ಅಂದ್ರೆ ನಾಯಿ ಹೇಗೆ ಜಗಳ ಆಡತ್ತೆ ಆಗ ಬಾಡಿಲೈನ್ ಹೇಗಾಗತ್ತೆ. ಗೂಳಿ ಹೇಗೆ ಜಗಳ ಆಡತ್ತೆ ಆಗ ಬಾಡಿ ಲೈನ್ ಹೇಗೆ ಆಗತ್ತೆ ಇದು ಡಿಫರೆಂಟ್ ಒಂದು ಈಮೇಜ್. ಆ ರೀತಿಯಲ್ಲಿ ನಾಟಕ ಆಡ್ಬೇಕಾದ್ರೆ ಇಮೇಜ್ ಬರ್ಲೇಬೇಕು. ಬರೀ ಶಬ್ದ ಉಚ್ಚಾರ ಮಾತ್ರವಲ್ಲ. ಇದಕ್ಕೆ ಸೆನ್ಸಿಬಿಲಿಟಿ ಬೇಕಾಗತ್ತೆ. ಆ ಸೆನ್ಸಿಬಿಲಿಟಿ ಇದ್ದಾಗ. ಬಾಡಿನ್ನ, ಜ್ಞಾಪಕಕ್ಕೆ ಇದೆ — Berliner Ensambleದು ಒಂದು ನಾಟಕ. ಬ್ರೆಕ್ಟ್‌ನ ಡೈರೆಕ್ಷನ್. ಅದ್ರಲ್ಲಿ ಒಬ್ಬ ಹಿಟ್ಲರ್‌ನ ಪಾರ್ಟ್‌ಮಾಡ್ತಾನೆ. ಹಿಟ್ಲರ್ ಮನೇಲಿದ್ದು, ಸೋಫಾದ ಮೇಲೆ ನಿಂತ್ಕೊಂಡು, ಭಾಷಣ ಮಾಡೋದು. ನೀವು ನೋಡಿರ್ಬೇಕು. ಎಷ್ಟೋ ಸಲ. ಅವ್ನು ಕನ್ನಡಿ ಮುಂದೆ ನಿಂತ್ಕೊಂಡು ಭಾಷಣ ಮಾಡೋದನ್ನ ಅಭ್ಯಾಸ ಮಾಡ್ತಾ ಇದ್ನಂತೆ. ಮುಖ ಹೀಗೆಲ್ಲಾ ಮಾಡಿ, ಕೈಯೆಲ್ಲಾ twist ಮಾಡಿ. ನಮ್ಮಲ್ಲಿ ಎನ್. ಟಿ ರಾಮರಾವ್ ಸ್ವಲ್ಪ ಹಾಗೆ ಮಾಡ್ತಾರೆ.. ಬಟ್ ನಾನು ಆಕ್ಟರ್‌ಗೆ ಹೇಳ್ತಾ ಇರೋದು. ಆಕ್ಟರ್ ಭಾಷಣ ಮಾಡ್ತಾ ಮಾಡ್ತ ಪಟಕ್ ಅಂತ ಬಿದ್ದು ಬಿಟ್ಟ. ಬಿದ್ದುಬಿಟ್ಟು ಒಂದು ಪಲ್ಟಿ ಹೊಡ್ದ್ರ ಮತ್ತೆ ಸೋಫಾಮೇಲೆ ನಿಂತು ಕಂಟಿನ್ಯೂ ಮಾಡ್ದ. ಆಕ್ರೋಬೆಟಿಕ್ಸ್ ಅವ್ನಿಗೆ ಗೊತ್ತಿತ್ತು! ನಿಜವಾಗಿಯೂ ನೋಡಿದ್ರೆ ನಮ್ಮಲ್ಲಿ ನಟ ಅಂತ ಒಂದು ಶಬ್ದ ಬಂದಿದ್ದು ಹಾಗೇನೇ. ದೊಂಬರಾಟದಲ್ಲಿ ನಟ ಅಂತ ಒಂದು ಶಬ್ದ ಇದೆ. ಬರ್ತಾ ಬರ್ತಾ ಬರ್ತಾ ಅವ್ನಲ್ಲಿ ಆ ಸೆನ್ಸಿಬಿಲಿಟಿ ಹೋಯ್ತು. ಕೊನೆಗೆ ನಟ ಮಾತ್ರ ಉಳ್ಕೊಂಡ. ಇವತ್ತು ಪ್ರೊಫೆಶನಲ್ ಆಕ್ಟರ್ ಈ ಮೊದಲು ಎರಡು ಮಾಧ್ಯಮಗಳ ಮೇಲೆ ಕಂಪ್ಲೀಟ್ ಕಮಾಂಡ್ ಬಂದ್ಮೇಲೆ ತಲೆಯಿಂದಲೂ ಯೋಚನೆ ಮಾಡ್ಬೇಕು. ಆಗ ಗೊತ್ತಾಗತ್ತೆ — – ಪ್ರೊಫೆಶನಲ್ ಥಿಯೇಟರ್ ಕೇವಲ ಒಂದು ಹವ್ಯಾಸ ಮಾತ್ರವಲ್ಲ. ಅದು ಒಂದು ರೀತಿಯಲ್ಲಿ ಫಿಲಾಸಫಿ ಕೂಡ ಅಂತ. ಅದಕ್ಕೊಂದು ದರ್ಶನ ಬೇಕಾಗತ್ತೆ. ನಾನು ಯಾಕೆ ಆ ರೋಲ್ ಮಾಡ್ತಾ ಇದ್ದೀನಿ. ಅಥವಾ ಆ ನಾಟಕನ್ನ ಯಾಕೆ ತಗೊಂಡಿದ್ದೀನಿ ಅನ್ಬೇಕಾಗತ್ತೆ. ನಾಟಕ ಸುಮ್ನೆ ತಗೊಂಡಿದ್ದು ಅಲ್ಲ. ಇಂಡಿಯನ್ ಬ್ಯಾಕ್‌ಗ್ರೌಂಡ್‌ನಲ್ಲಿ ನಮ್ಮದೊಂದು ಹಾಬಿ ಕೂಡ ಒಪ್ಕೊಳ್ಳೋಣ. ಒಂದು ಮಿಶನ್ ಕೂಡ. ಆಮೇಲೆ ಪ್ರೊಫೆಶನಲ್ ಆಗತ್ತೆ.

ನಾನು ಈ ಮೂರನ್ನೂ ಯಾಕೆ ಹೇಳ್ತೀನಿ ಅಂತಂದ್ರೆ, ನಮ್ಮಲ್ಲಿ ಹಾಬಿ ಅಂತಂದ್ರೆ ಬಹಳ ಕೆಟ್ಟ ಶಬ್ದ ಅಂದ್ಕೊಂಡಿದ್ದಾರೆ. ಒಂದೊಂದು ಸಲ ವಿಶೇಷವಾಗಿ ಅಮೆಚ್ಯುರ್ ಥಿಯೇಟರ್‌ನಲ್ಲಿ ರಿಹರ್ಸಲ್ ಮಾಡ್ತಾ ಇದ್ರೆ — ಯಾಕೆ ಲೇಟ್ ಬಂದ್ರೀ ನೀವು? ಹೀಗೆಲ್ಲಾ ಮಾಡೋದಾದ್ರೆ ನಾಳೆಯಿಂದ ಯಾಕೆ ಬರ್ಬೇಕು. ಅಂತ ರೇಗಿದ್ರೆ ಸಾಕು ಅವ್ನು, ‘ಸ್ವಾಮಿ, ನಂದು ಹಾಬಿ ಅಂತ ಬಂದಿದ್ದೀನಿ! ಅಂದ್ರೆ ‘ನಾನು ನಿಮ್ಗೆಲ್ಲಾ ಉಪ್ಕಾರ ಮಾಡ್ತಾ ಇದ್ದೀನಿ’ ಅಂತಂದ ಹಾಗೆ. ಅದ್ರೆ ಆಶ್ಚರ್ಯ ಆಗತ್ತೆ ಹಾಬಿ ಅಂದ್ರೆ ನಿಜವಾಗಿಯೂ ಆ ತರಹ ಅಲ್ಲ. ಇವತ್ತು ನೀವು ಹಾಬಿ ಬಗ್ಗೆ ಹಾಬಿ ಇರೋರ ಹತ್ರ ಒಂದು ಸಲ ಕೇಳಿ. ಯಾರಾದ್ರೂ ಒಬ್ನಿಗೆ ವಾಕಿಂಗ್ ಸ್ಟಿಕ್ ಕಲೆಕ್ಟ್ ಮಾಡುವ ಹಾಬಿ ಇದ್ಬಿಟ್ರೆ, ಅವ್ನು ಎಷ್ಟು ಹುಚ್ಚುನಾಗ್ತಾನೆ ಅಂತಂದ್ರೆ, ಒಬ್ಬ ಕೊಡ್ದೇ ಹೋದ್ರೆ ಅವ್ನು ಕದ್ದಾದ್ರೂ ತರ್ತಾನೆ. ಅದು ಹಾಬಿ. ಹಾಗಿ ಅಂತಂದ್ರೆ ಅದು ಕಂಪ್ಲಿಟ್ಲಿ ನಿಮ್ಮ ಚಾಯ್ಸ್ ಯಾವುದ್ರ ಮೇಲೆ ಹೇರಿದ್ದಲ್ಲ. ಆದ್ರಿಂದ ಪ್ರೊಫೆಶನಲ್ ಥಿಯೇಟರ್ ಆಗ್ಬೇಕಾದ್ರೆ, ಮತ್ತೆ ಬೆಳೀಬೇಕಾದ್ರೆ ಅದು ಹಾಬಿ ಆಗಿ ಬೆಳೀಬೇಕು.

ಎರಡನೇಯದು ಒಂದು purpose ಬೇಕಾಗತ್ತೆ. ಒಂದು ಮಿಶನ್  ಬೇಕಾಗತ್ತೆ. ಯಾಕೇಂದ್ರೆ ನಾವು ಮಿಶನ್ ಇಲ್ದಿದ್ರೆ ಏನು ಅಂತ ಮಾಡೋದು, ಯಾಕೆ ಅಂತ ಮಾಡೋದು? ಯಾರ್ದೋ ಕೈಗೊಂಬೆ ಆಗಿ ಹೋಗ್ಬಿಡ್ತೀವಿ. ಅದಕ್ಕೋಸ್ಕರ ಒಂದು ಕ್ಲಿಯರ್ purpose ಬೇಕಾಗತ್ತೆ. ಕ್ಲಿಯರ್ ಐಡಿಯಾ ಬೇಕಾಗತ್ತೆ. ಅದಾದ್ಮೇಲೆ ಪ್ರೋಫೆಶನ್. ಪ್ರೊಫೆಶನ್ ಅಂದ್ರೆ ಈ ಕಮಾಂಡ್. ಆ ರೀತಿಯಲ್ಲಿ ನಾನು ನಿಜವಾದ ಅರ್ಥದಲ್ಲಿ ಪ್ರೊಫೆಶನ್ ಥಿಯೇಟರ್ ಬೆಳ್ಸೋಕೆ ಸಾಧ್ಯವಿದೆ. ಮತ್ತೆ ಮತ್ತೆ ಒತ್ತೊತ್ತಿ ಹೇಳ್ತಾ ಇರ್ತೀನಿ. Observation ಮತ್ತೆ ಓದೋದು — ಇದು ಬಹಳ ಇಂಪಾರ್ಟೆಂಟ್ ಆಗತ್ತೆ. ಅಷ್ಟೇ ಅಲ್ಲ, ಆ ದೃಷ್ಟಿಯಲ್ಲಿ ನಮ್ಮ specch ಲೆವಲ್‌ಗಳು ಕೇವಲ ಬರಿ ಮಾತಿನಲ್ಲಿ ಮಾತ್ರವಲ್ಲ, ಇನ್ನು ಎಷ್ಟೋ ಲೆವಲ್‌ಗಳಿವೆ ಬೇಕಾದ್ರೆ ಮ್ಯೂಸಿಕ್ ಬೇಕಾಗತ್ತೆ. ಡ್ಯಾನ್ಸ್ ಬೇಕಾಗತ್ತೆ. ಅಥವಾ ಉಳಿದ ಮಾಧ್ಯಮಗಳು ಕೂಡ ಗೊತ್ತಾಗುತ್ತೆ. ಉಳಿದ ಮಾಧ್ಯಮಗಳಿಂದ ನಾನು ಕಲಿಯೋದು ಮಾತ್ರವಲ್ಲ, ಆ ಮಾಧ್ಯಮಕ್ಕೂ ಕೂಡ ಹೆಲ್ಪ ಮಾಡ್ತೇವೆ. ಒಂದು ಉದಾಹರಣೆ : ಭೀಮ್‌ಸೇನ್ ಜೋಶಿ ಹಾಡ್ತಿರಬೇಕಾದ್ರೆ ಕೈಯನ್ನು ಯಾಕಿಷ್ಟು ಅಲ್ಲಾಡಿಸ್ತಾನೆ? ಒಂದು, ಬಹುಶಃ abstract concrete ಮಾಡ್ತಾರೆ ಅಂತ ಹೇಳ್ಬೋದು. ಆದ್ರೆ ಕಾಂಕ್ರಿಟ್ ಮಾಡ್ತಾರೆ ಅಂತ ಹೇಳಿದ್ರೂ ಕೂಡ, ಆ ಕೈಯನ್ನ ಮೇಲಿಂದ ಕೆಳಗೆ ಇಳಿಸೋದು — ಒಂದು ರೀತಿಯಲ್ಲಿ ಇದನ್ನು ಕೊಟ್ಟದ್ದು ಥಿಯೇಟರ್ ಅಷ್ಟೇ ಅಲ್ಲ. ಥಿಯೇಟರ್‌ಲಿ ಒಂದು ಸಂಗತಿ ಹೇಳೋದೇ ಆಗ್ಲಿ — ಮರುಗೇಲರಾ  ಓ ರಾಘವಾ ಅಂತ ಒಂದಿದ್ರೆ; ಮರು ಗೇಲರಾ ಓ ರಾಘವಾ ಹೀಗೆ ನಾಲ್ಕೈದು ಸಲ ಏಳೆಂಟು ತರಹ ಹೇಳ್ತಾರೆ. ಗುಬ್ಬಿ ಕಂಪೆನಿಯಲ್ಲಿ ವರದಾಚಾರ್ ಹಾಡ್ತಿರಬೇಕಾದ್ರೆ — ‘ನಾಗವೇಣಿ ನಗರಿಗೆ ಹೋಗಿ ಬರುವೆ ನಾ’ ಅಂತ ಏಳು ತರಹದಲ್ಲಿ ಹೇಳ್ತಿದ್ರು ‘ಇವಳ್ಯಾರೀ ತರುಣೀಮಣೀ’ ಅಂತನ್ನ ಬೇಕಾದ್ರೆ ಹತ್ತು ತರಹ ಹೇಳ್ತಿದ್ರು. ಇಲ್ಲಿ ಕೇವಲ ಸಂಗಿ ಮಾತ್ರವಲ್ಲ, ಅರ್ಥದಲ್ಲಿದೆ. ಆದ್ದರಿಂದ ಆಬ್ಸರ್ವೇಶನ್‌ಆದ್ಮೇಲೆ ಇಂಪ್ರೂವೈಸ್ ಮಾಡ್ಬೇಕಾಗತ್ತೆ. ಇಂಪ್ರೂವೈಶನ್. ನಮ್ಮಲ್ಲಿ ಅದಕ್ಕೆ ಇವತ್ತು ಡೈರೆಕ್ಟರ್ ಬಗ್ಗೆ ಹೆಚ್ಚೆನೂ ಮಾತಾಡೋದಿಲ್ಲ. ನಂಗೇ ಅನ್ನಿಸ್ತು ಡೈರೆಕ್ಟರ್ ಆಗಿ ಏನೂ ಪ್ರಯೋಜನ ಇಲ್ಲ ಅಂತ್ಹೇಳಿ. ಯಾಕೇಂದ್ರೆ ಡೈರೆಕ್ಟರ್ ಆಗಿ ಅಂತಾದ್ನ ನಾವು ಕ್ರಿಯೇಟ್ ಮಾಡೋದಿಲ್ಲ.

ನಿಜವಾಗ್ಲೂ ಆಕ್ಟರ್ ಮೇಲೆ ನಂಬಿಕೆ ಇರ್ಬೇಕು. ಇದಕ್ಕೆ ಮತ್ತೆ ಸ್ತಾನಿಸ್ಲಾವ್‌ಸ್ಕಿ ಉದಾಹರಣೆ ಬರತ್ತೆ. ಅವ್ರು ಮೊದ್ಲು ಡಿಕ್ಟೇಟ್ ಮಾಡ್ತಿದ್ರಂತೆ — ಹಾಂ, ಒಂದು ಹೆಜ್ಜೆ ಮುಂದೆ ಬಾ. ನೋ, ನೋ, ನೋ. ಅಷ್ಟು ಲಾಂಗ್ ಹೆಜ್ಜೆಗಳಲ್ಲ. ಸಣ್ಣ ಹೆಜ್ಜೆಗಳು ಬೇಕು. ಹೀಗೆಲ್ಲಾ ಅವ್ರು ಮೊದ್ಲು ಡಿಕ್ಟೇಟ್ ಮಾಡ್ತಿದ್ರಂತೆ. ಬರ್ತಾ ಬರ್ತಾ ಕೊನೇ ಗಳಿಗೆಯಲ್ಲಿ ಅವ್ರು ಹೇಳಿದ್ರು — ಡೈರೆಕ್ಟರ್ ಈಸ ಓನ್ಲಿ ಆ prompter ಅಂತ – ಕಾರಣ ಇಷ್ಟೇನೇ. ಅವ್ನು ಇದನ್ನ ಸ್ಟೂಡೆಂಟ್ಸ್‌ಗಳಿಂದ ಕಲ್ತಿದ್ದು. ಒಂದು ಸಣ್ಣ ಸಮಸ್ಯೆ ಇತ್ತು. ಸಮಸ್ಯೆ ಏನಂತಂದ್ರೆ — ಮಗ ಎಲ್ಲೋ ಕಳ್ಳತನ ಮಾಡಿದ್ದಾನೆ. ಮಗ ಕಳ್ತನ ಮಾಡಿದ್ದು ಅಪ್ಪನಿಗೆ ಗೊತ್ತಾಗ್ಬಿಟ್ಟಿದೆ. ಅಪ್ಪನಿಗೆ ಗೊತ್ತಾಗಿದೆ ಅನ್ನೋದು ಮಗನಿಗೆ ಗೊತ್ತಾಗಿದೆ, ಮಗನಿಗೆ ಗೊತ್ತಾಗಿದೆ ಅನ್ನೋದು ಅಪ್ಪನಿಗೆ ಗೊತ್ತಾಗಿದೆ. ಇದು complicated ಅಂದ್ರೆ ಇಬ್ರಿಗೂ ಗೊತ್ತಾಗಿದೆ. ಇಬ್ರಿಗೂ ಗೊತ್ತಾದಾಗ ಒಬ್ಬನ್ನೊಬ್ರು ಭೇಟಿ ಮಾಡೋದು ಹೇಗೆ? ಇಲ್ಲಿ ಸಮಸ್ಯೆ ಇಷ್ಟೆ. ಆಕ್ಟಿಂಗ್ ಅಂದ್ರೆ ಯಾವ ರೀತಿಯಲ್ಲಿ ತಾನೀಗ ಮೊದ್ಲು face ಮಾಡ್ಬೇಕು? ನಾನು ಕಳ್ತನ ಮಾಡಿದ್ದು ಅಪ್ಪನಿಗೆ ಚೆನ್ನಾಗಿ ಗೊತ್ತಿದೆ. ನಂಗೊತ್ತಿದೆ ಅಂತ ಕೂಡ ಅವ್ರಿಗೆ ಗೊತ್ತಿದ್ದು ಕೂಡ, ಇಷ್ಟೆಲ್ಲಾ ಮಾಡ್ಬೇಕಾದ್ರೆ ಏನಾದ್ರೂ ವರ್ಕ್‌ಔಟ್ ಮಾಡ್ಬೇಕಾಗತ್ತೆ. ಅದನ್ನ ಯಾವ ಸ್ಟೂಡೆಂಟ್ ಮಾಡಿದ್ನೊ ಒಂದು ದಿವ್ಸ ಬರ್ಲಿಲ್ಲ. ಬರ್ದಿದ್ದಾಗ ಹಾಗಾದ್ರೆ ಮುಂದೆ ಹೋಗೋಣ ಅದ್ನ ಬಿಟ್ಟು ಬಿಡೋಣ ಅಂತಂದ್ರು. ಆಗೊಬ್ಬ ಸ್ಟೂಡೆಂಟ್ ನಾನು ಮಾಡ್ತೀನಿ ಅಂತಂದ. ಅವ್ನು ಮಾಡ್ದ. ಆದ್ರೆ ಡಿಫರೆಂಟ್ ಆಗಿ ಮಾಡ್ದ. ಎಲ್ಲೂ ಕೂಡ ಮೂಲ ಅರ್ಥಕ್ಕೆ ಏನೂ ತೊಂದ್ರೆ ಆಗ್ಲಿಲ್ಲ. ಆಗ ಅರ್ಥ ಏನಾಯ್ತು — ಆಕ್ಟರಲ್ಲಿ ನಮ್ಗೆ ನಂಬಿಕೆ ಮೊದ್ಲು ಇರ್ಬೇಕು ಅಂತ್ಹೇಳಿ. ಇವತ್ತಿನ ಸ್ಥಿತಿಯಲ್ಲಿ ನಮ್ಮ ಇಂಡಿಯನ್ ಆಕ್ಟರ್ಸ್‌ಗಳಲ್ಲಿ ವಿಶ್ವಾಸ ಇಡೋಕೆ ಆಗತ್ತಾ?

ನಮ್ಮಲ್ಲಿ ಆಕ್ಟರ್ ಅನ್ನೋರೇ ನಿಜವಾಗಿ ಇಲ್ಲ. ಅದಕ್ಕೆ ಹೇಳ್ತಾರೆ ಆಕ್ಟಿಂಗ್ ಬಗ್ಗೆ ನಾವಿವತ್ತು ಮಾತಾಡೋದೆಲ್ಲಾ ಒಂದು ರೀತಿಯಲ್ಲಿ admiration ದೃಷ್ಟಿಯಲ್ಲಿ ಮಾತಾಡ್ತೀವೇ ಹೊರ್ತು, appreciation ದೃಷ್ಟಿಯಲ್ಲಿ ಮಾತಾಡ್ತೀವೇ ಹೊರ್ತು, understanding ಆಗಿ ಮಾತಾಡೋದಿಲ್ಲ. ಒಂದು ಕಾದಂಬರಿನ್ನ ಒಬ್ರು ಬರ್ದುಬಿಟ್ರೆ ತಕ್ಷಣ ಬರ್ದುಬಿಡ್ತೀವಿ — ಇವ್ರು ಎಲ್ಲಿಗೆ, ಇವ್ರ ಅನುಭವಗಳೇನು, ಇವ್ರು ಯಾರ್ಯಾರಿಂದ ಕಲ್ತಿದ್ದಾರೆ, ಎಲ್ಲೆಲ್ಲಿ ಇದ್ರು — ಇವ್ರ ಜೀವನ ಬಗ್ಗೆ ಪೂರ ವಿವರ, ಪೂರ ಕತೇನೆಲ್ಲಾ ಹೇಳ್ತೀವಿ. ಆಕ್ಟರ್ ಬಗ್ಗೆ ಎಲ್ಲಿಯಾದ್ರೂ ಹಾಗೆ ಹೇಳಿದ್ದು ಜ್ಞಾಪಕ ಇದ್ಯಾ ನಿಮ್ಗೆ? ಹಾಗೆ ನಾವು ಎಂದೂ ಹೇಳೋಲ್ಲ. ಹೆಸ್ರು ಹೇಳ್ಬೇಕಾದ್ರೆ ಒಂದು ವಿಜಯ ಮೆಹ್ತಾ ಅಂತ ಹೇಳ್ತಿವಿ, ಶಂಭುಮಿತ್ರ ಅಂತ ಹೇಳ್ತೀವಿ ಅಥವಾ ಲಾಗೂನ ಹೆಸ್ರನ್ನ ಹೇಳ್ತೀವಿ, ಕನ್ನಡದ ಸಿಂಹ ಮುಂತಾದ ಒಂದು ನಾಲ್ಕೈದು ಜನರ ಹೆಸ್ರನ್ನ ಹೇಳ್ತೀವಿ. ನಿಜವಾಗ್ಲೂ ನಾನು ಆಕ್ಟರ್ ಬೆಳ್ದಿಲ್ಲ ಅಮತ ಅಂದಾಗ ತಪ್ಪು ತಿಳ್ಕೊಂಡು ಬಿಟ್ರು ಬೆಂಗ್ಳೂರಿನಲ್ಲಿ. ನಾನು ಹೇಳಿದ್ರ ಅರ್ಥ — ಆಕ್ಟರ್ ಬೆಳ್ದಿಲ್ಲ ಅಂದ್ರೆ, ಅಲ್ಲೇ ಇದ್ದೀವಿ. ಇನ್ನು ಮುಂದೆ ಬೆಳೀಬೇಕಾದ್ರೆ, ನಿಜವಾಗಿಯೂ ಟ್ರೇನಿಂಗ್ ಬೇಕು. ಪರಿಣತಿ ಬೇಕು. ಈ ಮೂರು ಮಾಧ್ಯಮಗಳ ಮೇಲೆ ಪೂರ ಹಿಡಿತ ಇರ್ಬೇಕು. ನಿಜವಾಗಿಯೂ ಹೇಗೆ ಡಾಕ್ಟರ್ ಬಗ್ಗೆ ಭಯ ಹುಟ್ಟುತ್ತೋ ಅಥವಾ ವಕೀಲರ ಬಗ್ಗೆ ಹುಟ್ಟುತ್ತೋ, ಹಾಗೇ ಆಕ್ಟರ್ ಬಗ್ಗೆ ಭಯ ಹುಟ್ಟಬೇಕು. ಅಂದ್ರೆ ಅರ್ಥ ನಾನ್ಹೇಳಿದ್ದು — ಇದು ಆಕ್ಟರ್‌ನಿಂದಲೇ ಸಾಧ್ಯ ನನ್ನಿಂದ ಸಾಧ್ಯವಿಲ್ಲಪ್ಪಾ ಅಂತ. ಇಲ್ಲಾಂದ್ರೆ ಎಲ್ಲರೂ ಯಾರು ಬೇಕಾದ್ರೂ ಆಕ್ಟ್ ಮಾಡ್ಬೋದು ಅಂತ ಆಗ್ಬಿಡತ್ತೆ. ಆದ್ರಿಂದ ಆಕ್ಟಿಂಗ್ ಮಾಧ್ಯಮದ ಬಗ್ಗೆ ನಮ್ಗೆ ಪ್ರಾಬ್ಲೆಮ್ ಆಗೋದೇಏ. ಇವತ್ತು ಕೂಡ ನಾಟಕಕ್ಕೆ ದುಡ್ಡಾ?  ಹೋಗಾ, ಹೋಗಾ. ಮನೆಮನೆಗೆ ಹೋಗಿ ಟಿಕೇಟ್ ಮಾರ್ಬೇಕಾಗತ್ತೆ. ಏನು ಪ್ರಾಬ್ಲೆಮ್ ಅಂತಂದ್ರೆ, ನಾವು ನಮ್ಮ ಮಾಧ್ಯಮದ ಬಗ್ಗೆ ಆ ಗಾಂಭಿರ್ಯ ನಮ್ಮಲ್ಲಿ ಉಳಿಸ್ಕೋಲಿಲ್ಲ. ಅದಕ್ಕೆ ಪ್ರೊಫೆಶನಲ್ ಥಿಯೇಟರ್ ಬೇಕೇ ಬೇಕಾಗತ್ತೆ. ಎಲ್ರೂ ಆಗೋಕ್ಕೆ ಆಗೋಲ್ಲ. ನಿಜ. ಅದೊಂದು ಸ್ಟಾಂಡರ್ಡ್‌ಅಂತ ಕ್ರಿಯೇಟ್ ಮಾಡ್ಬೇಕಾಗತ್ತೆ. ಥಿಯೇಟರ್ ಮಾಡಿದ್ರೇನೇ ಅದರ ಪ್ರಭಾವ  slowly ಬೇರೆಯವರ ಮೇಲೆ ಬೀಳತ್ತೆ. ಅದಕ್ಕೇ ಹೇಳಿದ್ದು, ಒಂದು ದೃಷ್ಟಿಕೋನ ಅಥವಾ approach ಅಥವಾ ಫಿಲಾಸಫಿ ಇಲ್ದೇ ಹೋದ್ರೆ, ನಾನು ಮಾತಾಡೋದು ಬರೀ ನಾಟಕ; ಅಂದ್ರೇ ಮನಸ್ಸು ಮುಳುಗಿ, ತನ್ಮಯ ಆಗಿ ಹೋಗ್ಬೇಕು. ಹೀಗೆಲ್ಲಾ ನಾವು ಒಂದೊಂದು ಸಲ ಹೇಳ್ತೀವಿ. ಮಾತಾಡ್ತೀವಿ. ಯಾರಾದ್ರು ಒಬ್ಬ ಆಕ್ಟರ್‌ನ್ನ ಕೇಳಿದ್ರೆ — ಅದು ಹೇಗೆ ಮಾಡ್ತೀರಿ? ನಿಮ್ಗೆ ಅಳು ಹೇಗೆ ಬಂತು? — ಅಂತಂದ್ರೆ? ಅಲ್ಲಿ ತನ್ಮಯ ಆಗ್ಬಿಡ್ಬೀನಿ, ತಾನಾಗಿ ಕಣ್ಣಲ್ಲಿ ನೀರು ಬಂದ್ಬಿಡುತ್ತೆ ಅಂತಾ ಹೇಳ್ತಾನೆ. ತಾನಾಗಿ ಬರೋಲ್ಲ. ಕಮಾಂಡ್ ಇದೆ ಕಣ್ಣೀರಿಗೆ ಬರೋದಿಕ್ಕೆ. ಆ ಕಮಾಂಡ್ ಅನ್ನೋದೇ ಮುಖ್ಯ. ಯಾವಾಗ ಬೇಕೋ ಕಣ್ಣಲ್ಲಿ ನೀರು ಬರುತ್ತೆ ಯಾವಾಗ ಬೇಡ್ವೋ ಆವಾಗ ಕಣ್ಣೀರು ಬರೋದಿಲ್ಲ. ಹಾಗೆ ಆಗ್ಬೇಕಾದ್ರೆ, ಅದು ತನ್ಮಯತೆಯಿಂದೆಲ್ಲಾ ಬರೋದಿಲ್ಲ. ನಿಜ ತನ್ಮಯತೆ ಆಗ್ಬಿಟ್ರೆ ನರಸಿಂಹ ಬಂದ್ಬಿಟ್ಟು, ಹಿರಣ್ಯಕಶಿಪುನ ಹೊಟ್ಟೆ ಸೀಳಿ ಹಾಕಿ ಬಿಡ್ತಾನೆ ಅಷ್ಟೆ. ಅದಕ್ಕೇ ಹೇಳೋದು ಅಲ್ಲಿ ಆಕ್ಟರ್ ನಿಜವಾಗಿಯೂ ತನ್ನನ್ನ ತಾನೇ ಆಬ್ಸರ‍್ವ್ ಮಾಡಿಕೊಳ್ತಾನೆ. ತನ್ನನ್ನ ಅಬ್ಸರ‍್ವ್ ಮಾಡಿಕೊಳ್ಳೋದೆ important. ಅದು ಕೇವಲ  professionalist ಆದ್ರೆ ಮಾತ್ರ ಸಾಧ್ಯ.

ಅಂದ್ಮೇಲೆ, ಪ್ರೊಫೆಶನಲ್ ಥಿಯೇಟರ್ ಅಂದ್ರೆ ಇನ್ನೂ ದೊಡ್ಡ ಪ್ರೊಫೆಶನ್ ಅಂತ ಯಾವಾಗ ಹೇಳ್ತೀವಿ ಅಂದ್ರೆ — ಒಂದು ರೀತಿಯಲ್ಲಿ ಅವ್ನೇ ಒಂದು ಶಾಸ್ತ್ರ ಆಗ್ಬಿಡ್ತಾನೆ. ಅವ್ರು ಭರತ ಮುನಿನೇ ಆಗ್ಬಿಡ್ತಾನೆ. ಅಲ್ಲಿ ನಾನು ಆ ಪಾರ್ಟನ್ನ ಹೇಗೆ ಮಾಡ್ದೇ, ಈ ಪಾರ್ಟ್‌ನ್ನ ಹೇಗೆ ಮಾಡ್ದೇ ಅಂತಲ್ಲ. ಅವ್ನಿಗೆ ಗೊತ್ತಾಗತ್ತೆ ಒಂದು ಶೇಕ್ಸಪಿಯರ್‌ನ ಹ್ಯಾಮ್ಲೆಟ್‌ಗೆ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಏನೇನು approach ತಗೋಬೇಕಾಗಿ ಬಂತು. ಲಾರೆನ್ಸ್ ಬಗ್ಗೆ ಹೇಳ್ತಾರೆ, ಒಥೆಲೋ ಮಾಡ್ಬೇಕಾದ್ರೆ ಅವ್ನಿಗೆ ಡಬಲ್ ಚಿನ್ ಬೇಕಾಯ್ತಂತೆ. ಅಂದ್ರೆ ಒಥೆಲೋ ಮಹಾ ಶಕ್ತಿಶಾಲಿ, ಯುದ್ಧ ಮಾಡೋನು. ಡಬಲ್‌ಚಿನ್ ಹೇಗೆ ಬರತ್ತೇ? ಆ ಡಬಲ್ ಚಿನ್‌ಗೋಸ್ಕರ ಅವ್ನು ಆರು ತಿಂಗ್ಳು  weight lift ಮಾಡಿದ್ನಂತೆ. ಒಂದು ತಿಂದು ಡಬಲ್ ಚಿನ್ ಬೆಳ್ಸಿದ್ನಂತೆ. ಇಂಡಿಯಾದಲ್ಲಿ ಹಾಗೆ ಸಾಧ್ಯವಿಲ್ಲ. ಯಾಕೇಂದ್ರೆ ಯುರೋಪಿನ್ ಕಂಟ್ರೀಸ್‌ನಲ್ಲಿ ಜೀವನವೆಲ್ಲಾ ಇಪ್ಪತ್ತೈದು ರೋಲ್ ಸಿಕ್ಬಿಟ್ರೆ ಸಾಕು ಅಂತ ಹೇಳ್ತಾರೆ. ವಿಶೇಷವಾಗಿ ಇಂಗ್ಲೀಷ್ ಆಕ್ಟರ್‌ಗಳು ಹೇಳೋದೆಲ್ಲಾ — ಶೇಕ್ಸ್‌ಪಿಯರ್‌ನ ನಾಲ್ಕು ನಾಟಕಗಳು ಸಿಕ್ಕಿದ್ರೆ ಸಾಕು. ‘ಹ್ಯಾಮ್ಲೆಟ್’, ‘ಕಿಂಗ್ ಲಿಯರ್’, ‘ಮ್ಯಾಕ್ಬೆತ್’, ‘ಜೂಲಿಯಸ್ ಸೀಜರ್’ ಅಂತ. ಅಂದ್ರೆ ಅಂಥಾ ಒಂದು ಟ್ರೆಡಿಶನ್ ಇದೆ. ನಮ್ಮಲ್ಲಿ ಟ್ರೆಡಿಶನ್ ಇಲ್ಲ ಅಂತ ಹೇಳಿದ್ರೆ ತಪ್ಪಾಗತ್ತೆ. ಅದ್ರೇ ಟ್ರೆಡಿಶನ್ ಇದ್ದ ಕೂಡ, ಟ್ರೆಡಿಶನ್‌ನ ಹಾಗೆ ಉಳಿಸ್ಕೊಳ್ಲಿಕ್ಕೆ ಆಗಲ್ಲ. ಅದಕ್ಕೆ ಹೊಸ ಅರ್ಥ ಕೊಡ್ಬೇಕಾಗತ್ತೆ. ಹೊಸ ಅರ್ಥ ಕೊಡ್ಲಿಕ್ಕೋಸ್ಕರ ನಾನಿವತ್ತು ಹೊಸದಾಗಿ ಯೋಚ್ನೆ ಮಾಡ್ಬೇಕಾಗತ್ತೆ. ಅದ್ಕೇ ಪ್ರೊಫೆಶನಲ್ ಥಿಯೇಟರ್ ಅಂತ ಮಾತಾಡಿದ್ದು. ಥಿಯೇಟರ್ ಬಗ್ಗೆ ಮಾತಾಡ್ತಾ, ಮಾತಾಡ್ತಾ ಇದರ ಜೊತೆಯಲ್ಲೇ ಒಂದು ಮಾತು ಹೇಳ್ತೀನಿ — ಮೊದ್ಲು ಪ್ರೊಫಿಶಿಯನ್ಸಿ ಅಂತ ಹೇಳಿದ್ದು ನಿಜ. ಆದ್ರೆ ಇವತ್ತು ಪ್ರೊಫೆಶನಲ್ ಥಿಯೇಟರ್‌ನ ಅರ್ಥಕೆಟ್ಟು ಹೋಗಿದೆ ಅಂತ ಹೇಳ್ದೆ. ಅದಕ್ಕೇ ಇತ್ತೀಚೆಗೆ ಪ್ರೊಫೆಶನಲ್ ಥಿಯೇಟರ್‌ಅನ್ನೋ ಬದ್ಲು ಬೇರೆ ಶಬ್ದ ಯೂಸ್ ಮಾಡ್ತಾರೆ. ಇಂಡಿಯಾದಲ್ಲೇನೇ ಅಮೆಚ್ಯೂರ್ ಥಿಯೇಟರ್ ಮತ್ತು ಪ್ರೊಫೆಶನಲ್ ಥಿಯೇಟರ್ ಅಂತ ಎರಡು ಇತ್ತು ಅಥವಾ ಕಮರ್ಶಿಯಲ್ ಥಿಯೇಟರ್ ಅಂತ್ಹೇಳಿ. ಶಂಭುಮಿತ್ರ ಅಂತೂ ನಾನು ಜೀವನವೆಲ್ಲಾ, ಬದುಕು ಪೂರ್ತಿ ಅಮೆಚ್ಯೂರ್ ಥಿಯೇಟರ್‌ನಲ್ಲೇ ಇರ್ತೀನಿ ಅಂತ ಹಠ ಹಿಡ್ದಿದ್ರು. ಯಾಕೇಂದ್ರೆ ಅಷ್ಟು ಕೆಟ್ಟದಾಗಿ ಪ್ರೊಫೆಶನಲ್ ಥಿಯೇಟರ್ ಆಗ ನಡೀತಾ ಇತ್ತು. ಆದ್ರೆ ಬರ್ತಾ ಬರ್ತಾ ಅಲ್ಲಿ ಅಮೆಚ್ಯೂರ್ ಅನ್ನೋ ಶಬ್ದನ್ನೇ ಯೂಸ್ ಮಾಡಲ್ಲ ಅವ್ರು. ಅವ್ರೀಗ ಯೂಸ್ ಮಾಡೋ ಶಬ್ದ ಗ್ರೂಪ್ ಥಿಯೇಟರ್ ಅಂತ್ಹೇಳಿ. ಹಾಗೇನೇ ವರ್ಲ್ಡ್‌ ಥಿಯೇಟರ್‌ನಲ್ಲೂ ಕೂಡ ಈಗ ಪ್ರೊಫೆಶನಲ್ ಅನ್ನೋ ಶಬ್ದನ್ನ ಹೆಚ್ಚು ಯೂಸ್ ಮಾಡೋಲ್ಲ. ಕಾರಣ ಇಷ್ಟೇನೇ, ಇಂಗ್ಲೆಂಡ್‌ನಲ್ಲಿ ಈ ಮೂವ್‌ಮೆಂಟ್ ಶುರುವಾಯ್ತು. ಅದು ರೆಪರ್ಟರಿ ಅಂತ್ಹೇಳಿ.

ಇತ್ತೀಚೆಗೆ ಕನ್ನಡದಲ್ಲಿ ಬಹಳಷ್ಟು ಸಲ ಕೇಳ್ತೀವಿ ‘ರೆಪರ್ಟರಿ, ರೆಪರ್ಟರಿ, ರೆಪರ್ಟರಿ’ ಅಂತ್ಹೇಳಿ. ಅದು ಎಂತ ಅರ್ಥವೇ ಆಗೋಲ್ಲ; ರೆಪರ್ಟರಿ ಏನು ಅಂತ್ಹೇಳಿ. ನಾವು ‘ರಂಗಮಂಡಲ’ ಅಂತ ಹೆಸ್ರು ಹಾಕ್ತೀವಿ, ರೆಪರ್ಟರಿಗೆ. ಮಧ್ಯಪ್ರದೇಶ ರಂಗಮಂಡಲ ಅಂತ್ಹೇಳಿ. ಹಿಂದಿಯ ಮಂಡಲಿ ಅಲ್ಲ ಅದು. ಆ ಮಂಡಲಿಕ್ಕಿಂತ ಡಿಫರೆಂಟ್ ಆಗೋದಕ್ಕೋಸ್ಕರ ಮಂಡಲ ಅಂತ ಮಾಡಿದ್ದು. ಕಾರಣ ಇಷ್ಟೇನೆ — ಈ ಪ್ರೊಫೆಶನಲ್ ಥಿಯೇಟರ್ ಅಥವಾ ಕಮರ್ಶಿಯಲ್ ಥಿಯೇಟರ್‌ನೋರು ಒಂದು ನಾಟಕ ಆಡಿಸಿ ದುಡ್ಡು ಸಿಕ್ಕಿದ್ರೆ. ಬೇರೆ ನಾಟಕನ್ನ ಆಡ್ತನೇ ಇರ್ಲಿಲ್ಲ. ಅದ್ರಿಂದ ಹೊಸ ಆಕ್ಟರ್‌ಗೂ ಅವಕಾಶ ಸಿಕ್ತಿರಲಿಲ್ಲ. ಹೊಸ ಡೈರೆಕ್ಟರ್‌ಗೂ ಅವಕಾಶ ಸಿಕ್ಕಿರಲಿಲ್ಲ. ಆಮೇಲೆ ಹೊಸ ನಾಟಕಕಾರರಿಗೆ ಅವಕಾಶ ಸಿಕ್ತಿರಲಿಲ್ಲ. ಆಗ ಲಂಡನ್‌ನಲ್ಲಿ movement ಶುರುವಾಯ್ತು — ರೆಪರ್ಟರಿ ಇರ್ಬೇಕು ಅಂತ್ಹೇಳಿ. ಅಂದ್ರೆ ನಾಟಕಗಳನ್ನ ಮಾಡ್ತಾನೇ ಇರ್ಬೇಕು, ಹೊಸ ಹೊಸ ನಾಟಕಗಳಿಗೆ ಅವಕಾಶ ಸಿಕ್ತಾನೇ ಇರ್ಬೇಕು, ನಾಟಕಗಳು ಒಂದು ನೂರು ದಿವ್ಸ ನಡೆದು ಬಿಟ್ರೆ ಅದ್ನ ಬಿಟ್ಟು ಬಿಡಬೇಕು ಅಂತ್ಹೇಳಿ. ಯಾಕೇಂದ್ರೆ ಬೆಳೆಯೋದು ಹೇಗೆ? ನಾಟಕಕಾರನೂ ಬೆಳೆಯೋಲ್ಲ, ಆಕ್ಟರೂ ಬೆಳೆಯೋಲ್ಲ, ಆಡಿಯನ್ಸ್ ಕೂಡ ಬೆಳೆಯೋಲ್ಲ. ‘ಮೌಸ್‌ಟ್ರಾಪ್’ ಇನ್ನೂ ನಡೀತಾ ಇದೆ. ಮೂವತ್ತ ನಾಲ್ಕನೇ ವರ್ಷ. ಒಂದು ತರಹ ತಾಜಮಹಲ್ ಆದಂಗೆ ಅಂತ ನಾನು ಯಾರ್ಹತ್ರನೋ ಹೇಳಿದ್ದೆ. ತಾಜಮಹಲ್ ಹೇಗೆ ಪರ್ಮನೆಂಟೋ ಹಾಗೆ ‘ಮೌಸ್ ಟ್ರಾಪ್’ ಬಹುಶಃ ಪರ್ಮನೆಂಟ್ ಇರತ್ತೋ ಏನೋ! ಅಂದ್ರೆ ಇನ್ನೂ ನೂರು – ಇನ್ನೂರು ವರ್ಷ ನಡೆಯತ್ತೋ ಏನೋ. ಈಗ ನೋಡೋರೆಲ್ಲಾ ಹೊರಗಿನಿಂದ ಬಂದವರು, ಇಂಗ್ಲಿಷರು ಒಬ್ರೂ ಅದನ್ನ ನೋಡ್ತಾ ಇಲ್ವಂತೆ. ಯಾಕೇಂದ್ರೆ ಅವ್ರಿಗೆ ಅಲ್ಲಿ ನೋಡುವಂತಾದ್ದು ಏನೂ ಇಲ್ಲ. ಬಟ್ ಆ ತರಹ ‘ಮೌಸ್‌ಟ್ರಾಪ್’ನ ಬಿಟ್ಟು ಬಿಟ್ರೆ ಅವ್ರು ಬೇರೆ ತರಹ ನಾಟಕ ಆಡೋದೇ ಇಲ್ಲ. ಅದ್ಕೇ ರೆಪರ್ಟರಿ ಅಂತ ಶುರು ಮಾಡಿದ್ರು ನಮ್ಮ ದೇಶದಲ್ಲಿ ರೆಪರ್ಟರಿ ಹೆಚ್ಚಿಲ್ಲ, ಒಂದು ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾ ರೆಪರ್ಟರಿ. ಮೂರು ವರ್ಷ ಟ್ರೇನಿಂಗ್ ಆಗಿರತ್ತೆ. ಆಮೇಲೆ ಒಂದು ವರ್ಷ ಅವ್ರನ್ನ ಒಂದು ಚಾನ್ಸ್‌ಗೆ ಇಟ್ಕೋತಾರೆ. ನಾಲ್ಕನೇ ವರ್ಷದಲ್ಲಿ ಸರಿ ಹೋದ್ರೆ ಆಗ ಮುಂದೆ ಅವ್ರು ರೆಪರ್ಟರಿಯವ ಅಂತ. ಈಗ ಅಲ್ಲಿ ಮನೋಹರಸಿಂಗ್, ಉತ್ತರಾ ಭಾವ್‌ಕರ್ ಮುಂತಾದವರೆಲ್ಲಾ ಇದ್ದಾರೆ, ನಿಜವಾಗಿಯೂ ಒಳ್ಳೆ ಆಕ್ಟರ್‌ಗಳು. ಹಾಗೆ ಯಾಕೆ ಹೇಳ್ತೀನಿ ಅಂತಂದ್ರೆ, ಆ ರೀತಿಯಲ್ಲಿ ಕಂಪೇರ್ ಮಾಡೋದು ಕಷ್ಟವಾಗತ್ತೆ. ಯಾಕೇಂದ್ರೆ ಪ್ರತಿಯೊಬ್ಬರಿಗೂ ತಮ್ಮ ತಮ್ಮ ವ್ಯಾಮೋಹ, ಮತ್ತೆ ಒಂದು ಮೋಹ, ಇಗೋ ಇರತ್ತೆ. ಅವ್ರು ನಿಜವಾಗಿಯೂ ಒಳ್ಳೆ ಆಕ್ಟರ್. ಆದ್ರೆ ಈಗೀಗ ನಮ್ಗೆ ಅನ್ಸತ್ತೆ ಮನೋಹರ್ ಸಿಂಗ್ ಕೂಡ ಎಲ್ಲೋ ಡೆಡ್ ಆಗ್ತಾ ಇದ್ದಾನೆ ಅಂತ. ಕಾರಣ ಇಷ್ಟೆ — ಅವ್ನಲ್ಲಿ ಕೂಡ ಪ್ರೊಫೆಶನಲಿಸಂ ಬೆಳೆಸುವಂತಹ ಆಬ್ಸರ್ವೇಶನ್ ಆಗ್ಲಿ, ಟ್ರೇನಿಂಗ್‌ಆಗ್ಲಿ ಇಲ್ವೇ ಇಲ್ಲ! ನಮ್ಮಲ್ಲಿ ಟ್ರೇನಿಂಗ್ ಸಿಸ್ಟಮೇ ಇಲ್ಲ, ಥಿಯೇಟರ್‌ನಲ್ಲಿ. ನಾವು ರಿಹರ್ಸಲ್‌ಗೇ ಬರೋಲ್ಲ ಇನ್ನು ಟ್ರೇನಿಂಗ್‌ಗೆ ಎಲ್ಲಿ ಬರ‍್ತೀವಿ? ಅದಕ್ಕೆ ವಿಶೇಷವಾಗಿ ಇಂಡಿಯಾದಲ್ಲಿ ಪ್ರಾಕ್ಟಿಸ್ ಓರಿಯಂಟೆಡ್ ಅಂದ್ರೆ ಅರ್ಥ — ನಾಟಕ ಇರ್ಲೀ, ಇಲ್ದೇ ಇರ್ಲಿ ನಾವು ನಮ್ಮ ಅಭ್ಯಾಸ ಮಾಡ್ತಾ ಇರ್ಬೇಕು. ಕುಮಾರ ಗಂಧರ್ವ ವರ್ಷಕ್ಕೆ ಆರು ಪ್ರೋಗ್ರಾಮ್ ಕೊಡ್ತಾರೆ. ಅವ್ರು daily ಈಗ್ಲೂ ಬೆಳಿಗ್ಗೆ ನಾಲ್ಕು ಗಂಟೆಯಿಂದ ಏಳು ಗಂಟೆ ತನಕ ಹಾಡ್ತಾರೆ. ಪ್ರಾಕ್ಟಿಸ್ ಮಾಡ್ತಾರೆ. ಯಾಕೆ ಪ್ರಾಕ್ಟಿಸ್ ಮಾಡ್ಬೇಕು. ಅವ್ರು? ಆ ಪ್ರಾಕ್ಟಿಸ್ ಮಾಡೋ ಅಗತ್ಯವೇನಿದೆ? ಅದು ನಮ್ಮ ಥಿಯೇಟರ್‌ನಲ್ಲಿ ಇಲ್ಲ. ಅದಕ್ಕೆ ಹೇಳಿದ್ದು ಥಿಯೇಟರ್‌ನಲ್ಲಿ ರಿಹರ್ಸಲ್ ಓರಿಯಂಟೆಡ್ ಅದು. ಪ್ರಾಕ್ಟಿಸ್ ಓರಿಯಂಟೆಡ್ ಅಲ್ಲ. ಪ್ರಾಕ್ಟಿಸ್ ಅಂದ್ರೆ ಅರ್ಥವೇನೂಂದ್ರೆ ನಿಜವಾಗಿಯೂ ಮಾಧ್ಯಮ ಗೊತ್ತಿರಬೇಕು. ಕತ್ತಿವರಸೆ ಚೆನ್ನಾಗಿ ಗೊತ್ತಿದ್ರೇನೇ ನಾನು ನಿಜವಾಗಿಯೂ ಯಾವುದ್ರಲ್ಲೇ ಆದ್ರೂ ಕತ್ತಿವರಸೆ ಚೆನ್ನಾಗಿ ಗೊತ್ತಿದ್ರೇನೇ ನಾನು ನಿಜವಾಗಿಯೂ ಯಾವುದ್ರಲ್ಲೇ ಆದ್ರೂ ಕತ್ತಿವರಸೆ ಮಾಡಬಲ್ಲೆ. ಇಲ್ಲಾಂದ್ರೆ ಆ ನಾಟಕ ಮಾತ್ರ ಎಷ್ಟು ಬೇಕೋ, ಟಕ ಟಕ ಅಂತ ಹೊಡ್ದು ಬಿಟ್ಟು ಸಾಕು  ಮಾಡು ಅಂತ ಹೇಳಿದ ಹಾಗೆ ಆಗತ್ತೆ. ಯಾಕೆಂದ್ರೆ equiped ಅಲ್ಲ. ಆ ದೃಷ್ಟಿಯಿಂದ ಭರತ ಮುನಿ ಬಹಳ ಕರೆಕ್ಟಾಗಿ ಹೇಳಿದ್ದ — ಎಲ್ಲವೂ ಗೊತ್ತಿರಬೇಕು ಅವ್ನಿಗೆ. ಬೇರೆ ಭಾಷೆ ಜ್ಞಾನ ಗೊತ್ತಿರಬೇಕು ಅಂತ ಹೇಳಿದ್ದನೆ. ಅವ್ನ ಅಂಗಗಳ ಚಲನೆ ಎಲ್ಲೆಲ್ಲಿ ಆಗತ್ತೆ ಅಂತ ಕೂಡ ಅವ್ನಿಗೆ ಗೊತ್ತಿರಬೇಕು ಅಂತ ಕೂಡ ಅವ್ನು ಹೇಳಿದ್ದಾನೆ.

ಅದಕ್ಕೊಂದು ಉದಾಹರಣೆ ಕೊಡ್ತಾರೆ — ಲಕನೌದಲ್ಲಿ ಒಬ್ಬ ನಕಲೌತಿ ಇದ್ದ. ನಕಲ್ ಮಾಡ್ತಿದ್ದ. ನಕಲ್ ಮಾಡ್ತಿದ್ದ ಒಬ್ಬ ಹುಡುಗ ಕೂತು ಕೂತಲ್ಲೇ ಸುಮ್ನೆ ಒಂದು ಕಲ್ಲು ಎಸೆದ ಹಾಗೆ ಮಾಡಿದ. ಕಲ್ಲಿಲ್ಲ. ಬಟ್ ಇವ್ನು ಇಲ್ಲಿ ಒಂದು ಆಕ್ಷನ್ ಮಾಡಿ ತೋರ್ಬಿಟ್ಟ. ರಿಯಾಕ್ಷನ್ ಕಲ್ಲು ಬಿತ್ತು ಅಂತ. ಅಂದ್ರೆ ಬಾಡಿ ಮೇಲೆ ಅವ್ನಿಗೆ ಅಷ್ಟು ಕಮಾಂಡ್ ಇತ್ತು. ಇಲ್ಲಿ ಒಂದು ಅಂಗದಲ್ಲಿ ಹುಡುಗ ಕಲ್ಲಿಗೆ ಕೊಟ್ಟ ಗುರಿಗೆ ಸರಿಯಾಗಿ ಅದ್ಕೆ ರಿಯಾಕ್ಟ್ ಮಾಡ್ತಾನೆ ಅಂದ್ರೆ ಎಷ್ಟು ಕಮಾಂಡ್ ಬೇಕು!

ಆ ದೃಷ್ಟಿಯಲ್ಲಿ ನಮ್ಮಲ್ಲಿ ಏನೂ ಆಗಿಲ್ಲ. ಒಂದೇ ಒಂದು ಡ್ರಾಮಾ ಸ್ಕೂಲಿರೋದು. ಆ ಡ್ರಾಮಾ ಸ್ಕೂಲಿನಲ್ಲಿ ಕಲ್ತೋರಿಗೆ ಕೂಡ ಕೆಲ್ಸ ಸಿಗ್ತಾ ಇಲ್ಲ. ಕಾರಣ ಇಷ್ಟೇನೇ, ನಮ್ಮಲ್ಲಿ ಅದ್ರ ಬಗ್ಗೆ ಸಿರೀಯಸ್‌ನೆಸ್, ಗಾಂಭಿರ್ಯ ಇನ್ನೂ ಬೆಳೆದಿಲ್ಲ. ಹಿಂದಿಯಲ್ಲಂತೂ ಇನ್ನೂ ಸಮಸೆಯಿದೆ. ಅಲ್ಲಿ ಪ್ರೇಕ್ಷಕ ಪರಂಪರೆಯೇ ಇಲ್ಲ. ಪ್ರೇಕ್ಷಕ ಪರಂಪರೆ ಇಲ್ದೇನೇ ಅಲ್ಲಿ ಥಿಯೇಟರ್ ಕಟ್ಸಿಬಿಟ್ರು. ನಾವೂ ಈಗ್ಲೂ ಕೂಡ ಮೈಸೂರಿನಲ್ಲಿ ಸಾವಿರದೈನೂರು ಸೀಟುಗಳ ಥಿಯೇಟರ್‌ನ ಯಾಕೆ? ಯಾರಿಗೋಸ್ಕರ? ಅದನ್ನ ಬರ್ದಿದ್ದಕ್ಕೆ ಉತ್ತರ ‘ತರಂಗ’ದಲ್ಲೇನೋ ಬಂದಿತ್ತು. ಅಲ್ಲಿ ಒಂದು ಕಾಗ್ದ ಬಂತು. ಕಾರಂತರಿಗೆ ಏನು ಗೊತ್ತು? ಊರು ಬಿಟ್ಟು ಅಲ್ಲಿಗೆ ಹೋಗಿದ್ರು, ಅವ್ರಿಗೇನು ಗೊತ್ತು? ನಾವು ಒಂಬತ್ತು ತಿಂಗ್ಳಲ್ಲಿ ತೋರ‍್ಸಿಬಿಡ್ತೀವಿ ಹೇಗೆ ಉಪಯೊಗಿಸ್ತೀವಿ ಅಂತ್ಹೇಳಿ. ಆ ಒಂಬತ್ತು ತಿಂಗ್ಳಲ್ಲಿ ಈಗ ಮೂರು ತಿಂಗ್ಳು ಮುಗೀತು. ನಿಜವಾಗಿಯೂ ನಾನ್ಹೇಳಿದ್ದು ಏನೂಂತಂದ್ರೆ  — ನೀವು ಸಣ್ಣ ಥಿಯೇಟರ್‌ ಕಟ್ಟಿ. ನಮ್ಗೆ ಸಣ್ಣ ಥಿಯೇಟರ್ ಬೇಕು. ಇನ್ನೂರೈವತ್ತು – ಮುನ್ನೂರು ಸೀಟ್ಸದು. ಯಾಕೆ ಬೇಕು ಅಂತ್ಹೇಳಿದ್ರೆ, ಪ್ರೊಫೆಶನಲಿಸಂ ಬರೋದಿಕ್ಕೆ, regularity  ಬೇಕು. ಆಮೇಲೆ ನಿರಂತರತೆ ಬೇಕು. ನಮ್ಗೆ continuity ಇಲ್ಲ. ಒಂದು ನಾಟಕ ಆಡ್ಬಿಟ್ರೆ ಅದು ಮುಗ್ದೋಯ್ತು. ನಾವೆಲ್ಲಾ ಸ್ಟೇಜ್‌ಗೆ ಹೋಗೋಕೆ ಮೊದ್ಲೆ ಬೆವರು ಒರೆಸಿಕೊಂಡು, ಏನು ಆಗತ್ತೆ ಅಂತ ಹೆದ್ರಿಬಿಟ್ಟೇ ಹೋಗ್ತೀವಿ. ಅಂದ್ರೆ, ಒಂದು ರಿಲ್ಯಾಕ್ಸ್‌ಡ್ ಮೂಡೇ ಬರೋದಿಲ್ಲ ಆಕ್ಟರ್‌ಗೆ.

ಈಗಲೂ ಕೂಡ ವೆಸ್ಟರ್ನ್‌ ಕಂಟ್ರೀಸ್‌ನಲ್ಲಿ, ಯುಗೋಸ್ಲಾವಿಯಾದಲ್ಲಿ ಕೆಲವು ಥಿಯೇಟರ್‌ ಹೆಸ್ರುಗಳಿವೆ, ಸೀಟ್ ನಂಬರ್‌ನಿಂದ.  Hundred twelve ಅಂತ ಒಂದು ಥಿಯೇಟರ್‌ ಹೆಸ್ರು ಯಾಕೇಂದ್ರೆ ಹಂಡ್ರೆಡ್ ಟ್ವೆಲ್ವ್ ಸೀಟ್ಸ್ ಇದೆ. ಇನ್ನೊಂದು ಕಡೆ Ninety Eight ಅಂತ ಇದೆ. ಈವನ್ ನ್ಯಾಶನಲ್ ಥಿಯೇಟರ್‌ನಲ್ಲೂ ಕೂಡ ಮೂರು ಥಿಯೇಟರ್ ಕಟ್ಟಿದ್ದಾರೆ. ನಮ್ಮ ಭಾರತ ಭವನದಲ್ಲಿ ಕೂಡ, ಒಳಗೆ ಒಂದು ‘ಅಂತರಂಗ’ ಅಂತ ಇದೆ. ಅದ್ರಲ್ಲಿ ನಾನೂರು ಜನ ಕೂತ್ಕೋಬಹುದು. ಹೊರ್ಗಡೆ ಬಹಿರಂಗ ಅಂತ ಇದೆ, ಅಲ್ಲಿ ಐನೂರು ಜನ ಕೂತ್ಕೋಬಹುದು. ಇನ್ನೊಂದು ಸಣ್ಣ ಥಿಯೇಟರ್‌ನ ನಾನೇ ಬೇಕೂಂತ ಕಟ್ಸಿಬಿಟ್ಟಿದ್ದೀನಿ, ಜಾಗ ಸಿಕ್ದಲ್ಲಿ. ಅದು ಕೇವಲ ಹಂಡ್ರೆಡ್ ಸೀಟ್ಸ್ ಅಷ್ಟೇ. ಯಾಕೇಂದ್ರೆ ನಮ್ಗೆ ಮತ್ತೆ ಮತ್ತೆ ನಾಟಕ ಆಡ್ಬೇಕು. ಆ  continuity ಬರ್ದೇ ಹೋದ್ರೆ, regularity ಬರ್ದೇ ಹೋದ್ರೆ, ಪ್ರೊಫೆಶನಲ್ ಥಿಯೇಟರ್ ಮಾಡೋಕ್ಕಾಗಲ್ಲ. ರೆಪರ್ಟರಿ ಮಾಡೋಕ್ಕಾಗಲ್ಲ. ರೆಪರ್ಟರಿಗೆ ಅರ್ಥ ಒಂದು ರೀತಿಯಲ್ಲಿ ಸುತ್ತು ಹಾಕೋದು. ಸುತ್ಕೋತಾ ಬರ್ತಿರೋದು. ಆವಾಗ ನಮ್ಮ ಆ ಸುತ್ತುವರಿಕೆ ನಡೀತ್ಲೇ ಇರತ್ತೆ. ತಿರುಗಾಟೆ ಅಂತ ಅವ್ರು ಹಾಕಿದ್ದು ಒಂದು ರೀತಿಯಲ್ಲಿ ಆ ಅರ್ಥದಲ್ಲೇ. ಆ ತಿರುಗೋದು ಇದ್ಯಲ್ಲಾ ಅದು ನಡೀತಿರ್ಬೇಕು. ಹೊಸ ನಾಟಕಗಳ ಜೊತೆಯಲ್ಲಿ, ಹೊಸ ಅನುಭವಗಳ ಜೊತೆಯಲ್ಲಿ, ಆಗ ಹೊಸ ಪ್ರೇಕ್ಷಕರು ಬರ್ತಾ ಓದಕ್ಕೆ ಸಾಧ್ಯವಿದೆ ಅಂತ್ಹೇಳಿ. ಅದ್ರಿಂದ ಈ approach ಇರೋದು ಬಹಳ ಇಂಪಾರ್ಟೆಂಟ್. ಅದಕ್ಕೆ ಪ್ರೊಫೆಸನಲ್ ಥಿಯೇಟರ್‌ನ ಇತ್ತೀಚೆಗೆ ರೆಪರ್ಟರಿ ಅಂತ ಹೆಚ್ಚು ಹೇಳ್ತಾ ಇರೋದು.

ಯಾಕೇಂದ್ರೆ ರೆಪರ್ಟರಿ ಅಂದಾಗ ಅದ್ರಲ್ಲಿ ಪ್ರೊಫೆಶನಲ್ ಥಿಯೇಟರ್‌ನ ಪ್ರೊಫಿಶಿಯನ್ಸಿ ಬರ್ಬೇಕು. ಅಮೆಚ್ಯೂರ್ ಥಿಯೇಟರಿಂದ ರಿಸ್ಕ ತಗೊಳ್ಳೋದು ಬರತ್ತೆ ಅಂತ್ಹೇಳಿ. ಪ್ರೊಫೆಶನಲ್ ಥಿಯೇಟರ್ ರಿಸ್ಕ್ ತಗೊಳ್ಳೋಲ್ಲ. ಯಾಕೇಂದ್ರೆ ದುಡ್ಡು ಬರೋದು ಮುಖ್ಯ ಆಗತ್ತೆ. ಅದಕ್ಕೆ ಇಲ್ಲಿ ನಾವು ರಿಸ್ಕ್ ತಗೋತೀವಿ. ಎಂಥಾ ಕಷ್ಟದ ನಾಟಕ ಆದ್ರೂ ತಗೋತೀವಿ. ಬಟ್ ರಿಸ್ಕ್ ಇದು, ನಿಜ. ಅಲ್ಲಿ ಒಂದು ರಿಸ್ಕ್ ಯಾಕಿದೆ ಅಂತ್ಹೇಳಿದ್ರೆ, ಇವತ್ತು ರಾಜೀವ್‌ಗಾಂಧಿ ವಿರುದ್ಧವಾಗಿ, ಇಂದಿರಾಗಾಂಧಿ ವಿರುದ್ಧವಾಗಿ ನಾಟಕ ಆಡಿದ್ರೂ ಕೂಡ, ಪಾಪ ಏನ್ಮಾಡಿಯಾಳು? ನಾಳೆ ನಮ್ಮ ಆ ನಾಟಕ ಇಲ್ಲ. ಇವತ್ತಿಗೆ ನಾಟಕ ಮುಗೀತು. ಎಷ್ಟೋ ಸಲ ಬಹಳ ಸುಲಭವಾಗಿ ಬದುಕಿ ಬಿಡ್ತೀವಿ ನಾವು. ಯಾಕೇಂದ್ರೆ ಎರಡನೇ ಸಲ ನಾಟಕ ಆಡೋದೇ ಇಲ್ಲ. ನಮ್ಗೆ, as a professional, as a citizen of the country, ಅದೇ continuity ಬೇಕು. ಅದಕ್ಕೆ ನಾನು tyranny ಬೇಕು ಅಂತ ಹೇಳಿದ್ದು. ಅಂದ್ರೆ ಆಕ್ಟರ್ ಬಗ್ಗೇನೂ ಭಯ ಭಕ್ತಿ ಬರುವ ಹಾಗೆ ಆಗ್ಬೇಕು. ಇದಕ್ಕೆ ರೆಗ್ಯುಲಾರಿಟಿ, ಕಂಟಿನ್ಯೂಯಿಟಿ ಇದ್ರೇನೇ ನಾವು ಖಂಡಿತವಾಗಿ ಪ್ರೊಫೆಶನಲ್ ಥಿಯೇಟರ್ ಮಾಡ್ಲಿಕ್ಕೆ ಸಾಧ್ಯವಿದೆ.

ಕೊನೇ ಮಾತು ಹೇಳ್ಬೇಕಾದ್ದು, ಇದು ಕನ್ನಡದಲ್ಲಿ ಸಾಧ್ಯವಿದೆ. ಯಾಕೇಂದ್ರೆ ಇಲ್ಲಿ ಪ್ರೇಕ್ಷಕ ಪರಂಪರೆ ಇದೆ. ಮಹಾರಾಷ್ಟ್ರ ಆದ್ಮೇಲೆ, ನಿಜವಾಗಿ ಪ್ರೇಕ್ಷಕ ಪರಂಪರೆ ಎಲ್ಲಿಯಾದ್ರೂ ಇದ್ರೆ ಅದು ಕರ್ನಾಟಕ. ಅದು ಕೂಡ ಕೇವಲ ಬೆಂಗ್ಳೂರು, ಮೈಸೂರು ಅಲ್ಲ ಹಳ್ಳಲಿ ಹಳ್ಳಿಯಲ್ಲಿ ಆಗ್ಬಿಟ್ಟಿದೆ. ಇದು ಒಂದು ಹೊಸ ಗುರ್ತು ಮಾತ್ರವಲ್ಲ. ಮೊದ್ಲಿಂದ್ಲೂ ಕೂಡ ನಾಟಕದ ಬಗ್ಗೆ ಒಂದು ಆಸಕ್ತಿ ಇದೆ. ದಿಲ್ಲಿಯಲ್ಲೆಲ್ಲಾ ಕಾಲೇಜಿನಲ್ಲಿ ನಾಟಕ ಆಡ್ಲಿಕ್ಕೇ ಸಾಧ್ಯವಿಲ್ಲ. ಮೊದ್ಲಿಂದ್ಲೇ ಕಿರ‍್ಚಾಡ್ಲಿಕ್ಕೆ ಶುರು ಮಾಡ್ತಾರೆ. ನಮ್ಮಲ್ಲೂ ಕೆಲವು ಕಡೆ ಶುರು ಮಾಡ್ತಾರೆ ‘ಮೈಕ್ ಮೈಕ್’ ಅಂತ ಕೂಗ್ತಾರೆ. ಧಾರವಾಡದಲ್ಲಿ ಒಂದು ಸಲ ಕೂಗ್ಕೊಂಡ್ರು ‘ಸತ್ತವರ ನೆರಳು’ ಆಡ್ಡಾಗ ‘ಮೈಕ್ ಮೈಕ್’ ಅಂತ. ಆಮೇಲೆ ‘No mike’ ಅಂತ ಹೇಳ್ದೆ. ಮೊದ್ಲು ನೀವು ಆರಾಮವಾಗಿ ಕುರ್ಚಿಯಲ್ಲಿ ಕೂತ್ಕೊಳ್ಳಿ ಅಂತ ಹೇಳ್ದೆ. ಯಾಕೆಂದ್ರೆ ಕುರ್ಚಿ ‘ಕರ್‌ರ್‌ರ್ ಪರ್‌ರ್‌ರ್‌’ ಅಂತ ಎಳೀತಿದ್ದವರು ‘ಮೈಕ್, ಮೈಕ್’ ಅನ್ತಾರೆ. ಮೈಕ್ ಯೂಸೇ ಮಾಡ್ಲಿಲ್ಲ. ಆಮೇಲೆ ಸರಿಯಾಯ್ತು. ಯಾಕೇಂದ್ರೆ ಯಾವಾಗ ಕಿವಿ ಎಲರ್ಟ್ ಆಗತ್ತೆ ಆಗ ಏನು ಮಾತಾಡಿದ್ರೂ ಗೊತ್ತಾಗ್ಬೇಕು. ಅದಕ್ಕೋಸ್ಕರ, ಇದ್ರಲ್ಲಿ ಮೂರು ಪಾಯಿಂಟ್ ಇದೆ — small theatre, continuity, regularity, ಟ್ರೇನಿಂಗ್, ಆಬ್ಸರ್ವೇಶನ್, ಇಷ್ಟೆಲ್ಲಾ ಪಾಯಿಂಟ್‌ಗಳನ್ನ ಹೇಳಿದ್ದೀನಿ. ಈ ಪಾಯಿಂಟ್‌ಗಳೆಲ್ಲಾ ಒಬ್ಬ ಆಕ್ಟರ್‌ಗೆ ಬರ್ಬೇಕಾದ್ರೆ ನಿಜವಾಗಿಯೂ ಅವ್ನಿಗೆ ಎಷ್ಟು ಟ್ರೇನಿಂಗ್ ಬೇಕಾಗತ್ತೆ. ನಮ್ಮಲ್ಲಿ ವರ್ಕ್‌ಶಾಪ್‌ಗಳೂ ಕಡಿಮೆ. ನಿಜವಾಗಿಯೂ ವರ್ಕಶಾಪನ್ನ ಹೆಚ್ಚಿನ ಜನ ಬಂದು ನಡೆಸಿಕೊಡ್ಬೇಕು. ಹೊರ‍್ಗಿನವರನ್ನ ಕರೆಸ್ಬೇಕು. ಹೊರಗಿನವರನ್ನ ಕರ‍್ಸೋದೇ ಇಲ್ಲ. ಅಪಮಾನ ಅಂತ ತಿಳ್ಕೊಂಡು ಬಿಡ್ತೀವಿ. ಅದು ಮಧ್ಯಪ್ರದೇಶದಲ್ಲಿ ಪುಣ್ಯಕ್ಕೆ ಇಲ್ಲ. ಅಲ್ಲಿ ಇಲ್ಲೇ ಇಲ್ಲ ಅದಕ್ಕೋಸ್ಕರ ಹೊರಗಿನವರನ್ನ ಕರೆಸ್ತಾರೆ ಅಂತಾ ಹೇಳ್ಬೋದು.

ನನ್ನ ದೃಷ್ಟಿಯಲ್ಲಿ ರೆಪರ್ಟರಿ ಥಿಯೇಟರ್‌ ಕರ್ನಾಟಕಕ್ಕೆ ಮೂರು ಬೇಕು. ಒಂದು coastal areaಗೆ, ಒಂದು ಧಾರವಾಡ ಕಡೆ ಕೂಡ, language, ಡಯಲೆಕ್ಟ್‌ಯಿಂದ ಮೊದಲುಗೊಂಡು ಸಾಹಿತ್ಯದವರೆಗೆ ಎಲ್ಲ ಅನುಭವ ಸಿಗುವ ಹಾಗೆ ಆಗ್ಬೇಕು ಅಂತ. ಹಳೇ ಮೈಸೂರಿನಲ್ಲಿ ಮಾಡ್ಬೇಕು ಅಂತಾದ್ರೆ ನಂಗನ್ಸೋದು — ಒಂದೋ ಮೈಸೂರಲ್ಲಿ ಮಾಡ್ಬೇಕು, ಇಲ್ಲ ಇನ್ನೂ ದೂರ ಇಡ್ಬೇಕು ಅಂತಿದ್ರೆ. ನಂಗೆ ಶ್ರೀರಂಗಪಟ್ಟಣ ಇಷ್ಟ ಆಗತ್ತೆ. ಯಾಕಂದ್ರೆ ಅಲ್ಲಿ ಭಾಷೆ ಇದೆ. ಕೋಲಾರ ಅಲ್ಲ. ಯಾಕಂದ್ರೆ ಕೋಲಾರ ಮಿಕ್ಸ್ ಆಗ್ಬಿಟ್ಟಿದೆ. ಬೆಂಗ್ಳೂರು ಅಂತು ಅಲ್ವೇ ಅಲ್ಲ. ಯಾಕಂದ್ರೆ ಬೆಂಗ್ಳೂರಲ್ಲಿ ಎಲ್ಲರಿಗಿಂತ ಹೆಚ್ಚು ಮಿಕ್ಸ್ ಆಗಿದೆ. ನಾಟಕ ಬರ್ದಿದ್ದಾರೆ ನಿಜ.

ಕೆಲವು ಸಲ ಮಿಕ್ಸ್‌ಡ ಭಾಷೆ ಉದಾಹರಣೆ ಇದೆ, ನಿಜ. ಆದ್ರೆ ಅದೂ ಕಲೀಬೇಕಾದ್ದು. ಅದು ನಮ್ಮ ಕರ್ತವ್ಯ ಆಗತ್ತೆ. ಆಗ ನಮ್ಗೆ ಭಾಷೆಯ ಜೊತೆಯಲ್ಲಿ ಬೆಳೆಯೋದಕ್ಕೆ, ಈ ರೆಪರ್ಟರಿಗೋಸ್ಕರ ನಾವು ಯೋಚ್ನೆ ಮಾಡೋದು. ಒಂದು ರೀತಿಯಲ್ಲಿ ಅಲ್ಲಿ ಪ್ರೇಕ್ಷಕ,  ಕೆಲ್ಸ ಮಾಡುವ ವ್ಯಕ್ತಿಗಳು, ಆಮೇಲೆ ಭಾಗವಹಿಸುವ ಹುಡುಗ್ರು ಇವು ಮೂರು ಬೆಳೆಯುವಂತಹ ಒಂದು ಸ್ಥಿತಿ ಬರ್ಬೇಕು, ಅಂತ ಸ್ಥಿತಿ ಬಂದಾಗ್ಲೆನೇ ನಿಜವಾದ ಥಿಯೇಟರ್‌ಆಗತ್ತೆ. ಇಲ್ದಿದ್ರೆ ಮತ್ತೆ ಹಳೇದನ್ನೇ ರಿಪೀಟ್ ಮಾಡ್ತೀವಿ. ಅದ್ಕೇ ಹೇಳಿದ್ದು ನಂಗೆ ಈಗ ಡೈರೆಕ್ಟರ್ ಆಗ್ಲಿಕ್ಕೆ ಇಷ್ಟ ಇಲ್ಲ. ನಂಗೆ ಈಗ ಮತ್ತೆ ಟೀಚರ್ ಆಗ್ಬೇಕು ಅಂತ ಇಷ್ಟ ಆಗ್ತಾ ಇದೆ. ಕಾರಣ ಇಷ್ಟೇನೇ, ನಾನು ಹುಡುಗ್ರ ಜೊತೇಲಿ ಬೆಳೀಲಿಕ್ಕೆ ಆಗತ್ತೆ. ನಾನೂ ಬೆಳೆಯೋದು, ಹುಡುಗ್ರೂ ಬೆಳೆಯೋದು, ಪ್ರೇಕ್ಷಕರೂ ಬೆಳೆಯೋದು; ಇವು ಮೂವರೂ ಬೆಳ್ದಾಗ ಟೋಟಲ್ ಬೆಳವಣಿಗೆ ಆಗತ್ತೆ. ಆಗ ನಮ್ಮದು publicity ಬೇರೆ ತರಹ ಆಗತ್ತೆ. ನಮ್ಮನ್ನ ಆಳೋ ವಿಧಾನ ಬೇರೆ ತರಹ ಆಗತ್ತೆ. ಅಷ್ಟೇ ಅಲ್ಲ, ಆಗ ಆಕ್ಟರ್ dictate ಮಾಡ್ಬೋದು — ಹೇಗೆ ನಾಟಕದ ಫಾರ್ಮ್‌ ಬರ್ಬೇಕು ಅನ್ನೋದನ್ನ. ಇನ್ನೂ ಕೂಡ ನಮ್ಮ ಆಕ್ಟರ್‌ಗಳು dictate ಮಾಡುವಂತಹ ಸ್ಥಿತಿಯಲ್ಲಿಲ್ಲ. ನಾವು ಫಾರ್ಮ್‌‌ನ್ನ ಬೇರೆ ತರಹ ಹುಡುಕ್ತೀವಿ, ನಿಜ, ಒಂದು ರೀತಿಯಲ್ಲಿ ನಾಟಕ ಆಕ್ಟರ್ ಮುಖಾಂತರ ಬರ್ಬೇಕಾದ್ರೆ, ಈ ಮೂರು ಬೇಕಾಗತ್ತೆ. ಆಗ ನಿಜವಾದ ಅರ್ಥದಲ್ಲಿ ಪ್ರೊಫೆಶನಲ್ ಥಿಯೇಟರ್ ಅಂದ್ರೆ ಈಗಿನ ಅರ್ಥದಲ್ಲಿ ರೆಪರ್ಟರಿ ಥಿಯೇಟರ್ ಆಗ್ಲಿಕ್ಕೆ ಸಾಧ್ಯವಿದೆ.

ಇದು ಇಷ್ಟು ಬೇಗ ಹೇಳುವಂತಹ ವಿಷಯ ಅಲ್ಲ. ಆದ್ರೆ ಪ್ರೊಫೆಶನಲ್ ಥಿಯೇಟರ್ ಅರ್ಥದ ಯಾವೊಂದು ಭ್ರಮೆ ಇಲ್ದೇ ಇರ್ಲಿ ಅನ್ನೋದಕ್ಕೋಸ್ಕರ ಹೇಳಿದ್ದು. ನನ್ನ ಮಾತಿನಲ್ಲಿ ಎಷ್ಟೋ ಕೊರತೆಗಳಿರಬಹುದು…. ಇನ್ನೂ ಪ್ರಶ್ನೆ – ಉತ್ತರಕ್ಕೆ ಟೈಮಿದೆ. ದಯವಿಟ್ಟು ನೀವು ಪ್ರಶ್ನೆಗಳನ್ನ ಕೇಳ್ಬೇಕು. ನಾನು ಕೂತ್ಕೊಳ್ಳೋಲ್ಲ.

* * *

—-
(೧೯೮೯ರಲ್ಲಿ ಉಡುಪಿಯಲ್ಲಿ ನೀಡಿದ ಉಪನ್ಯಾಸ. ಧ್ವನಿಸುರಳಿಯಿಂದ ಸಂಪಾದಿಸಿದವರು ಪಲ್ಲವಿ. ಕೆ.ಎಸ್, ಉಡುಪಿ — ಸಂ)