ತಾಯಿ ದುರ್ಗೆಯ ನಿಜವನರಿಯುವ ಧೀರರಾರೋ ಜಗದೊಳು !
ಆರು ದರುಶನ ವೇದಶಾಸ್ತ್ರ ಪುರಾಣವರಿಯದು ಅವಳನು !
ಯೋಗಿ ಹೃದಯದ ದಿವ್ಯ ನಿತ್ಯಾನಂದ ರೂಪಿಣಿ ಆಕೆಯು
ತನ್ನ ಆನಂದದಲಿ ತಾನೇ ಜೀವರೆದೆಯೊಳಗಿರುವಳು.

ಸಕಲ ಬ್ರಹ್ಮಾಂಡವನು ಬಸಿರಲಿ ಧರಿಸಿ ನಿತ್ಯವು ಪೊರೆವಳು
ಮೂಲಾಧಾರ ಸಹಸ್ರಾರದಲ್ಲಿಯೆ ಮುನಿಗಳವಳನು ನೆನೆವರು
ಶಿವನ ಹೊರತಿನ್ನಾರು ಅರಿಯರು ಅವಳ ದಿವ್ಯ ಸ್ವರೂಪವ,
ಪದ್ಮವನದಲಿ ಹಂಸರೂಪನ ಜೊತೆಗೆ ನಲಿಯುವ ಮಾಟವ !

ಕಡಲನೀಜುವೆನೆಂಬ ಮರುಳನ ಕಲ್ಪನೆಗೆ ನಗುವಂದದಿ
ಇಂಥ ತಾಯಿಯ ತಿಳಿದೆನೆಂದರೆ ಪ್ರಸಾದರಾಮನು ನಗುವನು !
ಕುಬ್ಜನಾದವ ಮುಗಿಲ ಚಂದ್ರನ ಹಿಡಿವ ಯತ್ನದ ತೆರದಲಿ
ಬುದ್ಧಿಯರಿತರು ಹೃದಯವರಿಯದು ತಾಯಿ ದುರ್ಗೆಯ ನಿಜವನು !