ಕನ್ನಡದ ಹಿರೇಮಠ ಸಂಸ್ಥಾನ

ಎಷ್ಟು ದೂರ ?
ಜಿಲ್ಲೆ : ೪೦ ಕಿ.ಮೀ.
ತಾಲ್ಲೂಕ : ೧ ಕಿ.ಮೀ.

ಭಾಲ್ಕಿ ನಗರದ ಹಿರೇಮಠ ಸಂಸ್ಥಾನವು ಪುರಾತನವಾಗಿದೆ. ೧೦೯ ವರ್ಷ ಬಾಳಿ ಬದುಕಿದ ಲಿಂಗೈಕ್ಯ ಡಾ: ಚನ್ನಬಸವ ಪಟ್ಟದ್ದೇವರು ಉರ್ದು ಪ್ರಾಬಲ್ಯವಿರುವ ಕಾಲದಲ್ಲಿಯೇ ಹೊರಗಡೆ ಉರ್ದು ಬೋರ್ಡ ಹಾಕಿ ಒಳಗೆ ಕನ್ನಡ ಕಲಿಸಿದ ಮಹಾನುಭಾವರು. ಕರ್ನಾಟಕ ಏಕೀಕರಣಕ್ಕಾಗಿ ದುಡಿದವರು. ಪೂಜ್ಯರ ಹೋರಾಟದಿಂದ ಭಾಲ್ಕಿ ಕರ್ನಾಟಕದಲ್ಲಿ ಉಳಿಯಲು ಸಾಧ್ಯವಾಯಿತು. ಕನ್ನಡ ಹಾಗೂ ಬಸವತತ್ವ ಅವರ ಉಸಿರಾಗಿತ್ತು. ಆದ್ದರಿಂದಲೇ ಈ ಮಠವು ಕನ್ನಡ ಮಠವೆಂದು ರಾಜ್ಯದಲ್ಲಿಯೇ ಖ್ಯಾತಿ ಪಡೆದಿದೆ. ಶ್ರೀ ಮಠದಲ್ಲಿ ಸದಾ ಕಾಲ ದಾಸೋಹ ನಡೆಯುತ್ತದೆ. ಬಡ ಮಕ್ಕಳಿಗೆ ಉಚಿತ ವಸತಿ ನಿಲಯ ವಿದೆ. ನಿತ್ಯ ಪ್ರಾರ್ಥನೆ, ಮಾಸಿಕ ಶಿವಾನುಭವ ಗೋಷ್ಠಿಗಳು ಕಾಲ ಸದಾ ನಡೆಯುತ್ತವೆ. ಪೂಜ್ಯರು ಕಾಯಕ ಮತ್ತು ದಾಸೋಹ ಮಾಡುತ್ತ ಎಲ್ಲರನ್ನು ಇಂಬಿಟ್ಟುಕೊಂಡವರು. ಚನ್ನ ಬಸವಾಶ್ರಮವು ಭಾಲ್ಕಿ ನಗರದ ಮಧ್ಯಭಾಗದಲ್ಲಿದೆ. ನಡೆದಾಡುವ ದೇವರೆಂದೇ ಖ್ಯಾತರಾದ ಶತಾಯುಷಿ ಪೂಜ್ಯ ಚನ್ನಬಸವ ಪಟ್ಟದ್ದೇವರ ಸಮಾಧಿ ಸ್ಥಳವಾಗಿದೆ. ಬಹು ಸುಂದರವಾದ ಧ್ಯಾನ ಮಂಟಪವಾಗಿದೆ. ಆಶ್ರಮದ ಪಶ್ಚಿಮ ದಿಕ್ಕಿಗೆ ವಿಶಾಲವಾದ ಕೆರೆಯಿದ್ದು ವಿಹಾರದ ತಾಣವಾಗಿದೆ

ಭಾಲ್ಕಿ ಕೋಟೆ

ಎಷ್ಟು ದೂರ ?
ಜಿಲ್ಲೆ : ೪೦ ಕಿ.ಮೀ.
ತಾಲ್ಲೂಕ : ೦ ಕಿ.ಮೀ.

ಎರಡು ಪ್ರವೇಶ ದ್ವಾರಗಳನ್ನೊಳ ಗೊಂಡಿರುವ ಭಾಲ್ಕಿ ಕೋಟೆಗೆ ಆರು ಕೊತ್ತಲುಗಳಿವೆ. ಕರಿ ಕಲ್ಲಿನಿಂದ ಕಟ್ಟಲಾದ ಈ ಕೋಟೆ ಚಿಕ್ಕದಾಗಿದ್ದರೂ ಭದ್ರವಾಗಿದೆ. ಸುಂದರವಾದ ರಂಗಮಹಲ ಹೊಂದಿರುವ ಬುರುಜ್, ಹತ್ತು ಕಂಬಗಳ ಮಂಟಪ, ನೆಲ ಮಳಿಗೆಗಳು, ಕಮನು, ತಟಾಕುಗಳು ಸುಂದರವಾಗಿವೆ. ಕೋಟೆಯ ಗೋಡೆಯಲ್ಲಿ ಎಲ್ಲ ದಿಕ್ಕುಗಳಿಗೂ ಗುಂಡು ಹಾರಿಸಲು ಬರುವಂತೆ ಕಿಂಡಿ, ತೆನೆಗಳನ್ನು ಬಿಡಲಾಗಿದೆ. ಕೋಟೆಯ ಪಕ್ಕದಲ್ಲಿರುವ ಭವ್ಯವಾದ ಬಾವಿಯನ್ನು ಸಹ ಚಂದ್ರಸೇನ ಜಾಧವ, ಅವನ ಮಗನಾದ ರಾಮಚಂದ್ರ ಜಾಧವನ ಕಾಲದಲ್ಲಿ ಈ ಎಲ್ಲ ಕಾಮಗಾರಿಗಳು ಪೂರ್ಣಗೊಂಡಿವೆ. ಔರಂಗಜೇಬನ ಸೇನಾಪತಿಯಗಿದ್ದ ನಿಜಾಮ ಉಲ್ ಮುಲ್ಕನು ಕ್ರಿ. ಶ. ೧೭೨೪ರಲ್ಲಿ ದಖನ್ ಪ್ರಾಂತದಲ್ಲಿ ಸ್ವತಂತ್ರ ನಿಜಾಮ ರಾಜ್ಯವನ್ನು ಸ್ಥಾಪಿಸಿ ಭಾಲ್ಕಿಯಲ್ಲಿದ್ದ ಮರಾಠರ ಅಧಿಕಾರವನ್ನು ಕಿತ್ತೊಗೆದನು. ಆ ನವಾಬನು ಭಾಲ್ಕಿ, ಅದರ ಸುತ್ತಲಿನ ಕೆಲವು ಗ್ರಾಮಗಳನ್ನು ದೇಶಮುಖರ ಒಡೆತನಕ್ಕೊಪ್ಪಿಸಿದನು. ಭಾರತದ ಸ್ವಾತಂತ್ರ ಸಂಗ್ರಾಮದಲ್ಲಿ ಭಾಲ್ಕಿ ಕೋಟೆ ಪಿತೂರಿ ಕೇಂದ್ರವಾಗಿ ಕೆಲಸ ಮಡಿದೆ. ಸ್ವಾತಂತ್ರೋತ್ತರ ಕಾಲದಲ್ಲಿಯೂ ಈ ಕೋಟೆಯಲ್ಲಿ ಹಲವಾರು ತೋಫುಗಳು, ಸಿಡಿಮದ್ದು, ಸೀಸದ ಗುಂಡು, ನಗಾರಿ ಮುಂತಾದವುಗಳಿದ್ದವು.

 

ಭಾತಂಬ್ರಾ ಕೋಟೆ

ಎಷ್ಟು ದೂರ ?
ಜಿಲ್ಲೆ : ೪೮ ಕಿ.ಮೀ.
ತಾಲ್ಲೂಕ : ೮ ಕಿ.ಮೀ.

ಭಾತಂಬ್ರಾ ಕೋಟೆಯು ಭಾಲ್ಕಿಯಿಂದ ೬ ಕಿ.ಮೀ.ದೂರದಲ್ಲಿದೆ. ಈ ಕೋಟೆಯು ಎಂಟು ಎಕರೆ ಭೂ ಪ್ರದೇಶದಲ್ಲಿ ಕರಿ ಕಲ್ಲಿನಿಂದ ಕಟ್ಟಲಾದ ಈ ಕೋಟೆ ಚೌಕಾಕಾರದ ಮಾದರಿಯಲ್ಲಿದೆ. ೨೫x೨೫ ಅಡಿಗಳ ವಿಸ್ತೀರ್ಣದ ಏಳು ಕೊತ್ತಲುಗಳಿಗೂ ಹಲವಾರು ತೆನೆಗಳಿವೆ. ಭವ್ಯವಾದ ಪ್ರವೇಶದ್ವಾರ ವಿಶಾಲವಾದ ಪ್ರಾಂಗಣ, ಜಳಜಿ ಹಾಗೂ ಅಂತರ ಗೋಪೂರಗಳನ್ನು ಒಳಗೊಂಡಿರುವ ಈ ಕೋಟೆ ೧೫೦ ಅಡಿಗಳಷ್ಟು ಎತ್ತರವಾಗಿದೆ. ನಾಲ್ಕೈದು ಜನರು ಕುಳಿತುಕೊಳ್ಳಬಹುದಾದಷ್ಟು ಸಿಂಹಾಸನ ಮಾದರಿಯ ಬುರುಜು ಕಣ್ಮನ ಸೆಳೆಯುತ್ತದೆ. ಕೋಟೆಯ ಪ್ರಮುಖ ಆಕರ್ಷಣೆಯಾದ ರಂಗ ಮಹಲಿನ ಒಳಗಡೆ, ವಿವಿಧ ಬಣ್ಣಗಳನ್ನು ಉಪಯೋಗೋಗಿಸಿ ವಿವಿಧ ವಿನ್ಯಾಸಗಳಲ್ಲಿ ಸುಳುವು ಎಲೆ, ಹೂಗಳನ್ನು ಚಿತ್ರಿಸಲಾಗಿದೆ. ೧೨ನೇ ಶತಮಾನದ ಪೂರ್ವದಲ್ಲೇ ಭಾತಂಬ್ರಾದಲ್ಲಿ ಕೋಟೆ ಇತ್ತೆಂದು ಗೋರ್ಟಾ ಶಾಸನದಲ್ಲಿ ಉಲ್ಲೇಖಗೊಂಡಿದೆ. ಮೌಖಿಕ ಪರಂಪರೆಯ ಮೇರೆಗೆ ಮರಾಠರ ಸಾಮಂತ ರಾಮಚಂದ್ರ ಸೇನ ಜಾಧವನ ಆಳ್ವಿಕೆಯಲ್ಲಿ ಪ್ರಸ್ತುತ ಸ್ಥಿತಿಯಲ್ಲಿರುವ ಕೋಟೆಯನ್ನು ಪುನರ್ ನಿರ್ಮಾಣ ಮಾಡಲಾಗಿದೆ ಎಂದು; ಅದರ ಕಾಲಾವಧಿ ೧೬೯೦ ಎಂದು ಗುರುತಿಸಲಾಗುತ್ತಿದೆ. ಕೋಟೆಯ ಆವರಣದಲ್ಲಿ ದೊರೆತಿರುವ ವೀರಭದ್ರೇಶ್ವರ ನಿಂತ ಭಂಗಿಯ ವಿಗ್ರಹ, ಕುಳಿತ ನಂದಿಯ ಮೂರ್ತಿ, ಆಳೆತ್ತರದ ಗಜ ಲಕ್ಷ್ಮಿಯ ಭಿತ್ತಿ ಶಿಲ್ಪ ಹಲವು ಮಾಸ್ತಿ ಕಲ್ಲುಗಳೇ ಕೋಟೆಯ ಪ್ರಾಚೀನ ಕುರುಹಿಗೆ ಸಾಕ್ಷಿಯಾಗಿವೆ. ಸತಿ ಬಾವಿ, ಸತಿ ದೇವಾಲಯ, ಭಾಲ್ಕಿ ಆಗಸಿ, ವಿರಕ್ತ ಮಠ ನೋಡತಕ್ಕ ಸ್ಥಳಗಳಾಗಿವೆ.

 

ದಕ್ಷಿಣ ಕಾಶಿ ಮೈಲಾರ

ಎಷ್ಟು ದೂರ ?
ಜಿಲ್ಲೆ : ೧೫ ಕಿ.ಮೀ.
ತಾಲ್ಲೂಕ : ೨೫ ಕಿ.ಮೀ.

ಬೀದರ- ಭಾಲ್ಕಿ ರಸ್ತೆಯ ಮೇಲೆ ಇರುವ ಮೈಲಾರ ಬೀದರದಿಂದ ೧೫ ಕಿ.ಮೀ. ಭಾಲ್ಕಿಯಿಂದ ೨೫ ಕಿ.ಮೀ. ದೂರದಲ್ಲಿದೆ. ಇದು ಭಾಲ್ಕಿ ತಾಲೂಕಿನ ಪ್ರಮುಖ ನೈಸರ್ಗಿಕ ತಾಣವಾಗಿದೆ. ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿದೆ.ಇಲ್ಲಿಯ ಮೈಲಾರ ಮಲ್ಲಣ್ಣಾ ದೇವಾಲಯ ಪವಿತ್ರ ಸ್ಥಾನವಾಗಿದೆ. ಕರ್ನಾಟಕ, ಮಹಾರಾಷ್ಟ್ರ ಹಾಗೂ ಆಂಧ್ರದಿಂದ ಭಕ್ತಾದಿಗಳು ಭಕ್ತಿ ಭಾವದಿಂದ ಆಗಮಿಸಿ ದರ್ಶನ ಪಡೆಯುತ್ತಾರೆ. ಒಂದು ತಿಂಗಳ ಪರ್ಯಂತ ಜಾತ್ರೆ ನಡೆಯುತ್ತದೆ. ಇದೊಂದು ಪ್ರಾಚೀನ, ಭವ್ಯ ದೇವಾಲಯವಾಗಿದೆ. ಸುಂದರ ಪಷ್ಕರಣೆ ಇದೆ. ದೇವಾಲಯದ ಸುತ್ತಲೂ ಹೊಂಡಗಳಿವೆ. ಮಹಾದೇವ, ಮಲ್ಲಣ್ಣ, ಮಾರ್ತಂಡನೆಂದು ಭಕ್ತರು ಪೂಜಿಸುವರು. ಕೊಬ್ಬರಿ ಮತ್ತ ಅರಶಿನ ಮಿಶ್ರಿತ ಭಂಡಾರ ಹಾರಿಸುವುದು ಇಲ್ಲಿಯ ವೈಶಿಷ್ಟ್ಯ. ದೇವಾಲಯದ ಸುತ್ತಲೂ ತೀರ್ಥ ಗುಂಡ, ತೆಪ್ಪೀ ಗುಂಡ, ಕಾಶಿ ಗುಂಡ, ಶನೇಶ್ವರ ಗುಂಡ, ವಿಠ್ಠಲ ರುಕ್ಮಿಣಿ ಗುಂಡ, ಜೋಗೀಂದ್ರನಾಥ ಕುಂಡ, ಭೈರವಕೊಳ ಹೀಗೆ ೧೦೮ ಗುಂಡಗಳಿದ್ದವು ಎಂದು ಹಿರಿಯರು ಹೇಳುತ್ತಾರೆ. ಇನ್ನು ಸ್ವಲ್ಪ ದೂರ ಹೋದರೆ ಅಲ್ಲಿ ಗಾಯಮುಖ (ಗುಪ್ತಲಿಂಗ), ಶನೇಶ್ವರ, ಮಾಣಿಕಪ್ರಭು ಮುಂತಾದ ದೇವಾಲಯಗಳಿವೆ. ಇವು ಸಂಪೂರ್ಣ ನೈಸರ್ಗಿಕ ಪರಿಸರದಲ್ಲಿವೆ. ಹಚ್ಚುಹಸಿರು ವನ, ಜುಳು ಜುಳು ಹರಿಯುವ ನೀರು, ಸುತ್ತಲಿನ ಪರಿಸರ ಪ್ರವಾಸಿಗರಿಗೆ ಮನ ತಣಿಸುತ್ತದೆ. ದನಗಳ ಜಾತ್ರೆ, ಮಾರಾಟ ಪ್ರಕ್ರಿಯೆ ಪ್ರತಿ ರವಿವಾರ ನಡೆಯುತ್ತದೆ. ಪ್ರತಿ ಅಮವಾಸ್ಯೆ ಹಾಗೂ ಶ್ರಾವಣ ಮಾಸದಲ್ಲಿ ಜನ ಕಕ್ಕಿರಿದು ಸೇರಿರುತ್ತಾರೆ.

 

ಅಮರೇಶ್ವರ ದೇವಾಲಯ

ಎಷ್ಟು ದೂರ ?
ಜಿಲ್ಲೆ : ೪೦ ಕಿ.ಮೀ.
ತಾಲ್ಲೂಕ : ೦ ಕಿ.ಮೀ.

ತಾಲೂಕು ಕೇಂದ್ರ ಔರಾದ ಪಟ್ಟಣದ ಮಧ್ಯ ಭಾಗದಲ್ಲಿ ಚಾಲುಕ್ಯರ ಕಾಲದ (೧೧ನೇ ಶತಮಾನದ) ಅಮರೇಶ್ವರ ದೇವಾಲಯವಿದೆ. ದೇವಾಲಯದ ಕಟ್ಟಡ ವೇಸರ ಶೈಲಿ ಮಾದರಿಯಲ್ಲಿದೆ. ಕನ್ನಡ ಮತ್ತು ಉರ್ದು ಭಾಷೆಯ ಶಾಸನಗಳು ಈ ದೇವಾಲಯದಲ್ಲಿರುವುದು ಧಾರ್ಮಿಕ ಸಮನ್ವಯದ ಪ್ರತೀಕವಾಗಿದೆ.

ದೇವಾಲಯದ ಗರ್ಭಗುಡಿಯಲ್ಲಿ ಕಾಶಿ ಮಾದರಿಯ ಉದ್ಭವ ಲಿಂಗವಿದೆ ಸಮಕಾಲೀನ ಶರಣ ಪರಂಪರೆಯ ಅಮರೇಶ್ವರ ಶರಣರು, ಸಂತಾನ ಇಲ್ಲದವರಿಗೆ ಸಂತಾನ ಭಾಗ್ಯದ ವರ ನೀಡುವ ಪವಾಡ ಪುರುಷರಾಗಿದ್ದರು ಎಂಬ ಪ್ರತೀತಿ ಇದೆ. ಅಮರೇಶ್ವರ ದೇವಾಲಯ ನಿರ್ಮಾಣದ ಸಂದರ್ಭದಲ್ಲಿಯೇ ಅದರ ದಕ್ಷಿಣ ದಿಕ್ಕಿಗೆ ೧ ಕಿ.ಮೀ. ಅಂತರದಲ್ಲಿ ನಿರ್ಮಿಸಲಾದ ಪುರಾತನ ಚಂದನಕೆರೆಯೊಂದಿಗೆ ದೇವಾಲಯದ ಉತ್ತರಕ್ಕೆ ಪುರಾತನ ಕಾಲದ ಅಮೃತ ಕುಂಡಯಿದ್ದು ಸದಾಕಾಲ ನೀರಿನ ಒರತೆ ಇರುವುದು ಇಲ್ಲಿಯ ವಿಶೇಷ.

ಶಿವರಾತ್ರಿಯ ಸಂದರ್ಭದಲ್ಲಿ ಸಾಂಸ್ಕೃತಿಕ ವೈಭವದ ಒಂದು ವಾರ ಕಾಲ ಅಂತರರಾಜ್ಯ ಅಮರೇಶ್ವರ ಜಾತ್ರೆ ನಡೆಯುತ್ತದೆ. ಕಳೆದ ಐದು ದಶಕಗಳಿಂದ ರಾಜ್ಯದ ಏಕ್ಯೆಕ ಒಂಟೆ ಜಾತ್ರೆ ನಡೆಯುವ ಸ್ಥಳವಿದೆ. ಅಲ್ಲದೆ ಅಂತರಾಜ್ಯ ವ್ಹಾಲಿಬಾಲ್ ಪಂದ್ಯವಳಿ ನಡೆಸಲಾಗುತ್ತಿದೆ. ಔರಾದ ಪಟ್ಟಣದ ಸುತ್ತ ಮುತ್ತ ಉತ್ಪನನ ಮಾಡುವಾಗ ಚಾಲುಕ್ಯರ ಕಾಲದ ಐತಿಹಾಸಿಕ ಅವಶೇಷಗಳು ಪತ್ತೆಯಾಗಿದ್ದು, ದೇವಾಲಯದ ಸಂಗ್ರಹಗಾರ ಮತ್ತು ಅಮರೇಶ್ವರ ಮಹಾ ವಿದ್ಯಾಲಯಗಳಲ್ಲಿ ಸಂಗ್ರಹಿಸಿಡಲಾಗಿದೆ. ಔರಾದದಿಂದ ೧೦ ಕಿ.ಮೀ. ದೂರದಲ್ಲಿರುವ ಮುಧೋಳ (ಬಿ) ಗ್ರಾಮದಲ್ಲಿ ಗಡಿ (ಕೋಟೆ) ಇದೆ. ಬಿಳಿ ಮಣ್ಣನ್ನು ಹದಗೊಳಿಸಿ ಸುಟ್ಟು ತಯಾರಿಸಿ ಕಟ್ಟಲಾದ ಸಣ್ಣ ಕೋಟೆ ಇದಾಗಿದೆ.

 

ಶಿವಾಜಿ ಸಂತಾಜಿಯ ಸ್ಮಾರಕ

ಎಷ್ಟು ದೂರ ?
ಜಿಲ್ಲೆ : ೨೫ ಕಿ.ಮೀ.
ತಾಲ್ಲೂಕ : ೧೫ ಕಿ.ಮೀ.

ಸಂತಪೂರ ಗ್ರಾಮ ಬೀದರದಿಂದ ಔರಾದ ಮಾರ್ಗವಾಗಿ ಹೋಗುವಾಗ ೩೦ಕಿ.ಮೀ. ಅಂತರದಲ್ಲಿ ಬರುವ ಗ್ರಾಮ. ಇದು ನಾಲ್ಕು ಮುಖ್ಯ ರಸ್ತೆಯ ಮೇಲಿರುವ ಗ್ರಾಮವು ಸಹ. ಇಲ್ಲಿಂದ ವಡಗಾಂವ ಮಾರ್ಗಕ್ಕೆ ಹೋಗುವಾಗ ಉತ್ತರಕ್ಕೆ ಕಾಣಿಸುವ ಭವ್ಯ ಸ್ಮಾರಕವೇ ಶಿವಾಜಿ ಸಂತಾಜಿಯ ಸ್ಮಾರಕ ನಿಜಾಮ ಶಾಹಿ ದಬ್ಬಾಳಿಕೆ ಆಡಳಿತ ವಿರುದ್ಧ ಧ್ವನಿ ಎತ್ತಿ ಈ ಭಾಗದ ಶಿವಾಜಿ ಎಂದೇ ಖ್ಯಾತರಾದ ಸಂತಾಜಿ ಪಾಂಡ್ರೆ ಅವರ ಅಪರೂಪದ ಸ್ಮಾರಕ. ಈ ಹಿಂದೆ ತಾಲೂಕು ಕೇಂದ್ರದ ಸ್ಥಾನಮಾನ ಹೊಂದಿರುವ ಸಂತಪೂರ ಎಂಬ ಹೆಸರು ಸಂತಾಜಿ ಪಾಂಡ್ರೆ ಹೆಸರಿನಿಂದಲೇ ಬಂದಿದೆ ಎಂದು ಹೇಳುತ್ತಾರೆ. ಈ ಭಾಗ ನಿಜಾಮನ ಆಡಳಿತದ ವ್ಯಾಪ್ತಿಯಲ್ಲಿದ್ದಾಗ ಆಗಿನ ಅಧಿಕಾರಿಗಳು, ಪೊಲೀಸರು ಒತ್ತಾಯ ಪೂರ್ವಕವಾಗಿ ಜನರಿಂದ ಕರ ವಸೂಲಿ ಮಾಡುತ್ತಿದ್ದರು. ಧೈರ್ಯ ಶಾಲಿಯಾದ ಸಂತಾಜಿ ಪಾಂಡ್ರೆ ಒತ್ತಾಯದ ಕರ ವಸೂಲಿ ಮಾಡುವುದರ ವಿರುದ್ಧ ಪ್ರತಿಭಟಿಸಿದರು. ಕರ ವಸೂಲಿಗೆ ಬಂದ ಅಧಿಕಾರಿಗಳಿಗೆ ದಿಗ್ಬಂಧನ ಹಾಕಿದರು. ಇದರಿಂದ ಕೆರಳಿದ ನಿಜಾಮನ ಪೊಲೀಸರು ಒಂದು ದಿನ ರಾತ್ರಿ ಬಂದು ಯಾರಿಗೊ ಗೊತ್ತಿಲ್ಲದಂತೆ ಸಂತಾಜಿ ಪಾಂಡ್ರೆಯವರನ್ನು ಬಂಧಿಸಿ ಹೈದ್ರಾಬಾದಿಗೆ ಕರೆದೊಯ್ದರು. ಅಲ್ಲಿ ಅವರಿಗೆ ಸಾಕಷ್ಟು ಚಿತ್ರ ಹಿಂಸೆ ನೀಡಿದರು. ಅದರ ಪರಿಣಾಮ ಅವರು ಮರಣ ಹೊಂದಿದರು. ಮರಣ ಹೊಂದುವ ಪೂರ್ವ ನಿಜಾಮ ಸರ್ಕಾರಕ್ಕೆ ಮನವಿ ಮಾಡಿಕೊಂಡರು. ನಾನು ನಿರ್ಮಿಸಿದ ಸ್ಮಾರಕದಲ್ಲಿ ನಮ್ಮ ಸಮಾಧಿಯಾಗಬೇಕೆಂದು ಅಧಿಕಾರಿಗಳಿಗೆ ಕೇಳಿಕೊಂಡರು. ಅದರಂತೆ ಸಂತಾಜಿ ಪಾಂಡ್ರೆಯವರ ಸಮಾಧಿ ಸಂತಪೂರದಲ್ಲಿ ಮಾಡಲಾಗಿದೆ ಎಂಬ ಹಿರಿಯರ ವಾಣಿ ಇದೆ. ಸಂತಾಜಿಯವರ ಸ್ಮಾರಕ ಬೃಹದಾಕಾರವಾಗಿದ್ದು, ನೋಡಲು ನಯನ ಮಮನೋಹರವಾಗಿದೆ. ಸ್ಮಾರಕದ ಎದುರು ಆಕರ್ಷಕ ನೀರಿನ ಹೊಂಡವಿದ್ದು ಇದು ನೀರು ಚಿಮ್ಮುವ ಕಾರಂಜಿ ಎಂದು ಕರೆಯಲಾಗುತ್ತಿದೆ. ಈ ಸ್ಮಾರಕದ ಪಕ್ಕದಲ್ಲಿಯೇ ಸಂತಾಜಿಯವರ ಇಬ್ಬರು ಸಹೋದರಿಯವರ ಸಮಾದಿಗಳಿರುವುದು ವಿಶೇಷವಾಗಿದೆ.