ಬಿ. ವೆಂಕಟಾಚಾರ್ಯಕನ್ನಡಕ್ಕೆ ಕಾದಂಬರಿಯನ್ನು ತಂದ ಸಾಹಿತಿ. ಬಂಗಾಳಿಯಿಂದ ಪುಸ್ತಕಗಳನ್ನು ಅನುವಾದಿಸಿ ದೂರ ದೂರದಲ್ಲಿದ್ದ ಭಾರತೀಯರನ್ನು ಹತ್ತಿರಕ್ಕೆ ತಂದರು. ಕನ್ನಡದಲ್ಲಿ ಬರೆಯುವುದು, ಕನ್ನಡ ಓದುವುದು ಎಂದರೆ ತಾತ್ಸಾರವಿದ್ದ ಕಾಲದಲ್ಲಿ ಹಣದ ಆಸೆ ಇಲ್ಲದೆ ಕನ್ನಡಕ್ಕಾಗಿ ದುಡಿದರು.

 ಬಿ. ವೆಂಕಟಾಚಾರ್ಯ

ಭಯಂಕರ ಕಾಡು, ಅಕ್ಬರ ಸಾಮ್ರಾಟನು ಕುದುರೆಯ ಮೇಲೆ ಕುಳಿತಿದ್ದಾನೆ-ಕಾಯುತ್ತಾ. ಯಾರಿಗಾಗಿ? ಅವನ ಕಡೆಗೇ ಕೋಪದಿಂದ ಓಡಿಬರುತ್ತಿರುವ ಕಾಡು ಕೋಣಕ್ಕಾಗಿ. ಆಗ-

‘ಕಾಡುಕೋಣವು ಹತ್ತಿರ ಬಂದ ಕೂಡಲೆ, ಅಕ್ಬರ ಸಾಮ್ರಾಟನು ಅದರ ತಲೆಗೆ ಗುರಿಯಿಟ್ಟು ತನ್ನ ಕತ್ತಿಯಿಂದ ಹೊಡೆದನು. ಆದರೆ ಆ ಸಮಯದಲ್ಲಿ, ಕುದುರೆಯು ಬೆದರಿ ಹಾರಿತು; ಕತ್ತಿಯ ಪೆಟ್ಟು ಗುರಿ ತಪ್ಪಿತು; ಕೋಣದ ತಲೆಗೆ ಬೀಳದೆ, ಎದುರಿಗಿದ್ದ ಮರದ ಕೊಂಬೆಗೆ ತಗುಲಿ,ಕತ್ತಿಯು ಎರಡು ತುಂಡಾಗಿ ಮುರಿದುಹೋಯಿತು. ಕೋಣದ ಕೊಂಬು ಕುದುರೆಯ ಹೊಟ್ಟೆಯನ್ನು ಸೀಳಿತು. ಅಕ್ಬರ್ ಕುದುರೆಯಿಂದಿಳಿದನು; ಪಕ್ಕದಲ್ಲಿದ್ದ ಮರದ ಕೊಂಬೆಯನ್ನು ಮುರಿದು, ಕೈಯಲ್ಲಿ ಹಿಡಿದುಕೊಂಡು ನಿಂತನು. ಕೋಣವು ಹೊಸ ಉತ್ಸಾಹದಿಂದ ಅವನ ಕಡೆಗೆ ತಿರುಗಿತು. ಆಗೊಬ್ಬ ರಜಪೂತ ಯುವಕನು ಕುದುರೆಯಿಂದ ಧುಮುಕಿ, ಬೇಗನೆ ಹೋಗಿ ಅಕ್ಬರನೆದುರಿಗೆ ನಿಂತನು ಮತ್ತು ನಕ್ಕು, ‘ಮೊಗಲ ಸಾಮ್ರಾಟನೆ, ರಜಪೂತ ವೀರನು ಯುದ್ಧ ಮಾಡುವ ಬಗೆಯನ್ನು ನೋಡೋಣವಾಗಲಿ’’ ಎಂದು ಹೇಳಿದನು. ಅನಂತರ ದರ್ಪದಿಂದ ಅದರ ತಲೆಗೆ ಒಂದು ಸಲ ತನ್ನ ಕಾಲಿನಿಂದ ಒದ್ದನು; ಕತ್ತಿಯನ್ನು ಕಂಕುಳಲ್ಲಿದ್ದ ಒರೆಯಲ್ಲಿ ಕೂಡಿಸಿದನು; ಹಾರಿ ಹೋಗಿ, ಕೋಣದ ಬೆನ್ನಿನ ಮೇಲೇರಿದನು; ಬಲದ ಕೈಯಿಂದ ಅದರ ಕೊಂಬನ್ನು ಹಿಡಿದನು; ಎಡಗೈಯಿಂದ ಅದರ ಮುಂಗಾಲನ್ನು ಹಿಡಿದೆತ್ತಿ ಕೊಂಬಿನಲ್ಲಿ ಸಿಲುಕಿಸಿದನು. ಎರಡನ್ನೂ ಮುಷ್ಟಿಯಿಂದ ಹಿಡಿದುಕೊಂಡನು. ಪುನಃ ಕತ್ತಿಯನ್ನು ಒರೆಯಿಂದ ಕಳಚಿ, ಕೋಣವನ್ನು ಎರಡು ತುಂಡಾಗಿ ಕಡಿದು ಹಾಕಿದನು.’

ಎಂತಹ ವರ್ಣನೆ! ನಿಜವಾಗಿಯೂ ಆ ಬೇಟೆಯನ್ನು ನಾವೇ ನೋಡುತ್ತಿರುವ ಹಾಗೆ ಅನ್ನಿಸುವುದಿಲ್ಲವೇ? ಇಂತಹ ರೋಮಾಂಚನವನ್ನೇಳಿಸುವ ವರ್ಣನೆಯನ್ನು ಬರೆದವರು ಬಿ. ವೆಂಕಟಾಚಾರ್ಯರು. ಅವರ ‘ಅಮೃತ ಪುಲಿನ’ ಎಂಬ ಕಾದಂಬರಿಯಲ್ಲಿ. ಕನ್ನಡದ ಕಾದಂಬರಿಗಳನ್ನು ಆಸಕ್ತಿಯಿಂದ ಓದುವವರಿಗೆಲ್ಲರಿಗೂ ಬಿ. ವೆಂಕಟಾಚಾರ್ಯರ ಹೆಸರು ಚೆನ್ನಾಗಿಯೇ ಗೊತ್ತುಂಟು.ಕಾರಣ, ಕನ್ನಡ ಕಾದಂಬರಿಗಳ ಪಿತಾಮಹರು ಅವರು.

ಈಗ ನಮಗೆಲ್ಲ ಕಥೆ ಕಾದಂಬರಿಗಳನ್ನು ಓದುವುದು ಎಂದರೆ ಎಷ್ಟು ಇಷ್ಟ ಅಲ್ಲವೆ? ಓದಲು ಕಥೆ, ಕಾದಂಬರಿಗಳೇ ಇಲ್ಲದಿದ್ದರೆ ಎಷ್ಟೊಂದು ಬೇಸರವಾಗುತ್ತಿತ್ತು, ಅಲ್ಲವೆ? ಈಗ ಕನ್ನಡದಲ್ಲಿ ಸೊಗಸಾದ ಕಥೆಗಳ ಪುಸ್ತಕಗಳಿವೆ, ಕಾದಂಬರಿಗಳಿವೆ. ಓದಿ ಸಂತೋಷ ಪಡುತ್ತೇವೆ.

ಆದರೆ ಒಂದು ಕಾಲ ಇತ್ತು, ಆಗ ಕನ್ನಡದಲ್ಲಿ ಕಾದಂಬರಿಗಳೇ ಇರಲಿಲ್ಲ. ಅಂತಹ ಕಾಲದಲ್ಲಿ ಕನ್ನಡಿಗರಿಗೆ ಕಾದಂಬರಿಗಳನ್ನು ಕೊಟ್ಟವರು ಬಿ.ವೆಂಕಟಾಚಾರ್ಯರು.

ಔಷಧಿಗಳನ್ನು ಸುತ್ತಿದ ಹಾಳೆ

ಅವರು ಸಾಹಿತ್ಯದ ಸೇವೆಯು ಆರಂಭವಾದದ್ದು ಹೀಗೆ-

ವೆಂಕಟಾಚಾರ್ಯರು ಕಲ್ಕತ್ತೆಯಿಂದ ಔಷಧಿಗಳನ್ನು ತರಿಸಿದರು; ಕಳುಹಿಸಿದವರು ಆ ಔಷಧಿಗಳನ್ನು ಬಂಗಾಳಿ ಪತ್ರಿಕೆಗಳ ಹಾಳೆಗಳಲ್ಲಿ ಸುತ್ತಿದ್ದರು. ವೆಂಕಟಾಚಾರ್ಯರು ಹಾಳೆಗಳನ್ನು ಬಹು ಆಸಕ್ತಿಯಿಂದ ನೋಡಿದರು. ‘‘ನನಗೂ ಈ ಭಾಷೆಯನ್ನು ಕಲಿಯಬೇಕು, ಓದಬೇಕು ಅಂತ ಅನ್ನಿಸುತ್ತದೆ’’ ಎಂದು, ನಾರಾಯಣ ಐಯಂಗಾರ್ ಎಂಬುವರಲ್ಲಿ ಹೇಳಿಕೊಂಡರು.

ನಾರಾಯಣ ಐಯಂಗಾರ್ ಅವರ ಬಂಧುಗಳು, ಅಲ್ಲೇ ಶಿರಸ್ತೇದಾರರಾಗಿದ್ದರು. ‘‘ಅದಕ್ಕೇನಂತೆ,, ನಾನು ಹೇಗಿದ್ದರೂ ಕಲ್ಕತ್ತೆಗೆ ಹೊರಟಿದ್ದೇನೆ. ಅಲ್ಲಿಂದ ಬಂಗಾಳಿ ಭಾಷೆಯ ಕೆಲವು ಪುಸ್ತಕಗಳನ್ನು ತಂದುಕೊಡುತ್ತೇನೆ, ಕಲಿತುಕೊಳ್ಳಿ’’ ಎಂದರು ಅವರು.

ನಾರಾಯಣ ಐಯಂಗಾರ್ ಅವರು ಕಲ್ಕತ್ತೆಯಲ್ಲಿ ಸ್ವಲ್ಪ ಕಾಲ ತಂಗಿದ್ದು, ಅಲ್ಲಿಯ ಸಾಹಿತ್ಯ-ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಹಿಂತಿರುಗುವಾಗ ಮಾತುಕೊಟ್ಟಂತೆ ಬಂಗಾಳಿ ಪುಸ್ತಕಗಳನ್ನು ತಂದುಕೊಟ್ಟರು. ‘‘ಅಹಾ, ಎಷ್ಟು ಸೊಗಸಾಗಿದೆ ಗೊತ್ತೇ ಈ ಬಂಗಾಳಿಭಾಷೆ! ಅದರ ಸಾಹಿತ್ಯ ಎಷ್ಟು ಶ್ರೀಮಂತವಾಗಿದೆ-ಏನು ಕಥೆ!’’  ಎಂದೆಲ್ಲ ವಿಶದವಾಗಿ ವರ್ಣಿಸಿದರು.

ಮೊದಲೇ ಸರಿ, ವೆಂಕಟಾಚಾರ‍್ಯರು ಸಾಹಿತ್ಯಾಭಿಮಾನಿ. ಇದನ್ನೆಲ್ಲ ಕೇಳಿದ ಮೇಲಂತೂ, ಆದಷ್ಟು ಬೇಗ ಬಂಗಾಳಿ ಭಾಷೆಯನ್ನು ಕಲಿತು, ಆ ಪುಸ್ತಕಗಳನ್ನೆಲ್ಲ ಓದಿ ಅರ್ಥಮಾಡಿಕೊಳ್ಳಬೇಕು ಎಂದು ಮನಸ್ಸು ಮಾಡಿದರು. ಹಾಗವರು ಮನಸ್ಸು ಮಾಡಿದ್ದೇ ಮಾಡಿದ್ದು, ಬಂಗಾಳಿ ಭಾಷೆಯನ್ನು ಓದಿ ಅರ್ಥಮಾಡಿ ಕೊಳ್ಳುವುದಷ್ಟೇ ಅಲ್ಲ, ಆ ಭಾಷೆಯಲ್ಲಿ ಪರಿಣತರೂ ಆಗಿ ಬಿಟ್ಟರು! ಅದು ಹೇಗೆ?

ಭ್ರಾಂತಿ ವಿಲಾಸ

ಬಂಗಾಳದಲ್ಲಿ ಈಶ್ವರಚಂದ್ರ ವಿದ್ಯಾಸಾಗರ ಎನ್ನುವವರು ಪ್ರಸಿದ್ಧ ವಿದ್ವಾಂಸರು. ಅವರೊಂದಿಗೆ ಪತ್ರವ್ಯವಹಾರ ಆರಂಭಿಸಿದರು. ಈ ಪತ್ರವ್ಯವಹಾರಕ್ಕೂ ನಾರಾಯಣ ಐಯಂಗಾರರವರದೇ ಸಹಾಯ. ಬಂಗಾಳಿಯನ್ನು ಕಲಿಯಲು ಆವಶ್ಯಕವಾದ ಪುಸ್ತಕಗಳನ್ನೆಲ್ಲ ಈಶ್ವರಚಂದ್ರ ವಿದ್ಯಾಸಾಗರರು  ಕಳುಹಿಸಿಕೊಟ್ಟರು ಮತ್ತು ತಮ್ಮ ಪತ್ರವ್ಯವಹಾರದ ಮೂಲಕವೇ ಶಿಕ್ಷಣವನ್ನಿತ್ತರು. ಕೇವಲ ಆರೇ ತಿಂಗಳಲ್ಲಿ ವೆಂಕಟಾಚಾರ್ಯರು ಬಂಗಾಳಿಯನ್ನು ಕಲಿತುಬಿಟ್ಟರು! ಇದರಿಂದ ವಿದ್ಯಾಸಾಗರರಿಗೆ ಬಹಳ ಸಂತೋಷವಾಯಿತು. ತಮ್ಮ ಮೆಚ್ಚುಗೆಯ ಸೂಚಕವಾಗಿ ‘‘ನನ್ನ ಈ ಕಾದಂಬರಿಯನ್ನ ತಮ್ಮ ಭಾಷೆಗೆ ಅನುವಾದ ಮಾಡಿಕೊಡಿ’’ ಎಂದು, ‘ಭ್ರಾಂತಿವಿಲಾಸ’ ಎಂಬ ತಮ್ಮ ಬಂಗಾಳಿ ಕಾದಂಬರಿಯನ್ನು ವೆಂಕಟಾಚಾರ್ಯರಿಗೆ ಕಳುಹಿಸಿಕೊಟ್ಟರು.

ಆ ‘ಭ್ರಾಂತಿವಿಲಾಸ’ ಎಂಬ ಕಾದಂಬರಿಯು ಇಂಗ್ಲೆಂಡಿನ ಪ್ರಸಿದ್ಧ ಕವಿಯಾದ ಷೇಕ್ಸ್‌ಪಿಯರ್‌ನ ಸುಂದರ ನಾಟಕವಾದ ‘ಕಾಮಿಡಿ ಆಫ್ ಎರರ‍್ಸ್’ ನ ಕಥೆ. ಕಾದಂಬರಿಯ ರೂಪದಲ್ಲಿ ಬರೆದ ಆ ಕಥೆ ವೆಂಕಟಾಚಾರ್ಯರಿಗೆ ಬಹಳವೇ ಹಿಡಿಸಿತು.

‘‘ನಮ್ಮ ಕನ್ನಡದಲ್ಲಿ ಇಂತಹ ಕಾದಂಬರಿಗಳೇ ಇಲ್ಲವಲ್ಲ! ನಮ್ಮವರು ಇಂತಹ ಕಾದಂಬರಿಗಳನ್ನು ಓದಿಯೇ ಇಲ್ಲ; ನಾನಾದರೂ ಇದರ ಪರಿಚಯವನ್ನು ಅವರಿಗೆ ಮಾಡಿಕೊಡಲೇಬೇಕು; ಕನ್ನಡದಲ್ಲೂ ಒಳ್ಳೆಯ ಕಾದಂಬರಿಗಳು ಬರಲೇಬೇಕು’’ ಎಂದು ನಿರ್ಧರಿಸಿದರು. ಆದರೆ ಈ ನಿರ್ಧಾರವನ್ನು ನಡೆಸುವುದು ಸುಲಭವಾಗಿರಲಿಲ್ಲ.

ಆಗೆಲ್ಲ ಕನ್ನಡ ಓದುವವರು ಬಹಳ ಕಡಿಮೆ, ಎಲ್ಲೆಲ್ಲೂ ಇಂಗ್ಲಿಷಿನ ವ್ಯಾಮೋಹವೇ ವ್ಯಾಮೋಹ! ಹೀಗಾಗಿ, ‘‘ಕನ್ನಡದಲ್ಲಿ ಓದುವುದು ಏನಿದೆ?’’ ಎಂದು ಜನ ಕೇಳುವಂತಾಗಿತ್ತು. ಅಂಥಾದ್ದರಲ್ಲಿ, ಮುದ್ರಿಸುವವರಾರು? ಕೊಳ್ಳುವವರಾರು?

ವೆಂಕಟಾಚಾರ್ಯರಿಗೂ ಈ ಕಷ್ಟಗಳೆಲ್ಲ ತಿಳಿದದ್ದೇ. ಆದರೂ, ದೇವರ ಮೇಲೆ ಭಾರಹಾಕಿ, ಬಲುಶ್ರದ್ಧೆಯಿಂದ ಆ ‘ಭ್ರಾಂತಿವಿಲಾಸ’ ವನ್ನು ಕನ್ನಡಕ್ಕೆ ಅನುವಾದಿಸಿಯೇ ಬಿಟ್ಟರು! ಅದನ್ನು ಅಚ್ಚುಮಾಡಿಸಬೇಕಲ್ಲ? ಅದು ಬಹಳ  ಕಷ್ಟದ ಕೆಲಸ! ಆದ್ದರಿಂದ ಪುಸ್ತಕ ಹೊರಬರುವುದು ಸ್ವಲ್ಪ ತಡವಾಯಿತು. ‘‘ನಾನು ನಿನಗೆ ಸಹಾಯ ಮಾಡುತ್ತೇನೆ, ಯೋಚನೆ ಮಾಡಬೇಡ’’ – ಎಂದು ವಿ.ಎನ್.ನರಸಿಂಹ ಐಯಂಗಾರ್‌ರವರು ಮುಂದೆ ಬಂದರು. ಅವರು ವೆಂಕಟಾಚಾರ್ಯರ ನೆಂಟರು. ಅವರ ನೆರವಿನಿಂದ ೧೮೭೬ ನೆಯ ಇಸವಿಯಲ್ಲಿ ‘ಭ್ರಾಂತಿ ವಿಲಾಸ’  ಕನ್ನಡಿಗರ ಕೈ ಸೇರಿತು; ಜನಪ್ರಿಯವಾಯಿತು.

‘ಭ್ರಾಂತಿ ವಿಲಾಸ’ವನ್ನು ಮದ್ರಾಸ್ ವಿಶ್ವವಿದ್ಯಾನಿಲಯ ದವರು ಮೂರುನಾಲ್ಕು ಪರೀಕ್ಷೆಗಳಿಗೆ ಕನ್ನಡ ಪಠ್ಯಗ್ರಂಥವಾಗಿ ಇಟ್ಟರು. ಅದೂ, ಅದು ಹೊರಬಂದ ಮರುವರ್ಷವೇ! ಕೇಳಬೇಕೇ ಈಶ್ವರಚಂದ್ರ ವಿದ್ಯಾಸಾಗರರ ಆನಂದವನ್ನು? ಹೆಮ್ಮೆಯನ್ನು? ವೆಂಕಟಾಚಾರ್ಯರಿಗೆ ತಮ್ಮ ಬಂಗಾಳಿ ಭಾಷೆಯನ್ನು ಹೇಳಿಕೊಟ್ಟದ್ದು ಸಾರ್ಥಕವಾಯಿತು ಎನ್ನಿಸಿರಬೇಕು ಅವರಿಗೆ. ತಮ್ಮ ಎಲ್ಲ ಪುಸ್ತಕಗಳನ್ನೂ ಅನುವಾದ ಮಾಡಲು ಒಪ್ಪಿಗೆ ಕೊಟ್ಟುಬಿಟ್ಟರು!

ಸ್ವಲ್ಪ ಕಾಲದಲ್ಲಿಯೇ, ಈಶ್ವರಚಂದ್ರರವರ ‘ಸೀತಾ ವನವಾಸ’ ಮತ್ತು ‘ಶಾಕುಂತಲ’ ಗ್ರಂಥಗಳು ವೆಂಕಟಾ ಚಾರ್ಯರ ಲೇಖನಿಯಿಂದ ಹೊರಬಂದವು. ಅವೂ ಸಹ ಕನ್ನಡಿಗರ ಮೆಚ್ಚುಗೆ ಪಡೆದವು, ‘‘ಇನ್ನಷ್ಟು ನಮಗೆ ಇಂತಹ ಬಂಗಾಳಿ ಗ್ರಂಥಗಳ ಅನುವಾದಗಳು ಬೇಕು. ನಾವವನ್ನು ಓದಲೇಬೇಕು’’  ಎಂಬ ಬೇಡಿಕೆ ವೆಂಕಟಾಚಾರ್ಯರನ್ನು ಮುಟ್ಟಿತು. ಹೀಗೆ, ಬಂಗಾಳಿ ಮತ್ತು ಕನ್ನಡ ಭಾಷೆಗಳ ನಡುವೆ ಸೇತುವೆಯಾದರು, ವೆಂಕಟಾಚಾರ್ಯರು.

ಬಾಲ್ಯ, ವಿದ್ಯಾಭ್ಯಾಸ

ವೆಂಕಟಾಚಾರ್ಯರ ಪೂರ್ವಜರ ಸ್ಥಳ ಕೊಳ್ಳೇಗಾಲ. ಅವರ ತಂದೆಯವರ ಹೆಸರು ಗರುಡಾಚಾರ್ಯರು ಎಂದು. ಗರುಡಾಚಾರ್ಯರಿಗೆ ಆರು ಜನ ಗಂಡುಮಕ್ಕಳು. ವೆಂಕಟಾಚಾರ್ಯರು ಎರಡನೆಯವರು. ಅವರು ಹುಟ್ಟಿದ್ದು ೧೮೪೫ನೆಯ ಇಸವಿಯಲ್ಲಿ.

ಗರುಡಾಚಾರ್ಯರು ಸಂಸ್ಕೃತ ಪಂಡಿತರು. ಪ್ರತಿನಿತ್ಯ ಬೆಳಗಿನ ಜಾವ ಹನ್ನೆರಡು ಮೈಲಿ ದೂರದಲ್ಲಿದ್ದ ಕಾವೇರಿನದಿಗೆ ಹೋಗಿ ಸ್ನಾನ ಮಾಡುವುದು ಅವರ ಪದ್ಧತಿ. ಈ ಮಗನನ್ನು ತಮ್ಮ ಜೊತೆಯಲ್ಲಿ ಕರೆದುಕೊಂಡು ಹೋಗಿ, ದಾರಿಯಲ್ಲಿ ಅಮರಪಾಠವನ್ನು ಹೇಳಿಕೊಡುತ್ತಿದ್ದರು.

ವೆಂಕಟಾಚಾರ್ಯರ ತಂದೆಯವರು ಕೊಳ್ಳೇಗಾಲವನ್ನು ಬಿಟ್ಟು, ಚಿತ್ರದುರ್ಗಕ್ಕೆ ಬಂದರು. ‘‘ಭೇಷ್, ಯಾವ ಪ್ರಸಂಗವನ್ನಾಗಲಿ ಸ್ವಾರಸ್ಯವಾಗಿ ಹೇಳಬಲ್ಲ!’’ ಎಂದು ಮಗನ  ಶಕ್ತಿಯನ್ನು ಗುರುತಿಸಿದರು; ಅವನ ವಿದ್ಯಾಭ್ಯಾಸದಲ್ಲಿ ವಿಶೇಷ ಆಸಕ್ತಿಯನ್ನು ವಹಿಸಿದರು. ಅವರ ಪ್ರಾರಂಬಿಕ ಶಿಕ್ಷಣವು ಮನೆಯಲ್ಲಿಯೇ ನಡೆಯಿತು. ಅನಂತರ ವೆಂಕಟಾಚಾರ್ಯರು ತುಮಕೂರಿನ ಇಂಗ್ಲಿಷ್ ಶಾಲೆಗೆ ಸೇರಿ, ನಾಲ್ಕು-ಆರು ವರ್ಷಗಳಲ್ಲಿ ಜೂನಿಯರ್ ಸೀನಿಯರ್ ಪರೀಕ್ಷೆಗಳನ್ನೂ ಮಾಡಿಕೊಂಡರು. ಚಿಕ್ಕ ವಯಸ್ಸಿನಲ್ಲೇ ಮದುವೆಯೂ ನಡೆಯಿತು.

ವೆಂಕಟಾಚಾರ್ಯರು ಸರಕಾರದಲ್ಲಿ ಗುಮಾಸ್ತೆ ಕೆಲಸಕ್ಕೆ ಸೇರಿದಾಗ, ಅವರಿಗೆ ಕೇವಲ ಹದಿನಾರು ಹದಿನೇಳು ವರ್ಷ  ಅಷ್ಟೇ. ಎರಡುಮೂರು ವರ್ಷಗಳಲ್ಲೇ ಅಕೌಂಟೆಂಟರಾಗಿ ಚಿತ್ರದುರ್ಗಕ್ಕೆ ಬಂದರು. ಬಳಿಕ ಶಿವಮೊಗ್ಗೆಯಲ್ಲಿ ಡಿವಿಜನ್ ಹೆಡ್‌ಮುನ್ಷಿ ಕೆಲಸ, ಆಮೇಲೆ ಡಿಸ್ಟ್ರಿಕ್ಟ್ ಕೋರ್ಟ್ ಶಿರಸ್ತೇದಾರ್, ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್ ಹುದ್ದೆಗಳು.

ಈ ರೀತಿಯಾಗಿ  ಬೇಗಬೇಗನೆ ಮೇಲಿನ ಹುದ್ದೆಗಳು ದೊರೆಯಲು ಕಾರಣ?

ಅವರ ಕಾರ್ಯನಿಷ್ಠೆ ಮತ್ತು ಕಾರ್ಯದಕ್ಷತೆ.

ಶಿವಮೊಗ್ಗದಿಂದ ಎಡೆಹಳ್ಳಿಗೆ ಅಂದರೆ, ಈಗಿನ ನರಸಿಂಹರಾಜಪುರಕ್ಕೆ, ಮುನ್ಸೀಫರಾಗಿ ಬಂದರು. ಅಷ್ಟು ಹೊತ್ತಿಗೆ ಅವರು ಸಾಹಿತ್ಯ ಕ್ಷೇತ್ರದಲ್ಲಿ ಬಹಳ ಕೆಲಸ ಮಾಡಿದ್ದರು. ತಮ್ಮ ಕಾದಂಬರಿಗಳನ್ನು ಆಗಿನ ಮೈಸೂರು ಸಂಸ್ಥಾನದ ಯುವರಾಜರಾಗಿದ್ದ (ಎಂದರೆ ಮಹಾರಾಜರ ತಮ್ಮ) ಶ್ರೀ ಕಂಠೀರವ ನರಸಿಂಹರಾಜ ಒಡೆಯರ್ ಅವರಿಗೆ ಅರ್ಪಿಸಿದರು. ಆದರಿಂದಲೇ ಅವುಗಳಿಗೆ ‘ಶ್ರೀ ನರಸಿಂಹರಾಜ ಒಡೆಯರ್‌ರವರ ಪರಂಪರೆ’ ಎಂತಲೇ ಹೆಸರು. ಸ್ವಲ್ಪ ಕಾಲವಾದ ಮೇಲೆ ವೆಂಕಟಾಚಾರ್ಯರಿಗೆ ಚಿಕ್ಕಬಳ್ಳಾಪುರ, ಅಲ್ಲಿಂದ ಕೋಲಾರ, ಅಲ್ಲಿಂದ ಮೈಸೂರಿಗೆ ವರ್ಗವಾಯಿತು. ಮೈಸೂರಿಗೆ ಬಂದವರೇ, ಪಟ್ಟಾಗಿ ಕುಳಿತು, ಅನೇಕ ಪುಸ್ತಕಗಳನ್ನು ಬರೆದರು. ೧೯೦೨ ನೆಯ ಇಸವಿ ಅಕ್ಟೋಬರ್ ತಿಂಗಳಲ್ಲಿ, ಒಂದನೇ ತರಗತಿ ಮುನ್ಸೀಫರಾಗಿದ್ದಾಗ, ಸರ್ಕಾರಿ ಕೆಲಸದಿಂದ ನಿವೃತ್ತರಾದರು. ಅನಂತರ ತಮ್ಮ ವಿರಾಮಕಾಲ ವನ್ನೆಲ್ಲ ಕನ್ನಡಸಾಹಿತ್ಯ ಸೇವೆಗೆಂದೇ ಮೀಸಲಾಗಿಟ್ಟುಬಿಟ್ಟರು.

ಪುಸ್ತಕ ಭಂಡಾರ

ವೆಂಕಟಾಚಾರ್ಯರ ಕೋಣೆಯಲ್ಲಿ ಒಂದು ಭೂತಾಕಾರದ, ಕಬ್ಬಿಣದ ತಿರುಗುವ ಪುಸ್ತಕ ಬೀರುವಿತ್ತು. ಅದರ ಭರ್ತಿ ಸಹಸ್ರಾರು ರೂಪಾಯಿ ಬೆಲೆಬಾಳುವ ಗ್ರಂಥಗಳು. ನಿಘಂಟುಗಳು, ವಂಗೀಯ ವಿಶ್ವಕೋಶಗಳು; ಬರೆಯಲು ಒಂದು ತಗ್ಗಿನ ಡೆಸ್ಕು; ನೆಲದ ಮೇಲೆ ಕೃಷ್ಣಾಜಿನ ಹಾಕಿಕೊಂಡು ಕೂತು ಬರೆಯುತ್ತಿದ್ದರು. ಬರೆಯುತ್ತಿದ್ದಂತೆಯೇ ಕೈನೀಡಿ, ಆ ಪುಸ್ತಕ ಬೀರುವನ್ನು ತಿರುಗಿಸುತ್ತಿದ್ದರು; ತಿರುಗಿಸುತ್ತಾ ತಿರುಗಿಸುತ್ತಾ ತಮಗೆ ಬೇಕಾದ ಪುಸ್ತಕಗಳನ್ನು ಒಂದೊಂದಾಗಿ ತೆಗೆಯುತ್ತಿದ್ದರು-ಓದುತ್ತಿದ್ದರು -ಇಡುತ್ತಿದ್ದರು-ಬರೆಯುತ್ತಿದ್ದರು.

ಬಂಗಾಳಿಭಾಷೆಯ ಬಗ್ಗೆ ಅವರಿಗಿದ್ದ ಈ ಪ್ರೇಮ-ಶ್ರದ್ಧೆ, ಅವರ ಈ ಸಾಹಸ-ಸಾಧನೆ ಇವುಗಳು ಬಂಗಾಳದ ಹಲವು ಹಿರಿಯರಿಗೇ ವಿಸ್ಮಯವನ್ನು ಉಂಟುಮಾಡಿದವು. ಕನ್ನಡನಾಡಿಗೆ ಬಂದಾಗ, ಅವರು ವೆಂಕಟಾಚಾರ್ಯರನ್ನು ಹುಡುಕಿಕೊಂಡು ಬಂದರು, ಅವರ ಪುಸ್ತಕ ಭಂಡಾರವನ್ನು ಕಂಡು ದಂಗಾದರು. ‘‘ನಾವೇ ಕೇಳಿಲ್ಲ-ಕಂಡಿಲ್ಲ, ಅಂಥಾ ಅಪೂರ್ವ ಗ್ರಂಥಗಳು! ಎಲ್ಲಿಂದ ಸಂಪಾದಿಸಿದಿರಿ?’’ ಎಂದು ಅವರು ವೆಂಕಟಾಚಾರ್ಯರನ್ನು ಅಭಿನಂದಿಸುತ್ತಿದ್ದರಂತೆ! ರವೀಂದ್ರನಾಥ ಠಾಕೂರರ ತಂದೆ ಮಹರ್ಷಿ ದೇವೇಂದ್ರ ನಾಥರು, ಸ್ವಾಮಿ ವಿವೇಕಾನಂದರು ವೆಂಕಟಾಚಾರ್ಯರ ಮನೆಗೆ ಬಂದು ಹೋದವರಲ್ಲಿ ಮುಖ್ಯರಾದವರು.ಶ್ರೀ ರಾಮಕೃಷ್ಣ ಮಠದ ಸಂನ್ಯಾಸಿಗಳಂತೂ ಅವರ ಸಂದರ್ಶನಕ್ಕೆ ಬರುತ್ತಲೇ ಇದ್ದರು.

ವಿವೇಕಾನಂದರ ಪರಿಚಯ

ಸ್ವಾಮಿ ವಿವೇಕಾನಂದರ ಪರಿಚಯ ವೆಂಕಟಾಚಾರ್ಯರಿಗೆ ಆದದ್ದು ಹೀಗೆ. ಸ್ವಾಮಿ ವಿವೇಕಾನಂದರು ಅಮೇರಿಕಕ್ಕೆ ಹೊರಟಿದ್ದರು; ಹೋಗುವ ಮೊದಲು ದಕ್ಷಿಣಾಭಾರತದ ಪ್ರವಾಸವನ್ನು ಮಾಡುತ್ತಾ ಪುದುಚೇರಿಗೆ ಬಂದಿದ್ದರು. ವೆಂಕಟಾಚಾರ್ಯರ ಮಕ್ಕಳಿಗೂ ಬಂಗಾಳಿ ಭಾಷೆ ಚೆನ್ನಾಗಿ ಬರುತ್ತಿತ್ತು. ತಮ್ಮ ಕೃತಿಗಳು ಅಚ್ಚಾಗುವಾಗ ಕರಡು ಹಾಳೆಗಳನ್ನು ಓದಿ ತಿದ್ದಲು, ವೆಂಕಟಾಚಾರ್ಯರು ತಮ್ಮ ಹೆಂಡತಿ-ಮಕ್ಕಳಿಗೂ ಬಂಗಾಳಿ ಭಾಷೆಯನ್ನು ಕಲಿಸಿಕೊಟ್ಟಿದ್ದರು. ಅವರೆಲ್ಲಾ ಬಂಗಾಳಿ ಭಾಷೆಯಲ್ಲಿ ಮಾತನಾಡತೊಡಗಿದರೋ ಇಲ್ಲವೊ, ವಿವೇಕಾನಂದರು ಮೂಗಿನ ಮೇಲೆ ಬೆರಳಿಟ್ಟುಕೊಂಡರು.

ಹೊಸ ಯುಗ ಪ್ರಾರಂಭವಾಯಿತು

ವೆಂಕಟಾಚಾರ್ಯರು ಅನುವಾದ ಮಾಡಿದ ‘ಭ್ರಾಂತಿವಿಲಾಸ’ ಮೊದಲಾದ ಕಾದಂಬರಿಗಳನ್ನು ಓದಿದ ನಮ್ಮ ಕನ್ನಡಿಗರಿಗೆ ಹೊಸ ಅನುಬವ ಆಯಿತು. ಇನ್ನಷ್ಟು ಅಂತಹ ಪುಸ್ತಕಗಳು ಬೇಕು ಎಂಬ ಹಂಬಲ ಮೂಡಿತು. ಆ ಹತ್ತೊಂಬತ್ತನೆಯ ಶತಮಾನದಲ್ಲಿ ಅದೇ ತಾನೇ ಹೊಸಸಾಹಿತ್ಯದ ಆರಂಭ; ಕೆಂಪು ನಾರಾಯಣನ ‘‘ಮುದ್ರಾ ಮಂಜೂಷ’  ಎಂಬ ಗದ್ಯಗ್ರಂಥ ಪ್ರಕಟವಾಗಿತ್ತು. ಮುಂದೆ ಪ್ರಕಟವಾದ ಮೊಟ್ಟ ಮೊದಲ ಸುದೀರ್ಘ ಕಥೆ ಅಥವಾ ಕಾದಂಬರಿ ಎಂದರೆ, ವೀಗಲ್ ಎಂಬುವರು ಇಂಗ್ಲಿಷಿನಿಂದ ಮಾಡಿದ ‘ಫಿಲಿಗ್ರಿಮ್ಸ್ ಪ್ರೋಗ್ರೆಸ್’ ಕಾದಂಬರಿಯ ಅನುವಾದ, ಅದಕ್ಕೆ ಕನ್ನಡದಲ್ಲಿ ಹೆಸರು ‘ಯಾತ್ರಿಕನ ಸಂಚಾರ’ (೧೮೪೭). ಆಮೇಲೆ,ಮಾನವಿವೀರಪ್ಪನು ಬರೆದ ನಲವತ್ತು ಕಥೆಗಳ ‘ಕಥಾಸಾಗರ’  (೧೮೫೧). ವೃತ್ತಪತ್ರಿಕೆಗಳೂ ಹೆಚ್ಚು ಇರಲಿಲ್ಲ. ೧೮೪೨ರಲ್ಲಿ ಮಂಗಳೂರಿನಲ್ಲಿ ಪ್ರಾರಂಭವಾದ ‘ಕನ್ನಡ ಸಮಾಚಾರ’, ಸುದ್ದಿಗಳಿಗಾಗಿಯೇ ಬೆಂಗಳೂರಲ್ಲಿ ಪ್ರಾರಂಭವಾದ ‘ಮೈಸೂರು ವೃತ್ತಾಂತ ಬೋಧಿನಿ’,  ೧೮೬೫ ರಲ್ಲಿ ಆರಂಭವಾದ ‘ಕರ್ನಾಟಕ ಪ್ರಕಾಶಿಕಾ’,  ಧಾರವಾಡದ ‘ಚಂದ್ರೋದಯ, ‘ಬೆಳಗಾಂವಿಯ ‘ಕರ್ನಾಟಕ ಮಿತ್ರ’, ಹೀಗೆ ಎಣಿಸುವಷ್ಟು ವೃತ್ತಪತ್ರಿಕೆಗಳು ಅದೇ ತಾನೆ ಕಾಣಿಸಿಕೊಂಡಿದ್ದವು. ಇಂದಿನಂತೆ ಧಾರವಾಹಿಗಳಂತೂ ಇರಲೇ ಇಲ್ಲ. ಇನ್ನು ಕಾದಂಬರಿಗಳು ಜನಪ್ರಿಯವಾಗುವುದು ಹೇಗೆ? ಜೊತೆಗೆ, ಕನ್ನಡಿಗರು ಕನ್ನಡದಲ್ಲಿ ಮಾತನಾಡುವುದು ಸಹ ಅಪಮಾನವೆಂದುಕೊಂಡು, ಇಂಗ್ಲಿಷಿನಲ್ಲಿ ಮೆರೆಯುತ್ತಿದ್ದ ಕಾಲ ಅದು! ಹಾಗಿರುವಲ್ಲಿ, ವೆಂಕಟಾಚಾರ‍್ಯರು ಕನ್ನಡ

ದಲ್ಲಿ ಕಾದಂಬರಿ ಯುಗವನ್ನೇ ನಿರ್ಮಿಸಿಬಿಟ್ಟರು. ಯಾರ ಕೈಯಲ್ಲಿ ನೋಡಲಿ, ವೆಂಕಟಾಚಾರ‍್ಯರ ಕಾದಂಬರಿಗಳು. ಅವರು ಬರೆದಿರುವುದು ಒಂದಲ್ಲ, ಎರಡಲ್ಲ, ಸುಮಾರು ಎಪ್ಪತ್ತೆ ದು ಕೃತಿಗಳು! ಅವುಗಳಲ್ಲಿ ಅರವತ್ತು ಕೃತಿಗಳು ಕಾದಂಬರಿ ಹಾಗೂ ಇತರ ಕಥನಗಳೇ ಆಗಿವೆ.

ನಿಜ, ಅವರ ಕಾದಂಬರಿಗಳು ಬಂಗಾಳಿ ಕಾದಂಬರಿಗಳ ಅನುವಾದಗಳು. ಆದರೆ, ಅವನ್ನು ಓದಿದರೆ ಅವು ಅನುವಾದಗಳೆಂದು ಯಾರಿಗೂ ಅನ್ನಿಸುವುದೇ ಇಲ್ಲ! ನಾವೇ ಆ ವಾತಾವರಣದಲ್ಲಿ ಒಂದಾಗಿ, ಕಥಾನಾಯಕ ನಾಯಕಿಯರ ಜೊತೆಗೂ ಓಡಾಡುತ್ತಿದ್ದೇವೆಯೇನೋ ಎಂದೆನ್ನಿಸುತ್ತದೆ.

ಕನ್ನಡಿಗರಿಗೆ ‘ವಂದೇ ಮಾತರಂ’

‘ವಂದೇ ಮಾತರಂ’ ಎಂಬ ಹಾಡನ್ನು ಕೇಳಿದ್ದೀರಲ್ಲ? ನಮ್ಮ ತಾಯಿಯಾದ ಈ ದೇಶಕ್ಕೆ ವಂದನೆ ಸಲ್ಲಿಸುವ ಹಾಡು ಅದು. ಅದನ್ನು ಹಾಡುತ್ತಿದ್ದರೆ, ಕೇಳುತ್ತಿದ್ದರೆ ರೋಮಾಂಚನವಾಗುತ್ತದೆ. ಭರತಮಾತೆಯ ಭವ್ಯ ಸ್ವರೂಪ ಕಣ್ಣಿಗೆ ಕಟ್ಟುತ್ತದೆ. ಈ ಮಾತೆಯ ಮಕ್ಕಳಾದ ನಾವೆಲ್ಲ ಒಂದು ಎಂಬ ಭಾವ ಹೃದಯವನ್ನು ತುಂಬುತ್ತದೆ. ನಮ್ಮ ದೇಶ ಬ್ರಿಟಿಷರ ಮುಷ್ಟಿಯಲ್ಲಿದ್ದಾಗ, ನಾವು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದಾಗ ‘ವಂದೇ ಮಾತರಂ’ ಒಂದು ಮಂತ್ರ ವಾಗಿತ್ತು. ದೇಶದ ಮೂಲೆ ಮೂಲೆಯಲ್ಲಿರುವ ಬಾರತೀಯರಿಗೂ ಈ ನಾಡಿನ ಮಕ್ಕಳು ತಾವು, ಈ ನಾಡಿನ ಭಾಗ್ಯ ತಮ್ಮ ಭಾಗ್ಯ ಎಂಬ ಅರಿವನ್ನು ಹೃದಯಕ್ಕೆ ಮುಟ್ಟಿಸುವ ಹಾಡು ಮೊದಲು ಪ್ರಕಟವಾದದ್ದು ಬಂಕಿಮಚಂದ್ರರ ‘ಆನಂದ ಮಠ’  ಕಾದಂಬರಿಯಲ್ಲಿ; ಕನ್ನಡಿಗರಿಗೆ ಲಭ್ಯವಾದದ್ದು ವೆಂಕಟಾಚಾರ್ಯರು ಆ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿದಾಗ.

ಅನುವಾದಗಳು

ಮುಂದೆ ವೆಂಕಟಾಚಾರ್ಯರು ಹರಪ್ರಸಾದ ಶಾಸ್ತ್ರಿ, ರಮೇಶಚಂದ್ರದತ್ತ, ಯೋಗೀಂದ್ರನಾಥ ಚಟ್ಟೋಪಾಧ್ಯಾಯ, ಯೋಗಿಂದ್ರನಾಥ ಬಸು ಇವರುಗಳ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿದರು. ಹಾಗೂ ಲೆಕ್ಕವಿಲ್ಲದಷ್ಟು ಬಂಗಾಳಿ ಗ್ರಂಥಗಳನ್ನು ತರಿಸಿಕೊಂಡು ಓದಲಾರಂಭಿಸಿದರು. ಬಂಗಾಳದ ಖ್ಯಾತ ಸಾಹಿತಿ ಬಂಕಿಮಚಂದ್ರರ ಪ್ರಭಾವ ಅವರಮೇಲೆ ಬಹಳವೇ ಆಯಿತು. ಬಂಕಿಮಚಂದ್ರ ಚಟ್ಟೋಪಾಧ್ಯಾಯರ ಒಂದೊಂದು ಕಾದಂಬರಿಯೂ ಜನರಲ್ಲಿ ರಾಷ್ಟ್ರಪ್ರಜ್ಞೆಯನ್ನು ಎಚ್ಚರಿಸುವ ಒಂದು ಶಕ್ತಿ. ಅವನ್ನೆಲ್ಲ ಕನ್ನಡಿಗರ ಮುಂದೆ ಇಡದಿದ್ದಲ್ಲಿ, ಬಂಗಾಳಿ ಕಲಿತೇನು ಸಾರ್ಥಕ? ಸರಿ-ನೋಡ ನೋಡುವಲ್ಲಿ ಬಂಕಿಮಚಂದ್ರರ ಅಮೋಘ ಗ್ರಂಥಗಳನ್ನು ಕನ್ನಡಕ್ಕೆ ಅನುವಾದ ಮಾಡಿಯೇಬಿಟ್ಟರು!

ಆಗಿನ ಬಂಗಾಳದ ಜನರಿಗೆ ಬಂಕಿಮಚಂದ್ರರೆಂದರೆ ಬಹಳ ಆದರ. ಅವರ ಪರಿಚಯವನ್ನು ಇಲ್ಲಿಯವರಿಗೆ ಮಾಡಿಕೊಟ್ಟಿದ್ದು ಕನ್ನಡ ಬರಹಗಾರರಿಗೂ ಸ್ಫೂರ್ತಿ ದಾಯಕವಾಯಿತು. ‘‘ನಾವೂ ಹೀಗೇ ಬರೆಯಬೇಕು, ಇಂತಹ ಶ್ರೇಷ್ಠ ಕಥಾವಸ್ತುಗಳನ್ನೇ ಆರಿಸಿಕೊಳ್ಳಬೇಕು’’ ಎಂದೆನ್ನಿಸಿರಲೇಬೇಕು. ಆವರೆಗೆ ಚರಿತ್ರೆಯ ವಿಷಯಗಳನ್ನು ಬಳಸಿಕೊಂಡು ಯಾರೂ ಕನ್ನಡದಲ್ಲಿ ಕಾದಂಬರಿಗಳನ್ನು ಬರೆದಿರಲಿಲ್ಲ. ಅಲ್ಲದೆ, ಆ ಕುತೂಹಲ ತುಂಬಿದ ಸನ್ನಿವೇಶಗಳು, ಒಳ್ಳೆ ಸುಂದರ ಪದಗಳಿಂದ ಕೂಡಿದ ವರ್ಣನೆಗಳು-ಇವು ಯಾವುದಕ್ಕೂ ಸ್ವಲ್ಪವೂ ಲೋಪ ಬಾರದಂತೆ ಕನ್ನಡದಲ್ಲಿ ವೆಂಕಟಾಚಾರ್ಯರು ತಂದಿರುವುದು ಮಹಾಸಾಹಸದ ಕೆಲಸ!

ವೆಂಕಟಾಚಾರ್ಯರು ಬರೀ ಕಾದಂಬರಿಗಳನ್ನಷ್ಟೇ ಅನುವಾದಿಸಲಿಲ್ಲ, ಹಾಸ್ಯಮಯವಾದ ಕಥೆಗಳನ್ನೂ, ವಿಚಾರಮಯ ಗ್ರಂಥ ಹಾಗೂ ಪ್ರಬಂಧಗಳನ್ನೂ ಕನ್ನಡಕ್ಕೆ ತಂದಿರುವರು.ಇವರು ಅನುವಾದಿಸಿರುವ ‘ಲೋಕ ರಹಸ್ಯ’ ಎಂಬುದು ಕನ್ನಡದಲ್ಲಿ ಮೊದಲನೆಯ ಪ್ರಬಂಧ ಸಂಕಲನ ಎಂದು ಕಾಣುತ್ತದೆ. ‘ಮಕ್ಕಳ ಸಾಹಿತ್ಯ’ ದಲ್ಲೂ ಇವರು ಕೈಯಾಡಿಸಿರುವರು. ‘ಯವನಯಾಮಿನೀವಿನೋದ’ ಎಂಬ ಹೆಸರಿನಲ್ಲಿ ‘ಅರೇಬಿಯನ್ ನೈಟ್ಸ್’ ಕಥೆಗಳನ್ನು ಕನ್ನಡಕ್ಕೆ ತಂದಿದ್ದಾರೆ.

‘ಅಮೃತಪುಲಿನ’  ಶ್ರೀ ನನಿಲಾಲವಂದ್ಯೋಪಾಧ್ಯಾಯರ ಕೃತಿಯ ಅನುವಾದ. ಅದೊಂದು ರೋಮಾಂಚಕಾರಕ ಐತಿಹಾಸಿಕ ಕಾದಂಬರಿ. ಅವರು ಬಂಕಿಮಚಂದ್ರರ ನಂತರ ಪ್ರಸಿದ್ಧ ಲೇಖಕರೆಂದು ಪ್ರಖ್ಯಾತರಾಗಿದ್ದರು. ವೆಂಕಟಾಚಾರ್ಯರೇ ಮುನ್ನುಡಿಯಲ್ಲಿ ಹೇಳಿರುವಂತೆ, ಆ ಕಾದಂಬರಿಯ ನಾಯಕನಾದ ಅಜಯಸಿಂಹನು ರಜಪೂತ ವೀರತ್ವದ ಸಜೀವ ವಿಗ್ರಹ!

ಚಂದ್ರಶೇಖರ

‘ಚಂದ್ರಶೇಖರ’  ಎಂಬುವುದು ಇನ್ನೊಂದು ಅತ್ಯುತ್ತಮ ಕಾದಂಬರಿ. ಕಾದಂಬರಿಯ ಉದ್ದಕ್ಕೂ ಬಂಗಾಳದ ಸಾಮಾನ್ಯ ವ್ಯಕ್ತಿಗಳ ಜೀವನ, ವರ್ತಕರಾಗಿ ಬಂದ ಇಂಗ್ಲಿಷರ ದರ್ಪ, ನವಾಬರ ಅಸಹಾಯಕತೆ, ಆಗಿನ ಕಾಲದ ದೇಶಸ್ಥಿತಿ, ಇತ್ಯಾದಿಗಳ ಚಿತ್ರ ಕಣ್ಣಿಗೆ ಕಟ್ಟುವಂತಿದೆ. ಈ ಕಾದಂಬರಿಯಲ್ಲಿ ಎದ್ದು ಕಾಣುವುದು ಪ್ರತಾಪನ ತ್ಯಾಗ.

ಪ್ರತಾಪ ಮತ್ತು ಶೈವಲಿನಿ ಬಾಲ್ಯಸ್ನೇಹಿತರು. ಇಬ್ಬರಿಗೂ ಮದುವೆಮಾಡಿಕೊಳ್ಳುವ ಹಂಬಲ, ಆದರೆ ಹಿರಿಯರು ಒಪ್ಪುವುದಿಲ್ಲ. ಬೇಸರ, ನಿರಾಶೆಗಳಿಂದ ಪ್ರತಾಪ ನದಿಯಲ್ಲಿ ಮುಳುಗುವನು. ಚಂದ್ರಶೇಖರ ಎಂಬ ವಿದ್ವಾಂಸನು ಅವನನ್ನು ರಕ್ಷಿಸುವನು; ಹಾಗೂ ಶೈವಲಿನಿಯ ರೂಪವನ್ನು ನೋಡಿ ಮೆಚ್ಚಿ ಅವಳನ್ನು ಮದುವೆಯಾಗುವನು.

ಚಂದ್ರಶೇಖರನ ಸಹಾಯದಿಂದ ಪ್ರತಾಪನೂ ದೊಡ್ಡಮನುಷ್ಯನಾಗುವನು. ಆದರೆ, ಶೈವಲಿನಿಯನ್ನು ಮರೆಯಲಾರ; ಶೈವಲಿನಿಯೂ ಅವನನ್ನು ಮರೆಯಲಾರಳು. ಅವಳ ಕಣ್ಣಿಗೆ ತಾನು ಬೀಳಬಾರದೆಂದು ದೂರವಾಗಿದ್ದನು ಪ್ರತಾಪ. ನಡುವೆ ಇಂಗ್ಲಿಷ್ ಸಾಹೇಬನೊಬ್ಬ ಶೈವಲಿನಿಯನ್ನು ಅಪಹರಿಸಿಕೊಂಡು ಹೋಗುವನು. ಕೆರಳಿದ ಪ್ರತಾಪ, ತನ್ನ  ಸರ್ವನಾಶವಾಗುವುದನ್ನೂ ಲೆಕ್ಕಿಸದೆ ಅವಳನ್ನು ಬಿಡಿಸುವನು. ಅವನನ್ನು ಕಂಡ ಶೈವಲಿನಿ ಅವನನ್ನು ಬಿಡಳು. ‘ತಾನು ಬದುಕಿದ್ದರೆ ಅವಳು ತನ್ನನ್ನು ಮರೆಯಳು, ಆದರೆ ಅವಳು ತನ್ನ ಗಂಡನೊಡನೆ ಸುಖವಾಗಿರಲೇಬೇಕು’ ಎಂದು ಅಲೋಚನೆ ಮಾಡಿದ ಪ್ರತಾಪ ಮತ್ತೆ ಇಂಗ್ಲಿಷರ ಕೂಡ ಹೋರಾಡಿ ಪ್ರಾಣ ಬಿಡುವನು.

ದಾಡಿಯ ಹೇಳಿಕೆ

‘ದಾಡಿಯ ಹೇಳಿಕೆ’ ಎಂಬ ಅವರ ಒಂದು ಪ್ರಬಂಧ ಓದಲು ತಮಾಷೆಯಾಗಿದೆ. ಇದು ೧೯೧೩ ರಲ್ಲಿ ಪ್ರಕಟವಾಯಿತು. ಪ್ರಬಂಧದ ಉದ್ದಕ್ಕೂ ದೊಡ್ಡದಾಗಿ ತನ್ನ ಪುರಾಣವನ್ನು ಹೇಳಿಕೊಳ್ಳುವುದೇ ದಾಡಿಗೆ ಕೆಲಸ! ‘‘ನಾನು ಇಷ್ಟು ದೊಡ್ಡ ಮನುಷ್ಯ-ನಾನು ಅಷ್ಟು ದೊಡ್ಡ ಮನುಷ್ಯ! ನನ್ನನ್ನು ಜನ ಇಷ್ಟೊಂದು ಗೌರವಿಸಿದ್ದಾರೆ-ಅಷ್ಟೊಂದು ಇಷ್ಟಪಟ್ಟಿದ್ದಾರೆ! ನಾನು ಪುರಾಣದಲ್ಲಿ ಬಂದಿದ್ದೇನೆ, ಚರಿತ್ರೆಯಲ್ಲಿ ಬಂದಿದ್ದೇನೆ! ವಿಷ್ಣು ನನ್ನನ್ನು ಧರಿಸಿದ್ದ, ವಾಲ್ಮೀಕಿ ನನ್ನನ್ನ ಸವರಿಕೊಂಡೇ ರಾಮಾಯಣವನ್ನು ಬರೆದ!’’

ಆ ದಾಡಿ ಒಂದು ಕಡೆ ಹೇಳಿಕೊಳ್ಳುತ್ತದೆ- ‘‘ಗ್ರೀಸ್ ದೇಶದಲ್ಲಿಯೂ ನನಗೆ ಬಹಳ ಮರ್ಯಾದೆ ನಡೆಯುತ್ತಿತ್ತು. ಅಲ್ಲಿಯ ಪಂಡಿತನಾದ ಸೊಕ್ರೆಟೀಸ್‌ನಿಗೆ ಒಳ್ಳೇ ಉದ್ದವಾದ ದಾಡಿಯಿತ್ತು, ಅದು ಅವನ ಜ್ಞಾನದ ಗುರುತು, ಎಂದು ಜನ ತಿಳಿದಿದ್ದರು, ಜರ್ಮನಿ ದೇಶದ ಚಿತ್ರಗಾರನಾಗಿದ್ದ ಜೋಹಾನ್ ಮೇಯೋ ಎಂಬಾತನು ನನ್ನನ್ನು ಗೌರವಿಸಿದಷ್ಟು ಮತ್ತಾರೂ ಗೌರವಿಸಲಿಲ್ಲ. ಆ ಚಿತ್ರಗಾರನ ದಾಡಿಯು ಅದೆಷ್ಟು ಉದ್ದ ಇದ್ದಿತೆಂದರೆ, ಅವನು ಎದ್ದುನಿಂತರೆ, ಆ ದಾಡಿಯು ನೆಲವನ್ನು ಸೋಕುತ್ತಿತ್ತು! ಅದರಿಂದ ಅವನಿಗೆ ‘ದಾಡಿ ಯುಕ್ತಜಾನ್’  ಎಂಬ ಬಿರುದು ಬಂದಿತ್ತು.  ಅದೇ ರಷ್ಯಾದೇಶದ ಸಾಮ್ರಾಟನಾಗಿದ್ದ ‘ಪೀಟರ್ ದಿ ಗ್ರೇಟ್’  ಎಂಬುವನಿಂದ ನನಗೆ ಬಹಳವೇ ಅವಮಾನವಾಯಿತು. ಅವನು ನನ್ನ ಮೇಲೆ ತೆರಿಗೆಯನ್ನು ಹಾಕಿದನು. ಪಾಪ, ಅವನನ್ನು ಯಾಕೆ ಬೈಯಲಿ! ಆಗ ಅವನಿಗೆ ಹಣವು ಬೇಕಿತ್ತು; ಆದರೆ-ನನಗೆ ಎಷ್ಟೊಂದು ಕಷ್ಟವಾಯಿತು!’’

ಮನಸ್ಸನ್ನು ತಿದ್ದುವ ಕಾದಂಬರಿಗಳು

ವೆಂಕಟಾಚಾರ್ಯರಿಗೆ ಸ್ತ್ರೀಯರ ಬಗ್ಗೆ, ಅದರಲ್ಲೂ ಭಾರತೀಯ ಸ್ತ್ರೀಯರ ಬಗ್ಗೆ ಅಪಾರ ಗೌರವ ಹಾಗೂ ಅನುಕಂಪ. ಇದನ್ನು  ‘ನೊಂದ ನುಡಿ’ ಇತ್ಯಾದಿ ಅವರ ಗ್ರಂಥಗಳಲ್ಲಿ ಸ್ಪಷ್ಟವಾಗಿ ಕಾಣಬಹುದು. ಅದರಿಂದಲೇ ಹರಪ್ರಸಾದ ಶಾಸ್ತ್ರಿಯ ‘ಭಾರತಮಹಿಳೆ’  ಎಂಬ ಪುಸ್ತಕವನ್ನು ಅನುವಾದ ಮಾಡಲು ಮುಂದಾದರು. ಅದರಲ್ಲಿ ಸಂಸ್ಕೃತ ಕಾವ್ಯನಾಟಕಗಳೊಳಗೆ ಬಂದಿರುವ ಮಹಿಳೆಯರ ವಿಷಯ ಬಂದಿದೆ; ಸೀತೆ ಮತ್ತು ಶಕುಂತಲೆಯರ ಚರಿತ್ರೆಯು ತುಂಬು ಅಭಿಮಾನದಿಂದ ಹೇಳಲ್ಪಟ್ಟಿದೆ.

‘ಹಿಂದಿನ ಕಾಲದಲ್ಲಿ ನಮ್ಮ ದೇಶದಲ್ಲಿ ಸ್ತ್ರೀಯರಿಗೆ ಬಹಳ ಗೌರವ ಸ್ಥಾನವಿತ್ತು. ಗಂಡು ಹುಡುಗರಿಗೆ ಕೊಡುತ್ತಿದ್ದಂತೆಯೇ ಅವರಿಗೂ ಒಳ್ಳೆಯ ಶಿಕ್ಷಣವನ್ನು ಕೊಡುತ್ತಿದ್ದರು; ಇದರಿಂದಾಗಿ ಅನೇಕ ಸ್ತ್ರೀಯರು ವಿದ್ವಾಂಸರಾಗಿದ್ದರು; ಎಷ್ಟೋ ಸಲ ಗಂಡಸರನ್ನೂ ಮೀರಿಸುತ್ತಿದ್ದರು’’  ಎಂಬುದನ್ನು ತಿಳಿಸಿ, ಅದಕ್ಕೂ ಉದಾಹರಣೆಗಳನ್ನು ಕೊಟ್ಟಿದ್ದಾರೆ. ಎಷ್ಟೇ ಕಷ್ಟವಾಗಲಿ, ಹಿಂದೂಸ್ತ್ರೀಯರು ಆ ಆದರ್ಶ ಪ್ರತಿಭೆಗಳನ್ನು ಕಾಪಾಡಿಕೊಂಡು ಬರಬೇಕು ಎಂದು, ಆ ಗ್ರಂಥಗಳ ಮೂಲಕ ಬೋಧಿಸಿದ್ದಾರೆ. ಜೊತೆಗೆ, ಈಗಿನ ಸ್ತ್ರೀಯರ ಸ್ಥಾನಮಾನಗಳ ಬಗ್ಗೆ ಪರಿತಾಪ. ‘‘ಹೋರಾಡಿ ತಮ್ಮ ಸ್ಥಾನವನ್ನು ಮತ್ತೆ ಸಂಪಾದಿಸಬೇಕು, ಹಿಂದಿನಂತೆಯೇ ಪ್ರಕಾಶಿಸಬೇಕು’’, ಎಂದು ಪ್ರೋತ್ಸಾಹಿಸಿದ್ದಾರೆ.

ಹೀಗೆ, ಉದಾತ್ತ ಭಾವನೆಗಳಾದ ಸೇವೆ, ತ್ಯಾಗ, ದೈವಭಕ್ತಿ, ಕರ್ತವ್ಯನಿಷ್ಠೆ, ದೇಶಪ್ರೇಮ, ಸ್ತ್ರೀವಿದ್ಯಾಭ್ಯಾಸ, ಇಂತಹ ವಿಚಾರಗಳನ್ನೆಲ್ಲಾ ವೆಂಕಟಾಚಾರ್ಯರು ತಮ್ಮ ಕಾದಂಬರಿಗಳ ಮೂಲಕ ಸಾರಿದರು. ಅವೆಲ್ಲಾ ಆಗಿನ ಕಾಲದ ಸಮಸ್ಯೆಗಳು ನಿಜ. ಈಗ ಕಾದಂಬರಿಗಳ ಕಥೆಗಳು ಬೇರೆ ರೀತಿಯವು. ಕಥೆಯನ್ನು ಹೇಳುವ ರೀತಿಯೂ ಬದಲಾಗಿದೆ. ಆದ್ದರಿಂದ ಈಗಿನ ಓದುಗರಿಗೆ ಅವರ ಕಾದಂಬರಿಗಳು ಬೇರೆಯ ರೀತಿಯಾಗಿ ತೋರಬಹುದು. ಆದರೆ, ಆಗಿನ ಕಾಲಕ್ಕೆ, ಸಮಾಜಕ್ಕೆ, ಅವು ಯೋಗ್ಯವಾಗಿದ್ದವು; ಹೊಸಹಾದಿಯನ್ನು ಹಾಕಿಕೊಟ್ಟವು.

ಇನ್ನಷ್ಟು ಕಾದಂಬರಿಗಳು

ಬಂಕಿಮಚಂದ್ರ ಚಟ್ಟೋಪಾಧ್ಯಾಯರಿಗೆ ಪತ್ರಗಳ ಮೂಲಕ ಕನ್ನಡವನ್ನು ಕಲಿಸಿದರು ವೆಂಕಟಾಚಾರ್ಯರು. ಅವರ ಕನ್ನಡ ಅನುವಾದಗಳನ್ನು ಓದಿ ಮೆಚ್ಚಿದರು ಬಂಕಿಮಚಂದ್ರರು. ಅವರು ಬಹಳವಾಗಿ ಮೆಚ್ಚಿದ್ದು, ವೆಂಕಟಾಚಾರ್ಯರ ಸ್ವಂತ ಕೃತಿಯಾದ ‘ಮನೋರಮೆ’ ಎಂಬ ಪತ್ತೇದಾರಿ ಕಾದಂಬರಿಯನ್ನು. ‘ಜುಮಲೆ’  ಎಂಬ ಎರಡನೆಯ ಭಾಗವನ್ನು ಆ ‘ಮನೋರಮೆಗೆ’  ಬಂಕಿಮಚಂದ್ರರು ಬರೆದರೆಂದು ಹೇಳುತ್ತಾರೆ. ಆ ‘ಮನೋರಮೆ’ ಇಲ್ಲಿಯವರಿಗೂ ಹಿಡಿಸಿತು. ಇದಕ್ಕೆ ಮೊದಲು ಬಂಕಿಮಚಂದ್ರರ ಪತ್ತೇದಾರಿ ಕಾದಂಬರಿಗಳಾದ ‘ಪರಿಮಳ’  ಮತ್ತು ‘ಕೃಷ್ಣಕಾಂತನ ಉಯಿಲ’ ನ್ನು ವೆಂಕಟಾಚಾರ್ಯರು ಹೊರತಂದಿದ್ದರು. ‘ಪರಿಮಳ’  ಕಾದಂಬರಿಯನ್ನು ಬರೆದಾಗ ವೆಂಕಟಾಚಾರ್ಯರ ಕೀರ್ತಿ ಶಿಖರವನ್ನು ಮುಟ್ಟಿತೆಂದೇ ಹೇಳಬೇಕು. ಅದಾದ ಮೇಲೆ ಎರಡುಮೂರು ಕಾದಂಬರಿಗಳು. ಆಮೇಲೆ ಬಂದ ‘ಕೃಷ್ಣಕಾಂತನ ಉಯಿಲ’ ನ್ನು ಜನ ತುಂಬಾ ಮೆಚ್ಚಿಕೊಂಡರು. ‘ಸುವಾಸಿನಿ’  ಪತ್ರಿಕೆಯಲ್ಲಿ ಪ್ರಕಟವಾದ ಅವರ ‘ಉನ್ಮಾದಿನೀ’  ಕಾದಂಬರಿಯು ಜನಪ್ರಿಯತೆಯನ್ನು ಗಳಿಸಿತು.

ಹೀಗೆ, ಹಿಂದೆ ಮೆರೆದ ರಜಪೂತ ವೀರರ ಕಥೆಗಳನ್ನು,ಬಂಗಾಳಿ ಜನರ ಆಗಿನ ಜೀವನ ರೀತಿಯನ್ನು ನಮ್ಮ ಐತಿಹಾಸಿಕ ಸಂಗತಿಗಳನ್ನು ಗಂಗಾನದಿಯ ವೈಭವವನ್ನು, ಓದುಗರು ನೀರು ಕುಡಿದ ಹಾಗೆ ಅರಿಯುವಂತೆ ಮಾಡಿದರು! ಮಿಕ್ಕ ದೇಶಗಳ ಭಾಷೆ-ಸಂಸ್ಕೃತಿ ಇತ್ಯಾದಿಗಳನ್ನು ಈಗಿನ ಕಾಲದಲ್ಲಿ ತಿಳಿದುಕೊಳ್ಳುವುದೇನೂ ಹೆಚ್ಚಿನ ವಿಷಯವಲ್ಲ; ಎಲ್ಲೆಲ್ಲೂ ಹೆಜ್ಜೆಗೊಂದು ಆ ಭಾಷೆಯ ಶಾಲೆಗಳು, ಲೈಬ್ರರಿಗಳು ಮತ್ತು ಇಲ್ಲೇ ತಂಗಿರುವ ಆ ದೇಶದ ಜನ, ಟಪಾಲಿನ ಮೂಲಕ ಶಿಕ್ಷಣ, ವಿಮಾನ-ರೈಲುಗಳ ಮೂಲಕ ಒಂದೇ ಸಮನೆ ಓಡಾಟ…..ಏನು ಕಷ್ಟ? ಆದರೆ ಆಗಿನ ಕಾಲಗಳಲ್ಲಿ ವಿದೇಶಗಳ ವಿಷಯ ಇರಲಿ, ನಮ್ಮ ಭಾರತದಲ್ಲಿನ ಸಂಸ್ಥಾನಗಳಲ್ಲೇ ಹೆಚ್ಚಿನ ಸಂಪರ್ಕ ಇರಲಿಲ್ಲ; ಒಬ್ಬರೊಬ್ಬರ ಆಚಾರ ವಿಚಾರ, ಸಂಸ್ಕೃತಿಗಳ ಬಗ್ಗೆ ಅರಿವಿರಲಿಲ್ಲ; ಕುತೂಹಲ ಮೂಡಿರಲಿಲ್ಲ. ಇದನ್ನು ವೆಂಕಟಾಚಾರ್ಯರು ಸರಿಮಾಡಿದರು-ಸಾಹಿತ್ಯದ ಮೂಲಕ.

ಕನ್ನಡಕ್ಕಾಗಿ

ವೆಂಕಟಚಾರ್ಯರಿಗೆ ಇಂಗ್ಲಿಷಿನಲ್ಲಿಯೂ ಒಳ್ಳೆಯ ಪಾಂಡಿತ್ಯವಿತ್ತು. ಬೇಕಾದಷ್ಟು ಜನ ಆಂಗ್ಲೇಯ ಅಧಿಕಾರಿಗಳು ಸ್ನೇಹಿತರಾಗಿದ್ದರು. ಸ್ವತಃ ವೆಂಕಟಾಚಾರ್ಯರೇ ಒಳ್ಳೆಯ ಹುದ್ದೆಯಲ್ಲಿದ್ದರು, ಹಾಯಾಗಿ ಇಂಗ್ಲಿಷಿನಲ್ಲೇ ಬರೆಯ ಬಹುದಿತ್ತು. ನಿರಾಯಾಸವಾಗಿ ಮುದ್ರಣವಾಗುತ್ತಿತ್ತು; ಇನ್ನೂ ಹೆಚ್ಚಿನ ಐಶ್ವರ್ಯ ಕೀರ್ತಿ ಅವರದಾಗುತ್ತಿತ್ತು. ಆದರೂ ಕನ್ನಡದಲ್ಲಿಯೇ ಯಾಕೆ ಕಷ್ಟಪಟ್ಟರು?

ಕನ್ನಡ ಭಾಷೆಯ ಮೇಲೆ ಅವರಿಗಿದ್ದ ಅಭಿಮಾನವೊಂದೇ ಕಾರಣ; ಕನ್ನಡ ಭಾಷೆಯನ್ನು ಮುಂದಕ್ಕೆ ತರಬೇಕೆಂಬ ಧ್ಯೇಯವೊಂದೇ ಸ್ಫೂರ್ತಿ; ನಮ್ಮ ಕನ್ನಡಿಗರಲ್ಲಿ ಜ್ಞಾನ ತುಂಬಬೇಕೆಂಬ ಆಸೆಯೊಂದೇ ಶಕ್ತಿ.

ಅಷ್ಟೇ ಅಲ್ಲ, ಈ ಅನುವಾದ ಕೆಲಸವೂ ಸಹ ವೆಂಕಟಾಚಾರ್ಯರಿಂದಲೇ ಆರಂಭವಾಯಿತೆಂದು ಹೇಳಬಹುದು. ಅನುವಾದ ಮಾಡುವುದು ಸುಲಭದ ಕೆಲಸವಲ್ಲ. ಕಥಾವಸ್ತುವೇನೋ ಸುಲಭವಾಗಿ ಸಿಗುವುದು; ಆದರೆ, ಆ ಕಥೆಯಲ್ಲಿ ಬರುವ ಏರಿಳಿತಗಳನ್ನು ಅಷ್ಟೇ ಚೆನ್ನಾಗಿ ತರುವುದು ಕಷ್ಟ. ಸ್ವತಃ ಬಂಕಿಮಚಂದ್ರರೇ ವೆಂಕಟಾಚಾರ್ಯರ ಅನುವಾದವನ್ನು ಮೆಚ್ಚಿ, ತಮ್ಮ ಮುಂದಿನ ಕಾದಂಬರಿಯ ಬಗ್ಗೆ ಸಲಹೆಯನ್ನು ವೆಂಕಟಾಚಾರ್ಯರಿಗೆ ಬರೆದು ಕೇಳುತ್ತಿದ್ದರೆಂದ ಮೇಲೆ!

ಸರಸ್ವತಿ ಕರೆತಂದ ಲಕ್ಷ್ಮಿ

ಒಂದು ಆಶ್ಚರ್ಯವೆಂದರೆ, ಆಗಿನ ಕಾಲಲ್ಲಿ ಬರಹಗಾರರಿಗೆ ಸಂಭಾವನೆ ಬಹು ಅಲ್ಪ. ಅದರ ಬಗ್ಗೆ ವೆಂಕಟಾಚಾರ್ಯರೂ ಗಮನ ಕೊಟ್ಟವರಲ್ಲ. ಮುದ್ರಣಕಾರರೂ ಹಾಯಾಗಿ ಅವರ ಕೃತಿಗಳಿಂದ ಹೇರಳ ಹಣ ಸಂಪಾದಿಸಿದರೆಂದೇ ಹೇಳಬೇಕಾಗಿದೆ. ತೆಲುಗಿನ ಹಿರಿಯ ವ್ಯಕ್ತಿಯೊಬ್ಬರು ಬಂದು ಕೇಳಿಕೊಂಡಿದ್ದರಂತೆ- ‘‘ಕನ್ನಡದಿಂದ ನಿಮ್ಮ ಕೃತಿಗಳನ್ನೆಲ್ಲಾ ತೆಲುಗಿಗೆ ಅನುವಾದ ಮಾಡುವೆ. ದಯವಿಟ್ಟು ಅಪ್ಪಣೆ ಕೊಡಿ-ನಿಮಗೆ ತುಂಬಾ ಹಣ ಕೊಡುವೆ’’ ಎಂದು.

‘‘ಧಾರಾಳವಾಗಿ ಅನುವಾದ ಮಾಡಿಕೊಳ್ಳಿ, ಆದರೆ ನನಗೇನೂ ಹಣ ಕೊಡುವುದು ಬೇಡ’’ ಎಂದು ಒಪ್ಪಿಗೆ ಕೊಟ್ಟರಂತೆ ವೆಂಕಟಾಚಾರ್ಯರು.

ಹಾಗಾದರೂ ವೆಂಕಟಾಚಾರ್ಯರಿಗೆ ತಮ್ಮ ಪುಸ್ತಕಗಳ ಮೂಲಕ ಬೇಕಾದಷ್ಟು ಧನ ಹರಿಯಿತು. ಆದುದರಿಂದಲೇ, ಅಷ್ಟೊಂದು ಖರ್ಚಿನಲ್ಲೂ ಅಷ್ಟೊಂದು ದೊಡ್ಡ ಸಂಸಾರವನ್ನು ತೂಗಿಸಿ-ನಡೆಸಿ, ಆಸ್ತಿಯನ್ನೂ ಮಾಡುವುದಕ್ಕಾಯಿತು. ಸಾಧಾರಣವಾಗಿ ಕಲೆಗಾರರು ಕೀರ್ತಿಯನ್ನು ತಮ್ಮ ಜೀವಮಾನದಲ್ಲಿ ಕಾಣುವುದು ಅಪರೂಪ. ಆದರೆ ವೆಂಕಟಾಚಾರ್ಯರು ಬದುಕಿದ್ದಾಗಲೇ ಕೀರ್ತಿಯನ್ನು ಚೆನ್ನಾಗಿಯೇ ಅನುಭವಿಸಿದರು. ಮತ್ತು ಒಂದು ವಿಶೇಷ-ಸುಮಾರು ನಲವತ್ತು ವರ್ಷಗಳ ಕಾಲ ಒಂದೇ ಸಮನಾಗಿ ಸಾಹಿತ್ಯಸೇವೆಯನ್ನು ಮಾಡುವುದರ ಜೊತೆಗೆ, ಅಧಿಕಾರದಿಂದ ನಿವೃತ್ತರಾದ ಮೇಲೆ ಪತ್ರಿಕೋದ್ಯಮವನ್ನು ಕೈಗೊಂಡರು. ‘‘ಅವಕಾಶ ತೋಷಿಣಿ’’ ಎಂಬ ಮಾಸಪತ್ರಿಕೆಯನ್ನು ಆರಂಭಿಸಿದರು. ಅದರಲ್ಲಿ ಕಥೆ, ಲಘು ಲೇಖನಗಳನ್ನು ಬರೆಯುತ್ತಿದ್ದರು. ‘‘ಸೂರ್ಯಪೂಜೆ’’ ಅವರು ಬರೆದಿರುವ ಉತ್ತಮ ಲೇಖನಗಳಲ್ಲಿ ಒಂದು; ಅದು ‘ಶ್ರೀಕೃಷ್ಣ ಸೂಕ್ತಿ’  ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು.

ರಾತ್ರಿಯೆಲ್ಲಾ ಕುಳಿತು ಬರೆಯುವ-ಓದುವ ಸ್ವಭಾವ ಸರಿ- ತಿಂಗಳಿಗೊಂದು ಕಾದಂಬರಿ! ಜನ ಆತುರದಿಂದ ಕಾಯುತ್ತಿದ್ದರಂತೆ – ಅವರ ಕಾದಂಬರಿಗಳು ಹೊರಬಂದ ತಕ್ಷಣ ಕೊಂಡು ಓದುವುದಕ್ಕೆ.

‘‘ಹೀಗೆಲ್ಲ ರಾತ್ರಿ ಹಗಲೂ ಶ್ರಮ ಪಡುತ್ತೀರಲ್ಲ, ಆರೋಗ್ಯ ಕೆಡುವುದಿಲ್ಲವೇ?’’ – ಎಂದು ಯಾರಾದರೂ ಆತಂಕ ತೋರಿದರೆ, ಮುಗುಳುನಕ್ಕು ನುಡಿಯುತ್ತಿದ್ದರಂತೆ – ‘‘ನನಗೆ ಇದೊಂದು ಶ್ರಮ ಅಂತ ಅನ್ನಿಸುವುದೇ ಇಲ್ಲ. ಅಲ್ಲದೆ, ಹೀಗೆ ಶ್ರಮಪಟ್ಟರೆ ತಾನೆ ಫಲ ಕಾಣುವುದು? ಗುರಿ-ಆಸೆ, ಎರಡೂ ಇರೋವಾಗ, ಶ್ರಮ ಕಷ್ಟ ಅಂತ ಕೂರಬಾರದು ಮನುಷ್ಯ.’’

ಸ್ನೇಹದ ಸ್ವಭಾವ

ಜೊತೆಗೆ, ವೆಂಕಟಾಚಾರ್ಯರ ಸ್ವಭಾವ ಬಹಳ ಸ್ನೇಹಮಯ, ಉದಾರ. ಶಶಿಭೂಷಣ ವಿದ್ಯಾನಂದ ಎಂಬವರು ‘ಆರ್ಯಶಾಸ್ತ್ರಪ್ರದೀಪ’ ಎಂಬ ಒಂದು ದೊಡ್ಡ ಗ್ರಂಥವನ್ನು ಬರೆಯುತ್ತಿದ್ದರು; ಅನೇಕ ಜನ ವಿದ್ವಾಂಸರ ಸಹಾಯವನ್ನು ತೆಗೆದುಕೊಂಡು ಬಹಳ ಶ್ರಮಪಡುತ್ತಿದ್ದರು. ಅವರ ಪಾಂಡಿತ್ಯ ಶ್ರದ್ಧೆಗಳನ್ನು ಮೆಚ್ಚಿದ ವೆಂಕಟಾಚಾರ್ಯರು ತಾವೂ ಸಹಾಯ ಮಾಡಲು ಮುಂದಾದರು; ಬಹಳ ಕಾಲ ತಿಂಗಳು ತಿಂಗಳಿಗೂ ಹಣ ಕಳುಹಿಸುತ್ತಿದ್ದರು. ಆ ಶಶಿಭೂಷಣ ವಿದ್ಯಾನಂದರ ಶಿಷ್ಯವರ್ಗಕ್ಕೆ ಸೇರಿದ್ದ ಬಾಬು ಬ್ರಜೇಂದ್ರನಾಥಸೀಲರು ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ಬಂದರು; ವೆಂಕಟಾಚಾರ್ಯರ ಹೆಸರನ್ನು ಕೇಳಿಯೇ ತುಂಬ ಗೌರವ ತೋರಿದರಂತೆ. ಅಷ್ಟೇ ಅಲ್ಲ, ವೆಂಕಟಾಚಾರ್ಯರ ಬಂಧುಗಳನ್ನು ಸಹ ತುಂಬ ವಿಶ್ವಾಸದಿಂದ ಆದರಿಸಿದರಂತೆ.

ರಾಧಾಕುಮುದ ಮುಖರ್ಜಿಯವರು ಇಡೀ ಭಾರತದಲ್ಲಿಯೇ ಪ್ರಸಿದ್ಧರಾದ ಚರಿತ್ರೆಯ ವಿದ್ವಾಂಸರು. ಅವರು ಉಪನ್ಯಾಸಗಳನ್ನು ಕೊಡಲು ಶಿವಮೊಗ್ಗೆಗೆ ಬಂದರು. ಬಂದವರೇ, ‘‘ಬಿ. ವೆಂಕಟಾಚಾರ್ಯರ  ಬಂಧುಗಳನ್ನು ಕಂಡು ಬಾ ಎಂದು ನನ್ನ ಗುರುಗಳ ಆಜ್ಞೆಯಾಗಿದೆ. ಇಲ್ಲಿ ಯಾರಾದರೂ ಇದ್ದರೆ, ಅಥವಾ ಗೊತ್ತಿದ್ದರೆ, ದಯವಿಟ್ಟು ತಿಳಿಸಬೇಕು’’ ಎಂದು ಸಭೆಯಲ್ಲಿದ್ದವರನ್ನು ಕೇಳಿಕೊಂಡರಂತೆ; ವೆಂಕಟಾಚಾರ್ಯರ ಬಂಧುಗಳ ಪರಿಚಯವನ್ನು ಮಾಡಿಕೊಂಡು, ಸಂತೋಷಪಟ್ಟರಂತೆ.

ವ್ಯಕ್ತಿತ್ವ

ವೆಂಕಟಾಚಾರ್ಯರು ಆಜಾನುಬಾಹು; ಒಳ್ಳೇ ಎತ್ತರ, ಆ ಎತ್ತರಕ್ಕೆ ಸರಿಯಾದ ದಪ್ಪ. ಒಳ್ಳೆಯ ಬಣ್ಣ, ತೇಜಸ್ಸು. ತುಂಬಿದ ಕಣ್ಣುಗಳು-ನೋಡಿದ ತಕ್ಷಣ ಎಂಥವರಲ್ಲೂ ಭಯ ಮಿಶ್ರಿತಗೌರವ ಮೂಡುತ್ತಿತ್ತು. ಒಟ್ಟಿನಲ್ಲಿ, ಸುಂದರ ದೃಢಕಾಯ ರೂಪ; ಎಂಥವರನ್ನೂ ಒಲಿಸಿಕೊಳ್ಳುವ ವಿನಯ-ವಿಶ್ವಾಸಪೂರಿತ ನಡೆನುಡಿ.

‘‘ಕಚ್ಚೆ ಪಂಚೆ, ಜರಿರುಮಾಲು, ಉದ್ದನೆಯ ಕೋಟು, ಜರಿಶಲ್ಯ, ಕಾಲಿಗೆ ಚಡಾವು-ಇವೇ ಅವರ ನಿತ್ಯದ ಉಡುಪು. ಇದು ಆಗಿನ ಕಾಲದ ದರ್ಬಾರ್ ಡ್ರೆಸ್. ಇಷ್ಟನ್ನೂ ಧರಿಸಿ, ತಮ್ಮ ದಪ್ಪ ದೊಣ್ಣೆಯನ್ನೂ ಹಿಡಿದುಕೊಂಡು, ವೆಂಕಟಾಚಾರ್ಯರು ಸರಸರನೆ ವಾಕಿಂಗ್ ಹೊರಟುಬಿಟ್ಟರೆ ದೃಷ್ಟಿಯಾಗುವಂತಿತ್ತು!’’ ಕಂಡಿದ್ದವರು ಹೀಗೆ ಜ್ಞಾಪಿಸಿ ಕೊಂಡಿದ್ದುಂಟು.

ಮುಖ್ಯವಾಗಿ ಸದಾ ನಗುಮುಖ, ನಿಷ್ಕಪಟ ಸ್ವಭಾವ, ಏನೇ ಕೆಲಸವಿರಲಿ, ಎಷ್ಟೇ ಕೆಲಸವಿರಲಿ, ನಗುನಗುತ್ತ ಮಾಡಿಬಿಡುವವರು. ಎಂತಹುದೇ ಪ್ರಸಂಗ ಬರಲಿ, ಯಾರನ್ನೂ ಕೋಪಿಸಿಕೊಂಡಿದ್ದಾಗಲಿ, ಗದರಿಸಿ ಕೊಂಡಿದ್ದಾಗಲಿ ಇಲ್ಲ. ಮಿಕ್ಕವರಿಗೂ ಸಹಾಯಮಾಡುವ ಧ್ಯೇಯ. ಇದರಿಂದಾಗಿ, ಮೇಲಿನ ಅಧಿಕಾರಿಗಳಿಗೆಲ್ಲಾ ಇವರ ಬಗ್ಗೆ ಬಹಳ ಗೌರವ, ಅಭಿಮಾನ. ಮಕ್ಕಳೆಂದರೆ ತುಂಬಾ ಅಕ್ಕರೆ. ಬಡವರ ಬಗ್ಗೆ ಬಹು ಕನಿಕರ, ಕೈಕೆಳಗಿನವರ ವಿಚಾರದಲ್ಲಿ ಸಹಾನುಭೂತಿ. ಆಳು ಕಾಳುಗಳನ್ನು ಸಹ ಮರ್ಯಾದೆಯಿಂದ ನಡೆಸಿಕೊಳ್ಳುವ ಸ್ವಭಾವ. ಬಂಧುಬಳಗ ಎಂದರೆ ಬಲು ಆದರ. ವೆಂಕಟಾಚಾರ್ಯರದೇ ಒಂದು ದೊಡ್ಡ ಸಂಸಾರ. ಅದರ ಜೊತೆಗೆ, ಅವರ ಮನೆಯಲ್ಲೇ ಇದ್ದು, ಓದಿ ಮುಂದಕ್ಕೆ ಬಂದ ವಿದ್ಯಾರ್ಥಿಗಳು, ವಾರದ ಹುಡುಗರು, ಆಶ್ರಿತರು- ಹೊತ್ತುಗೊತ್ತಿಲ್ಲದೆ ಬಂದು ಹೋಗುತ್ತಿದ್ದ ನೆಂಟರು-ಸ್ನೇಹಿತರು ಇತ್ಯಾದಿ.

ತಾವು ಏನೇ ಬರೆಯುತ್ತಿರಲಿ, ಯಾವುದೇ ಓದುತ್ತಿರಲಿ, ಮನೆಗೆ ಬಂದವರನ್ನೆಲ್ಲಾ ಆದರಿಸಿ ಕಳುಹಿಸುತ್ತಿದ್ದರು. ತಮ್ಮ ಹಾಸ್ಯಮಯವಾದ ಮಾತುಕಥೆಗಳಿಂದ ಎಲ್ಲರನ್ನೂ ನಗಿಸುತ್ತಿದ್ದರು. ಬಿಡುವಿದ್ದಾಗ ಎಲ್ಲರನ್ನೂ ಸುತ್ತಲೂ ಕೂರಿಸಿಕೊಂಡು ಕಥೆ ಹೇಳುತ್ತಿದ್ದರಂತೆ. ಅದೆಷ್ಟು ಸ್ವಾರಸ್ಯವಾಗಿ ಹೇಳುತ್ತಿದ್ದರೆಂದರೆ, ದೊಡ್ಡವರಿಂದ ಹಿಡಿದು, ಚಿಕ್ಕವರವರೆಗೂ ಎಲ್ಲರೂ ಆಸಕ್ತಿಯಿಂದ ಆಲಿಸುತ್ತಿದ್ದರಂತೆ.

ವೆಂಕಟಾಚಾರ್ಯರಿಗೂ ವಾದವಿವಾದಕ್ಕೂ ಬಲು ದೂರ. ಏನಾದರೂ ವಿರೋಧದ ಮಾತು ಪ್ರಾರಂಭ ವಾಯಿತೆಂದರೆ ಸರಿ, ಆ ಸ್ಥಳವನ್ನೇ ಬಿಟ್ಟು ಎದ್ದುಬಿಡುತ್ತಿದ್ದರು. ‘‘ಭೂಮಿತಾಯಿ ಸಹನೆ ಅವರದಾಗಿತ್ತು’’  ಎಂದು ನೋಡಿದವರು ಹೇಳಿದ್ದುಂಟು.

ವ್ಯಾಯಾಮ ಪ್ರಿಯರು

ವ್ಯಾಯಾಮವೆಂದರೆ ಅವರಿಗೆ ಬಹಳ ಇಷ್ಟ. ನಿತ್ಯ ಸಂಜೆಯ ಹೊತ್ತು ಮೊಮ್ಮಕ್ಕಳೊಡನೆ ತೋಟದಲ್ಲಿ ಒಂದರ್ಧ ಗಂಟೆಯ ಹೊತ್ತು ವ್ಯಾಯಾಮ ನಡೆಸುತ್ತಿದ್ದರು. ಗದೆ ಒಂದನ್ನು ಕೈಯಲ್ಲಿ ಹಿಡಿದುಕೊಂಡು ತಿರುಗಿಸುವುದು, ಹಾಗೆ ಅದನ್ನು ತಿರುಗಿಸುವ ವಿಧಾನವನ್ನು ಮಕ್ಕಳಿಗೆ ಹೇಳಿಕೊಡುವುದು, ಇತ್ಯಾದಿ. ಅಷ್ಟೇ ಅಲ್ಲ, ಲೀಲಾಜಾಲವಾಗಿ ನೂರು ಬಿಂದಿಗೆಯವರೆಗೂ ನೀರನ್ನು ಬಾವಿಯಿಂದ ಸೇದಿ ಹಾಕುತ್ತಿದ್ದರು-ಸ್ನಾನಗೃಹಕ್ಕೆ.

‘‘ಇಷ್ಟು ದೊಡ್ಡ ಹುದ್ದೆಯಲ್ಲಿರುವ ನೀವು ಇಂಥಾ ಕೆಲಸಗಳನ್ನೆಲ್ಲಾ ಮಾಡಬಹುದೇ?’’ ಎಂದು ಯಾರೋ ಕೇಳಿದ್ದಕ್ಕೆ ಉತ್ತರಿಸಿದರಂತೆ: ‘‘ನಮ್ಮ ಮನೆಕೆಲಸವನ್ನು ನಾನು ಮಾಡುವುದರಲ್ಲಿ ನಾಚಿಕೆಯೇನು ಬಂತು?’’ ಎಂದು.

ಆಗಿನ ಕಾಲದಲ್ಲಿ ಕಾರುಗಳಿರಲಿಲ್ಲ. ಹಣವಂತರ ಮನೆಗಳಲ್ಲಿ ಕುದುರೆಗಾಡಿಗಳು ಇರುತ್ತಿದ್ದವು. ವೆಂಕಟಾಚಾರ್ಯರ ಮನೆಯಲ್ಲೂ ಅಂತಹದೊಂದು ಗಾಡಿ ಇತ್ತು. ಆದರೆ ಮನೆಯವರು ಮಾತ್ರ ಅದನ್ನು ಉಪಯೋಗಿಸುತ್ತಿದ್ದರು; ವೆಂಕಟಾಚಾರ್ಯರು ಅದರಲ್ಲಿ ಕೂರುತ್ತಿರಲಿಲ್ಲ; ನಡೆಯುವುದೆಂದರೆ ಅವರಿಗೆ ಬಹಳ ಇಷ್ಟ. ಲೀಲಾಜಾಲವಾಗಿ ನಂಜನಗೂಡು, ಶ್ರೀರಂಗಪಟ್ಟಣ ಇತ್ಯಾದಿ ಊರುಗಳಿಗೆ ಇಪ್ಪತ್ತು ಇಪ್ಪತ್ತೈದು ಮೈಲಿಗಳಷ್ಟು ದೂರ ನಡೆದುಕೊಂಡು ಹೋಗಿಬಿಡುತ್ತಿದ್ದರು. ಅವರ ಕೈಯಲ್ಲಿ ಸದಾ ಒಂದು ಉದ್ದವಾದ ದೊಣ್ಣೆ. ಅದು ಎಷ್ಟು ಉದ್ದ ಇದ್ದಿತೆಂದರೆ, ಅವರ ಹಣೆಯವರೆಗೂ ಬರುತ್ತಿತ್ತು. ಒಬ್ಬ ಐರೋಪ್ಯನು ಅದನ್ನು ಕೇಳಿ, ತನ್ನೊಂದಿಗೆ ಇಂಗ್ಲೆಂಡಿಗೆ ತೆಗೆದುಕೊಂಡು ಹೋದನಂತೆ ಅಲ್ಲಿಯವರಿಗೆ ತೋರಿಸಲು.

ವೆಂಕಟಾಚಾರ್ಯರಿಗೆ ಟೆನಿಸ್ ಆಟದಲ್ಲಿ ಬಹಳ ಆಸಕ್ತಿ. ಅದರಲ್ಲಿ ಅವರನ್ನು ಮೀರಿಸುವವರೇ ಇರಲಿಲ್ಲವೆಂದು ಹೇಳಬಹುದು. ಅವರು ನಂಜನಗೂಡಿನಲ್ಲಿ ಮುನ್ಸೀಫರಾಗಿದ್ದಾಗ, ನೀಲಗಿರಿಗೆ ಆ ಹಾದಿಯಲ್ಲಿ ಪ್ರಯಾಣ ಮಾಡುತ್ತಿದ್ದ ಆಗಿನ ಮಹಾರಾಜರಾದ ಶ್ರೀ ಚಾಮರಾಜೇಂದ್ರ ಒಡೆಯರ್‌ರವರು ತಮ್ಮ ಕುದುರೆಗಾಡಿಯನ್ನು ನಿಲ್ಲಿಸುತ್ತಿದ್ದರು. ‘‘ಬನ್ನಿ ಸ್ವಲ್ಪ ಆಟವಾಡೋಣ’’ ಎಂದು ವೆಂಕಟಾಚಾರ್ಯರನ್ನು ಕರೆದು, ಅವರ ಕೂಡ ಸ್ವಲ್ಪ ಟೆನಿಸ್ ಆಟವಾಡಿ ಮುಂದಕ್ಕೆ ಪ್ರಯಾಣ ಮಾಡುತ್ತಿದ್ದರಂತೆ.

ಆ ಅವರ ಅಮಿತ ಹುರುಪು-ಹುಮ್ಮಸ್ಸು, ಚುರುಕು ಚಟುವಟಿಕೆ, ಇವುಗಳಿಂದಲೇ ಏನೋ ವೆಂಕಟಾಚಾರ್ಯರು ಕೊನೆಯವರೆಗೂ ಮುದುಕರಂತೆ ಕಾಣುತ್ತಿರಲಿಲ್ಲ. ಮತ್ತು ಅವರ ಕಣ್ಣು-ಕಿವಿ-ಕೈಕಾಲು, ಎಲ್ಲವೂ ಕೊನೆಯವರೆಗೂ ಚೆನ್ನಾಗಿದ್ದವು. ಜೊತೆಗೆ, ಅವರಿಗೆ ಅಸಾಧಾರಣ ಜ್ಞಾಪಕಶಕ್ತಿಯಿತ್ತು.

ವೆಂಕಟಾಚಾರ್ಯರಿಗೆ ತೋಟದ ಕೆಲಸವೆಂದರೂ ಬಹಳ ಇಷ್ಟ. ತಾವೇ ಖುದ್ದಾಗಿ ನಿಂತು, ತಮ್ಮ ಮನೆಯಲ್ಲಿ ಅಂದವಾದ ತೋಟವನ್ನು ಬೆಳೆಸಿದ್ದರು. ಅಪಾರ ದೈವಭಕ್ತಿಯಿತ್ತು. ದಿನಾ ತಪ್ಪದೆ ದೇವಸ್ಥಾನಗಳಿಗೆ ಹೋಗುತ್ತಿದ್ದರು. ‘ಕೃಷ್ಣರಾಜಪಾಠಶಾಲೆ’ ಗೆ ಕನ್ನಡ ಅಭಿವೃದ್ಧಿಗೋಸ್ಕರ ಸಹಾಯಮಾಡುತ್ತಿದ್ದರು. ಆ ಶಾಲೆಯ ಸಮಿತಿಯ ಸದಸ್ಯರಾಗಿದ್ದು, ಮಕ್ಕಳು ಕನ್ನಡವನ್ನು ಓದಿ ಮುಂದಕ್ಕೆ ಬರುವಂತೆ ಪ್ರೋತ್ಸಾಹಿಸುತ್ತಿದ್ದರು.

ವೆಂಕಟಾಚಾರ್ಯರಿಗೆ ಭಾಷೆಗಳನ್ನು ಕಲಿಯುವ ಆಸೆಯೂ ಬಹಳವಾಗಿತ್ತು. ಅನೇಕ ಭಾಷೆಗಳನ್ನು ಕಲಿತಿದ್ದರು. ಬಂಗಾಳದ ಪ್ರಸಿದ್ಧ ವ್ಯಕ್ತಿಗಳಲ್ಲದೆ, ಬೇರೆ ಬೇರೆ ಕಡೆಗಳಿಂದಲೂ ಪ್ರಸಿದ್ಧ ಸಾಹಿತಿಗಳು, ವಿದ್ವಾಂಸರು ಇವರ ಮನೆಗೆ ಬರುತ್ತಿದ್ದರು; ಪತ್ರ ಬರೆಯುತ್ತಿದ್ದರು; ಸಲಹೆ ಕೇಳುತ್ತಿದ್ದರು. ಅವರ ಶ್ರದ್ಧೆ-ಶಿಸ್ತು, ಅವರಿಗೆಲ್ಲಾ ಆದರ್ಶಪ್ರಾಯವಾಗಿತ್ತು.

ವೆಂಕಟಾಚಾರ್ಯರು  ಜೀವನದ ಕೊನೆಯ ಒಂದೆರಡು ವರ್ಷಗಳ ಕಾಲವನ್ನು ತಮ್ಮ ಸ್ವಂತ ಮನೆಯಲ್ಲಿ ಕಳೆಯಲಾಗಲಿಲ್ಲ. ಕಾರಣಾಂತರಗಳಿಂದ ಅದನ್ನು ಬಿಡಬೇಕಾಯಿತು. ಅದೃಷ್ಟ ಲಕ್ಷ್ಮಿಯೂ ಕೈಬಿಟ್ಟಂತಾಯಿತು. ಆರೋಗ್ಯ ಕೆಟ್ಟಿತು. ಹಣಕಾಸಿನ ತೊಂದರೆಗಳು ಆರಂಭವಾದವು.

ಕೆಲವು ಕಾಲ ಕಾಯಿಲೆಯಾಗಿ ಮಲಗಿದ್ದ ವೆಂಕಟಾಚಾರ್ಯರು ೧೯೧೪ರ ಜೂನ್ ೨೬ ರಂದು ಬೆಂಗಳೂರಿನಲ್ಲಿ ಕಣ್ಣುಮುಚ್ಚಿದರು.

ಆದರೆ, ಅವರ ಕೃತಿಗಳಿಂದ ನಮ್ಮ ಕನ್ನಡಿಗರ ಕಣ್ಣುಗಳು ತೆರೆದವು.