ವೈವಿದ್ಯಮಯ ಶಿಲ್ಪಗಳು

ನಾಗ ನಾಗಿಣಿಯರ ಕೆಲವು ಶಿಲ್ಪಗಳು ಕಲ್ಯಾಣದ ಸುತ್ತಲಿನ ಪ್ರದೇಶದಲ್ಲಿ ಕಂಡು ಬರುತ್ತವೆ. ಇವು ಚಾಲುಕ್ಯರ ಸಾಮಂತರಾಗಿದ್ದ ರಂಜೋಳ ಸಿಂದರ ಕುಲದೈವಕ್ಕೆ ಸಂಕೇತವಾಗಿರಬಹುದು. ಕಪ್ಪು ಬಣ್ಣದ ಬೆಸಾಲ್ಟ ಶಿಲೆಯಲ್ಲಿ ಕೆತ್ತಲಾದ ನಾಗ ದಂಪತಿ ವಿಗ್ರಹವು ೪೫-೨೬ ಅಂಗುಲವಿದೆ. ನಾಗ ನಾಗಿಣಿಯರು ಮಾನವ ರೂಪದ ಹಾವುಗಳು. ನಾಗಿಣಿಗೆ ೫, ನಾಗನಿಗೆ ೭ ಹೆಡೆಗಳಿವೆ. ನಾಗನ ಬಲಗೈಯಲ್ಲಿ ಖಡ್ಗ, ಎಡಗೈಯನ್ನು ನಾಗಿಣಿಯ ಭುಜದ ಮೇಲೆ ಇದೆ. ನಾಗಿಣಿಯ ಎಡಗೈಯಲ್ಲಿ ವಜ್ರವಿದ್ದು ಬಲಗೈಯನ್ನು ನಾಗನ ಹಿಂಭಾಗದಿಂದ ನಾಗನ ಹೊಟ್ಟೆಗೆ ಹಿಡಿದಿರುವ ಈ ಶಿಲ್ಪವು ಸುಂದರವಾಗಿದೆ. ೧೨ನೇ ಶತಮಾನದಲ್ಲಿ ಕೆತ್ತಿರಬಹುದಾದ ಗರುಡನ ವಿಗ್ರಹವು ಕುಳಿತುಕೊಂಡು ನಮಸ್ಕರಿಸುವ ಆಂಜನೇಯನ ಭಂಗಿಯಲ್ಲಿದೆ. ೨೬-೧೫ ಅಂಗುಲದಲ್ಲಿದ್ದು ತಿಳಿ ಹಸಿರು ಕಲ್ಲಿನಲ್ಲಿ ಕೆತ್ತಲಾಗಿದೆ. ಕಿರೀಟದ ಮೇಲ ಭಾಗದಲ್ಲಿ ಗುಂಗುರ ಕೂದಲು ಕಾಣುತ್ತೇವೆ. ಕೊರಳ, ಕಿವಿ, ರಟ್ಟೆ ಮತ್ತು ಮುಂಗೈಗಳಲ್ಲಿ ನಾಗಗಳು ಸುತ್ತಿರುವವು. ಆದರೆ ಕಾಲಲ್ಲಿ ಮಾತ್ರ ಕಡಗ ಚೈನುಗಳಿವೆ. ಸೊಂಟದಲ್ಲಿ ಸರಪಳಿಯಂತೆ ಆಭರಣದ ಪಟ್ಟಿಯು ಜೊತು ಬಿದ್ದಿದೆ. ಈ ಶಿಲ್ಪದ ಎರಡು ಭುಜದ ಮೇಲೆ ಎರಡು ಬಿಚ್ಚಿದ ಹಾರುವ ರೆಕ್ಕೆಗಳನ್ನು ಕಾಣಬಹುದು. ಇಲ್ಲಿಯ ವಸ್ತು ಸಂಗ್ರಹಾಲಯದಲ್ಲಿ ವರಾಹ, ಸರ್ಪ ಶಯನ ವಿಷ್ಣು, ಮಹಿಷಾಸುರ ಮರ್ದನಿ, ಗಜಾಸೂರನ ವಧೆ, ನಟರಾಜ, ಲಕ್ಷ್ಮೀ-ನಾರಾಯಣ, ಶಿವ ಪಾರ್ವತಿ, ಗಣಪತಿ, ಯಕ್ಷ-ಯಕ್ಷಿಣಿಯರ ವಿಗ್ರಹಗಳು ಆಕರ್ಷಣೀಯವಾಗಿವೆ.

ಪರುಷ ಕಟ್ಟೆ

ಎಷ್ಟು ದೂರ ?
ಜಿಲ್ಲೆ : ೮೫ ಕಿ.ಮೀ.
ತಾಲ್ಲೂಕ : ೧ ಕಿ.ಮೀ.

ಭಕ್ತಿ ಭಂಡಾರಿ ಮಹಾ ಮಾನವತಾವಾದಿ ಬಸವಣ್ಣನವರ ಕಾಲದಲ್ಲಿ ಮಹಾಮನೆಯಷ್ಟೇ ಪರುಷಕಟ್ಟೆಗೂ ಮಹತ್ವದ ಸ್ಥಾನವಿತ್ತು. ಬಿಜ್ಜಳನ ಪ್ರಧಾನ ಮಂತ್ರಿಯಾಗಿದ್ದ ಬಸವಣ್ಣನವರು ಈ ಸ್ಥಳದಲ್ಲಿ ಕುಳಿತು ಜನ ಸಾಮಾನ್ಯರ ಕುಂದು ಕೊರತೆಗಳನ್ನು, ಮಾನಸಿಕ ತುಮುಲಗಳನ್ನು ಬಗೆ ಹರಿಸುತ್ತಿದ್ದರೆಂದು ಪುರಾಣಗಳು ಹೇಳುತ್ತವೆ. ಅವರು ನೀಡುತ್ತಿದ್ದ ನ್ಯಾಯವನ್ನು ಭಕ್ತಾದಿಗಳು ಪರುಷದಂತೆ ಭಾವಿಸುತ್ತಿದ್ದರು. ಎಲ್ಲ ವಿಧದ ನ್ಯಾಯ ನೀಡುವ, ಎಲ್ಲರನ್ನು ಸಮಾಧಾನ ಪಡಿಸುವ ಈ ಸ್ಥಳಕ್ಕೆ ಪರುಷಕಟ್ಟೆ ಎಂಬ ಹೆಸರು ಬಂದಿದೆ.

ದಿನನಿತ್ಯ ಹಾಗೂ ಶ್ರಾವಣಮಾಸದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಕಲ್ಯಾಣಕ್ಕೆ ಭೇಟಿ ಕೊಡುವ ಭಕ್ತಾದಿಗಳು ಪುರಾಣ ಪ್ರಸಿದ್ದ ಪರುಷ ಕಟ್ಟೆಗೆ ಬಂದು ನಮಿಸಿ ಹೋಗುತ್ತಾರೆ.

 

ಪ್ರಭುದೇವರ ಗದ್ದುಗೆ

ಎಷ್ಟು ದೂರ ?
ಜಿಲ್ಲೆ : ೮೫ ಕಿ.ಮೀ.
ತಾಲ್ಲೂಕ : ೧ ಕಿ.ಮೀ.

ಪ್ರಭುದೇವರ ಗದ್ದುಗೆ ಮಠವು ಬಸವ ಕಲ್ಯಾಣದಲ್ಲಿಯ ಪ್ರಮುಖ ಸ್ಥಳವಾಗಿದೆ. ಇದು ಅರುಹಿನ ಮನೆಯ ಸಮೀಪವಿದೆ. ಇದನ್ನು ಅಲ್ಲಮಪ್ರಭುವಿನ ಮಠವೆಂದು, ಶೂನ್ಯ ಸಿಂಹಾಸದ ಮೂಲಪೀಠವೆಂದು ಹೇಳಲಾಗುತ್ತದೆ. ಸುಂದರವಾದ ಕಟ್ಟಡವಾಗಿದೆ. ಈ ಪೀಠದ ಕರ್ತೃಗಳಾದ ಪ್ರಭುದೇವರು ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವಿಯಲ್ಲಿ ತಂದೆ ನಿರಹಂಕಾರ ತಾಯಿ ಸುಜ್ಞಾನಿ ದೇವಿ ಉದರದಲ್ಲಿ ಜನಿಸಿದರು. ಮಾಯಾ ಕೋಲಾಹಲ ನಿರಂಜನ ಜಗದ್ಗುರು ಎಂಬ ಬಿರುದುಗಳಿಂದ ಶೋಭಿತರಾಗಿದ್ದರು. ಬಸವಣ್ಣನವರು ಅಂದು ಸ್ಥಾಪಿಸಿದ ಅನುಭವ ಮಂಟಪದ ಪ್ರಥಮ ಅಧ್ಯಕ್ಷರಾಗಿದ್ದರು. ಗೊಗ್ಗಯ್ಯ ಮುಕ್ತಾಯಕ್ಕ, ಸಿದ್ಧರಾಮ, ಗೋರಕ್ಷ ಮೊದಲಾದ ಶರಣರಿಗೆ ಉಪದೇಶ ನೀಡಿದ್ದರು.

ಭಕ್ತಿ-ವಿರಕ್ತಿ ಹಾಗೂ ಬೆಡಗಿನ ೧೬೪೫ ಕ್ಕೂ ಹೆಚ್ಚು ವಚನಗಳು ಲಭಿಸಿವೆ. ಗುಹೇಶ್ವರ ಎಂಬುದು ಅಲ್ಲಮಪ್ರಭು ದೇವರ ವಚನಗಳ ಅಂಕಿತನಾಮವಾಗಿದೆ.

 

ಅಕ್ಕ ನಾಗಮ್ಮನ ಗವಿ

ಎಷ್ಟು ದೂರ ?
ಜಿಲ್ಲೆ : ೮೫ ಕಿ.ಮೀ.
ತಾಲ್ಲೂಕ : ೧ ಕಿ.ಮೀ.

ಬೀದರ ಬಸ್ ನಿಲ್ದಾಣದಿಂದ ೮೫ ಕಿ.ಮೀ. ದೂರ. ಬಸವಕಲ್ಯಾಣನಿಂದ ೧ ಕಿ.ಮೀ. ಶಿವ ಶರಣೆ ಅಕ್ಕನಾಗಮ್ಮ ತಾಯಿಯವರು ಮಹಾತ್ಮ ಬಸವಣ್ಣನವರ ಸಹೋದರಿ. ಬಾಗೆವಾಡಿಯ ಮಾದರಸ, ಮಾದಲಾಂಬಿಕೆಯರ ಮಗಳು. ಬಸವಣ್ಣನವರಿಗೆ ಬೆನ್ನಾಸರೆಯಾಗಿ ನಿಂತವಳು. ಬಸವಣ್ಣನವರ ವಿದ್ಯಾರ್ಜನೆ ಹಾಗೂ ಕಲ್ಯಾಣ ಕ್ರಾಂತಿಯ ಸಮಯದಲ್ಲಿ ಬೆಂಗಾವಲಾಗಿ ನಿಂತಿದ್ದಳು.

ಕ್ರಾಂತಿ ನಡೆದಾಗ ವಚನ ಸಾಹಿತ್ಯದ ರಕ್ಷಣೆಗಾಗಿ ಶರಣ ಪಡೆಯೊಡನೆ ಇಳಿ ವಯಸ್ಸಿನಲ್ಲಿಯೂ ಕತ್ತಿ ಹಿಡಿದು ಬೆನ್ನಟ್ಟಿದ ಧೀರ ಶರಣೆ. ಸೋವಿದೇವನ ಸೈನ್ಯದೊಂದಿಗೆ ಯುದ್ಧಮಾಡಿ ಕ್ರಾಂತಿ ಗಂಗೋತ್ರಿ ಎನಿಸಿದ್ದಳು. ಮೊದಲಿನಿಂದಲೂ ಯೋಗಸಾಧನೆಯ ಹಂಬಲ ತೀವ್ರತರ ವಾಗಿರುವದರಿಂದ ಕಲ್ಯಾಣಕ್ಕೆ ಬಂದ ಮೇಲೆ ಬಸವಣ್ಣನವರ ಮಹಾಮನೆಯ ಹತ್ತಿರವಿರುವ ಗುಹೆಯಲ್ಲಿ ಯೋಗ ಸಾಧನೆಯ ಗೈಯುತ್ತಿದ್ದಳು. ಅದುವೇ ಅಕ್ಕ ನಾಗಮ್ಮನ ಗವಿ. ಅದರ ಪಕ್ಕದಲ್ಲಿ ಬಸವಣ್ಣನವರ ವಿಚಾರ ಪತ್ನಿಯಾದ ಪೃಥ್ವಿಗಗ್ಗಳ ಚಲುವೆಯಾದ ನೀಲಾಂಬಿಕಾ ತಾಯಿಯವರ ಗವಿಕೂಡ ಇದ್ದು ಈ ಎರಡು ಗವಿಗಳ ಮಧ್ಯದಲ್ಲಿ ಅಕ್ಕನಾಗಮ್ಮನ ಮೂರ್ತಿಯೂ ಸಹ ಇದೆ. ಈ ಸ್ಥಾನವು ಐತಿಹಾಸಿಕವಾದ ತ್ರೀಪುರಾಂತ ಕೆರೆಯ ದಡದಲ್ಲಿದೆ. ಇವೆರಡು ಗವಿಗಳ ಸಮೀಪದಲ್ಲಿ ಅರುಹಿನ ಮನೆ, ಹಡಪದ ಅಪ್ಪಣ್ಣನವರ ಗವಿ ಇದೆ.

 

ಬಂದವರ ಓಣಿ

ಎಷ್ಟು ದೂರ ?
ಜಿಲ್ಲೆ : ೮೫ ಕಿ.ಮೀ.
ತಾಲ್ಲೂಕ : ೧ ಕಿ.ಮೀ.

ಬೀದರ ಬಸ್ ನಿಲ್ದಾಣದಿಂದ ೮೫ ಕಿ.ಮೀ. ದೂರ. ಬಸವಕಲ್ಯಾಣನಿಂದ ೩ ಕಿ.ಮೀ ಕಲ್ಯಾಣಕ್ಕೆ ಆಗಮಿಸುವ ಸಕಲ ಶರಣರಿಗೆ ಪ್ರಥಮ ಸ್ವಾಗತ ಕೋರುವ ಸ್ಥಾನವೇ ಬಂದವರ ಓಣಿ. ೧೨ನೇ ಶತಮಾನದಲ್ಲಿ ವೈರಾಗ್ಯ ನಿಧಿ ಅಕ್ಕಮಹಾದೇವಿ ತಾಯಿಯು ಮಹಾತ್ಮಾ ಬಸವಣ್ಣನವರ ಮಹಿಮೆ ಕೇಳಿ ಉಡತಡಿಯಿಂದ ಕಲ್ಯಾಣಕ್ಕೆ ಬಂದಾಗ ಪ್ರಪ್ರಥಮವಾಗಿ ಈ ಸ್ಥಳದಲ್ಲಿ ಲಿಂಗಾರ್ಚನೆ ಕೈಕೊಂಡಿದ್ದರು. ಅಕ್ಕನು ಕಲ್ಯಾಣಕ್ಕೆ ಪ್ರವೇಶಿಸುವ ಮೊದಲೇ ನಿರಂಜನ ಜಗದ್ಗುರುಗಳಾದ ಅಲ್ಲಮ ಪ್ರಭುಗಳು ಅಕ್ಕಳ ಸತ್ವ ಪರೀಕ್ಷೆಗೆಂದು ಶಿವಶರಣ ಕಿನ್ನರಿ ಬೊಮ್ಮಯ್ಯನಿಗೆ ಕಳುಹಿಸಿದಾಗ ಬೊಮ್ಮಯ್ಯ ತಾಯಿಯ ವೈರಾಗ್ಯಕ್ಕೆ ಶರಣು ಹೋಗಿ “ಹುಲಿನೆಕ್ಕಿ ಬದುಕಿದೆ” ಎಂದು ಉದ್ಗಾರ ತೆಗೆಯುತ್ತಾರೆ. ಪುಣ್ಯ ಧರ್ಮಿಗಳು ನಡೆದಾಡಿದ ಈ ಸ್ಥಳವು ಜಾಗೃತ ಕೇಂದ್ರವಾಗಿದೆ. ಇಂದಿಗೂ ಹಾಲಿನಂತಹ ಹರಿಯುವ ನೀರಿನ ಝರಿಯಿಂದೊಡಗೂಡಿ ಪ್ರವಾಸಿ ಭಕ್ತರಿಗೆ ಆಕರ್ಷಣಿಯ ರಮ್ಯ ಸ್ಥಾನವಾಗಿದೆ.

 

ಸಿದ್ಧಶೈಲ

ಗಡಿಭಾಗದ ಕನ್ನಡ ಹೋರಾಟ ಗಾರ್ತಿಯರು, ತ್ರಿಪದಿಯಲ್ಲಿ ಶಿವಯೋಗಿ ಸಿದ್ಧರಾಮೇಶ್ವರ ಪುರಾಣ ರಚಿಸಿದವರು ಆದ ಡಾ. ಜಯದೇವಿ ತಾಯಿ ಲಿಗಾಡೆಯವರು ಕನ್ನಡ ನಾಡಿನ ಹೆಸರಾಂತ ಲೇಖಕಿಯರು. ಅನೇಕ ಶರಣರ ವಚನಗಳನ್ನು ಕನ್ನಡದಿಂದ ಮರಾಠಿ ಭಾಷೆಗೆ ಅನುವಾದಿಸಿದ್ದಾರೆ. ಇವರು ೫೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇವರು ಸೋಲಾಪೂರ ಕರ್ನಾಟಕಕ್ಕೆ ಸೇರದಿದ್ದರೆ. ನಾನು ಮಹಾರಾಷ್ಟ್ರ ನೆಲದಲ್ಲಿ ಉಳಿಯುವದಿಲ್ಲವೆಂದು ಹಟ ಹಿಡಿದು ಕೊನೆಯ ಅವಧಿಯಲ್ಲಿ ಬಸವಕಲ್ಯಾಣಕ್ಕೆ ಬಂದು ನೆಲೆಸಿ ಕೊನೆಗೆ ಇಲ್ಲಿಯೇ ಲಿಂಗೈಕ್ಯರಾದರು. ಅವರ ಸಮಾಧಿ ಸ್ಥಳವು ಸಿದ್ಧಶೈಲವಾಗಿದೆ. ಭಕ್ತಿ ಭವನವೆಂಬ ಕಟ್ಟಡವು ನೂತನ ಅನುಭವ ಮಂಟಪ ಪಕ್ಕದಲ್ಲಿಯ ಪ್ರಶಾಂತ ವಾತಾವರಣದಲ್ಲಿದೆ.

 

ನೂತನ ಅನುಭವ ಮಂಟಪ

ಎಷ್ಟು ದೂರ ?
ಜಿಲ್ಲೆ : ೮೫ ಕಿ.ಮೀ.
ತಾಲ್ಲೂಕ : ೨ ಕಿ.ಮೀ.

ಭಾರತ ದೇಶದ ಇತಿಹಾಸದಲ್ಲಿಯೇ ೧೨ನೇ ಶತಮಾನವು ಧಾರ್ಮಿಕ, ಸಾಮಾಜಿಕ, ವೈಚಾರಿಕ ಕ್ರಾಂತಿಗಳ ಹೊಸ ವಿಚಾರಗಳ ಚಿಂತನ ಮಂಥನದಿಂದ ಬೆಳಗಿದ ಕ್ರಾಂತಿಯುಗವೆಂದು ಹೇಳಬಹುದು. ಈ ವಿಚಾರಗಳ ಬೆಳಕು ಬೆಳಗಿದ್ದುದು ಹಾಗೂ ಆಧ್ಯಾತ್ಮದಲ್ಲಿ ಸಾಧಿಸಿರುವ ಸಾಧಕರ ಪರೀಕ್ಷಾ ಕೇಂದ್ರವೇ ಅನುಭವ ಮಂಟಪ. ಅದರ ಪರಿಕಲ್ಪನೆಯಂತೆ ಒಂದು ಅನುಭವ ಮಂಟಪ ಕಟ್ಟಲು ೧೯೫೫ ಜನೆವರಿಯಲ್ಲಿ ಮೈಸೂರಿನ ಒಡೆಯ ಜಯ ಚಾಮರಾಜ ಒಡೆಯರು ಅಮೃತ ಹಸ್ತದಿಂದ ಅಡಿಗಲ್ಲು ಇಡಲಾಯಿತು. ಭಾಲ್ಕಿಯ ಲಿಂ.ಡಾ: ಚನ್ನಬಸವ ಪಟ್ಟದ್ದೇವರ ಮಹತ್ವಾಕಾಂಕ್ಷೆ ಪೂರ್ತಿಗೊಂಡಿತು. ಈ ಘನ ಕಾರ್ಯಕ್ಕೆ ಡಾ: ಬಿ.ಡಿ.ಜತ್ತಿ, ಶ್ರೀ ವಿಶ್ವನಾಥರೆಡ್ಡಿ ಮುದ್ನಾಳರಂತಹ ಅನೇಕ ಗಣ್ಯರು ಶ್ರಮಿಸಿದ್ದಾರೆ. ಚನ್ನಬಸವಣ್ಣನವರ ಸ್ಮರಣೋತ್ಸವ ನಿಮಿತ್ಯ ಪ್ರತಿವರ್ಷ ಈ ನೂತನ ಅನುಭವ ಮಂಟಪದ ಪರಿಸರದಲ್ಲಿ ೩ ದಿನಗಳ ಪರ್ಯಂತ ಶರಣರ ಸಮಾವೇಶವಾಗುವುದು. ಇದುವರೆಗೆ ೨೫ ಶರಣ ಕಮ್ಮಟಗಳು ನಡೆದಿದ್ದು ದಾಖಲೆಯಾಗಿದ್ದು ಈ ನಾಡಿನ ಜನರಿಗೆ ಹೊಸ ವಿಚಾರಗಳ, ಶರಣರ ತತ್ವಗಳ ಅನುಭವಮಂಟಪ ಕಮೀಟಿಯು ಪರಿಣಾಮಕಾರಿಯಾಗಿ ಸೇವೆಗೈಯ್ಯುತ್ತಲಿದೆ.

 

ಉಮಾಪೂರ (ಲಾಹೇಶ್ವರ) ದೇವಾಲಯ

ಎಷ್ಟು ದೂರ ?
ಜಿಲ್ಲೆ : ೮೫ ಕಿ.ಮೀ.
ತಾಲ್ಲೂಕ : ೨೦ ಕಿ.ಮೀ.

ಮುಂಬೈ ಹೈದರಾಬಾದ ೯ನೇ ರಾಷ್ಟ್ರೀಯ ಹೆದ್ದಾರಿ ಬಸವಕಲ್ಯಾಣದಿಂದ ಪಶ್ಚಿಮಕ್ಕೆ ಸುಮಾರು ೨೦ ಕಿ.ಮೀ. ದೂರದ ಹಳ್ಳಿ ಎಂಬ ಗ್ರಾಮದಿಂದ ತುಸು ದೂರ ಹೋದ ಮೇಲೆ ಹೆದ್ದಾರಿಯಿಂದ ೨ಕಿ.ಮೀ. ಒಳಗೆ ಹೋದರೆ ಎರಡು ಜೋಡು ದೇವಾಲಯಗಳ ಅದ್ಭುತ ಕಟ್ಟಡದ ಮಾದರಿ ಪ್ರವಾಸಿಗರಿಗೆ ಕಾಣಿಸುತ್ತದೆ. ಒಂದನೆ ಸೋಮೇಶ್ವರನ ಎರಡನೇ ಮಗನಾದ ೬ನೇ ವಿಕ್ರಮಾದಿತ್ಯನು. ೧೦೭೬ರಲ್ಲಿ ಪಟ್ಟಾಭಿಷಕ್ತನಾದ ಅವನ ಅವಧಿಯಲ್ಲಿ ಅತ್ಯುನ್ನತ ವಾಸ್ತು ಶಿಲ್ಪ ದೇವಾಲಯಗಳು ನಿರ್ಮಾಣಗೊಂಡವು. ಅವೇ ಉಮಾ ಮಹೇಶ್ವರ ದೇವಾಲಯಗಳು. ಮಹಾದೇವ ದೇವಾಲಯದ ಮುಖ ಪೂರ್ವ ದಿಕ್ಕಿನೆಡೆಗೆ ಇದೆ. ಮುಂಭಾಗದಲ್ಲಿ ದೀಪಸ್ಥಂಭವಿದ್ದು ದೇವಾಲಯದ ಗರ್ಭಗೃಹ ಚೌಕಾಕಾರದಲ್ಲಿದೆ. ದೇವಾಲಯದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಚಿಕ್ಕ ಚಿಕ್ಕ ರತ್ನ ಪಟ್ಟಿಕೆಗಳಿಂದ ಗರ್ಭಗೃಹದ ದ್ದಾರವನ್ನು ಅಲಂಕರಿಸಲಾಗಿದೆ. ದ್ವಾರ ಬಾಗಿಲದ ಅಕ್ಕ ಪಕ್ಕದಲ್ಲಿ ಆರುವರೆ ಅಡಿ ಎತ್ತರದ ಎರಡುವರೆ ಅಡಿ ಅಗಲದ ಶೈವ ದ್ವಾರಪಾಲಕರ ಭವ್ಯ ವಿಗ್ರಹಗಳು ಕಾಣಬಹುದು. ಮುಂದೆ ಮೂರು ಮುಖ ಮಂಟಪಗಳಿದ್ದು ತೆರೆದ ಬಾಗಿಲುಗಳಿವೆ. ಸುಂದರ ಕೆತ್ತನೆಯ ನಾಲ್ಕು ಕಂಬಗಳ ಮೇಲೆ ಸಭಾ ಮಂಟಪವಿದೆ. ಸಭಾಮಂಟಪದ ಮಧ್ಯದಲ್ಲಿ ಗರ್ಭಗೃಹಕ್ಕೆ ಮುಖಮಾಡಿ ಒಂದು ನಂದಿ ಮೂರ್ತಿಯುಂಟು. ಸಭಾಮಂಟಪದ ಸುತ್ತಲು ರಕ್ಷಾಸನವಿದ್ದು ಸುಂದರ ಕೆತ್ತನೆಯ ಅಲಂಕಾರಗಳು ಹೊಂದಿಸಲಾಗಿದೆ. ಇವು ವಿವಿಧ ಭಂಗಿಯಲ್ಲಿದ್ದು ನಗ್ನ ನರ್ತನ, ಢಮರುಗ ನರ್ತನೆ, ವೀಣಾವಾದನ, ಮೃದಂಗ ಇಂತಹ ಭಾವ ಭಂಗಿಗಳು ಮನ ಮೋಹಕವಾಗಿವೆ. ತಳಪಾಯದಿಂದ ಶಿಖರ ಸುಮಾರು ೩೦ ಅಡಿ ಎತ್ತರವಿದೆ.. ಪಾರ್ವತಿ ದೇವಾಲಯವು ಕೂಡ ಮಹಾ ದೇವಾಲಯದ ಮಾದರಿಯಲ್ಲಿ ಇದ್ದು ಸ್ವಲ್ಪ ಚಿಕ್ಕದಿದ್ದು ಎಂಟು ಅರ್ಧ ಮಧ್ಯದಲ್ಲಿ ನಾಲ್ಕು ಪೂರ್ಣ ಕಂಬಗಳಿವೆ. ಗರ್ಭಗುಡಿಯ ಎರಡು ಭಾಗಗಳಲ್ಲಿ ದೇವಕೋಷ್ಟಕಗಳಿವೆ. ಮಧ್ಯದಲ್ಲಿ ಉಮಾ-ಮಹೇಶ್ವರ ವಿಗ್ರಹವಿದೆ. ಮಹಾದೇವ, ದೇವಾಲಯದ ಎದುರಗಡೆ ನೀಲಕಂಠೇಶ್ವರ ದೇವಾಲಯ, ಪಕ್ಕದಲ್ಲಿ ಗಣೇಶ ದೇವಾಲಯವಿದ್ದು ೮ ಅಡಿ ಎತ್ತರ ಐದು ಅಡಿ ಅಗಲವಾದ ಭವ್ಯ ಗಣೇಶನ ವಿಗ್ರಹವಿದೆ.

 

ನಾರಾಯಣಪೂರ ಶಿಲ್ಪಕಲೆ

ಎಷ್ಟು ದೂರ ?
ಜಿಲ್ಲೆ : ೮೫ ಕಿ.ಮೀ.
ತಾಲ್ಲೂಕ : ೪ ಕಿ.ಮೀ.

ಕಲ್ಯಾಣ ಚಾಲುಕ್ಯರ ಆರನೇ ವಿಕ್ರಮಾದಿತ್ಯ ಅನೇಕ ದಿಗ್ವಿಜಯಗಳು ಸಾಧಿಸಿ ರಾಜ್ಯದಲ್ಲಿ ಸುಖಶಾಂತಿ ನೆಲೆಗೊಳಿಸಿದನು. ಧರ್ಮ ಸಹಿಷ್ಣತಾವಾದಿ ಆದ ಇವನು ಅನೇಕ ಅದ್ಭುತ ದೇವಾಲಯಗಳು ನಿರ್ಮಿಸಿದ ಅವುಗಳಲ್ಲಿ ನಾರಾಯಣಪೂರ ಶಿವದೇವಾಲಯ ಕೂಡ ಒಂದು. ಇದು ಬಸವಕಲ್ಯಾಣದಿಂದ ೬ ಕಿ.ಮೀ ದೂರದಲ್ಲಿದೆ. ಈ ದೇವಾಲಯದಲ್ಲಿ ೮ ಕಂಬಗಳಿವೆ. ಬೃಹತ್ ಕಲ್ಲಿನ ಮಂಟಪ ಮೇಲೆ ನಿರ್ಮಾಣವಾಗಿದೆ. ಸುಂದರ ಶಿಲಾಬಾಲಿಕೆಯರ ಕೆತ್ತನೆಯ ವಿಗ್ರಹಗಳು ನೋಡುಗರ ಮನ ತಣಿಸುವದು ದ್ವಾರದ ಹತ್ತಿರ ಬಂದು ವಿಶಾಲವಾದ ಶಿಲಾ ಶಾಸಕ ಇಂದಿಗೂ ನೋಡಲು ಸಿಗಬಹುದು. ಬಸವಕಲ್ಯಾಣದಿಂದ ೨ ಕಿ.ಮೀ ದೂರದಲ್ಲಿ ಶಿವಪೂರ ಗ್ರಾಮವಿದೆ. ಈ ಗ್ರಾಮ ಚಿಕ್ಕದಾದರು ಶಾಂತಿ ಪ್ರಸ್ಥಾನಕ್ಕೆ ಹೆಸರು ವಾಸಿಯಾಗಿದೆ. ಇಲ್ಲಿಯಯಿದ್ದು ದಂಡೆಯ ಮೇಲೆ ಒಂದು ವಿಶಾಲ ಬಾವಿಯಿದ್ದು ಅದರ ಕಟ್ಟೆಯ ಮೇಲೆ ವಿಶಾಲ ದೇವಾಲಯವಿದೆ. ಇದು ಸಿದ್ದೇಶ್ವರ ದೇವಾಲಯವೆಂದು ಪ್ರಸಿದ್ಧಿ ಪಡೆದಿದೆ. ಇದರ ಸುತ್ತಲು ಪ್ರಶಾಂತ ವಾತಾವರಣ ವಿದ್ದು ಪ್ರೇಕ್ಷಣೆಯ ಸ್ಥಳವಾಗಿದೆ.

 

ನಿಸರ್ಗ ತಾಣ ಹುಲಿಕುಂಟೆ

ಎಷ್ಟು ದೂರ ?
ಜಿಲ್ಲೆ : ೫೫ ಕಿ.ಮೀ.
ತಾಲ್ಲೂಕ : ೧೫ ಕಿ.ಮೀ.

ಬೀದರ ಬಸ್ ನಿಲ್ದಾಣದಿಂದ ೫೫ ಕಿ.ಮೀ. ದೂರ. ಭಾಲ್ಕಿಯಿಂದ ೧೫ ಕಿ.ಮೀ ಭಾಲ್ಕಿಯ ನೈರುತ್ಯ ದಿಕ್ಕಿನಲ್ಲಿ, ಖಟಕ ಚಿಂಚೋಳಿಯಿಂದ ಎರಡು ಕಿಲೋ ಮೀಟರ ಅಂತರದಲ್ಲಿ ೧೩ನೆಯ ಶತಮಾನದ ಹುಲಿಕುಂಟೆ ಮಠವಿದೆ. ಸುಂದರವಾದ ಕೆರೆಗೆ ನೀರು ಕುಡಿಯಲು ಹುಲಿ ಬರುತ್ತಿರುವುದರಿಂದ ಈ ಪ್ರದೇಶಕ್ಕೆ ಹುಲಿಕುಂಟೆ ಎಂಬ ಹೆಸರು ಬಂದಿದೆ. ಪ್ರಕೃತಿ ಚಿಕಿತ್ಸೆಗೆ ಯೋಗ್ಯಸ್ಥಳವಾಗಿದೆ. ಈ ಮಠದಲ್ಲಿ ೧೯೬೦ರ ವರೆಗೂ ೭೫೦ ಬೃಹತ್ ತಾಡೋಲೆಗಳು, ಹಸ್ತಪ್ರತಿಗಳಿದ್ದವು. ಲಿಂಗೈಕ್ಯ ಶ್ರೀ ಕರಿಬಸವ ಮಹಾಸ್ವಾಮಿಗಳು ಆ ಎಲ್ಲ ಹಸ್ತಪ್ರತಿಗಳನ್ನು ಕರ್ನಾಟಕ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗಕ್ಕೆ ನೀಡಿದರೆಂದು ಗೊತ್ತಾಗುತ್ತದೆ. ಪ್ರಸ್ತುತ ಈ ಮಠವು ಹುಲಸೂರಿನ ಪೂಜ್ಯ ಶ್ರೀ ಶಿವಾನಂದ ಮಹಾ ಸ್ವಾಮಿಗಳ ಅಧಿಪತ್ಯದಲ್ಲಿದೆ.