ಷ್ಟೂರಿನ ಸಮಾಧಿಗಳು

ಬೀದರ ಕೋಟೆಯಿಂದ ೪ ಕಿ.ಮೀ. ದೂರ. ಬೀದರನಿಂದ ೪ ಕಿಲೋಮೀಟರ್ ದೂರದ ಗ್ರಾಮ ಅಷ್ಟೂರ. ಅಷ್ಟೂರಿನನಲ್ಲಿ ಬಹಮನಿ ಅರಸರ ಮತ್ತು ಮೊದಲಾದ ಅರಸು ಮನೆತನದ ೪೨ ಗೋರಿಗಳವೆ. ಅವುಗಳಲ್ಲಿ ಅಹಮದಶಾ ಅಲಿಯ ಗೋರಿ ಪ್ರಮುಖವಾಗಿದೆ. ಅಹಮದ್ ಶಾ ತಾನು ಸಾಯುವುದಕ್ಕಿಂತ ಮೂರು ವರ್ಷಗಳ ಮೊದಲೇ ನಿರ್ಮಿಸಿದ್ದನಂತೆ. ಇಲ್ಲಿನ ಚಿತ್ರಕಲೆ, ಟೈಲುಗಳ ಜೋಡಣೆ ಜಗತ್ ಪ್ರಸಿದ್ಧ ಕಲೆಗಳಲ್ಲಿ ಒಂದು ಎಂದು ಪರಿಗಣಿಸಬಹುದು. ಪರ್ಶಿಯನ್ ಮಾದರಿ ಕಲೆಯನ್ನು ಇಲ್ಲಿ ಕಾಣಬಹುದು. ಇಲ್ಲಿ ಪ್ರತಿ ವರ್ಷ ಅಲ್ಲಮ ಪ್ರಭು ಜಾತ್ರೆಯು ಹೊಳಿ ಹುಣ್ಣಿಮೆ ನಂತರ ಜರುಗುತ್ತದೆ. ಈ ಜಾತ್ರೆಗೆ ಗುಲಬರ್ಗಾ ಜಿಲ್ಲೆಯ ಆಳಂದ ತಾಲೂಕಿನ ಮಾಡ್ಯಾಳ ಗ್ರಾಮದ ವೀರಶೈವ ಸ್ವಾಮಿ ಆಗಮಿಸಿ ನಡೆಸಿಕೊಡುತ್ತಾರೆ. ಜಾತ್ರೆಯಲ್ಲಿ ಹಿಂದೂ, ಮುಸ್ಲಿಂರೂ ಭೇದ ಭಾವವಿಲ್ಲದೆ ಪಾಲ್ಗೊಳ್ಳುತ್ತಾರೆ. ಇದು ಭಾವ್ಯಕ್ಯತೆಯ ಪ್ರತೀಕವಾಗಿದೆ.

ದೇವ ದೇವ ವನ

ಇದೊಂದು ಅರಣ್ಯ ಪ್ರದೇಶದಲ್ಲಿ ಹೊಸದಾಗಿ ನಿರ್ಮಿಸಲಾದ ಗಾರ್ಡನ್ ಇದಾಗಿದೆ. ಬೀದರನಿಂದ ಜಹಿರಾಬಾದ ಕಡೆಗೆ ಹೋಗುವ ದಾರಿಯಲ್ಲಿ ಇದು ಸ್ಥಿತವಾಗಿದೆ. ಅರಣ್ಯ ಇಲಾಖೆಯು ಇದರ ಜವಾಬ್ದಾರಿ ವಹಿಸಿಕೊಂಡಿದೆ. ವಿವಿಧ ಔಷಧಿ ಸಸ್ಯಗಳನ್ನು ಈ ಗಾರ್ಡನ್‌ನಲ್ಲಿ ಕಾಣಬಹುದಾಗಿದೆ. ಇಲ್ಲಿಯ ಸಸ್ಯರಾಶಿ ಹಾಗೂ ಆಹ್ಲಾದಕರ ವಾತಾವರಣ ಪ್ರವಾಸಿಗರ ಮನ ತಣಿಸುತ್ತದೆ.

 

ಸಬ್ಬಲ ಬರೀದ್ ಶಾಹಿ ಉದ್ಯಾನವನ

ಸಬ್ಬಲ್ ಬರೀದ ಶಾಹಿ ಗುಮ್ಮಜ ಬೀದರ ಬಸ್ ನಿಲ್ದಾಣದ ಪಕ್ಕದಲ್ಲಿದೆ. ಬೃಹದಾಕಾರದ ಸುಂದರ ಕಲಾಕೃತಿಯ ಗುಮ್ಮಜವಾಗಿದೆ. ಬರೀದ ಶಾಹಿಯ ಸಮಾಧಿಯೊಂದಿಗೆ ಆತನ ೬೪ ಪತ್ನಿಯರ ಸಮಾಧಿಗಳು ಈ ಉದ್ಯಾನ ವನದಲ್ಲಿವೆ. ಈ ಗುಮ್ಮಜ ಅವರ ಮಗ ಅಮೀರಲಿ ಬಾದಶಾಹ ಕ್ರಿ.ಶ. ೧೫೩೦-೩೫ರಲ್ಲಿ ಕಟ್ಟಿಸಿದ್ದು. ಅದರ ಸಮೀಪದಲ್ಲಿಯೇ ಅನೇಕ ಗುಮ್ಮಜಗಳು ನಿರ್ಮಾಣಗೊಂಡಿವೆ. ಅಲ್ಲಿ ಈಗ ಬೀದರ ಜಿಲ್ಲಾಡಳಿತವು ಬರೀದ ಶಾಹಿ ಉದ್ಯಾನವನ್ನು ನವೀಕರಣಗೊಳಿಸಿದೆ. ಇಲ್ಲಿ ವಿವಿಧ ನಮೂನೆಯ ಸಸ್ಯ ರಾಶಿಗಳಿವೆ. ಮಕ್ಕಳ ಮನೋರಂಜನೆಗಾಗಿ ಆಟಿಕೆ, ತೂಗು ಉಯ್ಯಾಲೆ, ಮನುಷ್ಯರು, ಪ್ರಾಣಿಗಳ ಪ್ರತಿಕೃತಿಗಳನ್ನು ನಿರ್ಮಿಸಿದೆ. ಈ ಹೊಸ ಉದ್ಯಾನ ಹಳೆಯ ಗುಮ್ಮಜಗಳು ನೋಡಲು ಅತಿ ಸುಂದರವಾಗಿವೆ. ಈ ಬೃಹತ ಉದ್ಯಾನ ಪ್ರವಾಸಿಗರ ದಣಿವಾರಿಸುವ ಸುಂದರ ಸ್ಥಳವಾಗಿದೆ.

 

ಪಾಪನಾಶ ದೇವಾಲಯ

ಎಷ್ಟು ದೂರ ?
ಜಿಲ್ಲೆ : ೧ ಕಿ.ಮೀ.
ತಾಲ್ಲೂಕ : ೧ ಕಿ.ಮೀ

ಪುರಾತನ ಶಿವಲಿಂಗ ಹೊಂದಿದ ಶಿವ ದೇವಾಲಯವಾಗಿದೆ. ಗಿರಿ ಝರಿಗಳಿಂದ ಕೂಡಿದ ರಮ್ಯ ತಾಣವಾದ ಪಾಪನಾಶ ಪ್ರವಾಸಿಗಳ ಕಣ್ಮನ ಸೆಳೆಯುವುದು. ಶ್ರೀರಾಮನು ಈ ಶಿವಲಿಂಗ ಸ್ಥಾಪಿಸಿದನೆಂಬ ಪ್ರತೀತಿ ಇದೆ. ಶಿವರಾತ್ರಿಯಲ್ಲಿ ವಿಶೇಷ ಜಾತ್ರೆ ನಡೆಯುವುದು. ಶ್ರಾವಣ ಮಾಸದಲ್ಲಿ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಇದು ಜಗತ್ ಪ್ರಸಿದ್ಧ ಧಾರ್ಮಿಕ ಸಾಂಸ್ಕೃತಿಕ ಕೇಂದ್ರವಾಗಿದೆ.

ವಿಲಾಸಪೂರ ಕೆರೆಯ ಪ್ರದೇಶವನ್ನು ಸರ್ಕಾರವು ಪ್ರಕ್ಷಣೀಯ ಸ್ಥಳವನ್ನಾಗಿ ಗುರ್ತಿಸಿ ಈ ದಿಶೆಯಲ್ಲಿ ಸರ್ಕಾರ ಚಾಲನೆ ನೀಡಿದೆ. ಸೃಷ್ಟಿ ಸೌಂದರ್ಯದ ರಮ್ಯ ಸ್ಥಾನದಲ್ಲಿ ನಿರ್ಮಾಣ ಗೊಂಡಿರುವ ಬಸವ ಗಿರಿಯು ೧೨ ನೇ ಶತಮಾನದಲ್ಲಿ ಆಗಿ ಹೋದ ಬಸವಾದಿ ಶರಣರ ಮೌಲ್ಯಗಳನ್ನು ಬಿಂಬಿಸುವ ಸುಂದರ ತಾಣವಾಗಿದೆ. ಇದು ಪಾಪನಾಶ ದೇವಾಲಯದ ಸನಿಹದಲ್ಲಿದೆ. ವಚನ ಸಾಹಿತ್ಯ ಶರಣರ ಜೀವನಾದರ್ಶ ಸಾರುವ ಹಾಗೂ ನೈತಿಕ ಮೌಲ್ಯಗಳ ಪ್ರತಿಪಾದನೆ, ಛಲವಂತ ಶರಣ ಸಮಾಜ ನಿರ್ಮಾಣದ ಜವಾಬ್ದಾರಿ ಹೊತ್ತ ಶರಣ ವಿಶ್ವವಿದ್ಯಾಲಯ ಸ್ಥಾಪಿತವಾಗಿದೆ.

 

ಗುರುನಾನಕ ಝೀರಾ

ಎಷ್ಟು ದೂರ ?
ಜಿಲ್ಲೆ : ೧ ಕಿ.ಮೀ.
ತಾಲ್ಲೂಕ : ೧ ಕಿ.ಮೀ.

ಹೊಸ ಬಸ ನಿಲ್ದಾಣದ ಎದುರು ಉತ್ತರ ದಿಕ್ಕಿಗೆ ಹೋಗುವ ಮಾರ್ಗದಲ್ಲಿದೆ. ಇಳಿಜಾರು ಪ್ರದೇಶದಲ್ಲಿ ಗುರುನಾನಕ ಝರಾ ಹೆಸರಿನ ಗುರುದ್ವಾರ ಇದೆ. ಇದು ಸಿಖ್‌ಧರ್ಮಿಯರ ಪ್ರವಿತ್ರ ಸ್ಥಳಗಳಲ್ಲಿ ಒಂದಾಗಿದೆ. ದೇಶದ ನಾನಾ ಕಡೆಗಳಿಂದ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಗುರುನಾನಕರು ಪ್ರವಾಸ ಕಾಲಕ್ಕೆ ಇಲ್ಲಿಗೆ ಬಂದು ತಂಗಿರುವ ಕಥೆ, ಇಲ್ಲಿಯ ಜನರಿಗೆ ನೀರು ಒದಗಿಸಿದ ಕಥೆಗಳು ಆವರ ಸುತ್ತ ಹೆಣೆದುಕೊಂಡಿವೆ. ಭವ್ಯವಾದ ಪ್ರಾರ್ಥನಾ ಮಂದಿರ, ವಿಶಾಲವಾದ ಸಭಾಂಗಣ, ಊಟದ ವ್ಯವಸ್ಥೆಗಾಗಿರುವ ಲಂಗರ್ ಹೌಸ್, ಯಾತ್ರಿಗಳ ಸ್ನಾನಕ್ಕಿರುವ ಸುಂದರವಾದ ಕೊಳ, ತಿಳಿ ನೀರಿನ ಅಮೃತ ಕುಂಡ ಮುಂತಾದ ಕಟ್ಟಡಗಳಿವೆ. ಇಲ್ಲಿನ ಕಟ್ಟಡ ಭವ್ಯವಾಗಿದ್ದು ಪಕ್ಕದಲ್ಲಿ ಬಹುಉದ್ದೇಶಿಯ ಆಸ್ಪತ್ರೆ ಇದೆ. ಸಿಖ್ಪರಂಪರೆಯನ್ನು ಕಟ್ಟಿಕೊಡುವ ಚಿತ್ರಪಟಗಳ, ಹಲವಾರು ಮಾಹಿತಿ ಹೊಂದಿರುವ ಮ್ಯೂಸಿಯಂ ಗುರುದ್ವಾರದಲ್ಲಿದೆ.

 

ನರಸಿಂಹ ಝರಾ

ಎಷ್ಟು ದೂರ ?
ಜಿಲ್ಲೆ : ೫ ಕಿ.ಮೀ.
ತಾಲ್ಲೂಕ : ೫ ಕಿ.ಮೀ.

ಬೀದರಿನ ಪೂರ್ವ ದಿಕ್ಕಿಗೆ ಮಂಗಲಪೇಟನಿಂದ ಹಾದು ಹೋಗುವ ದಾರಿಯಲ್ಲಿರುವ ಕ್ಷೇತ್ರವೇ ನರಸಿಂಹ ಝರಾ. ಇದೊಂದು ಗುಹಾಂತರ ದೇವಾಲಯವಾಗಿದೆ. ಗುಹೆಯ ಒಳಗಿನಿಂದ ನೀರು ಹರಿಯುತ್ತದೆ. ನೀರು ೧೨ ತಿಂಗಳುಗಳ ಕಾಲ ಹರಿಯುತ್ತಿರುತ್ತಿವೆ. ಝರಿಯ ನೀರು ಮುಂದೆ ಮಲ್ಕಾಪೂರ ಕರ ಸರುತ್ತ ಗುಹೆಯಲ್ಲಿ ೯೦ ಮೀಟರ್ ದೂರದಷ್ಟು ಸೊಂಟದವರೆಗಿನ ನೀರಿನಲ್ಲಿ ನಡೆದುಕೊಂಡು ಹೋದಾಗ ಒಳಗಡೆ ನರಸಿಂಹ ದೇವರ ಮೂರ್ತಿಯನ್ನು ಕಾಣಬಹುದಾಗಿದೆ. ಇತ್ತೀಚೆಗೆ ಸರ್ಕಾರ ಜೀರ್ಣೋದ್ಧಾರ ಕಾರ್ಯವನ್ನು ಕೈಗೊಂಡಿದೆ. ನಿಸರ್ಗದ ಸುಂದರ ತಾಣವಾಗಿರುವ ಈ ಪ್ರದೇಶ ಪ್ರವಾಸಿಗರ ಗಮನ ಸೆಳೆಯುವ ಧಾರ್ಮಿಕ ಕೇಂದ್ರವಾಗಿದೆ. ಭಕ್ತ ಪ್ರಲ್ಹಾದನ ರಕ್ಷಣೆಗಾಗಿ ಅವತಾರ ಹೊಂದಿದ ಉಗ್ರ ನರಸಿಂಹನು ಶಾಂತವಾದ ಸ್ಥಳವೆಂದು ಹೇಳಲಾಗುತ್ತದೆ. ನರಸಿಂಹನು ದುಷ್ಟರ ಸಂಹಾರ, ಶಿಷ್ಟರ ರಕ್ಷಣೆ ಮಾಡುವ ದೇವ ಎನ್ನುವ ಪ್ರತೀತಿಯೂ ಇದೆ.

 

ಅಗ್ರಹಾರ

ಎಷ್ಟು ದೂರ ?
ಜಿಲ್ಲೆ : ೫ ಕಿ.ಮೀ.
ತಾಲ್ಲೂಕ : ೫ ಕಿ.ಮೀ.

ಇದು ಕೋಟೆಯ ಹತ್ತಿರ ಪೂರ್ವ ದಿಕ್ಕಿನಲ್ಲಿದೆ. ಅಗ್ರಹಾರ ದೇವಸ್ಥಾನದಲ್ಲಿ ವಿಷ್ಣುದೇವರು ಹಾವಿನ ಹೆಡೆಯ ಮೇಲೆ ಮಲಗಿರುವ ಸುಂದರ ೫ ಅಡಿಯ ಮೂರ್ತಿ ಇದೆ. ಈ ಮೂರ್ತಿಯು ಬಹಳ ಪ್ರಾಚೀನವಾಗಿದೆ. ಬಹುಶ: ಇದು ಸಹ ರಾಷ್ಟ್ರಕೂಟರ ಕಾಲದ್ದಾಗಿರಬೇಕೆಂದು ಇತಿಹಾಸಕಾರರ ಅನಿಸಿಕೆಯಾಗಿದೆ. ಇಂತಹ ಸುಂದರ ಅಪರೂಪ ಪ್ರಾಚೀನ ಮೂರ್ತಿಯ ದೇವಸ್ಥಾನ ಇದಾಗಿದೆ. ಪ್ರಾಚೀನ ಕಾಲದಲ್ಲಿ ಅಗ್ರಹಾರಗಳು ವೇದ ಅಧ್ಯಯನಗಳ ಕೇಂದ್ರಗಳಾಗಿದ್ದವು. ಅರಸರು ಬ್ರಾಹ್ಮಣರಿಗೆ ದಾನದ ರೂಪದಲ್ಲಿ ಅಗ್ರಹಾರಗಳನ್ನು ನೀಡುತ್ತಿದ್ದರು.

 

ಅಬುಲ್ ಫಯಾಜ್ ದರ್ಗಾ

ಎಷ್ಟು ದೂರ ?
ಜಿಲ್ಲೆ : ೬ ಕಿ.ಮೀ.
ತಾಲ್ಲೂಕ : ೬ ಕಿ.ಮೀ.

ಈ ದರ್ಗಾ ಬೀದರಿನ ಹಳೆಯನಗರದ ಹೊರವಲಯದಲ್ಲಿದೆ. ಬಸ್ ನಿಲ್ದಾಣದಿಂದ ೬ ಕಿ.ಮೀ. ಆಗುತ್ತದೆ. ವಿಶಾಲವಾದ ಸ್ಥಳ ಹಾಗೂ ಸುಂದರವಾದ ಎರಡು ಗುಮ್ಮಟಗಳಿಂದ ಕೂಡಿದ ಭವ್ಯ ಕಟ್ಟಡವಾಗಿದೆ. ಬಹಮನಿ ಅರಸರ ಕಾಲದ ಈ ಕಟ್ಟಡವು ತನ್ನದೇ ಆದ ವೈಶಿಷ್ಟಯ ಹೊಂದಿದೆ. ಅಬುಲ್ ಫಯಾಜ್ ಅವರು ಸೂಫಿ ಸಂತ ಗುಲಬರ್ಗಾದ ಖ್ವಾಜಾ ಬಂದೆ ನವಾಜ ಅವರ ಮೊಮ್ಮಗ. ಬಹಮನಿ ಅರಸರ ಆಸ್ಥಾನದಲ್ಲಿ ಅತ್ಯಂತ ಗೌರವಯುತವಾದ ಸ್ಥಾನ ಪಡೆದಿದ್ದ ಅಬುಲ್ ಫಯಾಜ್ ಅವರ ಸಮಾಧಿ ಇಲ್ಲಿದೆ. ಸೂಫಿ ಪರಂಪರೆಗೆ ಸೇರಿದ ಅಬುಲ್ ಫಯಾಜ್‌ರ ನೆನಪಿನಲ್ಲಿ ಪ್ರತಿ ವರ್ಷ ಉರುಸ್ ನಡೆಸಲಾಗುತ್ತದೆ. ಆಗ ಕವ್ವಾಲಿ ಗಾಯನ ಕೂಡ ಇರುತ್ತದೆ.

 

ಮಂಗಲ ಪೇಟ ಚರ್ಚ್

ರೆವರೆಂಡ ಜಾನ್ ವೆಸ್ಲಿ ಇವರು ಮೆಥೋಡಿಸ್ಟ್ ಸಭೆಯ ಸಂಸ್ಥಾಪಕರು. ೧೯೦೧ ರಲ್ಲಿ ಪ್ರಾರಂಭವಾಗಿದೆ. ಈ ಚರ್ಚ್ ಬ್ರೀಟೀಷರ ಕಾಲದಿದ್ದು. ಬೀದರಿನ ಹಳೆ ನಗರದ ಮಂಗಲಪೇಟ ಬಡಾವಣೆಯಲ್ಲಿದೆ. ಭವ್ಯವಾದ ಕಟ್ಟಡ ಆಕರ್ಷಣೀಯವಾಗಿದೆ. ಪ್ರತಿ ರವಿವಾರ ಇಲ್ಲಿ ಧಾರ್ಮಿಕ ಪ್ರಾರ್ಥನೆ ನಡೆಯುತ್ತದೆ. ಕ್ರೈಸ್ತ್ ಧರ್ಮಿಯರ ಯೇಸು ಸ್ವಾಮಿಯ ಆರಾಧನೆ ಮತ್ತು ಆತನ ಸಂದೇಶಗಳನ್ನು ಮನನ ಮಾಡಿಕೊಳ್ಳುವ ಕೇಂದ್ರವಾಗಿದೆ. ೨೫ ಡಿಸೆಂಬರದಂದು ಇಲ್ಲಿ ಜಾತ್ರೆ ಸೇರುತ್ತದೆ. ಬೀದರನಲ್ಲಿ ಮೊಟ್ಟ ಮೊದಲ ಕನ್ನಡ ಶಾಲೆ ಆರಂಭಿಸಿದ ಹಿರಿಮೆ ಕ್ರೈಸ್ತ ಮಿಶನರಿಗಳಿಗೆ ಸಲ್ಲುತ್ತದೆ. ನಾರ್ಮಾ ಫ್ರೆಡ್ರಿಕ್ ಎಂಬ ಕ್ರಿಶ್ಚಿಯನ್ ಮಹಿಳೆಯು ಕನ್ನಡ ಶಾಲೆ ಆರಂಭಿಸಿದರು. ಆಗ ಆರಂಭವಾದ ಶಾಲೆಯು ಸದ್ಯ ಎನ್.ಎಫ್.ಎಚ್.ಎಸ್. ಎಂಬ ಹೆಸರಿನಿಂದ ಪರಿಚಿತವಾಗಿದೆ.

 

ವಾಯು ನೆಲೆ

ಭಾರತೀಯ ವಾಯು ಸೇನೆಯ ಪ್ರಮುಖ ವೈಮಾನಿಕ ಕೇಂದ್ರವು ಬೀದರನಲ್ಲಿದೆ. ವಾಯುಪಡೆಯ ತರಬೇತಿ ಕೇಂದ್ರ ಇರುವ ಬೀದರ್‌ನ ಸೂರ್ಯಕಿರಣ ಏರೋಬ್ಯಾಟಿಕ್ ತಂಡವು ಬಾನಂಗಣದಲ್ಲಿ ಸಾಹಸ ಪ್ರದರ್ಶನ ನೀಡುವ ಜಗತ್ತಿನ ಅತ್ಯುತ್ತಮ ತಂಡಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಂಬತ್ತು ವಿಮನಗಳನ್ನು ಬಳಸಿ ಆಕಾಶದಲ್ಲಿ ಬಣ್ಣ ಬಣ್ಣದ ಚಿತ್ತಾರ ಬಿಡಿಸುವ ಜಗತ್ತಿನ ಮೂರು ತಂಡಗಳ ಪೈಕಿ ಭಾರತದ ವಾಯುಪಡೆಯೂ ಒಂದು. ಅದರ ಮೂಲ ನೆಲೆ ಇರುವುದು ಬೀದರ್‌ನಲ್ಲಿ. ಅತ್ಯಾಧುನಿಕ ಯುದ್ಧ ವಿಮಾನ ‘ಹಾಕ್ ಎಂ.ಕೆ. ೧೩೨’ ಯುದ್ಧ ವಿಮನ ಹಾರಾಟದ ತರಬೇತಿ ನೀಡುವ ದೇಶದ ಏಕೈಕ ಕೇಂದ್ರ ಬೀದರ್‌ನಲ್ಲಿದೆ.

 

ಬಿದರಿ ಕಲೆ

ಬೀದರ ಬಿದರಿ ಕಲೆಗಾಗಿ ಜಗತ್ಪ್ರಸಿದ್ಧವಾಗಿದೆ. ಸತು (Zinc) ತಾಮ್ರ (Copper) ಹಾಗೂ ಸೀಸ್ (Lead) ಈ ಧಾತುಗಳನ್ನು ೮೫:೧೨:೩ ಪ್ರಮಾಣದಲ್ಲಿ ಬೆರೆಸಿ ಕರಗಿಸಿ ತಯಾರಿಸಿದ ಆಕೃತಿಗಳ ಮೇಲೆ ರೇಖೆಗಳನ್ನು ಕೊರೆದು ಅದರಲ್ಲಿ ಬೆಳ್ಳಿ ತಂತಿ/ಹಾಳೆ ಕೂಡಿಸಲಾಗುತ್ತದೆ. ಬೀದರ ಕೋಟೆಯಲ್ಲಿನ ಬಾರೂದ್ ಖಾನಾದಲ್ಲಿ ದೊರಕುವ ಮಣ್ಣಿನ ದ್ರಾವಣದಲ್ಲಿ ಹಾಗೆ ತಯಾರಿಸಿದ ಕಲಾಕೃತಿಗಳನ್ನು ಅದ್ದಿದಾಗ ರಾಸಾಯನಿಕ ಪ್ರಕ್ರಿಯೆ ಏರ್ಪಡುತ್ತದೆ. ಬೆಳ್ಳಿ ಕೂಡಿಸಿದ ಭಾಗವನ್ನು ಹೊರತುಪಡಿಸಿ ಉಳಿದೆಲ್ಲ ಭಾಗ ಕಪ್ಪು ವರ್ಣಕ್ಕೆ ತಿರುಗುತ್ತದೆ. ಹೂದಾನಿ, ಆಭರಣ ಪೆಟ್ಟಿಗೆ, ಬಳೆಗಳು ಮುಂತಾದವುಗಳನ್ನು ತಯಾರಿಸುತ್ತಾರೆ. ಬಿದರಿ ಕಲಾಕೃತಿಗಳಿಗೆ ದೇಶ ವಿದೇಶಗಳಲ್ಲಿ ಬೇಡಿಕೆ ಹೆಚ್ಚುತ್ತಿದೆ. ಬೀದರ ಸಮೀಪದ ಚಿದ್ರಿ ಗ್ರಾಮದಲ್ಲಿ ಎರಕ ಹೊಯ್ದು ವಿವಿಧ ಆಕೃತಿಗಳನ್ನು ತಯಾರಿಸುವ ಕೆಲಸ ಜರುಗುತ್ತದೆ. ಇದಕ್ಕೆ ಚಿದ್ರಿ ಕಲೆ ಕೂಡ ಅನ್ನುತಾರೆ.