ಬಿ.ವಿ.ಕಾರಂತ

ರಂಗಶಾಲೆ, ರಂಗಮಂದಿರ, ರಂಗಭವನ, ರಂಗನಿಲಯ, ರಂಗಕ್ಷೇತ್ರ — ಇವೆಲ್ಲಕ್ಕಿಂತ ಭಿನ್ನವಾದದ್ದು ರಂಗಮನೆ Mini theatre ಇದನ್ನು ಆತ್ಮೀಯ ರಂಗ, ಕಿರುರಂಗ ಎನ್ನಬಹುದು. ಆಕಾರದಲ್ಲಿ, ವ್ಯವಹಾರದಲ್ಲಿ ಭಿನ್ನತೆಯಿದೆ. ಅಷ್ಟೇ ಅಲ್ಲ, ಸ್ಥಾಪಿತ ರಂಗಶಾಲೆಗೂ ಈ ರಂಗಮನೆಗೂ ಮೂಲಧೋರಣೆಯಲ್ಲಿ ಭಿನ್ನತೆಯಿದೆ.

ರಂಗಮನೆ ಒಂದು ಕೌಟುಂಬಿಕ ಮನೆಯಂತೆ. ಆತ್ಮೀಯ ಜನರ ಕೂಟಕ್ಕೆ ಅನುಕೂಲವಾಗುವಂಥ ಸ್ಥಳ. ಇದರಲ್ಲಿ ನಟ ಮತ್ತು ಪ್ರೇಕ್ಷಕ ಹತ್ತಿರವಾಗುತ್ತಾರೆ. ನಾಟಕದ ಸೂಕ್ಷ್ಮತೆಗಳನ್ನು ಮಾತಿನ ಮುದ್ರೆಯಲ್ಲಿ, ಗತಿವಿನ್ಯಾಸದಲ್ಲಿ ತರಬಹುದು. ಇಂಥ ಸ್ಥಳ ಮನರಂಜನೆಗಿಂತಲೂ ಪ್ರಯೋಗಕೃತಿಯಲ್ಲಿ ಹೆಚ್ಚು ಒತ್ತು ಕೊಡುತ್ತದೆ. ಪ್ರೇಕ್ಷಕ ಸಾಮೀಪ್ಯದಲ್ಲಿ ನಟನ ಸೂಕ್ಷ್ಮ ಚಲನವಲನಗಳಲ್ಲಿ, ನಾಟಕ ಸಾಹಿತ್ಯದ ಆಳವಾದ ವಿವರಣೆ ಕೊಡುವಲ್ಲಿ ಹಾಗೂ ಅಭಿನಯದಲ್ಲಿ ನೈಜತೆ ತರುವಲ್ಲಿ ‘ರಂಗಮನೆ’ ಸಹಕರಿಸುತ್ತಿದೆ. ಇಲ್ಲಿ ಯಾವುದೇ ರೀತಿಯ ಧ್ವನಿವರ್ಧಕದ ಹಾವಳಿಯಿಲ್ಲ. ರಂಗತಾಲೀಮಿಗೆ ಪ್ರತ್ಯೇಕ ಕೊಠಡಿ ಬೇಕಿಲ್ಲ. ಪ್ರವೇಶದರ ಮುಖ್ಯವಲ್ಲ. ಸಾಂಕೇತಕವಾಗಿ ‘ಗೌರವಧನ’ ಮಾತ್ರ. ಇದು ರಂಗಭೂಮಿ ಮತ್ತು ರಂಗಭೂಮಿಗೆ ಸಂಬಂಧಿಸಿದ ಇತರ ಕಲೆಗಳ ಬಗ್ಗೆ ತೋರಿಸುವ ಒಂದು ಗೌರವ ಪ್ರಶಸ್ತಿ. ನಾಟಕ ಸಾಹಿಯದ ಎಲ್ಲ ಪ್ರಕಾರಗಳನ್ನು ಇಲ್ಲಿ ಪ್ರಯೋಗಿಸಲು ಪ್ರಯತ್ನಿಸಬಹುದು. ಪ್ರೇಕ್ಷಕರು ಹತ್ತಿರದಲ್ಲೇ ಇದ್ದು ಅವರ ವಿಮರ್ಶಾ ದೃಷ್ಟಿಯನ್ನು ನೇರವಾಗಿ ಎದುರಿಸಬಹುದು. ರಂಗಮನೆಯಲ್ಲಿ ರಂಗಸ್ಥಳದ ಸ್ಥಾನದಲ್ಲಿ ಆದ ಸೌಲಭ್ಯವೂ ಇದೆ.

ರಂಗಶಾಲೆಗಿಂತಲೂ ರಂಗಮನೆ ಮಿಗಿಲಾದ ಜಾಗೃತರಂಗ. ರಂಗಭೂಮಿಗೇ ರಂಗಭೂಮಿಯನ್ನು ಒದಗಿಸುವಂಥದು. ಇಲ್ಲಿ ಪ್ರೇಕ್ಷಕ, ನಟ — ಈ ಇಬ್ಬರೂ ತಮ್ಮ ತಮ್ಮ ಪಾತ್ರಗಳನ್ನು ಬದಲಾಯಿಸಿಕೊಳ್ಳಬಹುದು. ಬೆಳಕು, ರಂಗ ಹಾಗೂ ವೇಶದ ವಿನ್ಯಾಸಗಳ ಅಬ್ಬರವಿಲ್ಲ. ಸಭಾಂಗಣ ಕತ್ತಲೆಯಿಂದ ಕೂಡಿರುವುದಿಲ್ಲ. ಇದರಿಂದ ನಟ ಮತ್ತು ಪ್ರೇಕ್ಷಕರ ಮುಖ ಒಟ್ಟಿಗೆ ಬೆಳಗುತ್ತದೆ. ನಟನಾ ಸಾಮರ್ಥ್ಯಕ್ಕೆ ಇಲ್ಲಿ ಆದ್ಯತೆ. ಅಭ್ಯಾಸದ ಮೊದಲ ದಿನದಿಂದ ಪ್ರದರ್ಶನದವರೆಗೆ ವ್ಯವಸ್ಥೆ ಕ್ರಮವಾಗಿರುತ್ತದೆ. ಅಡೆತಡೆ ಇಲ್ಲದೆ, ನಾಟಕ ಪ್ರಯೋಗದ ಬೆಳವಣಿಗೆಯನ್ನು ಇಲ್ಲಿ ಚೆನ್ನಾಗಿ ಗುರ್ತಿಸಬಹುದು. ಇಷ್ಟಾದರೂ ರಂಗಮನೆಯಲ್ಲಿ ಇತಿಮಿತಿಗಳಿಲ್ಲದೇ ಇಲ್ಲ.

೧. ವಿರಾಟ್ ಕಲ್ಪನೆಯನ್ನಾಗಲೀ, ಸೀಮಾತೀತ ಕಲ್ಪನೆಯನ್ನಾಗಲಿ ಮೊಟಕುಗೊಳಿಸುತ್ತದೆ.

೨. ಎಲ್ಲ ರೀತಿಯ ನಾಟಕಗಳನ್ನು ಇಲ್ಲಿ ಪ್ರದರ್ಶಿಸಲು ಸುಲಭವಲ್ಲ.

೩. ದೃಶ್ಯದ ಜಾದೂ ಇಲ್ಲದಿರುವುದರಿಂದ ಎಲ್ಲವೂ ನಟನ ಮೇಲೆ (ಪ್ರೇಕ್ಷಕ ಕೂಡ) ಅವಲಂಬಿತವಾಗಿರುತ್ತದೆ.

೪. ದೊಡ್ಡ ಆತಂಕವೆಂದರೆ ಆತ್ಮೀಯತೆಯ ಹೆಸರಿನಲ್ಲಿ ರಂಗಪ್ರಯೋಗ ಖಾಸಗಿ ಪ್ರಯೋಗವೆನಿಸುತ್ತದೆ.

೫. ಪ್ರೇಕ್ಷಕರಿಗೂ ನಟರಿಗೂ ನಾಟಕಕ್ಕಿಂತ ಮೊದಲೇ ಒಂದು ರೀತಿಯ ಪರಸ್ಪರ ಪರಿಚಯದ ನಂಟು ಇರುವುದರಿಂದ ನಾಟಕ ಪ್ರಯೋಗ ಯಾವ ರೀತಿಯ ಸವಾಲನ್ನೂ ಎದುರಿಸುವ ಮನಸ್ಥಿತಿಯಲ್ಲಿರುವುದಿಲ್ಲ.

ಹೀಗಾದರೂ, ರಂಗಮನೆ ತನ್ನದೇ ಆದ ಸಣ್ಣ ಕ್ಷೇತ್ರದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡೂ ಒಂದು ಸಮಗ್ರ ರಂಗ ಆಂದೋಲನಕ್ಕೆ ನಾಂದಿಯಾಗಬಹುದು. ಪ್ರೇರಣೆಯೂ ಆಗಬಹುದು. ಆತ್ಮೀಯತೆಯಲ್ಲಿ ರಂಗಭೂಮಿಯನ್ನು ಹಂಚಿಕೊಳ್ಳುವುದರಿಂದ ಅದಕ್ಕೆ ಒಂದು ಸಾಮಾಜಿಕ ಬದ್ಧತೆ ಬರುವುದಲ್ಲದೆ ಇದು ತಮ್ಮದು ಎಂಬ ಅಭಿಮಾನವನ್ನು ಬೆಳೆಸುತ್ತದೆ. ಆ ಕ್ಷೇತ್ರದಲ್ಲಿನ ಹೊಸ ಹೊಸ ನಟರಿಗೆ, ಹೊಸ ಹೊಸ ನಾಟಕಕಾರರಿಗೆ, ಹೊಸ ಹೊಸ ವಿನ್ಯಾಸಕರಿಗೆ, ಅಂದರೆ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುತ್ತದೆ. ಯಾವುದೇ ಒಂದೂರಿನ ಬೇರೆ ಬೇರೆ ರಂಗಮನೆಗಳ ಜತೆಗೆ ಆರೋಗ್ಯಕರ ಸ್ಪರ್ಧಾಭಾವನೆಯೊಡನೆ ಸದ್ಭಾವನೆ ಬೆಳೆಯಲು ಸಾಧ್ಯವಿದೆ. ನಟನಿಗೂ, ಆ ರಂಗಶಾಲೆಗೂ ಒಂದು ರೀತಿಯ identity ಲಭಿಸುತ್ತದೆ. ಎಲ್ಲ ಕ್ಷೇತ್ರಗಳಲ್ಲು ಒಂದು ಉತ್ತಮವಾದ ಸೇವೆಗಾಗಿ ಪರಿಣಮಿಸುತ್ತದೆ.

ಉದಾಹರಣೆಯಾಗಿ ಕೆಲವು ಅನುಭವಗಳು:

ಅಲ್ಕಾಜಿಯವರು ರಾಷ್ಟ್ರೀಯ ನಾಟಕಶಾಲೆಯ ನಿರ್ದೇಶಕರಾಗಿದ್ದಾಗ ಕೇವಲ ೭೨ ಆಸನಗಳ ರಂಗಮಂದಿರವನ್ನು ನಿರ್ಮಿಸಿದ್ದರು. ಹೊಸ ಪ್ರಯೋಗಗಳ ದಾಳಿ ಇನ್ನೂ ಅಲ್ಲಿ ಆಗಿರಲಿಲ್ಲ. ಅಲ್ಕಾಜಿಯವರಿಗೆ ತಿಳಿದಿತ್ತು; ದೊಡ್ಡ ಥಿಯೇಟರನ್ನು ಕಟ್ಟಿಸಿ ಖಾಲಿರಂಗಶಾಲೆಯಲ್ಲಿ ನಾಟಕ ಆಡುವುದಕ್ಕಿಂತ ಆಸಕ್ತ ವಿದ್ಯಾರ್ಥಿಗಳಿಗೆ, ರಂಗನಿಷ್ಠರಿಗೆ ಇಂಥ ಒಂದು ರಂಗಮನೆಯಿದ್ದರೆ ಒಂದೇ ದಿನ ಅಷ್ಟು ಜನ ಬಂದು ನೋಡುವ ಬದಲು ಹತ್ತು ದಿನ ಬಂದು ಆಸಕ್ತಿಯನ್ನು ಬೆಳೆಸಿಕೊಂಡು ಒಂದು ರೀತಿಯಲ್ಲಿ ರಂಗ ಆಂದೋಲನಕ್ಕೆ ಅದೇ ಖರ್ಚಿನಲ್ಲಿ ಸಹಾಯ ಮಾಡಬಹುದು; ಆಗ ನಟವರ್ಗವೂ ಬಳೆಯುತ್ತದೆ ಎಂಬುದು. ಇಂಥ ಮಿನಿರಂಗವನ್ನು ‘ಸ್ಟುಡಿಯೋ ಥಿಯೇಟರ್’ ಎಂದು ಅಲ್ಕಾಜಿಯವರು ತಿಳಿಸುತ್ತಾರೆ.

ನಮ್ಮ ಹವ್ಯಾಸಿ ರಂಗದಲ್ಲಿ ದೊಡ್ಡ ಸಮಸ್ಯೆಯೆಂದರೆ ನಾವು ಯಾವುದೋ ದೊಡ್ಡ ರಂಗಶಾಲೆಯನ್ನು ನೋಡುತ್ತೇವೆ. ಬುಕ್ ಮಾಡುತ್ತೆವೆ. ಅನಂತರ ನಮ್ಮ ಮನೆಗಳಿಂದ ಸಾಮಾನು ಸರಂಜಾಮುಗಳ ಭಾರವನ್ನು ಹೊತ್ತುಕೊಂಡು ಬಂದು ಸ್ಟೇಜ್‌ ಹಾಕಿ, ಅಭ್ಯಾಸ ಮಾಡಲಿಕ್ಕೂ ಸಮಯವಿಲ್ಲದೆ ಪ್ರದರ್ಶನ ಕೊಡುತ್ತೇವೆ. ಅದು ಒಂದೇ ಪ್ರದರ್ಶನವಾಗುವುದರಿಂದ ನಟ ಬೆಳೆಯಲು ಅವಕಾಶವಿರುವುದಿಲ್ಲ. ನಾನು ನನ್ನ ರೆಪರ್ಟರಿಗಳ ಅನುಭವದಿಂದ ಕಂಡುಕೊಂಡಿದ್ದೇನೆ. ದೆಹಲಿಯಲ್ಲಿ ಯಾವುದೇ ಹೊಸ ನಾಟಕ ನಡೆಯಲಿ, ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಸಹ ನಾಲ್ಕು ಪ್ರದರ್ಶನಗಳು ಸತತವಾಗಿ ಆಗುವುದು ಅನಿವಾರ್ಯ. ಭೂಪಾಲ್ ರಂಗಮಂಡಲದಲ್ಲಿ ಸತತವಾಗಿಎಂಟು ಪ್ರದರ್ಶನಗಳನ್ನು ಮಾಡಿದ್ದುಂಟು. ಇದರಿಂದ ನಟ ತನ್ನ ಅಭಿನಯದಲ್ಲಿರುವ ಏರುಪೇರುಗಳನ್ನು ಚೆನ್ನಾಗಿ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ. ಏಕೆಂದರೆ ಮೊದಲ ದಿನ ನಟನಲ್ಲಿ ಒಂದು ರೀತಿಯ ಭಯ, ಸಭಾಕಂಪವಿರುತ್ತತದೆ. ಎರಡನೆಯ ದಿನ ಸರಿ ತಪ್ಪುಗಳ ಬಗ್ಗೆ ಶೂನ್ಯತೆಯ ಆತಂಕವಿರುತ್ತದೆ. ಮೂರನೆಯ ದಿನ ತನ್ನನ್ನು ತಾನು ವಿಶ್ಲೇಷಿಸಿಕೊಳ್ಳಲು ತೊಡಗುತ್ತಾನೆ. ಇವೆಲ್ಲ ಸಣ್ಣ ರಂಗಭೂಮಿಯಲ್ಲಿ ಸಾಧ್ಯ. ಅಲ್ಕಾಜಿಯವರು ೭೨ ಆಸನಗಳನ್ನು ಮಾಡಿದ್ದರ ಉದ್ದೇಶವೇ ಅದು. ಯಾವುದೇ ನಾಟಕವನ್ನು ೫೦೦ ಜನರ ಒಂದೇ ಸಲ ನೋಡುವುದಕ್ಕಿಂತ ೭ – ೮ದಿನ ನೋಡಲಿ ಎಂಬ ಕಾರಣವಿದ್ದಿತು. ಆಗ ಪ್ರೇಕ್ಷಕರಿಗೂ ಜವಾಬ್ದಾರಿಯಿರುತ್ತದೆ. ಇದನ್ನು ರಂಗಕಲಾವಿದರು ಒಪ್ಪಿಕೊಂಡಿದ್ದಾರೆ.

ವೇದಿಕೆ ಪ್ರೇಕ್ಷಕನಿಗೆ ಹತ್ತಿರವಿರಬೇಕು. ಪ್ರೇಕ್ಷಾಗ್ರಹದಲ್ಲಿ ಆಸನಗಳ ಸಾಲು ೧೫ಕ್ಕಿಂತ ಹೆಚ್ಚು ಇರಬಾರದು. ಬೀಸಣಿಗೆಯ (ಅರ್ಧವೃತ್ತ) ಆಕಾರದಲ್ಲಿ ಆಸನಗಳ ವ್ಯವಸ್ಥೆ ಇರಬೇಕು. ಅಲ್ಕಾಜಿಯವರು ಎಲ್ಲ ರೀತಿಯಲ್ಲಿ ಇಂಥದನ್ನು ಪೂರ್ನವಾಗಿ ಬಳಸುತ್ತಿದ್ದರು. ‘ಕಿಂಗ್ ಲಿಯರ್’ ಅಂತ ನಾಟಕಗಳನ್ನು ಸಹ ಇಲ್ಲಿ ಪ್ರಯೋಗಿಸಲಾಗಿದೆ. ಇಂಥ ನಾಟಕ ಪ್ರಯೋಗಗಳು ಜನಪ್ರಿಯ ಆಗಬೇಕೆಂಬ ಉದ್ದೇಶಕ್ಕಿಮತ ಪ್ರಯೋಗದ ಧೋರಣೆ ಜನರಿಗೆ ಮುಟ್ಟಬೇಕೆಂಬುದು ಮುಖ್ಯಗುರಿ. ಏಕೆಂದರೆ ರಂಗಭೂಮಿಯ ಹೊಸ ಹೊಸ ಪ್ರಯೋಗಗಳು ನಡೆದರೆ ಮಾತ್ರ ರಂಗಭೂಮಿಗೆ ಪರಂಪರೆ ಮತ್ತು ಇತಿಹಾಸ ಲಭಿಸುತ್ತದೆ. ಈ ಅನುಭವ ಕರ್ನಾಟಕದವರಿಗೆ ಹೊಸದೇನೂ ಇಲ್ಲ.

ರಾಷ್ಟ್ರೀಯ ನಾಟಕ ಶಾಲೆಯ ಕಲಾವಿದರಾಗಿದ್ದ ರಣಜಿತ್ ಕಪೂರ್ ನಿರ್ದೇಶಿಸಿದ ಮುಖ್ಯಮಂತ್ರಿ ನಾಟಕ ೧೧೫ ಬಾರಿ ಪ್ರಯೋಗವಾಗಿ ಜನಪ್ರಿಯತೆ ಗಳಿಸಿದೆ. ಈ ಜನಪ್ರಿಯತೆಯನ್ನೂ ಕೆಲವರು ಪ್ರಶ್ನಿಸಬಹುದು, ಇರಲಿ, ಇದರ ವಿಶೇಷವೆಂದರೆ ಅಲ್ಲಿಯ ೭೨ ಆಸನಗಳಲ್ಲಿ ಮುಂದಿನ ಎರಡು ಸಾಲುಗಳನ್ನು ಕಿತ್ತು ಮೊಟಕುಗೊಳಿಸಿ ೫೬ಕ್ಕೆ ಇಳಿಸಿದ ಮೇಲೆ ನಿರಂತರವಾಗಿ ಪ್ರಯೋಗ ನಡೆಯಿತು. ಒಟ್ಟಿನಲ್ಲಿ ಪ್ರೇಕ್ಷಕರ ಸಂಖ್ಯೆ ಕಡಿಮೆ ಎಂದು ಭಾವಿಸಿದರೂ ಕಾಲಕ್ರಮದಲ್ಲಿ ೧೧೫ ಪ್ರದರ್ಶನಗಳಲ್ಲಿ ರಂಗಮನೆ ತುಂಬುಮನೆಯಾಗಿತ್ತು. ತತ್ಪರಿಣಾಮವಾಗಿ ಪ್ರೌಢ ಪ್ರೇಕ್ಷಕರನ್ನು ಹುಟ್ಟುಹಾಕಿದ್ದು ಮುಖ್ಯ.

ಈ ಸಂದರ್ಭದಲ್ಲಿ ವಿದೇಶಗಳಲ್ಲಿರುವ ಥಿಯೇಟರುಗಳ ನೆನಪು ಬರುತ್ತದೆ. ಲಂಡನ್‌ನಲ್ಲಿ National Theatre ಕಟ್ಟಿಸಿದಾಗ ಮೂರು ನಮೂನೆ ಥಿಯೇಟರುಗಳನ್ನು ದೃಷ್ಟಿಯಲ್ಲಿಟ್ಟುಕೊಂಡಿದ್ದರು.

೧. ದೊಡ್ಡ ಸ್ಟೇಜ್ ಹೊಂದಿದ ಥಿಯೇಟರ್ ಸುಮಾರು ೮೦೦ – ೧೦೦೦ ಜನ ಕೂರುವಂಥದು. ಅದರಲ್ಲಿ ವಿಶೇಷವಾಗಿ musical opera ಮಾದರಿಯಿರುವ ಹೊರಗಿನಿಂದ ಬಂದ ತಂಡಗಳಿಗೆ ಕೊಡುವುದಾಗಿತ್ತು.

೨. ಸುಮಾರು ೫೦೦ – ೬೦೦ ಜನ ಕೂರುವಂಥದು. ಸ್ಥಾನೀಯ ವೃತ್ತಿಪರರು ಮಾಡುವ ಜನಪ್ರಿಯ ನಾಟಕಗಳಿಗೆ ಸಂಬಂಧಪಟ್ಟುದು.

೩. ಸಣ್ಣ ಥಿಯೇಟರ್ ಸುಮಾರು ೧೫೦ರಷ್ಟು ಜನರಿಗಾಗಿ.

ರಂಗಾಯಣದಲ್ಲಿ ‘ಭೂಮಿಗೀತ’ ಎಂಬುದಾಗಿ ಮಿನಿ ಥಿಯೇಟರ್ ಮಾಡಲಾಗಿದೆ. ಅದು ಒಂದು ರೀತಿಯಲ್ಲಿ ಮಾಧ್ಯಮ ಹಾಗೂ ಪುಟ್ಟ ಥಿಯೇಟರ್‌ಗೆ ನಡುವಿನದು. ನಮ್ಮ ಉದ್ದೇಶ ಸುಮಾರು ೨೦೦ – ೨೫೦ ಜನ ನೋಡುವಂತಿರಬೇಕು ಎಂಬುದು.

ನಗರ ಸಂಸ್ಕೃತಿಗೆ ಅನುಕೂಲವಾಗುವಂಥ ರಂಗಭೂಮಿ ಎಂದರೆ ಈ ರಂಗಮನೆಯೇ. ವಾಹನ ಸೌಲಭ್ಯಗಳ ಅಭಾವ, ಜನಜಂಗುಳಿ — ಇಂಥ ಇನ್ನಷ್ಟು ಅನಾನುಕೂಲತೆಗಳಿರುವುದರಿಂದ ರಂಗಮನೆಗಳು ಎಲ್ಲ ಬಡಾವಣೆಗಳಲ್ಲಾಗಬೇಕು. ರಂಗಮನೆಯು ಒಂದು ರೀತಿಯಲ್ಲಿ ಹಳೆಯ ಕಾಲದಲ್ಲಿ ಹಳ್ಳಿಗಳಲ್ಲಿದ್ದ  ದೇವಸ್ಥಾನಗಳಂತೆ. ಇಲ್ಲಿ ಎಲ್ಲ ರಸಿಕರು ಬಂದ ಸೇರುತ್ತಾರೆ. ಕಾವ್ಯವಾಚನ ನೃತ್ಯ, ಹರಿಕಥೆ ನಡೆಯುತ್ತಿದ್ದವು. ಈಗ ರಂಗ ಮನೆಗಳಲ್ಲಿ ಕವಿತಾಪಠಣ, ರಂಗಕೃತಿಗಳ ಬಿಡುಗಡೆ, ರಂಗ ಕಾರ್ಯಾಗಾರಾಗಳು — ಇವೇ ಮೊದಲಾದವು ನಡೆಯಲು ಸಾಧ್ಯವಾಗಿದೆ. ಇತ್ತೀಚೆಗೆ ಸಮುದಾಯ ಭವನಗಳು ತಲೆ ಎತ್ತಿದ್ದರೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಬದಲಾಗಿ ಅಲ್ಲಿ ಕ್ರೀಡಾಸ್ಪರ್ಧೆಗಳು ನಡೆಯುತ್ತವೆ. ಇವುಗಳ ಜತೆಗೆ ರಂಗಸಂಬಂಧಿ ಚಟುವಟಿಕಗಳು ನಡೆಯುತ್ತಿದ್ದರೆ ಸಮುದಾಯ ಭವನಗಳಿಗೆ ಅರ್ಥಬರುತ್ತಿತ್ತು.

ರಂಗಮನೆಗಳು ಬಹಳ ಕಡಿಮೆ ಬೆಳಕಿನ ವ್ಯವಸ್ಥೆಯಿಂದ ಕುಡಿದ್ದು ಹೊರ ಆಡಂಬರಗಳಿಂದ ಬಿಡುಗಡೆ ಹೊಂದಬಹುದು, ವಿದೇಶಿಯವಾದ ಫಾಯರ್, ಪ್ಯಾಂಟೀನ್, ಟಿಕೆಟ್‌ಬೂತ್, ರಿಸೆಪ್‌ಶನ್, ಸೀಟ್ ನಂಬರ್, ಗೇಟ್ ಕೀಪರ್ — ಇವುಗಳಿಂದ ಮುಕ್ತಿಹೊಂದಿ ನಮ್ಮ ಸ್ವದೇಶಿ ರಂಗಭೂಮಿ ಬೆಳೆಯಲು ಇಲ್ಲಿ ತುಂಬಾ ಸಾಧ್ಯತೆಯಿದೆ.

ಒಮ್ಮೆ ಡಾ| ತಾರಾನಾಥರ ಆಶ್ರಮಕ್ಕೆ ಬೆಂಗಳೂರಿನ ಒಂದು ರಂಗತಂಡ ಹೋದಾಗ ಅವರು ಹೇಳಿದ ಮಾತುಗಳನ್ನು ಒಂದು ಸಂಚಿಕೆಯಲ್ಲಿ ಓದಿದ ನೆನಪು; ‘ನೀವು ದೊಡ್ಡ ದೊಡ್ಡ ರಂಗಶಾಲೆಗಳಿಗೆ ಹೋಗಬೇಡಿ. ಎಲ್ಲ ರೀತಿಯ ನಾಟಕ ಆಡಬೇಕು ಅಂತಿದ್ದರೆ ಚಿಕ್ಕ ಚಿಕ್ಕ ರಂಗಶಾಲೆಗಳಲ್ಲಾಡಿ ಅಥವಾ ನಿಮ್ಮ ವಠಾರದಲ್ಲಿ, ಆವರಣದಲ್ಲಿ ಒಂದು ರೀತಿಯ ರಂಗಭೂಮಿಯನ್ನು ಕಲ್ಪಿಸಿ’ ಎಂದು ಹೇಳಿದ್ದಾರೆ. ಅಂದು ತಾರಾನಾಥರಿಗೆ ಮಿನಿ ಥಿಯೇಟರ್‌ನ ಕಲ್ಪನೆ ಇಲ್ಲದೇ ಹೋದರೂ ಸಹ ಅವರ ಮನಸ್ಸಿನಲ್ಲಿ ಈ ರೀತಿಯ ರಂಗಮನೆಯ ಆಶಯ ಇದ್ದಿತು ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತದೆ.

ಲಂಡನ್ ಮತ್ತು ಅಮೆರಿಕೆಯಲ್ಲಿ — ನಾನಾ ನೋಡದಂತೆ — ಪ್ರತಿಯೊಂದು ದೊಡ್ಡ ಥಿಯೇಟರ್‌ಜತೆಗೆ ಸಣ್ಣ ಥಿಯೇಟರ್‌ಇದ್ದೇ ಇರುತ್ತದೆ. ಇದು ಯುರೋಪ್‌ನ ಪ್ರೇರಣೆ. ಯುರೋಪಿನಲ್ಲಿ ಸಮಾಜವಾದಿ ವ್ಯವಸ್ಥೆ ಇದ್ದಾಗ ಈ ನಾಟಕಗಳು ಜನಕ್ಕೆ ಹತ್ತಿರವಾಗಬೇಕೆಂದು ದೊಡ್ಡ ದೊಡ್ಡ ಥಿಯೇಟರ್‌ಗಳನ್ನು ಕಟ್ಟಿಸಿದರು. ನಟರು ಅಲ್ಲಿ ದೊಡ್ಡ ದೊಡ್ಡ ನಾಟಕಗಳಲ್ಲಿ ಭಾಗವಿಸುತ್ತಿದ್ದರು; ಹೀಗಾಗಿ ಹೊಸ ನಾಟಕಕಾರರಿಗೆ, ಹೊಸ ನಟರಿಗೆ (ಹೊಸ ಪ್ರೇಕ್ಷಕರಿಗೆ ಕೂಡ) ಅಲ್ಲಿ ಅವಕಾಶವಿರುತ್ತಿರಲಿಲ್ಲ. ಪ್ರಯೋಗಶೀಲ ನಾಟಕಗಳನ್ನು ಮಾಡುತ್ತೇವೆ ಎನ್ನುವಾಗ ದೊಡ್ಡ ದೊಡ್ಡ ಥಿಯೇಟರುಗಳಲ್ಲಿ ಸಾಧ್ಯವಾಗುತ್ತಿರಲಿಲ್ಲ.

ಸಿಂಧುವಳ್ಳಿ ಅನಂತಮೂರ್ತಿಯವರು ಮೈಸೂರು ನಗರದ ಕುವೆಂಪುನಗರ ಬಡಾವಣೆಯಲ್ಲಿ ಒಂದು ಮಿನಿರಂಗಮಂದಿರವನ್ನು ಈಗ್ಗೆ ಹತ್ತು ವರ್ಷಗಳ ಕೆಳಗೆ ಕಟ್ಟಿಸಿದ್ದಾರೆ. ಇದು ‘ಸುರುಚಿ ರಂಗಮನೆ’. ಇದು ಮನೆಯೂ ಹೌದು, ಥಿಯೇಟರೂ ಹೌದು. ಕಾರಣ, ನಾಟಕ ಪರದರ್ಶನದ ದಿನಗಳಲ್ಲಿ ಇಡೀ ಮನೆಯನ್ನೂ ಬಳಸಿಕೊಳ್ಳಲಾಗುತ್ತದೆ. ಸುಮಾರು ನೂರು ಮಂದಿಕುಳಿತುಕೊಳ್ಳುವಂಥ ಥಿಯೇಟರ್ ಇದು. ಇಲ್ಲಿ ನಿಯಮಿತವಾಗಿ ಆಗಾಗ್ಗೆ ಸಂಗೀತ, ರಂಗಕಾರ್ಯಾಗಾರ, ಪುಸ್ತಕ ಬಿಡುಗಡೆ — ಹೀಗೆ ಬಹಳಷ್ಟು ರಂಗಸಂಬಂಧಿ ಕಾರ್ಯಕ್ರಮಗಳು ನಡೆಯುತ್ತವೆ. ಪ್ರಧಾನವಾಗಿ ನಾಟಕ ಪ್ರಯೋಗಗಳು. ನಿಜವಾದ ಮಾತೆಂದರೆ, ಈ ರಂಗಮನೆ ‌ಪ್ರಯೋಗಗಳ ದೃಷ್ಟಿಯಿಂದ ರಂಗಮಂದಿರವನ್ನೂ ಮೀರುವಷ್ಟು ವಿಶಿಷ್ಟ ಪ್ರಯೋಗಗಳನ್ನು ಕಂಡಿದೆ. ಇಲ್ಲಿ ಪ್ರಯೋಗಿಸಿದ ನಾಟಕಗಳಲ್ಲಿ ಕೆಲವು; ‘ಹುಯ್ಯಲವೋ ಡಂಗುವ’, ‘ಸದಾರಮೆ’, ‘ವಂಶವೃಕ್ಷ’, ‘ಹಿಟ್ಟಿನ ಹುಂಜ’, ‘ಬೆಕ್ಕು – ಬಾವಿ’, ‘ಭಗವದಜ್ಜು… ಇವೇ ಮೊದಲಾದವು. ಇಲ್ಲಿ ಪ್ರದರ್ಶಿಸಿದ ನಾಟಕಗಳ ಬಗ್ಗೆ ಪ್ರೇಕ್ಷಕರು ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸಿದುದರಿಂದ ಈ ರಂಗಮನೆಯ ಔಚಿತ್ರ ಇನ್ನೂ ಸ್ಪಷ್ಟವಾಯಿತು. ಇಲ್ಲಿ ಪ್ರಯೋಗಿಸಲಾದ ‘ವಂಶವೃಕ್ಷ’ ನಾಟಕವನ್ನು ನೋಡಿದ್ದೆ. ಹತ್ತಿರ ನೋಡಿದಾಗ ನಟನಿಗಿಂತ ಹೆಚ್ಚಾಗಿ ಪ್ರೇಕ್ಷಕನೇ ಹೆಚ್ಚು expose ಆಗುತ್ತಾನೆ. ನನಗೆ ಆ ಅನುಭವ ಆಗಿತ್ತು. ಆದರೆ ಕಾಲಕ್ರಮೇಣ ಪ್ರೇಕ್ಷಕರ ರೂಪದಲ್ಲಿ ಈ ಭಯ, ಈ ಆತಂಕ ಹೊರಟು ಹೋಗುತ್ತದೆ ಎಂಬ ನಂಬಿಕೆ ನನಗಿದೆ.

ಈ ರಂಗಮನೆಯ ಸ್ಥಾಪಕ ಸಿಂಧುವಳ್ಳಿಯವರಲ್ಲಿ ಛಲವಿದೆ, ನಿಷ್ಠೆಯಿದೆ. ನಾನಿಲ್ಲ ಅವರ ವೈಯಕ್ತಿಕ ಕಾರ್ಯಶೈಲಿಯನ್ನು ವಿಮರ್ಶಿಸುವುದಕ್ಕೆ ಬದಲಾಗಿ ಮೆಚ್ಚಿಕೊಳ್ಳಬೇಕಾದದ್ದು ಈ ರಂಗಮನೆಯ ನಿರಂತರ, ನಿಯಮಿತ ಬಳಕೆಯನ್ನು; ಅಪರೂಪವಾದ ಪ್ರದರ್ಶನಗಳಾಗಿವೆ ಈ ರಂಗಮನೆಯಲ್ಲಿ ಎಂದರೆ ಉತ್ಪ್ರೇಕ್ಷೆಯಲ್ಲ.

ಮೈಸೂರು ನಗರಕ್ಕೆ ಇದೊಂದೇ ಸಾಲದು. ಸರಸ್ವತೀಪುರಂ, ಜಯಲಕ್ಷ್ಮೀಪುರಂ, ವಿದ್ಯಾರಣ್ಯಪುರಂ, ವಿವಿಪುರಂ — ಹೀಗೆ ಎಲ್ಲ ಕಡೆ ಆಗಬೇಕು. ಆಗ ನೀವೆಲ್ಲರೂ ಸಮಗ್ರ ಥಿಯೇಟರ್ ಆಂದೋಲನಕ್ಕೆ ಚಾಲನೆ ಕೊಡಬಹುದು.

ಬೆಂಗಳೂರು, ಧಾರವಾಡ, ಶಿವಮೊಗ್ಗ, ಮಂಗಳೂರು, ಉಡುಪಿ, ಬೆಳಗಾಂ, ಕಾಸರಗೋಡು — ಇಂಥ ಕಡೆಗಳಲ್ಲಿ ಸ್ವಂತ ಮನೆಗಳೇ ಇಂಥ ರಂಗಮನೆಗಳಾಗಿ ಪ್ರಯೋಗಗಳಾಗಿದ್ದುಂಟು. ಈ ದೃಷ್ಟಿಯಿಂದ ಅವರಲ್ಲಿ ನನಗೆ ಅಭಿಮಾನ. ‘ಸುರಚಿ ರಂಗಮನೆ’ ಬಗ್ಗೆಯಂತೂ ತುಂಬಾ ಅಭಿಮಾನ.

‘ಹಯವದನ’, ‘ಸತ್ತವರ ನೆರಳು’, ‘ಜೋಕುಮಾರಸ್ವಾಮಿ’ — ಇಂಥ ಬಹಿರಂಗ ಪ್ರದರ್ಶನಗಳನ್ನು ನಾನು ಈ ವಯಸ್ಸಿನಲ್ಲಿ ನೀಡಿದ್ದರೂ, ನಾಟಕ ಪ್ರಸಾರ ಬೆಳೆಯಲು ಸುರುಚಿ ಅಥವಾ ಇಂಥ ರಂಗಮನೆಗಳು ಮುಖ್ಯ ಎನ್ನುತ್ತೇನೆ. ಆದ್ದರಿಂದಲೇ ನನ್ನ ಒಲುಮೆ.

ಒಟ್ಟಿನಲ್ಲಿ ಹೇಳುವುದಾದರೆ, ಯಾವುದೇ ಕಲೆ ಆಳವಾಗಿ ಬೆಳೆಯಬೇಕಾದರೆ, ವಿಸ್ತಾರವಾಗಿ ಬೆಳೆಯಬೇಕಾದರೆ ಅದು ಕಿರುರೂಪದಲ್ಲಿ ರೂಪಿಸಿಕೊಳ್ಳಬೇಕು ಎಂಬ ತತ್ವದ ಪ್ರಕಾರ ರಂಗಮನೆಗಳು ಒಂದು ರೀತಿಯಲ್ಲಿ ನಾಟಕಕ್ರಿಯೆಗೆ ‘ಗಂಗೋತ್ರಿ’.

(೧೯೪೪)

* * *