. ಬೀದರ ತಾಲೂಕ (ಜಿಲ್ಲಾ ಪ್ರದೇಶ)

ಕ್ರಿ.ಶ.ಪೂರ್ವ ಕಾಲದಿಂದಲೂ ಪ್ರಸಿದ್ಧಿ ಪಡೆದಿರುವ ಕರ್ನಾಟಕದ ಉತ್ತರ-ಪೂರ್ವ ಭಾಗದಲ್ಲಿರುವ ಬೀದರ ದಖ್ಖನ್ ಪ್ರಸ್ಥಭೂಮಿ. ಸುದೀರ್ಘ ಐತಿಹಾಸಿಕ ಸಾಹಿತ್ಯಕ ಪರಂಪರೆಯ, ವಿಭಿನ್ನ ಸಾಂಸ್ಕೃತಿಕ ನೆಲೆಯ, ಸಾಮಾಜೋ-ಧಾರ್ಮಿಕ ಕಳಕಳಿಯ, ವೈವಿಧ್ಯಮಯ ಸಂಪ್ರದಾಯಗಳ, ಜೀವಪರ ಕಾಳಜಿಯ ತಾಣವಾಗಿದೆ. ಪರಧರ್ಮ ಸಹಿಷ್ಣುತೆ ಉದಾತ್ತ ಮಾನವೀಯ ಮೌಲ್ಯಗಳನ್ನು ತನ್ನೊಡಲಲ್ಲಿ ಗರ್ಭಿಕರಿಸಿಕೊಂಡಿರುವ ಈ ಜಿಲ್ಲೆ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶಿಷ್ಟತೆ ಪಡೆದುಕೊಂಡಿದೆ.

ಸಮುದ್ರ ಪಾತಳಿಯಿಂದ ೨೩೩೦ ಅಡಿ ಎತ್ತರದಲ್ಲಿರುವ ಈ ನೆಲವು ಉತ್ತಮ ಹವಾಗುಣ, ಪ್ರಕೃತಿ ಸೌಂದರ್ಯದಿಂದ ಕೂಡಿದೆ. ಪೂರ್ವ-ಪಶ್ಚಿಮವಾಗಿ ೧೭.೩೫0ಯಿಂದ ೧೮.೨೫0 ಅಕ್ಷಾಂಶಗಳವರೆಗೂ ದಕ್ಷಿಣೋತ್ತರವಾಗಿ ೭೬.೪೨0ಯಿಂದ  ೭೭.೭೯0 ರೇಖಾಂಶಗಳವರೆಗೆ ಹರಡಿರುವ; ೫೪೫೧ ಚದುರು ಕಿಲೋಮೀಟರಗಳಷ್ಟು ವಿಸ್ತೀರ್ಣ ಹೊಂದಿರುವ ಬೀದರಿನ ಪೂರ್ವಕ್ಕೆ ಆಂಧ್ರಪ್ರದೇಶ, ಉತ್ತರ ಹಾಗೂ ಪಶ್ಚಿಮ ಭಾಗಗಳಿಗೆ ಮಹಾರಾಷ್ಟ್ರದ ಗಡಿಯಿದೆ. ೨೭,೭೦೭ ಹೆಕ್ಟರ್ ಅರಣ್ಯ ಪ್ರದೇಶವಾಗಿದೆ. ೩,೭೨,೮೦೨ ಸಾಗುವಳಿ ಕ್ಷೇತ್ರವಾಗಿದೆ. ಬೀದರ ಪಟ್ಟಣದ ಪಶ್ಚಿಮಕ್ಕೆ ಹೊನ್ನಿಕೇರಿ ಅರಣ್ಯವಲಯ, ದಕ್ಷಿಣಕ್ಕೆ ಭಾಗಕ್ಕೆ ಚಿಟ್ಟಾ ಅರಣ್ಯ ವಲಯ, ನೈರುತ್ಯದಿಕ್ಕಿನಲ್ಲಿ ಕಮಠಾಣಾ ಅರಣ್ಯ ವಲಯ ಹೊಂದಿದೆ. ಕಾಡಿನಲ್ಲಿ ಜಿಂಕೆಗಳು, ನವಿಲುಗಳು ಹೇರಳವಾಗಿ ನೋಡಲು ಸಿಗುತ್ತವೆ. ಲಿಂಗ ಅನುಪಾತ ರಾಜ್ಯದ ಸರಾಸರಿಗಿಂತಲೂ ಕಡಿಮೆ. ಪ್ರತಿ ಸಾವಿರ ಪುರುಷರಿಗೆ ಮಹಿಳೆಯರ ಪ್ರಮಾಣ ೯೪೮ ಆಗಿದೆ.

ಗೋದಾವರಿಯ ಉಪ ನದಿಯಾಗಿರುವ ಮಾಂಜರಾ ಹಾಗೂ ಆದರ ಉಪನದಿ ಆಗಿರುವ ಕಾರಂಜಾ ನದಿ ಈ ಜಿಲ್ಲೆಯ ಪ್ರಮುಖ ನದಿಗಳು. ಕರ್ಕನಳ್ಳಿ ಗ್ರಾಮದ ಸುತ್ತಣ ಪ್ರದೇಶ ಘಟ್ಟದಿಂದ ಕೂಡಿದೆ. ಬೀದರನ ಸುತ್ತ ಹಾಗೂ ಜಿಲ್ಲೆಯ ಇತರೆಡೆಗಳಲ್ಲಿ ತಿಳಿ ನೀರಿನ ಝರಿಗಳಿವೆ. ಕಾರಂಜಾ ಜಲಾಶಯ ಜಿಲ್ಲೆಯ ಪ್ರಮುಖ ಜಲಾಶಯವಾಗಿದೆ.

ಭಾರತೀಯ ವಾಯು ಸೇನೆಯ ಪ್ರಮುಖ ವೈಮಾನಿಕ ಕೇಂದ್ರವೊಂದು ಬೀದರನಲ್ಲಿ ಸ್ಥಿತವಾಗಿದೆ. ಕರ್ನಾಟಕ ರಾಜ್ಯದ ಪಶು ವೈದ್ಯಕೀಯ ವಿಶ್ವವಿದ್ಯಾಲಯವು ಬೀದರನಲ್ಲಿದೆ. ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರವು ಹಾಲಹಳ್ಳಿ ಹತ್ತಿರ ಸ್ಥಾಪಿತವಾಗಿದೆ. ಜಿಲ್ಲೆಯಲ್ಲಿ ಮೂರು ಸಹಕಾರಿ ಸಕ್ಕರೆ ಕಾರ್ಖಾನೆಗಳಿವೆ. ಹಾಗೆಯೇ ಎಂಟು ಖಂಡಸಾರಿ ಸಕ್ಕರೆ ಕಾರ್ಖಾನೆಗಳಿವೆ. ಹಾಗೆಯೇ ಬೀದರ ಜಿಲ್ಲೆ ಬಿದರಿ ಕಲೆಗಾಗಿ ಪ್ರಸಿದ್ಧವಾಗಿದ್ದು, ವಿವಿಧತೆಯಲ್ಲಿ ಏಕತೆಗೆ ಸಂಕೇತದಂತಿದೆ.

ಬೀದರ ಜಿಲ್ಲಾ ಚಾರಿತ್ರಿಕ ಹಿನ್ನೋಟ:

ಪ್ರಾಚೀನ ಕಾಲದಿಂದಲೂ ಮಾನವನ ನೆಲೆಯಾಗಿರುವ ಈ ಪ್ರದೇಶವು ಮಹಾಭಾರತದಲ್ಲಿನ ವಿದುರ ನಗರವೆಂದೂ, ನಳ ದಮಯಂತಿಯರ ಪ್ರಣಯೋದ್ಯಾನವೆಂತಲೂ, ಬಿದಿರು ಬೆಳೆಯುವ ಪ್ರದೇಶವಾದ್ದರಿಂದ ಬಿದಿರೂರು ಪುರವೆಂದೂ ಸ್ಥಳ ಪುರಾಣದ ಪ್ರತೀತಿ ಇದೆ. ಶಿಶುಮಾಯಣನು ತನ್ನ “ಅಂಜನಾ ಚರಿತ್ರೆ”ಯಲ್ಲಿ ಉತ್ತರ ದೇಶದೊಳಗೆ ಸುರತ್ರಾಣನ ಪತ್ತಣವನು (ದು) ಬಿದಿರೆಯೊಳು ಕರ್ತಾರನಲ್ಲದುಳಿದ ದೈವವಿಲ್ಲೆಂದು ಮತ್ತರಾಗಿರುತಿಹರಲ್ಲಿ (ಪೀ.-೪) ಎಂದು ಕ್ರಿ.ಶ. ೧೫೦೦ರ ಕಾಲದಲ್ಲಿಯೂ ಬೀದರನ್ನು ಬಿದಿರೆ ಎಂದು ಕರೆದಿರುವುದು ಗಮನಾರ್ಹವಾಗಿದೆ. ಅಂಬಲಗಿಯ ಚೆನ್ನಮಲ್ಲ ಕವಿಯು ತನ್ನ ವೀರಸಂಗಯ್ಯನ ಚೌಪದನದಲ್ಲಿಯೂ ಬಿದರೂರುಪುರ ಎಂದು ಹೇಳಿರುವುದರೊಂದಿಗೆ ಬೀದರ ಕೋಟೆಯ ಹೊರ ಭಾಗದಲ್ಲಿದ್ದ ಕೆಲವು ಉಪವಸತಿಗಳ ಹೆಸರುಗಳನ್ನು ಹೇಳಿದ್ದಾನೆ. ಅಂತೆಯೇ ಬೀದರನ್ನು ಬಿದಿರೆ> ಬಿದಿರುಪುರ> ಬಿದಿರೂರು> ಬಿದರೆ> ಬೀದರ ಆಗಿ ರೂಪಾಂತರ ಗೊಂಡಂತೆ ತೋರುತ್ತದೆ. ಚಾಲುಕ್ಯ ವಿಜಯಾದಿತ್ಯನ (ಕ್ರಿ.ಶ.೬೯೭-೯೩೩) ಕಾಲದ ತಾಮ್ರ ಶಾಸನವು ಬೀದರ ಜಿಲ್ಲೆಯ ಪಶ್ಚಿಮ ಅಂಚಿನಲ್ಲಿರುವ ಕಾಸರ ಸಿರ್ಸಿಯಲ್ಲಿ ಪತ್ತೆಯಾಗಿದೆ. ಅದರಲ್ಲಿ ಭಲ್ಲುಂಕ್ಕಿ ದೇಶ ಎಂಬ ಉಲ್ಲೇಖವಿರುವುದರಿಂದ ಬೀದರ ಜಿಲ್ಲೆಯ ಭಾಲ್ಕಿಯೇ ಆ ಕಾಲಕ್ಕೆ ಈ ವಿಭಾಗದ ಕೇಂದ್ರ ಸ್ಥಳವಾಗಿತ್ತೆಂದು ತಿಳಿದು ಬರುತ್ತದೆ. ಬಾದಾಮಿ ಚಾಲುಕ್ಯರ ಕಾಲದಲ್ಲಿ ಬೀದರನಲ್ಲಿ ಕನ್ನಡಕ್ಕಿಂತ ಪ್ರಾಕೃತ ಮತ್ತು ಸಂಸ್ಕೃತ ಭಾಷೆಗಳು ಪಡೆದಿರುವಂತೆ ಕಂಡು ಬರುತ್ತದೆ. ಕ್ರಿ.ಶ. ೧೪೨೪ರ ವೇಳೆಯ ಬೀದರಿನ ಸೋಲಾಕಂಬ ಮಸೀದಿಯಲ್ಲಿ ದೊರೆತಿರುವ ಶಾಸನದಲ್ಲಿ ಬೀದರ ಎಂದು ಉಲ್ಲೇಖಿಸಲ್ಪಟ್ಟಿದೆ. ಮುಸ್ಲಿಂ ಅರಸರ ಕಾಲದಲ್ಲಿ ಮೊಹಮ್ಮದಾಬಾದ ಬೀದರ, ಜಾಫರಾಬಾದ ಬೀದರ ಎಂದು ಕರೆಲ್ಪಟ್ಟರೂ ಜನಪದೀಯರಲ್ಲಿ ಇದನ್ನು ಕ್ವಾಟಿ ಎಂದೇ ಕರೆಯುತ್ತಾರೆ.

ರಾಷ್ಟ್ರಕೂಟರ ರಾಜ್ಯವು ಕಾವೇರಿಯಿಂದಮಾ ಗೋದಾವರಿ ವರೆಮಿರ್ದುದರಿಂದ ಈ ಭಾಗವೂ ಕೂಡ ಅವರ ಆಳ್ವಿಕೆಗೊಳಪಟ್ಟಿರುವ ಸಾಧ್ಯತೆಗಳಿವೆ. ಮಳಖೇಡವು ರಾಜಧಾನಿಯಾಗುವ ಮುನ್ನ ಬಸವಕಲ್ಯಾಣ ತಾಲೂಕಿನ ಮುಯೂರಖಿಂಡಿಯು ರಾಷ್ಟ್ರಕೂಟರ ರಾಜಧಾನಿಯಾಗಿತ್ತು ಎಂದು ಹೇಳಲು ಅವಕಾಶಗಳಿವೆ. ಬೀದರ ಪ್ರಾಂತವನ್ನಾಳಿದ ಪ್ರಮುಖ ಅರಸು ಮನೆತನ ಕಲ್ಯಾಣಿ ಚಾಲುಕ್ಯರದು. ಕ್ರಿ.ಶ.೧೦೩೩ರ ವೇಳೆಗೆ ಕಲ್ಯಾಣವು ಚಾಲುಕ್ಯರ ಉಪ ರಾಜಧಾನಿಯಾಗಿತ್ತು. ಕ್ರಿ.ಶ.೯೫೫-೧೧೬೨ರ ವರೆಗೆ ವೈಭವದಿಂದ ಮೆರೆದ ಪ್ರದೇಶವನ್ನು ಚಾಲುಕ್ಯರಕಾಲಕ್ಕೆ ಕುಂತಳ ದೇಶದ ಅಟ್ಟಳೆನಾಡು ಎಂದು ಪ್ರಸಿದ್ಧವಾಗಿತ್ತು. ಚಾಲುಕ್ಯ ೨ನೇ ಜಗದೇಕ ಮಲ್ಲ ಬಿಜ್ಜಳನನ್ನು ಸೋಲಿಸಿ ಚಕ್ರವರ್ತಿಯೆಂದು ಘೋಷಿಸಿಕೊಂಡ ಮೇಲೆ ಈ ಭಾಗಕ್ಕೆ ಬಸವಾದಿ ಪ್ರಥಮರಿಂದ ಹೆಚ್ಚಿನ ಪ್ರಖ್ಯಾತಿ ಬಂದಿತು. ೧೨ನೇ ಶತಮಾನದಲ್ಲಿ ನಡೆದ ಸಾಮಾಜಿಕ, ಧಾರ್ಮಿಕ, ವೈಚಾರಿಕ ಕ್ರಾಂತಿಯ ಕೇಂದ್ರ ಬಿಂದುವಾಯಿತು. ಭಾರತದಲ್ಲಿಯೆ ಪ್ರಪ್ರಥಮವಾದ ಪಾರ್ಲಿಮೆಂಟ ನಿರ್ಮಾಣಗೊಂಡು ಸಮಾಜದಲ್ಲಿ ತುಳಿತಕ್ಕೊಳಪಟ್ಟ ಜನಾಂಗದವರಿಗೆ ಮತ್ತು ಸ್ತ್ರೀಯರಿಗೆ ಪುರುಷರಷ್ಟೇ ಬಸವಾದಿ ಶರಣರು ಪ್ರಾಮುಖ್ಯತೆ ನೀಡಿದರು. ಸರ್ವರ ಕಲ್ಯಾಣವನ್ನು ಏಕಕಾಲದಲ್ಲಿ ಸಾಧಿಸಿದ ಕೀರ್ತಿ ಮಾನವತಾವಾದಿ ಮಹಾತ್ಮಾ ಬಸವಣ್ಣನವರಿಗೆ ಸಲ್ಲುತ್ತದೆ. ಅಲ್ಲಮ ಪ್ರಭು, ಚನ್ನಬಸವಣ್ಣ, ಅಕ್ಕ ಮಹಾದೇವಿ, ಗಂಗಾಂಬಿಕೆ, ನೀಲಾಂಬಿಕೆ, ಮಡಿವಾಳ ಮಾಚಿದೇವ ಹೀಗೆ ಸಹಸ್ರಾರು ಶರಣರು ವಚನ ಸಾಹಿತ್ಯದ ಉಗಮಕ್ಕೆ, ರಕ್ಷಣಗೆ, ಸಮಾನತೆಗಾಗಿ ಬಲಿದಾನ ಮಾಡಿರುವುದು ಶ್ಲಾಘನೀಯವಾಗಿದೆ.ಕ್ರಿ.ಶ.೧೩೨೨ರಲ್ಲಿ ದಖ್ಖನಿನ ಯುವರಾಜನಾಗಿದ್ದ ಮಹಮ್ಮದ್ ಬಿನ್ ತೊಗಲಕ್‌ನು ಕಾಕತೀಯರಿಂದ ಬೀದರನ್ನು ವಶಪಡಿಸಿಕೊಂಡು ಇಲ್ಲಿ ತನ್ನದೊಂದು ಸೈನ್ಯದ ನೆಲೆಯನ್ನು ಸ್ಥಾಪಿಸಿದನು. ೧೩೪೧ರಲ್ಲಿ ಮುಲ್ತಾನಿನ ಷಿಯಾಬುದ್ದಿನ ಎನ್ನುವವನಿಗೆ ಈ ಭಾಗದ ಅಧಿಕಾರ ವಹಿಸಿಕೊಟ್ಟನು. ದಖ್ಖನಿನ ಸದಾಹ್ ಅಮೀರರು ತುಘಲಕ್ ವಿರುದ್ಧ ದಂಗೆ ಎದ್ದುದರಿಂದ ಮತ್ತು ದಕ್ಷಿಣದಲ್ಲಿ ಕ್ರಿ.ಶ. ೧೩೩೬ರಲ್ಲಿಯೇ ವಿಜಯಗರ ಸಾಮ್ರಾಜ್ಯ ಪ್ರಬಲವಾಗುತ್ತಿದ್ದುದರಿಂದ ಬಹಮನಿಯ ಹಸನಗಂಗು ತನ್ನ ರಾಜಧಾನಿಯನ್ನು ದೌಲತಾಬಾದನಿಂದ ಗುಲಬರ್ಗಾಕ್ಕೆ ಸ್ಥಳಾಂತರಿಸಿದನು. ಉತ್ತಮ ಹವಾಗುಣಕ್ಕೆ ಮನಸೋತ ಬಹಮನಿ ಮನೆತನದ ೯ನೆಯ ಅರಸನಾದ ಒಂದನೇ ಆಹಮದನು ಕ್ರಿ.ಶ. ೧೪೨೯ರಲ್ಲಿ ತನ್ನ ರಾಜಧಾನಿಯನ್ನು ಗುಲಬರ್ಗಾದಿಂದ ಬೀದರಕ್ಕೆ ವರ್ಗಾಯಿಸಿದನು. ಈತನು ಬೀದರ ಕೋಟೆಯನ್ನು ಹೊಸದಾಗಿ ನಿರ್ಮಿಸಿದ ಬಹಮನಿಯರ ನಂತರ ಬೀದರ ಆದಿಲ್ಶಾಹಿಗಳ ೧೬೫೮ರಲ್ಲಿ ಮೊಗಲರ ವಶಕ್ಕೆ ಹೊಯಿತು. ೧೭೨೪ ರಿಂದ ೧೯೪೮ರ ವರೆಗೆ ಈ ಭಾಗವು ಹೈದರಾಬಾದಿನ ನಿಜಾಂರ ಆಳ್ವಿಕೆಗೆ ಒಳ ಪಟ್ಟಿದ್ದಿತು. ನವೆಂಬರ ೧,೧೯೫೬ ರಂದು ಹೈದ್ರಾಬಾದ ಕರ್ನಾಟಕ ಜಿಲ್ಲೆಗಳೊಂದಿಗೆ ನವ ಮೈಸೂರು ರಾಜ್ಯ (ಈಗ ಕರ್ನಾಟಕ)ದ ಭಾಗವಾಯಿತು.

. ಹುಮನಾಬಾದ ತಾಲೂಕಾ

ಬೀದರ ಜಿಲ್ಲೆಯ ದಕ್ಷಿಣ ದಿಕ್ಕಿನಲ್ಲಿರುವ ತಾಲೂಕ ಹುಮನಾಬಾದ. ಬೀದರನಿಂದ ೬೦ಕಿ.ಮೀ ಅಂತರದಲ್ಲಿದೆ. ಈ ನಗರಕ್ಕೆ ಪೂರ್ವದಲ್ಲಿ ಜಯಸಿಂಹ ನಗರವೆಂದು ಕರೆಯುತ್ತಿದ್ದರು. ನಿಜಾಮನ ಅಡಳಿತದಲ್ಲಿ ಇದಕ್ಕೆಹುಮನಾಬಾದ ಎಂಬ ಹೆಸರಾಯಿತು. ಹುಮನಾಬಾದ ರಾಷ್ಟ್ರೀಯ ಹೆದ್ದಾರಿ ೯ರ ಮೇಲೆ ಇದ್ದು ಮುಂಬಯಿ ಹೈದ್ರಾಬಾದಕ್ಕೆ ಸಂಪರ್ಕ ಕಲ್ಪಿಸುತ್ತದೆ. ಈ ತಾಲೂಕಿನ ವಿಸ್ತೀರ್ಣವು ೩೮೫.೨೩ಚಿ.ಕಿ.ಮಿ. ಇದೆ. ಅಡಳಿತ ದೃಷ್ಟಿಯಿಂದ ಈ ತಾಲೂಕನ್ನು ೬ ಹೋಬಳಿಗಳನ್ನಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಹುಮನಾಬಾದ, ಹಳ್ಳಿಖೇಡ (ಬಿ), ನಿರ್ಣಾ, ದುಬಲಗುಂಡಿ ಚಿಟಗುಪ್ಪಾ ಹಾಗೂ ಬೇಮಳಖೇಡಾ, ೨೦೦೧ನೇ ಸಾಲಿನ ಜನಗಣತಿಯ ಪ್ರಕಾರ ಈ ತಾಲೂಕಿನ ಜನ ಸಂಖ್ಯೆ ಒಟ್ಟು ೨,೯೪,೪೧೩. ಇದರಲ್ಲಿ ಗಂಡಸರು ೧.೫೦,೯೧೪ ಹಾಗೂ ಹೆಂಗಸರು ೧,೪೩,೪೯೯ ಸಂಖ್ಯೆಯಲ್ಲಿದ್ದಾರೆ. ಈ ತಾಲೂಕಿನಲ್ಲಿ ೮೭ ಹಳ್ಳಿಗಳಿವೆ. ಅವುಗಳಲ್ಲಿ ಜನವಸತಿ ಇರುವ ಹಳ್ಳಿಗಳು ೮೪ ಮಾತ್ರ. ತಾಲೂಕಿನಲ್ಲಿ ೩೩ ಗ್ರಾಮ ಪಂಚಾಯಿತಿಗಳು ೦೨ ಪುರಸಭೆಗಳಿವೆ.

 

. ಬಸವಕಲ್ಯಾಣ ತಾಲೂಕಾ

ಬಸವಕಲ್ಯಾಣ ತಾಲೂಕು ಚಾಲುಕ್ಯರ ಕಾಲದಿಂದ ಬೆಳಕಿಗೆ ಬಂದಿತು ೧೨ನೇ ಶತಮಾನದಲ್ಲಿ ಇಲ್ಲಿ ನಡೆದ ಸಾಮಾಜಿಕ, ಧಾರ್ಮಿಕ, ವೈಚಾರಿಕ ಕ್ರಾಂತಿಯ ಕೇಂದ್ರ ಬಿಂದುವಾಗಿತ್ತು. ಬಸವಕಲ್ಯಾಣ ತಾಲೂಕು ಜಿಲ್ಲೆಯ ೫ ತಾಲೂಕಗಳಲ್ಲಿದೊಡ್ಡ ತಾಲ್ಲೂಕವಾಗಿದೆ. ೩೬ ಗ್ರಾಮ ಪಂಚಾಯತಗಳು, ೬ ಹೋಬಳಿಗಳು, ೧೧೫ ಕಂದಾಯ ಗ್ರಾಮಗಳು, ವಾಡಿ ತಾಂಡಾಗಳಿವೆ. ತಾಲೂಕಿನ ಉದ್ದಳತೆ ೧೨೦೬ ಚದರ ಕಿಲೋ ಮೀಟರ. ಜನಸಂಖ್ಯೆ ೨,೭೫,೮೬೧. ಇದರಲ್ಲಿ ೫೯ ಸಾವಿರ ಪ.ಜಾ. ಮತ್ತು ೪೪ ಸಾವಿರ ಪ.ಪಂಗಡದ ಜನ ವಾಸಿಸುತ್ತಾರೆ. ಸುಮಾರು ೩೮ ಸಾವಿರ ಲಾರಿ ಉದ್ಯಮಗಳು ನಡೆಯುತ್ತಿವೆ.

 

. ಭಾಲ್ಕಿ ತಾಲೂಕಾ

ಭಾಲ್ಕಿ ತಾಲೂಕಾ ಕೇಂದ್ರವು ಬೀದರದಿಂದ ೪೦ ಕಿ.ಮೀ. ದೂರದಲ್ಲಿದೆ. ಈ ತಾಲೂಕಿಗೆ ಉಳಿದ ನಾಲ್ಕೂ ತಾಲೂಕಾ ಕೇಂದ್ರಗಳು ಸಮಾನ ಅಂತರದಲ್ಲಿವೆ. ಭಾಲ್ಕಿಯ ಒಟ್ಟು ವಿಸ್ತೀರ್ಣ ೧೧೧೭.೩ ಚದುರ ಕಿ. ಮಿ. ತಾಲೂಕಿನಲ್ಲಿ ಆರು ಹೋಬಳಿಗಳು, ೩೫ ಗ್ರಾಮ ಪಂಚಾಯತಿಗಳು ಇವೆ. ಸಾಹಿತ್ಯ, ಕಲೆ, ಧಾರ್ಮಿಕ, ಸಾಂಸ್ಕೃತಿಕ, ಐತಿಹಾಸಿಕವಾಗಿ ಗಮನ ಸೆಳೆಯುವ ಕೇಂದ್ರವಾಗಿದೆ. ಶಾಸನಗಳಲ್ಲಿ ಭಲ್ಲುಂಕೆ ಎಂದು ಕರೆಯಲಾಗಿದೆ. ಮಿತಾಕ್ಷರ ಎಂಬ ಗ್ರಂಥ ರಚಿಸಿದ ವಿಜ್ಞಾನೇಶ್ವರ ಹುಟ್ಟಿದ್ದು ತಾಲೂಕಿನ ಮಾಸಿಮಾಡ ಗ್ರಾಮದಲಿ. ೧೨ನೆಯ ಶತಮಾನದ ಕುಂಬಾರ ಗುಂಡಯ್ಯ ಎಂಬ ಶರಣ ಭಾಲ್ಕಿಯಲ್ಲಿದ್ದನು. ಭಾಲ್ಕಿ ನಗರದಲ್ಲಿ ಭಾಲ್ಕೇಶ್ವರ ದೇವಾಲಯ, ಕುಂಭೇಶ್ವರ ದೇವಾಲಯ, ಖಡಕೇಶ್ವರ ದೇವಾಲಯ, ಉರಿಲಿಂಗ ಪೆದ್ದಿಮಠ, ಹಿರೇಮಠ ಸಂಸ್ಥಾನ, ಚನ್ನಬಸವಾಶ್ರಮ ಮತ್ತು ರಾಮೇಶ್ವರ ಟೆಕನಿ ಮುಂತಾದವು ನೋಡುವಂತಹ ಸ್ಥಳಗಳಾಗಿವೆ.ಗ್ರಾಮೀಣ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದೇಶದ ನಾನಾ ಭಾಗದ ವಿದ್ಯಾಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

 

. ಔರಾದ (ಬಿ) ತಾಲೂಕಾ

ಆಂಧ್ರ ಮತ್ತು ಮಹಾರಾಷ್ಟ್ರ ಗಡಿ ಪ್ರದೇಶಕ್ಕೆ ಹೊಂದಿಕೊಂಡಿರುವ ಔರಾದ ತಾಲೂಕು ರಾಜ್ಯದ ಉತ್ತರದ ತುತ್ತ ತುದಿಯಲ್ಲಿದೆ. ರಾಜ್ಯದ ಏಕೈಕ ಒಂಟೆ ಜಾತ್ರೆ ನಡೆಯುವ, ಸಾಂಸ್ಕೃತಿಕ ವೈಭವ ಪಡೆದ ಹೆಗ್ಗಳಿಕೆಹೊಂದಿದೆ. ನಯನ ಮನೋಹರವಾದ ಗುಡ್ಡ-ಬೆಟ್ಟಗಳು, ಕಣಿವೆ-ಕೊಳಗಳು ತಾಲೂಕಿನ ಭೌಗೋಳಿಕ ಆಕರ್ಷಣೆಗಳಾಗಿವೆ. ನವಿಲು ಧಾಮಕ್ಕೆ ಬೇಕಾದಷ್ಟು ಭೂಮಿಯಿದೆ. ಚಾಲುಕ್ಯರ ಕಾಲದ ಇತಿಹಾಸ ಪ್ರಸಿದ್ಧ ಔರಾದ ಪಟ್ಟಣದ ಜೈನ ದೇವಾಲಯ ಗಮನ ಸೆಳೆಯುವ ತಾಣವಾಗಿದೆ. ತಾಲೂಕಿನ ಡೋಣಗಾಂವ (ಎಮ್) ಮಾಳಪ್ಪಯ್ಯ ಸಂಸ್ಥಾನ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿರುವ ಹೇರಳ ಔಷಧಿಯ ಸಸ್ಯಗಳನ್ನು ಒಳಗೊಂಡ ವನ ಸಂಪತ್ತು ಮತ್ತಿತರೆ ಪ್ರವಾಸಿ ತಾಣಗಳು ತಾಲೂಕಿನ ಹೆಮ್ಮೆಯ ಕೊಡುಗೆಯಾಗಿವೆ.

ಜಿಲ್ಲೆಯಲ್ಲೇ ಅತಿ ದೊಡ್ಡ ಔರಾದ ತಾಲೂಕಿನ ಭೌಗೋಳಿಕ ವಿಸ್ತೀರ್ಣ ೧೨೨೪ಕಿ.ಮೀ. ಇದೆ. ಕ್ಷೇತ್ರದ ಒಟ್ಟು ಜನ ಸಂಖ್ಯೆ ಸುಮಾರು ೨.೫ ಲಕ್ಷ . ತಾಲೂಕಿನ ಕೆಲಭಾಗದಲ್ಲಿ ಮಾಂಜರಾ ನದಿ ಹರಿಯುತ್ತದೆ. ಒಟ್ಟು ೨೮ ಸಣ್ಣ ನೀರಾವರಿ ಕೆರೆಗಳಿವೆ. ೧೪೦ ಹಳ್ಳಿಗಳು ಮತ್ತು ಅಷ್ಟೇ ಸಂಖ್ಯೆಯ ತಾಂಡಗಳಿರುವುದು ತಾಲೂಕಿನ ವಿಶೇಷತೆಯಾಗಿದೆ. ತಾಲೂಕಿನಲ್ಲಿ ಮಿಶ್ರ ಸಂಸ್ಕೃತಿ ಇದ್ದು ಕನ್ನಡ, ಮರಾಠಿ, ತೆಲುಗು, ಉರ್ದು ಬಾಷೆಗಳು ಚಾಲ್ತಿಯಲ್ಲಿವೆ. ಹತ್ತಿ, ತೊಗರೆ, ಜೋಳ, ಕಬ್ಬು, ಉದ್ದು, ಹೆಸರು, ಸೋಯಾ ಇಲ್ಲಿಯ ಮುಖ್ಯ ಬೆಳೆಯಾಗಿವೆ. ಔರಾದ ಪಟ್ಟಣ ಬೀದರ ಜಿಲ್ಲಾ ಕೇಂದ್ರದಿಂದ ೪೦ಕಿ.ಮೀ. ಅಂತರದಲ್ಲಿದೆ. ಔರಾದ ತಾಲೂಕಿನ ಗಡಿಯಿಂದ ೩ ಕಿ.ಮೀ. ಅಂತರದಲ್ಲಿ ಮಹಾರಾಷ್ಟ್ರ ಹೊಂದಿದೆ. ೨ ಕಿ.ಮೀ. ಅಂತರದಲ್ಲಿ ಆಂಧ್ರ ಪ್ರದೇಶ ಇದೆ. ತಾಲೂಕಿನ ೪೦ ಗ್ರಾಮಗಳು ಅಂತರ ರಾಜ್ಯ ಗಡಿಗೆ ಹೊಂದಿಕೊಂಡಿದೆ.