ಇದರ ಬಲಿತ ಕಾಯಿಗಳ ಬಹುಕಾಲ ಚೆನ್ನಾಗಿರುತ್ತದೆ. ದೇಶದ ಹಲವಾರು ರಾಜ್ಯಗಳಲ್ಲಿ ಇದರ ಬೇಸಾಯವಿದೆ.

ಪೌಷ್ಟಿಕ ಗುಣಗಳು

೧೦೦ ಗ್ರಾಂ ತಿರುಳಿನಲ್ಲಿರುವ ವಿವಿಧ ಪೋಷಕಾಂಶಗಳು

ತೇವಾಂಶ ೯೬.೫ ಗ್ರಾಂ ಒಟ್ಟು ಖನಿಜ ಪದಾರ್ಥ ೦.೩ ಗ್ರಾಂ
ಶರ್ಕರಪಿಷ್ಟ ೧.೯ ಗ್ರಾಂ ರೈಬೋಪ್ಲೇವಿನ್ ೦.೦೧ ಮಿ.ಗ್ರಾಂ
ಪ್ರೊಟಿನ್ ೦.೪ ಗ್ರಾಮ ಥಯಮಿನ್ ೦.೦೬ ಮಿ.ಗ್ರಾಂ
ಕೊಬ್ಬು ೦.೧ ಗ್ರಾಂ ’ಸಿ’ ಜೀವಸತ್ವ ೧.೦ ಮಿ.ಗ್ರಾಂ
ರಂಜಕ ೨೦ ಮಿ.ಗ್ರಾಮ  ಕ್ಯಾಲ್ಸಿಯಂ ೩೦ ಮಿಗ್ರಾಂ
ಕಬ್ಬಿಣ ೦.೮ಮಿ.ಗ್ರಾಮ    

ಔಷಧೀಯ ಗುಣಗಳು: ಬೂದುಗುಂಬಳದಲ್ಲಿ ಹಲವಾರು ಔಷಧೀಯ ಗುಣಗಳಿವೆ. ಇದು ಶೈತ್ಯಕರಕ ಹಾಗೂ ಮೂತ್ರಕೋಶಕ್ಕೆ ಸಂಬಂಧಿಸಿದ ತೊಂದರೆಗಳನ್ನು ದೂರಗೊಳಿಸುತ್ತದೆ. ಬೀಜಗಳಲ್ಲಿ ಜಂತುನಾಶಕಗುಣಗಳಿವೆ.  ಶಕ್ತಿವರ್ಧಕವೂ ಹೌದು. ಆರ್ಯುವೇಧ ಔಷಧಿ ಪದ್ಧತಿಗಳಲ್ಲಿ ಇದಕ್ಕೆ ವಿಶಿಷ್ಟ ಸ್ಥಾನವಿದೆ. ಇದರ ಕಾಯಿಗಳಿಂದ ಕೂಷ್ಮಾಂಡ ಲೇಹ್ಯ ತಯಾರಿಸುತ್ತಾರೆ. ಕೂಷ್ಮಾಂಡವೆಂದರೆ ಸಂಸ್ಕೃತದಲ್ಲಿ ಬೂದುಗುಂಬಳ. ಬೀಜಗಳ ತೈಲವನ್ನು ತಲೆಗೆ ಹಚ್ಚಿಕೊಂಡರೆ ಕೂದಲು ಸೊಂಪಾಗಿ ಬೆಳೆಯುತ್ತದೆ.

ಉಗಮ ಮತ್ತು ಹಂಚಿಕೆ: ಇದರ ತವರೂರು ಭಾರತ. ಕೆಲವರ ಅಭಿಪ್ರಾಯದಲ್ಲ ಜಾವಾ ಸಹ ತವರೂರು. ಈಗ ಭಾರತದಲ್ಲಿಯೇ ಅಲ್ಲದೆ ಇತರ ರಾಷ್ಟ್ರಗಳಲ್ಲಿ ಸಹ ಇದನ್ನು ಬೆಳೆದು ಬಳಸುತ್ತಾರೆ.

ಸಸ್ಯಸಂಬಂಧ ಮತ್ತು ವರ್ಣನೆ: ಇದು ಕುಕುರ್ಬಿಟೇಸೀ ಕುಟುಂಬಕ್ಕೇ ಸೇರಿದ ವಾರ್ಷಿಕ ಬಳ್ಳಿ. ಕಾಂಡ ಬಲಹೀನ; ಕವಲು ಹಂಬುಗಳು ನೆಲದ ಮೇಲೆ ತೆವಳಿ ಹಬ್ಬುತ್ತವೆ. ಬಳ್ಳಿಗೆ ಆಸರೆ ಸಿಕ್ಕಿದರೆ ನುಲಿ ಬಳ್ಳಿಗಳ ಸಹಾಯದಿಂದ ಮೇಲಕ್ಕೇರಬಲ್ಲದು. ಎಲೆಗಳು ಹೃದಯಾಕಾರ; ಹಸ್ತದಂತೆ, ಅಂಚು ಅಲ್ಲಲ್ಲಿ ಮುಂದಕ್ಕೆ ಚಾಚಿರುತ್ತದೆ. ಎಲೆಗಳು ದಟ್ಟ ಹಸುರು ಬಣ್ಣ, ನರಗಳ ಬಲೆ ಕಟ್ಟು ಸ್ಪುಟ, ಎಲೆಗಳಿಗೆ ತೊಟ್ಟು ಇರುತ್ತದೆ. ಸಸ್ಯಭಾಗಗಳಲ್ಲಿ ತುಪ್ಪಳ ಇರುತ್ತದೆ. ಹೂವು ಏಕಲಿಂಗಿಗಳು, ಗಾತ್ರದಲ್ಲಿ ದೊಡ್ಡವು, ಉದ್ದ ತೊಟ್ಟಿನ ತುದಿಯಲ್ಲಿ ತಲಾ ಒಂದರಂತೆ ಬಿಟ್ಟಿರುತ್ತವೆ. ಹೂದಳಗಳು ಹಳದಿ ಬಣ್ಣ, ಬಟ್ಟಲಿನಂತೆ ಒಂದಕ್ಕೊಂದು ಅಂಟಿಕೊಂಡಿದ್ದು ತುದಿಯಲ್ಲಿ ಅಗಲವಾಗಿ ಹರಡಿರುತ್ತವೆ. ಪರಕೀಯ ಪರಾಗಸ್ಪರ್ಶ; ಜೇನುನೊಣಗಳು ಮುಂತಾಗಿ ನೆರವಾಗುತ್ತವೆ. ಹೀಚು, ಹಸುರು ಬಣ್ಣ, ಅಂಡಾಕರಿತ, ಮೇಲೆಲ್ಲಾ ಉದ್ದನೆಯ ತುಪ್ಪಳ; ಹೀಚು ದೊಡ್ಡದಾಗಿ ವೃದ್ಧಿ ಹೊಂದಿದಂತೆಲ್ಲಾ ಮೇಲೆ ಬೂದಿಯಂತಹ ನವಿರಾದ ಧೂಳು ಕಾಣಿಸಿಕೊಳ್ಳುತ್ತದೆ. ಅದರಿಂದಾಗಿ ಇದಕ್ಕೆ ಬೂದುಗುಂಬಳ ಎಂಬ ಹೆಸರು. ತಿರುಳು ದಪ್ಪ; ಬೆಳ್ಳಗೆ, ರಸಭರಿತ, ತಿರುಳಿನಲ್ಲಿ ಬೀಜ ಹುದುಗಿರುತ್ತವೆ. ಅವುಗಳ ಸಂಖ್ಯೆ ಅಪಾರ, ಅದುಮಿದಂತೆ, ಚಪ್ಪಟೆಯಾಗಿದ್ದು ಬುಡಭಾಗ ಸಂಕುಚಿತಗೊಂಡು, ತುದಿಯತ್ತ ಅಗಲಗೊಂಡಿರುತ್ತವೆ. ಸಿಪ್ಪೆ ಮಾಸಲು ಬಿಳುಪು; ನಯ, ಕಾಯಿಯ ಒಳಗೆ ಪೊಳ್ಳು ಇರುವುದಿಲ್ಲ. ಬೇರು ಸಮೂಹ ನೆಲದಲ್ಲಿ ಸ್ವಲ್ಪ ಆಳವಾಗಿ ಇಳಿದಿದ್ದು, ಮಳೆ ಕಡಿಮೆ ಇದ್ದರೂ ಸಹಿಸಬಲ್ಲದು.

ಹವಾಗುಣ: ಇದಕ್ಕೆ ಬೆಚ್ಚಗಿನ ಹವಾಗುಣ ಸೂಕ್ತ. ಕಡಿಮೆ ಮಳೆಯಾಗುವ ಪ್ರದೇಶಗಳಲ್ಲಿ ಜೂನ್-ಜುಲೈ ತಿಂಗಳುಗಳಲ್ಲಿ ಬಿತ್ತಬಹುದು. ನೀರಾವರಿ ಇದ್ದರೆ ಫೆಬ್ರುವರಿ-ಮಾರ್ಚ್‌ತಿಂಗಳುಗಳಲ್ಲಿ ಬಿತ್ತಿಬೆಳೆಸಬಹುದು.

ಭೂಗುಣ: ನೀರು ಬಸಿಯುವ ಮರಳುಮಿಶ್ರಿತ ಗೋಡು ಮಣ್ಣು ಹೆಚ್ಚು ಸೂಕ್ತ. ತಗ್ಗು ಪ್ರದೇಶಗಳು ಹಾಗೂ ನೀರು ನಿಲ್ಲುವ ಪ್ರದೇಶಗಳಲ್ಲಿ ಬೆಳೆಯಬಾರದು. ಚೌಳು ಮಣ್ಣಿನ ಭೂಮಿ ಸೂಕ್ತವಿರುವುದಿಲ್ಲ.

ತಳಿಗಳು: ತಮಿಳುನಾಡು ಕೃಷಿ ವಿಶ್ವವಿದ್ಯಾನಿಲಯದಲ್ಲಿ ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಈ ದಿಶೆಯಲ್ಲಿಗಮನಾರ್ಹ ಪ್ರಗತಿ ಸಾಧಿಸಲಾಗಿದೆ. ಅಧಿಕ ಇಳುವರಿ ಕೊಡುವ, ಬೇಗ ಕೊಯ್ಲಿಗೆ ಬರುವ ಹಾಗೂ ಸಾಧಾರಣ ಗಾತ್ರದ ಕಾಯಿಗಳನ್ನು ಬಿಡುವ ತಳಿಗಳು ಇನ್ನೂ ಬರಬೇಕಾಗಿದೆ.

. ಕೋ.: ತಮಿಳುನಾಡು ಕೃಷಿ ವಿಶ್ವವಿದ್ಯಾನಿಲಯದ ಕೊಯಮತ್ತೂರು ಕೇಂದ್ರದ ಕೊಡುಗೆ. ಅಧಿಕ ಇಳುವರಿದಾಯಕ. ಕಾಯಿಗಳು ಸಾಧಾರಣ ದೊಡ್ಡವಿರುತ್ತವೆ.

. ಜಿಕೆವಿಕೆ: ಇದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕೊಡುಗೆ. ಬೇಗ ಕೊಯ್ಲಿಗೆ ಬರುವ ಅಧಿಕ ಇಳುವರಿದಾಯಕ ತಳಿ. ಕಾಯಿಗಳು ಸಾಧಾರಣ ದೊಡ್ಡವಿದ್ದು ತಲಾ ೧.೫ ಯಿಂದ ೨.೦ ಕಿ.ಗ್ರಾಂ ತೂಕ ಇರುತ್ತವೆ.

ಇವುಗಳ ಜೊತೆಗೆ ಕೆಲವೊಂದು ಸ್ಥಳೀಯ ತಳಿಗಳೂ ಸಹ ಬೇಸಾಯದಲ್ಲಿ ಕಂಡುಬರುತ್ತವೆ.

ಭೂಮಿ ಸಿದ್ಧತೆ ಮತ್ತು ಬಿತ್ತುವುದು : ೨.೫-೩.೦ ಮೀಟರ್ ಉದ್ದ, ೧.೨ ಮೀಟರ್ ಅಗಲ ಇರುವಂತೆ ಪಾತಿಗಳನ್ನು ಸಿದ್ಧಗೊಳಿಸಿ, ಪೂರ್ಣಪ್ರಮಾಣದ ತಿಪ್ಪೆಗೊಬ್ಬರ, ಅರ್ಧಭಾಗ ಸಾರಜನಕ ಹಾಗೂ ಪೂರ್ಣಪ್ರಮಾಣದ ರಂಜಕಾಂಶದ ರಾಸಾಯನಿಕ ಗೊಬ್ಬರಗಳನ್ನು ಸಮನಾಗಿ ಹರಡಿ ಮಣ್ಣಿನಲ್ಲಿ ಬೆರೆಸಬೇಕು. ಬೀಜವನ್ನು ಒಂದು ರಾತ್ರಿ ನೀರಿನಲ್ಲಿ ನೆನೆಸಿಟ್ಟರೆ ಬೇಗ ಮೂಳೆಯುತ್ತವೆ. ಪ್ರತಿ ಪಾತಿಯಲ್ಲಿ ೩-೪ ಬೀಜ ಊರಿದರೆ ಸಾಕು. ಹೆಕ್ಟೇರಿಗೆ ೫ ಕಿ.ಗ್ರಾಂ ಬೀಜ ಬೇಕಾಗುತ್ತವೆ. ಸುಮಾರು ೫-೬ ದಿನಗಳಲ್ಲಿ ಬೀಜ ಮೊಳೆಯುತ್ತವೆ. ಬಿತ್ತುವ ಮುಂಚೆ ಬೀಜೋಪಚಾರ ಅನುಸರಿಸುವುದು ಉತ್ತಮ; ಒಂದು ಕಿ.ಗ್ರಾಂ ಬೀಜಕ್ಕೆ ೨ ಗ್ರಾಂ ಸೆರಸಾನ್ ಬೆರೆಸಬೇಕು.

ಗೊಬ್ಬರ : ಹೆಕ್ಟೇರಿಗೆ ೧೨.೫ ಟನ್ ತಿಪ್ಪೆಗೊಬ್ಬರ, ೫೦ ಕಿ.ಗ್ರಾಂ ಸಾರಜನಕ ಹಾಗೂ ೫೦ ಕಿ.ಗ್ರಾಂ ರಂಜಕಾಂಶಗಳನ್ನು ಶಿಫಾರಸ್ಸು ಮಾಡಿದೆ. ತಿಪ್ಪೆಗೊಬ್ಬರ ಚೆನ್ನಾಗಿ ಕೊಳೆತಿರಬೇಕು.

ನೀರಾವರಿ : ಮಳೆ ಇಲ್ಲದ ದಿನಗಳಲ್ಲಿಹೆಚ್ಚು ನೀರು ಬೇಕಾಗುತ್ತದೆ. ಬೇಸಿಗೆಯಲ್ಲಿ ೩-೪ ದಿನಗಳಿಗೆ ಒಮ್ಮೆ ಮತ್ತು ಇತರ ಕಾಲಗಳಲ್ಲಿ ವಾರಕ್ಕೊಮ್ಮೆ ನೀರು ಕೊಟ್ಟರೆ ಸಾಕು. ಹಾಯಿಸಿದ ನೀರು ಗಿಡಗಳ ಕಾಂಡವನ್ನು ತಾಕದಂತೆ ಅವುಗಳ ಬುಡದ ಸುತ್ತ ಸ್ವಲ್ಪ ಮಣ್ಣನ್ನು ಏರಿಸುವುದು ಒಳ್ಳೆಯದು.

ಅಂತರ ಬೇಸಾಯ : ಬಿತ್ತನೆಯಾದ ಸುಮಾರು ನಾಲ್ಕುವಾರಗಳ ನಂತರ ಉಳಿದ ಅರ್ಧಭಾಗ ಸಾರಜನಕವನ್ನು ಮೇಲುಗೊಬ್ಬರವಾಗಿ ಕೊಟ್ಟು ಗಿಡಗಳ ಬುಡಕ್ಕೆ ಮಣ್ಣು ಏರಿಸಬೇಕು. ಪ್ರತಿ ಬಳ್ಳಿಗೆ ೩ ರಿಂದ ೪ ಕಾಯಿಗಳನ್ನು ಬಿಟ್ಟು ಉಳಿದವುಗಳನ್ನು ಹೀಚುಗಳಿದ್ದಾಗಲೇ ಕಿತ್ತು ಹಾಕಿದರೆ ದೊಡ್ಡ ಗಾತ್ರದ ಕಾಯಿ ಸಾಧ್ಯ.

ಅದೇ ರೀತಿ ಹಂಬುಗಳ ತುದಿಭಾಗವನ್ನು ಚಿವುಟಿಹಾಕಬಹುದು.

ಕೊಯ್ಲು ಮತ್ತು ಇಳುವರಿ : ಕಾಯಿಗಳು ಪೂರ್ಣಬಲಿತ ನಂತರವೇ ಕೊಯ್ಲು ಮಾಡಬೇಕು. ಸ್ವಲ್ಪ ಭಾಗ ತೊಟ್ಟು ಇರುವಂತೆ ಎಚ್ಚರಿಕೆಯಿಂದ ಕೊಯ್ಲು ಮಾಡಿ ಬಿದಿರಿನ ಬುಟ್ಟಿಗಳಲ್ಲಿಟ್ಟು ಸಾಗಿಸಬೇಕು. ತಂಪು ಹೊತ್ತಿನಲ್ಲಲ್ಲಿ ಕೊಯ್ಲು ಮಾಡಿದರೆ ಕಾಯಿಗಳು ಬಿಸಿಯೇರುವುದಿಲ್ಲ. ಕೊಯ್ಲು ಮೂರು ನಾಲ್ಕು ಸುತ್ತುಗಳಲ್ಲಿ ಮುಗಿಯುತ್ತದೆ. ಬೆಳೆ ಚೆನ್ನಾಗಿ ಫಲಿಸಿದರೆ ಹೆಕ್ಟೇರಿಗೆ ೨೫ ಟನ್ ಇಳುವರಿ ಸಾಧ್ಯ.

ಕೀಟ ಮತ್ತು ರೋಗಗಳು : ಈ ಬೆಳೆಗೆ ಹಾನಿಯುಂಟುಮಾಡುವ ಕೀಟಗಳಲ್ಲಿ ಸಸ್ಯಹೇನು, ಕುಂಬಳದ ದುಂಬಿ ಮತ್ತು ಹಣ್ಣಿನ ನೊಣ ಹಾಗು ರೋಗಗಳಲ್ಲಿ ಚಿಬ್ಬುರೋಗ, ಬೂದಿರೋಗ ಮತ್ತು ನಂಜು ಮುಖ್ಯವಾದುವು. ಕೀಟ ಮತ್ತು ರೋಗಗಳ ಹತೋಟಿ ಕಲ್ಲಂಗಡಿ ಹಣ್ಣಿನ ಬೆಳೆಯಲ್ಲಿದ್ದಂತೆ. ನಂಜು ಪೀಡಿತ ಬಳ್ಳಿಗಳಲ್ಲಿನ ಎಲೆಗಳು ವಿಕಾರಗೊಳ್ಳುತ್ತವೆ. ಅಂತಹ ಗಿಡಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಸಸ್ಯಹೇನು, ಬಿಳಿನೋಣ ಮುಂತಾದುವು ನಂಜು ರೋಗಾಣುಗಳನ್ನು ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ಹರಡುತ್ತವೆ. ರೋಗಪೀಡಿತ ಗಿಡಗಳನ್ನು ಬೇರುಸಹಿತ ಕಿತ್ತು ನಾಶಗೊಳಿಸಬೇಕು ಹಾಗೂ ಕೀಟಗಳ ಹತೋಟಿಗೆ ೧೦ ಲೀಟರ್ ನೀರಿಗೆ ೪೦ ಗ್ರಾಂ ಕಾರ್ಬರಿಲ್ ಬೆರೆಸಿ ಸಿಂಪಡಿಸಬೇಕು.

ಬೀಜೋತ್ಪಾದನೆ : ಬೂದುಗುಂಬಳ ಪರಕೀಯ ಪರಾಗಸ್ಪರ್ಶದ ಬೆಳೆ. ಹೆಕ್ಟೇರಿಗೆ ೫೦೦ ಕಿ.ಗ್ರಾಂ ಬೀಜ  ಸಿಗುತ್ತವೆ.

* * *