‘ಬೆಂಕಿಯಿಲ್ಲದೇ ಹೊಗೆಯಾಡುವುದಿಲ್ಲ’ಎಂಬ ಮಾತು ಪ್ರಚಲಿತದಲ್ಲಿದೆ. ಬೆಂಕಿ ಇಲ್ಲದಿದ್ದರೂ ಹೊಗೆ ಹೊತ್ತಿಸುವ, ನೋಡುಗರಲ್ಲಿ ಅಚ್ಚರಿ ಮೂಡಿಸುವ ಚಟುವಟಿಕೆಯಿದು. ದಹನ ಕ್ರಿಯೆ (ಬೆಂಕಿಯುಂಟಾದಾಗ)ನಡೆದಾಗ ಹೊಗೆ ಬರುವುದೂ ಕೂಡಾ ರಾಸಾಯನಿಕ ಕ್ರಿಯೆಯೇ. ಬೆಂಕಿಯಿದ್ದಾಗ ಹೊಗೆ ಉಂಟಾಗುವುದು ಜನ ಸಾಮಾನ್ಯರಿಗೆಲ್ಲಾ ಚಿರಪರಿಚಿತ. ಆದರೆ ಸಾಮಾನ್ಯ ಹೊಗೆಗಿಂತ ಭಿನ್ನವಾದ ವರ್ಣರಂಜಿತವಾದ ಹೊಗೆ ಕಂಡು ಅಚ್ಚರಿ ಪಡಿ;ಮತ್ತೊಬ್ಬರಿಗೆ ಅಚ್ಚರಿಪಡಿಸಿ. ಅದೂ ಈ ಹೊಗೆ, ನೀರು ಸೇರಿಸಿದಾಗ ಮೂಡುವ ಹೊಗೆ ಎಂಬುದನ್ನು ಗಮನಿಸಿ. ಜೊತೆಗೆ ರಸಾಯನ ಶಾಸ್ತ್ರದ ಕಲಿಕೆಯನ್ನು ಆನಂದಿಸಿ.
ಬೇಕಾಗುವ ಸಾಮಗ್ರಿ
- ಒಂದು ಟೀ ಚಮಚದಷ್ಟು ಪ್ರಮಾಣದ ಅಮೋನಿಯಮ್ ನೈಟ್ರೇಟ್ (ಸುಮಾರು 20ಗ್ರಾಂನಷ್ಟು).
- ಅರ್ಧ ಟೀ ಚಮಚದಷ್ಟು ಪ್ರಮಾಣದ ಸತು (zine)ವಿನ ಪುಡಿ (ಸುಮಾರು 10ಗ್ರಾಂನಷ್ಟು).
- ಚಿಟಿಕೆ ಅಯೊಡಿನ್ ಹರಳುಗಳು -ಪುಡಿ ಮಾಡಿ (ಸುಮಾರು 2ರಿಂದ 3ಅಯೊಡಿನ್ ಹರಳುಗಳು).
- ನೀರು
ವಿಧಾನ
ಅಮೋನಿಯಮ್ ನೈಟ್ರೇಟ್ದ ಜೊತೆ ಸತುವಿನ ಪುಡಿಯನ್ನು ಸೇರಿಸಿ. ಇವೆರಡರ ಮಿಶ್ರಣದ ಮೇಲೆ ಅಯೊಡಿನ್ ಹರಳುಗಳನ್ನು ಪುಡಿ ಮಾಡಿಹಾಕಿ.
ಈಗ ಒಂದು ಹನಿ ನೀರನ್ನು ಮಿಶ್ರಣದ ಮೇಲೆ ಹಾಕಿ.
ವೀಕ್ಷಿಸಿ
ಒಂದೆರಡು ನಿಮಿಷಯದಲ್ಲಿಯೇ ನೇರಿಳೆ ಬಣ್ಣದ ಧೂಮ/ಹೊಗೆ ಉಂಟಾಗುವುದು.
ಯೋಚಿಸಿ
ನೀರಿನ ಪ್ರಮಾಣ ಹೆಚ್ಚಾದರೆ ಈ ಕ್ರಿಯೆ ನಡೆಯದು, ಏಕೆ?
(3 ಚಮಚದಷ್ಟು ನೀರು ಬಳಸಿದಾಗ)
ವಿವರಣೆ
ಅಯೊಡಿನ್ ಒಂದು ಉತ್ಪತನಕಾರಕ ಅಂದರೆ ಬಿಸಿ ಮಾಡಿದಾಗ ದ್ರವಸ್ಥಿತಿ ತಲುಪದೆ ನೇರವಾಗಿ ಅನಿಲ ಸ್ಥಿತಿಗೆ ಆವಿಯಾಗುವ ಗುಣವುಳ್ಳದ್ದು. ಈ ಕ್ರಿಯೆ ನಡೆಸಿದಾಗ ಹೊಗೆಯ ರೂಪದಲ್ಲಿ ಕಾಣಿಸಿಕೊಂಡದ್ದು -ಅಯೊಡಿನ್ ಆವಿ!
ಅಯೊಡಿನ್ ಆವಿಯಾಗಲು ಉಷ್ಣಬೇಕಲ್ಲವೆ?ಆ ಉಷ್ಣವನ್ನು ಅಮೋನಿಯಮ್ ನೈಟ್ರೇಟ್ನೊಂದಿಗೆ ಸತುವಿನ ವರ್ತನೆ ಒದಗಿಸುತ್ತದೆ.
ಅಮೋನಿಯಮ್ ನೈಟ್ರೇಟು ದುರ್ಬಲ ಪ್ರತ್ಯಾಮ್ಲ ಹಾಗೂ ಪ್ರಬಲ ಆಮ್ಲದ ಲವಣ. ಆದ್ದರಿಂದ ಅದರ ಸಜಲ ದ್ರಾವಣ ಜಲ ವಿಭಜನೆ ಹೊಂದಿ ಕೊಂಚ ಆಮ್ಲೀಯವಾಗಿರುತ್ತದೆ.
(NH4NO3) –> NH4++ NO3–
ಸಜಲ ದ್ರಾವಣ
NH4++ H2O –> NH4OH + H+
ಈ ಆಮ್ಲಾಂಶವು ಸತುವಿನೊಂದಿಗೆ ವರ್ತಿಸಿ ಉಷ್ಣವನ್ನು ಬಿಡುಗಡೆ ಮಾಡುತ್ತದೆ.
Zn + 2H+–> Zn+++ H2+ಉಷ್ಣ
ಈ ಉಷ್ಣವು ಅಯೊಡಿನ್ ಅನ್ನು ಆವಿಯಾಗಿಸುತ್ತದೆ. ಆವಿಯನ್ನು ಹಗುರವಾದ ಹೈಡ್ರೊಜನ್ ಮೇಲೊಯ್ಯುತ್ತದೆ.
ಯೋಚನೆ ಪ್ರಶ್ನೆಗೆ ವಿವರಣೆ
ನೀರನ್ನು ಹೆಚ್ಚು ಸೇರಿಸಿದಾಗ ದ್ರಾವಣ ಸಾರತೆ ದುರ್ಬಲವಾಗುವುದರಿಂದ ಬಿಡುಗಡೆಯಾಗುವ ಉಷ್ಣ ಕಡಿಮೆ. ಮಿಗಿಲಾಗಿ ಆ ಬಿಡುಗಡೆಯಾದ ಉಷ್ಣವನ್ನು ಹೀರುವ ದ್ರವ್ಯರಾಶಿ ಹೆಚ್ಚು. ಆದ್ದರಿಂದ ಹೆಚ್ಚು ನೀರನ್ನು ಸೇರಿಸಿದರೆ ಉತ್ಪತನ ಕ್ರಿಯೆ ನಡೆಯುವುದೇ ಇಲ್ಲ!
Leave A Comment