ಬೀಜದಿಂದ ಬೀಜಕ್ಕೆ
ಇದರ ಪಯಣ.
ಒಂದು ಹತ್ತಾಗಿ, ಹತ್ತು ನೂರಾಗಿ
ನೂರು ಸಾವಿರವಾಗಿ ಹೀಗೇ
ಅಸಂಖ್ಯವಾಗಿ ಅನಂತದ ಕಡೆಗೆ
ಇದರ ದಾರಿ.

ಬೀಜದಿಂದ ಬೀಜಕ್ಕೆ :
ಈ ನಡುವೆ ಎಷ್ಟೊಂದು ಮರ, ಎಷ್ಟು ಎಲೆ
ಎಷ್ಟು ಹೂ, ಎಷ್ಟು ಹಣ್ಣು !
ಎಲ್ಲಾ ಮಣ್ಣು
ಈ ಒಂದು ಬೀಜ ಕಡೆಗೂ ಮತ್ತೆ
ಬೀಜವಾಗುವುದಕ್ಕೆ.

ಬೀಜದಿಂದ ಬೀಜಕ್ಕೆ-
ನಡುವೆ ಎಷ್ಟೊಂದು ದೇಹ,
ಎಷ್ಟೊಂದು ಕುಡಿ-ಮಿಡಿ-ಕೊಂಬೆ ರೆಂಬೆಗಳ ಉದ್ದಕ್ಕು
ಜೋಗುಳದ ತೊಟ್ಟಿಲು ನೂರಾರು ಮೆಟ್ಟಿಲು
ಎಷ್ಟೊಂದು ಹಗಲಿರುಳು ಋತುಗಳಾರೈಕೆ
ಎಷ್ಟು ಬಗೆ ರಸವನ್ನೆತ್ತಿ
ಕಣ್ಣಿಗೆ ಕಿವಿಗೆ ಮೂಗು ನಾಲಗೆಗೆ
ರುಚಿಕೊಟ್ಟು, ಕಡೆಗೆಲ್ಲವನ್ನೂ ಮಣ್ಣಿಗೆ ಬಿಟ್ಟು,
ಕೊನೆಗೊಂದು ನೆನಪಾಗಿ, ಕಂಬನಿಯಾಗಿ,
ಕತೆಯಾಗಿ, ಕವಿತೆಯಾಗಿ,
ಲೈಬ್ರರಿಯ ತುಂಬ ಪುಸ್ತಕವಾಗಿ,
ಮತ್ತೆ ಒಂದು ಹತ್ತಾಗಿ ಹತ್ತು ನೂರಾಗಿ
ಲಕ್ಷೋಪಲಕ್ಷವಾಗಿ, ನೆಲದೊಳಗೆ ಬಿದ್ದು ಮೇಲೆದ್ದು
ಮರ ಮರದ ತುದಿಗೇರಿ ಮತ್ತೆ ಬೀಜವೆ ಆಗಿ
ಹಿಂದು ಮುಂದನ್ನೆಲ್ಲ ತನ್ನೊಳಗೆ ಸಂಧಿಸಿಕೊಂಡ ಬಿಂದುವಾಗಿ
ಬೀಜದಿಂದ ಬೀಜಕ್ಕೆ
ಬೀಜದಿಂದ ಬೀಜಕ್ಕೆ
ಇದರ ಪಯಣ :
“ಅಚಲೋಯಂ ಸನಾತನಃ”