ಬುಧ ಗ್ರಹದ ಛೇದನೋಟ

ನಮ್ಮ ಸೌರವ್ಯೂಹದಲ್ಲಿ ಸೂರ್ಯನಿಗೆ ಬಹಳ ಹತ್ತಿರದಲ್ಲಿರುವುದು ಬುಧ ಗ್ರಹ (Mercury). ಬುಧ ಗ್ರಹ ಚಿಕ್ಕದಾಗಿ ಸೂರ್ಯನಿಗೆ ಹತ್ತಿರವಿರುವುದರಿಂದ ದೂರದರ್ಶಕದ ಸಹಾಯವಿಲ್ಲದೆ ಭೂಮಿಯಿಂದ ನೋಡುವುದು ಆಗಾಗ್ಗೆ ಕಷ್ಟಕರ. ಬುಧ ಗ್ರಹವನ್ನು ಕೆಲವು ಬಾರಿ ಮಾತ್ರ ಸೂರ್ಯಾಸ್ತವಾದ ತಕ್ಷಣ ಅಥವಾ ಸೂರ್ಯೋದಯಕ್ಕೆ ಸ್ವಲ್ಪಮುಂಚೆ ನೋಡಬಹುದು.

ಮೆಸೆಂಜರ್ ತೆಗೆದ ಚಿತ್ರ

ಬುಧ ಗ್ರಹದ ಮೊದಲ ಛಾಯಾಚಿತ್ರವನ್ನು ಮರೈನರ್ 10 ನೌಕೆ  ಮಾರ್ಚಿ 29, 1974ರಲ್ಲಿ ದೊರಕಿಸಿಕೊಟ್ಟಿತು. ಬುಧ ಗ್ರಹವು ಉಳಿದ ಗ್ರಹಗಳಿಗಿಂತ ಶೀಘ್ರವಾಗಿ ಸೂರ್ಯನ ಸುತ್ತ ಸುತ್ತುತ್ತದೆ. ಪ್ರಾಚೀನ ಕಾಲದಲ್ಲಿ ರೋಮನ್ನರು ಬುಧ ಗ್ರಹವನ್ನು ತಮ್ಮ ಪುರಾಣ ಕಥೆಗಳಲ್ಲಿ ದೇವತೆಗಳ ದೂತ (ಸಂದೇಶಗಳನ್ನು ಬೇಗ ಮುಟ್ಟಿಸುವವನು) ಎಂದು ವರ್ಣಿಸಿದ್ದಾರೆ. ಚಂದ್ರನಂತೆ ಬುಧ ಕೂಡ ಧಾತುವಿನ ತೆಳ್ಳನೆಯ ಪದರದಿಂದ ಕವಿದಿರುತ್ತದೆ.

ಚಂದ್ರನಲ್ಲಿರುವಂತೆ ಇದರಲ್ಲೂ ವಿಶಾಲ ಹಾಗೂ ಮಟ್ಟಸವಾದ ಪ್ರದೇಶ, ಏರಿ ಹತ್ತಲು ಕಷ್ಟವಾದ ಪ್ರಪಾತ ಮತ್ತು ಹಲವಾರು ಆಳವಾದ ಕುಳಿಗಳು ಇವೆ. ಕೆಲೋರಿಸ್ ಎಂಬ ಕುಳಿಯ ಉಗಮಕ್ಕೆ ಕಾರಣವೇನು ಎಂಬುದು ಇನ್ನೂ ತಿಳಿದಿಲ್ಲ. ಇದು ಬಹಳ ದೊಡ್ಡದಾಗಿದ್ದು ಭಾರೀ ಆಘಾತದ ಸುಳಿವನ್ನು ನೀಡುತ್ತದೆ. ಬಹುಶಃ ಬುಧ ಗ್ರಹ ಸೃಷ್ಟಿಯಾಗುವ ಮೊದಲೇ ಇನ್ನ್ಯಾವುದೋ ಕಾಯ ಅಪ್ಪಳಿಸಿರಬಹುದು. ಬುಧ ಗ್ರಹದ ಒಳಭಾಗ ಬಹುತೇಕ ಭೂಮಿಯ ಒಳಭಾಗದಂತೆ ಇದ್ದು ಕಬ್ಬಿಣದಿಂದ ರಚಿತವಾಗಿದೆ ಎಂಬುದು ಅನೇಕ ವಿಜ್ಞಾನಿಗಳ ಅಭಿಪ್ರಾಯ.

ಬುಧ ಗ್ರಹದ್ದು ಒಣ ನೆಲ, ತಾಪ ಬಹಳ ಹೆಚ್ಚು  ಹಾಗೂ ಗಾಳಿಯೇ ಇಲ್ಲದ ನಿರ್ವಾತ ಪ್ರದೇಶ. ಸೂರ್ಯನ ಪ್ರಕಾಶ ಭೂಮಿಗಿಂತ ಬುಧನ ಮೇಲೆ ಪ್ರಬಲವಾಗಿರುತ್ತದೆ. ವಿಜ್ಞಾನಿಗಳ ಪ್ರಕಾರ ಈ ಗ್ರಹದಲ್ಲಿ ಯಾವ ಜೀವಿಗಳೂ ಇಲ್ಲ. ಬುಧ ಗ್ರಹಕ್ಕೆ ಹೋದ ಮೊದಲ ವ್ಯೋಮನೌಕೆ ಮರೈನರ್ 10. ಈ ವ್ಯೋಮನೌಕೆಯು ಬುಧ ಗ್ರಹದ ಛಾಯಾಚಿತ್ರಗಳನ್ನು 1974 ಮತ್ತು 1975ರಲ್ಲಿ ತೆಗೆಯಿತು. ಇವು ಬುಧ ಗ್ರಹದ ಮೇಲ್ಮೈ ವಿವರಗಳನ್ನು ತಿಳಿಸಿಕೊಡುತ್ತವೆ. ಇ೦ತಹ ಈಚಿನ ಪ್ರಯತ್ನದಲ್ಲಿ ಮೆಸೆಂಜರ್ ಎಂಬ ನೌಕೆ 2004ರಲ್ಲಿ ಹಾರಿತು.

ಭೂಮಿಯ ಗುರುತ್ವ ಶಕ್ತಿಯನ್ನು ಬಳಸಿ ಫ್ಲೈ ಬೈ ತಂತ್ರದಿಂದ 2005ರಲ್ಲಿ ದಿಕ್ಕು ಬದಲಿಸಿ 2007ರಲ್ಲಿ ಬುಧವನ್ನು ಸಮೀಪಿಸಿತು. ಮೆಸೆಂಜರ್ 2008ರಲ್ಲಿ ಕಳುಹಿಸಿದ ಚಿತ್ರ ಮೇಲಿನಂತಿದೆ.