ಜಿಲ್ಲೆಯಿಂದ ೫೦ ಕಿ.ಮೀ
ತಾಲ್ಲೂಕಿನಿಂದ ೨ ಕಿ.ಮೀ

ಬೀರೂರು ಚಿಕ್ಕಮಗಳೂರಿನಿಂದ ೪೭ ಕಿ.ಮೀ ದೂರದಲ್ಲಿದ್ದು, ನಮ್ಮ ಜಿಲ್ಲೆಯಲ್ಲಿಯೇ ರೈಲ್ವೆ ಜಂಕ್ಷನ್ ಅನ್ನು  ಹೊಂದಿರುವಂತಹ ದೊಡ್ಡ ರೈಲ್ವೆ ನಿಲ್ದಾಣವಾಗಿದೆ. ಬೆಂಗಳೂರಿನಿಂದ ಬಂದ ರೈಲ್ವೆ ಮಾರ್ಗವು ಈ ರೈಲ್ವೆ ಜಂಕ್ಷನ್ ನಿಂದ ೨ ಮಾರ್ಗಗಳು ಮುಂದುವರೆದಿದ್ದು, ಒಂದು ಮಾರ್ಗವು ಹುಬ್ಬಳ್ಳಿ ಕಡೆಗೂ ಮತ್ತೊಂದು ಮಾರ್ಗವು ಶಿವಮೊಗ್ಗ ತಾಳಗುಪ್ಪ ಕಡೆಗೂ ಕವಲೊಡೆದಿದೆ. ನಮ್ಮ ಜಿಲ್ಲೆಯ ರೈಲ್ವೆ ಹೆಬ್ಬಾಗಿಲು ಇದಾಗಿದ್ದು, ನಮಗೆಲ್ಲಾ ಹೆಮ್ಮೆಯ ಸಂಗತಿಯಾಗಿದೆ.

 

ದೇವನೂರು:

ಜಿಲ್ಲೆಯಿಂದ ೪೦ ಕಿ.ಮೀ
ತಾಲ್ಲೂಕಿನಿಂದ ೩೬ ಕಿ.ಮೀ

ದೇವನೂರು ಗ್ರಾಮವು ಜಿಲ್ಲಾ ಕೇಂದ್ರದಿಂದ ೪೦ ಕಿ.ಮೀ ಹಾಗೂ ಬ್ಲಾಕ್ ಕೇಂದ್ರದಿಂದ ೩೬ ಕಿ.ಮೀ ಅಂತರದಲ್ಲಿದೆ. ದೇವನೂರನ್ನು ದೇವಪುರಿ, ಗೀರ್ವಾಣಪುರವೆಂದು ಕರೆಯಲಾಗುತ್ತದೆ. ದೇವನೂರು ಜೈಮಿನಿ ಭಾರತವನ್ನು ರಚಿಸಿದ ಲಕ್ಷ್ಮೀಶ ಕವಿಯ ಜನ್ಮಸ್ಥಳವಾಗಿದ್ದು, ಶ್ರೀ ಲಕ್ಷ್ಮಿಕಾಂತ ರಮಣ ಸ್ವಾಮಿಯ ನೆಲೆ ಊರಾಗಿದೆ. ಇಲ್ಲಿ ಲಕ್ಷ್ಮೀಶಕಾಂತ ದೇವಾಲಯವನ್ನು ೧೭ ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಕನ್ನಡ ಪ್ರಸಿದ್ಧ ಕಾವ್ಯಗಳಲ್ಲಿ ಒಂದಾದ ಜಗನ್ನಾಥ ವಿಜಯ ಮತ್ತು ರಸ ಕಲಿಕೆ ಎಂಬ ಕೃತಿಗಳನ್ನು ರಚಿಸಿದ್ದ ೧೨ ನೇ ಶತಮಾನದ ಕವಿರತ್ನ ರುದ್ರಭಟ್ಟನು ಇದೇ ಊರಿನವರು ಎಂದು ನಂಬಲಾಗಿದೆ.

 

ಅಯ್ಯನಕರೆ:

ಜಿಲ್ಲೆಯಿಂದ ೨೩ ಕಿ.ಮೀ
ತಾಲ್ಲೂಕಿನಿಂದ ೨೮ ಕಿ.ಮೀ

ಅಯ್ಯನಕೆರೆಯು ಜಿಲ್ಲಾ ಕೇಂದ್ರದಿಂದ ೨೩ ಕಿ.ಮೀ ಹಾಗೂ ಬ್ಲಾಕ್ ಕೇಂದ್ರ ದಿಂದ ೨೮ ಕಿ.ಮೀ ಅಂತರದಲ್ಲಿದೆ. ಇದು ಸಖರಾಯಪಟ್ಟಣ ವ್ಯಾಪ್ತಿಯಲ್ಲಿದ್ದು, ಸಣ್ಣ ನೀರಾವರಿ ಇಲಾಖೆಗೆ ಸೇರಿದೆ. ಅಯ್ಯನಕೆರೆಯ ಬಳಿ ಬಲ್ಲಾಳೇಶ್ವರ ದೇವಾಲಯ ಚನ್ನಕೇಶ್ವರ ದೇವಾಲಯ, ಕೆಂಚರಾಯ ದೇವಾಲಯಗಳಿವೆ. ಇಲ್ಲಿ ಮೀನುಮರಿ ಪಾಲನಾ ಕೇಂದ್ರಗಳು ಇವೆ. ಈ ಅಯ್ಯನಕೆರೆಯಿಂದ ನೂರಾರು ಎಕರೆ ಭೂಮಿಗೆ ನೀರುಣಿಸಲಾಗುತ್ತಿದೆ.

ಈ ಕೆರೆಯು ನಯನಮನೋಹರವಾಗಿದ್ದು ಪ್ರಶಾಂತತೆಯ ಕೇಂದ್ರವಾಗಿದೆ ಹಾಗೂ ಈ ಕೆರೆಯು ರೈತರಿಗೆ ಜೀವನಾಡಿಯಾಗಿದ್ದು ಕೆರೆಯ ಸುತ್ತಲಿನ ಪ್ರದೇಶ ಮನಮೋಹಕವಾಗಿ ಕನ್ನಡ ಚಿತ್ರರಂಗದ ಅನೇಕ ಚಿತ್ರಗಳ ಚಿತ್ರೀಕರಣಕ್ಕೆ ಸಹಕಾರಿಯಾಗಿದೆ.