ಹಕ್ಕಿ ಹೇಳಿತು :
ಜಯವದ ಜಯವದ
ಈ ಮನೆತನಕೆ ಜಯವದ ಪ
ಹಕ್ಕಿ ನುಡಿಯತಣ್ಣ
ನುಡಿಯಿತು
ಹಕ್ಕಿ ನುಡಿಯಿತಣ್ಣ
ನುಡಿಯಿತು ೧
ಹಕ್ಕಿ ನುಡಿಯಿತಣ್ಣ
ಶುಭವಚನ
ಹಕ್ಕಿ ನುಡಿಯತೆಂದೆರಡಕ್ಷರ
ಎರಡು ಮೂವತ್ತೆರಡಾಗಿ
ನುಡಿಯಿತು ೨
ಹಕ್ಕಿ ನುಡಿಯತಣ್ಣ
ನುಡಿಯಿತಣ್ಣ
ಹಕ್ಕಿ ನುಡಿಯಿತಣ್ಣ
ನುಡಿಯಿತು ೩
ಎಂದು ತನ್ನ ಕಂಠದಿಂದ ಕೈಯಲ್ಲಿದ್ದ ಡಮರುಗದ ನಾದದಲ್ಲಿ ಅತ್ಯಂತ ಲಯಬ್ದವಾಗಿ ಹಾಡುತ್ತ ಹಳ್ಳಿಯ ಮಂಗಳದ ಅಂಗಳದಲ್ಲಿ ಸುಪ್ರಭಾತದ ಸುಸಮಯದಲ್ಲಿ ಈ ಬುಡಬುಡಕಿ ಹಕ್ಕಿಯ ಶಕುನ ಹೇಳುತ್ತಾ ಬರುವ ದೃಶ್ಯ ಅಷ್ಟೇ ಮನೋಹರವಾಗಿದೆ.
ಅವನು ತನ್ನ ಇಷ್ಟ ದೇವತೆಯಾದ
ಶ್ರೀ ಪುರಂದರವಿಠಲನ್ನ
ನಾಮಸಂಕೀರ್ತನೆಯ ಬಿಡದಿರು
ನಾಮಸಂಕೀರ್ತನೆಯ ಬಿಡದಿರು
ಜಯವದ, ಜಯವದ
ಈ ಮನೆತನಕ್ಕೆ ಜಯವದ ೩
ಎಂದು ಬುಡಬುಡಕಿ ಅಷ್ಟೇ ಗಂಭೀರವಾಗಿ ಡಮರುಗ ನುಡಿಸಿ ಜನಮನವನ್ನು ಸೆಳೆಯುತ್ತಾನೆ. ಇವನ ದೇವ ವಾಣಿಗೆ ಮಾರುಹೋಗಿ ಗಂಡು ಮಕ್ಕಳು ಬಾಗಿಲಿಗೆ ಬಂದು ಅವನ ವೇಷ ಭೂಷಣ ಡಮರುಗದ ಸುನಾದ ಕೇಳಿ ಸಂತೃಪ್ತರಾಗುತ್ತಾರೆ. ಇವರ ಹಾವ, ಭಾವ, ಮನದ ಇಂಗಿತ ಅರಿತು ಈ ಬುಡಬುಡಕಿ ಸಂದೇಶ ಸೂಚಕವಾಗಿಹ ಮಹಾತ್ಮರ ಹಾಡುಗಳನ್ನು ಪ್ರಾರಂಭಿಸುತ್ತಾನೆ.
“ಹರಿ ಕೊಟ್ಟಕಾಲಕ್ಕೆ ಉಣಲಿಲ್ಲ ಪ್ರಾಣೀ
ಹರಿ ಕೊಡದಿಹಕಾಲಕ್ಕೆ ಬಾಯಿ ಬಿಡುವಿಯೋ ಪ್ರಾಣಿ ||ಪ||
ಹತ್ತು ಸಾವಿರ ಹೊನ್ನ ತಿಪ್ಪೇಲಿ ಹೂಳಿಟ್ಟು
ಮತ್ತೆ ಉಪ್ಪಿಲ್ಲದ ಉಂಡೆಲ್ಲೋ ಪ್ರಾಣಿ
ಹತ್ತಿರ ಸಾವಿರ ಹೊನ್ನು ತಿಪ್ಪೇಲಿ ಪೋಗಾಗ
ಮೃತ್ಯುವಿನ ಬಾಯಿಯಲ್ಲಿ ಬಿತ್ತಲ್ಲೋ ಪ್ರಾಣಿ ||೧ ||
ಎಂದು ಪುರಂದರದಾಸರ ಚಿಕ್ಕ ಚಿಕ್ಕ ನುಡಿಮುತ್ತುಗಳನ್ನು ಒಂದೊಂದಾಗಿ ಹೇಳುತ್ತಾ ನುಡಿಗೆ ತಕ್ಕ ಹೆಜ್ಜೆ ಹಾಕುತ್ತ, ಮುಂದುವರಿಯುತ್ತಾನೆ. ತನ್ನ ಸುತ್ತಮುತ್ತ ಇದ್ದ ಜನಮನವನ್ನು ಸೆಳೆಯುತ್ತಾನೆ. ತನ್ನ ಬಲಗೈಯಲ್ಲಿದ್ದ ಡಮರುಗದ ನಾದ ಮಾಧುರ್ಯ ಅವನ ಹಾಡುವ ದೇವರ ನಾಮಕ್ಕೆ ಪುಷ್ಟಿ ನೀಡುತ್ತದೆ. ಅಪೂರ್ವ ಮೆರಗು ಕೊಡುತ್ತದೆ.
ಆಗ ಈ ಬುಡಬುಡಕಿ ನಿಜವಾಗಿಯೂ ದೇವಲೋಕದಿಂದ ಇಳಿದು ಬಂದನೇನೋ ಎಂಬ ಭಾವನೆ ಜನಮನದಲ್ಲಿ ಮೂಡುತ್ತದೆ. ಅಂತಹ ವಾತಾವರಣ ತನ್ನ ನಡೆ-ನುಡಿಗಳಿಂದಲೂ, ವೇಷ-ಭೂಷಣದಿಂದಲೂ ಡಮರುಗದ ನಾದಮಾಧುರ್ಯಗಳಿಂದ ಸೃಷ್ಟಿ ಮಾಡಿ ಜನರಲ್ಲಿ ತನ್ನ ಮೇಲೆ ನಂಬಿಕೆ, ವಿಶ್ವಾಸ ಹುಟ್ಟುವಂತೆ ಮಾಡುತ್ತಾನೆ. ಇಂತಹ ತಿಳಿಯಾದ ವಾತಾವರಣ ಸೃಷ್ಟಿ ಮಾಡಿ ಸುತ್ತಮುತ್ತಲಿನ ಜನರಿಗೆ ಇವನು ತನ್ನ ಬಗೆಯೇ ಹೇಳುತ್ತಾನೇನೋ ಅನ್ನುವಂತೆ –
ಬಲಾ ಬಂದೈತ ಬಲ ಬಂದೈತ
ಓಣ್ಯಾಗ ಹಿರಿಮನಿಗಿ
ಹೆಣ್ಣು ಮಕ್ಕಳಿಗೆ
ಹಿಂದೆ ಹಿಡಿದ ಗ್ರಹಣ
ಓಡತೈತಿ!
ಸೂರ್ಯ ಚಂದ್ರರ ಪ್ರಕಾಶ
ಸ್ಪಷ್ಟವೈತಿ!
ಗಂಡುಮಕ್ಕಳ ಕದನ
ದೂರಾಗತೈತಿ!
ಹೆಣ್ಣುಮಕ್ಕಳಿಗೆ
ಸ್ವಲ್ಪ ತ್ರಾಸ ಐತಿ
ಒಟ್ಟಿನಲ್ಲಿ ಒಳಿತೈತಿ, ಒಳಿತೈತಿ
ಇನ್ನೊಂದು ಕಾಲ ಮಾತ್ರ ಸರಿತೈತಿ
ಹಕ್ಕಿ ಮಾತ್ರ ಸಂಪೂರ್ಣ ಬಲ
ಕೂಗುತೈತಿ!’
ಹೀಗೆ ತನ್ನ ಮಾತಿನಲ್ಲಿ ಚತುರೋಕ್ತಿಯನ್ನು ಹಾರಿಸುತ್ತ ಅಷ್ಟೇ ಜೋರಾಗಿ ಡಮರುಗ ನುಡಿಸುತ್ತ ತಾನು ಹೇಳುವ ಭವಿಷ್ಯ, ಶಕುನಕ್ಕೆ ರಂಗುತಂದು ಕೊಡುತ್ತಾನೆ. ತಾನೂ ರಂಗು ತುಂಬಿ ನಿಲ್ಲುತ್ತಾನೆ.
ಕೇಳುಗರು ತನ್ನ ಮಾತಿಗೆ ಅನುಮಾನ ಪಡದಂತೆ, ಎರಡೂ ಕಡೆ ಅರ್ಥ ಬರುವಂತೆ ಭವಿಷ್ಯ ಹೇಳುವ ಅವನ ಜಾಣ್ಮೆ, ಚಾಣಾಕ್ಷತನ, ನೋಡತಕ್ಕದ್ದು. ಅವನು ಮುಂದುವರಿದು ’ಇದು ಕೇವಲ ಬುಡಬುಡಕ್ಯಾನ ಮಾತಲ್ಲ, ಪಣಕಟ್ಟಿ ನಿಂತಾಗ ಹಕ್ಕಿ ಹೇಳಿತು’ ಎಂದು ನಮ್ಮನ್ನು ನಂಬಿಸುವ ಅವನ ಮಾತು ನಮಗೆ ಮಂತ್ರದಂತೆ ಬಾಸವಾಗುತ್ತದೆ’ ’ಹಿಂದೆ ಹಿಡಿದ ಗ್ರಹಣ ಓಡತೈತಿ’ ಇದಕ್ಕೆ ಸೂರ್ಯ ಚಂದ್ರರ ಪ್ರಕಾಶವೇ ಸಾಕ್ಷಿ’ ಎಂದು ಡಮರುಗ ನುಡಿಸಿ ಜನರಲ್ಲಿ ಆತ್ಮವಿಶ್ವಾಸ ಮೂಡಿಸುತ್ತಾನೆ.
ಇಲ್ಲಿ ಅವನ ಮಾತಿನ ಮೋಡಿ, ಡಮರುಗದ ನಾದ, ಹಾವ-ಭಾವ, ಅವನು ಕುಳಿತಿರುವ ಭಂಗಿ, ಅವನು ಗಮನಿಸುತ್ತಿರುವ ದಿಕ್ಕು ಇತ್ಯಾದಿಗಳನ್ನು ಗಮನಿಸಿದಾಗ ಬುಡಬುಡಕಿಯ ಕಸಬು ನಮಗೆ ಕಲೆಯಾಗಿ ಕಾಣುತ್ತದೆ. ಈಗ ಭವಿಷ್ಯ ಹೇಳುವ ’ಬುಡಬುಡಕಿ’ ನಮಗೆ ದೇವಮಾನವನಾಗಿ ಕಾಣುತ್ತಾನೆ. ಇದು ಕಲೆಯೂ ಹೌದು; ಕಾಯಕವೂ ಹೌದು.
ಭವಿಷ್ಯ ಅಥವಾ ಶಕುನ :
ಬುಡಬುಡಕಿಯವರ ಮನದಲ್ಲಿ ಸದಾ ದೇವರ ಸ್ಮರಣೆ, ಕೈಯಲ್ಲಿ ಡಮರುಗದ ನಾದ, ಹಕ್ಕಿ ನುಡಿಗಳತ್ತ ಅವನ ಚಿತ್ತ, ಗಿಡಗಂಟಿಗಳ ಕಡೆಗೆ ಅವನ ದೃಷ್ಟಿ. ಭವಿಷ್ಯ ಹೇಳಿ ಜನಮನವನ್ನು ಗೆಲ್ಲುವ ಅವನ ಕುತೂಹಲ, ಲವಲವಿಕೆ ತನಕೆ ಕುಣಿಯುತ್ತದೆ. ಸದಾ ಹಸನ್ಮುಖಿಯಾದ ಇವನು –
’ಸತ್ಯವಂತರ ಸಂಗವಿರಲು
ತೀರ್ಥವೇತಕೆ?
ನಿತ್ಯಜ್ಞಾನಿಯಾದ ಮೇಲೆ
ಚಿಂತಿಯಾತಕೆ? ||ಪ||
ತಾನು ಉಣ್ಣದ ಪರರಿಗಿಕ್ಕದ –
ನ್ನವಿದೇತಕೆ?
ಮಾನ ಹೀನನಾಗಿ ಬಾಳ್ರವ
ಮನುಜನೇತನೆ? ||೧||
ಎಂಬ ನೀತಿಯುಕ್ತವಾದ ಮುಕ್ತಕಗಳನ್ನು ಮನಮುಟ್ಟುವಂತೆ ಹಾಡುತ್ತ, ಭವಿಷ್ಯ, ಶಕುನ ಹೇಳಲು ಮನೆಯ ಮುಂದೆ ಬರುತ್ತಾನೆ. ಭವಿಷ್ಯ ಹೇಳಲು ಬಂದ ಭವಿಷ್ಯಕಾರನಿಗೆ ನಮ್ಮ ಜನರು ತುಂಬ ಗೌರವದಿಂದ ಕಾಣುತ್ತಾರೆ. ಅವನನ್ನು ಕರೆದು ಕುಳ್ಳಿರಿಸುತ್ತಾರೆ. ಆಗ ಬುಡಬುಡಕಿ ಡಮರುಗ ನುಡಿಸಿ ಒಳ್ಳೆಯ ವಾತಾವರಣ ನಿರ್ಮಾಣ ಮಾಡಿ ಭವಿಷ್ಯ ಕೇಳುವ ವ್ಯಕ್ತಿಯ ಮನ ಹದಗೊಳಿಸುತ್ತಾನೆ. ಆಗ ಅವನು ಮೆಲ್ಲಗೆ ಧ್ವನಿ ಎತ್ತಿ ’ಧಣಿಯರೇ, ನಿಮ್ಮ ಈ ಊರಾಗ ಹಕ್ಕಿ ನುಡಿದ ಪ್ರಕಾರ ಶಕುನ, ಭವಿಷ್ಯ ಹೇಳ್ತಿನ್ರಿ’ ಎಂದು ಭವಿಷ್ಯ ಹೇಳಲು ಪ್ರಾರಂಭಿಸುತ್ತಾನೆ.
’ಇನ್ನು ಮೂರು ತಿಂಗಳೊಳಗಾಗಿ ಈ ನಿಮ್ಮ ಓಣಿಯ ಆಗ್ನೇಯ ದಿಕ್ಕಿನಲ್ಲಿ ಒಂದು ಭೂಮಿಯ ತಂಟೆಯಾಗಿ ಒಂದು ಪ್ರಾಣ ಹಾನಿಯಾಗಿ, ನಾಲ್ಕಾರು ಮಂದಿಗೆ ಮಾರಣಾಂತಿಕ ಪೆಟ್ಟುಗಳಾಗಿ ಇಡೀ ಊರ ದುಃಖದಲ್ಲಿ ಮುಳಗತೈತಿ ಅಂತ ಹಕ್ಕಿ ಹೇಳತೈತಿ’ ದಣೇರ. ಈ ಎರಡನೇ ಓಣಿಯಲ್ಲಿ ದಕ್ಷಿಣ – ಪಶ್ಚಿಮ ದಿಕ್ಕಿನ ಮಧ್ಯದ ಮೂಲೆಯ ಮೇಲೆ ಒಂದು ಹೆಣ್ಣಿನ ಸಂಬಂಧವಾದ, ವಿವಾದ ನಡೆದು ದೊಡ್ಡ ಜಗಳವಾಗುತ್ತದೆ ಸ್ವಾಮಿ.
ಮತ್ತೆ ಮೂರನೇ ಶಕುನ ಹಕ್ಕಿ ನುಡಿತು ಅಂದ್ರೆ –
’ಧಣೇರ ಈ ಊರಲ್ಲಿ ರಂಡಿಮುಂಡಿ ಮಗ
ನಕ್ಕೊಂತ ಹೊರಗೆ ಹೋದಾಂವಗ
ತಿರುಗಿ ಬರುವಾಗ ನಲ್ಕು ಮಂದಿ ಹೊತಕೊಂಡ
ಬರತಾರ. ತಂದೆ’
ಅದು ಹೇಗಲೇ ಮಗನ ದೋಷಿಗ್ಯಾ
ಅಂತ ಕೇಳಿರಿ ಮಹಾರಾಜರೇ
ಯಾವುದೇ ದೃಷ್ಟಿಯಿಂದಾಗಲೀ ಆಕ್ಸಿಡೆಂಟಿನಿಂದಾಗ
ಗಲಿ, ಯಾವುದಾದರೊಂದು ಹೊಡೆದಾಟ,
ಬಡಿದಾಟ, ಮೋಸದಿಂದ ಆಗಲಿ ಅವನಿಗೆ
ಮರಣ ಐತಿ ಅಂತ ಹಕ್ಕಿ ಹೇಳತೈತಿ
ಧಣಿಯರೇ’
ಯಪ್ಪಾ ಧಣಿಯಾರ, ನಿಮ್ಮ ಊರಾಗ ಈ
ಮೂರು ಘಟನೆ ನಡಿತಾವು ಅಂತ ಹಕ್ಕಿ
ನುಡಿದಾಂಗ ಮಿಕ್ಕಿ ತಿಳಿದು ಪಕ್ಕಾ
ಹಕೀಕತ್ತ ಹೇಳ್ತೀನ್ರಿ ತಂದೆ ನಿಮ್ಮ ಮಗ
ದೋಷಿಗ್ಯಾನಾನು’.
ಎಂದು ಡಮರುಗ ಕಿಡರ್, ಕಿಡರ್ ಎಂದು ನುಡಿಸಿ ತನ್ನ ಮಾತು ನಿಲ್ಲಿಸಿ ಚಿಂತಾತುರನಾಗಿ ಕುಳಿತವನಂತೆ ಬುಡಬುಡಕಿ ಸಣ್ಣಸ್ವರದಲ್ಲಿ ಡಮರುಗ ನುಡಿಸುತ್ತ ಕುಳಿತುಕೊಂಡ ಇಷ್ಟು, ಊರಲ್ಲಿ ನಡೆಯುವ ಸುದ್ದಿ ತಿಳಿಸಿ, ಗೌಡರ ಅಪ್ಪಣೆ ಪಡೆದು ಮನೆ, ಮನೆಗಳಿಗೆ ಹೋಗಿ ಭವಿಷ್ಯ ಹೇಳಲು ತೊಡಗುತ್ತಾನೆ.
ಊರಲ್ಲಿ ನಡೆಯುವ ಘಟನೆ ಕುರಿತು ಹರಡಿದ ಸುದ್ದಿಯಿಂದ ಅಲ್ಲಲ್ಲಿ ಗುಸು ಗುಸು ಮಾತು ಭಯದ ವಾತಾವರಣದಿಂದ ಜನರ ಹೃದಯದಲ್ಲಿ, ಮಾತಿನಲ್ಲಿ ಅನುಕಂಪ, ಅನುಮಾನ ಶುರುವಾಗುತ್ತದೆ. ಬುಡಬುಡಕ್ಯಾನ ಮಾತು ಸುಳ್ಳಾಗುವುದಿಲ್ಲ. ಆತ ನಮ್ಮೂರ ಬುಡಬುಡಕ್ಯಾ ಅವ ಹೇಳಿದ ಮಾತು ಖರೇ ಬರ್ತಾವ, ಅವ ಖರೇ ಹೇಳ್ತಾನ ಅವನ ಶಕುನ ಭವಿಷ್ಯ ಸುಳ್ಳಾಗುವುದಿಲ್ಲ ಎಂಬ ಮಾತು ಎಲ್ಲರ ಬಾಯಲ್ಲಿ.
ಹೀಗೆ ಚಿಂತ್ರಾಕಾಂತ ಜನರನ್ನು ಸಂತೈಸಲು ’ಬುಡಬುಡಕ್ಯಾ’ ಮತ್ತೆ ಡಮರುಗ ನುಡಿಸಿ ತನ್ನ ಸುಶ್ರಾವ್ಯ ಕಂಠದಿಂದ –
ಹನಿಗೆ ಹನಿ ಕೂಡಿದರೆ
ಹಳ್ಳೈತಿ
ತೆನಿತೆನಿಗೂಡಿದರ
ರಾಶೈತಿ
ಮನಕ ಮನ ಕೂಡಿದರೆ
ಮಾತೈತಿ
ದನಿಗೆ ದನಿ ಕೂಡಿದರೆ
ಹಾಡೈತಿ
ಜೀವಕ್ಕ ಜೀವ ಕೂಡಿದರ
ಪ್ರೀತೈತಿ
ಪ್ರಾಣಕ್ಕೆ ಪ್ರಾಣ ಕೂಡಿದರ
ಭಕ್ತೈತಿ
ಆನಂದ ಕೂಡಿಬರುವ ಕಾಲ
ಸಮೀಪೈತಿ
ಪ್ರೀತಿ ಮಾತೊಂದು
ಮಧುರೈತಿ
ಚಲಿಸುವ ಕಾಲ
ದೂರಾಗತೈತಿ.
ಎಂದು ಹಾಡುತ್ತಾ ಒಡೆದ ಮನಸುಗಳನ್ನು ಒಂದುಗೂಡಿಸಲು ಪ್ರಯತ್ನಿಸುತ್ತಾನೆ. ಡಮರುಗ ನುಡಿಸುತ್ತ ಶಕುನ ಅಥವಾ ಭವಿಷ್ಯ ಕೇಳುವ ವಾತಾವರಣ ನಿರ್ಮಿಸುತ್ತಾನೆ. ಈ ಕಲೆ ಅವನಿಗೆ ಸಂಪೂರ್ಣ ಕರಗತವಾಗಿದೆ. ’ಮಹಾರಾಜರೇ, ಶನಿ ದೃಷ್ಟಿ ಮಾತ್ರ ನಿಮಗೆ ಬೆನ್ನುಹತ್ತೈತ್ರಿ, ತಾಯಿ ದೇವಿ ಆಶೀರ್ವಾದ ನಿಮ್ಮ ಮ್ಯಾಲೈತಿ’ ಎಂದು ಹೇಳುತ್ತ ವ್ಯಕ್ತಿಯ ಹೃದಯದಲ್ಲಿ ಧೈರ್ಯ ತುಂಬುತ್ತಾನೆ. ತನ್ನ ಬಲಗೈಯಲ್ಲಿದ್ದ ಡಮರುಗದ ಲಯವನ್ನು ಬದಲಿಸುತ್ತಾನೆ. ಆ ಲಯಕ್ಕೆ ತಕ್ಕಂತೆ ತನ್ನ ದನಿಯನ್ನು ಬದಲಿಸುತ್ತಾನೆ.
ಹೀಗೆ ಮಾನವನಿಗೆ ಭವಿಷ್ಯ ಹೇಳುತ್ತಾ ಬರುವ ಬುಡಬುಡಕ್ಯಾ ಮನಿಯಲ್ಲಿ ಗಂಡಸರಿಲ್ಲದ್ದು ತಿಳಿದುಕೊಂಡು ಆ ಹೆಣ್ಣು ಮಕ್ಕಳಿಗೆ ಸಂಬಂಧಿಸಿದಂತೆ ಭವಿಷ್ಯ ಹೇಳಲು ಪ್ರಯತ್ನಿಸುತ್ತಾನೆ. ಇವರು ಹೇಳುವ ಭವಿಷ್ಯ ಕೇಳಿ ಇವರ ಅಪೇಕ್ಷೆಯಂತೆ ಭಿಕ್ಷೆ ಸಿಗದಿದ್ದರೂ ಹೆಣ್ಣು ಮಕ್ಕಳಲ್ಲಿದ್ದ ದೋಷವನ್ನು ಕಂಡುಹಿಡಿದು ಅವಳಲ್ಲಿ ಭಯ ಹುಟ್ಟುವಂತೆ ಶಕುನ ಹೇಳಲು ಪ್ರಾರಂಭಿಸುತ್ತಾನೆ. –
ತಾಯಿ, ನೀವು ಇಷ್ಟು ಸೊರಗಿ ಸುಣ್ಣವಾಗಲು
ಕಾರಣ ಒಂದೈತಿ!
ನಿಮಗ ಉಳ್ಳಾಕಡಿಮಿಲ್ಲ, ತಿನ್ನಾಕ ಕಡಿಮಿಲ್ಲ
ಖರೆ, ಜೀವಕ್ಕ ಮಾತ್ರ ಸುಖಾ ಇಲ್ಲ.
ಅದಕ್ಕ ಕಾರಣ ಒಂದೈತಿ
ಹೇಳ್ತೀನಿ, ಕೇಳ್ರಿ ತಾಯಿ
ನಿಮ್ಮ ಮುಟ್ಟಿನ ನೀರ ಹಾವಿಗಿ ತಗಲತೈತಿ
ಆವೊತ್ತಿನಿಂದ ನೀವು ಬಡಕಲಾಗಕ
ಹತ್ಯಾರಿ ತಾಯಿ
ನಿಮ್ಮ ಗೃಹದೊಳಗ ಬರಕತ ಆಗೊಲ್ದು
ಆ ಹಾವಿನ ದೋಷ ನಿಮಗ ಹತೈತಿ
ಆ ಪೀಡಾ ದೂರಾಗಬೇಕ್ರಿ ತಾಯಿಯವರೇ.
“ಏಲ್ಲಾ ಮಗನೆ ಬುಡಬುಡಕ್ಯಾ
ಇದಕ್ಕೆ ಏನ ಮಾಡ್ತಿ ಅಂತ ಕೇಳ್ತಿರ್ಯಾ
ತಾಯಿ.
ಏನಿಲ್ಲ ನೀವು ಉಟ್ಟಂತ ಸೀರಿ, ತೊಟ್ಟಂತ
ಕುಪ್ಪಸ ಕಳದು ಬಹಿಡು ತಾಯಿ;
ಕಳದಂತಾ ಆ ಉಯಟ್ಟ ಬಿಟ್ಟ ಬಬಟ್ಟಿ
ಇಳೆ ತೆಗೆದು ನಿವಾಳಿಸಿ ಈ ನನ್ನ ಜೋಳಿಗಿ
ಮ್ಯಾಲ ಚೆಲ್ಲಿ ಕೈ ತೊಳೆದು ದೇವರ
ಮುಂದ ದೀಪ ಹಚ್ಚಿ ನಮಸ್ಕಾರ ಮಾಡಿ
ಬರ್ರಿ ತಾಯಿ”
ತಾಯಿ ನಿಮಗ ಬಂದ ಸೇರಿದ ಹಾವಿನ ದೋಷ
ದೂರಾಗಿ ನೀವು ಸುಖದಿಂದ ಇರತೀರಿ, ನಿಮಗ
ಒಳ್ಳೆದಾಗತೈತಿ’.
ಒಳ್ಳೆಯ ಹಿತಮಾತು ತೆಗೆದು ಮಾತಾಡಿ ’ಬಟ್ಟೆ-ಬರಿ, ಕಾಳು-ಕಡ್ಡಿ, ರೊಕ್ಕ-ರೂಪಾಯಿ, ಬೆಳ್ಳಿ-ಬಂಗಾರ, ಕಾಣಿಕೆ ತೆಗೆದುಕೊಂಡು ಬರುತ್ತಾರೆ. ಈ ಬುಡಬುಡಕ್ಯಾ ನಮಗ ಒಳ್ಳೆಯ ಉಪಕಾರ ಮಾಢಿದ ಎಂಬ ಭಾವನೆ ಮೂಡಿಸಿ ಮತ್ತೆ ಆ ಮನೆಗೆ ಬಂದು ಭವಿಷ್ಯ ಅಥವಾ ಶಕುನ ಹೇಳುವಂತೆ ನಂಬಿಗಸ್ಥನಾಗುತ್ತಾನೆ. ಮನೆಯವರು ಕೊಡುವ ಕಾಣಿಕೆಯಿಂದ ಈ ಬುಡಬುಡಕ್ಯಾ ಸಂತೋಷಗೊಂಡು-
“ಮತ್ತ ನಿಮ್ಮ ಸರ್ವ ವಿಘ್ನಗಳು
ಪರಿಹಾರವಾಗಿ
ನಿಮಗೆ ನಾಲ್ಕು ಮಂದಿಯಲ್ಲಿ
ಲೇಸಾಗಿ
ನೀವು ಹಿಡಿದಂತ ಮಾತು
ಹೌದಾಗಿ
ಮನದಲ್ಲಿದ್ದುದು ಮನಿ ಸೇರಿ
ಕೊನೆಯಲ್ಲಿ ಸುಖಾ ಆಗತೈತಿ:”
ಎಂದು ಹರಸಿ ಹಾರೈಸಿ ಮುಂದಿನ ಅನೇಕ ಕಷ್ಟ ನಷ್ಟಗಳು ಇವೆ. ಎಡರು=ತೊಡರುಗಳು ಮೋಸ-ಅಸೂಯೆಗಳು, ಬಡತನ-ದ್ರಾರಿದ್ರತೆಗಳು, ಅಲ್ಲದೆ ರೋಗ-ರಜಿನಗಳು ಬೆನ್ನು ಹತ್ತಿ ಮನುಷ್ಯನನ್ನು ಕಾಡುತ್ತಿರುತ್ತವೆ. ಯಾರಾದರೂ ಏನಾದರೂ ಹೇಳುವವರು ಬಂದರೆ ಮನುಷ್ಯ ತನ್ನ ಭವಿಷ್ಯ ಕೇಳಲು ಮುಂದಾಗುತ್ತಾನೆ. ಎಲ್ಲ ಪರಿಹಾರಕ್ಕೆ ಈ ಬುಡಬುಡಕ್ಯಾ ಮನೆ ವೈದ್ಯನಿದ್ದಂತೆ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ.
ಭವಿಷ್ಯ ಹೇಳುವಾಗ ಈ ಬುಡಬುಡಕಿ ಜನಾಂಗಕ್ಕೆ ರಂಗು ನೋಡಿ ರಾಗ ಮಾಡುವ ಗುಣ ಕರಗತವಾಗಿರುತ್ತದೆ,
ಇವರು ಮೊದಲೇ ದೇವಿ ಭಕ್ತರು, ಹೆಣ್ಣು ಮಕ್ಕಳು ತುಸು ತೊಂದರೆಯಲ್ಲಿದ್ದರೆ ಅವರಿಗೆ –
“ನಿಮಗೆ ದೇವಿ ಕಾಡ್ತಾಳ
ನೀವು ಮಂಗಳವಾರ ಶುಕ್ರವಾರ
ದೇವಿ ಹೆಸರಮ್ಯಾಲ ಒಂದೊತ್ತು ಮಾಡ್ರಿ
ದೇವಿಗೆ ಪೂಜಾ ಸಲ್ಲಿಸಿದರ
ನಿಮಗೆ ಸುಖಾ ಸಿಗತೈತಿ ಅಂತ
ಬುಡಬುಡಕ್ಯಾನ ಮಾತಿನಲ್ಲಿ ತೋರತೈತಿ’
ಹೀಗೆಲ್ಲ ಹೇಳಿ ಅವರಿಂದಲೂ ತನಗೆ ಬೇಕಾದ ಕಾಳು-ಕಡ್ಡಿ, ಬಟ್ಟೆ-ಬರೆ ತೆಗೆದುಕೊಂಡು ಬರುತ್ತಾನೆ. ಅಷ್ಟರಲ್ಲಿ, ಆ ಮನೆಯ ಯಜಮಾನ ಬಂದರೆ ಅವರಿಗೂ ಸಂತೋಷಗೊಳಿಸುತ್ತ
“ಮಹಾರಾಜ, ಈ ನಿಮ್ಮ ಮಗಾ,
ಬುಡಬುಡಕ್ಯಾ ನಿಮಗೊಂದು ತಾಯಿತ
ತಂದಾನ್ರಿ ಯಪ್ಪಾ!
ಆ ತಾಯತಕ ಮಂತ್ರ ಹಾಕಿ
ಯಂತ್ರ ತಯಾರ ಮಾಡಿ ನಿಮಗ
ಕಟ್ಟತೇನಿ, ಅಂತಾನ್ರಿಯಪ್ಪಾ!”
ಆ ಯಂತ್ರ ಮಂತ್ರದಿಂದ ನಿಮ್ಮ ಮನ್ಯಾಗಿದ್ದ
ಗ್ರಹಚಾರ ದೂರಾಗತೈತಿ ಅಂತಾನ್ರಿ
ತಂದೆ. ಈ ದೋಷನ್ಯಾಗ ಮಾತು ಸುಳ್ಳಾಗುದಿಲ್ರಿ. ವರ್ಷ ವರ್ಷ ನಿಮ್ಮ
ಮನಿಗಿ ಬಂದು ಭವಿಷ್ಯ ಹೇಳ್ತಾನ್ರಿ
ಈ ಬುಡಬುಡಾಕ್ಯಾ ನಿಮಗ ಮಗ.
ಈ ಊರ ಜನರಿಗೂ ತಿಳದೈತ್ರಿ ದೇವಾ:
ಇಲ್ಲಿಯವರೆಗೂ ನನ್ನ ಭವಿಷ್ಯ ಸುಳ್ಳಾಗಿಲ್ರಿ
ಅಂತ, ಈ ಮಾತು ಈ ದೇಶದ್ಯಾಗ
ಹೆಮ್ಮೆ ತರತದಿರಿ ತಂದೆ”.
ಎಂದು ಹೇಳುತ್ತಾ ’ದಿನಾ, ಜಳಕಾ ಮಾಡಿ ಬಟ್ಟಲದಲ್ಲಿ ಎಣ್ಣೆ ಹಾಕಿ ಆ ಎಣ್ಣೆಯಲ್ಲಿ ತಾಯ್ತದ ನೆರಳು ನೋಡ್ರ ಬಾಬಾ. ನಿಮ್ಮ ಮುಖ ಅದರಲ್ಲಿ ನೋಡಿಕೊಂಡು ಅದೇ ಎಣ್ಣಿಯನ್ನು ನಿಮ್ಮ ಮನಿ ದೇವರ ದೀವಿಗೆ ಹಚ್ಚಿ ಮುಂದಿಡ್ರಿ ಉದ್ಯೋಗಕ್ಕೆ ಹೋಗ್ರಿಯಪ್ಪಾ.’
ಆದರ ಒಂದು ಮಾತು ’ಈ ನಿಮ್ಮ ಮಗನ ಮಾತು ಒಂದು ನಡಸಿಕೊಡಬೇಕ್ರಿ ಧಣೇರ’
ಅದೇನ ಮಗನ ಅಂತ ಕೇಳ್ತೀರಿ, ಹೇಳ್ತೀನ್ರಿ ಸ್ವಾಮಿ’ ಅಚ್ಚ ಕರಿ ಅರಿವಿ ಮಾತ್ರ ತೊಡಬ್ಯಾಡ್ರಿ ಧಣೇರ, ಮನಿ ಗೋದಲಿವೊಳಗ ಕರಿ ಎತ್ತ ಕಟ್ಟಬ್ಯಾಡ್ರಿ ತಂದೆ.
ಕರಿ ಎಳ್ಳು ನೀವು ಊಟಾ ಮಾಡಬ್ಯಾಡ್ರಿ
ಕರಿ ಬಣ್ಣ ನೀವು ಉಪಯೋಗಿಸಬ್ಯಾಡ್ರಿ
ಅದರಿಂದೆಲ್ಲ ನಿಮ್ಮ ಜೀವಕ್ಕೆ ಸುಖಾ ಇಲ್ಲ
ಅಂತಾನ್ರಿ ಈ ನಿಮ್ಮ ದೋಷದಾಗ್ಯಾ;.
ಹೀಗೆ ಒಂದೊಂದು ಮಾತನ್ನು ಹೇಳುತ್ತಾ ಅವನ ಮಾತಿನ ಮ್ಯಾಲ ನಂಬಿಕೆ ಹುಟ್ಟಿಸುತ್ತ ವರ ಮನ ಒಲಿಸಿ ಕುಶಲ ಮತಿಯಿಂದ ಕಾಳು, ಕಡ್ಡಿ, ಎಣ್ಣಿ, ಬೆಣ್ಣೆ ದೇವಿಗೆ ದೀಪ ಹಚ್ಚುವ ನೆಪ ಹೇಳಿ ಈ ಎಲ್ಲ ವಸ್ತುಗಳನ್ನು ಹೊಡೆದುಕೊಂಡು ಬರುತ್ತಾನೆ. ಅದರ ಸಂಗತಿ ಕೇಳಿ, ಕುರಿಮರಿ ಆಕಳು ಸಣ್ಣ ಎಮ್ಮೆ ಮಣಕಗಳನ್ನು ಕಾಣಿಕೆಯಾಗಿ ಪಡೆದು ಒಳ್ಳೆಯ ಖುಷಿಯಿಂದ ಭವಿಷ್ಯ ಹೇಳಿ ತಾನಿದ್ದ ಸ್ಥಳಕ್ಕೆ ಬರುತ್ತಿದ್ದರು. ಮುಂಜಾನೆಯಿಂದ ಸಂಜೆಯವರೆಗೂ ಭವಿಷ್ಯ ಹೇಳಿ ಸಂತೋಷದಲ್ಲಿದ್ದ ಬುಡಬುಡಕ್ಯಾ ಸ್ವ ವಿಮರ್ಶೆಯತ್ತ ಮನಸ್ಸು ಮಾಡುತ್ತಾನೆ. ತನ್ನ ಕೈಯಲ್ಲಿದ್ದ ಡಮರುಗ ನುಡಿಸುತ್ತ
“ಹೊಟ್ಟೆ ಬಹುಕೆಟ್ಟದಯ್ಯ ’ಕಿಡರ್’
ನಷ್ಟ ಮಾದುದೆಲ್ಲ ದೇಹಾ ಕಿಡರ್ ಪ
ಹೊಟ್ಟೆ ಕೆಟ್ಟದ್ದು ಆದರೆ ದೇವಾ
ಭ್ರಷ್ಟನಾಗುವುದು ಅಯ್ಯಾ ಜೀವಾ ೧
ಶ್ರೇಷ್ಠತನವು ಅಳಿದು ಹೋಗಿ
ಶಠನು ತಾನು ಆಗುವನಯ್ಯ ೨
ಮನಸ್ಸು ಗಟ್ಟಿ ಮಾಡಿ
ಹೊಟ್ಟಿಗೆಷ್ಟು ಬೇಕು ನೋಡಿ ೩
ಹೊಟ್ಟೆ ಕರುಳು ಕೆಟ್ಟು ಹೋದರೆ
ನಷ್ಟವಯ್ಯಾ ನಮ್ಮ ದೇಹಾ ೪
ನಮ್ಮ ಮನಸು ಕಲಿಷಿತವಾಗಿ
ಹೊಲಸು ತವ ಬಲುಮೆ ಹೆಚ್ಚಿ ೫
ಹೊಟ್ಟೆ ಕೆಟ್ಟಮ್ಯಾಲೆ ಹೊಳೆವದಯ್ಯಾ
ತಿಳಿದು ನೋಡಿ ಬದುಕಲು ಉಣ್ಣಯ್ಯ ೬
ಎಂದು ಹಾಡುತ್ತಾ ತಾನು ಸಂಪಾದಿಸಿದ ವಸ್ತು ಒಡವಿ ಗಂಟು ಕಟ್ಟಿ ತನ್ನ ಹರಿವಿಯ ಹಿಂದು-ಮುಂದು ತುಂಬುವನು. ಈ ಗಂಟು ಹೆಗಲಿಗೆ ಭಾರವಾದರೂ ತಾನು ಸಂಪಾದಿಸಿದ ಸಂಪತ್ತಿನಿಂದ ಮನಸ್ಸು ಹಗುರಾಗಿ ದನಿದೆಗೆದು ಇನ್ನೂ ಹಾಡುತ್ತಾನೆ.
ಮನಿಗಿ ಮನಿ ಕೂಡಿದರ
ಓಣಾಗತೈತಿ
ಜನಕ ಜನ ಕೂಡಿದರ
ಜಾತ್ರಾಗತೈತಿ
ಧನಕ ಧನ ಕೂಡಿದರ
ಸಂಪತ್ತಾಗತೈತಿ
ಬಲಕ ಬಲ ಕೂಡಿದ್ರ
ಬೆಸನ್ಯಾಗತೈತ್ರಿ
ಚಂದ ಚಂದ ಕೂಡಿದ್ರ
ಚಂದರಾಮ್ಯಾಗತೈತ್ರಿ
ಯಶಾ ಕೂಡಿ ಬರುವ ಕಾಲ
ಕಾಲಾಗತೈತ್ರಿ
ದುಡಿಯುವ ಕಾಲ ಹಿಂದಾಗತೈತ್ರಿ
ದುಃಖದ ಮಾತೊಂದು ದೂರ
ಉಳಿಯತೈತ್ರಿ’.
ಎಂದು ಹಾಡುತ್ತ ತಾನು ಬೀಡುಬಿಟ್ಟ ಸ್ಥಳಕ್ಕೆ ಹಿಂದಿರುಗಿ ಬರುತ್ತಾನೆ. ಈಗ ಅವನ ಡಮರುಗದ ನಾದವೇ ಬೇರೆಯಾಗಿರುತ್ತದೆ.
Leave A Comment