ಪಾರಂಪರಿಕ ಕಸುಬು

ಆದಿಮಾನವನಿಗೆ ಆಹಾರ ಹುಡುಕುವುದೇ ಪೂರ್ಣ ಪ್ರಮಾಣದ ಕಸುಬಾಗಿತ್ತು. ಕ್ರಮೇಣ ಪಶುಪಾಲನೆ ಹಾಗೂ ಕೃಷಿ ಮಾಡುವುದನ್ನು ಕಲಿತ. ಆನಂತರ ಮಾನವನ ಜೀವನ ಶೈಲಿಯಲ್ಲಿ ಆಪಾರ ಬದಲಾವಣೆಗಳು ಕಂಡುಬಂದವು. ಒಟ್ಟಾರೆ ಸದಾ ಸಂಚಾರಿಯಾಗಿದ್ದವನು ಒಂದು ಕಡೆ ಖಾಯಂ ಅಥವಾ ತಾತ್ಕಾಲಿಕವಾಗಿ ನೆಲೆ ನಿಲ್ಲುವುದು ಅನಿವಾರ್ಯವಾಯಿತು. ಅಂದಿನಿಂದ ಮೊದಲುಗೊಂಡು ಮಾನವನು ಬದುಕಿನ ನಿರ್ವಹಣೆಗಾಗಿ ನುರಾರು, ಕಸುಬುಗಳನ್ನು ಸೃಷ್ಟಿಸಿಕೊಂಡಿದ್ಡಾನೆ. ಪ್ರತಿಯೊಬ್ಬರು ತಮಗೆ ಆಸಕ್ತಿಯುಳ್ಳ ಹಾಗೂ ಹೆಚ್ಚು ಲಾಭದಾಯಕ ಎಂದು ಅನಿಸಿದ ಕಸುಬನ್ನು ಅವಲಂಬಿಸಿ ಬದುಕಲು ಪ್ರಯತ್ನಿಸುವರು. ಪಾರಂಪರಿಕ ಕಸುಬುಗಳ ಸಂದರ್ಭದಲ್ಲಿ ಯಾವುದೇ ಬದಲಾವಣೆಯಿಲ್ಲದೆ ಅದನ್ನೇ ಅಲ್ಪ ಸ್ವಲ್ಪ ಆಧುನಿಕಗೊಳಿಸಿ ಮುಂದುವರಿಸುವುದು ಕಂಡು ಬಂದಿದೆ. ಒಂದು ಹೇಳಿಕೆಯ ಪ್ರಕಾರ ಚಕ್ರವರ್ತಿ ಶಿವಾಜಿ ಮಹಾರಾಜನ ಕಾಲದಲ್ಲಿ ಬುಂಡೇಬೆಸ್ತರು ಕಾರಣಾಂತರಗಳಿಂದ ಕರ್ನಾಟಕದ ಕಡೆಗೆ ವಲಸೆ ಬಂದರು ಎಂಬುದು ತಿಳಿದು ಬರುತ್ತದೆ. ಆ ಘಟನೆಯ ಅನಂತರದಲ್ಲಿ ಬುಂಡೇಬೆಸ್ತರು ಮೀನು ಹಿಡಿದು ಅದನ್ನು ಮಾರಾಟ ಮಾಡಿ ಬಂದ ಹಣದಿಂದ ಜೀವನ ನಿರ್ವಹಿಸುವುದನ್ನು ರೂಢಿಸಿಕೊಂಡಿದ್ದಾರೆ. ಮೀನು ಹಿಡಿಯುವ ವೃತ್ತಿ ಅಂದರೆ ‘ಬೆಸ್ತ’ , ‘ಅಂಬಿಗ’, ‘ಮೇನೆ”ಪಲ್ಲಕ್ಕಿ’ ಹೊರುವವವು ಎಂಬ ಅರ್ಥ ವಿವರಣೆಗಳಿವೆ. ಪ್ರಸ್ತುತ ವಿದ್ಯಮಾನವನ್ನು ಗಮನಿಸಿದಾಗ ಇವರದು ಮೀನು ಹಿಡಿಯುವ ವೃತ್ತಿ ಎಂದು ಸ್ಪಷ್ಟವಾಗಿ ಪರಿಗಣಿಸಲಾಗಿದೆ. ಏಕೆಂದರೆ ಇಂದಿಗೂ ಬಹುಪಾಲು ಜನರು ಅದೇ ವೃತ್ತಿಯನ್ನು ಅವಲಂಬಿಸಿರುವುದೇ ಇದಕ್ಕೆ ಆಧಾರವಾಗಿದೆ.

ಒಂದೇ ಕಸುಬನ್ನು ಆಧರಿಸಿದ ಸಮುದಾಯ ಕಾಲಾನುಕ್ರಮದಲ್ಲಿ ಬೇರೊಂದು ಕಸುಬನ್ನು ಅವಲಂಬಿಸಿವುದು ಸಾಮಾನ್ಯ ಸಂಗತಿ.  ಜನಸಂಖ್ಯೆ ಹೆಚ್ಚಳ ಪಾರಂಪರಿಕ ಕಸುಬನ್ನು ನಂಬಿ ವರ್ಷದ ಎಲ್ಲಾ ಕಾಲದಲ್ಲೂ ಜೀವನ ಸಾಗಿಸುವುದು ದುಸ್ತರವಾಗಿ ಕಂಡು ಬಂದುದರ ಪರಿಣಾಮ ಈ ಬೆಳವಣಿಗೆ ಕಂಡುಬಂದಿದೆ. ಬೇಸಿಗೆಯ ಕಾಲದಲ್ಲಿ ಎಲ್ಲಾ ಕೆರೆಗಳು ಹಾಗೂ ಕೆಲವೂ ನದಿಗಳ ಹರಿವು ನಿಂತಾಗ ಮೀನು ಹಿಡಿಯುವುದನ್ನು ತಾತ್ಕಲಿಕವಾಗಿ ನಿಲ್ಲಿಸುವುದು ಅನಿವಾರ್ಯವಾಗಿತ್ತು. ಅಂತಹ ಸಮಯದಲ್ಲಿ ಕೆಲವರು ತೊಗಲು ಗೊಂಬೆ ಆಟವನ್ನು ಆಡಿಸುವುದಕ್ಕೆ ತೊಡಗಿಸಿ ಕೊಂಡಿದ್ದಾರೆ. ಆ ಆಟದಲ್ಲಿ ಹಾಸ್ಯಕ್ಕಾಗಿ ಶಿಳ್ಳೇಕ್ಯಾತ ಅಥವಾ ಕಿಳ್ಳೇಕ್ಯಾತ  ಪಾತ್ರವೊಂದನ್ನು ಸೃಷ್ಟಿಸಿಕೊಂಡಿದ್ಡಾರೆ. ಅದು ಜನರಿಗೆ  ಹೆಚ್ಚು ಮೆಚ್ಚುಗೆಯಿಂದ ಕಾರಣ ಈ ತೊಗಲು ಬೊಂಬೆ ಆಟ ಆಡಿಸುವವರನ್ನು ಕಿಳ್ಳೇಕ್ಯಾತ  ಅಥವಾ ಶಿಳ್ಳೇಕ್ಯಾತ ಎಂದು ಕರೆಯುವುದನ್ನು ರೂಢಿಸಿಕೊಂಡರು. ಅಂದಿನಿಂದ ಇವರು ಶಿಳ್ಳೇಕ್ಯಾತ ಅಥವಾ ಕಿಳ್ಳೇಕ್ಯಾತರು ಎಂದೇ ಹೆಸರುವಾಸಿಯಾದರು. ಮುಂದುವರಿದು ಈ ಕಸುಬನ್ನು ಆರಂಭಿಸಿದ ಬುಂಡೇಬೆಸ್ತರ ಒಂದು ಗುಂಪು ಅದನ್ನೆ ಒಂದು ಉಪ ಕಸುಬಾಗಿ ರೂಢಿಸಿಕೊಂಡರು. ಕ್ರಮೇಣ ಆ ಕಸುಬನ್ನೇ ಪೂರ್ಣ ಪ್ರಮಾಣದಲ್ಲಿ ರೂಢಿಸಿಕೊಂಡ ಪರಿಣಾಮ ಇವರನ್ನು ಕಿಳ್ಳೇಕ್ಯಾತ  ಅಥವಾ  ಶಿಳ್ಳೇಕ್ಯಾತರು ಎಂದೇ ಗುರುತಿಸ ತೊಡಗಿದರು. ಆಗ ಸಹಜವಾಗಿ ಬುಂಡೇಬೆಸ್ತರಲ್ಲೇ ಒಂದು ಗುಂಪು ಪ್ರತ್ಯೇಕವಾಯಿತು. ಈ ಕಸುಬನ್ನು ರೂಢಿಸಿಕೊಂಡ ಪ್ರದೇಶಗಳೆಂದರೆ ದಾವಣೆಗೆರೆ ಶಿವಮೊಗ್ಗ,  ಚಿಕ್ಕಮಗಳೂರು ಹಾವೇರಿ ಜಿಲ್ಲೆಗಳಾಗಿವೆ.

ಕುಟುಂಬ

ಇದೇ ಗುಂಪಿನ ಮತ್ತೊಂದು ಒಳಪಂಗಡವನ್ನು ‘ಕುಟುಂಬ’ ಎಂದು ಕರೆಯುವರು. ಇವರು ಹುಬ್ಬಳ್ಳಿ, ಧಾರವಾಡ ಪ್ರದೇಶದಲ್ಲಿ ನೆಲೆಗೊಂಡಿದ್ದಾರೆ  ಮೀನುಗಾರಿಕೆಯನ್ನು ಮೂಲ ಕಸುಬಾಗಿ ಅವಲಂಬಿಸಿದ್ದಾರೆ. ದೈಹಿಕವಾಗಿ ದೃಢಕಾಯರಾಗಿರುವ ಇವರು ಕುಸ್ತಿಪಟುಗಳು ಆಗಿದ್ದಾರೆ. ಆದ್ದರಿಂದಲೇ ಇವರನ್ನು ಕುಟುಂಬ ಎಂಬ ಹೆಸರಿನಿಂದ ಕರೆಯುವರು.

ಬಾಗಡಿ

ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿಯಾದ ಬೆಳಗಾಂ ಜಿಲ್ಲೆಯಲ್ಲಿ ಬಾಗಡಿಗಳು ಎಂಬ ಹೆಸರಿನಿಂದ ಕರೆಸಿಕೊಳ್ಳುವ ಗುಂಪು ಮೂಲತಃ ಬುಂಡೇಬೆಸ್ತರೇ ಆಗಿದ್ಡಾರೆ. ಇವರ ಮೂಲ ಕಸುಬು ಸಹಾ ಇಂದಿಗೂ ಮೀನು ಹಿಡಿಯುವುದೇ ಆಗಿದೆ.

ಪ್ರಸ್ತುತ ಅಧ್ಯಯನವನ್ನು ಬುಂಡೇಬೆಸ್ತರಿಗಷ್ಟೇ ಸೀಮಿತಗೊಳಿಸಿಕೊಳ್ಳಲಾಗಿದೆ. ಏಕೆಂದರೆ ರಾಜ್ಯಾದಾದ್ಯಂತ  ಮೀನು ಹಿಡಿಯುವುದನ್ನು ಕಸುಬಾಗಿಸಿಕೊಂಡವರು ಹಲವಾರು ಸಮುದಾಯಗಳಿವೆ. ಒಂದು ಅಂದಾಜಿನ ಪ್ರಕಾರ  ಗಂಗಾಕುಲ ಅಥವಾ ಗಂಗಾಮತ ಎಂದು ಗುರುತಿಸಿಕೊಂಡವರು. ೯೨ ಒಳ ಪಂಗಡದ ಹೆಸರುಗಳನ್ನು ದಾಖಾಲಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ‘ಬುಂಡೇಬೆಸ್ತ’ ಎಂಬುದು ೪೮ನೇ ಸಂಖ್ಯೆಯಲ್ಲಿ ಸೇರ್ಪಡೆಯಾಗಿದ್ದು ೫೯ನೇ ಸಂಖ್ಯೆಯಲ್ಲಿ ಬುಂಡ ಎಂಬುದು ದಾಖಲಾಗಿದೆ. ಆದರೆ ಬುಂಡೇಬೆಸ್ತರ ಉಪಪಂಗಡವೆಂದು ಈ ಅಧ್ಯಯನದಲ್ಲಿ ಗುರುತಿಸಿರುವ ಕಟುಬರು ಇರುವುದಿಲ್ಲ. ಬದಲಿಗೆ ಕಸಬರು ಎಂಬ ಹೆಸರಿದ್ದು, ಬಾಗಡಿ ಎಂಬ ಹೆಸರು ಇರುವುದಿಲ್ಲ.

ಕಸುಬಿಗೆ ಸಂಬಂಧಿಸಿದ ಪರಿಕರಗಳು

ಮೀನು ಹಿಡಿಯಲು ಬಲೇಬೇಕು. ನೀರಿನಲ್ಲಿ ಮುಳುಗದೆ ತೇಲುವುದಕ್ಕೆ ಇಂದು ದೋಣಿಗಳಿವೆ. ಆದರೆ ಪ್ರಾಚೀನರಲ್ಲಿ ಸೋರೆ ಬುಂಡೆ ತದನಂತರ ತಗಡಿನ ಡಬ್ಬಗಳು, ಮುಂದುವರೆದು ಪ್ಲಾಸ್ಪಿಕ್‌ ಕೊಡಗಳು ಹರಿಗೋಲು ಬುಂಡೇಬೆಸ್ತರ ಕಸುಬಿಗೆ ಸಂಬಂಧಿಸಿದ ಪರಿಕರಗಳು. ಬಲೆಗಳಲ್ಲಿ ಹಲವಾರು ನಮೂನೆಗಳಿವೆ. ಬಲೆಗಳ ಆಧಾರದ ಮೇಲೆ ಹಿಡಿಯುವ ಮೀನಿನಗಾತ್ರ ಮತ್ತು ಪ್ರಮಾಣ ಅವಲಂಬಿಸಿರುತ್ತದೆ. ಅದು ಅವರ ಸಂಪಾದನೆಯನ್ನು ನಿರ್ಧರಿಸುತ್ತದೆ. ಯಾವ ಕಾಲಕ್ಕೆ ಯಾವ ಆಳದ ನೀರಿನಲ್ಲಿ ಯಾವ ಬಲೆ ಎಂಬುದನ್ನು ತಿಳಿದು ಅದಕ್ಕೆ ತಕ್ಕಂತೆ ಬಲೆಯನ್ನು ಹಾಕುವುದುಂಟು ಬೀಸುಬಲೆ, (ಮಾರಿಬಲೆ) ಬಿಡುಬಲೆ, ಗೋರುಬಲೆ, ಕಂಸಿಬಲೆ ಮುಂತಾದ ಬಲೆಗಳಿವೆ.

ಬೀಸುಬಲೆ

ಇದನ್ನು ಒಬ್ಬನೇ ಬಿಡುತ್ತಾನೆ. ೧೦ ಅಡಿಯಿಂದ ೧೫ ಅಡಿ ಅಗಲದ ಬಲೆ ಇದಾಗಿದೆ. ನೀರಿಗೆ ಬಲೆಯನ್ನು ಬೀಸಿ ಒಗೆಯುತ್ತಾನೆ ಆದ್ದರಿಂದ ಇದಕ್ಕೆ ಬೀಸು ಎಂದೇ ಕರೆಯುವರು.

ಬಿಡುಬಲೆ

ಇದು ಅತಿ ದೊಡ್ಡದಾದ ಬಲೆ ನೀರಿನ ಸೆಲೆಯನ್ನು ಅವಲಂಬಿಸಿ ಬಿಡಬಹುದಾಗಿದ್ದು ಕಿಲೋಮೀಟರ್‌ಗಳಷ್ಟು ಉದ್ದವಿರುತ್ತದೆ. ಇದನ್ನು ಸ್ಥಳೀಯವಾಗಿ ಮಾರಿಬಲೆ ಎಂದು ಕರೆಯುವುದೂ ಉಂಟು. ದೋಣಿಗಳನ್ನು ಬಳಸಿ ಅತಿ ವಿಶಾಲವಾದ ಹರಿಯುವ ನದಿಗಳಲ್ಲಿ ಇದರ ಬಳಕೆ ಹೆಚ್ಚು. ಇದಕ್ಕೆ ಲಭ್ಯವಾಗುವ ಮೀನಿನ ಪ್ರಮಾಣವು ಜಾಸ್ತಿ. ಸಾಮಾನ್ಯವಾಗಿ  ಗುತ್ತಿಗೆದಾರರು ಇಂತಹ ಬಲೆಗಳನ್ನು ಬಳಸಿ ಮೀನಿಡಿಯುವುದು ಹೆಚ್ಚಾಗಿ ಕಂಡು ಬರುತ್ತದೆ.

ಗೋರುಬಲೆ

ಇದು ಸ್ಪಲ್ಪ ದೊಡ್ಡದು ಇದನ್ನು ಬುಂಡೇಬೆಸ್ತರು ಹೆಚ್ಚಾಗಿ ಬಳಸುತ್ತಾರೆ. ಸುಮಾರು ೨೦ ಅಡಿಯಿಂದ ೧೦೦ ಅಡಿಗಳಷ್ಟು ಉದ್ದದ ಬಲೆ ಇದಾಗಿದೆ. ಇದನ್ನು ಕೆರೆಗಳಲ್ಲಿ ಕಡಿಮೆ ವಿಸ್ತಾರದ ನದಿಯಲ್ಲಿ ಇದು ಹೆಚ್ಚು ಬಳಕೆಯಲ್ಲಿದೆ. ಲಭ್ಯವಾಗುವ ಮೀನು ದೊಡ್ಡದಾಗಿರುತದೆ.

ಕಂಸಿಬಲೆ

ಅತಿ ಚಿಕ್ಕ ಬಲೆಯಾಗಿದ್ದು ಒಬ್ಬನೇ ಬಿಡುತ್ತಾನೆ. ಕೆರೆ ಅಥವಾ ನದಿಯು ನಿಧಾನಕ್ಕೆ ಹರಿಯುವ ಪ್ರದೇಶದಲ್ಲಿ ಕಂಸಿ ಬಲೆಯನ್ನು ಹಾಕುವರು.

ಕಸುಬಿನ ರೂಪಾಂತರಗಳು

ಯಾವುದೇ ಒಂದು ಕಸುಬು ಎಂದೆಂದಿಗೂ ಅದೇ ರೂಪದಲ್ಲಿ ಮುಂದುವರೆಯುವುದು ಆಸಾಧ್ಯ. ಏಕೆಂದರೆ ಕಾಲಕಾಲಕ್ಕೆ ಅನೇಕ ಬದಲಾವಣೆಗಳಿಗೆ ಒಳಗಾಗುತ್ತಲೇ ಇರುತ್ತದೆ. ಇದು ಅನಿವಾರ್ಯವೂ ಹೌದು. ಉದಾಹರಣೆಗೆ ಆರಂಭದಲ್ಲಿ ಬುಂಡೇಬೆಸ್ತರು ದೈಹಿಕವಾಗಿ ನೀರಿಗಿಳಿದು ಬಲೆಯನ್ನು ಬಿಡುವುದು ಅನಿವಾರ್ಯವಾಗಿತ್ತು. ನೀರಿನಲ್ಲಿ ತೇಲುವ ಸಲುವಾಗಿ ಸೋರೆ ಬುಂಡೆಯನ್ನು ಒಂದು ಕಾಲಘಟ್ಟದಲ್ಲಿ ಬಳಸುವುದು ರೂಢಿಯಲ್ಲಿತ್ತು. ಅದರ ಬಳಕೆಯಿಂದ ಈಜು ಬಾರದೆ ಬುಂಡೆಯನ್ನು ನಂಬಿ ಆಳವಾದ ನದಿಯಲ್ಲಿ ಬಲೆಬಿಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಬುಂಡೆಯು ಕಲ್ಲಿಗೆ ತಗುಲಿ ಒಡೆದ ಪ್ರಯುಕ್ತ ಪ್ರಾಣಪಾಯಗಳಾಗಿದ್ದುಂಟು. ಅದರಿಂದ ಎಚ್ಚರಿಕೆಯ ಪಾಠ ಕಲಿತ ಈ ಸಮುದಾಯ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಾಯಿತು.

ತಗಡಿನ ಡಬ್ಬಗಳನ್ನು ತೇಲುವ ಸಾಧನವಾಗಿ ಬಳಸಿಕೊಂಡರು. ಈ ಡಬ್ಬದ ಎಲ್ಲಾ ರಂಧ್ರಗಳನ್ನು ಭದ್ರವಾಗಿ ಮುಚುವುದು. ಒಂದು ಅಂತರದಲ್ಲಿ ಅವೆರಡನ್ನು ಹಗ್ಗದಿಂದ ಬಿಗಿಯುವುದು, ಬಲೆಬಿಡುವ ವ್ಯಕ್ತಿ ತನ್ನ ಮುಂದೆ -ಹಿಂದೆ ಡಬ್ಬವಂತೆ ಕೂರುವುದು. ಸೈಕಲ್‌ ಮೇಲೆ ಕುಳಿತಂತೆ ಡಬ್ಬದ ಎರಡು ಬದಿಯಿಂದ ಕಾಲನ್ನು ಇಳಿಬಿಟ್ಟು ನೀರನ್ನು ಜಾಡಿಸುವುದರಿಂದ ತೇಲುತ್ತಾ ಮುಂದೆ ಮುಂದೆ ಹೋಗುವನು. ಇದು ಅಷ್ಟೇನು ಅಪಾಯಕಾರಿಯಲ್ಲ ಆದ್ದರಿಂದ ತಗಡಿನ ಡಬ್ಬಗಳು ಬುಂಡೇಬೆಸ್ತರ ಮೀನು ಹಿಡಿಯುವ ಸಂದರ್ಭದಲ್ಲಿ ಹೆಚ್ಚು ಬಳಕೆಯಲ್ಲಿದೆ.  ಇದರಲ್ಲಿ ಒಬ್ಬನೆ ವ್ಯಕ್ತಿ ಇದ್ದರೆ ಸಾಕು. ಈ ಎರಡು ಪದ್ಧತಿಗಳು ಹೆಚ್ಚು ದುಬಾರಿಯಾದುವಲ್ಲ. ಆದರೆ ಹೆಚ್ಚು ದೈಹಿಕ ಶ್ರಮದ ಆಗತ್ಯವಿದೆ.

ಇದರ  ಮುಂದುವರಿದ ಮತ್ತೊಂದು ಪದ್ಧತಿಯೇ ಕೈ ದೋಣಿಗಳು ಬಿದಿರ ಬುಟ್ಟಿಯಿಂದ ಸಿದ್ಧಪಡಿಸಿದ ಈ ಬುಟ್ಟಿಗೆ ನೀರು ಬರದಂತೆ ಒಂದು ನೈಲಾನ್‌ ಅಥವಾ ಸಿಂಥಟಿಕ್‌ ಚೀಲದಿಂದ ಹೊರಮೈಯನ್ನು ಮುಚ್ಚಿ ಅದಕ್ಕೆ ಡಾಂಬರು ಬಳಿಯುವರು. ಇದರಲ್ಲಿ ಒಬ್ಬರಿಗಿಂತ ಹೆಚ್ಚು ಜನರು ಪ್ರಯಾಣಿಸಬಹುದು. ಓರ್ವ ದೋಣಿಯ ಹುಟ್ಟಿ ಹಾಕಿದರೆ ಮತ್ತೋರ್ವ ಬಲೆಯನ್ನು ಬಿಡುತ್ತಾ ಹೋಗುವನು. ದೋಣಿಯಲ್ಲಿ ಸಂಗ್ರಹವಾಗಬಹುದಾದ ನೀರನ್ನು ತೆಗೆದು ಹೊರಹಾಕಲು ಒಬ್ಬ ವ್ಯಕ್ತಿ ಬೇಕಾಗುವುದು. ಇಂದು ಬುಂಡೇಬೆಸ್ತರಲ್ಲಿ ಮಾತ್ರವಲ್ಲ ಮೀನು ಹಿಡಿಯುವ ಪ್ರತಿಯೊಂದು ಸಮುದಾಯವು ಕೈದೋಣಿಯನ್ನು ಬಳಸುವುದು ಸಾಮಾನ್ಯವಾಗಿದೆ.

ಮೀನುಗಾರಿಕೆ ಇಂದು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಬಹು ದೊಡ್ಡ ಉದ್ದಿಮೆಯಾಗಿ ಪರಿವರ್ತನೆಯಾದ ಬಳಿಕ ಈ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳು ಉಂಟಾದವು. ಅದು ಸಮುದ್ರದ ಮೀನುಗಾರಿಕೆಯಲ್ಲಿ ಮಾತ್ರವಲ್ಲ. ನದಿ ಮತ್ತು ಕೆರೆಯಲ್ಲಿಯೂ ಅತ್ಯಾಧುನಿಕ ಯಂತ್ರಗಳನ್ನು ಮತ್ತು ವಿವಿಧ ಮಾದರಿಯ ಬಲೆಗಳನ್ನು ಬಳಸುವುದು ಆರಂಭವಾಯಿತು. ಯಂತ್ರದ ಮೂಲಕ ದೋಣಿ ನಡೆಸುತ್ತಾ ಬಲೆ ಬಿಟ್ಟು ಅತಿ ಶೀಘ್ರದಲ್ಲಿ ಕಡಿಮೆ ಮಾನವ ಶ್ರಮದಿಂದ ಹೆಚ್ಚು ಮೀನು ಹಿಡಿಯುವುದು ಸಾಧ್ಯವಾಯಿತು. ಆದರೆ ಈ ಸೌಲಭ್ಯ ಬುಂಡೇಬೆಸ್ತರಿಗೇನು ಸಂತೋಷದ ಸುದ್ಧಿಯಲ್ಲ. ಏಕೆಂದರೆ ಅನ್ಯ ಸಮುದಾಯದ ಜನರು ಸಹ ತರಬೇತಿಯನ್ನು ಪಡೆದು ಹೆಚ್ಚಿನ ಪ್ರಮಾಣದಲ್ಲಿ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವುದು ಪಾರಂಪರಿಕ ಕಸುಬಿನವರಿಗೆ ದಿಕ್ಕು ತೋಚದಂತಾಗಿದೆ.

ಮೂಲ ಕಸುಬಿನ ಸ್ಥಿತಿ

ಪಾರಂಪರಿಕ ಕಸುಬುಗಳು ಯಾವುವು ತನ್ನ ಮೂಲ ರೂಪದಲ್ಲಿ ಅಥವಾ ಅದೇ ಮೂಲದ ಜನರಲ್ಲಿ ಉಳಿದಿಲ್ಲ. ಏಕೆಂದರೆ ಆಧುನಿಕ ಆವಿಷ್ಕಾರಗಳಿಗೆ ಒಳಗಾಗಿ ಹೊಸ ಹೊಸ ರೂಪವನ್ನು ಪಡೆಯುತ್ತಾ ಹೋಗುತ್ತಿವೆ. ಅನೇಕ ಕಾರಣಗಳಿಗಾಗಿ ಒಂದು ಕಸುಬನ್ನು ಉಳಿಸಿ ಬೆಳೆಸಿಕೊಂಡು ಬಂದ ಸಮುದಾಯದಿಂದಲೇ ಅದು ಸಂಪೂರ್ಣ ದೂರಾಗುವುದುಂಟು. ಪ್ರಸ್ತುತ ಬುಂಡೇಬೆಸ್ತರ ಸ್ತಿತಿಯು ಅದೇ ಆಗಿದೆ. ಒಂದು ಕಾಲಘಟ್ಟದವರೆಗೆ ನದಿ, ಹೊಳೆ, ಕೆರೆಗಳಲ್ಲಿ ಮೀನು ಹಿಡಿಯುವ ಸ್ವಾಮ್ಯ ಇವರದೇ ಆಗಿತ್ತು. ಹೊಸ ಹೊಸ ಆಧುನಿಕ ಮಾದರಿಗಳಿಗೆ ಹೊಂದಿಕೊಳ್ಳದೆ ಹಳೆಯ ಪದ್ಧತಿಯನ್ನು ಅನುಸರಿಸುವುದು ಇವರ ಕಸುಬಿನ ಹಿನ್ನೆಡೆಯಾಗಿದೆ. ಇದಲ್ಲದೆ ಮೀನುಗಾರಿಕೆ ಉದ್ದಿಮೆ ಆರಂಭ, ನದಿ ಕೆರೆಗಳನ್ನು ಗುತ್ತಿಗೆದಾರನಿಗೆ ನೀಡುವುದು. ಈ ಕಸುಬನ್ನು ತರಬೇತಿ ಪಡೆದು ಯಾವುದೇ ಸಮುದಾಯದ ವ್ಯಕ್ತಿ ನಿರ್ವಹಿಸುವುದು ಸಾಧ್ಯವಾದದು ಮೀನು ಹಿಡಿಯುವ ಪಾರಂಪರಿಕ ಕಸುಬಿಗೆ ಉಂಟಾದ ಬಹುದೊಡ್ಡ ನಷ್ಟವೇ ಸರಿ. ಏಕೆಂದರೆ ತಲೆ-ತಲೆಮಾರಿನಿಂದ ಮೀನು ಹಿಡಿದು ಬದುಕಿದ್ದರು ಇಂದು ಮೀನಿನ ಕೆರೆ, ನದಿಗಳನ್ನು ಗುತ್ತಿಗೆ ಹಿಡಿಯುವುದು ಸಾಧ್ಯವಾಗುತ್ತಿಲ್ಲ. ಲಕ್ಷಾಂತರ ರೂಪಾಯಿಗಳನ್ನು ತುಂಬಿ ಕೆರೆ ಅಥವಾ ನದಿಯನ್ನು ಗುತ್ತಿಗೆ ಹಿಡಿಯುವುದು ಸಾಧ್ಯವಾಗದ ಕಾರಣ ಗುತ್ತಿಗೆ ಹಿಡಿದವರ ಹತ್ತಿರ ಬುಂಡೇಬೆಸ್ತರು ಕೇವಲ ಕೂಲಿಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಪಾರಂಪರಿಕ ಕಸುಬನ್ನು ಹೊರತುಪಡಿಸಿ ಅನ್ಯ ಕಸುಬನ್ನು ಕಲಿಯದ ಕಾರಣ ಇಂದು ಅನಿವಾರ್ಯವಾಗಿ ಮೀನು ಹಿಡಿಯುವ ಕೂಲಿ ಕೆಲಸ ಮಾಡಿ ಬದುಕುವ ಸ್ಥಿತಿಯಲ್ಲಿ ಬುಂಡೇಬೆಸ್ತರಿದ್ದಾರೆ. ಆ ಕಾರಣಕ್ಕಾಗಿ ಇವರು ಊರು-ಕೇರಿ, ಮನೆ-ಮಠ ಎಲ್ಲವನ್ನು ತೊರೆದು ಗುತ್ತಿಗೆದಾರನು ಪಡೆದಿರುವ ಕೆರೆಯ ದಂಡೆಯಲ್ಲಿ ಟೆಂಟ್‌ ಅಥವಾ ಗುಡಿಸಲುಗಳನ್ನು ಕಟ್ಟಿಕೊಂಡು ವಾಸಿಸುವುದು ಕಂಡುರುತ್ತದೆ. ಈ ಅಧ್ಯಯನದಿಂದ ತಿಳಿದು ಬಂದ ವರದಿಯ ಪ್ರಕಾರ ಹೆಚ್ಚಿನ ಜನರು ತಮ್ಮ ಮೂಲ ಕಸುಬನ್ನು ತೊರೆದು ಕೃಷಿ ಕೂಲಿ ಮಾಡಲು ಒಲವು ತೋರಿದ್ದಾರೆ. ಏಕೆಂದರೆ ಗುತ್ತಿಗೆದಾರನ ಹಂಗಿನಲ್ಲಿ ಕಡಿಮೆ ಕೂಲಿಗಾಗಿ ವರ್ಷವಿಡೀ ಹಗಲು ರಾತ್ರಿ ಎನ್ನದೇ ದುಡಿಯುವುದರಿಂದ ಬೇಸತ್ತು ಪಾರಂಪರಿಕ ಕಸುಬನ್ನೇ ಬಿಟ್ಟುಕೊಡುವ ಹಂತದಲ್ಲಿದ್ದಾರೆ. ಶೇಕಡ ೫೦ರಷ್ಟು ಜನರು ಈಗಾಗಲೇ ಬದುಕಿಗೆ ಪರ್ಯಾಯ ಮಾರ್ಗಗಳನ್ನು ಕಂಡುಕೊಂಡಿದ್ದಾರೆ.

ಪ್ರಚಲಿತ ಅವಲಂಬಿತ ಕಸುಬುಗಳು

ಕರ್ನಾಟಕದಲ್ಲಿ ಪ್ರಾತಿನಿಧಿಕ ಎಂಟು ಜಿಲ್ಲೆಗಳನ್ನು ಅಧ್ಯಯನಕ್ಕಾಗಿ ಮಾದರಿ ಸಮೀಕ್ಷೆ (Sample Survey)ಗೆ ಒಳಪಡಿಸಲಾಗಿತ್ತು. ಪ್ರತಿ ಜಿಲ್ಲೆಯಲ್ಲಿ ಬುಂಡೇಬೆಸ್ತರು ಮೂಲ ಕಸುಬನ್ನು ತೊರೆದು ಪರ್ಯಾಯ ಕಸುಬನ್ನು ಅವಲಂಭಿಸಿರುವುದು ಕಂಡುಬಂದಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ೩೮ ಕುಟುಂಬಗಳನ್ನು ಅಧ್ಯಯನಕ್ಕಾಗಿ ಆಯ್ಕೆ ಮಾಡಿಕೊಂಡಿದ್ದು ಒಟ್ಟು ಜನಸಂಖ್ಯೆ ೧೪೬ ಆಗಿದೆ. ೬೨ ಮಹಿಳೆಯರು ಮತ್ತು ೮೪ ಪುರುಷರಿದ್ದಾರೆ. ಇವರಲ್ಲಿ ಕೇವಲ ೩ ಪುರುಷರು ಮಾತ್ರ ಮೂಲ ಕಸುಬನ್ನು ಅವಲಂಭಿಸಿದ್ದಾರೆ. ೧೦ ಪುರುಷರು ಕೃಷಿಯನ್ನು, ಪುರುಷರು ಕೃಷಿ ಕೂಲಿಯನ್ನು ೮ ಪುರುಷರು ವ್ಯಾಪಾರವನ್ನು ೭ ಪುರುಷರು ಸರ್ಕಾರಿ ನೌಕರಿಯನ್ನು ಮಾಡುವ ಮೂಲಕ ಬದುಕನ್ನು ನಿರ್ವಹಿಸುವುದು ಕಂಡುಬಂದಿದೆ. ಅದೇ ರೀತಿ ೩ ಮಹಿಳೆಯರು ಕೃಷಿ ಕೂಲಿಯನ್ನು ೧ ಮಹಿಳೆ ವ್ಯಾಪಾರವನ್ನು ಮಾತ್ರ ಅವಲಂಭಿಸಿರುವುದು ದಾಖಲಾತಿಗೆ ಲಭ್ಯವಾಗಿದೆ. ಅಂದರೆ ಚಿತ್ರದುರ್ಗ ಜಿಲ್ಲೆಯಲ್ಲಿ ಬುಂಡೇಬೆಸ್ತರು ಅನ್ಯ ಕಸುಬುಗಳನ್ನು ಅವಲಂಭಿಸಿ ಬದುಕು ಸಾಗಿಸುತ್ತಿರುವುದು ಸ್ಪಷ್ಟವಾಗಿದೆ.

ದಾವಣೆಗೆರೆ ಜಿಲ್ಲೆಯಲ್ಲಿ ೨೩೪ ಕುಟುಂಬಗಳನ್ನು ಅಧ್ಯಯನಕ್ಕಾಗಿ ಆಯ್ದುಕೊಳ್ಳಲಾಗಿತ್ತು. ಒಟ್ಟು ಜನಸಂಖ್ಯೆ ೯೯೨ ಇವರಲ್ಲಿ ೧೮೫ ಪುರುಷರು ಹಾಗೂ ೪೪ ಮಹಿಳೆಯರು ಮೂಲ ಕಸುಬನ್ನು ಮುಂದುವರಿಸದ್ದಾರೆ. ಹಾಗೆಯೇ ೨೬ ಪುರುಷರು ಕೃಷಿಯನ್ನು, ೪೨ ಪುರುಷರು, ೨೮ ಮಹಿಳೆಯರು ಕೃಷಿ ಕೂಲಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೃಷಿಯೇತರ ಚಟುವಟಿಕೆಯಲ್ಲಿ ೧೨ ಪುರುಷರು, ೪ ಮಹಿಳೆಯರು ಕಂಡುಬಂದಿದ್ದಾರೆ. ಬಹಳ ವಿಶೇಷವೆಂದರೆ ೫೬ ಮಹಿಳೆಯರು ಮತ್ತು ೨೬ ಪುರುಷರು ವ್ಯಾಪಾರ ಕ್ಷೇತ್ರದಲ್ಲಿ ದುಡಿಯಲು ತೊಡಗಿಸಿ ಕೊಂಡಿದ್ದಾರೆ. ಸರಕಾರಿ ನೌಕರಿಯಲ್ಲಿ ಕೇವಲ ೬ ಪುರುಷರಿದ್ದಾರೆ. ಖಾಸಗಿ ಕ್ಷೇತ್ರದಲ್ಲಿ ಓರ್ವ ಪುರುಷನಿರುವುದು ಕಂಡುಬಂದಿದೆ. ಉಳಿದ ೫೬೨ ಜನರು ಅವಲಂಬಿಗಳಾಗಿ ೪೩೦ ಜನರು ವಿವಿಧ ಕ್ಷೇತ್ರದ ದುಡಿಮೆಯಲ್ಲಿ ಬದುಕಿರುವ ಚಿತ್ರಣ ನಮಗೆ ತಿಳಿದು ಬರುತ್ತದೆ.

ಬಿಜಾಪುರ ಜಿಲ್ಲೆ ೪೮ ಕುಟುಂಬಗಳನ್ನು ಅಧ್ಯಯನಕ್ಕೆ ಆಯ್ಕೆ ಮಾಡಲಾಗಿತ್ತು. ಒಟ್ಟು ಜನಸಂಖ್ಯೆ ೨೬೫ ಇವರಲ್ಲಿ ಪುರುಷರು ೧೭೦, ಮಹಿಳೆಯರು ಕೇವಲ ೯೫, ಈ ಜಿಲ್ಲೆಯ ವಿಶೇಷತೆ ಏನೆಂದರೆ ೪ ಪುರುಷರು ಮತ್ತು ಓರ್ವ ಮಹಿಳೆ ಮಾತ್ರ ಮೂಲ ಕಸುಬನ್ನು ಮುಮದುವರಿಸಿರುವುದು ಕಂಡುಬಂದಿದೆ. ಕೃಷಿಯಲ್ಲಿ ೨೨ ಪುರುಷರು, ಕೃಷಿ ಕೂಲಿಯಲ್ಲಿ ೩೩ ಪುರುಷರು ಹಾಗೂ ೧೯ ಮಹಿಳೆಯರು ದುಡಿಯುವುದು ದಾಖಲಾತಿಗೆ ದೊರೆತಿದೆ. ೪ ಪುರುಷರು ಓರ್ವ ಮಹಿಳೆ ಕೃಷಿಯೇತರ, ಸರ್ಕಾರಿ ನೌಕರಿಯಲ್ಲಿ ೩ ಪುರುಷರು ಖಾಸಗಿ ಕ್ಷೇತ್ರದ ನೌಕರಿಯಲ್ಲಿ ೪ ಪುರುಷರು ಇರುವುದು ಮಾತ್ರ ಕಂಡುಬಂದಿದೆ. ಆದ್ದರಿಂದ ಈ ಜಿಲ್ಲೆಯಲ್ಲಿ ಬುಂಡೇಬೆಸ್ತರು ಕೂಲಿ ಮಾಡಿ ಅದರಲ್ಲಿಯೂ ಕೃಷಿಕೂಲಿ ಮಾಡಿ ಬದುಕು ಸಾಗಿಸುವವರೇ ಅಧಿಕ ಸಂಖ್ಯೆಯಲ್ಲಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಕೃಷಿಯಲ್ಲಿ ತೊಡಗಿಸಿಕೊಂಡವರು ಸಹಾ ೨೨ ಪುರುಷರಿದ್ದಾರೆ. ಇವರಲ್ಲಿ ಕೆಲವರು ಸರ್ಕಾರ ನೀಡಿದ ಭೂಮಿ ಮತ್ತೆ ಕೆಲವರು ಸ್ವಂತ ಭೂಮಿಯನ್ನು ಹೊಂದಿದ್ದಾರೆ.

ಶಿವಮೊಗ್ಗ ಜಿಲ್ಲೆ ೧೯೪ ಕುಟುಂಬಗಳು ಆದ್ಯಯನಕ್ಕೆ ಒಳಪಟ್ಟಿವೆ. ಒಟ್ಟು ಜನಸಂಖ್ಯೆ ೭೩೩ ಅವರಲ್ಲಿ ೨೯೨ ಪುರುಷರು ೩೪೧ ಮಹಿಳೆಯರು ಇದ್ದಾರೆ. ೧೮೮ ಪುರುಷರು ೮೭ ಮಹಿಳೆಯರು ಮೂಲ ಕಸುಬನ್ನೇ ಇಂದಿಗೂ ಅವಲಂಬಿಸಿರುವುದು ದಾಖಲಾಗಿದೆ. ಕೃಷಿಯೇತರ ೯ ಪುರುಷರು, ೧೬ ಮಹಿಳೆಯರು ಕಂಡು ಬಂದರೆ ವ್ಯವಹಾರದಲ್ಲಿ ೪೫ ಮಹಿಳೆಯರು ಮಾತ್ರ ಕಂಡುಬರುತ್ತಾರೆ. ಸರ್ಕಾರಿ ನೌಕರಿಯಲ್ಲಿ ಓರ್ವ ಪುರುಷ ಮತ್ತು ಖಾಸಗಿ ಕ್ಷೇತ್ರದಲ್ಲಿ ಓರ್ವ ಪುರುಷ ದುಡಿಯುತ್ತಿದ್ದಾರೆ. ಆದರೆ ಈ ಜಿಲ್ಲೆಯಲ್ಲಿ ಬುಂಡೇಬೆಸ್ತರು ಕೃಷಿ ಮತ್ತು ಕೃಷಿಕೂಲಿಯಲ್ಲಿ ಯಾರೊಬ್ಬರು ಕಂಡು ಬಂದಿರುವುದಿಲ್ಲ.

ಮೈಸೂರು ಜಿಲ್ಲೆಯಲ್ಲಿ ೧೭೨ ಕುಟುಂಬಗಳು ಅಧ್ಯಯನಕ್ಕೆ ಆಯ್ಕೆಯಾಗಿವೆ. ಅದರಲ್ಲಿ ೩೬೨ ಪುರುಷರು ಮತ್ತು ೩೨೭ ಮಹಿಳೆಯರು ಇದ್ದಾರೆ. ಒಟ್ಟು ಜನಸಂಖ್ಯೆ ೬೮೯ ಮೂಲ ಕಸುಬನ್ನು ಮಾಡುವ ಪುರುಷರು ೧೬೦, ಮಹಿಳೆಯರು ೨೨ ಮಾತ್ರ, ಸ್ವಂತ ಹಾಗೂ ಸರ್ಕಾರಿ ಭೂಮಿಯನ್ನು ಹೊಂದಿದ್ದು ಕೃಷಿಯನ್ನು ಮಾಡುತ್ತಿರುವವರಲ್ಲಿ ೨೧ ಪುರುಷರು ಹಾಗೂ ೫ ಮಹಿಳೆಯರು ಇರುವುದು ಕಂಡುಬಂದಿದೆ. ಕೃಷಿ ಕೂಲಿಯಲ್ಲಿ ತಲಾ ೯ ಜನ ಮಹಿಳೆ ಮತ್ತು ಪುರುಷರಿದ್ದಾರೆ. ಕೃಷಿಯೇತರ ಕಸುಬನ್ನು ನಂಬಿದವರು ೮ ಪುರುಷರು ೬ ಮಹಿಳೆಯರು ಮಾತ್ರ. ಆದರೆ ವ್ಯಾಪಾರದಲ್ಲಿ ೨೩ ಮಹಿಳೆಯರು ಮಾತ್ರ ಕಾಣಸಿಗುತ್ತಾರೆ. ಉಳಿದಂತೆ ಸರ್ಕಾರಿ ಅಥವಾ ಖಾಸಗಿ ಕ್ಷೇತ್ರದಲ್ಲಿ ನೌಕರಿಯಲ್ಲಿ ತೊಡಗಿಸಿಕೊಂಡವರು ಇಲ್ಲವೇ ಇಲ್ಲ.

ಹಾಸನ ಜಿಲ್ಲೆಯಲ್ಲಿ ಕೇವಲ ೧೦ ಕುಟುಂಬಗಳನ್ನು ಮಾತ್ರ ಅಧ್ಯಯನಕ್ಕೆ ಒಳಪಡಿಸಲಾಗಿದೆ. ಅವರ ಜನಸಂಖ್ಯೆ ೪೪ ಮಾತ್ರ ಮಹಿಳೆಯರು ೧೯ ಹಾಗೂ ೨೫ ಪುರುಷರಿದ್ದಾರೆ. ಮೂಲ ಕಸುಬಿನಲ್ಲಿ ೧೫ ಪುರುಷರು ೫ ಮಹಿಳೆಯರು ಕಂಡು ಬಂದಿದೆ. ಕೃಷಿಯಲ್ಲಿ ೧೦ ಪುರುಷರು ಇರುವುದು ದಾಖಲೆಗೆ ದೊರೆತಿದೆ. ಹಾಗೆಯೇ ಮಂಡ್ಯ ಜಿಲ್ಲೆಯಲ್ಲಿ ೧೦೬ ಕುಟುಂಬಗಳನ್ನು ಅಧ್ಯಯನಕ್ಕಾಗಿ ಆಯ್ದಕೊಂಡಿತ್ತು. ಇಲ್ಲಿ ಕಂಡುಬಂದ ಒಟ್ಟು ಜನಸಂಖ್ಯೆ ೪೦೧. ಇವರಲ್ಲಿ ಮಹಿಳೆಯರು ೨೦೧, ಪುರುಷರು ೨೦೦ ಇರುವುದು ದಾಖಲೆಯಾಗಿದೆ. ಈ ಜಿಲ್ಲೆಯು ಸಹಾ ಮೂಲ ಕಸುಬಿಗೆ ಹೆಚ್ಚು ಒಲವನ್ನು ತೋರಿದೆ. ೯೫ ಪುರುಷರು ೧೮ ಮಹಿಳೆಯರು ಮೂಲ ಕಸುಬನ್ನು ಮುಂದುವರಿಸಿದ್ದಾರೆ. ಕೃಷಿಯಲ್ಲಿ ೧೧ ಪುರುಷರು ೨ ಮಹಿಳೆಯರಿದ್ದಾರೆ. ಕೃಷಿಕೂಲಿಯನ್ನು ೯ ಪುರುಷ ೩ ಮಹಿಳೆಯು ಅವಲಂಬಿಸಿದ್ದಾರೆ. ವ್ಯಾಪಾರದಲ್ಲಿ ೮ ಪುರುಷರು, ೩ ಮಹಿಳೆಯರು, ಸರ್ಕಾರಿ ನೌಕರಿಯಲ್ಲಿ ೨೦ ಪುರುಷರು ೨ ಮಹಿಳೆಯರಿದ್ದಾರೆ. ಖಾಸಗಿ ಕ್ಷೇತ್ರದಲ್ಲಿ ಮಾತ್ರ ಈರ್ವರು ಪುರುಷರು ನೌಕರಿಯಲ್ಲಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ೬೧ ಕುಟುಂಬಗಳನ್ನು ಅಧ್ಯಯನಕ್ಕಾಗಿ ಆಯ್ಕೆಮಾಡಿಕೊಂಡಿದ್ದು, ಒಟ್ಟು ಜನಸಂಖ್ಯೆ ೨೪೧ ಇದೆ. ಇದರಲ್ಲಿ ೧೭೨ ಮಹಿಳೆಯರು ಹಾಗೂ ೧೬೯ ಪುರುಷರಿರುವುದು ದಾಖಲಾಗಿದೆ. ಈ ಜಿಲ್ಲೆಯು ಉಳಿದೆಲ್ಲಾ ಜಿಲ್ಲೆಗಳಿಗಿಂತ ಭಿನ್ನವಾಗಿದೆ. ಏಕೆಂದರೆ ಮೂಲ ಕಸುಬನ್ನು ಅವಲಂಬಿಸಿರುವ ಬುಂಡೇಬೆಸ್ತರು ಯಾರು ಕಂಡುಬಂದಿಲ್ಲ. ಆದರೆ ಕೃಷಿಯಲ್ಲಿ ೨೯ ಪುರುಷರು ೧೮ ಮಹಿಳೆಯರು ಇದ್ದಾರೆ. ಕೃಷಿಕೂಲಿಯಲ್ಲಿ ೩೮ ಪುರುಷರು ಮತ್ತು ೧೨ ಮಹಿಳೆಯರು ಇರುವುದು ತಿಳಿದು ಬಂದಿದೆ. ಕೃಷಿಯೇತರ ಮತ್ತು ವ್ಯಾಪಾರದಲ್ಲಿ ತಲಾ ಇಬ್ಬರು ಪುರುಷರು ಮಾತ್ರ ತೊಡಗಿಸಿಕೊಂಡಿದ್ದಾರೆ. ಹಾಗೆಯೇ ಸರ್ಕಾರಿ ನೌಕರಿಯಲ್ಲಿ ಓರ್ವ ಪುರುಷ, ಖಾಸಗಿ ಕ್ಷೇತ್ರದಲ್ಲಿ ೩ ಪುರುಷರಿದ್ದಾರೆ.

ಒಟ್ಟಾರೆ ಪ್ರಚಲಿತ ಕಸುಬಿನ ಅವಲೋಕನದಲ್ಲಿ ಕಂಡುಬರುವ ಫಲಿತವೆಂದರೆ ಬುಂಡೇಬೆಸ್ತರು ಮೂಲ ಕಸುಬಿಗಿಂತ ಪರ್ಯಾಯ ಕಸುಬುಗಳಾದ ಕೃಷಿ, ಕೃಷಿಕೂಲಿ, ಕೃಷಿಯೇತರ, ವ್ಯಾಪಾರ, ಸರ್ಕಾರಿ ನೌಕರಿ ಮತ್ತು ಖಾಸಗಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವುದು ತಿಳಿದುಬರುತ್ತದೆ. ಆದ್ದರಿಂದ ಇಂದು ಪಾರಂಪರಿಕ ಕಸುಬು ಬುಂಡೇಬೆಸ್ತರಿಗೆ ಜೀವನ ನಿರ್ವಹಣೆಗೆ ಬೇಕಾದ ಗಳಿಕೆಯನ್ನು ನೀಡುತ್ತಿಲ್ಲ ಎಂಬ ಅಂಶವು ಈ ಅಧ್ಯಯನದಿಂದ ತಿಳಿದು ಬಂದಿದೆ.