ನಮ್ಮ ದೇಶದ ಉತ್ತರ ದಿಕ್ಕಿನಲ್ಲಿ ಹಿಮಾಲಯ ಪರ್ವತವಿದೆ. ಇದು ಪ್ರಪಂಚದಲ್ಲೆಲ್ಲಾ ದೊಡ್ಡ ಪರ್ವತ. ಶತ್ರುಗಳಿಂದಲೂ, ಉತ್ತರ ಧ್ರುವದಿಂದ ಬರುವ ಶೀತಲ ಗಾಳಿಯ ಕೊರೆತದಿಂದಲೂ ನಮ್ಮನ್ನು ರಕ್ಷಿಸುತ್ತದೆ. ಜನರಿಗೆ ಅನೇಕ ರೀತಿಗಳಲ್ಲಿ ಉಪಕಾರ ಮಾಡುವ ಮಹಾತ್ಮರನ್ನು ಹಿಮಾಲಯಕ್ಕೆ ಹೋಲಿಸುತ್ತಾರೆ. ಹೀಗೆ ಹಿಮಾಲಯವನ್ನು ಹೋಲುವಂಥ ಬುದ್ಧ ಭಗವಾನರು ಹಿಮಾಲಯದ ತಪ್ಪಲಲ್ಲಿ ಸುಮಾರು ಎರಡು ಸಾವಿರದ ಆರು ನೂರು ವರ್ಷಗಳ ಹಿಂದೆ ಹುಟ್ಟಿದರು.

ಅವರು ಹುಟ್ಟು ಹೆಸರು ಬುದ್ಧ ಅಲ್ಲ. ಅನೇಕ ಜನ್ಮಗಳ ತಪ್ಪಸ್ಸಿನಿಂದ ಗಳಿಸಿದ ಸ್ಥಾನ ಅದು. “ಬುದ್ಧ” ಎಂದರೆ ಸ್ವಪ್ರಯತ್ನದಿಂದ ತಮ್ಮ ಅಂತಃಶಕ್ತಿಯ ಸತ್ವದಿಂದಲೇ ಉತ್ತಮ ಜ್ಞಾನವನ್ನು ಗಳಿಸಿ ಎಲ್ಲರ ಹಿತಕ್ಕಾಗಿ ಎಲ್ಲರ ಸುಖಕ್ಕಾಗಿ ಅಪಾರ ಕರುಣೆಯಿಂದ ಆ ಜ್ಞಾನವನ್ನು ಜನರಿಗೆ ತಿಳಿಸಿದವರು ಎಂದರ್ಥ.

ಸಿದ್ಧಾರ್ಥ ಜನಿಸಿದ

ಬುದ್ಧ ಭಗವಾನರ ಹುಟ್ಟು ಹೆಸರು ಸಿದ್ಧಾರ್ಥ. ತಂದೆ ಶುದ್ಧೋದನನು ಕಪಿಲವಸ್ತು ಎಂಬ ಪಟ್ಟಣದಲ್ಲಿ ರಾಜನಾಗಿದ್ದ. ಅದು ಹಿಮಾಲಯದ ತಪ್ಪಲಿನಲ್ಲಿತ್ತು. ಶುದ್ಧೋದಯನನದು “ಶಾಕ್ಯ” ಕುಲ, “ಗೌತಮ” ವಂಶ. ಸಿದ್ಧಾರ್ಥನ ತಾಯಿ ಮಹಾಮಾಯಾದೇವಿ ಪರಿಶುದ್ಧಳು, ಪವಿತ್ರಳು.

ಸಿದ್ಧಾರ್ಥ ಇನ್ನೂ ತಾಯಿಯ ಹೊಟ್ಟೆಯಲ್ಲಿದ್ದಾಗ ಮಾಯಾದೇವಿ ತವರುಮನೆಗೆ ಹೊರಟಳು. ದಾರಿಯಲ್ಲಿ ಆಕೆ ಲುಂಬಿಣಿ ಎಂಬ ವನವನ್ನು ತಲುಪಿದಾಗ ಆಯಾಸವಾಯಿತು. ಸಖಿಯರು ಒಂದು ಶಾಲವೃಕ್ಷದ ಕೆಳಗೆ ಆಕೆಯು ಮಿಶ್ರಮಿಸಲು ಅಣಿಗೊಳಿಸಿದರು.

ಸಿದ್ಧಾರ್ಥ ಈ ಮರದ ಕೆಳಗೆ ಜನಿಸಿದ.

ಅಂದು ವೈಶಾಖ ಶುದ್ಧ ಪೂರ್ಣಿಮೆ.

ಸಿದ್ಧಾರ್ಥ ಹುಟ್ಟಿದಾಗ ಪ್ರಪಂಚವೇ ಆನಂದಗೊಂಡಿತು. ಎಲ್ಲೆಲ್ಲೂ ಶಾಂತಿ ಪ್ರಸರಿಸಿತು. ಮಾಯಾದೇವಿಗೆ ಅತಿಶಯವಾದ ಆನಂದ ಉಂಟಾಯಿತು.

ಬಾಲ್ಯ

ಹುಟ್ಟುವಾಗಲೇ ಪ್ರಪಂಚಕ್ಕೆ ಶಾಂತಿ ಆನಂದಗಳನ್ನು ತಂದ ಪುಣ್ಯ ಶಿಶುವನ್ನು ನೋಡಲು ಅನೇಕರು ಬಂದರು. ಅವರಲ್ಲಿ ಸಾಮುದ್ರಿಕ ಶಾಸ್ತ್ರವನ್ನು ತಿಳಿದಿದ್ದ ಅಸಿತ ಋಷಿ ಎಂಬುವವನು ಮಗುವಿನ ಲಕ್ಷಣಗಳನ್ನು ನೋಡಿ ಅಳಲು ಪ್ರಾರಂಭಿಸಿದ.

ರಾಜನಿಗೆ ಗಾಬರಿಯಾಯಿತು. ಮಗುವಿಗೆ ಏನು ಕೆಡುಕೋ ಎಂದು ಅವನಿಗೆ ಕಳವಳ. ಋಷಿ ಹೇಳಿದ:

“ರಾಜ, ನಿನ್ನ ಮಗುವಿನ ವಿಷಯದಲ್ಲಿ ಗಾಬರಿ ಪಡಬೇಡ. ಈ ಮಗು ಪ್ರಪಂಚಕ್ಕೇ ದೊಡ್ಡ ಚಕ್ರವರ್ತಿಯಾಗುತ್ತಾನೆ, ಇಲ್ಲವೇ ಸಕಲ ಜೀವಿಗಳಿಗೆ ಮಂಗಳವನ್ನುಂಟುಮಾಡಿ, ಸರ್ವರ ಸುಖಕ್ಕೆ ಕಾರಣವಾಗುವಂತಹ ಧರ್ಮಚಕ್ರವರ್ತಿಯಾಗುತ್ತಾನೆ. ನಾನು ಆಗಲೆ ಮುದುಕನಾದೆ ಈ ಮಹಾಪುರುಷನ ಮಾತನ್ನು ಕೇಳುವವರೆಗೆ ನಾನು ಬದುಕಿರುವುದಿಲ್ಲವಲ್ಲ ಎಂದು ಅಳುತ್ತಿದ್ದೇನೆ”.

ತನ್ನ ಮಗ ಧರ್ಮಚಕ್ರವರ್ತಿಯಾಗುವ ಭವಿಷ್ಯವನ್ನು ಕೇಳಿದ ರಾಣಿಯು ಸಂತೋಷಗೊಂಡಳು. ಸ್ವಲ್ಪ ಯೋಚಿಸಿದ ನಂತರ ತಂಗಿ ಪ್ರಜಾಪತಿಯನ್ನು ಕುರಿತು ಹೀಗೆಂದಳು: “ತಂಗಿ, ಬುದ್ಧನಾಗುವಂಥ ಶಿಶುವಿಗೆ ಜನ್ಮಕೊಟ್ಟ ಹೆಂಗಸು ಮತ್ತಾವ ಮಗುವಿಗೂ ತಾಯಿಯಾಗಲಾರಳು. ಆದುದರಿಂದ ನನ್ನ ಜೀವನ ಇಷ್ಟರಲ್ಲಿಯೇ ಮುಗಿಯುತ್ತದೆ. ಸಿದ್ಧಾರ್ಥನಿಗೆ ನೀನೇ ತಾಯಿಯಾಗಿ ಅವನನ್ನು ಪೋಷಿಸು” ಸಿದ್ಧಾರ್ಥ ಹುಟ್ಟಿದ ಏಳು ದಿನಗಳಲ್ಲಿಯೇ ಮಾಯಾದೇವಿ ತೀರಿಕೊಂಡಳು.

ಶಿಶು ಸಿದ್ಧಾರ್ಥನನ್ನು ಪ್ರಜಾಪತಿ ಪೋಷಿಸಿದಳು. ಬಾಲಕ ಸಿದ್ಧಾರ್ಥನ ವಿದ್ಯಾಭ್ಯಾಸಕ್ಕೆ ರಾಜ ಶುದ್ಧೋದನ ಸರಿಯಾದ ವ್ಯವಸ್ಥೆ ಮಾಡಿದ. ಗುರುಗಳು ಹೇಳಿಕೊಟ್ಟಿದ್ದನ್ನು ಸಿದ್ಧಾರ್ಥ ಶ್ರದ್ಧೆಯಿಂದ ಕಲಿತ. ಬಹುಬೇಗನೇ ಧನುರ್ವಿದ್ಯೆ, ಯೋಗಶಾಸ್ತ್ರ ಮುಂತಾದ ಎಲ್ಲಾ ವಿದ್ಯೆಗಳಲ್ಲೂ ಪಾರಂಗತನಾದ.

ಅಧಿಕಾರ ಕೊಲ್ಲುವವನದಲ್ಲ, ಕಾಪಾಡುವವನದು”

ಸಿದ್ಧಾರ್ಥನಿಗೆ ದೇವದತ್ತನೆಂಬ ದಾಯಾದಿ ಇದ್ದ. ಜನರು ಸಿದ್ಧಾರ್ಥನನ್ನು ಗೌರವಿಸುವುದನ್ನು ಕಂಡು ಅವನ ಹೊಟ್ಟೆ ಕಿಚ್ಚು ಬೆಳೆಯಿತು. ಹೇಗಾದರೂ ಸಿದ್ಧಾರ್ಥನೊಂದಿಗೆ ಜಗಳವಾಡಬೇಕು ಎಂದು ಆತನಿಗೆ ತವಕ.

ದೇವದತ್ತನಿಗೆ ಬೇಟೆಯಲ್ಲಿ ಆಸೆ. ಪ್ರಾಣಿಗಳು ತನ್ನ ಬಾಣದಿಂದ ಸತ್ತರೆ ಅವನಿಗೆ ಏನೋ ಸಂತೋಷ.

ಒಂದು ದಿನ ಆಕಾಶದಲ್ಲಿ ಸುಂದರವಾದ ಬಿಳಿ ಹಂಸವೊಂದು ಉಲ್ಲಾಸದಿಂದ ಹಾರುತ್ತಿದೆ.

ದೇವದತ್ತ ಕಂಡ, ಅದರ ಕಡೆಗೆ ಬಾಣ ಬಿಟ್ಟ. ಅದು ಹಂಸಕ್ಕೆ ತಾಗಿತು. ಬಡಪಕ್ಷಿ ಜರ‍್ರನೆ ಕೆಳಕ್ಕೆ ಬೀಳತೊಡಗಿತು. ಅದೇ ಸಮಯದಲ್ಲಿ ಸಿದ್ಧಾರ್ಥ ತನ್ನ ಉದ್ಯಾನದಲ್ಲಿ ತಿರುಗಾಡುತ್ತಿದ್ದ. ತಟ್ಟನೆ ಅವನ ಪಾದದ ಹತ್ತಿರ ಬಿಳಿಯ ಮುದ್ದೆಯೊಂದು ಬಿದ್ದಿತು. ಸಿದ್ಧಾರ್ಥ ಬಾಗಿ ನೋಡಿದ – ಮುದ್ದಾದ ಬಿಳಿಯ ಹಂಸ; ಅತಿ ಶುಭ್ರವಾದ ಆ ಹಂಸದ ದೇಹದಿಂದ ಕೆಂಪು ರಕ್ತ ಚಿಮ್ಮುತ್ತಿತ್ತು. ನೋವಿನಿಂದ ಅದು ಒದ್ದಾಡುತ್ತಿತ್ತು. ಸಿದ್ಧಾರ್ಥನಿಗೆ ಕರುಳು ಕತ್ತರಿಸಿದಂತಾಯಿತು. ಹಂಸದ ಹತ್ತಿರ ಹೋಗಿ ಅದರ ಮೈಯಿಂದ ಬಾಣವನ್ನು ಮೃದುವಾಗಿ ತೆಗೆದ. ಗಾಯವನ್ನು ನೀರಿನಿಂದ ತೊಳೆದು ಔಷಧ ಹಚ್ಚಿದ. ಹಂಸ ಬದುಕಿಕೊಂಡಿತು.

ಜಗಳಕ್ಕಾಗಿ ಕಾಯುತ್ತಿದ್ದ ದೇವದತ್ತ ಓಡಿ ಬಂದ. ಸಿದ್ಧಾರ್ಥನನ್ನು ಕುರಿತು, “ನನ್ನ ಹಂಸವನ್ನು ನನಗೆ ಕೊಡು” ಎಂದು ಅಬ್ಬರಿಸಿದ.

ಸಿದ್ಧಾರ್ಥ ಶಾಂತವಾಗಿ, “ಈ ಹಂಸವನ್ನು ನೀನು ಕೊಲ್ಲಲು ಪ್ರಯತ್ನಪಟ್ಟೆ. ನಾನು ಅದನ್ನು ಉಳಿಸಿದೆ. ಆದುದರಿಂದ ನಿನಗೆ ಹೇಗೆ ಸೇರುತ್ತದೆ?” ಎಂದ.

“ಬೇಟೆ ಸಿಕ್ಕಬೇಕಾದದ್ದು ಅದನ್ನು ಹೊಡೆದವನಿಗೆ” ಎಂದು ದೇವದತ್ತ ಹೇಳಿದ.

ಸಿದ್ಧಾರ್ಥ ಉತ್ತರಿಸಿದ: “ಒಂದು ಪ್ರಾಣಿಯ ಜೀವವನ್ನು ತೆಗೆಯುವ ಹಕ್ಕು ಯಾರಿಗೂ ಇಲ್ಲ. ಆದುದರಿಂದ ಜೀವ ಉಳಿಸಿದ ನನಗೇ ಹಂಸ ಸಿಕ್ಕಬೇಕು”.

ದೇವದತ್ತ ಸಿದ್ಧಾರ್ಥನ ಮಾತನ್ನು ಒಪ್ಪಲಿಲ್ಲ. ಹೆಚ್ಚು ಕೋಪದ ಮಾತುಗಳಿಗೆ ಅವಕಾಶ ಕೊಡಬಾರದೆಂದು ಸಿದ್ಧಾರ್ಥನು ಹಿರಿಯರಿಗೆ ವಿವಾದವನ್ನು ಒಪ್ಪಿಸಿದ. ಅವರು ತೀರ್ಮಾನ ಹೇಳಿದರು: “ಜೀವವನ್ನು ಯಾವನು ರಕ್ಷಿಸುತ್ತಾನೋ ಅವನಿಗೇ ಜೀವದಿಂದುಳಿದ ಪ್ರಾಣಿ ಸಲ್ಲುತ್ತದೆ”. ಸಿದ್ಧಾರ್ಥನಿಂದ ಹಂಸದ ಪ್ರಾಣ ಉಳಿದುಕೊಂಡಿತು, ಬಿಡುಗಡೆಯೂ ಆಯಿತು. ಇದರಿಂದ ದೇವದತ್ತನ ಮತ್ಸರ ಮತ್ತಷ್ಟು ಹೆಚ್ಚಾಯಿತು.

ಸುಂದರ ಸಂಸಾರ

ಸಿದ್ಧಾರ್ಥ ಬೆಳೆದು ಯುವಕನಾದ. ಮಗನಿಗೆ ಸರಿಯಾದ ಕನ್ಯೆಯನ್ನು ಹುಡುಕಬೇಕೆಂಬ ಉದ್ದೇಶದಿಂದ ಶುದ್ಧೋದನ ತನ್ನ ಕುಲಬಾಂಧವರಿಗೆ ತಮ್ಮ ತಮ್ಮಹೆಣ್ಣು ಮಕ್ಕಳನ್ನು ಕರೆತರಬೇಕೆಂದು ಆಹ್ವಾನಿಸಿದ. ಆದರೆ ಅವರು “ರಾಜಕುಮಾರನ ಮನಸ್ಸು ಎಲ್ಲಿಯೋ ಇರುತ್ತದೆ. ಅವನಿಗೆ ಯಾವ ವಿದ್ಯೆಯೂ ಬರದು. ಮೇಲಾಗಿ ಮೃದು ಮನಸ್ಸಿನವನು. ಅವನು ಶತ್ರುಗಳನ್ನು ನಿಗ್ರಹಿಸಿ ರಾಜ್ಯವನ್ನೂ ನಮ್ಮ ಮಗಳನ್ನೂ ಹೇಗೆ ಕಾಪಾಡಿಯಾನು?” ಎಂದು ಉತ್ತರ ಹೇಳಿ ಕಳುಹಿಸಿದರು.

ಬಂಧುಗಳಿಗೆ ತಂದೆಗೆ ದೊರೆತ ಉತ್ತರ ಸಿದ್ಧಾರ್ಥನಿಗೆ ತಿಳಿಯಿತು. ಹಾಗೆ ಹೇಳಿದ ಜನರನ್ನು ಕರೆಯಿಸಬೇಕೆಂದು ತಂದೆಗೆ ಹೇಳಿದ. ತುಂಬಿದ ಸಭೆಯಲ್ಲಿ ಒಂದಾದ ಮೇಲೊಂದರಂತೆ ಬಗೆಬಗೆಯ ಪರೀಕ್ಷೆಗಳು ನಡೆದವು. ಸಿದ್ಧಾರ್ಥ ತನ್ನ ಅಸಾಧಾರಣ ದೇಹಶಕ್ತಿ, ಅತಿಶಯ ಕೌಶಲ ಮತ್ತು ಅದ್ಭುತ ಬುದ್ಧಿಶಕ್ತಿಗಳನ್ನು ಪ್ರದರ್ಶಿಸಿದ. ಆಡಿಕೊಳ್ಳುತ್ತಿದ್ದ ಬಾಯಿ ಮುಚ್ಚಿಕೊಂಡಿತು.

ಕೋಲಿರಾಜನ ಮಗಳಾದ ಯಶೋಧರಾಳನ್ನು ಸಿದ್ಧಾರ್ಥ ಆರಿಸಿಕೊಂಡ. ವಿಜೃಂಭಣೆಯಿಂದ ಮದುವೆಯಾಯಿತು.

ಮದುವೆಯಾದ ಕೆಲಕಾಲದ ಮೇಲೆ ಸಿದ್ಧಾರ್ಥ-ಯಶೋಧರೆಯರಿಗೆ ಒಂದು ಗಂಡು ಮಗು ಹುಟ್ಟಿತು. ಅದಕ್ಕೆ “ರಾಹುಲ” ಎಂದು ಹೆಸರನ್ನಿಟ್ಟರು. ಪಾಲಿ ಭಾಷೆಯಲ್ಲಿ “ರಾಹುಲ” ಎಂದರೆ “ಬಂಧನ” ಅಥವಾ “ಕಟ್ಟು” ಎಂದರ್ಥ. (ಆ ಕಾಲದ ಜನರು ನಮ್ಮ ದೇಶದ ನೈಋತ್ಯ ಭಾಗದಲ್ಲಿ ಆಡುತ್ತಿದ್ದ ಮಾತು ಪಾಲಿ. ಅದು ಸಂಸ್ಕೃತಕ್ಕೆ ಅತಿ ಸಮೀಪದ ಭಾಷೆ).

ನಗರವನ್ನು ನೋಡಬೇಕು”

ತನ್ನ ಮಗ ಭೂಚಕ್ರವರ್ತಿಯಾಗಬೇಕೆ ಹೊರತು ಧರ್ಮ ಚಕ್ರವರ್ತಿಯಾಗಬಾರದು ಎಂಬ ಉದ್ದೇಶದಿಂದ ಶುದ್ಧೋದನ ಹೆಚ್ಚುಹೆಚ್ಚಾಗಿ ಸಿದ್ಧಾರ್ಥನನ್ನು ಸಂಸಾರದ ಕಟ್ಟಿನಲ್ಲಿ ಸಿಕ್ಕಿಸಬೇಕೆಂದು ಪ್ರಯತ್ನಪಟ್ಟಿದ್ದ. ಪ್ರೀತಿಯ ಹೆಂಡತಿ ಯಶೋಧರಾ, ಪ್ರೀತಿಯ ಮಗ ರಾಹುಲ- ಇವರಿಬ್ಬರೂ ಸಿದ್ಧಾರ್ಥನಲ್ಲಿ ಭೂಚಕ್ರವರ್ತಿಯಾಗಲು ಹೊಸ ಉತ್ಸಾಹ ತುಂಬುವರೆಂದು ಮುದುಕ ರಾಜ ಎಣಿಸಿದ್ದ. ಜೊತೆಗೆ ಪ್ರಪಂಚದ ದುಃಖ ಸಿದ್ಧಾರ್ಥನ ಕಣ್ಣಿಗೆ ಬೀಳಬಾರದೆಂದು ಎಲ್ಲಾ ವ್ಯವಸ್ಥೆಯನ್ನೂ ಮಾಡಿದ್ದ. ಹೀಗಾಗಿ ಜನರ ಸಂಕಟದ ಪರಿಚಯವೇ ಸಿದ್ಧಾರ್ಥನಿಗೆ ಇರಲಿಲ್ಲ. ಅವನು ಇಷ್ಟ ಬಂದಂತೆ ನಗರದ ಬೀದಿಗಳಲ್ಲಿ ಓಡಾಡುವುದಕ್ಕೂ ಆಗುತ್ತಿರಲಿಲ್ಲ.

ಆದರೆ ಜನಜೀವನವನ್ನು ತಿಳಿಯುವ ಕುತೂಹಲ ಸಿದ್ಧಾರ್ಥನಿಗೆ ಕಡಿಮೆಯಾಗಲಿಲ್ಲ. ಒಮ್ಮೆ, “ನಾನು ನಗರವನ್ನು ನೋಡಬೇಕು” ಎಂದ ರಾಜಕುಮಾರ.

ಮಗನು ನಗರವನ್ನು ನೋಡುವಾಗ ನಗರವೆಲ್ಲ ಸುಂದರವಾಗಿ, ಆನಂದಮಯವಾಗಿ ಮೆರೆಯಬೇಕು ಎಂದು ರಾಜನ ಆಸೆ. ಅಧಿಕಾರಿಗಳು ನಗರವನ್ನು ಅತಿಭೈವದಿಂದ ಶೃಂಗರಿಸಿದರು. ಎಲ್ಲೆಲ್ಲೂ ತಳಿರು ತೋರಣ, ಎಲ್ಲೆಲ್ಲೂ ಅಲಂಕಾರ. ಅಸಂತೋಷವನ್ನುಂಟು ಮಾಡುವ ಯಾವ ದೃಶ್ಯವೂ ರಾಜಕುಮಾರನ ಕಣ್ಣಿಗೆ ಬೀಳದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಿದ್ದರು. ಸಿದ್ಧಾರ್ಥನ ರಥವನ್ನು ಬಗೆಬಗೆಯಾಗಿ ಸಿಂಗರಿಸಿದ್ದರು. ಅವನ ಮೆಚ್ಚಿನ ಸೇವಕ ಚೆನ್ನನೇ ಸಾರಥಿ.

ಒಬ್ಬ ಹಣ್ಣು ಹಣ್ಣು ಮುದುಕ. ರಾಜಾಜ್ಞೆ ಅವನಿಗೆ ತಿಳಿಯದು. ಅವನು ದಾರಿಯ ಪಕ್ಕದಲ್ಲೇ ಇದ್ದ.

ರಾಜಕುಮಾರ ಸಿದ್ಧಾರ್ಥ ನೋಡಿದ.

ಬೊಚ್ಚುಬಾಯಿ, ನೆರಿಗೆ ಹಿಡಿದ ಮುಖ, ಮೂಳೆಗಳು ಎದ್ದು ಕಾಣುವ ಎದೆ, ಸೊರಗಿದ ಕೈಕಾಲುಗಳು, ಬಾಗಿದ ಸೊಂಟ-ಅತಿ ಕಷ್ಟದಿಂದ ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತಾ ನಡೆಯುತ್ತಿದ್ದಾನೆ. ಇಂಥ ವ್ಯಕ್ತಿಯನ್ನು ಸಿದ್ಧಾರ್ಥ ನೋಡಿಯೇ ಇರಲಿಲ್ಲ. ಆಶ್ಚರ್ಯದಿಂದ ಚೆನ್ನನನ್ನು ಕೇಳಿದ, “ಚೆನ್ನ, ಯಾರು ಇವನು?”

“ಇವನೊಬ್ಬ ಮುದುಕ, ಪ್ರಭು”

“ಇವನೂ ಮನುಷ್ಯನೇ?”

“ಹೌದು ಪ್ರಭು”.

“ಹಾಗಾದರೆ, ಇವನಿಗೇಕೆ ನಮ್ಮಂತೆ ತುಂಬಿದ ಮೈ ಕೈಗಳಿಲ್ಲ?”

“ಇವನೂ ಯುವಕನಾಗಿದ್ದಾಗ ನಮ್ಮಂತೆಯೇ ಇದ್ದ ಪ್ರಭು”.

“ಏನೆಂದೆ? ಎಲ್ಲರೂ ಹೀಗೆಯೇ ಆಗುತ್ತಾರೇನು?”

“ಹೌದು ಪ್ರಭು”.

ರಾಜಕುಮಾರನ ಮನಸ್ಸು ಕದಡಿತು. “ರಥವನ್ನು ಹಿಂದಕ್ಕೆ ತಿರುಗಿಸು, ಚೆನ್ನ” ಎಂದ.

ಸಿದ್ಧಾರ್ಥನಿಗೆ ತಾನು ಕಂಡ ದೃಶ್ಯವನ್ನು ಮರೆಯಲು ಸಾಧ್ಯವೇ ಆಗಲಿಲ್ಲ. ಅವನು ಚಿಂತೆಯಲ್ಲಿ ಮುಳುಗಿದ. ಈ ಸಂಗತಿ ಶುದ್ಧೋದನನಿಗೆ ತಿಳಿಯಿತು. ಅವನಿಗೆ ಕಳವಳವಾಯಿತು. ಮಗನನ್ನು ಸಂತೋಷಪಡಿಸಲು ಎಲ್ಲ ಪ್ರಯತ್ನಗಳನ್ನೂ ಮಾಡಿದ.

ಕೆಲವು ದಿನ ಕಳೆಯಿತು. ಮತ್ತೊಮ್ಮೆ ರಾಜಕುಮಾರ ಹೀಗೆಯೇ ನಗರವನ್ನು ನೋಡಲು ರಥದಲ್ಲಿ ಹೊರಟ. ಈ ಬಾರಿ ಇನ್ನೊಂದು ದೃಶ್ಯ ಕಂಡ.

ರಸ್ತೆಯ ಪಕ್ಕದಲ್ಲಿ ಒಬ್ಬ ಬಡಪ್ರಾಣಿ ಕ್ರೂರವಾದ ಯಾವುದೋ ರೋಗದಿಂದ ನರಳುತ್ತಿದ್ದಾನೆ. ಉಸಿರಾಡುವುದೇ ಕಷ್ಟವಾಗಿದೆ. ಮೈ ಬೆವರಿನಲ್ಲಿ ತೋಯ್ದಿದೆ. ಕಣ್ಣಿನ ಗುಡ್ಡೆಗಳು ಮೇಲಾಗಿವೆ. ಮುಖ ಯಾತನೆಯಿಂದ ಕ್ಷಣಕ್ಷಣಕ್ಕೂ ಬದಲಾಗುತ್ತಿದೆ. ಚೆನ್ನನನ್ನು ರಾಜಕುಮಾರ ಕೇಳಿದ:

“ಇವನೇಕೆ ಹೀಗಾಗಿದ್ದಾನೆ, ಚೆನ್ನ?”

“ಇವನೊಬ್ಬ ರೋಗಿ, ಪ್ರಭು. ನೋವಿನಿಂದ ನರಳುತ್ತಿದ್ದಾನೆ.”

“ಅವನು ಯಾವಾಗಲೂ ಹೀಗೆಯೇ ಇದ್ದನೇ?”

“ಇಲ್ಲ ಪ್ರಭು. ಕಾಯಿಲೆ ಇಲ್ಲದೆ, ಆರೋಗ್ಯದಿಂದಿದ್ದಾಗ ನಮ್ಮಂತೆ ಸಂತೋಷದಿಂದಲೇ ಇರುತ್ತಿದ್ದ”.

“ಹಾಗಾದರೆ ಎಲ್ಲರಿಗೂ ರೋಗ ಬರುತ್ತದೆಯೇ?”

“ಹೌದು”.

ರಾಜಕುಮಾರ ಮತ್ತಷ್ಟು ಖಿನ್ನನಾದ. ಅರಮನೆಗೆ ಹಿಂತಿರುಗಿದ. ಮೊದಲಿಗಿಂತ ಹೆಚ್ಚಿನ ಯೋಚನೆಯಲ್ಲಿ ಮುಳುಗಿದ. ಶುದ್ಧೋದನ ರಾಜನ ಮನಸ್ಸಿಗೆ ತಳಮಳ. ಮಗನನ್ನು ಸಂತೋಷದಿಂದಿಡುವ ಅವನ ಪ್ರಯತ್ನವೂ ಹೆಚ್ಚಾಯಿತು.

ಮೂರನೇ ಬಾರಿ ರಾಜಕುಮಾರ ನಗರ ಸಂಚಾರಕ್ಕೆ ಹೊರಟ.

ಕೆಲವು ಜನರು ಶವವೊಂದನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗುತ್ತಿದ್ದರು. ಹೆಣದ ಹಿಂದೆ ಕೆಲವರು ಗಟ್ಟಿಯಾಗಿ ಅಳುತ್ತಾ ಹೋಗುತ್ತಿದ್ದರು.

“ಇದೇನು ವಿಚಿತ್ರ ಮೆರವಣಿಗೆ, ಚೆನ್ನ?”

“ಇದೊಂದು ಸ್ಮಶಾನಯಾತ್ರೆ, ಪ್ರಭು”.

“ಹಾಗೆಂದರೆ?”

“ಆ ನಾಲ್ಕು ಜನರು ಹೆಣವೊಂದನ್ನು ತೆಗೆದುಕೊಂಡು ಹೋಗುತ್ತಿದ್ದಾರೆ”.

“ಹೆಣ ಅಂದರೆ?”

“ಅವನು ಎಲ್ಲರಂತೆ ಇದ್ದ. ತನಗೆ ಬೇಕಾದವರನ್ನು ಪ್ರೀತಿಸುತ್ತಿದ್ದ. ಇಷ್ಟವಾದದ್ದನ್ನು ಕಂಡಾಗ ಸಂತೋಷ ಪಡುತ್ತಿದ್ದ, ಹಾಡುತ್ತಿದ್ದ, ನೆಗೆಯುತ್ತಿದ್ದ. ಈಗ ಅವನಿಗೆ ಜೀವವಿಲ್ಲ. ಅವನು ಒಣ ಕಟ್ಟಿಗೆಯಂತಾಗಿದ್ದಾನೆ. ಕಟ್ಟಿಗೆಯಂತೆ ಅವನನ್ನೂ ಸುಟ್ಟು ಬಿಡುತ್ತಾರೆ”.

“ಎಲ್ಲರಿಗೂ ಹೀಗೆಯೇ ಆಗುತ್ತದೆಯೇ, ಚೆನ್ನ?”

“ಹೌದು ಪ್ರಭು”.

ಮಹಾತ್ಯಾಗ

ರಾಜಕುಮಾರನ ದುಗುಡ ಹೆಚ್ಚಿತು. ಅವನ ಸಂಚಾರ ಮುಗಿಯಿತು. “ಅಯ್ಯೋ ಪ್ರಪಂಚವೆ ಎಂಥ ಸಂಕಟಕ್ಕೆ ನೀನು ಸಿಕ್ಕಿಕೊಂಡಿರುವೆ!” ಎಂದು ತನ್ನಷ್ಟಕ್ಕೆ ತಾನೇ ಅಂದುಕೊಂಡ.

ಸ್ವಲ್ಪಹೊತ್ತಿನಲ್ಲೇ ಒಬ್ಬ ಸನ್ಯಾಸಿ ರಾಜಕುಮಾರನ ಕಣ್ಣಿಗೆ ಬಿದ್ದ. ಅವನ ಅಸದೃಶ್ಯವಾದ ತೇಜಸ್ಸು ರಾಜಕುಮಾರನ ಮನಸ್ಸನ್ನು ಸೆರೆಹಿಡಿಯಿತು. ಎಲ್ಲ ಸಂಕಟಗಳಿಂದ ಎಲ್ಲ ಕಷ್ಟಗಳಿಂದ ಆತ ದೂರವಾಗಿದ್ದಂತೆ ತೋರಿದ. ಹಿಂದೆ ತಾನು ಕಂಡ ಮೂರು ದೃಶ್ಯಗಳಿಗೂ ಸನ್ಯಾಸಿಯ ತೇಜಸ್ಸಿಗೂ ಎಂಥ ವ್ಯತ್ಯಾಸ! ಮನುಷ್ಯನ ಜೀವನದಲ್ಲಿ ಎಷ್ಟು ನೋವಿದೆಯೋ ಅಲ್ಲಿಯೇ ಆನಂದವೂ ಇರಲು ಸಾಧ್ಯ ಎನಿಸಿತು ಈಗ. ಆ ಆನಂದವನ್ನು ಕೊಡುವ ಉಪಾಯವನ್ನು ತಾನು ಕಂಡು ಹಿಡಿಯಬೇಕು. ಅದು ಸಾಧ್ಯವಾಗಬೇಕಾದರೆ ತಾನು ಸನ್ಯಾಸಿಯಾಗಿ ನಗರವನ್ನು ತೊರೆದು ಕಾಡಿಗೆ ಹೋಗಬೇಕು. ಅಂದರೆ ತಾನು ಅರಮನೆ, ರಾಜ್ಯ, ಶುದ್ಧೋದನ ರಾಜ, ಸಾಕಿದ ಪ್ರಜಾಪತಿ, ಎಲ್ಲಕ್ಕಿಂತ ಹೆಚ್ಚಾಗಿ ಯಶೋಧರಾ, ರಾಹುಲ ಎಲ್ಲವನ್ನೂ ಎಲ್ಲರನ್ನೂ ತೊರೆಯಬೇಕು!

ಯಶೋಧರಾ, ರಾಹುಲರನ್ನು ನೆನಪಿಸಿಕೊಂಡಾಗ ಮನಸ್ಸಿಗೆ ನೋವಾಯಿತು. ಆ ಹಸು ಕಂದನನ್ನೂ ಅದರ ತಾಯಿಯನ್ನೂ ಹೇಗೆ ಬಿಡುವುದು ಎನ್ನಿಸಿತು. ಮನಸ್ಸು ಒಮ್ಮೆ ಕದಲಿತು. ಆದರೆ ದುಃಖವನ್ನು ಗೆಲ್ಲಬೇಕು ಎಂದು ಸಿದ್ಧಾರ್ಥ ದೃಢಮನಸ್ಸು ಮಾಡಿದ್ದ. ನಗರವನ್ನು ತ್ಯಜಿಸುವ ಮನಸ್ಸು ಮಾಡಿದ.

ನಗರವನ್ನು ಬಿಡುವ ಮೊದಲು ಯಶೋಧರಾ, ರಾಹುಲರನ್ನು ನೋಡಬಯಸಿದ. ಆಗ ನಡುರಾತ್ರಿ. ಸುದ್ದು ಮಾಡದೆ ಅವರು ಮಲಗುವ ಕೋಣೆಗೆ ಹೋದ. ಸಣ್ಣದಾಗಿ ದೀಪ ಉರಿಯುತ್ತಿತ್ತು. ಮಂದ ಬೆಳಕಿನಲ್ಲಿ ಮುದ್ದು ಕಂದ ಮತ್ತು ಯಶೋಧರೆಯರನ್ನು ನೋಡಿ ಸಿದ್ಧಾರ್ಥನಿಗೆ ಪ್ರೀತಿ ಉಕ್ಕಿ ಉಕ್ಕಿ ಬಂತು. ತಾಯಿಯ ತೆಕ್ಕೆಯಲ್ಲಿ ಮಲಗಿದ್ದ ರಾಹುಲನನ್ನು ಎತ್ತಿ ಮುದ್ದಿಡಬೇಕೆಂದು ಆಸೆಯಾಯಿತು. ಆದರೆ ತಾಯಿಗೆ ಎಚ್ಚರವಾಗಿಬಿಟ್ಟರೆ! ಮಗುವನ್ನು ಮುಟ್ಟಲಿಲ್ಲ. ಗಟ್ಟಿ ಮನಸ್ಸು ಮಾಡಿ ಯಶೋಧರಾ, ರಾಹುಲರನ್ನು ಕಣ್ಣಿನಲ್ಲಿ ತುಂಬಿಕೊಳ್ಳುವಂತೆ ನೋಡಿದ. ಅನಂತರ ನಿಶ್ಶಬ್ಧವಾಗಿ ಆ ಸ್ಥಳದಿಂದ ಬೇಗಬೇಗನೆ ಹೊರಟೇ ಬಿಟ್ಟ.

ತನ್ನ ನೆಚ್ಚಿನ ಸೇವಕ ಚೆನ್ನನನ್ನು ಎಚ್ಚರಗೊಳಿಸಿದ. ತನ್ನ ಉದ್ದೇಶವನ್ನು ತಿಳಿಸಿದ. ರಾಜಕುಮಾರನ ಮೆಚ್ಚಿನ ಕುದುರೆ ಕಂಟಕನ ಮೇಲೆ ಮುಂದೆ ಸಿದ್ಧಾರ್ಥ, ಹಿಂದೆ ಚೆನ್ನ ಕುಳಿತು ಹೊರಟೇ ಬಿಟ್ಟರು.

ರಾಜ್ಯದಲ್ಲಿ ಒಂದು ಭಾಗ ತೆಗೆದುಕೊ”

ರಾಜಕುಮಾರ ದಟ್ಟವಾದ ಕಾಡುಗಳನ್ನು ದಾಟಿ ಹೊಳೆಗಳನ್ನು ಹಾದು ಒಂದು ಕಾಡಿಗೆ ಬಂದ. ಅಲ್ಲಿ ತಾನು ಹಾಕಿಕೊಂಡಿದ್ದ ಬಟ್ಟೆಗಳನ್ನು, ಒಡವೆಗಳನ್ನು ಚೆನ್ನನಿಗೆ ಕೊಟ್ಟು “ನಾನು ಸನ್ಯಾಸಿಯಾದೆ ಎಂದು ರಾಜರಿಗೆ ತಿಳಿಸಿಬಿಡು” ಎಂದ. ತನ್ನ ಕೂದಲನ್ನು ಕತ್ತರಿಸಿಕೊಂಡ. ಸನ್ಯಾಸಿಯ ಬಟ್ಟೆಗಳನ್ನು ಧರಿಸಿದ. ತನ್ನ ದಾರಿ ಹಿಡಿದು ನಡೆದ.

 

ರಾಜಕುಮಾರ ತನ್ನ ಒಡವೆಗಳನ್ನು ತೆಗೆದುಹಾಕಿದ.

ಅಲ್ಲಿಂದ ಮುಂದೆ ಸನ್ಯಾಸಿಯಾದ ಸಿದ್ಧಾರ್ಥ ರಾಜಗೃಹ ಎಂಬ ಪಟ್ಟಣಕ್ಕೆ ಬಂದ. ಅಲ್ಲಿ ಬಿಂಬಸಾರ ಎಂಬ ರಾಜ ಇದ್ದ. ಸಿದ್ಧಾರ್ಥನ ತೇಜಸ್ಸು, ನಡೆ-ನುಡಿಗಳನ್ನು ನೋಡಿದ ರಾಜಗೃಹದ ಜನರು ಅವನೊಬ್ಬ ಮಹಾಪುರುಷನೆಂದು ಅವನಿಗೆ ಅಸಾಧಾರಣ ಭಕ್ತಿ ಗೌರವ ಸಲ್ಲಿಸುತ್ತಿದ್ದರು. ಅವನನ್ನು ನೋಡಲು ಬಿಂಬಸಾರ ತನ್ನ ಮಂತ್ರಿಗಳೊಂದಿಗೆ ಹೋದ. ಎಂತಹ ತೇಜಸ್ಸು ಈ ಸನ್ಯಾಸಿಯದು! ಅರಸ ಬಿಂಬಸಾರ ಅವನಿಗೆ ನಮಸ್ಕರಿಸಿ “ಮಹಾನುಭಾವಾ! ನಿನ್ನ ಕೈ ರಾಜಸೂತ್ರಗಳನ್ನು ಹಿಡಿಯಬೇಕು, ಭಿಕ್ಷಾಪಾತ್ರೆಯನ್ನಲ್ಲ. ನನ್ನ ರಾಜ್ಯದಲ್ಲಿ ಒಂದು ಭಾಗವನ್ನು ಕೊಡುತ್ತೇನೆ. ಅದನ್ನು ಆಳಿಕೊಂಡು ಪ್ರಜೆಗಳಿಗೂ, ನನಗೂ ಆನಂದವನ್ನುಂಟು ಮಾಡು” ಎಂದು ಕೇಳಿಕೊಂಡ.

ರಾಜ್ಯವನ್ನು ತಾನಾಗಿ ಬಿಟ್ಟು ಶಾಂತಿಯನ್ನು ಹುಡುಕಿಕೊಂಡು ಹೊರಟಿದ್ದ ಸನ್ಯಾಸಿಯು, “ಮಹಾರಾಜ, ನಿನ್ನ ಔದಾರ್ಯ ದೊಡ್ಡದು. ಅದರೆ ಮತ್ತೊಮ್ಮೆ ನಾನು ರಾಜ್ಯ ಮತ್ತು ಐಶ್ವರ್ಯಗಳಿಗೆ ಬಲಿ ಬೀಳಲಾರೆ” ಎಂದು ಹೇಳಿ ಮುಂದೆ ಹೊರಟ.

ನನ್ನನ್ನೇ ಕೊಲ್ಲಿ”

ದಾರಿಯಲ್ಲಿ ಒಂದು ದೇವಾಲಯ. ಅಲ್ಲಿ ಒಂದು ದೊಡ್ಡ ಯಾಗ ನಡೆಯುತ್ತಿತ್ತು. ಬಲಿ ಕೊಡಲು ನೂರಾರು ಪ್ರಾಣಿಗಳನ್ನು ತಂದಿದ್ದರು. ಆ ದೃಶ್ಯವನ್ನು ನೋಡಿ ಸಿದ್ಧಾರ್ಥನ ಮನಸ್ಸುಕರಗಿತು. ಯಾಗ ಮಾಡಲು ಸೇರಿದ್ದವರನ್ನು ಕುರಿತು, “ಸೋದರರೆ, ದೇವತೆಗಳಿಗೆ ತೃಪ್ತಿಯಾಗುವುದೆಂಬ ನಂಬಿಕೆಯಿಂದ ಇಷ್ಟು ಪ್ರಾಣಿಗಳನ್ನು ಬಲಿಕೊಡುತ್ತಿದ್ದೀರಿ. ಹಾಗೆ ಪ್ರಾಣಿಗಳಿಂದ ದೇವತೆಗಳು ತೃಪ್ತಿಪಡುವುದಿದ್ದರೆ ರಾಜಕುಮಾರನ ರಕ್ತದಿಂದ ಅವರಿಗೆ ಇನ್ನೂ ಸಂತೋಷವಾದೀತು. ಇದೋ ನನ್ನನ್ನು ಕೊಲ್ಲಿ” ಎಂದು ಹೇಳಿ ಯಜ್ಞ ಪೀಠದ ಮೇಲೆ ತನ್ನ ತಲೆಯನ್ನಿಟ್ಟ. ಅಲ್ಲಿದ್ದ ಜನರು ಬೆರಗಾದರು, ಅವರ ಮನಸ್ಸುಕರಗಿತು. ತಮ್ಮ ತಪ್ಪಿಗಾಗಿ ಸನ್ಯಾಸಿಯ ಕ್ಷಮೆ ಕೇಳಿದರು. ಪ್ರಾಣಿಗಳು ಬದುಕಿಕೊಂಡವು. ರಾಜಗೃಹದಲ್ಲಿ ಯಾಗಕ್ಕಾಗಿ ಪಶುವಧೆ ಆಗಬಾರದೆಂದು ರಾಜಾಜ್ಞೆಯಾಯಿತು.

 

"ಕ್ಷಮಿಸು ತಂದೆ!"

ದೇಹ ದಂಡನೆ

ಗಯಾ ಪಟ್ಟಣದ ಹತ್ತಿರದ ಉರವೇಲ ಎಂಬ ಕಾಡು ಪ್ರದೇಶದಲ್ಲಿ ಸಿದ್ಧಾರ್ಥ ತಪಸ್ಸನ್ನಾರಂಭಿಸಿದ. ಅಲ್ಲಿ ಅನೇಕ ತಪಸ್ವಿಗಳು ದೇಹ ದಂಡಿಸುತ್ತಿದ್ದರು. ಅವರಿಗಿಂತಲೂ ಹೆಚ್ಚಿನ ಶಿಕ್ಷೆಯನ್ನು ತನ್ನ ದೇಹಕ್ಕೆ ಕೊಡುತ್ತಿದ್ದ. ಉರಿಬಿಸಿಲಿನಲ್ಲಿ, ಕೊರೆಯುವ ಚಳಿಯಲ್ಲಿ, ಬರಿ ಮೈಯಲ್ಲಿ ನಿಲ್ಲುವುದು, ಏನನ್ನೂ ಹೊದ್ದುಕೊಳ್ಳದೆ ನೆಲದ ಮೇಲೆ ಮಲಗುವುದು, ದಿನಕ್ಕೆ ಒಂದೇ ತುತ್ತನ್ನು ತಿನ್ನುವುದು ಸಿದ್ಧಾರ್ಥನ ಪದ್ಧತಿಯಾಯಿತು. ದೇಹ ಕೃಶವಾಗಿ, ಸನ್ಯಾಸಿಗೆ ಕುಳಿತು ಏಳಲೂ ಕಷ್ಟವಾಗಿ ನಡೆಯುವಾಗ ನಿಶ್ಶಕ್ತಿಯಿಂದ ಬಿದ್ದ. ಜ್ಞಾನ ತಪ್ಪಿತು.

ಆ ಸಮಯದಲ್ಲಿ ಅದೇ ದಾರಿಯಲ್ಲಿ ಒಬ್ಬ ರಾಜಕುಮಾರಿ ಹೋಗುತ್ತಿದ್ದಳು. ಸನ್ಯಾಸಿಯ ಸ್ಥಿತಿಯನ್ನು ಕಂಡು ಮರುಕದಿಂದ ತನ್ನಲ್ಲಿದ್ದ ಪಾಯಸವನ್ನು ಕುಡಿಸಿದಳು. ಸನ್ಯಾಸಿಯು ಚೇತರಿಸಿಕೊಂಡ. ಸ್ವಲ್ಪ ಸಮಾಧಾನವಾಯಿತು. ಆಗ ಸನ್ಯಾಸಿಗೆ ಅತಿ ದೇಹದಂಡನೆ ಸರಿಯಲ್ಲ ಎನ್ನಿಸಿತು. ಅರಮನೆಯ ವಿವಿಧ ಸುಖಸಂತೋಷಗಳು ಸತ್ಯ ತಿಳಿಯಲು ಹೇಗೆ ಅಡ್ಡಿಯಾಗುವುವೋ ಹಾಗೆಯೇ ಅತಿಯಾದ ದೇಹದಂಡನೆಯೂ ಸತ್ಯ ತಿಳಿಯಲು ಅಡ್ಡಿಯಾಗುತ್ತದೆ ಎಂಬುದನ್ನರಿತ. ಅದರಂತೆ ಮಧ್ಯಮ ಮಾರ್ಗವನ್ನು ಅನುಸರಿಸಿದ. ಒಂದು ಅಶ್ವತ್ಥವೃಕ್ಷದ ಕೆಳಗೆ ತನ್ನ ತಪಸ್ಸನ್ನು ಮುಂದುವರಿಸಿದ.

ಸಿದ್ಧಾರ್ಥ “ಬುದ್ಧ”ನಾದ

ಕಪಿಲವಸ್ತುವನ್ನು ಬಿಟ್ಟು ಏಳು ವರ್ಷಗಳಾಗಿದ್ದವು. ಆ ದಿನ ವೈಶಾಖ ಶುದ್ಧ ಪೂರ್ಣಿಮೆ. ಸನ್ಯಾಸಿ ತನ್ನ ಸ್ಥಳದಲ್ಲಿ ಕುಳಿತಿದ್ದ. ಮಧ್ಯಾಹ್ನಕ್ಕೆ ಸರಿಯಾಗಿ ಸುಜಾತ ಎಂಬ ರಾಜಕುಮಾರಿ ತನ್ನ ಗೆಳತಿಯರೊಂದಿಗೆ ಅಲ್ಲಿಗೆ ಬಂದಳು. ಅತ್ಯಂತ ಭಕ್ತಿಯಿಂದ ಸಿದ್ಧಾರ್ಥನಿಗೆ ಪಾಯಸವನ್ನು  ಅರ್ಪಿಸಿದಳು. ಸಿದ್ಧಾರ್ಥನು ಅದನ್ನು ಕುಡಿದು ತೃಪ್ತಿ ಹೊಂದಿದ. ಆ ಮಧ್ಯಾಹ್ನ, ಸಂಜೆ ಎಲ್ಲವನ್ನೂ ತಪಸ್ಸಿನಲ್ಲಿಯೇ ಕಳೆದ.

ರಾತ್ರಿಯಾಯಿತು. ಸಿದ್ಧಾರ್ಥನಿಗೆ ಒಂದು ವಿಶೇಷವಾದ, ಮಾತಿನಲ್ಲಿ ವರ್ಣಿಸಲಾಗದ ಅನುಭವವಾಗುತ್ತಿತ್ತು. ಆನಂದ ಹೆಚ್ಚುತ್ತಿತ್ತು. ತಾನು ಏಳು ವರ್ಷಗಳಿಂದ ಯಾವ ಸತ್ಯವನ್ನು ಅರಸುತ್ತಿದ್ದನೋ ಅದರ ಒಂದೊಂದು ಅಂಶವೂ ಸ್ಪಷ್ಟವಾಗುತ್ತಿತ್ತು.

ಬೆಳಗಿನ ಜಾವ ಸಿದ್ಧಾರ್ಥನಿಗೆ ಸತ್ಯ ಹೊಳೆಯಿತು.

ಏಳು ವರ್ಷಗಳ ತಪಸ್ಸು ಸಿದ್ಧಿಸಿತು. ಹೇಳಲಾಗದ, ಸಾಧಾರಣ ಜನರ ಅನುಭವಕ್ಕೆ ಮೀರಿದ, ಆನಂದ ಅವನಿಗುಂಟಾಯಿತು. ತಪಸ್ಸಿನಿಂದ ಎದ್ದ.

ಸಿದ್ಧಾರ್ಥ ಬೋಧಿಯನ್ನು ಪಡೆದ; ಭಗವಾನ್ ಬುದ್ಧ ಆದ.

ಧರ್ಮಚಕ್ರ ಚಲಿಸಿತು

ಬೋಧಿಯನ್ನು ಪಡೆದ ಮೇಲೆ ಭಗವಾನರು ಏಳು ದಿನಗಳು ನಿರಂತರವಾದ ಆನಂದವನ್ನು ಅನುಭವಿಸಿದರು. ಸಾಧಾರಣವಾಗಿ ನಮಗೆ ಆಹಾರ, ನೀರು, ನಿದ್ರೆ ಎಲ್ಲ ಬೇಕು ಅಲ್ಲವೇ? ಆದರೆ ಭಗವಾನರಿಗೆ ಏನೂ ಬೇಕಿರಲಿಲ್ಲ.

ಬುದ್ಧ ಭಗವಾನರು ತಮ್ಮ ಧರ್ಮ ಪ್ರಚಾರಕ್ಕಾಗಿ ಅಲ್ಲಿಂದ ಹೊರಟರು.

ತಾವು ಅರಿತ ಸತ್ಯವನ್ನು ಮೊದಲು ಯಾರಿಗೆ ಬೋಧಿಸಬೇಕು? ಉರವೇಲದಲ್ಲಿದ್ದಾಗ ಐವರು ಶಿಷ್ಯರು ಅವರನ್ನು ಸೇವಿಸುತ್ತಿದ್ದರು. ಅವರು ಬೋಧನೆಗೆ ಅರ್ಹರು ಎಂದು ಹುಡುಕಿಕೊಂಡು ವಾರಣಾಸಿಯ ಹತ್ತಿರವಿರುವ ಮೃಗವನಕ್ಕೆ ಬಂದರು.

ಆ ಶಿಷ್ಯರಿಗಾದರೋ ತಮ್ಮ ಹಿಂದಿನ ಗುರುವಿನಲ್ಲಿ ಸಂದೇಹ. ಸತ್ಯ ತಿಳಿಯಬೇಕಾದರೆ ಉಪವಾಸ ಮಾಡಿ, ಕಷ್ಟದ ವ್ರತಗಳನ್ನು ಮಾಡಿ ದೇಹಕ್ಕೆ ಕಷ್ಟ ಕೊಡಬೇಕು ಎಂದು ಅವರ ನಂಬಿಕೆ. ಅವರಿಗೆ ಸಿದ್ಧಾರ್ಥನ ಮಧ್ಯಮಾರ್ಗ ಸರಿತೋರಲಿಲ್ಲ. ಭಗವಾನರು ಹತ್ತಿರ ಬಂದರು. ತೇಜಸ್ಸಿನ ರಾಶಿಯೇ ಹತ್ತಿರ ಬಂದಂತಾಯಿತು ಶಿಷ್ಯರಿಗೆ. ಭಗವಾನರ ಕಣ್ಣುಗಳಲ್ಲಿ ಏನು ಹೊಳಪು! ಮುಖದಲ್ಲಿ ಎಂತಹ ಶಾಂತಿ! ಶಿಷ್ಯರು ತಮ್ಮನ್ನು ತಾವೇ ಮರೆತರು. ಗೌರವದಿಂದ ಎದ್ದು ನಿಂತರು. ಭಗವಾನರು ಅವರಿಗೆ ಧರ್ಮಬೋಧನೆ ಮಾಡಿದರು. ಅದೇ ಅವರು ಮಾಡಿದ ಮೊದಲ ಪ್ರವಚನ.

ಅವರ ಪ್ರವಚನಗಳೆಲ್ಲವೂ ಪಾಲಿ ಭಾಷೆಯಲ್ಲಿವೆ. ಅವುಗಳನ್ನು “ತ್ರಿಪಿಟಿಕ” ಎಂಬ ಗ್ರಂಥದಲ್ಲಿ ಸಂಗ್ರಹಿಸಲಾಗಿದೆ. ಒಂದೊಂದು ಪ್ರವಚನವನ್ನೂ ಸೂತ್ರವೆಂದು ಕರೆಯುತ್ತಾರೆ. ಬುದ್ಧ ಭಗವಾನರು ಹೇಳಿದ ಮೊದಲನೆಯ ಸೂತ್ರ “ಧರ್ಮಚಕ್ರ ಪ್ರವರ್ತನ ಸೂತ್ರ”. ಇದರಲ್ಲಿ ನಾಲ್ಕು ಭಾಗಗಳಿವೆ. ಒಂದೊಂದು ಭಾಗವೂ ಒಂದೊಂದು ಸತ್ಯವನ್ನು ತಿಳಿಸುತ್ತದೆ. ಈ ನಾಲ್ಕು ಸತ್ಯಗಳನ್ನು “ಆರ್ಯ ಸತ್ಯಗಳು” ಎನ್ನುತ್ತಾರೆ. ಇವು ದುಃಖ ಸತ್ಯ, ದುಃಖ ಸಮುದಯ ಸತ್ಯ, ದುಃಖ ನಿರೋಧ ಸತ್ಯ ಮತ್ತು ದುಃಖ ನಿರೋಧ ಗಾಮಿನಿ ಮಾರ್ಗ ಸತ್ಯ. ನಾಲ್ಕನೆಯದಾದ ಮಾರ್ಗ ಸತ್ಯ ನಾವು ಅತ್ಯಂತ ಸುಖ, ಸಮಾಧಾನ ಪಡೆಯಬೇಕಾದರೆ ಹೇಗಿರಬೇಕು ಎಂಬುದನ್ನು ತಿಳಿಸುತ್ತದೆ. ಹೀಗೆ ನಡೆಯುವುದರಿಂದ ನಮಗಷ್ಟೇ ಅಲ್ಲ, ಇಡೀ ಸಮಾಜಕ್ಕೆ ಎಲ್ಲ ಜೀವಿಗಳಿಗೆ ಒಳ್ಳೆಯದಾಗುತ್ತದೆ. ಈ ಮಾರ್ಗದಲ್ಲಿ ಎಂಟು ಅಂಶಗಳಿವೆ. ಮೊದಲಯದಾಗಿ ನಮಗೆ “ಸಮ್ಯಕ್ ದೃಷ್ಟಿ” ಇರಬೇಕು. ನಮಗೂ, ಸಮಾಜಕ್ಕೂ ಯಾವುದು ಒಳ್ಳೆಯದೋ ಅದರಲ್ಲಿ ನಂಬಿಕೆಯನ್ನಿಡುವುದು, ನಮ್ಮ ಅನುಭವಕ್ಕೆ ವಿರುದ್ಧವಾದ ಮೂಢ ನಂಬಿಕೆಗಳನ್ನು ಬಿಡುವುದು ಸಮ್ಯಕ್ ದೃಷ್ಟಿ. ಎರಡನೆಯದು, ದೃಷ್ಟಿಗೆ “ಸಮ್ಯಕ್‌ ಸಂಕಲ್ಪ”. ಅಂದರೆ ಯಾವುದು ಒಳ್ಳೆಯದನ್ನುಂಟು ಮಾಡುತ್ತದೋ ಅದನ್ನು ಪಡೆದೇ ಪಡೆಯುತ್ತೇನೆಂಬ ಛಲ. ಮೂರನೆಯದಾಗಿ, ಸುಳ್ಳಾಡುವುದು, ಚಾಡಿ ಹೇಳುವುದು, ಕೆಲಸಕ್ಕೆ ಬಾರದ ಹರಟೆಯಲ್ಲಿ ತೊಡಗುವುದು, ಇತರರನ್ನು ಅಪಹಾಸ್ಯ ಮಾಡುವುದು, ಬೈಯುವುದು-ಇವೆಲ್ಲವೂ “ಸಮ್ಯಕ್ ವಾಚಾ”ಕ್ಕೆ ವಿರುದ್ಧವಾದುವು. ಇದಕ್ಕೆ ಬದಲಾಗಿ ಪ್ರೀತಿಯನ್ನು ಬೆಳೆಸುವ ಒಳ್ಳೆಯ ಮೃದು ಮಾತನ್ನಾಡುವುದು “ಸಮ್ಯಕ್ ವಾಚಾ”. ನಾಲ್ಕನೆಯ ಅಂಶವೇ “ಸಮ್ಯಕ್ ಕರ್ಮಾಂತ” ಅಥವಾ ಒಳ್ಳೆಯ ಕರ್ಮವನ್ನೇ ಯಾವಾಗಲೂ ಮಾಡುವುದು. ಅಂದರೆ ಪ್ರಾಣಿಹಿಂಸೆ, ಕಳ್ಳತನ ಮುಂತಾದವುಗಳನ್ನು ಮಾಡದಿರುವುದು, ಕುಡಿತ, ಜೂಜಾಟಗಳಲ್ಲಿ ತೊಡಗದಿರುವುದು; ತೋರಿಸುವುದು ಮತ್ತು ಸಂಯಮದಿಂದಿರುವುದು. “ಸಮ್ಯಕ್ ಆಜೀವ” ಅಥವಾ ಒಳ್ಳೆಯ ಕೆಲಸದಿಂದ ಸಂಪಾದನೆಯನ್ನು ಮಾಡುವುದೇ ಐದನೆಯ ಅಂಶ. ಮಾಂಸವನ್ನು ಮಾರುವುದು, ಪ್ರಾಣವನ್ನು ತೆಗೆದುಕೊಳ್ಳುವ ಪಾಷಾಣ ಮುಂತಾದ ವಸ್ತುಗಳ ವ್ಯಾಪಾರ ಮಾಡುವುದು, ಭವಿಷ್ಯ ಹೇಳುವುದು, ಲಂಚ ತೆಗೆದುಕೊಳ್ಳುವುದು-ಇವು “ಸಮ್ಯಕ್ ಆಜೀವ”ಕ್ಕೆ ವಿರುದ್ಧವಾದುವು. ಆರನೆಯ ಅಂಶ “ಸಮ್ಯಕ್ ವ್ಯಾಯಾಮ”. ಅಂದರೆ ಯಾವಾಗಲೂ, ಎಷ್ಟೇ ತೊಂದರೆಯಿರಲಿ, ಒಳ್ಳೆಯದನ್ನೇ ಮಾಡಲು ಪ್ರಯತ್ನ ಪಡುತ್ತಿರುವುದು. ಏಳನೆಯ ಅಂಶ “ಸಮ್ಯಕ್ ಸ್ಮೃತಿ” ಅಥವಾ ಸದಾ ಒಳ್ಳೆಯದನ್ನೇ ಯೋಚಿಸುತ್ತಿರುವುದು. ಎಂಟನೆಯದು “ಸಮ್ಯಕ್ ಸಮಾಧಿ” ಅಥವಾ ಒಳ್ಳೆಯದರಲ್ಲಿ ಏಕಾಗ್ರತೆ. ಈ ಎಂಟು ಅಂಶಗಳ ಮಾರ್ಗವನ್ನು “ಆರ್ಯ ಅಷ್ಟಾಂಗ ಮಾರ್ಗ” ಎಂದು ಕರೆಯುತ್ತಾರೆ.

ಬುದ್ಧ ಭಗವಾನರು ತಾವು ಯಾವ ಮಾರ್ಗವನ್ನು ಬೋಧಿಸಿದರೋ ಅದರಂತೆಯೇ ಜೀವನದುದ್ದಕ್ಕೂ ನಡೆದರು. ಜೀವಿಗಳಲ್ಲಿ ಅಪಾರ ಕರುಣೆ, ಜನರಲ್ಲಿ ಅಪಾರ ಅನುಕಂಪ, ಶಿಷ್ಯರಲ್ಲಿ ಅಪಾರ ವಾತ್ಸಲ್ಯ, ಅಪಾರವಾದ ಜ್ಞಾನ, ಮೂಢನಂಬಿಕೆಗಳ ಖಂಡನೆ ಅವರ ಮಾತಿನಲ್ಲಿಯೂ, ನಡತೆಯಲ್ಲಿಯೂ ಕಾಣುತ್ತೇವೆ.

ಅಂಗುಲಿಮಾಲ

ಒಂದು ಕಾಡು. ಅಲ್ಲಿ ಅಂಗುಲಿಮಾಲನೆಂಬ ಕ್ರೂರ ದರೋಡೆಕಾರ. ಅವನ ಹೆಸರನ್ನು ಕೇಳಿದರೇ ಜನ ನಡುಗುತ್ತಿದ್ದರು. ಕಣ್ಣಿಗೆ ಕಂಡವರನ್ನು ಕೊಂದು, ಅವರಲ್ಲಿದ್ದುದನ್ನು ದೋಚಿಕೊಂಡು, ಕೊಂದ ಗುರುತಿಗಾಗಿ ಅವರ ಹೆಬ್ಬೆರಳನ್ನು ಒಂದು ಸರವಾಗಿ ಪೋಣಿಸಿ, ಆ ಸರವನ್ನು ಹಾಕಿಕೊಂಡು ಓಡಾಡುತ್ತಿದ್ದ. ಅವನ ಸರದಲ್ಲಿ ಆಗಲೇ ಒಂದು ಸಾವಿರ ಹೆಬ್ಬೆರಳುಗಳಿದ್ದವು. ಅವನಿಗೆ ದಯೆ, ಪ್ರೇಮ, ಸಹಾನುಭೂತಿ ಯಾವುದೂ ಗೊತ್ತಿರಲಿಲ್ಲ. ಕ್ರೂರಿಯಾದ ಅಂಗುಲಿಮಾಲ ಆ ಕಾಡಿನಲ್ಲಿರುವುದು ಭಗವಾನರಿಗೆ ತಿಳಿದಿತ್ತು. ಆದರೂ, ಅದೇ ಮಾರ್ಗದಲ್ಲಿ ಹೊರಟರು.

ಜನರೇ ಸುಳಿಯದಿದ್ದ ಆ ಭಯಂಕರ ಅರಣ್ಯದಲ್ಲಿ ನಿರ್ಭೀತರಾಗಿ ಹೋಗುತ್ತಿರುವ ಭಗವಾನರನ್ನೂ, ಅವರ ಶಿಷ್ಯರನ್ನು ಕಂಡು ಅಂಗುಲಿಮಾಲನಿಗೆ ಆಶ್ಚರ್ಯವಾಯಿತು. ಜೊತೆಗೆ ಕೋಪವು ಬಂತು. ಬುದ್ಧ ಭಗವಾನರನ್ನು ಕುರಿತು “ಎಲೋ ಸನ್ಯಾಸಿ, ನಿಲ್ಲು ನಿಲ್ಲು! ಎಂದು ಅಬ್ಬರಿಸಿದ. “ನಾನು ನಿಂತೇ ಇದ್ದೇನೆ ಸೋದರ, ಚಲಿಸುತ್ತಿರುವವನು ನೀನು”. ಹೀಗೆ ಹೇಳಿ ಬುದ್ಧ ಭಗವಾನರು ಮುಂದೆ ಮುಂದೆ ಹೋಗುತ್ತಿದ್ದರು.

ಅಂಗುಲಿಮಾಲನಿಗೆ ಮತ್ತಷ್ಟು ಕೋಪ ಬಂತು. ತನ್ನ ಮಾತನ್ನೂ ಧಿಕ್ಕರಿಸಿ, ಜೊತೆಗೆ ಸುಳ್ಳನ್ನು ಹೇಳುತ್ತಿರುವ ಆ ಸನ್ಯಾಸಿಯನ್ನು ಕೊಂದೇ ಬಿಡುತ್ತೇನೆ ಎಂದು ನಿಶ್ಚಯಿಸಿದ. “ಏನು ಸುಳ್ಳು ಬೊಗಳುತ್ತಿದ್ದೀಯೇ ನಾನಾರು ಗೊತ್ತೆ? ನನ್ನ ಹೆಸರನ್ನು ಕೇಳಿದರೆ ಇಡೀ ಪ್ರಪಂಚವೇ ನಡುಗುತ್ತದೆ. ನಾನು ಅಂಗುಲಿಮಾಲ”.

“ಗೊತ್ತು ಮಗೂ, ನಾನು ಹೇಳುವುದು ಸತ್ಯ”.

ಭಗವಾರ ಮಾತು ಕೇಳಿ ಅಂಗುಲಿಮಾಲನಿಗೆ ಏನೋ ಒಂದು ಬಗೆಯ ಸಮಾಧಾನ ಆಯಿತು. ಇಡೀ ಪ್ರಪಂಚವೇ ದ್ವೇಷಿಸುತ್ತಿರುವ ತನ್ನನ್ನು “ಮಗೂ” ಎಂದು ಮಮತೆಯಿಂದ ಕರೆದ ಭಗವಾನರ ಮಾತು ವಿಚಿತ್ರವಾಗಿ ತೋರಿತು. ಅವನು ಎಂದೂ ಯಾರಿಂದಲೂ ಪ್ರೀತಿಯನ್ನು ಕಂಡಿರಲಿಲ್ಲ. ಆದರೂ ತನ್ನ ಮಾತನ್ನು ಧಿಕ್ಕರಿಸಿ ಮುಂದೆ ಹೋಗುತ್ತಿರುವ ಭಗವಾನರನ್ನು ಬೇಗನೆ ಮುಗಿಸಿ ಬಿಡಬೇಕೆಂದು ಧಾವಿಸಿ ಬಂದ. ಬರುವಾಗ “ಇಷ್ಟು ಹೇಳಿದರೂ ಸುಳ್ಳು ಹೇಳಿ ಮುಂದೆ ಹೋಗುತ್ತಿದ್ದೀಯಾ? ಬಂದೆ ಬಂದೆ” ಎಂದು ಅಬ್ಬರಿಸಿದ.

“ನಾನು ಸುಳ್ಳು ಹೇಳುವುದಿಲ್ಲ ಮಗೂ, ನನ್ನ ಮನಸ್ಸು ದೃಢವಾಗಿ ನಿಂತಲ್ಲಿಯೇ ನಿಂತಿದೆ. ನಿನ್ನ ಮನಸ್ಸಾದರೋ ಅತಿ ಚಂಚಲದಿಂದ ಚಲಿಸುತ್ತಿದೆ. ಚಲಿಸುತ್ತಿರುವವನು ನಾನಲ್ಲ. ನೀನು ಮಗೂ”.

ಭಗವಾನರ ಮಾತು ಕೇಳಿ ಅಂಗುಲಿಮಾಲನಿಗೆ ದಿಗ್ಭ್ರಮೆಯಾಯಿತು. ಅವನ ಜೀವನದಲ್ಲಿ ಅಂಥ ಮಾತು ಹೊಸದು. ತಾನು ನೋಡಿದ ವ್ಯಕ್ತಿಯ ರೀತಿಯೂ ಹೊಸದು. ಆದರೂ ಅವನ ರೋಷ ಆರಲಿಲ್ಲ. ಭಗವಾನರ ಕಡೆ ಹೆಜ್ಜೆ ಹಾಕುತ್ತಾ ಅವರ ಮುಖವನ್ನೇ ದೃಷ್ಟಿಸಿದ. ಕ್ರಮವಾಗಿ ನಡಿಗೆ ನಿಧನವಾಯಿತು. ಭಗವಾನರ ಹತ್ತಿರ ಹೋದಂತೆ ವಿಚಿತ್ರವಾದ ಅನುಭವವಾಯಿತು. ಅಂಥ ಪ್ರೇಮ, ಅನುಕಂಪ, ಕರುಣಾಪೂರಿತ ಮುಖವನ್ನು ಎಂದೂ ನೋಡಿರಲಿಲ್ಲ. ಭಯಂಕರನಾದ ಅಂಗುಲಿಮಾಲ ಹತ್ತಿರ ಹೋದರೂ, ಅಧೀರನಾಗದೆ, ಕನಿಕರವನ್ನೂ, ಪ್ರೇಮವನ್ನೂ ಸೂಸುತ್ತಿರುವ ಮಹಾಪುರುಷ ತೇಜಸ್ವಿಯನ್ನು ನೋಡಿ ಮುಗ್ಧನಾದ, ಮೌನವಾದ. ಮನಸ್ಸಿನ ಕೊಳೆ, ದ್ವೇಷ, ರೋಷ ಹೋಯಿತು. ಹೃದಯವು ಗೌರವಾದರಗಳಿಂದ ತುಂಬಿ ಪ್ರೇಮಮಯವಾಯಿತು. ಭಕ್ತಿ ಮಯವಾಯಿತು. ಕಣ್ಣೀರು ಕೋಡಿಯಾಗಿ ಹರಿದು, ಭಗವಾನರ ಕಾಲ ಮೇಲೆ ಬಿದ್ದು ಕ್ಷಮೆ ಬೇಡಿದ “ಕ್ಷಮಿಸು ತಂದೆ, ಉದ್ಧಾರ ಮಾಡು”.

“ನಾನು ಗೌತಮ ಬುದ್ಧ ಮಗೂ, ಈ ದಿನ ನಿನ್ನನ್ನು ಕಾಣಲು ಈ ಕಡೆ ಬಂದೆ”.

ಗೌತಮ ಬುದ್ಧರ ಹೆಸರು ಕೇಳುತ್ತಲೇ ಅಂಗುಲಿಮಾಲನ ಮೈಪುಳಕಿಸಿತು. ಕಾಡಿನಲ್ಲೇ ಇದ್ದರೂ ಭಗವಾನರ ವಿಷಯವನ್ನು ತಿಳಿದಿದ್ದ. ಅಂಥ ಮಹಾಪುರುಷ ತನ್ನನ್ನೇ ಹುಡುಕಿಕೊಂಡು ಬಂದಿರುವುದನ್ನು ತಿಳಿದು “ಧನ್ಯನಾದೆ” ಎಂದುಕೊಂಡ. ಅವರ ಪಾದಗಳನ್ನು ಹಿಡಿದೇ ಬೇಡಿದ: “ಭಗವಂತ, ನನಗೆ ಒಳ್ಳೆಯ ಮಾರ್ಗವನ್ನು ತೋರಿಸಿ”. ಭಗವಾನರು ಅಂಗುಲಿಮಾಲನಿಗೆ ಧರ್ಮಬೋಧನೆಯನ್ನು ಮಾಡಿದರು. ಕ್ರೂರಿ, ಮಾನವದ್ವೇಷಿ ಅಂಗುಲಿಮಾಲನ ಮೃದು ಹೃದಯದ, ಕರುಣೆಯ ಆಗರ ಸನ್ಯಾಸಿ ಅಂಗುಲಿ ಮಾಲನಾದ.

ಭಗವಾನರ ಕೀರ್ತಿ ಹೆಚ್ಚುತ್ತಿದ್ದಂತೆ, ಜನರು ಅವರನ್ನು ಪೂಜಸುವುದು ಹೆಚ್ಚಿದಂತೆ, ದೇವದತ್ತನಿಗೆ ಅವರ ಮೇಲಿನ ದ್ವೇಷವೂ ಹೆಚ್ಚಿತು. ರಾಜಗೃಹದ ದೊರೆ ಬಿಂಬಿಸಾರನ ಮಗ. ಕ್ರೂರಿಯೂ ಸ್ವಾರ್ಥಿಯೂ ಆದ ಅಜಾತಶತ್ರುವಿನ ಸ್ನೇಹ ಬೆಳೆಸಿ ಅವನ ಮನಸ್ಸನ್ನೂ ಕೆಡಿಸಿದ. ಅಜಾತಶತ್ರುವಿನ ಹತ್ತಿರ “ನಾಲಗಿರಿ” ಎಂಬ ಸಲಗ ಇತ್ತು. ಅದು ತುಂಬಾ ಶಕ್ತಿಯುಳ್ಳದ್ದು ಮತ್ತು ಶೀಘ್ರಕೋಪಿ. ಮದಿಸಿದಾಗ ಅದನ್ನು ಬುದ್ಧ ಭಗವಾನರ ಮೇಲೆ ಬಿಟ್ಟರು. ಕೋಪದಿಂದ ಕೂಡಿದ ಅದು ಭಗವಾನರ ಕಡೆಗೆ ರಭಸದಿಂದ ನುಗ್ಗಿತು. ಭಗವಾನರು ಶಾಂತವಾಗಿ ನಿಂತಲ್ಲಿಯೇ ನಿಂತಿದ್ದರು. ಆನೆಯ ಮೇಲೆ ಮೈತ್ರಿಯ ಪ್ರವಾಹವನ್ನೇ ಹರಿಸಿದರು. ನುಗ್ಗಿ ಬರುತ್ತಿದ್ದ ಆನೆಯ ರೋಷ ಕುಗ್ಗುತ್ತಾ ಬಂದು ಬರುಬರುತ್ತಾ ಅದರ ಹೆಜ್ಜೆಯೂ ಮೃದುವಾಯಿತು. ಭಗವಾನರ ಹತ್ತಿರ ಬಂದು ಅವರ ಕಾಲ ಬಳಿ ಮಮತೆಯಿಂದ ಬಿದ್ದುಕೊಂಡಿತು.

ದೇವದತ್ತ ಮತ್ತು ಅಜಾತಶತ್ರುಗಳಿಗೆ ತಮ್ಮ ತಪ್ಪು ಅರಿವಾಯಿತು. ಬುದ್ಧ ಭಗವಾನರಲ್ಲಿ ಕ್ಷಮೆ ಕೇಳಿ ಶರಣು ಹೋದರು. ಭಗವಾನರು ಅವರನ್ನು ಕರುಣೆಯಿಂದ ಕ್ಷಮಿಸಿ ಸಂತೈಸಿದರು.

ರೋಗಿಯನ್ನು ಆರೈಕೆ ಮಾಡಿದಿರಾ?”

ಒಮ್ಮೆ ಭಗವಾನರು ಜೇತವನ ಎಂಬಲ್ಲಿ ಒಂದು ವಿಹಾರದಲ್ಲಿ ತಂಗಿದ್ದರು. ವಿಹಾರವೆಂದರೆ ಭಿಕ್ಷುಗಳೆಂಬ ಸನ್ಯಾಸಿಗಳು ವಾಸಿಸುತ್ತಿದ್ದ ಸ್ಥಳ.

ವಿಹಾರದಲ್ಲಿ ಅನೇಕ ಭಿಕ್ಷುಗಳಿದ್ದರು. ಒಬ್ಬ ಭಿಕ್ಷು ಕಾಯಿಲೆ ಬಿದ್ದ. ಅವನ ಮೈಯೆಲ್ಲಾ ಕೀವು ರಕ್ತಗಳಿಂದ ತುಂಬಿತ್ತು. ಅವುಗಳಿಂದ ದುರ್ವಾಸನೆ ಬರುತ್ತಿತ್ತು. ಜೊತೆಗೆ ಜಗಳಗಂಟ. ಈ ಕಾರಣಗಳಿಂದ ಯಾರೂ ಅವನ ಹತ್ತಿರ ಸುಳಿಯುತ್ತಿರಲಿಲ್ಲ. ಅಸಾಧ್ಯ ನೋವು ಸಂಕಟಗಳನ್ನು ಆತ ಅನುಭವಿಸುತ್ತಿದ್ದ.

ಈ ವಿಷಯ ಭಗವಾನರಿಗೆ ಗೊತ್ತಾಯಿತು. ಅವರು ತಮ್ಮ ಪ್ರೀತಿಯ ಶಿಷ್ಯ ಆನಂದನನ್ನು ಕರೆದುಕೊಂಡು ರೋಗದಿಂದ ಮಲಗಿದ್ದ ಭಿಕ್ಷುವಿನ ಹತ್ತಿರಕ್ಕೆ ಹೋದರು. ಬಿಸಿ ನೀರಿನಿಂದ ರೋಗಿಯ ಮೈಯನ್ನು ಚೆನ್ನಾಗಿ ಭಗವಾನರು ತೊಳೆದರು. ಗಾಯಗಳಿಗೆ ಔಷಧಿ ಹಾಕಿ ಶುದ್ಧವಾದ ಬಟ್ಟೆಯಿಂದ ಅವನ್ನು ಕಟ್ಟಿದರು. ಆನಂತರ ಭಿಕ್ಷುಗಳನ್ನು ಕುರಿತು, “ಭಿಕ್ಷೆಗಳೇ, ರೋಗಿಯನ್ನು ನೀವು ಆರೈಕೆ ಮಾಡಿದಿರಾ?” ಎಂದು ಕೇಳಿದರು. ಸಮೂಹ ಮೌನದಿಂದಿತ್ತು. ಅವರು ಮಾಡಿದ ಅಪರಾಧದ ಅರಿವು ಅವರಿಗಾಗಿತ್ತು. “ಭಿಕ್ಷುಗಳೇ, ನೀವು ರೋಗಿಯನ್ನು ಆರೈಕೆ ಮಾಡಿದರೆ, ನನ್ನನ್ನು ಆರೈಕೆ ಮಾಡಿದಂತೆ. ಇನ್ನು ಮೇಲೆ ನಿಮ್ಮಲ್ಲಿ ಯಾರು ಕಾಯಿಲೆ ಬಿದ್ದರೂ, ಅವನನ್ನು ಸರಿಯಾಗಿ ನೋಡಿಕೊಳ್ಳಿ” ಎಂದು ಉಪದೇಶ ಮಾಡಿದರು.

 

ಭಗವಾನರು ರೋಗಿಯ ಗಾಯಗಳಿಗೆ ಔಷಧ ಹಾಕಿ ಬಟ್ಟೆ ಕಟ್ಟಿದರು.

ರೋಗಿಯಾದ ಭಿಕ್ಷುವಿಗೆ ಭಗವಾನರು ಹೇಳಿದುದು ಗೊತ್ತಾಯಿತು. ಭಗವಾನರು ಮತ್ತೆ ಬಂದಾಗ ತನ್ನ ತಪ್ಪನ್ನು ಒಪ್ಪಿಕೊಂಡ. ಮುಂದೆ ಜಗಳವಾಡುವುದಿಲ್ಲ ಎಂದು ಮನಸ್ಸು ಮಾಡಿದ.

 

ಪವಾಡಗಳು ಬೇಡ

ಭಗವಾನರ ಶಿಷ್ಯರಲ್ಲಿ ಅಸಾಧಾರಣ ಶಕ್ತಿಯನ್ನು ಪಡೆದವರೂ ಇದ್ದರು. ಅವರಲ್ಲಿ ಕಾಶ್ಯಪ ಎಂಬುವನು ಒಬ್ಬನು. ಅವನು ಪವಾಡಗಳನ್ನು ಮಾಡಬಲ್ಲವನಾಗಿದ್ದನು. ಅವನೊಮ್ಮೆ ರಾಜಗೃಹದಲ್ಲಿ ಜೋತಿಕ್ಷ ಎಂಬ ಗೃಹಸ್ಥನೊಬ್ಬನು ಕಟ್ಟಿದ ಪಂಥವನ್ನು ಒಪ್ಪಿಕೊಂಡನು. ಜೋತಿಕ್ಷನು ರತ್ನಗಳಿಂದ ಕೂಡಿದ ಒಂದು ಗಂಧದ ಪಾತ್ರೆಯನ್ನು ಒಂದು ಬಹು ಉದ್ದದ ಬೊಂಬಿನ ಮೇಲೆ ತಲೆಕೆಳಗು ಮಾಡಿ ಇಟ್ಟಿದ್ದನು. ಏಣಿಯನ್ನು ಹಾಕದೆ, ಯಾವ ಸಾಧವನ್ನು ಉಪಯೋಗಿಸದೆ, ಯಾರು ಬೇಕಾದರೂ ಈ ರತ್ನದ ಪಾತ್ರೆಯನ್ನು ತೆಗೆದುಕೊಂಡು ಹೋಗಬಹುದೆಂಬುದೇ ಪಂಥ. ಕಾಶ್ಯಪನು ಬೊಂಬಿನ ಹತ್ತಿರ ಹೋಗಿ ತನ್ನ ಕೈಯನ್ನು ಎತ್ತಿದನು. ಆಶ್ಚರ್ಯವೋ ಆಶ್ಚರ್ಯ! ಅವನ ಕೈ ಬೆಳೆಯುತ್ತಾ ಹೋಯಿತು. ಬೊಂಬಿನ ಎತ್ತರಕ್ಕೂ ಬೆಳೆಯಿತು. ಕಾಶ್ಯಪ ರತ್ನಗಳಿಂದ ಕೂಡಿದ ಪಾತ್ರೆಯನ್ನು ಸುಲಭವಾಗಿ ತೆಗೆದನು.

ಭಗವಾನರ ಕೆಲವು ಶಿಷ್ಯರು ಸಂಭ್ರಮದಿಂದ ಭಗವಾನರಿಗೆ ಈ ಸಮಾಚಾರವನ್ನು ತಿಳಿಸಿದರು. ಶಿಷ್ಯರ ವರ್ತನೆಯನ್ನು ಕಂಡು ಭಗವಾನರಿಗೆ ಬೇಸರವಾಯಿತು. ಅವರು ಹೇಳಿದರು, “ಪವಾಡಗಳನ್ನು ಮಾಡಿ ಜನರಿಗೆ ಮರುಳು ಮಾಡುವುದು ತಪ್ಪು. ಇನ್ನು ಮೇಲೆ ಅಂಥವನ್ನು ಮಾಡುವ ಭಿಕ್ಷು ಸಂಘದಲ್ಲಿ ಇರಲು ಅನರ್ಹ. ಇದು ಇಂದಿನಿಂದ ನಿಯಮ”.

ಭಗವಾನ್ ಬುದ್ಧರು ತೋರಿಸಿದ ದಾರಿ

ಅಜ್ಞಾನವನ್ನು ದೂರ ಮಾಡಿ ಮೈತ್ರಿ ಮತ್ತು ಕರುಣೆಗಳನ್ನು ಬೆಳೆಸುವ ತಮ್ಮ ಧರ್ಮವನ್ನು ಭಗವಾನರು ಸುಮಾರು ನಲವತ್ತೈದು ವರ್ಷಗಳ ಕಾಲ ಪ್ರಸಾರ ಮಾಡಿದರು. ತಾವು ಬೋಧಿಸಿದ ಧರ್ಮದ ಸಾರವನ್ನೇಲ್ಲಾ ಒಂದು ಪದ್ಯದಲ್ಲಿ ಸಂಗ್ರಹವಾಗಿ ಹೇಳಿದ್ದಾರೆ.

ಸಬ್ಬ ಪಾಪಸ್ಯ ಅಕರಣಂ |
ಕುಸಲಸ್ಸ ಉಪಸಂಪದಾ |
ಸಚಿತ್ತ ಪರಿಯೋದ ಪರನಂ |
ಏತಂ ಬುದ್ಧಾನುಸಾಸನಂ |

(ಯಾವ ಪಾಪವನ್ನೂ ಮಾಡದಿರುವುದು, ಕುಶಲವನ್ನು ಸಂಪಾದಿಸುವುದು, ಚಿತ್ತವನ್ನು ಶುದ್ಧಗೊಳಿಸುವುದು, ಇದೇ ಬುದ್ಧರ ಶಾಸನ).

ಈ ಪದ್ಯವೂ ಪಾಲಿಭಾಷೆಯಲ್ಲಿದೆ. “ಧಮ್ಮಪದ” ಎಂಬ ಗ್ರಂಥದಲ್ಲಿ ಮೇಲಿನ ಪದ್ಯದಂಥ ೪೨೩ ಪದ್ಯಗಳು ಸಂಗ್ರಹವಾಗಿವೆ. ತಮ್ಮ ಶಿಷ್ಯರಿಗೆ ಅವರು ಹೇಳಿದರು:

“ಭಿಕ್ಷುಗಳೇ, ಮೊದಲಿನಲ್ಲಿ, ಮಧ್ಯದಲ್ಲಿ, ಕೊನೆಯಲ್ಲಿ ಎಲ್ಲ ಭಾಗಗಳಲ್ಲಿಯೂ ಒಳ್ಳೆಯದೇ ಆಗಿರುವ ಈ ಧರ್ಮವನ್ನು ಬಹು ಜನರ ಹಿತಕ್ಕಾಗಿ, ಬಹು ಜನರ ಸುಖಕ್ಕಾಗಿ, ಲೋಕದ ಮೇಲಿನ ಅನುಕಂಪೆಯಿಂದ ಪ್ರಸಾರ ಮಾಡಿ. ನಿಮ್ಮಲ್ಲಿ ಇಬ್ಬರು ಒಂದೇ ದಿಕ್ಕಿನಲ್ಲಿ ಹೋಗುವುದು ಬೇಡ. ಗ್ರಾಮ ಗ್ರಾಮಗಳಿಗೆ ಹೋಗಿ ಶುಭಕರವಾದ ಮಂಗಳಕರವಾದ ಈ ಧರ್ಮವನ್ನು ತಿಳಿಸಿ. ಹಾಗೆ ಮಾಡುವಾಗ ಗ್ರಾಮಸ್ಥರಿಗೆ ಯಾವ ರೀತಿಯಲ್ಲೂ ಭಾರವಾಗದಿರಿ. ಪುಷ್ಪಗಳ ಬಣ್ಣ, ಸುವಾಸನೆ ಕೆಡಿಸದೆ ಅವುಗಳ ರಸವನ್ನು ಮಾತ್ರ ಸಂಗ್ರಹಿಸಿ ಅವು ಫಲಿಸುವಂತೆ ಮಾಡುವ ಭ್ರಮರಗಳಂತೆ ನೀವು ಜನರಿಗೆ ಯಾವ ಅನಾನುಕೂಲವೂ ಆಗದಂತೆ ಭಿಕ್ಷೆಯನ್ನು ಸ್ವೀಕರಿಸಿ ಅವರಿಗೆ ಒಳ್ಳೆಯದನ್ನು ಮಾಡಿ”.

ಜಾತಕ ಕಥೆಗಳು

ಬುದ್ಧರ ಹಿಂದಿನ ಜನ್ಮಗಳನ್ನು “ಬೋಧಿಸತ್ವ” ಎನ್ನುತ್ತಾರೆ. ಮುಂದೆ ಬುದ್ಧ ಭಗವಾನನಾದ ಸಿದ್ಧಾರ್ಥ ಗೌತಮನೂ ಅನೇಕ ಬೊಧಿಸತ್ವ ಜನ್ಮಗಳನ್ನೆತ್ತಿದ್ದ. ಇಂಥ ಐನೂರು ನಲವತ್ತೇಳು ಕಥೆಗಳು “ತ್ರಿಪಿಟಿಕ”ದಲ್ಲಿವೆ. ಅವನ್ನು ಜಾತಕ ಕಥೆಗಳು ಎಂದು ಕರೆಯುತ್ತಾರೆ. ಒಂದೊಂದು ಕಥೆಯೂ ಬೋಧಿಸತ್ವ ಪರರಿಗಾಗಿ ಮಾಡಿದ ತ್ಯಾಗ, ಸಹಿಸದ ಕಷ್ಟ, ತೋರಿಸಿದ ದಯೆ-ಇವುಗಳ ಕಥೆಯೇ ಆಗಿದೆ. ಅವುಗಳಲ್ಲಿ ಒಂದನ್ನು ಇಲ್ಲಿ ಕೊಟ್ಟಿದೆ.

ಹಿಂದೊಂದು ಜನ್ಮದಲ್ಲಿ ಬುದ್ಧ ಭಗವಾನರು ಯತಿಯಾಗಿದ್ದರು. ಒಂದು ದಟ್ಟವಾದ ಕಾಡಿನಲ್ಲಿ ಆ ಯತಿ ತಪಸ್ಸನ್ನು ಮಾಡುತ್ತಿದ್ದ. ಕಾಡಿನಲ್ಲಿ ಒಂದು ದೊಡ್ಡ ಬೆಟ್ಟ; ಆಳವಾದ ಕಣಿವೆ. ಒಮ್ಮೆ ಬೆಟ್ಟದ ಮೇಲೆ ಹೋಗುತ್ತಿದ್ದ ಯತಿ ಆಕಸ್ಮಾತ್ ಕಣಿವೆಯ ಕಡೆ ನೋಡಿದ. ಅಲ್ಲಿ ಕರುಳು ಕತ್ತರಿಸುವ ಒಂದು ದೃಶ್ಯ ಕಂಡ. ಒಂದು ಹುಲಿ ಮತ್ತು ಅದರ ಮರಿ ಕಂಡು ಬಂದವು. ತಾಯಿ ಹುಲಿಯು ಆಹಾರವಿಲ್ಲದೆ ಸೊರಗಿ ಹೋಗಿತ್ತು. ಹಸಿವನ್ನು ತಾಳಲಾರದೆ ತನ್ನ ಮರಿಯನ್ನೇ ತಿನ್ನುವ ಯತ್ನದಲ್ಲಿತ್ತು. ಯತಿಯ ಹೃದಯ ಬಿರಿಯಿತು: “ಅಯ್ಯೋ, ಇದೆಂಥ ಅನ್ಯಾಯ, ರಕ್ಷಿಸಬೇಕಾದ ತಾಯಿಯೇ ತನ್ನ ಕರುಳ ಕುಡಿಯನ್ನು ಭಕ್ಷಿಸಬೇಕಾದ ಸಂದರ್ಭ ಬಂದಿದೆಯಲ್ಲಾ! ಇದಕ್ಕೆಲ್ಲಾ ಕಾರಣ ಹೊಟ್ಟೆ. ಈ ಹಸಿವಿನಿಂದ ಜೀವನ ಧರ್ಮಕ್ಕೆ ವಿರುದ್ಧವಾದ ಘೋರವಾದ ಕೃತ್ಯ ನಡೆದು ಹೋಗುತ್ತಿದೆ. ಇದನ್ನು ತಪ್ಪಿಸಬೇಕು. ಇದಕ್ಕಿರುವುದು ಒಂದೇ ದಾರಿ. ಅದೇ ಹುಲಿಗೆ ನನ್ನ ದೇಹವನ್ನೊಪ್ಪಿಸುವುದು”. ತನ್ನ ದೇಹ ಒಂದು ಘೋರ ಅಕಾರ್ಯವನ್ನು ತಪ್ಪಿಸುವುದೆಂದು ಯತಿಗೆ ಆನಂದವಾಯಿತು. ಮರುಕ್ಷಣವೇ ಕಣಿವೆಯೊಳಕ್ಕೆ ಬಿದ್ದ. ಹುಲಿ ಅವನ ದೇಹವನ್ನು ಗಬಗಬನೆ ತಿಂದಿತು. ತೃಪ್ತಿ ಪಟ್ಟಿತು. ಯತಿಯ ತ್ಯಾಗ ಮಾತೃ ಧರ್ಮವನ್ನು ಉಳಿಸಿತು.

ಮಹಾ ಪರಿನಿರ್ವಾಣ

ಬುದ್ಧ ಭಗವಾನರಿಗೆ ಮುಪ್ಪು ಬಂತು. ನಲವತ್ತೈದು ವರ್ಷಗಳ ಕಾಲ ಅವರೂ ಅವರ ಶಿಷ್ಯರೂ ಊರಿಂದೂರಿಗೆ ನಡಿಗೆಯಲ್ಲೇ ಹೋಗಿ ಧರ್ಮ ಪ್ರಸಾರ ಮಾಡಿದ್ದರು.

ಒಂದು ದಿನ ಅಸಾಧ್ಯ ನೋವು ಕಾಣಿಸಿಕೊಂಡಿತು. ತಮ್ಮ ಕೊನೆಯ ಕಾಲ ಬಂತೆಂದು ಅವರಿಗೆ ಗೊತ್ತಾಯಿತು.

ಪಾವ ಎಂಬ ಹಳ್ಳಿಗೆ ಹೋದರು. ಅಲ್ಲಿ ಛುಂದ ಎಂಬ ಕಮ್ಮಾರನಿದ್ದ. ಅವನು ಭಗವಾನರನ್ನು ಭಿಕ್ಷೆಗೆ ಕರೆದ. ಛುಂದನ ಮನೆಯಲ್ಲಿ ಊಟ ಮಾಡಿದ ಮೇಲೆ ಭಗವಾನರಿಗೆ ಸಹಿಸಲಸಾಧ್ಯವಾದ ನೋವು ಕಾಣಿಸಿಕೊಂಡಿತು. ಅತಿಸಾರ ರೋಗ ಬಂತು. ಎಲ್ಲವನ್ನೂ ಸಹಿಸಿಕೊಂಡರು. ಮನಸ್ಸನ್ನು ಸಮಸ್ಥಿತಿಯಲ್ಲಿಯೇ ಉಳಿಸಿಕೊಂಡರು. ಅಲ್ಲಿಂದ ಕುಶಿನಾರಕ್ಕೆ ಹೊರಟರು.

ಕುಶಿನಾರದ ದಾರಿಯಲ್ಲಿ ಆನಂದನನ್ನು ಕುರಿತು, “ಆನಂದ, ಸುಜಾತ ಕೊಟ್ಟ ಆಹಾರ ಎಷ್ಟು ಅಮೂಲ್ಯವಾದದ್ದೋ ಅದಕ್ಕಿಂತ ಅಮೂಲ್ಯವಾದುದು ಛುಂದನ ಭಿಕ್ಷೆ. ಸುಜಾತಳ ಆಹಾರವನ್ನುಂಡು ಬೋಧಿಯನ್ನು ಪಡೆದೆ. ಛುಂದನ ಮನೆಯ ಅನ್ನವನ್ನುಂಡು ಮಹಾ ಪರಿನಿರ್ವಾಣವನ್ನು ಪಡೆಯುತ್ತಿದ್ದೇನೆ. ಆದುದರಿಂದ ಛುಂದನ ಮನೆಯಲ್ಲಿ ಊಟ ಮಾಡಿದ್ದರಿಂದ ನನಗೆ ಕಾಯಿಲೆ ಬಂತು ಎಂದು ಯಾರೂ ಆಕ್ಷೇಪಿಸಬೇಡಿ” ಎಂದರು.

ಕುಶಿನಾರಕ್ಕೆ ಹೋಗುವಾಗ ಪುಕ್ಷುಸ ಎಂಬುವನು ಭಗವಾನರಿಗೆ ಪ್ರಣಾಮ ಮಾಡಿ ತನ್ನನ್ನು ಸ್ವೀಕರಿಸಬೇಕೆಂದು ಕೇಳಿಕೊಂಡ ಅವನು “ಮಲ್ಲ” ಎಂಬ ಕುಲಕ್ಕೆ ಸೇರಿದವನು. ಆಗಿನ ಕಾಲದಲ್ಲಿ ಆ ಜನರನ್ನು ತುಚ್ಛವಾಗಿ ಕಾಣುತ್ತಿದ್ದರು. ಭಗವಾನರು ಪುಕ್ಷುಸನನ್ನು ಶಿಷ್ಯನನ್ನಾಗಿ ಸ್ವೀಕರಿಸಿ ಧರ್ಮಬೋಧೆ ಮಾಡಿದರು. ಪುಕ್ಷುಸನೂ ಅವನ ಕುಲದವರೂ ಧನ್ಯರಾದೆವು ಎಂದುಕೊಂಡರು.

ಭಗವಾನರೂ ಆನಂದ ಮತ್ತು ಇತರ ಶಿಷ್ಯರೊಡನೆ ಕುಶಿನಾರದ ಹತ್ತಿರವಿದ್ದ ಶಾಲವೃಕ್ಷದ ತೋಪಿಗೆ ಬಂದರು. ಅಕಾಲವಾದರೂ ಅವಳಿ ಜವಳಿಗಳಂತಿದ್ದ ಎರಡು ವೃಕ್ಷಗಳು ಹೂವಿನಿಂದ ತುಂಬಿದ್ದವು. ಆನಂದನನ್ನು ಕುರಿತು, “ಆನಂದ, ಆ ಎರಡು ಮರಗಳ ಮಧ್ಯೆ ಉತ್ತರಕ್ಕೆ ತಲೆದಿಂಬನ್ನು ಹಾಕಿ ಹಾಸಿಗೆಯನ್ನು ಹಾಸು” ಎಂದು ಭಗವಾನರು ಹೇಳಿದರು. ಭಗವಾನರು ಹೇಳಿದಂತೆ ಆನಂದ ಮಾಡಿದ. ಅಕಾಲದಲ್ಲಿ ಆ ವೃಕ್ಷಗಳು ಹೂ ಬಿಟ್ಟದ್ದನ್ನು ನೋಡಿ ಭಗವಾನರಿಗೆ ಪ್ರಕೃತಿಯು ತೋರಿಸಿದ ಗೌರವಕ್ಕಾಗಿ ಆನಂದ ಸಂತೋಷಪಟ್ಟ. ಭಗವಾನರು “ಆನಂದ, ಇಂಥ ಘಟನೆಗಳಿಂದ ತಥಾಗಥ ದೊಡ್ಡವನಾಗುವುದಿಲ್ಲ. ಅವನು ಹೇಳಿದಂತೆ ನೀವು ನಡೆದಾಗ ಅವನಿಗೆ ತಕ್ಕ ಗೌರವ ತೋರಿಸಿದಂತಾಗುತ್ತದೆ” ಎಂದು ಮೃದುವಾಗಿ ಹೇಳಿದರು. ಆನಂದ ತನ್ನ ತಪ್ಪನ್ನು ಅರಿತುಕೊಂಡ. ಭಗವಾನರು ಆನಂದ ಹಾಸಿದ್ದ ಹಾಸಿಗೆಯ ಮೇಲೆ ಮಲಗಿಕೊಂಡರು.

ಕೊನೆಯ ಗಳಿಗೆ ಹತ್ತಿರ ಬರುತ್ತಿತ್ತು. ಉಕ್ಕು ಬರುತ್ತಿದ್ದ ದುಃಖವನ್ನು ಆನಂದನಿಂದ ತಡೆಯಲಾಗಲಿಲ್ಲ. ಅಳಲು ಪ್ರಾರಂಭ ಮಾಡಿದ. ಆಗ ಭಗವಾನರು “ಇದೇನು, ಆನಂದ! ಮುಪ್ಪು ಮತ್ತು ಸಾವುಗಳನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ನಿನಗೆ ಗೊತ್ತಿದೆಯಲ್ಲಾ! ನನ್ನ ಕೆಲಸ ಮುಗಿಯಿತು. ಹೊರಡುತ್ತಿದ್ದೇನೆ. ನೀನು ಅಳಬೇಡ. ನನ್ನ ಅನಂತರೂ ಬುದ್ಧರು ಬರುತ್ತಾರೆ. ಒಂದು ಲೋಕವನ್ನು ಪಾವನಗೊಳಿಸುತ್ತಾರೆ” ಎಂದರು.

ಭಗವಾನರು ಶಿಷ್ಯರಿಗೆ ಕಡೆಯ ಉಪದೇಶವನ್ನು ಮಾಡಿದರು. “ಧರ್ಮ ಶಾಶ್ವತವಾದುದು, ಎಚ್ಚರಿಕೆಯಿಂದ ನಿಮ್ಮ ಉದ್ಧಾರವನ್ನು ಮಾಡಿಕೊಳ್ಳಿ” ಎಂದರು.

ವೈಶಾಖ ಶುದ್ಧ ಪೂರ್ಣಿಮೆಯ ದಿನ ಮರದ ಕೆಳಗೆ ಹುಟ್ಟಿದ ರಾಜಕುಮಾರ ಸಿದ್ಧಾರ್ಥ. ಇನ್ನೊಂದು ವೈಶಾಖ ಶುದ್ಧ ಪೂರ್ಣಿಮೆಯ ದಿನ ಮತ್ತೊಂದು ಮರದ ಕೆಳಗೆ ಬೋಧಿಯನ್ನು ಪಡೆದು ಬುದ್ಧರಾಗಿ, ಮತ್ತೊಂದು ವೈಶಾಖ ಶುದ್ಧ ಪೂರ್ಣಿಮೆಯ ದಿನ ಮರಗಳ ಕೆಳಗೆ ಮಹಾ ಪರಿನಿರ್ವಾಣವನ್ನು ಹೊಂದಿದರು.

ಬುದ್ಧನಂತ ಮಹಾಪುರುಷನನ್ನು ಪಡೆದ ಭಾರತ ದೇಶ ಧನ್ಯ. ಅವರು ಈ ಪ್ರಪಂಚದಿಂದ ಹೊರಟುಹೋಗಿ ಎರಡು ಸಾವಿರದ ಐನೂರು ವರ್ಷಗಳ ಮೇಲಾಯಿತು. ಮಾನವಕುಲ ಇರುವವರೆಗೂ ಅವರ ಹೆಸರು ಪಾವನವಾಗಿಯೇ ಉಳಿಯುತ್ತದೆ.