ಬುಂಡೇಬೆಸ್ತರು ಕರ್ನಾಟಕ ಮೂಲದವರಲ್ಲ. ಮಹಾರಾಷ್ಟ್ರದಿಂದ ವಲಸೆ ಬಂದವರು ಎಂಬುದನ್ನು ಈಗಾಗಲೇ ಪ್ರಸ್ತಾಪಿಸಲಾಗಿದೆ. ಹಾಗೆಯೇ ಇವರ ಕಸುಬು ಮೀನು ಹಿಡಿಯುವುದಾಗಿದ್ದು ಅನಿವಾರ್ಯವಾಗಿ ಆರೆ -ಅಲೆಮಾರಿ ಬದುಕು ಸಾಗಿಸುತ್ತಿದ್ದಾರೆ ೧೯೭೨ ರ ಅಣಂತರದಲ್ಲಿ ಅಲೆಮಾರಿ ಮತ್ತು ಅರೆ- ಅಲೆಮಾರಿಗಳಿಗೆ ಖಾಯಂ ವಸತಿಯನ್ನು ಒದಗಿಸುವಲ್ಲಿ ಅಂದಿನ ಸರ್ಕಾರವು ಮಹತ್ವದ ಯೋಜನೆಯನ್ನು ರೂಪಿಸಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿತು. (ಅಂದಿನ ಮುಖ್ಯಮಂತ್ರಿ ಮಾನ್ಯಶ್ರೀ ಡಿ. ದೇವರಾಜು ಆರಸು ಅವರು) ಆ ಸಂದರ್ಭದಲ್ಲಿ  ಬುಂಡೇಬೆಸ್ತರನ್ನು ಒಳಗೊಂಡಂತೆ ಇನ್ನು ಕೆಲವು ಅರೆ-ಅಲೆಮಾರಿ  ಸಮುದಾಯಗಳಿಗೆ ಅವರಿಗೆ ಅನುಕೂಲವೆನಿಸಿದ ಪ್ರದೇಶದಲ್ಲಿ ನಿವೇಶನವನ್ನು ಕೊಟ್ಟು ಮನೆಯನ್ನು ನಿರ್ಮಿಸಿಕೊಟ್ಟರು. ಬುಂಡೇಬೆಸ್ತರ ಸಾಮಾಜಿಕ ಸ್ಥಾನಮಾನವು ಅಸ್ಪೃಶ್ಯರಿಗಿಂತ ಉತ್ತಮವಾಗಿದೆ. ಏಕೆಂದರೆ ಇವರು ಸ್ಪೃಶ್ಯರು.

ಇವರಲ್ಲಿನ ಎರಡು ಆಚರಣೆಯ ಸಂದರ್ಭಗಳನ್ನು ಅವಲೋಕಿಸಿದಾಗ ಅದು ಸ್ಪಷ್ಟವಾಗುವುದು. ಹುಟ್ಟಿನ ಸೂತಕವನ್ನು ಕಳೆಯುವ ಸಂದರ್ಭದಲ್ಲಿ ಅಗಸರು ಬಂದು ಮನೆಗೆಲ್ಲಾ ಸಗಣಿ ನೀರನ್ನು ಪೋಕ್ಷಿಸಿ ಹೋಗಬೇಕು. ಹಾಗೆಯೇ ಸಾವಿನ ಸುದ್ದಿಯನ್ನು ಸಂಬಂಧಿಕರಿಗೆ ತಿಳಿಸಲು ಹರಿಜನರನ್ನು ‘ಕೋಡಿಹಾಳು’  ಎಂದು ನೇಮಿಸಿಕೊಂಡಿದ್ದಾರೆ. ಆದ್ದರಿಂದ ಸಾಮಾಜಿಕವಾಗಿ ಶ್ರೇಣೀಕರಣದಲ್ಲಿ ಅಸ್ಪೃಶ್ಯರಿಗಿಂತ ಒಂದು ಹಂತ ಮುಂದಿದ್ದಾರೆ. ಸಾಮಾನ್ಯವಾಗಿ ಬುಡಕಟ್ಟುಗಳು ಸ್ಪೃಶ್ಯರು. ಉನ್ನತ ವರ್ಗಗಳ ಜೊತೆಗಿನ ಸಂಪರ್ಕದಲ್ಲಿ ಇವರಿಗೆ ಒಂದು ಹಂತದವರೆಗೆ ಪ್ರವೇಶವಿದೆ. ಎಲ್ಲರಂತೆ ದೇವರ ಗುಡಿಯೊಳಗೆ ಹೋಗುವುದಕ್ಕೆ ನಿಷೇಧವೇನು ಇಲ್ಲ. ಇವರ ಆಹಾರ ಕ್ರಮವು ಇದಕ್ಕೆ ಪೂರಕವಾಗಿದೆ. ಏಕೆಂದರೆ ದನ ಮತ್ತು ಹಂದಿ ಮಾಂಸವನ್ನು ಸೇವಿಸುವುದು ಇವರಲ್ಲಿ ಕಂಡು ಬರುವುದಿಲ್ಲ. ದನ ಮತ್ತು ಹಂದಿ ಮಾಂಸವನ್ನು ಸೇವಿಸುವ ಸಮುದಾಯಗಳನ್ನು ಸಾಮಾನ್ಯವಾಗಿ ಅಸ್ಪೃಶ್ಯರು. ಎಂದು ಗುರುತಿಸುವರು.

ಬೆಡಗು, ಬಳಿ, ಕುಲ ಅಥವಾ ಗೋತ್ರಗಳು

ಕರ್ನಾಟಕದ ವ್ಯಾಪ್ತಿಯಲ್ಲೇ ಇರುವ ಬುಂಡೇಬೆಸ್ತರಲ್ಲಿ ಮರಾಠಿ ಮಾತೃ ಭಾಷಿಕರು ಮತ್ತು ತೆಲಗು ಮಾತೃ ಭಾಷಿಕರು  ಇರುವುದು ಕಂಡುಬಂದಿದೆ. ಆದರೆ ಇವರ ಕಸುಬಿನಲ್ಲಿ ಹಾಗೂ ಅವರಿಗೆ ಕರೆಯುವ ಹೆಸರಿನಲ್ಲಿಯೂ ಯಾವುದೇ ವ್ಯತ್ಯಾಸವಿಲ್ಲ. ಆದರೆ ಬಳಿ ಅಥವಾ ಕುಲಗಳನ್ನು ಪರಿಶೀಲಿಸಿದಾಗ ಅವರವರ ಭಾಷೆಯ ಹಿನ್ನೆಲೆಯಲ್ಲೇ ಇರುವುದು ಸ್ಪಷ್ಟವಾಗುತ್ತದೆ.

ತೆಲಗು ಭಾಷಿಕರಲ್ಲಿ ಪ್ರಚಲಿತವಿರುವ ಬಳಿ ಅಥವಾ ಕುಲಗಳು

೦೧. ಎಣ್ಣೆಲೇರು
೦೨.
ಸಣ್ಣಕ್ಕಿಯಲೇರು
೦೩.
ಬಾಳೆದೆಲೇರು
೦೪.
ಕಾಮಗೇತ್ಲೆರು
೦೫.
ಹಟ್ಟಿಗೆಲೇರು
೦೬.
ಜಂಗಲೇರು
೦೭.
ಪೂಗೂಲೇರು
೦೮.
ಚುಂಚೆಲೇರು
೦೯.
ಸಾವಂತಲೇರು
೧೦.
ಸಬಂದೆಲೇರು
೧೧.
ಗಂಟೆಲೇರು
೧೨.
ಅರಿಶಿನದಲೇರು
೧೩.
ರಾಜಬೊಪೇರು
೧೪.
ಸೊದೆಲೇರು
೧೫.
ನಾಗೆಲೇರು
೧೬.
ಹೊನ್ನಶೆಟ್ಟಿಲೇರು

ಮಾರಾಠಿ ಭಾಷಿಕರಲ್ಲಿ  ಪ್ರಚಲಿತವಿರುವ ಬಳಿ ಅಥವಾ ಕುಲಗಳು

. ಶಾಶ್‌ವೆ
೨.
ಮೋರೆ
೩.
ಸಿಂಧೆ
೪.
ಆಟಗ್‌
೫.
ಶಾಶ್‌ಗಿನ್‌
೬.
ಸಾಂಚೆಂಗೆ
೭.
ನಕ್‌ನಾರ್

ಇವರಲ್ಲಿ ಒಟ್ಟು ಹದಿನಾಲ್ಕು ಬಳಿಗಳಿದ್ದು ಕೇವಲ ಏಳು ಬಳಿಗಳನ್ನು ದಾಖಲಿಸಲಾಗಿದೆ. ಉಳಿದ ಬಳಿಗಳ ಬಗೆಗೆ ಸಮುದಾಯಕ್ಕೆ ಮಾಹಿತಿ ಇರುವುದಿಲ್ಲ.

ವಸತಿ

ನೀರಿನ ಮೂಲಗಳಾದ ನದಿ, ಹೊಳೆ ಮತ್ತು ಕೆರೆದಂಡೆಗಳೆ ಬುಂಡೇಬೆಸ್ತರ ವಾಸದ ತಾಣಗಳು. ಒಂದು ಕಡೆ ಖಾಯಂ ಆಗಿ ನೆಲೆ ನಿಲ್ಲದ  ಕಾರಣ ವಾಸದ ಮನೆಯ ಬಗ್ಗೆ ಇವರು ಅಷ್ಟೇನು ಕಾಳಜಿವಹಿಸಿಲ್ಲ. ತಾತ್ಕಾಲಿಕವಾಗಿ ಕೆರೆ ಅಥವಾ ನದಿ ಪಕ್ಕದ ಬಯಲಿನಲ್ಲಿ ಒಂದು ಚಿಕ್ಕ ಗುಡಿಸಲನ್ನು ತೆಂಗಿನಗರಿ ಮತ್ತು ಬಿದಿರಿನಿಂದ ನಿರ್ಮಿಸುವರು. ಇತ್ತೀಚೆಗೆ ಗುತ್ತಿಗೆದಾರರ ಬಳಿ ಮೀನು ಹಿಡಿಯುವ ಸಲುವಾಗಿ ಕೆಲಸಕ್ಕೆ ಸೇರಿ ಕೊಂಡಿರುವ ಕುಟುಂಬಗಳು ಆತನೇ ನಿರ್ಮಿಸಿಕೊಡುವ ಗುಡಿಸಲುಗಳಲ್ಲಿ ವಾಸಿಸುವರು. ಮುಂದಿನ ವರ್ಷ ಮತ್ತೊಂದು ಕೆರೆ ಅಥವಾ ನದಿಯ ನಿರ್ದಿಷ್ಟ ಪ್ರದೇಶವೊಂದರ ಗುತ್ತಿಗೆ ಪಡೆದರೆ ಬುಂಡೇಬೆಸ್ತರು ಅಲ್ಲಿ ಹೋಗಿ ನೆಲೆಸುವುದು ಅನಿವಾರ್ಯ.

ಸುಮಾರು ೧೨ ಅಡಿ ಅಗಲ ೨೦ ಅಡಿ ಉದ್ದದ ಗುಡಿಸಲಿಗೆ ಒಂದು ಬಾಗಿಲು ಇರುತ್ತದೆ. ಗಾಳಿಗಾಗಿ ಪಕ್ಕದಲ್ಲಿ ಒಂದು ಕಿಂಡಿಯನ್ನು ಬಿಡುವರು. ಮನೆಯ ಒಂದು ಮೂಲೆಯನ್ನು ಅಡುಗೆ ಮಾಡಲು ಬಳಸುತ್ತಾರೆ. ತಮ್ಮ ತಮ್ಮ ಕುಲದೈವಗಳ ಪುಟಗಳು ಅಥವಾ ಸಂಕೇತಗಳನ್ನು (ಕಳಸ) ತ್ರಿಶೂಲ, ಲಿಂಗ ಇತ್ಯಾದಿ ಇಟ್ಟು ಪೂಜಿಸಲು ಒಂದು ಭಾಗದಲ್ಲಿ ಅನುವು ಮಾಡಿಕೊಂಡಿದ್ದಾರೆ. ಬಟ್ಟೆಗಳನ್ನು ತೂಗು ಹಗ್ಗದಲ್ಲಿ ಹಾಕಿ ಕೆಲವನ್ನು ತಗಡಿನ ಪೆಟ್ಟಿಗೆಗಳಲ್ಲಿಡುವರು. ಅಂದರೆ ಅಡುಗೆಮನೆ, ಮಲುಗುವಮನೆ ಎಲ್ಲವೂ ಒಂದರಲ್ಲೇ ಇರುತ್ತದೆ. ಇದಿಷ್ಟು  ಬುಂಡೇಬೆಸ್ತರ  ಮನೆಯ ಒಳಾಂಗಣದ ಚಿತ್ರಣವಾಗಿದೆ.

ಸಗಣಿಯಿಂದ ಸಾರಿಸುವುದರ ಮೂಲಕ ಮನೆ ಒಳಗೆ ಮತ್ತು ಹೊರಗೆ ಸ್ಪಚ್ಛತೆಯನ್ನು ಚೆನ್ನಾಗಿ ನೋಡಿಕೊಳ್ಳುವುದರಲ್ಲಿ ಮಹಿಳೆಯರ ಪಾತ್ರ ಪ್ರಮುಖವಾದುದು. ಮನೆಯ ಮುಂದೆ ತುಳಸಿ ಗಿಡವನ್ನು ನೆಟ್ಟು ನಿತ್ಯವೂ ಪೂಜಿಸುವರು. ಇವರ ವಾಸದ ನೆಲೆಯ ಹತ್ತಿರ ಬನ್ನಿ ಮತ್ತು ಬೇವಿನಮರಗಳಿದ್ದರೆ ಅದನ್ನು ಪೂಜಿಸುವುದುಂಟು ತಾವು ಬಳಸುವ ಬಲೆಗಳನ್ನು ಸಂರಕ್ಷಿಸಿ ಇಟ್ಟುಕೊಳ್ಳಲು ಪ್ರತ್ಯೇಕ ಗುಡಿಸಲನ್ನು ನಿರ್ಮಿಸಿಕೊಳ್ಳುವರು.

೧೯೭೨ರಲ್ಲಿ ಸರ್ಕಾರವು  ನಿರ್ಮಿಸಿಕೊಟ್ಟಿರುವ ಜನತಾ ಮನೆಗಳಲ್ಲಿ ವಾಸಿಸುವವರ ಸಂಖ್ಯೆಯೇ ಬಹಳ ಕಡಿಮೆ. ವರ್ಷದಲ್ಲಿ ಒಮ್ಮೆ ಹಬ್ಬ – ಹರಿದಿನ ಸಂದರ್ಭದಲ್ಲಿ ಎಲ್ಲರೂ ಒಂದೆಡೆ ಸೇರಿತ್ತಾರೆ. ಉಳಿದ ಅವಧಿಯಲ್ಲಿ ಅರೆ – ಅಲೆಮಾರಿ ಅಲೆಮಾರಿಗಳಾಗಿ ಸಂಚರಿಸುತ್ತಾರೆ.

ಆಹಾರ ಕ್ರಮ

ಬುಡೇಬೆಸ್ತರು ಮಹಾರಾಷ್ಟ್ರ ಮೂಲದವರಾದ್ದರಿಂದ ಆಹಾರ ಕ್ರಮದಲ್ಲಿ ಅದರ ಮುಂದುವರಿಕೆಯನ್ನು ಕಾಣಬಹುದು. ಅವರ ಬದುಕಿನ ರೀತಿಗೆ ಅದು ಹೆಚ್ಚು ಸಹಕಾರಿಯಾದಿದೆ. ಆದ್ದರಿಂದ ಇವರ ಪ್ರಮುಖ ಆಹಾರ ಗೋಧಿಯ ರೊಟ್ಟಿಯಾಗಿದೆ. ಅದಕ್ಕೆ ಪೂರಕವಾಗಿ ಕಾಳುಗಳು ಮತ್ತು ತರಕಾರಿಯಿಂದ ಸಿದ್ಧಗೊಳಿಸಲಾದ ಪಲ್ಯವನ್ನು ಉಪಯೋಗಿಸುವರು. ಅನುಕೂಲಕ್ಕೆ ತಕ್ಕಂತೆ ಚಪಾತಿ. ಅನ್ನ ಮುದೆಯನ್ನು ಸಹಾ ಸಿದ್ಧಪಡಿಸುತ್ತಾರೆ. ಬೆಳಗಿನ ಸಮಯ ಚಹಾ ಸೇವನೆಯ ಅಭ್ಯಾಸವಿದೆ. ಏಕೆಂದರೆ ರಾತ್ರಿ ಹಾಕಿರುವ ಬಲೆಯನ್ನು ಮುಂಜಾನೆ ೫ ಗಂಟೆಯ ಸುಮಾರಿಗೆ ತೆಗೆಯಬೇಕಾದ್ದರಿಂದ ಪುರುಷರು ಕೆಲಸಕ್ಕೆ ಬೇಗ ಹೊರಡುವರು. ಕಾರಣ ಹೊರಗಿನ ಹೋಟೇಲುಗಳಲ್ಲಿ ತಿಂಡಿ ತಿನ್ನುವುದುಂಟು. ಮೀನು ನಿತ್ಯದ ಆಹಾರದಲ್ಲಿ ಕಡ್ಡಾಯ. ಆದರೆ ಮಾಂಸದ ಅಡುಗೆ ಮಾತ್ರ ಅಪರೂಪ. ಏಕೆಂದರೆ ಅಷ್ಟೊಂದು ಹಣ ತೆತ್ತು ಮಾಂಸ ತರುವ ಸಾಮರ್ಥ್ಯ ಇವರಿಗಲ್ಲ. ದಿನದ ಗಳಿಕೆ ಹೆಚ್ಚಿರುವವರು ವಾರಕ್ಕೆ ಅಥವಾ ತಿಂಗಳಿಗೊಮ್ಮೆ ಮಾಂಸದ ಅಡುಗೆ ಮಾಡುವುದಾಗಿ ತಿಳಿದು ಬರುತ್ತದೆ.

ವಿಶೇಷ ಸಂದರ್ಭಗಳಾದ ಹುಟ್ಟಿನ ಸೂತಕ ತೆಗೆಯುವುದು, ನಾಮಕರಣ ಮದುವೆ ದಿನ ಹಬ್ಬ ಹರಿದಿನಗಳಲ್ಲಿ ಸಿಹಿ ಆಡುಗೆ ಸಿದ್ಧಪಡಿಸುವುದು ಸಾಮನ್ಯ ಆದರೆ ಕೆಲವೂ ದೈವಗಳ ಹಬ್ಬಗಳಂದು ಕುರಿ, ಕೋಳಿ ಬಲಿಕೊಟ್ಟು ಮಾಂಸದ ಅಡುಗೆ ಅಣಿಗೊಳಿಸಿ ಮೊದಲು ದೈವಕ್ಕೆ (ನೈವೇದ್ಯ) ಎಡೆ ಮಾಡಿ ಆನಂತರದ ಎಲ್ಲರೂ ಸಾಮೂಹಿಕವಾಗಿ ಊಟಮಾಡುವರು. ಮದುವೆಯ ಮರುದಿನ ಏರ್ಪಡುವ ಬೀಗರೂಟದಂದು ಮಾಂಸದ ಊಟವೇ ಬಹಳ ವಿಶೇಷವಾದುದು ಅಡುಗೆಯ ಸಿದ್ಧತೆಯಲ್ಲಿ ಕಾರ ಅರೆಯುವ ಸಲುವಾಗಿ ಚಿಕ್ಕದೊಂದು ಸಮತಟ್ಟಾದ ಕಲ್ಲು ಮತ್ತು ಗುಂಡುಕಲ್ಲನ್ನು ಬಳಸುವುದುಂಟು. ಏಕೆಂದರೆ ಇವರು ಆರೆ ಅಲೆಮಾರಿಗಳಾದ ಕಾರಣ ಮನೆಯ ಖಾಯಂ ಇಲ್ಲ. ಆದ್ದರಿಂದ ಅವರು ವಾಸ್ತವ್ಯವಿರುವ ಸ್ಥಳದಲ್ಲೆ ದೊರೆಯುವ ಸಮತಟ್ಟದ ಕಲ್ಲೆ ಅವರಿಗೆ ಆ ಉದ್ದೇಶಕ್ಕೆ ಬಳಕೆಯಾಗುವುದು.

ಉಡುಗೆ – ತೊಡುಗೆ

ಸ್ಥಳೀಯ ಮಾದರಿಯಲ್ಲೇ ಬಟ್ಟೆ ಧರಿಸುತ್ತಾರೆ. ಪುರುಷರು ಚಡ್ಡಿ, ದೋತಿ, ಬನಿಯನ್‌, ಮೇಲಂಗಿ ಧರಿಸಿ, ತಲೆಗೆ ಟವಲ್‌ನಿಂದ ಪೇಟೆ ಕಟ್ಟುವರು ಮಹಿಳೆಯರು ಸೀರೆ – ರವಿಕೆ ಧರಿಸುತ್ತಾರೆ. ಆದರೆ ಇತ್ತೀಚಿನ ದಿನಮಾನಗಳಲ್ಲಿ ಪುರುಷರು ಪ್ಯಾಂಟ್‌ ತೊಡುವುದು ಕಂಡುಬರುತ್ತಿದೆ. ಯುವಕ ಯುವತಿಯರು ಕ್ರಮವಾಗಿ ಪ್ಯಾಂಟ್‌ – ಷರ್ಟ್‌, ಚೂಡಿದಾರ್‌ ಅಥವಾ ಲಂಗ ಬ್ಲೌಸ್‌ ಡಾವಣಿ ತೊಡುವರು. ಇತ್ತೀಚೆಗೆ ನೈಟಿಯು ಹೆಣ್ಣುಮಕ್ಕಳಲ್ಲಿ ಹೆಚ್ಚು ಬಳಕೆಯಲ್ಲಿದೆ.

ಚಿನ್ನ – ಬೆಳ್ಳಿ ಆಬರಣಗಳ ವಿಚಾರದಲ್ಲಿ ಬುಂಡೇಬೆಸ್ತರಿಗೆ ಅಷ್ಟೇನು ವ್ಯಾಮೋಹವಿಲ್ಲ. ಏಕೆಂದರೆ ಇವರ ಬದುಕು ಬಯಲು ಟೆಂಟ್‌ ಅಥವಾ ಗುಡಿಸಲಲ್ಲಿ ನಡೆದು ಹೋಗುತ್ತದೆ. ದಿನದ ದುಡಿಮೆಯು ಜೀವನ ನಿರ್ವಹಣೆಗೆ ಸಾಲದಾಗಿರುವಾಗ ಅಲಂಕಾರಕ್ಕಾಗಿ ಚಿನ್ನ ಮತ್ತು  ಬೆಳ್ಳಿಯನ್ನು ಕೊಂಡು ಕೊಳ್ಳುವುದು ದೂರದ ಮಾತಾಗಿಯೇ ಉಳಿಯಿತು. ಆದರೆ ಇವರು ಯಾವುದೇ ಒಡವೆಗಳನ್ನು ತೊಡುವುದಿಲ್ಲ ಎಂದು ಅರ್ಥೈಸಲು ಬರುವುದಿಲ್ಲ. ಅಗತ್ಯಕ್ಕಾಗಿ ಒಂದಿಷ್ಟು ಚಿನ್ನದ ಆಭರಣಗಳಾದ ತಾಳಿ, ಮೂಗುತಿ, ಕಾಲು ಉಂಗುರ, ಕಾಲುಗೆಜ್ಜೆ ಇರುತ್ತದೆ. ಈಗೀಗ ಆಧುನಿಕ ಮಾದರಿಯಲ್ಲಿ ರೋಲ್ಡ್‌ – ಗೋಲ್ಡ್‌ ಪ್ಲಾಸ್ಟಿಕ್‌ ಆಭರಣಗಳ ಲಭ್ಯವಿರುವುದರಿಂದ ಅವುಗಳನ್ನೇ ಬಳಸುವುದು ಸಾಮಾನ್ಯವಾಗಿದೆ.

ಶಿಕ್ಷಣ

ಕರ್ನಾಟಕದಾದ್ಯಂತ ಯಾವೊಂದು ಜಿಲ್ಲೆಯಲ್ಲೂ ಬುಂಡೇಬೆಸ್ತರ ಶೈಕ್ಷಣಿಕ ಪ್ರಗತಿ ತೃತ್ತಿಕರವಾಗಿಲ್ಲ. ಇದಕ್ಕೆ ಕಾರಣ ಅವರ ಕಸುಬಿನ ಹಿನ್ನೆಲೆಯಾಗಿದೆ. ಕೇಲಲ ಹೊತ್ತಿನ ಚೀಲ ತುಂಬಿಸುವುದೇ ಸರ್ವಸ್ವ ಎಂದು ನಂಬಿರುವ ಇವರಿಗೆ ವೇಗವಾಗಿ ಬದಲಾಗುತ್ತಿರುವ ಸಮಾಜದಲ್ಲಿ ನಾವು ಹೆಜ್ಜೆ ಹಾಕಬೇಕು ಎಂಬ ಅರಿವೇ ಬಂದಂತೆ ಕಾಣುವುದಿಲ್ಲ . ಎಲ್ಲದರ ಬಗ್ಗೆಯು ತಾತ್ಸಾರ. ಮಹಿಳೆಯ ಶಿಕ್ಷಣದ ಪ್ರಮಾಣವಂತೂ ಅತ್ಯಂತ ಕಡಿಮೆ ಇದೆ. ಇವರು ಹಣ್ಣು ಮಕ್ಕಳು ಋತುಮತಿ ಆಗುವವರೆಗೆ ಮಾತ್ರ ಶಾಲೆಗೆ ಕಳಿಸುತ್ತಿದ್ದು ಆನಂತರ ಅವರನ್ನು ಮನೆಯಲ್ಲಿಯೇ ಉಳಿಸಿಕೊಳ್ಳುತ್ತಾರೆ ಇಲ್ಲವೇ ಅದಷ್ಟು ಶೀಘ್ರವಾಗಿ ವಿವಾಹ ಮಾಡುತ್ತಾರೆ.

ಚಿತ್ರದುರ್ಗ ಜಿಲ್ಲೆಯಲ್ಲಿ ೧೪೬ ಜನರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದ್ದು, ಅಕ್ಷರಸ್ಥ ಪುರುಷರು ೪೮ ಹಾಗೂ ೩೦ ಮಹಿಳೆಯರು ಇರುವುದು ತಿಳಿದು ಬಂದಿದೆ. ದಾವಣಗೆರೆ ಜಿಲ್ಲೆಯಲ್ಲಿ ೯೯೨ ಜನಸಂಖ್ಯೆ ಅಧ್ಯಯನಕ್ಕೆ ಆಯ್ದುಕೊಳ್ಳಲಾಗಿತ್ತು. ಅವರಲ್ಲಿ ಮಹಿಳೆಯರು ೮೫ ಮತ್ತು ಪುರುಷರು ೧೮೧ರಷ್ಟು ಮಾತ್ರ ಅಕ್ಷರಸ್ಥರಾಗಿರುವುದು ದಾಖಲಾಗಿದೆ. ಕ್ರಮವಾಗಿ ೧೮% ಮತ್ತು ೩೩.೪%ರಷ್ಟಿದೆ. ಬಿಜಾಪುರ ಜಿಲ್ಲೆಯು ಕನಿಷ್ಟ ಶೈಕ್ಷಣಿಕ ಪ್ರಗತಿಯನ್ನು ಹೊಂದಿರುವುದು ತಿಳಿದುಬಂದಿದೆ. ಪುರುಷರಲ್ಲಿ ೩೨.೯% ಮತ್ತು ಮಹಿಳೆಯರಲ್ಲಿ ೫.೨% ಮಾತ್ರ ಇದೆ. ಶಿವಮೊಗ್ಗವು ಶೇ. ೩೯.೭೦ರಷ್ಟು ಪುರುಷರು ಶೇಕಡ ೨೦.೫%ರಷ್ಟು ಮಹಿಳೆಯರು ಅಕ್ಷರಸ್ಥರಾಗಿದ್ದಾರೆ. ೪.೨% ಪುರುಷರು ೨೦.೫%ರಷ್ಟು ಮಹಿಳೆಯರು ಮೈಸೂರು ಜಿಲ್ಲೆಯ ಬುಂಡೇಬೆಸ್ತರ ಅಕ್ಷರಸ್ಥರ ಪ್ರಮಾಣ ದಾಖಲಾಗಿದೆ.

ಹಾಸನ ಜಿಲ್ಲೆಯಲ್ಲಿ ಪುರುಷ ಮತ್ತು ಮಹಿಳೆಯರು ಶೈಕ್ಷಣಿಕ ಮಟ್ಟ ಕ್ರಮವಾಗಿ ಶೇಕಡ ೨೭ ಮತ್ತು ೧೧.೯ರಷ್ಟಿದೆ. ಮಂಡ್ಯ ಜಿಲ್ಲೆಯೂ ಸಹಾ ಕ್ರಮವಾಗಿ ಶೇಕಡ ೭% ಮತ್ತು ೧೧.೯ರಷ್ಟಿರುವುದು ಕಂಡುಬಂದರೆ ಕೊಪ್ಪಳವು  ಹಿಂದುಳಿದ ಜಿಲ್ಲೆಯೆಂದು ಅಪಖ್ಯಾತಿಹೊಂದಿದ್ದರು, ಬುಂಡೇಬೆಸ್ತರು ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿಯನ್ನು ಹೊಂದಿರುವುದು ಸಮಾಧಾನಕರವಾಗಿದೆ. ಅಂದರೆ ಪುರುಷರಲ್ಲಿ ಶೇ. ೫೪.೪. ಹಾಗೂ ಸ್ತ್ರೀಯರಲ್ಲಿ ಶೇ. ೩೦.೨ ರಷ್ಟು ಅಕ್ಷರಸ್ಥರಿರುವುದು ಅಧ್ಯಯನದಿಂದ ತಿಳಿದುಬಂದಿದೆ.

ಅರೆ-ಅಲೆಮಾರಿಗಳಾದ ಬುಂಡೇಬೆಸ್ತರ ಪ್ರಗತಿಗಾಗಿ ಸರ್ಕಾರಗಳು ಅನೇಕ ದಶಕಗಳಿಂದಲೂ ಪ್ರಯತ್ನ ಮಾಡುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. (ಅನುಬಂಧ ಗಮನಿಸಿರಿ) ಆದರೆ ಇವರ ಕಸುಬು ಆ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸುತ್ತಿದೆ. ಸಮುದಾಯದ ಮನಃ ಪರಿವರ್ತನೆಯಾಗದ ಹೊರತು ಏಳಿಗೆ ಕಷ್ಟಸಾಧ್ಯ. ಉದಾಹರಣೆಗೆ ಇಂದು ಗ್ರಾಮೀಣ ಪ್ರದೇಶಗಳಲ್ಲಿನ ಕಳೆದ ಒಂದೆರಡು ದಶಕದ ಅನುಭವವನ್ನು ಗಮನಸಿ ಇಂದು ಅವರೂ ಸಹಾ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ನೀಡಲು ತಮ್ಮ ಮಕ್ಕಳನ್ನು ಆಂಗ್ಲ ಮಾದ್ಯಮದ ಶಿಕ್ಷಣ ಕೊಡಿಸಲು ಮುಂದಾಗಿದ್ದಾರೆ. ಇದು ಯಾವುದೇ ಜನಪ್ರಿಯ ಸರ್ಕಾರದ ಯೋಜನೆಯೂ ಅಲ್ಲ ಅಥವಾ ಕಾಯಿದೆಯೂ ಅಲ್ಲ. ಅದನ್ನೇ ಸರ್ಕಾರ ಇಂದು ಕಾನೂನು ಬದ್ಧಗೊಳಿಸುತ್ತಿರುವುದು ಗ್ರಾಮೀಣ ಜನರಲ್ಲಿ ಉಂಟಾಗಿರುವ ಬದಲಾವಣೆ ಯಾವ ಪ್ರಮಾಣದ್ದು ಎಂಬುದು ಸ್ಪಷ್ಟವಾಗುತ್ತದೆ.

ಈ ನಿಟ್ಟಿನಲ್ಲಿ ಬುಂಡೇಬೆಸ್ತರ ಪುರುಷರು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕಡ್ಡಾಯವಾಗಿ ಕೊಡಿಸುವುದೊಂದೇ ಇದಕ್ಕಿರುವ ಸೂಕ್ತ ಪರಿಹಾರವಾಗಿದೆ.

ವೈದ್ಯ ಪದ್ಧತಿ

ಅಲೆಮಾರಿ ಸಮುದಾಯಗಳು ಪ್ರತಿಯೊಂದರಲ್ಲೂ ಸ್ವಾವಲಂಬಿಗಳು ತಮಗೆ ಆಕಸ್ಮಿಕವಾಗಿ ರೋಗಗಳಿಗೆ ಪ್ರಕೃತಿಯನ್ನು ಹೆಚ್ಚು ಅವಲಂಬಿಸಿದ್ದಾರೆ. ಏಕೆಂದರೆ ಅದಕ್ಕೆ ತಮ್ಮೆಲ್ಲ ನಿರೀಕ್ಷೆಗಳನ್ನು  ಪೂರೈಸುವ  ಸಾಮಾರ್ಥ್ಯವಿದೆ ಎಂಬುದು ತನ್ನ ಅನುಭವದಿಂದ ತಿಳಿದುಕೊಂಡಿದ್ದಾರೆ. ಅದು ಆತನ ಯಾವುದೇ ರೋಗಗಳಿಗೆ ಪ್ರತ್ಯೇಕವಾಗಿ ಅಥವಾ ಪರೋಕ್ಷವಾಗಿ ಚಿಕಿತ್ಸೆಯಾಗಿ ಸಹಕಾರಿಯಾಗುತ್ತದೆ. ಆಹಾರ ಕ್ರಮದಲಿ ವ್ಯತ್ಯಾಸ ವಾತಾವರಣದ ಬದಲಾವಣೆ, ಆಕಸ್ಮಿಕ ಅಪಘಾತಗಳು ಕಾರಣ. ಒಟ್ಟಾರೆ ಮಾನವನ ಬದುಕಿನಲ್ಲಿ ಅನಾರೋಗ್ಯ ತಲೆದೋರುವುದು ಸಾಮಾನ್ಯ. ಅದಕ್ಕಾಗಿ ತಮ್ಮ ಸುತ್ತಮುತ್ತಲೇ ಲಭ್ಯವಿರುವ ಸೊಪ್ಪು-ಸೆದೆ, ನಾರು- ಬೇರು, ಹೂವು- ಮೊಗ್ಗು, ಹಣ್ಣು- ಕಾಯಿ, ಚಿಗುರು-ಎಲೆ, ರಸ-ಅಂಟು ಇತ್ಯಾದಿಯನ್ನು ಬಳಸಿಕೊಂಡು ರೋಗಗಳಿಗೆ ಪರಿಹಾರವನ್ನು ಕಂಡುಕೊಂಡಿದ್ದಾರೆ. ಇದಕ್ಕೆ ಬುಂಡೇಬೆಸ್ತರು ಹೊರತಾಗಿಲ್ಲ.

ಅಧ್ಯಯನದಿಂದ ತಿಳಿದು ಬಂದ ಮಾಹಿತಿಯ ಪ್ರಕಾರ ಯೌವನದಲ್ಲಿ ಆರೋಗ್ಯವಾಗಿರುತ್ತಾರೆ. ವಯಸ್ಸಾದಂತೆ ಸಮುದಾಯದ ಜನರಿಗೆ ಅಸ್ತಮ, ಕ್ಷಯ, ತುರಿಕಜ್ಜಿ. ನೀರುಗುಳ್ಳೆ. ಜಾಂಡೀಸ್‌, ಕಾಲು ಕೈ ಸೆಳೆದಂತಹ ರೋಗಗಳು ಕಾಡುತ್ತವೆ. ಅದಕ್ಕೆ ಪರಿಹಾರವಾಗಿ ಇವರು ಮೂರು ದೈವದ ಹರಕೆ ಮಾಡಿಕೊಳ್ಳುವುದು

ನಾಟಿ ವೈದ್ಯ

ನೀರಾವು ಕಚ್ಚಿದಾಗ ೩ ಬೊಗಸೆ ಕೊಳಕು ನೀರು ಕುಡಿಯುವುದು. ಕೆಮ್ಮು ಜ್ವರ ಬಂದರೆ ಸೊಪ್ಪುಗಳ ರಸ ಸೇವನೆ ಅಂದರೆ ಕಳ್ಳಿಗಿಡದ ಕುಡಿ ಜೊತೆ ಇಸ್ಕಪುಡಿ ಮಾಡಿ ಉಪ್ಪಿನೊಂದಿಗೆ ಬೆರಸಿ ತಿಂದರೆ ಕೆಮ್ಮು ಗುಣವಾಗುತ್ತದೆ. ಗಂಟಲು ನೋವಿಗೆ ಎಕ್ಕೆ ಹಾಲು ಮೆಣಸಿನಪುಡಿ ನುಂಗುವುದು ಜಾಂಡೀಸ್‌ ರೋಗಕ್ಕೆ ನೆಲ ನೆಲ್ಲಿಸೊಪ್ಪಿನ ರಸವನ್ನು ಮೇಕೆ ಹಾಲಿನಲ್ಲಿ ಹಾಕಿ ಕುಡಿಯುವುದು. ಇದನ್ನು ಕೈಮುಸುಗ ಎನ್ನುವರು. ಉಸಿರಾಟದ ತೊಂದರೆಗೆ ಬೇರಿನ ದಂಡೆಕಟ್ಟುವರು.

ಆಧುನಿಕ ಔಷಧಿ

ಇತ್ತೀಚೆಗೆ ನಾಟಿ ವೈದ್ಯ ಬಲ್ಲ ಹಿರಿಯರು ಕಡಿಮೆಯಾಗುತ್ತಿರುವ ಕಾರಣ ಮುಂದಿನ ಪೀಳಿಗೆಗೆ ಅದರ ಜ್ಞಾನವನ್ನು ತಿಳಿಸದೆ ಯಾವುದೇ ಕಾಯಿಲೆಗೆ ನೇರವಾಗಿ ಆಸ್ಪತ್ರೆಗೆ ಹೋಗಿ ಆಧುನಿಕ ವೈದ್ಯದ ಚಿಕಿತ್ಸೆ ಪಡೆಯುತ್ತಿದ್ದಾರೆ.

ದೈವಗಳಿಗೆ ಹರಕೆ ಮಾಡಿಕೊಳ್ಳುವುದು

ತಮ್ಮನ್ನು ಸದಾ ಕಾಯುತ್ತಿರುವವನು ದೇವರು ಆದ್ದರಿಂದ ಅವರವರ ಕುಲದೈವಗಳಿಗೆ ಹರಕೆ ಮಾಡಿಕೊಂಡು ತಮಗೆ ಬಂದಿರುವ ಕಾಯಿಲೆಗಳನ್ನು ಗುಣಪಡಿಸಲೆಂದು ಬೇಡಿಕೊಳ್ಳುತ್ತಾರೆ. ಉದಾಹರಣೆಗೆ ಅಮ್ಮ, ಗದ್ದದಮಾರಿ, ಮಂಡಿನೋವು ಇತ್ಯಾದಿ.

ಆಡಳಿತ ವ್ಯವಸ್ಥೆ

ಅಲೆಮಾರಿ ಸಮುದಾಯಗಳಿಗೆ ರಾಷ್ಟ್ರವು ಒಪ್ಪಿಕೊಂಡಿರುವ ಸಂವಿಧಾನದ ಕಲ್ಪನೆ ಇಲ್ಲ. ಅಥವಾ ತಾನಿರುವ ಭೌಗೋಳಿಕ ಎಲ್ಲೆಯ ನಿರ್ಬಂಧಗಳಿಲ್ಲದೆ. ತಮ್ಮದೇ ಆದ ಒಂದು ವ್ಯವಸ್ಥೆಯನ್ನು ಪಾಲೊಸಿಕೊಂಡು ಬದುಕುವ ಸರ್ವ ಸ್ವತಂತ್ರರು. ಅದಕ್ಕಾಗಿಯೇ ಸುಮಾರು ವರ್ಷಗಳವರೆಗೆ ಅಲೆಮಾರಿ, ಆರೆ -ಅಲೆಮಾರಿಗಳ ಜನಗಣತಿಯೇ ಸ್ಪಷ್ಟವಾಗಿ ಲಭ್ಯವಿರಲಿಲ್ಲ. ಅವರು ಯಾರ ಮರ್ಜಿಯನ್ನು ನಂಬಿ ಬದುಕು ನಡೆಸುವುದಿಲ್ಲ. ಆದರೆ ಈಗ ಬದಲಾದ ವ್ಯವಸ್ಥೆಯಲ್ಲಿ ಅನಿವಾರ್ಯವಾಗಿ  ಆರೆ -ಅಲೆಮಾರಿಗಳಲ್ಲಿ ಒಬ್ಬರಾದ ಬುಂಡೇಬೆಸ್ತರು ಬದುಕು ಸಾಗಿಸುತ್ತಿದ್ದಾರೆ. ತಮ್ಮದನ್ನು ಬಿಟ್ಟುಕೊಡದೆ ಉಳಿಸಿಕೊಂಡಿದ್ದಾರೆ. ಕರ್ನಾಟಕವನ್ನು ಅವರ ಅನುಕೂಲಕ್ಕೆ ಪೂರಕವಾಗಿ ವಲಯಗಳಾಗಿ ವಿಂಗಡಿಸಿಕೊಂಡಿದ್ದಾರೆ. ಆಯಾ ವಲಯದಲ್ಲಿ ಇರುವ ಸಮುದಾಯದ ಜನರಿಗೆ ಓರ್ವ ಯಜಮಾನನಿರುತ್ತಾನೆ. ಈತ ಏಳೂರು ಗೌಡ. ಜೊತೆಗೆ ಗ್ರಾಮವಾರು ಓರ್ವ ಯಜಮಾನನಿರುತ್ತಾನೆ. ಇವರಿಗೆ ಸಹಾಯಕರಾಗಿ ೫ ಜನ ಇತರ ಯಜಮಾನನಿರುತ್ತಾರೆ. ಸಮುದಾಯಕೆ ಸಂಬಂಧಿಸಿದ ಸುದ್ದಿಯನ್ನು ಆಗಿಂದಾಗ್ಗೆ ತಿಳಿಸುವ ಸಲುವಾಗಿ ಓರ್ವ ವ್ಯಕ್ತಿಯನ್ನು ನೇಮಿಸಿಕೊಂಡಿರುತ್ತಾರೆ. ಈತನನ್ನು ‘ನಾಯಕ’ ಎಂದು ಕೆರೆಯುವರು.

ವರ್ಷದಲ್ಲಿ ಒಮ್ಮೆ ಜರುಗುವ ದೈವಕ್ಕೆ ಸಂಬಂಧಿಸಿದ  ಜಾತ್ರೆ- ಉತ್ಸವದಲ್ಲಿ ಆ ದೈವಕ್ಕೆ ನೇಮಕವಾದ ಪೂಜಾರಿಯು ಏಳೂರು ಗೌಡನ ಆದೇಶದಂತೆ ಕೆಲಸ ನಿರ್ವಹಿಸುತ್ತಾನೆ. ಪ್ರಸ್ತುತ ಕರ್ನಾಟಕದಲ್ಲಿ ಮೈಸೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಬೆಳಗಾಂ, ಧಾರವಾಡ ಮತ್ತು ಬಿಜಾಪುರ ಪ್ರದೇಶದಲ್ಲಿ ಸಮುದಾಯದ ಕೇಂದ್ರಗಳಿವೆ. ಆಯಾ ಪ್ರದೇಶಕ್ಕೆ ಸೀಮಿತಗೊಂಡಂತೆ ಆಡಳಿತ ವ್ಯವಸ್ಥೆಯ ನಿರ್ವಹಣೆ ನಡೆಯುತ್ತದೆ.

ನ್ಯಾಯ ಪದ್ಧತಿ

ಇದು ಸಮುದಾಯದ ಆಡಳಿತ ವ್ಯವಸ್ಥೆಯ ಬಹಳ ಪ್ರಮುಖ ಅಂಶವಾಗಿದೆ. ಏಕೆಂದರೆ ಇವರಿಗೆ ಪೊಲೀಸ್‌ ನ್ಯಾಯಾಲಯದ ಸಹವಾಸ ಬೇಡವಾಗಿದೆ. ಪ್ರತಿನಿತ್ಯ ದುಡಿದು ಬದುಕು ಸಾಗಿಸುವ ಇವರಲ್ಲಿ ಉಂಟಾಗಬಹುದಾದ ವೈಮನಸ್ಸುಗಳು ಸಣ್ಣ ಪುಟ್ಟದ್ದಾಗಿರುತ್ತವೆ. ಒಡೆದಾಟ, ಬಡಿದಾಟ, ವಿವಾಹ ವಿಚ್ಛೇದನ ಇತ್ಯಾದಿ ಪಿರ್ಯಾದುಗಳೇ ಹೆಚ್ಚು. ಇದಕ್ಕಾಗಿ ಪೊಲೀಸ್‌ ಮತ್ತು ನ್ಯಾಯಾಲಯಗಳನ್ನು ಅವಲಂಬಿಸಿದರೆ ಬದುಕೇ ಸಾಗುವುದಿಲ್ಲ. ಆದ್ದರಿಂದ ಒಂದು ವರ್ಷದಲ್ಲಿ ಒಮ್ಮೆ ಜರುಗುವ ತಮ್ಮ ಕುಲ ದೈವದ ಜಾತ್ರೆಯಲ್ಲಿ ಸಮುದಾಯವೆಲ್ಲವೂ ಒಂದೆಡೆ ಸೇರಿದಾಗ ಕೊನೆಗೆ ದಿನದಂದು ಆ ವರ್ಷದ ನ್ಯಾಯ ನಿರ್ಣಯದ ವ್ಯವಸ್ಥೆ ನೆರೆವೇರುತ್ತದೆ.

ಶಿಕ್ಷೆ ಕ್ರಮ

ಸಾಮಾನ್ಯವಾಗಿ ತಪ್ಪಿತಸ್ಥನೆಂದು ತೀರ್ಮಾನ ಮಾಡಿ ನಿರ್ಣಯ ಆದ ಬಳಿಕ ದಂಡ ವಿಧಿಸುವುದಕ್ಕೆ ಏಳೂರು ಗೌಡನಿಗೆ ಪೂರ್ಣ ಅಧಿಕಾರವಿರುತ್ತದೆ. ಉಳಿದ ಗ್ರಾಮ ಮಟ್ಟದ ಯಜಮಾನರ ಜೊತೆ ಚರ್ಚಸಿ ೧೦೧, ೧೦೦೧, ೫೦೦೧, ೧೦೦೦೧ ರೂಪಾಯಿಗಳಷ್ಟು ದಂಡ ವಿಧಿಸುವುದುಂಟು. ದಂಡ ಕಟ್ಟಲು ಸಿದ್ಧವಿಲ್ಲದಿದ್ದರೆ ಆತನನ್ನು ಸಮುದಾಯದಿಂದ ಭಹಿಷ್ಕರಿಸುವ ಹಕ್ಕು ಈ  ನ್ಯಾಯ ಕಟ್ಟೆಗಿರುತ್ತದೆ.

ವಿವಾಹ  ವಿಚ್ಛೇದನ ಬಯಸಿ ಬಂದ ಪಿರ್ಯಾದುಗಳನ್ನು ಎರಡು ಕುಟುಂಬಗಳ ಸಮಕ್ಷಮದಲ್ಲಿ ವಿಚಾರಣೆಗೆ ಒಳಪಡಿಸುತ್ತಾರೆ. ಪರಸ್ಪರ ಹೊಂದಾಣಿಕೆಗೆ ಒಪ್ಪಿಸಲು ಪ್ರಯತ್ನಿಸುವರು. ಅದಕ್ಕೆ ಸಿದ್ಧರಿಲ್ಲದ ಪಕ್ಷದಲ್ಲಿ ವಿಚ್ಛೇದನಕೆ ಅನುಮತಿ ನೀಡುತ್ತಾರೆ. ವಿಚ್ಛೇದನ ಬಯಸಿದವರ ಕಡೆಯಿಂದ ವಿವಾಹದ ಖರ್ಚನ್ನು ಕೊಡಿಸುವರು. ನ್ಯಾಯ ಸ್ಥಾನದ ಗೌಡನ ಮಾತುಗಳಿಗೆ ಸರಿಯಾಗಿ ಪ್ರತಿಕ್ರಿಯಿಸದೆ ವಾದ ಮಾಡುವ ವ್ಯಕ್ತಿಯನ್ನು ದೇವರ ಮುಂದೆ ಆಣೆ ಮಾಡಿಸುವರು. ಆಗ ಆತನು ತಪ್ಪನ್ನು ಒಪ್ಪಿಕೊಳ್ಳುವುದುಂಟು.

ಒಟ್ಟಾರೆ ತಮ್ಮ ಜೀವನಕ್ರಮ, ಆರ್ಥಿಕ ಸ್ಥಿತಿಗತಿ ಎಲ್ಲವನ್ನು ಗಮನಿಸಿ ಇಂಥದೊಂದು ವಾರ್ಷಿಕ ಸೇರ್ಪಡೆ ಆಗುವುದನ್ನು ವ್ಯವಸ್ಥೆ ಮಾಡಿಕೊಂಡಿರುವುದು ತುಂಬಾ ಉಪಯುಕ್ತವಾಗಿದೆ. ಇಂಥ ಅರೆ- ಅಲೆಮಾರಿ  ಸಮುದಾಯಗಳಿಗೆ ಇದು ಅಗತ್ಯ ಹಾಗೂ ಅನಿವಾರ್ಯ. ಇದರಿಂದ ಯಾವುದೇ ನಿರ್ಣಯಗಳು ವರ್ಷಗಟ್ಟಲೆ ಮುಂದೆ ಹೋಗುವುದಿಲ್ಲ. ನೀಡಿದ ನಿರ್ಣಯಕ್ಕೆ ಬದ್ಧರಾಗುವ ಅನಿವಾರ್ಯವು ಪ್ರತಿಯೊಬ್ಬನಿಗಿದೆ. ಇಲ್ಲವಾದರೆ ಆತ ಬಹಿಷ್ಕಾರಕ್ಕೆ ಒಳಗಾಗಿ ಬದುಕುವುದು ಆಗುವುದಿಲ್ಲ ಎಂಬ ಭಯವಿರುತ್ತದೆ. ಮಾನವ ಸಂಘ ಜೀವಿ. ಒಂಟಿಯಾಗಿ ಬದುಕಲು ಆಸಾಧ್ಯ. ಆದ್ದರಿಂದ ಎಂಥಹ ಅಪರಾಧಿಯೇ ಆಗಿರಲಿ ಬಹಿಷ್ಕಾರಕ್ಕೆ ಹೆದರುವನು. ಇದು ಸಮುದಾಯದ ಗೌಡನು ವಿಧಿಸುವ ಅತಿ ಕಠಿಣ ಶಿಕ್ಷೆಯಾಗಿದೆ.