Categories
ಪತ್ರಿಕೋದ್ಯಮ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಬಿ.ವಿ. ಮಲ್ಲಿಕಾರ್ಜುನಯ್ಯ

ಪತ್ರಿಕೋದ್ಯಮದ ಹಲವು ಸ್ತರಗಳಲ್ಲಿ ದಕ್ಷತೆ ಮೆರೆದವರು ಬಿ.ವಿ.ಮಲ್ಲಿಕಾರ್ಜುನಯ್ಯ. ಐದು ದಶಕಗಳ ಸುದೀರ್ಘ ಸೇವೆಯ ಪತ್ರಕರ್ತರು, ಪತ್ರಿಕಾ ಸಂಘಟನೆಗಳಲ್ಲೂ ಕ್ರಿಯಾಶೀಲರು.
ತುಮಕೂರು ಜಿಲ್ಲೆಯ ಬ್ರಹ್ಮಸಂದ್ರದವರಾದ ಬಿ.ವಿ.ಮಲ್ಲಿಕಾರ್ಜುನಯ್ಯ ಕನ್ನಡಪ್ರಭ ಪತ್ರಿಕೆಯ ಮೂಲಕ ವೃತ್ತಿಜೀವನ ಆರಂಭ.ಉಪಸಂಪಾದಕ ಸ್ಥಾನದಿಂದ ಸಂಪಾದಕ ಹುದ್ದೆವರೆಗೆ ವಿವಿಧ ಸ್ಥಾನಗಳಲ್ಲಿ ಅಕ್ಷರಸೇವೆ. ಉದಯವಾಣಿಯಲ್ಲಿಯೂ ಆರು ವರ್ಷಗಳ ಕಾಲ ಸಹಾಯಕ ಸಂಪಾದಕರಾಗಿ, ಸುವರ್ಣ ನ್ಯೂಸ್‌ನಲ್ಲಿ ಒಂದೂಕಾಲು ವರ್ಷ ವಾರ್ತಾ ಸಂಯೋಜಕರಾಗಿ ಸೇವೆ. ಬರವಣಿಗೆಯ ಜೊತೆಗೆ ಪತ್ರಿಕಾ ಸಂಘಟನೆಗಳಲ್ಲೂ ಪರಿಶ್ರಮ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಕೇಂದ್ರ ಪತ್ರಿಕಾ ಮಾನ್ಯತಾ ಸಮಿತಿ, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟ, ರಾಜ್ಯ ಪತ್ರಿಕಾ ಅಕಾಡೆಮಿ, ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘ ಮುಂತಾದ ಸಂಘಟನೆಗಳಲ್ಲಿ ಉನ್ನತ ಹುದ್ದೆಗಳನ್ನಲಂಕರಿಸಿ ದುಡಿದವರು.ಪತ್ರಿಕೋದ್ಯಮದ ಉನ್ನತ ಅಧ್ಯಯನಕ್ಕಾಗಿ ವಿದೇಶಗಳ ಪ್ರವಾಸ ಕೈಗೊಂಡವರು.ಸದ್ಯ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷರಾಗಿ ಸೇವಾನಿರತರಾಗಿರುವ ಮಲ್ಲಿಕಾರ್ಜುನಯ್ಯ ಅವರು ಮಾಧ್ಯಮ ಆಕಾಡೆಮಿ ಪ್ರಶಸ್ತಿ, ಬೆಂಗಳೂರು ಪ್ರೆಸ್‌ಕ್ಲಬ್ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಮತ್ತಿತರ ಗೌರವಗಳಿಗೂ ಭಾಜನರು.