟ್ಟು ಸಂಗೀತ ಇಲ್ಲ. ರಂಗದಲ್ಲಿ ಸಂಗೀತ ಒಂದು ಉಪಕರಣವಾಗಿ ಬಳಸಲ್ಪಟ್ಟಿದೆ. ಪ್ರತಿಭೆಗಳಿಗೆ ತುಂಬಾ ಅವಕಾಶವಿರತ್ತೆ. ಸಂಗೀತದ ಧ್ವನಿ ವಿನ್ಯಾಸದ ದೃಷ್ಟಿಯಿಂದ ಸಾಹಿತ್ಯ ಅದಕ್ಕೆ ಬಹಳ ಹತ್ತಿರವಾಗಗುತ್ತದೆ. ಸಾಹಿತ್ಯ ಎಂದರೆ ಬರಿಯ ಶಬ್ದಗಳಲ್ಲ, ವ್ಯಾಕರಣವೂ ಅಲ್ಲ, ಬದಲಿಗೆ ಧ್ವನಿ ಮಾತ್ರ. ದೃಶ್ಯಕಲ್ಪನೆ ಹೇಗೋ ಧ್ವನಿ ಕಲ್ಪನೆಯೂ ಅಂತದ್ಧೆ. ಗಾಂಧೀಜಿ ಕಾಲದಲ್ಲಿದ್ದ ಅಹಿಂಸಾತ್ಮಕ ಸಂಗೀತ ಧ್ವನಿಗಳಿದ್ದ ವಂದೇ ಮಾತರಂ ನಂತರ ‘ಆನಂದ ಮಠ’ದಲ್ಲಿ ಹೆಚ್ಚು ವೇಗವಾಗಿ ಚಿತ್ರತವಾಗಿದೆ. ಏಕೆ ಹೀಗೆ? ಕಾಲದೊಂದಿಗೆ ನಮ್ಮ ಭಾವನೆಗಳೂ ಬದಲಾಗುತ್ತದೆ. ಇತಿಹಾಸ ಬದಲಾಗುತ್ತದೆ, ಪ್ರಜ್ಞೆಯೂ ಬದಲಾಗುತ್ತದೆ. ಶಾಸ್ತ್ರೀಯ ಸಂಗೀತದಲ್ಲಿನ ಸ್ವರಶುದ್ಧತೆ ರಂಗಕ್ಕೆ ಮುಖ್ಯವಲ್ಲ.

ರಂಗಸಂಗೀತಕ್ಕೆ ಹೆಚ್ಚಿನ ಅರ್ಥವಿದೆ. ಜಾನ್ ಕೇಜ್ ಹೇಳ್ತಿದ್ದ — ‘ಅರ್ಥ ಮಾಡಿಕೊಳ್ಳಲಿಕ್ಕೆ ಪ್ರೇಕ್ಷಕರಿಗೆ ಒಂದು ಅವಕಾಶ ಕೊಡಬೇಕು’ ಅಂತ. ಒಮ್ಮೆ ಒಬ್ಬ ಪಿಯಾನೋ ವಾದಕ ಕಚೇರಿಯೊಂದರಲ್ಲಿ ಸುಮ್ಮನೆ ಪಿಯಾನೋ ಮೇಲೆ ಕೈಯಾಡಿಸುತ್ತಿದ್ದನಂತೆ ಬೇರೆಯವರಿಗೆ ಇದು ಬಾಲಿಶ ಅನ್ನಿಸಬಹುದು. ಆದರೆ ಆತ ಹೇಳಲು ಪ್ರಯತ್ನಿಸುತ್ತಿದ್ದುದು ಕೇಳುಗರು ಒಂದು ಸಂಗೀತವನ್ನು ಸೃಷ್ಟಿಸಬಹುದು. ಎಂದು. ಕವಿತೆ ಅಂದರೆ ಒಂದು ಹಳೆಯ ಕಾಲದ ಷಟ್ಪದಿ, ವಾರ್ಧಕ ಅಥವ ಭಾಮಿನಿ, ಆಮೇಲೆ ವಚನಸಾಹಿತ್ಯ, ಈಗ ಮುಕ್ತ ಛಂದಸ್ಸು ಬಂದಿದೆ. ಛಂದಸ್ಸು ಲಯ ಇಲ್ಲದಿದ್ದರೂ ಕವಿತೆ ಎನ್ನುತ್ತೇವೆ. ಈ ಬದಲಾವಣೆಗಳನ್ನೆಲ್ಲ ನಾಟಕದಲ್ಲಿ ತೋರಿಸದೆ ಹೋದರೆ ಧ್ವನಿ ವಿನ್ಯಾಸಕ್ಕೆ ಅರ್ಥವೇ ಇರೋದಿಲ್ಲ.

ಸುಗಮ ಸಂಗೀತ ಬಂದು ಧ್ವನಿಯ ವೈವಿಧ್ಯತೆಯನ್ನು ಮರೆಸಿಬಿಟ್ಟದೆ. ಸುಗಮ ಸಂಗೀತವನ್ನು ಎಷ್ಟು ಮೃದುವಾಗಿ ಹೇಳಲಿದರೆ ಅಷ್ಟು ಒಳ್ಳೆಯದು ಅನ್ನುವ ನಂಬಿಕೆಯಿದೆ. ಎಲ್ಲಕ್ಕಿಂತ ಮುಖ್ಯವಾದದ್ದು — ಮನುಷ್ಯನ ಧ್ವನಿಯನ್ನು ಹೇಳಿ ಬಳಸಬೇಕು ಎಂಬುದು ಅದಕ್ಕೆ ಬ್ರೆಕ್ಟ್ ಒಂದು ಕಡೆ ಹೇಳ್ತಾನೆ — ‘ಶಾಸ್ತ್ರೀಯ ಸಂಗೀತದ ಮನಸ್ಥಿತಿ ಬರಬೇಕಾದರೆ ಅರ್ಧ ಗಂಟೆಯದರೂ ಹಿಡಿಯುತ್ತೆ. ಆದರೆ ರಂಗದಲ್ಲಿ ೪ರಿಂದ ೫ನಿಮಿಷದಲ್ಲಿ ಹಾಡನ್ನು ಮುಗಿಸಿಬಿಡಬೇಕಾಗುತ್ತದೆ. ಬ್ರೆಕ್ಟ್ ಹೇಳಿದ ಸಂಗೀತ ಸ್ವರಪುಂಜು (Musical Idioms) ಅಷ್ಟು ಚಿಕ್ಕಿದಿರಬೇಕು. ಅದಕ್ಕೆ ಒಂದು ಸಣ್ಣ ಆಲಾಪ, ಸ್ವರ ರಾಗಗಳನ್ನು ಬಳಸಿದರೂ, ಅದು ಒಂದು ಸ್ವರಪುಂಜ ಆಗಿರಬೇಕು. ರಂಗಭೂಮಿ ಅಥವಾ ನಾಟಕ ಯಾವಾಗಲೂ ವರ್ತಮಾನಕ್ಕೆ ಸಂಬಂಧಿಸಿದ್ದು. ಐದು ವರ್ಷದ ಹಿಂದಿನ ರಂಗಸಂಗೀತ ಇಂದು ಬದಲಾಯಿಸಿರಬಹುದು, ಅದು ಆಯಾ ಕಾಲವನ್ನು ಅವಲಂಬಿಸಿ ಬೆಳೆಯುವಂತದ್ದು. ಅದಕ್ಕೆ ಯಾವುದೇ ನಿರ್ಬಂಧಗಳಿಲ್ಲ. ಅಲ್ಲಿ ಬರಿಯ ಶಬ್ದ ಮಾತ್ರವಲ್ಲ, ಬದಲಿಗೆ ಶಬ್ದವನ್ನು ಯಾವಾಗ, ಹೇಗೆ ಬಳಸುತ್ತೇವೆ ಎಂಬುದರ ಮೊತ್ತ.

* * *

—-
(ನೀನಾಸಂ ಹೇಗ್ಗೋಡು ಮತ್ತು ಚಳ್ಳಕೆರೆಯ ರವೀಂದ್ರ ಕಾಲೇಜಿನಲ್ಲಿ ನೀಡಿದ ಉಪನ್ಯಾಸದ ಸಂಗ್ರಹರೂಪ. ಸಂಗ್ರಹ — ಹಂಚಿನಮನಿ ವೀರಭದ್ರಪ್ಪ. ‘ಅಭಿನವ’ – ಚಾತುರ್ಮಾಸಿಕ ಸಂ.೨ ನಂ.೨ ಸಂಪಾದಕರು — ನ. ರವಿಕುಮಾರ, ಮಾಧವ ಐತಾಳ್)