ಹಿನ್ನೆಲೆ:

ಪ್ರಭು – ಪ್ರಭುತ್ವದಲ್ಲಿ ರಾಜ-ಮಹಾರಾಜರು, ಚಕ್ರವರ್ತಿಗಳು, ಸಾಂತ ಶ್ರೀಮಂತರು ಇವರನ್ನು ಓಲೈಸುವ ವೈದಿಕರಿಗೆ ಅಗ್ರಸ್ಥಾನವಿತ್ತು. ಪ್ರಜೆಗಳು ಇನ್ನಿತರ ಶ್ರೀ ಸಾಮಾನ್ಯರು ಇವರನ್ನು ತಮ್ಮ ಆರಾಧ್ಯ ದೈವವೆಂದು ಬಗೆದಿದ್ದರು. ’ರಾಜಾ ಪ್ರತ್ಯಕ್ಷ ದೇವತಾ’ ಎಂದು ತಿಳಿದುಕೊಂಡ ಆ ಕಾಲದಲ್ಲಿ ಪ್ರಭುಗಳು ಪ್ರಜೆಗಳಿಂದ ಪೂಜೆಗೊಳ್ಳುತ್ತಿದ್ದರು. ಪ್ರಜೆಗಳು ಪ್ರಭುಗಳನ್ನು ಹಾಡಿ, ಹೊಗಳಿ, ಪ್ರಸನ್ನಗೊಳಿಸುತ್ತಿದ್ದರು. ಅವರ ಏಳಿಗೆಯನ್ನು ಬಯಸಿ ಹಾರೈಸುತ್ತಿದ್ದರು. ಬಹುಪರಾಕು ಹೇಳುತ್ತಿದ್ದರು. ಅವರ ಯೋಗ ಕ್ಷೇಮವನ್ನು ಕುರಿತು ಭವಿಷ್ಯ ನುಡಿಯುತ್ತಿದ್ದರು. ಶಕುನ ಹೇಳುತ್ತಿದ್ದರು, ಅವರ ಮನೆತನದ ಇತಿಹಾಸವನ್ನು ಬರೆದಿಟ್ಟುಕೊಳ್ಳುತ್ತಿದ್ದರು. ಅವರ ಪರಂಪರೆಯಲ್ಲಿ ಬಂದ ವ್ಯಕ್ತಿಗಳ ಹೆಸರುಗಳನ್ನು ಅವರು ಮಾಡಿದ ಪರಾಕ್ರಮಗಳನ್ನು , ಮೆರೆದ ಬಿರುದು, ಗಳಿಸಿದ ಸಂಪತ್ತನ್ನು ಬಹು ರಂಜನೀಯವಾಗಿ ಹೇಳುತ್ತಿದ್ದರು. ಆಗ ಇವರೇ ಸಾಹಿತ್ಯ, ಸಂಸ್ಕೃತಿ, ಕಲೆಗಳಿಗೆ ಕೇಂದ್ರಬಿಂದುವಾಗಿದ್ದರು.

ಇಂದು ಕಾಲ ಬದಲಾಯಿತು. ಪ್ರಭುತ್ವ ನೀಗಿ ಪ್ರಜೆಗಳೇ ಪ್ರಭುಗಳು ಆಗಿ ಪರಿಣಮಿಸಿದ್ದಾರೆ. ಪ್ರಜೆಗಳಿಂದ ಪ್ರಜೆಗಳು ಆರಿಸಲ್ಪಟ್ಟು ಪ್ರಜೆಗಳೇ ಪ್ರಭುಗಳಾಗಿ ನಮ್ಮನ್ನು ನಾವು ಆಳಿಕೊಳ್ಳುತ್ತಲಿದ್ದೇವೆ. ಇದು ಪ್ರಜಾಪ್ರಭುತ್ವದ ಉತ್ತಮ ಲಕ್ಷಣ, ಸಾಧನೆ. ಇಂದು ಸಾಮಾನ್ಯನೇ. ವ್ಯಕ್ತಿ, ಶಕ್ತಿ, ಆದಿ ದೈವವಾಗಿ ಕಾಣಿಸಿಕೊಳ್ಳುತ್ತಿದ್ದಾನೆ. ಪ್ರಪಂಚಾದಾದ್ಯಂತ ನಡೆದ ಉತ್ಕ್ರಾಂತಿಯ ಸಮುದ್ರಮಂಥನದಿಂದ ಹೊರಬಂದ ಸಾಮಾನ್ಯ ಪ್ರಜೆಗಳಿಗೆ ಸಂಬಂಧಪಟ್ಟ ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಅಭ್ಯಾಸಕ್ಕೆ ಅಗ್ರಸ್ಥಾನ ದೊರಕಿತು. ಈ ದಿಶೆಯಲ್ಲಿ ಮೊದಲು ಕಂಡ ವ್ಯಕ್ತಿಯೇ ಕೃಷಿಋಷಿ, ಕಾಯಕಯೋಗಿ, ಅನ್ನದಾತ ರೈತ. ಅವನ ಸುತ್ತಮುತ್ತಲು ಹರಡಿಕೊಂಡು, ಹೆಣೆದುಕೊಂಡು, ಅರ್ಥವತ್ತಾಗಿ ಬದುಕು ಸಾಗಿಸುತ್ತ  ಅವನಷ್ಟೇ ಎತ್ತರಕ್ಕೆ ಏರಿದ ಆಯಗಾರರು, ಇನ್ನಿತರ ಕಸಬುದಾರರು, ಕಲಾವಿದರು, ಕವಿ-ಗಮಕಿಗಳು, ಕುಸ್ತಿಪಟುಗಳು, ಆಟ-ಓಟಗಳಲ್ಲಿ ನಿಷ್ಣಾತರು, ಸಾಹಿತಿಗಳು ಇವರೆಲ್ಲರಿಗೂ ಭವಿಷ್ಯ ಹೇಳಿ ಬದುಕಿಗೆ ಬೆಳಕು ನೀಡಿ, ಶಕುನ ಹೇಳಿ, ಶುಭ ನುಡಿದು ಇನ್ನೂ ಎತ್ತರೆತ್ತರಕ್ಕೆ ಏರಲು ಹಾದಿ ಮಾಡಿಕೊಟ್ಟ ಮಹನೀಯರು ಈ ಭೂಮಿಯ ಮೇಲೆ ನಕ್ಷತ್ರದಂತೆ ಮಿನಿ ಮಿನಿ ಮಿನುಗುತ್ತಿದ್ದಾರೆ. ಇವರು ಸಾಹಿತಿಗಳೂ ಹೌದು, ಕಲಾವಿದರೂ ಹೌದು. ಸಂಸ್ಕೃತಿಯ ಕೇಂದ್ರಬಿಂದುಗಳೆಂದು ಕರೆದರೂ ಸರಿಯೇ. ಇವರ ಜೀವನ-ಬದುಕನ್ನು ಒಳಹೊಕ್ಕು ನೋಡಿದಾಗ ಅಲ್ಲಿ ಕಂಡುಬಂದದ್ದೂ ಜೇನು ಹನಿ. ಕನ್ನಡ ಕಸ್ತೂರಿ.  ಪಾವನ ತುಳಸಿ, ಬಿಲ್ವಪತ್ರೆ, ಇವರೆಲ್ಲರೂ ಶ್ರಮಜೀವಿಗಳು, ದೈವ ಭಕ್ತರು ಆಗಿ ತಮ್ಮ ಬದುಕಿನೊಡನೆ ಜನಹಿತವನ್ನೂ ಬಯಸಿ ಆಂದಿನಿಂದ ಇಂದಿನವರೆಗೆ ಎದ್ದು ಕಾಣುವ ವ್ಯಕ್ತಿಗಳೆಂದರೆ ಭವಿಷ್ಯ ಹೇಳುವವರು, ಶಕುನ ಹೇಳುವವರು, ಇವರಿಗೆ ’ಬುಬುಡಕೆ’ ಯವರೆಂದು ಕರೆಯುತ್ತಾರೆ.

ಜನಾಂಗದ ಮೂಲ :

ಮೇಲು ನೋಟಕ್ಕೆ ಬುಡಬುಡಕಿಯರು ಅಲೆಮಾರಿಗಳಂತೆ ಕಂಡು ಬಂದರೂ ಅವರನ್ನು ಸಂಪರ್ಕಿಸಿದಾಗ, ಆಳಕ್ಕಿಳಿದಾಗ ಅವರು ಅಲೆಮಾರಿಗಳಲ್ಲವೆಂದು ತಿಳಿದು ಬರುತ್ತದೆ. ಈ ಜನಾಂಗದ ಮೂಲವನ್ನು ಕೆದಕಿದಾಗ ಇವರು ಮಹಾರಾಷ್ಟ್ರದವರೆಂದು ತಿಳಿದುಬರುತ್ತದೆ. ಸಾಮಾನ್ಯವಾಗಿ ಇವರು ಆಡುವ ಮಾತು, ಸಂಸ್ಕೃತಿ, ಸಂಪ್ರದಾಯ ಇವರ ಇರುವಿಕೆಯನ್ನು ಪಂಜಾಬ, ರಾಜಾಸ್ಥಾನ ಮರಾಠಾ ಸಂಸ್ಕೃತಿಗೆ ಸಾಮೀಪ್ಯವಿರುತ್ತದೆ. ಇದರಿಂದ ಇವರನ್ನು ಮರಾಠ ಜನರೆಂದು ಗುರುತಿಸಬಹುದು. ಅದರಲ್ಲಿಯೂ ಇವರ ಮಾತೃಭಾಷೆ ಮರಾಠಿ ಇವರ ಸಂಸ್ಕೃತಿ, ಪರಂಪರೆಗಳೆಲ್ಲವೂ ಮಹಾರಾಷ್ಟ್ರ ಸಂಪ್ರದಾಯವೇ ಆಗಿದೆ. ಇವರು ಛತ್ರಪತಿ ಶಿವಾಜಿ ಕಾಲಕ್ಕೆ ಶಿವಾಜಿಯ ’ಮಹಾರಾಷ್ಟ್ರ ರಾಜ್ಯ’ ಕಟ್ಟುವ ಸಮಯದಲ್ಲಿಯೂ ಈ ಜನಾಂಗದವರ ಕೈಚಳಕ ಇತ್ತೆಂದು ಹೇಳುತ್ತಾರೆ. ಮಹಾರಾಷ್ಟ್ರ ರಾಜ್ಯ ಅಸ್ತಿತ್ವಕ್ಕೆ ಬಂದು ಅದು ಬೆಳೆದಂತೆ ಈ ಜನ ಭವಿಷ್ಯ ಹೇಳುತ್ತಾ, ಶಕುನ ಹೇಳುತ್ತಾ, ಪಣಕಟ್ಟುತ್ತ ಮೆಲ್ಲ-ಮೆಲ್ಲನೆ ’ಮಹಾರಾಷ್ಟ್ರ ರಾಜ್ಯದಿಂದ’ ಕರ್ನಾಟಕ, ಆಂಧ್ರಪ್ರದೇಶಗಳಲ್ಲಿಯೂ ಪಸರಿಸಿದಂತೆ ಕಾಣುತ್ತದೆ. ಈ ದಿಶೆಯಲ್ಲಿ ಬಹಳ ಜನರು ತಮ್ಮ ಮಾತೃಭಾಷೆ ’ಮರಾಠಿ’ಯಲ್ಲಿ ಮಾತನಾಡುತ್ತ ಯಾವ ರಾಜ್ಯದಲ್ಲಿ ಪಸರಿಸಿ ಬಂದರೋ ಆ ರಾಜ್ಯದ ಭಾಷೆ ಕಲಿತು ಭವಿಷ್ಯ ಹೇಳತೊಡಗಿದರು. ಈ ಜನರು ಕರ್ನಾಟಕಕ್ಕೂ ಆಗಮಿಸಿ ತಮ್ಮ ಮಾತೃಭಾಷೆಯೊಡನೆ ಕನ್ನಡ ಭಾಷೆಯನ್ನು ಕಲಿತು ಕರ್ನಾಟಕದಾದ್ಯಂತ ಪಸರಿಸಿ ಅಲ್ಲಲ್ಲಿ ಮನೆ-ಮಾರುಗಳನ್ನು ಮಾಡಿಕೊಂಡು ಉಪ ಜೀವನ ಸಾಗಿಸುತ್ತಿದ್ದಾರೆ. ಈ ಜನರು ತುಂಬಾ ಚಾಣಾಕ್ಷರು, ಕುಶಲಮತಿಗಳಾಗಿದ್ದಾರೆ. ಮುಖ ನೋಡಿ ಅವರ ಭವಿಷ್ಯ ಹೇಳುವ ಬುದ್ಧಿವಂತರೂ ಹೌದು. ಅವರು ಇಷ್ಟು ಚಾಣಾಕ್ಷರೂ, ಬುದ್ಧಿವಂತರೂ, ಕುಶಲಮತಿಗಳೂ ಆಗಿದ್ದರೂ  ಇವರು ಇನ್ನೂ ಹಳೆಯ ಮೌಢ್ಯವನ್ನು ಬಿಟ್ಟುಹೊರಬಂದಿಲ್ಲ. ಜಗತ್ತಿಗೆ ಜನರ ಭವಿಷ್ಯ ಹೇಳಿ, ಅವರ ಕಂಟಕ ಬಿಡಿಸಿ, ಅವರನ್ನು ಮುನ್ನಡೆಸಿದ ಈ ಬುಡಬುಡಕಿ ತನ್ನ ನಿಜ ಸ್ಥಿತಿಯನ್ನು, ಭವಿಷ್ಯವನ್ನೇಕೆ ಮರೆತನೋ? ನಾವರಿಯೆವು!

ಬುಡಬುಡಕಿಯರು ಕರ್ನಾಟಕ ರಾಜ್ಯದ ಬೆಳಗಾಂ, ಧಾರವಾಡ, ಬಿಜಾಪುರ, ಗುಲಬರ್ಗ, ಬೀದರ, ರಾಯಚೂರು ಜಿಲ್ಲೆಗಳಲ್ಲಿ ಹೆಚ್ಚಾಗಿ ನೆಲೆಸಿದ್ದು ಕಂಡು ಬರುತ್ತದೆ. ಇವರು ಯಾರು ಎಲ್ಲಿಯೇ ನೆಲೆಸಲಿ ಇವರನ್ನು ನೋಡಿದಾಗ ಇವರ ಸ್ಥಿತಿ-ಗತಿಗಳನ್ನು ಗಮನಿಸಿದಾಗ ಇವರು ಮಹಾರಾಷ್ಟ್ರ ಮೂಲದವರೆಂದು ಯಾರೂ ಮರೆಯುವಂತಿಲ್ಲ. ಈ ಜನರ ಬಂದು-ಬಳಗ ನೆಂಟರಿಷ್ಟರೆಲ್ಲರೂ ಇಂದಿಗೂ ಮಹಾರಾಷ್ಟ್ರ ರಾಜ್ಯದಲ್ಲಿರುವುದು ಕಂಡು ಬರುತ್ತದೆ. ಮಹಾರಾಷ್ಟ್ರದಿಂದ ಬಂದು ಕರ್ನಾಟಕದಲ್ಲಿ ನೆಲೆಸಿದ ಇವರು ಯಾವ ಊರಲ್ಲಿ ನೆಲೆಸಿದ್ದಾರೆಯೋ ಆ ಊರಿನವರೆಂದೇ ಹೇಳಿಕೊಳ್ಳುತ್ತಾರೆ. ಬಹುದಿನಗಳ ಹಿಂದೆಯೇ ಬಂದು ನೆಲೆಸಿದ ಈ ಬುಡಬುಡಕಿಯರು ಈಗ ಕನ್ನಡವನ್ನು ಚೆನ್ನಾಗಿ ಕಲಿತುಕೊಂಡು ಕರ್ನಾಟಕದವರೇ ಆಗಿದ್ದಾರೆ. ಈಗ ಇವರು ’ಕನ್ನಡದ ಬುಡಬುಡಕಿ’ಯರು ಆಗಿದ್ದಾರೆ ಎಂದು ಧಾರಾಳವಾಗಿ ಹೇಳಬಹುದು.

ಬುಡಬುಡಕಿಯರ ಭೌಗೋಳಿಕತೆ :

ವಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ, ಮುದ್ದೇಬಿಹಾಳ, ಸಿಂದಗಿ, ಇಂಡಿ ತಾಲ್ಲೂಕುಗಳಲ್ಲಿಯೂ, ಗುಲಬರ್ಗ ಜಿಲ್ಲೆಯ ಅಫಜಲಪುರ ತಾಲ್ಲೂಕು ಮಣ್ಣೂರು, ಮಾಶಾಳ, ಕರ್ಜಗಿ, ಉಡಚಣಗಳಲ್ಲಿಯೂ, ಗುಲಬರ್ಗ ತಾಲ್ಲೂಕು ಮಹಾಗಾಂವ, ಹರಸೂರು, ಜೇವರ್ಗಿ, ಯಡ್ರಾಮಿಗಳಲ್ಲಿಯೂ, ಶಹಾಪುರ ತಾಲ್ಲೂಕು ಶಹಾಪುರಗಳಲ್ಲಿಯೇ ಈ ಜನ ಹೆಚ್ಚಾಗಿ ನೆಲೆಸಿದ್ದು ಕಂಡು ಬರುತ್ತದೆ. ಸುರಪುರ ತಾಲ್ಲೂಕು ರಾಜನ ಕೋಳೂರು, ಬಲಿಶೆಟ್ಟಿಹಾಳ ಇತ್ಯಾದಿ ಕಡೆಗಳಲ್ಲಿ ನೆಲೆಸಿದ್ದು ತಿಳಿದುಬರುತ್ತದೆ.

ಹಾಗೆಯೇ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕು, ಹುಮನಾಬಾದ, ಔರಾಬಾದ, ಭಲ್ಕಿ ಹುಲುಸೂರು ಕಡೆಗಳಲ್ಲಿ ಈ ಜನ ನೆಲೆಸಿದ್ದು ಪರಿಶೀಲನೆಯಿಂದ ತಿಳಿದುಬರುತ್ತದೆ. ಸಾಮಾನ್ಯವಾಗಿ ಇವರಿಗೆ ಮನೆ-ಮಾರುಗಳು ಇದ್ದಂತೆ ಕಾಣುವುದಿಲ್ಲ. ಈ ಬುಡಬುಡಕಿಯರೇ ತಾವು ವಾಸಿಸುವ ಜಿಲ್ಲೆಗಳಲ್ಲಿ, ತಾಲೂಕುಗಳಲ್ಲಿ ಊರುಗಳಲ್ಲಿ ಇಡೀ ವರುಷ ಸಂಚರಿಸಿ, ಭವಿಷ್ಯ ಹೇಳಿ ಉಪಜೀವನ ಸಾಗಿಸುತ್ತಾ ಬಂದಿದ್ದಾರೆ. ತಾವು ಹಂಚಿಕೊಂಡ ಹಳ್ಳಿಗಳಲ್ಲದೆ ಬೇರೆ ಕಡೆಗೆ ಅಂದರೆ ತಮ್ಮದಲ್ಲದ ಹಳ್ಳಿ-ಪಟ್ಟಣಗಳಲ್ಲಿ ಹೋಗಿ ಭವಿಷ್ಯ ಹೇಳಿಬರುವ ಉದಾಹರಣೆಗಳು ಬಹಳ ಕಡಿಮೆ. ಇವರು ಆತ್ಮೀಯರು ಬಂಧು-ಬಳಗದವರು, ಸ್ನೇಹಿತರೂ ಪರಸ್ಪರ ಹಿತೈಷಿಗಳು ಆಗಿದ್ದಾರೆ. ಇವರು ತಮ್ಮ ಸ್ನೇಹ-ವಿಶ್ವಾಸಕ್ಕೆ ಭಂಗ ಬರದಂತೆ ನಡೆದುಕೊಂಡು ಬಂದ ಜನಾಂಗವೆಂದು ಹೇಳಬಹುದು.

ಬುಡಬುಡಕೆ ಜನಾಂಗ, ಒಂದು ಪೌರಾಣಿಕ ಕಲ್ಪನೆ :

ಸಮಾಜ ಇವರನ್ನು ಘನತೆಯಿಂದ ಕಾಣಬೇಕೆಂಬುದೇ ಇವರ ಅಪೇಕ್ಷೆ. ಭವಿಷ್ಯ ಹೇಳುವುದು ಒಂದು ಕಲೆ. ಈ ಕಲೆಯನ್ನು ಅವರು ಕರಗತ ಮಾಡಿಕೊಂಡಿರುತ್ತಾರೆ. ಈ ಕಲೆಯ ಸುತ್ತ-ಮುತ್ತ ಸಾಹಿತ್ಯವೂ ಹೆಣೆದುಕೊಂಡಿದೆ. ನೀತಿ ಮಾತುಗಳು ಪೋಣಿಸಿಕೊಂಡಿವೆ. ಅವರು ಒಳ್ಳೆಯ ಮಾತುಗಳಿಂದ ಜನರನ್ನು ಆಕರ್ಷಿಸುತ್ತಾರೆ. ಅವರು ತಾವು ಸಾಮಾನ್ಯ ಮನುಷ್ಯರಲ್ಲ, ದೇವಾಂಶ ಸಂಭೂತರೆಂದು ಹೇಳಿಕೊಳ್ಳುತ್ತಾರೆ. ಇದಕ್ಕಾಗಿ ಒಂದು ಕಥೆಯೂ ಉಂಟು. ಈ ಕಥೆ ಹೇಳಿ ಜನರಲ್ಲಿ ಅವರು ಸ್ಥಾನಮಾನ ಪಡೆದುಕೊಳ್ಳುತ್ತಾರೆ. ಆ ಕಥೆ ಹೀಗಿದೆ –

’ಒಮ್ಮೆ ಕೈಲಾಶದಲ್ಲಿ ಶಿವ-ಪಾರ್ವತಿಯರು ತಮ್ಮ ಭಕ್ತಾದಿಗಳಿಗೆ ವರ ಪ್ರದಾನ ಮಾಡುತ್ತಿದ್ದರಂತೆ. ಈ ಸಂಗತಿ ಕೇಳಿಬಂದ ಭಕ್ತಾದಿಗಳಿಗೆ ಇವರು ಬೇಡಿದ್ದನ್ನು ಕೊಟ್ಟು, ಸಂತೈಸುತ್ತಿದ್ದರಂತೆ. ಹೀಗೆ ದಿನವಿಡೀ ’ದಾನ’ ಮಾಡಿದ ಶಿವ-ಪಾರ್ವತಿಯರಿಗೆ ಕೈ ಖಾಲಿಯಾಯಿತು. ಈಗ ಈ ’ಬುಡಬುಡಕೆ’ ಜನಾಂಗದವರು ಶಿವ-ಪಾರ್ವತೀ  ಹತ್ತಿರ ಬಂದು ಎಲ್ಲ ಭಕ್ತಾದಿಗಳಿಗೆ ವರ ಕರುಣಿಸಿದಂತೆ ನಮಗೂ ವರ ಪ್ರದಾನ ಮಾಡಬೇಕೆಂದು ಶಿವ-ಪಾರ್ವತಿಯರಿಗೆ ಕೈ ಮುಗಿದು, ಸೆರಗೊಡ್ಡಿ ಬೇಡಿಕೊಡರಂತೆ, ಆಗ ಪಾರ್ವತಿ ಶಿವನ ಕಡೆ ನೋಡಿ ಈ ಭಕ್ತಾದಿಗಳನ್ನು ಹಾಗೆ ಕಳಿಸುವುದು ಬೇಡವೆಂದು ಶಿವನ ಕೈಯಲಿದ್ದ ’ಡಮರುಗ’ವನ್ನು ಕೊಟ್ಟು ಕಳಿಸಿದರಂತೆ’, ’ಡಮರುಗ’ ವನ್ನು ಚೆನ್ನಾಗಿ ನುಡಿಸಿ ಭವಿಷ್ಯ ಹೇಳಿ ಬದುಕಿರಿ ಎಂದು, ಈ ಜನ ಅಂದರೆ ಬುಡಬುಡಕೆಯರು ತಮ್ಮ ನಿತ್ಯ ಜೀವನ ಸಾಗಲಿ ಎಂದು ಕಥೆ ಬರುತ್ತದೆ. ಅದರಂತೆ ಇನ್ನೊಂದು ಕಥೆ ಅಷ್ಟೇ ಸ್ವಾರಸ್ಯಕರವಾಗಿರುತ್ತದೆ.

’ಪ್ರಬಲರಾದ ಮೂರು ಜನ ರಾಕ್ಷಸ ಅಣ್ಣ-ತಮ್ಮಂದಿರು ಅತ್ಯಂತ ಕ್ರೂರ, ಹಿಂಸಾತ್ಮಕ ಕೃತ್ಯದಲ್ಲಿ ತೊಡಗಿದ್ದರು, ಅವರ ಕ್ರೂರ ಕೃತ್ಯಗಳಿಗೆ ದೇವತೆಗಳೂ, ಮನುಷ್ಯರೂ ಬೇಸತ್ತಿದ್ದರು. ಹೇಗಾದರೂ ಮಾಡಿ ಇವರ ಸೊಕ್ಕನ್ನು ಅಡಗಿಸಬೇಕೆಂದು ಹೊಂಚುಹಾಕುತ್ತಿದ್ದರು. ಆಗ ಸಂಚರಿಸುತ್ತ ದೇವರ್ಷಿ ನಾರದ ಮುನಿಗಳು ಭೂಲೋಕವನ್ನು ನೋಡಿಕೊಂಡು ಹಾಗೆ ಸಂಚರಿಸುತ್ತ ದೇವಲೋಕಕ್ಕೆ ಬಂದರು. ಆಗ ದೇವತೆಗಳು ದೇವರ್ಷಿ ನಾರದ ಮುನಿಗಳನ್ನು ಕಂಡು ಭಯ-ಭಕ್ತಿಯಿಂದ ಕೈ ಮುಗಿದು ’ಮುನಿವರ‍್ಯಾ, ಈ ಮೂರುಜನ ರಾಕ್ಷಸ ಬಂಧುಗಳು ಭೂಲೋಕದಲ್ಲಿ ಜನರಿಗೆ ವಿಪರೀತ ತೊಂದರೆ ಕೊಡುತ್ತಿದ್ದಾರೆ. ಇವರ ವಿಪರೀತ ಉಪಟಳದಿಂದ ಭೂಲೋಕ ಒಂದೇ ಸಮನೆ ತತ್ತರಿಸುತ್ತಲಿದೆ. ಅದರಂತೆ ದೇವ ಲೋಕವು ಭಯಭೀತಿಯಲ್ಲಿದೆ. ತ್ರಿಲೋಕ ಸಂಚಾರಿಗಳಾದ ತಮಗೆ ಗೊತ್ತಿರದ ಸಂಗತಿ ಯಾವುದು? ಈ ರಾಕ್ಷಸರ ಸೊಕ್ಕಡಗಿಸಲು ಉಪಾಯವೊಂದನ್ನು ತಾವೇ ಹುಡುಕಿಕೊಡಬೇಕೆಂದು ವಿನಯದಿಂದ ಹೃದಯ ತುಂಬಿ ಪ್ರಾರ್ಥಿಸಿದರು. ಆಗ ನಾರದ ಮುನಿಗಳು ಈ ಮೂರು ಜನ ರಾಕ್ಷಸ ಸೊಕ್ಕಡಗಿಸಲು ಶ್ರೀಕೃಷ್ಣನೊಬ್ಬನೇ ಸಾಕು. ಯಾಕೆಂದರೆ ಅವನೇ ’ಮುರವೈರಿ’ ಅವನಿಂದಲೇ ರಾಕ್ಷಸನ ಕುಲ ನಾಶವಾಗಬೇಕು. ನೀವೆಲ್ಲರೂ ಕೂಡಿ ಶ್ರೀಕೃಷ್ಣ ಪರಮಾತ್ಮನನ್ನು ಪ್ರಾರ್ಥಿಸಿರಿ. ಶ್ರೀ ಕೃಷ್ಣ ಪರಮಾತ್ಮ ಪ್ರಸನ್ನನಾಗಿ ಆ ದುಷ್ಟ ಶಕ್ತಿಯಿಂದ ನಿಮ್ಮನ್ನು ಪಾರುಮಾಡುತ್ತಾನೆ  ಎಂದು ನಾರದ ಮುನಿಗಳು ದೇವ – ಮಾನವ ಲೋಕದ ಜನರಿಗೆ ಮಾರ್ಗದರ್ಶನ ನೀಡಿದರು. ಆಗ ದೇವ-ಮಾನವರೆಲ್ಲರೂ ಒಂದೇ ಮನಸ್ಸಿನಿಂದ ಶ್ರೀಕೃಷ್ಣ ಪರಮಾತ್ಮನ ಹತ್ತಿರ ಬಂದು ನಡೆದ ವೃತ್ತಾಂತವನ್ನೆಲ್ಲ ವಿವರಿಸಿದರು. ಆಗ ರಾಕ್ಷಸರ ಸಹಜ ಶತ್ರುವಾದ ಶ್ರೀಕೃಷ್ಣನು ಈ ರಾಕ್ಷಸ ಸಹೋದರರ ಸದ್ದಡಗಿಸಲು ಬುಡಬುಡಕೆಯ ವೇಷ ಹಾಕಿದನು. ಕೈಯಲ್ಲಿ ಸಣ್ಣದಾದ ಆಕರ್ಷಕವಾದ ’ವಾದ್ಯ’ ಡಮರುಗವನ್ನೂ ಅತ್ಯಂತ ಕಲಾತ್ಮಕವಾಗಿ ನುಡಿಸುತ್ತಾ ಭೂಮಿ ಆಕಾಶವನ್ನು ಒಂದು ಮಾಡಿದನು. ’ಡಮರುಗ’ದ ನಾದ ಭೂಮಿ -ಆಕಾಶದಲ್ಲಿ ತರಂಗ ತರಂಗವಾಗಿ ಹೊರಹೊಮ್ಮಿ ದೇವ ಮಾನವರ ಮನಸ್ಸನ್ನು ಸೆರೆಹಿಡಿಯಿತು.

ಈ ’ಬುಡಬುಡಕೆ’ ಕೈಲಾಸದಿಂದ ಇಳಿದು ಬಂದ ದೇವತೆಯೆಂದು ಬಗೆದರು. ದೇವ, ದಾನವ, ಮಾನವರ ಭವಿಷ್ಯ ಹೇಳಿ, ಅವರ ಕಂಟಕ ಪರಿಹಾರ ಮಾಡುವ ತಾನು ದೇವಲೋಕದ ’ಬುಡಬುಡಕಿ’ ಎಂದು ’ಡಮರು’ ನುಡಿಸಿದ. ತನ್ನ ಪರಿಚಯ ಮಾಡಿಕೊಂಡ. ಆಗ ಈತ ಒಂಟಿ ಬಾಳನ್ನು ಅನುಭವಿಸುತ್ತಿದ್ದ. ರಾಕ್ಷಸರ ಹೆಂಡಂದಿರು ತಮ್ಮ ಭವಿಷ್ಯ ಕೇಳಲು ಈ ಬುಡಬುಡಕೆಯ ಹತ್ತಿರ ಬಂದರು. ಶ್ರೀಕೃಷ್ಣ ಪರಮಾತ್ಮನಿಗೆ ಚೆನ್ನಾಗಿ ಗೊತ್ತಿತ್ತು. ಈ ಪತ್ನಿಯರು ತಮ್ಮ ಪರಮ ಪತಿವ್ರತಾ ಪ್ರಭಾವದಿಂದಲೇ ಈ ರಾಕ್ಷಕರು ಕೊಬ್ಬಿ ಪ್ರಖ್ಯಾತರಾಗಿದ್ದಾರೆ; ಪ್ರಬಲರಾಗಿದ್ದಾರೆ. ತಮ್ಮ ಈ ಶಕ್ತಿ ಸಾಮರ್ಥ್ಯದಿಂದ ದುಷ್ಟತನಕ್ಕೆ, ಕ್ರೂರಕೃತ್ಯಕ್ಕೆ ಇಳಿದಿದ್ದಾರೆ ಇವರ ಹೆಂಡಂದಿರು ಪತಿವ್ರತಾ ಪ್ರಭಾವ ಹಾಳಾದರೆ ಇವರು ತಮ್ಮಷ್ಟಕ್ಕೇ ತಾವೇ ಹಾಳಾಗುತ್ತಾರೆಂದು ಬಗೆದು’ ತಾಯಂದಿರೆ, ತಾವು ಒಂಟಿತನವನ್ನು ನೀಗಿ ತಾಯಿಯಾಗಿ ಬಾಳಬೇಕಾದರೆ ತಾವು ಬೇರೆ ದಾರಿ ತುಳಿಯಬೇಕೆಂದು ಹೇಳಿ ಮುಂದಿನ ಅವರ ಭವಿಷ್ಯದ ಬದುಕನ್ನು ವರ್ಣಿಸಿ ಹೇಳಿದ. ತಾಯ್ತನದ ಹಂಬಲದಿಂದ ಈ ರಾಕ್ಷಸ ಪತ್ನಿಯರು ತಮ್ಮ ಪತಿವ್ರತಾ ಧರ್ಮವನ್ನು ಮರೆತು ಪರಪುರುಷರನ್ನು ಕೂಡಿಕೊಂಡು ಒಂಟಿತನವನ್ನು ನೀಗಿ ತಾಯ್ತನವನ್ನು ಪಡೆದರು. ಆ ಮೇಲೆ ಶ್ರೀಕೃಷ್ಣ ತನ್ನ  ಪ್ರಬಲವಾದ ಚಕ್ರವನ್ನು ಪ್ರಯೋಗಿಸಿ ಸೊಕ್ಕೇರಿದ, ಮದೋನ್ಮತ್ತರಾದ ರಾಕ್ಷಸರನ್ನು ಅಡಗಿಸಿದನು. ಆಗ ಎಲ್ಲ ದೇ ವ-ಮಾನವರು ರಾಕ್ಷಸರ ಉಪಟಳದಿಂದ ಪಾರಾದರಂತೆ’. ಹೀಗೆ ದುಷ್ಟ ಶಕ್ತಿಗಳಾದ ರಾಕ್ಷಸರನ್ನು ಸಂಹರಿಸಿ ವಿಜಯ ದುಂದುಭಿ ಬಾರಿಸುತ್ತ ಬರುವಾಗ ಕೆಲವು ಜನರು ಶ್ರೀಕೃಷ್ಣಪರಮಾತ್ಮನಿಗೆ ಎದುರಾದರು ಭಯ, ಭಕ್ತಿಯಿಂದ ಎರಗಿದರು. ಆಗ ಶ್ರೀಕೃಷ್ಣ ಪರಮಾತ್ಮನು ಜನರ ಸಭ್ಯತೆ, ಚಾಣಾಕ್ಷತನವನ್ನು ಗುರುತಿಸಿ ತನ್ನ ಕೈಯಲ್ಲಿದ್ದ ’ಡಮರುಗ’ವನ್ನು ದಯಪಾಲಿಸಿದ. ಈ ’ಡಮರುಗ’ ನುಡಿಸಿ ಜನಾಕರ್ಷಣೆಗೊಳಿಸಿ, ಅವರ ಮುಂದಿನ ಜೀವನ ಭವಿಷ್ಯ ಹೇಳಿ ಜನಜೀವನವನ್ನು ಬದುಕಿಸುತ್ತ, ನೀವೂ ಬದುಕುತ್ತ ಬಾಳಿರಿ ಎಂದು ಹೇಳಿ ಆಶೀರ್ವದಿಸಿದನಂತೆ’. ಅಂದಿನಿಂದ ಈ ಜನರು ’ಡಮರುಗ’ ನುಡಿಸಿ ಭವಿಷ್ಯ ಹೇಳುತ್ತಾ ಸಂಚರಿಸುತ್ತಾರೆ. ಈ ಜನರಿಗೆ ಬುಡಬುಡಕಿಯರು ಎಂದು ಕರೆಯುತ್ತಾರೆ.

ಬುಡಬುಡಕಿಯವರ ಮಾತೃಭಾಷೆ :

ಇಂದಿಗೂ ಈ ಜನ ಅನಕ್ಷರಸ್ಥರಾಗಿದ್ದಾರೆ. ಕಡು ಬಡತನದಲ್ಲಿಯೇ ಕಾಲ ಕಳೆಯುತ್ತಿದಾರೆ. ಮೊದಲಿನಂತೆ ತಮಗೆ ಹಳ್ಳಿಗಳಲ್ಲಿ ಸಂಚರಸಿ ಭವಿಷ್ಯ ಹೇಳಿ, ಪಣಕಟ್ಟಿ ಹಕ್ಕಿಯ ಶಕುನ ಹೇಳುತ್ತ ಹಳ್ಳಿ-ಪಟ್ಟಣಗಳಲ್ಲಿ ಅಲೆಯುತ್ತಿದ್ದಾರೆ. ಇವರ ಮಾತೃಭಾಷೆ ಮರಾಠಿ. ಇಂದಿಗೂ ಈ ಜನ ಮನೆಗಳಲ್ಲಿ ತಮ್ಮ ಬಂಧು-ಬಳಗದೊಂದಿಗೆ ಮರಾಠಿ ಭಾಷೆಯಲ್ಲಿಯೇ ಮಾತನಾಡುವರು. ಕನ್ನಡ ನಾಡಿನಲ್ಲಿ ನೆಲೆಸಿರುವುದರಿಂದ ಇವರು ಮರಾಠಿ, ಕನ್ನಡ, ಭಾಷೆಗಳೆರಡನ್ನೂ ಬಳಸುತ್ತಾರೆ. ಇವರಿಗೆ ಎರಡು ಭಾಷೆಗಳಲ್ಲಿ ಮಾತನಾಡಲಿಕ್ಕೆ ಬಂದಂತೆ ಈ ಎರಡು ಭಾಷೆಗಳಲ್ಲಿ ಬರೆಯಲಿಕ್ಕೆ ಬರುವುದಿಲ್ಲ. ಕಾರಣ ಇವರು ಅನಕ್ಷರಸ್ಥರು. ಇವರಿಗೆ ಅಕ್ಷರಾಭ್ಯಾಸದ ಅವಕಾಶವೇ ಸಿಕ್ಕಿಲ್ಲ. ಕಾರಣ ಇವರು ಒಂದು ಕಡೆ ನೆಲೆ ನಿಂತವರಲ್ಲ. ಒಂದು ಊರಿಂದ ಇನ್ನೊಂದು  ಊರಿಗೆ ಸಂಚರಿಸಿ ಭವಿಷ್ಯ ಹೇಳಿ ಬದುಕುವುದೇ ಒಂದು ದೊಡ್ಡ ಸಾಹಸ. ಈ ಸಾಹಸ ಇಂದಿಗೂ ನಡೆದಿದೆ.

ಕನ್ನಡ ನಾಡಿನಲ್ಲಿ ನೆಲೆಸಿದ ಇವರು ತಮ್ಮ ಮಾತೃಭಾಷೆಯೊಡನೆ ಕನ್ನಡ, ತೆಲುಗು, ಉರ್ದು, ಹಿಂದಿಯಲ್ಲಿ ಮಾತನಾಡುವುದನ್ನು ಕಲಿತಿದ್ದಾರೆ. ಕನ್ನಡ ನಾಡಿನಲ್ಲಿ ಎಲ್ಲ ಜನರ, ಎಲ್ಲ ಭಾಷಿಕರ ಜನರಿಗೂ ಇವರು ಭವಿಷ್ಯ ಹೇಳಿ ಬರುವ ಬುದ್ಧಿವಂತರು, ಸರಕಾರಿ ಅಧಿಕಾರಿಗಳಿಗೂ, ರಾಜಕಾರಣಿಗಳಿಗೂ, ಇನ್ನಿತರ ಹೊಲ-ಮನೆ, ದನ-ಕರುಗಳನ್ನು ಕಳೆದುಕೊಂಡವರಿಗೂ ಇವರು ಭವಿಷ್ಯ ಹೇಳುತ್ತಾರೆ. ಇತ್ತೀಚೆಗೆ ಇಂಗ್ಲೀಷು ಕಲಿತು ಅಧಿಕಾರಿಗಳಿಗೂ, ರಾಜಕಾರಣಿಗಳಿಗೂ ಭವಿಷ್ಯ ಹೇಳುವುದು ಇಂಗ್ಲೀಷು ಕಲಿತು ಪದಗಳನ್ನು ನಡುನಡುವೆ ತಮ್ಮ ಇಷ್ಟದೇವತೆಯ ಹೆಸರು ಹೇಳಿ ತಮ್ಮ ಭವಿಷ್ಯಕ್ಕೆ ಮೆರಗು ನೀಡುತ್ತಾರೆ. ಮಧ್ಯದಲ್ಲಿ ತಮ್ಮ ಕೈಯಲ್ಲಿನ ’ ಡಮರುಗ’ ನುಡಿಸಿ ತಾವು ನುಡಿಯುವ, ಭವಿಷ್ಯಕ್ಕೆ ದೈವತ್ವ ತಂದುಕೊಡುತ್ತಾರೆ.

ಇತ್ತೀಚೆಗೆ ತಾಲೂಕು ಸ್ಥಳಗಳಲ್ಲಿ, ಹೋಬಳಿ ಮಟ್ಟದಲ್ಲಿ ನೆಲೆಸಿರುವ ಬುಡಬುಡಕಿಯರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿದ್ದಾರೆ. ಅವರು ಅರ್ಧಮರ್ಧ ಶಿಕ್ಷಣ ಪಡೆದರು. ತಮ್ಮ ಕುಲಕಸಬು ಭವಿಷ್ಯ ಹೇಳುವುದರ ಕಡೆ ಒತ್ತುಕೊಟ್ಟು ಇಂದಿಗೂ ಭಿಕ್ಷಾ ವೃತ್ತಿಯಲ್ಲಿಯೇ ಮುಂದುವರೆದಿದ್ದಾರೆ. ಕೆಲವರು, ಶಿಕ್ಷಣ ವೃತ್ತಿಯಲ್ಲಿ ಮತ್ತೆ ಕೆಲವರು ಪೊಲೀಸ ಇಲಾಖೆಯಲ್ಲಿ ಸೇರಿ ಕೆಲಸ ಮಾಡುತ್ತಿದ್ದಾರೆ. ಅದು ಕಣ್ಣಲ್ಲಿ ಹೂ ಬಿದ್ದಂತೆ ಮಾತ್ರ ಎಂದು ಹೇಳಬಹುದು. ಇಂದಿಗೂ ಈ ಜನಕ್ಕೆ ಕನ್ನಡ ಉಚ್ಛಾರಣೆ ಚೆನ್ನಾಗಿ ಬರುವುದಿಲ್ಲ. ಕಾಋಣ ಮಾತೃಭಾಷೆಯ ಮೆರಗು ಅವರನ್ನು ಬೆಂಬಿಟ್ಟುಕೊಂಡಿದೆ. ’ಡಮರುಗ’ ಇನ್ನೂ ಅವರ ಕೈಯಲ್ಲಿ ’ಬುಡಬುಡ-ಕಿಡ-ಬುಡ’ ಎಂದು ಕಿಡಿ ಕಾರುತ್ತದೆ. ಭವಿಷ್ಯದ ಹೊಗೆ ಹಾರುತ್ತಿದೆ. ’ಬುಡಬುಡಕಿ ಎಂದಿನಂತೆ –

’ಬಲಾ ಬರತೈತಿ, ಬಲಾ ಬರತೈತಿ, ಹಕ್ಕಿ ನುಡಿತೈತಿ, ಹೊತ್ತಿಗೆ ಹೇಳುತೈತಿ ಬಲಾ ಬರತೈತಿ, ಬಲಾ ಬರತೈತಿ’ ಎಂದು ಹಳ್ಳಿಯ ವಿಶಾಲವಾದ ಹಾದಿ ಬೀದಿಯಲ್ಲಿ ಹಾಡುತ್ತ ’ಡಮರುಗ’  ನುಡಿಸುತ್ತ ಭವಿಷ್ಯ ಹೇಳುತ್ತಾನೆ.

ವೇಷಭೂಷಣ :

ಬುಡಬುಡಕಿಯರಿಗೆ ವಿಶೇಷವಾದ ವೇಷ-ಭೂಷಣಗಳು ಇರದಿದ್ದರೂ ಸಮಾಜದ ಗಮನ ಸೆಳೆಯಲು ತನ್ನದೇ ಆದ ಇರುವಿಕೆಯೊಂದಿದೆ. ಇವರು ಧೋತರ ಉಟ್ಟು ಡಬಲ್ ಕಪ್ಪಿನ, ಡಬಲ್ ಕಾಲರ್ ಅಂಗಿ ತೊಟ್ಟು ಅದರ ಮೇಲೆ ಕೋಟು ತೊಟ್ಟು ತುಂಬ ಅಚ್ಚುಕಟ್ಟಾಗಿ ಕಾಣುತ್ತಾರೆ. ತಲೆಗೆ ಬಣ್ಣದ ರುಮಾಲು ತುಂಬ ಅಚ್ಚುಕಟ್ಟಾಗಿ ಸುತ್ತಿರುತ್ತಾರೆ. ಆ ರುಮಾಲದ ಮೇಲೆ ತಮಗೆ ಬಂದ ಬಿರುದು, ಪಾರಿತೋಷಕ ಇನ್ನಿತರ ತಾಯಿತ, ಬೆಳ್ಳಿಯ ಪದಕಗಳ ಪಟ್ಟಿಯನ್ನು ಕಟ್ಟಿಕೊಂಡಿರುತ್ತಾರೆ. ಜೊತೆಗೆ ಅನೇಕ ಮಣಿ, ಹರಳು, ಹವಳುಗಳಿಂದ ಈ ಪಟ್ಟಿ ಅಲಂಕೃತವಾಗಿರುತ್ತದೆ. ಇದರ ಜೊತೆಗೆ ಬಿಳಿ ಬಣ್ಣದ ಜರಿಯಂಚಿನ ಶೆಲ್ಲೆ ಹೆಗಲಮೇಲೆ, ಒಂದು ಕೈಯಲ್ಲಿ ಬಣ್ಣದ ಎದೆಯುದ್ದ ದುಂಡ ಬಡಿಗೆರ ಜರತಾರಿ ಶೆಲ್ಲೆಯಿಂದ ಕಂಗೊಳಿಸುತ್ತಿರುತ್ತದೆ.

ಈ ಬುಡಬುಡಕಿ ಹಣೆಗೆ ಬಂಧ, ಕುಂಕುಮ ಹಚ್ಚಿಕೊಂಡು ತುಂಬ ಲಕ್ಷಣವಾಗಿ ಕಾಣಿಸುತ್ತಾನೆ. ಕಿವಿಯ ಮೇಲೆ ಮೇಲೆ ’ಮುರು’ ಎಂಬ ಒಂದು ಬಂಗಾರದ ಮುರು ತೂಗಾಡುತ್ತದೆ. ಬುಡಬುಡಕಿ ಬಾಯಿ ತೆರೆದರೆ ಚೆಂದ ಕಾಣಬೇಕೆಂದು ತನ್ನ ಒಂದು ಹಲ್ಲಿಗೆ ಬಂಗಾರದ ತಗಡು ಬಡಿಸಿಕೊಂಡಿರುತ್ತಾನೆ. ಇವನು ಬಾಯಿ ತೆರೆದರೆ ಸಾಕು ಆ ಬಂಗಾರದ ಪಟ್ಟಿ ಥಳಥಳ ಹೊಳೆಯುತ್ತಿರುತ್ತದೆ. ಇವರ ಇನ್ನೊಂದು ಭುಜದ ಮೇಲೆ ಎರಡೂ ಕಡೆ ಬಾಯಿ ಇರುವ ಹಸಿಬೆಯನ್ನು ಹಾಕಿಕೊಂಡಿರುತ್ತಾನೆ. ಜೋಳಿಗೆಯ ಹಿಂದಿನ ಬದಿ ಜೋಳ, ಕಾಳು, ಹಳೆಯ ಅರಿವೆ-ಅಂಚಡಿ ಹಾಕಿಕೊಳ್ಳುತ್ತಾನೆ. ಇನ್ನೊಂದು ಮುಂದಿನ ಜೋಳಿಗೆಯಲ್ಲಿ ಭವಿಷ್ಯ ಕೇಳಿದ ಜನರು ಕೊಟ್ಟ ಕಾಣಿಕೆ, ಊಟದ ಪದಾರ್ಥ ಹಾಕಿಕೊಳ್ಳುತ್ತಾನೆ. ಇವನು ಹೇಳುವ ಭವಿಷ್ಯಕ್ಕೆ ಮಾರುಹೋಗಿ ದವಸ -ಧಾನ್ಯಗಳನ್ನಷ್ಟೇ ಅಲ್ಲ ಕುರಿ, ಕೋಳಿ, ಆಕಳು ಇತ್ಯಾದಿ ಪ್ರಾಣಿಗಳನ್ನು ಕಾಣಿಕೆಯಾಗಿ ಕೊಡುತ್ತಾರೆ’ ’ಬೇಡಿಯುಂಡ ಬಾಯಿ ನಾಡು ಕಂಡಂತೆ’ ಭವಿಷ್ಯ ಹೇಳಿದ ’ಬುಡಬುಡಕಿ’ ನಾಡ ರುಚಿಯನ್ನು ಬಲ್ಲವನಾಗಿದ್ದಾನೆ.

ವಾದ್ಯ ಮತ್ತು ಇತರ ಪರಿಕರಗಳು :

ಅತ್ಯಂತ ಸುಂದರವಾಗಿ, ಅಲಂಕಾರವಾಗಿ ಬರುವ ಬುಡಬುಡಕಿಯರು ಮನದಲ್ಲಿ ದೇವರ ನಾಮಸ್ಮರಣೆ, ಹೃದಯದಲ್ಲಿ ಜನಮನವನ್ನು ಗೆಲ್ಲುತ್ತೇನೆಂಬ ಭಾವ, ಕೈಯಲ್ಲಿ ಚಿಕ್ಕದಾದರೂ ಊರ ಜನರನ್ನೇ ಎಚ್ಚರಿಸುವ ನಾದಮಾಧುರ್ಯದಿಂದ ಕೂಡಿದ ’ಡಮರುಗ’ ಊರ ಆಯಕಟ್ಟಿನ ಸ್ಥಳಗಳಲ್ಲಿ ನಿಂತು ಈ ಡಮರುಗ ಬಾರಿಸಿದರೆ ಸಾಕು ಓಣಿಯ ಮಕ್ಕಳು ಓಡಿಬಂದು ಅವನ ಸುತ್ತ-ಮುತ್ತಲೂ ನೆರೆಯುತ್ತಾರೆ. ’ಬುಡಬುಡಕ್ಯಾ’ ಬಂದಾ ಎಂದು ಕೂಗಿ ಕೇಕೆ ಹಾಕಿ ಕುಣಿದಾಡುತ್ತಾರೆ. ಎಲ್ಲ ಗೆಳೆಯರು ನೆರೆಯುತ್ತಾರೆ ಆಗ ಓಣೀಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ. ಓಣಿಯಲ್ಲಿ ಸಂಭ್ರಮದಲ್ಲಿ ಸಂಭ್ರಮ. ಆಗ ಆ ಬುಡಬುಡಕ್ಯಾ ತನ್ನ ಕೈಯಲ್ಲಿದ್ದ ಡಮರುಗ ನುಡಿಸುತ್ತಾನೆ. ಡಮರುಗದ ನಾದ -ಮಾಧುರ್ಯ ಆ ಸಂಭ್ರಮಕ್ಕೆ ಉತ್ಸಾಹಕ್ಕೆ ಅಪೂರ್ವ ಕಳೆ ತಂದುಕೊಡುತ್ತದೆ.

ಡಮರುಗದ ತಾಳಕ್ಕೆ ತಕ್ಕಂತೆ – ಹೆಜ್ಜೆ ಹಾಕಿ ಓಣಿಯಲ್ಲಿ ಬರುವ ಬುಡಾಬುಡಕ್ಯಾನ ಹತ್ತಿರ ಜನರೂ ಬರುತ್ತಾರೆ. ’ಬುಡಬುಡಕಿ’ ಏನು ಹೇಳುತ್ತಾನೆ ಎಂಬ ತವಕ ಎಲ್ಲರ ಮನದಲ್ಲಿ ಗರಿಗೆದರಿ ನಿಲ್ಲುತ್ತದೆ. ಬುಡಬುಡಕಿ ನುಡಿಸುವ ಡಮರುಗ ಅತ್ಯಂತ ಕಲಾಪೂರ್ಣವಾಗಿರುತ್ತದೆ. ಈ ಡಮರುಗ ’ನಾದ’ ಮನುಷ್ಯನ ಮನಸ್ಸನಷ್ಟೇ ಅಲ್ಲ, ಈ ನುಡಿಯು ಹಕ್ಕಿಗಳ, ಹಾರಾಡುವ ಪಕ್ಷಿಗಳ ಗಮನವನ್ನು ಸೆರೆಹಿಡಿದು ನಿಲ್ಲಿಸುತ್ತದೆ. ಅಂತಹ ಕಲೆಯಿಂದಲೂ, ತಪಸ್ಸಿನಿಂದಲೂ ಅನುಭವದ ಬೆಳಕಿನಿಂದಲೂ ಹಕ್ಕಿಗಳ ದನಿ, ಮಾತುಗಳನ್ನು ಅರ್ಥ ಮಾಡಿಕೊಳ್ಳುವ ಇವನೊಬ್ಬ ದೇವ ಮಾನವ ಎಂಬ ಭಾವನೆ ಜನರಲ್ಲಿ ಮೂಡಿಸುತ್ತಾನೆ. ಈ ನಂಬಿಕೆಯಿಂದ ಅವನೊಬ್ಬ ಕಲಾವಂತ, ಭವಿಷ್ಯ ಹೇಳುವ ದೇವಮಾನವ ಎಂಬ ಪವಿತ್ರ ಭಾವನೆ ಜನರ ಮನದಲ್ಲಿ ಮೂಡಿದಾಗ ಅವನು ಹೇಳುವ ಭವಿಷ್ಯ ಕೇಳಲು ಜನ ಮುಂದೆ ಬರುತ್ತಾರೆ. ಮೃದು -ಮಧುರವಾದ ಅವನ ಧ್ವನಿ.

’ಶುಭವಾಗತೈತಿ, ಶುಭವಾಗತೈತಿ, ಜಯವಾಗುತೈತಿ, ಜಯವಾಗುತೈತಿ,
ಹಿಂಗ ಹಕ್ಕಿ ನುಡಿಯತೈತಿ, ಹಿಂಗ ಹಕ್ಕಿ ನುಡಿಯತೈತಿ’

ಎಂದು ನೆಲದ ಮೇಲೆ ಹೆಜ್ಜೆ ಇಟ್ಟು ಮುಂದೆ ಬರುತ್ತಾನೆ. ’ಬುಡಬುಡಕಿಯ’ ವರಿಗೆ ಡಮರುಗದ ನಾದ -ಮಾಧುರ್ಯ ಕೂಡಿಕೊಂಡಿರುವುದರಿಂದ ಅವನು ಹೇಳುವ ಭವಿಷ್ಯ ಕೇಳಬೇಕೆಂದನಿಸುತ್ತದೆ; ಜನರಿಗೆ, ಹೀಗೆ ಮನೆಯ ಅಂಗಳದಲ್ಲಿ ತಿರುಗಾಡುತ್ತ ಬರುವ ಈ ಬುಡಬುಡಕಿ ಅಂಗಳವೂ ಸ್ವಚ್ಛವಾಗಿರಬೇಕೆಂದು ಹೇಳುತ್ತಾನೆ, ಮನೆಯ ಮುಂದೂ ಸ್ವಚ್ಛವಾಗಿರಬೇಕೆಂದು ಹೇಳುತ್ತಾನೆ. ಅಂಗಳು ಹಸನಾಗಿರುತ್ತದೆ, ಮನೆಯೂ ಹಸನಾಗಿರುತ್ತದೆ. ಮನೆಯು ಹಸನಾಗಿದ್ದರೆ ಮನವೂ ಹಸನಾಗಿರುತ್ತದೆ. ಮನೆ-ಮನೆಗಳು ಹಸನಾಗಿದ್ದರೆ ಆ ಮನೆಗೆ ’ಬಲಬರತೈತಿ’ ಯಶದೋರಕತೈತಿ’ ಎಂದು ಡಮರುಗ ನುಡಿಸುತ್ತ ಶುಭ ನುಡಿಯುತ್ತ ಆರೋಗ್ಯ ಕಡೆ ಜನರ ಗಮನ ಸೆಳೆಯುತ್ತಾನೆ.

ಡಮರುಗದ ರಚನೆ :

ಡಮರುಗ ಶಿವನ ಪವಿತ್ರ ವಾದ್ಯ. ಈ ವಾದ್ಯವನ್ನು ನಯವಾದ ಸಾಗವಾನಿ ಕಟ್ಟಿಗೆಯಿಂದ ತಯಾರಿಸುತ್ತಾರೆ. ಒಂದು ಸಣ್ಣ ಸಾಗವಾನಿ ತುಂಡು, ಅದನ್ನು ತೆಗೆದುಕೊಂಡು ಆ ತುಂಡಿನ ಎರಡೂ ಕಡೆಗೆ ಬಟ್ಟಲಿನ ಹಾಗೆ ಕೆತ್ತಿ ತೆಗೆಯುತ್ತಾರೆ. ಆ ತುಂಡಿನ ಮಧ್ಯ -ನಡು ಭಾಗದಲ್ಲಿ ಕೈ ಬೆರಳಿನಿಂದ ಹಿಡಿಯಲು ಅನುಕೂಲವಾಗುವಂತೆ, ಸಣ್ಣದಾಗಿ ಕೆತ್ತುತ್ತಾರೆ. ಈ ನಡುಭಾಗವೂ ಪೊಳ್ಳು ಇರುತ್ತದೆ. ಸಿಲಿಂಡರ ಆಕಾರದಲ್ಲಿ ಕೆತ್ತಿದ ಈ ಡಮರುಗದ ಎರಡು ಕಡೆಗೂ ಹೊಟ್ಟೆಯ ಭಾಗದ ನಯವಾದ ಚರ್ಮ ತೆಗೆದು ಅದನ್ನು ಚೆನ್ನಾಗಿ ಬಿಸಿಲಿಗೆ ಒಣಗಿಸಿ ಬಿಗಿಯುತ್ತಾರೆ. ಈ ರೀತಿ ಬಿಗಿಯುವ ದಾರಕ್ಕೆ ’ಬದ್ದಿ’ ದಾರವೆಂದು ಕರೆಯುತ್ತಾರೆ.

ಈ ಬದ್ದಿದಾರ ಹಿಡಿಕೆಯ ಮಧ್ಯಭಾಗದಿಂದ ಎರಡೂ ಕಡೆಗೆ ಬಡಿಯಲು ಅಳತೆಯಲ್ಲಿ ಕತ್ತರಿಸಿ ತೆಗೆದು ಆ ದಾರದ ತುದಿಗೆ ’ಮೇಣ’ವನ್ನು ಅಂಟಿಸುತ್ತಾರೆ. ಆಗ ಅ ದಾರದ ತುದಿಗಳು ಗಂಟಿನಂತೆ ಕಾಣುತ್ತವೆ. ಈ ಡಮರುಗ ಬಾರಿಸಿದರೆ ’ಕಿಡರ್ -ಕಿಡಬುಡ’ ಎಂಬ ಸಪ್ಪಳ ಹೊರಹೊಮ್ಮಿ ಬರುತ್ತದೆ. ಈ ಡಮರುಗ ನಾದವನ್ನು ಗಮನಿಸಲು ಇದನ್ನು ನುಡಿಸುವ ಜನರಿಗೆ ಬುಡುಬುಡಕಿ ಅಥವಾ ಕಿಡುಬಡುಕಿ ಎಂದು ಕರೆಯುತ್ತಾರೆ.

ಈ ಡಮರುಗಕ್ಕೆ ಸಣ್ಣ ಜರದ ವಸ್ತ್ರವನ್ನು ಒಂದೆರಡು ಗೆಜ್ಜೆಗಳನ್ನು ಅನುಕೂಲವೂ ಸುಂದರವೂ ಕಾಣುವಂತೆ ಕಟ್ಟಿರುತ್ತಾರೆ. ಇದನ್ನು ಬಾರಿಸಲು ಗುರುಮುಖದಿಂದಲೇ ಕಲಿಯಬೇಕು. ಇದು ಒಂದು ಜಾನಪದ ಆಕರ್ಷಕವಾದ ವಾದ್ಯವೆಂದು ಜಾನಪದ ತಜ್ಞರು ಗುರುತಿಸಿದ್ದಾರೆ. ನಿಜವಾಗಿಯೂ

’ಡಮರುಗ’ ಒಂದು ಪವಿತ್ರ, ಮಂಗಳಕರ ವಾದ್ಯ; ಜಾನಪದ ವಾದ್ಯವೆಂದು ಹೇಳಬಹುದು.

ಬುಡಬುಡಕಿಯರ ಕೈಯಲ್ಲಿ  ಡಮರುಗ ಇದ್ದೇ ಇರುತ್ತದೆ.  ಇದನ್ನು ’ಬುಡಬುಡಕಿ’ ಹದವರಿತು ನುಡಿಸುತ್ತಾನೆ. ಈ ಡಮರುಗ ತಾಳ, ಲಯ, ಶೃತಿಗಳನ್ನರಿತು ಬಾರಿಸಿ ನಾದ ಹೊರಹೊಮ್ಮಿಸುತ್ತಾನೆ. ಈ ’ಡಮರುಗ’ ನುಡಿಸುವ ವಿಧಾನಗಳು ಬೇರೆಬೇರೆಯಾಗಿ ಇರುತ್ತವೆ.

’ಪಣದ ವಾದನ’, ’ತಾಳಿನ ವಾದನ’, ’ಹಾಡುವಾಗಿನ ವಾದನ’ ಮಾತಾಡುವಾಗಿನ ವಾದನ ಅನುಕರಣೆಯ ವಾದನ, ಭವಿಷ್ಯ ಹೇಳುವಾಗಿನ ವಾದನ’ ಹೀಗೆ ಡಮರುಗದ ವಾದನ ಬೇರೆ ಬೇರೆಯಾಗಿರುತ್ತದೆ. ಬುಡಬುಡಕಿಯವರು ಹದವರಿತು ಈ ಡಮರುಗ ನುಡಿಸಿ ಭವಿಷ್ಯ ಹೇಳಿ ಪಾರಿತೋಷಕ ಪಡೆಯುತ್ತಾರೆ.

ಬುಡಬುಡಕಿಯರ ಕೌಟುಂಬಿಕ ಜೀವನ :

’ಬುಡಬುಡಕಿ’ ಅವರ ಕುಟುಂಬದಲ್ಲಿಯೂ ಪುರುಷನೇ ಪ್ರಧಾನ ವ್ಯಕ್ತಿ. ಅವನೇ ಮನೆಯ ಯಜಮಾನ. ಕುಟುಂಬದ ನಿರ್ವಹಣೆ ಮನೆಯ ಯಜಮಾನನನ್ನೇ ಅವಲಂಬಿಸಿರುತ್ತದೆ. ಕುಟುಂಬದ ನಿರ್ವಹಣೆಗೆ ಈ ವ್ಯಕ್ತಿ ’ಬುಡಬುಡಕಿ’ಯ ವೇಷ ತೊಟ್ಟು, ಶಕುನ ಹೇಳಿ ಮನೆಯ ಅವಶ್ಯಕತೆಯನ್ನು ಪೂರೈಸಿಕೊಳ್ಳುತ್ತಾನೆ. ಮನೆಯಲ್ಲಿ ಇವನೊಬ್ಬನೇ ಅಲ್ಲ, ಹೆಂಡತಿ, ಮಕ್ಕಳು, ತಂದೆ-ತಾಯಿ ಇನ್ನಿತರ ಬಂಧು-ಬಳಗವನ್ನೊಳಗೊಂಡ ಇವರದು ದೊಡ್ಡ ಕುಟುಂಬ, ಅವಿಭಕ್ತ ಕುಟುಂಬ.

ತಾನು ವಾಸ ಮಾಡುವ ತಳದಲ್ಲಿಯೇ ಇವರ ತಾಯಿ ತಂದೆ ಇನ್ನಿತರ ಬಂಧು-ಬಳಗ ಉಳಿದುಕೊಂಡಿರುತ್ತಾರೆ. ಭವಿಷ್ಯ ಹೇಳಲು ಬಂದಾಗ ಇವನ ಸಂಗಡ ಇವನ ಹೆಂಡತಿ ಮಕ್ಕಳೂ ಇವನ ಜೊತೆಯಲ್ಲಿಯೇ ಇರುತ್ತಾರೆ. ಇವರು ಹಳ್ಳಿಗಳಿಗೆ  ಬಂದಾಗ ಈ ಬುಡಬುಡಕಿಯರು ಊರ ಹನುಮಂತರ ದೇವರ ಗುಡಿಯಲ್ಲಿಯಾಗಲಿ, ಚಾವುಡಿಯಲ್ಲಿಯಾಗಲಿ ಅಥವಾ ದೇವಿಯ ಗುಡಿಯ ಅಂಗಳದಲ್ಲಾಗಲಿ ಇಳಿದುಕೊಳ್ಳುತ್ತಾರೆ. ಮಕ್ಕಳನ್ನು ತಾವು ಇಳಿದುಕೊಂಡ ಸ್ಥಳದಲ್ಲಿಯೇ ಬಿಟ್ಟು ಗಂಡಸರು ಭವಿಷ್ಯ ಹೇಳುತ್ತಾ ಹೋಗುತ್ತಾರೆ.

ಇವರ ಹೆಣ್ಣುಮಕ್ಕಳು ಅಂದರೆ ಹೆಂಡತಿ, ಅಕ್ಕ-ತಂಗಿ ಯಾರೇ ಇದ್ದರೂ ಅವರು ಹಲ್ಲುಪುಡಿ, ಸೂಜಿ, ದಾರ, ಕವಡಿ, ಕರ್ಪೂರ, ಗೊಂಬೆ ಇತ್ಯಾದಿ ಸಣ್ಣಪುಟ್ಟ ವಸ್ತುಗಳನ್ನು ಬುಟ್ಟಿಯಲ್ಲಿಟ್ಟುಕೊಂಡು ಆ ಊರಿನಲ್ಲಿ ಮಾರಾಟ ಮಾಡುತ್ತಾ ಓಣಿ, ಓಣಿ ಅಡ್ಡಾಡುತ್ತಾರೆ. ಹೀಗೆ ಹೆಣ್ಣು ಮಕ್ಕಳು ವ್ಯಾಪಾರ ಉದ್ಯೋಗದಲ್ಲಿ ತೊಡಗುತ್ತಾರೆ. ಗಂಡಸರು ಹಕ್ಕಿಯ ಪಣ ಕಟ್ಟಿ ಶಕುನ ಹೇಳುವುದು ಹಸ್ತ ಸಾಮುದ್ರಿಕೆ ನೋಡಿ ಭವಿಷ್ಯ ಹೇಳುವುದು ಹೀಗೆ ಅತ್ಯಂತ ಕಷ್ಟಕರ ಜೀವನ ಸಾಗಿಸುತ್ತ ಇದುವರೆಗೂ ಇದೇ ಕಸಬು, ಕಾಯದಲ್ಲಿಯೇ ಇದ್ದಾರೆ. ಅದರಲ್ಲಿ ಹೆಣ್ಣುಮಕ್ಕಳ ಸ್ಥಿತಿ ತೀರಾ ಶೋಚನೀಯದ್ದಾಗಿದೆ.

ಇಲ್ಲಿ ಪುರುಷನೇ ಅಂದರೆ ಬುಡಬುಡಿಕಿ  ವ್ಯಕ್ತಿಯ ಹಾವಭಾವ ಮುಖಮಂಡಲ, ಹಸ್ತ ಸಾಮುದ್ರಿಕೆ ನೋಡುವುದರ ಮೂಲಕ ’ಪಂಚಾಂಗ ಪಠಣವನ್ನೂ ಮಾಡುವುದರ ಮೂಲಕ ವಿಶೇಷವಾಗಿ ’ಹಾಲಕ್ಕಿ’ ನುಡಿದ ನುಡಿಗಳನ್ನು ಅರ್ಥಮಾಡಿಕೊಂಡು ಹೇಳುವ ಕಲೆ ಇವರಿಗೆ ಕರಗತವಾಗಿರುತ್ತದೆ. ಇದಕ್ಕೆ ’ಪಣಕಟ್ಟುವುದು’ ಹಕ್ಕಿ ಇದನ್ನೇ ನುಡಿಯಿತು’ ಎನ್ನುವ ಪಣದ ನುಡಿ ಎಂದರೆ ಪಣಕಟ್ಟುವುದು. ಇದೇ ಬುಡಬುಡಕಿಯರ ’ಸಬು ಅಥವಾ ಕಾಯಕ’ದ ಜೀವ ಜೀವಾಳ. ಇದಕ್ಕಾಗಿಯೇ ಅವನು ಅಂದರೆ ’ಬುಡಬುಡಕಿ ಕಾಯಕದವನು ಎಲ್ಲಿಲ್ಲದ ಶ್ರಮ ಪಡಬೇಕಾಗುತ್ತದೆ. ಎಲ್ಲ ಬುಡಬುಡಕಿಯವರು ಈ ಕಸುಬಿನೊಂದಿಗೆ ತನ್ನನ್ನು ತಾನು ಅರ್ಪಿಸಿಕೊಂಡು ಈ ಕಸಬು ಮಾಡುವುದು ತನಗಾಗಿ ಅಲ್ಲವೆಂಬ ಭಾವನೆ ಮೂಡಿಸುತ್ತಾನೆ.

ಬುಡಬುಡಕಿಯವರು ಈ ಕಲೆ ಕೈವಶ ಮಾಡಿಕೊಳ್ಳಲು ಅಷ್ಟೇ ಶ್ರಮ ಪಡಬೇಕಾಗುತ್ತದೆ. ಈ ಕಲೆಯ ಸಾಧನೆಗೆ ಸ್ಮಶಾನವೇ ಇವರಿಗೆ ಅತ್ಯಂತ ಪವಿತ್ರವಾದ ಸ್ಥಳ. ಅದರಲ್ಲಿ ಅಮಾವಾಸೆಯ ಕತ್ತಲು ಇನ್ನೂ ಇವರಿಗೆ ಪುಣ್ಯಕಾಲ. ರಾಜಯೋಗವೆಂದು ಭಾವಿಸುತ್ತಾರೆ. ಸಾಧಕರು ತಮ್ಮ ಅನುಕೂಲ ನೋಡಿಕೊಂಡು ಕೆಲವರು ರಾತ್ರಿ ೧೦ ಗಂಟೆಗೆ, ಇನ್ನು ಕೆಲವರು ಮಧ್ಯರಾತ್ರಿಯಲ್ಲಿಯೇ ಮಹತ್ವದ ಸಮಯವೆಂದು ಭಾವಿಸಿಕೊಂಡು ತಮ್ಮ ವೇಷ-ಭೂಷಣದೊಂದಿಗೆ ಸ್ಮಶಾನಕ್ಕೆ ಹೋಗುತ್ತಾರೆ. ಅದು ನಿರ್ಜನ, ನೀರವ ಪ್ರದೇಶವಾಗಿರುವುದರಿಂದ ಅಲ್ಲಿಯೇ ಒಂದು ಪಕ್ಷಿ, ಪ್ರಾಣಿ, ಹಕ್ಕಿ, ಹಲ್ಲಿ ಇನ್ನಿತರ ಯಾವುದೇ ಈ ಪ್ರಕಾರದ ಸಪ್ಪಳ ಬಂದರೆ ಈ ಬುಡಬುಡಕಿ ಬೆಚ್ಚಿಬೀಳದೆ ಅಂಜಿಕೊಳ್ಳದೆ, ತಾನು ಸಂಗಡ ತಂದಿದ್ದ ಕಂದೀಲು ಬೆಳಕಿನಲ್ಲಿ ದೇವರ ನಾಮಸ್ಮರಣೆ ಮಾಡುತ್ತ ರುದ್ರ ಭೂಮಿಯ ಆಯಕಟ್ಟಿನ ಸ್ಥಳಕ್ಕೆ ಹೋಗುತ್ತಾನೆ. ಅಲ್ಲಿ ತನ್ನ ಸಂಗಡ ತಂದ ಜೋಳಿಗೆ (ಹಸಿಬಿ) ಇಟ್ಟು ಆ  ಸ್ಥಳಕ್ಕೆ ನೀರು ಚಿಮುಕಿಸಿ ಪವಿತ್ರಗೊಳಿಸಿ ರಂಗೋಳಿ ಹಾಕಿ, ತಾನೂ ತನಗಾಗಿ ಒಂದು ಸಣ್ಣ ಹಚ್ಚಡ ಹಾಸಿ, ಕಂದೀಳು ಬೆಳಕು ಸಣ್ಣದು ಮಾಡಿ ತದೇಕ ಚಿತ್ತದಿಂದ ದೇವರ ನಾಮಸ್ಮರಣೆ ಮಾಡುತ್ತ ಕುಳಿತುಕೊಳ್ಳುತ್ತಾನೆ. ಸ್ಮಶಾನ ಮಧ್ಯರಾತ್ರಿ ಭಯಂಕರ ಕತ್ತಲೆ, ನೀರವ, ನಿಶ್ಯಬ್ದ ಮೌನ ವಾತಾವರಣವನ್ನು ಭೇದಿಸಿ ಗೂಬೆಯ ಗುರ್ ಗುರ್ ಎಂದ ಕರ್ಣಕಠೋರ ಶಬ್ದ ಕೇಳಿಬರುತ್ತದೆ. ಎಲ್ಲೆಡೆ ಭಯ, ಅಂಜಿಕೆಯ ವಾತಾವರಣ, ಬುಡಬುಡಕಿ ಅವನು ಧೈರ್ಯವಾಗಿ ಅಂಜಿಕೆಯನ್ನು ಮೆಟ್ಟಿ ಗಟ್ಟಿಯಾಗಿ ಕುಳಿತುಕೊಳ್ಳುತ್ತಾನೆ. ಅಷ್ಟರಲ್ಲಿ ಹಾಲಕ್ಕಿಯ ’ಚಿಲಿಪಿಲಿ-ಕಿಡರ್’ ಶಬ್ದಗಳು ಕೇಳಿಬರುತ್ತವೆ. ಹಕ್ಕಿಯ ದನಿ ಕೇಳಿಬರುವ ದಿಕ್ಕಿನತ್ತ ಗಮನ ಕೊಟ್ಟು ಆ ದಿಕ್ಕಿನ ಮಹಿಮೆ, ಹಿನ್ನೆಲೆ ಮುಂತಾದವುಗಳನ್ನು ಅರ್ಥಮಾಡಿಕೊಂಡು ಶಕುನ ಅಥವಾ ಭವಿಷ್ಯ ಹೇಳಲು ಅಣಿಯಾಗುತ್ತಾನೆ.

ಹೀಗೇ ಇಡೀ ರಾತ್ರಿ ಸುಡಗಾಡಿನಲ್ಲಿ ಕಾಲ ಕಳೆದ ಇವರು ಹಾಲಕ್ಕಿ ನುಡಿಗಳನ್ನು ಅರ್ಥಮಾಡಿಕೊಂಡು ಶಕುನ ಅಥವಾ ಭವಿಷ್ಯ ಹೇಳಲು ಅದೇ ರಾತ್ರಿ, ಆ ರುದ್ರಭೂಮಿಯಿಂದಲೇ ಬೆಳಗಿನ ಬೆಳ್ಳಿಚುಕ್ಕಿ ಮೂಡಿ ತುಸು ಮೇಲೆ ಬರುತ್ತಲೇ ಈ ಬುಡಬುಡಕಿಯವರು ಆ ಸುಪ್ರಭಾತದ ಮಂಗಲಮಯ ವಾತಾವರಣದಲ್ಲಿ ಊರ, ಕೇರಿಗಳನ್ನು ಸುತ್ತುತ್ತಾರೆ. ಆಗ ಊರಿನ ಜನರು ಕೆಲವರು ಸಕ್ಕರೆ ನಿದ್ದೆಯಲ್ಲಿ ತೇಲಾಡುತ್ತಿದ್ದರೆ, ಇನ್ನು ಕೆಲವರು ಎದ್ದು ತಮ್ಮ ನಿತ್ಯದ ಕಾರ್ಯಕಲಾಪಗಳಲ್ಲಿ ತೊಡಗಿರುತ್ತಾರೆ. ಇಂತಹ ಮಂಗಳಮಯ ವಾತಾವರಣಕ್ಕೆ ಕಳೆ ಕಟ್ಟುವಂತೆ ’ಬುಡಬುಡಕಿ’ ತನ್ನ ಶುಶ್ರಾವ್ಯ ಕಂಠದಿಂದ ದೇವರ ನಾಮಸ್ಮರಣೆ ಮಾಡುತ್ತ –

’ಪಾಂಡುರಂಗ ಪಾಂಡುರಂಗ
ಪಾಂಡುರಂಗ ಪಾಂಡುರಂಗ..
ಕಿಡರ್, ಕಿಡರ್, ಕಿಡ್
ಮನೆಯೊಳು ಪಾಂಡುರಂಗ
ಧ್ಯಾನದೊಳು ಪಾಂಡುರಂಗ

ಕನಸಿನಲ್ಲಿ ಪಾಂಡುರಂಗ
ಮನಸ್ಸಿನಲ್ಲಿ ಪಾಂಡುರಂಗ ೧

ಅಲ್ಲಿ ಇಲ್ಲಿ ಪಾಂಡುರಂಗ
ಎಲ್ಲ ಜಾಗ ಪಾಂಡುರಂಗ  ೨

ಬಡವರಲ್ಲಿ ಪಾಂಡುರಂಗ
ಬಲ್ಲಿದರಲ್ಲಿ ಪಾಂಡುರಂಗ  ೩

ಬಂದವರಲ್ಲಿ ಪಾಂಡುರಂಗ
ಹೋದವರು ಪಾಂಡುರಂಗ          ೪

ಬಡಿದವ ಪಾಂಡುರಂಗ
ಬಡಿಸಿಕೊಂಡವ ಪಾಂಡುರಂಗ      ೫

ಜಗತುಂಬ ಪಾಂಡುರಂಗ
ಪಾಂಡುರಂಗ ನಿನ್ನ ಸಂಗ ೬

ಬುಡಬುಡಕಿ ನಿನ್ನ ರಂಗ
ಬಾರಿಸಿ ಹಾಡುವುದು ನಿನ್ನ ಸಂಗ    ೭

ಹೀಗೆ ಆ ಸುಪ್ರಭಾತ ಸಮಯದಲ್ಲಿ ತನ್ನದೇ ಆದ ವೇಷ-ಭೂಷಣದಿಂದ ಅಲಂಕೃತಗೊಂಡ ಬುಡಬುಡಕಿ ಅರ್ಥಸಹಿತವಾಗಿ ತನ್ನ ಕೈಯೊಳಗಿದ್ದ ಡಮರುಗ ನುಡಿಸಿ ಊರ ಕೇರಿಗಳನ್ನು ಸಂಚರಿಸುತ್ತಾನೆ. ಆಗ ನುಡಿಯುತ್ತಿರುವ ಹಾಲಕ್ಕಿಯ ನುಡಿಗಳನ್ನು ಇನ್ನೂ ಆಲಿಸಿ ಕೇಳುತ್ತಾನೆ. ಅಷ್ಟರಲ್ಲಿ ಮಸುಕಿರುಳು ಹರಿದು ನಸುಕಾಗುತ್ತದೆ. ಆಗ ಬುಡಬುಡಕಿ ತಾನು ಬೀಡುಬಿಟ್ಟಿದ್ದ ಹನುಮಂತರ ದೇವರ ಮಂದಿರ, ಇಲ್ಲವೆ ಮರಗಮ್ಮನ ಗುಡಿಯ ಮುಂದೆ ಬಂದು ತನ್ನ – ವೇಷ – ಭೂಷಣ ತೆಗೆದು ಹೆಂಡರು – ಮಕ್ಕಳೊಡನೆ ಕೂಡಿಕೊಂಡು ರಾತ್ರಿ ನಡೆದ ರಾತ್ರಿ ಕಂಡ ಚಮತ್ಕಾರಗಳನ್ನೂ ಹಕ್ಕಿಯ ಮಾತುಗಳನ್ನೂ ಕೂಗಿ ಕೂಗಿ ’ಗುರ್’ ಶಬ್ದಗಳನ್ನು ನೆನೆಪಿಸಿಕೊಳ್ಳುತ್ತಾನೆ. ಇಲ್ಲಿಗೆ ಮೊದಲನೆಯ ಹಂತ ಮುಗಿಯುತ್ತದೆ.

ಈಗ ಅವನ ಕಸಬಿನ ಮೊದಲನೆಯ ಹಂತದ ಕಸರತ್ತು ಮುಗಿದು ಎರಡನೆಯ ಹಂತಕ್ಕೆ ಬರುತ್ತಾನೆ. ಮೊದಲನೆಯ ಹಂತದಲ್ಲಿ ಇಡೀ ರಾತ್ರಿ ಸುಡುಗಾಡಿನಲ್ಲಿ ಕಳೆದು ಹಕ್ಕಿನುಡಿ ಕೇಳಿ ಬೆಳ್ಳಿಚುಕ್ಕಿ ಮೂಡಿದ ಮೇಲೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜನ ಜಾಗೃತಗೊಳಿಸಿದ ಬುಡಬುಡಕಿ ತಾನು ಬಂದ ಸುದ್ದಿ ’ಡಮರುಗ’ ಬಾರಿಸುವುದರ ಮೂಲಕ ಮನದಟ್ಟು ಮಾಡಿಕೊಡುತ್ತಾನೆ. ಜನರು ಬುಡಬುಡಕಿ ಅವರ ಕಡಿಯಿಂದ ಭವಿಷ್ಯ ಕೇಳಲು ಕುತೂಹಲವುಳ್ಳವರಾಗುತ್ತಾರೆ.

ಅಷ್ಟರಲ್ಲಿ ಮುಂಜಾನೆ ೭ ಅಥವಾ ೮ ಗಂಟೆಯಾಗಿರುತ್ತದೆ. ಸ್ನಾನ, ದೇವರ ಧ್ಯಾನ ಮುಂಜಾನೆಯ ಕಾರ್ಯ ಮುಗಿಸಿಕೊಂಡು ಆಕರ್ಷಕವಾದ ತನ್ನ ವೇಷ ಭೂಷಣಗಳೊಂದಿಗೆ ಗ್ರಾಮದ ಪ್ರಮುಖ ಓಣಿ ಕೇರಿಗಳಲ್ಲಿ ಕನಿಷ್ಟ, ಎರಡು ಮೂರು ದಿನ ಫೇರಿ ಹೊಡೆಯುತ್ತಾನೆ. ತನ್ನ ಡಮರುಗ ಬಾರಿಸುತ್ತಾ, ಹಾಡುತ್ತಾ, ಹಿತವಚನ ಹೇಳುತ್ತ ವಿಷಯ ಸಂಗ್ರಹಿಸುತ್ತಾನೆ. ಊರಿನ ವಾತಾವರಣ ತಿಳಿದುಕೊಳ್ಳುತ್ತಾನೆ.

ಇಂದಿಗೂ ಯಾವುದೇ ಹಳ್ಳಿ, ಪಟ್ಟಣಗಳಲ್ಲಿ ತಾಪತ್ರಯಗಳಿಗೇನೂ ಕೊರತೆಯಿಲ್ಲ. ಅಡಚಣೆಗಳಿಂದ ಜನ ದೂರ ಸರಿದಿಲ್ಲ. ಜಗಳ ತಂಟೆ ಎಂದಿನಂತೆ ನಿಚ್ಚಳವಾಗಿಯೇ ಇವೆ. ಜೂಜು, ಕುಡಿತ ಕಡಿಮೆಯಾಗಿಲ್ಲ. ಈ ಎಲ್ಲ ವಿಷಯ ತಿಳಿದುಕೊಂಡು ಬುಡಬುಡಕಿ ಭವಿಷ್ಯ ಹೇಳಲು ಪೂರ್ವ ತಯಾರಿ ಮಾಡಿಕೊಳ್ಳುತ್ತಾನೆ. ತಾನು ಹೇಳುವ ಭವಿಷ್ಯ ’ಹಸಿ ಗೋಡೆಯ ಮೇಲೆ ಹಳ್ಳು ಒಗೆದಂತೆ’ ಎಂದು ಹೇಳಿ ಜನರ ಮೇಲೆ ನಂಬಿಗೆ ಹುಟ್ಟಿಸುತ್ತಾನೆ. ಇಷ್ಟೆಲ್ಲ ಕಸರತ್ತು ಮೊದಲೇ ಮಾಡಿಕೊಳ್ಳುತ್ತಾನೆ.

ಹೀಗೆ ಊರಿಗೆ ಬಂದ ಬುಡಬುಡಕಿ ಎರಡು ಮೂರು ದಿನ ಕಳೆಯುತ್ತಲೇ ಊರ ಪ್ರಮುಖರಾದ ಗೌಡ, ಕುಲಕರ್ಣಿ, ಇನ್ನಿತರ ಪ್ರಮುಖ ವ್ಯಕ್ತಿಗಳನ್ನು ಭೇಟಿಯಾಗಿ ಅವರಿಗೆ ವಿನಯದಿಂದ ವಂದಿಸಿ ’ ನಾನು ಈ ನಿಮ್ಮ ಗ್ರಾಮಕ್ಕೆ ಬಂದು ಎರಡು ಮೂರು ದಿವಸ ಆಯ್ತು ದೇವರು. ದಿನಾ ಬೆಳ್ಳಿಚುಕ್ಕಿ ಹೊರಡು ಹೊತ್ತಿಗೆ ಎದ್ದು ಊರು, ಕೇರಿಗಳನ್ನು ಸುತ್ತಿ ಹಾಲಕ್ಕಿ ಹೇಳಿದ ಮಾತು ’ಯಪ್ಪಾ ಧಣೇರ, ತಮ್ಮ ಮುಂದೆ ಹೇಳಲು ಈ ನಿಮ್ಮ ಮಗಾ ಬುಡಬುಡಕ್ಯಾ ಹೇಳಬೇಕಂತಾನ್ರಿ ಅದಕ್ಕೆ ತಮ್ಮ ಅಪ್ಪಣೆ ಬೇಕ್ರಿಯಪ್ಪಾ’. ಎಂದು ಅತ್ಯಂತ ವಿನಯದಿಂದ ಹೇಳಿಕೊಂಡು ಅವರ ಅಪ್ಪಣೆ ಪಡೆದು ಬುಡಬುಡಕ್ಯಾ ಹಕ್ಕಿ ಹೇಳಿದ ಪಣದ ಮಾತು, ಊರಿನಲ್ಲಿ ಮುಂದಾಗುವ ಭವಿಷ್ಯ ಹೇಳಲು ಪ್ರಾರಂಭಿಸುತ್ತಾನೆ. ಅವನು ಹೇಳುವ ಮಾತುಗಳು, ನುಡಿ ಮುತ್ತುಗಳು ವಿನಯಪೂರ್ವಕ, ಆಕರ್ಷಕವಾಗಿದ್ದು ಅವನು ಹೇಳಿದ ಭವಿಷ್ಯಕ್ಕೆ ಮೆರಗು ಕೊಡುತ್ತದೆ.