ಶಾರ್ಜಾ ದರವಾಜಾ

ಇದು ಬೀದರ ಕೋಟೆಯ ಪ್ರಮುಖ ಮಹಾ ದ್ವಾರವಾಗಿದೆ. ದ್ವಾರದ ಕಮಾನಿನ ಮೇಲೆ ಎಡ ಬಲಕ್ಕೆ ಕಲ್ಲಿನಲ್ಲಿ ಕೆತ್ತಿದ ಹುಲಿಗಳ ಶಿಲ್ಪಗಳಿವೆ. ಇದರ ನಿರ್ಮಾಣದ ಕಾಲ ೧೫೦೩. ಗೋಡೆಯ ಮೇಲ್ಭಾಗದಲ್ಲಿ ಬಣ್ಣದ ಟೈಲಗಳ ಅಲಂಕಾರವನ್ನು ಕಾಣಬಹುದಾಗಿದೆ. ಈ ದರವಾಜಾದ ಮೇಲೆ ಸುಂದರ ಹಜಾರ ಇದೆ. ಇದರ ಇನ್ನೊಂದು ಹೆಸರು ನೌಬಾತ ಖಾನಾ. ಅರಸರ ಕಾಲದಲ್ಲಿ ನಿಗದಿತ ಸಮಯದಲ್ಲಿ ಕುಳಿತು ವಾದ್ಯ ಸಂಗೀತ ನುಡಿಸುತ್ತಿದ್ದರು. ಹಜಾರದ ಕಿಟಕಿಯಿಂದ ಪಶ್ಚಿಮ ದಿಕ್ಕಿನೆಡೆ ವೀಕ್ಷಿಸಿದಾಗ ಕಂಡು ಬರುವ ದ್ವಾರವೇ ಗುಂಬಜ ದರವಾಜಾ.

 

ರಂಗೀನ ಮಹಲ್

ಗುಂಬಜ ದರವಾಜಾಕ್ಕೆ ಹೊಂದಿಕೊಂಡಂತೆ ಒಳಗಡೆ ಎಡಬದಿಗೆ ಚಿಕ್ಕದಾದ ಮಹಲೊಂದಿದ್ದು ಅದಕ್ಕೆ ರಂಗಿನ ಮಹಲ ಎಂದು ಕರೆಯುತ್ತಾರೆ. ಬಣ್ಣದ ಟೈಲುಗಳ ಜೋಡಣೆಯನ್ನು ಹೊಂದಿರುವ ಸುಂದರ ಕಟ್ಟಡವಾಗಿದೆ. ಅಲ್ಲಲ್ಲಿ ಕಪ್ಪು ಶಿಲೆಯ ಕುಸುರಿ ಕಲೆಗಾರಿಕೆ ಕಾಣಬಹುದಾಗಿದೆ. ಪರ್ಷಿಯನ್ ಮತ್ತು ಬಿದ್ರಿ ಕಲೆಯನ್ನು ಬಳಸಿ ಸುಲ್ತಾನ ಅಲಿ ಬರೀದ ಶಾಹನಿಂದ (ಕ್ರಿ. ಶ. ೧೫೪೩-೮೦)ರ ಕಾಲಾವಧಿಯಲ್ಲಿ ನಿರ್ಮಾಣವಾಯಿತು. ರಂಗೀನ ಮಹಲಿನಲ್ಲಿ ಹತ್ತು ಕೋಣೆಗಳಿವೆ. ಟಿಕ್‌ವುಡ್‌ನಿಂದ ಮಾಳಿಗೆ ಹಾಕಲಾಗಿದೆ. ಕಲ್ಲಿನ ಮೇಲಿನ ಕೆತ್ತನೆಯಲ್ಲಿ ಮುತ್ತುಗಳ ಜಡಿಕೆ ಕಾರ್ಯ ಅಪೂರ್ವವಾದುದು. ಬಹಮನಿ ಮನೆತನದ ಅರಸರು ಇಲ್ಲಿ ವಾಸಿಸುತ್ತಿದ್ದರು. ಹೈದ್ರಾಬಾದಿನ ನಿಜಾಮ ಬೀದರಿಗೆ ಆಗಮನಿಸಿದಾಗ ಇಲ್ಲಿ ವಾಸಿಸುತ್ತಿದ್ದ. ಹಾಗಾಗಿ ಇದನ್ನು ಅಂದಿನ ಕಾಲದ ಅತಿಥಿಗೃಹ (Guest House) ಎಂದು ಪರಿಗಣಿಸಬಹುದು.

 

ಸೋಲಹ ಕಂಬ ಮಸೀದೆ

ಸೋಲಹ ಅಂದರೆ ಹದಿನಾರು. ಎದುರುಗಡೆ ಸಾಲಾಗಿ ಹದಿನಾರು ಕಂಬಗಳು ಕಾಣುತ್ತಿರುವುದರಿಂದ ಈ ಮಸೀದಿಗೆ ಸೋಲಹ ಕಂಬದ ಮಸೀದೆ ಎಂಬ ಹೆಸರು ಬಂದಿದೆ. ಸುಮಾರು ೩೦೦ ಅಡಿ ಉದ್ದ ೮೦ ಅಡಿ ಅಗಲವಿರುವ ಈ ಮಸೀದೆಯೊಳಗೆ ೬೦ ಕಂಬಗಳಿವೆ. ಇದಕ್ಕೆ ಇನ್ನೊಂದು ಹೆಸರು ಜನಾನಾ ಮಸೀದೆ. ಝನಾನಾ ಮಹಲಿಗೆ ಹೊಂದಿ ಕೊಂಡಿರುವುದರಿಂದ ಈ ಹೆಸರು ಬಂದಿದೆ. ಬಹಮನಿ ರಾಜಧಾನಿಯನ್ನು ಗುಲಬರ್ಗಾದಿಂದ ಬೀದರ್‌ಗೆ ವರ್ಗಾಯಿಸಿದ ಅಹಮದ್ ಶಹಾ ವಲಿಯ ಮಗನಾದ ಯುವರಾಜ ಮುಹಮ್ಮದ ಕಟ್ಟಿಸಿದನೆಂದು ಗುಲಾಮ್ ಯಜ್ದಾನಿಯವರು ಅಬಿsಪ್ರಾಯ ಪಡುತ್ತಾರೆ. ಕಮಾನುಗಳ ರಚನೆ ಅದ್ಭುತವಾಗಿದೆ. ಗಾಳಿ ಬೆಳಕು ಸುಗಮವಾಗಿ ಸಾಗುತ್ತದೆ. ಪ್ರಾರ್ಥನೆಯ ಧ್ವನಿ ಎಲ್ಲ ಕಡೆ ಪ್ರಸಾರ ಹೊಂದುವಂತೆ ವಿಶೇಷ ಕಟ್ಟಡದ ರಚನೆ ಇದಾಗಿದೆ. ಇದರ ಮೇಲ್ಭಾಗ ಸಪಾಟಾಗಿರದೆ, ನಾಲ್ಕು-ನಾಲ್ಕು ಕಂಬಗಳಿಗೆ ಒಂದರಂತೆ ಗುಂಬದವಿದ್ದು ಮಧ್ಯದ ಗುಂಬದ ದೊಡ್ಡ ಗಾತ್ರದ್ದಾಗಿದೆ. ಭಾರತದ ದೊಡ್ಡ ಮಸೀದೆಗಳಲ್ಲಿ ಇದೊಂದು ಬಹಮನಿ ಅರಸರು ಪ್ರತಿ ಶುಕ್ರವಾರ ಇದರಲ್ಲಿ ನಮಾಜು ಸಲ್ಲಿಸುತ್ತಿದ್ದರು. ಕೋಟೆಯೊಳಗಡೆ ಇರುವ ಸ್ಮಾರಕಗಳಲ್ಲಿ ಸುಭದ್ರವಾಗಿ ಉಳಿದಿರುವ ಸ್ಮಾರಕ ಇದಾಗಿದೆ.

 

ಗಗನ ಮಹಲ್

ಅರಸನ ವಾಸದ ಮನೆಯೇ ಗಗನ ಮಹಲ್. ಇದು ಸೋಲಹ ಕಂಬದಮಸೀದೆಗೆ ಹೊಂದಿಕೊಂಡಿರುವ ವಿವಿಧ ಕಟ್ಟಡಗಳ ಸಂಕೀರ್ಣ (Complex) ವಾಗಿದೆ. ಬಹುಮಹಡಿ ಕಟ್ಟಡವನ್ನೊಳಗೊಂಡಿದೆ. ಗಗನಕ್ಕೆ ಕೈಚಾಚಿ ನಿಲ್ಲುವಂತೆ ಎತ್ತರವಾಗಿದೆ. ಹಾಗಾಗಿ ಇದಕ್ಕೆ ಗಗನ ಮಹಲ ಎಂಬ ಹೆಸರು ಬಂದಿದೆ. ತುರ್ಕಿ ದೇಶದಿಂದ ಬಂದ ರಾಣಿಯ ವಾಸದ ಉದ್ದೇಶದಿಂದ ನಿರ್ಮಿಸಲಾಗಿತ್ತು. ಹೀಗಾಗಿ ಇದಕ್ಕೆ ತರ್ಕಶ ಮಹಲ ಎಂದು ಸಹ ಕರೆಯುವುದುಂಟು. ಜಗತ್ತಿನ ವಿವಿಧ ಕಡೆಗಳಿಂದ ಕರೆ ತರಲಾದ ಮಹಿಳೆಯರು ಕಟ್ಟಡದ ವಿವಿಧ ಕೋಣೆಗಳಲ್ಲಿ ವಾಸಿಸುತ್ತಿದ್ದರು. ರಾಣಿವಾಸ ಇದಾಗಿದ್ದರಿಂದ ಅದನ್ನು ಝನಾನಾ ಎಂದು ಕರೆಯಲಾಗುತ್ತದೆ. ಈ ಕಟ್ಟಡದ ಪಕ್ಕದಲ್ಲಿಯ ನೆಲಮಹಡಿಯಲ್ಲಿ ನೂರಾರು ಕೊಠಡಿಗಳಿವೆ. ಅದನ್ನು ಹಜಾರ ಕೊಠರಿ ಎಂದು ಗುರುತಿಸಲಾಗುತ್ತದೆ.

 

ತಖ್ತ್ -ಎ-ಮಹಲ್ :

ತಖ್ತ ಎಂದರೆ ಸಿಂಹಾಸನ ಎಂದರ್ಥ. ಸಿಂಹಾಸನವಿರುವ ಕಟ್ಟಡಕ್ಕೆ ತಖ್ತ್ ಮಹಲ್ ಎನ್ನುತ್ತಾರೆ. ಆದರೆ ಈಗ ಸಿಂಹಾಸನವಿಲ್ಲ. ತಖ್ತ್ ಮಹಲಿನಲ್ಲಿರುವ ಕಲ್ಲಿನ ಮೇಲೆ ಸುಮರು ಕ್ರಿ. ಶ. ೧೩ನೇ ಶತಮನದ ಶಾಸನವಿದೆ. ಆದರೆ ನಿರ್ದಿಷ್ಟ ರಾಜನ ಉಲ್ಲೇಖವಿಲ್ಲ. ಸದ್ಯದ ಮಟ್ಟಿಗೆ ಗುರುತಿಸಿರುವಂತೆ ಅಹಮದ ಶಾಹನ ಆಳ್ವಿಕೆಯಲ್ಲಿ ನಿರ್ಮಾಣಗೊಂಡ ಈ ತಖ್ತ್ ಮಹಲ ವಿಶಿಷ್ಟವಾದ ಸೌಧವಾಗಿದೆ. ಬಹಮನಿ ಮತ್ತು ಬರೀದಶಾಹಿ ಸುಲ್ತಾನರ ಪಟ್ಟಾಭಿಷೇಕದ ಸಮಾರಂಭಗಳು ಇಲ್ಲಿ ನಡೆಯುತ್ತಿದ್ದವು. ರಾಜ ಸಿಂಹಾಸನದ ಎದುರುಗಡೆ ವಿಶಾಲವಾದ ಸಭಾಂಗಣವಿದೆ. ಕಮನುಗಳುಳ್ಳ ಹಜಾರಕ್ಕೆ ಹೊಂದಿರುವ ಅರಮನೆಯ ಮೇಲ್ಭಾವಣಿಯಲ್ಲಿ ಗುಮ್ಮಟವಿದೆ. ಮೇಲ್ಛಾವಣಿಯ ಒಳ ಭಾಗವು ಸುಂದರ ರೇಖಾಕೃತಿ, ಅಲಂಕಾರಾಕ್ಷರಗಳಿಂದಾಗಿ ವೀಕ್ಷಕರ ಕಣ್ಮನ ಸೆಳೆಯುತ್ತದೆ. ಸೂರ್ಯೋದಯ ಮತ್ತು ಹಾರುತ್ತಿರುವ ಹುಲಿಯ ಚಿತ್ರಗಳ ಅವಶೇಷ ಮಾತ್ರ ಉಳಿದಿವೆ.

 

ಚಾಂದಿನಿ ಚಬೂತರಾ

ದೇಶದ ಹಲವು ಕಡೆಗಳಲ್ಲಿಸೂರ್ಯೋದಯ, ಚಂದ್ರೋದಯ ಮತ್ತು ಸೂರ್ಯಾಸ್ತಗಳನ್ನು ವೀಕ್ಷಿಸುವುದಕ್ಕಾಗಿಯೇ ಹಲವು ತಾಣಗಳಿವೆ.ಅವುಗಳಲ್ಲಿ ಇತಿಹಾಸ ಪ್ರಸಿದ್ದವಾದ ಚಾಂದಿನಿ ಚಬೂತರಾ ಎಂಬ ಕಟ್ಟಡ ಬೀದರ ಕೋಟೆಯಲ್ಲಿ ನೋಡಬಹುದಾಗಿದೆ. ಕೋಟೆಯ ತಳಘಾಟ್ ದರವಾಜ್ ಬಳಿ ಈ ಚಂದ್ರನನ್ನು ನೋಡುವ ಉದ್ದೇಶದಿಂದ ನಿರ್ಮಿಸಲಾದ ಕಟ್ಟೆಗೆ ಚಾಂದಿನಿ ಚಬೂತರಾ ಎನ್ನುತ್ತಾರೆ.ಸಂಜೆಯ ವೇಳೆಯಲ್ಲಿ ಇಲ್ಲಿ ಕುಳಿತು ಹತ್ತಾರು ಕಿಲೋಮೀಟರ್ ದೂರದ ವರೆಗೆ ಕಾಣಿಸುವ ಕಣಿವೆಯನ್ನು ವೀಕ್ಷಿಸಬಹುದಾಗಿದೆ. ಹಾಗೆಯೇ ಹುಣ್ಣಿಮೆಯ ದಿನ ಚಂದ್ರೋದಯ ನೋಡುವ ಸೊಬಗು ವರ್ಣಿಸಲು ಆಗದು. ಕೇವಲ ಹುಣ್ಣಿಮೆ ದಿನ ಮಾತ್ರವಲ್ಲದೆ ಅದರ ಹಿಂದಿನ ದಿನ ಮತ್ತು ಮರುದಿನ ಕೂಡ ಚಂದ್ರೋದಯ ಮತ್ತು ಬೆಳದಿಂಗಳ ವಿಹಂಗಮ ನೋಟ ಕಾಣಸಿಗುತ್ತದೆ.

 

ಬಾರೂದ್‌ಖಾನಾ

ಕೋಟೆಯ ಒಳಗಡೆ ಉತ್ತರ ದಿಕ್ಕಿಗೆ ಬಾರೂದ್ ಖಾನಾ ಇದೆ. ಮದ್ದು ಸಂಗ್ರಹಿಸಿಡುವ ಕೋಣೆಗೆ ಬಾರೂದ್ ಖಾನಾ ಎನ್ನುತ್ತಾರೆ. ಯುದ್ಧದ ಸಂದರ್ಭದಲ್ಲಿ ಮದ್ದು ಗುಂಡುಗಳನ್ನ ಬಳಸುವ ಪರಿಪಾಠವನ್ನು ಆರಂಭಿಸಿದ್ದು ಬಹಮನಿ ಅರಸರ ಕಾಲದಲ್ಲಿ. ಸ್ಪೇನ್ ನಲ್ಲಿ ಚಾಲ್ತಿಯಲ್ಲಿದ್ದ ಈ ತಂತ್ರಜ್ಞಾನವನ್ನು ಮೊದಲಬಾರಿಗೆ ಬೆಳಗಾವಿಗೆ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ಬಳಸಲಾಗಿತ್ತು. ನಂತರ ಆದಿಲಶಾಹಿ ಹಾಗೂ ಬರೀದ ಅರಸರ ಕಾಲಕ್ಕೆ ಹೆಚ್ಚು ಚಾಲ್ತಿಗೆ ಬಂತು. ಇದಕ್ಕೆ ಸಾಕ್ಷಿ ಎಂಬಂತೆ ಬೀದರ ಕೋಟೆಯ ಆವರಣದಲ್ಲಿ ಬೃಹತ್ ಗಾತ್ರದ ತೋಪುಗಳನ್ನು ಕಾಣಬಹುದು. ಅತಿ ದೊಡ್ಡ ತೋಪು ಇರುವುದು ಬೀದರನ ಕೋಟೆಯಲ್ಲಿ ಎಂದು ಹೇಳಲಾಗುತ್ತದೆ. ಇಲ್ಲಿ ಸಿಗುವ ವಿಶೇಷ ಮಣ್ಣು ಬಿದರಿ ಕಲಾಕೃತಿಗಾಗಿ ಬಳಸಲಾಗುತ್ತದೆ.

 

ಬೊಮ್ಮಗೊಂಡ ಕೆರೆ

ವೀರಸಂಗಯ್ಯನ ಗುಡ್ಡದ ಪಕ್ಕದಲ್ಲಿದೆ. ಈ ಕೆರೆಯ ಕುರಿತಾದ ಜನಪದ ಐತಿಹ್ಯ ಹೀಗುಂಟು: ಸೈನಿಕರೊಂದಿಗೆ ಬಹಮನಿ ರಾಜನೊಬ್ಬ ಕುದುರೆಯ ಮೇಲೆ ಬರುತ್ತಿದ್ದ. ಪ್ರಯಣದಿಂದ ಬಹಳ ಸುಸ್ತಾಗಿದ್ದ. ನೀರಡಿಕೆಯಿಂದ ಬಳುತ್ತಿದ್ದ ರಾಜ ನೀರಿಗಾಗಿ ಎಷ್ಟೇ ಪ್ರಯತ್ನಿಸಿದರೂ ಸಿಗದಿದ್ದಾಗ ಅಲ್ಲೇ ಕುರಿ ಕಾಯುತ್ತಿರುವ ಬಾಲಕನನ್ನು ವಿಚಾರಿಸುತ್ತಾನೆ. ರಾಜನ ಪರಿಸ್ಥಿತಿಯನ್ನರಿತ ಆ ಬಾಲಕ ತನ್ನ ಕೈಯಲ್ಲಿದ್ದ ಕೋಲಿನಿಂದ ನೆಲಕ್ಕೆ ತಿವಿದಾಗ ನೀರಿನ ಕಾರಂಜಿ ಚಿಮ್ಮಿತು. ಆಗ ಸಂತಸಗೊಂಡ ದೊರೆ ಅದರ ಸುತ್ತಲು ತನ್ನ ಕೋಟೆ ನಿರ್ಮಿಸಿಕೊಂಡನೆಂದು ತಿಳಿದು ಬರುತ್ತದೆ. ಕೋಟೆಯ ಒಳ ಭಾಗದಲ್ಲಿರುವ ಆ ಕೆರೆಂ ಬೊಮ್ಮಗೊಂಡ ಕೆರೆ ಎಂದು ಪ್ರಸಿದ್ಧವಾಗಿದೆ. ವೀರಸಂಗಯ್ಯನ ಗುಡ್ಡವು ಕೋಟೆಯಲ್ಲಿ ಒಳಕೋಟೆ ಎಂಬ ಅಂದಿನ ಮೂಲ ಬೀದರ ಕೋಟೆಯ ಮನೆಗಳ ಪಕ್ಕದಲ್ಲಿದೆ. ಎತ್ತರದ ಬೆಟ್ಟದ ಮೇಲೆ ಶಿವ ದೇವಾಲಯವಿದೆ. ಅಲ್ಲಿಂ ಭವಾನಿ ದೇವಸ್ಥಾನವಿದೆ. ಬಹುಶ: ಈ ಪ್ರದೇಶ ಬೀದರಿನ ಮೂಲ ನೆಲೆಯಗಿರಬೇಕು.

 

ವಸ್ತು ಸಂಗ್ರಹಾಲಯ

ಬಹಮನಿ ಸುಲ್ತಾನರ ಪೂರ್ವೋತ್ತರ ಕಾಲದ ಹಲವಾರು ಅವಶೇಷಗಳು ಬೀದರ ವಸ್ತು ಸಂಗ್ರಹಾಲಯದಲ್ಲಿವೆ. ಈ ಸಂಗ್ರಹಾಲಯವು ರಾಯಲ್ ಹಮಾಮ ಬಾತ್ (ರಾಣಿಯರ ಸ್ನಾನಗೃಹ) ಕಟ್ಟಡಲ್ಲಿದೆ. ಬೀದರನ ಪ್ರಾಚೀನ ಇತಿಹಾಸ ಸೂಚಿಸುವ ಬಳೆ ಚೂರು, ಮಣಿ, ಪಾತ್ರೆ ಮೊದಲಾದವುಗಳ ಕುರುಹುಗಳನ್ನು ಇಲ್ಲಿ ಕಾಣಬಹುದಾಗಿದೆ. ಭೈರವ, ಗಣಪತಿ, ಶಾಲ ಭಂಜಿಕೆ, ಜ್ವಾಲಾ ಮಲನಿ ಸುಂದರಿ, ಮದನಿಕೆ, ಚೌರಿ ಬೀಸುವ ದ್ವಾರ ಪಾಲಕರ ಸುಂದರ ವಿಗ್ರಹಗಳಿವೆ. ಕಮಲಾಕೃತಿಯ ಕಲ್ಲಿನ ಪದಕಗಳಿವೆ. ೧೫ನೇ ಶತಮನದ ಅರೇಬಿಕ್, ಪರ್ಶಿಯನ್ ಶಾಸನಗಳಿವೆ. ವಿವಿಧ ಪ್ರಕಾರದ ಯುದ್ಧೋಪಕರಣಗಳು, ಗರಡಿಕಾರರ ಸಾಧನೆಯ ಗುಂಡ ಕಲ್ಲು ಮೊದಲಾದ ಪರಿಕರಗಳಿವೆ. ವಿಶೇಷ ರೀತಿಯಲ್ಲಿ ಸಂಸ್ಕರಿಸಲಾದ, ಲೋಹಗಳಿಂದ ತಯರಿಸಲಾದ ಹಲವಾರು ತೋಫುಗಳವೆ.

 

ಗಾವಾನ ಮದರಸಾ

ಬಹಮನಿ ಅರಸರ ಪ್ರಧಾನ ಮಂತ್ರಿಯಾಗಿದ್ದ ಮಹಮೂದ ಗಾವಾನನು ಕ್ರಿ. ಶ. ೧೪೭೨ರಲ್ಲಿ ನಿರ್ಮಿಸಿದ ಜಗತ್ ಪ್ರಸಿದ್ಧ ವಿಶ್ವವಿದ್ಯಾಲಯವಾಗಿದೆ. ಮಧ್ಯ ಏಷಿಯಾದಲ್ಲಿದ್ದ ಶಿಕ್ಷಣ ಕೇಂದ್ರದ ಮಾದರಿಯಲ್ಲಿ ಈ ಕಟ್ಟಡದ ರಚನಾ ವಿನ್ಯಾಸವಿದೆ. ಎದುರಿಗೆ ಎರಡು ಕಡೆಗೂ ಮೀನಾರಗಳಿದ್ದವು. ೧೬೯೬ರಲ್ಲಿ ಒಂದು ಧ್ವಂಸಗೊಂಡು ಈಗ ಒಂದು ಮಾತ್ರ ಉಳಿದಿದೆ. ಗಿಲಾನಯಿಂದ ಬೀದರಕ್ಕೆ ಬಂದಿದ್ದ ಗಾವಾನ ಶಿಕ್ಷಣ ಪ್ರೇಮಿಯಾಗಿದ್ದ. ಮದರಸಾದಲ್ಲಿ ೧೦೮ ವಿದ್ಯಾರ್ಥಿಗಳು ವಾಸಿಸಬಹುದಾಗಿತ್ತು. ಶಿಕ್ಷಕರಿಗೂ ಪ್ರತೇಕ ವಾಸದ ಕೋಣೆಗಳಿದ್ದವು. ಬೋಧನಾ ಕೋಣೆಗಳು, ಗ್ರಂಥಾಲಯ, ಪ್ರಾರ್ಥನಾ ಮಂದಿರ ಇದರ ಒಳಗಡೆ ಇದ್ದವು. ಖಗೋಳ ಶಾಸ್ತ್ರ, ಧರ್ಮಶಾಸ್ತ್ರ, ತರ್ಕಶಾಸ್ತ್ರ, ಗಣಿತ, ಭಾಷೆ, ಸಂಗೀತ ಕಲೆ ಮುಂತಾದವುಗಳ ಅಧ್ಯಯನ-ಅಧ್ಯಾಪನ ಇಲ್ಲಿ ನಡೆಯುತ್ತಿದ್ದವು. ಈ ವಿಶ್ವವಿದ್ಯಾಲಯದಲ್ಲಿ ೩೦೦೦ ಹಸ್ತಪ್ರತಿಗಳಿದ್ದವು. ಸ್ಮಾರಕದ ಎದುರಿನ ಭಾಗ ಬಣ್ಣದ ಟೈಲುಗಳಿಂದ ಅಲಂಕರಿಸಲ್ಪಟ್ಟಿದ. ಟೈಲನಿಂದ ಮಾಡಿದ ಕ್ಯಾಲಿಗ್ರಾಫಿ ಬರವಣಿಗೆಯಲ್ಲಿ ಖುರಾನಿನ ಆಯ್ದ ಭಾಗಗಳಾಗಿವೆ.

 

ಚೌಬಾರಾ

ಇದು ನಾಲ್ಕು ರಸ್ತೆಗಳು ಕೂಡುವ ಸ್ಥಳದಲ್ಲಿದೆ. ಬೀದರ ಪಟ್ಟಣದ ನಡುವೆ ಸಿಲಿಂಡರ್ ಆಕಾರದ ಗೋಪುರ ಹೊಂದಿರುವ ಸ್ಮಾರಕವೇ ಚೌಬಾರಾ. ೭೧ ಅಡಿ ಎತ್ತರವಾಗಿದೆ. ಅದರ ಒಳಗಡೆ ಸುತ್ತು ಮೆಟ್ಟಲುಗಳಿವೆ. ಪಾವಟಿಗೆಗಳ ಮೂಲಕ ಒಳಗಡೆಯಿಂದ ಮೇಲೇರಿ ನಿಂತಾಗ ಬಹುದೂರದವರೆಗೆ ದೃಷ್ಟಿ ಹಾಯುತ್ತದೆ. ಒಂದು ಕಾಲಕ್ಕೆ ಕಾವಲು ನಿರೀಕ್ಷಣಾ ಕಟ್ಟಡ ಆಗಿತ್ತು. ಇಂದಿಗೂ ಸುಸ್ಥಿತಿಯಲ್ಲಿದೆ. ಚೌಬಾರಾದಿಂದ ದಕ್ಷಿಣಕ್ಕೆ ಪೂರ್ವಕ್ಕೆ ಕ್ರಮವಾಗಿ ಫತೇಹಃ ದರವಾಜಾ ಮಂಗಲ ಪೇಟ ದರವಾಜಾಗಳಿವೆ. ಉತ್ತರಕ್ಕೆ ಕೋಟೆ, ಪಶ್ಚಿಮಕ್ಕೆ ನಯಾ ಕಮಾನ ಇದೆ.

 

ಚೌಖಂಡಿ

ಬೀದರ ಕೋಟೆಯಿಂದ ೨ ಕಿ.ಮೀ. ದೂರ. ಅಷ್ಟೂರ ಗ್ರಾಮಕ್ಕೆ ಹೋಗುವ ದಾರಿಯಲ್ಲಿ ಬರುವ ಸುಂದರವಾದ ಕಟ್ಟಡವೇ ಚೌಖಂಡಿ. ಟರ್ಕಿಯ ಸಂತ ಹಜರತ್ ಖಲೀಲುಲ್ಲಾ ಅವರ ಸಮಾಧಿ ಸ್ಥಳವೇ ಇದಾಗಿದೆ. ಇದು ನೆಲ ಮಟ್ಟದಿಂದ ಸ್ವಲ್ಪ ಎತ್ತರವಾಗಿರುವ ಸಣ್ಣ ಗುಡ್ಡದ ಮೇಲಿದೆ. ಅಷ್ಟಕೋನ ಆಕೃತಿಯ ಎರಡು ಅಂತಸ್ತುಗಳ ಕಟ್ಟಡವಾಗಿದೆ. ಕಿರೀಟದ ಮಾದರಿಯಲ್ಲಿ ಕಾಣಿಸುವ ಈ ಚೌಖಂಡಿಯ ವಿನ್ಯಾಸ ಅಪರೂಪದ ವಿನ್ಯಾಸವಾಗಿದೆ. ಹತ್ತಿರ ಹೋದಂತೆ ಕಟ್ಟಡದ ಮೇಲೆ ಕಪ್ಪು ಕಲ್ಲಿನಲ್ಲಿ ಕಲಾತ್ಮಕವಾಗಿ ಕೆತ್ತಲಾಗಿರುವ ಶಾಸನಗಳು ಕಣ್ಮನ ಸೆಳೆಯುತ್ತವೆ. ಬರವಣಿಗೆಯ ಲಾಲಿತ್ಯ ಮತ್ತು ಕೌಶಲ್ಯ ಎಂತಹವರನ್ನೂ ಮೋಡಿ ಮಾಡುತ್ತವೆ.