“ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು” ಎಂಬುದು ಸ್ವಾತಂತ್ರ್ಯ ಭಾರತವು ಅಳವಡಿಸಿಕೊಂಡಿರುವ ಸಂವಿಧಾನದ ಪರಮ ಧ್ಯೇಯವಾಗಿದೆ. ಇದರ ಅನ್ವಯ ೨೬ ಜನವರಿ ೧೯೫೦ರಂದು ಅಧಿಕೃತವಾಗಿ ಸಂವಿಧಾನವನ್ನು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಭಾರತದ ಪ್ರತಿಯೊಬ್ಬ ಪ್ರಜೆಗೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ಒದಗಿಸುವುದಕ್ಕೆ ಪ್ರಯತ್ನಿಸಲಾಗಿದೆ. ಈ ನಿಟ್ಟಿನಲ್ಲಿ ಭಾರತದ ಇಂದಿನ ಪರಿಸ್ಥಿತಿಯನ್ನು ಅವಲೋಕಿಸಿದಾಗ ಸಂವಿಧಾನವನ್ನು ಅದರ ಧ್ಯೇಯೋದ್ದೇಶಗಳಿಗೆ ಅನುಗುಣವಾಗಿ ಪೂರ್ಣ ಪ್ರಮಾಣದಲ್ಲಿ ಅನುಷ್ಥಾನಗೊಳಿಸಲು ಸಾಧ್ಯವಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ಬಹುದೊಡ್ಡ ರಾಷ್ಟ್ರ ಎಂಬ ಹೆಗ್ಗಳಿಕೆಯನ್ನೇನೋ ಹೊಂದಿದೆ. “ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ” ಎಂಬ ತತ್ವವನ್ನು ಆಧರಿಸಿ ಸರ್ಕಾರವು ಕಾರ್ಯ ನಿರ್ವಹಿಸುತ್ತಿದೆ. ಆದರೆ ವಾಸ್ತವದಲ್ಲಿ “ಉಳ್ಳವರಿಂದ ಉಳ್ಳವರಿಗಾಗಿ, ಉಳ್ಳವರಿಗೋಸ್ಕರ” ಎಂಬ ಅನುಮಾನ ಬರುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿ ಗುಲಾಮರಂತಿದ್ದ ಭಾರತೀಯರಿಗೆ ಏಕ ರೀತಿಯ ಆಡಳಿತ ವ್ಯವಸ್ಥೆ ಎಂಬುದಿರಲಿಲ್ಲ. ಆದರೆ ಸ್ವಾತಂತ್ರ್ಯದ ಆನಂತರ ಒಂದು ತತ್ವವನ್ನು ನಂಬಿದ ದೇಶ ಆರವತ್ತು ವರ್ಷಗಳಾದರು ಎಲ್ಲಾ ಪ್ರಜೆಗಳಿಗೂ ಸಾಮಾಜಿಕ, ಅರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ನೀಡಲು ಸಾಧ್ಯವಾಗಿಲ್ಲ ಎಂಬುದು ಭಾರತದ ಪ್ರಸ್ತುತ ಸ್ಥಿತಿಯನ್ನು ಅವಲೋಕಿಸಿದಾಗ ಮನವರಿಕೆಯಾಗುತ್ತದೆ.

ಹತ್ತು-ಹಲವಾರು ಧರ್ಮಗಳು, ನೂರಾರು ಜಾತಿಗಳು ಹಾಗೂ ಸಾವಿರಾರು ಉಪ ಜಾತಿಗಳನ್ನು ಹೊಂದಿರುವ ಭಾರತ ವಿಶ್ವದಲ್ಲೇ ಒಂದು ವಿಶಿಷ್ಟ ರಾಷ್ಟ್ರವಾಗಿದೆ. ಸಾವಿರಾರು ವರುಷಗಳಿಂದ ವರ್ಣ ಧರ್ಮವನ್ನು ನಂಬಿದ್ದ ಭಾರತಕ್ಕೆ ಯುರೋಪಿಯನ್‌ ಮತ್ತು ಪಾಶ್ಚಿಮಾತ್ಯ  ರಾಷ್ಟ್ರಗಳ ಆಳ್ವಿಕೆಯ ಪ್ರಭಾವಕ್ಕೆ ಒಳಗಾಗಬೇಕಾಯಿತು. ಆದರೆ ಹಿಂದೆ ಇದ್ದ ಜಾತಿ ಆಧಾರಿತ ಶ್ರೇಣೀಕರಣ ಇಂದಿಗೂ ಮುಂದುವರೆದಿದೆ. ಕಲ್ಪಿತ ಕತೆಗಳನ್ನು ಕಟ್ಟಿ ಅವುಗಳನ್ನು ಸತ್ಯವೆಂದು ನಂಬಿಸಿದ ಒಂದು ಬುದ್ಧಿವಂತ ಸಮುದಾಯದ ಜನರು ಇಡೀ   ರಾಷ್ಟ್ರವನ್ನೇ ಆವೈಜ್ಞಾನಿಕ ಕೂಪಕ್ಕೆ ತಳ್ಳಿದ್ದಾರೆ. “ಉಪಗ್ರಹಗಳ ಯುಗ”. “ಕಂಪ್ಯೂಟರ್ ಯುಗ” ಎಂದೆಲ್ಲಾ ಹೇಳಿಕೆಗಳು ಕೇಳಿಬರುತಿದ್ದು. “ಜಗತ್ತೇ ಒಂದು ಕುಟುಂಬ ” ಆನಿಸಿಕೊಳ್ಳತ್ತಿದೆ. ಆದರೆ ಭಾರತದಲ್ಲಿ ಮಾತ್ರ ವರ್ಷದಿಂದ ವರ್ಷಕ್ಕೆ ಜಾತಿಗಳು ಚಿದ್ರಗೊಂಡು ಉಪಜಾತಿಗಳು ಹುಟ್ಟಿಕೊಳ್ಳುತ್ತಲೇ ಇವೆ. ಮನುಷ್ಯ ಮನುಷ್ಯರು ಮುಂದೆಂದೂ ಒಂದಾಗದ ಸ್ಥಿತಿಯತ್ತ ಸಾಗುತ್ತಿದ್ದಾರೆ ಎಂಬ ಅನುಮಾನ ಬರುವಂತಾಗಿದೆ. ಧರ್ಮ, ಜಾತಿ ಮತ್ತು ಉಪಜಾತಿಗಳು ಅಡ್ಡಬಂದು ಯಾರಲ್ಲೂ ಸಹಜ ಮಾನವ ಪ್ರೀತಿ ಕಾಣುವುದೇ ಒಂದು ವಿಸ್ಮಯವಾಗಿದೆ. ಪ್ರತಿ ಕ್ಷಣ, ಪ್ರತಿ ದಿನ, ಪ್ರತಿಯೊಂದು ಪ್ರತಿಯೊಬ್ಬರನ್ನು ಧರ್ಮ ಮತ್ತು ಜಾತಿ ಆಧರಿಸಿ ಗುರುತಿಸುವುದು ಸಾಮಾನ್ಯ ಸಂಗತಿಯಾಗಿದೆ. ಇಷ್ಟಾಗಿಯೂ ಭಾರತ ಒಂದು ಜಾತ್ಯಾತೀತ ರಾಷ್ಟ್ರ.

ಆದಿಮಾನವ ಆಹಾರ ಸಂಹ್ರಹಣೆಗಾಗಿ ಪ್ರತಿನಿತ್ಯ ಹತ್ತಾರು ಮೈಲಿಗಳಷ್ಟು ದೂರ ಅಲೆದಾಡುವುದು ಅಂದು ಅನಿವಾರ್ಯವಾಗಿತ್ತು ಆದರೆ ಪರಿಸ್ಥಿತಿ ಇಂದಿಗೂ ದೇಶದಾದ್ಯಂತ ನೂರಾರು ಸಮುದಾಯಗಳ ಪಾಲಿಗೆ ಜೀವಂತವಾಗಿದೆ ಎಂದರೆ ಆಶ್ಚರ್ಯದ ಸಂಗತಿಯಲ್ಲ. ಕಾಡಿನಲ್ಲಿ ಬದುಕು ಕಂಡು ಕೊಂಡಿರುವ ಜನ ಸಮುದಾಯಗಳು ಪ್ರಕೃತಿಯಲ್ಲಿ ಲಭ್ಯವಿರು ಆಹಾರದ ಆನ್ವೇಷಣೆ ಮಾಡುವರು. ಜೊತೆಗೆ ಗ್ರಾಮ ಮತ್ತು ನಗರಗಳ ಸಂಪರ್ಕದೊಂದಿಗೆ ತಮ್ಮ ಬೇಕು ಬೇಡಗಳನ್ನು ತಕ್ಕಮಟ್ಟಿಗೆ ಪೂರೈಸಿಕೊಂಡು ಕೊಡುಕೊಳ್ಳುಗೆಯ ವ್ಯವಹಾರದಲ್ಲಿ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಾಯೋಜಿಕರಾಗಿ ಬದುಕನ್ನು ಸಾಗಿಸುತಿದ್ದಾರೆ. ಇನ್ನು ಕೆಲವು ಸಮುದಾಯಗಳು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಆಶ್ರಯ ಪಡೆದಿದ್ದು ಖಾಯಂ ನೆಲೆಯಿಲ್ಲದೆ ಬದುಕುತ್ತಿರುವುದುಂಟು. ಕಾರಣ ಯಾವುದೋ ಕಾಲದಲ್ಲಿ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ತಮ್ಮ ಮೂಲ ನೆಲೆಯನ್ನು ಬಿಟ್ಟು ಬರಬೇಕಾದ ಅನಿವಾರ್ಯತೆ ಒದಗಿ ಬಂದಿದೆ. ಹೊಸ ನೆಲದಲ್ಲಿ ಬಂದವರೇ ಅವರ  ಮೂಲ ಕಸುಬುಗಳನ್ನು ಅಥವಾ ಪೂರಕವಾದ ಇತರೆ ಕಸುಬುಗಳನ್ನು ಮಾಡುತ್ತಾ ಸಂಪಾದನೆಯ ಒಂದಿಷ್ಟು ಹಣದೊಂದಿಗೆ ಜೀವನ ಸಾಗಿಸಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ಒಂದೆ ಕಡೆ ಖಾಯಂ ನೆಲೆಗೊಳ್ಳದೆ ಊರಿಂದೂರಿಗೆ ಪ್ರಯಾಣ ಬೆಳೆಸುತ್ತಾ ಸಂಚಾರಿ ಅಥವಾ ಅಲೆಮಾರಿ ಬದುಕಿಗೆ ತಮ್ಮನ್ನು ಒಗ್ಗಿಸಿಕೊಂಡಿದ್ದಾರೆ.

ಆಕಸ್ಮಿಕವೊ, ಅನಿವಾರ್ಯವೋ ಯಾವುದೋ ಒಂದು ಕಾಲಘಟ್ಟದಲ್ಲಿ ಆಡಳಿತ ವರ್ಗದವರ ಗಮನಕ್ಕೆ ಬಂದ ಪರಿಣಾಮ ಹತ್ತು ಹಲವಾರು ಆರೆ ಹಾಗೂ ಅಲೆಮಾರಿ ಸಮುದಾಯದ ಜನರಿಗೆ ಖಾಯಂ ನೆಲೆ ನಿಲ್ಲಲು ಸಾಧ್ಯವಾಗದ ಸಂದರ್ಭಗಳಲ್ಲಿ ಆರೆ ಅಲೆಮಾರಿ ಬದುಕಿಗೆ ಮೊರೆ ಹೋಗಿದ್ದಾರೆ. ಇನ್ನು ಕೆಲವರು ಪೂರ್ಣ ಅಲೆಮಾರಿಗಳಾಗಿಯೇ ರಾಜ್ಯದಾದ್ಯಂತ ಕಂಡುಬರುತ್ತಾರೆ. ಕಾಲಕಾಲಕ್ಕೆ ನಡೆಯುವ ಜನಸಂಖ್ಯಾ ಗಣತಿಯಲ್ಲಿ ದಾಖಾಲಾದರೂ ಒಂದೊಂದು ಪ್ರದೇಶದಲಿ ಸ್ಥಳೀಯವಾಗಿ ಒಂದೊಂದು ಹೆಸರಿನಿಂದ ಕರೆಸಿಕೊಂಡಿದ್ದಾರೆ. ಈ ಕಾರಣದಿಂದ ಒಂದೇ ಅಲೆಮಾರಿ ಅಥವಾ ಅರೆ ಅಲೆಮಾರಿ ಸಮುದಾಯವು ಹಲವಾರು ಹೆಸರುಗಳನ್ನು ಹೊಂದಿ ಗೊಂದಲ ಸೃಷ್ಟಿ ಮಾಡಿ ಆಡಳಿತದ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅಥವಾ ಸಮುದಾಯದ ಜನರು ಯಾರು ಎಂದು ನಿರ್ದಿಷ್ಟವಾಗಿ ತಿಳಿದುಕೊಳ್ಳವುದು ಕಷ್ಟಕರವಾಗಿದೆ. ಕೆಲವೊಮ್ಮೆ ಅವುಗಳು ಬೇರೆ ಬೇರೆ ಸಮುದಾಯಗಳೆಂದು ಪರಿಗಣಿಸಿ ಪ್ರತ್ಯೇಕ ಜನವರ್ಗದಲ್ಲಿ ಸೇರಿಸಿರುವುದೂ ಉಂಟು. ಇದರಿಂದ ಒಂದೇ ಜನಸಮುದಾಯ ಹಲವಾರು ವಿಭಿನ್ನ ಹೆಸರುಗಳಲ್ಲಿ ಹಂಚಿಹೋಗಿ ಅಸಂಘಟಿತರಾಗಿಯೇ ಉಳಿಯಲು ಕಾರಣವಾಗಿದೆ.

ಆದರೆ ಒಂದು ಕ್ರಮಬದ್ಧ ಅಧ್ಯಯನದೊಂದಿಗೆ ಹೀಗೆ ಹಂಚಿ ಹೋಗಿರುವ  ಅರೆ-ಅಲೆಮಾರಿ  ಸಮುದಾಯಗಳನ್ನು ಗುರ್ತಿಸುವುದರ ಮೂಲಕ ಸಂಘಟಿತರನ್ನಾಗಿ ಮಾಡುವುದರ ಜೊತೆಗೆ ಅವರಿಗೊಂದು ಖಾಯಂ ನೆಲೆಯನ್ನು ಒದಿಗಿಸುವುದು ಸಾಧ್ಯವಿದೆ. ಈ ನಿಟ್ಟಿನಲ್ಲಿ ಗುಣಾತ್ಮಕವಾಗಿ ಸ್ಪಂದಿಸಿ ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯಗಳಿಗೆ ಸಾಮಾಜಿಕ, ಅರ್ಥಿಕ ಹಾಗೂ ರಾಜಕೀಯ ನ್ಯಾಯ ನೀಡಲು ಹಿಂದುಳಿದ ವರ್ಗಗಳ ಕಲ್ಯಾಣ ನಿರ್ದೇಶನಾಲಯವು ಮಾಡುತ್ತಿರುವ ಪ್ರಯತ್ನ ಶ್ಲಾಘನೀಯವಾದುದು. ಆ ಪ್ರಯುಕ್ತ ಅವರು ಆಯೋಜಿಸಿರುವ  ಅಲೆಮಾರಿ ಅರೆ-ಅಲೆಮಾರಿ ಸಮುದಾಯಗಳ ಅಮೀಕ್ಷೆ ಎಂಬ ಯೋಜನೆಯ ಅಡಿಯಲ್ಲಿ ‘ಬುಂಡೇಬೆಸ್ತರು’ ಸಮುದಾಯವನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ.

ಅಧ್ಯಯನದ ಗುರಿ

ಪೀಠಿಕೆ ಭಾಗದಲ್ಲಿ ಪ್ರಸ್ತಾಪಿಸಿದಂತೆ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂದು ಸಂವಿಧಾನದ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿರುವ ತತ್ವವನ್ನು ಪರಿಪಾಲನೆ ಮಾಡುವ ದೆಸೆಯಲ್ಲಿ ಕೇಂದ್ರದಲ್ಲಿ ಆಡಳಿತ ನಡೆಸುವ ಯಾವುದೇ ಸರ್ಕಾರಗಳು ಕಾರ್ಯೋನ್ಮುಖವಾಗುವುದು ಅನಿವಾರ್ಯ. ಆದರೆ ಆ ನಿಟ್ಟಿನಲ್ಲಿ ಪ್ರಯತ್ನವಷ್ಟೇ ಆಗಿದೇ ಹೊರತು ಅದನ್ನು ಸಂಪೂರ್ಣ ಸಾಕಾರಗೊಳಿಸುವುದು ಸಾಧ್ಯವಾಗಿಲ್ಲ. ಆ ಕಾರಣದಿಂದಲೇ ರಾಷ್ಟ್ರದಲ್ಲಿ ಹಲವಾರು ಕೋಟಿ ಜನರಿಗೆ ಖಾಯಂ ನೆಲೆಯಿಲ್ಲ. ಅಲೆಮಾರಿ ಹಾಗೂ ಅರೆ-ಅಲೆಮಾರಿಗಳಾಗಿ ಜೀವನ ಸಾಗಿಸಿತ್ತಿದ್ದಾರೆ. ಕಳೆದ ಹತ್ತು ಪಂಚವಾರ್ಷಿಕ ಯೋಜನೆಗಳ ಅವಧಿಯಲ್ಲಿ ಆಧ್ಯತೆಯ ಮೇರೆಗೆ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡಿದೆ. ಆದರೆ ಅಲೆಮಾರಿಗಳಾದ್ದರಿಂದ ಜನಗಣತಿಗೆ ಸಿಗದ ಕಾರಣ ಅವರನ್ನು ನಿರ್ದಿಷ್ಟವಾಗಿ ಗುರುತಿಸಲು ಸಾಧ್ಯವಾಗುತ್ತಿಲ್ಲ. ಅಷ್ಟೇ ಅಲ್ಲ ಯಾವ ಸಮುದಾಯಕ್ಕೆ ಸೇರಿದವರು ಎಂದು ನಿರ್ಧರಿಸಲಾಗದೆ ಅಭಿವೃದ್ಧಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸಲಾಗುತ್ತಿಲ್ಲ. ಕೆಲವೊಮ್ಮೆ ಅಪೂರ್ಣ ಮಾಹಿತಿಯಿಂದ ಸಮುದಾಯಗಳು ಯಾವ ಗುಂಪಿಗೆ ಸೇರುತ್ತವೆ ಎಂಬುದು ತಪ್ಪಾಗಿ ದಾಖಲಾಗುವ ಸಾಧ್ಯತೆ ಇದೆ. ಪ್ರಸ್ತುತ ಕರ್ನಾಟಕದಲ್ಲಿ ಸುಮಾರು ೨೮ ಸಮುದಾಯಗಳು ಬುಡಕಟ್ಟು ಚಹರೆಯನ್ನು ಹೊಂದಿದ್ದರು ತಪ್ಪಾಗಿ ಪರಿಶಿಷ್ಟಜಾತಿ ಅಥವಾ ಹಿಂದುಳಿದ ವರ್ಗಗಳಾಗಿ ಪರಿಗಣಿಸಲಾಗಿದೆ.

ಬೇರೆ ಬೇರೆ ಕಾರಣಗಳಿಗಾಗಿ ಆದಿಯಿಂದಲೂ ಮಾನವ ವಲಸೆ ಹೋಗುವುದನ್ನು ಸಂಪೂರ್ಣ ನಿಲ್ಲಿಸಲು ಸಾಧ್ಯವಾಗಿಲ್ಲ. ದೇಶದ ಒಳಗೆ ಹಾಗೂ ಬೇರೆ ಬೇರೆ ರಾಜ್ಯಗಳಿಗೆ ವಲಸೆ ಹೋಗುವುದು. ರಾಜ ಮಹಾರಾಜರ ಕಾಲದಿಂದ ಪರಕೀಯರ ಆಳ್ವಿಕೆ ಮುಗಿದು ಭಾರತ ಸ್ವಾತಂತ್ರ್ಯವಾಗಿ ಅರವತ್ಮೂರು ವರ್ಷಗಳು ಕಳೆಯುತ್ತಾ ಇದ್ದರು, ಒಂದಲ್ಲ ಒಂದು ಕಾರಣಕ್ಕಾಗಿ ವಲಸೆ ಮುಂದುವರಿಯುತ್ತಲೇ ಇದೆ. ಆದರೆ ಸಮಸ್ಯೆಯ ಸೃಷ್ಟಿಯಾಗಿರುವುದು ಪ್ರಸ್ತುತ ಸಂದರ್ಭದ ವಲಸೆಯಿಂದಲ್ಲ.  ಸ್ವಾತಂತ್ರ್ಯ ಪೂರ್ವದಲ್ಲಿ ಮತಾಂತರದ ಹೆದರಿಕೆಯಿಂದಲೋ, ಅಪರಾಧಿಗಳಾಗಿ ರಾಜ್ಯದಿಂದ ಬಹಿಷ್ಕಾರಕ್ಕೆ ಹಾಕಿದ್ದರಿಂದಲೋ, ಕ್ಷಾಮ ತಲೆದೋರಿದ ಪರಿಣಾಮದಿಂದಲೋ ಮಾರಕ ರೋಗರುಜಿನಗಳಿಂದ ಪಾರಾಗುವ ಉದ್ದೇಶದಿಂದಲೋ ಅನ್ಯ ರಾಜ್ಯಗಳಿಗೆ ವಲಸೆ ಹೋದ ಸಮುದಾಯಗಳು ಒಂದು ವೃತ್ತಿಯನ್ನು ಅವಲಂಬಿಸಿ ಬದುಕನ್ನು ನಿರ್ವಹಿಸುತ್ತಿದ್ದಾರೆ. ಅಪರಾಧಿ ಇಲ್ಲವೇ ಬಹಿಷ್ಕಾರಕ್ಕೆ ಒಳಗಾಗಿ ಬಂದ ಸಮುದಾಯಗಳು ತಮ್ಮ ಮೂಲದ ಬಗೆಗಿನ ವಿಚಾರಗಳನ್ನು ರಹಸ್ಯವಾಗಿಟ್ಟು ಅಲೆಯುತ್ತಾ ಊರಿಂದ ಊರಿಗೆ ರಾತ್ರಿಯಾದಾಗ ವಾಸ್ತವ್ಯಮಾಡಿಕೊಂಡು ಬದುಕುತ್ತಿದ್ದುದು ಹಿಂದೆ ಸಾಮಾನ್ಯವಾಗಿತ್ತು. ಇವರಲ್ಲೇ ಒಂದೇ ಮೂಲದ ಸಮುದಾಯಗಳು ಹತ್ತು ಹಲವಾರು ಹೆಸರಿನಿಂದ ಗುರ್ತಿಸಿಕೊಂಡುರುವುದೂ ಉಂಟು.

ಈ ರೀತಿ ವಿಭಿನ್ನ ಹೆಸರಿಂದ ಕರೆಯಲ್ಪದುವ ಒಂದೇ ಮೂಲದ ಸಮುದಾಯಗಳು ಬೇರೆ ಬೇರೆ ಪ್ರವರ್ಗದಲ್ಲಿ ಗುರುತಿಸಲ್ಪಡುತ್ತಿರುವ ವಿಪರ್ಯಾಸವು ಇದೆ. ಇದರಿಂದ ಸಂವಿಧಾನಬದ್ಧ ಸೌಲಭ್ಯಗಳಿಂದ ಚಂಚಿತರಾಗಿ ಅಭಿವೃದ್ಧಿಯನ್ನು ಹೊಂದದೆ ಹಿಂದುಳಿಯುವಂತಾಗಿದೆ. ಇದರಲ್ಲಿ ಸಮೀಕ್ಷೆ ಮಾಡುವವರ ತಪ್ಪಿನ ಜೊತೆಗೆ ಆ ಸಮುದಾಯದ ಅಜ್ಞಾನವು ಕಾರಣವಾಗಿದೆ. ಇಂದು ಪ್ರತಿಯೊಂದು ಸಮುದಾಯಗಳು ತಾವು ಯಾವ ಗುಂಪು ಅಥವಾ ಪ್ರವರ್ಗಕ್ಕೆ ಸೇರಿಸಬೇಕೆಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಮನವಿ ಮೂಲಕ ಒತ್ತಾಯ ಮಾಡುತ್ತಿರುವುದು ಸಾಮಾನ್ಯವಾಗಿದೆ. ತಾವು ನಂಬಿಕೊಂಡಿರುವ ಕಸುಬನ್ನು ಮಾಡುವುದರಲ್ಲಿ ಮುಳಗಿ ಹೋಗಿರುವ ಸಮುದಾಯಗಳು  ಬಹಳಷ್ಟಿವೆ. ಅದರಲ್ಲಿ ಬುಂಡೆಬೆಸ್ತರು ಸಮುದಾಯವೂ ಒಂದು.

ಇಂಥವರ ಪಾಲಿಗೆ ಬದುಕೆಂದರೆ ದುಡಿಯುವುದು ಅದಕ್ಕೆ ಪ್ರತಿಯಾಗಿ ದೊರೆತ ಹಣದಿಂದ ಅಂದಿನ ಊಟಕ್ಕೆ ವ್ಯವಸ್ಥೆ ಮಾಡಿಕೊಳ್ಳುವುದು, ರಾತ್ರಿಯಾದರೆ  ತಮ್ಮದೇ ಟೆಂಟ್‌ ಅಥವಾ ಸಾರ್ವಜನಿಕ ಸ್ಥಳದಲ್ಲಿ ವಿಶ್ರಾಂತಿ ಪಡೆಯುವುದು. ಇವರಿಗೆ ರಾಜ್ಯಸರ್ಕಾರ, ಕೇಂದ್ರ ಸರ್ಕಾರಗಳು ಅನುಷ್ಠಾನಗೊಳಿಸುವ ಅಭಿವೃದ್ಧಿ ಯೋಜನೆಗಳು ಅದರಲ್ಲಿ ತಮಗೆ ಕೊಡ ಮಾಡಲು ಲಭ್ಯವಿರುವ ಸವಲತ್ತುಗಳ ಬಗೆಗೆ ಕಲ್ಪನೆಯು ಇಲ್ಲ. ಸಮುದಾಯಗಳು  ಇಂತಹ ಅಜ್ಞಾನ ಅಥವಾ ನಿರ್ಲಕ್ಷ್ಯದಿಂದ ದೇಶದ ಪ್ರಗತಿಯು ನಿರೀಕ್ಷೆಯಂತೆ ಗುರಿಯನ್ನು ಮುಟ್ಟಲು ಸಾಧ್ಯವಾಗುತ್ತಿಲ್ಲ. ಆ ಕಾರಣದಿಂದಲೇ ಬುಡಕಟ್ಟು ಹಾಗೂ ಹಿಂದುಳಿದ ವರ್ಗಗಳ ಜನರ ಕಲ್ಯಾಣವನ್ನು ಗುರಿಯಾಗಿರಿಸಿಕೊಂಡು ರಾಜ್ಯಮಟ್ಟದಲ್ಲಿ ನಿರ್ದೇಶನಾಲಯಗಳನ್ನು ತೆರೆಯಾಲಾಗಿದೆ.

ಪ್ರಸ್ತುತ ಅಧ್ಯಯನವು ನೆಲೆಯಿಲದ, ನೆಲೆ ಇದ್ದು ಇಲ್ಲದಂತಿರುವ ಅರೆ – ಅಲೆಮಾರಿ ಸಮುದಾಯಗಳಲ್ಲಿ ಒಂದಾದ ಬುಂಡೇಬೆಸ್ತರನ್ನು ಕುರಿತು ಕ್ಷೇತ್ರಕಾರ್ಯ ಮಾಡುವ ಮೂಲಕ ವಾಸ್ತವಾಂಶವನ್ನು ತಿಳಿದುಕೊಳ್ಳಲು ಸಾಧ್ಯವಿದೆ. ಇದರಿಂದ ಆ  ಸಮುದಾಯದಲ್ಲಿನ ಬುಡಕಟ್ಟಿನ ಚಹರೆಯನ್ನು ಗುರುತಿಸಲಾಗುವುದು. ಬುಡಕಟ್ಟು ಚಹರೆಯನ್ನು ಹೊಂದಿದ್ದ ಪಕ್ಷದಲ್ಲಿ ಅವರನ್ನು  ಆ ಪ್ರವರ್ಗದಲ್ಲಿ ಸೇರ್ಪಡೆ ಮಾಡಲು ಕೇಂದ್ರ ಸರ್ಕಾರಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ನಿರ್ದೇಶನಾಲಯವು ವರದಿಯೊಂದನ್ನು ಸಿದ್ಧಪಡಿಸಿ ಶಿಫಾರಸ್ಸು ಮಾಡುವುದು. ಈ ಮಹತ್ವದ ಉದ್ದೇಶವನ್ನು ಗಮನದಲ್ಲಿಕೊಟ್ಟುಕೊಂಡು ನಿರ್ದೇಶನಾಲಯವು ಕನ್ನಡ ವಿಶ್ವವಿದ್ಯಾಲಯ, ಹಂಪಿ ಬುಡಕಟ್ಟು ಅಧ್ಯಯನ ವಿಭಾಗಕ್ಕೆ ಪ್ರಶಸ್ತ ಸಾಲಿನಲ್ಲಿ ಐದು ಸಮುದಾಯಗಳನ್ನು ಸಮೀಕ್ಷೆಗೆ ಒಳಪಡಿಸಲು ಆಯೋಜಿಸಿದ್ದಾರೆ. ಅದರಲ್ಲಿ ಬುಂಡೇಬೆಸ್ತರು ಸಮುದಾಯವು ಒಂದಾಗಿದೆ. ನಿರ್ದೇಶನಾಲಯವು ವಹಿಸಿದ್ದ ಯೋಜನೆಯನ್ನು ಸಮರ್ಥ ಹಾಗೂ ಸಮಗ್ರವಾಗಿ ಮಾಡುವ ಪ್ರಯತ್ನ ಮಾಡಲಾಗಿದೆ.

ಈ ಸಮೀಕ್ಷೆ ಹಾಗೂ ಅಧ್ಯಯನವು ಉದ್ದೇಶಿತ ಸಮುದಾಯವನ್ನು  ಸೂಕ್ತ ಪ್ರವರ್ಗದಲ್ಲಿ ಗುರುತಿಸಿ ಸಂವಿಧಾನಬದ್ಧವಾಗಿ – ಅವರಿಗೆ ಸಾಮಾಜಿಕ ನ್ಯಾಯ ದೊರೆಯುತ್ತದೆ ಎಂಬ ಉದ್ದೇಶವನ್ನು ಹೊಂದಿದೆ.

ಭೌಗೋಳಿಕ ನೆಲೆ ಮತ್ತು ವ್ಯಾಪ್ತಿ

ಈಗಾಗಲೇ ಪ್ರಸ್ತಾಪಗೊಂಡಿರುವಂತೆ ಬುಂಡೇಬೆಸ್ತರ ಮೂಲ ನೆಲೆ ಮಹಾರಾಷ್ಟ್ರ. ಮೀನು ಹಿಡಿದು ಅದನ್ನು ಮಾರಿ ಬಂದ ಹಣದಿಂದ ಜೀವನ ನಿರ್ವಹಣೆ ಮಾಡುವ ಇವರು ಸಹಜವಾಗಿ  ನೀರಿನ ನೆಲೆಗಳನ್ನು ಆಶ್ರಯಿಸಿದ್ದಾರೆ. ಆ ಕಾರಣದಿಂದಲೇ ಬುಂಡೇಬೆಸ್ತರು ಕರ್ನಾಟಕದಾದ್ಯಂತ ಚದುರಿ ಹೋಗಿದ್ದಾರೆ. ನದಿ, ಹೊಳೆ ಕೆರೆಗಳ ಸಮೀಪದಲ್ಲಿಯೇ ಇವರ ವಾಸ. ಪ್ರತಿದಿನವೂ ಒಂದೇ ಸ್ಥಳದಲ್ಲಿ ಸಾಕಷ್ಟು ಮೀನು ಲಭ್ಯವಾಗುವುದಿಲ್ಲ. ಆದ್ದರಿಂದ ನದಿ, ಕೆರೆ ಅಥವಾ ಯಾವುದೇ ನೀರಿನ ನೆಲೆಗಳನ್ನು ತಾವೇ ಸೀಮಿತ ಪಡಿಸಿಕೊಂಡು ಆಯಾ ವ್ಯಾಪ್ತಿಯಲ್ಲಿ ಮೀನು ಹಿಡಿದು ಮಾರಾಟಮಾಡಿ ಬದುಕುವರು.

ಮೀನು ಸಾಕುವುದು ಮತ್ತು ಹಿಡಿಯುವುದು ಒಂದು ಉದ್ದಿಮೆಯಾಗುವುದಕ್ಕಿಂತ ಮೊದಲು ಬುಂಡೇಬೆಸ್ತರು ಸರ್ವಸ್ವತಂತ್ರರು ಕರ್ನಾಟಕದ ಪ್ರಮುಖ ನದಿಗಳಾದ ಕಾವೇರಿ, ಕಪಿಲಾ, ಶಿಂಷಾ, ತುಂಗಭದ್ರಾ, ಕೃಷ್ಣ, ಶರಾವತಿ, ನೇತ್ರಾವತಿ ದಂಡೆಯಲ್ಲಿ ಹೆಚ್ಚಾಗಿ ನೆಲೆಸಿದ್ದರು. ಇದಲ್ಲದೆ ಅಯಾ ತಾಲ್ಲೂಕು ಮತ್ತು ಜಿಲ್ಲೆಯಲ್ಲಿ ಕಂಡುಬರುವ ದೊಡ್ಡ ಕೆರೆಗಳು ಸಹಾ ಇವರಿಗೆ ವಾಸದ ನೆಲೆಗಳಾಗಿದ್ದವು. ಆನಂತರದಲ್ಲಿ ಬದಲಾದ ವ್ಯವಸ್ಥೆಗೆ ಅನುಗುಣವಾಗಿ ಕೆರೆ, ನದಿ, ಹೊಳೆಯಲ್ಲಿ ಮೀನು ಹಿಡಿಯಲು ಪರವಾನಗಿ ಪಡೆದ ಗುತ್ತಿಗೆದಾರರ ಬಳಿ ಕೂಲಿಕಾರರಾಗಿ ಕೆಲಸ ನಿರ್ವಹಿಸಬೇಕಾಗಿ ಬಂತು. ಕೆಲವರು ಮಾತ್ರ ನದಿ – ಹೊಳೆಯಲ್ಲಿ ಸಣ್ಣ ಪ್ರಮಾಣದ ಗುತ್ತಿಗೆ ಪಡೆದು ಮೀನು ಹಿಡಿದು ಮಾರುವುದು ಕಂಡುಬರಿತ್ತಿದೆ.

ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡ ಸ್ಥಳಗಳು

ಜಿಲ್ಲೆ :ಚಿತ್ರದುರ್ಗ
            ತಾಲೂಕು :         ಚಳ್ಳಕೆರೆ
ಗ್ರಾಮ –             ಥಳಕು
ಜಿಲ್ಲೆ :ದಾವಣಗೆರೆ
            ತಾಲೂಕು :         ಜಗಳೂರು
ಗ್ರಾಮ –             ಬಿಳ್ಚೋಡು
ತಾಲ್ಲೂಕು :       ಚೆನ್ನಗಿರಿ
ಗ್ರಾಮ –             ಹೊಸಹಳ್ಳಿ, ಬಸವರಾಜಪುರ
ತಾಲೂಕು :         ಹೊನ್ನಾಳಿ
ಗ್ರಾಮ –             ಸವಳಂಗಿ
ಜಿಲ್ಲೆ :          ಬಿಜಾಪುರ
            ತಾಲೂಕು :         ಹಿಂಡಿ
ಗ್ರಾಮ –             ಅಗರೆಖೇಡ್
ಜಿಲ್ಲೆ :          ಶಿವಮೊಗ್ಗ
            ತಾಲೂಕು :         ಶಿವಮೊಗ್ಗ
ಗ್ರಾಮ –             ಗೊಂಡಿಚಟ್ನಳ್ಳಿ
ತಾಲೂಕು :         ತೀರ್ಥಹಳ್ಳಿ
ಗ್ರಾಮ –             ನೆಲ್ಲಿಸರ ಕಣದಕೊಪ್ಪಳ
ಜಿಲ್ಲೆ :          ಮೈಸೂರು
            ತಾಲೂಕು :         ಹುಣಸೂರು
ಗ್ರಾಮ –             ಬುಂಡೇಬೆಸ್ತರ ಕಾಲೋನಿ
ತಾಲೂಕು :         ಹೆಗ್ಗಡದೇವನಕೋಟೆ
ಗ್ರಾಮ –             ಮಹಾದೇವಪುರ
ತಾಲೂಕು :         ಕೃಷ್ಣ ರಾಜ ನಗರ
ಗ್ರಾಮ –             ಚುಂಚನಕಟ್ಟಿ
ಜಿಲ್ಲೆ :          ಹಾಸನ
            ತಾಲೂಕು :         ಹೊಳೆನರಸೀಪುರ
ಗ್ರಾಮ –             ಹೊಳೆನರಸೀಪುರ
ಜಿಲ್ಲೆ :          ಮಂಡ್ಯ
            ತಾಲೂಕು :         ಕೃಷ್ಣರಾಜಪೇಟೆ
ಗ್ರಾಮ –             ಹೇಮಗಿರಿ
ತಾಲೂಕು :         ಶ್ರೀರಂಗಪಟ್ಟಣ
ಗ್ರಾಮ –             ಶ್ರೀರಂಗಪಟ್ಟಣ, ರೈಲ್ವೆ ನಿಲ್ದಾಣ, ಸಂತೇಮಾಳ
ತಾಲೂಕು :         ಪಾಂಡವಪುರ
ಗ್ರಾಮ –             ನಾರ್ಥ್ ಬ್ಯಾಂಕ್‌
ಜಿಲ್ಲೆ :          ಕೊಪ್ಪಳ
            ತಾಲೂಕು :         ಗಂಗಾವತಿ
ಗ್ರಾಮ –              ಯಲ್ಲಾಪುರ, ಅನೆಗೊಂದಿ

ಅಧ್ಯಯನದ ವಿಧಾನ

ವಿಜ್ಞಾನದ ಸಂಶೋಧನೆಯು ಪ್ರಯೋಗಾಲಯವನ್ನು ಬಯಸಿದರೆ ಸಮಾಜ ವಿಜ್ಞಾನಗಳ ಸಂಶೋಧನೆಗೆ ಸಮಾಜ ಮತ್ತು ಸಮುದಾಯವೇ ಪ್ರಯೋಗಾಲಯ. ಕೆಳಗೆ ದಾಖಲಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಬುಂಡೇಬೆಸ್ತರ ಅಧ್ಯಯನ ಕೈಗೊಂಡು ವರದಿಯ ನಿಖರತೆ ಮತ್ತು ವಾಸ್ತವ ಫಲಿತವನ್ನು ಕಂಡುಕೊಳ್ಳಲಾಗಿದೆ.

೧. ಸಂದರ್ಶನ ವಿಧಾನ
೨. ಪ್ರಶ್ನಾವಳಿ ವಿಧಾನ
೩. ತೌಲನಿಕ ವಿಶ್ಲೇಷಣೆ ವಿಧಾನ
೪. ಅವಲೋಕನಾ ವಿಧಾನ
೫. ಅಂಕಿ-ಸಂಖ್ಯೆ ವಿಶ್ಲೇಷಣೆ ವಿಧಾನ
೬. ಐತಿಹಾಸಿಕ ವಿಧಾನ
೭. ದಾಖಲಾತಿ ವಿಧಾನ

ಸಂದರ್ಶನ ವಿಧಾನ

ಅಧ್ಯಯನದ ಉದ್ದೇಶಕ್ಕೆ ಅನುಗುಣವಾಗಿ ಸಮರ್ಪಕ ಮಾಹಿತಿಯನ್ನು ಪಡೆಯುವುದು ಬಹು ಪ್ರಮುಖವಾದುದು. ಕಾರಣ ಪ್ರತಿಯೊಂದು ಪ್ರದೇಶದಲ್ಲಿಯೂ ಸಮುದಾಯದ ಹಿರಿಯರನ್ನು ಸಂದರ್ಶಿಸಿ ಹುಟ್ಟಿನಿಂದ ಸಾವಿನವರೆಗೆ ಆಚರಿಸುವ ಎಲ್ಲಾ ಸಾಮಾನ್ಯ ಹಾಗೂ ವಿಶೇಷ ಸಂಪ್ರದಾಯಗಳನ್ನು ದಾಖಲಿಸಿಕೊಳ್ಳಲಾಗಿದೆ. ಈ ಮಾಹಿತಿಯು ಬುಂಡೇಬೆಸ್ತರು ಹೊಂದಿರುವ ಬುಡಕಟ್ಟು ಲಕ್ಷಣಗಳನ್ನು ಗುರುತಿಸಿಕೊಳ್ಳುವಲ್ಲಿ ಅತ್ಯಗತ್ಯವಾಗಿದೆ. ಹಾಗೆಯೇ ಸಾಮಾಜಿಕ ಅಂಶಗಳ ಮೂಲಕ ಸಮಾಜದಲ್ಲಿ ಇವರಿಗಿರುವ ಸ್ಥಾನಮಾನವನ್ನು ತಿಳಿದುಕೊಳ್ಳಲು ಸಹಕಾರಿಯಾಗಿದೆ. ಇವರು ಅನುಸರಿಸುತ್ತಿರುವ ಮೂಲ ಧರ್ಮ ಯಾವುದು? ಕಾಲಾನಂತರದಲ್ಲಿ ಪ್ರಾದೇಶಿಕ ಪ್ರಭಾವಕ್ಕೆ ಒಳಗಾಗಿ ನಡೆದುಕೊಳ್ಳುತ್ತಿರುವ ಧರ್ಮಗಳಾವುವು ಎಂಬುದನ್ನು ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ. ಜೊತೆಗೆ ಸಮುದಾಯಕ್ಕೆ ಮೀಸಲಾದ ಹಬ್ಬ – ಹರಿದನ, ಜಾತ್ರೆ-ಉತ್ಸವಗಳು, ಪಾರಂಪರಿಕ ಪದ್ಧತಿಗಳು , ನ್ಯಾಯಪದ್ಧತಿ, ವೈದ್ಯಪದ್ಧತಿ, ಉಡುಗೆ-ತೊಡುಗೆ, ಆಟ -ಪಾಠಗಳು ಸಂಗ್ರಹಗೊಂಡಿದ್ದು ಇವು ಸಮುದಾಯದ ಮೂಲವನ್ನು ಕುರಿತು ಮಹತ್ವದ ಸುಳಿವುಗಳನ್ನು ಗುರುತಿಸಲು ಸಹಾಕಾರಿಯಾಗಿದೆ. ಸಮಗ್ರ ಮಾಹಿತಿ ಪಡೆಯುವುದರೊಂದಿಗೆ ಸಮುದಾಯದ  ಮೂಲವನ್ನು ತಿಳಿಯಲು ಪ್ರಯತ್ನಿಸಲಾಗಿದೆ.

ಪ್ರಶ್ನಾವಳಿ ವಿಧಾನ

ಪ್ರತಿ ಕುಟುಂಬದ ವಿವರಗಳು, ದೈವ, ಕುಲ, ಮೂಲ, ಕಸುಬು, ಪರ್ಯಾಯ ಕಸುಬು, ಶಿಕ್ಷಣ, ಬೂ ಒಡೆತನ ಹೊಂದಿರುವ ಇತರೆ ಮೂಲ ಸೌಲಭ್ಯಗಳನ್ನು ಪ್ರಶ್ನಾವಳಿಯ ಮೂಲಕ ಪಡೆದುಕೊಳ್ಳಲಾಗಿದೆ. ಪ್ರತಿಯೊಂದು ಕುಟುಂಬಕ್ಕೆ ಒಂದು ಪ್ರಶ್ನಾವಳಿಯಲ್ಲಿ  ಈ ಎಲ್ಲಾ ವಿವರಗಳನ್ನು ದಾಖಲಿಸಿಕೊಂಡಿದ್ದು ಕರ್ನಾಟಕದ ಆಯ್ದ ಜಿಲ್ಲೆಗಳ ಮಾದರಿ ಸಮೀಕ್ಷೆ (Sample Survey)ಯನ್ನು ಕೈಗೊಂಡಿದೆ. ಈ ಮಾಹಿತಿಗಳನ್ನು ಆಧರಿಸಿ ಸಮುದಾಯದ ಮೂಲ ಕಸುಬು ಕುಲ, ದೈವದ ಬಗ್ಗೆ ತಿಳಿಯುವುದು ಸಾಧ್ಯವಾಗಿದೆ.

ತೌಲನಿಕ ವಿಶ್ಲೇಷಣೆ ವಿಧಾನ

ಸಮುದಾಯವನ್ನು ಕುರಿತು ಈಗಾಗಲೇ ನಡೆದಿರುವ ಅಧ್ಯಯನದ ವಿವರಗಳನ್ನು ಸಂಗ್ರಹಿಸಿ ಅವುಗಳನ್ನು ಪ್ರಸ್ತುತ ಲಭ್ಯವಿರುವ ಮಾಹಿತಿಗಳೊಂದಿಗೆ ತೌಲನಿಕವಾಗಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಇದರಿಂದ ಸಮುದಾಯದ ಹಿಂದಿನ ಚಿತ್ರಣವನ್ನು ಅರ್ಥೈಸಿಕೊಳ್ಳುವುದಕ್ಕೆ ಸಹಕಾರಿಯಾಗಿದೆ.

ಅವಲೋಕನಾ ವಿಧಾನ

ಅಪರಿಚಿತ ಸಮುದಾಯ ಒಂದರ ಅಧ್ಯಯನಕ್ಕೆ ಕೇವಲ ಮಾಹಿತಿ ಸಂಗ್ರಹ ಕಾರ್ಯ ಸಮಗ್ರ ಎನಿಸುವುದಿಲ್ಲ. ಏಕೆಂದರೆ ಅವುಗಳು ವಾಸ್ತವ ಚಿತ್ರಣವನ್ನು ಕಟ್ಟಿಕೊಡಲಾರವು. ಅಧ್ಯಯನಕಾರನು ತಪ್ಪು ಮಾಹಿತಿಯನ್ನು ದಾಖಲಿಸಿಬಿಡುವ ಅಪಾಯವಿದೆ. ಆದ್ದರಿಂದ ವಕ್ತೃಗಳು ನೀಡುವ ಮಾಹಿತಿ ಯೊಂದಿಗೆ ವಾಸ್ತವ ಚಿತ್ರಣವನ್ನು ಪರಿಶೀಲಿಸಿಸಬೇಕಾದುದು ಆಗತ್ಯ. ಆ ಕಾರಣದಿಂದ ಅವಲೋಕನಾವಿಧಾನವು ಹೆಚ್ಚು ಫಲಕಾರಿಯಾದುದಾಗಿದೆ.

ಅಂಕಿ – ಸಂಖ್ಯಾ ವಿಶ್ಲೇಷಣೆ ವಿಧಾನ

ಪ್ರಶ್ನಾವಳಿ ವಿಧಾನದಲ್ಲಿ ನಡೆಯಲಾದ ಮಾಹಿತಿಯನ್ನು ಆಧರಿಸಿ ಸಮುದಾಯದ ವಿವಿಧ ಕ್ಷೇತ್ರಗಳಲ್ಲಿನ ಪ್ರಗತಿಯನ್ನು ನಿಖರವಾಗಿ ದಾಖಲಿಸಲು ಅಂಕಿ- ಸಂಖ್ಯೆಯನ್ನು ಬಳಸಿಕೊಳ್ಳಲಾಗಿದೆ. ಯಾವುದೇ ಅಧ್ಯಯನದಲ್ಲಿ ಅತ್ಯಂತ ಪ್ರಮುಖವಾದ ವಿಧಾನವು ಇದೇ ಆಗಿದೆ. ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಅಂಕಿ- ಸಂಖ್ಯಾವಿಧಾನ ಅನಿವಾರ್ಯ ಪ್ರಸ್ತುತ ಅಧ್ಯಯನದಲ್ಲಿಯೂ ಈ ವಿಧಾನವೂ ಬುಂಡೇಬೆಸ್ತರ ಸಂದರ್ಭದಲ್ಲಿ ಹಲವಾರು ಸತ್ಯಾಂಶಗಳನ್ನು ತಿಳಿಸಿಕೊಡುವಲ್ಲಿ ಯಶಸ್ವಿಯಾಗಿದೆ.

ಐತಿಹಾಸಿಕ ವಿಧಾನ

ಈಗಿನ ಅಧ್ಯಯನಕ್ಕೆ ಹಿಂದಿನ ಅಧ್ಯಯನಗಳು ಪ್ರೇರಕ. ಆದ್ದರಿಂದ ಸಮುದಾಯದ ಪ್ರಚಲಿತ ಅಧ್ಯಯನಕ್ಕೂ ಮೊದಲು ಅದರ ಐತಿಹಾಸಿಕತೆಯನ್ನು ತಿಳಿದುಕೊಳ್ಳುವುದು ಸಮಗ್ರತೆಯ ದೃಷ್ಟಿಯಿಂದ ಸೂಕ್ತವಾದುದು. ಇಲ್ಲಿಯೂ ಕೂಡ ಈ ವಿಧಾನವನ್ನು ಬಳಸಿಕೊಳ್ಳಲಾಗಿದೆ.

ದಾಖಲಾತಿ ವಿಧಾನ

ಇತ್ತೀಚಿನ ದಿನಮಾನಗಳಲ್ಲಿ ಸಮುದಾಯದ ಅಧ್ಯಯನಕ್ಕೆ ವಿವಿಧ ಮಾಧ್ಯಮಗಳಿಂದ ದಾಖಲಾತಿ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಪ್ರಸ್ತುತ ಅಧ್ಯಯನದ ಖಚಿತತೆ, ಮರುಪರಿಶೀಲನೆ ಹಾಗೂ ಮುಂದಿನ ಅಧ್ಯಯನಕಾರರಿಗೆ ಇದು ಹೆಚ್ಚು ಪ್ರಯೋಜನಕಾರಿಯಾಗಬಲ್ಲದು. ಆ ಕಾರಣದಿಂದಲೇ ಛಾಯಾಚಿತ್ರ ಮತ್ತು ವೀಡಿಯೋ ದಾಖಲಾತಿಯನ್ನು ಮಾಡಲಾಗಿದ್ದು  ಸಮುದಾಯದ ಸ್ಥಿತಿಗತಿಯನ್ನು ಯಾರಾದರೂ ವೀಕ್ಷಿಸುವುದು ಸಾಧ್ಯವಿದೆ.

ಈ ಎಲ್ಲ ವಿಧಾನಗಳನ್ನು ಬುಂಡೇಬೆಸ್ತರ  ಅಧ್ಯಯನ ಸಂದರ್ಭದಲ್ಲಿ ಯಶಸ್ವಿಯಾಗಿ ಅಳವಡಿಸಿಕೊಳ್ಳಲಾಗಿದೆ. ಮತ್ತು ಸತ್ಯಕ್ಕೆ ಹತ್ತಿರವಾದ ವಿಚಾರಗಳನ್ನು ಪತ್ತೆ ಹಚ್ಚುವುದು ಸಾಧ್ಯವಾಗಿದೆ.

ಬುಡಕಟ್ಟು ಲಕ್ಷಣಗಳು

ಬುಂಡೇಬೆಸ್ತರು ಹೊರರಾಜ್ಯದಿಂದ ವಲಸೆ ಬಂದು ಕರ್ನಾಟಕದಾದ್ಯಂತ ಚದುರಿಹೋಗಿದ್ದಾರೆ. ಮೂಲತಃ ಈ ವಲಸೆ ಗುಣವೇ ಬುಡಕಟ್ಟಿನ ಪ್ರಥಮ ಲಕ್ಷಣ. ಏಕೆಂದರೆ ಆಸ್ತಿ ಕಲ್ಪನೆಯೇ ಇವರಿಗಿಲ್ಲ. ಬದುಕು ಸಾಗಿಸಲು ಅವಲಂಬಿಸಿರುವ ಒಂದು ಕಸುಬು ಬೇಕೇ ಬೇಕು. ಹಾಗೆಯೇ ಬುಂಡೇಬೆಸ್ತರು ಮೀನು ಹಿಡಿಯುವ ಕಸುಬನ್ನು ತಮ್ಮ ಮೂಲ ಕಸುಬಾಗಿಸಿಕೊಂಡಿದ್ದಾರೆ.  ಬೇಟೆ (ಪ್ರಾಣಿ -ಪಕ್ಷಿಗಳು) ಮಾನವನ ಆದಿಮ ಸ್ಥಿತಿಯಲ್ಲಿನ ಆಹಾರ ಪ್ರಧಾನವಾದ ಕಸುಬಾಗಿತ್ತು. ಅನಂತರದಲ್ಲಿ ನೀರಿನಲ್ಲಿ ಮೀನಿನ ಬೇಟೆಯನ್ನು ರೂಢಿಸಿಕೊಂಡಿದ್ದಾನೆ. ಇವರದು ಅಷ್ಟೇ ಪ್ರಾಚೀನವಾದ ಕಸುಬು ಎಂಬುದರಲ್ಲಿ ಸಂಶಯವೇ ಇಲ್ಲ.

೦೧. ಖಾಯಂ ಮನೆಯನ್ನು ಹೊಂದಲೇಬೇಕು ಎಂಬುದು ಇವರಿಗೆ ಅನಿವಾರ್ಯವಲ್ಲ. ಕಾರಣ ಒಂದು ಪ್ರದೇಶಕ್ಕೆ ಸೀಮಿತವಾಗಿ ಬದುಕುವಂತಹ ಕಸುಬು ಇವರದಲ್ಲ. ನೀರು ಹರಿದಂತೆ ಇವರ ಬದುಕು ಹರಿಯುತ್ತಲೇ ಇರುತ್ತದೆ. ಸಂಚಾರಿ ಅಥವಾ ಅರೆ ಅಲೆಮಾರಿ ಬದುಕನ್ನು ಅವಲಂಭಿಸಿದ ಇವರಿಗೆ ಆಸ್ತಿಯನ್ನು ಹೊಂದಲು ಸಾಧ್ಯವಿಲ್ಲ. ಮೊದಲಿಗೆ ನದಿ, ಕೆರೆ ದಂಡೆ ಇವರ ಆಶ್ರಯ ತಾಣಗಳು.

೦೨. ಸೋರೆ ಬುಂಡೆಯನ್ನು ಬಳಸಿ ನೀರಿನಲ್ಲಿ ತೇಲುತ್ತಾ ಮೀನು ಹಿಡಿಯುವುದು ಇವರ ಪಾರಂಪರಿಕ ಪದ್ಧತಿಯಾಗಿದೆ. ಬಾಳಿಕೆ ಮತ್ತು ಲಭ್ಯತೆಯ ದೃಷ್ಟಿಯಿಂದ ಆದರ ಬಳಕೆ ಇಂದು ಕಡಿಮೆಯಾಗಿ ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಂಡಿದ್ದಾರೆ.

೦೩. ಇಂದು ಗಳಿಸಿದ್ದು ಈ ಹೊತ್ತು ತುತ್ತಿನ ಚೀಲ ತುಂಬಿದರೆ ಸಾಕು. ನಾಳೆ ಚಿಂತೆ ನಾಳೆಗೆ ಎಂಬುದು ಇವರ ನಿಯಮ. ಹಾಗಾಗಿ ಶ್ರೀಮಂತಿಕೆಯ ಪ್ರತೀಕಗಳಾದ ಹಣ, ಚಿನ್ನ, ಬೆಳ್ಳಿ ಸಂಗ್ರಹ ಇವರಿಗೆ ಒಗ್ಗುವುದಿಲ್ಲ.

೦೪. ಸಮ ಕುಲದಲ್ಲಿ ವಿವಾಹ ನಿಷಿದ್ಧ . ಬೆಸೆ ಕುಲದಲ್ಲಿ ಮಾತ್ರ ವಿವಾಹ ಏರ್ಪಡುತ್ತದೆ. ಹಾಗೂ ಸೋದರ ಮಾವನ ಮಗಳು, ಅತ್ತೆಯ ಮಗಳು ಮತ್ತು ಸೋದರ ಅಕ್ಕನ ಮಗಳನ್ನು ವಿವಾಹವಾಗುವುದುಂಟು. ಆರೆ- ಅಲೆಮಾರಿಗಳಾದ ಕಾರಣ ಮದುವೆಗೆ ಹೆಣ್ಣುಗಳ ಹುಡುಕಾಟ ಕಷ್ಟಸಾಧ್ಯ. ಆದ್ದರಿಂದ ವರ್ಷದಲ್ಲಿ ಒಮ್ಮೆ ತಮ್ಮ ಮೂಲ ದೈವದ ಜಾತ್ರೆ -ಹಬ್ಬವನ್ನು ಏರ್ಪಡಿಸಿ ಆ ಭಾಗದಲ್ಲಿದ್ದ ಇಡೀ ಸಮುದಾಯವೇ  ಒಂದು ಕಡೆ ಸೇರಿ ದೇವರ ಕಾರ್ಯವನ್ನು ಸಾಮೂಹಿಕವಾಗಿ ನೆರೆವೇರಿಸುತ್ತಾರೆ. ಜೊತೆಗೆ ವಿವಾಹ ಸಂಬಂಧವನ್ನು ಏರ್ಪಡಿಸಲು ಪರಸ್ಪರ ಮಾತುಕತೆ ನಡೆಸುವುದರಿಂದ ಆ ವರ್ಷದ ವಿವಾಹ ಸಂಬಂಧಗಳು ಕುದುರುತ್ತವೆ.

೦೫. ನ್ಯಾಯ ಪದ್ಧತಿಯನ್ನು ಇವರು ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ಪಾರಂಪರಿಕ ರೀತಿಯಲ್ಲೇ ಬಗೆಹರಿಸಿಕೊಳ್ಳುವರು. ಇದು ಸಹಾ ವರ್ಷದಲ್ಲಿ ಒಮ್ಮೆ ಜರುಗುವ ಮೂಲ ದೈವದ ಜಾತ್ರೆಯ ಸಮಯದಲ್ಲಿ ಏರ್ಪಡಿಸುವರು. ನ್ಯಾಯ ಬಯಸುವವರು ಸಂಬಂಧಪಟ್ಟವರಿಗೆ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳುವರು. ಜಾತ್ರೆ ಮುಗಿದ ಆನಂತರದಲ್ಲಿ ಒಂದು ದಿನವನ್ನು ನಿಗದಿಮಾಡಿ ಆ ವರ್ಷದಲ್ಲಿ ನ್ಯಾಯದಕಟ್ಟೆಗೆ ಬಂದ ಸಮಸ್ಯೆಗಳನ್ನು ಇತ್ಯರ್ಥಗೊಳಿಸುವರು. ಸಾಮಾನ್ಯವಾಗಿ ದೈವದ ಹೆಸರಲ್ಲಿ ಆಣೆ ಮಾಡುವುದರ ಮೂಲಕ ತಪ್ಪಿತಸ್ಥರನ್ನು ಗುರುರ್ತಿಸಿದರೆ ವಿವಾಹ ವಿಚ್ಛೇದನೆ ಬಯಸಿ ಬಂದವುಗಳಾಗಿದ್ದರೆ ನೇರವಾಗಿ ವಿಚಾರಣೆಗೆ ಒಳಪಡಿಸಿ  ವಿಚ್ಛೇದ ನಪಡೆಯಲು ಅನುಮತಿ ನೀಡುವರು.

೦೬. ವಿಧವಾ ವಿವಾಹ ಪ್ರಚಲಿತವಿರುವುದು ಕೆಳವರ್ಗದ ಬುಡಕಟ್ಟು ಮತ್ತು ಅಸ್ಪೃಶ್ಯರಲ್ಲಿ ಮಾತ್ರ. ಬುಂಡೇಬೆಸ್ತರಲ್ಲೂ ಸಹಾ ವಿಧವಾ ವಿವಾಹ ಪದ್ಧತಿ ರೂಡಿಯಲ್ಲಿದೆ.

೦೭. ಸಮುದಾಯದ ಯಜಮಾನನೆಂದು ನೇಮಕವಾದ ವ್ಯಕ್ತಿಯು ನಿರ್ದಿಷ್ಟ ಅವಧಿಯವರೆಗೆ ನಾಯಕನಂತೆ ಎಲರನ್ನು ನಿಯಂತ್ರಿಸುತ್ತಾನೆ. ಆತನ ಸಲಹಾ -ಸೂಚನೆಗಳ ಅನ್ವಯ ಇಡೀ ಸಮುದಾಯ ನಡೆದುಕೊಳ್ಳುತ್ತದೆ.

೦೮. ಇವರು ಮಿಶ್ರಹಾರಿಗಳು ನಿತ್ಯವು ಲಭ್ಯವಿರುವ ಮೀನಿನ್ನು ಆಹಾರವಾಗಿ ಬಳಸುವರು. ಹಾಗೆಯೆ ಬದಲಾವಣೆಗಾಗಿ ಸೊಪ್ಪು ಕಾಯಿಪಲ್ಲೆಯನ್ನು ಬಳಸುವರು. ಆದರೆ ಮಾಂಸದ ಆಡುಗೆಯನ್ನು ಅಪರೂಪಕ್ಕೊಮ್ಮೆ ಅಣಿಗೊಳಿಸುವರು. ಆರ್ಥಿಕ ಅನಾನುಕೂಲವೇ ಇದಕ್ಕೆ ಕಾರಣವಾಗಿದೆ.

೦೯. ಸತ್ತವ್ಯಕ್ತಿ ಆತ್ಮವನ್ನು ಒಳಕ್ಕೆ ಕರೆದುಕೊಳ್ಳುವುದು. ಈ ಪದ್ಧತಿಯು ಬುಡಕಟ್ಟು ಹಿನ್ನಲೆಯುಳ್ಳ ಸಮುದಾಯದಲ್ಲಿ ಹೆಚ್ಚು ಪ್ರಚಲಿತವಿದೆ.

೧೦. ದೇವದಾಸಿ ಪದ್ಧತಿ ಇದೊಂದು ಅನಿಷ್ಟ ಕ್ರಮ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಆದರೆ ಪ್ರಾಚೀನರಲ್ಲಿ ರೂಢಿಯಲ್ಲಿದ್ದ ದೈವಕ್ಕೆ ಸಂಬಂಧಿಸಿದ ಈ ಪದ್ಧತಿ ಇಂದಿಗೂ ಬುಡಕಟ್ಟು ಮತ್ತು ಅಸ್ಪೃಶ್ಯರಲ್ಲಿ ರೂಢಿಯಲ್ಲಿದೆ. ಬುಂಡೇಬೆಸ್ತರಲ್ಲಿ ಕೆಲವರು ಇಂದಿಗೂ ಈ ಆಚರಣೆಯಲ್ಲಿ ನಂಬಿಕೆ ಇಟ್ಟಿರುವುದು ತಿಳಿದುಬಂದಿದೆ.

೧೧. ಜೋಗಪ್ಪ ಮತ್ತು ಜೋಗಮ್ಮಗಳಾಗುವುದು ಸಹಾ ಒಂದು ಅನಗತ್ಯವಾದ ಸಂಪ್ರದಾಯ ರೂಢಿ. ವಯಸ್ಸಾದ ಪುರುಷ ಮತ್ತು ಮಹಿಳೆಯರು  ತಮ್ಮನ್ನು ದೇವತೆಗೆ ಒಪ್ಪಿಕೊಂಡು ಆ ದೈವದ ಹೆಸರಿನಲ್ಲಿ ಭಿಕ್ಷೆ ಬೇಡುವುದು. ಬುಂಡೇಬೆಸ್ತರಲ್ಲಿಯೂ ಇದೆ.

೧೨. ಬುಂಡೇಬೆಸ್ತರು ಮಹಾರಾಷ್ಟ್ರದಿಂದ ವಲಸೆ ಬಂದ ಕಾರಣ ಅವರ ಮಾತೃಭಾಷೆ ಮರಾಠಿ. ಆದರೆ ಕರ್ನಾಟಕ್ಕೆ ಬಂದು ಹಲವಾರು ಶತಮಾನಗಳೇ ಕಳೆದುಹೋಗಿವೆ. ಕನ್ನಡ, ತೆಲುಗು ಮುಂತಾದ ಸ್ಥಳೀಯ ಭಾಷೆಗಳ ಪ್ರಭಾವದಿಂದ ಬುಂಡೇಬೆಸ್ತರದೇ ಒಂದು ಉಪಭಾಷೆಯಾಗಿ ರೂಪುಗೊಂಡಿದೆ.

೧೩. ಬುಂಡೇಬೆಸ್ತರಲ್ಲಿ ಮಾತೃಪ್ರಧಾನ ವ್ಯವಸ್ಥೆ ಒಂದು ಕಾಲ ಘಟ್ಟದಲ್ಲಿ ರೂಢಿಯಲ್ಲಿತ್ತು. ಇತ್ತೀಚೆಗೆ ಪುರುಷ ಪ್ರಧಾನ ವ್ಯವಸ್ಥೆಯನ್ನು ಕಾಣುತ್ತೇವೆ. ಅನೇಕ ಸಂದರ್ಭದಲ್ಲಿ ಸೋದರತ್ತೆಯ ಪಾತ್ರ ಇರುವುದುಂಟು. ಇಂದಿಗೂ ಕಾಣುತ್ತೇವೆ.

ಎಲ್ಲಾ ಅಂಶಗಳನ್ನು ಪರಿಶೀಲನೆಗೆ ಒಳಪಡಿಸಿದಾಗ ಬುಂಡೇಬೆಸ್ತರು ಬುಡಕಟ್ಟು ಮೂಲದವರು ಎಂಬುದರಲ್ಲಿ ಅನುಮಾನವೇ ಇಲ್ಲ. ಸಾಮಾನ್ಯವಾಗಿ ಕರ್ನಾಟಕದಲ್ಲಿ ಪ್ರಸ್ತುತ ಬುಡಕಟ್ಟು ಎಂದು ಪರಿಗಣಿಸಲಾಗಿರುವ ಸಮುದಾಯಗಳು ಸ್ಪೃಶ್ಯರಾಗಿದ್ದಾರೆ. ಬುಂಡೇಬೆಸ್ತರು ಸಹಾ ಸ್ಪೃಶ್ಯರು ಹಾಗೂ ಬುಡಕಟ್ಟು ಲಕ್ಷಣಗಳನ್ನು  ಹೊಂದಿದ್ದಾರೆ. ಎಂಬುದನ್ನು ಪ್ರಸ್ತುತ ಅಧ್ಯಯನದಿಂದ ಸ್ಪಷ್ಟಪಡಿಸಿಕೊಳ್ಳಬಹುದಾಗಿದೆ.