ಜನಪದ ಸಾಹಿತ್ಯ ಅಧ್ಯಯನಗಳು ಆರಂಭಗೊಂಡ ಹಿನ್ನೆಲೆಯಲ್ಲಿ ಜನಾಂಗಿಕ ಸಾಂಸ್ಕೃತಿಕ ಅಧ್ಯಯನಗಳ ಯುಗವೇ ಆರಂಭವಾಯಿತೆನ್ನಬೇಕು. ಇದೇ ಸಂದರ್ಭದಲ್ಲಿ ಉಪ ಸಂಸ್ಕೃತಿಗಳ ಅಧ್ಯಯನವನ್ನೂ ಮರೆಯುವ ಹಾಗಿಲ್ಲ. ಸಂಸ್ಕೃತಿ ಕುರಿತ ಅಧ್ಯಯನದ ಸುಗ್ಗಿಯ ಕಾಲ ಇದು ಎನ್ನಬೇಕು?

[1] ಜಾನಪದ ಪ್ರಜ್ಞೆ ಜಾಗೃತವಾದಂತೆ ಸಂಶೋಧಕರಲ್ಲಿ ಜನಾಂಗಿಕ ಅಧ್ಯಯನ ಹೊಸ ಆಯಾಮ ಪಡೆಯುತ್ತ ಮುನ್ನಡೆಯಿತು. ನಮ್ಮ ಸಂಸ್ಕೃತಿಯ ಉಳಿವಿಗೂ, ಪರಂಪರಾಗತವಾದ ಸಾಂಸ್ಕೃತಿಕ ಸಂಪತ್ತಿನ ತಿಳಿವಿಗೂ ಈ ತೆರನಾದ ಅಧ್ಯಯನ ವಿಧಾನ ಅಗತ್ಯ.

ಜಾನಪದ, ಜೀವನದಷ್ಟೇ ವಿಶಾಲವಾದುದು. ಅದಕ್ಕೆ ಅನಂತ ಮುಖಗಳು. ದೈನಂದಿನ ಉಡುಗೆ-ತೊಡುಗೆ, ಊಟೋಪಚಾರ, ವೃತ್ತಿ, ಸಂಪ್ರದಾಯ, ನಂಬಿಕೆಗಳು, ಆಚರಣೆಗಳು, ಭಾಷೆ, ವೇಷ, ಹಾಡು, ಗಾದೆ, ಒಗಟು, ಕುಣಿತ ಮೊದಲಾದವುಗಳ ಸಂಗಮ “ಜನಪದ ಜೀವನ”

ಕರ್ನಾಟಕದಲ್ಲಿ ಕಂಡು ಬರುವ ಅಲೆಮಾರಿ ಜನಪದ ಸಮೂಹಗಳಲ್ಲೇ[2] ಅಲೆಮಾರಿ, ಅರೆ ಅಲೆಮಾರಿಗಳಾದ ಬುಡ್ಗಜಂಗಮರೂ ಒಬ್ಬರಾಗಿದ್ದಾರೆ. ಜನಪದ ಪ್ರದರ್ಶನ ಕಲೆಗಳಲ್ಲಿ ಲೌಕಿಕ ಮತ್ತು ಅಲೌಕಿಕ ಹಿನ್ನೆಲೆಯ ವೃತ್ತಿ ಕಲೆಗಳನ್ನು ಅವಲಂಭಿಸಿಯೇ ಬದುಕುವ ಜನಪದ ವೃಂದಗಳಿವೆ. ಬುಡ್ಗಜಂಗಮರು ಲೌಕಿಕ ವೃತ್ತಿ ಕಲೆಯ ಗುಂಪಿಗೆ ಸೇರಿದವರು. ಜನಪದ ಪ್ರದರ್ಶಕ ಕಲೆಗಳಲ್ಲಿ ಧರ್ಮ ಪ್ರಸಾರ ಕಂಡು ಬಂದರೂ ಮನರಂಜನೆಯೊಂದಿಗೆ ಸಂಪಾದನೆಯೂ ಮುಖ್ಯವಾಗಿರುತ್ತದೆ. ಅದರಿಂದಲೇ ಅವರ ಬದುಕು ಸಾಗುತ್ತದೆ. ಬುಡ್ಗಜಂಗಮರು ಮಾತ್ರ ಜೀವನ ನಿರ್ವಹಣೆಗಾಗಿ ತಲತಲಾಂತರವಾಗಿ ವೇಷ ಹಾಕುವುದನ್ನೇ ಮೂಲವೃತ್ತಿಯನ್ನಾಗಿ ಅನುಸರಿಸಿಕೊಂಡು ಬಂದವರಾಗಿದ್ದಾರೆ. ಸ್ತ್ರೀ ಸಂಸ್ಕೃತಿಯ ನೆಲೆಯಲ್ಲಿ ಇಡೀ ಬುಡ್ಗ ಜಂಗಮ ಸಂಸ್ಕೃತಿಯನ್ನು ಇಲ್ಲಿ ವಿವೇಚಿಸುವುದು ಈ ಪ್ರಬಂಧದ ಆಶಯವಾಗಿದೆ.

ಹಳ್ಳಿಯಿಂದ ಹಳ್ಳಿಗೆ ತಿರುಗಿ ವೇಷ ಪ್ರದರ್ಶಿಸಿ, ಅದಕ್ಕೆ ಪ್ರತಿಯಾಗಿ ಭಿಕ್ಷೆ ಪಡೆದು ಅದರಿಂದಲೇ ಜೀವನ ನಡೆಸುವ ಜನಾಂಗ ಇದು. ಪ್ರತಿಯೊಂದು ಊರಿನಲ್ಲಿ ಹತ್ತು-ಹನ್ನೆರಡು ದಿನ ವಸತಿ ಇದ್ದು, ದಿನಕ್ಕೊಂದು ರೂಪ, ವೇಷ ಹಾಕಿ, ಓಣಿ ಓಣಿ, ಮನೆ ತಿರುಗಾಡಿ ಸಂಭಾಷಣೆ ಹಾಗೂ ಹಾಡುಗಳ ಮೂಲಕ ಜನಪದರನ್ನು ರಂಜಿಸುತ್ತಾರೆ. ಇವರ ಪ್ರದರ್ಶನದಲ್ಲಿ ನೀತಿ, ತತ್ವ, ಧರ್ಮದ ಸಂದೇಶ ಇರುವುದಿಲ್ಲ. ಜನಸಾಮಾನ್ಯರಲ್ಲಿ ಸಾಂಸ್ಕೃತಿಕ, ಧಾರ್ಮಿಕ, ಪೌರಾಣಿಕ ಜಾಗೃತಿಯನ್ನುಂಟು ಮಾಡುವ ರೂವಾರಿಗಳು ಬುಡ್ಗಜಂಗಮರಾಗಿದ್ದರೆಂದರೆ ತಪ್ಪೇನಿಲ್ಲ. ಅವರಾಡುವ ಭಿಕ್ಷೆಯನ್ನು “ಧರ್ಮದ ಭಿಕ್ಷೆ” ಎಂದೇ ಕರೆಯುತ್ತಾರೆ. ಕಾಳು ಕಡಿ, ಬಟ್ಟೆ-ಬರೆ, ಹಣ, ದನ-ಕರುಗಳನ್ನು ದಾನವಾಗಿ ಪಡೆಯುವರು. ಲೌಕಿಕ ವೃತ್ತಿ ಕಲಾವಿದರಾದ ಇವರು ಕರ್ನಾಟಕದಲ್ಲೆಡೆ ಕಂಡು ಬರುತ್ತಾರೆ. ಬುಡ್ಗಜಂಗಮ ಜನಾಂಗದಲ್ಲಿ ಪುರುಷರು ಪ್ರತಿದಿನ ಮುಂಜಾನೆಯಿಂದ ಮಧ್ಯಾಹ್ನದವರೆಗೆ ವೇಷ ಪ್ರದರ್ಶಿಸಿದರೆ, ಹೆಣ್ಣು ಮಕ್ಕಳು ಮತ್ತು ಸಣ್ಣ ಮಕ್ಕಳು ಕೈಯಲ್ಲಿ ದಮ್ಮಡಿ ಅಥವಾ ಕೈಪೇಟಿ ಹಿಡಿದು ತಾವು ನೆಲೆ ನಿಂತಿರುವ ಮತ್ತು ಸಮೀಪ ಇರುವ ಊರುಗಳಿಗೆ ಹೋಗಿ ಹಾಡು, ಕಥೆ ಹೇಳಿ ಭಿಕ್ಷೆ ಪಡೆಯುತ್ತಾರೆ. ಕುಟುಂಬದವರೆಲ್ಲರೂ ಕಲೆಯನ್ನು ಕರಗತ ಮಾಡಿಕೊಂಡಿರುವ ಜನಸಮೂಹ ಇದಾಗಿದೆ. ಇದು ಅಲೆಮಾರಿ ಜನಪದ ವೃಂದಗಳ ವೈಶಿಷ್ಯವೂ ಹೌದು.

ಒಂದು ಊರಿನಿಂದ ಇನ್ನೊಂದು ಊರಿಗೆ ದನ ಕರುಗಳ, ಎತ್ತು, ಕತ್ತೆ, ಕುದುರೆಗಳ ಮೇಲೆ ತಮ್ಮ ಸಂಸಾರದ ಸರಕು-ಸರಂಜಾಮುಗಳನ್ನು ಹೇರಿಕೊಂಡು ಅಥವಾ ತಾವೇ ಹೊತ್ತುಕೊಂಡು ಬಂದು ಊರ ಹೊರಗಿನ ಬಯಲಿನಲ್ಲಿ “ಬಿಡಾರ”[3] ಹೂಡಿಕೊಂಡು ವಾಸಮಾಡುವರು. ಒಂದೊಂದು ತಂಡದಲ್ಲಿ ನಾಲ್ಕೈದು ಕುಟುಂಬಗಳಿರುತ್ತವೆ. ವೇಷ ಪ್ರದರ್ಶನ ಒಟ್ಟಿಗೆ ಇದ್ದರೆ ವಸತಿ ಮಾತ್ರ ಪ್ರತ್ಯೇಕವಾಗಿರುವುದು ಈ ಜನಾಂಗದ ಮತ್ತೊಂದು ವಿಶೇಷ. ಆಧುನೀಕರಣ ಪರಿಣಾಮದಿಂದ ವೇಷ ಪ್ರದರ್ಶನ ಕುಟುಂಬ ಇಂದು ತುಂಬಾ ವಿರಳವಾಗುತ್ತಲಿದೆ.

ಬುಡ್ಗಜಂಗಮ ಪದ:

“ಬುಡ್ಗಜಂಗಮ” ಪದಕ್ಕೆ ಮೊದಲು ಬಹುರೂಪಿ, ವೇಷಗಾರ ಪದ ಹೆಚ್ಚು ಪ್ರಚಲಿತ ಇದ್ದವು. ಶರಣರ ವಚನಗಳಲ್ಲಿ ಮತ್ತು ಸಾಹಿತ್ಯ ಕೃತಿಗಳಲ್ಲಿ “ಬಹುರೂಪ” ಭೈರೂಪ, ವೇಷಧಾರಿ ಮುಂತಾದ ಪದಗಳು ಯಾವುದೇ ವ್ಯತ್ಯಾಸ ಇಲ್ಲದೆ ಬಳಸಲ್ಪಟ್ಟಿವೆ. ಶಬ್ದಕೋಶದಲ್ಲಿ “ಬಹುರೂಪಿ” ಪದದ ಅರ್ಥ ಹಲವು ಬಗೆ, “ಸೋಗು ಹಾಕುವ” “ವೇಷಕಾರ” “ನಟ”, “ಜಾತಿಗಾರ”[4]  ಎಂದಿದೆ.

“ಬಹುರೂಪ”ಯಷ್ಟೇ ಪ್ರಚಲಿತವಿರುವ ಪದ “ವೇಷಗಾರರು” ಎಂಬುದು. ಇದೊಂದು ವೃತ್ತಿ ಸೂಚಕ ಪದ. ಕಂಚುಗಾರ, ಬಳೆಗಾರ, ಕಂಬಾರ, ಕುಂಬಾರ, ಹೂಗಾರ ಪದಗಳಂತೆ ವೇಷಧರಿಇಸುವ ಜನಾಂಗ. ದಿನಕ್ಕೊಂದು ವೇಷ, ರೂಪ ಹಾಕುವ ಕಾರಣದಿಂದ “ಬಹುರೂಪಿ” ಪದ ಬಂದಿದೆ. ಭಕ್ತಿಯ ಆಂದೋಲನದ ೧೨ನೆಯ ಶತಮಾನದಲ್ಲಿ ಶರಣರು ಧರ್ಮ ಪ್ರಚಾರಕ್ಕಾಗಿ ಈ ಕಲೆಯನ್ನು ಬಳಸಿಕೊಂಡಂತೆ ಕಂಡು ಬರುತ್ತದೆ. ಬಹುರೂಪಿ ಚೌಡಯ್ಯನೆಂಬ ಶರಣನೇ ಇದ್ದುದಾಗಿ ತಿಳಿದು ಬರುತ್ತದೆ. ಚೌಡಯ್ಯ ಬಹುರೂಪಿ ಕಲೆಯಲ್ಲಿ ನಿರತನಾಗಿದ್ದನು. ಆಗಲೂ ಕೂಡಾ ಇದು ವೃತ್ತಿ ಸೂಚಕವಾಗಿತ್ತು. ಬಹುರೂಪಿ ಕಲೆಗಾರಿಕೆಯನ್ನು ಕಾಯಕವನ್ನಾಗಿ ಮಾಡಿಕೊಂಡಿದ್ದ ಚೌಡಯ್ಯನು ಶಿವನ ಲೀಲೆಗಳ ರೂಪ (ವೇಷ) ಹಾಕಿ ಕುಣಿಯುತ್ತಿದ್ದನು.[5] ಅಂದಿನಿಂದಲೇ ನಮ್ಮ ಪರಂಪರೆ ಮುಂದುವರಿದಿದೆ ಎಂಬುದಾಗಿಯೂ ಕೆಲವು ಕಲಾವಿದರು, ಅನುಭವಿಕರು ಹೇಳುತ್ತಾರೆ.[6] ಆದರೆ ಸಾಮಾನ್ಯವಾಗಿ ಹೆಚ್ಚು ಕಲಾವಿದರು ತಮ್ಮದು ಕ್ಷತ್ರಿಯ ವಂಶವೆಂದು ಹೇಳಿಕೊಳ್ಳುತ್ತಾರೆ.[7] ವರ್ಣವಾಗಿದ್ದ ಈ ಜನಾಂಗ ಕಾರಣಾಂತರಗಳಿಂದ ಬಹುರೂಪ, ವೇಷಧರಿಸಿ ಈ ವೃತ್ತಿಯನ್ನು ಅವಲಂಬಿಸಿ ಉಳಿದು ಬಂದಂತೆ ತೋರುತ್ತದೆ.

ಬುಡ್ಗಜಂಗಮ ಪದನಿಷ್ಪತ್ತಿ-ಅರ್ಥ ವಿವರಣೆ:

ಬುಡ್ಗಜಂಗಾಲ (ಜಂಗಮ) ಪದನಿಷ್ಪತ್ತಿ ಕುರಿತು ಏಕಾಭಿಪ್ರಾಯ ಇಲ್ಲ. ಪ್ರೊ. ಬಿ.ರಾಮರಾಜು ಅವರು ತಮ್ಮ “ತೆಲಗು ಜಾನಪದ ಗೇಯಸಾಹಿತ್ಯಂ” ಎಂಬ ಪ್ರಸ್ತಕದಲ್ಲಿ “ಬುಡಿಗೆ ಎಂಬ ವಾದ್ಯವನ್ನು ನುಡಿಸುತ್ತಾ ಕಥೆ ಹೇಳುವ ಜನರನ್ನು “ಬುಡ್ಗ ಜಂಗಾಲು” ಎಂದು ಕರೆದಿದ್ದಾರೆ. ಮರುವೂರು ಕೋದಂಡರಾಮರೆಡ್ಡಿಯವರು ಬರೆದ ಮಾಂಡಲಿಕ ಪದಕೋಶಂ ಕೃತಿಯಲ್ಲಿ “ತಂದಾನಾ” ಕಥೆಗಳನ್ನು ಹೇಳಿ ಜೀವಿಸುವ ಬುರ‍್ರ ಕಥೆಯವರು ಹಾಗೂ “ಬುಡಗೇಲು” ವಾದ್ಯವನ್ನು ನುಡಿಸುತ್ತಾ ಭಿಕ್ಷೆ ಎತ್ತುವವರೇ “ಬುಡ್ಗಜಂಗಾಲರು” ಎಂದು ತಿಳಿಸಿದ್ದಾರೆ. ಯಳನಾಡು ಅಂಜನಪ್ಪ ಅವರು ಹಗಲುವೇಷ ಹಾಕುವ ಜನರನ್ನು “ಬುಡ್ಗಜಂಗಾಲರು” ಎಂದು ತಿಳಿಸಿದ್ದಾರೆ. ಯಳನಾಡು ಅಂಜನಪ್ಪ ಅವರು ಹಗಲುವೇಷ ಹಾಕುವ ಜನರನ್ನು “ಬುಡ್ಗ ಜಂಗಾಲರು” ಎಂದು ಹಗಲುವೇಷದವರ “ಸಂಸ್ಕೃತಿ” ಕೃತಿಯಲ್ಲಿ ದಾಖಲಿಸಿದ್ದಾರೆ.

ಬೇಡ ಮತ್ತು ಬುಡ ಎರಡೂ ಪದಗಳು ಅಚ್ಚಗನ್ನಡದ್ದಾಗಿರುವುದರಿಂದ ಇವರು ಮೂಲ ಕರ್ನಾಟಕದವರೇ ಆಗಿರಬಹುದು. ಬೇಡ ಎಂದರೆ ಬೇಟೆಯಾಡುವವರು, ಜಂಗಮ ಎಂಬುದು ಜಂಗಾಲದಿಂದ ಬಂದುದು. “ಜಂಗಾಲ” ಎಂಬುದು ಜಂಗಲ್, ಅಡವಿ, ಕಾಡು ಎಂದರ್ಥ. ಕಾಡಾಡಿಗಳಾಗಿದ್ದ ಬೇಡ ಜಂಗಾಲರು ಹೊಟ್ಟೆಪಾಡಿಗಾಗಿ ಗ್ರಾಮದತ್ತ ಸಂಚಾರ ಆರಂಭಿಸಿದಾಗ ಜನರು ಇವರನ್ನು ಬೇಡ ಜಂಗಮರು, ಬುಡ್ಗ ಜಂಗಮ (ಜಂಗಾಲ)ರು ಎಂದೆಲ್ಲ ಕರೆದಿದ್ದಾರೆ.

ಬುಡ್ಗಜಂಗಮ ಪರ್ಯಾಯ ನಾಮಾವಳಿಗಳು:

ಕರ್ನಾಟಕದ ಜನಪದ ಕಲಾಪರಂಪರೆಯಲ್ಲಿ ಬುಡ್ಗಜಂಗಮರದು ವಿಶಿಷ್ಟವಾದ ಸಾಂಸ್ಕೃತಿಕ ಪರಂಪರೆ ಹೊಂದಿರುವ ಜನಾಂಗ. ಇವರಿಗೆ ಬುಡ್ಗಜಂಗಮ, ವೇಷಗಾರ, “ಬಹುರೂಪಿ” ಎಂಬ ಹೆಸರಲ್ಲದೆ, ಪ್ರಾದೇಶಿಕವಾಗಿ ಇವರಿಗೆ ಬೇರೆ ಬೇರೆ ಹೆಸರುಗಳಿರುವುದು ಕಂಡು ಬರುತ್ತದೆ. “ವೇಷಧಾರಿ”, “ಯಾಸಗಾರ”, “ಯಾಸೇಗಾರ”, “ಯಾಸಗೇರ” , “ಶಂಖದಯ್ಯಗಳು”, “ಭೈರೂಪಗಾರ”, “ಸನ್ಯಾಸಿ, “ಜಾತಿಗಾರ”, “ಹಗಲುವೇಷದವರು”, “ಬಿಂಗಿ”, “ಬಂಗೇರ”, “ಭಾಗವತ”, “ಹರಿದಾಸರು”, “ರಾಮಲೀಲಾದವರು”, “ಭಟ್ಟರಾಜರು”, “ರೂವಾರಿ”ಗಳು ಎಂದೆಲ್ಲಾ ಕರೆಯುವುದು ವಾಡಿಕೆ.

ಬೀದರ, ಬೆಳಗಾವಿ ಮತ್ತು ವಿಜಾಪುರ ಜಿಲ್ಲೆಗಳಲ್ಲಿ ವೇಷಗಾರರನ್ನು “ಬಹುರೂಪಿ” “ಭೈರೂಪಿ” “ಭೈರೂಪಗಾರ” ಎಂದು ಕರೆಯುತ್ತಾರೆ. ಧಾರವಾಡ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ವೇಷಗಾರರನ್ನು “ಯಾಸಗಾರ”, “ಯಾಸಗೇರ” ಎಂದು ಕರೆಯುವುದುಂಟು. ಗದಗ ಜಿಲ್ಲೆಯ ಕೆಲವೆಡೆ “ಜಾತಿಗಾರ” ಎಂದು ಕರೆಯುವುದು ಕಂಡು ಬರುತ್ತದೆ. ಬೀದರ, ಗುಲಬರ್ಗಾ ಮತ್ತು ಬೆಳಗಾವಿ ಜಿಲ್ಲೆಯ ಕೆಲವೆಡೆ ಮುಸ್ಲಿಂ ಜನಾಂಗದವರೂ ಕೂಡಾ ಬಹುರೂಪಿ ವೇಷಹಾಕಿ ಕಲೆ ಪ್ರದರ್ಶನ ನೀಡುತ್ತಿರುವುದರಿಂದ ಅವರನ್ನೂ ಕೂಡಾ “ಜಾತಿಗಾರ” ಎಂದೇ ಕರೆಯಲಾಗುತ್ತದೆ. ಆದರೆ ಅವರು “ಬುಡ್ಗಜಂಗಮ” ಜನಾಂಗಕ್ಕೆ ಸಂಬಂಧಿಸಿದವರಲ್ಲ ಎಂಬುದನ್ನು ಗಮನಿಸಬೇಕು. ದಕ್ಷಿಣ ಕರ್ನಾಟಕದ ಕಡೆ “ವೇಷಧಾರಿ”, “ಹರಿದಾಸರು”, “ಭಟ್ಟರಾಜ”ರೆಂದು ಕರೆಯುತ್ತಾರೆ. ಕೆಲವೆಡೆ “ನಾಟಕದವರು” ಎನ್ನುತ್ತಾರೆ.

ಮೂಲ ಆಂಧ್ರದ ನಾಡಿನಿಂದ ಕರ್ನಾಟಕಕ್ಕೆ ಬಂದು ನೆಲೆನಿಂತ ಈ ಅಲೆಮಾರಿಗಳಾದ ಬುಡ್ಗಜಂಗಮರನ್ನು ಬಳ್ಳಾರಿ, ರಾಯಚೂರ ಜಿಲ್ಲೆಗಳಲ್ಲಿ “ಬುರ‍್ರಕಥೆ” ಹೇಳುವವರೆಂದು ಕರೆಯುತ್ತಾರೆ.[8] “ಬುರ‍್ರ” (ಬುರುಡೆ) ಎಂಬ ವಾದ್ಯವನ್ನು ಹಿಡಿದು, ಹಾಡು, ಕತೆ ಹೇಳುತ್ತ ಊರಾಡುವ ಮೇಳದವರು ಇವರಾಗಿದ್ದಾರೆ. ತುಮಕೂರ, ಚಿತ್ರದುರ್ಗ, ಕೋಲಾರ ಜಿಲ್ಲೆ ಕೆಲವೆಡೆ ಇವರನ್ನು ಬಾಳಸಂತರು, “ಬುಡ್ಗಜಂಗಮ”, “ಬುಡಗಜಂಗಾಲರು” ಎನ್ನುತ್ತಾರೆ.

ಕಥಾ ಪ್ರಧಾನವಾದ ಹಾಡುಗಳಿಗೆ ಬಳಸುವ “ಗುಮ್ಮಟೆ” (ಗುಮಟೆ)ಗಳನ್ನು ಆಂಧ್ರದಲ್ಲಿ “ಗುಮ್ಮೆತಲು”, “ಬಡಿಗೆಲು”, “ಬುರ‍್ರಲು”, “ಡಕ್ಕೀಲು” “ಡಿಕ್ಕಿಲು” ಎನ್ನುತ್ತಾರೆ. ಈ ಬುಡಿಗೆಗಳನ್ನು ಉಪಯೋಗಿಸಿ ಹಾಡ್ಗತೆ ಹೇಳುವವರನ್ನು “ಬುಡಿಗೆ ಜಂಗಮಲು” “ಬುಡ್ಗಜಂಗಮುಲು” ಎನ್ನುವುದುಂಟು.

ನಮ್ಮ ನೆರೆಯ ರಾಜ್ಯಗಳಾದ ಮಹಾರಾಷ್ಟ್ರದಲ್ಲಿ “ಸೊಂಗವಾಲ”, “ಬಹುರೂಪಿ”[9]  ರಾಮಲೀಲಾದವರೆಂದರೆ, ಆಂಧ್ರದಲ್ಲಿ “ಪಗಟಿ ವೇಷಗಾರ್ಲು “ಪಗಟಿ ವೇಷಗಾಳು” ಬಹುರೂಪುಡು[10]ಎಂಬ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ತಮಿಳುನಾಡಿನಲ್ಲಿ “ಪಗಲುವೇಷಂ” ಎಂದು ಕರೆಯುವರು.

ಬುಡ್ಗಜಂಗಮರನ್ನು ಯಾವುದೇ ಹೆಸರಿನಿಂದ ಪ್ರಾದೇಶಿಕವಾಗಿ ಕರೆದರೂ ರೂಪ ಬಹು ಆದರೂ, ವೃತ್ತಿ, ಜಾತಿ ಒಂದೇ ಎನ್ನಬೇಕು. ಅವರು ಹಾಕುವ ವೇಷ ಹಲವಾದರೂ ಬದುಕು ಒಂದೇಯಾಗಿದೆ. ಕ್ಷೇತ್ರಕಾರ್ಯದಲ್ಲಿ ಕೆಲವು ಹಿರಿಯರು ತಮ್ಮದು ಕಬ್ಬಲಿಗ, ಅಂಬಿಗ, ಗಂಗಾಕುಲವೆಂದು ಹೇಳುತ್ತಾರೆ. ಆದರೆ ವಾಸ್ತವಿಕವಾಗಿ ಅಂಬಿಗರನ್ನು ಹೋಗಿ ಕೇಳಿದರೆ “ಅವರಿಗೆ ನಮಗೆ ಯಾವುದೇ ಸಂಬಂಧ ಇಲ್ಲ” ಎನ್ನುತ್ತಾರೆ. ಕೆಲವರು “ಸುಡಗಾಡುಸಿದ್ದರು” ತಾವು ಮೂಲ ಒಂದೇ ಕುಲಕ್ಕೆ ಸೇರಿದವರು ಎನ್ನುತ್ತಾರೆ.[11]

ಕರ್ನಾಟಕ ಸರಕಾರದ ಹಾವನೂರ ವರದಿಯಲ್ಲಿ ಮಾತ್ರ “ವೇಷಗಾರರನ್ನು” ಬಹುರೂಪಿಗಳೆಂದು ಗುರುತಿಸಿ ಹಿಂದುಳಿದ ಜಾತಿಯ ಪಟ್ಟಿಯಲ್ಲಿ ಸೇರಿಸಿದ್ದಾರೆ. ಹಾಗೂ ೧೯೫೧-೫೨-೫೩ನೇ ಸಾಲಿನಲ್ಲಿ ಮುಂಬೈ ಸರಕಾರ ಹಿಂದುಳಿದ ವರ್ಗಗಳ ವಿಭಾಗವು ಸಿದ್ಧಪಡಿಸಿದ ವಾರ್ಷಿಕ ವರದಿಯಲ್ಲಿ ಇತರೆ ಹಿಂದುಳಿದ ವರ್ಗಗಳ ಪಟ್ಟಿಗೆ “ಬಹುರೂಪಿ” ಜನಸಮುದಾಯವನ್ನು ಸೇರಿಸಿದ್ದಾರೆ.[12]ಅನೇಕ ಪಂಗಡಗಳಿರುವ, ವೃತ್ತಿಯಲ್ಲಿ ತೊಡಗಿಕೊಂಡಿರುವ ಬುಡ್ಗಜಂಗಮರ ಮೂಲದ ವಿಷಯದಲ್ಲಿ ಏಕಾಭಿಪ್ರಾಯ ಪ್ರಾಪ್ತವಾಗಿಲ್ಲ. ಸಾಂಸ್ಕೃತಿಕ ಅಧ್ಯಯನದ ಸಂದರ್ಭದಲ್ಲಿ ಅವೆಲ್ಲ ಗೌಣ. ಅವರ ಬದುಕಿನ ವಿಧಾನವೇ ಅತ್ಯಂತ ಮಹತ್ವದ್ದು.

ನೆಲೆಸಿರುವ ಪ್ರದೇಶ

ಬುಡ್ಗಜಂಗಮರದ್ದು ಅಲೆಮಾರಿ ಬದುಕು ಆಗಿರುವುದರಿಂದ, ಸ್ಥಿರವಾಗಿ ಒಂದೆಡೆ ನೆಲೆಸಿರುವ ಊರು, ಪ್ರದೇಶ ಗುರುತಿಸುವುದು ಕಷ್ಟ. ಆದರೂ ವೇಷ ಪ್ರದರ್ಶಿಸಿ ಭಿಕ್ಷಾಟನೆಗಾಗಿ ನೆಲೆನಿಂತಿರುವ ಪ್ರದೇಶವೆಂದರೆ ಉತ್ತರ ಕರ್ನಾಟಕವೇ ಎನ್ನಬೇಕು. ಕರ್ನಾಟಕದ ಉಳಿದ ಭಾಗದಲ್ಲಿ ಮೂಲ ಕಲೆಯ ಬದುಕನ್ನು ಇವರು ಉಳಿಸಿಕೊಂಡಿಲ್ಲ. ಈ ಗಾಳಿ ಉತ್ತರ ಕರ್ನಾಟಕದಲ್ಲಿಯೂ ಬೀಸದೆ ಇಲ್ಲ. ಆಧುನೀಕರಣದಿಂದಾಗಿ ಯಾವುದೇ ಹಳ್ಳಿಗೆ ಹೋದರೂ ಮತ್ತೆ ತಮ್ಮ ಊರಿಗೆ ಮರಳಿ ಬರುತ್ತಾರೆ. ಸಂಚಾರಿಗಳಾದ ಇವರು ಕಲಾ ಪ್ರದರ್ಶನಕ್ಕೆ, ಭಿಕ್ಷಾಟನೆಗಾಗಿ ಕೆಲವೊಂದು ಗ್ರಾಮಗಳನ್ನು ಆಯ್ಕೆ ಮಾಡಿ ಹಂಚಿಕೊಂಡಿರುತ್ತಾರೆ. ತಮ್ಮದಲ್ಲದ ಪ್ರದೇಶದಲ್ಲಿ ಪುರುಷ ಕಲಾಮೇಳ ಪ್ರದರ್ಶನವಾಗಲಿ ಮಹಿಳಾ ಭಿಕ್ಷಾಟನೆಯಾಗಲಿ ಮಾಡುವಂತಿಲ್ಲ. ಹಾಗೆ ಮಾಡಿದ್ದು ಕಂಡು ಬಂದರೆ ದಂಡ ತಪ್ಪಿದ್ದಲ್ಲ. ಬರಗಾಲ ಅಥವಾ ಇನ್ನಾವುದೇ ಕಾರಣದಿಂದ ಹಂಚಿಕೆಯಾದ ಹಳ್ಳಿಯಲ್ಲಿ ಕಲೆಪ್ರದರ್ಶನ ಸಾಧ್ಯವಿಲ್ಲವೆಂದು ಖಚಿತವಾದಾಗ, ಇನ್ನೊಂದು ಹಳ್ಳಿಯವರ ಅನುಮತಿ ಪಡೆದು ಕಲಾ ಪ್ರದರ್ಶನಕ್ಕೆ ಹೋಗುತ್ತಾರೆ.

ಕ್ಷೇತ್ರಕಾರ್ಯದಲ್ಲಿ ವರದಿ ಮಾಡಿಕೊಂಡಂತೆ ಬುಡ್ಗಜಂಗಮರು ತಾತ್ಕಾಲಿಕವಾಗಿ ನೆಲೆನಿಂತ ಊರುಗಳು ಇಂತಿವೆ. ಗದಗ ಜಿಲ್ಲೆಯ ಮೇವುಂಡಿ, ಲಕ್ಷ್ಮೇಶ್ವರ, ಶ್ರೀಮಂತಗಡ, ಧಾರವಾಡ ಜಿಲ್ಲೆಯ ಅದರಗುಂಚಿ, ಕಲಘಟಗಿ ತಾ|| ದುಮ್ಮವಾಡ, ಹಾವೇರಿ ಜಿಲ್ಲೆಯ ಗುತ್ತಲ, ಬಾಲೆಹೊಸೂರು, ಹಳ್ಳೂರ, ಹಿರೆಕೆರೂರ ತಾ|| ಹಳ್ಳೂರ, ಬೆಳಗಾವಿ ಜಿಲ್ಲೆಯ ಕಣಬರಗಿ, ಪೀರನವಾಡಿ, ಮಾರಿಹಾಳ, ಪಾಮಲದಿನ್ನಿ, ಗೋಕಾಕ ತಾ|| ಅರಭಾವಿ, ಘಟಪ್ರಭಾ, ಅಥಣಿ ತಾ|| ಸಂಕಾನಟ್ಟಿ ಸೌದತ್ತಿ || ಯರಝರ್ವಿ, ಬೈಲಹೊಂಗಲ ತಾ|| ಇಂದಿರಾನಗರ ವಕ್ಕುಂದ, ಬಿಜಾಪುರ ಜಿಲ್ಲೆಯ ವಿಜಾಪುರ, ಬಸವನಬಾಗೇವಾಡಿ, ಮುದ್ದೇಬಿಹಾಳ ತಾ|| ತಾಳಿಕೋಟೆ, ಹುನುಗುಂದ ತಾ|| ಬಯ್ಯಾಪುರ, ಗುಡೂರ, ಬಾಗಲಕೋಟ, ಮುಧೋಳ, ಬಳ್ಳಾರಿ ಜಿಲ್ಲೆಯ ಬಳ್ಳಾರಿ, ಹೊಸಪೇಟೆ, ಸಿರಗುಪ್ಪ ತಾ|| ಬಲಕುಂದಿ, ಮಲ್ಯಾಪೂರ, ಸಂಡೂರ ತಾ|| ಹಳೆದರೋಜಿ, ಕೂಡ್ಲಿಗಿ, ತಾ|| ನಾಣ್ಯಾಪುರ, ಹಗರಿಬೊಮ್ಮನಹಳ್ಳಿ, ಹಂಪಾಪಟ್ಟಣ, ಹೂವಿನಹಡಗಲಿ, ಹರಪನಹಳ್ಳಿ, ರಾಯಚೂರ ಜಿಲ್ಲೆಯ ರಾಯಚೂರು, ಮಾನ್ವಿ, ಮಾನ್ವಿ ತಾ|| ಸಿರವಾರ, ಕವತಾಳ, ಸಿಂಧನೂರ ತಾ|| ಯಾಪಲಪರವಿ, ದೇವದುರ್ಗ ತಾ|| ಮಾರಾಟಂ, ಸದಕಲಗಟ್ಟು, ಹಾಕುಲಕುಂಪಿ, ಲಿಂಗಸೂರು ತಾ|| ಛಾವಣಿ, ಬಯ್ಯಾಪುರ, ಕೊಪ್ಪಳ. ಜಿಲ್ಲೆಯ ಕಿನ್ನಾಳ ಕುಷ್ಟಗಿ ತಾ|| ಹನಮಸಾಗರ, ಚಳಗೇರಿ, ಗುಲಬರ್ಗಾ ಜಿಲ್ಲೆಯ ಗುಲಬರ್ಗಾ, ಸುರಪುರ ತಾ|| ಮಾಳೂರ, ಶಹಪುರ ತಾ|| ಶಾರದಳ್ಳಿ, ಚಿಂಚೋಳಿ ತಾ|| ಮಾಲಾಪುರ, ಜೇವರ್ಗಿ ತಾ|| ಯಡ್ರಾಮಿ, ಬೀದರ ಜಿಲ್ಲೆಯ ಲಿಯಾಸಪುರ, ಔರಾದ ತಾ|| ಬೋರಾಳ, ಚಿಂತರೆ, ಹುಮನಾಬಾದ ತಾ|| ಚಿಟಗುಪ್ಪ, ಭಾಲ್ಕಿ ತಾ|| ಯಮ್ಮಿಗನೂರ, ಮೊಣಕಾಲ್ಮೂರು ತಾ|| ರಾಮಾಪುರ, ಕಂಪಳದೇವರಟ್ಟಿ ಹಾಗೂ ಚಳ್ಳಕೆರೆ ಮತ್ತು ಶಿವಮೊಗ್ಗ, ಸಾಗರ, ಕಾರವಾರ ಜಿಲ್ಲೆಯ ಮುಂಡಗೋಳ, ಶಿರ್ಶಿಯಲ್ಲಿ ಕಾಣಸಿಗುತ್ತಾರೆ. ಆದರೆ ಕಾಲ ಕಳೆದಂತೆ ಬುಡ್ಗಜಂಗಮರು ಸ್ಥಳಾಂತರವಾಗಿ ನೆಲೆಸುತ್ತಿರುವುದು ಕಂಡು ಬರುತ್ತದೆ. ಒಂದು ಸಲ ಒಂದು ಊರೆಂದು ಹೇಳಿದವರು ಮತ್ತೊಂದು ಸಲ ಇನ್ನೊಂದು ಊರಿನ ಹೆಸರನ್ನು ಹೇಳುತ್ತಾರೆ. ಇದು ಅವರ ವೃತ್ತಿಗೆ ಸಂಬಂಧಿಸಿದ್ದು ನಿಜವೆಂದೆನಿಸದಿರದು.

ಜನಸಂಖ್ಯೆ:

ಬುಡ್ಗಜಂಗಮರು ಅಲೆಮಾರಿಗಳಾಗಿರುವುದರಿಂದ ಅವರ ಜನಂಖ್ಯೆಯನ್ನು ನಿಖರವಾಗಿ ಹೇಳಲು ಬರುವುದಿಲ್ಲ. ಜನಗಣತಿಯಲ್ಲಿ ಸಂಪೂರ್ಣವಾಗಿ ದಾಖಲಾಗಿಲ್ಲ. ಆದರೆ ಹಾವನೂರ ವರದಿಯಲ್ಲಿ[13] ಜಾತಿಗಳನ್ನು ಉಲ್ಲೇಖಿಸಿದ್ದಾರೆ. ಅವುಗಳಲ್ಲಿ  ಬುಡ್ಗಜಂಗಮ ಜನಸಮುದಾಯವೂ ಒಂದಾಗಿದೆ. ಇತ್ತೀಚೆಗೆ ಪ್ರತಿಯೊಂದು ಜನಸಮುದಾಯ ತಮ್ಮ ಜನಾಂಗದ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಜನಗಣತಿ ಮಾಡಿಸುವಂತೆ ಕರ್ನಾಟಕ ಬುಡ್ಗಜಂಗಮ ಸಂಘವು ಕೂಡ ಪ್ರತ್ಯೇಕ ಜನಗಣತಿ ಮಾಡುವ ಯೋಜನೆ ಹೊಂದಿದೆ. ಆದರೆ ೧೯೯೧ರ ಜನಗಣತಿಯಂತೆ ಜಿಲ್ಲಾವಾರು ಅಂಕಿ-ಸಂಖ್ಯೆಯ ವಿವರ ಹೀಗಿದೆ.[14]

ಕ್ರ. ಸಂ.

ಜಿಲ್ಲೆ

ಗಂ

ಹೆಂ

ಒಟ್ಟು

೧. ಬೆಂಗಳೂರು ಗ್ರಾಮಾತರ ೯೬ ೯೬ ೧೯೨
೨. ಬೆಂಗಳೂರು ನಗರ ೧೫೯ ೧೫೬ ೩೧೫
೩. ಬಳ್ಳಾರಿ ೯೫೦೨ ೮೯೯೭ ೧೮೫೯೫
೪. ಬೆಳಗಾವಿ ೫೬೭ ೪೬೦ ೧೦೨೭
೫. ಬೀದರ ೮೩೮೦ ೮೨೩೯ ೧೬೭೦೯
೬. ಬಿಜಾಪುರ ೬೬೮೭ ೬೩೭೦ ೧೩೦೫೭
೭. ಚಿಕ್ಕಮಗಳೂರು ೨೮೯ ೨೬೩ ೫೫೨
೮. ಚಿತ್ರದುರ್ಗ ೭೪೪೩ ೬೯೭೧ ೧೪೪೧೪
೯. ದಕ್ಷಿಣ ಕನ್ನಡ ೧೨ ೧೦ ೨೭
೧೦. ಧಾರವಾಡ ೧೦೮೩೧ ೯೯೪೨ ೨೦೭೭೩
೧೧. ಗುಲಬರ್ಗಾ ೬೨೧೨ ೫೪೧೬ ೧೧೬೨೮
೧೨. ಹಾಸನ ೧೧೫ ೯೪ ೨೦೯
೧೩. ಕೊಡಗು ೫೪ ೬೫ ೧೧೯
೧೪. ಕೋಲಾರ ೪೮೮ ೩೬೧ ೭೪೯
೧೫. ಮಂಡ್ಯ ೬೬ ೬೦ ೧೨೬
೧೬. ಮೈಸೂರು ೧೨ ೧೧ ೨೩
೧೭. ರಾಯಚೂರು ೭೩೧೩ ೬೮೫೬ ೧೪೧೬೯
೧೮. ಶಿವಮೊಗ್ಗ ೨೮೦೧ ೨೭೦೭ ೫೫೦೮
೧೯. ತುಮಕೂರು ೧೨೭೮ ೧೨೭೨ ೨೫೫೦
೨೦. ಉತ್ತರ ಕನ್ನಡ ೧೫೧ ೧೬೩ ೩೧೪

ಒಟ್ಟಾರೆ ೬೨೪೬೧ ಪುರುಷರು, ೫೮೫೯೫ ಸ್ತ್ರೀಯರು, ಒಟ್ಟು ೧,೨೧,೦೫೬ ಜನಸಂಖ್ಯೆ ಕರ್ನಾಟಕದಲ್ಲಿದೆ.

 

ಭಾಷೆ:

ಭಾಷೆ ಸಂಸ್ಕೃತಿಯ ವಾಹಕ. ಸಮುದಾಯವೊಂದರ ಸಾಂಸ್ಕೃತಿಕ ಸಂಗತಿಗಳನ್ನು ಅದು ವರ್ಗಾಯಿಸುತ್ತದೆ. ಪರಸ್ಪರ ಸಂವಹನಕ್ಕೆ ಪ್ರಮುಖ ಸಾಧನ ಎಂದರೆ ಭಾಷೆ, ಬುಡ್ಗಜಂಗಮರ ಮಾತೃಬಾಷೆ ತೆಲುಗು ಎಂದೆನಿಸುತ್ತದೆ. ಕುಟುಂಬದಲ್ಲಿ ಹೆಣ್ಣು ಮಕ್ಕಳು, ಗಂಡಸರು ಹಾಗೂ ಮಕ್ಕಳ ಮನೆಯ ಮಾತು ಮಾತ್ರ ತೆಲುಗು ಭಾಷೆಯನ್ನು ಹೋಲುತ್ತದೆ. ಆದರೆ ಮೂಲ ತೆಲುಗು ಅಲ್ಲ, ತೆಲುಗು ಮಿಶ್ರಿತ “ಬುಡ್ಗ ಭಾಷೆ”ಯಾಗಿದೆ. ಅದೊಂದು ಉಪಭಾಷೆಯಂತೆ ತೋರುತ್ತದೆ. ದೈನಂದಿನ ಬುದುಕಿನ ವ್ಯವಹಾರಕ್ಕೆ ಮಾತ್ರ ಕನ್ನಡ ಭಾಷೆಯನ್ನು ಬಳಸುತ್ತಾರೆ. ಕಲಾಮಾಧ್ಯಮ ಭಾಷೆ ಕೂಡಾ ಹೌದು. ಹಾಗೆ ನೋಡಿದರೆ ಬುಡ್ಗಜಂಗಮರು ಬಹುಭಾಷೆಯ ಪ್ರಾವೀಣ್ಯ ಹೊಂದಿದವರು. ಕಲಾ ಪ್ರದರ್ಶನಕ್ಕೆ ಯಾವ ರಾಜ್ಯಕ್ಕೆ ಹೋಗುತ್ತಾರೋ ಅಲ್ಲಿಯ ಭಾಷೆಯಲ್ಲಿಯೇ ವ್ಯವಹರಿಸುತ್ತಾರೆ. ಅವರ ಹಾಡ್ಗತೆಗಳು ಕೂಡಾ ತೆಲುಗು-ಕನ್ನಡ ದ್ವಿಭಾಷೆಯಲ್ಲಿ ಇರುವುದು ಕಂಡುಬರುತ್ತದೆ. ಹೀಗಾಗಿ ಬುಡ್ಗಜಂಗಮರು ಮರಾಠಿ, ಗುಜರಾತಿ, ತೆಲುಗು, ಹಿಂದಿ ಮುಂತಾದ ಭಾಷೆಗಳನ್ನು ಮಾತನಾಡುತ್ತಾರೆ. ಆಶ್ಚರ್ಯವೆಂದರೆ ಇವರ ಸಂಭಾಷಣೆಯಲ್ಲಿ ಇಂಗ್ಲೀಷ್ ಕೂಡ ಬೆರೆತು ಹೋಗಿದೆ.

ಬುಡ್ಗಜಂಗಮರಲ್ಲಿ ಓದು ಬರಹ ಕಲಿತವರು ತುಂಬಾ ಕಡಿಮೆ. ಕಲಾಪ್ರದರ್ಶನಕ್ಕೆ ಬೇಕಾಗುವ ಪೂರಕ ಜ್ಞಾನವನ್ನು ಕಲಿಯುತ್ತಾರೆ. ಹೆಣ್ಣು ಮಕ್ಕಳಂತೂ ಸಂಪೂರ್ಣವಾಗಿ ಅನಕ್ಷರಸ್ಥರು. ಇತ್ತೀಚೆಗೆ ಕೆಲವು ಕುಟುಂಬಗಳು ಶಿಕ್ಷಣ ಪಡೆಯುತ್ತಿರುವುದು ಆಶಾದಾಯಕ ಎನ್ನುತ್ತಾರೆ. ಬುಡ್ಗಜಂಗಮ ಕುಟುಂಬದ ಸದಸ್ಯರು[15]

ಬುಡ್ಗಜಂಗಮರು ಬಳಸುವ ಕೆಲವು ಪದಗಳು ಹೀಗಿವೆ:

ತೆಲುಗು ಕನ್ನಡ
ಮೋಸಗಾರಡು ಮೋಸಗಾರ
ಮಂಚಿವಾಡು ಒಳ್ಳೆಯವನು
ತಲ್ಲಗ ಬೆಳ್ಳಗ
ನಲ್ಲಗ ಕಪ್ಪು
ವಾಡು ಅವನು
ವಾಳ್ಳು ಅವರು
ಮುಖಾಲು ಮುಖ
ಗೋರ‍್ಲು ಉಗುರು

ಕೆಲವು ವಾಕ್ಯ ಪ್ರಯೋಗಗಳು:

ತೆಲುಗು ಮೀರು ಎಪ್ಪುಡು ವಸ್ತೆವಪ್ಪಾ?
ಕನ್ನಡ ನೀವು ಯಾವಾಗ ಬಂದಿರಿ?
ತೆಲುಗು ಜನಾಲು ಮಂಚಿ ವಾಡು
ಕನ್ನಡ ಜನರು ಒಳ್ಳೆಯವರು
ತೆಲುಗು ನೀ ಕೆತಲ ಏಮಂ ಪಟುಗುನವಪ್ಪ
ಕನ್ನಡ ನಿನ್ನ ಕೈಯಲ್ಲಿ ಏನಿದೆ?
ತೆಲುಗು ನಾ ಕೆತಲ ಊನಿವುಂದಿ.
ಕನ್ನಡ ನನ್ನ ಕೈಯಲ್ಲಿ ಬೆಕ್ಕು ಇದೆ

ಇವೆಲ್ಲವನ್ನು ಗಮನಿಸಿದರೆ, ಇವರು ನೆಲೆ ನಿಂತಿರುವ, ಅಲೆದಾಡುತ್ತಿರುವ ಪ್ರದೇಶದಲ್ಲಿ ಪ್ರಧಾನ ಭಾಷೆ ಕನ್ನಡವಾದರೆ, ಉಪಭಾಷೆ ತೆಲುಗು ಆಗಿರುತ್ತದೆ. ಆದರೆ ಇದು ಶುದ್ಧ ತೆಲುಗಿಗಿಂತ ಭಿನ್ನವಾದದು ಎಂಬುದನ್ನು ಗಮನಿಸಬೇಕು. ಅದನ್ನು ಈ ಜನಾಂಗದ “ಬುಡ್ಗ” “ಮರುಗ ಭಾಷೆ” ಎಂದು ಹೇಳುತ್ತಾರೆ.

ಉದಾಹರಣೆಗಾಗಿ ಕೆಲವು ಪದಗಳನ್ನು ನೋಡಬಹುದು.

ತೆಲುಗು ಕನ್ನಡ ಮರುಗ/ಬುಡ್ಗ
ಕೋಡಿ ಕೋಳಿ ಕೊಕ್ಕಡಾಂ
ಪಂದಿ ಹಂದಿ ರಾಶಿಗಾಡು
ಉಡತಾ ಅಳಿಲು ತೊರಸೆಗಾಡು
ನಕ್ಕ ನರಿ ನರಸೆಗಾಡು
ಶಾರು ಸಾರು ಶಾಕಂ
ನೀಳ್ಲು ನೀರು ಪಾಣಿಶ್ಯಾಲು
ಮಗುಪಿಲ್ಲಗಾಡು ಹುಡುಗ ಶಿರಪಗಾಡು
ನನ್ನಪಿಲ್ಲ ಹುಡುಗಿ ಶಿರಪಕೋಟಿ
ಪೋ ಹೋಗು ನಿಕ್ಕುರಾ

ಇಂತಹ “ಮರುಗ” ಭಾಷೆಯೊಂದಿಗೆ ಸ್ತ್ರೀ-ಪುರುಷರು ಕನ್ನಡವನ್ನು ಚೆನ್ನಾಗಿ ಬಳಸುತ್ತಾರೆ. ಆದರೆ ಭಾಷಿಕ ಪದ ನುಡಿಗುಟ್ಟುಗಳನ್ನು ಎಳೆದು ಮಾತನಾಡುವ ಶೈಲಿ ಕಂಡುಬರುತ್ತದೆ.

ವೇಷ-ಭೂಷಣ

ಕಾಡುಮಾನವ ತನ್ನ ದೇಹರಕ್ಷಣೆಗಾಗಿ ಮಾನ ರಕ್ಷಣೆಗಾಗಿ ಗಿಡದ ತೊಗಟೆ, ಎಲೆ, ಕೆಲವು ಪ್ರಾಣಿಗಳ ಚರ್ಮಗಳನ್ನು ಬಳಸಿಕೊಂಡಿರುವುದು ಇತಿಹಾಸ. ಕ್ರಮೇಣ ನಿಸರ್ಗ ವಸ್ತುಗಳನ್ನೇ ಬಳಸಿಕೊಂಡು ಉಡುಗೆ-ತೊಡುಗೆಯಲ್ಲಿ ಬದಲಾವಣೆ ಮಾಡಿಕೊಂಡನು. ಆಧುನಿಕ ಯುಗದಲ್ಲೂ ಇನ್ನು ಅನೇಕ ಬುಡಕಟ್ಟು ಜನಾಂಗ ನೈಸರ್ಗಿಕ ಉಡುಗೆ-ತೊಡುಗೆ ಸಾಮಗ್ರಿ ಬಳಸಿಕೊಂಡು ಶೃಂಗಾರ ಮೆರೆದಿದ್ದಾರೆ.

ಜನಾಂಗವೊಂದರ ಉಡುಗೆ-ತೊಡುಗೆಯ ಮೇಲೆ, ವರ್ಗ, ವರ್ಣ, ಲಿಂಗ ಸಂಸ್ಕೃತಿಯನ್ನು, ವ್ಯತ್ಯಾಸವನ್ನು ಗುರುತಿಸಬಹುದಾಗಿದೆ. ಅವರ ಉಡುಗೆ, ಅವರವರ ನಾಡು, ದೇಶ, ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಇದು ಆಯಾ ಜನಸಮುದಾಯದ ವೈಶಿಷ್ಟ್ಯವೂ ಹೌದು. ನಿದರ್ಶನಕ್ಕಾಗಿ ಸುಡುಗಾಡ ಸಿದ್ದರು, ದುರಗಮುರುಗಿ, ಬುರ‍್ರಕಥಾದವರು, ಗೊರವಪ್ಪ, ಜೋಗೇರಾ ಇವೆಲ್ಲ ಅವರ ಜಾತಿ, ವೃತ್ತಿ, ಸಂಸ್ಕೃತಿಯನ್ನು ಸಂಕೇತಿಸುತ್ತವೆ ಎಂಬುದು ದಿಟ.

ಬುಡ್ಗಜಂಗಮರ ವೇಷ-ಭೂಷಣಗಳು ಅವರ ವೃತ್ತಿ-ಜಾತಿಯನ್ನು ಸೂಚಿಸುತ್ತವೆ. ಅವರ ಹೊಸ ಬಟ್ಟೆ ಹೊಲಿಸುವುದೇ ಕಡಿಮೆ. ಭಿಕ್ಷೆಗೆ ಹೋದಾಗ ಜನ ನೀಡಿದ ಬಟ್ಟೆಗಳನ್ನು ಸ್ತ್ರೀ-ಪುರುಷರು ಉಡುವುದು ಹೆಚ್ಚು. ದೈನಂದಿನ ವೇಷ ಭೂಷಣಗಳು ಹಳ್ಳಿಯ ಒಕ್ಕಲಿಗರ ವೇಷ-ಭೂಷಣಗಳನ್ನೇ ಹೋಲುತ್ತವೆ. ಆದರೆ ಊರಾಡಲು ಹೋದಾಗ, ಕಲಾಪ್ರದರ್ಶನದ ಸಂದರ್ಭದಲ್ಲಿ ಇದ್ದ ಉಡುಪುಗಳನ್ನೇ ಪಾತ್ರಕ್ಕೆ ಸಂಬಂಧಿಸಿದಂತೆ ಬಟ್ಟೆ ಧರಿಸುತ್ತಾರೆ. ಕೈಕಾಪು, ಅಂಗಿ, ಮೇಲೊಂದು ಕೋಟು, ಧೋತ್ರ, ರುಮಾಲು ಗಂಡಸರ ಉಡುಗೆಯಾದರೆ, ಹೆಂಗಸರು ಹಳ್ಳಿಯ ಹೆಂಗಸರಂತೆ ದಡಿ ಸೀರೆ, ಪತ್ತಲ, ಜಂಪರು ತೊಡುತ್ತಾರೆ. ಗಂಡಸರು ಹಣೆಯಲ್ಲಿ ವಿಭೂತಿ, ಗಂಧ, ಕುಂಕುಮ, ಕೊರಳಲ್ಲಿ ರುದ್ರಾಕ್ಷಿಸರ, ಕಿವಿಯ ಕೆಳಗೆ ಗೋಪೀ ಚಂದನವನ್ನು ದಿನವೂ ಹಚ್ಚುತ್ತಾರೆ. ದೀಕ್ಷೆ ಪಡೆದವರು ಮಾತ್ರ ಜಡೆ, ಗಡ್ಡ ಬಿಟ್ಟು ಕ್ಯಾವಿಯ ರುಮಾಲು, ಅಂಗಿ, ಟಾವೆಲು, ಬಿಳಿಧೋತರ ಉಟ್ಟು ಹಣೆಗೆ ವಿಭೂತಿ, ಕೊರಳಲ್ಲಿ ರುದ್ರಾಕ್ಷಿ ಸರ ಧರಿಸಿ ಶರಣರಂತೆ ಕಂಡು ಬರುತ್ತಾರೆ. ಯುವಕರು ಮಾತ್ರ ಲುಂಗಿ, ನೆಹರು ಶರ್ಟ್‌ತೊಡುತ್ತಾರೆ. ಬೆರಳಲ್ಲಿ ಬೆಳ್ಳಿ-ಬಂಗಾರ-ತಾಮ್ರದ ಉಂಗುರ ಧರಿಸುತ್ತಾರೆ. ಕೆಲವರು ಕಿವಿಯಲ್ಲಿ ಮುರ ಧರಿಸುತ್ತಾರೆ.

ಬುಡ್ಗಜಂಗಮ ಮಹಿಳೆಯರು ಹಣೆಯಲ್ಲಿ ಕುಂಕುಮ ಹಚ್ಚಿರುತ್ತಾರೆ. ಮೂಗಿಗೆ ಎರಡೂ ಕಡೆ ನತ್ತು, ಕಿವಿಯಲ್ಲಿ ಹರಳಿನ ಬೆಂಡೋಲೆ, ಬುಗಡಿ, ಕೊರಳಲ್ಲಿ ಕರಿಮಣಿಸರ, ನಡದಲ್ಲಿ ಡಾಬ, ಕಾಲಲ್ಲಿ ಚೈನು, ಕಾಲುಂಗರು ಧರಿಸುತ್ತಾರೆ. ಹಿರಿಯ ಹೆಂಗಸರು ಮಾತ್ರ ತೋಳಬಂದಿ, ಕೈಯಲ್ಲಿ ಕಡಗ, ಕಾಜಿನಬಳಿ, ಬೆರಳಲ್ಲಿ ಬೆಳ್ಳಿ-ತಾಮ್ರದ ಉಂಗುರು ಹಾಗೂ ಜ್ಯೋಗೇರ ಬಳಿ ಸಿಗುವಂತಹ ಆಭರಣಗಳನ್ನೇ ಹೆಚ್ಚು ಉಪಯೋಗಿಸುತ್ತಾರೆ. ವಿಧವೆಯಾದವಳು ಮಾತ್ರ ಕೈಯಲ್ಲಿ ಒಂದೊಂದು ಕಡಗ ಹಾಕಿರುತ್ತಾಳೆ. ಯಾವುದೇ ಮಂಗಲಸೂಚಕ ವಸ್ತುಗಳನ್ನು ಆಕೆ ಧರಿಸುವುದಿಲ್ಲ.

“ಹಚ್ಚೆಯೊಂದು ಶೃಂಗಾರ ಸಾಧನ”ವೆಂದು ಭಾವಿಸಿರುವ ಬುಡ್ಗಜಂಗಮರು ಹಣೆ, ಗಲ್ಲ, ಗದ್ದ, ತೋಳು, ಬೆರಳ ಮೇಲ್ಭಾಗ, ಮುಂಗೈ ಹೀಗೆ ದೇಹದ ಬೇರೆ ಬೇರೆ ಭಾಗಗಳಲ್ಲಿ “ಹಚ್ಚೆ”ಯನ್ನು ಹಾಕಿಸಿಕೊಳ್ಳುತ್ತಾರೆ. ಚುಕ್ಕಿ, ಚಂದ್ರಾಮ, ಹೂವು, ಗೋದಿ ತೇನಿ ಕಾಳು ಹೀಗೆ ಮೊದಲಾದ ವಿನ್ಯಾಸದ ಹಚ್ಚೆಗಳನ್ನು ಹಾಕಿಸಿಕೊಳ್ಳುತ್ತಾರೆ. ಗಂಡಸರು ಹಚ್ಚಿ ಹಾಕಿಸಿಕೊಳ್ಳುವುದು ಇವರಲ್ಲಿ ಸಾಮಾನ್ಯ. ಇನ್ನು ಚಿಕ್ಕ ಮಕ್ಕಳಲ್ಲಿ ಅಂತಹ ವಿಶೇಷ ವೇಷ-ಭೂಷಣಗಳು ಕಂಡು ಬರುವುದಿಲ್ಲ.[1]      ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಕ.ಸಾ.ಪ ಅಧ್ಯಕ್ಷರಾಗಿರುವಾಗ ಆರಂಭಿಸಿದ ಉಪಸಂಸ್ಕೃತಿ ಅಧ್ಯಯನ ಮಾಲೆಯನ್ನು ಗಮನಿಸಿ.

[2]      ಡೊಂಬರು, ಕಿಳ್ಳಿಕ್ಯಾತರು, ಸುಡಗಾಡಸಿದ್ಧರು, ದುರಗಮುರಗಿಯವರು, ಕವಲೆತ್ತಿನವರು, ಕುರ‍್ರುಮಾಮಾ, ಕೆಂಚರು ಇತ್ಯಾದಿ.

[3]      ಬಿಡಾರ: ಬಹುರೂಪಿಗಳು, ಅಲೆಮಾರಿಗಳು ತಮ್ಮ ವಸತಿಗಾಗಿ ಸಿದ್ದಪಡಿಸಿಕೊಳ್ಳುವುದೇ ಬಿಡಾರ, ಬಾಗಿದ ಬಿದಿರು, ಪಟ್ಟಿ ಅದರ ಮೇಲೆ ಹುಲ್ಲಿನ ಚಾಪಿ/ಹರಕು ಕೌದಿ ಹೊಂದಿಸಿ ಬಿಗಿದು ಕಟ್ಟಿದರೆ ಬಿಡಾ ಸಿದ್ಧವಾಗುತ್ತದೆ. ಇದ್ದಕ್ಕೆ “ಡೇರೆ”, ಟೆಂಟ್‌ಎಂದೆಲ್ಲಾ ಕರೆಯುವರು. ಇದೇ ಅವರ ಅರಮನೆ.

[4]      ಕಸ್ತೂರಿ-ಕೋಶ-ಪು-೬೮೬.

[5]      ಬಸವಣ್ಣನೆನ್ನ ಬಹುರೂಪಕ್ಕೆ ಸೂತ್ರಧಾರಿಯಾದ ಎಂದು ಚೌಡಯ್ಯ ಹೇಳಿಕೊಂಡಿದ್ದಾನೆ.

[6]      ಶ್ರೀ ನಾಗಪ್ಪ-ಬುಡ್ಗಜಂಗಮ-ಗಬ್ಬೂರ(ದೇವದುರ್ಗ ತಾ||)

[7]      ಸಾಮಾಜಿಕ ಸ್ಥಾನಮಾನ ಸಿಗಲೆಂದು ಈ ರೀತಿ ಹೇಳಿಕೊಳ್ಳುತ್ತಾರೆ.

[8]      ಬಳ್ಳಾರಿ ಜಿಲ್ಲೆಯ ಹಳೆ ದರೋಜಿಯ “ಬುರ‍್ರಕಥಾ” ಈರಮ್ಮನನ್ನು (ಇತ್ತೀಚೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುಸ್ತಕ) ಗಮನಿಸಬಹುದು. ಈ ಮೇಳದಲ್ಲಿ ಹೆಣ್ಣುಮಕ್ಕಳೇ ಇರುವುದು ವಿಶೇಷ.

[9]      Raghunathaji. K.Bombay Beggars and Criers. The Indian Anti quary, A journal of oriental Research Vol-X-p-71

[10]     Jayaram. K. V, The worlds stage. India Express, Sunday (A.P. Edition) P-II-29-11-1992.

[11]     One who assumes many forms. Dictionary Telugu-English. C.P.Broun-p-879.

[12]     ವಿವರಣೆಗೆ ನೋಡಿ-ಡಾ ಅರ್ಜುನ ಗೊಳಸಂಗಿ : ದಲಿತರ ಬದುಕು ಮತ್ತು ಸಂಸ್ಕೃತಿ : ಜಾನಪದೀಯ ಅಧ್ಯಯನ-ಪು-೯೩.

[13]     Havanur L. G.-B.C.Commission Report, Govt of Karnataka 1975 VOL-II-P-359.

[14]     Annual Report an the working of the Backward Class Department for the year 1951-52 Govt of Bombay – p-82.

[15]     ವಿವರಣೆಗೆ ನೋಡಿ : ಪ್ರತಾಪ ಬಹುರೂಪಿ “ಬುಡ್ಗಜಂಗಮ” -ಪು- ೧೨೮-೧೩೦.