ನಾವು ಅನೇಕರನ್ನು ಬುದ್ಧಿವಂತರು, ಜಾಣರು, ಪ್ರತಿಭಾಶಾಲಿಗಳು, ಕುಶಾಗ್ರಮತಿಗಳು ಇತ್ಯಾದಿಯಾಗಿ ವರ್ಣಿಸುವದುಂಟು. ಆದರೆ ಬುದ್ಧಿ ಶಕ್ತಿ ಎಂದರೆ ಏನು ಎಂಬುದರ ಬಗ್ಗೆ ತಜ್ಞರಲ್ಲಿ ವಾದವಿವಾದಗಳಿವೆ.

ಬುದ್ಧಿಶಕ್ತಿಯ ಬಗ್ಗೆ ವ್ಯಾಖ್ಯೆ ಕೊಡುವದು ಸುಲಭವಲ್ಲ. ಕೆಲವರು ಅದ್ಭುತ ಸ್ಮರಣಶಕ್ತಿ ಪಡೆದಿರುತ್ತಾರೆ. ಏನೆಲ್ಲವನ್ನು ತಮ್ಮ  ನೆನಪಿನಾಳದಿಂದ ಬೇಕಾದಾಗ ಹೊರತರಬಲ್ಲರು. ಹಲವರು ಜ್ಞಾನವಂತರಾಗಿರುತ್ತಾರೆ. ಗಹನ ವಿಷಯಗಳ ಬಗ್ಗೆ ಪಾಂಡಿತ್ಯ ಪಡೆದಿರುತ್ತಾರೆ. ಕೆಲವೊಂದು ವಿಷಯಗಳ ಬಗೆಗೆ ಆಳವಾಗಿ ಅಧ್ಯಯನ ಮಾಡಿರುತ್ತಾರೆ. ಸ್ಮರಣೆ ಜ್ಞಾನಗಳು ಎಷ್ಟೇ ಅಗಾಧವಾಗಿದ್ದರೂ ಕೇವಲ ಅವುಗಳು ಬುದ್ಧಿಶಕ್ತಿ ಎನ್ನಿಸಿಕೊಳ್ಳಲಾರವು.         

ಯಾವೊಬ್ಬ ವ್ಯಕ್ತಿಯ ತೂಕ, ಎತ್ತರ, ಓಟದ ವೇಗ ಇತ್ಯಾದಿಗಳನ್ನು ನಿಖರವಾಗಿ ಅಳೆದು ಹೇಳಬಹುದು. ಆದರೆ ಬುದ್ಧಿಶಕ್ತಿಯನ್ನು ಅಳೆಯುವ ಸುಲಭ ಮಾಪನಗಳಿಲ್ಲ.

ಬುದ್ಧಿಶಕ್ತಿ ಎಂದರೆ ಏನು ಎಂದು ಕೆಲವು ತಜ್ಞರು ಹೇಳಿದ್ದಾರೆ. ಆದಾಗ್ಯೂ ಅವರ ಹೇಳಿಕೆಗೆ ಇತರ ತಜ್ಞರು ಆಕ್ಷೇಪಗಳನ್ನು ಎತ್ತಿದ್ದಾರೆ. ಬುದ್ಧಿಶಕ್ತಿಯ ನಿಖರವಾದ ಮಾನದಂಡದ ಕೊರತೆಗೆ ಕಾರಣ ಬುದ್ಧಿ ಶಕ್ತಿಯು ವಿವಿಧ ಆಯಾಮಗಳನ್ನು ಹೊಂದಿದೆ. ಸ್ಮರಣೆ, ಕಲ್ಪಕಶಕ್ತಿ, ನಾವೀನ್ಯತೆ, ತಿಳಿದಿರುವ ಜ್ಞಾನದಿಂದ ಹೊಸ ಸಂದರ್ಭಗಳಲ್ಲಿ ತರ್ಕಿಸುವ ಮತ್ತು ಊಹಾತ್ಮಕ ಅನುಮಿತಿ, ಶಬ್ದ, ಸಂಖ್ಯೆಗಳ ನೈಪುಣ್ಯದ ಬಳಕೆ, ಸ್ವತಂತ್ರವಾದ ಆಲೋಚನಾ ಶಕ್ತಿ, ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸುವದು, ಅಮೂರ್ತಸ್ವರೂಪದ ಚಿಂತನೆಗಳು ಬುದ್ಧಿಶಕ್ತಿಯ ಆಯಾಮಗಳು. ಇವುಗಳಲ್ಲಿ ಯಾವುದೊಂದನ್ನು ಮಾತ್ರವೇ ಬುದ್ಧಿಶಕ್ತಿ ಎನ್ನಲಾಗದು.

ಇಂಗ್ಲಂಡಿನಲ್ಲಿ ಸರ್ ಫ್ರಾನ್ಸಿಸ್ ಗಾಲ್ಟನ್ ಕೆಲವು ಪ್ರತಿಷ್ಠಿತ ಮನೆತನದ ಕೆಲವರು ಬೌದ್ಧಿಕ ಮತ್ತು ಸಾಮಾಜಿಕ ರಂಗದಲ್ಲಿ ಅಸಾಧಾರಣ ಪ್ರತಿಭೆಯನ್ನು ತೋರಿದ್ದಾರೆಂದು ಗಮನಿಸಿದರು. ಅದರ ಬಗ್ಗೆ ತಮ್ಮ ವಾದವನ್ನು ಮಂಡಿಸಿ ೧೮೬೯ರಲ್ಲಿ ಬರೆದರು. ಬುದ್ಧಿಶಕ್ತಿಯನ್ನಳೆಯುವ ಪರೀಕ್ಷೆಗಳನ್ನು ರಚಿಸಿದರು ಮತ್ತು ಬುದ್ಧಿಶಕ್ತಿಯು ಅನುವಂಶಿಕವಾದುದೆಂದು ಹೇಳಿದರು.

ಬುದ್ಧಿಶಕ್ತಿಯ ಸ್ವರೂಪದ ಬಗೆಗೆ ವಾದವಿವಾದಗಳಿದ್ದರೂ ಅನೇಕ ಮನೋವಿಜ್ಞಾನಿಗಳು ಬುದ್ಧಿಶಕ್ತಿ ಅಳೆಯುವ ಪರೀಕ್ಷೆಗಳನ್ನು ರಚಿಸಿದ್ದಾರೆ. ಫ್ರೆಂಚ್ ಮನೋವಿಜ್ಞಾನಿ ಆಲ್ಫ್ರೆಡ್ ಬಿನೆ (Alfred Binet) ೧೯೦೫ ರಲ್ಲಿ ಇಂಥ ಒಂದು ಪರೀಕ್ಷಾ ವಿಧಾನವನ್ನು ರಚಿಸಿದರು. ಆಗ ಶಾಲೆಗಳಲ್ಲಿ ಬೌದ್ಧಿಕವಾಗಿ ಹಿಂದುಳಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಈ ಪರೀಕ್ಷೆಯಿಂದ ಗುರುತಿಸಿ ಅವರಿಗೆ ಹೆಚ್ಚಿನ ಶೈಕ್ಷಣಿಕ ಸಹಾಯಮಾಡುವ, ಹೆಚ್ಚಿನ ಸವಲತ್ತು ಕೊಡುವ ಉದ್ದೇಶ ಅವರದಾಗಿತ್ತು. ತದನಂತರ ವಿವಿಧ ತಜ್ಞರು ಬೇರೆ ಬೇರೆ ಇಂಥ  ಪರೀಕ್ಷೆಗಳನ್ನು ರಚಿಸಿದ್ದಾಗಿದೆ.

ಇಂಥ ಪರೀಕ್ಷೆಗಳಿಂದ ಪಡೆದ ಅಂಕಗಳನ್ನು ಬಳಸಿ  ಆ ವ್ಯಕ್ತಿಯ ಐ. ಕ್ಯೂ  (I.Q.=  Intelligence Quotient) ಎಷ್ಟು ಇದೆ ಎಂದು ಲೆಕ್ಕ ಮಾಡಿ ಹೇಳುತ್ತಾರೆ. ಐ. ಕ್ಯೂ. ಬುದ್ಧಿಶಕ್ತಿಯನ್ನು ಅಳೆಯಲಾರದೆಂದು ಕೆಲವು ತಜ್ಞರು ವಿರೋಧಿಸಿದ್ದಾರೆ. ಆದರೂ, ಐ.ಕ್ಯೂ. ಪರೀಕ್ಷೆಗಳು ಈಗ ಜಗತ್ತಿನಾದ್ಯಂತ ಬಳಸಲ್ಪಡುತ್ತಿವೆ. ಇಂಥ ಪರೀಕ್ಷೆಗಳು ವ್ಯಕ್ತಿಯ ಸಾಂಸ್ಕೃತಿಕ ಹಿನ್ನೆಲೆಯಿಂದಾಗಿ ತಪ್ಪು ಮಾಪನ ಮಾಡದಂತೆ ಲಕ್ಷ್ಯವಹಿಸುತ್ತಾರೆ. ಇಂಥ ಪರೀಕ್ಷೆಗಳಲ್ಲಿ ತರ್ಕ, ಸ್ಮರಣೆ, ಊಹಾತ್ಮಕ ಅನುಮಿತಿ, ಶಬ್ದಗಳ ಬಳಕೆ, ಸಂಖ್ಯೆಗಳ ಶೀಘ್ರ ಬಳಕೆ, ತರ್ಕಣೆ ಇತ್ಯಾದಿಗಳನ್ನು ಕಟ್ಟುನಿಟ್ಟಾಗಿ ನಿಗದಿತ ಸಮಯದಲ್ಲಿ ಉತ್ತರಿಸುವ ಏರ್ಪಾಡು ಮಾಡಿರುತ್ತಾರೆ.  ಪ್ರಶ್ನೆಗಳು ಯಾವ ವಯಸ್ಸಿನವರು ಉತ್ತರಿಸಬಹುದೆಂದು ಪ್ರಮಾಣೀಕರಿಸಿರುವದರಿಂದ ವ್ಯಕ್ತಿಯ ವಯಸ್ಸನ್ನು ಗಣನೆಗೆ ತೆಗೆದುಕೊಂಡು ಐ. ಕ್ಯೂ ಎಷ್ಟಿದೆಯೆಂದು ಹೇಳುತ್ತಾರೆ. ಉದಾಹರಣೆಗೆ ಆರು ವರ್ಷದ ಬಾಲಕಿಯು ಪರೀಕ್ಷೆಗೆ ಕಟ್ಟುತ್ತಾಳೆ.  ಒಂಬತ್ತು ವರ್ಷದವರು ಸರಿಯಾಗಿ ಉತ್ತರಿಸಿದಷ್ಟು ಸರಿಯಾಗಿ ಅವಳು ಉತ್ತರಿಸಿದ್ದಾದರೆ ಅವಳ ಮಾನಸಿಕ ವಯಸ್ಸು ಒಂಬತ್ತು ವರ್ಷವಾಗಿದೆ. ಅವಳ ದೈಹಿಕ ವಯಸ್ಸು ಆರು ವರ್ಷವಾಗಿದೆ. ಲೆಕ್ಕ ಹಾಕಿ ಅವಳ ಐ. ಕ್ಯೂ. ೧೫೦ ಎಂದು ಹೇಳುತ್ತಾರೆ.

ಐ.ಕ್ಯೂ =  (ಮಾನಸಿಕ ವಯಸ್ಸು/ ದೈಹಿಕ ವಯಸ್ಸು) x ೧೦೦ = (೯/೬) x೧೦೦ = ೧೫೦ ಎಂದು ತೀರ್ಮಾನ. [I.Q = (mental age/ chronological age) x  100] ಹೀಗೆ ದೊರೆಯುವ ಐ. ಕ್ಯೂ. ಅಂಕಗಳನ್ನು ತುಲನಾತ್ಮಕವಾಗಿ ಬಳಸುತ್ತಾರೆ.

ವಿವಿಧ ಬಗೆಯ ಐ.ಕ್ಯೂ. ಪರೀಕ್ಷೆಗಳಿದ್ದು ಅವುಗಳನ್ನು ಪ್ರಮಾಣೀಕರಿಸಿದ್ದಾರೆ. ಸಾಮಾನ್ಯ ಐ.ಕ್ಯೂ. ೧೦೦ ಎಂದು ನಿಗದಿತಪಡಿಸಿ ಅದರಿಂದ ಎಷ್ಟು ದೂರಕ್ಕೆ (ಮೇಲೆ ಅಥವಾ ಕೆಳಕ್ಕೆ)  ಪರೀಕ್ಷಿಸಲ್ಪಟ್ಟ ವ್ಯಕ್ತಿಯ ಐ. ಕ್ಯೂ. ಇದೆಯೆಂದು ಗಮನಿಸಿ ಆ ವ್ಯಕ್ತಿಯ ಬುದ್ಧಿಶಕ್ತಿಯ ಬಗೆಗೆ ನಿರ್ಣಯಮಾಡುತ್ತಾರೆ. ೯೦ ರಿಂದ ೧೧೦ ಐ. ಕ್ಯೂ ಸಾಮಾನ್ಯವಾಗಿದೆ. ೧೧೦-೧೨೦ ಐ.ಕ್ಯೂ ಇದ್ದವರು ಸಾಮಾನ್ಯ ಪ್ರತಿಭಾಶಾಲಿಗಳು. ೧೨೦- ೧೪೦ ಐ.ಕ್ಯೂ. ಇದ್ದವರು ಹೆಚ್ಚಿನ ಪ್ರತಿಭಾಶಾಲಿಗಳು. ೧೪೦ ಕ್ಕಿಂತ ಹೆಚ್ಚಿನ ಐ. ಕ್ಯೂ. ಇದ್ದವರು ಅತ್ಯಧಿಕ ಮಟ್ಟದ (genius) ಬುದ್ಧಿಶಾಲಿಗಳು ಎಂದು ಕೆಲವು ತಜ್ಞರ ಅಭಿಮತವಾಗಿದೆ. ಅದೇ ರೀತಿ ಐ. ಕ್ಯೂ. ೭೦ ಕ್ಕಿಂತ ಕಡಿಮೆ ಇದ್ದವರು ಬುದ್ಧಿ ಮಾಂದ್ಯರು ಎನ್ನಲಾಗಿದೆ.

ಸ್ತ್ರೀಯರ ಮತ್ತು ಪುರುಷರ ಸಾಮಾನ್ಯ ಬುದ್ಧಿ ಶಕ್ತಿಯಲ್ಲಿ ವ್ಯತ್ಯಾಸಗಳಿಲ್ಲವೆಂದು ತಿಳಿದಿದೆ. ಆದರೆ ತಾಂತ್ರಿಕ ಸಾಮರ್ಥ್ಯದ, ಸ್ಥಳಾವಕಾಶದ ಕಲ್ಪನೆಯ, ಅಂಕಿಸಂಖ್ಯೆಗಳ ತರ್ಕಣೆಯ ಬುದ್ಧಿಶಕ್ತಿಯಲ್ಲಿ ಪುರುಷರು ಸ್ತ್ರೀಯರಿಗಿಂತ ಹೆಚ್ಚು ಅಂಕ ಗಳಿಸುವದು ಕಂಡುಬಂದಿದೆ. ಅದೇ ರೀತಿ ಶಬ್ದ ಬಳಕೆಯ ಮತ್ತು ಸ್ಮರಣೆಯ ಬುದ್ಧಿಶಕ್ತಿಗಳಲ್ಲಿ ಸ್ತ್ರೀಯರು ಪುರುಷರಿಗಿಂತ ಹೆಚ್ಚು ಅಂಕ ಗಳಿಸುವದನ್ನು ಪ್ರಯೋಗಗಳಿಂದ ತಜ್ಞರು ಕಂಡುಕೊಂಡಿದ್ದಾರೆ.

ವಿವಿಧ ಜನಾಂಗಗಳಲ್ಲಿ ಮತ್ತು ಕುಲಪಂಗಡಗಳಲ್ಲಿ (racial and ethnic)  ಐ.ಕ್ಯೂ. ಭಿನ್ನವಾಗಿದೆಯೆಂದು ಕೆಲವು ತಜ್ಞರು ಹೇಳಿದ್ದನ್ನು ಇತರರು ಬಲವಾಗಿ ಖಂಡಿಸಿದ್ದಾರೆ. ಅವರು ಅವಹೇಳನಕ್ಕೆ ಮತ್ತು ಆಪಾದನೆಗಳಿಗೆ ಗುರಿಯಾಗಿದ್ದಾರೆ. ಐ.ಕ್ಯೂ. ಪರೀಕ್ಷೆ ಮತ್ತು ಅದನ್ನು ಬುದ್ಧಿ ಶಕ್ತಿ ಅಳೆಯುವ ಮಾನದಂಡವಾಗಿ ಉಪಯೋಗಿಸುವವರು ತಮ್ಮ ಪಟ್ಟಭದ್ರ ಹಿತಾಸಕ್ತಿಯನ್ನು ಇತರರ ಮೇಲೆ ಹೇರುವದು ಸಮಾಜದಲ್ಲಿ ಹಿಂದುಳಿದವರ ಮೇಲೆ ನಡೆಸಿದ ದಬ್ಬಾಳಿಕೆಯಾಗಿದೆಯೆಂದು ಕೆಲವು ತಜ್ಞರು ಬಲವಾಗಿ ವಿರೋಧಿಸಿದ್ದಾರೆ.

ಹೆಚ್ಚಿನ ಐ.ಕ್ಯೂ. ಹೊಂದಿದವರು ಜೀವನದಲ್ಲಿಹೆಚ್ಚಿನ ಸಾಧನೆಗಳನ್ನು ಮಾಡುವ ಸಾಧ್ಯತೆ ಇದೆ. ಆದರೆ ಕೇವಲ ಹೆಚ್ಚಿನ ಐ.ಕ್ಯೂ. ಯಶಸ್ವಿ ಜೀವನದಲ್ಲಿ ಪರಿವರ್ತನೆಯಾಗದು. ಯಶಸ್ವಿ ಜೀವನಕ್ಕೆ ಹೆಚ್ಚಿನ ಐ. ಕ್ಯೂ. ಅಲ್ಲದೇ ಆ ವ್ಯಕ್ತಿಯ ಸಾಮಾಜಿಕ ಸ್ಥಾನ, ಒಲವುಗಳು, ಪ್ರಯತ್ನಗಳು, ಸುಸಂಧಿಗಳು, ಪ್ರೋತ್ಸಾಹಗಳು. ಪರಿಸರಗಳು ಅಷ್ಟೇ ಮಹತ್ವದವುಗಳಾಗಿವೆಯೆಂಬುದನ್ನು ತಜ್ಞರು ಒಪ್ಪುತ್ತಾರೆ.

ಬುದ್ಧಿಶಕ್ತಿಯು ಸ್ವಭಾವಜನ್ಯವಾದುದೋ ಅಥವಾ ಪರಿಸರದ ಪ್ರಭಾವದಿಂದ ಆದದ್ದೋ ಎಂದು ವಾದವಿವಾದಗಳಿವೆ. ಬುದ್ಧಿಶಕ್ತಿಯು ಹುಟ್ಟಿನಿಂದಲೇ ಬಂದ ಅರಿವಿನ ಸಾಮರ್ಥ್ಯ ಎಂದು ಇಂಗ್ಲಂಡಿನ ಪ್ರೊ. ಬರ್ಟ್ ವಾದಿಸಿದ್ದರು.

ಈ ಬಗ್ಗೆ ಕಾಲಕಾಲಕ್ಕೆ ಕೆಲವು ತಜ್ಞರು ಪ್ರಯೋಗಗಳನ್ನು ಮಾಡಿದ್ದಾರೆ. ಪರಿಸರವೇ ಮುಖ್ಯ ಕಾರಣವಾಗಿದ್ದರೆ, ಹುಟ್ಟಿನಿಂದ ಪಾಲಕರಿಂದ ಬೇರ್ಪಟ್ಟು ಅನಾಥಾಶ್ರಮದಲ್ಲಿ ಬೆಳೆದ ಎಲ್ಲ ಮಕ್ಕಳ ಐ. ಕ್ಯೂ. ಒಂದೇ ಪ್ರಮಾಣದಲ್ಲಿ ಇರಬೇಕಿತ್ತು. ಆದರೆ ಪ್ರಯೋಗಗಳಲ್ಲಿ ಇದು ಕಂಡು ಬರದೆ ಐ.ಕ್ಯೂ. ಹೆಚ್ಚುಕಡಿಮೆ ಇರುವದನ್ನು ಗಮನಿಸಿದ್ದಾರೆ. ಹುಟ್ಟಿನಿಂದ ಬೇರ್ಪಟ್ಟ ತದ್ರೂಪಿ ಅವಳಿಗಳು ಭಿನ್ನ ಪರಿಸರದಲ್ಲಿ ಬೆಳೆದಾಗಲೂ ಕೂಡ ಅವರ ಐ. ಕ್ಯೂ. ಒಂದೇ ಪ್ರಮಾಣದಲ್ಲಿರುವದನ್ನೂ ತಜ್ಞರು ಪ್ರಯೋಗಗಳಲ್ಲಿ ಕಂಡುಕೊಂಡಿದ್ದಾರೆ.  ಇಂಥ ನಿರೀಕ್ಷಣೆಗಳು ಬುದ್ಧಿಶಕ್ತಿಯ ಮೇಲೆ ಇರುವ ಅನುವಂಶಿಕತೆಯ ಮಹತ್ವವನ್ನು ತೋರಿಸುತ್ತವೆ.

ಅನುವಂಶಿಕತೆ ಮತ್ತು ಪರಿಸರದಲ್ಲಿ ಯಾವುದು ಹೆಚ್ಚಿನ ಪಾತ್ರ ವಹಿಸುತ್ತದೆ ಎಂಬುದು ತಜ್ಞರನ್ನು ಕಾಡಿದೆ. ಲಂಡನ್ನಿನ ಮನೋತಜ್ಞ ಪ್ರೊ. ಐಜೆಂಕ್ ತಮ್ಮ ಅಭಿಪ್ರಾಯವನ್ನು ಈ ರೀತಿ ಕೊಟ್ಟಿದ್ದಾರೆ:  “ಬರಲಿರುವ ಐದಾರು ದಶಕಗಳಲ್ಲಿ ಸಮಾಜದಲ್ಲಿ ಸುಧಾರಣೆಗಳಾಗಿ ಸಮಾಜದಲ್ಲಿನ ಬಹು ಜನರಿಗೆ ಶಿಕ್ಷಣ, ಆರೋಗ್ಯ, ಆರ್ಥಿಕ ಸವಲತ್ತುಗಳು ಏಕರೂಪವಾಗಿ ದೊರೆಯುತ್ತವೆ. ಆದ್ದರಿಂದ ಆಗ ಐ.ಕ್ಯೂ. ದಲ್ಲಿರುವ ಭೇದಗಳಿಗೆ ಅನುವಂಶಿಕತೆಯೇ ಕಾರಣವಾಗಿರುತ್ತದೆ.”

ಕೆಲವು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಉದ್ಯೋಗಾಕಾಂಕ್ಷಿಗಳನ್ನು ನೇಮಿಸುವ ಮೊದಲು ಐ.ಕ್ಯೂ. ಪರೀಕ್ಷೆಗೆ ಒಳಪಡಿಸುವದು ಕಂಡುಬಂದಿದೆ.

ಬುದ್ಧಿಶಕ್ತಿಯು ವಿವಿಧ ಆಯಾಮಗಳನ್ನು ಹೊಂದಿದೆಯಾದರೂ ಪ್ರತಿಯೊಬ್ಬ ವ್ಯಕ್ತಿಯು ಬುದ್ಧಿಯ ಸಾಮಾನ್ಯ ಒಂದು ಅಂಶವನ್ನು ಹೊಂದಿದ್ದು ಅದರ ಮುಖಾಂತರ ಎಲ್ಲ ಆಯಾಮಗಳಿಗೂ ಆ ವ್ಯಕ್ತಿ ಸ್ಪಂದಿಸುವದು ಸಾಮಾನ್ಯವಾಗಿದೆಯೆಂದು ಕೆಲವರು ವಾದಿಸಿದ್ದಾರೆ. ಆದರೆ ವಿವಿಧ ಆಲೋಚನಾ ಸಾಮರ್ಥ್ಯದ ಅಂಶಗಳಿಂದಾಗಿರುವ ಬುದ್ಧಿಶಕ್ತಿಯ ಸ್ವರೂಪವು ಸಾಮಾನ್ಯ ಈ ಅಂಶದಿಂದ ಸ್ಪಂದಿಸುವಲ್ಲಿ, ಪ್ರತಿಕ್ರಿಯಿಸುವಲ್ಲಿ ವ್ಯಕ್ತಿಗೆ ಸಾಧ್ಯವಾಗದೆಂದು  ಕೆಲವರು ಅದನ್ನು ವಿರೋಧಿಸಿದ್ದಾರೆ.

ಸ್ಥಳಾವಕಾಶದ ಕಲ್ಪನೆ, ಸಂಗೀತ, ತರ್ಕಣೆ, ಭಾಷೆ, ಅಂಕಿಸಂಖ್ಯೆಗಳ ಬಳಕೆ, ನೈಸರ್ಗಿಕ ಜ್ಞಾನ, ಮುಂತಾದ ಬಹುವಿಧ ಬುದ್ಧಿಶಕ್ತಿಯ ಸ್ವರೂಪಗಳನ್ನು ಅಳೆಯಲು ಐ. ಕ್ಯೂ. ಪರೀಕ್ಷೆಗಳು ಸಮರ್ಥವಲ್ಲ ಎಂಬುದೂ ಕೆಲವು ತಜ್ಞರ ವಾದವಾಗಿದೆ.

ಇತ್ತೀಚೆಗೆ ಕೆಲವು ಮನೋತಜ್ಞರು ಭಾವಾತ್ಮಕ ಬುದ್ಧಿಶಕ್ತಿ (emotional intelligence) ಎಂಬ ಬುದ್ಧಿಶಕ್ತಿಯ ಬಗೆಗೆ ಸಂಶೋಧನೆ ಮಾಡಿದ್ದಾರೆ. ಭಾವಾತ್ಮಕ ಬುದ್ಧಿಶಕ್ತಿಯು ವ್ಯಕ್ತಿಯು ತನ್ನ ಭಾವನೆಗಳನ್ನು ಅರಿತುಕೊಳ್ಳುವದು, ಅವುಗಳನ್ನು ತನ್ನ ನಿಯಂತ್ರಣದಲ್ಲಿಡುವದು, ಇತರರ ಭಾವನೆಗಳನ್ನು ಅರಿತು ಅವುಗಳಿಗೆ ಸರಿಯಾಗಿ ಸ್ಪಂದಿಸುವದು, ಇತರರ ಭಾವನೆಗಳನ್ನು ನಿಯಂತ್ರಿಸುವದು ಮುಂತಾದ ಸಾಮರ್ಥ್ಯಗಳನ್ನೊಳಗೊಂಡಿದೆಯೆಂದು ಹೇಳಿದ್ದಾರೆ. ಆದರೆ ಭಾವಾತ್ಮಕ ಬುದ್ಧಿಶಕ್ತಿಯ ಬಗೆಗೆ ತಜ್ಞರಲ್ಲಿ ಇನ್ನೂ ಒಮ್ಮತವಿಲ್ಲ. ಅದರಲ್ಲಿ ಹೆಚ್ಚಿನ ಸಂಶೋಧನೆಗಳು ಆಗುವದು ಅವಶ್ಯ.

ಹೆಚ್ಚಿನ ಐ.ಕ್ಯೂ. ಹೊಂದಿದವರಿಗೆ ಮಾತ್ರ ಪ್ರವೇಶವಿರುವ ವಿವಿಧ ಸಂಘಗಳು ಜಗತ್ತಿನಾದ್ಯಂತ ಕಂಡುಬರುತ್ತವೆ. ಇಂಗ್ಲಂಡಿನಲ್ಲಿ ೧೯೪೦ರ ದಶಕದಲ್ಲಿ ಸ್ಥಾಪಿತವಾದ ಮೆನ್ಸಾ (Mensa) ಈಗ ಜಾಗತಿಕ ಸಂಘವಾಗಿದ್ದು, ಬಹುಶ: ಅತ್ಯಂತ ಪ್ರಸಿದ್ಧವಾದುದು. ಅದಕ್ಕೆ ಪ್ರವೇಶ ಬಯಸುವವರ ಐ.ಕ್ಯೂ. ಉಚ್ಚ ೨ ಪ್ರತಿಶತ  ಶ್ರೇಣಿಯಲ್ಲಿರುವದು ಕಡ್ಡಾಯವಾಗಿದೆ.