ಹಿಂದೂಸ್ಥಾನಿ ಗಾಯಕ ಹಾಗೂ ಹಾಲರ್ಮೋನಿಯಂ ವಾದಕರಾಗಿ ಹೆಸರು ಗಳಿಸಿರುವ ಶ್ರೀ ಬೂದೂರ್ ನಾರಾಯಣಾಚಾರ್ ಅವರು ಕರ್ನಾಟಕದ ಹಿರಿಯ ತಲೆಮಾರಿನ ಸಂಗೀತಗಾರಲ್ಲೊಬ್ಬರು. ರಾಯಚೂರು ಜಿಲ್ಲೆಗೆ ಸೇರಿದ ೬೮ ವರ್ಷ ವಯೋಮಾನದ ಶ್ರೀ ನಾರಾಯಣರಾವ್‌ ಅವರು ಸಂಗೀತಾಭ್ಯಾಸ ಮಾಡಿದ್ದು ಶ್ರೀ ಎ.ವಿ. ಪೂಜಾರ್ ಎಂಬುವವರಲ್ಲಿ.

ಸಂಗೀತದ ಬಗ್ಗೆ ಅಪಾರ ಕಳಕಳಿಯನ್ನಿರಿಸಿಕೊಂಡಿರುವ ಶ್ರೀಯುತರು, ಸಂಗೀತ ಕ್ಷೇತತ್ರದ ಘಟಾನುಘಟಿಗಳಾದ ಶ್ರೀ ಭೀಮಸೇನ್‌ ಜೋಶಿ, ಬಸವರಾಜ ರಾಜಗುರು, ಸಿದ್ಧರಾಮ ಜಂಬಲದಿನ್ನಿ, ಗಂಗೂಬಾಯಿ ಹಾನಗಲ್‌, ಯೋಗಿನಿ ಜೋಗಳೇಕರ ಮುಂತಾದವರಿಗೆ ಹಾರ್ಮೋನಿಯಂ ಸಾಥಿ ನೀಡಿ ಅಪಾರ ಮೆಚ್ಚುಗೆ ಗಳಿಸಿದ್ದಾರೆ. ಶ್ರೀ ನಾರಾಯಣಾಚಾರ್ ಅವರು ಶಾಸ್ತ್ರೀಯ ಸಂಗೀತವನ್ನಲ್ಲದೇ ದಾಸರ ಪದಗಳನ್ನೂ ಶರಣರ ವಚನಗಳನ್ನೂ ಸರಾಗವಾಗಿ ಹಾಡುವ ಸಾಮರ್ಥ್ಯ ಉಳ್ಳವರು. ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಕುರಿತು ಇವರು ರಚಿಸಿದ ಪದಾವಳಿ ತುಂಬಾ ಜನಪ್ರಿಯವಾಗಿದೆ.

ಕರ್ನಾಟಕದ ಕೊಪ್ಪಳ, ಗುಲ್ಬರ್ಗಾ, ಗಂಗಾವತಿಯೂ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಹಾಗೂ ಮುಂಬಯಿ, ಹೈದ್ರಾಬಾದ್‌, ಸೊಲ್ಲಾಪುರ ಮುಂತಾದ ಹೊರ ರಾಜ್ಯಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿರುವ ಶ್ರೀ ನಾರಾಯಣಾಚಾರ್ ಅವರು ಹಲವಾರು ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ. ಇವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೧೯೯೮-೯೯ನೇ ಸಾಲಿನ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿದೆ.