ಜನನ : ೧-೬-೧೯೩೦ ರಂದು ಕುಣಿಗಲ್‌ನಲ್ಲಿ ತುಮಕೂರು ಜಿಲ್ಲೆ

ಮನೆತನ : ಸಂಗೀತಗಾರರ – ಸಾಹಿತಿಗಳ ಮನೆತನ. ತಂದೆ ಶ್ರೀಕಂಠಯ್ಯನವರು ಸಂಗೀತ ವಿದ್ವಾಂಸರು – ಪಿಟೀಲು ವಾದಕರು. ತಾಯಿ ಪುಟ್ಟಮ್ಮ. ಸಹೋದರ ಕುಣಿಗಲ್ ನಾಗಭೂಷಣ ಚಿತ್ರ – ಸಾಹಿತಿ, ನಟ – ನಿರ್ದೇಶಕ.

ಗುರುಪರಂಪರೆ : ತಂದೆಯವರಲ್ಲಿಯೇ ಗಾಯನವನ್ನು ಕಲಿತು ರೂಢಿಸಿಕೊಂಡಿದ್ದಾರೆ. ಸಂಗೀತ ಕಲಿಕೆಯ ಪಾಂಡಿತ್ಯದಿಂದ ಗಮಕ ಕಲೆಯನ್ನು ರೂಢಿಸಿಕೊಂಡವರು.

ಕ್ಷೇತ್ರ ಸಾಧನೆ : ಮೈಸೂರಿನಲ್ಲಿ ನಡೆಯುತ್ತಿದ್ದ ಅಂದಿನ ದಿಗ್ಗಜಗಳೆನಿಸಿದ ಕೃಷ್ಣಗಿರಿ ಕೃಷ್ಣರಾಯರು, ಭಾರತ ಬಿಂದೂ ರಾಯರು, ನಂಜನಗೂಡು ಶ್ರೀಕಂಠಶಾಸ್ತ್ರಿಗಳು, ಕಳಲೆ ಸಂಪತ್ಕುಮಾರಾಚಾರ್ಯರು ಮುಂತಾದವರ ಕಾವ್ಯ ವಾಚನಗಳನ್ನು ಕೇಳಿ ಅದರಿಂದ ಪ್ರಭಾವಿತರಾಗಿ ಗಮಕ ಕಲೆಯನ್ನು ರೂಢಿಸಿಕೊಂಡರು. ಕನ್ನಡ ಸಾಹಿತ್ಯ ಪರಿಷತ್ತು ನಡೆಸುತ್ತಿದ್ದ ಗಮಕ ಪ್ರವೇಶ, ಪ್ರೌಢ ಪರೀಕ್ಷೆಗಳಲ್ಲಿ ತೇರ್ಗಡೆಯಾದರು. ಕುಮಾರವ್ಯಾಸ ಭಾರತ, ತೊರವೆ ರಾಮಾಯಣ, ಜೈಮಿನಿ ಭಾರತ, ಹರಿಶ್ಚಂದ್ರ ಕಾವ್ಯ, ಶಂಕರ ವಿಜಯ, ರಾಮಾಯಣ ದರ್ಶನಂ ಮುಂತಾದ ಕಾವ್ಯ ಭಾಗಗಳ ವಾಚನವನ್ನು ನಾಡಿನಾದ್ಯಂತ ನಡೆಸಿದ್ದಾರೆ. ಮೈಸೂರು ಆಕಾಶವಾಣಿಯಿಂದ ಇವರ ಕಾರ್ಯಕ್ರಮ ಪ್ರಸಾರವಾಗಿವೆ. ಮೈಸೂರಿನಲ್ಲಿ ಗಮಕ ತರಗತಿಗಳನ್ನೂ ನಡೆಸುತ್ತಿದ್ದು ಕರ್ನಾಟಕ ಗಮಕ ಕಲಾ ಪರಿಷತ್ತು ನಡೆಸುವ ಪ್ರವೇಶ, ಪ್ರೌಢ, ಕಾಜಾಣ, ಪಾರೀಣ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡಿರುತ್ತಾರೆ. ಪರಿಷತ್ತಿನ ಅಧಿಕೃತ ಪರೀಕ್ಷಕಿಯಾಗಿ ಸಹ ಕಾರ್ಯನಿರ್ವಹಿಸಿರುತ್ತಾರೆ. ಸಾಹಿತ್ಯದಲ್ಲೂ ಆಸಕ್ತಿ ಇದ್ದು ಅನೇಕ ಲೇಖನಗಳನ್ನು ಬರೆದಿದ್ದಾರೆ. ಗಮಕ ರೂಪಕಗಳನ್ನೂ ನಿರ್ದೇಶಿಸಿ ಅನೇಕ ಕಡೆ ಪ್ರದರ್ಶನಗಳನ್ನು ನೀಡಿದ್ದಾರೆ. ಪ್ರಮುಖವಾಗಿ ಶೃಂಗೇರಿ, ಧರ್ಮಸ್ಥಳ ಮುಂತಾದ ಧಾರ್ಮಿಕ ಕ್ಷೇತ್ರಗಳಲ್ಲಿ ವಾಚನ ಕಾರ್ಯಕ್ರಮಗಳನ್ನು ನಡೆಸಿ ಅಲ್ಲಿನ ಧರ್ಮಾಧಿಕಾರಿಗಳಿಂದ ಪ್ರಶಂಸೆಗೆ ಪಾತ್ರರಾಗಿರುತ್ತಾರೆ.

ಪ್ರಶಸ್ತಿ – ಪುರಸ್ಕಾರಗಳು : ತಮ್ಮ ಅವಿರತ ಗಮಕ ಕಲಾ ಸೇವೆಗಾಗಿ ಅನೇಕ ಸಂಘ ಸಂಸ್ಥೆಗಳಿಂದ ಗೌರವಿಸಲ್ಪಟ್ಟಿರುತ್ತಾರೆ. ಮೈಸೂರಿನ ಶ್ರೀ ರಾಮಾಭ್ಯುದಯ ಸಭಾದಿಂದ ಗಮಕ ಕಲಾ ಕೋವಿದೆ. ಬೆಂಗಳೂರಿನ ಕನ್ನಡ ಚಳುವಳಿ ಕೇಂದ್ರದ ವತಿಯಿಂದ ಗಮಕ ವಿದುಷಿ ಹಿರಿಯ ಗಮಕಿ – ಸಾಹಿತಿ ದಿ|| ಮೈ. ಶೇ. ಅನಂತಪದ್ಮನಾಭರಾಯರ ಸ್ಮಾರಕ ದತ್ತಿ ಕಾರ್ಯಕ್ರಮದಲ್ಲಿ ಸನ್ಮಾನ ಹೀಗೆ ಹತ್ತು-ಹಲವು ಮನ್ನಣೆಗೆ ಪಾತ್ರರಾಗಿರುವ ಇವರಿಗೆ ೨೦೦೫ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯೂ ಲಭಿಸಿದೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೨೦೦೦-೦೧ ರ ಸಾಲಿನ ’ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.