೧. ಹಿನ್ನೆಲೆ

ಭರತಖಂಡಕ್ಕೆ ಭೂಷಣಪ್ರಾಯವಾದ ಕರ್ನಾಟಕದ ಸಾಹಿತ್ಯಕ ಮತ್ತು ಧಾರ್ಮಿಕ ಇತಿಹಾಸದಲ್ಲಿ ಪ್ರಮುಖವಾದ ಪುಣ್ಯಪ್ರದೇಶ ತುಮಕೂರು ಜಿಲ್ಲೆ. ವಿಶ್ವಸಾಹಿತ್ಯಕ್ಕೆ ಅಮೂಲ್ಯ ಕಾಣಿಕೆಯನ್ನಿತ್ತ ಕನ್ನಡ ವಚನ ವಾಙ್ಞಯದ ಸಂಕಲನ, ಪ್ರಸರಣ, ರಚನಾಕಾರ್ಯಗಳನ್ನು ಕೈಕೊಂಡ ಪುಣ್ಯಪುರುಷರ ಜನ್ಮ ಭೂಮಿಯಾಗಿದೆ. ಭಗವಾನ್ ಎಡೆಯೂರು ಸಿದ್ಧ ಲಿಂಗೇಶ್ವರ, ಧೀಮಂತ ಕವಿಗಳಾದ ಗುಬ್ಬಿಯ ಮಲ್ಲಣ್ಣ, ಮಲ್ಲಣಾರ್ಯ, ಶಾಂತೇಶ ಪ್ರಖ್ಯಾತ ವಚನಸಂಕಲನಕಾರರಾದ ಗೂಳೂರು ಸಿದ್ಧವೀರಣ್ಣ. ಶ್ರೇಷ್ಠಕವಿಗಳಾದ ಸಂಪಾದನೆಯ ಪರ್ವತೇಶ. ವಿರಕ್ತ ತೋಂಟದಾರ್ಯ, ಬಿಜ್ಜಾವರದ ಚಿಕ್ಕಭೂಪಾಲ – ಇವರೇ ಮೊದಲಾದ ಅಸಂಖ್ಯಾತ ಮಹಾತ್ಮರ ಆಡುಂಬೊಲವೂ ಆಗಿದೆ. ಈ ಪುಣ್ಯಪುರುಷರ ಪಾದಸ್ಪರ್ಶದಿಂದ ಈ ನಾಡು ಪವಿತ್ರವಾಗಿದೆ, ಪಾವನವಾಗಿದೆ.

ತುಮಕೂರು ಜಿಲ್ಲೆಯ ಸಿದ್ಧಗಂಗೆ, ಶಿವಗಂಗೆ, ಗುಬ್ಬಿ, ಗೂಳೂರು, ಕುಪ್ಪೂರು ಗದ್ದಿಗೆ, ಸಿದ್ಧರಬೆಟ್ಟ, ನೊಣವಿನಕೆರೆ, ಕಗ್ಗೆರೆ, ಎಡೆಯೂರು, ಎಳನಡು, ಗೋಡೆಕೆರೆ ಮೊದಲಾದುವು ಸುಕ್ಷೇತ್ರಗಳೆನಿಸಿವೆ. ಇವುಗಳಿಗೆಲ್ಲ ಸ್ಥಲಪುರಾಣಗಳಿವೆ. ದೇವರಾಯನದುರ್ಗ, ಬಿಜ್ಜಾವರ, ಮಿಡಿಗೇಸಿ, ಪಾವಗಡ, ಹಾಗಲವಾಡಿ ಇವೇ ಮುಂತಾದ ಐತಿಹಾಸಿಕ ಸ್ಥಳಗಳಿವೆ. ಹದಿನೈದು ಮತ್ತು ಹದಿನಾರನೆಯ ಶತಮಾನಗಳಲ್ಲಿ ಎರಡು ಲಿಂಗವಂತ ಅರಸುಮನೆತನಗಳು ಇಲ್ಲಿ ಬಾಳಿಬೆಳಗಿವೆ.

ಕರ್ನಾಟಕದ ಇತಿಹಾಸದಲ್ಲಿ ತುಮಕೂರು ತುಂಬ ಪ್ರಾಮುಖ್ಯವನ್ನು ಪಡೆದಿದೆ. ‘ಕಲ್ಪವೃಕ್ಷಗಳ ನೆಲೆವೀಡು’ ಎಂಬ ಖ್ಯಾತಿಯನ್ನು ಗಳಿಸಿರುವ ಈ ನಾಡು ಪ್ರಾಕೃತಿಕ ಸೌಂದರ್ಯದಿಂದ ಧಾರ್ಮಿಕ ಮಠಮಾನ್ಯಗಳಿಂದ ಪ್ರಾಚೀನ ಅರ್ವಾಚೀನ ಕವಿಶ್ರೇಷ್ಠರಿಂದ ಪರಿಶೋಭಿಸುತ್ತಿದೆ. ಅರ್ವಾಚೀನ ಪ್ರಾತಃಸ್ಮರಣೀಯ ಕನ್ನಡಿಗರಲ್ಲಿ ಅಗ್ರಗಣ್ಯರೂ ನವೋದಯ ಸಾಹಿತ್ಯದ ಆಚಾರ್ಯರೂ ಕನ್ನಡದ ಕಣ್ವರೂ, ಯುಗಪ್ರವರ್ತಕರೂ ಎನಿಸಿದ ರಾಜಸೇವಾಸಕ್ತ ಬಿ.ಎಂ. ಶ್ರೀಕಂಠಯ್ಯ, ಪ್ರಕಾಂಡ ಪಂಡಿತರಾದ ಡಾ. ಡಿ.ಎಲ್. ನರಸಿಂಹಾಚಾರ್, ಪ್ರೊ. ತೀ.ನಂ. ಶ್ರೀಕಂಠಯ್ಯ, ಕ.ವೆಂ. ರಾಘವಾಚಾರ್, ಕೆ. ವೆಂಕಟರಾಮಪ್ಪ, ಹೊಸಕೆರೆ ಚಿದಂಬರಯ್ಯ, ನಂಜುಂಡ ಶಿವಯೋಗಿ, ಬೆಳ್ಳಾವೆ ವೆಂಕಟನಾರಾಯಣಪ್ಪ, ನಿಟ್ಟೂರು ಶ್ರೀನಿವಾಸರಾವ್ – ಇವರೇ ಮೊದಲಾದ ವಿದ್ವನ್ಮಣಿಗಳ ಜನ್ಮಭೂಮಿ ತುಮಕೂರು ಜಿಲ್ಲೆ. ಈ ಪರಂಪರೆಯ ಪ್ರತಿನಿಧಿಯೋ ಎಂಬಂತೆ ಶಿವಮೂರ್ತಿಶಾಸ್ತ್ರಿಗಳು ಬಾಳಿ ಬೆಳಗಿದ್ದಾರೆ.

ಕನ್ನಡ ಸಾಹಿತ್ಯ ಸಂಸ್ಕೃತಿ ಇತಿಹಾಸ ಧರ್ಮ ಮೊದಲಾದ ಕ್ಷೇತ್ರಗಳಿಗೆ ಗಣನೀಯವಾದ ಸೇವೆಯನ್ನು ಸಲ್ಲಿಸಿದವರಲ್ಲಿ ಶಿವಮೂರ್ತಿ ಶಾಸ್ತ್ರಿಗಳು ಅಗ್ರಗಣ್ಯರು. ಸಾಮಾಜಿಕ, ರಾಜಕೀಯ, ಧಾರ್ಮಿಕ, ಪತ್ರಿಕಾರಂಗಗಳಿಗೂ ಶ್ರೀಯುತರ ಸೇವೆ ಅಪರಿಮಿತ. ಕರ್ಣಾಟಕ ಏಕೀಕರಣ, ಭಾರತದ ಸ್ವಾತಂತ್ರ‍್ಯ ಸಂಗ್ರಾಮ ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಅದರಲ್ಲೂ ವಿಶೇಷವಾಗಿ ವೀರಶೈವ ಸಾಹಿತ್ಯಕ್ಕೆ ಮೌಲಿಕ ಕೊಡುಗೆಯನ್ನು ನೀಡಿದ್ದಾರೆ. ದೈವದತ್ತವಾಗಿ ಪ್ರಾಪ್ತವಾಗಿದ್ದ ಕೀರ್ತನ ಕಲೆಯಿಂದ ಅಖಂಡ ಕರ್ನಾಟಕವನ್ನು ಹಲವಾರು ಸಲ ಸುತ್ತಿ ಧಾರ್ಮಿಕ ಜಾಗೃತಿಯನ್ನುಂಟುಮಾಡಿದ್ದಾರೆ. ಶಾಸ್ತ್ರಿಗಳು ಸಂಚರಿಸದ ಊರುಗಳಿಲ್ಲ. ಸಂದರ್ಶಿಸದ ಮಠಮಾನ್ಯಗಳಿಲ್ಲ. ಇಂತಹ ಮಹಾಮೇಧಾವಿ ಶಿವಮೂರ್ತಿ ಶಾಸ್ತ್ರಿಗಳ ಸಮಗ್ರ ಜೀವನದ ಒಂದು ಕಿರುಪರಿಚಯವನ್ನು ಮಾಡಿಕೊಡಲಾಗಿದೆ.

೨. ಜನನ – ಬಾಲ್ಯ – ವಿದ್ಯಾಭ್ಯಾಸ

ತುಮಕೂರಿನಲ್ಲಿ ಹುಲುಕುಂಟೆ ಮಠದ ಬಸವಯ್ಯಸ್ವಾಮಿ ಎಂಬ ಜಂಗಮರಿದ್ದರು. ಇವರ ಹೆಂಡತಿ ನೀಲಮ್ಮ. ಪುರಾಣ ಪ್ರವಚನ ಮಾಡುವುದು ಇವರ ಕಾಯಕವಾಗಿತ್ತು. ಈ ದಂಪತಿಗಳಿಗೆ ಗಂಗಮ್ಮ ಎಂಬ ಒಬ್ಬ ಹೆಣ್ಣು ಮಗಳಿದ್ದಳು. ಆಮೇಲೆ ಶುಭಕೃತುನಾಮ ಸಂವತ್ಸರದ ಮಾರ್ಗಶಿರ ಬಹುಳ ಏಕಾದಶಿ ಸೋಮವಾರ ಎಂದರೆ ದಿನಾಂಕ ೨೩ – ೨ – ೧೯೦೩ ರಂದು ಒಬ್ಬ ಪುತ್ರ ರತ್ನ ಜನಿಸಿದನು. ಆ ಬಾಲಕನಿಗೆ ಕುಪ್ಪಯ್ಯ ಎಂದು ನಾಮಕರಣ ಮಾಡಿದರು. ಪೌರಾಣಿಕ ವಂಶದವರಾದ ಬಸವಯ್ಯಸ್ವಾಮಿಗಳು ಚೆನ್ನಬಸವ ಪುರಾಣ, ಬಸವಪುರಾಣ, ಜೈಮಿನಿಭಾರತ, ರಾಜಶೇಖರ ವಿಲಾಸ ಮೊದಲಾದ ಕಾವ್ಯಗಳನ್ನು ಸುಶ್ರಾವ್ಯವಾಗಿ ವಾಚನ ಮಾಡುತ್ತಿದ್ದರು. ಇದು ತಮ್ಮ ಮಗನ ಮನಸ್ಸಿನ ಮೇಲೆ ತುಂಬ ಪರಿಣಾಮವನ್ನು ಬೀರಿತು. ವಂಶಪಾರಂಪರ್ಯವಾಗಿ ನಡೆದುಕೊಂಡು ಬಂದಿದ್ದ ಈ ಕೀರ್ತನ ಕಲೆಯನ್ನು ಶಾಸ್ತ್ರಿಗಳು ತುಂಬ ಸಮರ್ಥವಾಗಿ ರೂಢಿಸಿಕೊಂಡರು.

ಶಾಸ್ತ್ರಿಗಳು ಬಾಲ್ಯ ವಿದ್ಯಾಭ್ಯಾಸವು ತುಮಕೂರಿನ ವೆಸ್ಲಿಯನ್ ಮಿಷನ್ ಸ್ಕೂಲಿನಲ್ಲಿ ನಡೆಯಿತು. ೧೯೧೭ರಲ್ಲಿ ಕನ್ನಡ ಮುಲ್ಕಿ ಪರೀಕ್ಷೆಯಲ್ಲಿ ಶಾಸ್ತ್ರಿಗಳು ಉತ್ತೀರ್ಣರಾದರು. ಪ್ರೌಢಶಾಲೆಯಲ್ಲಿ ವ್ಯಾಸಂಗವನ್ನು ಮುಂದುವರಿಸುವುದಕ್ಕೆ ಶಾಸ್ತ್ರಿಗಳ ತಂದೆಯವರು ಅನುಮತಿ ನೀಡಲಿಲ್ಲ. ಆ ಪ್ರಸಂಗವನ್ನು ಶಾಸ್ತ್ರಿಗಳೇ ಈ ರೀತಿ ಹೇಳಿಕೊಂಡಿದ್ದಾರೆ. “ಹೈಸ್ಕೂಲಿಗೆ ಹೋಗಬೇಕೆಂದಿದ್ದಾಗ ನಮ್ಮ ತಂದೆಯವರು ಪೂರ್ವಕಾಲದ ಪೌರಾಣಿಕರಾಗಿದ್ದುದರಿಂದಲೂ ನನ್ನನ್ನು ಒಬ್ಬ ಜಂಗಮಯ್ಯನನ್ನಾಗಿ ಮಾಡಬೇಕೆಂದಿದ್ದುದರಿಂದಲೂ ನನ್ನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಕೊಡಲಿಲ್ಲ. ನಾನು ಹಟ ಮಾಡಿದಾಗ, ಅವರು ನನ್ನನ್ನು ಚೆನ್ನಾಗಿ ಥಳಿಸಿ ಶಾಲೆ ಬಿಡಿಸಿದರು. ಅದರ ಗುರುತು ಈಗಲೂ ಮೈಮೇಲೆ ಇದೆ.” (ದೇವಗಂಗೆ, ಭಾಗ – ೨, ಪುಟ. ೨)

ಹೈಸ್ಕೂಲು ವ್ಯಾಸಂಗಕ್ಕೆ ಅವಕಾಶವಿಲ್ಲವಾದುದರಿಂದ ನಿರಾಶರಾದ ಶಾಸ್ತ್ರಿಗಳು ಉಪಾಯವಿಲ್ಲದೆ ತುಮಕೂರಿನಲ್ಲೇ ಇದ್ದ ನಾರ್ಮಲ್ ಸ್ಕೂಲಿಗೆ ಸೇರಿಕೊಂಡರು. ಅಪ್ಪರ್ ಸೆಕೆಂಡರಿ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಈ ಮಧ್ಯೆ ಶಾಸ್ತ್ರಿಗಳ ಹೈಸ್ಕೂಲು ವಿದ್ಯಾಭ್ಯಾಸಕ್ಕೆ ಅಡ್ಡಿಪಡಿಸಿದ್ದ ಅವರ ತಂದೆಯವರು ೧೯೧೮ರಲ್ಲಿ ಶಿವಾಧೀನರಾದರು. ಸಂಸಾರ ನಿರ್ವಹಣೆಯ ಭಾರವೆಲ್ಲ ಶಾಸ್ತ್ರಿಗಳ ಮೇಲೆಯೇ ಬಿದ್ದಿತು. ಇದೇ ಸಮಯದಲ್ಲಿ ಶಾಸ್ತ್ರಿಗಳ ಅಕ್ಕ ಶರಣೆ ಗಂಗಮ್ಮ ಅಕಾಲ ಮೃತ್ಯುವಿಗೆ ಈಡಾದರು. ಮೊದಲೇ ತುಂಬ ಬಡತನದ ಕುಟುಂಬ. ಅದರ ಮೇಲೆ ಈ ಎರಡು ಅನಿರೀಕ್ಷಿತ ಸಾವುಗಳಿಂದ ಶಾಸ್ತ್ರಿಗಳು ಕಂಗಾಲಾದರು.

೩. ಉಪಾಧ್ಯಾಯ ವೃತ್ತಿ

ಜೀವನೋಪಾಯಕ್ಕಾಗಿ ಶಾಸ್ತ್ರಿಗಳು ಗುಬ್ಬಿಯ ಮಾಧ್ಯಮಿಕ ಶಾಲೆಯಲ್ಲಿ ಕನ್ನಡದ ಉಪಾಧ್ಯಾಯರಾಗಿ ಕೆಲಸಕ್ಕೆ ಸೇರಿಕೊಂಡರು. ಸುಮಾರು ಎರಡು ವರ್ಷಗಳ ಕಾಲ (೧೯೨೪ – ೨೫) ಗುಬ್ಬಿಯ ಚನ್ನಬಸವೇಶ್ವರ ದೇವಾಲಯದ ಬಳಿಯ ಕದಂಬನದಿಯ ತೀರದಲ್ಲಿದ್ದ ಅಡವಿಸ್ವಾಮಿಗಳ ಮಠದಲ್ಲಿ ವಾಸಮಾಡುತ್ತಿದ್ದರು. ಶ್ರೀಮಠದಲ್ಲಿದ್ದ ಪ್ರಾಚೀನ ಕಾವ್ಯಗಳನ್ನೂ, ಪುರಾಣಗಳನ್ನೂ ಚೆನ್ನಾಗಿ ವ್ಯಾಸಂಗ ಮಾಡಿದರು. ಗುಬ್ಬಿಯ ಶಾಲೆಯಲ್ಲಿ ಉಪಾಧ್ಯಾಯರಾಗಿದ್ದಾಗ ಅಲ್ಲಿಗೆ ಬಂದಿದ್ದ ರೆವೆರೆಂಡ್ ಬ್ಲೈನ್ ಎಂಬ ಪಾದ್ರಿಗೆ ಕನ್ನಡವನ್ನು ಬೋಧಿಸುತ್ತಿದ್ದರು. ಶಾಸ್ತ್ರಿಗಳು ಉಪಾಧ್ಯಾಯರಾಗುವ ವೇಳೆಗೆ ಗುಬ್ಬಿಯ ಒಂದು ಬಡಕುಟುಂಬದಲ್ಲಿ ೧೯೨೪ರಲ್ಲಿ ವಿವಾಹವೂ ಆಗಿತ್ತು.

ಸಿದ್ಧಗಂಗಾ ಕ್ಷೇತ್ರದಲ್ಲಿ ಪ್ರೊ. ಬಸವನಾಳರ ಅಧ್ಯಕ್ಷತೆಯಲ್ಲಿ ಒಂದು ಧಾರ್ಮಿಕಸಭೆ ೧೯೨೬ರಲ್ಲಿ ನಡೆಯಿತು. ಆ ಸಭೆಯಲ್ಲಿ ಶಿವಮೂರ್ತಿಶಾಸ್ತ್ರಿಗಳು ಸ್ವಯಂ ರಚಿತ ಒಂದು ಕವಿತೆಯನ್ನು ಹಾಡಿದ್ದೇ ಅಲ್ಲದೆ ಷಡಕ್ಷರದೇವನನ್ನು ಕುರಿತು ಉಪನ್ಯಾಸವನ್ನೂ ಮಾಡಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರೊ. ಬಸವನಾಳರಿಗೆ ಶಾಸ್ತ್ರಿಗಳ ಉಪನ್ಯಾಸ ತುಂಬ ಮೆಚ್ಚುಗೆಯಾಯಿತು. ಆ ಸಭೆಯಲ್ಲಿ ಮಾಗಡಿ ವೀರಪ್ಪಶಾಸ್ತ್ರಿಗಳು ಬೊಂಬಾಯಿಯ ಸುಪ್ರಸಿದ್ಧ ವ್ಯಾಪಾರಿಗಳಾದ ಗಂಗಾಧರಪ್ಪ ಸಾಮೋಜಿ, ಹುಬ್ಬಳ್ಳಿಯ ಪ್ರಖ್ಯಾತ ವಕೀಲರಾದ ಗುರುಸಿದ್ಧಪ್ಪ ಮಿರ್ಜಿ, ಡಾ. ಜೆ. ರುದ್ರಪ್ಪ ಮೊದಲಾದ ಪ್ರಮುಖರಿದ್ದರು. ಅವರೆಲ್ಲರೂ ಸೇರಿ ಶಾಸ್ತ್ರಿಗಳಿಗೆ ಉಪಾಧ್ಯಾಯ ವೃತ್ತಿಯನ್ನು ಬಿಟ್ಟು ಕೀರ್ತನೆ ಭಾಷಣಗಳಿಂದ ಜನಜಾಗೃತಿಯನ್ನು ಮಾಡಿದರೆ ನಾಡಿಗೂ ಜನತೆಗೂ ತುಂಬ ಉಪಕಾರವಾಗುತ್ತದೆ ಎಂದು ಹುರಿದುಂಬಿಸಿದರು.

೪. ಪಿ.ಆರ್. ಕರಿಬಸವ ಶಾಸ್ತ್ರಿಗಳಿಂದ ಕನ್ನಡ ಸಂಸ್ಕೃತ ವ್ಯಾಸಂಗ

ತುಮಕೂರಿನಲ್ಲಿ ಶಾಸ್ತ್ರಿಗಳಿಗೆ ಪೂರ್ವಿಕರ ಮನೆಮಠ ಹೊಲಗದ್ದೆ ಅಲ್ಪಸ್ವಲ್ಪ ಇದ್ದುವು. ಗುಬ್ಬಿಯ ಉಪಾಧ್ಯಾಯ ವೃತ್ತಿ ಎರಡು ವರ್ಷಗಳಿಗೆ ಮುಗಿಯಿತು. ತುಮಕೂರಿನಲ್ಲಿ ನೆಲಸಿದ ಶಾಸ್ತ್ರಿಗಳು ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲು ಒಂದು ಅವಕಾಶ ಪ್ರಾಪ್ತವಾಯಿತು. ಮೈಸೂರಿನ ಸುಪ್ರಸಿದ್ಧ ವಿದ್ವಾಂಸರಾದ ಆಸ್ಥಾನ ಮಹಾವಿದ್ವಾನ್ ಕರ್ಣಾಟಕ ಭಾಷಾರತ್ನಂ ಪಿ.ಆರ್. ಕರಿಬಸವ ಶಾಸ್ತ್ರಿಗಳು ತುಮಕೂರಿನಲ್ಲಿ ನೆಲಸಿ ವಿಶ್ರಾಂತಿ ಜೀವನವನ್ನು ನಡೆಸುತ್ತಿದ್ದರು. ಶಾಸ್ತ್ರಿಗಳು ಅವರ ಸನ್ನಿಧಿಗೆ ಹೋಗಿ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ಪ್ರೌಢಪಾಠ ಪ್ರವಚನಗಳನ್ನು ಬೋಧಿಸಬೇಕೆಂದು ಪ್ರಾರ್ಥಿಸಿಕೊಂಡರು. ವೃದ್ಧಾಪ್ಯದಲ್ಲಿ ಯೋಗ್ಯಶಿಷ್ಯನ ಸೇವೆ ಲಭಿಸಿದ್ದಕ್ಕಾಗಿ ಸಂತುಷ್ಟರಾದ ಕರಿಬಸವ ಶಾಸ್ತ್ರಿಗಳು ಸುಮಾರು ಆರುವರ್ಷಗಳ ಕಾಲ ಕನ್ನಡ ಮತ್ತು ಸಂಸ್ಕೃತದ ಪ್ರೌಢಕಾವ್ಯಗಳನ್ನೂ, ಧರ್ಮಗ್ರಂಥಗಳನ್ನೂ ಶಿವಮೂರ್ತಿಶಾಸ್ತ್ರಿಗಳಿಗೆ ವಿಶೇಷವಾಗಿ ಬೋಧಿಸಿದರು. ಇದರಿಂದ ಉತ್ತರೋತ್ತರ ಶಿವಮೂರ್ತಿಶಾಸ್ತ್ರಿಗಳಿಗೆ ತುಂಬ ಪ್ರಯೋಜನ ವಾಯಿತು.

ತುಮಕೂರಿನಲ್ಲಿ ವಾಸವಾಗಿದ್ದ ಶಾಸ್ತ್ರಿಗಳು ಕೀರ್ತನೆ ಮತ್ತು ಭಾಷಣಗಳಿಗೆ ಆಹ್ವಾನ ಬಂದಾಗ ಬೇರೆ ಬೇರೆ ಸ್ಥಳಗಳಿಗೆಲ್ಲಾ ಹೋಗಿಬರುತ್ತಿದ್ದರು. ಇದರಿಂದ ಅವರ ಉಪಜೀವನ ನಡೆಯುತ್ತಿತ್ತು. ಸುಮಾರು ೧೯೩೬ರವರೆಗೆ ಈ ಪ್ರವಚನ ಪ್ರವಾಸವನ್ನು ಮಾಡಿದರು. ಇದರಿಂದಾದ ಅನುಭವಗಳನ್ನು ಪ್ರಯೋಜನವನ್ನು ಹೀಗೆ ಹೇಳಿಕೊಂಡಿದ್ದಾರೆ. “ದೇಶಾಟನದಲ್ಲಿ ಅನೇಕ ಅನುಭವಗಳು ಉಂಟಾದುವು. ತೀರ್ಥಕ್ಷೇತ್ರಗಳನ್ನೂ ಐತಿಹಾಸಿಕ ಸ್ಥಳಗಳನ್ನೂ ಅಗತ್ಯವಾಗಿ ಸಂದರ್ಶಿಸುತ್ತಿದ್ದೆನು. ನಾಡಿನ ಮನೆಮಠಗಳಲ್ಲಿ ಅವಿತುಕೊಂಡು ಕೂತಿದ್ದ ತಾಳೆಗರಿ ಗ್ರಂಥಗಳನ್ನು, ತಾಮ್ರಶಾಸನಗಳು ಮೊದಲಾದುವುಗಳನ್ನು ಸಂಗ್ರಹಿಸುತ್ತಿದ್ದೆನು. ಇಷ್ಟುಹೊತ್ತಿಗೆ ನಾನು ಕನ್ನಡ ನಾಡಿಗೆ ತಕ್ಕಷ್ಟು ಪರಿಚಿತನಾದೆನು.” (ಜೀವನ ಸ್ಮೃತಿಗಳು, ಪುಟ. ೧೦)

೫. ಸ್ವಾತಂತ್ರ‍್ಯ ಚಳವಳಿ

ಭರತಖಂಡದಲ್ಲಿ ಸ್ವಾತಂತ್ರ‍್ಯ ಚಳವಳಿಯೂ ಕರ್ಣಾಟಕದಲ್ಲಿ ಏಕೀಕರಣ ಚಳವಳಿಯೂ ನಡೆಯುತ್ತಿದ್ದ ಕಾಲ ಅದು. ಈ ಸಂಬಂಧವಾಗಿ ಆ ಕಾಲದಲ್ಲಿ ತುಮಕೂರಿಗೆ ಬಂದು ಹೋದ ಕಡಪ ರಾಘವೇಂದ್ರರಾಯರು, ಕೊಪ್ಪಳದ ಜಯರಾಮಾಚಾರ್ಯರು, ದೇಶಪಾಂಡೆ ಗಂಗಾಧರರಾಯರು, ಹರ್ಡೇಕರ್ ಮಂಜಪ್ಪನವರು, ಮುದವೀಡು ಕೃಷ್ಣರಾಯರು, ಆಲೂರು ವೆಂಕಟರಾಯರು ಮೊದಲಾದ ಮಹನೀಯರ ಪರಿಚಯ ಮಾಡಿಕೊಂಡರು.

ಮಹಾತ್ಮ ಗಾಂಧಿ, ರಾಜಗೋಪಾಲಚಾರಿ, ಮಹದೇವ ದೇಸಾಯಿ ಅವರು ೧೯೨೭ರಲ್ಲಿ ತುಮಕೂರಿಗೆ ಬಂದಿದ್ದರು. ಶಾಸ್ತ್ರಿಗಳು ಗಾಂಧೀಜಿಯವರ ಭಾಷಣ ಕೇಳಲು ಪ್ರತಿದಿನವೂ ತಪ್ಪದೆ ಹೋಗುತ್ತಿದ್ದರು. ಶಾಸ್ತ್ರಿಗಳಿಗೆ ಬರುತ್ತಿದ್ದ ಹಿಂದಿಭಾಷೆಯ ನೆರವಿನಿಂದ ಗಾಂಧೀಜಿ ಭಾಷಣಗಳನ್ನು ಅರ್ಥಮಾಡಿಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ‘ಗಾಂಧಿ ಗೀತೆಗಳು’ ಎಂಬ ಕವನ ಸಂಕಲನವನ್ನು ಬರೆದು ಗಾಂಧೀಜಿಗೆ ಅರ್ಪಿಸಿದರು. ಆಗ ತುಮಕೂರಿನ ಮುಖಂಡರಾಗಿದ್ದ ಕೆ. ರಂಗಯ್ಯಂಗಾರ್, ಟಿ. ಸುಬ್ರಹ್ಮಣ್ಯಂ ಮೊದಲಾದವರು ಪ್ರಾರಂಭಿಸಿದ್ದ ಸ್ವದೇಶಿ ಚಳವಳಿ ಶಾಸ್ತ್ರಿಗಳ ಮನಸ್ಸಿನ ಮೇಲೆ ತುಂಬ ಪರಿಣಾಮವನ್ನು ಮಾಡಿತು. ಜಿಲ್ಲೆಯ ಮುಖಂಡರು ಶಾಸ್ತ್ರಿಗಳನ್ನೂ ಜತೆಯಲ್ಲಿ ಭಾಷಣಕ್ಕೆ ಎಲ್ಲ ಕಡೆಗೂ ಕರೆದುಕೊಂಡು ಹೋಗುತ್ತಿದ್ದರು. ಇದರಿಂದ ತುಮಕೂರು ಜಿಲ್ಲೆಯ ಜನರಿಗೆ ಶಾಸ್ತ್ರಿಗಳ ಪರಿಚಯ ಸಾಕಷ್ಟಾಯಿತು. ಇದೇ ಕಾಲದಲ್ಲಿ ಮದರಾಸಿನಲ್ಲಿ ಡಾ. ಅಸ್ಸಾರಿ ಅವರ ಆಧ್ಯಕ್ಷತೆಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನ ನಡೆಯಿತು. ಶಾಸ್ತ್ರಿಗಳು ಈ ಅಧಿವೇಶನಕ್ಕೆ ಹೋಗಿ ಪಂಡಿತ ಜವಹರ್‌ಲಾಲ್ ನೆಹರು, ಸರೋಜಿನಿದೇವಿ, ಸರ್ದಾರ್ ಪಟೇಲ್ ಮೊದಲಾದ ಮುಖಂಡರ ದರ್ಶನವನ್ನು ಪಡೆದರು.

೬. ಮದರಾಸು ಪ್ರವಾಸ

ಇದೇ ಸಮಯದಲ್ಲಿ ಮದರಾಸಿನ ಅಡಿಯಾರ್‌ನಲ್ಲಿ ಥಿಯಸಾಫಿಕಲ್ ಕಾನ್ಫರೆನ್ಸ್ ನಡೆಯುತ್ತಿತ್ತು. ಶಾಸ್ತ್ರಿಗಳು ಈ ಸಭೆಯಲ್ಲೂ ಭಾಗವಹಿಸಿದ್ದರು. ಆಗ ಅವರಿಗೆ ಜೆ. ಕೃಷ್ಣಮೂರ್ತಿ ಅರುಂಡೇಲ್ ಅವರ ಸಂಪರ್ಕವಾಯಿತು. ಅವರು ಶಾಸ್ತ್ರಿಗಳಿಗೆ ಡಾ. ಅನಿಬೆಸೆಂಟರ ಮಹತ್ವವನ್ನು ತಿಳಿಸಿದ್ದಲ್ಲದೆ ಥಿಯಸಾಫಿಕಲ್ ತತ್ವಗಳನ್ನೂ ಮನವರಿಕೆ ಮಾಡಿಕೊ‌ಟ್ಟರು. ಈ ಸಂಬಂಧವಾದ ಕೆಲವು ಗ್ರಂಥಗಳನ್ನು ಶಾಸ್ತ್ರಿಗಳು ಕೊಂಡು ಓದಿದರು. ದೇಶ ವಿದೇಶಗಳಿಂದ ಬಂದಿದ್ದ ಜನ ಥಿಯಾಸಫಿ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜನಸೇವೆಗೆ ಸಿದ್ಧರಾಗುತ್ತಿದ್ದುದು ಶಾಸ್ತ್ರಿಗಳ ಮನಸ್ಸಿನ ಮೇಲೆ ಗಾಢವಾದ ಪರಿಣಾಮವನ್ನು ಬೀರಿತು. ತುಮಕೂರಿನ ಕೆಲವರು ಈ ಸಮ್ಮೇಳನಕ್ಕೆ ಬಂದಿದ್ದರು.

ಮದರಾಸಿನ ಪ್ರವಾಸ ಶಾಸ್ತ್ರಿಗಳಿಗೆ ತುಂಬ ಪ್ರಯೋಜನಕಾರಿಯಾಯಿತು. ಅಪಾರ ಲೋಕಾನುಭವವನ್ನು ತಂದುಕೊಟ್ಟಿತು. ಶಾಸ್ತ್ರಿಗಳು ಸಮುದ್ರವನ್ನು ಮೊದಲ ಬಾರಿ ಕಂಡದ್ದು ಮದರಾಸಿಗೆ ಹೋಗಿದ್ದಾಗಲೇ. ಈ ಸ್ವಾರಸ್ಯ ಪ್ರಕರಣವನ್ನು ಅವರ ಮಾತುಗಳಿಂದಲೇ ಕೇಳೋಣ. “ನಾನು ಸಮುದ್ರವನ್ನು ನೋಡಿದುದು ಆಗಲೇ. ಸಮುದ್ರಸ್ನಾನ ಮಾಡಿದುದು ಆಗಲೇ. ಮದರಾಸು ಬಂದರನ್ನು ಕೂಡ ಇದೇ ಸಂದರ್ಭದಲ್ಲಿ ನೋಡಿದುದು. ಸಮುದ್ರದ ವರ್ಣನೆಯನ್ನು ನಾನು ಕಾವ್ಯಗಳಲ್ಲಿ ಓದಿದ್ದೆನು. ಪ್ರತ್ಯಕ್ಷವಾಗಿ ಸಮುದ್ರವನ್ನು ಕಂಡು ಅಲ್ಲಿ ಏಳುವ ಅಲೆಗಳನ್ನು ನೋಡಿ, ಅದರ ವಿಸ್ತಾರ ಗಾಂಭೀರ್ಯಗಳನ್ನು ಕಂಡು ನನ್ನ ಮನಸ್ಸಿನ ಮೇಲೆ ಒಳ್ಳೆಯ ಪರಿಣಾಮವುಂಟಾಯಿತು. ಮದರಾಸು ಬಂದರಿಗೆ ನೋಡಲು ಹೋದಾಗ ಒಂದು ದೋಣಿಯಲ್ಲಿ ಕುಳಿತುಕೊಂಡು ಸಮುದ್ರದಲ್ಲಿ ಅಲೆದಾಡಬೇಕೆಂಬ ಆಸೆಯುಂಟಾಯಿತು. ದೋಣಿಯವನಿಗೆ ಶುಲ್ಕವನ್ನು ಕೊಟ್ಟು ಅದೇ ದಿನ ನಾನು ಕೊಂಡು ಕೊಂಡಿದ್ದ ಹೊಸಚಪ್ಪಲಿಗಳನ್ನು ಸಮುದ್ರ ತೀರದಲ್ಲಿ ಬಿಟ್ಟು ಸಮುದ್ರರಾಜನಿಗೆ ಕೈಮುಗಿದು ಬರಿಗಾಲಿನಲ್ಲಿ ದೋಣಿಯನ್ನು ಹತ್ತಿದೆನು. ದೋಣಿಯವನು ಕೊಂಚದೂರ ಸಮುದ್ರದಲ್ಲಿ ಓಡಾಡಿಸಿ ನನ್ನನ್ನು ದಡಕ್ಕೆ ತಂದುಬಿಟ್ಟನು. ಆಗ ನಾನು ಬಿಟ್ಟಿದ್ದ ಹೊಸಚಪ್ಪಲಿಗಳು ಕಾಣದಾದವು. ಪ್ರಾಯೇಣ ಯಾರೋ ಬುದ್ಧಿವಂತರು ಅವನ್ನು ಅಪಹರಿಸಿರಬೇಕು. ಕಾಲಿನಲ್ಲಿ ಚಪ್ಪಲಿಯನ್ನು ಹಾಕಿಕೊಂಡು ದೋಣಿಯಲ್ಲಿ ಕುಳಿತರೆ ಸಮುದ್ರರಾಜನಿಗೆ ಅಪಚಾರ ಮಾಡಿದಂತಾಗುತ್ತದೆ ಎಂಬುದು ನನ್ನ ಮನೋಭಾವನೆಯಾಗಿತ್ತು. ಆ ದೋಣಿಯಲ್ಲಿದ್ದ ಜನರೆಲ್ಲರೂ ಕಾಲಿಗೆ ಚಪ್ಪಲಿಯನ್ನು ಹಾಕಿಕೊಂಡೇ ಇದ್ದರು. ಅದನ್ನು ನೋಡಿ ನಾನು ಇಲ್ಲಿ ಮೂಢನಂಬಿಕೆಯಿಂದ ವರ್ತಿಸಿದೆನು. ಚಪ್ಪಲಿಯನ್ನು ಬಿಟ್ಟು ಹೋಗಬಾರದಿತ್ತು ಎಂದು ಕೊಂಡೆನು. ಈ ಸುದ್ಧಿಯನ್ನು ಮದರಾಸಿನಲ್ಲಿ ನಾನು ವಸತಿಮಾಡಿಕೊಂಡಿದ್ದ ಗುರುಬಸವ ಮತ್ತು ಕಂಪನಿ ಮಾಲೀಕರಿಗೆ ತಿಳಿಸಿದೆನು. ಅವರ ಮನೆಯವರು ನನ್ನ ಈ ಅವ್ಯವಹಾರವನ್ನು ಕೇಳಿ ಹೊಟ್ಟೆ ಹುಣ್ಣಾಗುವಂತೆ ನಕ್ಕರು. ಅದರಿಂದ ನನಗೆ ತುಂಬ ನಾಚಿಕೆಯಾಗಿ, ಕಾಲದೇಶ ವರ್ತಮಾನಗಳನ್ನು ಅರಿತು ನಡೆಯಬೇಕೆಂಬ ಅನುಭವವಾಯಿತು.” (ಜೀವನ ಸ್ಮೃತಿಗಳು, ಪುಟ. ೮ – ೯)

ಮದರಾಸಿನಲ್ಲಿ ಶಿವಮೂರ್ತಿಶಾಸ್ತ್ರಿಗಳು ಉಳಿದುಕೊಳ್ಳಲು ಆಶ್ರಯ ನೀಡಿದ್ದ ಗುರುಬಸವ ಅಂಡ್ ಕಂಪನಿ ಮಾಲೀಕರಾದ ನಾಗಪ್ಪ ಚೆಟ್ಟಿಯಾರ್ ತಮಿಳಿನಲ್ಲಿ ದೊಡ್ಡ ವಿದ್ವಾಂಸರು. ಅವರು ಪೆರಿಯಪುರಾಣಂ, ಪ್ರಭುಲಿಂಗಲೀಲೈ, ಸಿದ್ಧಾಂತಶಿಖಾಮಣಿ ಮೊದಲಾದ ಹಲವಾರು ಗ್ರಂಥಗಳನ್ನು ಪ್ರಕಟಿಸಿದ್ದರು. ಆ ಗ್ರಂಥಗಳನ್ನೆಲ್ಲ ಶಿವಮೂರ್ತಿಶಾಸ್ತ್ರಿಗಳಿಗೆ ಕೊಟ್ಟದ್ದೇ ಅಲ್ಲದೆ ಶಾಸ್ತ್ರಿಗಳು ಕೇಳಿದ ತೇವಾರಂ, ತಿರುವಾಚಕಂ, ತಿರುಕ್ಕುರಳ್ ಮೊದಲಾದ ಗ್ರಂಥಗಳನ್ನು ಶೈವಸಿದ್ಧಾಂತಭವನದಿಂದ ಕೊಡಿಸಿಕೊಟ್ಟರು. ಅಲ್ಲದೆ ತೆಲುಗಿನಲ್ಲಿ ಪ್ರಕಟವಾಗಿದ್ದ ವೇಮನ ಪದ್ಯಮುಲು, ಪಂಡಿತಾರಾಧ್ಯ ಚರಿತ್ರಮು, ವೃಕ್ಷಾಧಿಪ ಶತಕಮು ಎಂಬ ವೀರಶೈವ ಗ್ರಂಥಗಳನ್ನು ದೊರಕಿಸಿಕೊಟ್ಟರು. ಅವರ ಈ ಉಪಕಾರವನ್ನು ಶಾಸ್ತ್ರಿಗಳು ತುಂಬುಹೃದಯದಿಂದ ಸ್ಮರಿಸಿಕೊಳ್ಳುತ್ತಿದ್ದರು.

ಮದರಾಸಿನಲ್ಲಿದ್ದ ಎಲ್ಲ ಪ್ರೇಕ್ಷಣೀಯ ಸ್ಥಳಗಳನ್ನೂ, ದೇವಾಲಯಗಳನ್ನೂ ನೋಡಿದ ಮೇಲೆ ಕಂಚಿಗೆ ಹೋಗಿ ಇತಿಹಾಸ ಪ್ರಸಿದ್ಧವಾದ ಏಕಾಮ್ರನಾಥ ದೇವಾಲಯ, ರೇವಣಸಿದ್ಧ ದೇವಾಲಯ, ಶಂಕರಾರಾಧ್ಯರ ಮಠ, ಕಾಮಾಕ್ಷಿ ದೇವಾಲಯ, ವಿಷ್ಣುಕಂಚಿಯಲ್ಲಿನ ವರದರಾಜಸ್ವಾಮಿ ದೇವಾಲಯ ಇವೆಲ್ಲವನ್ನು ಸಂದರ್ಶಿಸಿದರು. ಜೊತೆಗೆ ಬಸವ ಪುರಾಣವನ್ನು ಸಂಸ್ಕೃತದಲ್ಲಿ ಬರೆದ ಶಂಕರಾರಾಧ್ಯರ ಸಮಾಧಿ, ಬಸವೇಶ್ವರ ದೇವಾಲಯಗಳನ್ನು ನೋಡಿಬಂದರು. ಮದರಾಸು ಮತ್ತು ಕಂಚಿಯ ಪ್ರವಾಸವು ಹೆಚ್ಚಿನ ಜ್ಞಾನಾರ್ಜನೆಗೆ ನೆರವಾದುವು ಎಂದು ಶಾಸ್ತ್ರಿಗಳೇ ಹೇಳಿಕೊಂಡಿದ್ದಾರೆ.

೭. ಅಖಂಡ ಕರ್ನಾಟಕ ಸಂಚಾರ

೧೯೨೬ ರಿಂದ ೧೯೩೬ರ ಹತ್ತು ವರ್ಷಗಳ ಅವಧಿ ಶಾಸ್ತ್ರಿಗಳ ಜೀವನ ಘಟ್ಟದಲ್ಲಿ ಬಹುಮುಖ್ಯವಾದುದು. ಈ ಅವಧಿಯಲ್ಲಿ ಅಖಂಡ ಕರ್ನಾಟಕವನ್ನು ಸುತ್ತಿ ಕನ್ನಡ ಪ್ರಚಾರ ಕಾರ್ಯಗಳನ್ನು ಮಾಡಿದ್ದಾರೆ. ತಮ್ಮ ಕೀರ್ತನ ಮತ್ತು ಪ್ರವಚನಗಳಿಂದ ಜನ ಜಾಗೃತಿಯನ್ನು ಉಂಟುಮಾಡಿದ್ದಾರೆ. ಈ ಎಲ್ಲ ವಿವರಗಳನ್ನೂ ಶಾಸ್ತ್ರಿಗಳೇ ದಾಖಲಿಸಿದ್ದಾರೆ. “೧೯೨೬ರಿಂದ ೧೯೩೬ವರೆಗೆ ಕರ್ನಾಟಕವನ್ನೆಲ್ಲಾ ಸುತ್ತಾಡುವ ಕಾಲದಲ್ಲಿ ಶೃಂಗೇರಿ, ಶ್ರವಣಬೆಳಗೊಳ, ರಂಭಾಪುರಿ, ಚಿತ್ರದುರ್ಗ, ಶಿವಯೋಗ ಮಂದಿರ, ಗದಗ, ನಿಡಸೋಸಿ, ಹುಬ್ಬಳ್ಳಿ, ಶ್ರೀಶೈಲ, ಹೊಂಬುಜ, ಕಲ್ಬುರ್ಗಿ, ಉಜ್ಜಯಿನಿ, ಸಿದ್ಧಗಿರಿ ಮೊದಲಾದ ಮಠಾಧೀಶ್ವರರ ಕೃಪೆಗೆ ಪಾತ್ರನಾದೆನು. ಈ ಹತ್ತುವರ್ಷದ ಅವಧಿಯಲ್ಲಿ ಉದಯಗಿರಿಯಿಂದ ನೀಲಗಿರಿವರೆಗೆ, ಮಂಗಳೂರಿಂದ ರಾಯದುರ್ಗದವರೆಗೆ, ಕೊಳ್ಳೇಗಾಲದಿಂದ ಕಾರವಾರದವರೆಗೆ, ಕಾಸರಗೋಡಿನಿಂದ ರಾಯದುರ್ಗದವರೆಗೆ ಇರುವ ಕನ್ನಡ ನಾಡಿನ ಭಾಗವನ್ನೆಲ್ಲಾ ಸಂಚರಿಸಿದೆನು. ಶೃಂಗೇರಿ, ಶಿವಗಂಗೆ, ತಲಕಾಡು, ನಂಜನಗೂಡು, ಹಂಪೆ, ಬನಶಂಕರಿ, ಮಹಾಕೂಟ, ಗೋಕರ್ಣ, ಉಡುಪಿ, ಮೇಲುಕೋಟೆ, ಧರ್ಮಸ್ಥಳ, ಕೊಲ್ಲೂರು, ಕುಕ್ಕೆಸುಬ್ರಹ್ಮಣ್ಯ, ಕೆಳದಿ, ಇಕ್ಕೇರಿ, ಭುವನಗಿರಿದುರ್ಗ, ಹುಬ್ಬಳ್ಳಿ, ಕೊಲ್ಲಾಪುರ, ಕೊಪ್ಪಳ, ಆವನಿ, ಕೂಡುಮಲೆ, ಉಳವಿ, ಮುಳಬಾಗಿಲು, ನಂದಿಬೆಟ್ಟ, ಕಲ್ಹತ್ತಗಿರಿ, ಶ್ರೀರಂಗಪಟ್ಟಣ, ಚಾಮರಾಜನಗರ, ಹರದನಹಳ್ಳಿ, ಮಹದೇಶ್ವರಬೆಟ್ಟ, ಎಡೆಯೂರು, ಕಗ್ಗೆರೆ ಅಮರೇಶ್ವರ, ತಲಕಾವೇರಿ, ಮಡಕೇರಿ, ಸ್ವಾದಿ, ಬಿಳಗಿ, ಕಿತ್ತೂರು, ಬೆಳವಡಿ, ನಾಯಕನಹಟ್ಟಿ, ಹಳೇಬೀಡು, ಹರಿಹರ, ಅಥಣಿ, ಬೇಲೂರು, ಮುದೇನೂರು, ಕೆಂಭಾವಿ, ದೇವಪುರ, ಎಲ್ಲೋರ, ಅಜಂತ, ಐಹೊಳೆ, ಪಟ್ಟದಕಲ್ಲು, ಇಳಕಲ್ಲು, ಕಾರ್ಕಳ, ಮೂಡಬಿದ್ರೆ, ಸೋಮನಾಥಪುರ, ವೇಣೂರು, ನೀಲಗಿರಿ, ಪೊಟ್ಟಲಕೆರೆ ಇತ್ಯಾದಿ ಸ್ಥಳಗಳನ್ನೆಲ್ಲಾ ಸುತ್ತುತ್ತಾ ಬಂದೆನು. ಉತ್ತರದಲ್ಲಿ ಸೊಲ್ಲಾಪುರ, ಮೀರಜ್, ಸಾಂಗ್ಲಿ, ಕೊಲ್ಲಾಪುರ, ಸಿದ್ಧಗಿರಿ, ಅಕ್ಕಲಕೋಟೆ, ಮಂಗಳವೇಡೆ, ದುಧನಿ, ಪುಂಡರಾಪುರ, ತುಳಜಾಪುರ ಇವುಗಳ ಪರ್ಯಂತ ಹೋಗಿ ಬಂದೆನು. ನಾನು ಈ ಕಾಲದಲ್ಲಿ ಜಯಕರ್ಣಾಟಕ, ಶಿವಾನುಭವ, ವಿಶ್ವಕರ್ಣಾಟಕ, ಲೋಕಮತ, ನವಕರ್ಣಾಟಕ, ತಾಯಿನಾಡು ಮೊದಲಾದ ಪತ್ರಿಕೆಗಳಿಗೆ ಲೇಖನ ಬರೆಯುತ್ತಿದ್ದೆನು. ಕನ್ನಡ ಪ್ರಚಾರದ ಕಾರ್ಯಕ್ಕಾಗಿ ಸುತ್ತುವ ಕಾರ್ಯದಲ್ಲಿ ಪಿಟೀಲು ನುಡಿಸುವ, ಮೃದಂಗ ಬಾರಿಸುವ, ಕಂಜರಿ ನುಡಿಸುವ, ಹಾರ್ಮೋನಿಯಂ ನುಡಿಸುವ ಉತ್ತಮ ಕಲಾವಿದರು ನನ್ನ ಜೊತೆಯಲ್ಲಿಯೇ ಇರುತ್ತಿದ್ದರು. ಈ ಕಾರಣದಿಂದ ನನ್ನ ಕೀರ್ತನ ಭಾಷಣಗಳು ಜನಪ್ರಿಯವಾಗಿ ಈಗ ಕನ್ನಡವನ್ನು ವಿರೋಧಿಸುತ್ತಿರುವ ಮರಾಠಿ ಜನಗಳು ಕೂಡ ನನ್ನ ಕೀರ್ತನೆಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.” (ಜೀವನ ಸ್ಮೃತಿಗಳು ಪುಟ ೧೧ – ೧೨)

೮. ಬೆಂಗಳೂರಿಗೆ ಬಂದು ನೆಲೆಸಿದ್ದು

ಶಿವಮೂರ್ತಿಶಾಸ್ತ್ರಿಗಳ ಜೀವನದ ಒಂದು ಬಹುಮುಖ್ಯ ಘಟ್ಟ ಎಂದರೆ ಅವರು ತುಮಕೂರಿನಿಂದ ಬೆಂಗಳೂರಿಗೆ ಬಂದು ನೆಲಸಿದ್ದು. ಅದಕ್ಕೆ ಒದಗಿ ಬಂದ ಸನ್ನಿವೇಶಗಳು ಇಂತಿವೆ. ೧೯೨೭ರಲ್ಲಿ ತುಮಕೂರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ದಯಮಾಡಿಸಿದ್ದರು. ಸರ್ ಮಿರ್ಜಾ ಇಸ್ಮಾಯಿಲ್ ಸಾಹೇಬರು ಆಗ ಮೈಸೂರಿನ ದಿವಾನರಾಗಿದ್ದರು. ಮಹಾರಾಜರ ಆಗಮನದ ಸವಿನೆನಪಿಗಾಗಿ ತುಮಕೂರಿನ ಸ್ವಾಗತ ಸಮಿತಿಯ ಪರವಾಗಿ “ನಾಲ್ವಡಿ ಕೃಷ್ಣರಾಜವಿಳಾಸ” ಎಂಬ ಕಿರುಕೃತಿಯನ್ನು ಚಂಪೂಶೈಲಿಯಲ್ಲಿ ಬರೆದು ಸಭೆಯಲ್ಲಿ ಓದಿ ಮಹಾರಾಜರಿಗೆ ಶಾಸ್ತ್ರಿಗಳು ಅರ್ಪಿಸಿದರು. ಅದು ಎಲ್ಲರ ಮೆಚ್ಚುಗೆಗೂ ಪಾತ್ರವಾಯಿತು. ಸರ್ ಮಿರ್ಜಾ ಇಸ್ಮಾಯಿಲ್ ಅವರ ಮನಸ್ಸಿನ ಮೇಲೆ ಒಳ್ಳೆಯ ಪರಿಣಾಮವನ್ನುಂಟುಮಾಡಿತು.

ಸರ್ ಮಿರ್ಜಾ ಇಸ್ಮಾಯಿಲ್ ಸಾಹೇಬರು ೧೯೨೬ರಲ್ಲಿ ಮೈಸೂರಿನ ದಿವಾನರಾದರು. ಅವರು ಮೊದಲ ಪ್ರವಾಸವನ್ನು ತುಮಕೂರು ಜಿಲ್ಲೆಯಲ್ಲಿ ಮಾಡಿದರು. ಮಧುಗಿರಿಯಲ್ಲಿ ನಂಜಯ್ಯ ಶೆಟ್ಟಿ ಅವರು ಕಟ್ಟಿಸಿಕೊಟ್ಟಿದ್ದ ಲೋಕಮಾನ್ಯತಿಲಕ ಸ್ಮಾರಕಮಂದಿರದ ಪ್ರಾರಂಭೋತ್ಸವವನ್ನು ಸರ್ ಮಿರ್ಜಾ ಸಾಹೇಬರು ನಡೆಸಿಕೊಟ್ಟರು. ಆ ಸಂದರ್ಭದಲ್ಲಿ ಲೋಕಮಾನ್ಯ ತಿಲಕರನ್ನು ಕುರಿತು ಶಾಸ್ತ್ರಿಗಳು ಸ್ವಾಗತಗೀತೆಯನ್ನು ಬರೆದು ಹಾಡಿದರು. ಭಾಷಣವನ್ನು ಮಾಡಿದರು. ದಿವಾನರು ಶಾಸ್ತ್ರಿಗಳ ಕವಿತಾಶಕ್ತಿಯನ್ನೂ ವಾಕ್ಪ್ರೌಢಿಮೆಯನ್ನೂ ಬಹಳವಾಗಿ ಮೆಚ್ಚಿಕೊಂಡು ಬೆಂಗಳೂರಿಗೆ ಬಂದು ತಮ್ಮನ್ನು ಕಾಣುವಂತೆ ತಿಳಿಸಿದರು. ಶಾಸ್ತ್ರಿಗಳು ಬೆಂಗಳೂರಲ್ಲಿ ನೆಲಸಲು ಇದು ಅಂಕುರಾರ್ಪಣವಾಯಿತು. ಅಲ್ಲದೆ ಶಾಸ್ತ್ರಿಗಳ ಹಲವಾರು ಹಿತೈಷಿಗಳು ಬೆಂಗಳೂರಿಗೆ ಬಂದು ನೆಲೆಸುವಂತೆ ಶಾಸ್ತ್ರಿಗಳನ್ನು ಹುರಿದುಂಬಿಸುತ್ತಲೇ ಇದ್ದರು. ಅವರಲ್ಲಿ ಸರ್ ಕೆ.ಪಿ. ಪುಟ್ಟಣ್ಣ ಶೆಟ್ಟರು, ದಿವಾನ್ ಬಹಾದ್ದೂರ್ ಪಿ. ಮಹಾದೇವಯ್ಯನವರು, ಜಿ. ಶಾಂತವೀರಪ್ಪನವರು, ಸರ್ ಮಿರ್ಜಾ ಸಾಹೇಬರು ಪ್ರಮುಖರು. ೧೯೩೬ರಲ್ಲಿ ತಮ್ಮನ್ನು ಬೆಂಗಳೂರಿಗೆ ತಂದು ನಿಲ್ಲಿಸಿದ ಈ ಮಹನೀಯರನ್ನು ತ್ರಿಕಾಲದಲ್ಲೂ ಸ್ಮರಿಸುತ್ತಿರುವುದಾಗಿ ಶಾಸ್ತ್ರಿಗಳು ಹೇಳಿಕೊಂಡಿದ್ದಾರೆ.

೯. ಮುದ್ರಣಾಲಯ, ಪತ್ರಿಕೆಗಳ ಪ್ರಾರಂಭ – ಸ್ವಾರಸ್ಯ ಅನುಭವಗಳು

ಬೆಂಗಳೂರಿಗೆ ಬಂದ ಶಾಸ್ತ್ರಿಗಳು ೧೯೩೭ರಲ್ಲಿ “ಶರಣ ಸಾಹಿತ್ಯ” ಎಂಬ ಮಾಸಪತ್ರಿಕೆಯನ್ನೂ ೧೯೩೯ರಲ್ಲಿ “ಸ್ವತಂತ್ರ ಕರ್ಣಾಟಕ” ಎಂಬ ವಾರಪತ್ರಿಕೆಯನ್ನೂ ಪ್ರಾರಂಭಿಸಿದರು. ೧೯೪೦ರಲ್ಲಿ ಸ್ವತಂತ್ರ ಕರ್ಣಾಟಕ ಮುದ್ರಣಾಲಯವನ್ನು ಸ್ಥಾಪಿಸಿದರು. ವಾರಪತ್ರಿಕೆಯಾದ ಸ್ವತಂತ್ರ ಕರ್ಣಾಟಕ ಬಹುಕಾಲ ನಡೆಯಲಿಲ್ಲ. ೧೯೩೯ರಲ್ಲಿ ಪ್ರಾರಂಭಿಸಿದ ಈ ಪತ್ರಿಕೆ ೧೯೪೨ರಲ್ಲೇ ನಿಂತು ಹೋಯಿತು. ಪತ್ರಿಕಾ ಪ್ರಕಟಣೆ ಮುದ್ರಣಾಲಯ ಸ್ಥಾಪನೆ ಇವುಗಳಿಂದಾದ ಕಷ್ಟ – ನಷ್ಟಗಳನ್ನು, ಸ್ವಾರಸ್ಯ ಪ್ರಕರಣಗಳನ್ನು ಶಾಸ್ತ್ರಿಗಳ ಬಾಯಿಂದಲೇ ಕೇಳಬೇಕಾಗಿದೆ. “ನಮ್ಮ ಆಫೀಸ್ ಮ್ಯಾನೇಜರು ಒಬ್ಬ ಇದ್ದ. ಅವನು ತುಂಬಾ ಮೋಸಗಾರ. ದಗಲ್‌ಬಾಜಿಗರ ಜಗದ್ಗುರು ಎಂದರೆ ಸಲ್ಲುತ್ತದೆ. ಅವನು ನನ್ನನ್ನು ಬಹಳವಾಗಿ ವಂಚಿಸಿದನು. ನಾನು ಮುದ್ರಣಾಲಯವನ್ನು ಸ್ಥಾಪಿಸುವಾಗ ಮದರಾಸಿನಿಂದ ಹೊಸ ಇಂಗ್ಲಿಷ್ ಟೈಪ್ಸ್ ಪ್ಯಾಕೆಟ್ಸ್‌ಗಳನ್ನು ತಂದು ಹಾಗೆಯೇ ಬಿಚ್ಚದಂತೆ ಕಪಾಟದಲ್ಲಿ ಇರಿಸಿ ಸಮಯ ಬಂದಾಗ ಇದನ್ನು ಬಿಚ್ಚಿಕೊಳ್ಳೋಣ ಎಂದು ಹೇಳಿದನು. ನಾನು ನಿಜವೆಂದು ನಂಬಿ ಆ ಪ್ಯಾಕೆಟ್‌ಗಳನ್ನು ರೂಮಿನಲ್ಲಿಟೈನು. ಬೀರುವಿನ ಕೀಲಿಕ್ಕೆ ಅವನಿಗೆ ಆಗಾಗ್ಯೆ ಕೊಡಬೇಕಾಗುತ್ತಿತ್ತು. ನಾನು ಊರಿನಲ್ಲಿಲ್ಲದಾಗ ಅವನೇ ಯಜಮಾನನಂತೆ ಇರುತ್ತಿದ್ದನು. ‘ಅತಿವಿನಯಂ ಧೂರ್ತ ಲಕ್ಷಣಂ’ ಎನ್ನುವುದು ಅವನಿಗೆ ಅಕ್ಷರಶಃ ಸಲ್ಲುವುದು. ಕೆಲವು ದಿನಗಳ ನಂತರ ನಾನು ಬೀರು ತೆಗೆದು ನೋಡಿದಾಗ ಆ ಟೈಪಿನ ಪಾಕೆಟ್‌ಗಳು ಇರಲಿಲ್ಲ. ಮ್ಯಾನೇಜರು ಅವನ್ನು ಪಕ್ಕದ ಇನ್ನೊಂದು ಮುದ್ರಣಾಲಯದವರಿಗೆ ಅಗ್ಗವಾಗಿ ಮಾರಿದ್ದನು. ನಾನು ಕೇಳಿದಾಗ ಯಾರೋ ನಮ್ಮ ಕೆಲಸಗಾರರು ಮೋಸಮಾಡಿದ್ದಾರೆಂದು ಹೇಳಿದನು. ಇನ್ನೊಂದು ಸಂದರ್ಭದಲ್ಲಿ ಆ ಮನುಷ್ಯನು ನಮ್ಮ ಸ್ವತಂತ್ರ ಕರ್ಣಾಟಕ ವಾರಪತ್ರಿಕೆಗೆ ಚಂದಾದಾರರ ಮತ್ತು ಏಜೆಂಟರ ವಿಳಾಸದ ಪಟ್ಟಿಗಳಿದ್ದ ಲೆಕ್ಕದ ಪುಸ್ತಕಗಳನ್ನು ನಮ್ಮ ವಿರೋಧ ಪಕ್ಷದವರಿಗೆ ಮಾರಾಟ ಮಾಡಿದ್ದನು. ಇದು ನಾನು ಊರಲಿಲ್ಲದಿದ್ದಾಗ ಆದ ಅಚಾತುರ್ಯ. ನಾನು ಪರಸ್ಥಳದಿಂದ ಹಿಂತಿರುಗಿದ ಕೂಡಲೆ ಲೆಕ್ಕಪುಸ್ತಕಗಳಿರಲಿಲ್ಲ. ಆಗ ನಾನು ಮ್ಯಾನೇಜರವರ ಮೇಲೆ ಪೋಲೀಸರಿಗೆ ದೂರು ಕೊಡಲು ಸಿದ್ಧವಾದಾಗ ಈ ವಿಷಯ ಮ್ಯಾನೇಜರರ ಹೆಂಡತಿ ಮಕ್ಕಳಿಗೆ ಗೊತ್ತಾಗಿ ಅವರು ಬಂದು ನನ್ನ ಕಾಲು ಹಿಡಿದುಕೊಂಡು ಅವರ ತಪ್ಪನ್ನು ಕ್ಷಮಿಸಬೇಕೆಂದು ಗೋಳಿಟ್ಟರು. ನಾನು ಏನು ಮಾಡಿದರೂ ಅವನಿಂದ ಯಾವ ಪ್ರತಿಫಲವೂ ಬರುವಂತಿರಲಿಲ್ಲ. ನಮ್ಮ ಲೆಕ್ಕ ಪತ್ರಗಳನ್ನು ಪ್ರತಿಪಕ್ಷದವರಿಗೆ ಒಪ್ಪಿಸಿದ ಆ ಮ್ಯಾನೇಜರಿಗೆ ಬಂದ ಲಂಚ ೫೦೦ ರೂಗಳು. ನನಗೆ ಆದ ನಷ್ಟ ಸಾವಿರಾರು ರೂಪಾಯಿ. ಈ ಘಟನೆ ನಮ್ಮ ಸ್ವತಂತ್ರ ವಾರ ಪತ್ರಿಕೆಗೆ ಸಂಬಂಧಪಟ್ಟಿದ್ದು.” (ಜೀವನ ಸ್ಮೃತಿಗಳು, ಪುಟ. ೨೨ – ೨೩)

“ಇನ್ನು ಶರಣ ಸಾಹಿತ್ಯ ಮಾಸಿಕದ ವಿಚಾರವಾಗಿ ನಾಲ್ಕು ಮಾತುಗಳನ್ನು ಹೇಳಬೇಕಾಗಿದೆ. ಈ ಪತ್ರಿಕೆಯನ್ನು ೧೯೩೭ರಲ್ಲಿ ಪ್ರಾರಂಭಿಸಿದೆನು. ೧೯೭೨ರಲ್ಲಿ ನಿಲ್ಲಿಸಬೇಕಾಯಿತು. ಇದರಲ್ಲಿ ದೊಡ್ಡ ದೊಡ್ಡ ವಿದ್ವಾಂಸರು ಲೇಖನಗಳನ್ನು ಬರೆದಿದ್ದಾರೆ. ಇದು ವಿದ್ವಾಂಸರ ಮನ್ನಣೆ ಗಳಿಸಿದೆ. ತಿಂಗಳಿಗೆ ಸುಮಾರು ಒಂದು ಸಾವಿರ ರೂಪಾಯಿ ವೆಚ್ಚವಾಗುತ್ತಿತ್ತು. ಇದರಿಂದ ನನಗೆ ಬರುತ್ತಿದ್ದ ಹಣ ೫೦೦ – ೬೦೦ ರೂಗಳು. ಉಳಿದ ಹಣವನ್ನು ಮುದ್ರಣಾಲಯಗಳ ಕೆಲಸಗಳಿಂದ ಗ್ರಂಥಗಳ ಮಾರಾಟದಿಂದ ನಾನು ಕೂಡಿಸಬೇಕಾಗುತ್ತಿತ್ತು. ಈ ಮಾಸಿಕದ ಆಶ್ರಯದಲ್ಲಿ ಶರಣ ಸಾಹಿತ್ಯ ಗ್ರಂಥಮಾಲೆಯನ್ನು ಪ್ರಾರಂಭಿಸಿ ಸುಮಾರು ೪೦ ಗ್ರಂಥಗಳನ್ನು ಸಂಪಾದಿಸಿ, ಸಂಶೋಧಿಸಿ, ಸ್ವತಂತ್ರವಾಗಿ ರಚನೆಮಾಡಿ ಬೆಳಕಿಗೆ ತಂದೆನು. ಈ ಶರಣ ಸಾಹಿತ್ಯಕ್ಕೆ ಮೈಸೂರು ಮಹಾರಾಜರು, ಧರ್ಮಸ್ಥಳದ ಹೆಗ್ಗಡೆಯವರು, ಚಿತ್ರದುರ್ಗ, ನಿಡಸೋಸಿ, ಸಿರಿಗೆರೆ, ಸಿದ್ಧಗಂಗಾ, ಧಾರವಾಡ ಮುರಘಾಮಠ, ಸುತ್ತೂರು, ಕನಕಪುರ, ಕಾಶಿ, ಕೇದಾರ, ಶ್ರೀಶೈಲ, ಕಲ್ಬುರ್ಗಿ, ಹುಬ್ಬಳ್ಳಿ ಮೊದಲಾದ ಪೀಠಾಧಿಪತಿಗಳೂ, ಧರ್ಮಪ್ರಕಾಶ ಎನ್. ರುದ್ರಯ್ಯನವರು, ಬಿ.ಎಂ. ಶ್ರೀನಿವಾಸಯ್ಯನವರು, ಎಂ.ಎಸ್. ರಾಮಯ್ಯನವರು, ಕಂಟ್ರಾಕ್ಟರ್ ಮರಿಸ್ವಾಮಪ್ಪನವರು, ಡಿ.ಆರ್. ಮಾಧವಕೃಷ್ಣಯ್ಯನವರು ಮೊದಲಾದ ಉದಾರಿಗಳು ಉದಾರವಾಗಿ ಸಹಾಯಮಾಡಿದ್ದಾರೆ. ಇವರೆಲ್ಲರ ಸಹಾಯ ಸಹಕಾರ ಸಹಾನುಭೂತಿಯಿಂದ ೩೫ ವರ್ಷಗಳ ಕಾಲ ಅವಿಚ್ಛಿನ್ನವಾಗಿ ಶರಣ ಸಾಹಿತ್ಯವನ್ನು ನಡೆಸಿದೆನು.” (ಜೀವನ ಸ್ಮೃತಿಗಳು, ಪುಟ. ೨೩ – ೨೪)

ಪತ್ರಿಕೆಗಳ ಪ್ರಕಟಣೆಯನ್ನು ನಿಲ್ಲಿಸಿದ ಶಾಸ್ತ್ರಿಗಳ ಪರಿಸ್ಥಿತಿಯ ಅನಾನುಕೂಲದಿಂದ ಸ್ವತಂತ್ರ ಕರ್ಣಾಟಕ ಮುದ್ರಾಣಾಲಯವನ್ನು ೧೯೭೨ರಲ್ಲಿ ಮಾರಾಟ ಮಾಡಿದರು. ಇವೆಲ್ಲಕ್ಕೂ ಮೂರು ಮುಖ್ಯಕಾರಣಗಳು ಎಂದಿದ್ದಾರೆ ಶಾಸ್ತ್ರಿಗಳು.

೧. ಮುದ್ರಣಾಲಯ ಮತ್ತು ಪತ್ರಿಕೆಗಳ ವಿಚಾರದಲ್ಲಿ ನನಗೆ ಏನೇನೂ ಅನುಭವವಿಲ್ಲದುದು.

೨. ನಾನು ಕೈಗೊಂಡ ಕಾರ್ಯದಲ್ಲಿ ನನಗೆ ಬೆಂಬಲವೀಯುವ ಜನ ಸ್ವಕೀಯವಾಗಿ ಯಾರೂ ಇಲ್ಲದುದು.

೩. ಈ ಕಾರ್ಯವನ್ನು ಪ್ರಾರಂಭಿಸುವಾಗ ನನ್ನಲ್ಲಿ ತಕ್ಕಷ್ಟು ಬಂಡವಾಳವಿಲ್ಲದುದು.

ನಾನು ಬೆಳಗಾದರೆ ಏಕೀಕರಣಕ್ಕಾಗಿ ಅಥವಾ ಮತ್ತಾವ ಸಾರ್ವಜನಿಕರ ಕಾರ್ಯಕ್ಕಾಗಿ ಊರೂರು ಸಂಚಾರ ಕೈಕೊಳ್ಳುತ್ತಿದ್ದಾಗ ನಮ್ಮ ಕಾರ್ಯಾಲಯವನ್ನು ನೋಡಿಕೊಳ್ಳುವ ಸ್ವಕೀಯರು ಯಾರೂ ಮನೆಯಲ್ಲಿ ಇಲ್ಲದ್ದರಿಂದಲೂ ನಾನು ಕೈಗೊಂಡ ಈ ಕಾರ್ಯಗಳಲ್ಲಿ ಅಪಜಯವನ್ನು ಪಡೆಯಬೇಕಾಯಿತು. ಮುದ್ರಣಾಲಯವು ಒಬ್ಬ ಜೀವಂತ ರಾಕ್ಷಸನಿದ್ದ ಹಾಗೆ. ಬೆಳಗಾದರೆ ಅದಕ್ಕೆ ಸಾಮಾನುಗಳನ್ನು ಒದಗಿಸಿಕೊಡುವುದು, ಇರುವ ಸಾಮಾನುಗಳನ್ನು ಕಳ್ಳರಿಂದ ಕಾಪಾಡಿಕೊಳ್ಳುವುದು ಇವು ಬಹುಮುಖ್ಯವಾದ ಕಾರ್ಯಗಳು. ನನ್ನ ಮುದ್ರಣಾಲಯದಲ್ಲಿ ಕೆಲಸ ಮಾಡುತ್ತಿದ್ದವರು ಹಲವರು ಮುದ್ರಣಾಲಯವನ್ನು ತಾವೇ ಸ್ವಂತವಾಗಿ ಸ್ಥಾಪಿಸಿಕೊಂಡರು. ಅಲ್ಲಿ ನಮ್ಮ ಮುದ್ರಣಾಲಯದ ಕೆಲವು ಸಾಮಾನುಗಳನ್ನು ಕಾಣಬಹುದಾಗಿತ್ತು. ಹೀಗಾದುದಕ್ಕೆ ನಾನು ಒಬ್ಬಂಟಿಗನಾಗಿದ್ದುದೂ ಸಹಾಯಕರಿಲ್ಲದುದೂ ಬಂದ ಸಹಾಯಕರು ಕೆಲವರು ಶುದ್ಧಕಳ್ಳರಾದುದೂ ನಾನು ಆಗಾಗ್ಯೆ ಪರಸ್ಥಳಗಳಿಗೆ ಸಂಚಾರ ಹೋಗುತ್ತಿದ್ದುದೂ ಈ ಪರಿಸ್ಥಿತಿಗೆ ಕಾರಣ. ಇವೆಲ್ಲಕ್ಕೂ ಹೆಚ್ಚಾಗಿ ಮುದ್ರಾಣಾಲಯದ ಅನುಭವವಿಲ್ಲದಿರುವ ನಾನು ಈ ಕಾರ್ಯವನ್ನು ಪ್ರಾರಂಭಿಸಿದುದು ಕೇವಲ ಉತ್ಸಾಹದಿಂದ ಮಾತ್ರ. ಒಂದು ಕಾರ್ಯ ಜಯವಾಗಬೇಕಾದರೆ ಆ ಕಾರ್ಯದ ಉತ್ಸಾಹದ ಜೊತೆಗೆ ಅನುಭವವೂ ಬೇಕು ಎಂಬುದು ಈಗ ನನಗೆ ಅರ್ಥವಾಗುತ್ತಿದೆ. ಊರು ಕೊಳ್ಳೇಹೋದ ಮೇಲೆ ಕೋಟೆಬಾಗಿಲು ಹಾಕಿದ ಹಾಗೆ ಎಂಬ ಗಾದೆ ನೆನಪಾಗುತ್ತಿದೆ.

ಈ ಸಂದರ್ಭದಲ್ಲಿ ನನ್ನ ಒಂದು ಅನುಭವವನ್ನು ಇಲ್ಲಿ ಬರೆಯಬಹುದು. ಒಬ್ಬ ಕಂಪಾಜಿಟರು ಒಂದ ದಿನ ಬೆಳಗ್ಯೆ ಕಣ್ಣೀರು ಸುರಿಸುತ್ತಾ ನಮ್ಮ ಕಾರ್ಯಾಲಯಕ್ಕೆ ಬಂದನು. ಆಗ ನಾನು ಅವನನ್ನು ನೋಡಿ ಏನಪ್ಪ ಏನ್ ಸಮಾಚಾರ ಎಂದು ಕೇಳಿದೆನು. ಅದಕ್ಕೆ ಅವನು ನನ್ನ ಹೆಂಡ್ತಿ ಆಸ್ಪತ್ರೆಯಲ್ಲಿ ಸಾಯುವ ಸ್ಥಿತಿಯಲ್ಲಿದ್ದಾಳೆ ಅವಳಿಗೆ ಔಷಧಿ ತರಲು, ಇಂಜೆಕ್ಷನ್ ಕೊಡಿಸಲು ನನಗೆ ಜರೂರು ೨೫ ರೂ.ಗಳು ಬೇಕು. ತಾವು ದಯವಿಟ್ಟು ಕೊಟ್ಟು ನನ್ನ ಹೆಂಡ್ತಿ ಪ್ರಾಣ ಉಳಿಸಬೇಕು ಎಂದು ಬೇಡಿಕೊಂಡನು. ಆಗ ನನ್ನ ಮನಸ್ಸು ಕರಗಿ ಅವನಿಗೆ ೨೫ ರೂ.ಗಳನ್ನು ಕೊಟ್ಟೆನು. ಅದನ್ನು ತೆಗೆದುಕೊಂಡು ನಾಳೆ ಕೆಲಸಕ್ಕೆ ಬರುತ್ತೇನೆಂದು ಹೇಳಿ ಹೋದ ಮನುಷ್ಯ ನಮ್ಮ ಕೆಲಸಕ್ಕೆ ಬರಲೇ ಇಲ್ಲ. ಆಗ ನನಗೆ ಅನುಮಾನ ಬಂದು ಅವನು ಕೊಟ್ಟಿದ್ದ. ಮನೆ ವಿಳಾಸದ ಪ್ರಕಾರ ಅವನ ಮನೆಗೆ ಹೋದೆನು. ಅವನು ಇಸ್ಪೀಟಾಡಿಕೊಂಡು ಕುಳಿತಿದ್ದ. ಅವನ ಹೆಂಡ್ತಿ ಎಲ್ಲರಿಗೂ ಕಾಫಿ ಮಾಡಿಕೊಡುತ್ತಿದ್ದಳು. ಆಗ ನಾನು ಅವನನ್ನು ಏನಪ್ಪ ಏತಕ್ಕಾಗಿ ಕೆಲಸಕ್ಕೆ ಬರಲಿಲ್ಲವೆಂದು ಕೇಳೀದೆನು. ಅದಕ್ಕೆ ಅವನು ನನಗೆ ಸಂಸಾರ ತಾಪತ್ರಯ. ಬೇರೆ ಮುದ್ರಣಾಲಯದಲ್ಲಿ ಮುಂಗಡ ಪಡೆದಿದ್ದೇನೆ. ಇನ್ನು ನಿಮ್ಮ ಪ್ರೆಸ್ಸಿಗೆ ಬರುವುದಿಲ್ಲವೆಂದು ಹೇಳಿದನು. ಆಗ ನಾನು ಕೊಟ್ಟಿರುವ ೨೫ ರೂಗಳನ್ನು ವಾಪಸ್ಸುಕೊಡು ಎಂದು ಕೇಳಿದೆನು. ಅದಕ್ಕೆ ಅವನು ನನಗೆ ಅನುಕೂಲವಾದಾಗ ಕೊಡುತ್ತೇನೆ. ನೀವು ನನ್ನ ಮನೆಯ ಹತ್ತಿರ ಬರಬಾರದು ಎಂದು ಹೇಳಿದನು. ಆಗ ನಾನು ಅವನ ಹೆಂಡತಿಗೆ ವಿಷಯವನ್ನು ಹೇಳಿದಾಗ ಆಕೆ ಸ್ವಾಮಿ ನಿಮಗೆ ದುಡ್ಡು ಹೆಚ್ಚಾಗಿದೆ ಕೇಳಿದ ಕೂಡಲೆ ಪೂರ್ವಾಪರ ವಿಚಾರ ಮಾಡದೆ ಹಣವನ್ನು ಕೊಟ್ಟು ಬಿಡುತ್ತೀರಿ. ಹಣದ ಬೆಲೆ ನಿಮಗೆ ಗೊತ್ತಿಲ್ಲವೆಂದು ಕಾಣುತ್ತದೆ. ನಾನೇನು ಮಾಡಲಿ ಎಂದು ಹೇಳಿ ಒಳಗೆ ಹೊರಟು ಹೋದಳು. ಆಗ ನಾನು ನಿರುಪಾಯವಾಗಿ ಬಂದ ದಾರಿಗೆ ಸುಂಕವಿಲ್ಲವೆಂದು ಹಿಂತಿರುಗಿ ಬಂದೆನು.” (ಜೀವನ ಸ್ಮೃತಿಗಳು, ಪುಟ.೨೧ – ೨೨)