ಭಾರತೀಯ ಸಂಗೀತ ಪದ್ಧತಿಗಳಾದ ದಕ್ಷಿಣಾದಿ-ಉತ್ತರಾದಿ ಎರಡೂ ಪ್ರಕಾರಗಳಲ್ಲೂ ತೀವ್ರವಾದ ಆಸಕ್ತಿ ಹೊಂದಿ ಅದನ್ನು ತಮ್ಮ ಅಪ್ರತಿಮ ಸಾಧನೆಯಿಂದ ಕರಗತ ಮಾಡಿಕೊಂಡವರು ನಾಗಪುರದ ರಾಗನಿಧಿ ಬಿ. ಸುಬ್ಬರಾಯರು.

ಸಂಗೀತದ ಹುಚ್ಚು ಆವರಿಸಿದ ಕ್ಷಣಗಳೇ ತಮ್ಮ ಜೀವನದ ಅತ್ಯಂತ ಆನಂದದ ಕ್ಷಣಗಳೆಂದು ಹೇಳಿಕೊಳ್ಳುತ್ತಿದ್ದರು. ಸುಬ್ಬರಾಯರ ಸಂಗೀತ ಶಿಕ್ಷಣ, ಸಂಗೀತ ಪ್ರೇಮ ಹಾಗೂ ಸಂಗೀತ ಪ್ರಪಂಚದಲ್ಲಿ ಅವರ ವಿವಿಧ ಸಾಧನೆಗಳು ಇಂದಿನವರಲ್ಲಿ ಸೋಜಿಗ ಹುಟ್ಟಿಸುವಂತಹವು. ನಾಗಪುರದ ಸುಬ್ಬರಾಯರು, ರಾಗನಿಧಿ ಸುಬ್ಬರಾಯರು ಎಂದು ಸಂಗೀತ ಲೋಕ ಗಮನಿಸಿ ಮೆಚ್ಚಿದ ಬಿ. ಸುಬ್ಬರಾಯರು ಹಾಡುಗಾರಿಕೆ, ಪಿಟೀಲು ವಾದನ, ಗೋಟು ವಾದ್ಯ (ವಿಚಿತ್ರ ವೀಣಾ) ಇವುಗಳಲ್ಲಿ ಒಳ್ಳೆಯ ಪರಿಶ್ರಮ ಗಳಿಸಿದೆದು, ವೇದಿಕೆಯ ಕಲಾವಿದರಾಗಿದ್ದರು. ಶಿಕ್ಷಣ ಉದ್ಯೋಗಗಳು ಭಾರತದ ಹಲವೆಡೆಗಳಲ್ಲಿ ಸಂಚರಿಸುವ, ವಾಸಮಾಡುವ ಸಂದರ್ಭ ಒದಗಿಸಿದವು. ಇದರಿಂದಾಗಿ ಹಿಂದುಸ್ತಾನಿ ಹಾಗೂ ಕರ್ನಾಟಕ ಇವೆರಡು ಪದ್ಧತಿಗಳ ಶ್ರೇಷ್ಠ ಮಟ್ಟದ ಸಂಗೀತವನ್ನೂ ಕೇಳಿ ಆನಂದಿಸುವ, ಕಲಿಯುವ ಹಾಗೂ ಶ್ರೇಷ್ಠ ಸಂಗೀತಗಾರರೊಂದಿಗೆ ಬೆರೆತು ವಿಚಾರ ವಿನಿಮಯ ಮಾಡಿಕೊಳ್ಳುವ ಅವಕಾಶ ಸುಬ್ಬರಾಯರಿಗೆ ಲಭಿಸಿತು. ಹಿಂದುಸ್ತಾನಿ ಮತ್ತು ಕರ್ನಾಟಕ ಇವೆರಡು ಪದ್ಧತಿಗಳಲ್ಲಿ ಜನಪ್ರಿಯವಾಗಿರುವ ಎಲ್ಲ ರಾಗಗಳ ಅಧ್ಯಯನ ಸುಬ್ಬರಾಯರು ತಮ್ಮ ಜೀವನದುದ್ದಕ್ಕೂ ಅಪಾರ ಶ್ರದ್ಧೆಯಿಂದ ನಡೆಸಿದ ಒಂದು ಪ್ರಮುಖ ಸಾಧನೆಯಾಗಿದೆ. ಹಲವು ದಶಕಗಳಲ್ಲಿ ಅವರು ಗಳಿಸಿದ ಪಾಂಡಿತ್ಯವೇ ಸಂಗೀತ ಲೋಕಕ್ಕೆ ಸುಬ್ಬರಾಯರು ನೀಡಿರುವ ಮಹತ್ತರ ಕೊಡುಗೆಯಾದ ಉದ್ಗ್ರಂಥ ‘ರಾಗನಿಧಿ’, ಉತ್ತರಾದಿ-ದಕ್ಷಿಣಾದಿ ಎರಡು ಸಂಗೀತ ಪದ್ಧತಿಗಳಲ್ಲೂ ಅನೇಕ ಕೃತಿಗಳನ್ನು ರಚಿಸಿರುವ ಸುಬ್ಬರಾಯರು, ಎರಡು ವಿಭಿನ್ನ ಪದ್ಧತಿಗಳನ್ನು ಸಮನ್ವಯಗೊಳಿಸುವಂಥ ಹಲವು ಪ್ರಯತ್ನಗಳನ್ನೂ ನಡೆಸಿದ್ದಾರೆ. ಆಕಾಶವಾಣಿಯ ರಾಷ್ಟ್ರಮಟ್ಟದ ಕಾರ್ಯಕ್ರಮಗಳಲ್ಲಿ ಸಂಗೀತ ತಜ್ಞರಾಗಿ ವಿವಿಧ ಜವಾಬ್ದಾರಿಗಳನ್ನೂ ನಿರ್ವಹಿಸಿದ್ದಾರೆ.

ಬಸವಾಪಟ್ಟಣ ಸುಬ್ಬರಾಯರನ್ನು ಮನೆಯಲ್ಲಿ ಪ್ರೀತಿ-ಸಲುಗೆಗಳಿಂದ ಕರೆಯುತ್ತಿದ್ದ ಹೆಸರು ‘ಶ್ಯಾಮಣ್ಣಿ’. ಇವರ ತಂದೆ ಬಿ. ರಾಮಸ್ವಾಮಯ್ಯ ಹಾಗೂ ತಾಯಿ ವೆಂಕಟಲಕ್ಷ್ಮಮ್ಮ (ಅಮ್ಮಾಡಿ). ಕೌಶಿಕ ಸಂಕೇತಿ ಜನಾಂಗಕ್ಕೇ ಮೊದಲಿಗರಾಗಿ ಪದವೀಧರರಾದ್ದರಿಂದ ಬಿ.ಎ. ರಾಮಸ್ವಾಮಯ್ಯ ಎಂದು ಜನಪ್ರಿಯರಾಗಿದ್ದವರು. ಅರಣ್ಯ ಇಲಾಖೆಯಲ್ಲಿ ಜವಾಬ್ದಾರಿಯುತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ, ಕನ್ಸರ್ವೇಟರ್ ಆಫ್‌ ಫಾರೆಸ್ಟ್ಸ್ ಹುದ್ದೆಯಲ್ಲಿ ನಿವೃತ್ತರಾದರು. ಸಂಗೀತದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ರಾಮಸ್ವಾಮಯ್ಯನವರು ತಮ್ಮ ಊರಿನ ಸಾಂಸ್ಕೃತಿಕ ಚಟುವಟಿಕೆಗಳ ಮುಂದಾಳತ್ವ ವಹಿಸಿ, ಎಲ್ಲ ಸಂಗೀತಗಾರರ ಗೌರವ ಆದರಗಳಿಗೆ ಪಾತ್ರರಾಗಿದ್ದರು. ಹಿರಿಯ ಸಂಗೀತಗಾರರನ್ನು ತಮ್ಮ ಮನೆಯಲ್ಲೇ ಇರಿಸಿಕೊಂಡು ತಮ್ಮ ಎಲ್ಲ ಮಕ್ಕಳಿಗೂ ಸಂಗೀತ ಶಿಕ್ಷಣ ಕೊಡಿಸುವುದು ಹೀಗೆ ಮನೆಯಲ್ಲಿಯೇ ಇದ್ದ ವಿದ್ವಾಂಸರಿಂದ ಸಂಗೀತ ಕಚೇರಿಗಳನ್ನು, ಹರಿಕಥಾ ಕಾರ್ಯಕ್ರಮಗಳನ್ನು ಏರ್ಪಡಿಸುವುದು ರಾಮಸ್ವಾಮಯ್ಯನವರ ವೈಶಿಷ್ಟ್ಯ. ಇದರಿಂದ ಸಂಗೀತಗಾರರಿಗೆ ಪೋಷಣೆ ಲಭಿಸುವುದರ ಜೊತೆಗೆ ಮನೆಯ ಎಲ್ಲರಿಗೂ ಸಂಗೀತದ ಅಭಿರುಚಿ ಬೆಳೆಯಲು ಹಾಗೂ ಊರಿನವರಿಗೆಲ್ಲ ಒಳ್ಳೆಯ ಸಂಗೀತ ಕೇಳಲು ಅವಕಾಶ ಲಭಿಸುತ್ತಿತ್ತು. ಇಂತಹ ಸಹೃದಯತೆ ಇಂದು ಕಣ್ಮರೆಯಾಗಿರುವುದು ನಮ್ಮ ಸಾಂಸ್ಕೃತಿಕ ಇತಿಹಾಸದ ಒಂದು ವೈಚಿತ್ಯ್ರ.

ರಾಮಸ್ವಾಮಯ್ಯನವರ ಇಬ್ಬರು ಗಂಡುಮಕ್ಕಳಲ್ಲಿ ಕಿರಿಯರು ಸುಬ್ಬರಾಯರು. ಅಣ್ಣ ಲಕ್ಷ್ಮಣರಾಯರು ಕಲ್ಕತ್ತಾ ವಿಶ್ವವಿದ್ಯಾನಿಲಯದ ಗಣಿತಶಾಸ್ತ್ರದ ಎಂ.ಎ. ಪದವಿಯಲ್ಲಿ ಮೊದಲಿಗರಾಗಿ ಆಡಳಿತ ತರಬೇತಿಗಾಗಿ ಕರ್ನಾಟಕ ಸರ್ಕಾರದ ವತಿಯಿಂದ ಲಂಡನ್ನಿಗೆ ತೆರಳಿದವರು ಕಾರಣಾಂತರಗಳಿಂದ ಹಿಂದಿರುಗಲಿಲ್ಲ. ಸುಬ್ಬರಾಯರಿಗೆ ನಾಲ್ವರು ಸಹೋದರಿಯರು

೧೮೯೪ರಲ್ಲಿ ಜನಿಸಿದ ಸುಬ್ಬರಾಯರು ಚಿಕ್ಕಂದಿನಿಂದಲೇ ಹಲವಾರು ವಿಷಯಗಳಲ್ಲಿ ಆಸಕ್ತಿ ಉಳ್ಳ, ಅಪಾರ ಚಟುವಟಿಕೆಯ ತುಂಟ ಹುಡುಗನೆನಿಸಿದ್ದರು. ನೋಡಲು ಸಣಕಲಾಗಿದ್ದರೂ ಅವರಲ್ಲಿ ಶಕ್ತಿ ಉತ್ಸಾಹಗಳಿಗೇನೂ ಕೊರತೆಯಿರಲಿಲ್ಲ. ಈಜುವುದರಲ್ಲಿ ಮತ್ತು ಕ್ರೀಡೆಗಳಲ್ಲಿ ಆಸಕ್ತರಾಗಿದ್ದ ಸುಬ್ಬರಾಯರಿಗೆ ಕ್ರಿಕೆಟ್‌, ಫುಟ್‌ಬಾಲ್‌ ಹಾಗೂ ಟೆನ್ನಿಸ್‌ ಆಟಗಳಲ್ಲಿ ಹೆಚ್ಚಿನ ಪರಿಶ್ರಮವಿತ್ತು. ಸರ್ಕಾರಿ ಉದ್ಯೋಗದಲ್ಲಿದ್ದ ಅವರ ತಂದೆಯವರ ವರ್ಗಾವಣೆಗಳಿಂದಾಗ ಸುಬ್ಬರಾಯರ ಶಾಲಾ ಶಿಕ್ಷಣ ಕೋಲಾರ, ಚಿತ್ರದುರ್ಗ, ಮೈಸೂರು, ಬೆಂಗಳೂರು ಹೀಗೆ ಹಲವೆಡೆಗಳಲ್ಲಿ ನಡೆಯಿತು. ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದ ಚಿಕ್ಕರಾಮರಾಯರು ಸುಬ್ಬರಾಯರ ಸಹಪಾಠಿಗಳಾಗಿದ್ದರು. ದೂರದ ನಾಗಪುರದ ಕೃಷಿ ವಿಜ್ಞಾನ ಕಾಲೇಜಿನಲ್ಲಿ ಅಭ್ಯಾಸಿಸಲೆಂದು ೧೯೧೪ರಲ್ಲಿ ಮಧ್ಯಪ್ರದೇಶಕ್ಕೆ ತೆರಳಿದ ಸುಬ್ಬರಾಯರು ಮುಂದೆ ಅದೇ ಕಾಲೇಜಿನಲ್ಲಿ ಸುಮರು ಇಪ್ಪತ್ತು ವರ್ಷಗಳು ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಸುಬ್ಬರಾಯರ ಹಲವು ಆಸಕ್ತಿಗಳು ಮೊಳೆತು ಚಿಗುರೊಡೆಯಲು ನಾಗಪುರ ಅವಕಾಶ ಮಾಡಿಕೊಟ್ಟಿತು. ವಿದ್ಯಾರ್ಥಿ ದೆಸೆಯಲ್ಲಿದ್ದಾಗ ಟೆನ್ನಿಸ್‌ ಛಾಂಪಿಯನ್‌ ಆಗಿಯೂ ಕ್ರಿಕೆಟ್‌ನಲ್ಲಿ ವಿಕೆಟ್‌ ಕೀಪರ್ ಆಗಿಯೂ ಹೆಸರುಗಳಿಸಿದ್ದರು. ಶಿಕ್ಷಣ, ಆಟಗಳಲ್ಲಿ, ಸಾಮಾಜಿಕ ಕಾರ್ಯಶೀಲತೆ ಇವೆಲ್ಲದರಲ್ಲೂ ಅಸಾಮಾನ್ಯರಾದವರಿಗೆಂದು ಮಿಸಲಾದ ಪ್ರತಿಷ್ಠಿತ ‘ಕಾರೊನೇಶನ್‌ ಮೆಡಲ್‌’ ೧೯೧೭ರಲ್ಲಿ ಸುಬ್ಬರಾಯರನ್ನು ಅಲಂಕರಿಸಿತು. ಕ್ರೀಡಾಚಟುವಟಿಕೆಗಳು ಸಂಗೀತ ಸಾಧನೆಗೆ ಅವಶ್ಯವಾದ ದೇಹದಾರ್ಢ್ಯವನ್ನು ತಮಗೆ ಒದಗಿಸಿದವೆಂದು ಸುಬ್ಬರಾಯರು ಹೇಳಿಕೊಂಡಿದ್ದಾರೆ. ಅಧ್ಯಾಪಕರಾಗಿದ್ದ ಕಾಲದಲ್ಲಿ ಅನೇಕ ವರ್ಷಗಳು ಅಲ್ಲಿದ್ದ ಕ್ರೀಡಾಚಟುವಟಿಕೆಯ ವ್ಯವಸ್ಥೆಯ ಜವಾಬ್ದಾರಿಯನ್ನು ಸುಬ್ಬರಾಯರು ನಿರ್ವಹಿಸಿದರು. ಕೃಷಿ ವಿಜ್ಞಾನದ ಒಂದು ಅಂಗವಾದ ‘ಆಗ್ರೋನೋಮಿ’ಯಲ್ಲಿ ನಿಪುಣರೆಂದು ಖ್ಯಾತಿಗಳಿಸಿದ್ದರು. ಮುಂದೆ ಕೃಷಿ ಇಲಾಖೆಯ ಇತರ ಹುದ್ದೆಗಳಲ್ಲಿ ಹೊಶಂಗಾಬಾದ್‌ ಪ್ರಾಂತ್ಯದ ಅಮರಾವತಿಯಲ್ಲಿ ಹಾಗೂ ನಾಗಪುರದಲ್ಲಿ ಸೇವೆ ಸಲ್ಲಿಸಿ, ಕೃಷಿ ಇಲಾಖೆಯ ಡೆಪ್ಯುಟಿ ಡೈರೆಕ್ಟರ್ ಸ್ಥಾನದಲ್ಲಿ ನಿವೃತ್ತರಾದರು. ‘ಪುಸಾ’ ಹೊಗೆಸೊಪ್ಪು ಬೆಳೆ ಸಂಶೋಧನೆಯಲ್ಲೂ ಪಾಲ್ಗೊಂಡಿದ್ದರು. ಸರ್ಕಾರಿ ಸೇವೆಯಲ್ಲಿ ಉತ್ತಮ ಕಾರ್ಯನಿರ್ವಹಣೆಗಾಗಿ ಸುಬ್ಬರಾಯರು ಪ್ರಶಂಸೆ ಗಳಿಸಿದ್ದರು.

ನೇರ ನಿಲುವಿನ ನೇರ ದೃಷ್ಟಿಯ ಎತ್ತರದ ವ್ಯಕ್ತಿ ಸುಬ್ಬರಾಯರು ಉದ್ಯೋಗದಿಂದ ನಿವೃತ್ತರಾಗಿ ಮೈಸೂರಿನಲ್ಲಿ ನೆಲೆಸಿದ ನಂತರ ಇವರ ವೇಷ ಶುಭ್ರ ಬಿಳಿಯ ಕಚ್ಚೆಪಂಚೆ, ಕ್ಲೋಸ್‌ ಕಾಲರ್ ಕೋಟು ಹಾಗೂ ಕಪ್ಪುಟೋಪಿ. ಯಾವ ವಿಷಯದಲ್ಲೇ ಆದರೂ ಅವರ ಅಭಿಪ್ರಾಯ ಸ್ಪಷ್ಟವಾದದ್ದು ಹಾಗೂ ದೃಢವಾದದ್ದು, ಸುಲಭವಾಗಿ ಸೋಲೊಪ್ಪುತ್ತಿರಲಿಲ್ಲ. ಆದರೆ ತಮ್ಮ ಅಭಿಪ್ರಾಐವನ್ನೂ ಎತ್ತಿ ಹಿಡಿಯಲೆಂದು ವಿತಂಡವಾದಕ್ಕೆ ಎಂದೂ ಇಳಿದವರಲ್ಲ. ದೇಶ ಸುತ್ತಿ ಗಳಿಸಿದ್ದ ವಿಶಾಲ ಮನೋಭಾವ, ವೈಜ್ಞಾನಿಕ ದೃಷ್ಟಿ, ಚುರುಕಾದ ಬುದ್ಧಿಶಕ್ತಿಯಿಂದ ಒದಗಿದ ನಿಖರತೆ, ಭಾಷೆಯ ಮೇಲೆ ಹಿಡಿತ ಹಾಗೂ ನಿರರ್ಗಳತೆ ಇವು ಸಾಮಾಜಿಕ ಜೀವನದಲ್ಲಿ, ಅದರಲ್ಲೂ ಸಂಗೀತಕ್ಕೆ ಸಂಬಂಧಿಸಿದ ವಿದ್ವತ್‌ ಸಭೆ ವಿಚಾರ ಸಂಕಿರಣಗಳಲ್ಲಿ ಕಂಡು ಬರುತ್ತಿದ್ದ ಸುಬ್ಬನರಾಯರ ವ್ಯಕ್ತಿ ವಿಶೇಷಗಳಾಗಿದ್ದವು.

ಸಾಮಾಜಿಕ ಜೀವನದಲ್ಲಿ ಯಾರ ಮುಲಾಜಿಗೂ ಸಿಗದೆ, ಏನನ್ನೂ ಬಯಸದೆ ನೇರವಾಗಿ, ಕಠಿಣವಾಗಿ ತೋರುತ್ತಿದ್ದ ಸುಬ್ಬರಾಯರು ವೈಯುಕ್ತಿಕ ಸಂಬಂಧಗಳಲ್ಲಿ ಅತ್ಯಂತ ಸ್ನೇಹಪರರರೂ, ಸರಳರೂ ಆಗಿದ್ದರು. ಯಾವ ಕೃತ್ರಿಮವನ್ನೂ ಅರಿಯದೆ, ಯಾರ ಗೋಜಿಗೂ ಹೋಗದೆ, ಮನೆಯ ಜವಾಬ್ದಾರಿಯನ್ನೆಲ್ಲ ಪತ್ನಿ ರಾಜಮ್ಮನವರ ಪಾಲಿಗೆ ಬಿಟ್ಟು, ತಾವು ತಮ್ಮ ಸಂಗೀತ ಪ್ರಪಂಚದಲ್ಲಿ ದಿನವೆಲ್ಲ ಮುಳುಗಿರುತ್ತಿದ್ದರು. ಸುಬ್ಬರಾಯರ ಪತ್ನಿ ರಾಜಮ್ಮ ಸಂಗೀತದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು, ವೀಣೆ, ಹಾರ್ಮೋನಿಯಂ ಹಾಗೂ ತಬಲ ವಾದ್ಯಗಳನ್ನು ನುಡಿಸಬಲ್ಲವರಾಗಿದ್ದರು. ಸ್ವಂತ ಮಕ್ಕಳಿಲ್ಲ ಎನ್ನುವುದು ಎಂದೂ ಈ ದಂಪತಿಗಳನ್ನು ಬಾಧಿಸಲಿಲ್ಲ ಸಂಗೀತ ಕಲಿಯಲೆಂದು ಬರುತ್ತಿದ್ದ ಕೆಲವು ವಿದ್ಯಾರ್ಥಿಗಳು ಹಾಗೂ ಸೋದರ ಸಂಬಂಧಿ ಮಕ್ಕಳು ಇವರ ಮನೆ ಮನಗಳನ್ನು ತುಂಬಿದ್ದರು. ಅರಸಿ ಬಂದ ಕೆಲವು ವಿದ್ಯಾರ್ಥಿಗಳಿಗೆ ಸುಬ್ಬರಾಯರು ಪ್ರೀತಿಯಿಂದ ಧಾರಾಳವಾಗಿ ತಮ್ಮ ಸಂಗೀತ ಜ್ಞಾನವನ್ನು ಧಾರೆಯೆರೆಯುತ್ತಿದ್ದರು. ಆ ವಿದ್ಯಾರ್ಥಿಗಳಿಂದ ಯಾವುದೇ ಶುಲ್ಕ ತೆಗೆದುಕೊಳ್ಳುತ್ತಿರಲಿಲ್ಲ. ಅವರು ಮೈಸೂರಿನಲ್ಲಿ ಕಳೆದ ನಿವೃತ್ತಿಯ ವರ್ಷಗಳಲ್ಲಂತೂ ದಿನಕ್ಕೆ ಸುಮೃಉ ೧೦-೧೨ ಗಂಟೆಗಳ ಕಾಲ ಸಂಗೀತಕ್ಕಾಗಿಯೇ ಮೀಸಲಾಗಿದ್ದವು. ಹಾಡುತ್ತಾ, ಪಿಟೀಲು ನುಡಿಸುತ್ತಾ, ಗೋಟುವಾದ್ಯ ನುಡಿಸುತ್ತಾ ಸಂಗೀತದಲ್ಲಿ ತೊಡಗಿರುತ್ತಿದ್ದರು. ಮನೆಗೆ ಬರುತ್ತಿದ್ದ ಇತರ ಸಂಗೀತ ತಜ್ಞರೊಡನೆ ಸಂಗೀತ ವಿಷಯಕ ಚರ್ಚೆಗಳು, ಕೃತಿ ರಚನೆ, ಸಂಗೀತಕ್ಕೆ ಸಂಬಂಧಿಸಿದ ಅಧ್ಯಯನ ಇಲ್ಲವೇ ಬರವಣಿಗೆ ಹೀಗೆ ಇನ್ನಷ್ಟು ಕಾಲ ವಿನಿಯೋಗವಾಗುತ್ತಿತ್ತು. ಬೇರೆಲ್ಲ ಕೆಲಸಗಳ ನಡುವೆಯೂ ಸಂಗೀತ ಕೃತಿಗಳನ್ನು ಶಿಳ್ಳೆ ಹಾಕುತ್ತಲೇ ಇರುತ್ತಿದ್ದರು.

ಕ್ರೀಡಾಮೈದಾನದಲ್ಲಿ, ಸದಾ ಹಲವಾರು ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿದ್ದು, ಬೆಳೆಸಿಕೊಂಡ ದೇಹದಾರ್ಢ್ಯ, ಅವರ ಬದುಕಿನ್ನುದ್ದಕ್ಕೂ ಅವರಿಗೆ ಒಳ್ಳೆ ಆರೋಗ್ಯವನ್ನು ಕೊಟ್ಟಿತು. ಎಂಭತ್ತೊಂದು ವರ್ಷಗಳ ಫಲಕಾರಿಯಾದ ಪೂರ್ಣ ಬದುಕನ್ನು ಬಾಳಿ ೧೯೭೫ರ ಕೊನೆಯಲ್ಲಿ ಸುಬ್ಬರಾಯರು ಹೈದರಾಬಾದಿನಲ್ಲಿ ಕೊನೆಯುಸಿರೆಳೆದರು. ಯಾರಿಗೆ ತೊಂದರೆ ಕೊಡದ ನರಳಾಟವಿಲ್ಲದ, ರೀತಿಯಲ್ಲಿ ನಿದ್ರೆಯಲ್ಲಿಯೇ ಅನಂತದೊಂದಿಗೆ ಒಂದಾಗಬೇಕೆಂದು ಸುಬ್ಬರಾಯರು ಮತ್ತೆ ಮತ್ತೆ ಹೇಳುತ್ತಿದ್ದ ರೀತಿಯಲ್ಲೇ ಅವರ ಬಾಳು ಮುಕ್ತಾಯಗೊಂಡಿತು. ಸಾವು ತೀರ ಸಮೀಪವಾಗಿದ್ದಾಗಲೂ ಸಂಗೀತದ ಹುಚ್ಚು ಅವರನ್ನು ಬಿಟ್ಟಿರಲಿಲ್ಲ. ತಮ್ಮ ಮಂದವಾದ ಕಿವಿಗಳಿಂದ ಸಂಗೀತವನ್ನು ಕೇಳುವುದು ಹೇಗೆ ಎಂಬ ಸಮಸ್ಯೆಗೆ ವೈಜ್ಞಾನಿಕ ಉತ್ತರವನ್ನು ಅರಸುತ್ತಿದ್ದರು ಅವರು.

ತಮ್ಮ.ಸುದೀರ್ಘ ಬದುಕಿನುದ್ದಕ್ಕೂ ಭಾರತೀಯ ಸಂಗೀತದ ವೈವಿಧ್ಯ-ವೈಶಿಷ್ಟ್ಯಗಳ ಬಗ್ಗೆ ಆಳ ವಿಸ್ತಾರಗಳ ಬಗ್ಗೆ ಅಚ್ಚರಿ ಕುತೂಹಲಗಳನ್ನು ಉಳಿಸಿಕೊಂಡಿದ್ದು, ಸದಾಕಾಲವೂ ಸಂಗೀತದ ಹುಚ್ಚಿನಲ್ಲೇ ಮುಳುಗಿರುತ್ತಿದ್ದ ಸುಬ್ಬರಾಯರ ಮತ್ತು ಸಂಗೀತದ ಸಂಬಂಧದ ಘಟ್ಟಗಳನ್ನು ಗುರುತಿಸುವುದು ಅತಿ ಕಷ್ಟವಾದ ಕೆಲಸ. ಅವರ ಸಂಗೀತ ಶಿಕ್ಷಣದಲ್ಲಿ ಹಲವು ಗುರುಗಳಿಂದ ಅವರು ಕಲಿತದ್ದನ್ನು ಮೀರಿಸುವಂಥದ್ದು ಅವರೇ ಸ್ವಪ್ರಯತ್ನದಿಂದ, ಕೇಳಿ, ನೋಡಿ ಕಲಿತ ಭಾಗ. ಹಾಗೆಯೇ ಅವರು ಸಂಗೀತ ಪ್ರಪಂಚದಲ್ಲಿ ಸಾಧಿಸಿದ್ದು ಏನು ಎನ್ನುವುದನ್ನೂ ಇಷ್ಟೇ ಎಂದೂ ನಿಖರವಾಗಿ ಹೇಳಲಾಗುವುದಿಲ್ಲ. ಅವರ ಹಾಡುಗಾರಿಕೆ, ಅವರ ವಾದ್ಯ ನೈಪುಣ್ಯ, ಅವರು ರಚಿಸಿದ ಸಂಗೀತ ಕೃತಿಗಳು, ಅವರು ರಚಿಸಿದ ‘ರಾಗನಿಧಿ’ ಇವುಗಳನ್ನು ಪಟ್ಟಿಮಾಡುವುದು ಸಾಧ್ಯ. ಆದರೆ ಅಪರೂಪದ ಲೋಕಾನುಭವ, ಹೃದಯ ವೈಶಾಲ್ಯಗಳಿಂದ, ಅಮಿತವಾದ ಶ್ರದ್ಧೆ ಆಸಕ್ತಿಗಳಿಂದ, ಬೇಸರವರಿಯದ ಸಾಧನೆಯಿಂದ ಅವರು ಬೆಳೆಸಿಕೊಂಡಿದ್ದ ಸಂಗೀತಗಾರನ ವೈಕ್ತಿತ್ವ ಸಂಗೀತಲೋಕಕ್ಕೆ ಮಾದರಿಯಾಗಿದ್ದು ಇದರ ಬೆಲೆಕಟ್ಟುವುದು ಎಂದೂ ಸಾಧ್ಯವಿಲ್ಲ. ತಮ್ಮ ವೈಜ್ಞಾನಿಕ ದೃಷ್ಟಿ ದಿಟ್ಟವಾದ ಅಭಿಪ್ರಾಯಗಳಿಂದ ಸಂಗೀತ ಸಂಬಂಧಿ ವಿಚಾರಗೋಷ್ಠಿಗಳಿಗೆ ಅವರು ನೀಡುತ್ತಿದ್ದ ಘನತೆ, ತಮ್ಮ ಸನಿಯಹಕ್ಕೆ ಬಂದವರಲ್ಲೆಲ್ಲಾ ಅವರು ಮೂಡಿಸುತ್ತಿದ್ದ ಸಂಗೀತದ ಕುತೂಹಲ. ಯಾವಾಗಲೂ ಅವರನ್ನೂ ಆವರಿಸಿ ಕಂಪು ಬೀರುತ್ತಿದ್ದ ನಿಷ್ಕಪಟ ಸಹೃದಯತೆ ಇವು ಅವರ ಇತರ ಸಾಧನೆಗಳಷ್ಟೇ ಸಂಗೀತ ಲೋಕಕ್ಕೆ ಅಮೂಲ್ಯವಾಗಿವೆ.

ಸಂಗೀತದೊಂದಿಗೆ ಸುಬ್ಬರಾಯರ ಒಡನಾಟ ಅವರ ಬಾಲ್ಯಾವಸ್ಥೆಯಲ್ಲೇ ಪ್ರಾರಂಭವಾಯಿತು. ಅವರ ಸಂಗೀತ ಶಿಕ್ಷಣದ ಮಾರ್ಗ ವೈವಿಧ್ಯ ಪೂರ್ಣವಾದದ್ದು. ಹಿರಿಯ ಸಂಗೀತ ವಿದ್ವಾಂಸರಿಗೆ ಹಲವು ವರ್ಷಗಳ ಕಾಲ ತಮ್ಮ ಮನೆಯಲ್ಲೇ ಆಶ್ರಯಕೊಟ್ಟು ಇರಿಸಿಕೊಳ್ಳುವುದು ಇವರ ಮನೆಯ ಒಂದು ಪರಿಪಾಠ. ಅಂತಹ ಸಂಗೀತಗಾರರು (ಕೆಲವು ಸಂದರ್ಭಗಳಲ್ಲಿ ದಂಪತಿಗಳು) ಇವರ ಮನೆಯ ಸದಸ್ಯರಾಗಿಯೇ ಇದ್ದು, ಮನೆಯ ಮಕ್ಕಳಿಗೆ ಸಂಗೀತ ಶಿಕ್ಷಣ ನೀಡುವುದು. ಅವರ ಸಂಗೀತಾಭ್ಯಾಸದ ಮೇಲ್ವಿಚಾರಣೆ ನೋಡುವುದು, ಆಗೊಮ್ಮೆ ಈಗೊಮ್ಮೆ ಆಹ್ವನಿತರ ಸಮ್ಮುಖದಲ್ಲಿ ಕಚೇರಿ ಹಾಡುವುದು. ಈ ರೀತಿ ಕಾರ್ಯನಿರತರಾಗಿರುತ್ತಿದ್ದರು. ಹೀಗೆ ಸಂಗೀತ ಕಲಿಸಲೆಂದು ಬಂದವರ ಪಕ್ಕವಾದ್ಯಕ್ಕೆಂದು, ಜೊತೆಗೆ, ಪಿಟೀಲು ವಾದಕರನ್ನೂ ಪರ ಊರಿನಿಂದ ಕರೆಸಿಕೊಂಡು ತಮ್ಮಲ್ಲೇ ಇರಿಸಿಕೊಳ್ಳುತ್ತಿದ್ದುದೂ ಉಂಟು. ಕೆಲವು ಸಂಗೀತಗಾರರು ಹರಿಕಥೆಗಳನ್ನು ನಡೆಸುತ್ತಿದ್ದರು. ಉದ್ಯೋಗ ನಿಮಿತ್ತ ಪ್ರವಾಸದಲ್ಲಿ ತೊಡಗಿರುತ್ತಿದ್ದ ರಾಮಸ್ವಾಮಯ್ಯನವರು ಸ್ವಂತ ಊರಿನಲ್ಲಿ ಉಳಿದ ದಿನಗಳಲ್ಲಿ ಇಂತಹ ಕಚೇರಿ ಹರಿಕಥೆಗಳು ನಡೆಯುತ್ತಿದ್ದವು. ಇಂತಹ ವಾತಾವರಣದಲ್ಲಿ ಮನೆಯ ಎಲ್ಲರೂ ಸಂಗೀತದ ಆಕರ್ಷಣೆಗೆ ಗುರಿಯಾಗುವುದು ಅನಿವಾರ್ಯವೇ ಆಗಿತ್ತು. ಸುಬ್ಬರಾಯರು ತಾವೇ ಗುರುಮುಖೇನ ಸಂಗೀತ ಶಿಕ್ಷಣ ಪಡೆದಿದ್ದರು. ಜೊತೆಗೆ ಸಹೋದರಿಯರ ಸಂಗೀತಾಭ್ಯಾಸವನ್ನು ಕೇಳಿಯೂ ಬಹಳಷ್ಟು ಕಲಿತರು. ಇವರ ಮೊದಲ ಗುರು ವೈಣಿಕ ವಿದ್ವಾಣ್‌ ವಿಶ್ವನಾಥ ಶಾಸ್ತ್ರಿಗಳು. ಮಹಾವೈದ್ಯನಾಥ ಅಯ್ಯರ್ ಅವರ ನೇರ ಶಿಷ್ಯರಾದ ಈ ಶಾಸ್ತ್ರಿಗಳು ಕೋಲರ, ಮಾಲೂರು, ಚಿತ್ರದುರ್ಗದಲ್ಲಿ ಅನೇಕ ವರ್ಷ ಸುಬ್ಬರಾಯರ ಮನೆಯಲ್ಲೇ ಇದ್ದರು. ಇವರ ಸುಬ್ಬರಾಯರಲ್ಲಿ ನಿಖರವಾದ ಸ್ವರಜ್ಞಾನ ಮೂಡಿಸಿದರು. ಇವರ ತಾನವಾದನ ಕ್ರಮ ವಿಶಿಷ್ವವಾಗಿತ್ತು. ತಮ್ಮ ಗುರುಗಳ ಮೇರು ರಚನೆಯಾದ ಎಪ್ಪತ್ತೆರಡು ಮೇಳಕರ್ತರಾಗಗಳ ರಾಗಮಾಲಿಕೆಯನ್ನು ತಮ್ಮ ಶಿಷ್ಯರಿಗೆ ಇವರು ಕಲಿಸಿಕೊಟ್ಟರು. ಪಕ್ಕವಾದ್ಯಕ್ಕೆಂದೇ ಬಂದ ಪಿಟೀಲು ವಿದ್ವಾಂಸರಾದ ಗೋಪಾಲಯ್ಯನವರು ಹಾಡುಗಾರಿಕೆಯ ಅಭ್ಯಾಸದ ಮೇಲ್ವಿಚಾರಣೆ ಮಾಡುತ್ತಿದ್ದರು. ಬೆಂಗಳೂರಿನಲ್ಲಿ ಪೆನುಕೊಂಡ ನರಸಿಂಹಾಚಾರಿ ಎನ್ನುವ ವಿದ್ವಾಂಶರು ಸುಬ್ಬರಾಯರ ಸೋದರಿಯರಿಗೆ ಗುರುವೆಂದು ನೇಮಕಗೊಂಡಿದ್ದರು. ಆ ಪಾಠ ನಡೆಯುವಾಗ ಕೇಳ್ಮೆಯಿಂದಲೇ ಹಲವು ಮೇರುಕೃತಿಗಳನ್ನು ಸುಬ್ಬರಾಯರು ಕಲಿತರು.

ನಾಗಪುರಕ್ಕೆ ವಿದ್ಯಾರ್ಥಿಯಾಗಿ ತೆರಳಿದ ಸುಬ್ಬರಾಯರು ಬೀದಿಯಲ್ಲಿ ನಡೆದು ಹೋಗುತ್ತಿದ್ದಾಗ ಹಿಂದುಸ್ತಾನಿ ಹಾಡುಗಾರಿಕೆಯ ಶಿಕ್ಷಣ ನಡೆಯುತ್ತಿದ್ದುದು ಕೇಳಿ ಬಂದು, ಅಲ್ಲಿ ಅವರಿಗೆ ಪಂಡಿತ ದಿನಕರರಾವ್‌ ಪಟವರ್ಧನ್‌ ಅವರ ಪರಿಚಯವಾಯಿತು. ಅವರು ಸುಬ್ಬರಾಯರ ಕರ್ನಾಟಕ ಸಂಗೀತವನ್ನೂ ಮೆಚ್ಚಿಕೊಂಡು, ಇಬ್ಬರೂ ಪರಸ್ಪರರಿಗೆ ಸಂಗೀತ ಕಲಿಸಿದರು. ಅವರಿಬ್ಬರ ಸ್ನೇಹ ಅನೇಕ ವರ್ಷಗಳ ಕಾಲ ನಡೆಯಿತು. ಪಂಡಿತ ವಾವನರಾವ್‌ ಜೋಷಿ ಕೆಲವಾರು ಕೃತಿಗಳನ್ನು ಸ್ವರಪ್ರಸ್ತಾರ ಸಹಿತ ಸುಬ್ಬರಾಯರಿಗೆ ಕಲಿಸಿಕೊಟ್ಟರು. ಅಮರಾವತಿಯಲ್ಲಿ ತಮ್ಮೊಡನೆ ಸುಮಾರು ಎರಡು ವರ್ಷಗಳ ಕಾಲವಿದ್ದ ಪಂಡಿತ ಬಾಂಡಕರ್‌ ಅವರಿಂದ ಸುಬ್ಬರಾಯರು ಅನೇಕ ಹಿಂದಿ ಮತ್ತು ಮರಾಠಿ ರಂಗಗೀತೆಗಳು, ಖ್ಯಾಲ್‌ಗಳು, ಠುಮ್ರಿಗಳನ್ನು ಕಲಿತರು. ರಂಗಸಂಗೀತ ಸುಬ್ಬರಾಯರ ವಿದ್ಯಾರ್ಥಿದೆಸೆಯಿಂದಲೇ ಅವರನ್ನು ಆಕರ್ಷಿಸಿತ್ತು. ಅಂದಿನ ಮರಾಠೀ ರಂಗಭೂಮಿಯಲ್ಲಿ ಅನೇಕ ಪ್ರಖ್ಯಾತ ಸಂಗೀತಗಾರರಿದ್ದು, ಮರಾಠೀ ರಂಗಸಂಗೀತವು ಪರಿಚಿತ ಶಾಸ್ತ್ರೀಯ, ಹಿಂದೂಸ್ತಾನಿ ಕೃತಿಗಳನ್ನೂ ಕೆಲವೊಮ್ಮೆ ಕರ್ನಾಟಕ ಕೃತಿಗಳನ್ನು ಅನುಸರಿಸುತ್ತಿತ್ತು. ಶಿಕ್ಷಣಕ್ಕೆಂದು ನಾಗಪುರಕ್ಕೆ ಹೋದ ಸುಬ್ಬರಾಯರು ತಮ್ಮ ವಿದ್ಯಾರ್ಥಿದೆಸೆಯಲ್ಲಿಯೇ ಬಾಲಗಂಧರ್ವರ ನಾಟಕಗಳಿಂದ ತುಂಬಾ ಆಕರ್ಷಿತರಾದರು. ತಮ್ಮ ವಿದ್ಯಾರ್ಥಿನಿಲಯದಿಂದ ಮೂರು ಮೈಲಿ ನಡೆದು ಹೋಗಿ ನಾಟಕ ನೋಡಿ ಅರ್ಧರಾತ್ರಿಯಲ್ಲಿ ನಡೆದು ಹಿಂದಿರುಗುತ್ತಿದ್ದರಂತೆ. ಆಯಾ ನಾಟಕದ ಹಾಡುಗಳನ್ನು ಸ್ವರಪ್ರಸ್ತಾರದೊಂದಿಗೆ ಛಾಪಿಸಿ ಮಾರುವ ವಾಡಿಕೆಯಿದ್ದು ಅವುಗಳ ಸಹಾಯದಿಂದ ರಂಗಗೀತೆಗಳನ್ನು ಸುಲಭವಗಿ ಕಲಿತ ಸುಬ್ಬರಾಯರು ಹಿಂದಿರುಗಿ ಬರುವಾಗಲೇ ಅಂದಿನ ಹಾಡುಗಳನ್ನು ಹಾಡಿ ತಮ್ಮ ಗೆಳೆಯರನ್ನು ರಂಜಿಸುತ್ತಿದ್ದರು. ಹೀಗೆ ಅನೇಕ ರಂಗಗೀತೆಗಳನ್ನು ಅವರು ಕಲಿತರು.

ಹೀಗೆ ಹಲವು ಗುರುಗಳಿಂದ ಗಾಯನವನ್ನು ಕಲಿತ ಸುಬ್ಬರಾಯರು ವಾದ್ಯಸಂಗೀತವನ್ನು ರೂಢಿಸಿಕೊಂಡದ್ದು ಸ್ವಪ್ರಯತ್ನದಿಂದಲೇ. ಶ್ರೇಷ್ಠ ಸಂಗೀತಗಾರರಾದ ಗೋವಿಂದಸ್ವಾಮಿ, ತಿರುಕ್ಕೋಡಿಕಾವಲ್‌ ಕೃಷ್ಣಅಯ್ಯರ್ ಮುಂತಾದವರ ಪಿಟೀಲು ವಾದನ ಸುಬ್ಬರಾಯರ ಮೇಲೆ ಅಗಾಧ ಪರಿಣಾಮ ಬೀರಿತು. ಮದ್ರಾಸಿನ ಮಧುರ ಸುಬ್ರಮಣಿ ಅಯ್ಯರ್ ನಾಗಪುರಕ್ಕೆ ಪದೇ ಪದೇ ಭೇಟಿಕೊಡುತ್ತಿದ್ದು. ಅವರು ಸುಬ್ಬರಾಯರಿಗೆ ಪಿಟೀಲು ವಾದನದ ಹಲವು ತಂತ್ರಗಳನ್ನು ತೋರಿಸಿಕೊಟ್ಟರಲ್ಲದೆ ತ್ಯಾಗರಾಜರ ಅನೇಕ ಕೃತಿಗಳನ್ನೂ ಕಲಿಸಿದರು.

ಹೀಗೆ ಬಾಲ್ಯದಿಂದಲೂ ಹತ್ತು ಹಲವು ಪ್ರಭಾವಗಳಿಗೆ ಮೈದೆರೆದುಕೊಂಡ ಸುಬ್ಬರಾಯರು ಕರ್ನಾಟಕ ಮತ್ತು ಹಿಂದುಸ್ತಾನಿ ಎರಡು ಪದ್ಧತಿಗಳ ಸಂಗೀತದ ಲಕ್ಷ್ಯ ಲಕ್ಷಣಗಳಲ್ಲೂ ಉತ್ತಮ ಪರಿಶ್ರಮ ಹಾಗೂ ಅಪಾರ ಜ್ಞಾನ ಸಂಪಾದಿಸಿದರು. ಚಿಕ್ಕವಯಸ್ಸಿನಿಂದಲೇ ಸುಬ್ಬರಾಯರ ಸಂಗೀತ ಕೇಳುವವರ ಮೆಚ್ಚುಗೆ ಗಳಿಸಿತ್ತು. ಉದ್ಯೋಗದಲ್ಲಿದ್ದಾಗ ಪಿಟೀಲು ಹಾಗೂ ಗೋಟು ವಾದ್ಯ (ಹಿಂದುಸ್ತಾನಿ ವಿಚಿತ್ರ ವೀಣಾ)ಗಳ ಪರಿಶ್ರಮ ಹಾಗೂ ಸಂಗೀತಶಾಸ್ತ್ರದ ಜ್ಞಾನ ಸುಬ್ಬರಾಯರಿಗೆ ಖ್ಯಾತಿ ತಂದುಕೊಟ್ಟಿದ್ದವು. ಗಾಯನ, ಪಿಟೀಲು ವಾದನ, ಗೋಟುವಾದ್ಯ ಮೂರರಲ್ಲೂ ಕರ್ನಾಟಕ ಮತ್ತು ಹಿಂದುಸ್ತಾನಿ ಎರಡು ಸಂಗೀತ ಪದ್ಧತಿಗಳಲ್ಲೂ ವೇದಿಕೆಯ ಮೇಲೆ ಕಚೇರಿ ಮಾಡಬಲ್ಲವರಾಗಿದ್ದರು. ಆಕಾಶವಾಣಿಯ ಕಲಾವಿದರಾಗಿಯೂ ಸೇವೆ ಸಲ್ಲಿಸಿದರು. ಅನೇಕ ಶ್ರೇಷ್ಠ ಗಾಯಕರಿಗೆ ಪಿಟೀಲು ಪಕ್ಕವಾದ್ಯ ನುಡಿಸಿದ್ದರು. ಪ್ರೊ. ರತನ್‌ಜಂಕರ್ ಅವರ ಹಾಡುಗಾರಿಕೆಗೆ ಸುಬ್ಬರಾಯರು ಅನೇಕ ಬಾರಿ ಪಿಟೀಲು ಪಕ್ಕವಾದ್ಯ ನುಡಿಸಿದ್ದರು. ಮುಂಬಯಿಯ ಜಿ.ಎನ್‌.ಪಲುಸ್ಕರ್, ಗುರುರಾವ್‌ ದೇಶಪಾಂಡೆ, ಶ್ರೀಕೃಷ್ಣ ರತನ್‌ಜಂಕರ್ ಅವರಿಗೂ ವಾದ್ಯಸಹಕಾರ ನೀಡಿದ್ದರು. ತಮ್ಮ ತಂದೆಯವರ ಸಂಪ್ರದಾಯವನ್ನೇ ಮುಂದುವರೆಸಿ ಹಿಂದುಸ್ತಾನಿ ಹಾಗೂ ಕರ್ನಟಕದ ಸಂಗೀತಗಾರರಿಗೆ ಆಶ್ರಯ ನೀಡಿ ವಿವಿಧ ರೀತಿಗಳಲ್ಲಿ ಪ್ರೋತ್ಸಾಹಿಸುತ್ತಿದ್ದರು. ಕೃಷಿ ವಿಜ್ಞಾನ ಕಾಲೇಜಿನ ಹಾಸ್ಟಲ್‌ಗೆ ಸುಬ್ಬರಾಯರು ವಾರ್ಡನ್‌ ಆಗಿದ್ದ ಕಾಲದಲ್ಲಿ ಭೇಟಿ ನೀಡುವ ಸಂಗೀತಗಾರರಿಗೆಂದೇ ಒಂದು ಕೋಣೆ ಮೀಸಲಾಗಿತ್ತು.

ಸಂಗೀತ ಲೋಕಕ್ಕೆ ಸುಬ್ಬರಾಯರು ನೀಡಿರುವ ಒಂದು ಕೊಡುಗೆಯೆಂದರೆ ಹಿಂದುಸ್ತಾನಿ ಕರ್ನಾಟಕ ಇವೆರಡು ಪದ್ಧತಿಗಳ ಅನೇಕ ಶ್ರೇಷ್ಠ ಸಂಗೀತ ರಚನೆಗಳು. ಹಿಂಧುಸ್ತಾನಿ ಮತ್ತು ಕರ್ನಾಟಕ ಸಂಗೀತ ಪದ್ಧತಿಗಳೆರಡರಲ್ಲೂ ಇವರು ರಚಿಸಿರುವ ಕೃತಿಗಳ ವೈವಿಧ್ಯ ಹಾಗೂ ರಮಣೀಯತೆಯಲ್ಲಿ ಸುಬ್ಬರಾಯರ ಸಂಗೀತ ಜ್ಞಾನದ ಆಳ ಹಾಗೂ ಅವರ ಸೃಜನಶೀಲತೆ ಎದ್ದು ಕಾಣುತ್ತವೆ. ಹಿಂದಿ, ತೆಲುಗು, ಸಂಸ್ಕೃತ ಮೂರು ಭಾಷೆಗಳಲ್ಲೂ ವರ್ಣ, ಕೀರ್ತನೆ, ರಾಗಮಾಲಿಕೆ, ಭಜನ್‌ ಮುಂಥಾದವನ್ನು ರಚಿಸಿದ್ದಾರೆ. ಹಿಂದುಸ್ತಾನಿ ರಾಗಗಳಲ್ಲಿ ಕರ್ನಾಟಕ ಸಂಗೀತದಲ್ಲಿ ಕಂಡು ಬರುವ ವರ್ಣ, ಕೃತಿ ಮುಂತಾದ ಸಂಗೀತ ಪ್ರಕಾರಗಳನ್ನು ರಚಿಸಿದ್ದಾರೆ. ‘ದ್ವಿಗಾಂಧಾರ ಭೂಷಿಣಿ’ ಎನ್ನುವುದು ಸುಬ್ಬರಾಯರೇ ಸೃಜಿಸಿದ ಒಂದು ರಾಗವಾಗಿದೆ. ಸುಬ್ಬರಾಯರಲ್ಲಿದ್ದ ರಾಜಭಕ್ತಿ, ದೈವಭಕ್ತಿಗಳು ಅವರ ಕೃತಿಗಳಲ್ಲಿ ಒಡಮೂಡಿವೆ. ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ೫೫ನೇ ವರ್ಧಂತಿಯ ಸಂದರ್ಭದಲ್ಲಿ ‘ವಿನತಿ ಕರತ ಹೂಂ ಶಂಕರಾ’’ ಎಂಬ ಒಂಬತ್ತು ರಾಗಗಳ ನವರತ್ನ ರಾಗಮಾಲಿಕಾ ರಚಿಸಿದರು. ಆ ಮಹಾರಾಜರು ನಿಧನರಾದ ಸುದ್ದಿ ತಿಳಿದ ಕೂಡಲೇ ಮೂಡಿ ಬಂದ ಕೃತಿ “ಕೃಷ್ಣರಾಜಾ ಋಷಿರಾಜಾ” ಜೋಗಿಯಾ ರಾಗದಲ್ಲಿದೆ. ನಂತರ ಪಟ್ಟಕ್ಕೆ ಬಂದ ಶ್ರೀ ಜಯಚಾಮರಾಜ ಒಡೆಯರ್ ಅವರಿಗೆ ಶುಭ ಹಾರೈಸುವ ‘ಜಯ ಜಯ ಚಾಮರಾಜಾ’ ಐದು ಹಿಂದುಸ್ತಾನಿ ರಾಗಗಳನ್ನೊಳಗೊಂಡ ರಾಗಮಾಲಿಕೆಯಾಗಿದೆ. ಸುಬ್ಬರಾಯರ ಇನ್ನೊಂದು ಹಿಂದುಸ್ತಾನಿ ರಾಗಮಾಲಿಕೆ ಐದುರಾಗಗಳನ್ನೊಳಗೊಂಡಿದ್ದು, ಗಾಂಧೀಜಿಯವರ ಮಹಿಮೆಯನ್ನು ಇದು ಕೊಂಡಾಡುತ್ತದೆ. ಮಹಾರಾಜರ ಬಗ್ಗೆ ರಚಿಸಿರುವ ಕೃತಿಗಳನ್ನು ಸ್ವರಪ್ರಸ್ತಾರ ಸಹಿತ ಕಿರುಪುಸ್ತಕಗಳಾಗಿ ಪ್ರಕಟಿಸಲಾಗಿದ್ದರೂ ‘ಗಾಂಧೀಜಿ ಕಾ ಜೀವನಾದರ್ಶ’ ಮಾತ್ರ ಸ್ವರಪ್ರಸ್ತಾರವಿಲ್ಲದೆ ಕೇವಲ ಸಾಹಿತ್ಯ ರೂಪದಲ್ಲಿ ಬಿಡಿ ಹಾಳೆಯಲ್ಲಿ ಅಚ್ಚಾಗಿದೆ.

ವಿಶೇಷವೊಂದರಿಂದ ತೀವ್ರವಾಗಿ ಪ್ರಭಾವಿತರಾದ ಸುಬ್ಬರಾಯರು ಶಿರಡಿ ಬಾಬಾ ಅವರ ಭಕ್ತರಾಗಿದ್ದು ಶಿರಡಿ ಸಾಯಿಬಾಬಾ ಅಷ್ಟೋತ್ತರ ಶತನಾಮಗಳನ್ನು ಆಧರಿಸಿ ಹನ್ನೆರಡು ಕೀರ್ತನೆಗಳನ್ನು ರಚಿಸಿದ್ದಾರೆ. ಇವೆಲ್ಲ ಕರ್ನಾಟಕ ರಾಗಗಳಲ್ಲಿದ್ದು ಸಾಹಿತ್ಯ ದೇವನಾಗರಿ ಮತ್ತು ತಮಿಳಿನಲ್ಲೂ, ಸ್ವರ ಪ್ರಸ್ತಾರ ಕೇವಲ ದೇವನಾಗರಿಯಲ್ಲೂ ಇರುವಂತೆ ಕಿರು ಪುಸ್ತಕ ರೂಪದಲ್ಲಿ ಪ್ರಕಟವಾಗಿವೆ.

ಸಂಗೀತ ಶಾಸ್ತ್ರಜ್ಞರ ಪೈಕಿ ಸುಬ್ಬರಾಯರದ್ದು ಒಂದು ವಿಶಿಷ್ಟವಾದ ಸ್ಥಾನ. ಭಾರತೀಯ ಸಂಗೀತದ ಶಾಸ್ತ್ರಭಾಗವನ್ನು ಅವಲೋಕಿಸುವಾಗ ಅದಕ್ಕೆ ತಮ್ಮದೇ ಆದ ವಿಶೇಷ ವೈಚಾರಿಕ ಆಯಾಮಗಳನ್ನು ನೀಡಬಲ್ಲವರಾಗಿದ್ದರು. ಅವರ ವೈಜ್ಞಾನಿಕ ದೃಷ್ಠಿಕೋನ, ಲೋಕಾನುಭವ, ಭಾಷಾಪ್ರೌಢಿಮೆ, ಬುದ್ಧಿಮತ್ತೆ ಇವು ಅವರ ಚಿಂತನೆ, ಮಾತುಗಾರಿಕೆ, ಬರಹಗಳಲ್ಲಿ ಎದ್ದು ಕಾಣುತ್ತಿದ್ದವು. ಬೇರೊಂದು ಜವಾಬ್ದಾರಿಯುತ ಉದ್ಯೋಗದಲ್ಲಿದ್ದರೂ ಕೂಡ ಸಂಗೀತದ ಬಗ್ಗೆ ರಾಯರು ಹೊಂದಿದ್ದಕ ಶ್ರದ್ಧೆ. ನಿರಂತರವಾಗಿ ಸಂಗೀತದ ಲಕ್ಷ್ಯ ಲಕ್ಷಣಗಳೆರಡರಲ್ಲೂ ಅವರು ತೋರುತ್ತಿದ್ದ ಉತ್ಕಟವಾದ ಕುತೂಹಲಗಳು ಯಾವುದೇ ವೃತ್ತಿ ಸಂಗೀತಗಾರರನ್ನೂ ನಾಚಿಸುವಂಥವು. ಗುರುಭಕ್ತಿ, ಆಸಕ್ತಿ, ಶಕ್ತಿ ಇವೇ ತಮ್ಮ ಸಂಗೀತಸಾಧನೆಯ ಗುಟ್ಟು ಎಂದು ಅವರು ಹೇಳಿಕೊಂಡಿದ್ದಾರೆ. ಹೀಗೆ ತೀವ್ರ ಆಸಕ್ತಿ ಕುತೂಹಲಗಳಿಂದ ತಾವು ಕಂಡುಕೊಂಡಿದ್ದನ್ನು ಅತ್ಯಂತ ಶಿಸ್ತಿನಿಂದ ಕ್ರಮಬದ್ಧವಾಗಿ ದಾಖಲಾತಿ ಮಾಡುವ ಅವರ ಅಭ್ಯಾಸವೇ ‘ರಾಗನಿಧಿ’ ಎನ್ನುವ ಮೇರುಕೃತಿ ರಚನೆಗೆ ಅವಕಾಶ ಮಾಡಿಕೊಟ್ಟಿತು.

ತಮ್ಮ ಸ್ವಂತ ಉಪಯೋಗಕ್ಕೆಂದು ಅವರು ಕರ್ನಾಟಕ ಮತ್ತು ಹಿಂದುಸ್ತಾನಿ ರಾಗಗಳ ಲಕ್ಷಣಗಳನ್ನು ಪರಸ್ಪರ ಸಂಬಂಧಗಳನ್ನು ಗುರುತು ಹಾಕಿಟ್ಟುಕೊಳ್ಳುತ್ತಿದ್ದರು. ಇಂತಹ ವ್ಯವಸ್ಥಿತ ಟಿಪ್ಪಣಿಗಳೇ ಸಂಗೀತ ಕ್ಷೇತ್ರದ ಮಿತ್ರರ ಮತ್ತು ಅಭಿಮಾನಿಗಳ ಪ್ರೋತ್ಸಾಹದಿಂದಾಗಿ ಒಂದು ಉದ್ಗಂಥವಾಗಿ ರೂಪುಗೊಂಡವು. ನಾಲ್ಕು ಭಾಗಗಳಲ್ಲಿ ಈ ಗ್ರಂಥ ಪ್ರಕಟವಾಗಿದೆ. ಪೂನಾದ ವಿಷ್ಣುದಿಗಂಬರ್ ಸ್ಮಾರಕ ಸಮಿತಿಯ ವತಿಯಿಂದ ಮೊದಲ ಭಾಗವೂ, ಮದರಾಸಿನ ಸಂಗೀತ ಅಕಾಡೆಮಿಯ ಕಡೆಯಿಂಧ ಇತರ ಮೂರು ಭಾಗಗಳೂ ಪ್ರಕಟವಾಗಿವೆ. ಇಂಗ್ಲಿಷ್‌ ವರ್ಣಮಾಲೆಯ ಅಕ್ಷರ ಕ್ರಮವನ್ನು ಇಲ್ಲಿ ತುಲನಾತ್ಮಕವಾಗಿ ಪರಿಚಯ ಮಾಡಿಕೊಡಲಾಗಿದೆ. ಒಟ್ಟು ಒಂಬೈನೂರ ಐದು (೯೦೫) ರಾಗಗಳು ಚರ್ಚಿಸಲ್ಪಟ್ಟಿವೆ. ಕರ್ನಾಟಕ ಸಂಗೀತದ ಎಪ್ಪತ್ತೆರಡು ಮೇಳಕರ್ತ ರಾಗಗಳ ವರ್ಗೀಕರಣ ಕ್ರಮ, ಹಿಂದೂಸ್ತಾನಿ ಪದ್ಧತಿಯ ಹತ್ತು ಧಾಟಿಗಳು, ಎರಡು ಪದ್ಧತಿಗಳಲ್ಲೂ ವಿವಿಧ ಸಂಗೀತ ಸ್ವರಗಳನ್ನು ಗುರುತಿಸುವ ರೀತಿ ಮುಂತಾದ ಅವಶ್ಯಕ ವಿವರಗಳನ್ನು ಪ್ರತಿ ಗ್ರಂಥದಲ್ಲೂ ನೀಡಿರುವುದರಿಂದ, ಭಾರತೀಯ ಸಂಗೀತದ ಯಾವ ವಿದ್ಯಾರ್ಥಿಯಾದರೂ ಅರ್ಥಮಾಡಿಕೊಳ್ಳುವುದಕ್ಕೆಕ ಅನುಕೂಲವಾಗಿದೆ.

ಪ್ರತಿಯೊಂದು ರಾಗದ ಬಗ್ಗೆಯೂ ಬರೆಯುವಾಗ ಆ  ಹೆಸರಿನ ರಾಗ ಎರಡು ಸಂಗೀತ ಪದ್ಧತಿಗಳಲ್ಲೂ ಇದೆಯೇ, ಇದ್ದರೆ ಅದರ ಆರೋಹ-ಅವರೋಹಗಳು ಹೇಗಿವೆ. ಸ್ವರಗಳ ಸಂಚಾರದ ವೈಶಿಷ್ಟ್ಯ, ಜನಕ-ಜನ್ಯ ವಿವರಗಳು, ಜೀವ ಸ್ವರಗಳು ಮತ್ತು ರಂಜನೀಯ ಪ್ರಯೋಗಗಳು. ಆಯಾರಾಗದ ಪ್ರಮುಖ ಕೃತಿಗಳು ಇವೆಲ್ಲ ವಿವರಗಳನ್ನೂ ಕ್ರಮಬದ್ಧವಾಗಿ ನೀಡಲಾಗಿದೆ. ‘ರಾಗನಿಧಿ’ ಉದ್ಗಂಥದ ನಾಲ್ಕು ಭಾಗಗಳ ಪೂರ್ಣ ಹಕ್ಕುಗಳನ್ನು ಮದರಾಸಿನ ಸಂಗೀತ ಅಕಾಡೆಮಿಗೆ ಸುಬ್ಬರಾಯರು ಕೊಡುಗೆಯಾಗಿ ನೀಡಿದ್ದಾರೆ. ಭಾರತೀಯ ಸಂಗೀತ ಪದ್ಧತಿಗಳ ತುಲನಾತ್ಮಕ ಅಧ್ಯಯನದ ಮೊಟ್ಟಮೊದಲ ಗಂಭೀರ ಪ್ರಯತ್ನ ಎಂಬ ಪ್ರಶಂಸೆಗೆ ‘ರಾಗನಿಧಿ’ ಪಾತ್ರವಾಗಿದೆ. ನಮ್ಮ ಸಂಗೀತ ರಾಗಗಳ ಅಧ್ಯಯನ ಮಾಡುವವರಿಗೆ ಅದೊಂದು ಅತ್ಯವಶ್ಯಕವಾದ ಅವಲೋಕನ ಗ್ರಂಥವೆನಿಸಿದ್ದು ರಾಷ್ಟ್ರೀಯ, ಅಂತರ ರಾಷ್ಟ್ರೀಯ ಜನಪ್ರಿಯತೆಯನ್ನೂ ಗಳಿಸಿದೆ.

ಸುಬ್ಬರಾಯರ ಮಾತುಗಾರಿಕೆಯಲ್ಲಿ ಹಾಸ್ಯಪ್ರಜ್ಞೆ, ಜಾಣತನಗಳು, ವಿಶೇಷವಾಗಿದ್ದು, ಸಂಗೀತ ಪ್ರಪಂಚದ ಅವರ ಅನುಭವಗಳು ಕೇಳಲು ಬಹು ಆಕರ್ಷಕವಾಗಿರುತ್ತಿದ್ದವು. ತಾವು ಕಂಡ ಹಲವಾರು ಹಿರಿಯ ಸಂಗೀತ ಚೇತನಗಳು, ವೇದಿಕೆಯ ಸಂಗೀತಗಾರನಾಗಿ ತಮ್ಮ ಹಲವಾರು ಅನುಭವಗಳು, ಪೇಚಿಗೆ ಸಿಕ್ಕಿಕೊಂಡ ಸಂದರ್ಭಗಳು ಇವನ್ನೆಲ್ಲ ಅತ್ಯಂತ ಸ್ವಾರಸ್ಯವಾಗಿ ಅವರು ಹೇಳುತ್ತಿದ್ದರು. ಅಭಿಮಾನಿಗಳ ಒತ್ತಾಯದ ಮೇರೆಗೆ ಇಂತಹ ಹಲವು ವಿಷಯಗಳನ್ನೂ ‘ದಿ ಮ್ಯೂಸಿಂಗ್ಸ್ ಆಫ್‌ಎ ಮ್ಯುಸೀಷಿಯನ್‌’ (The Musings of a Musician) ಎಂಬ ಹೆಸರಿನಲ್ಲಿ ಪುಸ್ತಕ ರೂಪದಲ್ಲಿ ದಾಖಲಿಸಿದ್ದಾರೆ.  ಈ ಪುಸ್ತಕ ಹಸ್ತಲಿಪಿಯಲ್ಲಿದ್ದು ಇನ್ನೂ ಪ್ರಕಟವಾಗ ಬೇಕಾಗಿದೆ.

ತಮ್ಮ ಸ್ವಂತ ಅನುಕೂಲಕ್ಕೆಂದು ಸುಬ್ಬರಾಯರು ತಮ್ಮ ಸಂಗೀತವಾದ್ಯಗಳಲ್ಲಿ ಒಂದೆರಡು ಮಾರ್ಪಾಡುಗಳನ್ನೂ ಮಾಡಿಕೊಂಡಿದ್ದರು. ಇವು ಇತರರಿಗೂ ಅನುಕೂಲವಾಗುವಂಥದೇ ಆಗಿವೆ. ಸುಬ್ಬರಾಯರ ಪತ್ನಿ ರಾಜಮ್ಮ ವೀಣಾ ವಾದಕರಾಗಿದ್ದು ಸುಬ್ಬರಾಯರಾದರೋ ಗೋಟು ವಾದ್ಯ (ವಿಚಿತ್ರ ವೀಣಾ) ನುಡಿಸುತ್ತಿದ್ದರು. ಇವೆರಡು ಪರಸ್ಪರ ಹೆಚ್ಚಿನ ಹೋಲಿಕೆಯುಳ್ಳ ವಾದ್ಯಗಳು. ಇದು ದೊಡ್ಡ ಅಳತೆಯ ವಾದ್ಯಗಳಾಗಿವೆ. ಎರಡು ವಾದ್ಯಗಳಿಗೂ ಇರುವ ಮುಖ್ಯವಾದ ವ್ಯತ್ಯಾಸವೆಂದರೆ ವೀಣೆಯಲ್ಲಿ ದಂಡಿಯ ಮೇಲೆ ಹಿತ್ತಾಳೆ ಇಲ್ಲವೇ ಕಂಚಿನ ಮೆಟ್ಟಿಲುಗಳನ್ನು ಮೇಣದ ಸಹಾಯದಿಂದ ಸಾಲಾಗಿ ಕೂರಿಸಿರುತ್ತಾರೆ. ಮೆಟ್ಟಿಲುಗಳಿಂದ ಸ್ವಲ್ಪವೇ ಎತ್ತರದಲ್ಲಿ ಹಾದುಹೋಗಿರುವ ತಂತಿಗಳನ್ನು ವಾದಕ ತನ್ನ ಎಡಗೈ ಬೆರಳುಗಳಿಂದ ಅಮುಕುತ್ತಾ ಬಲಗೈಯಿಂದ ತಂತಿಗಳನ್ನೂ ಮೀಟುವಾಗ ವೀಣೆಯ ತಂತಿಗಳು ಆಯಾ ಮೆಟ್ಟಿಲಿಗೆ ತಗುಲಿದಂತೆಲ್ಲ ಬೇರೆ ಬೇರೆ ಸ್ವರಸ್ಥಾನದಲ್ಲಿ ನಾದೋತ್ಪತ್ತಿಯಾಗುತ್ತದೆ. ಗೋಟುವಾದ್ಯದಲ್ಲಾದರೋ ದಂಡಿಯ ಮೇಲೆ ಸಮತಳವಾದ ಹಲಗೆ ಇದ್ದು ಇವರಿಂದ ಸ್ವಲ್ಪ ಹೆಚ್ಚು ಎತ್ತರದಲ್ಲಿ ತಂತಿಗಳು ಕಟ್ಟಿಲ್ಪಟ್ಟಿರುತ್ತವೆ. ಮರದ ಗೊಟ್ಟಿನಿಂದ ತಂತಿಗಳನ್ನು ಉಜ್ಜುತ್ತಾ ಬಲಗೈಯಿಂದ ತಂತಿಗಳನ್ನು ಮೀಟುವುದರಿಂದ ಸಂಗೀತ ಉತ್ಪತ್ತಿಯಾಗುತ್ತದೆ. ವೀಣೆಯ ತಂತಿಗಳನ್ನು ಅವುಗಳ ಕೆಳಗಿನ ಮೆಟ್ಟಿಲುಗಳ ಸ್ಪರ್ಶ ಬಾರದಂತೆ ಸ್ವಲ್ಪ ಹೆಚ್ಚು ಎತ್ತರದಲ್ಲಿ ಸ್ಥಾಪಿಸುವುದರಿಂದ ವೀಣೆಯಲ್ಲೇ ಗೋಟುವಾದ್ಯವನ್ನೂ ನುಡಿಸಬಹುದೆಂದು ಸುಬ್ಬರಾಯರು ಕಂಡುಕೊಂಡರು. ವೀಣೆಯ ದಂಡಿಯ ಎಡತುದಿಯಲ್ಲಿರುವ ಲೋಹದ ಮೊದಲ ಮೆಟ್ಟಿಲು ಹಾಗೂ ಬಲಗಡೆ ಎಡಹಲಗೆಯ ಮಧ್ಯದಲ್ಲಿರುವ ಸೇತುವೆ ಇವೆರಡರ ಮೇಲೂ ಸುಮಾಋಉ ಒಂದಂಗುಲ ಎತ್ತರದ ಹೆಚ್ಚುವರಿ ಮೆಟ್ಟಿಲು ಸೇತುವೆಗಳನ್ನು ಬೇಕೆಂದಾಗ ಅಳವಡಿಸಿಕೊಂಡು ಹಾಗೆ ವೀಣೆಯಲ್ಲೇ ಗೋಟುವಾದ್ಯ ನುಡಿಸುವುದು ಸಾಧ್ಯವೆಂದು ಕಂಡುಕೊಂಡ ಸುಬ್ಬರಾಯರು ವಿದ್ವತ್‌ ಸಭೆಗಳಲ್ಲಿ ಅದನ್ನು ಪ್ರತ್ಯಕ್ಷವಾಗಿ ಪ್ರದರ್ಶಿಸಿದರು. ಹಾಗೆ ಅವರು ಸಿದ್ಧಪಡಿಸಿಕೊಂಡ ‘ಚಿತ್ರವತೀ ವೀಣ’ ವಾದಕನ ಅವಶ್ಯಕತೆಗಳಿಗನುಗುಣವಾಗಿ ವೀಣೆಯಾಗಿ ಇಲ್ಲವೇ ಗೋಟು ವಾದ್ಯವಾಗಿ ಉಪಯುಕ್ತವಾಗುತ್ತದೆ.

ವೃದ್ಧಾಪ್ಯದಿಂದಾಗಿ ಶ್ರವಣಶಕ್ತಿ ದುರ್ಬಲವಾದಂತೆ ಗೋಟುವಾದ್ಯವನ್ನೇ ಶೃತಿಬದ್ಧವಾಗಿ ನುಡಿಸುವ, ಕೇಳಿ ಆನಂದಿಸುವ ಅಸಾಮರ್ಥ್ಯ ಸುಬ್ಬರಾಯರನ್ನು ಕಾಡತೊಡಗಿತು. ಈ ಸಮಸ್ಯೆಗೆ ಪರಿಹಾರವನ್ನು ವೈದ್ಯರ ಸ್ಟೆತೊಸ್ಕೋಪ್‌ನಲ್ಲಿ ಕಂಡುಕೊಂಡರು. ಸ್ಟೆತೋಸ್ಕೋಪಿನ ಡಯಾಫ್ರಾಮ್‌ (Diaphragm) ಅನ್ನೂ ತಮ್ಮ ವಾದ್ಯದ ಎದೆಹಲಗೆಯ ಮೇಲೆ ಅಂಟಿಸಿ, ಅದರ ಇಯರ್ ಪೀನ್‌ಗಳನ್ನೂ (ear-peice) ತಮ್ಮ ಕಿವಿಗೆ ಸಿಕ್ಕಿಸಿಕೊಂಡಾಗ ವಾದ್ಯದಿಂದ ಹೊರಹೊಮ್ಮುವ ನಾದ ವರ್ಧನೆಗೊಂಡು ಕೇಳುತ್ತದೆಂದು ಅವರು ಕಂಡುಕೊಂಡರು. ವಾದ್ಯದಿಂದಲೇ ನೇರವಾಗಿ ನಾದವರ್ಧನೆಯಾಗುತ್ತಿದ್ದರಿಂದ ಹೊರಗಿನ ಸದ್ದುಗಳ ನಿವಾರಣೆ ಆಗಿ, ತಮ್ಮ ಶ್ರವಣಶಕ್ತಿಯ ದೌರ್ಬಲ್ಯ ನಿವಾರಣೆಯಾಗಿ ಆನಂದವಾಯಿತು ಸುಬ್ಬರಾಯರಿಗೆ. ‘ವೀಣಾಸ್ಕೋಪ್‌’ ಎಂದು ತಾವು ಕಂಡುಕೊಂಡ ಈ ತಂತ್ರವನ್ನು ಅವರು ಕರೆದರಾದರೂ ಅವರ ವಯಸ್ಸು ಅನಾರೋಗ್ಯಗಳಿಂದಾಗಿ ಇದಕ್ಕೆ ಪ್ರಚಾರ ಸಾಧ್ಯವಾಗಲಿಲ್ಲ.

ನಾಗಪುರದ ವಿಶ್ವವಿದ್ಯಾಲಯದಲ್ಲಿ ಸಂಗೀತವನ್ನು ಒಂದು ಅಧ್ಯಯನ ವಿಷಯವಾಗಿ ಸೇರಿಸುವುದರಲ್ಲಿ ಆಸಕ್ತಿ ವಹಿಸಿದ ಸುಬ್ಬರಾಯರು ಸುಮಾರು ಹತ್ತು ವರ್ಷಗಳ ಕಾಲ ಆ ವಿಷಯದ ಅಧ್ಯಯನ ಮಂಡಳಿಯ ಸದಸ್ಯರಾಗಿದ್ದು, ಆ ವಿಭಾಗದ ಪಠ್ಯಕ್ರಮ ರೂಪಿಸುವುದರಲ್ಲಿ ಪಾತ್ರವಹಿಸಿ, ವಿಶ್ವವಿದ್ಯಾಲಯದ ಸಂಗೀತ ಶಿಕ್ಷಣಕ್ಕೆ ಅಡಿಪಾಯ ಹಾಕಿಕೊಟ್ಟರು. ಉದ್ಯೋಗದಿಂದ ನಿವೃತ್ತರಾದ ಮೇಲೆ ಬೆಂಗಳೂರು, ನಾಗಪುರ ಮತ್ತು ದೆಹಲಿಯ ಆಕಾಶವಾಣಿಯ ಹಲವು ಸಮಿತಿಗಳಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸಿದರು. ಮದರಾಸಿನ ಸಂಗೀತ ಅಕಾಡೆಮಿಯ ತಜ್ಞರ ಸಮಿತಿಗೆ ೧೯೬೫ರಲ್ಲಿ ನೇಮಕಗೊಂಡ ಸುಬ್ಬರಾಯರು ಕೆಲವಾರು ವರ್ಷಗಳು ಅಲ್ಲಿ ಸೇವೆ ಸಲ್ಲಿಸಿದರು. ೧೯೬೭ರಲ್ಲಿ ಮದರಾಸಿನ ಸಂಗೀತ೫ ಅಕಾಡೆಮಿಯ ನಲವತ್ತನೇ ಸಂಗೀಥ ಸಮ್ಮೇಳನದಲ್ಲಿ ರಾಗನಿಧಿಯ ನಾಲ್ಕನೆಯ ಭಾಗ ಬಿಡುಗಡೆಯಾಯಿತು. ಆ ಸಂದರ್ಭದಲ್ಲೇ ಸುಬ್ಬರಾಯರಿಗೆ ಒಂದು ‘ಪ್ರಾವೀಣ್ಯ ಪ್ರಮಾಣ ಪತ್ರ’ (Certificate of merit) ನೀಡಿ ಸನ್ಮಾನಿಸಲಾಯಿತು.

ತಮ್ಮ ಇಡೀ ಜೀವನದ ಸಾಧನೆಯ  ಫಲವಾದ ರಾಗನಿಧಿ ತಮ್ಮ ಕಾಲದಲ್ಲೇ ಸಂಗೀತಪ್ರೇಮಿಗಳ ಕೈ ಸೇರಬೇಕೆನ್ನುವುದು ಸುಬ್ಬರಾಯರ ಹಂಬಲವಾಗಿತ್ತು. ಆ ಕೃತಿಯ ಪ್ರಕಟಣೆಗೆ ಅವರು ಕಾತರಿಸಿದಂತೆ ತಮ್ಮ ಸಂಗೀತ ಕೃತಿಗಳ ಪ್ರಕಟಣೆಗೆ ಪ್ರಾಮುಖ್ಯತೆ ನೀಡಲಿಲ್ಲ ಎನಿಸುತ್ತದೆ. ಇಡೀ ಭಾರತೀಯ ಸಂಗೀತ ಕ್ಷೇತಕ್ಕೆ ಅಮೂಲ್ಯವಾದಂಥ ಕಾರ್ಯಸಾಧನೆ ಮಾಡಿದ್ದರೂ ಜನಪ್ರಿಯತೆ ಖ್ಯಾತಿಗಳಿಗಾಗಿ, ಬಿರುದು ಸನ್ಮಾನಗಳಿಗಾಗಿ ಅವರೆಂದೂ ಕಾತರ ಪಡಲಿಲ್ಲ. ಸಂಗೀಥವನ್ನು ಅವರು ಅನುಭವಿಸಿದ, ಈ ಕ್ಷೇತ್ರದಲ್ಲಿ ಕೆಲಸ ಮಾಡಿದ ರೀತಿ ಭಾರತೀಯ ಸಂಗೀತದ ಮುನ್ನಡೆಗೆ ಮಾರ್ಗದರ್ಶಿಯಾಗಬಲ್ಲದು. ಈ ಕಾರಣಕ್ಕಾಗಿಯಾದರು ಅವರ ಸಾಧನೆಗಳನ್ನು ಅರಿತುಕೊಳ್ಳುವ ಅದಕ್ಕೆ ಅವಶ್ಯಕ ಪ್ರಚಾರ ನೀಡುವ ಜವಾಬ್ದಾರಿ ಇಂದಿನ ಸಂಗೀತ ಪ್ರೇಮಿಗಳದ್ದೇ ಆಗಿದೆ.