ವೈಶಾಖ ಶುಕ್ಲ ಪೂರ್ಣಿಮಾ….

ಭಗವಾನ್ ಬುದ್ಧನ ಸ್ಮೃತಿಯೊಂದಿಗೆ ಹೆಣೆದುಕೊಂಡ ಎರಡು ನಿಸರ್ಗದ ಘಟನೆಗಳೆಂದರೆ, ಒಂದು ವೈಶಾಖ ಮಾಸ: ಮತ್ತೊಂದು ಈ ಮಾಸದ ಶುಕ್ಲ ಪೂರ್ಣಿಮೆ.

ಬುದ್ಧ ಬರುವ ಮುನ್ನ ಇಂಥ ಅಸಂಖ್ಯ ವೈಶಾಖ ಮಾಸಗಳೂ, ಅಸಂಖ್ಯ ಶುಕ್ಲ ಪೂರ್ಣಿಮಾ ರಜನಿಗಳೂ ಬಂದು ಹೋಗಿವೆ. ಅವು ಯಾರ ನೆನಪುಗಳಲ್ಲೂ ಅಂಕಿತವಾಗದ ದೈನಂದಿನ ಸರಳ ಸಾಧಾರಣ ಸಂಗತಿಗಳು. ಆದರೆ, ಬುದ್ಧ ಬಂದು ಹೋದ ಮೇಲೆ, ಬುದ್ಧನ ಬದುಕಿನ ಹಾಗೂ ವ್ಯಕ್ತಿತ್ವದ ಮುದ್ರೆಯಿಂದಾಗಿ, ಒಂದು ದೇಶದ ಒಂದು ಧರ್ಮದ ಸಾಂಸ್ಕೃತಿಕ ಸ್ಮರಣೆಯೊಳಗೆ, ಒಂದು ಬಗೆಯ ಮೌಲ್ಯವನ್ನೂ ಪಾವಿತ್ರ ವನ್ನು ಈ ವೈಶಾಖ ಶುಕ್ಲ ಪೂರ್ಣಿಮೆ ಪಡೆದುಕೊಂಡಿದೆ. ಏಕೆಂದರೆ ಬುದ್ಧ ಹುಟ್ಟಿದ್ದು ವೈಶಾಖ ಶುಕ್ಲ ಪೂರ್ಣಿಮೆಯ ದಿನ; ಅವನು ಬೋಧಿಯನ್ನು ಪಡೆದದ್ದು ವೈಶಾಖ ಶುಕ್ಲ ಪೂರ್ಣಿಮೆಯ ದಿನ ; ಅವನು ಮಹಾಪರಿನಿರ್ವಾಣಕ್ಕೆ ಸಂದದ್ದು ವೈಶಾಖ ಶುಕ್ಲ ಪೂರ್ಣಿಮೆಯ ದಿನ. ಅವನ ಸಮಸ್ತ ವ್ಯಕ್ತಿತ್ವವೂ ತುಂಬು ಹುಣ್ಣಿಮೆಯ ಬೆಳದಿಂಗಳಿನಂಥ ಪ್ರಶಾಂತತೆ ಹಾಗೂ ಮಾರ್ದವತೆಗಳಿಂದ, ಮತ್ತು ವೈಶಾಖ ಮಾಸದ ವಸಂತೋತ್ಕರ್ಷದ ನವನವೀನ ಸೃಜನಶೀಲತೆಯಿಂದ ವಿಶಿಷ್ಟವಾಗಿದೆ.

ಒಂದು ಪ್ರಸಿದ್ಧವಾದ ಉಕ್ತಿ ಇದೆ: ಮಹಾಂತರಾದ ಸಂತರು, ವಸಂತ ಮಾಸದ ಹಾಗೆ ಈ ಲೋಕದ ಹಿತಕ್ಕಾಗಿ ಸಂಚಾರ ಮಾಡುತ್ತಾರೆ, ಎಂದು. ಎಂದರೆ ಯಾವ ಯಾವ ಕಾಲಗಳಲ್ಲಿ ಒಂದು ಜೀವನಕ್ರಮವು ತನ್ನ ಚಲನಶೀಲತೆಯನ್ನು ಕಳೆದುಕೊಂಡು, ಒಂದು ರೀತಿಯಲ್ಲಿ ಸ್ಥಗಿತವಾಗುತ್ತದೋ, ಮಾಘಮಾಸದ ಮರಗಳಂತೆ ಹಳೆಯ ಎಲೆಗಳನ್ನು ಕಳಚಿಕೊಂಡು ಬೋಳು ಬೋಳಾಗುತ್ತದೋ, ಅಂಥ ಕಾಲಮಾನಗಳಲ್ಲಿ ಇಂಥ ಬರಡು ಬದುಕಿನಲ್ಲಿ ಚೈತನ್ಯವನ್ನು ಚಿಮ್ಮಿಸುವ ವಸಂತಸ್ಪರ್ಶದ ಹಾಗೆ ಸಂಚರಿಸುತ್ತಾರಂತೆ ಮಹಾಂತರಾದ ಸಂತರು.

ಈ ದೇಶದ, ಅಂದರೆ ವೇದೋತ್ತರ ಕಾಲದ ಭಾರತದ ಬದುಕು ಶ್ರೇಣೀಕೃತ ಸಾಮಾಜಿಕ ಪರಿಣಾಮದ ತರ-ತಮಗಳಿಂದ, ಹಿಂಸಾಮೂಲವಾದ ಯಜ್ಞ ಯಾಗಾದಿಗಳಿಂದ, ಅರ್ಥಹೀನವಾದ ಅನೇಕ ಆಚರಣೆಗಳಿಂದ ದೇವರ-ಧರ್ಮದ ಹೆಸರಿನಲ್ಲಿ ಜನರನ್ನು ಶೋಷಣೆಗೆ ಒಳಪಡಿಸುತ್ತಿದ್ದ ಪುರೋಹಿತಶಾಹೀ ತಂತ್ರಗಳಿಂದ, ನಿಜವಾದ ಧರ್ಮದ ಸ್ವರೂಪವೇನೆಂದರಿಯದ ಗೊಂದಲಗಳಿಂದ, ಸ್ಥಗಿತಗೊಂಡಂಥ ಸಂದರ್ಭದಲ್ಲಿ ಮೊದಲ ವಸಂತದಂತೆ ಬಂದವನು ಬುದ್ಧ. ಈ ಹಿನ್ನೆಲೆಯಿಂದ ಹೇಳುವುದಾದರೆ, ಬುದ್ಧನೇ ಪ್ರಾಚೀನ ಭಾರತದ ನಿಜವಾದ ಅರ್ಥದ ಕ್ರಾಂತಿಕಾರ ಮತ್ತು ಬಹುದೊಡ್ಡ ಸಮಾಜ ಸುಧಾರಕ. ಈ ದೇಶದ ಸಮಾಜ ಸುಧಾರಣೆಯಚರಿತ್ರೆ ಪ್ರಾರಂಭವಾಗುವುದೆ ಬುದ್ಧನಿಂದ. ಹಾಗೆ ನೋಡಿದರೆ ಈ ದೇಶದ ನಿಜವಾದ ಕ್ರಾಂತಿಕಾರಿಗಳೆಂದರೆ ಇಂತಹ ಸಂತರೇ.

ಬುದ್ಧನಿಗೂ ನಮಗೂ ನಡುವೆ ಎರಡು ಸಾವಿರದ ಐನೂರು ವರ್ಷಗಳಿಗೂ ಮೀರಿದ ಕಾಲದ ಇತಿಹಾಸವಿದೆ: ಭಾರತದಲ್ಲಿ ಮತ್ತು ಅದರಾಚೆಯ ಜಗತ್ತಿನಲ್ಲಿ ಧರ್ಮದ ಸ್ವರೂಪವನ್ನು ಕುರಿತು ವಿವಿಧ ಆಚಾರ‍್ಯರು, ತತ್ವಜ್ಞಾನಿಗಳು ಕಾಲದಿಂದ ಕಾಲಕ್ಕೆ ತಮ್ಮ ಸಿದ್ಧಾಂತಗಳನ್ನು ಮಂಡಿಸಿದ್ದಾರೆ; ಭಾಷ್ಯಗಳ ಮೇಲೆ ಭಾಷ್ಯಗಳನ್ನು ಬರೆದಿದ್ದಾರೆ. ಆದರೆ ಬೌದ್ಧ ಧರ್ಮದಷ್ಟು ವೈಚಾರಿಕವಾದ, ಮಾನವ ಕೇಂದ್ರಿತವಾದ ಮತ್ತು ಸಮಾನತೆಯ ಪರವಾದ ಧರ್ಮ ಮತ್ತೊಂದಿಲ್ಲ. ಇಂಥ ಒಂದು ಧರ್ಮ ಭಾರತದ ಆಚೆಯ ಪೂರ್ವದ ನಾಡುಗಳಿಗೆ ಬಹು ಹಿಂದೆಯೆ ‘ವಲಸೆ’ ಹೋಗಬೇಕಾಗಿ ಬಂತೆಂಬುದು ಒಂದು ವಿಪರ‍್ಯಾಸವಾಗಿದೆ.

ಮನುಕುಲದ ಮುಂದೆ ಯಾವತ್ತಿನಿಂದಲೋ ಇರುವ ಆಯ್ಕೆಗಳು ಎರಡು: ಬುದ್ಧ ಮತ್ತು ಯುದ್ಧ. ಬುದ್ಧ: ಶಾಂತಿಗೆ, ಸಮಾನತೆಗೆ, ಅಹಿಂಸೆಗೆ, ಪ್ರೀತಿಗೆ, ವೈಚಾರಿಕತೆಗೆ ಸಂಕೇತ; ಯುದ್ಧ: ದ್ವೇಷಕ್ಕೆ, ಹಿಂಸೆಗೆ, ಆಕ್ರಮಣಕ್ಕೆ ಸಂಕೇತ. ಆದರೆ ಚರಿತ್ರೆಯ ಆಯ್ಕೆ ಮತ್ತೆ ಮತ್ತೆ ‘ಯುದ್ಧ’ದ ಪರವಾಗಿಯೇ ಇದೆ ಎನ್ನುವುದು ದುರದೃಷ್ಟದ ಸಂಗತಿಯಾಗಿದೆ. ಯುದ್ಧ ಎಂದರೆ ಕೇವಲ ಒಂದು ದೇಶ ಮತ್ತೊಂದು ದೇಶದ ಮೇಲೆ ನಡೆಯಿಸುವ ರಾಜಕೀಯ -ಆರ್ಥಿಕ ಉದ್ದೇಶಗಳಿಂದ ಪ್ರೇರಿತವಾದ ವ್ಯವಸ್ಥಿತ ಆಕ್ರಮಣಗಳೆಂದಷ್ಟೇ ತಿಳಿಯಬೇಕಾಗಿಲ್ಲ. ಜಾತಿ, ಮತ, ಧರ್ಮ, ದೇವರು, ದೇವಸ್ಥಾನ ಇತ್ಯಾದಿಗಳ ಕಾರಣದಿಂದ ಮೂಲಭೂತವಾದಿ ಮನಸ್ಸುಗಳು ನಡೆಸುವ ಹಿಂಸೆ ಕ್ರೌರ‍್ಯಗಳ ಸ್ವರೂಪದ ಹತ್ಯೆಗಳೂ ಒಂದು ಬಗೆಯ ಅವ್ಯವಸ್ಥಿತ ಯುದ್ಧಗಳೇ. ಬುದ್ಧನ ಪ್ರಕಾರ ಇವೆಲ್ಲ ಅಸ್ವಸ್ಥ ಮನಸ್ಸಿನ ವಿಕಾರಗಳು.

ನಮ್ಮ ಸಮಕಾಲೀನ ಜಗತ್ತು ಇಂಥ ಅಸ್ವಸ್ಥ ಮನಸ್ಸಿನ ವಿಕಾರಗಳಿಂದ ತುಂಬಿದೆ. ಒಂದು ಕಾಲಕ್ಕೆ ಮನುಷ್ಯರನ್ನು ಹಿಡಿದು ಕೂಡಿಸುತ್ತಿದ್ದ ದೇವರು, ದೇವಸ್ಥಾನ ಮತ್ತು ಗುರು, ಇವುಗಳು ಇಂದು ಮನುಷ್ಯರನ್ನು ಒಡೆಯುವ ಸ್ಫೋಟಕಗಳಂತೆ ಬಳಕೆ ಆಗುತ್ತಿರುವಾಗ, ಈ ಎಲ್ಲವುಗಳನ್ನೂ ನಿರಾಕರಿಸಿ ನಿಲ್ಲಬಲ್ಲ ಮನಃಸ್ಥಿತಿಯೊಂದು ನಿರ್ಮಾಣವಾದೀತೇ ಎಂದು ಪ್ರಜ್ಞಾವಂತರು ಆಶಿಸುತ್ತಿರುವಾಗ ನಮಗೆ ಬುದ್ಧನ ನೆನಪಾಗುತ್ತದೆ. ಆಧ್ಯಾತ್ಮದಲ್ಲಿ ಅದುವರೆಗೂ ಅಗತ್ಯವೆಂದು ಭಾವಿಸಲಾದ ದೇವರು, ಗುರು ಹಾಗೂ ಶಾಸ್ತ್ರಗಳ ಅವಲಂಬನೆ ಮತ್ತು ನಿರ್ದೇಶನಗಳನ್ನು ದಿಟ್ಟತನದಿಂದ ನಿರಾಕರಿಸಿ, ಧಾರ್ಮಿಕ ದೃಷ್ಟಿಗೆ ಒಂದು ಬಗೆಯ ಸ್ವಾವಲಂಬನೆಯನ್ನೂ, ಧೈರ‍್ಯವನ್ನೂ, ಸ್ವತಂತ್ರವಾಗಿ ವಿಚಾರ ಮಾಡುವ ಪ್ರವೃತ್ತಿಯನ್ನೂ ತಂದುಕೊಟ್ಟವನು ಬುದ್ಧ.

ದೇವರಿದ್ದಾನೆಯೋ ಇಲ್ಲವೋ, ಅವನು ಸಾಕಾರನೋ, ನಿರಾಕಾರನೋ, ಈ ಜಗತ್ತು ಮಿಥ್ಯೆಯೋ ಮಾಯೆಯೋ ಇತ್ಯಾದಿ ಚರ್ಚೆಗಳಿಂದ ಏನೂ ಪ್ರಯೋಜನವಿಲ್ಲ. ನಮ್ಮ ಎದುರಿಗೆ ಒಂದು ದುಃಖಭೂಯಿಷ್ಠವಾದ ಜಗತ್ತಿದೆ. ಇಂಥ ಜಗತ್ತಿನಿಂದ, ಏನೇನೋ ಕಾರಣಗಳನ್ನು  ಒಡ್ಡಿ ಓಡಿ ಹೋಗುವುದಲ್ಲ. ಅದನ್ನು ಬದಲಾಯಿಸುವುದು ಮತ್ತು ಉತ್ತಮಗೊಳಿಸುವುದು ನಮ್ಮ ಮೊದಲ ಗುರಿ ಆಗಬೇಕು ಎಂದವನು ಬುದ್ಧ. ಅಷ್ಟೆ ಅಲ್ಲ ನಮ್ಮ ಆಲೋಚನೆಗಳನ್ನು ನಿಯಂತ್ರಿಸುವ ಗುರು ಮತ್ತು ಶಾಸ್ತ್ರ ಪರಂಪರೆಯನ್ನೂ ನಿರಾಕರಿಸಬೇಕು ಎಂದುಕರೆ ನೀಡಿದವರು ಅವನು. ‘ಅವರಿವರು ಹೇಳಿದ್ದಾರೆಂಬ ಕಾರಣಕ್ಕೆ ಯಾವುದನ್ನೂ ಒಪ್ಪಬೇಡ. ಪರಂಪರಾಗತವಾಗಿ ಬಂದಿದೆ ಎಂಬ ಕಾರಣಕ್ಕೆ ಒಪ್ಪಬೇಡ; ಶಾಸ್ತ್ರಗಳಲ್ಲಿ ಹೇಳಿದೆ ಎಂಬ ಕಾರಣಕ್ಕೆ ಒಪ್ಪಬೇಡ; ನಮ್ಮ ಆಚಾರ‍್ಯರು ಹೇಳಿದ್ದಾರೆ ಎಂಬ ಕಾರಣಕ್ಕೆ ಒಪ್ಪಬೇಡ; ಯಾವುದು ಮೌಲಿಕವಾದದ್ದೆಂದೂ, ಕಳಂಕಿತವಾದದ್ದೆಲ್ಲವೆಂದೂ, ಉಪಯುಕ್ತವೂ ಸುಖದಾಯಕವೂ ಆದದ್ದೆಂದು ನಿನಗೆ ತೋರುತ್ತದೆಯೋ ಅಂಥವನ್ನು ಒಪ್ಪಿಕೋ’- ಎನ್ನುವುದು ಬುದ್ಧನ ಘೋಷಣೆ.

ಹಾಗಾದರೆ ಬುದ್ಧ ಹೇಳಿದ್ದು ಎಂಬ ಕಾರಣಕ್ಕೆ ಒಪ್ಪಿಕೊಳ್ಳಬಹುದೆ ಎಂಬ ಪ್ರಶ್ನೆಯನ್ನು ಯಾರಾದರೂ ಎತ್ತಿದರೆ? ಅದಕ್ಕೂ ಇದೆ ಉತ್ತರ ಬುದ್ಧನಲ್ಲಿ: ‘ನಾನು ಹೇಳಿದ್ದನ್ನು ಕೂಡ ಒಪ್ಪಬೇಕಾಗಿಲ್ಲ’, ಹೀಗೆ ಹೇಳಿದ ಬುದ್ಧ, ತಾನೊಬ್ಬ ಪ್ರವಾದಿ ಎಂದಾಗಲೀ, ಅವತಾರ ಪುರುಷನೆಂದಾಗಲೀ ತನ್ನನ್ನು ತಾನು ಘೋಷಿಸಿಕೊಳ್ಳಲಿಲ್ಲ. ತನ್ನನ್ನು ಒಪ್ಪಿಕೊಳ್ಳದವರಿಗೆ ಬಿಡುಗಡೆಯಿಲ್ಲ ಎಂದೂ ಹೇಳಲಿಲ್ಲ.

ಶ್ರೀಕೃಷ್ಣ ಹೇಳಿದ: ‘ಸರ್ವಧರ್ಮಗಳನ್ನೂ ತ್ಯಜಿಸಿ ನನ್ನೊಬ್ಬನಲ್ಲಿಯೇ ಶರಣಾಗು, ಸರ್ವ ಪಾಪಗಳಿಂದಲೂ ನಿನ್ನನ್ನು ಉದ್ಧರಿಸುತ್ತೇನೆ’. ಕ್ರಿಸ್ತ ಹೇಳಿದ: ‘ನಾನು ದೇವಪುತ್ರ. ಇದನ್ನು ಒಪ್ಪಿಕೊಳ್ಳದ ಹೊರತು ಮನುಷ್ಯರಿಗೆ ಬಿಡುಗಡೆ ಇಲ್ಲ’. ಪೈಗಂಬರ್ ಹೇಳಿದರು: ನಾನು ಭಗವಂತನ ಪ್ರವಾದಿ, ಇಸ್ಲಾಂ ಮೂಲಕ ಮೋಕ್ಷವನ್ನು ಬಯಸುವವರು ಪೈಗಂಬರ್ ಅವರನ್ನು ಕೊನೆಯ ಪ್ರವಾದಿ ಎಂದು ಒಪ್ಪಿಕೊಳ್ಳಬೇಕು. ಬುದ್ಧ ಎಂದೂ ಹೀಗೆ ಮಾತನಾಡಲಿಲ್ಲ. ತನ್ನ  ನಂತರ ತನ್ನ ಧರ್ಮಕ್ಕೆ ಯಾವ ಉತ್ತರಾಧಿಕಾರಿಯನ್ನೂ ಹೆಸರಿಸಲಿಲ್ಲ. ‘ಧರ್ಮ ತನಗೆ ತಾನೇ ಉತ್ತರಾಧಿಕಾರಿ ಆಗಬೇಕು’- ಎಂದ.

ಅವನು ಮತ್ತೆ ಹೇಳಿದ್ದು: ‘ಪ್ರತಿಯೊಬ್ಬನೂ ತನ್ನ ಮುಕ್ತಿಯನ್ನು ತಾನೇ ಕಂಡುಕೊಳ್ಳಬೇಕು. ಅದಕ್ಕೆ ಸತ್ಯವನ್ನು ಕುರಿತು ಗಾಢವಾಗಿ ವಿಚಾರ ಮಾಡಬೇಕು. ಮತ್ತು ವಿಚಾರ ಮಾಡುವುದರಿಂದಲೆ ಮನುಷ್ಯ ಸ್ವತಂತ್ರನಾಗುತ್ತಾನೆ. ಮನುಷ್ಯನನ್ನು ವಿಚಾರ ಮಾರ್ಗದಲ್ಲಿ ನಡೆಯಿಸುವುದೇ ಧರ್ಮ. ಎಲ್ಲಿ ದಾರಿಗಳಿಲ್ಲವೋ ಅಲ್ಲಿ ದಾರಿಮಾಡಿಕೊಂಡು ಖಡ್ಗಮೃಗದಂತೆ ಏಕಾಏಕಿಯಾಗಿ ಅಲೆಯಿರಿ. ನಿಮಗೇ ನೀವೇ ದಾರಿ ದೀಪಗಳು’. ದೇವರು ಗುರು ಮತ್ತು ಶಾಸ್ತ್ರ ಇತ್ಯಾದಿಗಳ ನೆರವಿಲ್ಲದೆ, ಮನುಷ್ಯ ತನ್ನ ಬಿಡುಗಡೆಯನ್ನು ತಾನೇ ಕಂಡುಕೊಳ್ಳಬೇಕು ಎಂಬ ಮಾತನ್ನು ಜಗತ್ತಿನ ಚರಿತ್ರೆಯಲ್ಲಿಯೆ ಮೊಟ್ಟಮೊದಲಿಗೆ ಹೇಳಿದವನು ಬುದ್ಧ.

ನಿಜವಾದ ಆಧ್ಯಾತ್ಮ ಎಂದರೆ ಸಮಾನತೆಯನ್ನು ಕಾಣುವ ಮತ್ತು ಕಟ್ಟುವ ಒಂದು ನಿಲುವು ಎನ್ನಬಹುದು. ಹಿಂದೂ ವೈದಿಕಧರ್ಮ ತನ್ನ ಚತುರ್ವರ್ಣ ವ್ಯವಸ್ಥೆಯ ಮೂಲಕ ಅಸಮಾನತೆಯನ್ನು ನಿರಂತರವಾಗಿ ಉಳಿಸಿಕೊಂಡು ಬರುವ ಒಂದು ತಂತ್ರವಾಗಿದೆ ಎಂದು ಬುದ್ಧನು ಅದನ್ನು ವಿಮರ್ಶಿಸುತ್ತ ‘ಕೇವಲ ಕೆಲವೇ ಜನರ ಹಿತಕ್ಕಾಗಿ ಬಹುಜನರು ಶ್ರಮಿಸಬೇಕು ಎನ್ನುವುದು ಹಿಂದೂ ಸಿದ್ಧಾಂತದ ಮೂಲ ಉದ್ದೇಶವಾಗಿದೆ; ಯಾವುದೇ ಧರ್ಮವು ಸದ್ಧರ್ಮವಾಗಿರಬೇಕಾದರೆ, ಮನುಷ್ಯ ಮನುಷ್ಯರ ನಡುವೆ ಸಮಾನತೆಯು ನೆಲೆಗೊಳ್ಳಬೇಕು. ಮನುಷ್ಯ ಮನುಷ್ಯರ ನಡುವಣ ಅಡ್ಡಗೋಡೆಗಳನ್ನು ಕೆಡವಿಹಾಕಬೇಕು. ಮಾಲಿನ್ಯಗಳಿಂದ ಮನಸ್ಸನ್ನು ಮುಕ್ತಗೊಳಿಸಿ- ಕೊಂಡು ಪ್ರೀತಿಯ ಮೂಲಕ ಸಹಜೀವಿಗಳ ದುಃಖವನ್ನು ಕಡಿಮೆ ಮಾಡಬೇಕು. ಪ್ರೀತಿಯೊಂದೆ ಸಾಲದು; ನಮಗೆ ಬೇಕಾದದ್ದು ಮೈತ್ರಿ. ಮೈತ್ರಿ, ಪ್ರಿತಿಗಿಂತ ಹೆಚ್ಚು ವಿಸ್ತಾರವಾದದ್ದು. ಅದು ಮನುಷ್ಯರೊಂದಿಗೆ ಮಾತ್ರವಲ್ಲ, ಸಮಸ್ತ ಜೀವರಾಶಿಗಳ ದುಃಖಕ್ಕೂ ಸ್ಪಂದಿಸುವಂಥದ್ದು’ ಎಂದು ವಿವರಿಸಿದ್ದಾನೆ.

ಬುದ್ಧನು ತನ್ನ ಈ ವಿಚಾರಗಳ ಅನುಷ್ಠಾನಕ್ಕಾಗಿ ಕಟ್ಟಿದ ಸಂಘ, ಸೇವಾತತ್ಪರರಾದ, ನಿಸ್ವಾರ್ಥರಾದ ವ್ಯಕ್ತಿಗಳ ಸಂಘಟನೆ. ಅಧಕ್ಕೆ ಯಾವ ಸ್ಥಾವರರೂಪವೂ ಇರಲಿಲ್ಲ. ಅದೊಂದು  ಚಲನಶೀಲ ವ್ಯವಸ್ಥೆ. ಈ ವ್ಯವಸ್ಥೆಯೊಳಗೆ ಆತ ತನ್ನ  ಕಾಲದ ವಿವಿಧ ಸಾಮಾಜಿಕ ಸ್ತರಕ್ಕೆ ಸೇರಿದವರೆಲ್ಲರಿಗೂ ಆಶ್ರಯ ನೀಡಿದ. ಈ ಸಂಘಕ್ಕೆ ಸೇರಿದವರು ಬ್ರಾಹ್ಮಣರು, ಕ್ಷತ್ರಿಯರು ಮಾತ್ರವಲ್ಲ; ಉಪಾಲಿ ಎಂಬ ಕ್ಷೌರಿಕ, ಬೀದಿ ಗುಡಿಸುವ ಸುನೀತ, ಸೋಪಕ ಎಂಬ ಅಸ್ಪೃಶ್ಯ, ಸುಮಂಗಲ ಎಂಬ ರೈತ, ಧನ್ನಿಯ ಎಂಬ ಕುಂಬಾರ; ಆಮ್ರಪಾಲಿ ಎಂಬ ಗಣಿಕೆ, ಮಹಾಪ್ರಜಾಪತಿ ಯಶೋಧರೆ ಎಂಬ ಮಹಿಳೆಯರು, ಇವರಲ್ಲದೆ ಐನೂರು ಮಂದಿ ಭಿಕ್ಷುಣಿಯರು.

ಹೀಗೆ ಇದೊಂದು ಲಿಂಗಭೇದ ವರ್ಗಭೇದಗಳನ್ನು ನಿರಾಕರಿಸಿದ ಒಂದು ಸಮಾನತೆಯ ವೇದಿಕೆ. ಈ ಕುರಿತು ಆತ ಹೇಳಿದ: ‘ಈ ಸಂಘಕ್ಕೆ ಸೇರಿದ ನೀವೆಲ್ಲರೂ ಸಮಾನರು. ಸಮುದ್ರಕ್ಕೆ ಹಲವು ದಿಕ್ಕುಗಳಿಂದ ನದಿಗಳು ಹರಿದುಬರುತ್ತವೆ. ಕಡಲನ್ನು ಕೂಡುವ ಮೊದಲು ಅವುಗಳಿಗೆ ಪ್ರತ್ಯೇಕ್ಷವಾದ ಹೆಸರುಗಳು ಇರುತ್ತವೆ-ಗಂಗಾ, ಯಮುನಾ, ಸರಸ್ವತಿ ಹೀಗೆ. ಆದರೆ ಅವೆಲ್ಲ ಸಮುದ್ರವನ್ನು ಸೇರಿದ ಮೇಲೆ ತಮ್ಮ ಹೆಸರು-ಆಕಾರಗಳನ್ನು ಕಳೆದುಕೊಂಡು ಒಂದೇ ಆಗಿಬಿಡುತ್ತವೆ. ಹಾಗೆ ನೀವೆಲ್ಲರೂ ಒಂದು’. ಮಾನವ ಜನಾಂಗವೆಲ್ಲವೂ ಒಂದು ಎಂಬ ಕಲ್ಪನೆಯನ್ನು ಘೋಷಿಸಿದ ಮತ್ತು ಆಚರಿಸಿ ತೋರಿಸಿದ ಮಹಾನ್‌ವ್ಯಕ್ತಿ ಬುದ್ಧ.

ಯಾವುದೇ ಧರ್ಮದ ನಿಜವಾದ ಆಚಾರ‍್ಯನಾದವನು ಮೊದಲು ಮಾಡಬೇಕಾದ ಕೆಲಸ ಎಂದರೆ, ತನ್ನ ಸಮಾಜದ ಸದಸ್ಯರನ್ನು ಸ್ವಧರ್ಮದ ಅಹಂಕಾರದಿಂದ ಮುಕ್ತಗೊಳಿಸುವುದು ಮತ್ತು ಪರಧರ್ಮಗಳು ತಮ್ಮ ಧರ್ಮದಷ್ಟೆ ಸತ್ಯ ಹಾಗೂ ಶ್ರೇಷ್ಠ ಎಂಬ ತಿಳುವಳಿಕೆಯನ್ನು ಮೂಡಿಸುವುದು. ತನ್ನ ಧರ್ಮವೊಂದೇ ಶ್ರೇಷ್ಠ ಎಂದು ತಿಳಿದ ಸಮಾಜ ಯಾವತ್ತೂ ವೈಚಾರಿಕವಾಗಿ ಬೆಳೆಯಲಾರದು. ಆದ ಕಾರಣವೇ ಗಟ್ಟಿಯಾದ  ವೈಚಾರಿಕತೆಯ ಮೇಲೆ ತನ್ನ ಧಾರ್ಮಿಕ ನಿಲುವುಗಳನ್ನು ರೂಪಿಸಿದ ಬುದ್ಧ ಸ್ಪಷ್ಟವಾಗಿ ಹೇಳಿದ:

ನನ್ನ ಧರ್ಮವೊಂದೇ ಶ್ರೇಷ್ಠ ಎಂದು ನಾನು ಹೇಳುವುದಿಲ್ಲ
ನೀನು ಹೋಗಿ ಇತರ ಧರ್ಮಗಳವರನ್ನು ಕೇಳಿ ಬಾ,
ಆಮೇಲೆ ನನ್ನನ್ನು ಕೇಳು.
ಯಾವ ಧರ್ಮ ಅತ್ಯುತ್ತಮ ಎಂದು ನಿನಗೆ ತೋರುತ್ತದೋ
ಅದನ್ನು ಅನುಸರಿಸು.

-ಎರಡು ಸಾವಿರದ ಐನೂರು ವರ್ಷಗಳಿಗೂ ಹಿಂದೆ ಬುದ್ಧ ಹೇಳಿದ ಈ ಮಾತು, ಈ ದಿನ ಮತಾಂತರಗಳ ಬಗ್ಗೆ ಅನಗತ್ಯವಾದ ಗೊಂದಲಗಳು ಹುಟ್ಟಿಕೊಳ್ಳುತ್ತಿರುವ ಸಂದರ್ಭದಲ್ಲಿ, ಆರೋಗ್ಯಕರವಾದ ಮಾರ್ಗದರ್ಶಕ ನಿಲುವೊಂದನ್ನು ಮಂಡಿಸುತ್ತದೆ. ತನಗೆ ಯಾವ ಮತ-ಧರ್ಮ ಅತ್ಯುತ್ತಮ ಎಂದು ತೋರುತ್ತದೆಯೋ ಅದನ್ನು ಆಯ್ಕೆಮಾಡಿಕೊಳ್ಳುವ ಸ್ವಾತಂತ್ರ  ಪ್ರತಿಯೊಬ್ಬ ವ್ಯಕ್ತಿಗೂ ಇರಬೇಕು. ತಾನು ಅಕಸ್ಮಾತ್ತಾಗಿ ಹುಟ್ಟಿ ಬೆಳೆದ ಮತಧರ್ಮದ ಕಟ್ಟುಪಾಡುಗಳಲ್ಲಿ ಸ್ಥಗಿತಗೊಳ್ಳಬೇಕಾದ ಅಗತ್ಯವೇನೂ ಇಲ್ಲ.

ಯಾವುದೇ ಧರ್ಮವನ್ನು ಕುರಿತು ನಾವು ಕೇಳಬೇಕಾದ ಪ್ರಶ್ನೆಗಳೆಂದರೆ: ಅದು ಮನುಷ್ಯರೆಲ್ಲರ ಸಮಾನತೆಯ ಪರವಾಗಿ ನಿಜವಾಗಿಯೂ ಇದೆಯೆ? ಜಾತಿ ವ್ಯವಸ್ಥೆಯನ್ನು ಕುರಿತು ಅದು ಏನು ಹೇಳುತ್ತದೆ? ಅಸ್ಪ ಶ್ಯತೆಯನ್ನು ಕುರಿತು ಅದರ ಪ್ರತಿಕ್ರಿಯೆಗಳೇನು? ಮಹಿಳೆಯರ ಬಗ್ಗೆ ಅದರ ಧೋರಣೆ ಏನು? ಈ ನಾಲ್ಕು ಪ್ರಶ್ನೆಗಳಿಗೆ ವಸ್ತುನಿಷ್ಠವಾಗಿ, ವೈಚಾರಿಕವಾಗಿ ಮತ್ತು ಮಾನವೀಯವಾಗಿ, ಒಂದು ಧರ್ಮವು ಕೊಡುವ ಉತ್ತರಗಳ ಮೇಲಿನಿಂದ, ಆ ಧರ್ಮದ ಮೌಲಿಕತೆಯನ್ನು ನಾವು ನಿರ್ಣಯಿಸಬಹುದು. ಈ ಎಲ್ಲ ಪ್ರಶ್ನೆಗಳಿಗೆ, ಅಷ್ಟು ಪ್ರಾಚೀನ ಕಾಲದಲ್ಲಿ ಭಗವಾನ್ ಬುದ್ಧನು ತನ್ನ ಬದುಕು ಹಾಗೂ ಧರ್ಮದ ಮೂಲಮಾನದಲ್ಲಿ ಕೊಟ್ಟ ಉತ್ತರಗಳು ಇಂದಿಗೂ ಬೆರಗು ಹುಟ್ಟಿಸುತ್ತವೆ.

೨೦೦೪