ನಂಬಿಕೆ ಆಚರಣೆ ಇವು ಸಾಮಾನ್ಯವಾಗಿ ಒಂದೇ ನಾಣ್ಯದ ಎರಡು ಮುಖಗಳು. ಅಂದರೆ ನಂಬಿಕೆಯ ವ್ಯಕ್ತರೂಪ ಆಚರಣೆ. ಆಚರಣೆಯ ಅವ್ಯಕ್ತರೂಪ ನಂಬಿಕೆ. ಹೀಗಾಗಿ ನಂಬಿಕೆಯ ವಿವೇಚನೆಯಲ್ಲಿ ಕೆಲವೊಮ್ಮೆ ಆಚರಣೆಯೂ ಸೇರಿಕೊಳ್ಳುತ್ತದೆ. ನಂಬಿಕೆಯಲ್ಲಿ ಮುಖ್ಯವಾಗಿ ಎರಡು ಶಾಖೆಗಳು ಕಂಡುಬರುತ್ತದೆ. ಒಂದು ವಿಧಿ ಇನ್ನೊಂದು ನಿಷೇಧ. ನಂಬಿಕೆ ಕಾಲದಿಂದ ಕಾಲಕ್ಕೆ, ದೇಶದಿಂದ ದೇಶಕ್ಕೆ ಜನಾಂಗದಿಂದ ಜನಾಂಗಕ್ಕೆ ಕೆಲವೊಮ್ಮೆ ವ್ಯತ್ಯಾಸವಾಗಬಹುದು. ಈ ಎಲ್ಲ ಲಕ್ಷಣಗಳನ್ನು ‘ಬೆಂಕಿ’ ಯನ್ನು ಕುರಿತ ನಂಬಿಕೆಗಳಲ್ಲಿ ಕಾಣಬಹುದಾಗಿದೆ.

ನೀರಿನಂತೆ ಬೆಂಕಿಯೂ ಮನುಷ್ಯನ, ವಿಶ್ವದ ಅಸ್ತಿತ್ವದ ಒಂದು ಅವಿಭಾಜ್ಯ ಅಂಗವಾಗಿದೆ. ನಮ್ಮ ಬಾಹ್ಯ ಬದುಕಿನ ಅಸ್ತಿತ್ವಕ್ಕೆ ಅನಿವಾರ್ಯ ಅವಲಂಬನವಾಗುವ ವಸ್ತುಗಳು ನಮ್ಮ ಸಂಸ್ಕೃತಿಯ ಪ್ರಮುಖ ಭಾಗವಾಗಿ ಅದನ್ನು ರೂಪಿಸುವ ಅಂಶಗಳೂ ಆಗಿಬಿಡುತ್ತವೆ. ಏಕೆಂದರೆ ಯಾವುದು ‘ಜೀವನಾಧಾರವೋ ಅದು ಶ್ರೇಷ್ಠವೇ’ ಎಂಬ ಗ್ರಹಿಕೆ ಸಹಜವಾಗಿ ಮನಸ್ಸಿಗೆ ಒಪ್ಪಿಗೆಯಾಗುತ್ತದೆ. ಸೂರ್ಯ, ಬೆಂಕಿ, ನೀರು ಇವುಗಳೆಲ್ಲ ಮಾನವನ ನಂಬಿಕೆ ಆಚರಣೆಗಳ ಮುಖ್ಯ ಆಧಾರವಾಗಿರುವುದು ಈ ಕಾರಣದಿಂದಲೇ.

ಭೂತ ಪಂಚಕದ ಒಂದು ಘಟಕವಾಗಿರುವ ಬೆಂಕಿ ಪೂರ್ವ – ಪಶ್ಚಿಮ ಖಂಡಗಳ ಜಾನಪದ ಶಿಷ್ಟಪದ ವಲಯಗಳಲ್ಲಿ ಭೌತಿಕದಿಂದ ದೈವತದ ವರೆಗೆ ಬಗೆಬಗೆಯಾಗಿ ಪರಿಗಣಿತವಾಗಿದೆ. ದೇವರಿಂದ ಅಥವಾ ಪ್ರಾಚೀನತಮ ಯಜಮಾನರಿಂದ ಬೆಂಕಿಯನ್ನು ಕದ್ದು ಮರಗಳಲ್ಲಿ ಅಥವಾ ನಿರ್ದಿಷ್ಟ ಮರವೊಂದರಲ್ಲಿ ಮುಚ್ಚಿಡಲಾಗಿತ್ತು. ಆದ್ದರಿಂದಲೇ ಬೆಂಕಿಯನ್ನು ಉತ್ಪಾದಿಸಲು ಮನುಷ್ಯ ಯಾವಾಗಲೂ ಕಟ್ಟಿಗೆಯನ್ನು ಉಜ್ಜುತ್ತಿದ್ದ ಎಂಬುದಾಗಿ ಬ್ರೆಝಿಲ್ಲಿನ ಟೆಂಬೆಗಳಲ್ಲಿಯೂ, ಕಾಂಗೋ ಹಾಗೂ ನ್ಯುಗಿನಿಯ ಕೆಲಸಮುದಾಯಗಳಲ್ಲಿ ಬಿತ್ತುವಾಗ ಅಥವಾ ನೇಗಿಲು ಹೊಡೆಯುವಾಗ ಅಕಸ್ಮಾತ್ ಬೆಂಕಿ ಸಿಕ್ಕಿತೆಂಬ ನಂಬಿಕೆ ಇದೆ. ಇವುಗಳಲ್ಲಿ ಬೆಂಕಿಯ ಉಗಮದ ಬಗೆಗಿನ ಗ್ರೀಕ ಪುರಾಣದ ಪ್ರೊಮೆಥ್ಯೂಸನ

[1] ಕಥೆ ಲೋಕಪ್ರಸಿದ್ಧ. ಭಾರತದಲ್ಲಿ ಆರ್ಯರ ಪೂಜ್ಯ ವಸ್ತುವಾಗಿರುವ ಬೆಂಕಿ ವೇದ, ಶಾಸ್ತ್ರ, ಪುರಾಣಗಳಲ್ಲಿ ಹಲವು ರೀತಿಯಿಂದ ವರ್ಣಿತವಾಗಿದೆ. ಇಲ್ಲೆಲ್ಲ ಅಗ್ನಿಯ ಮಹತ್ವ, ಮಹಿಮೆಗಳೊಗೆ ಅದರ ಉಗಮವನ್ನು ಕುರಿತು ಹೇಳಲ್ಪಟ್ಟಿದ್ದರೂ, ಜಾನಪದರಲ್ಲಿ ಅದರ ಉಗಮದ ಬಗೆಗೆ ನಂಬಿಕೆಗಳು ಕೇಳಿಬರುವದಿಲ್ಲ. ಸಾವಿರ ಸಾವಿರ ನಂಬಿಕೆಗಳು ಬೆಂಕಿಯ ಸುತ್ತ ಪ್ರಚಲಿತವಾಗಿವೆ.

ಅಗ್ನಿಯು ಚಿಕ್ಕ ಗಾತ್ರದಿಂದ ಹಿಡಿದು ಬೃಹತ್ ಗಾತ್ರದವರೆಗೆ ಹಲವಾರು ರೂಪಗಳಲ್ಲಿ ಕಂಡುಬರುತ್ತದೆ. ಬೆಂಕಿಯನ್ನು ಕುರಿತ ಮಾನವನ ನಂಬಿಕೆಗಳು ಹಾಗೂ ಆಚರಣೆಗಳು ಬೆಂಕಿಯ ಈ ವಿವಿಧ ಸ್ವರೂಪಗಳನ್ನು ಆಧರಿಸಿವೆ. ಅದರ ಸ್ವರೂಪವನ್ನು ಆಧರಿಸಿದ ಮಾನವನ ನಂಬಿಕೆಗಳನ್ನು ಮೂರು ಗುಂಪಾಗಿ ವರ್ಗೀಕರಿಸಬಹುದು.

ಅ. ಕೆಂಡ ಹಾಗೂ ಜ್ವಾಲೆಗೆ ಸಂಬಂಧಿಸಿದ ನಂಬಿಕೆಗಳು
ಆ. ‘ಜ್ಯೋತಿ’ಗೆ ಸಂಬಂಧಿಸಿದ ನಂಬಿಕೆಗಳು
ಇ. ಸೂರ್ಯನ ಬೆಳಕು-ಬಿಸಿಲು, ಮಿಂಚು-ಸಿಡಿಲುಗಳಿಗೆ ಸಂಬಂಧಿಸಿದ ನಂಬಿಕೆಗಳು-

ಇವುಗಳನ್ನೀಗ ವಿಶದವಾಗಿ ನೋಡಬಹುದು.

. ಕೆಂಡ ಹಾಗೂ ಜ್ವಾಲೆಗೆ ಸಂಬಂಧಿಸಿದ ನಂಬಿಕೆಗಳು

ಬೆಂಕಿಯ ಸ್ವರೂಪಕ್ಕೆ ಸಂಬಂಧಪಟ್ಟಂತೆ ಕೆಂಡ ಹಾಗೂ ಜ್ವಾಲೆಗಳು ಮುಖ್ಯವೆನಿಸಿವೆ. ಈ ಪ್ರತಿಯೊಂದು ರೂಪಕ್ಕೆ ಸಂಬಂಧಿಸಿದ ನಂಬಿಕೆಗಳು ಹೀಗಿವೆ.

ಕೆಂಡಕ್ಕೆ ಸಂಬಂಧಿಸಿದ ನಂಬಿಕೆಗಳು

೧. ಹೋಳಿಹಬ್ಬದಲ್ಲಿ ಕಾಮನನ್ನು ಸುಟ್ಟಬಳಿಕ ಜ್ವಾಲೆಗಳು ಆರಿಹೋಗಿ ಮರುದಿನ ನಸುಕಿನ ಹೊತ್ತಿಗೆ ಕೆಂಡಗಳು ಮಾತ್ರ ಉಳಿದಿರುತ್ತವೆ. ಈ ಕೆಂಡದಲ್ಲಿ ಗೆಡ್ಡೆ-ಗೆಣಸು, ಕಡಲೆ ಸುಟ್ಟು ತಿಂದರೆ, ಅದರ ಇದ್ದಲಿಯಿಂದ ಹಲ್ಲುಜ್ಜಿದರೆ ಹಲ್ಲು ಗಟ್ಟಿಯಾಗುತ್ತವೆ ಎಂಬ ನಂಬಿಕೆಗಳು ರೂಢಿಯಲ್ಲಿವೆ. ಈ ಕೆಂಡದ ಬೂದಿಯನ್ನು ಹೊಲಗಳಲ್ಲಿ ಚೆಲ್ಲಿದರೆ ಬೆಳೆ ಸಮೃದ್ಧಿಯಾಗಿ ಬೆಳೆಯುವದೆಂಬ ನಂಬಿಕೆಯೂ ಇದೆ. ಕಾಮಣ್ಣನ ಬೆಂಕಿ ತಂದು ಅಡಿಗೆ ಮಾಡುವದು ಅದು ಪವಿತ್ರ ಎಂಬ ನಂಬಿಕೆಯಿಂದ.

೨. ಕೆಂಡವನ್ನು ಸಾಗಿಸುವುದಕ್ಕೆ ಸಂಬಂಧಿಸಿದಂತೆಯೂ ಕೆಲ ನಂಬಿಕೆಗಳಿವೆ. ಕುಳಿತಿರುವ ಬಂಧುಗಳ ಬೆನ್ನ ಹಿಂದೆ, ಎದುರು ಬದುರು ಕುಳಿತ ಬಂಧುಗಳ ನಡುವೆ ಬೆಂಕಿ ಒಯ್ಯಬಾರದು ರಾತ್ರಿಯಾದ ಮೇಲೆ ಕೆಂಡವನ್ನು ಹೊರಗೆ ಕೊಡಬಾರದು. ಇತ್ಯಾದಿ ಬೆಂಕಿಯನ್ನು ಲಕ್ಷ್ಮಿ ಎಂದು ಭಾವಿಸುವುದರಿಂದ ರಾತ್ರಿಯಾದ ಮೇಲೆ ಹೊರಗೆ ಕೊಡಬಾರದೆಂಬ ನಂಬಿಕೆ. ಸತ್ತಾಗ ಹೆಣದ ತಲೆಯ ಹಿಂಭಾಗದಿಂದ ಬೆಂಕಿ ಹಚ್ಚುವುದರಿಂದ ವ್ಯಕ್ತಿಗಳ ಬೆನ್ನ ಹಿಂದೆ ಬೆಂಕಿ ಸಾಗಿಸಬಾರದೆಂಬ ನಂಬಿಕೆಯೂ ಬೆಳೆದಿರುವಂತೆ ಕಾಣುತ್ತದೆ.

ಪಾಂಡವರ ಬಗೆಗಿನ ಜನಪದ ಗೀತೆಯೊಂದರಲ್ಲಿ ಈ ನಂಬಿಕೆ ಹೀಗೆ ವ್ಯಕ್ತವಾಗಿದೆ :
ನನ್ನ ಬೈದರ ಬೈಯ್ಯೋ, ಬೆನ್ನ ಬೈಯಲಿ ಬ್ಯಾಡ
ಬೆನ್ಹಿಂದ ಬೆಂಕಿ ಒಯ್ಬ್ಯಾಡ ನನಗೊಬ್ಬ
ತಮ್ಮ ಇರುವೊನ ಅರ್ಜುನ[2]

ಇಬ್ಬರ ನಡುವೆ ಬೆಂಕಿ ಸಾಗಿಸಿದರೆ ಅವರುಗಳ ನಡುವೆ ಜಗಳವಾಗುತ್ತದೆ ಎಂಬ ನಂಬಿಕೆ ಇದ್ದು ಆ ಕಾರಣಕ್ಕಾಗಿ ಹಾಗೆ ಸಾಗಿಸುವುದನ್ನು ನಿಷೇಧಿಸಲಾಗಿದೆ. ಒಂದು ಪಕ್ಷ ಗೊತ್ತಾಗದೆ ಇಬ್ಬರ ನಡುವೆ ಬೆಂಕಿಯನ್ನು ಒಯ್ಯಲೇಬೇಕಾದಾಗ ಅದನ್ನು ನೆಲಕ್ಕೆ ಮುಟ್ಟಿಸಿ ಒಯ್ದರೆ ಜಗಳವಾಗುವದಿಲ್ಲವೆಂಬ ನಂಬಿಕೆ ಬೆಳೆದಿದೆ. ಒಲೆಯೊಳಗಿನ ಕೆಂಡವನ್ನು ಒಯ್ಯುವಾಗ ಯಾರಾದರೂ ಅಲ್ಲಿ ಕುಳಿತಿದ್ದರೆ ಅವರಿಗೆ ತೋರಿಸಿ ಒಯ್ಯಬೇಕೆಂದು ನಂಬಿಕೆ ಇದೆ. ಕೆಂಡ ಎಂದರೆ ಲಕ್ಷ್ಮಿ ಇದ್ದಹಾಗೆ. ಲಕ್ಷ್ಮಿಯನ್ನು ಅಪಹರಿಸಬಾರದು ಎಂಬ ಭಾವನೆಯಿಂದ ಇದು ಬಂದದ್ದಾಗಿರಬಹುದು.

೩. ಅಕ್ಕಸಾಲಿಗರು ಕೆಂಡವಿರುವ ಅಗ್ಗಿಷ್ಟಿಕೆಯನ್ನು ‘ಕಾಳವ್ವ’ ಎಂದು ಕರೆದು ಪೂಜಿಸುತ್ತಾರೆ. ಅವರ ದೈವವಾದ ಕಾಳಿಕಾ ಪರಮೇಶ್ವರಿಯೇ ಅಗ್ಗಿಷ್ಟಿಕೆ ಎಂಬ ನಂಬಿಕೆ ಈ ಹಿನ್ನೆಲೆಯಲ್ಲಿದೆ.

೪. ಕೈಯಲ್ಲಿ ಕೆಂಡ ಹಾಕಿ ವ್ಯಕ್ತಿಯ ಸತ್ಯತೆಯನ್ನು ಪರೀಕ್ಷಿಸುವ ದಿವ್ಯ ಕೆಲವು ವರ್ಷಗಳ ಹಿಂದಿನವರೆಗೂ ಹೆಚ್ಚಾಗಿ ನಡೆಯುತ್ತಿದ್ದು, ಈಗಲೂ ಅಪರೂಪವಾಗಿ ಇಂಥ ಸುದ್ದಿಗಳು ಕೇಳಿಬರುತ್ತವೆ. ಬೆಂಕಿ ಅಥವಾ ಬೆಂಕಿ ಕೆಂಡ ಸತ್ಯವಂತರಿಗೆ ಏನೂ ಮಾಡುವದಿಲ್ಲ ಎಂಬ ನಂಬಿಕೆ ಇದಕ್ಕೆ ಕಾರಣ.

೫. ‘ಕೆಂಡಸ್ನಾನ’ ವಿಶಿಷ್ಟ ನಂಬಿಕೆಯನ್ನೊಳಗೊಂಡ ಇನ್ನೊಂದು ಬಗೆಯ ಆಚರಣೆ ಹರಕೆ ಹೊತ್ತು ಈ ಕಾರ್ಯ ಮಾಡುತ್ತಾರೆ. ಸೆರಗಿನಲ್ಲಿ ಕೆಂಡ ಹಾಕಿಕೊಳ್ಳುವುದು ಇದರ ಇನ್ನೊಂದು ರೂಪ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ನಾರಾಯಣಗೊಂಡನ ಹಳ್ಳಿಯಲ್ಲಿ ವೀರಭದ್ರದೇವರಿಗೆ ಹರಕೆ ಹೊತ್ತವರು ಉಡಿಯೊಳಗೆ ಕೆಂಡ ಹಾಕಿಸಿಕೊಂಡು ನಡೆ ಮಡಿಯ ಮೇಲೆ ಕೆಂಡದವರೆಗೆ ನಡೆದು ಬಂದು ಮಡಿಲಿನ ಕೆಂಡವನ್ನು ಕೊಂಡಕ್ಕೆ ಸುರಿಯುತ್ತಾರೆ. ಇದೇ ರೀತಿ ಬರಿಗೈಯಿಂದ ಒದ್ದೆ ಮಡಿಲಿಗೆ ಕೆಂಡ ಹಾಕಿಸಿಕೊಳ್ಳುವ ಸಂಪ್ರದಾಯ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಹೊಸಕೇರಿ ಗ್ರಾಮದಲ್ಲಿದೆ. ದೈವಬಲವಿದ್ದವರಿಗೆ ಮಡಿಲಿನ ಕೆಂಡ ಸುಡುವುದಿಲ್ಲವೆಂಬ ನಂಬಿಕೆ ಇಲ್ಲಿ ಕೆಲಸ ಮಾಡಿರುವುದು ಕಾಣುತ್ತದೆ.

ಇದೇ ರೀತಿ ಪತಿವ್ರತೆಯರನ್ನು ಕೆಂಡ ಸುಡುವುದಿಲ್ಲ ಎಂಬ ನಂಬಿಕೆಗೆ ಸಾಕ್ಷಿಯಾಗಿ ಶ್ರೀರಾಮನು ಸೀತೆಯ ಅಗ್ನಿಪರೀಕ್ಷೆಯ ಸಂದರ್ಭದಲ್ಲಿ

ಮಡಿಲೊಳಗೆ ಬೆಂಕಿಯ ತಂದುದುಂಟಾದರೆ
ಸತ್ಯವೆರಡಿಲ್ದೆ ಒಪಿಗಂಡೆ
ಎಂದು ಹೇಳುವುದನ್ನು ಇಲ್ಲಿ ನೆನೆಯಬಹುದು.

೬. ಅನ್ಯರ ಕೆಟ್ಟನೋಟದಿಂದ ದೃಷ್ಟಿಯಾಗಿದ್ದರೆ ಕೆಂಡವನ್ನುಪಯೋಗಿಸಿ ‘ಇಳಿ ತೆಗೆಯುವ’ ಮೂಲಕ ಅದನ್ನು ಪರಿಹರಿಸಿಕೊಳ್ಳಬಹುದೆಂದು ಜನಪದರು ನಂಬಿದ್ದಾರೆ. ಒಂದು ಚರಿಗೆಯಲ್ಲಿ ಕೆಂಡವನ್ನು ತುಂಬಿ ‘ಕಾಲ್ದೂಳಿ’ ತೆಗೆಯುವದು, ಮೆಣಸಿನಕಾಯಿ ಉಪ್ಪು ಇತ್ಯಾದಿಗಳನ್ನು ಒಟ್ಟಿಗೆ ಕೈಯಲ್ಲಿ ಹಿಡಿದು ನೀವಾಳಿಸಿ ಕೆಂಡಕ್ಕೆ ಒಗೆದು ಇಳಿ ತೆಗೆಯುವದು -ಇಂತಹ ಕ್ರಿಯೆಗಳು ಆ ದೃಷ್ಟಿದೋಷವನ್ನು ಪರಿಹರಿಯುತ್ತವೆ ಎಂಬುದಾಗಿ ಜನ ನಂಬುತ್ತಾರೆ.

೭. ಕೆಂಡಕ್ಕೆ ಮಳೆಯನ್ನು ನಿಲ್ಲಿಸುವ ಶಕ್ತಿ ಇದೆ ಎಂಬ ನಂಬಿಕೆ ಅಲ್ಲಲ್ಲಿ ಪ್ರಚಾರದಲ್ಲಿದೆ. ಅತಿವೃಷ್ಟಿಯಾಗುತ್ತಿದ್ದರೆ ರೈತರ ಮನೆಯ ಹೆಣ್ಣುಮಕ್ಕಳು ಮತ್ತು ಚಿಕ್ಕ ಮಕ್ಕಳು ಅಂಗಳದಲ್ಲಿ ನಿಂತು ಆಕಾಶಕ್ಕೆ ಕೆಂಡ ತೂರುವ ಸಂಪ್ರದಾಯ ಧಾರವಾಡ ಜಿಲ್ಲೆಯ ಪ್ರಚಾರದಲ್ಲಿದ್ದಿತು. ಇದು ಫ್ರೇಜರ್ ಹೇಳುವಂತೆ ಅನುಕರಣ ಮಾಟದ (ಇಮಿಟೇಶನ್ ಮ್ಯಾಜಿಕ್) ಒಂದು ವಿಧವಾಗಿದೆ. ಅಂದರೆ ಶುಷ್ಕ ವಸ್ತುಗಳನ್ನು ವಾತಾವರಣಕ್ಕೆ ಸೇರಿಸಿದರೆ ಶುಷ್ಕತೆಯೂ, ತೇವಾಂಶದ ವಸ್ತುಗಳನ್ನು ಸೇರಿಸಿದರೆ ತೇವವೂ ಅಲ್ಲಿ ಉಂಟಾಗುತ್ತದೆಯೆಂಬ ನಂಬಿಕೆಗೆ ಇದು ಸಂಬಂಧಪಟ್ಟಿದೆ. ಇದೇ ರೀತಿ ಉರಿಯುವ ಬೆಂಕಿಕೊಳ್ಳಿಯನ್ನು ಮೇಲಕ್ಕೆ ಎಸೆದರೆ ಅತಿವೃಷ್ಟಿ ನಿಲ್ಲುತ್ತದೆಂಬ ನಂಬಿಕೆಯೂ ಜನರಲ್ಲಿದೆ. ಇದು ಅನುಕರಣ ಮಾಟವೇ ಆಗಿದೆ.

೮. ಕೊಂಡ ಹಾಯುವುದು ವಿಶ್ವದ ಅನೇಕ ಕಡೆಗಳಲ್ಲಿ ರೂಢಿಯಲ್ಲಿರುವ ಒಂದು ಸಂಪ್ರದಾಯ. ಕೆಂಡದ ರಾಶಿಯನ್ನು ಹರಡಿ, ಅದರ ಮೇಲೆ ಓಡುತ್ತಾ ಹೋಗುವುದು ಇದರ ಮುಖ್ಯಾಂಶ. ಇದು ಗ್ರಾಮದೇವತೆಯ ಜಾತ್ರೆಗಳಲ್ಲಿ ನಡೆಯುವ ಸಾಮಾನ್ಯ ಪದ್ಧತಿ. ಎರಡುಸಾವಿರ ವರ್ಷಗಳ ಹಿಂದೆಯೂ ಈ ಸಂಪ್ರದಾಯ ಇದ್ದುದನ್ನು ವರ್ಜಿಲ್, ಸ್ಟ್ರಾಬೋ, ಪ್ಲನಿ ಇಂಥ ಲೇಖಕರ ಹಲವು ಉಲ್ಲೇಖಗಳಿಂದ ತಿಳಿಯಬಹುದು. ಭಾರತ, ಚೈನಾ, ಜಪಾನ್, ಗ್ರೀಸ್, ಮಾರಿಷಸ್, ನ್ಯೂಗಿನಿ, ಬಲ್ಗೇರಿಯಾ, ಸ್ಪೇನ್ ದೇಶಗಳಲ್ಲಿ ಈ ಸಂಪ್ರದಾಯ ಈಗಲೂ ಪ್ರಚಲಿತವಿದೆ. ಇದರ ವಿವರವಾದ ಅಧ್ಯಯನವನ್ನು ಡಾ. ತೀ. ನಂ. ಶಂಕರನಾರಾಯಣ ಅವರು ಬಹಳ ಹಿಂದೆಯೇ ಪೂರೈಸಿದ್ದಾರೆ.[3] ಈ ಸಂಪ್ರದಾಯದ ಹಿಂದಿರುವ ನಂಬಿಕೆ ಎಂದರೆ ಮಡಿಯಿಂದ, ಪವಿತ್ರ ಮನಸ್ಸಿನಿಂದ ದೈವತಾರಾಧನೆ ಮಾಡುವ ವ್ರತಿಕರಿಗೆ ಕೆಂಡವು ಸುಡಲಾರದು ಎಂಬುದು. ಆದರೆ ಕೆಂಡದ ಮೇಲೆ ವೇಗವಾಗಿ ಓಡುವ ಕಾರಣದಿಂದಾಗಿ ಕಾಲುಗಳು ಸುಡುವದಿಲ್ಲವೆಂದು ಡಾ. ಕೋವೂರ ಅವರ ಪ್ರಯೋಗಗಳು ಸಿದ್ಧಪಡಿಸಿವೆ. ಅದನ್ನು ಅಲ್ಲಗಳೆಯುವಂಥ, ಅಂದರೆ ಕೆಂಡದ ಮೇಲೆ ಹಲವಾರು ನಿಮಿಷಗಳ ಕಾಲ ಇದ್ದರೂ ಏನೂ ಆಗದೆ ಹೊರಬಂದ ಘಟನೆಗಳೂ ವರದಿಯಾಗಿವೆ.

೯. ಇದೊಂದು ಕುತೂಹಲಕಾರಿ ಉದಾಹರಣೆ : ವಿಶ್ವಕರ್ಮ ಬ್ರಾಹ್ಮಣರಲ್ಲಿ ಸತ್ತವ್ಯಕ್ತಿಯ ತಿಥಿಯ ದಿನದಂದು ಆ ವ್ಯಕ್ತಿಯನ್ನು ಸುಟ್ಟಸ್ಥಳದಿಂದ ಎಲುಬಿನ ತುಂಡುಗಳನ್ನು ಆಯ್ದು ತಂದಿಟ್ಟು ರಾತ್ರಿಯ ಸಮಯದಲ್ಲಿ ಕೆಂಡಕ್ಕೆ ಧೂಪಹಾಕಿ ಸತ್ಯವ್ಯಕ್ತಿಯ ಆತ್ಮವನ್ನು ಆಹ್ವಾನಿಸುತ್ತಾರೆ. ಆ ಆತ್ಮ ತನಗೆ ಪ್ರಿಯವಾದ ವ್ಯಕ್ತಿಯ ಮೂಲಕ ಪ್ರಕಟವಾಗಿ ತನ್ನ ನೆರವೇರದ ಇಚ್ಛೆಗಳನ್ನು ತಿಳಿಸುತ್ತದೆ. ಧೂಪದ ಹೊಗೆ ತೆಗೆದಕೊಡಲೇ ಆ ಆತ್ಮ ಹೊರಟು ಹೋಗುತ್ತದೆಂಬ ನಂಬಿಕೆ ಇದೆ.

ಹೀಗೆ ಕೆಂಡಕ್ಕೆ ಸಂಬಂಧಿಸಿದಂತೆ ಹಲವಾರು ನಂಬಿಕೆಗಳೂ, ಅವುಗಳನ್ನು ಆಧರಿಸಿ ಆಚರಣೆಗಳೂ ಬೆಳೆದುಬಂದಿವೆ.

ಜ್ವಾಲೆಗೆ ಸಂಬಂಧಿಸಿದ ನಂಬಿಕೆಗಳು

೧. ಕೆಂಡದಂತೆ ಜ್ವಾಲೆಯನ್ನು ಕುರಿತ ಹಲವಾರು ನಂಬಿಕೆಗಳೂ, ಆಚರಣೆಗಳೂ ಬೆಳೆದುಬಂದಿವೆ. ಆಸ್ಟ್ರೇಲಿಯಾದ ಒಂದು ಜನಾಂಗದಲ್ಲಿ ಹರೆಯಕ್ಕೆ ಬಂದು ಹುಡುಗನನ್ನು ಹಿರಿಯರು ಹೊಡೆದು, ಅದೇ ವಯಸ್ಸಿನ ಯುವಕರೊಂದಿಗೆ ಕೆಲದಿನ ಇರಿಸಿ, ಅನಂತರ ದೊಡ್ಡ ಪ್ರಮಾಣದಲ್ಲಿ ಬೆಂಕಿ ಹೊತ್ತಿಸಿ, ಅಲ್ಲಿ ಆತನಿಗೆ ಸಸ್ಯಾಹಾರವನ್ನು ಆ ಜ್ವಾಲೆಯಲ್ಲಿ ಬೇಯಿಸಿ, ತಿನ್ನಲು ಕೊಟ್ಟು ಅದೇ ಜ್ವಾಲೆಯಿಂದ ಅವನಿಗೆ ಸ್ವಲ್ಪ ಸುಟ್ಟ ಗುರುತು ಮಾಡುತ್ತಾರೆ. ಅದನ್ನು ಹಿಂಸೆಯೆಂದು ತಿಳಿಯಬಾರದೆಂದೂ, ಯಾರಿಗೂ ಹೇಳಬಾರದೆಂದೂ ಅವನಿಗೆ ತಿಳಿಸಲಾಗುತ್ತದೆ.[4] ಹೀಗೆ ಜ್ವಾಲೆಗಳ ಸಂಬಂಧ ಹರಯವನ್ನು ಸಬಲಗೊಳಿಸುತ್ತದೆ ಎಂಬುದು ಇದರ ಹಿಂದಿನ ನಂಬಿಕೆಯಾಗಿರಬಹುದು. ಇದರ ಸಂವಾದೀ ಆಚರಣೆ ಭಾರತದಲ್ಲಿ ಪ್ರಚಲಿತವಿದ್ದಂತಿಲ್ಲ.

೨. ಉರಿಯುವ ನೈಸರ್ಗಿಕ ಅನಿಲದ ಜ್ವಾಲೆಗಳನ್ನು ‘ಕೊಳ್ಳಿದೆವ್ವ’ ಎಂದು ನಂಬುವದು, ಅವು ಪಂಜು ಹಿಡಿದು ಓಡಾಡುತ್ತಿರುತ್ತವೆ ಎಂದು ಭಾವಿಸುವುದು ಜಾನಪದರಲ್ಲಿ ಸಾಮಾನ್ಯ ನಂಬಿಕೆಯಾಗಿದೆ.

೩. ಚಿಕ್ಕಮಗಳೂರು ಜಿಲ್ಲೆಯ ಅಯ್ಯನಕೆರೆ ಎಂಬ ಗ್ರಾಮದ ಒಂದು ಭಾವಿಯಲ್ಲಿ ಒಂದು ದುಂಡನೆಯ ಮೂರ್ತಿ ಇದೆ. ತಂಟಿ – ತಕರಾರು ಹೊತ್ತು ಅಲ್ಲಿಗೆ ಬರುವ ವಿರೋಧಿಗಳಿಗೆ ದೇವರನ್ನು ಪೂಜಿಸುವ ಪೂಜಾರಿಯು ಕೈಯಲ್ಲಿ ಪಂಜನ್ನು ಹಿಡಿದು ನೀವು ಉಭಯಸ್ಥರೂ ರಾಜಿಯಾಗುವ ತೀರ್ಮಾನ ತೆಗೆದುಕೊಳ್ಳತಕ್ಕದ್ದು, ಇಲ್ಲದಿದ್ದರೆ ಈ ‘ಪಂಜರವಳ್ಳಿ’ ಕೋಪಕ್ಕೆ ತುತ್ತಾಗುತ್ತೀರಿ ಎನ್ನುತ್ತಾನೆ. ಆಗ ಅವರು ರಾಜಿಯಾಗುತ್ತಾರೆ.[5] ರಾಜಿ ಮಾಡಿಕೊಳ್ಳದಿದ್ದರೆ ತೊಂದರೆಯಾಗುತ್ತದೆಂಬ ನಂಬಿಕೆ ಹಾಗೂ ಎಚ್ಚರಿಕೆಯನ್ನು ಕೂಡ ಎಲ್ಲ ಮೊದಲೇ ಕೊಡಲ್ಪಟ್ಟಿದೆ.

೪. ಸತ್ತ ಗಂಡನ ಚಿತೆಯಲ್ಲಿ ಸತಿ ಸಹಗಮನ ಮಾಡುವುದರಿಂದ ಅವಳೂ ಜ್ವಾಲೆಗಳ ಮೂಲಕ ಪತಿಯ ಜೊತೆ ಸ್ವರ್ಗ ಸೇರುತ್ತಾಳೆಂಬ ನಂಬಿಕೆ ಕಾರಣವಾಗಿ ಸತಿಪದ್ಧತಿ ನಮ್ಮಲ್ಲಿ ಬಹುಹಿಂದೆಯೇ ಬೆಳೆದು ಬಂದಿದ್ದಿತು. (ಹೋಮಾಗ್ನಿಯ ಹವಿಸ್ಸಿನ ಸ್ವೀಕರಣಕಾರನೆಂದೂ ಜ್ವಾಲೆಗಳು ದೇವತೆಗಳಿಗೆ ಅದನ್ನು ತಲುಪಿಸುವ ಮಧ್ಯವರ್ತಿಯೆಂದು ವೇದಗಳ ಕಾಲದಿಂದಲೂ ಆರ್ಯರಲ್ಲಿ ನಂಬಿಕೆ ಬೆಳೆದು ಬಂದಿದೆ).

೫. ಉಟ್ಟ ಬಟ್ಟೆಗೆ ಉರಿ ತಗುಲಿದರೆ ಅನತಿ ಕಾಲದಲ್ಲಿಯೇ ಆಪ್ತರ ಸಾವು ಖಚಿತವೆಂದು ಭಾವಿಸಲಾಗುತ್ತಿದೆ.

೬. ಒಲೆಯಲ್ಲಿ ಉರಿಯುತ್ತಿರುವ ಬೆಂಕಿ ಮೊರೆಯುವ ಶಬ್ದ ಮಾಡಿದರೆ ಯಾರಾದರೂ ಬಂಧುಗಳು ಬರುತ್ತಾರೆಂದು ಜನಪದರು ನಂಬುತ್ತಾರೆ.

೭. ಉರಿಯುವ ಜ್ವಾಲೆಗಳ ಸಮೀಪ ದೆವ್ವ, ಬರುವದಿಲ್ಲವೆಂದೂ, ಮಕ್ಕಳು ಉರಿಗೆ ಬಹಳ ಸಮಯ ಕಾಯಿಸಿಕೊಳ್ಳಬಾರದೆಂದೂ, ಹಾಗೆ ಮಾಡುವುದರಿಂದ ಅವರ ಮದುವೆ ತಡವಾಗುವದೆಂದು ತಿಳಿಯುತ್ತಾರೆ. ಬೆಳಕಿನೆದುರು ಬರಲು ದುಷ್ಟಶಕ್ತಿಗಳು ಭಯಪಡುತ್ತವೆ ಎಂಬುದು ಮೊದಲನೆಯ ನಂಬಿಕೆಗೆ ಕಾರಣವಾಗಿರಬಹುದಾದರೆ ಎರಡನೆಯದರಲ್ಲಿ ಮಕ್ಕಳು ಸುಟ್ಟುಕೊಂಡಾರೆಂಬ ಇಲ್ಲವೇ ಮೈಬಣ್ಣ ಕೆಡುವುದೆಂಬ ಕಾರಣದಿಂದ ಹಾಗೆ ಎಚ್ಚರಿಕೆ ಕೊಡುವದಕ್ಕಾಗಿ ನಂಬಿಕೆಯ ರೂಪವನ್ನು ಬಳಸಿರಬಹುದು.

೮. ಕೊಂಡ ಹಾಯುವ ಪದ್ಧತಿಯಂತೆ ಉರಿಹಾಯುವ ಪದ್ಧತಿಯೂ ಹನುಮಂತ, ವೀರಭದ್ರ ದೇವರುಗಳ ಜಾತ್ರೆಯಲ್ಲಿ ವಿರಳವಾಗಿ ರೂಢಿಯಲ್ಲಿದ್ದು ಪಾಪಿಷ್ಟರು ಇಲ್ಲಿ ಸುಟ್ಟು ಹೋಗುವರೆಂದೂ ಉಳಿದವರಿಗೆ ಏನೂ ಆಗುವದಿಲ್ಲವೆಂದು ನಂಬುತ್ತಾರೆ.

೯. ಕನಸಿನಲ್ಲಿ ಉರಿ ಕಂಡರೆ ಬಂಧುಗಳಲೊಬ್ಬರು ಸಾವು ಖಚಿತವೆಂಬ ನಂಬಿಕೆ. ‘ಕೆರೆಗೆ ಹಾರ’ ಕಥನಗೀತೆಯಲ್ಲಿದೆ. ಇತ್ತ ಭಾಗೀರತಿಯು ಕೆರೆಗೆ ಹಾರವಾಗುತ್ತಿದ್ದಂತೆ ಅತ್ತ ದಂಡಿನಲ್ಲಿದ್ದ ಮಾದೇವರಾಯರಿಗೆ ಶಲ್ಯ ಸುಟ್ಟ ಕನಸಾದದ್ದನ್ನು ಇಲ್ಲಿ ಉಲ್ಲೇಖಿಸಬಹುದು. ಕನಸಿನಲ್ಲಿ ಬೆಂಕಿ ಇಲ್ಲವೆ ಜ್ವಾಲೆಗಳು ಕಾಣಿಸಿಕೊಂಡರೆ ಒಳ್ಳೆಯದೆಂಬ ನಂಬಿಕೆಯೂ ಕೆಲವು ಕಡೆಗಳಲ್ಲಿದೆ. ಉರಿ ತಗುಲಿ ಸುಟ್ಟ ಬಟ್ಟೆಯನ್ನು ಧರಿಸಿದರೆ ಆ ವ್ಯಕ್ತಿ ಬಹಳಕಾಲ ಬದುಕುವದಿಲ್ಲವಾಗಿ ಅಂಥ ಬಟ್ಟೆ ತೊಡಬಾರದೆಂಬ ನಂಬಿಕೆ ಅನೇಕ ಕಡೆಗೆ ಕಾಣಿಸಿಕೊಳ್ಳುತ್ತದೆ. ಬಹು ತರವಾಗಿ ಇಂಥ ಬಟ್ಟೆ ಧರಿಸಿದಾಗ ಉರಿ ತಗುಲಿದ ಪ್ರಸಂಗ ಮತ್ತೆ ಮತ್ತೆ ವ್ಯಕ್ತಿಯ ಕಣ್ಣೆದುರು ಬಂದು ನಿಂತಂತಾಗಿ ಮಾನಸಿಕ ದುರ್ಬಲತೆ ಉಂಟಾಗುವ ಸಾಧ್ಯತೆಗಳು ಈ ನಂಬಿಕೆಯ ಹಿಂದಿವೆ.

೧೦. ಮಂಗಳವಾರ ಸತ್ತವರನ್ನು ಸುಡಬಾರದೆಂದೂ, ಹಾಗೆ ಸುಡವುದೇ ಬೇಕಾಗಿ ಬಂದಾಗ ಜೊತೆಯಲ್ಲಿ ಬೇರೊಂದು ಪ್ರಾಣಿಯನ್ನು ಉರಿಯಲ್ಲಿ ಹಾಕಿ ಸುಡಬೇಕೆಂದೂ ನಂಬಿಕೆ ಇದೆ. ಇದಕ್ಕೆ ಕಾರಣವನ್ನು ಗುರುತಿಸಬೇಕಾಗಿದೆ.

೧೧. ಅಸ್ಪೃಶ್ಯರು ಮುಟ್ಟಿದ ಪಾತ್ರೆಗಳನ್ನು ಉರಿಯೊಳಗೆ ಹಾಕಿ ತೆಗೆದರೆ ಅವು ಶುದ್ಧವಾಗುತ್ತದೆಂದೂ, ಪುನಃ ಉಪಯೋಗಿಸಲು ಬರುವುದೆಂದೂ ನಂಬಿಕೆ ಇದೆ. ಯಾವುದೋ ಕಾಲದಲ್ಲಿ ಹುಟ್ಟಿಕೊಂಡ ಇಂಥ ನಂಬಿಕೆಗಳು ಈಗ ಕ್ರಮೇಣ ಅರ್ಥ ಕಳೆದುಕೊಳ್ಳುತ್ತಿವೆ. ಅದರಂತೆ ವೈರತ್ವದಿಂದ ಒಬ್ಬರ ಬಣವಿಯನ್ನು ಸುಟ್ಟರೆ, ಸುಡಿಸಿದ ವ್ಯಕ್ತಿಗೆ ತೊನ್ನುರೋಗ ಬರುವುದೆಂಬ ನಂಬಿಕೆಯುಂಟು. ಪಾಪಪ್ರಜ್ಞೆಯ ಹಿನ್ನೆಲೆಯಲ್ಲಿ ಈ ನಂಬಿಕೆ ಹುಟ್ಟಿರಬಹುದು.

ಹೀಗೆ ಉರಿಗೆ ಸಂಬಂಧಿಸಿದ ನಂಬಿಕೆಗಳು ಹಲವಾರು ಬಗೆಯಾಗಿದ್ದು ಅವು ನಮ್ಮ ಜನಪದರನ್ನು ಪ್ರಭಾವಿಸುತ್ತಿವೆ.

ಸಂಜೆ ದೀಪ ಹಚ್ಚಿದೊಡನೆ ಅತ್ತೆ ಮಾವ ಗಂಡನಿಗೆ ನಮಸ್ಕರಿಸಬೇಕೆಂಬ ನಂಬಿಕೆಯೂ ಇದೆ. ಇದು ದೀಪ ಹಚ್ಚಿದೊಡನೆ ದೇವರಿಗೆ ಕೈಮುಗಿವ ಪದ್ಧತಿಯು ವಿಸ್ತರಣೆಯಾಗಿದೆ.

ಕಾರ್ಯಾಧಾರಿತ ನಂಬಿಕೆಗಳು

ಬೆಂಕಿಯ ಮಾಡಬಲ್ಲ ಕಾರ್ಯ ಮಥವಾ ಬೆಂಕಿಯ ಉಪಯುಕ್ತತೆಯನ್ನು ಆಧಾರವಾಗಿರಿಸಿಕೊಂಡು ಬೆಂಕಿಯನ್ನು ಕುರಿತ ನಂಬಿಕೆಗಳನ್ನು ವರ್ಗೀಕರಿಸಲು ಸಾಧ್ಯ ಎಂಬುದನ್ನು ಈಗಾಗಲೇ ಗಮನಿಸಿದ್ದೇವೆ.

ಬೆಂಕಿಯನ್ನು ಕುರಿತ ನಂಬಿಕೆಗಳಿಗನುಸಾರವಾಗಿ ಬೆಂಕಿಯ ಕಾರ್ಯವನ್ನು ನಾಲ್ಕು ಬಗೆಯಾಗಿ ವಿಂಗಡಿಸಬಹುದು.

೧. ಶುದ್ಧೀಕರಣಕ್ಕೆ ಕಾರ್ಯಕ್ಕೆ

೨. ಚಿಕಿತ್ಸಾತ್ಮಕ ಕಾರ್ಯಕ್ಕೆ

೩. ಮಂಗಳ ಕಾರ್ಯಕ್ಕೆ

೪. ಶಿಕ್ಷೆ ಹಾಗೂ ರಕ್ಷಣಾ ಕಾರ್ಯಕ್ಕೆ ಸಂಬಂಧಿಸಿದ ನಂಬಿಕೆಗಳು ಈ ವರ್ಗೀಕರಣವನ್ನು ಕೆಲವು ಉದಾಹರಣೆಗಳಿಂದ ವಿವರಿಸಬಹುದು.

. ಶುದ್ಧೀಕರಣ ಕಾರ್ಯಕ್ಕೆ ಸಂಬಂಧಿಸಿದ ನಂಬಿಕೆಗಳು

‘ಅಗ್ನಿ’ಯು ಎಲ್ಲವನ್ನು ಶುದ್ಧಿಗೊಳಿಸುವವನೆಂಬುದು ಪ್ರಾಚೀನಕಾಲದಿಂದ ನಮ್ಮಲ್ಲಿರುವ ನಂಬಿಕೆ. ಆದ್ದರಿಂದಲೇ ಅವನಿಗೆ ‘ಪಾವಕ’ ಎಂದೂ ಹೆಸರು. ಅತ್ಯಂತ ಶುದ್ಧತೆಗೆ, ಶುಚಿಗೆ ಬೆಂಕಿಯೇ ಪರಮಾದರ್ಶ[6] ಆದ್ದರಿಂದ ಈಗಾಗಲೇ ಹಿಂದೆ ಪ್ರಸ್ತಾಪವಾದಂತೆ ಶುದ್ಧೀಕರಣ ಗೊಳಿಸಬೇಕಾದ ಪಾತ್ರೆ ಪಗಡೆಗಳನ್ನು ಬೆಂಕಿಗೆ ಹಾಕಿ ತೆಗೆಯಲಾಗುತ್ತದೆ. ಮಾಟ ಪ್ರಯೋಗ ಮತ್ತು ಧಾರ್ಮಿಕ ಆಚರಣೆಗಳಲ್ಲಿ ವ್ಯಕ್ತಿ ಹಾಗೂ ವಸ್ತುಗಳನ್ನು ಶುದ್ಧಿಗೊಳಿಸಲು ಬೆಂಕಿಯನ್ನು ಬಳಸಲಾಗುತ್ತದೆ. ಹಿಂದೆ ಹೇಳಿದ ಇಳಿತೆಗೆಯುವ ರೂಢಿಯು ಬೆಂಕಿಯು ಅನಿಷ್ಟಗಳಿಂದ ಬಿಡುಗಡೆ ಮಾಡುವುದೆಂಬ ನಂಬಿಕೆಯಿಂದಲೇ ಬಂದದ್ದು.

ಮುಟಗಿ ಮೆಣಸಿನಕಾಯಿ, ಚಿಟಗುಪ್ಪು ಕೈಯೊಳಗೆ
ವಟಗುಡುತ ದಿಟ್ಟಿ ಇಳಿದೆಗೆದು ಬೆಂಕಿಯಲಿ
ಕಟುಗಾಗಿ ಕಮರಿ ಹಾರೆಂದು[7]

ಇಲ್ಲಿಯೂ ಘಾಟವಾಸನೆ ಬರದೇ ಇದ್ದರೆ ಮಾತ್ರ ದೃಷ್ಟಿಯಾಗಿದೆ ಎಂದು ಭಾವಿಸುತ್ತಾರೆ.

ದೇಹದಹನ ಕ್ರಿಯೆಗೂ ಈ ವರ್ಗದ ನಂಬಿಕೆಗಳೇ ಆಧಾರ. ಮೃತದೇಹಕ್ಕೆ ಅಗ್ನಿ ಸಂಸ್ಕಾರವಾಗದಿದ್ದರೆ ಆ ಜೀವ ಅಂತರ ಪಿಶಾಚಿಯಾಗಿ ಓಡಾಡುತ್ತಿರುತ್ತದೆ ಎಂಬ ನಂಬಿಕೆಯುಂಟು. ಆದ್ದರಿಂದಲೇ ಬ್ರಾಹ್ಮಣನೆಂದು ಪರಿಗಣಿಸಲ್ಪಟ್ಟಿರುವ ನಾಗರಹಾವನ್ನು ಕೊಂದರೆ ಸುಡಲೇಬೇಕೆಂಬ  ಕಟ್ಟಳೆ ಇದೆ.

. ಚಿಕಿತ್ಸಾತ್ಮಕ ಕಾರ್ಯಕ್ಕೆ ಸಂಬಂಧಿಸಿದ ನಂಬಿಕೆಗಳು

ಶರೀರಕ್ಕೆ ಒದಗಿದ ಅನೇಕ ತೊಂದರೆಗಳಿಗೆ ಬೆಂಕಿ ಪರಿಹಾರ ನೀಡಬಲ್ಲದೆಂಬ ನಂಬಿಕೆಗಳೆಲ್ಲ ಈ ಗುಂಪಿಗೆ ಸೇರುತ್ತವೆ. ಎಲ್ಲ ದೇಶಗಳಲ್ಲೂ ಈ ಬಗೆಯ ನಂಬಿಕೆಗಳು ಚಾಲ್ತಿಯಲ್ಲಿವೆ.

i. ಮಕ್ಕಳಿಗೆ ಚಿಟಿಕೆ ಹಾಕುವದರಿಂದ ಯಾವ ರೋಗವೂ ಬರುವದಿಲ್ಲ ಎಂದು ಭಾವಿಸಿ, ಕಾಯಿಸಿದ ಯಾವುದಾದರೂ ವಸ್ತುವಿನಿಂದ ಚಿಟಿಕೆ ಹಾಕುವದು.

ii. ಹಣೆಯ ಮೇಲೆ ಕಾಯಿಸಿದ ಬಳೆಚೂರಿನಿಂದ ಚಿಟಕಿ ಹಾಕಿದರೆ ತಲನೋವು ದೂರವಾಗುವದು.

iii. ಹೊಗೆಯಿಲ್ಲದ ಬೆಂಕಿಯು ಕನಸಿನಲ್ಲಿ ಕಾಣಿಸಿಕೊಂಡರೆ ರೋಗಿ ಆರೋಗ್ಯವಂತನಾಗುತ್ತಾನೆಂದು ಸ್ವಪ್ನ ಫಲಶಾಸ್ತ್ರದಲ್ಲಿ ಹೇಳಿದೆ.[8]

iv. ಮಂದಬುದ್ಧಿಯ ದನಗಳಿಗೆ ಬರೆಕೊಟ್ಟರೆ ಒಳ್ಳೆಯದಾಗುತ್ತದೆಂಬ ನಂಬಿಕೆ.

v. ನಾಯಿ ಕಡಿದರೆ ಗುರುವಾರ, ರವಿವಾರಗಳಂದು ಗಾಯಕ್ಕೆ ಬರೆ ಹಾಕಿಸಿದರೆ ರೋಗ ಬರುವುದು ತಪ್ಪುತ್ತದೆ ಎಂಬ ನಂಬಿಕೆ.

vi. ಕಿರುನಾಲಿಗೆ ಸುಡಿಸಿದರೆ ಗಂಟಲರೋಗಗಳು ವಾಸಿಯಾಗುತ್ತವೆ.

vii. ಪ್ರಜ್ಞೆ ತಪ್ಪಿದವರಿಗೆ ಬಳೆ ಸುಟ್ಟು ಕೀಲಿನ ನರಗಳ ಮೇಲೆ ಎಳೆದರೆ ಎಚ್ಚರವಾಗುತ್ತದೆ.

viii. ತಲೆಯ ಹುಣ್ಣು ಸುಟ್ಟರೆ ಹೋಗುತ್ತದೆ.

ix. ದೆವ್ವ ಹಿಡಿದವರಿಗೆ ಎಕ್ಕಡ ಕಾಯಿಸಿ ಸುಟ್ಟರೆ ದೆವ್ವಬಿಟ್ಟುಹೋಗುತ್ತದೆ ಎನ್ನುವ ನಂಬಿಕೆ ಇತ್ಯಾದಿಗಳು.

ಯಜ್ಞ-ಯಾಗ, ಹೋಮ ಹವನಾದಿಗಳಲ್ಲಿ ಬೆಂಕಿಯನ್ನು ಉಪಯೋಗಿಸುವುದು – ಇವೆಲ್ಲ ಬೆಂಕಿಯ ಮಂಗಳಕಾರಕ ಸಾಮರ್ಥ್ಯದ ಮೇಲಿನ ನಂಬಿಕೆಗಳೇ ಆಗಿವೆ. ಇಲ್ಲಿ ಬೆಂಕಿಯನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ದೀಪಾವಳಿ ಹಬ್ಬದಲ್ಲಿ ಆಕಳುಗಳಿಗೆ, ಹೆಣ್ಣುಮಕ್ಕಳು ಸೋದರರಿಗೆ ಆರತಿ ಬೆಳಗಬೇಕೆಂಬುದೂ ಈ ನಂಬಿಕೆಯಿಂದಲೇ ಯಜ್ಞದ ಬೆಂಕಿಯನ್ನು ಯಜ್ಞೇಶ್ವರನೆಂದು ಭಾವಿಸುತ್ತಾರೆ. ದೇವರಿಗೆತ್ತಿದ ಆರತಿಯನ್ನು ಕಣ್ಣಿಗೊತ್ತಿಕೊಳ್ಳುತ್ತಾರೆ.

. ಶಿಕ್ಷೆ ಹಾಗೂ ರಕ್ಷೆಯ ಕಾರ್ಯಕ್ಕೆ ಸಂಬಂಧಿಸಿದ ನಂಬಿಕೆಗಳು

ತಪ್ಪು ಮಾಡಿದರೆ ಅಥವಾ ಅನ್ಯರನ್ನು ಅವಮಾನಿಸಿದರೆ ಬೆಂಕಿ ಅವನನ್ನು ಸುಡುತ್ತದೆ ಅಥವಾ ಹಾನಿಮಾಡುತ್ತದೆ ಎಂಬ ಭಾವನೆಮೂಲದ ನಂಬಿಕೆಗಳು, ಹಾಗೂ ಬೆಂಕಿಯು ನಮ್ಮನ್ನು ಬಂದಿರುವ ಅಥವಾ ಬರಬಹುದಾದ ವಿಪತ್ತುಗಳಿಂದ ರಕ್ಷಿಸುತ್ತದೆ ಎಂಬ ಭಾವನೆಯಿಂದ ಹುಟ್ಟಿರುವ ನಂಬಿಕೆಗಳು- ಇವೆಲ್ಲ ಈ ವರ್ಗಕ್ಕೆ ಸೇರುತ್ತವೆ. ಕೆಂಡ ಹಾಯುವ, ಕೈಯಲ್ಲಿ ಬೆಂಕಿ ಹಿಡಿಯುವ, ಉರಿಯೊಳಗಿಂದ ಹಾಯುವ ಹಲಬಗೆಯ ಇಂಥ ಆಚರಣೆಗಳ ಹಿಂದಿರುವ ನಂಬಿಕೆ ಎಂದರೆ ತಪ್ಪು ಮಾಡಿದ್ದರೆ ಬೆಂಕಿ ಸುಡುತ್ತದೆ, ಅದೇ ಶಿಕ್ಷೆ ಪರಿಶುದ್ಧರಾಗಿದ್ದರೆ ಅದೇ ಬೆಂಕಿ ರಕ್ಷಿಸುತ್ತದೆ ಎಂಬುದೇ ಆಗಿದೆ. ಬೆಂಕಿಗೆ ಉಗುಳಿದರೆ ಬಾಯಲ್ಲಿ ಗುಳ್ಳೆ ಏಳುತ್ತವೆ, ದೀಪ ಹಚ್ಚಿದ ಮೇಲೆ ಕಸಗುಡಿಸಿದರೆ ಸಾಲ ಹೆಚ್ಚುತ್ತದೆ ಎಂಬಂಥ ನಂಬಿಕೆಗಳಿಗೂ ಬೆಂಕಿಯ ಶಿಕ್ಷಾ ಕಾರ್ಯವೇ ಆಧಾರ. ಸತ್ಯವಂತನಾಗಿದ್ದ ಕಾರಣ ರಾಚೋಟೇಶ್ವರನು ಕಿಚ್ಚಿನಲ್ಲಿ ಹಾದುಹೋದನೆಂಬುದನ್ನೇ ಹೇಳುವ ಈ ತ್ರಿಪದಿ ನೋಡಿ;

ಸತ್ಯುಳ್ಳ ರಾಚಣ್ನ ಸತ್ತೇವೇನ್ಹೇಳಲಿ
ಸುತ್ತಲವರೆಲ್ಲ ಬರತಾರ ರಾಚೋಟಿ
ಕಿಚ್ಚಿನಾಗ್ಹಾದು ಗುಡಿ ಹೊಕ್ಕು[9]

ಯಾರಾದರೂ ಮಾಟ ಮಂತ್ರಗಳನ್ನು ಮಾಡಿಸಿದ್ದರೆ ಅದಕ್ಕೆ ಗುರಿಯಾದವರು ಆ ವಸ್ತುಗಳನ್ನು ತಕ್ಷಣ ತಂದು ಸುಟ್ಟು ಹಾಕಿಬಿಟ್ಟರೆ, ಯಾರು ಅದನ್ನು ಮಾಡಿಸಿದರೋ ಅವರಿಗೇ ಆ ವಿಪತ್ತುಗಳು ತಗುಲಿಕೊಳ್ಳುತ್ತವೆ – ಎಂಬ ನಂಬಿಕೆ ಇದೆ. ಇದು ಶಿಕ್ಷೆ ರಕ್ಷೆಯ ಗುಂಪಿಗೇ ಸೇರುವ ನಂಬಿಕೆ. ಬಣವೆಗೆ ಬೆಂಕಿ ಹತ್ತಿದ ಸಂದರ್ಭದಲ್ಲಿ ಅದಕ್ಕೆ ಬಟ್ಟೆ ಹಾಕಿ ಸುಟ್ಟು ಮೊಸರು ಗಡಿಗೆ, ಒಡೆದರೆ ಬೆಂಕಿ ಹಚ್ಚಿದ್ದವರಿಗೇ ತೊನ್ನು ರೋಗ ಬಡಿಯುತ್ತದೆಂಬ ನಂಬಿಕೆ ಕೂಡ ಈ ವರ್ಗದ್ದೇ.

ಹೀಗೆ ಬೆಂಕಿಯನ್ನು ಕುರಿತು ನಮ್ಮ ಜನಪದರ ನಂಬಿಕೆಗಳು ಸಹಸ್ರಾರು ತೆರನಾಗಿದ್ದರೂ ಅವನ್ನು ಕೆಲವು ಮುಖ್ಯ ಗುಂಪುಗಳಲ್ಲಿ ವರ್ಗೀಕರಿಸಲು ಬರುತ್ತಿದ್ದರೂ ಅವುಗಳು ಮತ್ತೆ ಒಂದರೊಳಗೊಂದು ಸೇರಿಕೊಳ್ಳುವುದರಿಂದ ಆ ವರ್ಗೀಕರಣ ಪರಿಪೂರ್ಣವೆನಿಸಲಾರದು. ಮೂಲಭೂತ ಆಧಾರದ ಮೇಲೆ ಹುಟ್ಟಿಕೊಂಡು ಒಂದಿಷ್ಟು ನಂಬಿಕೆಗಳು ಟಿಸಿಲೊಡೆದು ಬೆಳೆದು ಹಲವಾರು ಸಂಪ್ರದಾಯಗಳಿಗೆ ಕಾರಣವಾಗಿವೆ.

‘ಬೆಂಕಿ’ ಪವಿತ್ರವಾದುದು, ದೈನಿಕವಾದುದು. ಶುದ್ಧಿಕಾರಕ, ಚಿಕಿತ್ಸಕ, ಮಂಗಳಕಾರಕ, ಶಿಕ್ಷೆಕಾರಕ ಬಾಂಧವ್ಯದ ಬೆಸುಗೆಯನ್ನು ಕೂಡಿಸುವವ ಅಥವಾ ಒಡೆಯುವವ, ಆಹಾರ ತಯಾರಕ ಇತ್ಯಾದಿ ಇತ್ಯಾದಿ ಎಂಬ ನಂಬಿಕೆಗಳು ತಲೆತಲಾಂತರದಿಂದ ಜಗತ್ತಿನೆಲ್ಲೆಡೆ ಮಾನವ ಸಮುದಾಯದಲ್ಲಿ ಬೆಳೆದುಬಂದಿದೆ.

 

ಗ್ರಂಥ ಋಣ

೧. ಕನ್ನಡ ಜಾನಪದ ವಿಶ್ವಕೋಶ : ಸಂ. ಚಂದ್ರಶೇಖರ ಕಂಬಾರ

೨. ಉತ್ತರ ಕರ್ನಾಟಕದ ಜಾನಪದ ನಂಬಿಕೆಗಳು : ಡಾ. ಮಲ್ಲಿಕಾರ್ಜುನ ಲಠ್ಠೆ

೩. ಜಾನಪದ ಅಧ್ಯಯನ : ದೇಜಗೌ

೪. ಜನಪದ ನಂಬಿಕೆಗಳು : ಸಂ. ರಾಗೌ ಮತ್ತು ವಸಂತಕುಮಾರ್

೫. ಕನ್ನಡ ವಿಶ್ವಕೋಶ ಸಂಪುಟಗಳು : ಸಂ. ಹ. ಮಾ. ನಾಯಕ

೬. ನಮ್ಮ ಸುತ್ತಿನ ನಂಬಿಕೆಗಳು : ಡಿ.ಕೆ. ರಾಜೇಂದ್ರ

೭. ಪದವನೆ ನಮ್ಮ ಎದೆಯಲ್ಲಿ : ಸಂ. ಎಚ್. ಎಲ್. ನಾಗೇಗೌಡ

೮. ಆಕಾಶ ಜಾನಪದ : ಹಂಪ ನಾಗರಾಜಯ್ಯ

೯. ಹಾಡ್ಹೇಳೇ ತಂಗಿ ದನಿ ಎತ್ತೀ ಸಂ. ಕಾವ್ಯಜೀವಿ

೧೦. ಕೊಂಡ ಹಾಯುವ ಸಂಪ್ರದಾಯ ಡಾ. ತೀ. ನಂ. ಶಂಕರನಾರಾಯಣ

೧೧. ನಮ್ಮ ಜನಪದ ನಂಬಿಕೆಗಳು ಜಿ. ವಿ. ದಾಸೇಗೌಡ

೧೨. ಮೂಢನಂಬಿಕೆಗಳು ಡಾ. ಎಲ್. ಆರ್. ಹೆಗಡೆ

೧೩. ಜಾನಪದ ಸ್ವರೂಪ ಡಾ. ಹಾ. ಮಾ. ನಾಯಕ

೧೪. ಗ್ರಾಮೀಣ ಡಾ. ಎಂ. ಚಿದಾನಂದಮೂರ್ತಿ

೧೫. ಇಂಟರಡ್ಯೂಸಿಂಗ್ ಫೋಕ್‌ಲೋರ್ ಕೆನ್ನೆತ್ ಮತ್ತು ಮೇರಿ ಕ್ಲರ್ಕ್

೧೬. ಎನ್‌ಸೈಕ್ಲೋಪಿಡಿಯಾ ಆಫ್ ರಿಲಿಜನ್ ಹ್ಯಾಂಡ್ ಎಥಿಕ್ಸ್ ಸಂ. ಜೇಮ್ಸ್ ಹೋಸ್ಟಿಂಗ್ಸ್

೧೭. ಸ್ಟ್ಯಾಂಡರ್ಡ್ ಡಿಕ್ಶನರಿ ಆಫ್ ಫೋಕಲೋರ ಮೈಥಾಲಜಿ ಹ್ಯಾಂಡ್ ಲೆಜೆಂಡ್ ಅರ್ನೆ ಅಂಟಿ ಮತ್ತು ಸ್ಟಿಥ್‌ಥಾಂಪ್ಸನ್

೧೮. ಕನ್ನಡ ಜನಪದ ಗೀತೆಗಳು ಡಾ. ಬಿ. ಎಸ್. ಗದ್ದಿಗಿಮಠ

ಜೊತೆಗೆ ಸಂಯುಕ್ತ ಕರ್ನಾಟಕ, ಕರ್ಮವೀರ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಜಾನಪದ ಸಂಬಂಧಿ ಲೇಖನಗಳು ಹಾಗೂ ೯೫-೯೬ನೇ ಸಾಲಿನಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎಂ. ಎ., ಎಂ. ಫಿಲ್ಸ್, ಪಿಎಚ್.ಡಿ ಅಧ್ಯಯನ ಮಾಡುತ್ತಿರುವ ಕೆಲವು ವಿದ್ಯಾರ್ಥಿಗಳು ನೀಡಿದ ಮಾಹಿತಿಗಳು.


[1]      (ಪ್ರೊಮೆಥ್ಯೂಸ್ ಬೆಂಕಿಯನ್ನು ದೇವಲೋಕದಿಂದ ಕದ್ದು ಭೂಮಿಗೆ ತಂದುಕೊಟ್ಟು, ಆ ಅಪರಾಧಕ್ಕಾಗಿ ಶಿಕ್ಷೆ ಅನುಭವಿಸಿದನು.) ಕನ್ನಡ ಜಾನಪದ ವಿಶ್ವಕೋಶ ಪು. ೧೪. ೨೮.

[2]     ಬಿ. ಎಸ್. ಗದ್ದಗಿಮಠ ಕನ್ನಡ ಜಾನಪದ ಗೀತೆಗಳು, ಪು. ೧೦೭.

[3]      ಡಾ. ತೀ. ನಂ. ಶಂಕರನಾರಾಯಣ ; ಕೊಂಡ ಹಾಯುವ ಸಂಪ್ರದಾಯ ಪ್ರ. ಪ್ರಾದೇಶಿಕ ಜನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಉಡುಪಿ ೧೯೮೯.

[4]     ಡಾ. ಎ. ವಿ. ಪಾಟೀಲ : ಉತ್ತರ ಕರ್ನಾಟಕದ ಜನಪದ ಕಲೆ ಮತ್ತು ವಿಧಿಕ್ರಿಯೆಗಳು (ಅಪ್ರಕಟಿತ ಮಹಾಪ್ರಬಂಧ).

[5]     ಡಾ. ಬಸವರಾಜ ನೆಲ್ಲಿಸರ : ಮಲೆನಾಡು ಜಾನಪದ ಪು. ೧೫೩ ಪ್ರ. ಪ್ರಸಾರಂಗ ಮೈ ವಿ. ವಿ. ೧೯೮೧.

[6]     ಕನ್ನಡ ಜಾನಪದ ವಿಶ್ವಕೋಶ, ಪು. ೧೪೩೦.

[7]      ಡಾ. ಬಿ.ಎಸ್. ಗದ್ದಗಿಮಠ, ಕನ್ನಡ ಜನಪದ ಗೀತೆಗಳು.

[8]     ಕನ್ನಡ ಜಾನಪದ ವಿಶ್ವಕೋಶ ಪು. ೧೪೩೧.

[9]      ಡಾ. ಬಿ. ಎಸ್. ಗದ್ದಿಗಿಮಠ ಪೂರ್ವೋಕ್ತ ಗ್ರಂಥ ಪು. ೧೭.