ಬೀಳಗಿ ಆರು ಯಾತದ ಭಾವಿ

ದೂರ:
ತಾಲೂಕಿನಿಂದ : ೦ ಕಿ.ಮೀ
ಜಿಲ್ಲೆಯಿಂದ : ೩೦ ಕಿ.ಮೀ.

ಆರು ಯಾತದ ಬಾವಿಯ ಗೋಡೆಯ ಮೇಲೆ ಮದ್ದಾನೆಯೊಂದಿಗೆ ಸೆಣಸಾಡುತ್ತಿರುವ ಮಲ್ಲನ ಚಿತ್ರವನ್ನು ಇಲ್ಲಿ ಕೆತ್ತಲಾಗಿದೆ. ಒಟ್ಟಾರೆ ಇದೊಂದು ವಾಸ್ತುಶಿಲ್ಪ ಪ್ರಪಂಚಕ್ಕೆ ಅಪೂರ್ವ ಕಾಣಿಕೆಯಾಗಿದ್ದು, ಗುಡ್ಡಾಪೂರ ದಾನಮ್ಮ ಚಲನಚಿತ್ರದ ಚಿತ್ರೀಕರಣವು ಕೂಡಾ ಇಲ್ಲಿ ಆಗಿರುವುದು ಸ್ಮರಣೀಯ. ಇಂತಹ ಒಂದು ಅಭೂತಪೂರ್ವವಾದ ಕೊಡುಗೆಯನ್ನು ಪೋಷಿಸಬೇಕಾದದ್ದು ಸರ್ಕಾರ ಹಾಗೂ ಪ್ರಾಚ್ಯವಸ್ತು ಸಂಶೋಧನಾ ಇಲಾಖೆಯ ಆದ್ಯ ಕರ್ತವ್ಯವೆಂದು ಹೇಳಬಹುದು. ಅಷ್ಟೇ ಸಾರ್ವಜನಿಕರದ್ದು ಕೂಡಾ.

ಇದೇ ಬೀಳಗಿಯಲ್ಲಿಯೇ ಇನ್ನೂ ರಾಯರ ಬಾವಿ, ಸುರಳಿ ಬಾವಿ (ಸೂಳಿ ಬಾವಿ)ಗಳು ಕೂಡಾ ನೋಡುವಂತಹ ಸ್ಥಳಗಳಾಗಿವೆ. ಕ್ರಿ.ಶ. ೧೬೦೫ ರಲ್ಲಿ ೨ನೇ ಇಬ್ರಾಹಿಂ ಆದಿಲ್‌ಶಾಹನ ಮಂತ್ರಿಯಾಗಿದ್ದ ಯಾಕುತ್ ಖಾನನ ಕೈ ಕೆಳಗಿನ ಅಧಿಕಾರಿ ಖಂಡೇರಾವ್ ಪಂಡಿತ ಎಂಬುವನು.

 

ಬೀಳಗಿಯ ಶ್ರೀ ಸಿದ್ದೇಶ್ವರ ಕೊಳ್ಳ

ದೂರ:
ತಾಲೂಕಿನಿಂದ: ೧.೫ ಕಿ.ಮೀ
ಜಿಲ್ಲೆಯಿಂದ : ೩೧.೫ ಕಿ.ಮೀ.

ಬೀಳಗಿ ಊರಿನಿಂದ ೧.೫ ಕಿ.ಮೀ. ಅಂತರದಲ್ಲಿ ಕಣಿವೆಯ ನಡುವೆ ಪ್ರಶಾಂತ ವಾತಾವರಣದಲ್ಲಿ ಶ್ರೀ ಸಿದ್ದೇಶ್ವರ ಕ್ಷೇತ್ರವಿದೆ. ಮರಾಠಿ ಲಿಪಿಯ ಶಾಸನ ಒಂದರ ಪ್ರಕಾರ ೧೬೧೫ ರಲ್ಲಿ ಚಾಲುಕ್ಯ ಶೈಲಿಯಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಮಳೆಗಾಲದಲ್ಲಿ ಜುಳು ಜುಳು ಹರಿಯುವ ನೀರು, ಹಳ್ಳ ಗುಡ್ಡಗಳಿಗೆ ಹೊದಿಸಿದ ಹಚ್ಚು ಹಸಿರು ನಡುವೆ ಹೆಬ್ಬಂಡೆಗಲ್ಲುಗಳು ಅಂತೂ ನೋಟಕ್ಕೆ ಒಂದು ರಮಣೀಯ ಸ್ಥಳ. ಉಳಿವಿಗೆ ಹೋಗುವ ಮಾರ್ಗದಲ್ಲಿ ಶರಣ ಶ್ರೀ ಸಿದ್ಧರಾಮೇಶ್ವರು ಕೆಲಕಾಲ ಇಲ್ಲಿ ತಂಗಿದ್ದನೆಂದು ಹೇಳಲಾಗುತ್ತದೆ. ದೇವಾಲಯದ ಅಕ್ಕ ಪಕ್ಕದಲ್ಲಿ ಪಾರ್ವತಿ, ವೀರಭದ್ರ ಗುಡಿಗಳು, ಬಲ ಭಾಗದಲ್ಲಿ ಹಲವಾರು ಲಿಂಗಗಳ ಗುಡಿ, ಲಜ್ಜಿಗೌರಿ ಮೂರ್ತಿ ಮುಂತಾದ ಪ್ರಾಚೀನ ಶಿಲ್ಪ ಕಲಾಕೃತಗಳು ಇಲ್ಲಿವೆ. ಈ ದೇವಾಲಯದ ದ್ವಾರದ ಬಾಗಿಲನ್ನು ಕ್ರಿ.ಶ. ೧೬೯೫-೯೬ ರಲ್ಲಿ ಹೈದರ ಖಾನನ ಅಧಿಕಾರಿ ಖಂಡೇರಾವ್ ತಿಮ್ಮಾಜಿ ಅವರು ಕಟ್ಟಿಸಿದರೆಂದು ಗುಡಿಯ ಪಾವಟಿಗೆಯ ಮೇಲಿರುವ ಮರಾಠಿ ಶಾಸನದಿಂದ ತಿಳಿಯುತ್ತದೆ. ದೇವಾಲಯದ ಹೊರಗೆ ಗುಡ್ಡದ ಮೇಲಿರುವ ದೀಪ ಸ್ಥಂಭವನ್ನು ಕ್ರಿ.ಶ. ೧೫೮೯ ರಲ್ಲಿ ಖಂಡೇರಾವ್ ತಿಮ್ಮಾಜಿಯೆ ಕಟ್ಟಿಸಿದನೆಂದು ದಾಖಲೆ ಇದೆ. ಈ ದೀಪ ಸ್ಥಂಭವು ಒಂದೇ ಕಲ್ಲಿನಲ್ಲಿದ್ದು ೧೨ ಮೀಟರ್ ಎತ್ತರವಾಗಿದೆ.

 

ಕೊರ್ತಿ ಕೊಲ್ಹಾರ ಸೇತುವೆ

ದೂರ:
ತಾಲೂಕಿನಿಂದ: ೨೦ ಕಿ.ಮೀ.
ಜಿಲ್ಲೆಯಿಂದ: ೭೦ ಕಿ.ಮೀ.

ರಾಷ್ಟ್ರೀಯ ಹೆದ್ದಾರಿ ೨೧೮ ಗುಂಟ ಬಿಜಾಪೂರಕ್ಕೆ ಹೋಗುವಾಗ ಬಾಗಲಕೋಟ ಜಿಲ್ಲೆಯ ಕೊರ್ತಿಯನ್ನು ಬಿಜಾಪೂರ ಜಿಲೆಲೆಯ ಕೋಲ್ಹಾರ ಗ್ರಾಮವನ್ನು ಜೋಡಿಸಬಲ್ಲ ದಕ್ಷಿಣ ಭಾರತದಲ್ಲಿಯೇ ಅತೀ ದೊಡ್ಡ ಸೇತುವೆಗಳ ಸಾಲಿನಲ್ಲೊಂದೆನಿಸಿಕೊಂಡಿರುವ ಕೊರ್ತಿ ಕೋಲ್ಹಾರ ಸೇತುವೆ ನೋಡುಗರನ್ನು ಬೆರಗುಗೊಳಿಸುತ್ತದೆ.

ಆಳರಸರ ಕಾಲದಲ್ಲಿ ಕಲಾದಗಿ ಜಿಲ್ಲಾ ಕೇಂದ್ರವಾಗಿದ್ದಾಗ ತಮ್ಮ ಸೇನೆಯ ಪ್ರಯಾಣದ ಅನುಕೂಲಕ್ಕಾಗಿ ೧೫೦ ವರ್ಷಗಳ ಹಿಂದೆ ಮೊದಲೊಂದು ಸೇತುವೆಯನ್ನು ನಿರ್ಮಿಸಲಾಗಿತ್ತು. ಈ ಸೇತುವೆಯನ್ನು ದಂಡಿನ (ದಂಡು, ಸೈನ್ಯ) ಸೇತುವೆ ಎಂದು ಕರೆಯಲಾಗುತ್ತಿತ್ತು. ಮಳೆಗಾಲದಲ್ಲಿ ಕೃಷ್ಣೆ ಅಬ್ಬರಿಸಿ ಬಂದಾಗ ಹಾಗೂ ಆಲಮಟ್ಟಿಯ ಹಿನ್ನೀರಿನಿಂದ ಈ ಸೇತುವೆ ನೀರಿನಲ್ಲಿ ಮುಳುಗಿದಾಗ ವರ್ಷದಲ್ಲಿ ೬ ತಿಂಗಳು ಹುಬ್ಬಳ್ಳಿ-ಬಾಗಲಕೋಟೆಯಿಂದ -ಬಿಜಾಪೂರ ಸೇರಲು ಆಗುತ್ತಿರಲಿಲ್ಲ. ಈ ಸಮಸ್ತೆಯ ಪರಿಹಾರಕ್ಕೆ ಈ ಭಾಗದ (ಬಿಜಾಪೂರ- ಬಾಗಲಕೋಟ) ಹಲವಾರು ಜನಪ್ರತಿನಿಧಿಗಳ ಹೋರಾಟದ ಫಲದಿಂದ ಸರ್ಕಾರ ಸಮುದ್ರ ಪಾತಳಿಯಿಂದ ೫೨೯ ಮೀಟರ್ ಎತ್ತರದಲ್ಲಿ ೧೮ ಕಿ.ಮೀ. ನಷ್ಟು ಉದ್ದದ ಬೃಹತ್ ಸೇತುವೆ ನಿರ್ಮಿಸಿ ಕೊರ್ತಿ ಕೊಲ್ಹಾರ ಗ್ರಾಮಗಳನ್ನು ದಾಖಲೆಯ ಪಟ್ಟಿಯಲ್ಲಿ ಸೇರಿಸಿದ್ದು ಶ್ಲಾಘನೀಯ.

ಮುಖ್ಯ ಸೇತುವೆಯ ಉದ್ದ ೩ ಕಿ.ಮೀ. ಉತ್ತರ ಭಾಗದ ೮ ಕಿ.ಮೀ. ಮಣ್ಣಿನ ಕೂಡು ರಸ್ತೆ ೭ ಕಿ.ಮೀ. ದಕ್ಷಿಣ ಭಾಗದ ಕೂಡು ರಸ್ತೆಗಳಿಂದೊಳಗೂಡಿದ ಈ ಸೇತುವೆ ೩ ಮೀಟರ್ ವ್ಯಾಸದ ಸುತ್ತಳತೆಯ ೨೫ ಮೀಟರನಷ್ಟು ಎತ್ತರದ ೭೬ ಕಂಬಗಳು, ೪೦ ಮೀಟರ್ ಉದ್ದದ ೭೫ ಅಂಕಣಗಳು ಈ ಸೇತುವೆಯನ್ನು ಹೊತ್ತುನಿಂತು ಒಗ್ಗಟ್ಟೆ ಬಲ ಎಂಬುದನ್ನು ಸಾಕ್ಷಿಕರಿಸಿವೆ. ಅಂದಾಜು ೧೦೦ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸೇತುವೆಯ ಮೇಲಿಂದ ಹೋಗುವ ಸುತ್ತಲು ಕಣ್ಣು ತಿರುಗಿಸದಷ್ಟೂ ಜಲ ರಾಶಿಯ ಸೊಬಗು ನಮಗೆ ಸಮುದ್ರದಲ್ಲಿ ಪಯಣಿಸುವ ಅನುಭವ ನೀಡುತ್ತದೆ. ಕೊರ್ತಿ ದಾಟಿ ಕೋಲ್ಹಾರ ತಲುಪಿದರೆ ಸಾಕು ಕರ್ನಾಟಕದಲ್ಲಿಯೇ ಅತ್ಯಂತ ಕಡಿಮೆ ಬೆಲೆಯ ಅತ್ಯಂತ ಶ್ರೇಷ್ಠ ಕೆನೆ ಮೊಸರಿನ ಗಡಿಗೆಗಳು ಪ್ರವಾಸಿಗರನ್ನು ತಂಪುಗೊಳಿಸುತ್ತವೆ.

 

ಪುಣ್ಯ ಕ್ಷೇತ್ರ ಚಿಕ್ಕ ಸಂಗಮ

ದೂರ:
ತಾಲೂಕಿನಿಂದ: ೦ ಕಿ.ಮೀ.
ಜಿಲ್ಲೆಯಿಂದ: ೪೦ ಕಿ.ಮೀ.

ರಾಷ್ಟ್ರೀಯ ಹೆದ್ದಾರಿ ೨೧೮ ರಲ್ಲಿ ಸಿಗುವ ಬೀಳಗಿ ತಾಲೂಕಿನ ಬಾಡಗಂಡಿಯಿಂದ ಪೂರ್ವದಿಕ್ಕಿನಲ್ಲಿ ೧೦ ಕಿ.ಮೀ. ಅಂತರದಲ್ಲಿರುವ ಚಿಕ್ಕ ಸಂಗಮ ಕೃಷ್ಣೆ, ಘಟಪ್ರಭೆಯರ ಸಂಗಮ ಸ್ಥಾನ. ಇಲ್ಲಿ ಜಾತವೇದ ಮುನಿಗಳ ಗದ್ದುಗೆ ಇದ್ದು, ಬಸವಣ್ಣನವರು ಇಲ್ಲಿಯೇ ವಿದ್ಯಾಭ್ಯಾಸ ಮಾಡಿದರೆಂದು ಹೇಳಲಾಗುತ್ತದೆ. ಮೊದಲಿನ ಚಿಕ್ಕ ಸಂಗಮವು ಕೃಷ್ಣಾ ಮೇಲ್ದಂಡೆ ಯೋಜನೆಯ ಆಲಮಟ್ಟಿ ಆಣೆಕಟ್ಟಿನ ಹಿನ್ನೀರಿನಲ್ಲಿ ಮುಳುಗಿ ಹೋಗಿದ್ದರೂ ನೂತನವಾಗಿ ೮ ಎಕರೆ ಜಮೀನದಲ್ಲಿ ಅತ್ಯಂತಸ ಸುಂದರವಾಗಿ ನಿರ್ಮಾಣಗೊಂಡಿರುವ ಈ ಪುಣ್ಯ ಕ್ಷೇತ್ರವು ಸಸ್ಯಕಾಶಿ ಉದ್ಯಾನವನ, ಪಕ್ಷಿಧಾಮ, ದೋಣಿ ವಿಹಾರ ಮುಂತಾದವುಗಳಿಂದ ಪ್ರಸಿದ್ಧ ಪ್ರವಾಸಿ ತಾಣವಾಗಿ ಪರಿವರ್ತಿತಗೊಳ್ಳುತ್ತಿದೆ. ಸಧ್ಯ ಎತ್ತ ನೋಡಿದರತ್ತ ಕಣ್ಣಿಗೆ ಹಸಿರು ಹಬ್ಬ ಉಣಬಡಿಸಲಿರುವ ಈ ಕ್ಷೇತ್ರದಲ್ಲಿ ಅತ್ಯದ್ಭುತವಾಗಿ ವೈಷ್ಣವ ಶೈಲಿಯಲ್ಲಿ ನಿರ್ಮಿತವಾದ ದ್ವಾರ ಬಾಗಿಲಿನ ಗೋಪುರ. ಶೈವ ಶೈಲಿಯಲ್ಲಿ ನಿರ್ಮಿತವಾದ ಗರ್ಭಗುಡಿ, ಗ್ರೀಕ್ ಶೈಲಿಯಲ್ಲಿ ನಿರ್ಮಿತವಾದ ಉಪ ದೇಗುಲಗಳು ಪ್ರವಾಸಿಗರಲ್ಲಿ ಭಕ್ತಿಯ ಸೆಲೆಯನ್ನುಕ್ಕಿಸಿದರೆ, ಹಸಿರು ವನ, ಹಕ್ಕಿ ಪಕ್ಷಿಗಳಿಂದ ಆಚ್ಛಾದಿತವಾಗಿರುವ ಬೆಟ್ಟಗುಡ್ಡಗಳ ರಮಣೀಯ ದೃಶ್ಯವಂತೂ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಈ ದೃಷ್ಠಿ ಹಾಸಿದಷ್ಟೆಲ್ಲಾ ಕಣ್ಣಿಗೆ ಮುದವನ್ನುಂಟುಮಾಡುವ ಅಪಾರ ನೀಲ ಜಲರಾಶಿ ಮೀನು ಸಾಕಾಣಿಕೆಗೆ ಸಹಕಾರಿಯಾದರೆ ಅಲ್ಲಲ್ಲಿ ತಲೆಯತ್ತಿ ನಿಂತಿರುವ ನಡುಗಡ್ಡೆಗಳಂತೂ ವಿವಿಧ ಜಾತಿಯ ಪಕ್ಷಿಗಳ ತವರು ಮನೆಗಳಾಗಿವೆ. ಧಾರ್ಮಿಕ ಹಾಗೂ ಭಾವನಾತ್ಮಕ ಬೆಸುಗೆಯ ತಾಣವಾಗಿರುವ ಚಿಕ್ಕ ಸಂಗಮ ಇನ್ನೂ ಪೂರ್ಣ ಪ್ರಮಾಣದಲ್ಲಿ ಸಿದ್ಧಗೊಳ್ಳಲಿಕ್ಕೆ ಕೆಲವೇ ದಿನಗಳು ಬಾಕಿ.

ಇದೇ ದಾರಿಯಗುಂಟ ಹೋಗುವಾಗ ಬಾಡಗಂಡಿಯಿಂದ ಕೆಲವಾರು ಹೆಜ್ಜೆಗಳಲ್ಲಿಯೇ ನೋಡಲು ಅನುಕೂಲವಾಗಿರುವ ಬಾಡಗಂಡಿ ಶುಗರ್ಸ ಸಕ್ಕರೆ ಕಾರ್ಖಾನೆಯು ಕೂಡಾ ಪ್ರವಾಸಿಗರನ್ನು ಕೈ ಮಾಡಿ ಕರೆದು ಸಕ್ಕರೆ ತಯಾರಿಕೆಯ ವಿಧಾನದ ಸವಿಯನ್ನು ಉಣಬಡಿಸುತ್ತಿದೆ. ಮುಂದೆ ಸಾಗಿದರೆ ೨-೩ ಕಿ.ಮೀ. ಅಂತರದಲ್ಲಿ ಕಲ್ಯಾಣ ತೋಪಕಟ್ಟಿಯ, ಉಜೈನೀ ಪೀಠದ ಶಾಖಾ ಮಠ ಸುಕ್ಷೇತ್ರ ಗಿರಿಸಾಗರ ಕಲ್ಯಾಣ ಹಿರೇಮಠವು ಕೂಡಾ ಚಿಕ್ಕಸಂಗಮದ ದಾರಿಯ ಮಧ್ಯದಲ್ಲಿಯೇ ಭಕ್ತಿಯ ಸವಿಯನ್ನು ಬಡಿಸುತ್ತವೆ.