೧೦. ವಿಜಯನಗರ ಸಾಮ್ರಾಜ್ಯ ಮಹೋತ್ಸವ

ವಿಜಯನಗರ ಸಾಮ್ರಾಜ್ಯ ಮಹೋತ್ಸವದ ೬೦೦ನೆಯ ವರ್ಷದ ಉತ್ಸವ ಹಂಪೆಯಲ್ಲಿ ೧೯೩೬ರಲ್ಲಿ ವೈಭವದಿಂದ ನಡೆಯಿತು. ಶಾಸ್ತ್ರಿಗಳು ಬೇಲೂರು ಕೇಶವದಾಸರ ಜೊತೆಯಲ್ಲಿ ಮೈಸೂರು ಪ್ರಾಂತ್ಯದಲ್ಲಿ ಇದರ ಪ್ರಚಾರಕಾರ್ಯವನ್ನು ಕೈಕೊಂಡರು. ಇದಕ್ಕಾಗಿ ಸುಮಾರು ಆರು ತಿಂಗಳಕಾಲ ನಾಡಿನಲ್ಲೆಲ್ಲಾ ಸುತ್ತಾಡಿ ಸಾಕಷ್ಟು ಧನಸಂಗ್ರಹವನ್ನು ಮಾಡಿ ಧಾರವಾಡದ ಕೇಂದ್ರ ಸಮಿತಿಗೆ ಕಳಿಸಿಕೊಟ್ಟರು. ಆ ಸಮಯದಲ್ಲಿ ವಿಜಯನಗರದ ಇತಿಹಾಸ ಮತ್ತು ಸಚಿತ್ರ ವಿಜಯನಗರ ಎಂಬ ಕೃತಿಗಳು ಪ್ರಕಟವಾದುವು. ಆ ಮಹೋತ್ಸವದಲ್ಲಿ ಡಾ. ಕುರ್ತುಕೋಟಿ, ವಿ.ವಿ. ಹಾಲಭಾವಿ, ಬಿ.ಎಂ. ಶ್ರೀಕಂಠಯ್ಯ, ಡಾ. ಸಾಲತೊರೆ, ಬೆನಗಲ್ ರಾಮರಾವ್, ಸರ್ದಾರ್ ಕೆ. ಬಸವರಾಜೇ ಅರಸ್, ಪ್ರೊ. ಬಸವನಾಳ, ಡಾ. ನಂದೀಮಠ ಮೊದಲಾದವರ ಸಹಯೋಗದಲ್ಲಿ ಶಾಸ್ತ್ರಿಗಳೂ ಸಕ್ರೀಯವಾಗಿ ಭಾಗವಹಿಸಿದ್ದರು.

ಶಾಸ್ತ್ರಿಗಳ ಜೀವನದಲ್ಲಿ ಮತ್ತೊಂದು ಸ್ಮರಣೀಯ ಘಟನೆ ಈ ಸಂದರ್ಭದಲ್ಲೇ ನಡೆಯಿತು. ವಿಜಯನಗರ ಸಾಮ್ರಾಜ್ಯ ಮಹೋತ್ಸವದ ಕಾರ್ಯಕ್ರಮಗಳು ಮುಗಿದ ಮೂರನೆಯ ದಿನ ಶಾಸ್ತ್ರಿಗಳು ಡಾ. ನಂದೀಮಠ ಮತ್ತು ಬೇಲೂರು ಕೇಶವದಾಸರ ಜೊತೆ ನದಿ ಸ್ನಾನಕ್ಕಾಗಿ ವಿರೂಪಾಕ್ಷ ದೇವಸ್ಥಾನದ ಎಡಭಾಗದಲ್ಲಿರುವ ಮನ್ಮಥಾನ್ಮುಖ ಕೊಂಡ ಪ್ರದೇಶಕ್ಕೆ ಹೋದರು. ಡಾ. ನಂದೀಮಠರೂ ಕೇಶವದಾಸರೂ ನದಿಯ ದಂಡೆಯಲ್ಲೇ ಕುಳಿತು ಸ್ನಾನ ಮಾಡಿದರು. ಶಾಸ್ತ್ರಿಗಳು ಹರೆಯದ ಹುರುಪಿನಿಂದ ಈಜಾಡಲು ನದಿಗೆ ಧುಮುಕಿದರು. ಅವರಿಬ್ಬರೂ ಎಚ್ಚರಿಕೆ ಕೊಟ್ಟರೂ ಕೇಳದ ಶಾಸ್ತ್ರಿಗಳು ಈಜನ್ನು ಮುಂದುವರಿಸಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದರು. ಸುಸ್ತಾಗಿ ಹೋಗಿದ್ದ ಶಾಸ್ತ್ರಿಗಳು ತಮ್ಮ ಅವತಾರ ಮುಗಿಯಿತೆಂದು ಭಾವಿಸಿ ಪಂಪಾಪತಿ ಸ್ಮರಣೆ ಮಾಡುತ್ತಿದ್ದರು. ಜನರು ಹಾಹಾಕಾರ ಮಾಡುತ್ತಿದ್ದರು. ಅಮೇಲೆ ಅವರು ಒಂದು ಪಂಚೆಯನ್ನು ನದಿಗೆ ಎಸೆದು ಅದನ್ನು ಹಿಡಿದುಕೊಳ್ಳುವಂತೆ ಹೇಳಿ ಶಾಸ್ತ್ರಿಗಳನ್ನು ದಡಕ್ಕೆ ಎಳೆದು ಹಾಕಿದರು. ತಮ್ಮ ಜೀವವನ್ನು ಉಳಿಸಿದ ದೇವರು ತಮ್ಮಿಂದ ನಾಡುನುಡಿಯ ಸೇವೆ ಮಾಡಿಸಬೇಕೆಂದು ಸಂಕಲ್ಪಿಸಿದಂತಿದೆ ಎಂದ ಭಾವಿಸಿದರು. ಜೀವನದ ಉಳಿದೆಲ್ಲಾ ಸಮಯವನ್ನೂ ಈ ಕಾರ್ಯಗಳಿಗೇ ವಿನಿಯೋಗಿಸಿದರು.

೧೧. ಕರ್ಣಾಟಕ ಏಕೀಕರಣ

ಕರ್ಣಾಟಕ ಏಕೀಕರಣಕ್ಕೆ ಶಿವಮೂರ್ತಿಶಾಸ್ತ್ರಿಗಳು ಸಲ್ಲಿಸಿರುವ ಸೇವೆ ಎಣೆತೊಣೆಯಿಲ್ಲದ್ದು. ಸುಮಾರು ಹತ್ತು ವರ್ಷಗಳ ಕಾಲ ಅಖಂಡ ಕರ್ಣಾಟಕವನ್ನು ಸುತ್ತಿ ತಮ್ಮ ಕೀರ್ತನೆಗಳಿಂದಲೂ ಭಾಷಣಗಳಿಂದಲೂ ಜನ ಜಾಗೃತಿಯನ್ನುಂಟುಮಾಡಿದ್ದಾರೆ. ಆ ಕಾಲದ ಜನರ ಅಭಿಪ್ರಾಯವೇನಿತ್ತು ಎಂಬುದನ್ನು ಸಂಗ್ರಹಿಸಿ ಪ್ರಕಟಿಸಿದ್ದಾರೆ. ತಮ್ಮ ಪತ್ರಿಕೆಗಳ ಮೂಲಕ ಕೃತಿಗಳ ಮೂಲಕ ಏಕೀಕರಣಕಾರ್ಯಕ್ಕೆ ಮಹತ್ತರವಾದ ಸೇವೆಯನ್ನು ಸಲ್ಲಿಸಿದ್ದಾರೆ. ಅವರು ಏಕೀಕರಣದ ಬಗೆಗೆ ಬರೆದಿರುವುದನ್ನೇ ಯಥಾವತ್ತಾಗಿ ಉದ್ಧರಿಸಲಾಗದೆ. “ಆಗಿನ ಕಾಲದಲ್ಲಿ ಹಳೇ ಮೈಸೂರಿನ ಜನ ಸಾಮಾನ್ಯರಲ್ಲಿ, ಕರ್ಣಾಟಕ ಏಕೀಕರಣಕ್ಕೆ ಬೆಂಬಲವಿರಲಿಲ್ಲ, ಕರ್ಣಾಟಕವಾದರೆ ನಮ್ಮ ಮೈಸೂರು ಮಹಾರಾಜರು ಹೋಗುತ್ತಾರೆ. ಮೈಸೂರು ಪ್ರಾಮುಖ್ಯತೆ ಹೋಗುತ್ತದೆ. ಲಿಂಗಾಯಿತರು ಪ್ರಭಾವಿತರಾಗುತ್ತಾರೆ ಎಂಬ ಅಂಜಿಕೆ ಕೆಲ ಜನರಲ್ಲಿ ಬಹಳವಾಗಿತ್ತು. ಆಗ ಕನ್ನಡ ಸಾಹಿತ್ಯ ಪರಿಷತ್ತಿನವರು ಕೂಡ ಈ ಕಾರ್ಯಕ್ಕೆ ಮುಂದುಬಂದಿರಲಿಲ್ಲ. ಅದಕ್ಕೆ ಕಾರಣ ಮೈಸೂರಿನಲ್ಲಿ ಈ ವಿಷಯದಲ್ಲಿ ಆಸಕ್ತಿ ಇಲ್ಲವೆಂಬುದು. ಅದೇ ಕಾಲದಲ್ಲಿ ಬೆನಗಲ್ ರಾಮರಾಯರು ಎನ್. ಬಾಲಕೃಷ್ಣಯ್ಯನವರು ಟಿ. ಸಿದ್ಧಲಿಂಗಯ್ಯನವರು ನಾನೂ ಸೇರಿ ೧೯೩೮ರಲ್ಲಿ ಕರ್ಣಾಟಕ ಏಕೀಕರಣ ಸಂಘವನ್ನು ಸ್ಥಾಪಿಸಿದೆವು. ಅದಕ್ಕೆ ಬೆನಗಲ್ ರಾಮರಾಯರು ಅಧ್ಯಕ್ಷರಾಗಿಯೂ ಎನ್. ಬಾಲಕೃಷ್ಣಯ್ಯನವರು ಉಪಾಧ್ಯಕ್ಷರಾಗಿಯೂ ಟಿ. ಸಿದ್ಧಲಿಂಗಯ್ಯನವರು ಕೋಶಾಧಿಕಾರಿಗಳಾಗಿಯೂ ನಾನು ಕಾರ್ಯದರ್ಶಿಯಾಗಿಯೂ ಚುನಾಯಿತರಾದೆವು. ಈ ಸಂಘದ ಪ್ರಾರಂಭೋತ್ಸವವನ್ನು ಹಿರಿಯ ಸಾಹಿತಿಗಳೊಬ್ಬರಿಂದ ನೆರವೇರಿಸಬೇಕೆಂದು ತೀರ್ಮಾನಿಸಿ ಆ ಸಾಹಿತಿಗಳೊಬ್ಬರ ಮನೆಗೆ ಬೆನಗಲ್ ರಾಮರಾಯರೂ ಮತ್ತು ನಾನೂ ಸಹ ಅವರ ಮನೆಗೆ ಹೋಗಿ ಅವರಲ್ಲಿ ಈ ಸಂಘದ ಪ್ರಾರಂಭೋತ್ಸವವನ್ನು ತಾವು ನಡೆಸಿಕೊಡಬೇಕೆಂದು ಕೇಳಿಕೊಂಡೆವು. ಅದಕ್ಕೆ ಹಿರಿಯರಾದ ಅವರು ಐದು ನಿಮಿಷ ಸುಮ್ಮನಿದ್ದು ನಾನು ಬರಲು ಸಾಧ್ಯವಿಲ್ಲ. ಈ ತತ್ವದಲ್ಲಿ ನನಗೆ ನಂಬಿಕೆಯಿಲ್ಲ ಎಂದು ಸ್ಪಷ್ಟವಾಗಿ ಹೇಳಿಬಿಟ್ಟರು. ಹಳೇ ಮೈಸೂರು ಈಗಿನಂತೆ ಇದ್ದರೆ ಇದು ಒಕ್ಕಲಿಗರ ರಾಜ್ಯ. ಕರ್ಣಾಟಕ ಪ್ರಾರಂಭವಾದರೆ ಅದು ಲಿಂಗಾಯಿತರ ರಾಜ್ಯವಾಗುತ್ತದೆ. ಬ್ರಾಹ್ಮಣರಾದ ನಮಗೂ ನಿಮಗೂ ಚಳುವಳಿ ಏತಕ್ಕೆ? ಬಿ. ಶಿವಮೂರ್ತಿಶಾಸ್ತ್ರಿಗಳು ಲಿಂಗಾಯಿತರು. ಆದ್ದರಿಂದ ಅವರು ಈ ವಿಷಯದಲ್ಲಿ ಆಸಕ್ತಿ ವಹಿಸಿರುವುದು ಅರ್ಥಪೂರ್ಣವಾಗಿದೆ ಎಂದು ಅಪ್ಪಣೆ ಕೊಡಿಸಿದರು. ಆಗ ಹಿರಿಯರಾದ ಬೆನಗಲ್ ರಾಮರಾಯರು ಸ್ವಾಮಿ ತಾವು ಬಹುದೊಡ್ಡ ವಿದ್ವಾಂಸರು, ಜ್ಞಾನ ವೃದ್ಧರು, ತಮ್ಮ ಮೇಲೆ ನನಗೆ ಬಹಳ ಗೌರವವಿದೆ. ಕನ್ನಡ ಅಭಿವೃದ್ಧಿಗಾಗಿ ಬಹಳ ಕೆಲಸ ಮಾಡಿದ್ದೀರಿ, ಅನೇಕ ಸಮ್ಮೇಳನಗಳಲ್ಲಿ ಕರ್ಣಾಟಕಕ್ಕೆ ಬೆಂಬಲ ಕೊಟ್ಟು ಮಾತಾಡಿದ್ದೀರಿ, ಮೈಸೂರು ಸೇರದ ಹೊರತು ಕರ್ಣಾಟಕ ಏಕೀಕರಣ ಆಗುವುದಿಲ್ಲ. ಆದ್ದರಿಂದ ನಾವು ಬೆಂಗಳೂರಿನಲ್ಲಿ ಅದಕ್ಕಾಗಿ ಒಂದು ಸಂಘ ಸ್ಥಾಪಿಸಿದ್ದೇವೆ. ತಮ್ಮಿಂದ ಉದ್ಘಾಟನೆಯಾದರೆ ಅದಕ್ಕೆ ಹೆಚ್ಚು ಬೆಲೆ ಬರುತ್ತದೆಂದು ನಾವಿಲ್ಲಿಗೆ ಬಂದೆವು. ತಾವು ಹೇಳುವುದನ್ನು ಕೇಳಿ ನಮಗೆ ಬಹಳ ಆಶ್ಚರ್ಯವಾಗಿದೆ. ಯಾವ ರಾಜ್ಯದಲ್ಲಿ ಯಾರು ಅಧಿಕ ಸಂಖ್ಯಾತರಾಗಿರುವರೋ ಅವರು ಅಧಿಕಾರಕ್ಕೆ ಬರುವುದು ಪ್ರಜಾಪ್ರಭುತ್ವದಲ್ಲಿ ಕ್ರಮಪ್ರಾಪ್ತವಾಗಿದೆ. ಪಂಜಾಬಿನಲ್ಲಿ ಸಿಕ್ಕರೂ, ಬೊಂಬಾಯಿಯಲ್ಲಿ ಮರಾಠರೂ ಮದರಾಸಿನಲ್ಲಿ ಬ್ರಾಹ್ಮಣೇತರರೂ ಆಂಧ್ರದಲ್ಲಿ ರೆಡ್ಡಿಗಳೂ ಕರ್ಣಾಟಕದಲ್ಲಿ ಲಿಂಗಾಯಿತರೂ ಅಧಿಕ ಸಂಖ್ಯಾತರಾಗಿದ್ದಾರೆ. ಚುನಾವಣೆಯಲ್ಲಿ ಈ ಜನರೇ ಅಧಿಕಮಂದಿ ಶಾಸನ ಸಭೆ ಸದಸ್ಯರಾಗಿ ಬರಬಹುದು. ಪ್ರಜಾಪ್ರಭುತ್ವದ ಇಂದಿನ ದಿವಸಗಳಲ್ಲಿ ಒಂದು ಜಾತಿಯವರು ಎಷ್ಟು ಪ್ರಬಲರಾದರೂ ಎಲ್ಲ ಜನರ ಸಹಾಯವಿಲ್ಲದೆ ಅವರು ರಾಜ್ಯಭಾರ ಮಾಡಲು ಸಾಧ್ಯವಿಲ್ಲ.

ಕರ್ಣಾಟಕದಲ್ಲಿ ಲಿಂಗಾಯಿತರ ಸಂಖ್ಯೆ ೧/೫ ಭಾಗ ಆಗಬಹುದು. ಆದ ಮಾತ್ರಕ್ಕೆ ಅವರು ೪/೫ ಭಾಗದ ಜನಗಳ ಬೆಂಬಲ ಪಡೆಯದಿದ್ದಲ್ಲಿ ರಾಜ್ಯಭಾರಮಾಡಲು ಸಾಧ್ಯವಿಲ್ಲ. ಮುಸಲ್ಮಾನರು, ಇಂಗ್ಲಿಷರು ಮರಾಠರು ಮೊದಲಾದ ಪರಧರ್ಮೀಯರ ಮತ್ತು ಪರದೇಶೀಯರ ಅಧಿಕಾರಕ್ಕೆ ತಲೆಬಾಗಿದ ನಾವು ನಮ್ಮವರೇ ಕನ್ನಡಿಗರೇ ಆದ ಲಿಂಗಾಯಿತರ ಅಧಿಕಾರಕ್ಕೆ ಒಳಪಟ್ಟರೂ ಅದರಿಂದ ನಮಗೆ ಬಾಧಕವಿಲ್ಲ. ಸ್ವತಂತ್ರವನ್ನೂ ಪ್ರಜಾಪ್ರಭುತ್ವವನ್ನೂ ಬಯಸುವ ನಾವು ಇಂತಹ ಸಂದರ್ಭದಲ್ಲಿ ನಮ್ಮ ಮನಸ್ಸನ್ನು ಕೊಂಚ ದೊಡ್ಡದು ಮಾಡಿಕೊಳ್ಳಬೇಕು. ಒಳ್ಳೆಯದು ಆದರೂ ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಬೇಕು ಎಂಬುದೇ ನಮ್ಮ ಅಪೇಕ್ಷೆ. ತೊಂದರೆ ಕೊಟ್ಟಿದ್ದಕ್ಕೆ ಕ್ಷಮಿಸಿ, ನಮಸ್ಕಾರ ಎಂದು ಹೇಳಿ ಮೇಲಕ್ಕೆದ್ದರು. ಇದು ೧೯೩೮ರಲ್ಲಿ ನಡೆದ ವಿಷಯ. ಆಗ ಇನ್ನೂ ಬೆಂಗಳೂರಿಗೆ ರಿಕ್ಷಾ ಬಂದಿರಲಿಲ್ಲ. ಆದ್ದರಿಂದ ನಾನೂ ರಾಮರಾಯರೂ ಒಂದು ಜಟಕಾ ಮಾಡಿಕೊಂಡು ಹೋಗಿದ್ದೆವು. ಬಂದ ದಾರಿಗೆ ಸುಂಕವಿಲ್ಲ ಎಂದು ನಿರಾಶೆಯನ್ನು ಹೊತ್ತು ಬಂದೆವು.

ಆಗಿನ ಕಾಲದಲ್ಲಿ ಹಳೇ ಮೈಸೂರಿನಲ್ಲಿ ಸರ್ಕಾರಕ್ಕಾಗಲಿ ಜನರಲ್ಲಾಗಲಿ ಕರ್ಣಾಟಕ ಏಕೀಕರಣಕ್ಕೆ ಬೆಂಬಲವಿರಲಿಲ್ಲ. ಆದರೆ ಕರ್ಣಾಟಕದ ಧುರೀಣರಾದ ಆಲೂರ ವೆಂಕಟರಾಯರು, ಡಿ.ಪಿ. ಕರಮರಕರ್‌ರವರು, ಕಡಪ ರಾಘವೇಂದ್ರರಾಯರು, ದಾತಾರ್ ಬಲವಂತರಾಯರು, ಡಾ. ನಾಗನಗೌಡರು ಮೊದಲಾದ ಹಿರಿಯರು ಹಳೇ ಮೈಸೂರಿಗೆ ಬಂದಾಗ ಈ ವಿಷಯವನ್ನು ಕುರಿತು ಎಲ್ಲಾ ಕಡೆಯೂ ಹೇಳುತ್ತಿದ್ದರು. “ಕರ್ಣಾಟಕ ಏಕೀಕರಣದಿಂದಲೇ ಕನ್ನಡಿಗರಿಗೆ ಮುಕ್ತಿಯೆಂದು” ಸ್ಪಷ್ಟವಾಗಿ ಪ್ರತಿಪಾದಿಸುತ್ತಿದ್ದರು. (ಜೀವನ ಸ್ಮೃತಿಗಳು, ಪುಟ. ೧೩ – ೧೫)

೧೨. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷತೆ

ಶಿವಮೂರ್ತಿ ಶಾಸ್ತ್ರಿಗಳ ಜೀವನದ ಅತ್ಯಂತ ಮಹತ್ವದ ಸಾಧನೆಯೆಂದರೆ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದು. ಶ್ರೀಯುತರು ೧೯೫೬ರಿಂದ ೧೯೬೪ರ ವರೆಗೆ ಪರಿಷತ್ತಿನ ಅಧ್ಯಕ್ಷರಾಗಿ ಅದರ ಸರ್ವಾಂಗೀಣ ಪ್ರಗತಿಗಾಗಿ ನಿರಂತರವಾಗಿ ದುಡಿದಿದ್ದಾರೆ. ಶಾಸ್ತ್ರಿಗಳು ಪರಿಷತ್ತಿನ ಅಧ್ಯಕ್ಷರಾಗುವುದಕ್ಕಿಂತ ಮೊದಲು ಪರಿಷತ್ತಿನ ಆಜೀವ ಸದಸ್ಯರಾಗಿದ್ದರು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು. ಅಲ್ಲದೆ ಕೆಲಕಾಲ ಪರಿಷತ್ತಿನ ಪತ್ರಿಕೆಗಳಾದ ಕನ್ನಡ ನುಡಿ, ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆಗಳ ಸಂಪಾದಕರಾಗಿಯೂ ಕೆಲಸಮಾಡಿದ್ದಾರೆ. ಸುಮಾರು ಎಂಟು ವರ್ಷಗಳ ಕಾಲ ಪರಿಷತ್ತಿನ ಅಧ್ಯಕ್ಷರಾಗಿದ್ದರು. ಆ ಕಾಲದಲ್ಲಿ ಜನಬಲ ಧನಬಲವಿಲ್ಲದಿದ್ದರೂ ಅವರು ಪರಿಷತ್ತಿನ ಎಲ್ಲ ಕಾರ್ಯಗಳನ್ನು ಸಾಂಗೋಪಾಂಗವಾಗಿ ಮಾಡಿದ್ದಾರೆ. ಅನೇಕ ಅಪ್ರಕಟಿತ ಪ್ರಾಚೀನ ಕೃತಿಗಳು ಬೆಳಕು ಕಂಡದ್ದು ಇವರ ಕಾಲದಲ್ಲೇ. ಕನ್ನಡ ಸಾಹಿತ್ಯ ಪರಿಷತ್ತಿಗೆ ಶಾಶ್ವತ ಕೀರ್ತಿಯನ್ನು ತಂದುಕೊಟ್ಟಿರುವ ಕನ್ನಡ ನಿಘಂಟಿಗೆ ಒಂದು ಭದ್ರವಾದ ಬುನಾದಿಯನ್ನು ಹಾಕಿಕೊಟ್ಟವರು ಶಾಸ್ತ್ರಿಗಳು. ನಿಘಂಟು ಕಾರ್ಯಕ್ಕೆ ಸರ್ಕಾರದಿಂದ ವಿಶೇಷ ಆರ್ಥಿಕ ನೆರವನ್ನು ಒದಗಿಸಿದ “ಪರಿಷತ್ತಿಗೂ ಸರ್ಕಾರಕ್ಕೂ ಕರಾರು” ಆದದ್ದು ಶಾಸ್ತ್ರಿಗಳ ಕಾಲದಲ್ಲಿ. ನಿಘಂಟಿನ ಮುದ್ರಣಕ್ಕಾಗಿ ಸರ್ಕಾರದಿಂದ ಅತ್ಯಾಧುನಿಕ ಹೊಸ ಮುದ್ರಣ ಯಂತ್ರವನ್ನು ದೊರಕಿಸಿಕೊಟ್ಟರು. ಇದಕ್ಕಾಗಿ ಪರಿಷತ್ತಿನ ಬಿ.ಎಂ.ಶ್ರೀ. ಅಚ್ಚುಕೂಟವನು ವಿಸ್ತರಿಸಿದರು. ಕರ್ನಾಟಕದ ಪ್ರಮುಖ ನಗರಗಳಾದ ಬೀದರ, ಬಳ್ಳಾರಿ, ಗದಗ, ಧಾರವಾಡ, ಉಡುಪಿ, ಸಿದ್ಧಗಂಗೆಗಳಲ್ಲಿ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿದ್ದಾರೆ. ಭಾರತದ ರಾಷ್ಟ್ರಪತಿಗಳಾಗಿದ್ದ ಡಾ. ರಾಜೇಂದ್ರ ಪ್ರಸಾದ್ ಅವರನ್ನು ೧೯೫೮ರಲ್ಲೂ ಡಾ. ರಾಧಾಕೃಷ್ಣನು ಅವರನ್ನು ೧೯೬೩ರಲ್ಲೂ ಕನ್ನಡ ಸಾಹಿತ್ಯ ಪರಿಷತ್ತಿಗೆ ಬರಮಾಡಿಕೊಂಡು ಗೌರವಿಸಿದ್ದಾರೆ.

೧೩. ಸಾಹಿತ್ಯ ಸೇವೆ

ಶಿವಮೂರ್ತಿಶಾಸ್ತ್ರಿಗಳ ಎಲ್ಲ ಸಾಧನೆ ಸಿದ್ಧಿಗಳಿಗೆ ಮಕುಟಪ್ರಾಯವಾದುದು ಅವರು ಸಲ್ಲಿಸಿದ ಸಾಹಿತ್ಯ ಸೇವೆಯೆಂಬುದು ನಿರ್ವಿವಾದವಾದುದು. ಶ್ರೀಯುತರು ಕವಿಯಾಗಿ ನಾಟಕಕಾರರಾಗಿ, ಪ್ರಾಚೀನ ಕಾವ್ಯಗಳ ಸಂಪಾದಕರಾಗಿ, ಸಂಶೋಧಕರಾಗಿ, ಶಾಸನತಜ್ಞರಾಗಿ, ವಿಮರ್ಶಕರಾಗಿ ಐವತ್ತಕ್ಕೂ ಮಿಕ್ಕು ಕೃತಿಗಳನ್ನು ಪ್ರಕಟಿಸಿದ್ದಾರೆ. ನೂರಾರು ಬಿಡಿ ಲೇಖನಗಳನ್ನೂ ಬರೆದಿದ್ದಾರೆ. ಶಾಸ್ತ್ರಿಗಳು ಕನ್ನಡ ಮತ್ತು ಸಂಸ್ಕೃತ ಉಭಯ ಭಾಷೆ ವಿಶಾರದರಾದುದರಿಂದ ಕನ್ನಡ ಮತ್ತು ಸಂಸ್ಕೃತ ಪ್ರಾಚೀನ ಕೃತಿಗಳನ್ನು ಸಂಪಾದಿಸಿದ್ದಾರೆ. ಅಷ್ಟೇ ಅಲ್ಲ ಈ ಎರಡು ಭಾಷೆಗಳಲ್ಲೂ ಆಧುನಿಕ ಕವಿತೆಗಳನ್ನೂ ಪ್ರಶಸ್ತಿ ಮನವಿ ಪತ್ರಗಳನ್ನು ಬರೆದಿದ್ದಾರೆ.

ಪ್ರಸ್ತುತ ಶಾಸ್ತ್ರಿಗಳು ಬರೆದಿರುವ ಸಂಪಾದಿಸಿರುವ ಕೆಲವು ಕೃತಿಗಳ ಸ್ಥೂಲ ಪರಿಚಯವನ್ನು ಮಾಡಲಾಗಿದೆ. ದುಂಬಿ ಮತ್ತು ನಾದ, ಗಾಂಧೀ ಗೀತೆಗಳು ಕವನ ಸಂಕಲನಗಳು. ಮಹಾತ್ಮಗಾಂಧಿ ಅವರು ೧೯೨೭ರಲ್ಲಿ ತುಮಕೂರಿಗೆ ಬಂದಿದ್ದಾಗ ಗಾಂಧೀ ಗೀತೆಗಳು ಎಂಬ ಕವನಗಳನ್ನು ರಚಿಸಿ ಅವರಿಗೆ ಶಾಸ್ತ್ರಿಗಳು ಅರ್ಪಿಸಿದರು. ಇದೇ ರೀತಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ೧೯೨೭ರಲ್ಲಿ ತುಮಕೂರಿಗೆ ಆಗಮಿಸಿದ್ದಾಗ ಶಾಸ್ತ್ರಿಗಳು ಸ್ವಾಗತ ಸಮಿತಿಯ ಪರವಾಗಿ ‘ನಾಲ್ವಡಿ ಕೃಷ್ಣರಾಜ ವಿಳಾಸಂ’ ಎಂಬ ಚಂಪೂಕಾವ್ಯವನ್ನು ಬರೆದು ಸಭೆಯಲ್ಲಿ ಓದಿ ಮಹಾರಾಜರ ಮೆಚ್ಚುಗೆಗೆ ಪಾತ್ರರಾದರು. ಕೆಳದಿ ರಾಣಿಚೆನ್ನಮ್ಮಾಜಿ ಮತ್ತು ಕರ್ಣಾಟಕ ವಿಜಯ ಇವು ಎರಡೂ ನಾಟಕಗಳು. ನಿಜಗುಣರ ಪುರಾತನ ತ್ರಿವಿಧಿ, ರಾಘವಾಂಕನ ವೀರೇಶ ಚರಿತೆ, ಕೊಂಡಗುಳಿ ಕೇಶಿರಾಜನ ಷಡಕ್ಷರ ಮಂತ್ರಮಹಿಮೆ, ಗುರುಸಿದ್ಧನ ಮಾದೇಶ್ವರ ಸಾಂಗತ್ಯ ಇವು ಸಂಪಾದಿತ ಕೃತಿಗಳು. ಪ್ರಾಚೀನ ಕೃತಿಗಳನ್ನು ಹಸ್ತಪ್ರತಿಗಳ ಆಧಾರದಿಂದ ಶಾಸ್ತ್ರೀಯವಾಗಿ ಸಂಪಾದಿಸುವುದು ಬಹುಕಷ್ಟದ ಕೆಲಸ. ಶಾಸ್ತ್ರಿಗಳು ಈ ಕಾರ್ಯವನ್ನೂ ಮಾಡಿ ಕೀರ್ತಿಯನ್ನು ಗಳಿಸಿದ್ದಾರೆ.

ಷಡಕ್ಷರ ಮಂತ್ರ ಮಹಿಮೆ : ಕೊಂಡಗುಳಿ ಕೇಶಿರಾಜ ದಂಡನಾಯಕ ವಿರಚಿತ ಷಡಕ್ಷರ ಮಂತ್ರಮಹಿಮೆ ವೀರಶೈವ ಸಾಹಿತ್ಯದಲ್ಲಿ ಅತ್ಯಂತ ಮಹತ್ವದ ಕೃತಿ. ಕ್ರಿ.ಶ. ೧೦೭೬ ರಿಂದ ೧೧೨೬ರ ವರೆಗೆ ರಾಜ್ಯವಾಳಿದ ಚಾಲುಕ್ಯ ವಿಕ್ರಮಾದಿತ್ಯನ ದಂಡನಾಯಕನಾಗಿದ್ದ ಕೊಂಡಗುಳಿ ಕೇಶಿರಾಜ ಈ “ಷಡಕ್ಷರ ಕಂದ”ವನ್ನು ಬರೆದಿದ್ದಾನೆ. ಈತನು ಕೊಂಡಗುಳಿಯಲ್ಲಿ ಸೋಮೇಶ್ವರ ದೇವಸ್ಥಾನವನ್ನು ಕಟ್ಟಿಸಿ ಒಂದು ಶಿಲಾಶಾಸನವನ್ನು ಹಾಕಿಸಿದ್ದಾನೆ. ಅದರಲ್ಲಿ ಮಹಾಸಾಮಂತಾಧಿಪತಿ, ಪ್ರಚಂಡ ದಂಡನಾಯಕ, ಸುಕವಿ ಶುಕಚೂತಬಂಧುವನ ವಸಂತ, ವಚಶ್ರೀ ವಧೂಕಾಂತ, ಸಾಹಿತ್ಯ ಸರೋರುಹ ಮಧುಬ್ರತ, ಸತ್ಯಬ್ರತ, ಹರಚರಣ ರಂಜಿತೋತ್ತಮಾಂಗ, ಸಂಧಿವಿಗ್ರಹಿ ಎಂದು ಮುಂತಾಗಿ ಉಲ್ಲೇಖಗೊಂಡಿದ್ದಾನೆ.

ಷಡಕ್ಷರ ಕಂದದಲ್ಲಿ ೧೧೦ ಕಂದಪದ್ಯಗಳಿವೆ. ಈ ಗ್ರಂಥಕ್ಕೆ “ಮಂತ್ರ ಮಹತ್ವದ ಕಂದ” ಎಂಬ ಹೆಸರೂ ಉಂಟು. ‘ಓಂ ನಮಃ ಶಿವಾಯ’ ಎಂಬ ಷಡಕ್ಷರಿ ಮಂತ್ರದ ಮಹಿಮೆಯನ್ನು ಈ ಕೃತಿಯಲ್ಲಿ ವಿವರಿಸಿದೆ. ಈ ಕಿರುಕೃತಿಯನ್ನು ಶಾಸ್ತ್ರೀಯವಾಗಿ ಸಂಪಾದಿಸಿರುವುದೇ ಅಲ್ಲದೆ ಷಡಕ್ಷರ ಮಂತ್ರ ಮಹಿಮೆಯ ತಾತ್ಪರ್ಯ ಸಂಗ್ರಹವನ್ನು ಮಾಡಿಕೊಟ್ಟಿದ್ದಾರೆ. ಇದರ ಜೊತೆಗೆ ಹರಿಹರ ವಿರಚಿತ ಕೊಂಡಗುಳಿ ಕೇಶಿರಾಜ ರಗಳೆಯನ್ನು ಆತನ ಇತಿವೃತ್ತಗಳನ್ನೂ ಪ್ರಾಚೀನ ಗ್ರಂಥಗಳಲ್ಲಿನ ಮಾಹಿತಿಗಳನ್ನೂ ಶಾಸನ ಕಾವ್ಯಾಧಾರಗಳನ್ನೂ ಕೊಟ್ಟಿದ್ದಾರೆ. ಅನುಬಂಧ ೪ರಲ್ಲಿ ಶಿವಮಂತ್ರ ಮಹಿಮೆಯನ್ನು ಸಂಗ್ರಹಿಸಿ ಕೊಟ್ಟಿರುವುದಲ್ಲದೆ ಷಡಕ್ಷರ ಮಂತ್ರ ಮಹಿಮೆ ಮತ್ತು ಕೊಂಡಗುಳಿ ಕೇಶಿರಾಜ ರಗಳೆಯ ಶಬ್ದಕೋಶಗಳನ್ನೂ ಕೊಟ್ಟಿದ್ದಾರೆ. ಷಡಕ್ಷರ ಮಂತ್ರ ಮಹಿಮೆಯನ್ನು ಸಮಗ್ರವಾಗಿ ಅರಿತುಕೊಳ್ಳಲು ಅತ್ಯಂತ ಸಹಕಾರಿಯಾದುದು ಷಡಕ್ಷರ ಕಂದ.

ಗುರುಸಿದ್ಧ ಕವಿ ವಿರಚಿತ ಮಾದೇಶ್ವರ ಸಾಂಗತ್ಯ :ಕ್ರಿ.ಶ.ಸು. ೧೭೫೦ರಲ್ಲಿದ್ದ ಗುರುಸಿದ್ಧ ಕವಿಯ ಮಾದೇಶ್ವರ ಸಾಂಗತ್ಯವನ್ನು ಏಕೈಕ ಹಸ್ತ ಪ್ರತಿಯ ಆಧಾರದಿಂದ ಪ್ರಥಮ ಬಾರಿಗೆ ಸಂಪಾದಿಸಿ ಪ್ರಕಟಿಸಿದ್ದಾರೆ. ಮಾದೇಶ್ವರರಿಗೆ ಸಂಬಂಧಿಸಿದ ಎಲ್ಲ ಸಂಗತಿಗಳನ್ನೂ ಸಂಗ್ರಹಿಸಿದ್ದಾರೆ. ಕವಿಕಾವ್ಯ ವಿಷಯವನ್ನು ಸಮಗ್ರವಾಗಿ ನಿರೂಪಿಸಿದ್ದಾರೆ. ಶಾಸನಗಳಲ್ಲಿ ಉಕ್ತವಾದ ವಿಷಯಗಳನ್ನೂ ಜಾನಪದದಲ್ಲಿ ಪ್ರಚಲಿತವಿರುವ ಹಾಡುಗಳನ್ನೂ ಮಾದೇಶ್ವರನ ಬಗೆಗೆ ಲಬ್ಧವಿರುವ ಎಲ್ಲ ಮಾಹಿತಿಗಳನ್ನೂ ಸಂಗ್ರಹಿಸಿ ಕೊಟ್ಟಿದ್ದಾರೆ. ಅನುಬಂಧ ೧ ರಲ್ಲಿ ಮಾದೇಶ್ವರ ಸಾಂಗತ್ಯದ ಓದುಗರು ತಿಳಿದಿರಬೇಕಾದ ಸಂಗತಿಗಳನ್ನೂ ಅನುಬಂಧ ೨ ರಲ್ಲಿ ಭೂ ಕೈಲಾಸ ನಡುಮನೆ ಎಂಬ ಈ ಎರಡು ಅನುಬಂಧಗಳಲ್ಲಿ ಮಾದೇಶ್ವರರ ಬಗೆಗೆ ಅತ್ಯಂತ ಉಪಯುಕ್ತ ಮಾಹಿತಿಯನ್ನು ವಿವಿಧ ಮೂಲಗಳಿಂದ ಆಕರಗಳಿಂದ ಸಂಗ್ರಹಿಸಿಕೊಟ್ಟಿರುವುದು ಓದುಗರಿಗೆ ತುಂಬ ಉಪಯೋಗವಾಗಿದೆ. ಮಾದೇಶ್ವರರ ಸಮಸ್ತ ಮಾಹಿತಿಯನ್ನು ಒಳಗೊಂಡಿರುವ ಈ ಕೃತಿ ಒಂದು ಕೈಪಿಡಿಯಂತಿದೆ.

ಅಷ್ಟಭಾಷಾಕವಿ ಚಂದ್ರಶೇಖರ ವಿರಚಿತ ಪಂಪಾಸ್ಥಾನ ವರ್ಣನಂ :ಕ್ರಿ.ಶ.ಸು. ೧೪೩೦ರಲ್ಲಿದ್ದ ಚಂದ್ರಶೇಖರ ವಿರಚಿತ ಚಂಪೂಕಾವ್ಯ. ವಿರೂಪಾಕ್ಷನ ಆಸ್ಥಾನ ವರ್ಣನೆಯನ್ನೇ ವಸ್ತುವಾಗಿಟ್ಟುಕೊಂಡು ರಚಿತವಾದ ಪ್ರಥಮ ಕೃತಿ. ಈ ಅಪ್ರಕಟಿತ ಕೃತಿಯನ್ನು ಮೊದಲ ಬಾರಿಗೆ ಸಂಪಾದಿಸಿ ಪ್ರಕಟಿಸಲಾಗಿದೆ. ಕವಿಕಾವ್ಯ ವಿಷಯವನ್ನು ಪ್ರಸ್ತಾವನೆಯಲ್ಲಿ ನಿರೂಪಿಸಿರುವುದೇ ಅಲ್ಲದೆ ಕಠಿಣ ಶಬ್ದಕೋಶವನ್ನೂ ಕೊಡಲಾಗಿದೆ.

ಗಣಸಹಸ್ರನಾಮಾವಳಿ :ಪಾಲ್ಕುರಿಕೆ ಸೋಮನಾಥನ ‘ಗಣಸಹಸ್ರನಾಮಾವಳಿ’ಯನ್ನು ಸಂಪಾದಿಸಿರುವ ಶಿವಮೂರ್ತಿ ಶಾಸ್ತ್ರಿಗಳು ಆಕೃತಿಯ ಬಗೆಗೆ ಅನೇಕ ವಿಷಯಗಳನ್ನು ಹೊರಗೆಡವಿದ್ದಾರೆ. ಪಾಲ್ಕುರಿಕೆ ಸೋಮನಾಥನ ಸಹಸ್ರಗಣನಾಮದ ಜತೆಗೆ ಅದಕ್ಕೆ ಮೂಲವಾದ ಮಲ್ಲಿಕಾರ್ಜುನ ಪಂಡಿತರ ಗಣಸಹಸ್ರ ನಾಮವನ್ನೂ ಈ ಗ್ರಂಥದಲ್ಲಿ ಜತೆಗೊಳಿಸಿದ್ದಾರೆ.

ಪಂಡಿತಾರಾಧ್ಯರ ಚರಿತೆಯನ್ನು ಮೊಟ್ಟ ಮೊದಲು ತೆಲುಗಿನಲ್ಲಿ ಬರೆದವನು ಪಾಲ್ಕುರಿಕೆ ಸೋಮನಾಥ. ಆ ತನ್ನ ಗ್ರಂಥದಲ್ಲಿ ಈ ಗಣಸಹಸ್ರವನ್ನು ದ್ವಿಪದಿ ಛಂದಸ್ಸಿನಲ್ಲಿ ಹೇಳಿದ್ದಾನೆ. ಅಲ್ಲದೆ ಕನ್ನಡದಲ್ಲಿಯೂ ಲಲಿತರಗಳೆಯಲ್ಲಿ ಗಣಸಹಸ್ರವನ್ನು ಬರೆದಿದ್ದಾನೆ. ಆದರೆ ಪಂಡಿತಾರಾಧ್ಯರ ಗಣಸಹಸ್ರಕ್ಕಿಂತ ಪಾಲ್ಕುರಿಕೆ ಕವಿಯ ಸಹಸ್ರಗಣ ನಾಮದಲ್ಲಿ ಕೆಲವು ಹೆಸರುಗಳು ಹೆಚ್ಚಾಗಿ ಸೇರಿದೆ. ಇವನ್ನು ಸೋಮನಾಥನೇ ಸೇರಿಸಿರಬೇಕೆಂದು ತೋರುತ್ತದೆ. ಈ ಗಣಸಹಸ್ರವನ್ನು ಮೊದಲು ಮಲ್ಲಿಕಾರ್ಜುನ ಪಂಡಿತಾರಾಧ್ಯರು ಬರೆದುದು ಸಂಸ್ಕೃತದಲ್ಲಿಯೋ? ತೆಲುಗು ಅಥವಾ ಕನ್ನಡದಲ್ಲಿಯೋ? ಎಂಬುದು ಸ್ಪಷ್ಟವಾಗಿಲ್ಲ. ಸೋಮನಾಥನು ತೆಲುಗು ಮತ್ತು ಕನ್ನಡ ಭಾಷೆಗಳೆರಡರಲ್ಲಿಯೂ ಗಣಸಹಸ್ರವನ್ನು ಬರೆದಿರುವುದನ್ನು ನೋಡಿದರೆ ಪಂಡಿತಾರಾಧ್ಯರು ಸಂಸ್ಕೃತದಲ್ಲಿ ಮೊದಲು ಇದನ್ನು ವಿರಚಿರಬಹುದೇ ಎಂದು ನಮಗೆ ತೋರಿ ಬರುತ್ತದೆ. ಆದರೆ ಈ ವಿಷಯವನ್ನು ಚೆನ್ನಾಗಿ ಪರಿಶೀಲಿಸಬೇಕಾಗಿದೆ. ಪಂಡಿತಾರಾಧ್ಯರಿಗೆ ಸಂಸ್ಕೃತ, ತೆಲುಗು ಮತ್ತು ಕನ್ನಡ ಭಾಷೆಗಳ ಪರಿಚಯವಿತ್ತೆಂದು ಅವರ ಚರಿತ್ರೆಯಿಂದ ಸುಲಭವಾಗಿ ತಿಳಿಯಬಹುದಾಗಿದೆ.

ಶ್ರೀ ಮಲ್ಲಿಕಾರ್ಜುನ ಪಂಡಿತಾರಾಧ್ಯರಿಂದ ಸಂಸ್ಕೃತದಲ್ಲಿ ವಿರಚಿತರಾದ ಗಣಸಹಸ್ರನಾಮವನ್ನು ಪಾಲ್ಕುರಿಕೆ ಸೋಮನಾಥನು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ವಿಸ್ತರಿಸಿ ಅಂದರೆ ಮತ್ತೆ ಕೆಲವು ಹೆಸರುಗಳನ್ನು ಸೇರಿಸಿ ಪ್ರಾರಂಭದಲ್ಲಿ ಕೆಲವು ಮಂತ್ರಗಳನ್ನು ಕೂಡಿಸಿ ಬರೆದನೆಂದು ನಾವು ಸದ್ಯ ತಿಳಿಯಬಹುದು.

ಗಣಸಹಸ್ರನಾಮವು ವೀರಶೈವರು ನಿತ್ಯ ಪಾರಾಯಣ ಮಾಡುವ ಗ್ರಂಥ, ಪಾಪ ಪರಿಹಾರವಾದುದು. ಗ್ರಂಥ ರಚನೆಯಿಂದ ಪಂಡಿತಾರಾಧ್ಯರಿಗೆ ಹೋದ ಕಣ್ಣುಗಳು ಮತ್ತೆ ಬಂದುವೆಂದು ಅವರ ಚರಿತ್ರೆಯಲ್ಲಿ ಹೇಳಿದೆ.

ಗಣಸಹಸ್ರ ನಾಮಾವಳಿಯಲ್ಲಿ ಪ್ರಮಥ ಗಣರು ೪೬೫, ರುದ್ರಗಣರು ೧೭೧, ಅಮರಗಣರು ೨೩೪, ದಶಗಣರು ೧೦, ತೇರಸರು ೧೩, ಷೋಡಶರು ೧೬, ತ್ರಿಷಷ್ಠಿ ಪುರಾತನರು ೬೩, ಯೋಗಾಚಾರ್ಯರು ೨೮ ಎಂದು ವಿಭಾಗ ಮಾಡಲಾಗಿದೆ. ಯಾವ ತತ್ವಗಳಂತೆ ಹೀಗೆ ವಿಭಾಗಿಸಿದರೆಂದು ತಿಳಿಯುವುದು ಕಷ್ಟವಾಗಿದೆ.

ವೀರಶೈವ ಸಾಹಿತ್ಯ ಮತ್ತು ಇತಿಹಾಸ :ಬಿ. ಶಿವಮೂರ್ತಿಶಾಸ್ತ್ರಿಗಳ ಅತ್ಯಂತ ಮಹತ್ವದ ಕೃತಿ ಎಂದರೆ ವೀರಶೈವ ಸಾಹಿತ್ಯ ಮತ್ತು ಇತಿಹಾಸವನ್ನು ಕುರಿತ ನಾಲ್ಕು ಸಂಪುಟಗಳು. ಸುಮಾರು ನಲವತ್ತು ವರ್ಷಗಳ ಕಾಲ ಅವರು ಬೇರೆ ಬೇರೆ ಸಂದರ್ಭ ಸನ್ನಿವೇಶಗಳಲ್ಲಿ ಮಾಡಿದ ಭಾಷಣಗಳು ಬರೆದ ಲೇಖನಗಳು ನಡೆಸಿದ ಸಂಶೋಧನೆಗಳನ್ನು ಕುರಿತ ಲೇಖನಗಳು ಈ ಸಂಪುಟಗಳಲ್ಲಿ ಸೇರ್ಪಡೆಯಾಗಿವೆ. ಇವುಗಳಲ್ಲಿ ವೀರಶೈವದರ್ಶನ, ವೀರಶೈವ ಸಾಹಿತ್ಯ, ವೀರಶೈವ ಇತಿಹಾಸಕ್ಕೆ ಸಂಬಂಧಪಟ್ಟ ಲೇಖನಗಳನ್ನು ಆಯಾ ಸಂಪುಟಗಳಲ್ಲಿ ಅಳವಡಿಸಲಾಗಿದೆ. ಈ ಕೃತಿಯ ಮುಖ್ಯವಾದ ಉದ್ದೇಶವೆಂದರೆ ವೀರಶೈವ ಸಾಹಿತ್ಯ ಸಂಸ್ಕೃತಿಗಳನ್ನು ಜನಸಾಮಾನ್ಯರು ವಿದ್ಯಾರ್ಥಿಗಳು ತಿಳಿಯಬೇಕೆಂಬುದು. ಗ್ರಂಥಕರ್ತರೇ ಈ ಬಗೆಗೆ “ಜನಸಾಮಾನ್ಯರು ಈ ಉದಾತ್ತ ಗ್ರಂಥಗಳನ್ನು ಓದಿ ತದಂತರ್ಗರತಾದ ವೀರಶೈವ ದರ್ಶನ ಮತ್ತ ಧರ್ಮದ ಸ್ವರೂಪವನ್ನೂ ಸಾಹಿತ್ಯ ಮತ್ತು ಸಂಸ್ಕೃತಿಯ ಅರಿವನ್ನೂ ಅಳವಡಿಸಿಕೊಳ್ಳುವುದು ತುಂಬಾ ಕಷ್ಟಸಾಧ್ಯವಾದ ಕಾರ್ಯ. ಆದುದರಿಂದ ಸಾಮಾನ್ಯ ಜನರು, ಶಾಲೆಯ ವಿದ್ಯಾರ್ಥಿಗಳು ಮನೆಯ ಹೆಣ್ಣುಮಕ್ಕಳು ಸುಲಭವಾಗಿ ವೀರಶೈವ ದರ್ಶನ. ಸಾಹಿತ್ಯ ಇತಿಹಾಸಗಳ ಪರಿಚಯ ಮಾಡಿಕೊಳ್ಳಲು ಇಂತಹ ಸುಲಭವಾದ ಗ್ರಂಥಗಳು ಅವಶ್ಯವೆಂಬುದು ನಮ್ಮ ಅನುಭವಕ್ಕೆ ಹೊಳೆದಿರುವ ಸಂಗತಿ. ಅದಕ್ಕಾಗಿಯೇ ಈ ಗ್ರಂಥ ನಿರ್ಮಾಣ ಮತ್ತು ಪ್ರಕಟಣೆಯ ಸಾಹಸ” ಎಂದು ಹೇಳಿದ್ದಾರೆ.

“ವೀರಶೈವ ಧರ್ಮ ಮತ್ತು ಸಂಸ್ಕೃತಿ” ಎಂಬ ಕೃತಿಗೆ ಕನ್ನಡ ನಾಡಿನ ವಿದ್ವಾಂಸರೂ ಜಂಗಮ ವಿಶ್ವಕೋಶ ಎಂದೆನಿಸಿಕೊಂಡವರೂ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕರೂ ಆಗಿದ್ದ. ಡಾ. ಡಿ.ಎಲ್. ನರಸಿಂಹಾಚಾರ್ಯರು ಬರೆದಿರುವ ಪ್ರಸ್ತಾವನೆ ಬಿ. ಶಿವಮೂರ್ತಿಶಾಸ್ತ್ರಿಗಳ ಸಮಗ್ರ ಸಾಹಿತ್ಯ ಸಮೀಕ್ಷೆಯನ್ನೂ ಅವರ ವ್ಯಕ್ತಿತ್ವವನ್ನೂ, ಸ್ಥಾನಮಾನಗಳನ್ನೂ ಕಣ್ಣಿಗೆ ಕಟ್ಟುವಂತೆ ನಿರೂಪಿಸಿರುವ ನೈಜ ಬರವಣಿಗೆಗೆ ಯಥಾರ್ಥ ಸಾಹಿತ್ಯ ವಿಮರ್ಶೆಗೆ ಒಂದು ಕೈಗನ್ನಡಿಯಂತಿದೆ. ಶಿವಮೂರ್ತಿಶಾಸ್ತ್ರಿಗಳನ್ನು ಕನ್ನಡ ಲೋಕಕ್ಕೆ ಪರಿಚಯಿಸಿಕೊಡುವ ಪ್ರಮಾಣಭೂತ ದಾಖಲೆಯಾಗಿದೆ. ಅದನ್ನು ಯಥಾವತ್ತಾಗಿ ಉದ್ಧರಿಸಲಾಗಿದೆ :

“ವೀರಶೈವ ಧರ್ಮ ಮತ್ತು ಸಂಸ್ಕೃತಿ” ಎಂಬ ಗ್ರಂಥವನ್ನು ಬರೆದಿರುವ, ಆಸ್ಥಾನ ವಿದ್ವಾನ್, ಪಂಡಿತರತ್ನಂ, ಪದ್ಮಶ್ರೀ ಬಿರುದಾಂಕಿತ ಬಿ. ಶಿವಮೂರ್ತಿ ಶಾಸ್ತ್ರಿಗಳು ಕನ್ನಡ ನಾಡಿನ ವಿಖ್ಯಾತ ಪುರುಷರಲ್ಲಿ ಅಗ್ರಗಣ್ಯರಾಗಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ನನಗೆ ಅವರ ಪರಿಚಯದ ಲಾಭವುಂಟಾಗಿದೆ. ಅವರ ಹೆಸರನ್ನೂ, ಅವರ ಕಾರ‍್ಯದ ಮಹತ್ವವನ್ನೂ ಅರಿಯದವರು ಕರ್ಣಾಟಕದಲ್ಲಿ ಬಹುಶಃ ಯಾರೂ ಇರಲಾರರು. ಸಾಧಾರಣ ಶಾಲಾಮಾಸ್ತರರಾಗಿ ತಮ್ಮ ಜೀವನವನ್ನು ಆರಂಭಿಸಿದ ಅವರು, ಉಪನ್ಯಾಸ ಮತ್ತು ಕೀರ್ತನೆಗಳನ್ನು ನಡೆಸುತ್ತ, ಕೀರ್ತನಕೇಸರಿ, ಕೀರ್ತನಾಚಾರ‍್ಯ, ಕರ್ಣಾಟಕ ವಿಭೂಷಣ ಎಂಬ ಪ್ರಶಸ್ತಿಗಳನ್ನು ಗುರುಪೀಠಗಳಿಂದ ಗಳಿಸಿದರು. ನಾನು ಚಿಕ್ಕವನಾಗಿದ್ದಾಗ ಅವರು ಹೇಳಿದ ಒಂದೆರಡು ಕೀರ್ತನೆಗಳನ್ನು ತುಮಕೂರಿನಲ್ಲಿ ಕೇಳಿದ್ದೇನೆ. ಅವರಿಗೆ ಸಂಗೀತದ ಪರಿಚಯ ಅಷ್ಟಾಗಿ ಇಲ್ಲದಿದ್ದರೂ, ಹೆಂಗಸರು, ಮಕ್ಕಳು, ದೊಡ್ಡವರು ಮುಂತಾದವರು ನೆರೆದಿರುವ ದೊಡ್ಡ ದೊಡ್ಡ ಸಭೆಗಳಲ್ಲಿ ಕಥೆ ಆರಂಭವಾಗುವುದೇ ತಡ, ಕೂಡಲೇ ಜನರನ್ನು ಆಕರ್ಷಿಸಿ ಏಕಾಗ್ರತೆಯಿಂದ ಅವರು ಕೇಳುವಂತೆ ಮಾಡುವ ಶಕ್ತಿ ಅವರಲ್ಲಿ ಮಿಗಿಲಾಗಿದೆ. ಸಹಸ್ರಾರು ಜನ ನೆರೆದಿರುವ ಮಹಾಸಭೆಗಳನ್ನು ಅವರು ತಮ್ಮ ವಾಗ್ಮೀಯತೆಯಿಂದ ವಶಪಡಿಸಿಕೊಂಡು ತಮ್ಮ ಇಚ್ಛೆಯಂತೆ ಅವುಗಳನ್ನು ಆಡಿಸುತ್ತಾರೆ, ಕುಣಿಸುತ್ತಾರೆ, ತಣಿಸುತ್ತಾರೆ. ಅವರಲ್ಲಿರುವ ರಸ ಹಾಸ್ಯದೃಷ್ಟಿ, ಅಪಾರವಾದ ಲೋಕಾನುಭವ, ಕಥೆಗಳನ್ನು ಸ್ವಾರಸ್ಯವಾಗಿ ನಿರೂಪಿಸುವ ಜಾಣ್ಮೆ, ರಸಭಾವ ತನ್ಮಯತೆ ಇವೆಲ್ಲ ಅವರ ಕೀರ್ತನಕಾರ ವ್ಯಕ್ತಿತ್ವದ ವಿಶಿಷ್ಟ ಲಕ್ಷಣಗಳಾಗಿವೆ. ಹೀಗೆ ಕೀರ್ತನಗಳನ್ನು ಮಾಡುತ್ತಾ ಅವರು ಕನ್ನಡನಾಡಿನಲ್ಲೆಲ್ಲ ಸಂಚಾರಮಾಡಿ ಜನ ಜಾಗೃತಿಯನ್ನುಂಟು ಮಾಡಿದ್ದಾರೆ. ಕನ್ನಡ ನಾಡಿನಲ್ಲಿ ಸಮಗ್ರ ಪರ‍್ಯಟನವನ್ನು ಇವರಂತೆ ಮಾಡಿರುವ ವ್ಯಕ್ತಿಗಳು ಹಲವರಿಲ್ಲವೆಂದು ಹೇಳಬಹುದು. ಸ್ವಪ್ರಯತ್ನದಿಂದ ದೀರ್ಘ ಕಾಲದ ಸ್ವಸಾಧನೆಯಿಂದ, ಕರ್ಣಾಟಕ ಭಾಷಾರತ್ನಂ ಕೈ.ಪಿ.ಆರ್. ಕರಿಬಸವಶಾಸ್ತ್ರಿಗಳ ಅನುಗ್ರಹದಿಂದ ಇವರು ತಮ್ಮ ಆತ್ಮ ತೇಜಸ್ಸನ್ನು ಬೆಳೆಸಿಕೊಂಡಿದ್ದಾರೆ. ಕನ್ನಡ ನಾಡಿನ ಸಂಚಾರದಲ್ಲಿ ನಾಡಿನ ಏಕೀಕರಣಕ್ಕೆ, ಇತಿಹಾಸ ಸಂಶೋಧನೆಗೆ ಇವರು ಮಿಗಿಲಾದ ಸೇವೆಯನ್ನು ಸಲ್ಲಿಸಿದ್ದಾರೆ. ಮಾನ್ಯ ಶ್ರೀ ಬಿ. ಶಿವಮೂರ್ತಿಶಾಸ್ತ್ರಿಗಳು ಮೈಸೂರು ಸರ್ಕಾರದಿಂದ ‘ಪಂಡಿತರತ್ನಂ’ ಬಿರುದನ್ನೂ, ಭಾರತ ಸರ್ಕಾರದವರಿಂದ ‘ಪದ್ಮಶ್ರೀ’ ಬಿರುದನ್ನೂ, ಹಲವು ಗುರುಪೀಠ ಮತ್ತು ವಿದ್ವತ್ಸಭೆಗಳಿಂದ ಕೆಲವು ಪ್ರಶಸ್ತಿಗಳನ್ನೂ ಪಡೆದಿದ್ದಾರೆ. ನಾಡಿನ ಜನಗಳಿಂದ ದೇವಗಂಗೆಎಂಬ ಪ್ರಶಸ್ತಿ ಗ್ರಂಥವನ್ನು ಒಪ್ಪಿಸಿಕೊಂಡಿದ್ದಾರೆ. ಇವರ ಹಿರಿಮೆಗೆ ಇದು ನಿದರ್ಶನವಾಗಿದೆ. ಕೀರ್ತನ ಕಾರ‍್ಯದಲ್ಲಿ ಇವರು ಸಿದ್ಧಿಯನ್ನು ಪಡೆಯುತ್ತಿರುವಾಗಲೇ ಆಸಕ್ತಿಯುಕ್ತ ವ್ಯಾಸಂಗದಿಂದ ಇವರು ಹೆಚ್ಚು ಪಾಂಡಿತ್ಯವನ್ನು ಸಂಪಾದಿಸಿಕೊಂಡರು. ಪ್ರೌಢಶಾಲೆಗಾಗಲಿ, ಕಾಲೇಜಿಗಾಗಲಿ ಇವರು ಹೋಗಲಿಲ್ಲ. ತಮಗೆ ಪರಿಚಯವಿದ್ದ ಪಂಡಿತರ ನೆರವಿನಿಂದ ಇವರು ಕನ್ನಡ ಸಾಹಿತ್ಯದ ಉದ್ಗ್ರಂಥಗಳ ಅಭ್ಯಾಸವನ್ನು ಮಾಡಿದರು. ಸಂಸ್ಕೃತ ಭಾಷಾ ಸಾಹಿತ್ಯದಲ್ಲೂ ಇವರಿಗೆ ವಿಸ್ತಾರವಾದ ಅರಿವುಂಟು. ಇವರು ಮಾಡಿರುವ ಭಾಷಣಗಳು, ಬರೆದಿರುವ ಲೇಖನಗಳು, ಪೀಠಿಕೆ – ಶಬ್ದಕೋಶಾದಿಗಳೊಡನೆ ಸಂಪಾದಿಸಿರುವ ಪ್ರಾಚೀನ ಕಾವ್ಯಗಳು, ಸಮಷ್ಟಿ ದೃಷ್ಟಿಯಿಂದ ರಚಿಸಿರುವ ಗ್ರಂಥಗಳು ಇವೆಲ್ಲ ಇವರ ವಿದ್ವತ್ತಿಗೆ ಪ್ರತೀಕಗಳಾಗಿವೆ. ಅವರ ಲೇಖನಿಯಿಂದ ಇದುವರೆಗೆ ಸುಮಾರು ಮೂವತ್ತು ಗ್ರಂಥಗಳು ಪ್ರಕಾಶಿತವಾಗಿವೆ. ರಾಘವಾಂಕನ ವೀರೇಶಚರಿತೆ, ನಿಜಗುಣರ ಪುರಾತನರ ತ್ರಿವಿಧಿ, ಕೊಂಡಗುಳಿ ಕೇಶಿರಾಜನ ಷಡಕ್ಷರಕಂದ, ಪಾಲ್ಕುರಿಕೆ ಸೋಮನಾಥನ ಗಣಸಹಸ್ರ ಹಾಗೂ ಬಸವೋದಾಹರಣಂ, ಚಂದ್ರಶೇಖರನ ಪಂಪಾಸ್ಥಾನವರ್ಣನಂ, ಶತಕಸಾಹಿತ್ಯ, ಶಿವಶರಣರ ತ್ರಿವಿಧಿಗಳು, ಘನಲಿಂಗಿ ದೇವರ ವಚನಗಳು ಇತ್ಯಾದಿಗಳನ್ನು ಇಲ್ಲಿ ಹೆಸರಿಸಬಹುದು. ಇದು ಸಾಮಾನ್ಯವಾದ ಸಿದ್ಧಿಯಲ್ಲವೆಂದು ಹೇಳಬಹುದು. ಮೈಸೂರು ಸರ್ಕಾರದ ಪ್ರಕಟನೆಗಳಾದ ಜೈಮಿನಿ ಭಾರತ, ಕನಕದಾಸರ ಕೀರ್ತನೆಗಳು, ಹರಿಭಕ್ತಿಸಾರ ಮೊದಲಾದ ಗ್ರಂಥಗಳನ್ನೂ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ, ಕರ್ಣಾಟಕ ಕವಿಚರಿತ್ರೆ (ಭಾಗ – ೧) ಸೋಮೇಶ್ವರ ಶತಕ (ದ್ವಿತೀಯ ಮುದ್ರಣ) ಹಾಗೂ ಗಮಕ ಕಾವ್ಯಮಂಜರಿ ಮೊದಲಾದವುಗಳನ್ನೂ ಸಂಪಾದಿಸಿ ಪ್ರಕಟಿಸಲು ನೆರವಾಗಿದ್ದಾರೆ. ಕರ್ಣಾಟಕ ವಿಶ್ವವಿದ್ಯಾಲಯಕ್ಕೆ ‘ಮಹಾಕವಿ ಷಡಕ್ಷರದೇವ’ ಎಂಬ ಗ್ರಂಥವನ್ನು ಬರೆದು ಕೊಟ್ಟಿದ್ದಾರೆ. ಮೈಸೂರು – ಬೆಂಗಳೂರು ವಿಶ್ವ ವಿದ್ಯಾಲಯಗಳಿಗೂ ಗ್ರಂಥಗಳನ್ನು ಬರೆಯಲೊಪ್ಪಿದ್ದಾರೆ, ಕುಂದದ ಆಸಕ್ತಿ, ನಿರಂತರವಾದ ಸಾಧನೆ, ಜ್ಞಾನತೃಷೆ ಇವುಗಳ ಫಲ ಅವರ ವಿದ್ವತ್ತು ಮತ್ತು ಅವರ ಗ್ರಂಥಗಳು. ಅವರಿಗೆ ಇಂಗ್ಲಿಷ್ ಭಾಷಾ ಸಾಹಿತ್ಯದ ಪರಿಚಯವು ಚೆನ್ನಾಗಿ ಇದ್ದಿದ್ದರೆ ಅವರ ವ್ಯಕ್ತಿತ್ವವು ಇನ್ನೂ ಜ್ವಲಂತವಾಗುತ್ತಿತ್ತು. ಅವರು ಭರತ ಖಂಡದ ರಾಷ್ಟ್ರೀಯ ನಾಯಕರಲ್ಲಿ ಒಬ್ಬರೆಂದು ಪರಿಗಣಿತರಾಗುತ್ತಿದ್ದರು ಎಂದು ನನ್ನ ನಂಬಿಕೆ. ಪತ್ರಿಕೋದ್ಯಮದಲ್ಲೂ ಶ್ರೀಮಾನ್ ಶಾಸ್ತ್ರಿಗಳವರ ಸಾಧನೆ ಸಿದ್ಧಿಗಳು ಆಶ್ಚರ‍್ಯಕರವಾಗಿವೆ. ಸ್ವತಂತ್ರ ಕರ್ಣಾಟಕ (ಸಾಪ್ತಾಹಿಕ) ಶರಣ ಸಾಹಿತ್ಯ – (ಮಾಸಿಕ) ಎಂಬೆರಡು ಪತ್ರಿಕೆಗಳ ಸಂಪಾದಕರಾಗಿ ಅವರು ಅವುಗಳನ್ನು ಹಲವು ದಶಕಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಈಗ ಅವರ ವಾರ ಪತ್ರಿಕೆ ನಿಂತಿದೆ. ೩೩ ವರ್ಷಗಳಿಂದ ಮಾಸಿಕ ಪತ್ರಿಕೆ ನಡೆಯುತ್ತಿದೆ. ಈ ಮೂಲಕವಾಗಿಯೂ ಅವರ ಸಾಹಿತ್ಯ ಸೇವೆಯು ನಾಡಿಗೆ ಸಲ್ಲುತ್ತಿದೆ. ಇವುಗಳಿಂದ ಜನಸಾಮಾನ್ಯರಲ್ಲಿ ತಿಳುವಳಿಕೆಯು ಹಬ್ಬುತ್ತಿದೆ. ಸ್ವಂತವಾದ ಮುದ್ರಣಾಲಯವನ್ನು ಬೆಂಗಳೂರಿನಲ್ಲಿ ಇವರು ಸ್ಥಾಪಿಸಿಕೊಂಡಿದ್ದಾರೆ. ಸಾಧಾರಣ ಶಾಲಾ ಉಪಾಧ್ಯಾಯರಾಗಿದ್ದ ಅವರಿಗೆ ಇಷ್ಟು ಉಪಪತ್ತಿ ಶಿವಕೃಪೆಯಿಂದ ಲಭ್ಯವಾಗಿರಬೇಕು. ಚಾಟಿಯಿಲ್ಲದೆ ಬುಗುರಿ ಆಡಿಸುವ ಚಾಕಚಕ್ಯ ಅವರಿಗೆ ಸಹಜವಾದುದೆಂಬಂತೆ ತೋರುತ್ತದೆ. ಸ್ಥಿರ ಸಂಕಲ್ಪಯುತನಾದ ಒಬ್ಬ ಮನುಷ್ಯನು ನಿರಂತರ ಉದ್ಯೋಗಶೀಲತೆಯಿಂದಲೂ, ಪ್ರಯತ್ನದಿಂದಲೂ, ಆತ್ಮೋದ್ಧಾರವನ್ನು ಮಾಡಿಕೊಂಡು, ಜನತೆಯ ಉದ್ಧಾರವನ್ನೂ ಹೇಗೆ ಮಾಡಲು ಸಾಧ್ಯವೆಂಬುದಕ್ಕೆ ಶ್ರೀಮಾನ್ ಶಾಸ್ತ್ರಿಗಳವರ ಜೀವನ ಒಂದು ನಿಚ್ಚಳವಾದ ಜೀವಂತವಾದ ನಿದರ್ಶನವಾಗಿದೆ. ಎಲ್ಲಕ್ಕೂ ಹೆಚ್ಚಾಗಿ ಇವರು ಸುಮಾರು ನಲವತ್ತು ವರ್ಷಕಾಲ ಕಷ್ಟಪಟ್ಟು ಸಂಗ್ರಹಿಸಿದ ಸುಮಾರು ೩೦೦ – ೪೦೦ ತಾಳೆಯೋಲೆ ಗ್ರಂಥಗಳು, ಸಂಸ್ಕೃತ ಗ್ರಂಥಗಳು, ತಾಮ್ರಶಾಸನಗಳು ಮೊದಲಾದುವನ್ನು ಮೈಸೂರು, ಬೆಂಗಳೂರು, ಕರ್ಣಾಟಕ ವಿಶ್ವವಿದ್ಯಾಲಯಗಳಿಗೆ ನಿಷ್ಕಾಮ ಬುದ್ಧಿಯಿಂದ ಅರ್ಪಿಸಿದ್ದಾರೆ. ಇದು ಇವರ ತ್ಯಾಗ ಗುಣಕ್ಕೆ ಸುಸ್ಪಷ್ಟ ನಿದರ್ಶನವಾಗಿದೆ.

ಶ್ರೀಮಾನ್ ಶಾಸ್ತ್ರಿಗಳವರ ಕನ್ನಡ ಗದ್ಯಶೈಲಿ ನಿರರ್ಗಳತೆಯಿಂದ ವಿಶಿಷ್ಟವಾಗಿರುವಂತೆಯೇ ಅವರ ಪದ್ಯಶೈಲಿಯು ಕೂಡ ಹೃದ್ಯವಾಗಿದೆ. ಕನ್ನಡ ಹಳೆಯ ಛಂದಸ್ಸುಗಳಲ್ಲಿಯೂ, ಹೊಸ ಛಂದೋರೂಪಗಳಲ್ಲಿಯೂ ಕವಿತೆಗಳನ್ನು ಬರೆವ ಅವರ ಕೌಶಲ್ಯ ಹಿರಿದಾಗಿದೆ. “ಶೂಲಪಾಣಿ” ಎಂಬ ಕಾವ್ಯನಾಮದಿಂದ ‘ಶರಣ ಸಾಹಿತ್ಯದಲ್ಲಿ ಪ್ರಕಟವಾಗಿರುವ ಅವರ ಕವಿತೆಗಳ ಈ ಮಾತಿಗೆ ಉದಾಹರಣೆಗಳಾಗಿವೆ. ‘ದುಂಬಿ – ನಾದ’ ಎಂಬ ಅವರ ಇನ್ನೊಂದು ಕವಿತಾಸಂಕಲನ ಗ್ರಂಥವು ತನ್ನ ಸರಳಶೈಲಿಯಿಂದ ರಮಣೀಯವಾಗಿದೆಯಲ್ಲದೆ ಅವರ ಪ್ರತಿಭೆಯು ಬಹುಮುಖವಾಗಿರುವುದನ್ನು ಪ್ರತಿಬಿಂಬಿಸುತ್ತಿದೆ. ಪೊಟ್ಟಲಕೆರೆ ಶಾಸನ, ಬೀಳಗಿಯ ಶಾಸನಗಳು, ಮಾದೇಶ್ವರ ಬೆಟ್ಟದ ಹೈದರಾಲಿಯ ಶಾಸನ ಮೊದಲಾದುವನ್ನು ಕಂಡುಹಿಡಿದು ಪ್ರಕಟಿಸಿದ್ದಾರೆ. ಹರಿಹರ – ರಾಘವಾಂಕರು, ನಿಜಗುಣ, ಸರ್ವಜ್ಞ, ಷಡಕ್ಷರ, ಲಕ್ಷ್ಮೀಶರನ್ನು ಕುರಿತು ಸಂಶೋಧನಾತ್ಮಕ ಲೇಖನಗಳನ್ನು ಬರೆದಿದ್ದಾರೆ, ಒಟ್ಟಿನಲ್ಲಿ ಶ್ರೀ ಶಾಸ್ತ್ರಿಗಳವರು, ಸಹೃದಯರು, ವಿದ್ವಾಂಸರು, ವಿದ್ವತ್‌ಪ್ರೇಮಿಗಳು. ತಮ್ಮ ಲೇಖನಗಳಿಂದ, ಉಪನ್ಯಾಸಗಳಿಂದ ಲೋಕಶಿಕ್ಷಕರು, ಸನ್ಮಾನ್ಯರು. ಅವರು ನಿರ್ಗವಿಗಳು, ಆದರೂ ಕನ್ನಡ ನಾಡೇ ಹೆಮ್ಮೆ ಪಡುವಂಥವರು. ಶ್ರೀ ಬಿ. ಶಿವಮೂರ್ತಿ ಶಾಸ್ತ್ರಿಗಳು ಕನ್ನಡ ಸಾಹಿತ್ಯ ಪರಿಷದಧ್ಯಕ್ಷರಾಗಿ ೧೦೦ ತಿಂಗಳು ಕಾಲ ಮಿಗಿಲಾದ ಸೇವೆ ಸಲ್ಲಿಸಿದ್ದಾರೆ. ಕನ್ನಡ ವಿಶ್ವಕೋಶ, ಕನ್ನಡ ನಿಘಂಟು ಸಮಿತಿ, ಸಂಗೀತ – ಸಾಹಿತ್ಯ ಅಕಾಡೆಮಿಗಳು, ಆಕಾಶವಾಣಿ ಸಲಹಾ ಸಮಿತಿ, ಬಸವ ಸಮಿತಿ, ಭಾರತೀಯ ವಿದ್ಯಾಭವನ ಮೊದಲಾದ ಹಿರಿಯ ಸಮಿತಿಗಳಲ್ಲಿದ್ದು ಇಂದಿಗೂ ಸೇವೆ ಸಲ್ಲಿಸುತ್ತಿದ್ದಾರೆ.

ಶ್ರೀಮಾನ್ ಶಾಸ್ತ್ರಿಗಳವರ ಗ್ರಂಥಗಳನ್ನು ಬಹುವಾಗಿ ಕನ್ನಡಿಗರು ಓದಿರುವರೆಂಬುದರಲ್ಲಿ ಸಂದೇಹ ಪಡಬೇಕಾಗಿಲ್ಲ. ಏಕೆಂದರೆ ಅವುಗಳಲ್ಲಿ ಕೆಲವು ಮತ್ತೆ ಮತ್ತೆ ಮುದ್ರಣವಾಗಿವೆ. ಅವರ ವೀರಶೈವ ಸಾಹಿತ್ಯ ಮತ್ತು ಇತಿಹಾಸ (ಮೂರು ಭಾಗಗಳು) ಜನಪ್ರಿಯವಾಗಿರುವ ಗ್ರಂಥಗಳು. ‘ವೀರಶೈವ ಮಹಾ ಪುರುಷರು’ ಮತ್ತೊಂದು ಪ್ರಮುಖ ಗ್ರಂಥ. ಇದರಲ್ಲಿ ವೀರಶೈವ ಕವಿಗಳು, ವಿದ್ವಾಂಸರು, ಶ್ರೀಮಂತರು, ದಾನಿಗಳು, ವರ್ತಕರು, ಸಮಾಜಸೇವಕರು, ಮಠಾಧಿಪತಿಗಳು, ಅಧಿಕಾರಿಗಳು – ಇವರೇ ಮುಂತಾದ ಮಹನೀಯರ ಭಾವಪೂರ್ಣವಾದ, ಪರಿಚಯಾತ್ಮಕವಾದ ಲೇಖನಗಳಿವೆ. ಇವರಲ್ಲಿ ಕೆಲವರು ಇಂದಿನ ತರುಣರಿಗೆ ಆದರ್ಶಪ್ರಾಯರಾಗಿದ್ದಾರೆ. ಇಲ್ಲಿ ಈ ಶತಮಾನದ ಆರಂಭದ ವರ್ಷಗಳಲ್ಲಿ ಮದ್ರಾಸಿನ ಜಿ.ಎಂ. ನಟೇಶನ್ ಮತ್ತು ಕಂಪನಿಯವರು ಅಚ್ಚು ಹಾಕಿಸುತ್ತಿದ್ದ ಭಾರತೀಯ ಮಹಾಪುರುಷರು, ರಾಜಕಾರಣಿಗಳು, ವಿಜ್ಞಾನಿಗಳು ಮುಂತಾದವರ ಪರಿಚಯದ ಕಿರುಹೊತ್ತಿಗೆಗಳ ನೆನಪುಂಟಾಗುತ್ತದೆ. ಈ ಗ್ರಂಥವನ್ನು ನೋಡಿದಾಗ ಅವು ಇಂಗ್ಲಿಷ್ ಭಾಷೆಯಲ್ಲಿವೆ. ಇವು ತಿಳಿಯಾದ ಕನ್ನಡ ನುಡಿಗಳಲ್ಲಿವೆ. ಎರಡಕ್ಕೂ ಇಷ್ಟೇ ವ್ಯತ್ಯಾಸ. ಈ ಗ್ರಂಥದಿಂದ ಕನ್ನಡ ನಾಡಿನ ಬಾಲೆ – ಬಾಲಕರ ಮೇಲೆ ಒಳ್ಳೆಯ ಪ್ರಭಾವವು ಉಂಟಾಗುತ್ತದೆ. ಕರ್ನಾಟಕ ಸಂದರ್ಶನ, ಬಿದನೂರು ಶಿವಪ್ಪನಾಯಕ ಎಂಬ ಗ್ರಂಥಗಳು ಅವಲೋಕನ ಯೋಗ್ಯವಾಗಿವೆ ಹಾಗೂ ಸಂಶೋಧನಾತ್ಮಕವಾದ ವಿಚಾರಗಳಿಂದ ಕೂಡಿವೆ. ಕನ್ನಡದಲ್ಲಿರುವ ವೀರಶೈವ ಸಾಹಿತ್ಯವನ್ನು ಶ್ರೀಮಾನ್ ಶಾಸ್ತ್ರಿಗಳವರು ಐತಿಹಾಸಿಕ ದೃಷ್ಟಿಯಿಂದಲೂ, ವಿಮರ್ಶಾತ್ಮಕ ದೃಷ್ಟಿಯಿಂದಲೂ ಅಭ್ಯಾಸ ಮಾಡಿದ್ದಾರೆ. ಹಲವು ಹೊಸ ವಿಷಯಗಳನ್ನು ಹೊರಗೆಡವಿದ್ದಾರೆ. ತಮ್ಮ ನಿರೂಪಣೆಯ ಪರಿಪೂರ್ಣತೆಯ ದೃಷ್ಟಿಯಿಂದ ಅವರು, ಸಂಸ್ಕೃತ, ತೆಲುಗು, ತಮಿಳು ಭಾಷೆಗಳಲ್ಲಿರುವ ವೀರಶೈವ ಸಾಹಿತ್ಯದ ಗ್ರಂಥಗಳನ್ನೂ ವ್ಯಾಸಂಗಮಾಡಿ ಅವುಗಳಿಂದ ನೆರವನ್ನು ಪಡೆದಿದ್ದಾರೆ. ವೀರಶೈವ ಸಾಹಿತ್ಯವನ್ನು ಕುರಿತಾದ ಅವರ ಜ್ಞಾನವು, ಯಾವ ಉತ್ಕೃಷ್ಟ ಕನ್ನಡಸಾಹಿತ್ಯ ಪರೀಕ್ಷೆಯಲ್ಲಿ ತೇರ್ಗಡೆಯಾದ ಸ್ನಾತಕೋತ್ತರ ವಿದ್ಯಾರ್ಥಿಯ ಜ್ಞಾನಕ್ಕಿಂತ ಎಷ್ಟೋ ಅತಿಶಯವಾಗಿದೆ. ಸ್ವಂತ ಪರಿಶ್ರಮದಿಂದ ಇಷ್ಟನ್ನೆಲ್ಲಾ ಅವರು ಹೇಗೆ ಕಲಿತರೆಂದು ಅಚ್ಚರಿ ಪಡಬೇಕಾಗಿದೆ.

ಈಗ ಪ್ರಕಟವಾಗಿರುವ ಈ ಗ್ರಂಥದಲ್ಲಿ ಒಟ್ಟು ೨೦ ಲೇಖನಗಳಿವೆ. ಅವುಗಳಲ್ಲಿ ಹತ್ತು, ಹರಿಹರ, ರಾಘವಾಂಕ, ಕೆರೆಯ ಪದ್ಮರಸ, ಷಡಕ್ಷರ ಕವಿ, ನಿಜಗುಣಶಿವಯೋಗಿ, ಸರ್ಪಭೂಷಣ, ಗುಬ್ಬಿಮಲ್ಲಣಾರ್ಯ, ತೋಂಟದ ಸಿದ್ಧಲಿಂಗಯತಿ, ಪಾಲ್ಕುರಿಕೆ ಸೋಮನಾಥ ಈ ಕವಿಗಳ ಜೀವನದಲ್ಲಿ ನಡೆದಿರಬಹುದಾದ ಕೆಲವು ಘಟನೆಗಳನ್ನು ಕುರಿತಿವೆ. ಮಹಾಕವಿ ಹರಿಹರನನ್ನು ಆಂಧ್ರಪ್ರದೇಶದ ಗಣಿಕೆಯೊಬ್ಬಳು ಮೋಹಿಸಿ ಹಂಪೆಗೆ ಬಂದು ಆತನ ದರ್ಶನ ಮಾಡಿದ ಕೂಡಲೇ ತನ್ನ ಚಿತ್ತವಿಕಾರವನ್ನು ಕಳೆದುಕೊಂಡು ಭಕ್ತಳಾಗಿ ಶಿವಧರ್ಮವನ್ನು ಪಡೆದಳೆಂಬ ಕಥೆ ಸ್ವಾರಸ್ಯವಾಗಿದೆ. ಇಂಥದೇ ಆದ ಒಂದು ಕಥೆ ಪದ್ಮರಾಜ ಪುರಾಣದಲ್ಲಿ ದೊರೆಯುತ್ತದೆ. ಅದು ಕೆರೆಯ ಪದ್ಮರಸನು ತಟಾಕ ನಿರ್ಮಾಣವನ್ನು ಮಾಡಿದ ಪವಾಡದ ಕಥೆಯು ಆತನನ್ನು ಕುರಿತಾದ ಗ್ರಂಥದಲ್ಲಿ ನಿರೂಪಿತವಾಗಿದೆ. ಇದು ಹೇಗೆ ನಡೆದಿರಬಹುದೆಂಬುದನ್ನು ಭಾವದ ಬಲದಿಂದ ಮನಗಂಡು ಲೇಖಕರು ಇಲ್ಲಿ ಸರಸವಾಗಿ ಹೇಳಿದ್ದಾರೆ. ಷಡಕ್ಷರನು ತನ್ನ ರಾಜಶೇಖರ ವಿಲಾಸವನ್ನು ರಚಿಸುವುದಕ್ಕೆ ಕಾರಣ ಕೆಲವು ದಂತಕಥೆಗಳಲ್ಲಿ ಹೇಳಿದೆ. ಶೃಂಗಾರಕಾವ್ಯವಾದ ಲೀಲಾವತಿ ಗ್ರಂಥಕ್ಕೆ ಆಗುತ್ತಿದ್ದ ಮೆರವಣಿಗೆಯನ್ನು ತಡೆದು ನೇಮಿಚಂದ್ರನನ್ನು ಮೀರಿಸಿದಂತೆ, ಲಕ್ಷ್ಮೀಶ, ರುದ್ರಭಟ್ಟ, ಷಡಕ್ಷರ ಈ ಮೂವರಿಗೆ ಸಂಬಂಧಿಸಿದ ಇನ್ನೊಂದು ಕಥೆಯನ್ನು ಅವರು ಹೇಳಬಹುದಾಗಿತ್ತು. ‘ಗುಬ್ಬಿ’ ಎಂಬ ಹೆಸರು ಆ ಊರಿಗೆ ಬಂದ ಕಾರಣವನ್ನು ತಿಳಿಸಿದ ಕಥೆ ಆಕರ್ಷಕವಾಗಿದೆ. ಈ ಕವಿಗಳನ್ನು ಅವಲಂಬಿಸಿ ರಚಿತವಾಗಿರುವ ಅಥವಾ ಮರಳಿ ಹೇಳಿರುವ ಈ ಕಥೆಗಳು ಬರೆ ಕಥೆಗಳಾಗಿಯೇ ಉಳಿದುಕೊಳ್ಳದೇ ಈ ಕವಿಗಳ ಪರಿಚಯವನ್ನು ಸಾಮಾನ್ಯರಿಗೂ ಮಾಡಿ ಕೊಡುವ ಬರಹಗಳಾಗಿವೆ. ಸಾಹಿತ್ಯ ಚರಿತ್ರೆಯ ಪ್ರಧಾನಾಂಶಗಳನ್ನು ಅವರಿಗೆ ತಿಳಿಸಿ ಕೊಡುತ್ತವೆ. ಈ ದೃಷ್ಟಿಯಿಂದ ಈ ಕಥೆಗಳು ಬೋಧಪ್ರದವಾಗಿವೆ.

ಇನ್ನುಳಿದ ಹತ್ತು ಲೇಖನಗಳು ವೀರಶೈವ ಧರ್ಮಕ್ಕೂ ಸಂಸ್ಕೃತಿಗೂ ಸೇರಿದುವಾಗಿವೆ. ‘ವೀರಶೈವ ಧರ್ಮ’ ಎಂಬ ಲೇಖನವು ಆ ಧರ್ಮದ ಸ್ವರೂಪವನ್ನು ಸಾಮಾನ್ಯರಿಗೂ ತಿಳಿಯುವಂತೆ ಪ್ರತಿಪಾದನೆ ಮಾಡುತ್ತಿದೆ. ಜಗತ್ತಿನಲ್ಲಿರುವ ಇತರ ಧರ್ಮಗಳ ಸಾರವು ಒಂದಲ್ಲ ಒಂದು ತೆರನಾಗಿ ವೀರಶೈವದಲ್ಲಿ ಇದೆ ಎಂಬ ಅವರ ಪ್ರತಿಪಾದನೆ ಅಭಿಮಾನಯುಕ್ತವಾಗಿದೆ. ಈಗಾಗಲೇ ಈ ಲೇಖನವು ತೆಲುಗು ಭಾಷೆಯಲ್ಲಿಯೂ ಅನುವಾದವಾಗಿರುವುದು ಗಮನಾರ್ಹವಾಗಿದೆ. ಶ್ರೀ ಶೈಲ ಕ್ಷೇತ್ರವನ್ನು ಕುರಿತು ಹೇಳುತ್ತಾ ಅದು ಹೇಗೆ, ಅಲ್ಲಮಪ್ರಭು, ಮಹಾದೇವಿಯಕ್ಕ ಮುಂತಾದ ಭಕ್ತರ ಮುಕ್ತಿ ಕ್ಷೇತ್ರವಾಯಿತೆಂಬುದನ್ನು ‘ಶ್ರೀ ಶೈಲವೂ ವೀರಶೈವವೂ” ಎಂಬ ಲೇಖನ ವರ್ಣಿಸುತ್ತದೆ. ‘ಇಷ್ಟಲಿಂಗದ ಮಹತ್ವ’ ಎಂಬ ಲೇಖನವು ಲೇಖಕರ ಧರ್ಮಾನುರಾಗವನ್ನು ಪ್ರದರ್ಶಿಸುವುದಾಗಿದೆ. ಅಲ್ಲದೆ ಅವರಿಗೆ ವೀರಶೈವ ಸಿದ್ಧಾಂತದಲ್ಲಿರುವ ಪಾಂಡಿತ್ಯಕ್ಕೆ ನಿದರ್ಶನವಾಗಿದೆ. ‘ಶಿವ ಶರಣರ ಕ್ಷೇತ್ರಗಳು’ ಎಂಬ ಲೇಖನ ಅವರ ದೇಶ ಸಂಚಾರದ ಫಲವಾಗಿದೆ. ತಾವು ಕಣ್ಣಾರೆ ಕಂಡ ಆ ಕ್ಷೇತ್ರಗಳ ಶಿಲ್ಪಕಲೆಯನ್ನೂ ಕಿವಿಯಾರೆ ಕೇಳಿದ ಕ್ಷೇತ್ರದ ಕಥಾನಕಗಳನ್ನೂ ಅದು ಗರ್ಭೀಕರಿಸಿಕೊಂಡಿದೆ. ಅದು ಓದುಗರಲ್ಲಿ ಕುತೂಹಲವನ್ನು ಉಂಟುಮಾಡುವುದಾಗಿದೆ. ಗ್ರಂಥದ ಅಂತ್ಯದಲ್ಲಿ ಕಾಣುವ ಶಬ್ದಕೋಶವು ಮುಖ್ಯವಾಗಿ ‘ಶಿವಾನುಭವ ಶಬ್ದಕೋಶ’ವಾಗಿದೆ. ವೀರಶೈವರ ಪರಿಭಾಷೆಯನ್ನು ತಿಳಿಯಲು ಈ ಕೋಶ ನೆರವಾಗುತ್ತದೆ. ಒಟ್ಟಿನಲ್ಲಿ ಈ ಗ್ರಂಥವು ಶ್ರೀ ಬಿ. ಶಿವಮೂರ್ತಿಶಾಸ್ತ್ರಿಗಳು ಕನ್ನಡಕ್ಕೆ ನೀಡಿರುವ ಒಂದು ಬೆಲೆಯುಳ್ಳ ಕೊಡುಗೆಯಾಗಿದೆ. ಇದನ್ನು ಓದಲು ಆರಂಭಿಸಿದರೆ ಪೂರ್ತಿ ಮುಗಿಸುವವರೆಗೂ ಪುಸ್ತಕವನ್ನು ಕೆಳಗಿರಿಸಲು ಮನಸ್ಸು ಬರುವುದಿಲ್ಲ. ಶಾಸ್ತ್ರಿಗಳ ಖ್ಯಾತಿ ಈ ಗ್ರಂಥ ರಚನೆಯಿಂದ ಇನ್ನಷ್ಟು ಹೆಚ್ಚಳಗೊಂಡಿದೆ. ಕನ್ನಡಿಗರೆಲ್ಲರೂ ಈ ಗ್ರಂಥವನ್ನು ಅತಿಶಯವಾದ ಆದರದಿಂದ ಸ್ವಾಗತಿಸುವರೆಂದು ನಂಬಿದ್ದೇನೆ. ಇವರು ನಲವತ್ತು ವರ್ಷಗಳ ಪರಿಶ್ರಮದಿಂದ ರಚಿಸಿರುವ ‘ವೀರಶೈವ ವಿಭೂತಿಗಳು’ ಎಂಬ ಗ್ರಂಥವು ಬೇಗನೆ ಬೆಳಕಿಗೆ ಬರಲೆಂದು ಆಶಿಸುತ್ತೇನೆ. ಇವರು ಪ್ರಕಟನೆಗಾಗಿ ಸಿದ್ಧ ಪಡಿಸಿಕೊಂಡಿರುವ, ಸ್ವಾದಿ ಸದಾಶಿವರಾಜನ ಪಂಚಶತ ನೀತಿಗಳು, ತೋಂಟದ ರಾಯನ ಸಾಂಗತ್ಯ, ಅಭಿನವ ಕಾಳಿದಾಸ, ಮಹಾಕವಿ ಲಕ್ಷ್ಮೀಶ, ಮಹಾತ್ಮ ಕನಕದಾಸ, ನಿಜಗುಣ ಶಿವಯೋಗಿ, ಕನ್ನಡ ಸಾಹಿತ್ಯ ಸಂದರ್ಶನ, ಕೆಳದಿಯ ರಾಣಿ ನಾಟಕ ಮೊದಲಾದ ಗ್ರಂಥಗಳೂ ಬೇಗನೆ ಬೆಳಕಿಗೆ ಬರುವಂತೆ ಭಗವಂತನು ಇವರನ್ನು ಅನುಗ್ರಹಿಸಲಿ. ಕನ್ನಡ ನಾಡು ನುಡಿ ಸಾಹಿತ್ಯಗಳಿಗೆ ತಮಗೇ ವಿಶಿಷ್ಟವಾಗಿರುವ ರೀತಿಯಲ್ಲಿ ಸೇವೆಸಲ್ಲಿಸುತ್ತಿರುವ ಶಾಸ್ತ್ರಿಗಳಿಗೆ ನನ್ನ ಗೌರವ ಪೂರ್ವಕವಾದ ಅಭಿನಂದನೆಗಳನ್ನು ಸಮರ್ಪಿಸುತ್ತೇನೆ. ಅವರ ಸೇವೆ ಇನ್ನೂ ದೀರ್ಘಕಾಲ ನಡೆಯುವಂತೆ ಭಗವಂತನು ಇವರನ್ನು ಅನುಗ್ರಹಿಸುವಂತಾಗಲಿ ಎಂದು ಮನಃಪೂರ್ವಕವಾಗಿ ಹಾರೈಸುತ್ತೇನೆ.