ಬುದ್ಧಪೂರ್ಣಿಮೆಯ ಶುಭದಿನವೆ ಬೇಕಾಗಿತ್ತೆ
ನಿಮಗೆ, ರಹಸ್ಯವಾಗಿ ಅಣ್ವಸ್ತ್ರ ಸ್ಫೋಟಿಸು-
ವುದಕ್ಕೆ ಫೋಕ್ರಾನಿನಲ್ಲಿ? ‘ಧನ್ಯೋಸ್ಮಿ’ ಎಂದು
ಹಲ್ಕಿರಿದು ಕುಣಿದಾಡಿದವು ನಾಗಸಾಕಿ ಹಿ-
ರೋಷಿಮಾ ಪ್ರೇತಗಳು ದೈತ್ಯ ಧೂಮಸ್ತೋಮ-
ಗಳ ಕರಿನೆರಳಿನಲ್ಲಿ. ಬೋಧಿವೃಕ್ಷದ ಬೇರು-
ಗಳ ಉದ್ದಕ್ಕೂ ಪ್ರವಹಿಸಿದ ಕಂಪನದಿಂದ
ಬಿರುಕು, ರಾಷ್ಟ್ರಪಿತ ಗಾಂಧೀಜಿಯ ಸಮಾಧಿಯಡಿ-
ಯಲ್ಲಿ. ರಾಜಕಾರಣದ ವಿಕಟಾಟ್ಟಹಾಸದ
ಮೊಳಗು ವೈಶಾಖ ಶುಕ್ಲಪೂರ್ಣಿಮಾ ರಜನಿ-
ಯಲ್ಲಿ. ಪೌರುಷ ಪ್ರದರ್ಶನದಹಂಕಾರಗಳ
ಸ್ಫರ್ಧೆಯಬ್ಬರದಲ್ಲಿ ಬಿತ್ತಬಹುದೇ ಹೀಗೆ
ಈ ಸುಂದರ ವಸುಂಧರೆಯ ಹಸಿರೊಡಲಲ್ಲಿ
ಭಸ್ಮಾಸುರನ ಬೀಜಗಳ ಅವಿವೇಕದಲ್ಲಿ?