ಕಮಠಾಣಾ ಜೈನ ಮಂದಿರ

ಎಷ್ಟು ದೂರ ?
ಜಿಲ್ಲೆ : ೮ ಕಿ.ಮೀ.
ತಾಲ್ಲೂಕ : ೮ ಕಿ.ಮೀ.

ರಟ್ಟ ಅರಸು ಮನೆತನದ ಕಾಲದ ಭಗವಾನ ಪಾರ್ಶ್ಚನಾಥ (೨೩ನೇ ತೀರ್ಥಂಕರ) ತೀರ್ಥಂಕರರ ಸುಂದರ ಬಸದಿ ಇದೆ. ಬಸದಿಯು ವಿಶಾಲವಾದ ಪ್ರಾಂಗಣ ಹೊಂದಿದೆ. ಸುತ್ತಲು ಮಾವಿನ ಗಿಡಗಳಿವೆ. ಪ್ರತಿ ವರ್ಷ ಮಾಘ ಪಂಚಮಿಯಿಂದ ಸಪ್ತಮಿವರೆಗೆ ಜಾತ್ರೆ ನಡೆಯುತ್ತದೆ. ಆಂಧ್ರ ಪ್ರದೇಶ, ಮಹಾರಾಷ್ಟ್ರದಿಂದ ಸಾವಿರಾರು ಜಿನಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಜೈನಮುನಿಗಳು ಆಗಾಗ ಬಂದು ಪ್ರವಚನ ಕಾರ್ಯಕ್ರಮ ನೀಡುತ್ತಾರೆ. ಕಮಠಾಣಾ ಗ್ರಾಮವು ಅತೀ ಪ್ರಾಚೀನ ಊರು ಊರಿನ ಸುತ್ತಲು ಜೋಡು ಕಂದಕಗಳಿವೆ. ದಿಗಂಬರ ಪಂಥದ ಜೀನಾಲಯಗಳು, ಅನೇಕ ಸೇಡಿ ಬಾವಿಗಳಿವೆ. ಭೂಮಿ ಆಳದಲ್ಲಿ ಸೇಡಿ ದೊರಕುತ್ತದೆ. ಪಕ್ಕದಲ್ಲಿ ಇರುವ ಸಿರ್ಸಿ ಗ್ರಾಮದಲ್ಲಿ ಭೂಮಿಯ ಒಳ ಪದರುಗಳಲ್ಲಿ ಜಾಜಾ (ಕೆಂಪು ಮಣ್ಣು) ದೊರೆಯುತ್ತದೆ.

ಸಂಗಮೇಶ್ವರ ಕೊ

ಎಷ್ಟು ದೂರ ?
ಜಿಲ್ಲೆ : ೧೮ ಕಿ.ಮೀ.
ತಾಲ್ಲೂಕ : ೪೦ ಕಿ.ಮೀ

ಬೀದರದಿಂದ ಶ್ರೀರಂಗಪಟ್ಟಣಕ್ಕೆ ಹೋಗುವ ರಾಜ್ಯ ಹೆದ್ದಾರಿಯ ಎಡ ಬದಿಯಲ್ಲಿ ೧೮ ಕಿ.ಮೀ. ಅಂತರದಲ್ಲಿದೆ. ಜ್ಞಾನ ಕಾರಂಜಿವೆಂಬ ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಮತ್ತು ಹಾಲಹಳ್ಳಿ ಸಮೀಪದ ಸಂಗಮೇಶ್ವರ ಕೊಳವು ಆಕರ್ಷಕವಾಗಿದೆ. ಅತ್ಯುತ್ತಮ ಪಿಕ್‌ನಿಕ್ ತಾಣ ಆಗಿದೆ. ಎಂಟು ಎಕರೆ ಭೂ ಪ್ರದೇಶದ ನಿಸರ್ಗ ನಿರ್ಮಿತವಾದ ಈ ತಾಣವು ಸಮತಟ್ಟಾದ  ವಲಯದಿಂದ ೩೦೦ ಅಡಿಗಳಷ್ಟು ಆಳವಾಗಿದೆ. ದೀರ್ಘಾವದಿಯ ಮಳೆಯ ನೀರು ಕೊರೆತದಿಂದ ಈ ಕಂದಕ ಉಂಟಾಗಿರಬೇಕು. ಸುತ್ತಲೂ ಜಂಬಿಟ್ಟಿಗೆಯ ದಿಬ್ಬವಿದೆ. ಮೂರು ಕೋಣೆಯ ಗವಿ ಪೂರ್ವ ದಿಕ್ಕಿನಲ್ಲಿದೆ. ಜಂಬಿಟ್ಟಿಗೆ ದಿಬ್ಬದಲ್ಲಿ ಇದನ್ನು ಕೊರೆಯಲಾಗಿದೆ. ಹಾಲಹಳ್ಳಿಯ ನಿವಾಸಿಗಳ ಪ್ರಕಾರ ಈ ಗವಿಯಲ್ಲಿ ಬಹಳಷ್ಟು ಸನ್ಯಾಸಿಗಳು ತಪಸ್ಸು, ಅನುಷ್ಠಾನ ಮಾಡಿ ಸಿದ್ದಿ ಪಡೆದಿದ್ದಾರೆ. ಸಂಗಮೇಶ್ವರ ಕೊಳದ ಸುತ್ತಲು ದಟ್ಟ ಕಾಡು, ಬೆಟ್ಟಗಳಿವೆ. ನೈಸರ್ಗಿಕವಾದ, ಪ್ರಶಾಂತವಾದ ತಾಣವಾಗಿದೆ. ಕೊಳದಲ್ಲಿರುವ ನೀರು ರುಚಿಯಾಗಿದ್ದು; ರೋಗ ನಿರೋಧಕ ಶಕ್ತಿ ಹೊಂದಿದೆ.

 

ಕಾರಂಜಾ ಜಲಾಶಯ

ಎಷ್ಟು ದೂರ ?
ಜಿಲ್ಲೆ : ೨೧ ಕಿ.ಮೀ.
ತಾಲ್ಲೂಕ : ೩೯ ಕಿ.ಮೀ.

ರಾಜ್ಯ ಹೆದ್ದಾರಿ ೧೦೯ ಬೀದರ ಶ್ರೀರಂಗಪಟ್ಟಣ ಮಾರ್ಗದಲ್ಲಿದೆ. ಬ್ಯಾಲಹಳ್ಳಿ (ಕೆ), ಹಾಲಹಳ್ಳಿ (ಕೆ), ಕಮಾಲಪುರ, ಅತಿವಾಳ ಮೊದಲಾದ ಗ್ರಾಮಗಳ ಭೂಪ್ರದೇಶದಲ್ಲಿ ಈ ಜಲಾಶಯವನ್ನು ನಿರ್ಮಿಸಲಾಗಿದೆ. ಕಾರಂಜಾ ನದಿಯು ಮಾಂಜರಾ ನದಿಯ ಉಪನದಿಯಾಗಿದೆ. ಈ ನದಿಯು ಆಂದ್ರಪ್ರದೇಶದ ಸಂಗಾರೆಡ್ಡಿ ಜಿಲ್ಲೆಯ ಜಹಿರಾಬಾದ ತಾಲೂಕಿನ ಕೋಹಿರ್ ಎಂಬ ಗ್ರಾಮದ ಬಳಿ ಉಗಮವಾಗಿ ಭಂಗೂರು ಗ್ರಾಮದ ಹತ್ತಿರ ಪ್ರವೇಶಿಸಿ ಮಾಂಜರಾ ನದಿ ಸೇರುತ್ತದೆ. ಈ ಜಲಾಶಯದಿಂದ ತಾಲೂಕಿನ ಬಹುತೇಕ ಗ್ರಾಮಗಳು ನೀರಾವರಿ ಸೌಲಭ್ಯ ಪಡೆದಿವೆ.

 

ಜಲಸಂಗಿ

ಎಷ್ಟು ದೂರ ?
ಜಿಲ್ಲೆ : ೧ ಕಿ.ಮೀ.
ತಾಲ್ಲೂಕ : ೧ ಕಿ.ಮೀ

ಬೀದರ ಬಸ್ ನಿಲ್ದಾಣದಿಂದ ೩೦ ಕಿ.ಮೀ. ದೂರ. ಹುಮನಾಬಾದನಿಂದ ೧೫ ಕಿ.ಮೀ. ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನ ಚಿಕ್ಕಹಳ್ಳಿ ಜಲಸಂಗವಿ. ಇದನ್ನು ಪ್ರಸ್ತುತ ಜಲಸಂಗಿ ಎಂದು ಕರೆಯುತ್ತಾರೆ. ಕಲ್ಯಾಣದ ಚಾಲುಕ್ಯ ಅರಸ ೬ನೇ ವಿಕ್ರಮಾದಿತ್ಯನು ಪ್ರಸಿದ್ಧ ಕಲ್ಮೇಶ್ವರ ದೇವಾಲಯವನ್ನು ಸಿರ್ಮಿಸಿದನು. ನಕ್ಷತ್ರ ಆಕಾರವಿರುವ ದೇವಾಲಯದ ಹೊರಭಾಗದಲ್ಲಿ ಸುಮಾರು ೩೦ ಆಕರ್ಷಕ ಮದನಿಕಾ ಶಿಲ್ಪಗಳಿವೆ. ನಾಟ್ಯ ಗಣಪತಿಯ ನಟನಾ ಭಂಗಿ ಕಲಾ

ಪ್ರಿಯರನ್ನು ಆಕರ್ಷಿಸುತ್ತದೆ. ಸುಂದರ ಭಂಗಿಯಲ್ಲಿರುವ ವೀರಭದ್ರ, ದಕ್ಷಿಣಾಮೂರ್ತಿ, ದುರ್ಗಾ, ವರಾಹ ಅವತಾರ, ದರ್ಪಣ ಸುಂದರಿ, ನರಸಿಂಹ ಅವತಾರದ ಶಿಲ್ಪಗಳು, ಕಾವ್ಯಕನ್ನಿಕೆ, ಶಾಸನ ಬರೆಯುವ ಸುಂದರಿ, ಗಂಧರ್ವ ಕನ್ಯೆ ಮುಂತಾದವು ಗಮನಾರ್ಹವಾಗಿವೆ.

ಆರನೇ ವಿಕ್ರಮಾದಿತ್ಯನ ಪರಾಕ್ರಮವನ್ನು ಹೊಗಳಿ ಶಾಸನವನ್ನು ಬರೆಯುವ ಶಾಸನ ಸುಂದರಿಯ ಶಿಲ್ಪವು ಆಕರ್ಷಕವಾಗಿದೆ. ಶಾಸನದ ಅರ್ಥ ಹೀಗಿದೆ- ಚಾಲುಕ್ಯ ವಂಶದ ವಿಕ್ರಮಾದಿತ್ಯನೆಂಬ ರಾಜನು ಏಳು ದ್ವೀಪಗಳಿಂದ ಸಮಾವೇಶಗೊಂಡ ಭೂಮಿಯನ್ನು ತನ್ನದಾಗಿ ಮಾಡಿಕೊಂಡು ರಾಜ್ಯಭಾರ ಮಾಡುತ್ತಿದ್ದಾನೆ.

 

ಶ್ರೀ ವೀರಭದ್ರೇಶ್ವರ ದೇವಾಲಯ

ಎಷ್ಟು ದೂರ ?
ಜಿಲ್ಲೆ : ೫೦ ಕಿ.ಮೀ.
ತಾಲ್ಲೂಕ : ೧ ಕಿ.ಮೀ.

ಹೈದ್ರಾಬಾದ-ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ತಾಲೂಕಾ ಕೇಂದ್ರವಾದ ಹುಮನಾಬಾದನಲ್ಲಿ ರಾಜಾರಾಮಚಂದ್ರ ಜಾಧವನು ಈ ಪ್ರಸಿದ್ಧವಾದ ಶ್ರೀ ವೀರಭದ್ರೇಶ್ವರ ದೇವಾಲಯವನ್ನು ನಿರ್ಮಿಸಿದನು. ಚಾಳುಕ್ಯರ ಕಾಲದಲ್ಲಿ ಹುಮನಾಬಾದ ಜಯಸಿಂಹನಗರವೆಂದು ಪ್ರಸಿದ್ಧಿ ಪಡೆದಿತ್ತು.

ಭವ್ಯವಾದ ಗರ್ಭಗುಡಿಯಲ್ಲಿ ಶ್ರೀ ವೀರಭದ್ರೇಶ್ವರ ಮೂರ್ತಿಯು ಕಂಗೊಳಿಸುತ್ತಿದೆ. ಈ ಗುಡಿಗೆ ಸುಮಾರು ೫೦ ಅಡಿ ಎತ್ತರದ ಶಿಖರವಿದ್ದು ಒಳಾಂಗಣದಲ್ಲಿ ಎರಡು ಎತ್ತರದ ದೀಪ ಸ್ತಂಭಗಳಿವೆ. ಬಲಭಾಗದ ದೀಪಸ್ತಂಭವು ಅಲುಗಾಡಿಸಿದಾಗ ಅಲುಗಾಡುತ್ತದೆ. ಈ ದೇವಾಲಯವನ್ನು ಪೂರ್ವಾಭಿಮುಖವಾಗಿ ನಿರ್ಮಾಣ ಮಾಡಲಾಗಿದೆ. ದೇವಾಲಯದ ರಚನಾ ವಿನ್ಯಾಸ ಹಾಗೂ ಶಿಲ್ಪಗಳು ಆಕರ್ಷಿಸುತ್ತವೆ.

ಪ್ರತಿವರ್ಷ ಜನೇವರಿ ೧೪ರಿಂದ ಜನೇವರಿ ೨೬ರ ವರೆಗೆ ಜಾತ್ರೆ ನಡೆಯುತ್ತದೆ. ಜನೆವರಿ ೨೬ರ ಮುಂಜಾವಿನಲ್ಲಿ ಶ್ರೀ ವೀರಭದ್ರೇಶ್ವರನ ರಥೋತ್ಸವ ಮತ್ತು ಪಲ್ಲಕ್ಕಿ ಮೆರವಣಿಗೆ ನಡೆಯುತ್ತದೆ ಆಂಧ್ರ ಮಹಾರಾಷ್ಟ್ರ ಹಾಗೂ ಕರ್ನಾಟಕದಿಂದ ಸಹಸ್ರಾರು ಭಕ್ತರು ಬಂದು ದರ್ಶನ ಪಡೆದು, ಅಗ್ನಿ ತುಳಿಯುತ್ತಾರೆ.

 

ಹಣಕುಣಿ ಕೋಟೆ

ಎಷ್ಟು ದೂರ ?
ಜಿಲ್ಲೆ : ೫೫ ಕಿ.ಮೀ.
ತಾಲ್ಲೂಕ : ೫ ಕಿ.ಮೀ.

ರಾಜಾ ರಾಮಚಂದ್ರ ಜಾಧವನ ಆಳ್ವಿಕೆಯಲ್ಲಿ ಹುಮನಾಬಾದ ಪಟ್ಟಣದ ದಕ್ಷಿಣ ದಿಕ್ಕಿನ ೫ ಕಿ.ಮೀ. ಅಂತರ ದಲ್ಲಿರುವ ಹಣಕುಣಿ ಎಂಬ ಗ್ರಾಮದಲ್ಲಿ ಒಂದು ಕೋಟೆ ನಿರ್ಮಿಸಿದನು. ಆ ಕೋಟೆಯು ರಾಜನ ಹಣ-ಬೊಕ್ಕಸದ ಕೇಂದ್ರವಾಗಿತ್ತು. ರಾಜಧಾನಿಯ ಮೇಲೆ ವೈರಿಗಳು ದಾಳಿ ಮಾಡಿದರೂ ಅವರ ಕೈಗೆ ಸಂಪತ್ತು ದೊರೆಯದಂತೆ ಈ ರೀತಿ ಪಕ್ಕದ ಹಳ್ಳಿಯಲ್ಲಿ ಕೋಟೆ ಕಟ್ಟಿಸುತ್ತಿದ್ದರು. ಅಂತಹ ಕೋಟೆಯೇ ಹಣಕುಣಿ ಕೋಟೆ ಯಾಗಿದೆ. ಈ ಹಳ್ಳಿಯ ಹಲವು ಪ್ರದೇಶಗಳು. ಪ್ರಾಗೈತಿಹಾಸದ ಕಾಲದವು ಎಂದು ಆರ್. ಎಂ. ಷಡಕ್ಷರಯ್ಯನವರು ಗುರುತಿಸಿದ್ದಾರೆ ಇಲ್ಲಿ ಆದಿವಾಸಿಗಳು ವಾಸ ಮಾಡಿದ ಕುರುಹುಗಳನ್ನು ಅವರು ಸಂಶೋಧಿಸಿದ್ದಾರೆ.

 

ಬುದ್ಧವಿಹಾರ ರೇಕುಳಗಿ

ಎಷ್ಟು ದೂರ ?
ಜಿಲ್ಲೆ : ೬೫ ಕಿ.ಮೀ.
ತಾಲ್ಲೂಕ : ೨೫ ಕಿ.ಮೀ.

ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ೯ರ ಪಕ್ಕದಲ್ಲಿ ಮನ್ನಾಎಖೆಳ್ಳಿ ಸಮೀಪ ಇರುವ ಬೆಟ್ಟಕ್ಕೆ ರೇಕುಳಗಿ ಮೌಂಟ್ ಎಂದು ಕರೆಯುತ್ತಾರೆ. ಇದು ಹುಮನಾಬಾದ ತಾಲೂಕಾ ಕೇಂದ್ರದಿಂದ ೨೫ ಕಿ.ಮೀ ದೂರದಲ್ಲಿದೆ. ಸುಮಾರು ಹತ್ತು ವರ್ಷಗಳ ಹಿಂದೆ ಈ ಬೆಟ್ಟದ ಮೇಲೆ ಪಗೋಡಾ ಮಾದರಿಯ ಬುದ್ದವಿಹಾರವನ್ನು ನಿರ್ಮಿಸಲಾಯಿತು. ಈ ಬುದ್ಧ ದೇವಾಲಯಕ್ಕೆ ಥೈಲೆಂಡ್ ದೇಶದಿಂದ ಐದು ಅಡಿ ಎತ್ತರ ವಿರುವ ಮಿಶ್ರಾಧಾತುವಿನ ಕಂಚಿನ ಬುದ್ಧಮೂರ್ತಿಯನ್ನು ತಂದು ಸ್ಥಾಪಿಸಲಾಯಿತು. ಕರ್ನಾಟಕ ಸರ್ಕಾರವು ಈ ಬೆಟ್ಟದ ಮೇಲೆ ಹತ್ತಲು ಉತ್ತಮವಾದ ರಸ್ತೆಯನ್ನು ಪ್ರವಾಸಿಗರಿಗೆ ವಸತಿ ಗೃಹಗಳನ್ನು ಹಾಗೂ ನೀರಿನ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ. ಪ್ರತಿ ‌ವರ್ಷ ದಶರಾ ಮಹಾನವಮಿಯಂದು ನಾಡಿನ ನಾನಾ ಭಾಗಗಳಿಂದ ಅನೇಕ ಭಕ್ತರು ಬುದ್ದಪೂರ್ಣಿಮೆ ಹಾಗೂ ಧಮ್ಮ ಪರಿವರ್ತನಾ ದಿನ ನಿಮಿತ್ತ ಜರುಗುವ ಇಲ್ಲಿಯ ಜಾತ್ರಾ ಮಹೋತ್ಸವಕ್ಕೆ ಬಂದು ಹಾಜರಾಗುತ್ತಾರೆ. ಬುದ್ದನಿಗೆ ಬುದ್ದಂ ಶರಣಂ ಗಚ್ಚಾಮಿ ಧಮಂ ಶರಣಂ ಗಚ್ಚಾಂ ಸಂಘಂ ಶರಣಂ ಗಚ್ಚಾಮಿ ಎಂದು ನಮಸ್ಕರಿಸಿ ಪುನೀತರಾಗುತ್ತಾರೆ.

 

ಮೋಳಿಗೆ ಮಾರಯ್ಯನ ಗವಿ

ಎಷ್ಟು ದೂರ ?
ಜಿಲ್ಲೆ : ೬೦ ಕಿ.ಮೀ.
ತಾಲ್ಲೂಕ : ೧೫ ಕಿ.ಮೀ.

೧೨ನೇ ಶತಮಾನದಲ್ಲಿ ಕಲ್ಯಾಣವು ಭೂ ಕೈಲಾಸವಾಗಿ ವಚನ ಸಾಹಿತ್ಯದ ಉಗಮ ಸ್ಥಾನವಾಗಿ ಪ್ರಸಿದ್ಧಿಪಡೆದ ವಿಷಯವು ಜಂಗಮರ ಮೂಲಕ ತಿಳಿದುಕೊಂಡು ಕಾಶ್ಮೀರದ ಅರಸ ಮಹಾದೇವ ಭೂಪಾಲನು ತನ್ನ ರಾಣಿ ಮಹಾದೇವಿಯೊಡನೆ ಮಗನಿಗೆ ರಾಜ್ಯ ಒಪ್ಪಿಸಿ ಕಲ್ಯಾಣಕ್ಕೆ ಬಂದರು. ಕಲ್ಯಾಣದಲ್ಲಿ ಅನುಭವ ಮಂಟಪದ ಸದಸ್ಯರಾಗಿ ಕಟ್ಟಿಗೆಯ ಕಾಯಕವನ್ನು ಮಾಡುತ್ತಾ ವಚನಗಳು ರಚಿಸುತ್ತಾ ಜ್ಞಾನ ದಾಸೋಹ, ಅನ್ನದಾಸೋಹ ತಪ್ಪದೆ ಮಾಡುವ ವ್ರತವನ್ನು ಕೈಗೊಂಡಿದ್ದರು. ಕಟ್ಟಿಗೆ ಹೊರೆ ಹೊತ್ತು ಎಲ್ಲಾ ಶರಣರ ಮನೆಬಾಗಿಲಿಗೆ ಕಟ್ಟಿಗೆ ಒದಗಿಸುತ್ತಾ ಪವಿತ್ರವಾದ ಕಾಯಕದಿಂದ ಪ್ರಸಿದ್ಧರಾಗಿದ್ದರು. ಕಟ್ಟಿಗೆ ಹೊರೆಗೆ ಕನ್ನಡದಲ್ಲಿ ಮೋಳಿಗೆ ಎಂದು ಕರೆಯುತ್ತಾರೆ. ಆದಕಾರಣ ಅವರಿಗೆ ಮೋಳಿಗೆ ಮಾರಯ್ಯನೆಂಬ ಹೆಸರಾಯಿತು. ಕಲ್ಯಾಣ ಕ್ರಾಂತಿಯ ಸಮಯದಲ್ಲಿ ೧೩೦ ವರ್ಷದವರಾಗಿದ್ದು, ಮೋಳಕೇರಾ ಎಂಬ ಗ್ರಾಮದಲ್ಲಿ ಲಿಂಗೈಕ್ಯರಾದರೆಂದು ಇತಿಹಾಸ ತಿಳಿಸುತ್ತದೆ. ಅವರ ಧರ್ಮ ಪತ್ನಿ ಕೂಡಾ ವಚನಗಳನ್ನು ರಚಿಸಿರುತ್ತಾರೆ

 

ಬಸವ ಕಲ್ಯಾಣ ಕೋಟೆ

ಎಷ್ಟು ದೂರ ?
ಜಿಲ್ಲೆ : ೮೬ ಕಿ.ಮೀ.
ತಾಲ್ಲೂಕ : ೧ ಕಿ.ಮೀ.

ಕಲ್ಯಾಣಿ ಚಾಲುಕ್ಯರ ರಾಜಧಾನಿಯಾಗಿದ್ದ ಸಂದರ್ಭದಲ್ಲಿ ಒಂದನೇ ಸೋಮೇಶ್ವರ ೧೦೪೮ರಲ್ಲಿ ಕಟ್ಟಿಸಿದ ಸುಂದರ ಕೋಟೆ ಇಲ್ಲಿದೆ. ಬಿಜ್ಜಳ ಪ್ರಧಾನಿಯಾಗಿ ಕಲ್ಯಾಣಕ್ಕೆ ಬಂದ ಮೇಲೆ ಬಸವಣ್ಣನವರು ಪ್ರಧಾನ ಮಂತ್ರಿಯಾದ ಮೇಲೆ ಜಾಗತಿಕ ಇತಿಹಾಸದಲ್ಲಿ ಕಲ್ಯಾಣಕ್ಕೆ ಮಹತ್ವದ ಸ್ಥಾನ ಲಬಿsಸಿತು. ೧೩೨೧ರಲ್ಲಿ ಮಹಮದ್ ಬಿನ್ ತುಗಲಕನು ಕಲ್ಯಾಣದ ಕೋಟೆ ವಶಪಡಿಸಿಕೊಂಡಿದ್ದನೆಂದು ಅವನ ಒಂದು ಶಾಸನ ಸೂಚಿಸುತ್ತದೆ. ಮುಂದೆ ಬಹಮನಿ, ಬರೀದಿಶಾಹಿ, ಅದಿಲ್ ಶಾಹಿ, ಮೊಗಲರ, ನಿಜಾಮರ ಆಳ್ವಿಕೆಗೆ ಒಳಪಟ್ಟಿತ್ತು. ಕ್ರಿ. ಶ. ೧೯೫೬ರಲ್ಲಿ ನವಾಬ ಜಮಾಲೋದ್ದಿನ್ ಮರಣದ ನಂತರ ಕೋಟೆ ಸರ್ಕಾರದ ವಶಕ್ಕೆ ಒಳಪಟ್ಟಿತ್ತು. ಸುಮಾರು ೧೦ ಎಕರೆ ಭೂ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡ ಈ ಭವ್ಯ ಕೋಟೆಯಲ್ಲಿ ಹೈದರ ಮಹಲ್, ರಂಗೀನ ಮಹಲ್, ತಾಲಿಮ ಖಾನಾ, ರಾಜ ಮಹಲ್, ನೃತ್ಯ ಸಭಾಂಗಣ, ಬಾರೋದ ಖಾನಾ ಮೊದಲಾದ ಆಕರ್ಷಕ ಸ್ಮಾರಕಗಳಿವೆ. ಕೋಟೆಯಲ್ಲಿನ ಜನರಿಗೆ ಕುಡಿಯಲು ಜಲ ವ್ಯವಸ್ಥೆಗಾಗಿ ನಿರ್ಮಿಸಲಾದ ಕಾಲುವೆ ಇಂದಿಗೂ ಕಾಣಬಹುದಾಗಿದೆ.

 

ತೋಪುಗಳು

ನೌಗಜ ತೋಪು ೨೭ ಅಡಿ ಉದ್ದವಾಗಿದೆ. ಇದರ ಹಿಂಭಾಗವು ೬೯ ಮುಂಭಾಗವು ೫೯ ಅಂಗುಲ ಸುತ್ತಳತೆ ಹೊಂದಿದೆ. ಪ್ರತಿಯೊಂದು ಪಟ್ಟೆಗಳಿಗೆ ಮೇಲ್ಭಾಗದಲ್ಲಿ ಎರಡೆರಡು ಬಳೆಗಳಿದ್ದವು. ಈಗ ಒಂಬತ್ತು ಬಳೆಗಳು ಮಾತ್ರ ಉಳಿದಿವೆ. ಕಡಕ್ ಬಿಜಲಿ ತೋಪು ಕೋಟೆಯ ಎತ್ತರದ ಕಟ್ಟಡದ ಮೇಲಿದೆ. ೧೨ ಅಡಿ ಉದ್ದವಾಗಿರುವ ಈ ತೋಫು ತುಂಬ ನುಣುಪಾಗಿದೆ. ಇದರ ಹಿಂಭಾಗವು ೪೩, ಮುಂಭಾಗವು ೩೭ ಅಂಗುಲ ಸುತ್ತಳತೆಯಲ್ಲಿದೆ. ಪಂಚಧಾತುವಿನಿಂದ ನಿರ್ಮಿಸಿಲಾದ ಈ ತೋಪಿನ ಮೇಲೆ ಹೂ-ಬಳ್ಳಿಗಳನ್ನು ಚಿತ್ರಿಸಲಾಗಿದೆ. ಮುಂಭಾಗದಲ್ಲಿ ಪಕ್ಷಿಯ ದೇಹದಂತೆ ಗೋಚರಿಸುವ ಕೆಳಭಾಗದಲ್ಲಿ ಮೊಸಳೆಯ ಹಲ್ಲುಗಳಂತೆ ಇದ್ದು ಆನೆಯ ಎತ್ತರದ ಸೊಂಡಲಿನಂತೆ ಭಾಸವಾಗುತ್ತದೆ. ಇನ್ನು ಮೊದಲಾದ ತೋಫುಗಳಿವೆ. ಕೋಟೆಯ ಆವರಣದಲ್ಲಿ ಸಾವಿರಾರು ಕಲ್ಲು ಹಾಗೂ ಕಬ್ಬಿಣದ ಗುಂಡುಗಳಿವೆ.