ಬಿ.ವೆಂಕಟಾಚಾರ್ಯರು ೧೮೪೫ ರಲ್ಲಿ ನಾಗಮಂಗಲ ತಾಲ್ಲೂಕಿನ ಬಿಂಡಿಗವನೆಯಲ್ಲಿ ಜನಿಸಿದರು. ಎಳೆಯ ವಯಸ್ಸಿನಿಂದಲೂ ಧಾರ್ಮಿಕಪರಿಸರದಲ್ಲಿ ಬೆಳೆದ ವೆಂಕಟಾಚಾರ್ಯರು ಉತ್ತಮ ಸಂಸ್ಕಾರ, ಸನಾತನ ಪ್ರವೃತ್ತಿಯನ್ನು ರೂಡಿಸಿಕೊಂಡವರು. ಆರಂಭದ ಶಿಕ್ಷಣಮನೆಯಲ್ಲಿಯೇ ಆಗಿ ಮುಂದಿನ ಶಿಕ್ಷಣ ತುಮಕೂರಿನಲ್ಲಿ ನಡೆಯಿತು. ವಿದ್ಯಾಭ್ಯಾಸದ ನಂತರ ಗುಮಾಸ್ತೆಯಾಗಿ ಪಬ್ಲಿಕ್ ಪ್ರಾಸಿಕ್ಯೂಟರಾಗಿ ಕೊನೆಗೆ ಮುನ್ಸೀಫರಾಗಿ ಕಾರ್ಯನಿರ್ವಹಿಸಿದರು. ಕನ್ನಡ ಕಾದಂಬರಿ ಸಾಹಿತ್ಯದಲ್ಲಿ ಮರೆಯಲಾಗದ ಮೈಲಿಗಲ್ಲನ್ನು ನೆಟ್ಟು ಅವಿಸ್ಮರಣೀಯವಾಗಿ ಉಳಿದವರು ಬಿ.ವೆಂಕಟಾಚಾರ್ಯರು. ಪಾರತಂತ್ರ, ಹೊರಗಿನ ವ್ಯಾಮೋಹ, ತಮ್ಮರಿವಿನ ಅಭಾವ ಇತ್ಯಾದಿಗಳು ನಾಡನ್ನು ಕವಿದಿರುವಾಗ ಕನ್ನಡ ನಾಡು ನುಡಿಗಳಿಗೆ ಕಾದಂಬರಿ ಸಾಹಿತ್ಯ ರಚನೆಯ ಮೂಲಕ ಹೊಸ ಚೈತನ್ಯವನ್ನು  ಬಿ.ವೆಂಕಟಾಚಾರ್ಯರು ತುಂಬಿದರು.

ಕನ್ನಡಿಗರ ವಾಚನಾಸಕ್ತಿ ಅಬಿರುಚಿಗಳು ಬೆಳೆಯಲು ಗಟ್ಟಿಯಾದ ತಳಹದಿ ಹಾಕಿದರು. ಬಂಗಾಳಿ ಭಾಷೆಯ ಅನೇಕ ಕಾದಂಬರಿಗಳನ್ನು, ನೀಳ್ಗತೆ, ಪ್ರಭಂದಗಳನ್ನು ಕನ್ನಡಕ್ಕೆ ತಂದರು. ಈಶ್ವರಚಂದ್ರ ವಿದ್ಯಾಸಾಗರರ ಭ್ರಾಂತಿವಿಲಾಸ, (ಕಾಮಿಡಿ ಆಫ್ ಎರರ‍್ಸ್‌ನ ಗದ್ಯರೂಪ) ವನ್ನು ಕನ್ನಡೀಕರಿಸಿದರು. ಇದು ಅವರ ಪ್ರಪ್ರಥಮ ಅನುವಾದಿತ ಕೃತಿ ಶಾಕುಂತಲ ಸೀತಾವನವಾಸ, ದ ಕಥೆಗಳು ಭಾಷಾಂತರಗೊಂಡವು.ವಿಷವೃಕ್ಷ, ಕರ್ನಾಟಕ ಗ್ರಂಥಮಾಲೆಯಲ್ಲಿ ಧಾರವಾಹಿಯಾಗಿ ಮೂರು ವರ್ಷಗಳ ಕಾಲ ಪ್ರಚುರವಾಯಿತು.

ರಾಷ್ಟ್ರಾಬಿಮಾನ, ಸ್ತ್ರೀಪರವಾದ ವಿಚಾರಗಳು, ಧರ್ಮ, ಆಚಾರ ಸಂಭಂದವಾದ ಚರ್ಚೆಗಳು, ರೋಮಾಂಚಕಾರಿ ಘಟನೆಗಳು, ಮೋಹಕ ಶೈಲಿ, -ಈ ಎಲ್ಲ ಅಂಶಗಳನ್ನು ಒಳಗೊಂಡ ಬಂಕಿಮಚಂದ್ರರ ಕಾದಂಬರಿಗಳನ್ನು ಕನ್ನಡಕ್ಕೆ ತರಲು ಪ್ರಯತ್ನಿಸಿದರು. ಅವು ದುರ್ಗೇಶ ನಂದಿನೀ, ಆನಂದಮಠ, ದೇವಿಚಾದುರಾಣಿ, ಎಂಬ ಐತಿಹಾಸಿಕ ಕಾದಂಬರಿಗಳು. ಇಲ್ಲಿನ ಸ್ತ್ರೀ ಪಾತ್ರಗಳ ತ್ಯಾಗ, ಸಹನೆ,ಔದಾರ್ಯಗಳಿಂದ ಕೂಡಿರುವಂತೆ ಚಿತ್ರಿಸಲಾಗಿದೆ. ವಿಷವೃಕ್ಷ, ರಜನೀ, ಮುಂತಾದವು ಸಾಮಾಜಿಕ ಕಾದಂಬರಿಗಳು.

ಹೀಗೆ ವೆಂಕಟಾಚಾರ್ಯರು ತಮ್ಮ ಅನುವಾದಗಳ ಮೂಲಕ ಸ್ತ್ರೀ ಪರವಾದ ವಿಚಾರಗಳನ್ನು, ಉದಾತ್ತ ಭಾವನೆಗಳಾದ ಸೇವೆ ತ್ಯಾಗ, ದೇಶಭಕ್ತಿ, ಕರ್ತವ್ಯನಿಷ್ಟೆ, ದೇಶಪ್ರೇಮ, ಸ್ತ್ರೀಶಕ್ತಿ ಇತ್ಯಾದಿಗಳನ್ನು ಸಾರಿದರು ಅವಕಾಶ ತೋಷಿಣಿ, ಎಂಬ ಮಾಸಪತ್ರಿಕೆಯನ್ನು ನಡೆಸಿದರು. ಕನ್ನಡ ಸಾಹಿತ್ಯದಲ್ಲಿ ಮಾತ್ರವಲ್ಲದೆ ಬಂಗಾಳಿಯಲ್ಲಿಯೂ ಇವರು ಪ್ರಸಿದ್ಧಿಯನ್ನು ಪಡೆದರು.

ಸಂಗೀತ.ಪಿ