ಕಳ್ಳಹೆಜ್ಜೆ ಇಟ್ಟು ಕತ್ತಲೆ ಮೆಲ್ಲನೆ ಬರುತ್ತಿತ್ತು . ಮುಗಿಲು ನೆಲದ ಮುಖಕ್ಕೆ ಕಪ್ಪು ಹಚ್ಚಿದ ಹೊತ್ತು. ಸ್ವರ್ಗದಿಂದ ಭೂಮಿಗೆ ಒಂದು ಸಿಡಿಲು ಬಿತ್ತು. ಸ್ವರ್ಗದಲ್ಲಿ ಇಂತಹ ಅಮಂಗಲ ಘಟನೆ ನಡೆಯಬೇಕೇಕೆ?

ಒಟ್ಟಿನಲ್ಲಿ ಅದೊಂದು ದುರ್ದಿನ.

ದೇವರಾಜ ಹೀಗೆ ಮಾಡಬಹುದೆ?

ಸಭೆ ಸಭ್ಯರಿಂದ ತುಂಬಿತ್ತು. ಇಂದ್ರ ಅಗ್ರಾಸನದಲ್ಲಿದ್ದ. ಪಕ್ಕದಲ್ಲಿ ಇಂದ್ರಾಣಿ; ಎಡ ಬಲಕ್ಕೆ ಚಾಮರ ಸೇವೆಯವರು.

ದೇವರಾಜ ತನ್ನ ಪತ್ನಿ ಶಚಿಯ ಕೆನ್ನೆಗೆ ಆನಿಸಿ ಏನೋ ಪಿಸುಮಾತು ಆಡುತ್ತಿದ್ದ . ಒಮ್ಮೆಮ್ಮೆ ಇಬ್ಬರಿಗೂ ಮೇರೆದಪ್ಪಿದ ನಗೆ. ಸಭೆಯ ಕಡೆಗೆ ಆತನಿಗೆ ಗಮನವೇ ಇಲ್ಲ.

ಪ್ರವೇಶ ದ್ವಾರದಲ್ಲಿ ದೇವಗುರು ಬೃಹಸ್ಪತಿ ದಯ ಮಾಡಿಸಿದರು. ಸಭೆ ಎದ್ದು ನಿಂತು ವಂದನ ಸಲ್ಲಿಸಿತು.

ಬೃಹಸ್ಪತಿ ದೇವವಂದನೆ ಸ್ವೀಕರಿಸಿ ಮುಂದೆ ಹೆಜ್ಜೆ ಇಟ್ಟರು.

ಇದು ಸ್ವರ್ಗ, ಈತ ಇಂದ್ರ, ಇವರು ದೇವತೆಗಳು. ದೇವತೆಗಳು ತಪ್ಪುಮಾಡಬಾರದು; ದೇವರಾಜನಂತೂ ಮಾಡಲೇಬಾರದು.

ತನ್ನ ಸಭೆಯ, ಸಭ್ಯರ, ಲೋಕದ ಗೌರವ ಕಾಯಬೇಕು. ದೇವಗುರು ಬೃಹಸ್ಪತಿ ಹುಬ್ಬಿನಲ್ಲಿ ಗಂಟು; ಕಣ್ಣಲ್ಲಿ ಕೆಂಪು!

ಕೋಪವನ್ನು ಗೆದ್ದ ಮೇಲೆಯೇ ದೊಡ್ಡವರಾಗುತ್ತಾರೆ.

ದೇವಗುರು ಎಲ್ಲಕ್ಕೂ ದೊಡ್ಡವನಲ್ಲವೆ? ಅವನಿಗೆ ಕೋಪ? ಇದೆಂತಹ ವಿರೋಧ? ಅಭಾಸ?

ಅವರಿಗೆಲ್ಲಿಯ ಕೋಪ?

ಜಾರಿದ ಚಿಕ್ಕವರ ಕಾಲನ್ನು ದಾರಿಯ ಮೇಲಿರಿಸಲು ದೊಡ್ಡವರು ಕಣ್ಣು ಕೆಂಪಗೆ ಮಾಡಲೇಬೇಕು.

ಗುರುಗಳು ಸಭೆಗೆ ಬಂದರೂ ಇಂದ್ರ ಗೌರವ ತೋರಿಸಲಿಲ್ಲ. ಬೃಹಸ್ಪತಿಗಳು ತಮಗೆ ಮರ್ಯಾದೆ ಸಲ್ಲಲಿಲ್ಲ ಎಂದು ಕಿಡಿಯಾಗಲಿಲ್ಲ. ದೊಡ್ಡವರಿಗೆ ಇನ್ನೊಬ್ಬರು ಕೊಟ್ಟರೇನೇ ಮರ್ಯಾದೆ-ಮಾನ ಬರಬೇಕಾಗಿಲ್ಲ. ಅವರು ಸರ್ವದಾ ಸಂಪನ್ನರು.

ದೊಡ್ಡವರನ್ನು ಮನ್ನಿಸುವುದರಿಂದ ಚಿಕ್ಕರವರಿಗೆ ಕಲ್ಯಾಣವಾಗುತ್ತದೆ, ಮಂಗಲವಾಗುತ್ತದೆ.

ಬೃಹಸ್ಪತಿಗಳಿಗೆ ಇಂದ್ರ ಚಿಕ್ಕವನೇ ಅಲ್ಲವೆ ?

ಇಂದ್ರ ತನ್ನ ಕ್ಷೇಮಕ್ಕೆ ತಪ್ಪಬಾರದು. ಮಂಗಲಕ್ಕೆ ಎರವಾಗಬಾರದು. ಆತನಿಗೆ ಕ್ಷೇಮ ಇಲ್ಲದೆ ಹೋದರೆ ಸ್ವರ್ಗ ಸುರಕ್ಷಿತವಲ್ಲ. ಇದು ಸ್ವರ್ಗದ ಕ್ಷೇಮ ಚಿಂತಿಸುವ ಗುರುವಿನ ಆಶಯ.

ಸಭೆಯಿಂದ ತಿರುಗಿ ಹೋಗುವ ಬೃಹಸ್ಪತಿಯ ಬೆನ್ನು ಕಾಣಿಸಿದಾಗಲೇ ದೇವೆಂದ್ರನ ಮತ್ತು ಇಳಿಯಿತು.

ಹೊರಟೇ ಹೋದರಲ್ಲ!

ಸಿಂಹಾಸನದಿಂದ ಚಂಗನೆ ಹಾರಿ ಬಾಗಿಲಬಳಿ ಬರುತ್ತಾನೆ. ಬೃಹಸ್ಪತಿ ಹೊರಟೇ ಹೋಗಿದ್ದರು.

ತನ್ನ ಅವಿನಯ ಆತನನ್ನು ಇರಿಯಿತು. ತುಂಬ ಗಾಸಿಗೊಂಡ. ಪರಿಸ್ಥಿತಿ ಅರ್ಥವಾಯಿತು. ಮುಂದಿನ ಅನರ್ಥ ಚಿಂತಿಸಿ ಅದುರಿದ.

ಹೋದ ಗುರುವು ಮರಳಿ ಬರಲಿಲ್ಲ; ಇರುವ ಸುಳಿವೂ ದೊರೆಯಲಿಲ್ಲ. ಇಂದ್ರನ ರಾಜಕೀಯದಲ್ಲಿ ಹಲವು ಬಿಕ್ಕಟ್ಟು ತಲೆದೋರಿದವು. ಸಮಸ್ಯೆಗಳು ಬೆಳೆಯ ಹತ್ತಿದವು. ಪರಿಹಾರ ಇಲ್ಲದಾಯ್ತು.  ಮಾರ್ಗದರ್ಶನವಿಲ್ಲದೆ ರಾಜ್ಯಭಾರ ಕುಂಟ ಹತ್ತಿತು. ಆಡಳಿತ ಬಿಗುವಿಲ್ಲದೆ ಕುಸಿಯಹತ್ತಿತು.

ಹಲವು ದೇವತೆಗಳು ದೇವಸಭೆಯಲ್ಲಿ ಇಂದ್ರನ ಮೇಲೆಯೇ ನೇರವಾಗಿ ಆರೋಪ ಮಾಡಿದರು.

ಈ ತಪ್ಪಿಗೆಲ್ಲ ನೀನೆ ಹೊಣೆ.

ದೇವ ಗುರುವಿನ ಸಲಹೆ, ಮಾರ್ಗದರ್ಶನ ಸ್ವರ್ಗಕ್ಕೆ ಬೇಕು. ಅಧಿಕಾರದಿಂದ ನಿನಗೆ ‘ಅಹಂ ಬಂದಿದೆ.

ಇಂದ್ರ ಎಲ್ಲ ಕೇಳಿಯೂ ತೆಪ್ಪಗಿದ್ದ.

ಅಧಿಕಾರ ಬಿಡಲೊಲ್ಲ.  ಪರಿಸ್ಥಿತಿ ಸುಧಾರಿಸಲೊಲ್ಲ.

ಬ್ರಹ್ಮನ ಬಳಿಗೆ

ಕೊನೆಗೆ ದೇವತೆಗಳ ಒಂದು ಶಿಷ್ಟಮಂಡಲ ಬ್ರಹ್ಮನ ಹತ್ತಿರ ಹೋಯಿತು.

“ಇಂದ್ರನ ಒಂದು ತಪ್ಪು ಸ್ವರ್ಗದ ಹಲವು ಸಮಸ್ಯೆ, ತೊಂದರೆಗಳಿಗೆ ಕಾರಣವಾಯಿತು.” ಇಂದ್ರ ತಪ್ಪು ತಿದ್ದಿಕೊಳ್ಳಲೂ ಇಲ್ಲ; ಸಮಸ್ಯೆ ಪರಿಹರಿಸಲೂ ಇಲ್ಲ.

“ಈಗ ಸ್ವರ್ಗ ಗುರುವಿಲ್ಲದ ಮಠ . ಯೋಜನೆಗಳೆಲ್ಲ ತಡೆದು ನಿಂತಿವೆ. ವ್ಯವಸ್ಥೆ ಕುಸಿದಿವೆ. ಶತ್ರುಗಳು ಬಲಿತಿದ್ದಾರೆ. ಒಳ ಜಗಳ ಮೇರೆದಪ್ಪಿವೆ.”

“ಬೃಹಸ್ಪತಿಗಳು ಇದನ್ನೆಲ್ಲ ಪರಿಹರಿಸಲು ಸಮರ್ಥರಿದ್ದರು. ಈಗ ಪರಿಹಾರವೇನು?”

ಚತುರ್ಮುಖ ನಗೆ. ದೇವತೆಗಳು ಇಷ್ಟು ಕಂಗೆಟ್ಟಿದ್ದರೂ ಬ್ರಹ್ಮ ಉದಾಸೀನನಿದ್ದಾನೆ. ಶಾಂತನಿದ್ದಾನೆ.

“ಯೋಗ್ಯ ಮಾರ್ಗದರ್ಶಕನಿಲ್ಲದೆ ಹೋದರೆ ರಾಜಕೀಯ ಕೆಟ್ಟೇ ಕೆಡುತ್ತದೆ. ನೀವು ಬೇಗನೆ ಅರ್ಹ ಮಾರ್ಗದರ್ಶಕನನ್ನು ದೊರಕಿಸಿಕೊಳ್ಳಬೇಕು.”

ಗುರು ಯಾರು?

“ಅಂತಹ ಗುರು ಯಾರು ಬ್ರಹ್ಮನ್‌?”

“ಅಂಥಿಂಥವರು ಎಂದೂ ಗುರುಗಳಾಗಲಾರರು. ಸ್ವರ್ಗ ನಿಮಗಾಗಿ ಇದೆ . ನೀವೇ ನಿರ್ಧರಿಸಿಕೊಳ್ಳಬೇಕು.”

“ನಿಮ್ಮ ಆಯ್ಕೆ ನಮಗೆ ಪ್ರಮಾಣ. ಅದನ್ನು ತಲೆಯಲ್ಲಿ ಹೊತ್ತು ನಡೆಸುತ್ತೇವೆ.”

ದೇವತೆಗಳ ಒಕ್ಕೊರಲಿನ ಅಭಿಪ್ರಾಯ.

“ನೇರವಾಗಿ ವಿಶ್ವರೂಪನ ಹತ್ತಿರ ಹೋಗಿ ಗುರುವಾಗಲು ಕೇಳಿ. ಅದೇ ಒಂದು ತಾತ್ಕಾಲಿಕ ಪರಿಹಾರ!”

ಎಲ್ಲರ ಮುಖದಲ್ಲಿಯೂ ಒಂದು ಬಗೆಯ ಗೆಲುವು. ವಿಶ್ವರೂಪ ಬಿಸಿನೆತ್ತರದ ಹೊಸ ಚೇತನ. ಈಗ ಶಿಷ್ಟಮಂಡಲ ಬಂದವರಲ್ಲೂ ಹೊಸ ರಕ್ತವೇ ಹೆಚ್ಚು. ಬ್ರಹ್ಮನಂತಹ ವೃದ್ಧರೂ ಈ ತರುಣನನ್ನು ಗುರುವೆಂದು ಮನ್ನಿಸಲು ಸೂಚಿಸಿದ್ದು ಸ್ವರ್ಗದಲ್ಲಿ ಹೊಸ ಮಿಂಚಿನ ಹುರುಪು ತಂದಿತು.

ಅಂದಿನಿಂದ ಸ್ವರ್ಗಕ್ಕೆ ವಿಶ್ವರೂಪನೆ ಗುರು. ಸ್ವರ್ಗದ ರಾಜಕೀಯಕ್ಕೂ ಒಂದು ಹೊಸ ತಿರುವು. ಲೋಕಲೋಕಗಳಲ್ಲೂ ವಿಶ್ವರೂಪನ ಹೆಸರು ಹಲವು ಹಗಲುಗಳಲ್ಲೆ ದುಮು ದುಮಿಸಿತು.

ವಿಶ್ವ ರೂಪ ಇಂದ್ರನ ಯುದ್ಧೋಪಕರಣಗಳನ್ನು ನವೀಕರಿಸಿದ. ಹೊಸ ಬಗೆಯ ಶಸ್ತ್ರಾಸ್ತ್ರ ನಿರ್ಮಾಣದಲ್ಲಿ ವಿಚಕ್ಷಣತೆ ತೋರಿದ. ದೇವತೆಗಳಿಗೆ ಇಂದ್ರನ ಸಂರಕ್ಷಣೇ ಸನ್ನಾಹದಲ್ಲಿ ಭರವಸೆ ಮೂಡಿತು.

ಗುರು ದಾರಿ ತಪ್ಪಿದರೆ?
ಇಂದ್ರನ ತಲೆಯನ್ನು ಸಂಶಯದ ತೂತು ಕೊರೆಯಿತು. ಮನಸ್ಸು ಮೊದಲಿನ ಮಹಾಗುರು ಬೃಹಸ್ಪತಿಯನ್ನು ನೆನೆಯಿತು.

“ಛೀ! ಇದ್ದ ಗುರುವಿಗೆ ಪರಮ ಸನ್ಮಾನ . ಬೇರೆ ನೆನಪೂ ತಪ್ಪು.”

ಇಂದ್ರ ತನ್ನನ್ನು ತಾನು ತಿದ್ದಿಕೊಂಡು ಸಾಗಿದ್ದ.

ಆದರೂ ಸಂಶಯ ಗುಂಯ್‌ ಅನ್ನುತ್ತಿತ್ತು.

ಮೈತುಂಬ ಕಣ್ಣಿದ್ದ ಇಂದ್ರನೆ ಹಲವು ಸಲ ಕಂಗೆಟ್ಟು ಹೋದ. ಇಂದ್ರನಿಗೆ ತನ್ನ ಒಳಗಿನ ಒತ್ತಡ ಸಾಕಷ್ಟು ಇತ್ತು.  ಹೊರಗಿನ ಕೋಲಾಹಲವೂ ಬೆಳೆದು ಉಲ್ಬಣಿಸಿತು.

“ಸ್ವಾಮೀ ದೇವೇಂದ್ರ, ಈ ವಿಶ್ವರೂಪನ ಗುರುತ್ವ ಮುಂದುವರಿದರೆ ಸ್ವರ್ಗ ಹಾಳಾಗಿಹೋಗುತ್ತದೆ.”

ದೇವೇಂದ್ರನ ತಲೆ ಹೋಳಾಗುವಷ್ಟು ಹೊಡೆತ! ಹಲವು ಸಲ ತಾನೆ ಸಂಶೋಧನೆಗೆ ಹೊರಟ.  ದೇವ ಗುರುವಿನ ಅಪರಾಧದ ವಾಸನೆ ಅವನ ಮೂಗಿಗೂ.

ಮತ್ತೆ ಮತ್ತೆ ಅದೇ ಧ್ವನಿ ಮರುಕಳಿಸಹತ್ತಿತು.

“ವಿಶ್ವರೂಪ ಗುರುವಾಗಿಯೂ ಸ್ವರ್ಗಕ್ಕೆ ಮೋಸ ಮಾಡುತ್ತಾನೆ .”

ಅಂದು ಗುರುವೆಂದು ಆತನನ್ನು ಆಯ್ಕೆ ಮಾಡಿದಾಗ ಕೇಕೆ ಹಾಕಿ ಕುಣಿದ ದೇವತೆಗಳ ತಂಡವೇ ಈಗ ಅವನ ಮೇಲೆ ಆರೋಪ ಹೊರಿಸುವಲ್ಲಿ ಮುಂದು.

ಗುರು ಶಿಷ್ಯರಿಗೆ ಅಪಕಾರ ಮಾಡುವುದು!

ಬೇಲಿ ಹೊಲ ಮೇಯುವುದು.

ಹಾಗೆ ಆತ ಏಕೆ ಮಾಡಬೇಕು?

ತಾಯಿಯ ಸ್ವಜನ ಪ್ರೇಮ

ವಿಶ್ವರೂಪ ದೇವಕಲಾವಿದನ ವಿಚಿತ್ರ ಸೃಷ್ಟಿ. ಅವನ ಅದ್ಭುತ ಪ್ರಯೋಗದ ಶಿಶು ಈ ಸಂತಾನ.

ಗುರುವಿನ ತಂದೆ ಕಲಾವಿದ ಅಪ್ಪಟ ದೇವ ಜಾತಿಯವ, ತಾಯಿ ಅಸುರ ಕುಲದವಳು.

ಈಗೀಗ ಅಸುರರ ಒತ್ತಡ ಹೆಚ್ಚಿತು. ಅವರು ಗುರುವಿನ ತಾಯಿಯ ಸೆರಗು ಹಿಡಿದರು. ತಾಯಿಗೆ ಸ್ವಜನ ಎಂಬ ಅಭಿಮಾನ ಎಚ್ಚತ್ತಿತು.

ಮಗನಿಗೆ ಹೇಳಿದಳು.  ವಿಶ್ವರೂಪನಿಗೆ ದೇವತೆಗಳ ಮೇಲೆ ವಿಶ್ವಾಸ ಹೆಚ್ಚು. ಅವರು ಉಳಿದರೆ ವಿಶ್ವ ಉಳಿದೀತು ಎಂಬ ಭರವಸೆಯುಳ್ಳವ. ಮೊದಲು ಒಪ್ಪಲಿಲ್ಲ.

ಆದರೆ ಕಡೆಗೆ ವಿಶ್ವರೂಪನಿಗೆ ತಾಯಿಯ ಮಾತೇ ದೊಡ್ಡದೆನಿಸಿತು . ಜೋತುಬಿದ್ದ. ತಾಯಿಗೆ ಕೊಟ್ಟ ಮಾತಿನಂತೆ ಅಸುರರ ವಿಷಯದಲ್ಲಿ ಅನುಕಂಪ ತೋರುತ್ತಿದ್ದ.

ಗುರುವಾಗಿ ದೇವತೆಗಳನ್ನು ರಕ್ಷಿಸುವ ಹೊಣೆ ಒಂದು ಕಡೆಗೆ.

ಮಗುವಾಗಿ ತಾಯಿಗೆ ಕೊಟ್ಟ ಮಾತಿನಂತೆ ಅಸುರರ ಬಗ್ಗೆ ಅನುಕಂಪ ತೋರಿಸುವ ಅನಿವಾರ್ಯ ಇನ್ನೊಂದು ಕಡೆಗೆ.

ಈಗ ಗುರು ಒಳಗೊಳಗೇ ಬಹಳ ಲಘುವಾದ.

ದೇವದಾನವರಿಬ್ಬರೂ ಭರವಸೆ ತಾಳಿದ್ದರು ಒಬ್ಬನ ಮೇಲೆ.

ರಾಕ್ಷಸರಿಗೆ ಆತ ಅವ್ಯಾಹತವಾಗಿ ಗುಪ್ತ ಸಹಾಯ ಮಾಡುತ್ತಿದ್ದ . ಪರಮ ನಿರ್ಭೀತನಾದ ಗುರುವು ಈ ದೋಷದಿಂದ ಭಯಗ್ರಸ್ತನಾಗಿದ್ದ.

ಇವನ ಸಹಾಯದಿಂದ ರಾಕ್ಷಸರ ಬಲ ಬೆಳೆಯ ಹತ್ತಿತು. ದೇವತೆಗಳ ಲೋಕದಲ್ಲಿ ಕೊರತೆ, ಅಸ್ತವ್ಯಸ್ತತೆ ತಾಂಡವ ವಾಡಹತ್ತಿದವು.

ಪ್ರತಿಜ್ಞೆ ಏನಾಯಿತು?

ವಿಶ್ವರೂಪ ಅಂದು ಸಮಸ್ತ ದೇವತೆಗಳ ಎದುರು ಬ್ರಹ್ಮನ ಹಿರಿತನದಲ್ಲಿ ಅಗ್ನಿಸಾಕ್ಷಿಯಾಗಿ ಪ್ರತಿಜ್ಞೆ ಕೈಗೊಂಡಿದ್ದ:

“ದೇವತೆಗಳ: ಸರ್ವತೋಮುಖ ರಕ್ಷಣೆ ತನ್ನ ಹೊಣೆ, ಕರ್ತವ್ಯ.;”

“ರಹಸ್ಯ ಕಾಪಾಡುವ, ಶತ್ರುತಂತ್ರ ಭೇದನ ಮಾಡುವ ತನ್ನ ಸರ್ವಸಾಮರ್ಥ್ಯವನ್ನು ಪಣಕ್ಕೆ ಹಚ್ಚುತ್ತೇನೆ.”

ಆ ಸಮಾರಂಭದಲ್ಲಿ ವಿಶ್ವರೂಪ ತೋರಿಸಿದ್ದ ಹುರುಪು ದೇವತೆಗಳ ಕಣ್ಣಮುಂದೆ ಇನ್ನೂ ಹಸಿಯಾಗಿದ್ದಿತು. ಇಂದು ಆತ ನಡೆಸಿದ್ದ ಗುಪ್ತದ್ರೋಹವು ವಿಕಟವಾಗಿ ಅವರನ್ನು ತಿವಿಯುತ್ತಿತ್ತು.

ವರುಣ, ಅಶ್ವಿನೀ ದೇವತೆಗಳು ವಿಶ್ವರೂಪನ ಮೇಲೆ ಪಕ್ಷದ್ರೋಹದ ಆರೋಪವನ್ನು ನೇರ ದೇವತೆಗಳ ಸಭೆಯಲ್ಲಿ ಪ್ರಸ್ತಾಪಿಸಿದರು.

ಇದು ಶಿಸ್ತುಭಂಗ ಎಂದು ಹಲವು ದೇವತೆಗಳು ಧ್ವನಿ ಕೂಡಿಸಿದ್ದರು. ಆದರೆ ದೇವರಾಜನ ಕ್ರಮ ತೆಗೆದುಕೊಳ್ಳಬೇಕು.

ದೇವಗುರುವೇ ಕುತಂತ್ರ ಮಾಡಿದರೆ?

ಒಮ್ಮೆ ಒಂದು ಧರ್ಮಸೂಯ ಸಮಾರಂಭ. ಆಮಂತ್ರಿತರಾದ ಹಲವು ದೇವತೆಗಳು ಸಮಾರಂಭದಲ್ಲಿ ಪಾಲುಗೊಂಡಿದ್ದಾರೆ.

ದೇವ ಗುರುವಿಗೆ ಅಗ್ರಪೂಜೆ.

ಸೋಮಾಹುತಿಯ ಪ್ರಸಂಗ. ಯಾವ ದೇವತೆಗಳಿಗೂ ಸೋಮ ತಲುಪಲಿಲ್ಲ.

ಕುತಂತ್ರವೊಂದು ಒಳಗೆ ನಡೆದಿತ್ತು. ಸ್ವತಃ ದೇವ ಗುರುವೇ ದೇವತೆಗಳಿಗಾಗಿ ನೀಡಿದ್ದ ಆಹುತಿಯನ್ನು ನೇರವಾಗಿ ಅಸುರರಿಗೆ ಕಳಿಸುತ್ತಿದ್ದ.

ಶಿಕ್ಷೆ

ಇಂದ್ರ ಹಲವು ದೇವತೆಗಳ ಸಮಕ್ಷಮದಲ್ಲಿಯೆ ವಿಶ್ವರೂಪನ ಈ ದೇವದ್ರೋಹವನ್ನು ಕಂಡು ಕಿಡಿಯಾದ. ಇನ್ನೂ ನೇರ ಕ್ರಮಕ್ಕೆ ಕಾದುನೋಡುತ್ತಿದ್ದ. ತರುಣರ ಕಡೆಯಿಂದ ಅಬ್ಬರದ ಕಿಡಿನುಡಿ.

ನೀನು ಸಹಸ್ರಾಕ್ಷನಲ್ಲ; ಕುರುಡ.

ಕಟ್ಲೆ ತುಂಬಿ ಬಂತು . ಇಂದ್ರ ತೂಗುತ್ತಿದ್ದ ಕತ್ತಿಯನ್ನು ಒರೆಯಿಂದ ಹಿರಿದು ವಿಶ್ವರೂಪನ ಮುಂದೆ ಬಂದು ನಿಂತು,

“ಇನ್ನೂ ನಾನು ತಾಳಲಾರೆ…”

“ನಾನೂ ಇದನ್ನು  ಬಿಡಲಾರೆ….”

ಇಬ್ಬರಿಗೂ ಕೋಪೋನ್ಮತ್ತತೆ. ವಿಶ್ವರೂಪನ ಅರ್ಧ ಮಾತು ಇನ್ನೂ ಬಾಯಲ್ಲಿತ್ತು. ಕತ್ತು ಕತ್ತರಿಸಿಬಿತ್ತು.

ದೇವೇಂದ್ರನ ಈ ಕೃತಿಯನ್ನು ಸ್ವರ್ಗದ ಸಮಸ್ತರೂ ಹೊಗಳಿದರು. ಇನ್ನು ಕೆಲವರು ಮಿಶ್ರಪ್ರತಿಕ್ರಿಯೆ ತೋರಿದರು.

ಪಕ್ಷದ್ರೋಹಕ್ಕೆ ತಕ್ಕ ಪ್ರಾಯಶ್ಚಿತ್ತ.

ದೈವ ವಂಚನೆಗೆ ಯೋಗ್ಯ ಶಿಕ್ಷೆ.

ಶಿಕ್ಷೆಯೇಅಪರಾಧವೇ?

ದೇವಸಭೆಯಲ್ಲಿ ಆ ದಿನ ವಿಶ್ವರೂಪನ ನಿಧನದ ಪ್ರಸ್ತಾಪ.

“ದೇವಗುರುವಿನ ಪಕ್ಷಾಂತರವನ್ನು ಖಂಡಿಸಿ ಇಂದ್ರನ ಕ್ರಮದ ಬಗ್ಗೆ ಆತನನ್ನು ಅಭಿನಂದಿಸಬೇಕು”, ಕೆಲವರೆಂದರು.

“ಗುರುಹತ್ಯೆಗೆ ಪ್ರಾಯಶ್ಚಿತ್ತವೇ ಇಲ್ಲ. ಗುರು ವಂಚಕನಾದರೆ, ದ್ರೋಹಿಯಾದರೆ ನಾವು ಅವನನ್ನು ಕಿತ್ತು ಹಾಕಬಹುದಿತ್ತು. ಸ್ವರ್ಗದ ವರಿಷ್ಠನಾದ ಇಂದ್ರ ಗುರುವನ್ನು ಕೊಲ್ಲುವುದು ದೊಡ್ಡ ತಪ್ಪು,” ಮತ್ತೆ ಕೆಲವರ ವಾದ.

ಸ್ವರ್ಗದ ವರಿಷ್ಠ ನ್ಯಾಯಾಲಕ್ಕೆ ಈ ಪ್ರಶ್ನೆ ಹೋಯಿತು.

ಇಂದ್ರ ಅಪರಾಧಿ ಎಂದು ಅದರ ನಿರ್ಣಯ.

ಅನಾಥ ಸ್ವರ್ಗ

ಈಗ ಸ್ವರ್ಗ ಪೂರ್ತಿ ಅನಾಥ.
ದಾರಿತೋರಲು ಗುರು ಇಲ್ಲ,
ರಕ್ಷಣೇ ನೀಡಲು ದೊರೆ ಇಲ್ಲ.

ಸ್ವರ್ಗದ ನ್ಯಾಯಾಲಯವು ದೊರೆ ಯಾರೂ ತಪ್ಪು ಮಾಡಲಾರ ಎಂಬ ವಾದವನ್ನು ಕಿತ್ತುಹಾಕಿ ‘ತಪ್ಪು ಯಾರು ಮಾಡಿದರೂ ತಪ್ಪೆ’ ಎಂಬ ಮಾತನ್ನು ಎತ್ತಿ ಹಿಡಿದಿತ್ತು.

ಈಗ ಸ್ವರ್ಗ ಹಲವು ತೊಡಕುಗಳಲ್ಲಿ ಸಿಕ್ಕಿತು.

ಅಸಹಾಯ ದೇವಗಣ ಗತಿಕಾಣದೆ ಬ್ರಹ್ಮನನ್ನು ಮುಂದೆ ಮಾಡಿಕೊಂಡ ಉ ಮೊದಲಿನ ಗುರು ಬೃಹಸ್ಪತಿಯ ಹತ್ತಿರ ಬಂದಿತು.

ಬ್ರಹ್ಮ ದೇವತೆಗಳನ್ನು ಕೂಡಿ ಬಂದಾಗ ಗುರು ಧ್ಯಾನದಲ್ಲಿದ್ದಾನೆ, ಎಚ್ಚರಿಸುವಂತಿಲ್ಲ.

ಬೃಹಸ್ಪತಿ ಪಾದಪೀಠದ ಬಳಿ ಸಮಸ್ತ ದೇವತೆಗಳು ಕಯಕಟ್ಟಿಕೊಂಡು ನಿಂತಿದ್ದಾರೆ.

ತನ್ನಲ್ಲಿ ತಾನು ಮುಳುಗಿದ ದೇವಗುರು ಕಣ್ಣು ತೆರೆಯಲಿಲ್ಲ, ದೇವತೆಗಳನ್ನು ಗಮನಿಸಲಿಲ್ಲ.

ದೊಡ್ಡವರು ಎಲ್ಲವನ್ನೂ ಕಣ್ಣು ತೆರೆದೇ ನೋಡಬೇಕಿಲ್ಲ. ಅವರ ಮನಸ್ಸು ಅವರಿಗೆ ಕಣ್ಣೇ ಸರಿ!

ಇಂದ್ರ ತನ್ನನ್ನು ನೋಡಲಿಲ್ಲ ಎಂದು ಮುನಿದುಕೊಂಡು ಹೋದ ದೇವಗುರು ದೇವತೆಗಳೆಲ್ಲ ಸಾಲುಗಟ್ಟಿ ಬಂದು ನಿಂತಾಗ ಕಣ್ಣೆತ್ತಿ ನೋಡಬಾರದೇಕೆ?

ದೇವತೆಗಳಿಗೆ ಗುರುವಿನ ಅಗತ್ಯ ಹಣ್ಣಾಗದ ಹಾದಿ ಕಾಯುತ್ತಿದ್ದ ಬೃಹಸ್ಪತಿ. 

‘ನೀವೇ ನಮ್ಮ ಬಲ.’

 ಕಣ್ತೆರೆದು ನೋಡಿದ

 

ಕೊನೆಗೊಮ್ಮೆ ಗುರು ದಯೆ ತೋರಿದ.

ಕಣ್ತೆರೆದು ನೋಡಿದ. (ದೇವತೆಗಳು ಆಗ ಇನ್ನೂ ಸದಾ ರೆಪ್ಪೆಹಾಕದೆ ಕಣ್ಣನ್ನು ತೆಗೆದವರಾಗಿರಲಿಲ್ಲ.)

“ಪೂಜ್ಯ ಭಗವತ್‌ಪಾದರಿಗೆ ದೇವತೆಗಳಾದ ನಾವೆಲ್ಲ ಮರಳಿ ಶರಣು ಬಂದಿದ್ದೇವೆ.”

“ಸ್ವಸ್ತಿ, ನಿಮ್ಮ ಆತ್ಮ ನಿರೀಕ್ಷಣೆಯಿಂದ ನಮಗೆ ಹೊಸ ಬಲ ಬರಲಿ.”

“ನೀವೆ ನಮ್ಮ ಬಲ. ನಿಮ್ಮ ವಿನಾ ನಮಗೆ ಬೇರೆ ಬಲವಿಲ್ಲ. ಮೊದಲಿನಂತೆಯೇ ನಿಮ್ಮ ಬೆಂಬಲ ನಮಗೆ ಬೇಕು. ನಮ್ಮ ತಪ್ಪು ನಮಗೆ ತಿಳಿದಿದೆ. ಅದರ ಅನರ್ಥದ ಅನುಭವವೂ ನಮಗೆ ಆಗಿದೆ.”

ದೇವತೆಗಳೆಲ್ಲ ಕರಗಿದ್ದರು. ಗುರುಗಳು ಮತ್ತೊಮ್ಮೆ ಕಣ್‌ ಒಳಗೆ ಹೊರಳಿಸಿದರು.

ಒಳಗಣ್ಣು ಕಂಡಿತು

ಆಗ ಅವರ ಎದೆ ಮುಗುಳು ಅರಳಿತ್ತು.

ತಮ್ಮ ಪೂಜ್ಯ ತಂದೆ ಅಂಗಿರಸರ ದೇದೀಪ್ಯಮಾನ ವ್ಯಕ್ತಿತ್ವ ಚಿತ್ರಮಾಲೆಯಾಗಿ ಕಾಣುತ್ತಿತ್ತು.

ಎಂತಹ ಉದಾರ ಪ್ರಕೃತಿ!

ಎಷ್ಟು ಉತ್ತಾನ ಪೌರುಷ, ತಮ್ಮ ತಂದೆಯವರದು.

ನನ್ನ ತಾಯಿ ನವಮಾಸ ಹೊತ್ತು ನನ್ನನ್ನು ಹೆರಲಿಲ್ಲ. ಅವಳದೂ ಒಂದು ಭವ್ಯ ಪರಂಪರೆಯೆ. ಮಹಾಪ್ರಜಾಪತಿ ಕರ್ದಮನ ಮಗಳು. ಶ್ರದ್ಧಾ – ನನ್ನ ತಾಯಿಯ ಹೆಸರು.

ನಾನು ಅವಳ ಹೊಟ್ಟೆಯಲ್ಲಿ ಹುಟ್ಟಲಿಲ್ಲ. ಆದರೂ ಅವಳ ವಾತ್ಸಲ್ಯ ಅಪಾರ.

ಆಂಗಿರಸರು ದೊಡ್ಡ ವಿಜ್ಞಾನಿಗಳು. ಆತ್ಮ ನಿರೀಕ್ಷಣೆ, ಸಂಶೋಧನೆ ಮಾಡಿದರು.

ತಮ್ಮ ಅನುಪಮ ಶರೀರ , ಅಸಮ ಪ್ರಾಣ, ಅನನ್ಯ ಮನಸ್ಸು ಇವುಗಳ ರಹಸ್ಸವನ್ನು ಒರೆದು ನೋಡಿದರು.

ಈ ಮಹಾಶಕ್ತಿಯ ಮೂಲ ತಮ್ಮ ಪಾರ್ಥಿವ ಪರಮಾಣು ಎಂದು ಅವರು ತಿಳಿದರು . ಅಂತೆಯೇ ಅವರು ಅದನ್ನು ಸೋಸಿ ತೆಗೆದರು. ತಮ್ಮ ಶರೀರದ ಪರಮಾಣುವಿನ ಮೂಲ ವಸ್ತುವಿನಿಂದ ಹೊಸ ಜೀವವನ್ನು ರೂಪಿಸಿದರು.

ಗುರು ತಮ್ಮನ್ನು ಮತ್ತೊಮ್ಮೆ ಕಣ್ತುಂಬ ನೋಡಿದರು. ಯಾವ ಅಲ್ವ ವಸ್ತುವಿನಿಂದಲೂ ತಾವು ರೂಪುಗೊಂಡಿಲ್ಲವೆಂದು ಮತ್ತೊಮ್ಮೆ ಅವರಿಗೆ ಅನಿಸಿತು.

ಅಂದು

‘ದಧೀಚಿ ತ್ಯಾಗದಲ್ಲಿ ಅಶೃತತ್ವ ಅನುಭವಿಸಿದರು.’

ಇದೇ ದೇವತೆಗಳೆಲ್ಲ ಆ ದಿನವೂ ಒಟ್ಟುಗೂಡಿ ಅಂಗಿರಸರ ಆಶ್ರಮಕ್ಕೆ ಬಂದಿದ್ದರು.

ಸ್ವತಃ ಆಂಗಿರಸರು ಅದೆಷ್ಟೊ ಪ್ರಾರ್ಥನೆಗಳಿಂದ ಇಂದ್ರನನ್ನು ಸ್ತುತಿಸಿದ್ದರು.

ಇಂದು ಇಂದ್ರನೆ ತಮ್ಮ ಬಾಗಿಲಿಗೆ ಬಂದಿದ್ದರಿಂದ ಅವರು ಸುಸ್ವಾಗತ ಕೋರಿ ಆಸನ ನೀಡಿದ್ದರು.

ನಾವು ಋಷಿಗಳ ಅನುಗ್ರಹಕ್ಕಾಗಿ ಬಂದಿದ್ದೇವೆ. ವಿನಯಶಾಲಿ ಇಂದ್ರನ ಮಾತು ಮುಂದುವರಿಯುತ್ತಿದ್ದಂತೆಯೇ ಆಂಗಿರಸರು, “ದೇವತೆಗಳು ಋಷಿಗಳನ್ನು ಪ್ರಾರ್ಥಿಸುವುದು ವಿಪರ್ಯಾಸ. ದೇವೇಂದ್ರನು ಕಾರ್ಯವನ್ನು ಆದೇಶಿಸಬೇಕು” ಎಂದರು.

“ಸ್ವರ್ಗ ತಮ್ಮ ಆತ್ಮತೇಜವಾದ ಆಚಾರ್ಯ ಬೃಹಸ್ಪತಿಗಳನ್ನು ಅಪೇಕ್ಷಿಸುತ್ತದೆ.”

ಆಂಗಿರಸರು ನೇರವಾಗಿ ಕೇಳಿದರು;

“ಬೃಹಸ್ಪತಿಯಿಂದ ಸ್ವರ್ಗಕ್ಕೆ ಏನಾಗಬೇಕು?”

“ಸ್ವರ್ಗದ ಗುರುತ್ವ ಅಂಗೀಕರಿಸುವ ಕೃಪೆಯಾಗಬೇಕು. ದೇವತೆಗಳಾದ ನಾವೆಲ್ಲ ತಮ್ಮ ಅನುಮತಿಗಾಗಿ ಕಾದಿದ್ದೇವೆ. ತಾವು ಅನುಮತಿಸಿದರೆ ಬೃಹಸ್ಪತಿಗಳನ್ನು ಪ್ರಾರ್ಥಿಸುತ್ತೇವೆ.”

ಆಂಗಿರಸರು ದೇವತೆಗಳ ಮಾತನ್ನು ಒಪ್ಪಿದರು. ದೇವತೆಗಳು ಬೃಹಸ್ಪತಿಗಳ ಹತ್ತಿರ ಬಂದು ವಿನಂತಿಸಿದ್ದರು.

ಅದೊಂದು ಚಿನ್ನದಂತಹ ದಿನ. ಭೂಮಿಯ ಸತ್ವ ಸ್ವರ್ಗದ ಮಾರ್ಗದರ್ಶನದ ಹೊಣೆಹೊತ್ತ ಮಹಾ ಮುಹೂರ್ತ.

ಎಲ್ಲ ಘಟನೆಗಳು ಜೀವಂತವಾಗಿದ್ದವು.

ಸತ್ವಯುತವಾದ ಮಾತು ಬೇಕು

ಬೃಹಸ್ಪತಿ ದೇವಗುರುವಾಗಿ ಆಯ್ಕೆಗೊಂಡ ಹೊಸತು. ಸ್ವರ್ಗದಲ್ಲಿ ದೇವಗುರು ಕಂಡ ಅಚ್ಚರಿ ಎಂದರೆ ಸ್ವರ್ಗದ ಮಾತು ಭೂಮಿಯಷ್ಟೆ ಸಿಡಿಲು. ಬೃಹಸ್ಪತಿ ನೆಲದಲ್ಲೆ ತುಂಬ ಎತ್ತರ ಸಾಧಿಸಿದ ಧೀರ.

ದೇವತೆಗಳ ಮಾತು ಇಷ್ಟು ಪೊಳ್ಳು-ಸಡಿಲು ಇರಬಾರದು. ದೇವತೆಗಳ ದೇವತ್ವ ಅವರ ಮಾತಿನಲ್ಲಿ. ಅವರ ಭಾಷೆ ಸಂಸ್ಕೃತವಿತ್ತು. ಆದರೆ ದೇವತೆಗಳಿಗೆ ಬರಿ ಸಂಸ್ಕೃತ ಭಾಷೆ ಸಾಲದು. ಈ ಭಾಷೆ ನೆಲದ ಮೇಲೂ ಜೀವಂತವಿದೆ. ಮಾತಿನ ಇನ್ನೊಂದು  ತುದಿಯಲ್ಲಿ ಕೆಲ ಅಂತರದಲ್ಲಿ ಕೃತಿ ಇದೆ . ನೆಲದ ಮೇಲಿರುವ ಹಾಗೆಯೇ ಮುಗಿಲ ಮೇಲೆ.

ದೇವತೆಗಳಿಗೆ ಮಾತು-ಕೃತಿ ಇವುಗಳ ಅಂತರ ಮಾಯವಾಗುವ ಸತ್ವಯುತವಾದ ಮಾತು ಅಗತ್ಯ.  ಮಾತಿಗೆ ಕೃತಿಯ ಸಾಮರ್ಥ್ಯ, ಸತ್ವ ತರಬೇಕು.

ನಿಜ, ಆದರೆ ಹೇಗೆ?

ಬೃಹಸ್ಪತಿಗೆ ಈ ಸಮಸ್ಯೆ ತುಂಬ ಕಾಡಿತು .

ದೇವತೆಗಳ ಮಾತು ಬಲಿಷ್ಠವಾಗದೆ ಹೋದರೆ ಅವರ ಎತ್ತರಕ್ಕೆ ಅರ್ಥವೇನು?

ಆಗ ದೇವಗುರು ಸಮಸ್ತ ದೇವತೆಗಳ  ಮಹಾ ಸಮ್ಮೇಲನವೊಂದನ್ನು ಕರೆದು ದೇವ ವ್ಯವಹಾರಕ್ಕೆ ಹೊಸ ವಾಕ್‌ ನಿರ್ಮಾಣ ಆಗಬೇಕೆಂದು ಕರೆಯಿತ್ತ.

ಆ ಬಳಿಕ ಎಷ್ಟೋ ಪ್ರಯತ್ನಗಳ ಕೊನೆಯಲ್ಲಿ ದೇವತೆಗಳು ಒಂದು ದೈವೀ ವಾಕ್‌ ನಿರ್ಮಿಸಿಕೊಂಡರು. ಅದನ್ನು ಮಂತ್ರಮಯಿ ಎಂದು ಇತರರು ಗುರುತಿಸಿದರು.

ಬೃಹಸ್ಪತಿ ದೇವಲೋಕದಲ್ಲಿ ಮಂತ್ರವನ್ನು ಬಳಕೆಗೆ ತಂದಾಗಲೇ ಅವರಿಗೆ ಬೃಹಣಸ್ಪತಿ ಪಟ್ಟ ಬಂತು.

ಶಕ್ತಿದಾನ

ವಾಕ್‌ಗೆ ಬ್ರಹ್ಮಸ್ವರೂಪ ತಂದ ಅದ್ಭುತ ಕಾರ್ಯ ಸಾಧಿಸಿದ ದೇವಗುರುವನ್ನು ಸ್ವರ್ಗ ಹೊಗಳಿದ್ದೇ ಹೊಗಳಿದ್ದು.

ಸ್ವರ್ಗದಲ್ಲಿ ಮಾತಿಗೆ ಹೊಸ ರೂಪ ಬಂದು ಮಂತ್ರವಾದದ್ದನ್ನು ಭೂಮಿಯ ಮೇಲಿನ ಋಷಿಗಳೂ ಗಮನಿಸಿದರು. ಅವರು ದೇವತೆಗಳನ್ನು ಮಂತ್ರದಲ್ಲಿ ಕರೆಯಹತ್ತಿದರು.

ಸ್ವರ್ಗದಲ್ಲಿಯ ಅದ್ಭುತ ಬದಲಾವಣೆಯನ್ನು ನೆಲದ ಮೇಲಿನ ಹಲವರು ತಲೆಯಲ್ಲಿ ಹೊತ್ತು ಕುಣಿದರು. ಈ ಮಂತ್ರವನ್ನು ನೆಲಕ್ಕೆ ತರುವ ಹಲವು ಪ್ರಯತ್ನಗಳಲ್ಲಿ ಆಂಗಿರಸರು ಅಗ್ರೇಸರರು.

ಮಂತ್ರ-ಇದು ನೆಲ, ಮುಗಿಲುಗಳಿಗೆ ಬೃಹಸ್ಪತಿ ಇತ್ತ ಶಕ್ತಿದಾನ.

ನೀವು ದೇವತೆಗಳಾಗಲೇ ಇಲ್ಲ!’

“ಪ್ರಾಜ್ಞರಾದ ದೇವತೆಗಳೇ”,

ದೇವಗುರು ಬಹು ಗಂಭೀರವಾಗಿ ಸಂಬೋಧಿಸಿದರು. ದೇವತೆಗಳೆಲ್ಲ ಮಿಂಚುಹೊಡೆದಂತೆ ಎಚ್ಚರಾದರು.

“ತಪ್ಪಿಗೆ ನಿಮ್ಮಲ್ಲಿ ಅವಕಾಶವಿರುವುದೇ ತಪ್ಪು. ಅದು ಪ್ರಾಣಿ ಲೋಕದಲ್ಲಿ, ಮನುಷ್ಯಲೋಕದಲ್ಲಿ ನಡೆಯುವ ಘಟನೆ. ದೇವ ಜೀವನದಲ್ಲಿ ತಪ್ಪು ಘಟಿಸಲೇಬಾರದು. ತಪ್ಪು ಮಾಡುವುದು ನಿಮಗೆ ತೀರಾ ಅನಿವಾರ್ಯವೇ ಆಗಿದ್ದರೆ ದೇವತ್ವವನ್ನು ಉಳಿಸಿಕೊಳ್ಳುವುದು ಸಾಧ್ಯವಿಲ್ಲ. ದೇವತ್ವ-ತಪ್ಪು ಒಂದೇ ಕಡೆಯಲ್ಲಿ ಬದುಕಲಾರವು. ನೀವು ತಪ್ಪಿನೊಡನೆ ಮುಂದುವರಿದರೆ ನಿಮ್ಮ ಗುರುತ್ವ ವಹಿಸಲಾರೆ…”

ದೇವಗುರುವಿನ ಮಾತು ಕೇಳಿ ಇಂದ್ರ ಕಲ್ಲು ಕಂಬ.

“ನಿಮ್ಮನ್ನು ಇತರರು ದೇವತೆಗಳೆಂದು ನಂಬಿದ್ದಾರೆ. ಆದರೆ ನೀವು ದೇವತೆಗಳಾಗಲೇ ಇಲ್ಲ…. ದೇವತೆಗಳಿಲ್ಲದೆ ಲೋಕಗಳು ಇರಲಾರವು ನಿಜ. ಉಚ್ಚ ಸಂಸ್ಕಾರಗಳಿಲ್ಲದೆ ದೇವತ್ವವೂ ಉಳಿಯಲಾರದು.”

“ಗುರುಗಳ ಆದೇಶ ಶಿರಸಾ ಮಾನ್ಯವಿದೆ. ಕರುಣೆಯಿಂದ ಮುನ್ನಡೆಸಬೇಕು” ಒಕ್ಕೊರಲಿನ ಕೂಗು ದೇವ ಮಂಡಲದಿಂದ.

ದೇವತೆಗಳಿಗೆ ಹೊಸ ತಿದ್ದುಪಡಿ. ಗುರುವಿಗೆ ಮಣಿದು ತಪ್ಪು ತಿದ್ದಿಕೊಂಡರು. ಹೊಸ ತಪ್ಪು ಮಾಡದಂತೆ ಒಪ್ಪಿಕೊಂಡರು.

ಸಭೆಯಲ್ಲಿ

ತುಂಬಿದ ಸಭೆ. ಅಗ್ರಾಸನದಲ್ಲಿ ದೇವರಾಜ. ಬೃಹಸ್ಪತಿ ಸ್ವರ್ಗಕ್ಕೆ ಮರಳಿ ಬಂದ ಬಳಿಕ ಸೇರುವ ಮೊದಲನೆ ದೇವಸಭೆ. ದೇವರಾಜನ ಮೇಲೆ ಹಲವು ಹತ್ತು ಆರೋಪಗಳು. “ಸ್ವರ್ಗದ ಪರಿಸ್ಥಿತಿ ಇಷ್ಟು ಕೆಡಲು ದೇವೇಂದ್ರನೇ ಕಾರಣ. ಅವನ ಮೇಲಿನ ಆರೋಪಗಳನ್ನು ಕುರಿತು ಇಂದಿನ ಸಭೆಯಲ್ಲಿ ಚರ್ಚಿಸಬೇಕು” ಎಂಬುದು ತರುಣ ದೇವತೆಗಳ ಮತ.

“ಹಳೆಯ ತಪ್ಪಿನ ಗೋಡೆ ತೊಳೆಯುವುದು ಸಾಕು. ಹೊಸ ವ್ಯವಸ್ಥೆಯನ್ನು ಹುರಿಗೊಳಿಸಿ ಸಾಗುವುದಿಷ್ಟೇ ಈಗ ಅಗತ್ಯ”  ಎಂಬುದು ಅನುಭವಸ್ಥ ದೇವತೆಗಳ ಅಭಿಪ್ರಾಯ.

ಸಭೆ ಆರಂಭವಾಗುತ್ತಲೇ ಯುವಕರು ಕೂಗಾಡ ಹತ್ತಿದರು. ಅಸುರರ ಆಕ್ರಮಣ, ಭ್ರಷ್ಟಾಚಾರಗಳ ಬಗ್ಗೆ ದೇವರಾಜ ಹೇಳಿಕೆ ಕೊಡಬೇಕು ಎಂದು ಒತ್ತಾಯಿಸ ಹತ್ತಿದರು.

ಆಗ ದೇವಗುರು ಬೃಹಸ್ಪತಿ ಎದ್ದುನಿಂತರು.

“ದೇವರಾಜ ಏಳಬೇಕು. ಹೇಳಬೇಕು…” ಕೂಗು ದುಮುದುಮಿಸಿತು.

“ಎಲ್ಲರೂ ಶಾಂತರಾಗಿರಿ. ಉದ್ರೇಕಗೊಂಡರೆ ಕೆಲಸ ತೀರಲಿಲ್ಲ…”

ದೇವ ಗುರುವಿನ ಗಂಭೀರ ಧ್ವನಿ ಕುದಿಯುವ ನೆತ್ತರವನ್ನು ತಣ್ಣೈಸಿತು.

“ರಾಕ್ಷಸರಲ್ಲಿರುವ ಕ್ರೌರ್ಯ, ಮನುಷ್ಯನಲ್ಲಿರುವ ಭೇದ, ಪಶುಗಳ ಅಜ್ಞಾನ ನಮಗೆ ಅಂಟದ ಹಾಗೆ ಬದುಕಲು ಕಲಿಯಬೇಕು. ಈಗ ಸ್ವರ್ಗಕ್ಕೆ ಬಂದಿರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು . ತೊಂದರೆಗಳನ್ನು ತೊಡೆದು ಹಾಕಬೇಕು.”

ಗುರುವೇ ದಾರಿ ತೋರಿಸಬೇಕು

ಒಂದು ಕ್ಷಣ ಸಭೆಯಲ್ಲಿ ಶಾಂತಿ. ತರುಣರು ಕಳೆದುಕೊಂಡ ತಾಳ್ಮೆಯನ್ನು ಮರಳಿ ಸಂಪಾದಿಸಿ ಸಾವಧಾನದಿಂದ ಇದ್ದರು. ಸ್ವರ್ಗಪಾಲನಾದ ವಿಷ್ಣು  ಈಗ ವೇದಿಕೆಯ ಮೇಲೆ:

“ಗುರುವಿನ ಪುನರಾಗಮನದ ಕಾಲಕ್ಕೆ ನಾವು ಅವರಲ್ಲಿ ಮೊರೆ ಇಟ್ಟು ಕೇಳಿದ್ದು ಇನ್ನೂ ನಿಮ್ಮೆಲ್ಲರ ಸ್ಮೃತಿಯಲ್ಲಿ ಹಸಿರಾಗಿರಲು ಸಾಕು. ಸ್ವರ್ಗದ ವೈಭವ ಊರ್ಜಿತವಾಗಲು ತಾವೇ ಯೋಜನೆ ರೂಪಿಸಬೇಕೆಂದು ಕೇಳಿದ್ದೆವು. ಅವರ ಯೋಜನೆ ರೂಪಿಸಬೇಕೆಂದು ಕೇಳಿದ್ದೆವು. ಅವರ ಯೋಜನೆ ಸ್ವರ್ಗದ ದುರ್ಬಲತೆಯನ್ನು ಹೊಡೆದು ಹಾಕುತ್ತದೆ. ಬಲವನ್ನೂ ಪ್ರತಿಷ್ಠಾಪಿಸುತ್ತದೆ.

“ಭ್ರಷ್ಟಾಚಾರ, ಸ್ವಾರ್ಥಗಳು ದುರ್ಬಲತೆಯ ಎರಡು ಮುಖಗಳೆ ಹೊರತು ಬೇರೆಯೇನೂ ಅಲ್ಲ.  ಅವನ್ನು ಯಾರು ಮಾಡುತ್ತಿದ್ದಾರೆ ಮುಖ್ಯವಲ್ಲ; ಯಾರೂ ಮಾಡಬಾರದು ಎಂಬುದು ಸತ್ಯ. ಮಹಿಮರಾದ ಗುರು ಬೃಹಸ್ಪತಿಗಳು ಸ್ವರ್ಗಕ್ಕೆ ವಿಹಿತವಾದ ಯೋಜನೆಯನ್ನು ಸಭೆಯ ಮುಂದಿಡಲು ಸಮಸ್ತ ದೇವತೆಗಳ ಪರವಾಗಿ ಕೋರುತ್ತೇನೆ.”

ನಿರ್ಭಯತೆ ಇಲ್ಲವಾದರೆ

ದೇವಗುರು ಮತ್ತೆ ಎದ್ದುನಿಂತ.

“ನಿರ್ಭಯತೆ ದೇವತ್ವದ ಮೂಲಭೂತ ಸತ್ವ.” ಇತ್ತೀಚಿನ ಹಲವಾರು ಘಟನೆಗಳಿಂದ ದೇವತೆಗಳಲ್ಲಿ ಅದು ಮಾಯಾವಾಗಿದ್ದು ಮಾಯವಾಗಹತ್ತಿದ್ದು ದೃಢಪಟ್ಟಿದೆ.

“ಭೀತರಾದ ದೇವತೆಗಳು ವಂಚನೆ, ಲೋಭ, ಮೋಹಗಳಿಗೆ ಪಕ್ಕಾಗುತ್ತಾರೆ.  ಸ್ವರ್ಗ ತನ್ನ ಎತ್ತರವನ್ನು ಕಳೆದುಕೊಂಡು ಉತ್ತರೋತ್ತರಕ್ಕೆ ವಂಚಿತವಾಗಿದೆ.

“ನಿರ್ಭಯತೆ ಇಲ್ಲದೆ ಹೋದುದರಿಂದ ದೇವತೆಗಳ ಬದುಕಿನಲ್ಲಿ ಒಡಂಬಡಿಕೆ, ತಪ್ಪಿ-ತಿದ್ದಿಕೊಳ್ಳುವುದು, ಪಶ್ಚಾತ್ತಾಪ ಮೈದಾಳಿ ಬೆಳೆಯಹತ್ತಿವೆ. ಇದು ನಿಲ್ಲಬೇಕು. ದೇವತ್ವವನ್ನು ಅನುವಂಶಿಕ ಹಕ್ಕಾಗಿ ಅಪೇಕ್ಷಿಸದೆ ಸ್ವಾರ್ಜಿತ ಸಂಪತ್ತಾಗಿ ಸವಿಯಬೇಕು. ಇದರ ಅನುಷ್ಠಾನದ ಅಗ್ರಮಾನ್ಯ ಕ್ರಮವೆಂದರೆ ಸಂರಕ್ಷಣೆ.

“ಈಗ ದೇವತೆಗಳನ್ನು ಯಾರು ರಕ್ಷಿಸಬೇಕು ಎಂಬ ಸಮಸ್ಯೆ ಬಂದಿದೆ. ದೇವತೆಗಳು ಸರ್ವರಕ್ಷಕರಾಗಬೇಕು, ನಿರ್ಭಯರಾಗಬೇಕು. ಭಯದ ತುದಿಯಾದ ಸಾವನ್ನು ದೇವತೆಗಳು ಮೆಟ್ಟಿನಿಂತು ಅಮರರಾಗಬೇಕು. ಯಾವ ದೇವತೆಯೂ ಸಾಯದಂತೆ ಸ್ವರ್ಗದ ಸಂಶೋಧಕರು ಕೆಲಸ ಮಾಡಬೇಕು. ಎಲ್ಲದಕ್ಕೂ ಕಣ್ಣುಮುಚ್ಚಿ ಕೊರದೆ ಅನಿಮಿಷರಾಗಬೇ ಕು.”

ಬೃಹಸ್ಪತಿ ಯೋಜನೆ ಒಪ್ಪಿತವಾಯಿತು.

ಅಮೃತಕ್ಕಾಗಿ

ದೇವ ವಿಜ್ಞಾನಿಗಳು ಬೃಹಸ್ಪತಿಯ ಮಾರ್ಗದರ್ಶನದಲ್ಲಿ ಅಮೃತ ಪ್ರಾಪ್ತಿಗಾಗಿ ಸಂಶೋಧನೆ ನಡೆಸಿದರು.

ಈ ಸಂಶೋಧನೆ ಹಲವು ಕ್ಷೇತ್ರಗಳಲ್ಲಿ ಮುಂದುವರಿಯಿತು.

ದೇವತೆಗಳ ಸಮುದ್ರಮಥನದ ಮಹಾಯೋಜನೆಯನ್ನು ಹಮ್ಮಿದರು.

ನೀರಿನ ಜೊತೆಗೆ ಬಹುಕಾಲದಿಂದ ಸಂಬಂಧ ಹೊಂದಿದ ವಿಷ್ಣುವಿನ ಸಹಾಯದಿಂದ ಸಮುದ್ರಮಥನದ ಕೆಲಸ ಮುಂದುವರಿದಿತ್ತು.

ಸಮುದ್ರಮಥನದ ಮಹಾಯೋಜನೆಯ ಪ್ರವರ್ತಕ ಬೃಹಸ್ಪತಿಗೆ ತನ್ನ ಕೆಲಸದ ಪ್ರಗತಿಯ ಬಗ್ಗೆ ಸಮಾಧಾನವೆನಿಸಲಿಲ್ಲ. ತನ್ನಷ್ಟಕ್ಕೆ ತಾನೇ ಚಿಂತಿಸಿದ.

ಹಿಂದೆಯೂ ಇದೇ ಸಮಸ್ಯೆ

ಹಲವು ದಿನಗಳ ಹಿಂದೆ. ಇದೇ ಸಮಸ್ಯೆ! ಇಷ್ಟು ಪೂರ್ಣವಾಗಿ ಗ್ರಹಿಸಿದ್ದರೂ ಇಂದಿನ ಮಹಾವೃಕ್ಷದ ಮೊಳಕೆಯೇ ಅದು.

ಅಸುರರು ದೇವತೆಗಳನ್ನು ಯುದ್ಧದಲ್ಲಿ ಎದುರಿಸುತ್ತಿದ್ದರು. ದೇವತೆಗಳು ಧೀರರಾಗಿ ಅವರನ್ನು ಅಟ್ಟುತ್ತಿದ್ದರು.

ಎರಡೂ ಪಕ್ಷದಲ್ಲಿ ಅಸಂಖ್ಯಾತ ಸಾವುನೋವು. ದೇವತೆಗಳು ಸಾಧಿಸಲಾರದ ಒಂದು ಅದ್ಭುತ ಪವಾಡವನ್ನು ಅಸುರರು ಲೀಲಾಜಾಲವಾಗಿ ನಡೆಸುತ್ತಿದ್ದರು.

ಯುದ್ಧದಲ್ಲಿ ಗಾಯಗೊಂಡವರು, ಅಂಗವಿಕಲರು ಸಂಜೀವಿನಿ ಸ್ಪರ್ಶದಿಂದ ಮತ್ತೆ ಮೊದಲಿನಂತಾಗಿ ತೋಳು, ತೊಡೆ ತಟ್ಟಿ ಆಹ್ವಾನಿಸುತ್ತಿದ್ದರು.

ಅವರ ಬಲ ಬೆಳೆಯತೊಡಗಿತ್ತು. ದೇವತೆಗಳೂ ಹತ ಹತರಾಗಿ ಸುಧಾರಿಸಿಕೊಳ್ಳಲು ಅದೆಷ್ಟೋ ದಿನ. ಇದು ಗಮನಕ್ಕೆ ಬಂತು. ಸಂಜೀವಿನಿ ಒಂದು ಔಷಧಿಯೂ ಹೌದು; ವಿದ್ಯೆಯೂ ನಿಜ. ಸ್ವರ್ಗದ ವಿಜ್ಞಾನಿಗಳಿಗೆ ಉತ್ತೇಜನ ಕೊಟ್ಟಾಯಿತು, ಫಲ ದೊರಕಲಿಲ್ಲ.

ಮಗನನ್ನೂ ಭ್ರಷ್ಟಾಚಾರ ಬಿಡಲಿಲ್ಲ

ಕೊನೆಗೆ ತಾನು ಸ್ವತಃ ಮಗನನ್ನೇ ದೈತ್ಯ ಗುರುವಿನ ಬಳಿಗೆ ಕಳಿಸಬೇಕಾಗಿ ಬಂತು. ದೈತ್ಯಗುರು ತನ್ನ ಗುರುಕುಲದಲ್ಲಿ ಅವನಿಗೆ ಅವಕಾಶ ಕೊಟ್ಟ.

ಈ ವಿದ್ಯಾರ್ಥಿ ಕಚ. ಕಾಲು ಜಾರಿದ. ಪ್ರೇಮಪ್ರಕರಣವೊಂದರಲ್ಲಿ ಕೈ ಸಿಕ್ಕಿಸಿಕೊಂಡು ಬರಿಗೈಯಿಂದ ಬಂದ.

ಅಂತು ಆಢ್ಯನಾದ ಗುರುವಿನ ಮಗನಿಗೂ ಭ್ರಷ್ಟಾಚಾರ ಬಿಡಲಿಲ್ಲ. ಅದೇ ಆ ಚಿತ್ರ ಕಣ್ಣಮುಂದೆ ಬರುತ್ತಿರುವಂತೆ ಬೃಹಸ್ಪತಿ ಇಂದೂ ಅಮೃತಪ್ರಾಪ್ತಿಯ ಪ್ರಯತ್ನದಲ್ಲಿ ಅಸುರರ ನೆರವು ಕೋರಬಾರದೇಕೆ ಎಂದುಕೊಂಡರು.

ಕಡುವೈರಿಗಳ ನೆರವನ್ನು ಬೇಡುವುದೇ!

ಕೂಡಲೇ ದೇವಗುರು ಬೃಹಸ್ಪತಿ ಅಸುರ ಗುರು ಶುಕ್ರಾಚಾರ್ಯರಲ್ಲಿ ಒಂದು ನಿಯೋಗ ಕಳಿಸಿ ಸಹಾಯ ಕೋರಿದರು.

ದೇವತೆಗಳ ಕಡುವೈರಿಗಳಾದ ಅಸುರರ ನೆರವು ಕೋರುವ ಬೃಹಸ್ಪತಿಗಳ ಪ್ರಯತ್ನಕ್ಕೆ ಸ್ವರ್ಗದಲ್ಲಿ ಬಹು ಪಾಲು ವಿರೋಧ ಕಂಡುಬಂತು.

‘ಜ್ಞಾನಕ್ಕೆ ಸೂತಕವಿಲ್ಲ’ ಎಂಬುದು ಬೃಹಸ್ಪತಿಗಳ ವಿಚಾರಧಾರೆ. ದೇವತೆಗಳು ಈ ಬಗ್ಗೆ ವಿವರಣೆ ಬಯಸಿದಾಗ ಬೃಹಸ್ಪತಿಗಳು ದೇವತೆಗಳ ವಿಶೇಷ ಸಭೆಯಲ್ಲಿ ಸಮುದ್ರ ಮಥನದಂತಹ ಮಹಾಯತ್ನದಲ್ಲಿ ಯಶಸ್ಸು ಅಸುರರ ಸಹಕಾರವಿಲ್ಲದೆ ಸಾಧ್ಯವಿಲ್ಲ” ಎಂಧರು.

ಇಂದ್ರ ಹೇಳಿದ: “ಈಗ ನಾವು ಅಮೃತ ಸಂಪಾದನೆಗಾಗಿ ಸಮುದ್ರ ಮಥಿಸತೊಡಗಿದ್ದೇವೆ. ಇದರಲ್ಲಿ ಅಸುರರ ಸಹಕಾರ ಅಗತ್ಯವೆನ್ನುತ್ತೀರಿ. ಅವರೂ ಸಹಕಾರಕ್ಕೆ ಒಪ್ಪಿ ಶೋಧನೆ ಫಲಿಸಿ ಅಮೃತವೂ ದೊರೆಯಬಹುದು. ಬಳಿಕ ಅಮೃತವನ್ನು ದೇವಾಸುರರಿಬ್ಬರೂ ಹಂಚಿಕೊಳ್ಳಬೇಕು. ಆಗಲೂ ನಮಗೆ ಅಸುರರ ಭಯ ಇದ್ದಂತೇ ಇರುವುದು. ನಮ್ಮ ರಹಸ್ಯ ಶತ್ರುಗಳಿಗೆ ಹಂಚಿ ಹೋದರೆ ಸಂರಕ್ಷಣೆಯ ಯೋಜನೆ ನಿರರ್ಥಕವೇ ಸರಿ!”

ಇಂದ್ರ ಎತ್ತಿದ ಆಕ್ಷೇಪ ಹಲವು ದೇವತೆಗಳಿಗೆ ನಿಜ ಎನ್ನಿಸಿತು. ಕೆಲ ವಿಶೇಷ ಸೌಕರ್ಯಗಳು ತಮಗೇ ಮೀಸಲಾಗಿರುವಂತೆ ಅವುಗಳ ರಹಸ್ಯ ಕಾಯುವುದು ಅನಿವಾರ್ಯವೆಂದು ಎಲ್ಲರಿಗೂ ದೃಢವಾಗಿತ್ತು. ದೇವಗುರು ಬೃಹಸ್ಪತಿ ಇದನ್ನು ನಿರಾಕರಿಸಿ ಹೇಳಿದರು:

“ಅಮೃತ ಒಂದು ಅಸ್ತ್ರವಲ್ಲ. ಈ ವಿಶೇಷ ವಸ್ತುವನ್ನು ನಾವು ಅಸ್ತ್ರವೆಂದು ಬಳಸುವುದರಿಂದಲೇ ಲೋಕಗಳಲ್ಲಿ ಅನರ್ಥ ಹೆಚ್ಚುತ್ತದೆ. ಅಮೃತ ಎಲ್ಲರಿಗೂ – ದೇವೇತರರಿಗೂ-ಲಭ್ಯವಾಗುವವರೆಗೆ ದೇವತೆಗಳ ಅಮೃತತ್ವಕ್ಕೆ ಅರ್ಥವಿಲ್ಲ. ಅಮೃತವನ್ನು ನಾವು ಅಸ್ತ್ರದಂತೆ ಬಳಸಬಾರದು. ಅದನ್ನು ದಾನವರಿಗೆ, ಮಾನವರಿಗೆ, ಪಶುಪಕ್ಷಿ, ಸಸ್ಯ ಜಡಗಳಿಗೆ ಲಭ್ಯ ಮಾಡಿ ಕೊಡುವುದೇ ದೇವತೆಗಳ ವಿಶೆಷ.”

ದೇವ ಗುರುವಿನ ಮಾತಿಗೆ ತಲೆದೂಗಿದರೂ ಆ ಜೇನಿನಲ್ಲಿ ಕಹಿ ಇತ್ತು ದೇವತೆಗಳಿಗೆ.

ಜಗತ್ತಿನ ಕಲ್ಯಾಣಕ್ಕಾಗಿ

“ಈಗ ಅಸುರರೊಡನೆ ನಮಗೆ ಕೆಲ ವಿಷಯದಲ್ಲಿ ಸ್ಪರ್ಧೆ ಇದೆ ನಿಜ. ಅವರು ನಮ್ಮ ಶತ್ರುಗಳು. ನಾವು ಕೊನೆಯವರೆಗೂ ಅವರೊಂದಿಗೆ ವೈರ ಭಾವದಿಂದ ಸೆಣಸಬೇಕು ಎಂಬುದು ತರವಲ್ಲ. ಒಂದಿಲ್ಲೊಂದು ದಿನ ಅವರು ನಾವೂ ಜೊತೆಗೆ ಸೇರಿ ಜಗತ್ತಿನ ಕಲ್ಯಾಣದ ಹೊಣೆ ಹೊರಬೇಕಾಗುತ್ತದೆ. ಈ ಅಮೃತ ಸಂಶೋಧನೆ ಅದರ ನಾಂದಿಯಾದರೆ ಒಳ್ಳೆಯದೆ . ನಾನು ಅಸುರ ವರಿಷ್ಠರನ್ನು ಹಾಗೆಯೇ ಆಶ್ವಾಸನವಿತ್ತು ಸಹಾಯ ಕೋರುತ್ತೇನೆ.”

ಅಮೃತ ದೊರೆಯಿತು, ಆದರೆ

ದೇವ ಗುರುವಿನ ವಿತರಣೆ ಬಹಳ ಜನ ದೇವತೆಗಳಿಗೆ ಒಪ್ಪಿಗೆಯಾಗಲಿಲ್ಲ. ಅದನ್ನು ವಿರೋಧಿಸಿದರೆ ಅಮೃತ ಸಂಶೋಧನೆಯ ಬೃಹತ್‌ ಯೋಜನೆಯನ್ನು ಕೈಬಿಡಬೇಕಾಗುತ್ತದೆ ಎಂದು “ಅಸ್ತು” ಎನ್ನಬೇಕಾಯಿತು.

‘ಅಮೃತ ಎಲ್ಲರಿಗೂ ಲಭ್ಯವಾಗಬೇಕು.’

ಸಮುದ್ರ ತಳದಲ್ಲಿ ಹಲವು ಅದ್ಭುತ ವಸ್ತುಗಳು ದೊರೆತವು. ಅಸುರರು ಅವುಗಳನ್ನು ದೇವತೆಗಳ ಉಪಯೋಗಕ್ಕೇ ಬಿಟ್ಟರು.

ಅಮೃತವೂ ಒಂದು ದಿನ ದೊರೆಯಿತು. ಅಮೃತ ದೊರೆಯಿತೆನ್ನುವಾಗಲೇ ವಿಷವೂ ಅದೇ ಶೋಧನೆಯಲ್ಲಿ ಸಿಕ್ಕಿತು. ಅದನ್ನು ಶಿವನು ನುಂಗಿದ. ಅದರ ದುಷ್ಪರಿಣಾಮ ತಪ್ಪಿತು.

ದೇವಗುರುವಿನ ಅಭಿಪ್ರಾಯದಂತೆ ಅಮೃತದ ಹಂಚಿಕೆಯಾಗಲಿಲ್ಲ. ದೇವತೆಗಳಿಗೆ ಅಮೃತ ಸಿಕ್ಕಿತು. ಅಸುರರಿಗೆ ಸಿಕ್ಕಲಿಲ್ಲ. ಆದರೂ ಆತ ಸ್ವರ್ಗತ್ಯಾಗ ಮಾಡಲಿಲ್ಲ. ಇಂದಲ್ಲ ನಾಳೆಯಾದರೂ ವಿಶ್ವಕಲ್ಯಾಣ ದೇವತೆಗಳಿಂದಲೇ ಸಾಧ್ಯ ಎಂದು ಅವರಿಗೆ ವಿಶ್ವಾಸ.

ಮತ್ತೆ ಅದೇ ಪಾಡೇ!

ಅಮೃತ ಹಂಚಿಕೆಯಲ್ಲಿ ದೇವತೆಗಳು ಮಾಡಿದ ಪಕ್ಷಪಾತ, ವಚನಭಂಗಗಳಿಂದ ಅಸುರರು ಸಂತಪ್ತರಾದರು. ತಾವೂ ಶುಕ್ರಾಚಾರ್ಯರ ಧುರೀಣತ್ವದಲ್ಲಿ ಅಮೃತ ಸಂಶೋಧನೆಯನ್ನು ಮುಂದುವರಿಸಿದರು.

ಅಮೃತ ಕುಡಿದರೆ ಸಾಯದಿರಬಹುದು. ಬದುಕಿದ್ದಾಗಲೆ ದೇವತೆಗಳನ್ನು ಹಾಳುಮಾಡಬೇಕೆಂಬ ಅಸುರ ಯತ್ನ ಮುಂದುವರಿದವು.

ಕಾಲ ಸಂದಿತು. ಬೃಹಸ್ಪತಿಗಳು ತಮ್ಮ ಪಟ್ಟು ಬಿಡಲಿಲ್ಲ.  ಸ್ವರ್ಗ, ದೈವತ್ವ ಅರ್ಹರಾದ ಮಾನವರಿಗೂ ಯೋಗ್ಯರಾದ ದಾನವರಿಗೂ ದೊರೆಯಬೇಕು ಎಂದು ಸ್ವರ್ಗದ ಘಟನೆಗೆ ತಿದ್ದುಪಡಿಯಾಯಿತು.

ಆದರೆ ಮುಂಗೈಜೋರಿನಿಂದ ಕೆಲ ಅಯೋಗ್ಯ ಅಸುರರೂ ಅಪಾತ್ರ ಮಾನವರೂ ಸ್ವರ್ಗಕ್ಕೆ ಲಗ್ಗೆ ಹತ್ತಿ ದೇವತೆಗಳನ್ನು ಅಂಡಲೆದರು.

ದೇವತೆಗಳಲ್ಲಿ ಭೇದ ಹುಟ್ಟಿಸುವ ದೈತ್ಯರ ತಂತ್ರ ಫಲಿಸ ಹತ್ತಿತು.

ಇದಕ್ಕೆ ಸ್ವರ್ಗ ತಮ್ಮದೇ, ದೇವತೆಗಳು ಏನು ಮಾಡಿದರೂ ನಡೆಯುತ್ತದೆ ಎಂಬ ಹಮ್ಮು ಸ್ವರ್ಗದಲ್ಲಿ ಬಲಿಯ ಹತ್ತಿದ್ದೂ ದೇವತೆಗಳ ಪತನಕ್ಕೆ ಕಾರಣವಾಯಿತು. ಭ್ರಷ್ಟಾಚಾರ, ಅಧಿಕಾರ ದಾಹ ಮತ್ತೆ ತಾಂಡವವಾಡಹತ್ತಿದವು.

ಅಮೃತ ಕುಡಿದಿದ್ದೆ ತಪ್ಪಾಯಿತೆ?

ಬಹಳ ದಿನಗಳ ಹಿಂದೆ ದೇವತೆಯೇ ಆಗಿದ್ದ ವಿಶ್ವಕರ್ಮ ದೇವೇಂದ್ರ ತನ್ನ ಮಗನನ್ನು ಕೊಂದ ಎಂಬ ಉನ್ಮಾದದಿಂದ ಒಂದು ಪ್ರಚಂಡ ದೈತ್ಯ ಸತ್ವವೊಂದನ್ನು ನಿರ್ಮಿಸಿದ.

ವೃತ್ರ ಇದೇ ವಿಶ್ವಕರ್ಮನ ದೇವಕುಲ ಕುಠಾರ ನಿರ್ಮಿತಿ. ಅಸುರ ಮಂಡಲದಲ್ಲಿ ಬೆಳೆದು ಹೆಮ್ಮರನಾದ. ದೇವಕುಲ ಅವನಿಂದ ಜರ್ಜಿರಿತವಾಯಿತು.

ಈಗ ದೇವತೆಗಳು ಅಮರರಾಗಿದ್ದರು. ತಾವು ಅಮೃತ ಕುಡಿದಿದ್ದೇ ತಪ್ಪೆನ್ನಿಸಿಹೋಯಿತು ಅವರಿಗೆ. ಸಾಯುವ ಸೌಕರ್ಯವಿಲ್ಲ, ಬದುಕುವ ಅನುಕೂಲತೆಯಿಲ್ಲ.

ವೃತ್ರನಿಂದ ತೊಂದರೆ ಮಿತಿಮೀರಿಹೋಯಿತು. ದೇವತೆಗಳಿಗೆ ಬಹಳ ದಿನಗಳನಂತರ ಭಯದ ಕತ್ತಲೆ ಆವರಿಸಿತು. ಇಂದ್ರನನ್ನು ಕೊಂದು ಸ್ವರ್ಗವನ್ನು ನಾಶ ಮಾಡುವ ವೃತ್ರನ ಪ್ರತಿಜ್ಞೆ ಸಫಲವಾಗುವ ಲಕ್ಷಣಗಳು ದಿನದಿನಕ್ಕೂ ಕಾಣ ಹತ್ತಿದವು. ವೃತ್ರ ಇಷ್ಟು ಬಲಿತು ಸ್ವರ್ಗವನ್ನು ಹಿಂಡುತ್ತಿರುವಾಗ ವೃತ್ರನ ಪಕ್ಷಪಾತಿಗಳಾದ ದಸ್ಯು ಕುಲದವರು ಹಲವು ಸಲ ಸಮಯ ಸಾಧಿಸಿದಾಗೆಲ್ಲ ಸ್ವರ್ಗದ ಮೇಲೆ ಕೈಮಾಡುತ್ತಿದ್ದರು.

ಈಗ ಪರಿಸ್ಥಿತಿ ಬಹಳ ವಿಕೋಪಕ್ಕೆ ಹೋಯಿತು. ವೃತ್ರ ಇನ್ನೂ ಬದುಕಿದ್ದರೆ ಸ್ವರ್ಗಕ್ಕೆ ಉಳಿಗಾಲವಿಲ್ಲ. ವೃತ್ರ ಸಾಯುವ ಹಂಚಿಕೆ ದೇವಗಣಕ್ಕೆ ಹೊಳೆಯಲೊಲ್ಲದು. ದೇವತೆಗಳ ಬಲದಿಂದಲೇ ಆತ ಬೆಳೆದು ಮಲೆತು ನಿಂತ .

ಏಕೆ ಗುರುದೇವ ?’

ಕೊನೆಗೆ ದೇವತೆಗಳೆಲ್ಲ ಈ ಬಗ್ಗೆ ಬೃಹಸ್ಪತಿ ಹತ್ತಿರ ದೂರು ತಂದರು.

“ನಾವು ಅಮರರಾಗಿಯೂ ವೃತ್ರನನ್ನು ಕೊಲ್ಲಲಾರದವರಗಿದ್ದೇವೆ, ಏಕೆ ಗುರುದೇವಾ?” ದೇವತೆಗಳ ಏಕಕಂಠದ ಪ್ರಶ್ನೆ.

‘ನಾವು ಭೋಗಕ್ಕಾಗಿ ಅಮರರಾಗಿದ್ದೇವೆ.” ಅಮೃತ ಸಂಪಾದನೆ ಮಾಡುವಾಗ ದೇಗವತೆಗಳು ತ್ಯಾಗವನ್ನೇ ಒಪ್ಪಿದ್ದರು. ಆದರೆ ಅವರೆಂದೂ ತ್ಯಾಗಶೀಲರಾಗಲಿಲ್ಲ.

ತ್ಯಾಗ ಯಾರಿಗೆ ಇಷ್ಟವಾಗುತ್ತದೆ ಗುರುವೆ?

“ನನ್ನ ಜೊತೆ ಬನ್ನಿ. ತ್ಯಾಗದಿಂದ ಅಮೃತತ್ವ ಅನುಭವಿಸುವವರ ಎತ್ತರ ತೋರಿಸುತ್ತೇನೆ.”

ದೇವ ಪ್ರತಿನಿಧಿಗಳು ಬೃಹಸ್ಪತಿಯೊಡನೆ ಹೊರಟರು. ಬೃಹಸ್ಪತಿ ಅವರನ್ನು ಮುಂದೆ ಮಾಡಿಕೊಂಡು ಒಂದು ಹುಲ್ಲಿನ ಮನೆಗೆ ನಡೆದು ಬಂದರು.

ಹುಲ್ಲಿನ ಮನೆಯಲ್ಲಿ

ಹಣ್ಣು ಮುದುಕನೊಬ್ಬ ಕಣ್ಣುಮುಚ್ಚಿ ಕುಳಿತಿದ್ದಾನೆ. ಮಿಂಚಿನ ಎಳೆಯ ಬೆಳಕಿನ ಗಡ್ಡ ಮೀಸೆಯಲ್ಲಿ ಮುಚ್ಚಿದ ಮುಖ. ಹಣ್ಣಾದರೂ ಬೆಳಕಿನ ಬೆಟ್ಟ!

ಮುದುಕ ಕಡೆಗೆ ಕಣ್ಣುತೆರೆದ. ದೃಷ್ಟಿ ಬೆಳದಿಂಗಳಷ್ಟು ತಂಪು. ದೇವತೆಗಳು ಕಣ್ಣ ಬೆಳದಿಂಗಳಲ್ಲಿ ಮಿಂದು ಹೊಸ ಹುರುಪು ತಳೆದರು.

ಹುಲ್ಲು ಮನೆಯಲ್ಲಿರುವ ಒಬ್ಬ ಹಣ್ಣು ಮುದುಕನ ಕಣ್ಣು ತಮ್ಮ ಮೇಲೆ ಇಷ್ಟು ಪ್ರಭಾವ ಬೀರುವುದನ್ನು ಕಣ್ಣಾರೆ ಕಂಡು ಅನುಭವಿಸಿ ಚಕಿತರಾಗಿದ್ದರು ದೇವತೆಗಳು.

“ಆಂಗಿರಸ ಪುತ್ರನಾದ ನಾನು ಬೃಹಸ್ಪತಿ. ಪೂಜ್ಯರಿಗೆ ನಮಸ್ಕರಿಸುತ್ತೇನೆ.”

“ಕಲ್ಯಾಣವಾಗಲಿ.”

ಹೃದಯ ಗುಹೆಯಿಂದ ತುಟಿಗೆ ಅಪ್ಪಳಿಸಿ ಹೊರಬಿದ್ದ ಋಷಿಯ ಮಾತು ಮುಗಿಯುವ ಮೊದಲೆ ದೇವತೆಗಳೆಲ್ಲ ಅಭಿವಂದಿಸಿದರು.

ತ್ಯಾಗದಲ್ಲಿ ಅಮೃತತ್ವ

“ತಮ್ಮಲ್ಲಿ ನಿಯೋಗ ಬಂದ ದೇವತೆಗಳ ಪರವಾಗಿ ಪೂಜ್ಯರಲ್ಲಿ ಬೇಡಿಕೊಳ್ಳುತ್ತೇನೆ.”

“ವೃತ್ರನ ವಿಪ್ಲವಕಾರಿ ಪ್ರವೃತ್ತಿಗಳಿಗೆ ದೇವತೆಗಳೆಲ್ಲ ನೊಂದುಹೋಗಿದ್ದಾರೆ. ನೀವು ಮನಸ್ಸು ಮಾಡಿದರೆ ಅವರಿಗೆ ಪರಿಹಾರವಿದೆ. ಇಲ್ಲದೆ ಹೋದರೆ ಸ್ವರ್ಗವನ್ನು ಅಸುರರೇ ಆಳಬೇಕು.”

“ದೇವತೆಗಳಿಗಾಗಿ ನಾನು ಏನು ಮಾಡಬೇಕಿದ್ದರೂ ಸಿದ್ಧ. ಅವರಿಂದ ವಿಶ್ವಕ್ಕೆ ಕಲ್ಯಾಣವಿದೆ. ಅವರ ತೊಂದರೆ ನಿವಾರಣೆ ನನ್ನ ಕರ್ತವ್ಯ.”

“ಸ್ವಾಮಿ, ಇಂದ್ರನ ವಜ್ರ ವೃತ್ರನ ಮೇಲೆ ನಡೆಯದಾಗಿದೆ. ಅದಕ್ಕಾಗಿ ತಮ್ಮ ಬೆನ್ನುಮೂಲೆ ಅಗತ್ಯ. ಇಂದ್ರ ಅದನ್ನು ಬಳಸಿಕೊಂಡರೆ ನಮಗೆ ಯುದ್ಧದಲ್ಲಿ ವಿಯ ಸಾಧ್ಯ…..”

“ಇಷ್ಟೆಯೋ? ಅಗತ್ಯವಾಗಿ ಆಗಲಿ. ಬೆಟ್ಟಗಳನ್ನೇ ಹುಡಿ ಮಾಡಿದ ವಜ್ರಕ್ಕಿಂತ ನನ್ನ ಮೂಳೆ ಬಲಿಷ್ಠವಿರುವುದಾದರೆ ನಾನೇ ಧನ್ಯ . ದೇವತೆಗಳ  ಸೇವೆಗಾಗಿ ಈ ಮೂಲೆಯನ್ನು ಈಗಲೆ ಅಂಗೀಕರಿಸಿರಿ.”

ಋಷಿ ಪ್ರಾಯೋಪವೇಶನಕ್ಕೆ ಕುಳಿತರು.

ಬೃಹಸ್ಪತಿ ಹೇಳಿದರು : “ದಧೀಚಿ ತ್ಯಾಗದಲ್ಲಿ ಅಮೃತತ್ವ ಅನುಭವಿಸಿದವರುಇ. ದೇವತೆಗಳಾದ ನೀವು ಅಮೃತತ್ವದಲ್ಲಿಯೂ ದುಃಖಪಡುವುದು ತಪ್ಪಲಿಲ್ಲ.”

ದೇವತೆಗಳು ಋಷಿ ದಧೀಚಿಯ ಬೆನ್ನುಮೂಳೆಯೊಡನೆ ಸ್ವರ್ಗಕ್ಕೆ ಮರಳಿದರು.

ತ್ಯಾಗಮಂತ್ರ

ವೃತ್ರನೊಡನೆ ಯುದ್ಧದ ದಿನ ಬಂದಾಗ ಗೆಲುವು ಇಂದ್ರನಿಗೆ.

ಬೃಹಸ್ಪತಿಯ ಈ ತ್ಯಾಗಮಂತ್ರ ದೇವತೆಗಳ ಬದುಕಿಗೆ ಒಂದು ಹೊಸ ತಿರುವು ತಂದಿತು.

ಸ್ವರ್ಗಕ್ಕೆ ಸ್ವರ್ಗವೇ ಗುರು ಬೃಹಸ್ಪತಿಗಳ ಹಿರಿಮೆಯನ್ನು ಹಾಡಿತು, ಅಂತಹ ಗುರುವನ್ನು ಪಡೆದ ತಾನು ಧನ್ಯ ಎಂದು ನಲಿಯಿತು.