೧೪. ಪದವಿ ಪ್ರಶಸ್ತಿಗಳು

ಶಿವಮೂರ್ತಿ ಶಾಸ್ತ್ರಿಗಳು ಅರಮನೆ ಮತ್ತು ಗುರುಮನೆಗಳಿಂದ ಸನ್ಮಾನಿಸಲ್ಪಟ್ಟಿದ್ದಾರೆ. ಇವರಿಗೆ ಸಂದ ಸನ್ಮಾನ ಮತ್ತು ಪ್ರಶಸ್ತಿಗಳು ಅಸಂಖ್ಯಾತ. ಹೊರನಾಡು ಕನ್ನಡಿಗರ ಸಂಘ ಸಂಸ್ಥೆಗಳೂ ಶಾಸ್ತ್ರಿಗಳಿಗೆ ಗೌರವ – ಪ್ರಶಸ್ತಿಗಳನ್ನು ನೀಡಿವೆ. ೧೯೩೬ರಲ್ಲಿ ಮೈಸೂರು ಅರಮನೆಯಿಂದ ಆಸ್ಥಾನವಿದ್ವಾಂಸರಾಗಿ ನೇಮಕಗೊಂಡರು. ಶಾಸ್ತ್ರಿಗಳ ಆಸಾಧಾರಣ ಪಾಂಡಿತ್ಯವನ್ನು ಮೇಧಾಶಕ್ತಿಯನ್ನು ಪರಿಗಣಿಸಿ ಜಯಚಾಮರಾಜೇಂದ್ರ ಒಡೆಯರು ತಮ್ಮ ೩೧ನೆಯ ವರ್ಷ ವರ್ಧಂತಿ ಮಹೋತ್ಸವದಲ್ಲಿ ‘ಪಂಡಿತರತ್ನಂ’ ಬಿರುದನ್ನು ದಯಪಾಲಿಸಿದರು.

ಶಿವಮೂರ್ತಿ ಶಾಸ್ತ್ರಿಗಳು ಎಲ್ಲ ಧರ್ಮಗಳ ಮಠಾಧೀಶ್ವರರೊಂದಿಗೆ ನಿಕಟ ಸಂಪರ್ಕವನ್ನಿಟ್ಟುಕೊಂಡರು. ಅನೇಕ ಮಠಾಧೀಶ್ವರರು ಶಾಸ್ತ್ರಿಗಳನ್ನು ಸತ್ಕರಿಸಿ ಸನ್ಮಾನಿಸಿ ಪ್ರಶಸ್ತಿಗಳನ್ನು ನೀಡಿದ್ದಾರೆ. ಶ್ರೀಮದ್ರಂಭಾಪುರಿ ಜಗದ್ಗುರು ಶಿವಾನಂದ ರಾಜೇಂದ್ರ ಶಿವಾಚಾರ್ಯರು ಸುವರ್ಣಪದಕದೊಂದಿಗೆ ‘ಕೀರ್ತನ ಕೇಸರಿ’ ಮತ್ತು ‘ಕವಿರತ್ನ’ ಪ್ರಶಸ್ತಿಗಳನ್ನು ಪ್ರದಾನ ಮಾಡಿದ್ದಾರೆ. ಶ್ರವಣಬೆಳುಗೊಳದ ಸಿದ್ಧಸಿಂಹಾಸನಾಧೀಶ್ವರರಾದ ಶ್ರೀಮದಭಿನವ ಚಾರುಕೀರ್ತಿ ಪಂಡಿತಾಚಾರ್ಯ ಸ್ವಾಮಿಗಳು ‘ಕೀರ್ತನ ವಿಚಕ್ಷಣ’ ಎಂಬ ಬಿರುದನ್ನು ನೀಡಿದ್ದಾರೆ. ಶ್ರೀಮದುಜ್ಜಯಿನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಬಂಗಾರದ ಪದಕದೊಂದಿಗೆ ‘ಶಿವಕೀರ್ತನ ಕವಿರಾಜ’ ಎಂಬ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ. ಶ್ರೀಶೈಲ ಸೂರ್ಯಸಿಂಹಾಸನಾಧೀಶರಾದ ಜಗದ್ಗುರು ವಾಗೀಶ ಪಂಡಿತಾರಾಧ್ಯರು ‘ವಿಮರ್ಶನಾಚಾರ್ಯ’ ಎಂಬ ಬಿರುದನ್ನು ಕಾಶಿ ಜಗದ್ಗುರು ವಿಶ್ವಾರಾಧ್ಯರು ‘ಕರ್ಣಾಟಕ ವಿಭೂಷಣ’ ಎಂಬ ಪ್ರಶಸ್ತಿಯನ್ನು ನೀಡಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರಕಾರಗಳು ಶಾಸ್ತ್ರಿಗಳ ಬಹುಮುಖ ಪ್ರತಿಭೆಯನ್ನೂ ಸಾಹಿತ್ಯಕ, ಧಾರ್ಮಿಕ, ಸಾಮಾಜಿಕ, ರಾಜಕೀಯ ಮೊದಲಾದ ಕ್ಷೇತ್ರಗಳಲ್ಲಿನ ಅನುಪಮ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.

ದಿನಾಂಕ ೨೬-೧- ೯೬೬ರ ಗಣರಾಜ್ಯದಿನದಂದು ಭಾರತದ ರಾಷ್ಟ್ರಾಧ್ಯಕ್ಷರು ಶಾಸ್ತ್ರಿಗಳಿಗೆ ‘ಪದ್ಮಶ್ರೀ’ ಎಂಬ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿದ್ದಾರೆ. ೧೯೬೬ರ ನವೆಂಬರ್ ೨ ರಂದು ರಾಜ್ಯ ಸರ್ಕಾರವು ಶಾಸ್ತ್ರಿಗಳಿಗೆ ರಾಜ್ಯೋತ್ಸವ ಸಾಹಿತ್ಯ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದೆ. ಕರ್ಣಾಟಕ ವಿಶ್ವವಿದ್ಯಾನಿಲಯವು ೧೯೭೫ರಲ್ಲಿ ಶಾಸ್ತ್ರಿಗಳಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಸನ್ಮಾನಿಸಿತು. ಈ ಮೇಲಿನ ಪ್ರಶಸ್ತಿಗಳಷ್ಟೇ ಅಲ್ಲದೆ ಕರ್ನಾಟಕದ ಹಲವಾರು ಮಠಮಾನ್ಯಗಳೂ ಸಂಘ ಸಂಸ್ಥೆಗಳೂ ಬಿರುದು ಬಾವಲಿಗಳನ್ನು ಪ್ರಶಸ್ತಿ ಪತ್ರಿಕೆಗಳನ್ನು ನೀಡಿರುವುದನ್ನು ಕಾಣಬಹುದಾಗಿದೆ.

೧೫. ದೇವಗಂಗೆ ಪ್ರಶಸ್ತಿ ಗ್ರಂಥ ಸಮರ್ಪಣೆ

ಶಿವಮೂರ್ತಿ ಶಾಸ್ತ್ರಿಗಳ ಷಷ್ಟಿ ಶಾಂತಿಯ ಸವಿನೆನಪಿಗಾಗಿ ೧೬ – ೯ – ೧೯೬೮ರಂದು ‘ದೇವಗಂಗೆ’ ಎಂಬ ಪ್ರಶಸ್ತಿ ಗ್ರಂಥವನ್ನು ಪದ್ಮಶ್ರೀ ಡಾ. ವಿ.ಕೃ. ಗೋಕಾಕರ ಅಧ್ಯಕ್ಷತೆಯಲ್ಲಿ ಸಮರ್ಪಿಸಲಾಯಿತು. ಬೆಂಗಳೂರಿನ ಪುರಭವನದಲ್ಲಿ ಅತ್ಯಂತ ವಿಜೃಂಭಣೆ ಯಿಂದ ನಡೆದ ಕಾರ್ಯಕ್ರಮದಲ್ಲಿ ಸುತ್ತೂರು ಜಗದ್ಗುರು ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು. ಡಾ. ಬಿ.ಡಿ. ಜತ್ತಿ, ಡಾ. ಎ.ಎಸ್. ಅಡಕೆ, ಪ್ರೊ. ಎಂ. ಮರಿಯಪ್ಪಭಟ್, ಪ್ರೊ. ಡಿ. ಜವರೇಗೌಡ, ಡಾ. ಆರ್.ಸಿ. ಹಿರೇಮಠ, ಕಡಿದಾಳ್ ಮಂಜಪ್ಪ, ಪ್ರೊ. ಎಚ್.ಎಂ. ಶಂಕರನಾರಾಯಣರಾವ್ ಮೊದಲಾದ ಮಹನೀಯರು ಭಾಗವಹಿಸಿದ್ದರು. ಸುಮಾರು ೫೦೦ ಪುಟಗಳುಳ್ಳ ಈ ಗ್ರಂಥದಲ್ಲಿ ವಿವಿಧ ವಿಷಯಗಳನ್ನೊಳಗೊಂಡ ೫೦ ಮಂದಿ ವಿದ್ವಾಂಸರ ಲೇಖನಗಳಿವೆ. ಶಿವಮೂರ್ತಿಶಾಸ್ತ್ರಿಗಳ ಅವಿರತ ಅಖಂಡ ಸೇವೆಗೆ ಈ ಪ್ರಶಸ್ತಿಗ್ರಂಥ ಕರ್ಣಾಟಕ ಜನತೆಯ ಪ್ರೀತಿಯ ದ್ಯೋತಕವಾಗಿದೆ.

೧೬. ಗ್ರಂಥಭಂಡಾರ ದಾನ

ಶಾಸ್ತ್ರಿಗಳು ಪುಸ್ತಕಪ್ರೇಮಿ; ವಿದ್ವತ್ಪಕ್ಷಪಾತಿ. ವಿದ್ವಾಂಸರಿಗೆ ಅನ್ಯಾಯವಾದಾಗ ಅವರಿಗೆ ನ್ಯಾಯದೊರಕಿಸುವುದಕ್ಕಾಗಿ ನಿಷ್ಠೆಯಿಂದ ಹೋರಾಡಿದ ಪ್ರಸಂಗಗಳಿವೆ. ಶಾಸ್ತ್ರಿಗಳ ಬಳಿ ಅಪಾರವಾದ ಗ್ರಂಥ ಭಂಡಾರವಿತ್ತು. ಕೀರ್ತನೆಗಳಿಗೆ ಭಾಷಣಗಳಿಗೆ ಹೋದೆಡೆಗಳಲ್ಲಿ ಲಭ್ಯವಾದ ಹಸ್ತಪ್ರತಿಗಳನ್ನು ಗ್ರಂಥಗಳನ್ನು ತುಂಬ ಎಚ್ಚರಿಕೆ ಯಿಂದ ಕಾಪಾಡಿಕೊಂಡು ಬಂದಿದ್ದರು. ಈ ಹಸ್ತಪ್ರತಿಗಳ ಸಂರಕ್ಷಣೆ ಕಷ್ಟಸಾಧ್ಯ ವೆನಿಸಿದಾಗ ಅವನ್ನು ಸುರಕ್ಷಿತವಾಗಿ ಸಂರಕ್ಷಿಸುವ ಸಂಸ್ಥೆಗಳಿಗೆ ನಿಷ್ಕಾಮ ಬುದ್ಧಿಯಿಂದ ದಾನಮಾಡಿದ್ದಾರೆ. ಮೈಸೂರು ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾಲಯ, ಕರ್ಣಾಟಕ ವಿಶ್ವವಿದ್ಯಾನಿಲಯಗಳಿಗೆ ಹಸ್ತಪ್ರತಿಗಳನ್ನು ಹಂಚಿ ದಾನ ಮಾಡಿದ್ದಾರೆ. ಮುದ್ರಿತ ಪುಸ್ತಕಗಳನ್ನು ಉಳಿದ ಹಸ್ತಪ್ರತಿಗಳನ್ನು ಸಂಪೂರ್ಣವಾಗಿ ಬೆಂಗಳೂರಿನ ಬಸವ ಸಮಿತಿಗೆ ದಾನ ಮಾಡಿದ್ದಾರೆ. ಇದು ಶಾಸ್ತ್ರಿಗಳ ನಿಸ್ವಾರ್ಥ ನಿರಪೇಕ್ಷ ಮನೋಭಾವಕ್ಕೆ ಜ್ವಲಂತ ಸಾಕ್ಷಿಯಾಗಿದೆ.

೧೭. ಅಪ್ರತಿಮ ದೇಶಾಭಿಮಾನ

ಶಾಸ್ತ್ರಿಗಳು ಕರ್ಣಾಟಕ ಏಕೀಕರಣದ ಕಟ್ಟಾಳು ಹೇಗೋ ಹಾಗೆಯೇ ಭಾರತ ಸ್ವಾತಂತ್ರ‍್ಯದ ವೀರ ಸೇನಾನಿಯೂ ಆಗಿದ್ದರು. ಅವರು ಅಪ್ಪಟ ಖಾದಿಯನ್ನು ಧರಿಸುತ್ತಿದ್ದರು. ಆದರೆ ಮೈಸೂರು ರುಮಾಲು ಅವರಿಗೆ ತುಂಬಾ ಪ್ರಿಯವಾದುದು. ಅವರು ಗುಬ್ಬಿಯಲ್ಲಿ ಉಪಾಧ್ಯಾಯರಾಗಿದ್ದಾಗ ನಡೆದ ಒಂದು ಪ್ರಸಂಗ ಅವರ ದೇಶಪ್ರೇಮಕ್ಕೆ ಜ್ವಲಂತ ನಿದರ್ಶನವಾಗಿದೆ. ಗುಬ್ಬಿಯಲ್ಲಿ ಉಪಾಧ್ಯಾಯರಾಗಿದ್ದಾಗ ಅಲ್ಲಿಗೆ ಕನ್ನಡ ಕಲಿಯಲು ಬಂದಿದ್ದ ಸ್ಕಾಟ್‌ಲೆಂಡಿನ ಪಾದ್ರಿಯೊಬ್ಬರಿಗೆ ಪಾಠ ಹೇಳಿಕೊಡುವ ಪ್ರಸಂಗ ಒದಗಿತು. ಅದನ್ನು ಶಾಸ್ತ್ರಿಗಳ ಮಾತಿನಲ್ಲೇ ನಿರೂಪಿಸಿದ್ದೇನೆ.

“ಒಂದು ದಿನ ಸಾಹೇಬರ ಬಂಗಲೆಗೆ ಪಾಠ ಹೇಳಲು ಹೋಗುವಾಗ ನಾನು ಗಾಂಧಿ ಟೋಪಿ ಹಾಕಿಕೊಂಡು ಹೋದೆನು. ಆ ಪಾದ್ರಿಗೆ ಗಾಂಧಿ ಹೆಸರು ಕೇಳಿದರೆ ಆಗುತ್ತಿರಲಿಲ್ಲ. ಅವನು ಗಾಂಧಿ, ಇಂಗ್ಲೀಷರ ಶತ್ರು ಎಂದು ಹೇಳುತ್ತಿದ್ದನು. ಆಗ ಸಾಹೇಬರು ನನ್ನನ್ನು ನೋಡಿ ಇನ್ನು ಮೇಲೆ ನಮ್ಮ ಬಂಗಲೆಗೆ ಬರುವಾಗ ನಿಮ್ಮ ಟರ್ಬನ್ ಹಾಕಬೇಕು. ಗಾಂಧಿ ಟೋಪಿ ಹಾಕಬಾರದು. ಅವನು ಇಂಗ್ಲಿಷ್ ಜನರ ಶತ್ರು. ನಮ್ಮನ್ನು ಇಂಡಿಯಾ ದೇಶದಿಂದ ಓಡಿಸಬೇಕೆಂದು ಚಳವಳಿ ಮಾಡುತ್ತಿದ್ದಾನೆ. ನೀವು ಗಾಂಧಿ ಭಕ್ತರಾದರೆ ನಮ್ಮ ಸ್ಕೂಲಿನಿಂದ ವಜಾ ಮಾಡುತ್ತೇನೆ ಎಂದು ಹೇಳಿದನು. ಅದನ್ನು ಕೇಳಿ ನನ್ನ ಮನಸ್ಸಿಗೆ ತುಂಬ ನೋವುಂಟಾಯಿತು. ಗಾಂಧಿಯನ್ನು ದ್ವೇಷಿಸುವ ಇಂತಹ ಜನಗಳಲ್ಲಿ ನಾವು ನೌಕರಿ ಮಾಡಬಾರದು ಎಂದುಕೊಂಡು ಮಾರನೆಯ ದಿನವೇ ನನ್ನ ರಾಜೀನಾಮೆಯನ್ನು ಸಾಹೇಬರಿಗೆ ಒಪ್ಪಿಸಿದೆನು. ಆಗ ಅವರು ಪಾದ್ರಿ ಪರೀಕ್ಷೆಗೆ ಕಟ್ಟಿದರು. ಪರೀಕ್ಷೆಯಲ್ಲಿ ಉತ್ತೀರ್ಣ ನಾಗದಿದ್ದರೆ ಅವನನ್ನು ಸ್ವದೇಶಕ್ಕೆ ವಾಪಸ್ಸು ಕಳುಹಿಸುತ್ತಿದ್ದರು. ಆಗ ಸಾಹೇಬರು ಇನ್ನು ಸ್ವಲ್ಪ ಕಾಲ ಇರಬೇಕು. ನಿಮಗೆ ಇನ್ನೂ ಹೆಚ್ಚು ಸಂಬಳ ಕೊಡುತ್ತೇನೆ ಎಂದು ಹೇಳಿದರು. ನಾನು ಸಾಧ್ಯವಿಲ್ಲ. ನಾನು ಗಾಂಧೀ ವಿರೋಧಿಗಳಲ್ಲಿ ಕೆಲಸ ಮಾಡುವುದಿಲ್ಲ. ಗಾಂಧಿ ನಮ್ಮ ದೇಶದ ಉದ್ಧಾರಕರು. ನಿಮಗೆ ಏಸು ಸ್ವಾಮಿ ಹೇಗೋ ಹಾಗೆ ನಮಗೆ ಮಹಾತ್ಮಗಾಂಧಿ ದೊಡ್ಡವನು ಎಂದು ಹೇಳಿದೆನು. ಅಲ್ಲಿಂದ ಗುಬ್ಬಿವಾಸವನ್ನು ಬಿಟ್ಟು ತುಮಕೂರಿಗೆ ಹಿಂದಿರುಗಿದೆನು.” (ಜೀವನ ಸ್ಮೃತಿಗಳು, ಪುಟ. ೩೪ – ೩೫)

೧೮. ಕೊನೆಯ ದಿನಗಳು

ನಿರಂತರ ಕಾಯಕ ಕಲಿಗಳಾದ ಶಾಸ್ತ್ರಿಗಳು ಸಂಸಾರವನ್ನು ಅಷ್ಟಾಗಿ ಹಚ್ಚಿಕೊಂಡಂತೆ ಕಂಡುಬರಲಿಲ್ಲ. ಕೀರ್ತನ, ಪ್ರವಚನ, ಭಾಷಣ, ಕರ್ಣಾಟಕ ಏಕೀಕರಣ ಕಾರ್ಯಗಳಲ್ಲಿ ಸಂಪೂರ್ಣವಾಗಿ ಮಗ್ನರಾದ ಶಾಸ್ತ್ರಿಗಳು ದೇಶ ಸಂಚಾರದಲ್ಲೇ ಬಹುಕಾಲವನ್ನು ಕಳೆದಿದ್ದಾರೆ. ಅವರು ಗುಬ್ಬಿಯಲ್ಲಿದ್ದಾಗಲೇ ಗುಬ್ಬಿಯವರೇ ಆದ ಅನ್ನಪೂರ್ಣಮ್ಮನವರೊಂದಿಗೆ ವಿವಾಹವಾಗಿತ್ತು. ಅವರಿಗೆ ಆರು ಗಂಡು ಮಕ್ಕಳೂ ಒಂದು ಹೆಣ್ಣು ಮಗುವೂ ಆಗಿತ್ತು. ಅವರಲ್ಲಿ ಉಳಿದುಕೊಂಡವರು ಒಬ್ಬರೇ. ಅವರೇ ಇಂದು ಸುಪ್ರಸಿದ್ಧ ವಕೀಲರಾಗಿರುವ ಎಚ್.ಎಸ್. ರೇಣುಕಾ ಪ್ರಸಾದ್. ಇವರ ಶ್ರೀಮತಿಯವರು ಕರ್ನಾಟಕ ಸರಕಾರದ ಕನ್ನಡ ಸಂಸ್ಕೃತಿ ಸಚಿವೆಯರಾದ ಶ್ರೀಮತಿ ಲೀಲಾದೇವಿ ಅವರು. ಮೊದಲನೆಯ ಹೆಂಡತಿ ತೀರಿಕೊಂಡ ಮೇಲೆ ಒಮ್ಮೆ ಶಾಸ್ತ್ರಿಗಳು ತಮಿಳುನಾಡಿಗೆ ಹೋಗಿದ್ದಾಗ ಮಧುರೈ ಜಿಲ್ಲೆಯ ಪೆರೈಯೂರಿನ ಮಠದ ಜಂಗಮರಾದ ಶ್ರೀವೀರಯ್ಯನವರ ಹಿರಿಯ ಮಗಳು ಮುದ್ದುವೀರಮ್ಮನವರನ್ನು ಮದುವೆಯಾದರು. ಇವರಿಗೆ ಆದದ್ದೂ ಒಬ್ಬನೇ ಮಗ. ಆತನೇ ಇಂದು ಸಾಹಿತ್ಯ ಕ್ಷೇತ್ರದಲ್ಲಿ ಹೆಸರುಗಳಿಸಿರುವ ಎಚ್.ಎಸ್. ಶಿವಪ್ರಕಾಶ್. ಶ್ರೀಮತಿ ಮುದ್ದುವೀರಮ್ಮನವರು ೩ – ೮ – ೭೧ರಲ್ಲಿ ಶಿವಾಧೀನರಾದರು. ಅಗಲಿದ ಮಡದಿಗಾಗಿ ಶಾಸ್ತ್ರಿಗಳು ೩೩ ಪದ್ಯಗಳ ಒಂದು ಶ್ರದ್ಧಾಂಜಲಿಯನ್ನು ಬರೆದಿದ್ದಾರೆ.

೧೯೭೨ರ ವೇಳೆಗೆ ಶಿವಮೂರ್ತಿ ಶಾಸ್ತ್ರಿಗಳಿಗೆ ಅನಾರೋಗ್ಯವುಂಟಾಯಿತು. ಅವರ ಎಲ್ಲ ಕಾರ್ಯಗಳೂ ಸ್ಥಗಿತಗೊಂಡವು. ಶರಣಸಾಹಿತ್ಯ ಮಾಸ ಪತ್ರಿಕೆಯನ್ನು ನಿಲ್ಲಿಸಿದ್ದೇ ಅಲ್ಲದೆ ನಷ್ಟದಲ್ಲಿದ್ದ ಮುದ್ರಣಾಲಯವನ್ನೂ ತಾವು ವಾಸವಾಗಿದ್ದ ಮನೆಯನ್ನೂ ಮಾರಿ ರಾಜಾಜಿನಗರದಲ್ಲಿ ಒಂದು ನಿವೇಶನವನ್ನು ಕೊಂಡು ಸಣ್ಣ ಮನೆಯನ್ನು ಕಟ್ಟಿ ವಾಸಿಸತೊಡಗಿದರು. ಈ ಪ್ರಕರಣವನ್ನು ಅವರೇ ಈ ರೀತಿ ಬರೆದಿಟ್ಟಿದ್ದಾರೆ.

೧೯. ಉಪಕಾರ ಸ್ಮರಣೆ

ಈಗ ನಾನು ಬೆಂಗಳೂರಿನ ರಾಜಾಜಿನಗರದಲ್ಲಿ ‘ಶಿವಪ್ರಸಾದ’ ಎಂಬ ಒಂದು ಆಶ್ರಮವನ್ನು ಸ್ಥಾಪನೆ ಮಾಡಿಕೊಂಡು ವಿಶ್ರಾಂತಿ ಜೀವನ ನಡೆಸುತ್ತಿದ್ದೇನೆ. ಹೀಗೆ ಮನುಷ್ಯರು ಪ್ರಾರಂಭಿಸಿದ ಕಾರ್ಯ ಎಂದಾದರೂ ಒಂದು ದಿನ ನಿಲ್ಲಬೇಕಾಗುತ್ತದಷ್ಟೆ? ಹುಟ್ಟಿದ ಸೂರ್ಯ ಮುಳುಗಲೇಬೇಕು. ಕಟ್ಟಿದ ಬುತ್ತಿಯು ತೀರಲೇಬೇಕು. ಪ್ರಯಾನ ಹೊರಟ ರೈಲುಗಾಡಿ ಎಲ್ಲಾದರು ಒಂದು ಕಡೆ ನಿಲ್ಲಲೇಬೇಕು ಎಂಬ ವಿಧಿ ನಿಯಮದಂತೆ ೧೯೨೨ನೆಯ ವರ್ಷದಲ್ಲಿ ನಾವು ಪ್ರಾರಂಭಿಸಿದ ಸಾರ್ವಜನಿಕ ಸೇವಾಕಾರ್ಯವು ೫೦ ವರ್ಷಗಳ ಕಾಲ ಆಗಿ ೧೯೭೨ರಲ್ಲಿ ಮುಕ್ತಾಯಗೊಂಡಿದೆ. ಈ ಕಷ್ಟಕರವಾದ ಸಂದರ್ಭದಲ್ಲಿ ನನ್ನ ಜೀವನದ ಅಂತಿಮಘಟ್ಟದಲ್ಲಿ ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳಾದ ಶ್ರೀಮಾನ್ ಡಿ. ದೇವರಾಜ್ ಅರಸ್ ಮತ್ತು ಅವರ ಮಂತ್ರಿಮಂಡಲದವರು ಸರ್ಕಾರದಲ್ಲಿ ಉದಾರವಾಗಿ ತಿಂಗಳಿಗೆ ೫೦೦ ರೂಪಾಯಿ ವಿಶ್ರಾಂತಿ ವೇತನವನ್ನು ಕೊಟ್ಟು ನಾನು ನಿಶ್ಚಿಂತನಾಗಿ ಬಾಳಲು ನೆರವಾಗಿದ್ದಾರೆ. ಘನಸರ್ಕಾರದವರ ಉದಾರ ಉಪಕಾರಕ್ಕಾಗಿ ನಾನು ಅವರಿಗೆ ತುಂಬ ಕೃತಜ್ಞನಾಗಿದ್ದೇನೆ. (ಜೀವನ ಸ್ಮೃತಿಗಳು ಪುಟ. ೨೫)

ಸುಮಾರು ಐವತ್ತು ವರ್ಷಗಳ ಕಾಲ ಕನ್ನಡ ನಾಡು ನುಡಿಗಳಿಗೆ ಚಿರಸ್ಮರಣೀಯವಾದ ಸೇವೆಯನ್ನು ಸಲ್ಲಿಸಿದ ಶಿವಮೂರ್ತಿಶಾಸ್ತ್ರಿಗಳು ಅನಾರೋಗ್ಯಕ್ಕೆ ಒಳಗಾಗಿ ದಿನಾಂಕ ೧೫ – ೧ – ೧೯೭೬ರಂದು ಶಿವಾಧೀನರಾದುದು ವಿಧಿವಿಲಾಸವೆಂದೇ ಹೇಳಬೇಕಾಗಿದೆ. ಅವರು ಕಣ್ಮರೆಯಾದರೂ ಅವರು ಮಾಡಿದ ಕಾರ್ಯಗಳು ಕನ್ನಡಿಗರ ಕಣ್ಮುಂದೆ ನಿರಂತರವಾಗಿ ತೊಳಗುತ್ತಿವೆ. ಅಖಂಡ ಕರ್ಣಾಟಕದ ಕಣ್ಮಣಿಯಾಗಿ ತೊಳಗಿ ಬೆಳಗಿದ ಶಿವಮೂರ್ತಿ ಶಾಸ್ತ್ರಿಗಳು ಶಾಶ್ವತ ಧ್ರುವತಾರೆಯಂತಿದ್ದಾರೆ.

೨೦. ಸಮಾರೋಪ

ಶಿವಮೂರ್ತಿ ಶಾಸ್ತ್ರಿಗಳು ಸಾಹಿತ್ಯ ಅಕಾಡೆಮಿ, ನಾಟಕ ಅಕಾಡೆಮಿ, ಕನ್ನಡ ನಿಘಂಟು ಸಂಪಾದಕ ಸಮಿತಿ, ಕನ್ನಡ ವಿಶ್ವಕೋಶ ಸಮಿತಿ, ಆಕಾಶವಾಣಿ ಸಲಹಾಸಮಿತಿ, ಬಸವ ಸಮಿತಿ ಕಾರ್ಯಸಮಿತಿ, ಅಖಿಲ ಭಾರತ ವೀರಶೈವ ಮಹಾಸಭೆಯ ಕಾರ್ಯಸಮಿತಿ, ಲಿಂಗಾಯತ ಅಭಿವೃದ್ಧಿ ಸಮಿತಿ, ಮೈಸೂರು ಮುದ್ರಣಕಾರರ ಸಹಕಾರ ಸಂಘ, ಮೈಸೂರು ಸರ್ಕಾರದ ಗಡಿ ಸಲಹಾ ಸಮಿತಿ – ಇವೇ ಮೊದಲಾದ ಹಲವಾರು ಸಂಘ ಸಮಿತಿಗಳ ಸದಸ್ಯರಾಗಿ ಗಣನೀಯ ಸೇವೆಯನ್ನು ಸಲ್ಲಿಸಿದ್ದಾರೆ.

ಕರ್ಣಾಟಕದ ಶ್ರೇಷ್ಠ ವಿದ್ವಾಂಸರೂ, ಜಂಗಮ ವಿಶ್ವಕೋಶ ಎಂಬ ಅಭಿಧಾನಕ್ಕೆ ಪಾತ್ರರೂ ಆದ ಡಾ. ಡಿ.ಎಲ್. ನರಸಿಂಹಾಚಾರ್ಯರ ಮಾತುಗಳು “ಸ್ಥಿರ ಸಂಕಲ್ಪಯುತನಾದ ಒಬ್ಬ ಮನುಷ್ಯನು ನಿರಂತರ ಉದ್ಯೋಗ ಶೀಲತೆಯಿಂದಲೂ ಪ್ರಯತ್ನದಿಂದಲೂ ಆತ್ಮೋದ್ಧಾರವನ್ನು ಮಾಡಿಕೊಂಡು, ಜನತೆಯ ಉದ್ಧಾರವನ್ನು ಹೇಗೆ ಮಾಡಲು ಸಾಧ್ಯವೆಂಬುದಕ್ಕೆ ಶ್ರೀಮಾನ್ ಶಾಸ್ತ್ರಿಗಳ ಜೀವನ ಒಂದು ನಿಚ್ಚಳವಾದ ಜೀವಂತವಾದ ನಿದರ್ಶನವಾಗಿದೆ.

ಕನ್ನಡದಲ್ಲಿರುವ ವೀರಶೈವ ಸಾಹಿತ್ಯವನ್ನು ಶ್ರೀಮಾನ್ ಶಾಸ್ತ್ರಿಗಳು ಐತಿಹಾಸಿಕ ದೃಷ್ಠಿಯಿಂದಲೂ ವಿಮರ್ಶಾತ್ಮಕ ದೃಷ್ಠಿಯಿಂದಲೂ ಅಭ್ಯಾಸ ಮಾಡಿದ್ದಾರೆ. ಹಲವು ಹೊಸ ವಿಷಯಗಳನ್ನು ಹೊರಗೆಡವಿದ್ದಾರೆ. ತಮ್ಮ ನಿರೂಪಣೆಯ ಪರಿಪೂರ್ಣತೆಯ ದೃಷ್ಟಿಯಿಂದ ಅವರು ಸಂಸ್ಕೃತ, ತೆಲುಗು, ತಮಿಳು ಭಾಷೆಗಳಲ್ಲಿರುವ ವೀರಶೈವ ಸಾಹಿತ್ಯದ ಗ್ರಂಥಗಳನ್ನು ವ್ಯಾಸಂಗಮಾಡಿ ಅವುಗಳಿಂದ ನೆರವು ಪಡೆದಿದ್ದಾರೆ. ವೀರಶೈವ ಸಾಹಿತ್ಯವನ್ನು ಕುರಿತಾದ ಅವರ ಜ್ಞಾನವು ಯಾವ ಉತ್ಕೃಷ್ಟ ಕನ್ನಡ ಸಾಹಿತ್ಯ ಪರೀಕ್ಷೆಯಲ್ಲಿ ತೇರ್ಗಡೆಯಾದ ಸ್ನಾತಕೋತ್ತರ ವಿದ್ಯಾರ್ಥಿಯ ಜ್ಞಾನಕ್ಕಿಂತ ಅತಿಶಯವಾಗಿದೆ. ಸ್ವಂತ ಪರಿಶ್ರಮದಿಂದ ಇಷ್ಟನ್ನೆಲ್ಲಾ ಅವರು ಹೇಗೆ ಕಲಿತರೆಂದು ಅಚ್ಚರಿ ಪಡಬೇಕಾಗಿದೆ.” (ಜೀವನ ಸ್ಮೃತಿಗಳು, ಪುಟ. ೩೮ – ೪೦)

ಕಾದಂಬರಿ ಸಾರ್ವಭೌಮರಾದ ಅ.ನ. ಕೃಷ್ಣರಾವ್ “ಧೃಢಸಂಕಲ್ಪ ಅದನ್ನು ಕಾರ್ಯರೂಪಕ್ಕೆ ತರುವ ನಿಶ್ಚಲತೆ ಎರಡೂ ಮೂಡಿದ ಪಕ್ಷದಲ್ಲಿ ವ್ಯಕ್ತಿ ಏನನ್ನು ಸಾಧಿಸ ಬಹುದೆನ್ನುವುದಕ್ಕೆ ಬಿ. ಶಿವಮೂರ್ತಿಶಾಸ್ತ್ರಿಗಳ ಜೀವನ ಕೃತಿ ಯೋಗ್ಯ ನಿದರ್ಶನವಾಗಿದೆ.

ಶಾಸ್ತ್ರಿಗಳ ವ್ಯಕ್ತಿತ್ವ ಅಸಾಮಾನ್ಯವಾದುದು. ಕಲ್ಲಿನಿಂದ ನೀರು ತೆಗೆಯಬಲ್ಲರು, ಒಣಗಿದ ಕಾಷ್ಠದಲ್ಲಿ ಹೂ ಅರಳಿಸಬಲ್ಲರು. ಕನ್ನಡ ನಾಡಿನಲ್ಲಿ ಅವರು ಹೋಗದ ಸ್ಥಳವಿಲ್ಲ, ಕಾಣದ ವ್ಯಕ್ತಿಯಿಲ್ಲ. ಸಹಾಯ ಕೋರಿದವರಿಗೆ ಇಲ್ಲವೆನ್ನುವುದು ಶಾಸ್ತ್ರಿಗಳ ಜಾಯಮಾನಕ್ಕೆ ಬಂದಿಲ್ಲ. ಅನೇಕ ಸಲ ತಮ್ಮ ಮಹತ್ವದ ಕೆಲಸಗಳನ್ನು ಬದಿಗೊತ್ತಿ ಕಂಡವರ ಕೆಲಸಕ್ಕೆ ತೊಡಗುತ್ತಾರೆ. ಪರಸೇವೆಗೆ ತೊಡಗಿದಾಗ ತಮಗಾದ ಕಷ್ಟನಷ್ಟಗಳನ್ನು ಸಂತೋಷದಿಂದ ಸಹಿಸಿಕೊಳ್ಳುತ್ತಾರೆ. (ಕನ್ನಡ ಕುಲರಸಿಕರು)

ಗದಗಿನ ತೋಂಟದಾರ್ಯ ಸಿದ್ಧಲಿಂಗ ಮಹಾಸ್ವಾಮಿಗಳು :ಆಸ್ಥಾನ ವಿದ್ವಾನ್ ಪಂಡಿತರತ್ನಂ ಶ್ರೀ ಬಿ. ಶಿವಮೂರ್ತಿ ಶಾಸ್ತ್ರಿಗಳವರದು ಹನಿಯಾಗಿ ತಲೆದೋರಿ ಹೊಳೆ ಹಳ್ಳವಾಗಿ ಹರಿದ ಜೀವನ. ಶಾಲಾ ಶಿಕ್ಷಕ, ಕೀರ್ತನಕಾರ, ಆಸ್ಥಾನವಿದ್ವಾನ್, ನಾಡನಾಯಕ – ಇವು ಶ್ರೀ ಶಾಸ್ತ್ರಿಗಳ ಸಾಧನೆಯ ಸೋಪಾನಗಳು. ಮಹಾಭಾರತದಲ್ಲಿ ಭೀಮ ಗದೆಯಾಡದ ಸ್ಥಳವಿಲ್ಲವೆಂಬಂತೆ ಭೀಮಕಾಯದ ಭೀಮಸಾಹಸದ ಶ್ರೀಶಾಸ್ತ್ರಿಗಳು ಕರ್ನಾಟಕದಲ್ಲಿ ಸಂಚರಿಸದ ಹಳ್ಳಿ ಪಟ್ಟಣಗಳಿಲ್ಲ, ಹಾದಿಬೀದಿಗಳಿಲ್ಲ. ಹೀಗೆ ನಾಡಿನುದ್ದಕ್ಕೂ ನಡೆದು ಮಾತು ಕೃತಿಗಳ ಮೂಲಕ ನಾಡವರನ್ನು ಎಚ್ಚರಿಸಿದ ಸೂರ್ಯಸಮನ್ವಯ ವ್ಯಕ್ತಿತ್ವ ಶ್ರೀ ಶಾಸ್ತ್ರಿಗಳದು.”