ಹೋಗಿ ಬರುವೆನು ನಾನು, ಸಂತಸದಿ ನೀವೆಲ್ಲ
ಹರಸಿ ಕಳುಹಿಸಿಕೊಡಿರಿ ಇನಿಯನೊಡನೆ
ಹುಟ್ಟಿದೂರನು ಬಿಟ್ಟು ಕಾಣದೂರಿಗೆ ಹೋಗಿ
ಬಾಳ ನಡೆಸುವ ಸಮಯ ಬಂದುದೆನಗೆ.

ಹೊಲಗದ್ದೆಗಳ ನಡುವೆ ನಡೆಯುತಿಹುದೀ ಗಾಡಿ
ರೈಲು ನಿಲ್ದಾಣದೆಡೆ ಒಯ್ಯಲೆಂದು ;
ಎತ್ತುಗಳ ಕೊರಳಿನಲಿ ಗೆಜ್ಜೆ ಝಣರೆಂದೆನುತ
ನಡುಹಗಲ ಮೌನವನು ಕಲಕುತಿಹುದು.

ಮಡಿಲಲಿದೆ ‘ಉಡಿಯಕ್ಕಿ’, ತೌರೂರಿನಕ್ಕರೆಯ
ಮಂಗಳಾಶೀರ್ವಾದ ರೂಪದಲ್ಲಿ :
ಪತಿಯಿಹರು ಪಕ್ಕದಲಿ, ಬಂಧುಬಳಗವನುಳಿದು
ನಡೆದಿರುವೆ ನಾನವರ ಹಾದಿಯಲ್ಲಿ.

ಮದುವೆ ಮಂಟಪದಲ್ಲಿ ಗುರುಹಿರಿಯರೆದುರಿನಲಿ
ನಾನು ನಿನ್ನವನೆಂದು ಕೈಹಿಡಿದರು.
ನಾನು ಒಪ್ಪಿದ ನಲ್ಲ ಕೈಹಿಡಿದ ಮೇಲಿನ್ನು
ಅದಕ್ಕಿಂತ ಹೆಚ್ಚೇನು ಭಾಗ್ಯವಿಹುದು ?

ನಾನು ಹುಟ್ಟಿದ ಹಳ್ಳಿ ಸಗ್ಗಕಿಂತಲು ಮಿಗಿಲು,
ಅದಕಿಂತಲೂ ಮಿಗಿಲು ನನ್ನ ನಲ್ಲ.
ಇನಿತು ದಿನ ಉಸಿರಿತ್ತ ನಮ್ಮೂರ ಶಕ್ತಿಗಳೆ
ನಗು ನಗುತ ಹರಸಿಬಿಡಿ ನೀವ್ಗಳೆಲ್ಲ.

ಅದೊ ಅಲ್ಲಿ ದೂರದಲಿ ನಮ್ಮೂರು ನೋಡುತಿದೆ
ಹಸುರು ಮರಗಳ ಮುಸುಕಿನಿಂದ ಇಣುಕಿ !
ಮಗಳ ಬೀಳ್ಕೊಡುತಿರುವ ತಾಯ ಮುಖಬಿಂಬದೊಲು
ತೋರುತಿದೆ, ನನ್ನೆದೆಯನೆಲ್ಲ ಕಲಕಿ

ನಾ ಬೆಳೆದ ಮನೆ ನನ್ನ ಬೀಳ್ಕೊಡುವ ಸಮಯದಲಿ
ಕಣ್ಣೀರನಿಡುವಂತೆ ತೋರುತಿತ್ತು.
ತಾಯಿ ಇಲ್ಲದ ನನಗೆ ಆ ಮನೆಯೆ ತಾಯಾಗಿ
ನನ್ನ ನೋವನು ದಿನವು ಸಂತೈಸುತಿತ್ತು.

ನಮ್ಮ ಪಕ್ಕದ ಮನೆಯ ಗೆಳತಿಯರ ಬೀಳ್ಕೊಂಡು
ಬರುವಾಗ ನನ್ನೆದೆಯು ತುಂಬಿ ಬಂತು.
ಆ ಗೆಳತಿ, ಆ ಊರು ಇನಿತೆಲ್ಲವನು ಬಿಡಿಸಿ
ಎಳೆದಿತ್ತು ಬೇರೊಂದು ಜೀವತಂತು

“ಹೋಗಿ ಬರುವೆಯ ಗೌರಿ, ಮರೆಯದಿರು ನಮ್ಮನ್ನು”
ಎಂದವರು ಕಣ್ಣೀರ ಸುರಿಸಿದಾಗ.
“ಹೆಣ್ಣಾಗಿ ಹುಟ್ಟಿರಲು ಹೋಗಬೇಕೆಲ್ಲಿಗೋ,
ಹುಟ್ಟಿದೂರಿನ ಋಣವು ತೀರಿದಾಗ !

ನಾನು ಹೋಗುವೆನಿಂದು ; ನಾಳೆ ನಿಮಗೂ ಬಹುದು
ಹುಟ್ಟಿದೂರನು ಬಿಟ್ಟು ನಡೆವ ಹೊತ್ತು ;
ಆವಾವ ಹಿರಿಯೊಲವು ಕಿರಿಯೊಲವಿನಿಂದೆಮ್ಮ
ಕರೆದುಕೊಂಡೊಯ್ಯುವುದೊ, ಏನು ಗೊತ್ತು ?

ಹೋಗುತಿರುವೆನು ನಾನು ಕಾಣದೂರನು ಕುರಿತು
ಎಂತಿರುವುದೋ ಅಲ್ಲಿ ನನ್ನ ಬದುಕು ?
ನಿಮ್ಮೆಲ್ಲರೆದೆಯೊಲುಮೆ, ನನ್ನ ನಲ್ಲನ ಒಲವು
ನುಡಿಯುತಿಹುದೊಳ್ಪನೇ ; ಅನಿತೆ ಸಾಕು.”

ಇಂತೆಂದು ಗೆಳತಿಯರ ಸಂತೈಸಿ ನಾ ಬಂದೆ
ಅವರ ಸವಿಯೊಲ್ಮೆಯನು ತುಂಬಿಕೊಂಡು.
ಊರ ಹರಕೆಯ ತೆರದಿ ಕೆರೆಯತ್ತಣಿಂದಿಲ್ಲಿ
ಬರುತಲಿವೆ ಬೆಳ್ಳಕ್ಕಿ ಮಾಲೆಗೊಂಡು.

ಆ ಕೆರೆಯ ತುಂಬೆಲ್ಲ ತುಂಬಿರುವ ಜೊಂಡಿನಲಿ
ನೂರು ನೀರ‍್ವಕ್ಕಿಗಳ ಕಲಸಂಭ್ರಮ.
ಹಲವು ಜಲಕನ್ಯೆಯರು ಮಿಡಿದ ನೀರ್‌ವೀಣೆಗಳ
ಪಲುಕಿನೊಲು ಕಿವಿಗಿನಿದು ಆ ಕಲರವ.

ನನ್ನ ತಾಯೂರುಟ್ಟ ಹಸಿರು ಸೀರೆಯ ತೆರದಿ
ಎತ್ತೆತ್ತಲೂ ಹಸಿರೆ ತುಂಬಿರುವುದು
ಅವಳ ಮೃದುಹಾಸದೊಲು ಬಣ್ಣ ಬಣ್ಣದ ನೋಟ
ಅಲ್ಲಲ್ಲಿ ತಳಿರಿನಲಿ ತುಳುಕುತಿಹುದು.

ತೆಂಗುಗರಿಗಳು ತಮ್ಮ ಮಧುರ ಮರ‍್ಮರದಲ್ಲಿ
ಹಗಲಿರುಳು ಜೋಗುಳುವ ಹಾಡುತಿರಲು
ಅದರ ಹಾಡಿಗೆ ತನ್ನ ಎದೆಯ ಹಾಡನು ಬೆಸೆದು
ಬದುಕಿನಲಿ ತೊಡಗಿರುವುದೆಮ್ಮ ಊರು.

ಅತ್ತ ದಕ್ಷಿಣದಲ್ಲಿ ದೂರಬಾನಂಚಿನಲಿ
ನೆಲದ ಮುಗಿಲಾಸೆಯೊಲು ಮೇಲೆದ್ದಿದೆ.
‘ಕಲ್ಲತ್ತಗಿರಿ’ ಎಂದು ಕರೆವರಾ ಬೆಟ್ಟವನು
ಬಾನಪಟಲದ ಭವ್ಯ ಕಲೆಯಂತಿದೆ !

ಮುಂಬೆಳಗು ಚುಂಬಿಸಲು ಗಿರಿಯುತ್ತಮಾಂಗವನು
ಅಲ್ಲಿ ಧುಮುಕುವ ನೀರು ಬೆಳ್ಳಿ ಗೆರೆಯಾಗಿ
ಹೊಳೆದಿರಲು, ಗಂಗಾಧರನ ಕಂಡೊಲು ನಾನು
ಕೈ ಮುಗಿದುದೆನಿತುಸಲ ತಲೆಯ ಬಾಗಿ !

ನಮ್ಮೂರ ಗುಡ್ಡದೆಡೆ ಗಿಡಬಳ್ಳಿ ಹೊದರುಗಳು
ಮರಗಳಿಡುಕಿದ ಕಾಡು ಹಿರಿದಾಗಿದೆ
ಹತ್ತಿರದ ಗುಡ್ಡಗಳ ಮೇಲೇರಿ ಮುಗಿಲೊಡನೆ
ಮಾತಾಡಬೇಕೆಂದು ನಡೆದಂತಿದೆ !

ಮಾಸ ಮಾಸಗಳಲ್ಲಿ ಇದರ ಚೆಲುವೇ ಬೇರೆ ;
ಎಲ್ಲಕಿಂತಲು ಚೆಲುವು ಚೈತ್ರಮಾಸ !
ಚಿಗುರು ಚಿಮ್ಮಿದ ಮರದ ನೂರ್ ಬಣ್ಣದೆದೆಗಳಲಿ
ನೂರು ಹಕ್ಕಿಯ ಕೊರಳ ನೂರಿಂಚರ !

ಕಿರಿಲಂಗವನ್ನುಟ್ಟ ಹುಡುಗಿಯಾಗಿದ್ದಾಗ
ನನ್ನ ಜೊತೆಯವರೊಡನೆ ತಿರುಗಾಡಲೆಂದು
ಆ ಕಾಡಿನೊಳಗಾಡಿ ಹಣ್ಣುಹೂಗಳನಾಯ್ದು
ನನ್ನ ಮನೆಯನೆ ನಾನು ಮರೆದಿದ್ದೆನಂದು.

ಆ ಕಾವಲೊಳಗಲ್ಲಿ ದನವ ಕಾಯುವ ಹೈದ-
ರೂದುವಾ ಕೊಳಲದನಿ ಹೊನಲಾಗಿರೆ
ದನದ ಕೊರಳಿನ ಗಂಟೆ ಟಿಂಟಿಣಿಯ ದೋಣಿಗಳು
ಕೊಳದ ದನಿಯಲೆಯಲ್ಲಿ ತೇಲುತ್ತಿರೆ.

ಆ ದನಿಯನಾಲಿಸುತ ಸಂತಸದಿ ನಾನಂದು
ಬೆರಗಾಗಿ ನಲಿದುಲಿದು ಕುಣಿದಾಡಿದೆ.
ಎನಿತು ಚೆಲುವೀ ಬಾಳು ! ಬಾಳುವುದೆ ಗುರಿಯೇನೊ !
ಮತ್ತೇನು ಹೆಚ್ಚಿಲ್ಲವೆಂದುಕೊಂಡೆ.

ಇದ್ದಕ್ಕಿದ್ದಂತೆಯ ನನ್ನ ತಾಯ್ ಸೇರಿದಳು
ಸಗ್ಗದೂರಿಗೆ ನನ್ನನಿಲ್ಲಿ ತೊರೆದು.
ಬಹುಕಾಲ ದಿಗ್ಭ್ರಾಂತಳಾಗಿ ನೊಂದಿರೆ ನಾನು
ನನ್ನ ಊರೇ ನನ್ನ ಸಂತೈಸಿತು.

ಸಾವೆಂದರೇನೆಂದು ಅರಿಯದಿಹ ಜೀವನದ
ಸೊಗದ ಸರಸಿಯೊಳೊಂದು ಕಲ್ಲುಬಿತ್ತು.
ಆಮೇಲೆ ಕೆಲಕಾಲ ತಾಯವಿರಹದ ಬೇಗೆ
ಬರಿಯ ಶೂನ್ಯತೆಯನ್ನೆ ತುಂಬಿಸಿತ್ತು.

“ಪಾಪ ತಬ್ಬಲಿ ಹುಡುಗಿ”- ಎಂದು ಅವರಿವರಾಡಿ
ಮರುಕ ತೋರಲು ನನಗೆ ಏನೊ ಸೊಗಸು !
ಎಷ್ಟಾದರೂ ಮತ್ತೆ ತಾಯಿ ಬಾರಳು ಎಂದು
ತಿಳಿದಾಗ ಎದೆಯಲ್ಲಿ ಬರಿಯ ಕಲಸು.

ಮತ್ತೆ ಕೆಲಕಾಲದಲಿ ಬೇರೊಬ್ಬಳೈತಂದು
ನನ್ನ ತಾಯಡಿಯಿಟ್ಟ ಮನೆಯಲ್ಲಿರೆ,
‘ಅಮ್ಮ’ ಎಂದವಳನ್ನು ಕರೆಯತೊಡಗಿದೆ ನಾನು,
ಎಷ್ಟಾದರೂ ಅವಳ ಪರಿಯೆ ಬೇರೆ !

ಎಷ್ಟೊಂದು ದೀವಳಿಗೆ ಬಂದು ಹೋದುವು ನನ್ನ
ಮನೆಯ ಅಂಗಳದಲ್ಲಿ ಬೆಳಕು ಮಾಡಿ !
ತಾಯಿ ಹೋದಾಮೇಲೆ ಯಾವ ದೀವಳಿಗೆಯೂ
ತುಂಬಲಿಲ್ಲೆನ್ನೆದೆಗೆ ಬೆಳಕನೂಡಿ.

ಮೊನ್ನೆ ಮದುವೆಯ ದಿವಸ ತುಂಬು ಸಂಭ್ರಮದಲ್ಲಿ
ತಾಯ ನೆನಪೆನ್ನೆದೆಗೆ ಮೊಳೆತು ಮೂಡಿ
ನನ್ನ ತಾಯಿದ್ದಿರಲು ಈ ಸೊಗಸು ಎನಿತೆಂದು
ಕಣ್ಣೀರು ಸುರಿಸಿದೆನು ಮೌನದಲ್ಲಿ

ಬರುಬರುತ ಜೀವನದ ಬೆಳಕು ಆರುತ ಬಂದು
ಯಾವುದೋ ಕತ್ತಲನು ತುಂಬುತಿತ್ತು.
ಕತ್ತಲಾದರು ಹಲವು ಚಿಕ್ಕೆ ಹೊಳೆಯುವ ತೆರದಿ
ಹಲವು ಆಸೆಗಳೆನ್ನ ಬೆಳಗುತಿತ್ತು.

ಮುಂದೆ ದಿನದಿನದಲ್ಲಿ ನೋವ ನುಂಗುತ ನಾನು
ಜೀವನದ ಸುಧೆಯನ್ನು ಅರಸುತಿರಲು,
ಸುತ್ತಲಿನ ನೋಟಗಳೆ ತಾಯೊಲವಿನಂತಾಗಿ
ಶಾಂತಿಯನು ನನ್ನೆದೆಗೆ ತುಂಬಿರುವುವು.

ಎಷ್ಟಾದರೂ ಮುಗ್ಧಮನಳಾದ ನನ್ನೆದೆಗೆ
ನೂರು ಸುಂದರ ಮಧುರ ರೂಪಗಳ ತೋರಿ,
ಜಗವೆಲ್ಲ ಏನೇನೊ ನೂತ್ನ ಸುಂದರ ವಸ್ತು-
ಸಂಗ್ರಹಾಲಯದಂತೆ ತೋರುತಿತ್ತು.

ನನ್ನ ಕಿರಿಯಂದಿನಲಿ ಮಧುರ ರೂಪವ ತೋರಿ
ಮನವ ಸೆರೆಗೈದಿದ್ದ ಕೆರೆಯ ನೀರು,
ಒಮ್ಮೊಮ್ಮೆ ಕಣ್ಣೀರ ಕೊಳದಂತೆ ತೋರಿತ್ತು ;
ನನ್ನ ಮನವಾಗಿತ್ತು ನೋವ ತವರು !

ಗುಡ್ಡ ಗುಡ್ಡದ ಮೊಲೆಗೆ ಒಂಟಿ ಮೋಡದ ಹಸುಳೆ
ಬಾಯಿಟ್ಟು ಮಲಗಿರಲು ಕನಸಿನಂತೆ,
ಆ ಅದನು ಬೆರಗಾಗಿ ನೋಡಿ ನಿಡುಸುಯ್ಯುವೆನು
ಮನಕೆ ಮರಳಲು ಕಳೆದ ತಾಯ ಚಿಂತೆ.

ಆಗಾಗ ತೊರೆಯ ಬಳಿ ನಾನೊಬ್ಬಳೇ ಕುಳಿತು
‘ಗುಬ್ಬಚ್ಚಿಗೂಡು’ಗಳ ಮಾಡುತಿದ್ದೆ.
ಹರಿವ ಹೊಳೆಯೊಳು ಕಿರಿಯ ಕಾಗದದ ದೋಣಿಗಳ
ತೇಲಿಬಿಟ್ಟವುಗಳನೆ ನೋಡುತಿದ್ದೆ.

ಕೆಲದೂರ ಹೋಗುತಲೆ ಮಗುಚಿ ನೀರೊಳು ಮುಳುಗಿ
ಹಾಳಾಗುತಿರಲವನು ಕಂಡು ನೊಂದು.
ನಮ್ಮ ಮನದಾಸೆಗಳು ಕಾಗದದ ದೋಣಿಯೇ?
ಎಂದು ನಿಡುಸುಯ್ಯುತ್ತ ನಿಲ್ಲುತಿದ್ದೆ.

ಅನಿತರಲಿ ಅಲ್ಲೊಂದು ಬಿಳಿಯ ಕುರಿಮರಿ ಬಂದು
ಮುದ್ದಾದ ಬಾಯಿಂದ ನೀರ್ಕುಡಿದಿರೆ,
ಅದರ ಚೆಲುವನು ಕಂಡು ನನ್ನ ನೋವನು ಮರೆತು
ನಾನು ಕುರಿಮರಿಯೊಡನೆ ಮಾತಾಡಿದೆ.

ಮತ್ತೆ ಮರಳಿನ ದಡದಿ ಹಲವಾರು ರೂಪಗಳ
ಸೃಜಿಸಿ ಕೆಡಿಸುತ ಆಟವಾಡುತಿರಲು,
ಬಟ್ಟೆಯೊಗೆಯಲು ಬಂದು ಆಟವಾಡುತ ಕುಳಿತ
ನನ್ನ ನೋಡೆಲ್ಲರೂ ನಗುತಿದ್ದರು.

“ಬಟ್ಟೆಯೊಗೆವುದ ಬಿಟ್ಟು ಮದುವೆಯಾಗುವ ಹುಡುಗಿ
ಚಿಕ್ಕ ಮಕ್ಕಳ ಹಾಗೆ ಆಡುತಿಹಳು !
ಅತ್ತೆಮನೆ ಸೇರಿದರೆ ಆಗ ಅರಿವಾದೀತು”
ಎಂದಲ್ಲಿ ಹಲಕೆಲರು ಆಡಿಕೊಳಲು,

ನನ್ನ ಆಟಕೆ ನಾನೆ ನಾಚಿ ಬಟ್ಟೆಯನೊಗೆದು
ಕುಕ್ಕೆಯನು ತಲೆಗಿಟ್ಟು ಹಿಂದಿರುಗಿದೆ.
‘ಮದುವೆಯಾಗುವ ಹುಡುಗಿ’- ಎಂಬ ಮಾತನು ಕೇಳಿ
‘ಕಳೆದುಹೋಯಿತೆ ಬಾಲ್ಯ?’ ಎಂದುಕೊಂಡೆ.

ಬಾಲ್ಯವನು ಕಳೆದುಕೊಳಲಾರಿಗೂ ಮನವಿಲ್ಲ,
ಎನಿತು ಸುಂದರ ಮಧುರ ಸ್ವಪ್ನಲೋಕ !
ಮುಂಬೆಳಗಿನೊಲು ಬಾಲ್ಯ, ತಾರುಣ್ಯ ಮಧ್ಯಾಹ್ನ,
ಬಿಸಿಲ ಬೇಗೆಯು ಹೆಚ್ಚು ಆ ಹೊತ್ತಿಗೆ !

ಆಗಾಗ ಬುತ್ತಿಯನು ತಲೆಯ ಮೇಲಿಟ್ಟಾನು
ತಂದೆಯುಳುವಾ ಹೊಲಕೆ ಹೋಗುತಿದ್ದೆ.
ತುಂಬು ನೆರಳಿನ ದಾರಿ ಹಸಿರು ತೂಗುವ ದಾರಿ
ಅದರಲ್ಲಿ ನಡೆಯುವುದೆ ಒಂದು ಸೊಗಸು !

ಮಿರು ಮಿರುಗುವಿಬ್ಬನಿಯ ಹಸಿರು ತಳಿಗೆಯನೆತ್ತಿ
ನೆಲದೇವಿ ನೇಸರಿಗೆ ಬೆಳಗುತಿರಲು,
ಅದರಂತೆ ನನ್ನೆದೆಯು ನೂರಾರು ಭಾವದಲಿ
ಮಿಂಚುತಿದ್ದುದು ನಾನು ನಡೆಯುತಿರಲು.

ಮರಮರಕೆ ಅಲ್ಲಲ್ಲಿ ಹೂಬಳ್ಳಿಗಳು ಹಬ್ಬಿ
ಬಳುಕಿ ಲಾಸ್ಯವನಾಡುತಿದ್ದುವಲ್ಲಿ
ಯಾವ ಬಳ್ಳಿಗೆ ಯಾವ ಮರದೊಲವಿನಾಶ್ರಯವೊ
ತಿಳಿಯದಿದ್ದೆನು ನಾನು ಆ ದಿನಗಳಲ್ಲಿ !

ಅತ್ತಿತ್ತ ಹೊಲದಲ್ಲಿ ಉಳುವ ಅಣ್ಣಗಳೆನ್ನ
ನೋಡಿ ಅಣಕಿಸುತಿರಲು, ನಾಚಿ ಕೆಂಪೇರಿ
ಬರುತಿರಲು ದಾರಿಯಲಿ ಹೆಂಗಸರು ಕೇಳುವರು
“ಮದುವೆ ಎಂದೇ ಗೌರಿ ನಿಮ್ಮೂರಿನಲ್ಲಿ?”

ಅತ್ತ ಹೊಲದೆದೆಯಲ್ಲಿ ನೇಗಿಲನು ಹಾಯಿಸುತ
ಬುವಿಯ ಭಾಂಡಾರವನು ತೆರೆಯುತಿರಲು,
ಕರ್ಮಯೋಗಿಯು ಬರೆವ ಮಂತ್ರಪಂಕ್ತಿಗಳಂತೆ
ನೂರಾರು ಸಾಲುಗಳು ಮೂಡುತಿಹವು !

ಮಯ್ಯ ಬೆವರನು ಬಸಿದು ಕೆಲಸ ಮಾಡುವರಿವರು
ನನ್ನಣ್ಣ ತಂದೆಯರು ‘ಬೆಳೆಯುವವರು’,
ಅವರ ಕರ್ಮದ ಫಲದಿ ಬರಿಬೀಳು ನೆಲದಿಂದ
ಹೊಸ ಹಸಿರು ಹೊಮ್ಮುವುದು, ಎನಿತಚ್ಚರಿ !

ಹೊಲಕೆ ಬುತ್ತಿಯ ಕೊಟ್ಟು ಹಿಂತಿರುಗಿ ಬರುವಾಗ
ಮಡಿಲ ತುಂಬಾ ಹೂವನಾಯ್ದು ತರಲು,
ನನ್ನ ಗೆಳತಿಯರೆಲ್ಲ – “ಯಾರ ಕೊರಳಿಗೆ ಮಾಲೆ?”
ಎಂದೆನ್ನ ಪ್ರಶ್ನಿಸುತ ನಗುತ್ತಿದ್ದರು.

ಕಾರ್ತೀಕ ಮಾಸದಲಿ ತೆನೆ ತುಂಬಿ ಪೈರೆಲ್ಲ
ಹೊನ್ನ ಬಣ್ಣದ ತೆರೆಯ ತೂಗುತಿರಲು
ಹಳ್ಳಿಹಾಡುಗಳನ್ನು ಹಾಡುತ್ತ ಸಂಜೆಯಲಿ
ಹೊರೆವೊತ್ತ ಹೆಂಗಸರು ಬರುತಿದ್ದರು.

ಉಳುವಾಗ, ನೆಡುವಾಗ, ಕಳೆಯನ್ನು ತೆಗೆವಾಗ,
ಹಾಡಿಕೊಂಡೇ ಇವರು ದುಡಿಯುವವರು;
ಹಾಡಿಗೂ ಕೆಲಸಕ್ಕು ಭೇದವೇ ಇಲ್ಲೆಂದು
ತಿಳಿದವರು; ಇವರಿಗೀ ಜೀವನವೆ ಹಾಡು !

ಮೊಗ್ಗು ಕಣ್‌ತೆರೆವಾಗ, ಮೂಡುದೆಸೆ ನಗುವಾಗ
ಬೀಸುಗಲ್ಲಿನ ಜೊತೆಗೆ ಇವರ ಹಾಡು
ತೇಲಿ ಅಲೆಅಲೆಯಾಗಿ ಸುಪ್ರಭಾತಕೆ ತನ್ನ
ಸ್ವಾಗತವನೀವಂತೆ ಹೊಮ್ಮಿಬಹುದು.

“ತಾಯಿದ್ರೆ ತವರ‍್ಹೆಚ್ಚು, ತಂದಿದ್ರೆ ಬಳಗ್ಹೆಚ್ಚು;
ಸಾವಿರಕೆ ಹೆಚ್ಚು ಪತಿಪುರುಷ”- ಎಂಬ
ಹಾಡಿನರ್ಥವನೆನಗೆ ಕಿರಿಯಂದಿನಿಂದಲೂ
ಈ ಊರ ಬೆಳಗುದನಿ ತಿಳಿಸಿರುವುದು.

ನಮ್ಮ ಮನೆಯೆದುರಿನಲಿ ಸಿಹಿನೀರ ಬಾವಿಯಿದೆ
ಹೆಂಗಸರ ಪರಿಷತ್ತಿನಾಸ್ಥಾನವಹುದು !
ನೀರ ಸೇದುವೆ ವೇಳೆ ಆ ರಮ್ಯ ದೃಶ್ಯವನು
ನೋಡಿ ಸಂತಸಪಟ್ಟುದೆನಿತು ಸಲವೊ !

ನಮ್ಮಕ್ಕ ತಂಗಿಯರು ನೀರೆಳೆವ ಸಮಯದಲಿ
ಅವರ ಬಳೆಗಳ ಝಣಕು ನಾದದಲ್ಲಿ
ಹಿರಿಕಿರಿಯರೊಂದಾಗಿ ತುಂಬು ಬಿಂದಿಗೆ ಹೊತ್ತು
ನಡೆವ ಗಾಂಭೀರ್ಯವನು ನೋಡಬೇಕು.

ಹಬ್ಬ ಹರಿದಿನದಲ್ಲಿ ಮರ ಮರದ ಹರೆಯಲ್ಲಿ
ಜೋಕಾಲಿಯಾಡುವರು ಈ ತರುಣರು ;
ಬೆಳುದಿಂಗಳಿರುಳಿನಲಿ ಕೋಲಾಟವಾಡುತಿರೆ
ಮುದುಕರಿಗು ಹೊಸಪ್ರಾಯ ಹೊಮ್ಮಬಹುದು !

ಮಳೆಗಾಲ ಬಂದಾಗ ಮುಗಿಲು ಕನಲಿದ ತೆರದಿ
ಗುಡುಗುತ್ತ ಬಿರುಮಳೆಯ ಸುರಿಸುವಾಗ,
ಊರೆಲ್ಲ ಆ ಮಳೆಯ ತೆರೆಯಲ್ಲಿ ಮರೆಯಾಗಿ
ನೂರಾರು ಊಹೆಗಳ ಸೃಜಿಸುತಿತ್ತು.

ಮಳೆಯ ಹನಿಗಳು ಬಂದು ಮುಗಿಲಗುಟ್ಟನು ತಂದು
ಮನೆಯ ಹೆಂಚಿನ ಮೇಲೆ ಸುರಿಯುತಿರಲು
ಮೂರು ತಿಂಗಳ ಕಾಲ ಜಡಿಮಳೆಯ ಪಹರೆಯಲಿ
ಹಗಲಿರುಳು ಮಂಕಾಗಿ ತೆವಳುತಿರಲು

ನನ್ನ ಅಡುಗೆಯ ಮನೆಯ ಹೊಗೆಯ ಕಾರೊಡಲಲ್ಲಿ
ನನ್ನ ದಿನಗಳ ನಾನು ನೂಕುತಿರಲು,
ನೂರಾರು ಶಂಖಗಳನೂದುವನೊ ಮಾದೇವ-
ನೆಂಬವೊಲು ಬಿರುಮಳೆಯು ಕರೆಯುತಿರಲು.

ರಾತ್ರಿಯಾದರು ಸೋನೆ, ಹಗಲಾದರೂ ಸೋನೆ,
ಕಪ್ಪೆಗಳ ಟ್ರೋಂಕಾರಘೋಷದಲ್ಲಿ !
ಎಡೆವಿಡದೆ ನಡೆವೊಂದು ತುಮುಲ ಘರ್ಷಣದಂತೆ
ನಮ್ಮ ಎದೆಗಳ ತುಂಬ ಮೊರೆದಿದ್ದಿತು.

ಮಳೆಗಾಲ ಕಳೆದಾಗ ನೋವುಗಳು ಹರಿದೋಡಿ
ಶುಭ್ರವಾದೆದೆಯಂತೆ ಸೃಷ್ಟಿಯಿತ್ತು
ನೆಲಮುಗಿಲ ಮಗುವಿನೊಲು, ಚೆಲುವಿನೆದೆಯುಸಿರಿನೊಲು
ಸುತ್ತಲೂ ಹಸಿರೆದ್ದು ತೋರುತಿತ್ತು.

ಮುಗಿಲಗೆಚ್ಚಲು ಕರೆದ ದುಗ್ಧಾಭಿಷೇಕದಲಿ
ಕಾಡುಮೇಡಿಂಗೆಲ್ಲ ಅಭ್ಯಂಜನ !
ಮದುಮಕ್ಕಳಂದದಲಿ ನಗುವ ಸೃಷ್ಟಿಯ ತುಂಬ
ಹೊಸ ಚೆಲುವು-ನಲಿವುಗಳ ನೀರಾಂಜನ !

ಊರ ಹೊರಗಿನ ಗುಡಿಯ ಬಸವಣ್ಣನೆದುರಿನಲಿ
ಕಾರ್ತೀಕದಲಿ ನೂರು ಸಾಲುದೀಪ,
ಬೆಳಗುವುವು ಮನೆಮನೆಯ ಜೀವಜ್ಯೋತಿಗಳಂತೆ
ಅವರ ಭಕ್ತಿಯ ಕಿರಿಯ ಕಾಣ್ಕೆಯಾಗಿ.

ಊರ ತೇರೆಳೆವಾಗ, ಜನವೆಲ್ಲ ನೆರೆವಾಗ
ನಮ್ಮೂರ ಸಂಭ್ರಮವ ನೋಡಬೇಕು.
ಸುತ್ತಹಳ್ಳಿಯ ಹಲವು ‘ದೇವರು’ಗಳೈತಂದು
ಮೈದುಂಬುವಾಪರಿಯ ಕಾಣಬೇಕು.

ಹಿರಿದೊಂದು ಕುಂಡದಲಿ ಕೆಂಗೆಂಡ ತುಂಬಿರಲು
ಅದನು ತುಳಿಯುತ್ತವರು ನಡೆಯುವಾಗ
ಕರಡೆ ತಮ್ಮಟೆವಾದ್ಯ ಕಿವಿಗಿಡಿದು ನಮ್ಮನ್ನು
ದಿಗ್ಭ್ರಾಂತಗೊಳಿಸುವುದು ನೋಡುವಾಗ !

ಹಗಲುರುಳಿ ಹೊರಳುತಿರೆ ಪಡುವಣದ ಕಮರಿಯಲಿ
ಅದರಾಸೆ ಮೋಡದಲಿ ತುಡಿಯುತಿರಲು,
ಮೆಲ್ಲನಿರುಳಿನ ಸರ್ಪ ತನ್ನ ಹೆಡೆಯನು ತೆರೆದು
ನಾಗಬಂಧದಿ ಜಗವ ಬಿಗಿಯುತಿರಲು

ಬೇಲಿ ಸಾಲುಗಳಲ್ಲಿ ಜೀರ್ದುಂಬಿಗಳ ಮೇಳ
ಕಿವಿಯ ಕೊರೆವಂತಿಹುದು ಸಂಜೆಯಲ್ಲಿ;
ಎನಿತು ದನಿ ಈ ಲೋಕ ! ಮನುಜವಾಣಿಯು ಕೂಡ
ಒಂದಲ್ಲವೇ ಕೋಟಿ ಕೀಟಗಳಲಿ !

ಇರುಳಿಳಿದು ಮನೆಮನೆಗೆ ನುಗ್ಗುತಿರೆ ಊರವರು
ದೀಪಗಳ ಮುಡಿಸುವರು ಅದ ನೂಂಕಲು !
ಕಾರಿರುಳ ನಭದಲ್ಲಿ ಚಿಕ್ಕೆಯಕ್ಕರದಲ್ಲಿ
ಬೆಳಕು ಗೆಲುವಿನ ಗೀತೆ ಬರೆಯುತಿರಲು.

ನಕ್ಷತ್ರಮೌನಿಯಾಗಿರುಳು ತಾನಾಳುವುದು
ಜಗದ ಜೀವಕೆ ಹಲವು ಕನಸನಿತ್ತು.
ವೈವಿಧ್ಯಮಯವಾದ ಹಗಲಿನಂತಲ್ಲವಿದು
ಭವ್ಯೇಕ ಗಾಂಭೀರ್ಯವಿದರ ರೂಪ !

ಹಗಲೆಲ್ಲ ಹೊಲದಲ್ಲಿ ದುಡಿದು ದಣಿದಾ ಮೈಗೆ
ರಾತ್ರಿ ಎಂಬುವುದೊಂದು ಸಂಜೀವಿನಿ.
ಊರೆಲ್ಲ ಮಲಗಿರಲು ತೆಂಗು ಮರ‍್ಮರಗೈದು
ತುಂಬು ಮೌನಕೆ ಶೃತಿಯ ಹಿಡಿಯುತಿಹುದು

ಹೊಲಗದ್ದೆ ಬನಬಾನು ಮೌನಸ್ಥವಾಗಿರಲು
ನಮ್ಮೂರು ಹಸುಳೆಯೊಲು ಮಲಗಿರುವುದು
ಪುಟ್ಟಕಂದರನಿಟ್ಟ ತೊಟ್ಟಿಲನು ತೂಗುವುವು
ನೂರು ತಾಯಿಯ ಕೊರಳ ಜೋಗುಳಗಳು !

ಇಂಥ ಶಾಂತಿಯ ಊರ ಮರೆಯಬಹುದೇ ನಾನು ?
ಮರೆಯಲೆತ್ನಿಸಿದರೂ ಮರೆಯಲಾರೆ.
ನೂರಾರು ನೆನಹುಗಳ ಚಿರಮಧುರ ನಿಧಿಯಾಗಿ
ನನ್ನಂತರಂಗದಲಿ ನೆಲೆಯಾಗಿದೆ.

ಹಕ್ಕಿಯಿಂಚರದಿಂದ ಹಾಡಕಲಿತೆನು ನಾನು,
ಅರೆವಿರಿದ ಹೂವಿನಲಿ ನಾಚಿಕೆಯನುಂಡೆ.
ನಮ್ಮೂರ ಸಿರಿಹಸಿರು ಉಸಿರನಿತ್ತುದು ನನಗೆ
ನನ್ನೆಲ್ಲ ಸಂಪದಕೆ ತಾಯಿ ನನ್ನೂರು.

ಹೂಗಂಪು ತುಂಬಿರುವ ನಮ್ಮೂರ ಕಾಡಿನಲಿ
ಬಣ್ಣ ಬಣ್ಣದ ಹೂವು ನಸುನಗುತಿರೆ
ನೂರಾರು ಭೃಂಗಗಳು ತಮ್ಮ ಸಂಗೀತದಲಿ
ಮಕರಂದವನ್ನುಂಡು ಸುಖಪಟ್ಟಿವೆ.

ಅಂತೆಯೇ ನಾನೊಂದು ಕಿರಿಯ ಮಧುಕರಿಯಾಗಿ
ನಮ್ಮೂರ ಚೆಲುವುಂಡು ಮೈತಳೆದಿರೆ,
ಬೇರೊಂದು ಸಂಪದವು ಕೈವಿಡಿದು ಕರೆಯುತ್ತ
ತನ್ನೂರಿನೆಡೆಗೆನ್ನ ಒಯ್ಯುತಿಹುದು.

ತನ್ನ ಕಂಪಿನ ಕುಣಿಕೆಯನ್ನೆಸೆದು ಹೂವೊಂದು
ಭ್ರಮರ ಗೀತವ ಬಳಿಗೆ ಸೆಳೆಯುವಂತೆ
ಸೆಳೆಯುತಿಹುದೆನ್ನೂರು; ಆದರೂ ನಡೆದಿರುವೆ
ತುಂಬಿಕೊಳ್ಳುತ ಎದೆಗೆ ಮಧುರ ಚಿಂತೆ.

ಹೋಗಿಬರುವೆನು ನಾನು, ಮರೆಯದಿರಿ ನಿಮ್ಮವಳ,
ನಿಮ್ಮ ಉಸಿರನು ಉಂಡು ಬೆಳೆದವಳನು.
ತಾಯಿಲ್ಲದಿದ್ದರೂ ನೀವೆನ್ನ ತಾಯೆಂದು
ಬರುವೆ, ಕಳುಹಿಸಿಕೊಡಿರಿ ಈ ಮಗಳನು.  *


* ೧೯೫೨ರಲ್ಲಿ ರಾಜಸೇವಾಸಕ್ತ ಬಿ.ಎಂ. ಶ್ರೀಕಂಠಯ್ಯನವರ ರಜತೋತ್ಸವ ಸುವರ್ಣ ಪದಕವನ್ನು ಪಡೆದ ಕವಿತೆ.