‘ಮುರಳಿ’ ಅಂಕಿತದಲ್ಲಿ ಕಲಾ ವಿಮರ್ಶಕರಾಗಿ, ಸಂಗೀತ ಶಾಸ್ತ್ರಜ್ಞರಾಗಿ, ಚಿತ್ರಕಲಾ ಪರಿಣತರಾಗಿ, ಸಂಗೀತ ನೃತ್ಯ ಚಿತ್ರ ಶಿಲ್ಪ ಇತ್ಯಾದಿ ಲಲಿತ ಕಲೆಗಳ ಮರ್ಮಜ್ಞರಾಗಿ ಹಲವು ಹತ್ತು ರೀತಿಯಲ್ಲಿ ಕಲಾ ಜಗತ್ತಿನಲ್ಲಿ ಸೇವೆ ಸಲ್ಲಿಸುತ್ತ ಬೆಳಗಿದ ಬಿ.ವಿ.ಕೆ. ಶಾಸ್ತ್ರಿಯವರು ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಬಿ. ವೆಂಕಟಸುಬ್ಬಾಶಾಸ್ತ್ರಿಗಳ  ಮತ್ತು ಸುಬ್ಬಮ್ಮನವರ ಪುತ್ರ ರತ್ನರಾಗಿ ೩೦-೭-೧೯೧೬ರಲ್ಲಿ ಜನಿಸಿದರು.

ಚಿಕ್ಕರಾಮರಾಯರಲ್ಲಿ ಸಂಗೀತ ಶಿಕ್ಷಣ, ಚಿತ್ರಕಲೆಯಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದ ಶಾಸ್ತ್ರಿಗಳು ಸಂಗೀತಜ್ಞರೂ, ಸಂಗೀತ ಶಾಸ್ತ್ರಜ್ಞರೂ, ಭಾರತೀಯ  ಪ್ರಧಾನ ಕಲೆಗಳನ್ನು ಅವಗತ ಮಾಡಿಕೊಂಡಿದ್ದ ಮೇಧಾವಿಗಳೂ ಆಗಿದ್ದರು. ಕಲೆಗೆ ಸಂಬಂಧಿಸಿದಂತೆ ಅಸಂಖ್ಯಾತ ಲೇಖನಗಳನ್ನು ನೀಡಿರುವ ಶ್ರೀಯುತರು ಪ್ರಜಾವಾಣಿ, ಡೆಕ್ಕನ್‌ಹೆರಾಲ್ಡ್ ಸುಧಾ ಪತ್ರಿಕೆಗಳ ಕಲಾ ವಿಮರ್ಶಕರಾಗಿ ಹಲವಾರು ಉದಯೋನ್ಮುಖ ಪ್ರತಿಭೆಗಳ ಕಲಾವಿದರ ವಿಕಾಸಕ್ಕೆ ಕಾರಣರಾದರು.

ಲಲಿತಕಲೆಗಳಿಗೆ ಸಂಬಂಧಿಸಿದ ಭಾಷಣಗಳು ಹಾಗೂ ಸ್ವತಃ ರಚಿಸಿ ನಿರ್ದೇಶಿಸಿದ ಸಂಗೀತ ರೂಪಕಗಳೂ ಆಕಾಶವಾಣಿ ಮತ್ತು ಪ್ರತಿಷ್ಠಿತ ಸಂಘ-ಸಂಸ್ಥೆ-ಸಭೆಗಳ ಮೂಲಕ ಜನಮನ ತಣಿಸಿವೆ. ಇಲಸ್ಟ್ರೇಟೆಡ್‌ ವೀಕ್ಲಿ ಆಫ್‌ ಇಂಡಿಯಾ ಪತ್ರಿಕೆಯಲ್ಲಿ ಪ್ರಕಟವಾದ ‘ಕರ್ನಾಟಕ ಸಂಗೀತ ವಿದ್ವನ್ಮಣಿಗಳು’ ಲೇಖನ ಮಾಲೆ ಕಲಾವಿದರ ಬಗ್ಗೆ ಶ್ರೀಯುತರಿಗಿದ್ದ ಗಾಢವಾದ ಪರಿಚಯ ಅಭಿಮಾನಿಗಳಿಗೆ ಹಿಡಿದ ದರ್ಪಣವಾಯಿತು.

ಕೇಂದ್ರ ಸರ್ಕಾರದ ಸಾಂಸ್ಕೃತಿಕ ಫೆಲೋಷಿಪ್‌ ಪಡೆದುದರೊಡನೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ, ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ, ರಾಜ್ಯ ಸಂಗೀತ ಅಕಾಡೆಮಿ ಮುಂತಾದ ಸಂಸ್ಥೆಗಳ ಸದಸ್ಯರಾಗಿಯೂ, ಕೇಂದ್ರ ಆಡಿಷನ್‌ ಬೋರ್ಡ್ ಮತ್ತು ಕಾಳಿದಾಸ ಸಮ್ಮಾನ ಸಮಿತಿಯ ತೀರ್ಪುಗಾರ ಮಂಡಳಿಯ ಸದಸ್ಯರಾಗಿಯೂ ಕಲಾ ಸೇವೆ ಮಾಡಿದ್ದರು.

‘ಗೀತ ಭಾರತಿ’ ಸಂಗೀತ ರೂಪಕಕ್ಕೆ ಆಕಾಶವಾಣಿಯ ರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾತಿಲಕ’, ‘ಸಂಗೀತ ಕಲಾರತ್ನ’, ‘ಲಲಿತ ಕಲಾಶ್ರಯ’ ಮದ್ರಾಸ್‌ ಮ್ಯೂಸಿಕ್‌ಅಕಾಡೆಮಿ ಪ್ರಶಸ್ತಿ ಮುಂತಾದ ಗೌರವಗಳಿಗೆ ಪಾತ್ರರಾಗಿದ್ದ ಶ್ರೀಯುತರು ಬಡೇ ಗುಲಾಂ ಆಲೀಖಾನ್‌, ಟಿ. ಚೌಡಯ್ಯ, ಬೆಂಗಳೂರು ನಾಗರತ್ನಮ್ಮ, ಸಂಗೀತ ಪಾರಿಭಾಷಿಕ ಶಬ್ದಗಳ ನಿಘಂಟು, ಕರ್ನಾಟಕ ಸಾಂಪ್ರದಾಯಕ ಚಿತ್ರಕಲೆ ಮುಂತಾದ ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದರು.

ಕಲಾ ಜಗತ್ತು ಎಂದೂ ಮರೆಯಲಾಗದಂತಹ ಅನುಸರಣೀಯ ಹೆಜ್ಜೆಗಳನ್ನು ಭದ್ರವಾಗಿ ಮೂಡಿಸಿ ೨೨-೦೯-೨೦೦೩ ರಂದು ಶಾಸ್ತ್ರಿಗಳು ಈ ಐಹಿಕ ಜಗತ್ತಿನಿಂದ ಕಣ್ಮರೆಯಾದರು.