ನಂಬಿಕೆ

“ನಂಬಿಕೆ” ಜೀವನದ ತಾಯಿಬೇರು ನಂಬಿಕೆಯ ನೆಲಗಟ್ಟಿನ ಮೇಲೆ ಸಂಸ್ಕೃತಿಯ ಕಟ್ಟಡ ನಿಂತಿದೆ. ನಂಬಿಕೆಗಳನ್ನು ಒಂದು ರೀತಿಯ ಆತ್ಮವಿಶ್ಲೇಷಣೆ, ಬುದ್ದಿಪೂರ್ವಕ ಕ್ರಿಯೆ; ವ್ಯಕ್ತಿಯ ಅನುಭವಗಳ ವಾಸ್ತವಿಕತೆ, ಮತ್ತು ಮೌಲ್ಯಗಳ ಇಲ್ಲವೆ ಧ್ಯೇಯ ಧೋರಣೆಗಳ ಒಂದು ಮಾನಸಿಕ ಸ್ಥಿತಿಯೆಂದೂ; ಒಂದು ಹೇಳಿಕೆಯ ಸತ್ಯಾಂಶದ ಬಗ್ಗೆ ಒಬ್ಬ ವ್ಯಕ್ತಿ ತಾಳುವ ಬುದ್ಧಿಯ ಕಸರತ್ತು ಎಂದೂ ಹೇಳಬಹುದು. ನಂಬಿಕೆಗಳಿಗೆ ತಾತ್ವಿಕ ಸಾಮಾಜಿಕ ಹಿನ್ನೆಲೆಯೂ ಧಾರ್ಮಿಕ ತಳಹದಿಯೂ ಇರುತ್ತದೆ. ನಂಬಿಕೆಗಳು ವ್ಯಕ್ತಿಗತವಾಗಿಯೂ ಸಾಮೂಹಿಕವಾಗಿಯೂ ಪ್ರಚಲಿತವಾಗಿರುತ್ತವೆ.”

ಸಮಾಜ, ಪರಿಸರ ಬದಲಾದಂತೆಲ್ಲ ಮನುಷ್ಯನ ಬುದಕು-ಸಂಸ್ಕೃತಿಯೂ ಬದಲಾವಣೆ ಹೊಂದುತ್ತದೆ. ಅದರೊಡಲಲ್ಲಿ ನಂಬಿಕೆಗಳು ಕೂಡಾ ಅಲ್ಪಸ್ವಲ್ಪ ಬದಲಾವಣೆಯಾಗುತ್ತ ಚಲಾವಣೆಯಲ್ಲಿರುತ್ತವೆ. ಬುಡ್ಗಜಂಗಮರ ಜೀವನದಲ್ಲಿ ನಂಬಿಕೆಗಳು ಅತ್ಯಂತ ಮಹತ್ವದ ಪಾತ್ರವಹಿಸಿವೆ. ಅವರ ಇಡೀ ಬದುಕು ನಿಂತಿರುವುದೇ ನಂಬಿಕೆಗಳ ತಳಹದಿಯ ಮೇಲೆ, ಕಂಬಗಳ ಆಧಾರದ ಮೇಲೆ ಜೀವಕ್ಕೆ ಉಸಿರಾಟ ಎಷ್ಟು ಅವಶ್ಯವೋ ಅಷ್ಟೆ ಅವಶ್ಯ ಈ ನಂಬಿಕೆಗಳು. ಇದು ಚಲಾವಣೆಯಲ್ಲಿರುವ ನಾಣ್ಯ ಇದ್ದಂತೆ. ಇದರಿಂದಾಗಿ ಬುಡ್ಗಜಂಗಮರು ಸಂಜೀವಿನಿಯಂತೆ ಅವುಗಳನ್ನು ಉಳಿಸಿ-ಬೆಳೆಸಿಕೊಂಡು ಜೀವನದಲ್ಲಿ ಬೆರೆಸಿಕೊಂಡಿದ್ದಾರೆ. ನಂಬಿಕೆಗಳು ಅವರ ಬದುಕಿನಲ್ಲಿ ಆಳವಾದ ತಾಯಿಬೇರಿನಂತೆ ಸೇರಿ, ಬುಡ್ಗಜಂಗಮರ ಜೀವನಕ್ಕೆ ಶಕ್ತಿ ನೀಡಿ, ಮಾರ್ಗದರ್ಶನ ನೀಡುವಂತೆ ಕಂಡು ಬರುತ್ತವೆ. ಈ ಸಮಾಜದ ಸರ್ವಸಮ್ಮತವಾದ ಅಲಿಖಿತ ಸಂವಿಧಾನ ಇದ್ದಂತೆ. ಒಂದು ಕಾಲದಲ್ಲಿ ವೈಯಕ್ತಿಕವಾಗಿ ಹುಟ್ಟಿಕೊಂಡ ನಂಬಿಕೆಗಳು ಸಾಮೂಹಿಕವಾಗಿ ಬೆಳೆದು ಉಳಿದುಕೊಂಡು ಬರುತ್ತವೆ. ಅವೇ ವಂಶಪಾರಂಪರಿಕವಾಗಿ ವರ್ಗಾವಣೆಗೊಳ್ಳುತ್ತವೆ. ಮೇಲು ನೋಟದಲ್ಲಿ ಇವು ಮೂಢನಂಬಿಕೆಗಳಂತೆ ಕಂಡು ಬಂದರೂ ಅವುಗಳ ಅಂತರ್ಯದಲ್ಲಿ ಒಂದು ಸಾಮಾಜಿಕ ನೀತಿ-ನಿಯಮ ಇದೆ ಎಂಬುದನ್ನು ಅಲ್ಲಗಳೆಯಲಾಗದು. ಜನನದಿಂದ ಮರಣದವರೆಗೆ ಮತ್ತು ಮರಣ ಸಂಸ್ಕಾರದ ನಂತರವೂ ವ್ಯಾಪಿಸಿಕೊಂಡಿರುವ ನಂಬಿಕೆಗಳು ಬುಡ್ಗಜಂಗಮರ ದೈನಂದಿನ ಬದುಕಿನಲ್ಲಿ ಹಾಸು ಹೊಕ್ಕಾಗಿವೆ. ಚಿಕ್ಕಮಕ್ಕಳು, ಹೆಂಗಸರು, ಗಂಡಸರು, ಮುದುಕರಾದಿಯಾಗಿ ನಂಬಿಕೆಗಳನ್ನು ತಮ್ಮ ಜೀವನಾವರ್ತದಲ್ಲಿ ಅನುಸರಿಸಿಕೊಂಡು ಬಂದಿದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ ಬುಡ್ಗಜಂಗಮರ ಜೀವನ ವಿಧಾನವನ್ನು ಸಾಂಸ್ಕೃತಿಕ ಬದುಕನ್ನು ರೂಪಿಸಿದ ನಂಬಿಕೆಗಳು ತುಂಬಾ ವಿಶಿಷ್ಟವಾಗಿವೆ.

ವಾಸ್ತವ್ಯ-ಡೇರೆ

 • ಡೇರೆ ಹಾಕುವಾಗ ಅದರ ಮುಖ ಪೂರ್ವ/ಉತ್ತರ ದಿಕ್ಕಿಗೆ ಇರಬೇಕು
 • ಡೇರೆಯಲ್ಲಿ ಕಾಗೆ/ಬಳವು ಹೊಕ್ಕರೆ ಬಾಗಿಲದಿಕ್ಕನ್ನು, ಇಲ್ಲ ಡೇರಿಯನ್ನು ಸ್ಥಳಾಂತರಿಸಬೇಕು.
 • ವಾಸಿಯಾಗದ ರೋಗ ಬಂದಾಗ ಡೇರೆಯನ್ನು ಸ್ಥಳಾಂತರಿಸಬೇಕು.
 • ಹೊಸ ಡೇರೆ ಹಾಕಿದಾಗ ಸಾಮಾನ್ಯವಾಗಿ ಪ್ರಾಣಿಬಲಿ ಕೊಡಬೇಕು. ಅಂದರೆ ಶಾಂತಿ ನೆಲೆಸುತ್ತದೆ.

ಮಕ್ಕಳು-ಜನನ

 • ಅಮವಾಸ್ಯೆಯ ದಿನ ಮಕ್ಕಳು ಜನಿಸಿದರೆ ಅವರು ಮುಂದೆ ಕಳ್ಳರಾಗುತ್ತಾರೆ.
 • ಖಾಲಿ ಜೋಳಿಗೆ ತೂಗಿದರೆ ಮಕ್ಕಳ ಹೊಟ್ಟೆ ನೋಯುತ್ತದೆ.
 • ಕೂಸಿನ ಹಾಸಿಗೆ ತುಳಿದರೆ ಅವು ಕಿರಿ ಕಿರಿ ಮಾಡುತ್ತವೆ.
 • ಮಲಗಿದ ಮಕ್ಕಳಿಗೆ ಮುತ್ತಿಡಬಾರದು. ಅವುಗಳ ಸತ್ತಂತೆ.
 • ಮಲಗಿದ ಮಕ್ಕಳನ್ನು ದಾಟಬಾರದು. ಅವಕ್ಕೆ ಅಪಶಕುನವಾಗುತ್ತದೆ.
 • ಮಕ್ಕಳಿದ್ದ ಡೇರೆಗೆ ಬರಿಗೈಯಿಂದ ಬರಬಾರದು.
 • ಕೂಸಿನ ಸ್ನಾನದ ತರುವಾಯ ಉಪ್ಪು, ಮೆಣಸಿನಕಾಯಿ ತುಂಬಿ ನಿವಾಳಿಸಿ ಒಲೆಗೆ ಹಾಕಬೇಕು.
 • ಮಕ್ಕಳು ಡೇರೆಯ ಒಳ ಹೊರಗೆ ಕಸಗೂಡಿಸಿದರೆ ಬೀಗರು ಬರುತ್ತಾರೆ.
 • ಹೆಣ್ಣೇ ಹೆಚ್ಚು ಹುಟ್ಟುತ್ತಿದ್ದರೆ ಕೊನೆಯ ಮಗುವಿಗೆ “ಸಾಕಮ್ಮ” ಎಂದು ಹೆಸರಿಡಬೇಕು.
 • ಅವಳಿ ಗಿಡ ಸುತ್ತಿ ಬಂದರೆ ಅವಳಿ ಮಕ್ಕಳಾಗುತ್ತವೆ.
 • ಮಕ್ಕಳಿಗೆ ತಲೆ, ತಿಕದ ಮೇಲೆ ಹೊಡಯಬಾರದು.
 • ಬಾಯಿ ಮೇಲೆ ಮಾಡಿ ಹುಟ್ಟಿದ ಮಕ್ಕಳು ಅಸಾಮಾನ್ಯರಾಗುತ್ತಾರೆ.

ಹೆಣ್ಣು

 • ರವಿವಾರ ಮೈನೆರೆತ ಹೆಣ್ಣನ್ನು ಕಣ್ಣು ಕಟ್ಟಿ ಕಾಡಿನಲ್ಲಿ ಬಿಡಬೇಕು.
 • ಮೈ ನೆರೆತ ಹೆಣ್ಣು ಐದು ದಿನಗಳವೆಗೆ ಅಡುಗೆಯ ಸಾಮಗ್ರಿ ಮತ್ತು ಕಸಬರಿಗೆ ಹಿಡಿಯಬಾರದು.
 • ಮುಟ್ಟಾದವರನ್ನು ಮೂರು ದಿನ ಡೇರೆಯಲ್ಲಿ ಯಾರೂ ಮುಟ್ಟಿಸಿಕೊಳ್ಳಬಾರದು.
 • ಹೆಣ್ಣು ಅವಳಿ ಬಾಳೆಹಣ್ಣು ತಿಂದರೆ ಅವಳಿ ಮಕ್ಕಳಾಗುತ್ತವೆ.
 • ಹೆಣ್ಣು ನೋಡಲು ಬಂದಾಗ ಆಕೆ ಮುಟ್ಟಾಗಿದ್ದರೆ ಅವಳನ್ನು ಮಾಡಿಕೊಂಡರೆ ಗಂಡಿಗೆ ಕಂಟಕ ಬರುತ್ತದೆ.
 • ಎರಡು ಸುಳಿ ಇರುವ ಹೆಣ್ಣನ್ನು ತಂದುಕೊಂಡರೆ ಗಂಡನ ಮನೆಗೆ ಅಪಶಕುನ.

ಮದುವೆ

 • ಮದುವೆಯಲ್ಲಿ ಬಾಸಿಂಗಕ್ಕೆ ಏನಾದರೂ ತಾಕಿದರೆ ಮುಂದೆ ಅಪಶಕುನ
 • ಮದುವೆಯಾದ ಐದನೆಯ ದಿನ ಡೇರೆಯನ್ನು ಸ್ಥಳಾಂತರಿಸಬೇಕು.
 • ಮದುವೆ ಹೆಣ್ಣಿನ ಬಿಡಾರದ ಮುಂದೆ ನಡೆಯಬಾರದು.
 • ಮದುವೆಯಲ್ಲಿ ಆರತಿ ಬೆಳಗುವಾಗ ಕಳಸದ ದೀಪ ಆರಬಾರದು.
 • ಉಡುಕಿಯಾದವರು ಕಳಸ ಹಿಡಿಯಬಾರದು.
 • ಮುತ್ತೈದೆ ನತ್ತು ಕಾಲುಂಗರ ಇಲ್ಲದೆ ಇರಬಾರದು.
 • ಮೊದಲ ಸಲ ಬರುವ ಮದುಮಗಳು ಶುಕ್ರವಾರ ಬಂದರೆ ಲಕ್ಷ್ಮಿ ಬಂದಂತೆ.
 • ಮದುವೆಯಾಗುವ ಸುರಗಿಯನ್ನು ತಾಕಿಸಬಾರದು.
 • ಮದುವೆಗೆ ಹೋದವರು “ನಾಗೋಲಿ” ಮುಗಿಸದೆ (ಬೇಟೆಯ ರಕ್ತ ನೋಡದೇ) ಬರಬಾರದು. ಬಂದರೆ ಅಪಾಯ.

ಬಾಣಂತಿ

 • ಹೆರಿಗೆಯಾದ ಐದನೆಯ ದಿನ ಡೇರೆಯನ್ನು ಸ್ಥಳಾಂತರಿಸಬೇಕು.
 • ಬಾಣಂತಿ ಸಗಣೆ ದಾಟಿದರೆ ರೋಗ ಬರುತ್ತವೆ.
 • ಹೆರಿಗೆಯಾದ ಐದನೆಯ(ಐದೇಶಿ) ದಿನ ಕೂಸಿನ ಹೊಟ್ಟೆಗೆ ಬರೆ ಹಾಕಬೇಕು. ಇದರಿಂದ ಮೂರ್ಛೆರೋಗ ಬರುವುದಿಲ್ಲ.
 • ಬಾಣಂತಿಯ ಕಾಲು ದಾಟಿದರೆ ಅವಳ ಮೊಲೆಹಾಲು ಬತ್ತಿ ಹೋಗುತ್ತವೆ.
 • ಬಾಣಂತಿ ಮಾಂಸ ಸೇವಿಸಿದರೆ ಹೆಚ್ಚು ಶಕ್ತಿ ಬರುತ್ತದೆ. ಮತ್ತು ಮೊಲೆಯಲ್ಲಿ ಹಾಲು ಬರುತ್ತವೆ.
 • ಡೇರೆಯಲ್ಲಿ ದೆವ್ವ ಬರಬಾರದೆಂದು ಬಾಗಿಲಿಗೆ, ಪ್ರಾಣಿಗಳ ಬಲಿ ಇಟ್ಟು ಮಂತ್ರದ ಬೂದಿ ಡೇರೆ ಸುತ್ತ ಹಾಕುತ್ತಾರೆ.

ಪ್ರಯಾಣ

 • ಊರಾಡಲು ಹೊರಟಾಗ ಬಳೆಗಾರ ಎದುರಾದರೆ ಶುಭ.
 • ಕಲಾಪ್ರದರ್ಶನಕ್ಕೆ ಹೊರಟಾಗ ಸೂಳೆ ಎದುರು ಬಂದರೆ ಒಳ್ಳೆಯದು.
 • ಹೊರಹೊರಟಾಗ ಗುದ್ದಲಿ, ಸಲಿಕೆ, ಪುಟ್ಟಿ, ಎದುರಾದರೆ ಅಪಶಕುನ.
 • ಭಿಕ್ಷೆಗೆ ಹೊರಟಾಗ ಒಂಟಿಬ್ರಾಹ್ಮಣ, ಗಾಣಿಗ, ಕ್ಷೌರಿಕ ಎದುರು ಬಂದರೆ ಅಶುಭ.
 • ಹೋಗುವಾಗ ಹೂಗಾರ, ವಿಧವೆ ಎದುರು ಬಂದರೆ ಲಾಭ.
 • ಊರಾಡಲು ಹೊರಟಾಗ ಸತ್ತ ಸರ್ಪ, ಹೊಸ ಮಡಿಕೆ ಕಂಡರೆ ಮುಂದೆ ಹೋಗದೆ ಹಿಂತಿರುಗಬೇಕು.
 • ಹೊರಗಡೆ ಹೊರಟಾಗ ನರಿ ಎದುರಾದರೆ, ಕಾಗೆ ಬಲ ಕಟ್ಟಿದರೆ ಒಳ್ಳೆಯದು.
 • ಊರು ಕಿತ್ತಿ ಮುಂದಿನೂರಿಗೆ ಗುಳೆ ಹೊರಟಾಗ ಕಟ್ಟಿಗೆ, ಉಪ್ಪು ಒಯ್ಯಬಾರದು.
 • ಪ್ರಯಾಣಕ್ಕೆ ಹೋಗುವಾಗ ಸಿಂದಿ ತುಂಬಿದ ಗೊಬ್ಬಿ ಎದುರಾದರೆ ಒಳ್ಳೆಯದು.
 • ಊರು ಬಿಟ್ಟು ಹೊರಟಾಗ ಬೆಂಕಿ, ಚಟ್ಟ ಎದುರಾಗಬಾರದು.

ಸಾವು

 • ಕುಲದಲ್ಲಿ ಯಾರಾದರೂ ಸತ್ತರೆ ಐದನೆಯ ದಿನಕ್ಕೆ ಊರು/ಡೇರೆಯನ್ನು ಬದಲಿಸಬೇಕು.
 • ವ್ಯಕ್ತಿ ಪ್ರಾಣ ಬಿಟ್ಟ ತಕ್ಷಣ ಸ್ಥಳ ಬದಲಿಸಬೇಕು.
 • ವ್ಯಕ್ತಿ ಸತ್ತ ತಕ್ಷಣ ಶವದ ಕೈ ಕಾಲು ಮಡಚಿ ಕೂಡಿಸಬೇಕು/ಮಲಗಿಸಬೇಕು.
 • ಶವಸ್ನಾನಕ್ಕೆ ಸಂಬಂಧಿಕರು ಎಡಗೈಯಿಂದ ತಲೆಗೆ ಎಣ್ಣೆ, ಹಚ್ಚಿ ನೀರು ಹಾಕಬೇಕು.
 • ಬಾಣಂತಿ ಸತ್ತರೆ ದೆವ್ವವಾಗುತ್ತಾಳೆ.
 • ಶವವನ್ನು ಪೂರ್ವಾಭಿಮುಖವಾಗಿ ಹೂಳಬೇಕು.
 • ಶವ ಹೊತ್ತು ಹೋಗುವಾಗ ಸುಡಗಾಡ ಸಮೀಪಿಸಿದಾಗ ಹೆಗಲಾರಿಸಿ ಮತ್ತೆ ಹೊತ್ತೊಯ್ಯಬೇಕು.
 • ಶವಸಂಸ್ಕಾರದ ತರುವಾಯ ಬೇರೆ ದಾರಿಯಿಂದ ಡೇರೆಗೆ ಬರಬೇಕು.
 • ಶವ ಎತ್ತಿದ ತಕ್ಷಣ ಜೀವ ಬಿಟ್ಟ ಸ್ಥಳದಲ್ಲಿ ದೀಪ ಹಚ್ಚಿಡಬೇಕು.
 • ಶವಸಂಸ್ಕಾರದಲ್ಲಿ ತೊಡಗಿದವರು, ಡೇರೆಗೆ ಬಂದು ನೋಡಿ ಹೋಗಬೇಕು.
 • ಅಮವಾಸ್ಯೆಯ ದಿನ ಸತ್ತರೆ ಅವರು ದೆವ್ವವಾಗುತ್ತಾರೆ.
 • ಆಸೆ ಉಳಿಸಿಕೊಂಡು ಸತ್ತವರು ದೆವ್ವವಾಗುತ್ತಾರೆ.
 • ಸತ್ತವರ ಬಟ್ಟೆಯನ್ನು ಸುಡಗಾಡಿಗೆ ತರಬಾರದು.
 • ಸತ್ತವರ ಮನೆಯಲ್ಲಿ ಒಂದು ವರ್ಷದೊಳಗಾಗಿ ಶುಭಕಾರ್ಯ ನಡೆಯಬೇಕು.
 • ಸಿಡಿಲು ಬಡಿದು, ಹಾವು ಕಚ್ಚಿ ಸತ್ತರೆ ಸ್ವರ್ಗ ಸಿಗುತ್ತದೆ.
 • ಶವಸಂಸ್ಕಾರದ ತರುವಾಯ ಸ್ನಾನ ಮಾಡಿ ಡೇರೆಯೊಳಕ್ಕೆ ಬರಬೇಕು.
 • ಕುಲಬಾಂಧವರು ತಮ್ಮ ಕುಲದಲ್ಲಿ ಯಾರಾದರೂ ಸತ್ತ ಸುದ್ದಿ ಕೇಳಿದರೆ ಶವಸಂಸ್ಕಾರದಲ್ಲಿ ಪಾಲ್ಗೊಳ್ಳಬೇಕು.
 • ಶವಸಂಸ್ಕಾರಕ್ಕೆ ಬಂದ ಕುಲಬಾಂಧವರೆಲ್ಲ ಶವಸಂಸ್ಕಾರದ ತರುವಾಯ ನೇರವಾಗಿ ಸಿಂದಿ/ಸರಾಯಿ ಅಂಗಡಿಗೆ ಹೋಗಿ ಸತ್ತವರ ಸಂಬಂಧಿಗೆ ಹೆಂಡದಿಂದ ಬಾಯಿ ತೊಳೆಸಿ, ಕುಡಿದು ಡೇರೆಗೆ ಬರುವರು.

ವಾರ-ದೇವರು

 • ಆಯಿತಾರ ಆಯ್ತು ಹೊಯ್ತು ಅಶುಭ.
 • ಸೋಮವಾರ ಕುಲದೇವರ ವಾರ, ಒಳ್ಳೆಯ ದಿನ.
 • ಮಂಗಳವಾರ ಮಗಳು ಊರಿಗೆ ಹೋಗಬಾರದು.
 • ಗುರುವಾರ ಒಬ್ಬರು ಸತ್ತರೆ ಸತತವಾಗಿ ಮೂರು ಜನ ಸಾಯುತ್ತಾರೆ.
 • ಶುಕ್ರವಾರದಂದು; ಲಕ್ಷ್ಮಿ ಬರುತ್ತಾಳೆ.
 • ದೇವಸ್ಥಾನಕ್ಕೆ ಹೋದಾಗ ದೇವರ ಮೇಲಿನ ಹೂ ಬಲಕ್ಕೆ ಬಿದ್ದರೆ ಒಳ್ಳೆಯದು.
 • ದೇವರು ಅತೃಪ್ತಿಯಾದರೆ ಜನಕ್ಕೆ ಕೆಡುಗಾಲ ಬರುತ್ತದೆ.
 • ದೇವರಿಗೆ ಪ್ರಾಣಿಬಲಿ ನೀಡಿದರೆ ಶಾಂತಿಯಾಗುತ್ತದೆ.

ಊಟೋಪಚಾರ

 • ಊಟ ಮಾಡುವಾಗ ಕೈತುತ್ತು ಕೆಳಗೆ ಬೀಳಬಾರದು.
 • ಗಂಗಾಳದಲ್ಲಿ ನೋಣ ಬಿದ್ದರೆ ಮಾಂಸದ ಊಟ ದೊರೆಯುವುದು.
 • ಊಟ ಮಾಡಿದ ತಕ್ಷಣ ಮಲಗಬಾರದು.
 • ಊಟ ಮಾಡಿದ ಮೇಲೆ ಜಳಕ ಮಾಡಬಾರದು.
 • ಹೆಂಡ ಕುಂತು ಕುಡಿಯಬೇಕು.
 • ಮಾಂಸದ ಅಡುಗೆ ಊಟ ಮಾಡಿದ ಮೇಲೆ ಹಾಲು ಊಟ ಮಾಡಬಾರದು.

ನಿದ್ರೆ-ಕನಸು:

 • ಉತ್ತರ ದಿಕ್ಕಿಗೆ ತಲೆಹಾಕಿ ಮಲಗಬಾರದು.
 • ಚಿತ್ತ (ಅಂಗಾತ) ಮಲಗಿದರೆ ಕನಸು ಬೀಳುತ್ತವೆ.
 • ಕನಸಿನಲ್ಲಿ ಊಟ ಮಾಡಿದರೆ ದರಿದ್ರತನ ದೊರೆಯುತ್ತದೆ.
 • ಪೂರ್ವಕ್ಕೆ ತಲೆಹಾಕಿ ಮಲಗಬಾರದು.
 • ಕನಸಿನಲ್ಲಿ ಊರಿಗೆ ಹೋದವರು ನಗುತ್ತ ಬಂದರೆ ಸಾಯುತ್ತಾರೆ.
 • ಕನಸಿನಲ್ಲಿ ಮದುವೆಯಾದರೆ ಕೇಡುಗಾಲ.
 • ಹಾಸಿಗೆ ತುಳಿದಾಡಿದರೆ ಕನಸು ಬೀಳುತ್ತವೆ.
 • ಮಲಗುವಾಗ ತಲೆದಿಂಬಿನ ಹತ್ತಿರ ಕಸಬರಿಗೆ, ಚಪ್ಪಲಿ ಇಟ್ಟುಕೊಂಡು ಮಲಗಿದರೆ ದೆವ್ವ ಬರುವುದಿಲ್ಲ. ಕನಸು ಬೀಳುವುದಿಲ್ಲ.
 • ಕನಸಿನಲ್ಲಿ ಕಟ್ಟಿಗೆ, ಬೆಂಕಿ ಕಂಡರೆ ಸಾವಿನ ಸೂಚನೆ.
 • ಕನಸಿನಲ್ಲಿ ಹಾವು ಬಂದರೆ ಕುಲದೇವರು ಬಂದಂತೆ.
 • ನಸುಕಿನಲ್ಲಿ ಬಿದ್ದ ಕನಸು ನನಸಾಗುತ್ತದೆ.

ವೇಷ:

 • ರಾತ್ರಿ ವೇಷ ಹಾಕಬಾರದು.
 • ರಾತ್ರಿ ವೇಷ ಹಾಕಬಾರದು.
 • ಹೆಣ್ಣು ಬಣ್ಣ ಬಳಿದು ವೇಷ ಹಾಕಬಾರದು.
 • ವೇಷ ಹಾಕಿದಾಗ, ಪೇಟೆ, ತಬಲಾ ಬಾರಿಸುವಾಗ ಚಪ್ಪಲಿ ಹಾಕಬಾರದು.
 • ಕುಲಬಾಂಧವರು ಸತ್ತೆ ಸುದ್ದಿ ತಿಳಿದಾಗ ವೇಷ ಹಾಕಬಾರದು.

ಈ ರೀತಿಯಾಗಿ ಕಂಡು ಬರುವ ಬುಡ್ಗಜಂಗಮರ ಬದುಕಿನಲ್ಲಿಯ ನಂಬಿಕೆಗಳು ಅವರ ಬದುಕನ್ನು ನಿರೂಪಿಸಿವೆ. ನಿಯಂತ್ರಿಸಿವೆ. ಇಲ್ಲಿರುವ ನಂಬಿಕೆಗಳು ಇತರ ಜನಸಮೂಹದಲ್ಲೂ ಇಲ್ಲದಿಲ್ಲ. ಆದರೆ ಬುಡ್ಗಜಂಗಮರಿಗೆ ನಂಬಿಕೆಗಳು ಕಾನೂನು ಇದ್ದಂತೆ. ಧಾರ್ಮಿಕ, ಸಾಮಾಜಿಕ ಚೌಕಟ್ಟನ್ನು ಇವು ನಿರೂಪಿಸಿವೆ. ಆದರೆ ಹೆಣ್ಣು ಮಕ್ಕಳ ಕುರಿತಾದ ನಂಬಿಕೆಗಳು ತೀರ ಅವೈಜ್ಞಾನಿಕವಾಗಿವೆ. ಅವು ಅವರ ಬದುಕನ್ನು ಅಧಃಪತನಗೊಳಿಸುತ್ತವೆ. ಬದುಕಿನ ಬದಲಾವಣೆಯ ದೃಷ್ಟಿಯಿಂದ, ನಂಬಿಕೆಗಳಿಂದ ಮಹಿಳೆಯನ್ನು ಬಿಡುಗಡೆಗೊಳಿಸುವುದು ಅಗತ್ಯವಿದೆ.

ಹಾಡು:

ಹಾಡಿ, ಕಲಾಪ್ರದರ್ಶನ ನೀಡಿ ಬದುಕನ್ನು ರೂಪಿಸಿಕೊಂಡವರು ಬುಡ್ಗಜಂಗಮರು. ಹಾಡಿ ಬೇಡುತ್ತಲೇ ನಾಡನ್ನು ಕಂಡವರು. ಪುರುಷರಷ್ಟೇ ಪ್ರಧಾನ ಜನಪದ ಕಲೆ ಈ ಹೆಣ್ಣುಮಕ್ಕಳು ಹಾಡುವ ಜನಪದ ಹಾಡುಗಳು,-ಜನಾಕರ್ಷಣೀಯ ರೀತಿಯಲ್ಲಿ ಹಾಡುಗಳನ್ನು ಹಾಡಿ ಭಿಕ್ಷೆ ಬೇಡುವುದು, ಊರಿಂದ ಊರಿಗೆ ತಿರುಗುವುದು ಈ ಹೆಂಗಸರ ಮುಖ್ಯ ಕಸಬು. ಗಂಡಸರು ವೇಷ ಪ್ರದರ್ಶನಕ್ಕೆ ಹೋಗುವದಕ್ಕೂ ಮೊದಲು ಎಳಗೂಸುಗಳನ್ನು ಕಂಕುಳಲ್ಲಿ ಕಟ್ಟಿಕೊಂಡು ಭಿಕ್ಷೆಗೆ ಹೊರಡುತ್ತಾರೆ. ಹಳ್ಳಿಯಲ್ಲಿ ಒಕ್ಕಲಿಗರು, ಕೂಲಿ ಹೆಣ್ಣು ಮಕ್ಕಳು ಹೊಲಕ್ಕೆ ಹೋಗುವುದರಲ್ಲಿ ಭಿಕ್ಷಾಟನೆ ಮುಗಿಸುತ್ತಾರೆ. ಪ್ರತಿಯೊಂದು ಮನೆಯ ಮುಂದೆ ಒಂದು ಹಾಡನ್ನು ಹಾಡಿ, ಮತ್ತೊಂದು ಓಣಿಗೆ ಹೋಗುವಾಗ ಸರ್ವಜ್ಞನ ತ್ರಿಪದಿ ಹೇಳಿ, ಮತ್ತೆ ಹಾಡು ಆರಂಭಿಸುತ್ತಾರೆ.

ಬುಡ್ಗಜಂಗಮ ಹೆಣ್ಣು ಮಕ್ಕಳು ಪುರುಷರ ವಾದ್ಯಪರಿಕರಗಳಲ್ಲಿ ಕೈಪೇಟಿ ಮಾತ್ರ ಬಳಸಿಕೊಳ್ಳುತ್ತಾರೆ. ಸಹಕಲಾವಿದರು ದಮ್ಮಡಿ, ತಂಬೂರಿಯನ್ನು ತಾಳ, ಲಯ ಬದ್ಧವಾಗಿ ಬಾರಿಸುವುದನ್ನು ಕರಗತ ಮಾಡಿಕೊಂಡಿರುತ್ತಾರೆ. ಸುಮುಧರ ಕಂಠದಿಂದ ಜೋಡಿ ಕೋಗಿಲೆ ಹಾಡ ಹತ್ತಿದರೆ ಯಾರ ಕಿವಿಗಳಾದರೂ ಇಂಪನ್ನು ತಿರಸ್ಕರಿಸಲು ಸಾಧ್ಯವಿಲ್ಲ. ಹಳ್ಳಿಯ ಜನರಂತೂ ಇವರ ಹಾಡುಗಳನ್ನು ಕೇಳಿದಾಕ್ಷಣ ತಮ್ಮ ಕೆಲಸಗಳನ್ನು ಬಿಟ್ಟು ಬಂದು, ಹಾಡು ಕೇಳುವುದರಲ್ಲಿ ಮಕ್ಕಳೊಂದಿಗೆ ಮೈ ಮರೆಯುತ್ತಾರೆ. ಕೆಲವರಂತು ಮನೆಯ ಅಂಗಳದಲ್ಲಿ ಕರೆದು ಕೂಡಿಸಿ, ತಮಗೆ ಇಷ್ಟವಾದ ಹಾಡುಗಳನ್ನು ಪೂರ್ತಿ ಹಾಡಿಸಿ ಕೇಳುತ್ತಾರೆ. ಇವರ ಹಾಡುಗಳಲ್ಲಿ ಅಂತಹ ಭಕ್ತಿ, ನೀತಿ, ತತ್ವ, ಸಂದೇಶ ತುಂಬಿಕೊಂಡಿರುತ್ತವೆ. ದಾಸರ ಕೀರ್ತನೆಗಳೊಂದಿಗೆ “ಕಥನಗೀತೆ”ಗಳನ್ನು ಕೂಡಾ ಹಾಡುತ್ತಾರೆ. ಯಾವುದೇ ವಿದ್ವತ್ಪೂರ್ಣ ಸಂಗೀತ ಕಲಿತವರಲ್ಲ, ನಿಜ. ಆದರೆ ಜನಕ್ಕೆ ಅವರ ಹಾಡು ಮೋಡಿ ಮಾಡಿರುವುದಂತೂ ಸತ್ಯ. ಅನಕ್ಷರಸ್ಥರಾದ ಬುಡ್ಗಜಂಗಮರ ಹೆಣ್ಣು ಮಕ್ಕಳು ತಾವು ಹಾಡುವ ಹಾಡುಗಳೆಲ್ಲ ವಂಶಪಾರಂಪರ್ಯದಿಂದ ಬಂದವುಗಳು ಎನ್ನುತ್ತಾರೆ. ಬಾಲ್ಯದಲ್ಲಿರುವಾಗಲೇ ತಾಯಿಯೊಟ್ಟಿಗೆ ಹೋಗಿ, ಹಾಡು ಕೇಳಿ ಕಲಿತುಕೊಂಡಿರುತ್ತಾರೆ. ಇದೊಂದು ರೀತಿ ಅನುಕರುಣಾಶೀಲ ಕಲೆ. ಇವರು ಹೇಳುವ ಹಾಡುಗಳಲ್ಲಿ ವಿಷಯ, ಶೈಲಿಯನ್ನು ಕಾಣಬಹುದಾಗಿದೆ. “ಧ್ವನಿಯ ಏರಿಳಿತ, ರಾಗಗಳ ಅವರೋಹಣ ಆರೋಹಣದೊಂದಿಗೆ ಸುಶ್ರಾವ್ಯವಾಗಿ ಹಾಡುತ್ತಾರೆ. ಅವರ ಹಾಡುಗಳಲ್ಲಿ ಸಾಮಾಜಿಕ ನೀತಿ, ಭಕ್ತಿ, ತತ್ವಪದಗಳು ಹಾಗೂ ಕಥನಗೀತೆಗಳು ಕಂಡುಬರುತ್ತವೆ. ಆದರೆ ಅವರ ಹಾಡುಗಳನ್ನು ಸಾಹಿತ್ಯಿಕ, ಕಾವ್ಯಾತ್ಮಕವಾಗಿ ಅವಲೋಕಿಸಲಾಗದು. ಗೇಯಾತ್ಮಕ ಮತ್ತು ನೀತಿ, ತತ್ವ, ಭಕ್ತಿ ಪ್ರಧಾನತೆ ಇರುವುದನ್ನು ಗಮನಿಸಬೇಕು.

ಬುಡ್ಗಜಂಗಮರು ಬಡವರಾದರೂ ಕೂಡಾ ನೈತಿಕ ತಳಹದಿಯ ಮೇಲೆ ಬದುಕನ್ನು ಕಟ್ಟಿಕೊಂಡವರು. ಅವರ ಹಾಡುಗಳಲ್ಲಿ ನೀತಿಯೇ ಜೀವಾಳ ಎಂಬುದಕ್ಕೆ ಸಂಕೇತವಾಗಿ ಅನೇಕ ಹಾಡುಗಳನ್ನು ಹಾಡುತ್ತಾರೆ. ನಿದರ್ಶನಕ್ಕೆ ಒಂದು ಹಾಡನ್ನು ಗಮನಿಸಬಹುದಾಗಿದೆ.

“ಗಂಡನ ಮನೀಲಿ ಒಳ್ಳೆ ಬಾಳು ನೀ ಬಾಳಬೇಕವ್ವ
ಮುತ್ತೈದಿತ್ವ ತಂಗಿ ನಿನಗ ದೊರಿಯತಾದವ್ವ”  ||ಪ||

ಸಾವಿರ ಹಣ ಕೊಟ್ಟರ ಮುತ್ತೈದಿತನವ ಸಿಗುದಿಲ್ಲವ್ವ
ಸಾವಿರ ಹಣ ಕೊಟ್ಟರೆ ಮುತ್ತೈದಿತನವ ಸಿಗುದಿಲ್ಲವ
ನಾಗರನ ಕೊಟ್ಟರ ಮುತ್ತೈದಿತನವ ದೊರಕುದಿಲ್ಲವ್ವ
ನಾಗರನ ಕೊಟ್ಟರ ಮುತ್ತೈದಿತನವ ದೊರಕುದಿಲ್ಲವ್ವ  ||೧||

ಮನಿಯಲಿ ನಾದನಿ ಮೈದುನದೇರು ಇರಬೇಕವ್ವ
ಮನಿಯಲಿ ನಾದನಿ ಮೈದುನದೇರು ಇರಬೇಕವ್ವ
ಅವರ ಮಾತಿಗೆ ತಲಿಬಾಗಿ ನೀ ನಡಿಯಬೇಕವ್ವ
ಅವರ ಮಾತಿಗೆ ತಲಿಬಾಗಿ ನೀ ನಡಿಯಬೇಕವ್ವ ||೨|

ಅತ್ತಿಯೆಂದರ ಪಾರ್ವತಿಯಂತ ಪಾಲಿಸಿ ನಡಿಯವ್ವ
ಮಾವನಂದರ ಮಾದೇವಂತ ತಿಳಿದ ನಡಿಯವ್ವ ||೩||

ಹೀಗೆಯೇ ನುಡಿಗಳನ್ನು ಜೋಡಿಸಿ ಹಾಡುವುದುಂಟು. ಈ ತೆರನಾದ ಹಾಡುಗಳನ್ನು ಉತ್ತರ ಕರ್ನಾಟದಲ್ಲಿ ವೇಷ ಹಾಕುವ ಬುಡ್ಗಜಂಗಮರ ಹೆಣ್ಣುಮಕ್ಕಳು ಹಾಡುತ್ತಿರುವುದಾಗಿ ಹೇಳುತ್ತಾರೆ. ಹಾಡು ಒಂದೇ ಆಗಿದ್ದರೂ ಪ್ರಾದೇಶಿಕವಾಗಿ ಕೆಲವು ವ್ಯತ್ಯಾಸಗಳು ಕಂಡು ಬರುತ್ತವೆ. ಸಂಸಾರ ಜಂಜಾಟ ಕುರಿತ ಅಲೌಕಿಕ ಹಿನ್ನೆಲೆಯ ಅನೇಕ ಹಾಡುಗಳನ್ನು ಜನಾಂಗದ ಹೆಂಗಳೆಯರು ಹಾಡುತ್ತಾರೆ. ಈಗಾಗಲೇ ಈ ಕ್ಷೇತ್ರದಲ್ಲಿ ಸಂಶೋಧನೆ ಮಾಡಿದ ಸಂಶೋಧಕರು ಹಾಡುಗಳನ್ನು ಸಂಗ್ರಹಿಸಿದ್ದಾರೆ. ಅವು ಪ್ರಕಟಗೊಳ್ಳುವುದು ಅಗತ್ಯವಿದೆ.

ಹೆಣ್ಣು ಮಕ್ಕಳು ಬಳಸುವ ವಾದ್ಯ:

ಬುಡ್ಗಜಂಗಮ ಹೆಣ್ಣುಮಕ್ಕಳ ಪ್ರಮುಖ ವಾದ್ಯ ಎಂದರೆ “ದಮ್ಮಡಿ”, ಇದು ಹೆಣ್ಣು ಮಕ್ಕಳ ಪಾಲಿನ ಅಕ್ಷಯ ಪಾತ್ರೆ ಇದ್ದಂತೆ. ತವರು ಮನೆಯವರು ಮಗಳು ಗಂಡನ ಮನೆಗೆ ಹೋಗುವಾಗ ಕೊಡಲು ಏನೂ ಇಲ್ಲದಿದ್ದರೂ “ದಮ್ಮಡಿ”ಯನ್ನು ಕೊಟ್ಟು ಕಳಿಸುವುದನ್ನು ಮರೆಯಲಾರರು. ಯಾಕೆಂದರೆ ದುಡಿದು ಸಂಪಾದನೆ ಮಾಡಿ ಬದುಕಲು ಸಹಾಯವಾಗುತ್ತದೆ ಎಂಬ ಭಾವನೆ ಅವರದಾಗಿದೆ. ಇದು ಅವರ ಆಸ್ತಿಗಳಲ್ಲಿ ಒಂದು.

“ದಮ್ಮಡಿ” ವಾದ್ಯಕ್ಕೆ ಪ್ರಾದೇಶಿಕವಾಗಿ “ದಮಡಿ”, “ತಪ್ಪಟ”, “ತಮ್ಮಟಿ” ಎಂದೆಲ್ಲಾ ಕರೆಯುತ್ತಾರೆ. ದಮ್ಮಡಿಯನ್ನು ಬಹುರೂಪಿಗಳು ಪುರುಷರು ತಯಾರಿಸಿಕೊಡುತ್ತಾರೆ. ಸುಮಾರು ೫ರಿಂದ ೬ ಇಂಚು ವ್ಯಾಸದ ಕ್ಯಾದಗಿಯ ಪಡಗಕ್ಕೆ ಉಡದ ಚರ್ಮವನ್ನು ಬಿಗಿದು ಸಿದ್ಧಪಡಿಸಿಕೊಳ್ಳುತ್ತಾರೆ. ಇನ್ನು ಕೆಲವಡೆ ಎಳೆಯ ಕುರಿ/ಆಡಿನ ಚರ್ಮವನ್ನು ಡೋರರಿಂದ ತಂದು ತಯಾರಿಸಿಕೊಳ್ಳುವುದಾಗಿ ಹೇಳುತ್ತಾರೆ. ಆದರೆ ನಾದದ ಹೊಮ್ಮುವ ದೃಷ್ಟಿಯಿಂದ ಉಡದ ಚರ್ಮವೇ ಒಳ್ಳೆಯದೆನ್ನುತ್ತಾರೆ. ಪಡಗದ ಸುತ್ತ ಮಧ್ಯಭಾಗದಲ್ಲಿ ಅಲ್ಲಲ್ಲಿ ಎರಡರಂತೆ ಹುಲಗೆಜ್ಜೆಗಳನ್ನು ಕಟ್ಟಿರುತ್ತಾರೆ. ಬಲಗೈಯಿಂದ ದಮ್ಮಡಿ ಬಾರಿಸುವಾಗ ಎಡಗೈ ಬೆರಳಿಂದ ಮಧ್ಯದಲ್ಲಿ ಚಿಟಕಿ ಕೊಡುತ್ತಾರೆ. ಕೆಲವರು ಬಲಗೈ ಬೆರಳುಗಳನ್ನೆ ಬಳಸಿ ಗೆಜ್ಜೆ ಚಿಟಕಿ ಕೊಟ್ಟು ಒಳ್ಳೆಯ ನಾದ, ಲಯ ಹೊರಡಿಸುತ್ತಾರೆ. ಮಳೆಗಾಲ ಮತ್ತು ಚಳಿಗಾಲದಲ್ಲಿ ಚರ್ಮ ಒದ್ದೆಯಾಗಿ ತಂಪಾಗುವುದರಿಂದ ಊರ ಹತ್ತಿರ ಹೋಗಿ ಬೆಂಕಿ/ಉರಿಗೆ ದಮ್ಮಡಿಯನ್ನು ಕಾಯಿಸಿ ಧ್ವನಿ ಹೊರಡುವಂತೆ ಮಾಡಿಕೊಂಡು ಭಿಕ್ಷೆಗೆ ಹೋಗುವರು.

ದಮ್ಮಡಿಯೊಂದಿಗೆ ಅವರು ಬಳಸುವ ಮತ್ತೊಂದು ಪ್ರಮುಖ ವಾದ್ಯ ಪರಿಕರ ಎಂದರೆ ಕೈಪೇಟಿ, ಬುಡ್ಗಜಂಗಮರು “ಸ್ವರಪೆಟ್ಟಿಗೆ”, “ರಾಗಮಾಲಿ” ಎಂದು ಇದನ್ನು ಕರೆಯುತ್ತಾರೆ. ತಿದಿ ಒತ್ತಿ, ಧ್ವನಿ ಹೊರಡಿಸಿ ರಾಗಬದ್ಧವಾಗಿ ಅದಕ್ಕನುಗುಣವಾಗಿ ಧ್ವನಿ ಹೊಂದಿಸಿಕೊಂಡು ಅದರೊಂದಿಗೆ ಹಾಡುತ್ತಾರೆ. ಇದನ್ನು ಪಟ್ಟಣದಲ್ಲಿ ಕೊಂಡು ತಂದಿರುತ್ತಾರೆ.

“ತಂಬೂರಿ” ಈ ಕಲಾವಿದರು ಹಾಡುಗಾರಿಕೆಯಲ್ಲಿ ಬಳಸುವ ಮತ್ತೊಂದು ವಾದ್ಯ. ಅವರು ಇದನ್ನು “ತಂಬೂರಾ” “ತಾನಪುರಾ” ಎಂದೆಲ್ಲಾ ಕರೆಯುವುದುಂಟು. ನಾಲ್ಕು ತಂತಿಗಳನ್ನೊಳಗೊಂಡ ಶ್ರುತಿವಾದ್ಯ ಭಿಕ್ಷೆ ಬೇಡಲು ಹೋದಾಗ ಹಾಡುಗಳಿಗೆ ಪೂರಕವಾದ್ಯವಾಗಿ ಇದನ್ನು ಬಳಸುತ್ತಾರೆ. ಕೊರಳಲ್ಲಿ ಜೋತುಬಿಟ್ಟುಕೊಂಡು ಇಲ್ಲವೆ ತೊಡೆಯ ಮೇಲೆ ಇಟ್ಟುಕೊಂಡು ಬಾರಿಸುತ್ತಾರೆ. ಬಲಗೈ ಬೆರಳುಗಳಿಂದ ತಂತಿಗಳನ್ನು ಮೀಟಿ ನುಡಿಸುತ್ತಾರೆ. ಇತ್ತೀಚೆಗೆ ಇದು ಅಷ್ಟಾಗಿ ಬಳಕೆಯಲ್ಲಿ ಕಂಡು ಬರುವುದಿಲ್ಲ. ಆದರೆ ಬುರ‍್ರಕತೆಗೆ ಮಾತ್ರ ಹೇಳಿಮಾಡಿಸಿದ ವಾದ್ಯ ಹೌದು.

“ಗಗ್ಗರಿ” ಬುಡ್ಗಜಂಗಮ ಹೆಂಗಸರು ಬಳಸುವ ಮತ್ತೊಂದು ವಾದ್ಯಪರಿಕರ ತಂಬೂರಿ ಬಾರಿಸುವಾಗ ಎಡಗೈ ಹೆಬ್ಬೆರಳಿನಲ್ಲಿ ಗಗ್ಗರಿಯನ್ನು ಸಿಕ್ಕಿಸಿಕೊಂಡು ಬೆರಳಿನ ಚಲನೆಯಿಂದ ಬುರುಡೆಗೆ ಬಡಿದು ಹಾಡಿನ ಲಯಕ್ಕೆ ತಕ್ಕಂತೆ ಬಾರಿಸುತ್ತಾರೆ. ಗಗ್ಗರಿಯ ಲಯಬದ್ದಹಾಡು ಕೇಳುಗರಿಗೆ ಮೋಡಿ ಮಾಡುತ್ತದೆ.

ತಂಬೂರಿಯ ಬದಲಾಗಿ ಬಳಸಲಾಗುವ ಇನ್ನೊಂದು ವಾದ್ಯ ಪರಿಕರ ಎಂದರೆ “ಏಕತಾರಿ”. ಹಾಡ್ಗತೆಗಳನ್ನು ಹೇಳುವವರೇ ಈ ವಾದ್ಯವನ್ನು ನುಡಿಸುತ್ತಾರೆ. “ಏಕ” ಅಂದರೆ ಒಂದು, “ತಾರ” ಅಂದರೆ ತಂತಿ. ಒಂದೇ ತಂತಿ ಇರುವ ವಾದ್ಯವೇ “ಏಕತಾರಿ”. ದುಂಡಾಗಿ ಇರುವ ಕುಂಬಳಕಾಯಿಯ ಮೇಲ್ಭಾಗವನ್ನು ಸ್ವಲ್ಪ ಕೊರೆದು, ಕೆಳಕ್ಕೆ ತಾಕುವಂತೆ ಬಿದಿರಿನ ಕೋಲೊಂದನ್ನು ಸೇರಿಸಿ ಮೇಣ ಸವರುತ್ತಾರೆ. ಅದರ ತುದಿಗೆ ತೂತು ಕೊರೆದು ಬೆಣಿಯೊಂದನ್ನು ಸಿಕ್ಕಿಸುತ್ತಾರೆ. ತಳದಿಂದ ಕೋಲ ತುದಿಯ ಬೆಣಿಗೆ ತಂತಿಯನ್ನು ಕಟ್ಟಿ ಬೆಣೆಯಿಂದ ಬಿಗಿ ಮಾಡಲು ನಾದ ಹೊರಡುತ್ತದೆ. ಬಲಗೈಯಲ್ಲಿ ಹಿಡಿದು ತೋರು ಬೆರಳು ಮಧ್ಯದ ಬೆರಳನ್ನು ಮೇಲೆ ಕೆಳಗೆ ಮಾಡಿ ತಂತಿಯನ್ನು ಬಾರಿಸುತ್ತ ಹಾಡುತ್ತಾರೆ.

ಮದ್ದಳೆಯನ್ನು ಹೋಲುವ ಇನ್ನೊಂದು ವಾದ್ಯ “ಗುಮ್ಮಟೆ”. ಬಹುರೂಪಿ ಹೆಣ್ಣುಮಕ್ಕಳು ಹಾಡ್ಗತೆ ಹೇಳುವಾಗ ಬಳಸುವ ವಾದ್ಯವಾಗಿದೆ. ತೆಲುಗಿನಲ್ಲಿ ಇದನ್ನು “ಬುರ‍್ರ” ಎನ್ನುತ್ತಾರೆ. ಬುಡ್ಗಜಂಗಮರಿಗಿಂತ ಬುರ‍್ರಕಥಾ ಮೇಳದವರು ಈ ವಾದ್ಯವನ್ನು ಹೆಚ್ಚು-ಬಳಸುವುದುಂಟ. ಸಹ ಗಾಯಕಿ ಇದನ್ನು ನುಡಿಸುತ್ತಾಳೆ. ಪೊಳ್ಳು ಮರದಿಂದ ಮಾಡಲಾದ ಗುಮ್ಮಟೆ ಬಲಬದಿಗೆ ಚರ್ಮ ಬಿಗಿದಿರುತ್ತಾರೆ. ಎಡಬದಿ ಮಾತ್ರ ಖಾಲಿ ಇರುತ್ತದೆ. ಅದಕ್ಕೆ ಕಬ್ಬಿಣ ಅಥವಾ ಹಿತ್ತಾಳೆಯ ಕಟ್ಟನ್ನು ಹಾಕುತ್ತಾರೆ. ಬಲಭಾಗದ ಚರ್ಮದ ಹೊದಿಕೆಯನ್ನು ತೊಗಲಿನ ಬಾರುಗಳಿಂದ ಬಿಗಿದಿರುತ್ತಾರೆ. ಹಾಡಿಗೆ ತಕ್ಕಂತೆ ಸ್ವರ ಏರಿಳಿತ ಬದಲಾಯಿಸಲು ಮರದ ಬೆಣಿಗಳನ್ನು ಸಿಕ್ಕಿಸುತ್ತಾರೆ. ಖಾಲಿ ಇರುವ ವರ್ತುಳಾಕಾರದ ಎಡಬಾಯಿಯನ್ನು ಎಡಗೈಯಿಂದ ಮುಚ್ಚಿ-ತೆಗೆಯುವುದರಿಂದ ಅದೇ ಸಮಯದಲ್ಲಿ ಬಲಗಡೆಯ ಚರ್ಮದ ಭಾಗಕ್ಕೆ ಬಲಗೈಯಿಂದ ಬಾರಿಸುವುದರಿಂದ ವೈವಿಧ್ಯಮಯ ನಾದಸ್ವರ ಹೊರಡುತ್ತದೆ. ಚಾಕಚಕ್ಯತೆಯಿಂದ ಏಕಕಾಲದಲ್ಲಿ ಎರಡೂ ಕೈಗಳಿಂದ ಗುಮ್ಮಟೆ ಬಾರಿಸುವ ಕಲೆ ವಿಶಿಷ್ಟವಾದದ್ದು. ಹಾಡ್ಗತೆ ಹೇಳಲು ಪ್ರೇರಣೆ-ಕೇಳಲೂ ಆನಂದವನ್ನು ನೀಡುವ ಬಹುರೂಪಿಗಳ ಪಕ್ಕವಾದ್ಯ ಇದಾಗಿದೆ. ಈ ವಾದ್ಯ ಬಳಕೆ ರಾಯಚೂರ, ಬಳ್ಳಾರಿ ಜಿಲ್ಲೆಗಳಲ್ಲಿ ಹೆಚ್ಚು ಕಂಡು ಬರುತ್ತದೆ.

ತಂಬೂರಿ, ದಮ್ಮಡಿ, ಕೈಪೇಟಿ, ಬುಡ್ಗ ವಾದ್ಯಗಳನ್ನು ಹಿಡಿದು ಹಾಡಿ ಭಿಕ್ಷೆ ಬೇಡುವ ಪರಂಪರೆಯನ್ನು ಇಂದಿನ ಯುವತಿಯರು ಅನುಸರಿಸುತ್ತಿಲ್ಲ. ಅವೆಲ್ಲ ಜಂಗು ಹಿಡಿಯುತ್ತಲಿವೆ. ಇವರಲ್ಲಿ ಶೈಕ್ಷಣಿಕ ಪರಿಸರ, ವ್ಯಾಪಾರ, ಕೂಲಿ ಮಾಡುವ ಬದಲಾವಣೆ ಕಂಡು ಬರುತ್ತಲಿವೆ.

ವೃತ್ತಿಯಲ್ಲಿ ಬದಲಾವಣೆ:

ಬುಡ್ಗಜಂಗಮ ಸಮುದಾಯಗಳು ಇಂದು ಪಟ್ಟಣ ಪ್ರದೇಶಗಳಲ್ಲಿ ನೆಲೆ ನಿಂತು ತಮ್ಮದೇ ಆದ ಬಡಾವಣೆಗಳನ್ನು ಸರಕಾರದ ಸಹಾಯದಿಂದ ನಿರ್ಮಿಸಿಕೊಂಡಿದ್ದಾರೆ. ಈ ಜನಾಂಗ ಬಹುರೂಪಿ, ಬುರ‍್ರಕಥಾ, ಬಾಳಸಂತ, ಕುರುಮಾಮಾ ಮೊದಲಾದ ಅನುವಂಶಿಕ ವೃತ್ತಿಗಳನ್ನು ಬಿಟ್ಟು, ಆಧುನಿಕ ಯುಗದಲ್ಲಿ ಅನೇಕರಲ್ಲಿ ಕೂಲಿಕೆಲಸ ಮಾಡುತ್ತಿದ್ದಾರೆ. ಸ್ತ್ರೀಯರು ರುದ್ರಾಕ್ಷಿ, ಮಣಿ, ದೇವರಫೋಟೊ ಸಾಮಗ್ರಿಗಳನ್ನು ಮಾರುವ ವ್ಯಾಪಾರದಲ್ಲಿ ತೊಡಗಿಕೊಂಡಿರುವುದು ಕಂಡುಬರುತ್ತದೆ. ನಿತ್ಯ ಬದುಕುವುದಕ್ಕಾಗಿ ಹೋರಾಟ ಮಾಡಿದ ಬುಡ್ಗಜಂಗಮರ ಬದುಕು ಈಗ ಶೈಕ್ಷಣಿಕ-ಸಾಂಸ್ಕತಿಕ ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಬದಲಾವಣೆಯ ಹಂತದಲ್ಲಿದೆ.

ನಾನು ಕ್ಷೇತ್ರಕಾರ್ಯದಲ್ಲಿ ಹಲವಾರು ಊರುಗಳ ಅವರ ಬಿಡಾರಗಳಿಗೆ ತೆರಳಿ ವಿಚಾರಿಸಿದಾಗ ಹೆಣ್ಣು ಮಕ್ಕಳನ್ನು ಹಾಡುಗಾರಿಕೆ-ಭಿಕ್ಷಾಟನೆ ಬಿಡಿಸಿ ಬಾಲವಾಡಿ ಮತ್ತು ಪ್ರಾಥಮಿಕ ಶಾಲೆಗೆ ಕಳಿಸುತ್ತಿರುವುದನ್ನು ಕಂಡಿದ್ದೇನೆ. ಗಂಡು ಮಕ್ಕಳು ಕೂಡಾ ವೇಷಗಾರಿಕೆ-ಬೇಟೆಯನ್ನು ಮರೆತು ಎರಡಕ್ಷರ ಕಲಿಯುತ್ತಿರುವುದು ನಾಳಿನ ಈ ಜನಾಂಗಕ್ಕೆ ಬೆಳಕು ಬೀರುವ ದೀಪಗಳು ಎನ್ನಬಹುದು.

ಒಗಟು:

ಜನಪದ ಸಾಹಿತ್ಯದ ಪ್ರಮುಖ ಗದ್ದಪ್ರಕಾರಗಳಲ್ಲಿ ಒಂದಾದದ್ದು ಒಗಟು. ನಂಬಿಕೆ, ಆಚರಣೆಗಳಂತೆ ಒಗಟುಗಳು ಕೂಡಾ ಆಯಾ ಜನಾಂಗ, ಸಂಸ್ಕೃತಿಯ ಪ್ರತಿಬಿಂಬಗಳು, ವಿಚಾರ ಮಾಡಿ ಉತ್ತರಿಸುವ ಒಗಟು ಪ್ರಶ್ನೆರೂಪದ್ದು, ಪ್ರತಿಯಾಗಿ ಉತ್ತರ ನಿರೀಕ್ಷೆ ಇರುತ್ತದೆ.

ಬುಡ್ಗಜಂಗಮರಲ್ಲಿ ಪುರುಷರಿಗಿಂತ ಸ್ತ್ರೀಯರು ಮತ್ತು ಮಕ್ಕಳೇ ಒಗಟುಗಳನ್ನು ಹೇಳುವುದರಲ್ಲಿ ಜಾಣರು. ಇದೊಂದು ರೀತಿ ಹರಟೆ. ಕನ್ನಡ ಮತ್ತು ತೆಲುಗು ದ್ವಿಭಾಷಾ ಒಗಟುಗಳು ಇವರಲ್ಲಿ ಕಂಡು ಬರುತ್ತವೆ.

 • ಸಾಗರದೊಳಗ ಸಾವಿರ ಕಣ್ಣಿನಹುಲಿ ಬಿದ್ದವೈತಿ (ಮೀನಿನ ಬಲೆ)
 • ಬೆಳ್ಳಿ ಚಡಿ ನೆಲಕ್ಕೆ ಬಡಿ (ಸಿಂಬಳ)
 • ಹುಲ್ಲಿನ ಪೆಂಡ್ಯಾಗ ಉಡ್ಯಾ ಹೊಳ್ಯಾಡತಿರತೈತಿ (ಹೇನು)
 • ಗುಡ್ಡದ ಹಿಂದ ಗುಂಡ್ಕಲ್ಲ ಬಿದ್ದೈತಿ (ತುರುಬು)
 • ಗಿಡ್ಡ ಗಿಡದಾಗ ಗಿಣಿ ಮುಕರ‍್ಯಾವ (ಮೆಣಸಿನಕಾಯಿ)
 • ಅಪ್ಪ ಅಂದರ ಕೂಡತೈತಿ, ಅವ್ವ ಅಂದ್ರ ಕೂಡುದಿಲ್ಲ (ತುಟಿ)
 • ದೇವರಮ್ಯಾಲ ಉಚ್ಚಿ ಹೊಯ್ತಾಳ ಬೋಳ ಮುಂಡಿ (ತೆಂಗು)
 • ಇಟ ಗಿಂಡ್ಯಾಗ ಇಟಪ್ಪ ಕುಂತಾನ ಬಂದವರಿಗೆಲ್ಲ ಭಿಕ್ಷೆ ಕೊಡತಾನ (ಚೇಳು)
 • ಅಲ್ಲಿ ಬುಳು ಬುಳು ಇಲ್ಲಿ ಬುಳು ಬುಳು ಕಲ್ಯಾಣತನ ಬುಳು ಬುಳು (ಆಡಿನ ಹಿಕ್ಕಿ)
 • ಕುಬಸಾ ಕಳಿ, ಬಾಯಾಗ ಇಳಿ (ಬಾಳೆಹಣ್ಣು)
 • ಬಂಡಿ ತಳಗ ಬ್ರಾಹ್ಮಣರ ಹೆಂಗಸು, ಬಂದವರಿಗೆಲ್ಲ ಭಿಕ್ಷಾ ನೀಡ್ತಾಳ (ಚೇಳು)
 • ನಮ್ಮ ಮನಿ ಹೆಣ್ಣಿನಮಗಳಿಗೆ ಬೆನ್ನಹಿಂದ ಮೊಲಿ (ಮರ)

ತೆಲುಗು-ಕನ್ನಡ:

 • ವಗದಾನಿ ಮೊಗಡಟ್ಟಿ, ವಗದಾನಿ ಕೈಯಪಟ್ಟಿ ವತ್ತೊತ್ತಿ ಪೆಟ್ಟಂಗ ಅಪ್ಪಪ್ಪ ನಸ್ತುಂದಿ, ತಾಲಮ್ಮ ಪೋತುಂದಿ.
 • (ಒಬ್ಬವನ ಹೆಣ್ತಿನ ಒಬ್ಬಾವ ಕೈ ಹಿಡಿದು ಒತ್ತೊತ್ತಿ ಇಡುವಾಗ ಅಪ್ಪಪ್ಪ, ನೊಯ್ಯುವುದು, ತಡಿಯಮ್ಮ ಹೋಗ್ತತೈತಿ-ಬಳೆ)
 • ವಂಕಂಟಿ ಪೋತಿನಮ್ಮ ಗಂಪಡ ಪಿಲ್ಲಲ್ಲ ಚೆಸ್ತಿನಮ್‌ನರಡು ಕಂಡ್ಲು ಪಾಪಿವರ-(ಈತಪಂಡ್ಲು)
 • (ಹಳ್ಳದಗುಂಟ ಹೋದಿನಮ್ಮ, ಪುಟ್ಟಿ ತುಂಬ ಮಕ್ಕಳ ತಂದಿನಮ್ಮ, ಮನಿಷ್ಕಾರ ಕಣ್ಣು ಭಾರಿ ಕೆಟ್ಟಮ್ಮ (ಸಿಂದಿಹಣ್ಣು)

ಆಹಾರ ಸಂಸ್ಕೃತಿ:

ಭಾರತೀಯ ಆಹಾರ ಸಂಸ್ಕೃತಿಯಲ್ಲಿ ಸಸ್ಯಾಹಾರ, ಮಾಂಸಾಹಾರ ಎಂದು ಜನಾಂಗಿಕ ಹಿನ್ನೆಲೆಯಲ್ಲಿ ಎರಡು ವಿಧಾನಗಳನ್ನು ಗುರುತಿಸಬಹುದು. ಅಲೆಮಾರಿಗಳಾದ ಬುಡ್ಗಜಂಗಮರು ಮಾತ್ರ ಸಸ್ಯಾಹಾರಿ ಹಾಗೂ ಮಾಂಸಾಹಾರಿಗಳೂ ಹೌದು. ಬಹುರೂಪಿ ವೇಷ ಧರಿಸಿ ಭಿಕ್ಷೆಗೆ ಹೋಗುವುದರಿಂದ ಆಹಾರ ತಯಾರಿಸುವ ಪ್ರಸಂಗ ಕಡಿಮೆಯೇ ಎನ್ನಬೇಕು. ಹೆಣ್ಣುಮಕ್ಕಳು ಬೆಳಿಗ್ಗೆ ಸೂರ್ಯೋದಯದೊಂದಿಗೆ ಭಿಕ್ಷೆಗೆ ಹೋಗಿ ಬೇಡಿ ಜೋಳಿಗೆ ತಂದು ಸುರುವಿದಾಗಲೇ ಊಟ ಆರಂಭ ಎನ್ನಬೇಕು. ಇದು ಬೆಳಗಿನ ಸಸ್ಯಾಹಾರ ಊಟ. ಇನ್ನು ಸಂಜೆ ಕೆಲವರು ಸಸ್ಯಾಹಾರ ಮಾಡಿಕೊಂಡರೆ, ಕೆಲವರು ಬೇಟೆಯಾಡಿ ಪುರುಷರು ತಂದ ಅಡವಿಪ್ರಾಣಿ-ಪಕ್ಷಿಗಳ ಸಾರನ್ನು ಮಾಡುತ್ತಾರೆ. ತಾವು ಇಳಿದುಕೊಂಡ ಊರು/ಪಕ್ಕದ ಊರಿನಲ್ಲಿ ಸಂತೆಯಿದ್ದರೆ ಮಾಂಸ ಕೊಂಡು ತಂದು ಅಡುಗೆಮಾಡಿ ಊಟ ಮಾಡುವರು. ಮಳೆಗಾಲದಲ್ಲಿ ಮಾತ್ರ ಎರಡೂ ಹೊತ್ತು ಅಡುಗೆ ಮಾಡುವುದಾಗಿ ಹೇಳುತ್ತಾರೆ.

ಹೆಣ್ಣು ಮಕ್ಕಳಿಗೆ ಹೆರಿಗೆಯಾದಾಗ, ರೋಗ ಬಂದಾಗ ಮಾತ್ರ ಗಂಡಸರು ಅಡುಗೆ ಮಾಡುವ ಪದ್ಧತಿ ಇದೆ. ಉಳಿದ ಸಂದರ್ಭದಲ್ಲಿ ಹೆಣ್ಣುಮಕ್ಕಳಿಗೆ ಸಹಾಯಕರಾಗಿ ಕಟ್ಟಿಗೆ-ಕುಳ್ಳು, ನೀರು ತಂದಿಡುವ ಕೆಲಸ ಮಾಡುತ್ತಾರೆ. ಗಂಡಸರು-ಮಕ್ಕಳು ಊಟ ಮಾಡಿದ ಮೇಲೆ ಹೆಣ್ಣು ಮಕ್ಕಳು ಊಟ ಮಾಡಬೇಕು. ಅದು “ಗಂಡಬಿಟ್ಟ ಎಂಜಲನ್ನು” ಹೆಂಡತಿ ಊಟ ಮಾಡಬೇಕು. ಮಾಡುತ್ತಾರೆ. ಆದರೆ ಹೆಂಗಸರು ಬಿಟ್ಟ ಎಂಜಲನ್ನು ಯಾರು ಮಾಡುವುದಿಲ್ಲ. ಆ ಪದ್ಧತಿ ಇಲ್ಲ ಎನ್ನುತ್ತಾರೆ.

ಬಾಣಂತಿಯರಿಗೆ ಆರೋಗ್ಯದ ದೃಷ್ಟಿಯಿಂದ ಸಿಂದಿ, ಸೆರೆ ಕುಡಿಸುತ್ತಾರೆ. ಮಂತ್ರಸಾಲಿ (ಸೂಲಗಿತ್ತಿ)ಗೆ ಕೂಡಾ ಮದ್ಯ ಮಾಂಸದ ವ್ಯವಸ್ಥೆ ಮಾಡಿರುತ್ತಾರೆ.

ಬುಡ್ಗಜಂಗಮರು ಮಾಂಸಾಹಾರಿಗಳೂ ಆಗಿರುವುದರಿಂದ ಇವರು ತಮ್ಮ ಆಹಾರಕ್ಕಾಗಿ ಮೇಕೆ, ಕುರಿ, ಕೋಳಿಗಳನ್ನು ಸಾಕುತ್ತಾರೆ. ಹಾಗೂ ತಮ್ಮ ಬಿಡುವಿನ ವೇಳೆಯಲ್ಲಿ ಕೌಜುಗ, ಬುರ್ಲಿ, ಉಡ, ಅಳಿಲು, ಮುಂಗಲಿ, ಕಾಡುಇಲಿ, ಕಾಡುಬೆಕ್ಕು, ಪುನಗಬೆಕ್ಕು, ಏಡಿ, ಮೀನು, ನರಿ, ಮೊಲ, ಆಮೆ, ನೀರನಾಯಿ, ನೀರುಕೋಳಿ, ಕಾಡುಹಂದಿ ಮೊದಲಾದ ಪ್ರಾಣಿ-ಪಕ್ಷಿಗಳನ್ನು ಬೇಟೆಯಾಡಿ ಊಟ ಮಾಡುತ್ತಾರೆ. ಇವರಿಗೆ ವಾರದಲ್ಲಿ ಕನಿಷ್ಟ ಐದು ದಿನವಾದರೂ ರಾತ್ರಿ ಊಟಕ್ಕೆ ಮಾಂಸದ ಸಾರು ಬೇಕು.

ಆದರೆ ದನದ ಮತ್ತು ಹಂದಿ ಮಾಂಸವನ್ನು ಮಾತ್ರ ಎಂದೂ ಸೇವಿಸುವುದಿಲ್ಲ. ಈ ಜನಾಂಗದ ಆಹಾರಕ್ರಮದಲ್ಲಿ ಪ್ರಮುಖವಾದದ್ದು ಸೆರೆ. ಗಂಡಸರು, ಹೆಂಗಸರು, ಮಕ್ಕಳು ಮುದುಕರೆಲ್ಲರೂ ಕುಡಿಯುವುದು ಸಾಮಾನ್ಯ. ಶುಭ-ಅಶುಭ ಪ್ರತಿಯೊಂದು ಕಾರಣದಲ್ಲಿ ಮದ್ಯ ಕಡ್ಡಾಯವಾಗಿ ಬೇಕು. ಉತ್ತರ ಕರ್ನಾಟಕದಲ್ಲಿ ಸುತ್ತಾಡುವಾಗ ಭಿಕ್ಷೆಯಿಂದ ಪಡೆದ ರೊಟ್ಟಿ, ಡೇರೆಯಲ್ಲಿ ತಾವು ಅರೆದ ಖಾರಚಟ್ನಿ, ಕೆಲವೆಡೆ ಮುದ್ದೆ, ಅನ್ನ, ಸಾರು ಬುಡ್ಗಜಂಗಮರ ಆಹಾರವಾಗಿದೆ. ವೇಷ ಪ್ರದರ್ಶಿಸುವಾಗ ಚಾ-ತಿಂಡಿಯನ್ನು ಮುಟ್ಟದ ಇವರು ಈಗ ಯಾವಾಗ ಬೇಕೋ ಆವಾಗ ಚಾದಂಗಡಿಯಲ್ಲಿ ಚಾ-ತಿಂಡಿಯನ್ನು ಸೇವಿಸುತ್ತಾರೆ.

ಉಪಸಂಹಾರ:

ಬುಡಕಟ್ಟು ಜನಾಂಗಗಳಲ್ಲಿ ಒಂದಾಗಿರುವ ಅಲೆಮಾರಿ-ಅರೆಅಲೆಮಾರಿ ಜನಾಂಗವಾಗಿರುವ ಬುಡ್ಗಜಂಗಮರು ತುಂಬಾ ವಿಶಿಷ್ಟ ಸಾಂಸ್ಕೃತಿಕ ಭವ್ಯ ಪರಂಪರೆಯನ್ನು ಹೊಂದಿದವರು. ಬೇಟೆ, ಭಿಕ್ಷಾಟನೆ, ಅನೇಕ ವೇಷಪ್ರದರ್ಶನಗಳೇ ತಮ್ಮ ಪ್ರಮುಖ ವೃತ್ತಿಯೆಂದು ನಂಬಿ ಬದುಕುತ್ತ ಬಂದಿರುವ ಇವರು, ಈಗ ಪರಂಪರೆಯ ಬದುಕಿನ ಕೊಂಡಿಯನ್ನು ಕಳಚಿಕೊಂಡು ಆಧುನಿಕ ಪರಿಸರಕ್ಕೆ ಒಗ್ಗಿಕೊಳ್ಳುತ್ತಿದ್ದಾರೆಂದು ಕಲೆಯಲ್ಲಿ ಆಸಕ್ತಿ ಇಲ್ಲದ ಅನೇಕ ಪುರುಷರು, ಮಹಿಳೆಯರು ಶಿಕ್ಷಣ ಪಡೆದು ಸರಕಾರಿ ನೌಕರಿಯಲ್ಲಿದ್ದಾರೆ. ಎಳೆಯ ಮಕ್ಕಳು ಪ್ರಾಥಮಿಕ, ಪ್ರೌಢಶಾಲೆಯಲ್ಲಿ ಓದುತ್ತಿದ್ದಾರೆ. ಸರಕಾರ “ಪರಿಶಿಷ್ಟ ಜಾತಿಯೆಂದು” ಮೀಸಲಾತಿ ಕಲ್ಪಿಸಿರುವುದು ಇವರಿಗೆ ವರವಾಗಿ ಪರಿಣಮಿಸಿದೆ.

೧೯೯೩ರಲ್ಲಿ ಆರಂಭಗೊಂಡ “ಕರ್ನಾಟಕ ಬುಡ್ಗಜಂಗಮರ ಸಂಘವು” ಬುಡ್ಗಜಂಗಮರ ಬದುಕಿನ ಸಮಗ್ರ ಅಭಿವೃದ್ಧಿ ಕುರಿತು ಸದಾ ಹೋರಾಟ ಮಾಡುತ್ತಿದೆ. ಅವರಿಗೆ ಶೈಕ್ಷಣಿಕ ಸೌಲಭ್ಯ, ವಸತಿ, ಮತ್ತಿತರ ಯೋಜನೆಗಳ ಲಾಭ ಈ ಜನಾಂಗಕ್ಕೆ ತಲುಪುವಂತೆ ಮಾಡುತ್ತಿದೆ. ಆರ್ಥಿಕ ಭದ್ರತೆಯನ್ನು ಕಲ್ಪಿಸಲು ನಿರಂತರ ಪ್ರಯತ್ನಿಸುತ್ತಿದೆ. ಅನುವಂಶಿಕ ವೃತ್ತಿಗಳಿಂದ ದೂರ ಸರಿಯುವಂತೆ ಮಾಡಿ, ಸ್ವಾಭಿಮಾನದ ಬದುಕನ್ನು ಸಾಗಿಸಲು ಮಾರ್ಗದರ್ಶನ ನೀಡುತ್ತಲಿದೆ.

ಪರಿವರ್ತನೆಯ ಹಾದಿಯಲ್ಲಿ ಬುಡ್ಗಜಂಗಮರು:

ಹಲವು ಬಗೆಯ ವೇಷ ಹಾಕಿ ಬಹುರೂಪಿಗಳೆಂದು ಕರೆಯಲಾಗುವ ಬುಡ್ಗಜಂಗಮರು ಇಂದಿನ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಬದುಕಿಗೆ ಒಗ್ಗಿಕೊಂಡು ಪರಿವರ್ತನೆಯ ಹಾದಿಯಲ್ಲಿರುವುದು ಕಂಡುಬರುತ್ತದೆ.

 • ಹಿಂದಿನಂತೆ ಊರುರು ಭಿಕ್ಷೆಗೆ ಅಲೆಯುವ ಪದ್ಧತಿ ಕಡಿಮೆಯಾಗುತ್ತಲಿದೆ.
 • ಟೆಂಡ್‌/ಡೇರೆಗಳ ಬದಲಾಗಿ ಸರಕಾರದ ನೆರವಿನಿಂದ ನವಗ್ರಾಮಗಳೆಂಬ ಆಶ್ರಯಮನೆ ಕಾಲನಿಗಳು ಆಗುತ್ತಲಿವೆ. (ದರೋಜಿ, ಗದಗ ಸುಡಗಾಡ ಸಿದ್ದರ ಕಾಲನಿ)
 • ಯುವ ಜನಾಂಗ ಹೆಂಡ-ಸರಾಯಿ ಸಂಸ್ಕೃತಿಯಿಂದ ದೂರಾಗುತ್ತಿದೆ.
 • ಶೈಕ್ಷಣಿಕವಾಗಿ ಕೆಲವರು ಉನ್ನತ ಹುದ್ದೆಗಳಲ್ಲಿದ್ದಾರೆ. ಈಗಿನ ಪೀಳಿಗೆ ಶಾಲೆಗೆ ಹೋಗುತ್ತಿರುವ ಪ್ರಮಾಣ ಹೆಚ್ಚುತ್ತಲಿದೆ.
 • ಕುಲಕಸುಬಿಗೆ ತಿಲಾಂಜಲಿ ಹೇಳಿ ವ್ಯಾಪಾರ-ಕೂಲಿ ಕೆಲಸ ಮಾಡುತ್ತಿದ್ದಾರೆ. ಕೆಲವರು ಚಾಪೆ ಹಣೆಯುವ, ಪ್ಲಾಸ್ಟಿಕ್‌ಸಾಮಗ್ರಿ ಮಾರಾಟದಲ್ಲಿ ತೊಡಗಿದ್ದಾರೆ.
 • ಪುರುಷರು ತಲೆಗೂದಲನ್ನು ತಾವೇ ಕತ್ತರಿಸಿಕೊಳ್ಳುವ, ತುರುಬು ಕಟ್ಟುವ ಪದ್ಧತಿಗೆ ವಿದಾಯ ಹೇಳಿದ್ದಾರೆ.
 • ವೈವಾಹಿಕ ಸಂಬಂಧಗಳನ್ನು ಈಗ ಸುಡಗಾಡ ಸಿದ್ದರು, ಕುರ‍್ರುಮಾಮಾಗಳ ಜೊತೆ ಬೆಳೆಸುತ್ತಿದ್ದಾರೆ.
 • ಬೇಟೆಯಾಡುವ ಪ್ರಕ್ರಿಯೆ ಬಿಡುತ್ತಿದ್ದಾರೆ.
 • ಕರ್ನಾಟಕ ಬುಡ್ಗ ಜಂಗಮ ಸಂಘಟನೆಯ ಮೂಲಕ ಸಾಮಾಜಿಕ ನ್ಯಾಯ ಪಡೆದು ಪ್ರಗತಿಪಥದಲ್ಲಿದ್ದಾರೆ.

ಇದರೊಂದಿಗೆ ಜಾಗತೀಕರಣದ ಸಂದರ್ಭದಲ್ಲಿ ಬುಡ್ಗಜಂಗಮರು ತೀವ್ರಗತಿಯಲ್ಲಿ ಬದಲಾವಣೆ ಹೊಂದಬೇಕಿದೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಅವರ ಟೆಂಟ್‌ಗಳೇ ಶಾಲೆಗಳಾಗಬೇಕಿದೆ. ಮೂಢನಂಬಿಕೆ, ಸಂಪ್ರದಾಯಗಳನ್ನು ಹಂತ ಹಂತವಾಗಿ ತೊರೆಯಬೇಕು. ವೈಚಾರಿಕ, ವೈಜ್ಞಾನಿಕ ನೆಲೆಗಟ್ಟಿನ ಮೇಲೆ ಪುರುಷ-ಮಹಿಳೆ ಬದುಕನ್ನು ರೂಪಿಸಿಕೊಳ್ಳಬೇಕಿದೆ. ಮದುವೆ ಮತ್ತು ನ್ಯಾಯನಿರ್ಣಯ ವಿಷಯಗಳಲ್ಲಿ ಸರಳೀಕರಣ ಅಗತ್ಯ. ಇವರಲ್ಲಿಯೇ ಸ್ತ್ರೀ-ಪುರುಷರು ಕರಿಕೋಟು ತೊಡಬೇಕಿದೆ. ಕಂಡ-ಹೆಂಡ ಸಂಸ್ಕೃತಿಯಿಂದ ದೂರ ಬರಬೇಕಿದೆ. ಕುಟುಂಬ ಬಾಳಿಗೆ ಬೆಳಕಾಗುವ ಸ್ತ್ರೀಯನ್ನು ಪೇಟಿ, ಬುಡ್ಗ, ದಮ್ಮಡಿ, ಬಿಡಿಸಿ ವೀಣೆ, ಪಿಟೀಲು, ಭರತನಾಟ್ಯ ಕಲಿಯುವಂತೆ ಸ್ಪೂರ್ತಿ ನೀಡುವುದು ಅಗತ್ಯವಿದೆ. ಬದುಕಿಗಾಗಿ ದಿನವಿಡಿ ಹಾಡ್ಗತೆ ಹೇಳುತ್ತ, ಭಿಕ್ಷೆಬೇಡಿ ಜೀವನ ಸಾಗಿಸುವ ಮಹಿಳಾಲೋಕವೇ ತಮ್ಮ ಬದುಕಿನ ಬಗೆಗೆ ಹಾಡು-ಕತೆ ಬರೆಯುವಂತಹ ಪರಿಸರ ರೂಪಿಸಬೇಕಿದೆ. ಡಿಸೆಂಬರ್ ೧೮ ವಿಶ್ವ ಅಲೆಮಾರಿದಿನ ಹಾಗೂ ಮಾರ್ಚ್‌೮ರ ವಿಶ್ವ ಮಹಿಳಾ ದಿನಾಚರಣೆಗಳೆಂದು ಈ ಜನಾಂಗಗಳ ಬದುಕಿನ ಅವಲೋಕನ ನಡೆಯಬೇಕಿದೆ. ಈ ಅಲೆಮಾರಿ ಜನಾಂಗಗಳ ಮಹಿಳೆಯರು ಸಂಪೂರ್ಣ ಸಾಕ್ಷರರಾಗಿ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಮೊದಲಾದ ರಂಗಗಳಲ್ಲಿ ಪ್ರಮುಖ ಪಾತ್ರ ವಹಿಸಬೇಕಿದೆ. ಹೊಸ ಬದುಕನ್ನು ಕಟ್ಟಿ ಕೊಳ್ಳಬೇಕಿದೆ. ಇದಕ್ಕಾಗಿ ಜಾಗೃತಿ, ಹೋರಾಟ ನಿರಂತರ ನಡೆಯಬೇಕು.

ಆಕರ ಗ್ರಂಥಗಳು

೧ ಗೋ.ರು. ಚನ್ನಬಸಪ್ಪ ಕರ್ನಾಟಕದ ಜಾನಪದ ಕಲೆಗಳು
೨ ಡಾ.ಬಸವರಾಜ ಮಲಶೆಟ್ಟಿ ಉತ್ತರ ಕರ್ನಾಟಕದ ಬಯಲಾಟಗಳು
೩ ಡಾ.ಎಂ.ಎಸ್‌.ಸುಂಕಾಪುರ ಜಾನಪದ ಸಾಹಿತ್ಯ ದರ್ಶನ, ಭಾಗ ೨-೬
೪ ಡಾ. ಚಂದ್ರಶೇಖರ ಕಂಬಾರ ಕನ್ನಡ ಜಾನಪದ ವಿಶ್ವಕೋಶ, ಸಂ. ೧-೨
೫ ಡಾ. ಬಿ.ಎಂ.ಹೊಸಮನಿ ಕರ್ನಾಟಕದ ವೇಷಗಾರರು-ಒಂದು ಸಾಂಸ್ಕೃತಿಕ , ಅಧ್ಯಯನ (ಅಪ್ರಕಟಿತ ಪಿಎಚ್‌.ಡಿ. ಪ್ರಬಂಧ)
೬ ಪ್ರತಾಪ ಬಹುರೂಪಿ “ಬುಡ್ಗಜಂಗಮರು”
೭ ಡಾ.ವೆಂಕನಗೌಡ ಬಳ್ಳಾರಿ ಮತ್ತು ಆಂಧ್ರ ಗಡಿ ಭಾಗದ ಹಗಲು ವೇಷಗಾರರು : ಒಂದು ಅಧ್ಯಯನ (ಅಪ್ರಕಟಿತ ಪಿಎಚ್‌.ಡಿ. ಪ್ರಬಂಧ)
೮ ಯಳನಾಡು ಅಂಜನಪ್ಪ “ಹಗಲು ವೇಷಗಾರರ ಸಂಸ್ಕೃತಿ” (ಉಪಸಂಸ್ಕೃತಿಮಾಲೆ)
೯ ಡಾ. ಎಚ್‌.ಜೆ. ಲಕ್ಕಪ್ಪಗೌಡ “ಕರ್ನಾಟಕದ ಬುಡಕಟ್ಟುಗಳು” ಸಂ. ೨
೧೦ ಡಾ. ಅರ್ಜುನ ಗೊಳಸಂಗಿ ದಲಿತರ ಬದುಕು ಮತ್ತು ಸಂಸ್ಕೃತಿ :  ಜಾನಪದೀಯ ಅಧ್ಯಯನ
೧೧ ಡಾ.ಹಿ.ಚ. ಬೋರಲಿಂಗಯ್ಯ (ಸಂ) ಕರ್ನಾಟಕ ಜನಪದಕಲೆಗಳ ಕೋಶ
೧೨ ಕಿಟೆಲ್‌ಶಬ್ದಕೋಶ
೧೩ ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ವಿಜಯ ಕನಾಟಕ ದಿನಪತ್ರಿಕೆಗಳು.