ಎತ್ತರದ ತೆಳು ಶರೀರ; ನಿಧಾನದ ದೃಢಗತಿ; ದಪ್ಪ ಗಾಜಿನ ಕನ್ನಡಕದ ಹಿಂದೆ ಯಾವಾಗಲೂ ಏನನ್ನೋ ಧ್ಯಾನಿಸುವಂತಿರುವ ಕಣ್ಣುಗಳು; ಯಾರೊಂದಿಗೆ ಮಾತನಾಡುವಾಗಲೂ ಅವರನ್ನು ನೇರವಾಗಿ ದಿಟ್ಟಿಸರು-…- ಎಲ್ಲವನ್ನು ಬೆದಕಲು ಹೊರಟ ಗಿಣಿ ಮೂಗು; ಗಂಭೀರ ಮುದ್ರೆ. ಮಾತಿನ ನಡುವೆ ಹಾಸ್ಯಮಯ ಸನ್ನಿವೇಶಗಳನ್ನು ನೆನೆಯುವಾಗಲೋ ಹಾಸ್ಯ ಚಟಾಕಿಗಳನ್ನು ಹಾರಿಸುವಾಗಲೋ ಗಸಗಸನೆ ನಗುವ ಕ್ಷಣಗಳನ್ನುಹೊರತು ಪಡಿಸಿ-ಉಡುಗೆ, ತೊಡುಗೆಗಳ ಬಗ್ಗೆ ಅಪರೂಪಕ್ಕೆ ಬಲವಂತದ ಆದರ, ಊಟ, ಉಪಚಾರಗಳಲ್ಲಿ ಶುಚಿ-ರುಚಿ ಅತ್ಯಂತ ಕಟ್ಟುನಿಟ್ಟು. ಇದು ಬಿ.ವಿ.ಕೆ. ಯವರ ಬಾಹ್ಯ ಸ್ವರೂಪ.

ಮೂಲತಃ ಬೆಂಗಳುರಿನವರಾದ ಶಾಸ್ತ್ರಿಗಳ ಹುಟ್ಟೂರು ನಂಜನಗೂಡು. ಜನನ ೧೯೧೭ ಜುಲೈ.೩೦. ತಂದೆ ವೆಂಕಟ ಸುಬ್ಬಯನವರು ಶ್ರೀ ಕಂಠೇಶ್ವರನ ಆರಾಧಕರು ಹಾಗೂ ವೈದಿಕ ಸಂಪ್ರದಾಯಸ್ಥರು. ಬಾಲ್ಯದಿಂದಲೇ ಸಂಗೀತದ ಗೀಳು ಹಿಡಿಸಿಕೊಂಡಿದ್ದ ಶಾಸ್ತ್ರಿಗಳು ಭಜನ ಗೋಷ್ಠಿಯೊಂದರಲ್ಲಿ ಹಾಡಿದ್ದನ್ನು ಕೇಳಿದ ಅವರ ಉಪಾಧ್ಯಾಯರಾದ ಸುಬ್ರಹ್ಮಣ್ಯಂ ಎಂಬುವರು ಇವರಿಗೆ ಶಾಸ್ತ್ರೀಯ ಸಂಗೀತ ಕಲಿಯುವಂತೆ ಪ್ರೇರೇಪಿಸಿದರು. ಮುಂದೆ ಮೈಸೂರಿಗೆ ಬಂದ ಶಾಸ್ತ್ರಿಗಳಿಗೆ ಆಸ್ಥಾನ ವಿದ್ವಾಂಸರಾದ ಚಿಕ್ಕರಾಮರಾಯರಲ್ಲಿ ಕ್ರಮಬದ್ಧ ಪಾಠವಾಯಿತು.

ಕಲೆಗಳ ಬಗ್ಗೆ ಶಾಸ್ತ್ರಿಗಳು ಬೆಳೆಸಿಕೊಂಡಿದ್ದ ತೀವ್ರ ಆಸಕ್ತಿಗೆ ಸಾಟಿಯಿಲ್ಲ. ಈ ಸಂಬಂಧವಾಗಿ ಅವರು ಓದದ ಪುಸ್ತಕವಿಲ್ಲ. ವಿಚಾರ ಮಾಡದ ವಿಷಯವಿಲ್ಲ. ಒಂದೇ ಕಲಾ ಪ್ರಕಾರಕ್ಕೆ ತಮ್ಮನ್ನು ಒಪ್ಪಿಸಿಕೊಳ್ಳಲಾರದ ಕುತೂಹಲದ ದೃಷ್ಟಿ. ಚಿತ್ರಕಲೆಯಲ್ಲಿ ಡಿಪ್ಲೊಮಾ ಪಡೆದು ಅದರಲ್ಲೇ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದಿದ್ದ ಶಾಸ್ತ್ರಿಯವರು ವಿಮರ್ಶಕರಾಗಿ ರೂಪುಗೊಂಡದ್ದು ಮೇಲ್ನೋಟಕ್ಕೆ ಆಕಸ್ಮಿಕವೆನಿಸಿದರೂ ಅವರೊಳಗಿನ ಸದಾಕಾಲ ಹೊಸದನ್ನು ಹುಡುಕುವ ಅದಮ್ಯ ತುಡಿತವೇ ನಿಜವಾದ ಕಾರಣವೆನ್ನಬಹುದು.

ಡೆಕ್ಕನ್‌ ಹೆರಾಲ್ಡ್‌, ಪ್ರಜಾವಾಣಿ, ಸುಧಾ, ಜನಪ್ರಗತಿ, ಪ್ರಬುದ್ಧ ಕರ್ನಾಟಕ, ಇಲಸ್ಟ್ರೇಟೆಡ್‌ ವೀಕ್ಲಿ ಮುಂತಾದ ಘನ ಪತ್ರಿಕೆಗಳಲ್ಲಿ ಪ್ರಕಟಗೊಂಡ ಬಿ.ವಿ.ಕೆ. ಯವರ ಲೇಖನಗಳಿಗೆ ಲೆಕ್ಕವಿಲ್ಲ. ಆಳವಾದ ಪರಿಶ್ರಮದ ಫಲರೂಪವಾಗಿ ಮೂಡಿದ ಅವರ ಕೃತಿಗಳು ಅತ್ಯಂತ ಜನಾದರಣೀಯವಾದವು. Traditional Paintings of Karnataka-ಕನ್ನಡ ಮತ್ತು ಇಂಗ್ಲೀಷ್‌, ಎರಡೂ ಆವೃತ್ತಿಗಳಲ್ಲಿ ಹೊಮ್ಮಿದ ಘನತೆವೆತ್ತ ಕೃತಿ. ಭಾರತೀಯ ಪಾಶ್ಚ್ಯಾತ್ಯ, ಶಾಸ್ತ್ರೀಯ, ಸುಗಮ, ಜಾನಪದ ಮುಂತಾಗಿ ಸಂಗೀತದ ಎಲ್ಲ ಪ್ರಕಾರಗಳು, ಚಿತ್ರ, ನಾಟ್ಯ, ಶಿಲ್ಪ, ನಾಟಕ, ಭಾವಚಿತ್ರ, ಪತ್ರಿಕೋದ್ಯಮ, ಮೊದಲಾದ ಎಲ್ಲ ಕಲಾರಂಗಗಳ ಪ್ರಾಚೀನ ಹಾಗೂ ನವೀನ ರೂಢಿ-ಸಂಪ್ರದಾಯಗಳನ್ನು ಅರಗಿಸಿಕೊಂಡಿದ್ದ ಶಾಸ್ತ್ರಿಯವರ ಈ ವಿಷಯಗಳನ್ನು ಕುರಿತ ಬರಹಗಳ ವ್ಯಾಪ್ತಿ ತುಂಬ ದೊಡ್ಡದು. ಮೂರು ತಲೆಮಾರಿನ ಕಲಾವಿದರಲ್ಲಿ ಬಹುಶ್ರುತರನೇಕರ ಆತ್ಮೀಯ ಒಡನಾಟ ಪಡೆದದ್ದರಿಂದ ವ್ಯಕ್ತಿ ಚಿತ್ರಣದಿಂದ ತೊಡಗಿ ಕಲಾ ಪ್ರಪಂಚದ ಗಹನ ವಿಷಯಗಳವರೆಗೆ ಅದರ ಹರಹು.

ವಿದ್ವಾನ್‌ ಸರ್ವತ್ರ ಪೂಜ್ಯತೇ: ಶಾಸ್ತ್ರಿಗಳ ಸೇವೆಯನ್ನು ಬಳಸಿಕೊಂಡ ಅಸಂಖ್ಯ ಸಂಸ್ಥೆಗಳಲ್ಲಿ ಕೆಲವು–ರಾಜ್ಯ ಹಾಗೂ ಕೇಂದ್ರ ಸರ್ಕಾರದ ಹಲವಾರು ಸಾಂಸ್ಕೃತಿಕ ಶಾಖೆಗಳಾದ ಆಕಾಶವಾಣಿ ಆಯ್ಕೆ ಸಮಿತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ, ಇಂಡಿಯನ್‌ ಕೌನ್ಸಿಲ್‌ ಆಫ್‌ ಕಲ್ಚರಲ್‌ ರಿಲೇಷನ್ಸ್‌, ಸೌತ್‌ ಝೋನ್‌ ಕಲ್ಚರಲ್‌ ಸೆಂಟರ್, ಕೇಂದ್ರ ಲಲಿತಕಲಾ ಅಕಾಡೆಮಿ, ಕಾಳಿದಾಸ ಸಮ್ಮಾನ್‌ ಸಮಿತಿ…… ಮೊದಲಾದವು. ಕರ್ನಾಟಕ ಗಾನಕಲಾ ಪರಿಷತ್ತಿನ ಆರಂಭದ ದಿನಗಳಿಂದಲೂ ಅವಿನಾಭಾವ ಸಂಬಂಧ ಬೆಳೆಸಿಕೊಂಡಿದ್ದ ಶಾಸ್ತ್ರಿಗಳದ್ದು ಆ ಸಂಸ್ಥೆಯ ಕಟ್ಟೋಣ ದಲ್ಲಿ ಹಿರಿಯ ಪಾತ್ರ.

ದೇಶ-ವಿದೇಶಗಳ ಸಾಂಸ್ಕೃತಿಕ ಉತ್ಸವ ಸಮಿತಿಗಳಲ್ಲಿ ನಾಮಾಂಕಿತರಾಗಿ ಶ್ರಮಿಸಿದ ಶಾಸ್ತ್ರಿಗಳು ೧೯೮೬ರಲ್ಲಿ ಬೆಂಗಳೂರಿನಲ್ಲಿ ನಡೆದ ಸಾರ್ಕ್‌ ಶೃಂಗ ಸಭೆಯ ಅಂಗವಾಗಿ ಏರ್ಪಡಿಸಿದ್ದ ಅಖಿಲ ಭಾರತೀಯ ಸಾಂಸ್ಕೃತಿಕ ಉತ್ಸವ ‘ದಾಕ್ಷಿಣಿ’ಯ ದಕ್ಷ ಸಮನ್ವಯಕಾರರಾಗಿ ಅಪಾರ ಪ್ರಶಂಸೆಗೆ ಪಾತ್ರರಾದರು. ಇಂಥ ಎಲ್ಲ ಚಟುವಟಿಕೆಗಳ ಮೂಲಕ ಅರ್ಹ ಕಲಾವಿದರಿಗೆ ಸಲ್ಲಬೇಕಾದಕ ಮನ್ನಣೆ, ಸ್ಥಾನಗಳನ್ನು ದೊರಕಿಸಿಕೊಡಲು ಅವರು ಮಾಡಿದ ಯಶಸ್ವೀ ಪ್ರಯತ್ನಗಳನ್ನು ಮರೆಯಲಾಗದು.

೧೯೭೬-ಆಕಾಶವಾಣಿ ವಾರ್ಷಿಕ ಪುರಸ್ಕಾರ, ೧೯೮೨-ಬೆಂಗಳೂರು ಗಾಯನ ಸಮಾಜದ ವಾರ್ಷಿಕ ಸಮ್ಮೇಳನಾಧ್ಯಕ್ಷರಾಗಿ ಪಡೆದ ಸಂಗೀತ ಕಲಾರತ್ನ, ೧೯೮೫- ರಾಜ್ಯೋತ್ಸವ ಪ್ರಶಸ್ತಿ, ೧೯೮೬- ಕರ್ನಾಟಕ ಲಲಿತಕಲಾ ಅಕಾಡೆಮಿಯ ಪುರಸ್ಕಾರ, ಅದೇ ವರ್ಷ ಮದ್ರಾಸಿನ ಮ್ಯೂಸಿಕ್‌ ಅಕಾಡೆಮಿ ಕೊಡಮಾಡಿದ ಟಿ.ಟಿ.ಕೆ.ಪ್ರಶಸ್ತಿ, ೧೯೮೮-ಕರ್ನಾಟಕ ಸಂಗೀತ ನೃತ್ಯ ಅಕಾಕಡೆಮಿ ಪ್ರಶಸ್ತಿ, ೧೯೯೨-ದೆಹಲಿಯ ಲಲಿತಕಲಾ ಅಕಾಡೆಮಿಯಿಂದ ರೀಜನಲ್‌ ಕ್ರಿಟಿಕ್ಸ್ ಅವಾರ್ಡ್, ೧೯೯೫-ಅಕಾಡೆಮಿ ಆಫ್‌ ಮ್ಯೂಸಿಕ್‌, ಬೆಂಗಳೂರು, ಮೈಸೂರು ಟಿ.ಚೌಡಯ್ಯ ಪ್ರಶಸ್ತಿ. ಇವು ಶಾಸ್ತ್ರಿಗಳ ಅನುಪಮ ಸೇವೆಗೆ ಸಂದ ಗೌರವಗಳಲ್ಲಿ ಕೆಲವು. ಇವುಗಳಿಗೆ ಕಿರೀಟ ಪ್ರಾಯವಾಗಿ ಅವರ ೭೫ನೇ ಪ್ರಾಯದಲ್ಲಿ ಅಭಿಮಾನಿಗಳು ಆತ್ಮೀಯತೆಯಿಂದ ಅದ್ಧೂರಿಯಾಗಿ ಸನ್ಮಾನಿಸಿ ಸಮರ್ಪಿಸಿದ ಅಭಿನಂದನಾ ಗ್ರಂಥ ‘ಮುರಳಿ ವಾಣಿ’, ಸಾರ್ಥಕತೆಯ ಮೈಲಿಗಲ್ಲು.

ಒಮ್ಮೆ ಕಂಡು ಮಾತನಾಡಿಸಿದವರನ್ನೂ ಸಾಮಾನ್ಯವಾಗಿ ಮರೆಯದ ಸ್ಮರಣ ಶಕ್ತಿ ಅವರದು. ಆದರೆ, ಯಾರಲ್ಲೂ ಶೀಘ್ರ ಸಲಿಗೆ ಇಲ್ಲ. ಎಲ್ಲರನ್ನೂ ಅಳೆದು ತೂಗಿ ಲನೋಡಿ ಒಮ್ಮೆ ಹತ್ತಿರಕ್ಕೆ ತೆಗೆದುಕೊಂಡರೆಂದರೆ ಬಿಡಲಾರದ ನಂಟು. ಅವರ ಆಸಕ್ತಿಯ ವಿಷಯಗಳ-ಕಲಾಪ್ರಕಾರಗಳಲ್ಲದೆ ಮತ್ತೇನು?-.ಕುರಿತ ಚರ್ಚೆಯಲ್ಲಿ ತಾಸುಗಳು ಸರಿದ ಪರಿವೆಯೇ ಇಲ್ಲದ ತನ್ಮಯತೆ. ಶಿಸ್ತಿನ ಪಾಲನೆ ಸಡಿಲಗೊಳ್ಳುತ್ತಿದ್ದುದೂ ಇಂತಹ ಸಂದರ್ಭಗಳಲ್ಲೇ. ಒಂದು ಪ್ರಶ್ನೆ, ಒಂದು ಸಂದೇಹ ಮುಂದಿಟ್ಟರೆ ಮುಗಿಯಿತು. ಕುಬೇರನ ಖಜಾನೆಗೆ ಕನ್ನ ಹಾಕಿದಂತೆಯೇ. ದಿನಾಂಕ, ತಿಥಿ, ವಾರಗಳೊಡನೆ ವ್ಯಕ್ತಿ, ಘಟನೆಯ ವಿವರಗಳ ಪಂಚಾಂಗ ಸೃಷ್ಠಿ. ಅವರದು ಬತ್ತದ ಉತ್ಸಾಹ, ಬರಿದಾಗದ ವಿಷಯ ಸಂಗ್ರಹ, ವಾಕ್ಪ್ರವಾಹ. ಅದರಲ್ಲಿ ಕೊಚ್ಚಿಹೋಗದೆ ಅದರೊಂದಿಗೆ ಸಾಗಿ ದಡ ಸೇರ ಬಲ್ಲವರಿಗೆ ಮಾತ್ರ ಧನ್ಯತೆಯ ಅನುಭವ ಲಭ್ಯ.

ಗುಣಾಃಪೂಜಾಸ್ಥಾನಂ ಗುಣಿಷು ನ ಚ ಲಿಂಗಂ ನ ಚ ವಯಃ: ಗುಣಗಳೇ ಗೌರವಕ್ಕೆ ಕಾರಣ. ಗುಣವಂತರಲ್ಲಿ ಲಿಂಗಭೇದ ವಯೋಭೇದಗಳಿಲ್ಲ ಎನ್ನುವ ಕವಿ ಭವಭೂತಿ ಬಿ.ವಿ.ಕೆ.ಯವರಿಗೆ ಮಾದರಿ. ಯುವ ಜನತೆಯ ಅನ್ಯೂನ ಶಕ್ತಿ, ಸಾಧ್ಯತೆಗಳಲ್ಲಿ ತುಂಬು ಭರವಸೆಯನ್ನಿರಿಸಿದ್ದರಿಂದ ಸಾಧ್ಯವಾದಲ್ಲೆಲ್ಲ ಈ ಸತ್ವದ ಸದುಪಯೋಗಕ್ಕಾಗಿ ಶ್ರಮಿಸುತ್ತಿದ್ದರು.

ಒಂದು ಸಂಸ್ಥೆಯ ಇಡಿ ಕಾರ್ಯಕ್ರಮ ಸರಣಿಯೊಂದರಲ್ಲಿ ಐವತ್ತು ವರ್ಷ ಮೀರದ ಒಬ್ಬ ಕಲಾವಿದರೂ ಇಲ್ಲದಿರುವುದನ್ನು ಗಮನಿಸಿ ತೀವ್ರವಾಗಿ ವಿರೋಧಿಸಿದ್ದಾಗಿ ಹೇಳಿದ್ದರು. ಹೀಗೆಯೇ ಇನ್ನೊಂದು ಸಂಸ್ಥೆಯವರು ವಿಚಾರ ಸಂಕಿರಣದ ಆಯೋಜನೆಯ ಸಂದರ್ಭದಲ್ಲಿ ಇವರನ್ನು ಸಂಪರ್ಕಿಸಿದಾಗ ತಮ್ಮ ಬದಲಿಗೆ ಮತ್ತೊಬ್ಬ ಯುವ ವಿದ್ವಾಂಸರನ್ನು ಸೂಚಿಸಿ, ಅವರು ಒಪ್ಪದೆ ತಮ್ಮನ್ನೇ ಬರಲು ಆಗ್ರಹಿಸಿದಾಗ ಆಗದೆಂದು ನಿಷ್ಠುರವಾಗಿಯೇ ನುಡಿದಿದ್ದರು. ಇದರಿಂದ ಅವರು ಹಿರಿಯ ವಿದ್ವಾಂಸರ ಮಾರ್ಗದರ್ಶನದ ಪ್ರಯೋಜನವನ್ನು ಅಲ್ಲಗಳೆಯುತ್ತಿದ್ದರೆಂದಲ್ಲ. ಹಳೆ ಬೇರಿನ ಸಾರ ಹೀರಿಕೊಂಡ  ಹೊಸ ಚಿಗುರು ಕಣ್ಸೆಳೆದು ನಳನಳಿಸ ಬೇಕೆಂಬುದಷ್ಟೆ ಅವರ ಕಳಕಳಿ.

ಪ್ರಯೋಗಪ್ರಧಾನಂ ಹಿ ಗಾನಶಾಸ್ತ್ರಮ್‌: ಶಾಸ್ತ್ರಾವಲೋಕನದ ಸಾರ್ಥಕತೆ ಪ್ರಯೋಗದಲ್ಲೇ ಎನ್ನುವುದು ಅವರ ಅಚಲವಾದ ನಿಲುವು. ಪ್ರಾಯೋಗಿಕವಲ್ಲದ ವಿಚಾರಗಳಲ್ಲಿ ಆಸಕ್ತಿ ಕಡಿಮೆ. ಕಲಾ ಪ್ರದರ್ಶನದಲ್ಲಿ ಪಾಂಡಿತ್ಯ ಭಾರಕ್ಕಿಂತ ಕಲಾವಂತಿಕೆಗೇ ಆದ್ಯತೆ. ಈ ಎಚ್ಚರವನ್ನಜು ಅವರು ತಮ್ಮದೇ ವಿಮರ್ಶೆಗಳಲ್ಲೂ ವಹಿಸುತ್ತಿದ್ದುದನ್ನು ಗಮನಿಸಬಹುದು ಹಿರಿತಲೆಮಾರು ಕಿರಿತಲೆಮಾರಿನೊಡನೆ ಬೆಸೆದು ಕೊಳ್ಳುವಂತೆಯೇ ಪಾಂಡಿತ್ಯ, ಪ್ರತಿಭೆಗಳು, ಸಂಪ್ರದಾಯ, ಸ್ವೋಪಜ್ಞತೆಗಳು ಸಮನ್ವಯಗೊಳ್ಳಬೇಕೆನ್ನುವುದು ಶಾಸ್ತ್ರಿಗಳ ಆಶಯ.

ಒಮ್ಮೆ ಅವರೇ ಹೇಳಿ ಏರ್ಪಡಿಸಿದ್ದ ವಿಚಾರ ಸಂಕಿರಣವೊಂದರಲ್ಲಿ ನಾಲ್ವರು ವಿದ್ವಾಂಸರು ತಮ್ಮ ತಮ್ಮ ವಿಷಯ ಪ್ರತಿಪಾದನೆಯನ್ನು ಮಾಡಿ ಮುಗಿಸಿದ ಬಳಿಕ ಅಧ್ಯಕ್ಷ ಭಾಷಣದಲ್ಲಿ ಹೇಳಿಯೇ ಬಿಟ್ಟರು. “ನಾನು ಯಾವ ಉದ್ದೇಶದಿಂದ ಈ ವಸ್ತುವನ್ನು ಆರಿಸಿದ್ದನೋ ಅದು ಸಫಲವಾಗಲಿಲ್ಲ. ನಾಲ್ವರಲ್ಲಿ ಯಾರೊಬ್ಬರು ವಿಷಯದ ಅಂಚಿಗೂ ಬರಲಿಲ್ಲವೆನ್ನುವುದು ವಿಷಾದಕರ”.

ಪುರಾಣಮಿತ್ಯೇವ ನ ಸಾಧು ಸರ್ವಮ್‌: ಹಳೆಯದೆಂದ ಮಾತ್ರಕ್ಕೆ ಎಲ್ಲವೂ ಗ್ರಾಹ್ಯವಲ್ಲ. ಹೊಸದೆಂದು ತ್ಯಾಜ್ಯವಲ್ಲ. ಕಲೆ ನಿಂತ ನೀರಾಗಬೇಕಿಲ್ಲ. ಅರ್ಥಪೂರ್ಣ ಸಂಶೋಧನೆಗಳಿಂದ, ಸತ್ವಯುತ ನವೀನ ಪ್ರಯೋಗಗಳಿಂದ ಮೈತುಂಬಿಕೊಂಡರೆ ಚಿರಾಯುವಾಗುತ್ತದೆ ಎನ್ನುತ್ತಿದ್ದರು. ಅವರ ಸ್ಪೂರ್ತಿದಾಯಕ ಪ್ರೋತ್ಸಾಹಯದ, ದಿಗ್ದರ್ಶನದ ಫಲವಾಗಿ ಲಕ್ಷ್ಯ, ಲಕ್ಷಣಗಳಲ್ಲಿ ಪ್ರಾವೀಣ್ಯಗಳಿಸುವ ಯಶಸ್ವೀ ಪ್ರಯತ್ನ ಮಾಡಿರುವ ಹಲವಾರು ವಿದ್ವಾಂಶರು ಇಂದು ನಮ್ಮ ನಾಡಿನಲ್ಲಿದ್ದಾರೆ.

ಬಿ.ವಿ.ಕೆ. ಎಂದೂ ಉತ್ತಮ ವಾಗ್ಮಿಯಾಗಿ ಗಮನ ಸೆಳೆದವರಲ್ಲ. ಮುಖ ಭಾವ ಬದಲಿಸದೆ, ಏರಿಳಿತವಿಲ್ಲದ ಧ್ವನಿಯಲ್ಲಿ ನೀರಸವೆನ್ನುವಂತೆ ಸಾಗುತ್ತಿದ್ದ ಅವರ ಉಪನ್ಯಾಸವನ್ನು ಗಮನವಿಟ್ಟು ಆಲಿಸುವವರಿಗೆ ಮಾತ್ರ ಅಲ್ಲಲ್ಲಿ ಒಮ್ಮೆಲೆ ಝಗ್ಗನೆ ದೀಪಗಳು ಹತ್ತಿಕೊಳ್ಳುತ್ತಿದ್ದವು. ನಿಜವಾದ ಅರ್ಥದಲ್ಲಿ ಅವರ ಮಾತು enlightening ಆಗುತ್ತಿದ್ದುದು ಹೀಗೆ.

ಭಾಷಣಕ್ಕಿಂತ ಬರವಣಿಗೆಯಲ್ಲೇ ಆಕರ್ಷಣೆ ಹೆಚ್ಚು. ಪೆಡಸೂ ಅಲ್ಲದ ಜಾಳೂ ಅಲ್ಲದ ಬಿಸುಪಿನ ಭಾಷೆ ಅವರದು. ಔಚಿತ್ಯ ಮೀರದ ಶಬ್ದಗಳ ಬಳಕೆಯನ್ನು ಅವರಿಂದಲೇ ಕಲಿಯಬೇಕು. ಹೊಗಳಿಕೆ, ತೆಗಳಿಕೆ ಎರಡನ್ನೂ ಮೀರಿದ ಅಪ್ಪಟ ಸಮದೃಷ್ಟಿ. ಪ್ರಶಂಸೆಯ ವಿಷಯದಲ್ಲಿ ಕೊಂಚ ಜಿಪುಣತೆಯ ಕಡೆಗೇ ವಾಲುವರು. ದೋಷವಿದ್ದಲ್ಲಿ ಅಷ್ಟೇ ನವಿರು.

ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನ ಅನನ್ಯ ಸಂಸ್ಥೆ ಅವರ ಹೃದಯಕ್ಕೆ ಅತ್ಯಂತ ಸಮೀಪವಾಗಿತ್ತು. ಅವರದೇ ಹೆಸರನ್ನು ಪಡೆದು ಧನ್ಯವಾಗಿರುವ ಗ್ರಂಥ ಭಂಡಾರಕ್ಕೆ ಅವರು ನೀಡಿದ ಭೇಟಿಗಳೆಷ್ಟೊ! ಪ್ರತಿಯೊಂದು ಪುಸ್ತಕವನ್ನು ಬೇರೆಯವರು (ಸ್ವತಃ ದೃಷ್ಟಿ ಸೌಕರ್ಯವಿಲ್ಲದ್ದರಿಂದ) ತೆಗೆದು ಶೀರ್ಷಿಕೆಯನ್ನು ಓದುತ್ತಿದ್ದಂತೆಯೇ ಅದರ ಒಟ್ಟು ಜಾತಕ ಅವರ ಬಾಯಿಂದ ತತ್‌ಕ್ಷಣ ಹೊರ ಬೀಳುತ್ತಿತ್ತು. ಅವರ ಸ್ವಂತ ಸಂಗ್ರಹದಲ್ಲಿನ ಸುಮಾರು ೨೦೦೦ ಪುಸ್ತಕಗಳ ಕತೆಯೂ ಇದೇ.

ಬ್ರಹ್ಮಚಾರಿಗಳಾದ ಶಾಸ್ತ್ರಿಗಳ ಮನೆಯ ಇನ್ನುಳಿದ ಸದಸ್ಯರ ಬಗೆಗೆ ಹೇಳದಿರುವುದು ಸಾಧ್ಯವಿಲ್ಲ. ತನ್ನದೇ ವೃದ್ಧಾಪ್ಯ, ಅನಾರೋಗ್ಯವನ್ನು ಮೂಲೆಗೊತ್ತಿ ರೋಗಿಗಳ ಶುಶ್ರೂಷೆ ಮಾಡುವ ನಿಃಸ್ವಾರ್ಥತೆ, ಸಹನೆಗಳ ಪ್ರತಿಮೂರ್ತಿಯಾದ ಸೋದರಿ ಲಲಿತಮ್ಮ; ದೀರ್ಘಕಾಲದ ಯಾತನಾಮಯ ಬದುಕನ್ನು ಧೈರ್ಯದಿಂದ ಎದುರಿಸಿ ನೋವನ್ನು ನುಂಗಿ ನಗಲೆತ್ನಿಸುತ್ತಿದ್ದ. ಸೋದರಿಯ ಮೂವರು ಹೆಣ್ಣು ಮಕ್ಕಳಲ್ಲಿ ಕೊನೆಯವರಾಗಿದ್ದು ಕಳೆದ ವರ್ಷವಷ್ಟೆ ಕಣ್ಮರೆಯಾದ ಸರೋಜಾ; ಸನ್ನಿವೇಶಕ್ಕೆ ತಕ್ಕಂತೆ ಪುರುಷ, ಸ್ತ್ರೀಪಾತ್ರಧಾರಿಗಳಾಗಿ ಒಳ ಹೊರಗೆ ದುಡಿಯುತ್ತಾ ಕಷ್ಟ ಪರಂಪರೆಯ ನಡುವೆಯೂ ಆತ್ಮೀಯತೆಯ ಅಪ್ಯಾಯತೆಯನ್ನು ಕಳೆದುಕೊಳ್ಳದ ಜಯಾ ಮತ್ತು ಶಾಂತಾ (ಸೋದರಿಯ ಪುತ್ರಿಯರು).

ತೀವ್ರ ದೇಹಾಲಸ್ಯದಿಂದ ಬಾಧೆಪಡುವಾಗಲೂ ಬಿ.ವಿ.ಕೆ. ಅವರಲ್ಲಿ ಕುಂದದ ಚೈತನ್ಯ-ಜೀವನೋತ್ಸಾಹಗಳು ಎಂತಹ ನಿರಾಶಾವಾದಿಗಳನ್ನೂ ನಾಚಿಸುವಂಥದ್ದು. ಸುಮಾರು ಎರಡು ವರ್ಷಗಳಷ್ಟು ದೀರ್ಘವಾದ ಹೋರಾಟದಲ್ಲಿ ಕೊನೆಗೆ ಕಾಲನದೇ ಮೇಲುಗೈ. ಮರಣ ಸೆಪ್ಟೆಂಬರ್‌, ೨೨ ೨೦೦೩. ಆದರೆ, ಬಿ.ವಿ.ಕೆ. ಇನ್ನಿಲ್ಲ ಎನ್ನಬಹುದೇ! ದೇಹಕ್ಕಳಿವುಂಟು ಗುಣಕ್ಕಳಿವಿಲ್ಲ. ಹತೇಷು ದೇಹೇಷು ಗುಣಾ ಧರಂತೇ.

ಕೃಪೆ: ಅನನ್ಯ ಅಭಿವ್ಯಕ್ತಿ ಸಂಪುಟ ೬, ಸಂಚಿಕೆ ೩, ಅಕ್ಟೋಬರ್ ೨೦೦೩, ಮುರಳಿ ವಾಣಿ.