ನನ್ನ ಹನ್ನೆರಡು ವರ್ಷ ಪ್ರಾಯದ ಮಗನ ಬಗ್ಗೆ ಬರೆಯುತ್ತಿದ್ದೇನೆ. ನನಗೆ ನಾಲ್ವರು ಮಕ್ಕಳು. ಈತ ಕೊನೆಯವನು, ಹಟ ಮಾಡುವುದು, ರಚ್ಚೆ ರಂಪಾಟ, ಪೇಪರ್ ಹರಿಯುವುದು, ಪಾತ್ರೆ ಎಸೆದಾಡುವುದು ಮಾಡುತ್ತಾನೆ. ಸಣ್ಣ ಪ್ರಾಯದಿಂದಲೂ ಸ್ವಲ್ಪ ದಡ್ಡನಿದ್ದ. ಕುಟುಂಬ ವೈದ್ಯರಿಗೆ ತೋರಿಸಿದ್ದೆವು. ಮುಂದೆ ಸರಿ ಹೋಗುತ್ತಾನೆ ಎಂದಿದ್ದರು. ವಯಸ್ಸು ಬಲಿತಮೇಲೆ ಸರಿ ಹೋಗುತ್ತಾನೆ ಎಂದು ನಾವು ಅಸಡ್ಡೆ ಮಾಡಿದೆವು. ಕನೆಯ ಮಗನೆಂದು ಮುದ್ದು ಮಾಡಿದ್ದರಿಂದ ಹೀಗಾಡುತ್ತಾನೆ ಎಂದು ಭಾವಿಸಿದೆವು. ನಿಮ್ಮ ಚಿತ್ತ ವಿಚಿತ್ರ ವಿಭಾಗ ನೋಡಿ ನಿಮ್ಮ ಅಭಿಪ್ರಾಯ ತಿಳಿಯಲು ಇಚ್ಛಿಸಿದ್ದೇನೆ. ಶಾಲೆಗೆ ಈತನನ್ನು ಕಳುಹಿಸಿದ್ದೆವು. ವಿದ್ಯೆ ಹತ್ತಲಿಲ್ಲ, ನೆನಪಿನ ಶಕ್ತಿ ಚೆನ್ನಾಗಿದೆ. ಬಹಳ ಹಿಂದೆ ನೋಡಿದ ನೆಂಟರನ್ನು ಗುರುತಿಸಿ ಹೇಳುತ್ತಾನೆ. ಸಿನಿಮಾ ಹಾಡನ್ನು ಜನ ಕೇಳಿದರೆ ಮತ್ತೆ ನೆನಪಿಸಿ ಹಾಡುತ್ತಾನೆ.

ನಿಮ್ಹಾನ್ಸ್ ಹಾಗೂ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್ನಲ್ಲಿ ತೋರಿಸಿದ್ದೆವು. ಅವರು ಇದನ್ನು ಬುದ್ಧಿಮಾಂದ್ಯತೆಯೆಂದೂ, ಇದಕ್ಕೆ ಚಿಕಿತ್ಸೆ ಇಲ್ಲವೆಂದೂ ಹೇಳಿದ್ದಾರೆ. ಮಗುವಿನ ಭವಿಷ್ಯಕ್ಕೆ ಮಾರ್ಗದರ್ಶನ ನೀಡಬೇಕೆಂದು ಹೇಳಿಕೊಳ್ಳುತ್ತೇನೆ.

ನಿಮ್ಮ ಮಗನ ಗುಣ ಲಕ್ಷಣಗಳು ಬುದ್ಧಿಮಾಂದ್ಯತೆಯನ್ನು ಸೂಚಿಸುತ್ತವೆ. ಬುದ್ಧಿಮಾಂದ್ಯತೆ ಒಂದು ಕಾಯಿಲೆಯಲ್ಲ. ಬದಲಾಗಿ ಮೆದುಳಿನ ಬೆಳವಣಿಗೆ, ದೇಹದ ಬೆಳವಣಿಗೆಗೆ ಅನುಗುಣವಾಗಿ ಆಗದಿರುವ ಸ್ಥಿತಿ. ಯಾವುದೇ ಕಾರಣದಿಂದ ಮೆದುಳಿನ ಬೆಳವಣಿಗೆ ನಿಧಾನಗತಿಯಲ್ಲಿ ಸಾಗಿದರೆ ಅಥವಾ ಬೆಳವಣಿಗೆ ಸ್ಥಗಿತವಾದರೆ ಅದು ಬುದ್ಧಿ ಮಾಂದ್ಯತೆಗೆ ಕಾರಣ. ಈ ಅವಸ್ಥೆ ವಿಕಲತೆ ಅಥವಾ ಚಾಂಚಲ್ಯವಲ್ಲ. ಬದಲಾಗಿ ದೋಷಪೂರ್ಣ ಮೆದುಳಿನ ಒಂದು ಸ್ಥಿತಿ.

ಬುದ್ಧಿ ಮಾಂದ್ಯತೆ ಗುರುತಿಸಲು ಯಾರೊಬ್ಬರೂ ವೈದ್ಯರಾಗಬೇಕಿಲ್ಲ. ನಮ್ಮ ಜೀವನದ ಮೈಲುಗಲ್ಲುಗಳು ತೊಡರಿಸಿದಾಗ ಯಾರೂ ಬೇಕಾದರೂ ಅದನ್ನು ಗುರುತಿಸಬಹುದು. ಉದಾಹರಣೆಗೆ ಮಗುವಿನ ಜೀವನದ ಮೈಲುಗಲ್ಲುಗಳು ಎಲ್ಲರಿಗೂ ತಿಳಿದಂತೆ – ಮಗು ನಾಲ್ಕೈದು ತಿಂಗಳಿಗೆ ಮಗ್ಗುಲಾಗುತ್ತದೆ, ಬೋರಲು ಬೀಳುತ್ತದೆ. ಎಂಟು ಹತ್ತು ತಿಂಗಳಿಗೆ ಕುಳಿತುಕೊಳ್ಳುತ್ತದೆ. ಒಂದು ವರುಷಕ್ಕೆ ನಿಂತುಕೊಂಡು ಸುಮಾರು ಹದಿನಾರು ತಿಂಗಳಿಗೆ ಮಾಡನಾಡಲಾರಂಭಿಸುತ್ತದೆ. ಈ ಎಲ್ಲಾ ಬೆಳವಣಿಗೆಯ ಹಂತ ಮೆದುಳಿನ ಬಲಿಯುವಿಕೆಗೆ ಅನುಗುಣವಾಗಿ ಆಗತ್ತದೆ. ಉದಾಹರಣೆಗೆ ಒಂದು ಮಗು ತನ್ನ ಮೂರನೆಯ ವರ್ಷದಲ್ಲಿ ನಡೆಯಲಾರಂಭಿಸಿದರೆ ಅದರ ಅರ್ಥ, ಮಗುವಿನ ದೈಹಿಕ ವಯಸ್ಸು ಮೂರು – ಆದರೂ ಮೆದುಳಿನ ವಯಸ್ಸು ಕೇವಲ ಒಂದು ವರ್ಷ ಎಂದು. ಅದೇ ರೀತಿ ಮಗು ಎರಡು ವರ್ಷಕ್ಕೆ ಕತ್ತೆತ್ತಿ ನಡೆದರೆ ಅದರ ದೈಹಿಕ ವರ್ಷ ಎರಡಾದರೂ ಆದರೆ ತಲೆಯಲ್ಲಿ ಮೆದುಳು ಬಲಿತ ಕೇವಲ ಐದಾರು ತಿಂಗಳಿನದು ಮಾತ್ರ.

ಮುಖ್ಯವಾಗಿ ನೀವು ತಿಳಿಯತಕ್ಕಂತಹ ವಿಷಯ ಮೂರು. ಒಂದು ನಶಿಸಿದ ಮೆದುಳು ಪುನಶ್ಚೇತನಗೊಳ್ಳುವುದಿಲ್ಲ. ಚರ್ಮ ತರಚಿದರೆ, ಮೂಳೆ ಮುರಿದರೆ ಅವು ಮತ್ತೆ ಹುಟ್ಟಿ ಬೆಸೆತುಕೊಳ್ಳುವ ಸಾಧ್ಯತೆ ಉಂಟು. ಆದರೆ ಆಘಾತಕ್ಕೊಳಗಾಗಿ ನಶಿಸಿದ ಮೆದುಳು ಮತ್ತೆ ಬೆಳೆಯುವುದಿಲ್ಲ. ಎರಡು, ಮೆದುಳಿನ ಬೆಳವಣಿಗೆಯ ಲಯ, ಗತಿ, ಸಾಂಗತ್ಯ ಹದಿನಾರು ಹದಿನೆಂಟು ವರ್ಷಗಳಿಗೆ ನಿಧಾನಿಸುತ್ತದೆ. ಮೂರು, ಮೆದುಳನ್ನು ಬೆಳೆಸುವ ಔಷಧಿ, ಇಂಜೆಕ್ಷನ್‌ಗಳಿಲ್ಲ. ಚಿಕಿತ್ಸೆಯ ಮೂಲತತ್ವ ಸರಿಯಾಗಿರುವ ಮೆದುಳಿನ ಭಾಗಕ್ಕೆ ಹೆಚ್ಚು ರಕ್ತ ಆಮ್ಲಜನಕ ಕೂಡಿದ ಪೌಷ್ಠಿಕಾಂಶಗಳನ್ನು ನೀಡಿ ಅದು ಅಧಿಕ ಶಕ್ತಿಯಿಂದ ಕೆಲಸ ಮಾಡಲು ಪ್ರೇರೇಪಿಸುವುದು. ಅಲ್ಲದೆ ಬುದ್ಧಿಮಾಂದ್ಯ ಮಗು ಮುಖ್ಯವಾಗಿ ಅನುಕರಣೆಯಿಂದ ಕಲಿಯುತ್ತದೆ. ಅಲ್ಪ ಮಟ್ಟಿಗೆ ಮಗು ಮುಖ್ಯವಾಗಿ ಅನುಕರಣೆಯಿಂದ ಕಲಿಯುತ್ತದೆ. ಸ್ವಲ್ಪ ಮಟ್ಟಿಗೆ ಸರಿ ತಪ್ಪು, ವಿನ್ಯಾಸದಿಂದಲೂ ಕಲಿಯಬಹುದು. ಆದರೆ ಖಂಡಿತವಾಗಿಯೂ ಅರ್ಥೈಸಿ, ಗ್ರಹಿಸಿ ಕಲಿಯಲು ಅಶಕ್ತವಾಗಿರುತ್ತದೆ.

ಈ ಮೂಲ ತತ್ವವನ್ನು ಆಧರಿಸಿ ಅನುಕರಣೆಯ ಕಲಿಯುವಿಕೆಗೆ ಒತ್ತು ಕೊಟ್ಟು ಅವರನ್ನು ಬುದ್ಧಿಮಾಂದ್ಯರ ವಿಶೇಷ ಶಾಲೆಗಳಲ್ಲಿ ತರಬೇತು ನೀಡಲಾಗುತ್ತದೆ. ಮುಖ್ಯವಾಗಿ ತನ್ನನ್ನು ತಾನು ನೋಡಿಕೊಳ್ಳುವ ಬಗೆ, ಸ್ವಸಹಾಯ ಪದ್ಧತಿ, ಅಪಘಾತಗಳಿಂದ ರಕ್ಷಿಸಿಕೊಳ್ಳುವಿಕೆ, ಮಲಮೂತ್ರ ವಿಸರ್ಜನೆಯ ಮೇಲೆ ನಿಯಂತ್ರಣ ಹಾಗೂ ಸಾಮಾನ್ಯ ಪರಸ್ಪರ ಒಡನಾಟದ ವರ್ತನೆಯ ಬಗ್ಗೆ ತಿಳಿವಳಿಕೆ ನೀಡಲಾಗುವುದು. ನಿಮ್ಮ ಹುಡುಗನನ್ನು ಸಮೀಪದಲ್ಲಿರುವ ಒಳ್ಳೆಯ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಗೆ ಸೇರಿಸಿದರೆ ಒಳಿತು. ಆತನ ಅಪಸ್ಮಾರ ಹಾಗೂ ಸಂಬಂಧಪಟ್ಟ ಘಾತುಕ ಚಟುವಟಿಕೆಗಳಿಗೆ ಅಲ್ಲಿನ ವೈದ್ಯರು ಸೂಕ್ತ ಚಿಕಿತ್ಸೆಯನ್ನು ನೀಡುತ್ತಾರೆ.